Daily Archives: January 29, 2013

ಇಲ್ಲಿರಲಾರೆ, ನಾನಲ್ಲಿಗೆ ಹೋಗಲಾರೆ…

– ಬಿ.ಶ್ರೀಪಾದ ಭಟ್

ಬಂಡಾಯದಲ್ಲಿ ತೊಡಗುವ ಪ್ರತಿಯೊಬ್ಬನಿಗೂ ಬಂಡಾಯ ಮತ್ತು ಬದಲಾವಣೆ ಸಾವು ಬದುಕಿನ ಪ್ರಶ್ನೆಯಾಗಿದ್ದಾಗ ಅದಕ್ಕೆ ಅರ್ಥ ಬರುತ್ತದೆ. ಹಾಗೆಯೇ ಬಂಡಾಯಗಾರನಿಗೆ ತಾನು ಒಡೆದು ಬೀಳಿಸುತ್ತಿರುವ ವ್ಯವಸ್ಥೆ ಯಾವ ರೀತಿಯಲ್ಲಿ ಕೆಲಕಾಲವಾದರೂ ಜೀವನವನ್ನು ಪೊರೆದಿತ್ತು ಎಂಬ ಅರಿವಿರಬೇಕು. ಜೀವನ್ಮರಣದ ಪ್ರಶ್ನೆಯಾದಾಗಲೇ ಬಂಡಾಯ ಮನುಷ್ಯನಾಳದ ಮೌನ ಕೂಡ ಆಗುತ್ತದೆ. ಹಾಗಾದಾಗಲೇ ಅದು ಬಂಡಾಯಗಾರನ ಬೊಬ್ಬೆ,ಘೋಷಣೆಗಳಿಗೆ ಕೂಡ ಶಕ್ತಿ ಒದಗಿಸುತ್ತದೆ. ಒಬ್ಬ ಎಚ್ಚರವಾಗಿದ್ದೂ ಸುಪ್ತಲೋಕವನ್ನು ಪ್ರವೇಶಿಸಬಲ್ಲ, ತನ್ನ ಸುತ್ತಣ ಜಡತ್ವವನ್ನರಿತು ಜೀವಂತಿಕೆಗಾಗಿ ಪ್ರಯತ್ನಿಸಬಲ್ಲ, ಆದರೆ ಪ್ರತಿಭಟನೆಯವನು ಒಂದೇ ಸ್ತರದಲ್ಲಿ ಉಳಿಯುವ ಅಪಾಯವಿದೆ.  – ಪಿ.ಲಂಕೇಶ್

ಸಾಹಿತ್ಯದ ಮೂಲ ಲಕ್ಷಣಗಳೇನು ಎನ್ನುವ ಜಿಜ್ಞಾಸೆಗಳು ಮತ್ತು ವಾಗ್ವಾದಗಳು ಬಂಡಾಯ ಸಾಹಿತ್ಯ ಶುರುವಾದ ಎಪ್ಪತ್ತರ ದಶಕದಿಂದ lankeshಮೊದಲುಗೊಂಡು ಇಪ್ಪತ್ತೊಂದನೇ ಶತಮಾನದ ಎರಡನೇ ದಶಕದವರೆಗೂ ಮುಂದುವರೆದಿದೆ. ಈ ಚರ್ಚೆಗಳಲ್ಲಿ ನವ್ಯ ಮತ್ತು ಬಂಡಾಯಗಳೆಂಬ ಎರಡು ವಿಭಿನ್ನ ಸಾಹಿತ್ಯಕ ಘಟ್ಟಗಳೇ ಕೇಂದ್ರ ಸ್ಥಾನ ಪಡೆದುಕೊಂಡು ಆಯಾ ಕಾಲಘಟ್ಟಗಳಲ್ಲಿ ರಚಿತವಾದ ಸಾಹಿತ್ಯಕ ಕೃತಿಗಳನ್ನು ಪರೀಕ್ಷೆಗೆ ಒಳಪಡಿಸಿ ನಾನು ಅದರ ವಿರೋಧಿ ಮತ್ತು ಇದರ ಪರ ಎನ್ನುವ ಸ್ಪಷ್ಟವಾದ, ಗೆರೆ ಎಳೆದಂತಹ ನಿಲುವುಗಳನ್ನೊಳಗೊಂಡ ಎಂಬತ್ತರ ಮತ್ತು ತೊಂಬತ್ತರ ದಶಕಗಳ ಕಾಲವನ್ನು ದಾಟಿ ನನಗೆ ನವ್ಯದ ಕಲೆಗಾರಿಕೆ ಮತ್ತು ಬಂಡಾಯದ ಸಾಮಾಜಿಕತೆ ಮಾತ್ರ ಮುಖ್ಯ ಎಂದು ಅಭಿಮತವನ್ನು ವ್ಯಕ್ತಪಡಿಸುವ ಇಂದಿನ ತಲೆಮಾರಿನ ಲೇಖಕರವರೆಗೂ ಈ ಘೋಷಿತ ಸಾಹಿತ್ಯಕ ಧೋರಣೆಗಳು ಹರಿದು ಬಂದಿದೆ.

ಆದರೆ ಅಂದಿನ ಕಾಲದಿಂದ ಶುರುವಾಗಿ ಇಂದಿನ ತಲೆಮಾರಿನವರೆಗೂ ಪ್ರತಿಯೊಬ್ಬ ಸಾಹಿತಿಯೂ ಒಂದು ನಿಯಂತ್ರಿತ ಶಕ್ತಿಗೆ ಒಳಗಾಗಿ ಮಾತನಾಡುತ್ತ ತನ್ನನ್ನು ತಾನು ಇಂದಿನ ಸಂದರ್ಭಕ್ಕೆ ಪ್ರಸ್ತುತವಾಗಿದ್ದೇನೆ ತಾನೆ ಎನ್ನುವ ಜಾಣ ಎಚ್ಚರಿಕೆಯನ್ನು ಮೈಗೂಡಿಸಿಕೊಳ್ಳುತ್ತ ತನ್ನ ಧೋರಣೆಗಳನ್ನು ವ್ಯಕ್ತಪಡಿಸುತ್ತಿರುವುದು ಮಾತ್ರ ಒಂದು ದುರಂತ. ಇಲ್ಲದಿದ್ದರೆ ಎಷ್ಟೇ ಶತಮಾನಗಳು ಕಳೆಯಲಿ ತನ್ನ ಮೂಲ ಲಕ್ಷಣವಾದ ಅಂತರಂಗದ ಶಕ್ತಿಯನ್ನಾಧರಿಸಿ, ಸಾಹಿತ್ಯದ ಆ ಅಂತರಂಗದ ಶಕ್ತಿಯನ್ನು ಲೇಖಕನು ತನ್ನ ಪ್ರತಿಭೆಯನ್ನು ಕಥೆ, ಕಾವ್ಯ, ಕಾದಂಬರಿಗಳ ಮೂಲಕ ಹೊರ ಹಾಕುತ್ತಾನೆ, ಹೀಗೆ ಹೊರ ಹಾಕುವ ಸಂದರ್ಭದಲ್ಲಿ ಬಹಿರಂಗದ ವಾಸ್ತವಗಳ ಘಟನೆಗಳನ್ನು ನೇರವಾಗಿಯೋ, ರೂಪಕಗಳಾಗಿಯೋ ಬಳಸಿಕೊಳ್ಳುತ್ತಾನೆ. ಆ ಮೂಲಕ ಪದೇ ಪದೇ ಎದುರಾಗುವ ಹೊಸ ಬಗೆಯ ಸವಾಲುಗಳಿಗೂ ಉತ್ತರಿಸುತ್ತಿರುತ್ತಾನೆ. ಇದುವೇ ಸಾಹಿತ್ಯ ಪರಂಪರೆಯ ಸಹಜ ದೃಷ್ಟಿ ಎಂದು ನಮಗೇಕೆ ಅರ್ಥವಾಗುತ್ತಿಲ್ಲ?

ಪಂಪನಿಂದ ಶುರುವಾದ ಈ ಸಾಹಿತ್ಯದ ಪರಂಪರೆ ಇಂದಿನ ತಲೆಮಾರಿನ ಕವಿ ಅರೀಫ್ ರಾಜರವರೆಗೆ ಬಂದು ನಿಂತಿದೆ. ಈ ಪರಂಪರೆಗಳಲ್ಲಿ ಬಂದಂತಹ ಸಾಹಿತ್ಯದ ಅಭಿವ್ಯಕ್ತಿ ಕ್ರಮಗಳು ಅನನ್ಯವಾಗಿದ್ದು ಮತ್ತು ಯಾವುದೇ ಒಳಗಿನ ಮತ್ತು ಹೊರಗಿನ ಪ್ರಭಾವಳಿಗಳಿಂದ ಮುಕ್ತವಾಗಿಯೇ ಕೃತಿಗಳು ರಚನೆಗೊಂಡಿವೆ. ಈ ಪರಂಪರೆಯ ಸಾಹಿತ್ಯವು ಮೂಲಭೂತವಾಗಿ ನೆಚ್ಚಿದ್ದು ಸದಾ ಕಾಲ ಅಲ್ಲಾಡಿಸುತ್ತಿರುವ ಸಾಹಿತಿಯ ಅಂತರಂಗದ ಮೂಲಭೂತ ಸಂವೇದನೆಯನ್ನು. ಈ ಸಂವೇದನೆಗೆ ಬಹಿರಂಗದ ಸಾಮಾಜಿಕ ಕಾರಣಗಳನ್ನು ಪೂರಕವಾಗಿ ಬಳಸಿಕೊಂಡು ಈ ಪರಂಪರೆಯ ಲೇಖಕರು ತಮ್ಮ ಸಾಹಿತ್ಯವನ್ನು ರಚಿಸಿದರು. ವಾಸ್ತವಿಕತೆ, ಅನುಭವ, ಸೃಜನಶೀಲತೆ, ತಲ್ಲಣಗಳ ಗ್ರಹಿಕೆ ಎಲ್ಲವನ್ನೂ ಸಾಹಿತ್ಯ ಮತ್ತು ಸಾಮಾಜಿಕ ನೆಲೆಗಳ ಪರಸ್ಪರ ಪೂರಕ ನೆಲೆಗಳಲ್ಲಿ ಸಮರ್ಥವಾಗಿ ಅರಿತುಕೊಂಡಾಗ ಮಾತ್ರ ನಿಜದ, ಜನಪರ ಸಾಹಿತಿಯಾಗುತ್ತಾನೆ. ಬದಲಾಗಿ ನಾನೊಂದು ಕೇಂದ್ರಗೊಂಡ ನೆಲೆಯ ಧೋರಣೆಯನ್ನು ನೆಚ್ಚಿಕೊಂಡು ಮಾತ್ರ ಸಾಹಿತ್ಯವನ್ನು ರಚಿಸುತ್ತೇನೆ ಮತ್ತು ಅದು ಸಮಾಕಾಲೀನ ಸಂದರ್ಭದಲ್ಲಿ ನನಗೊಂದು ನೆಲೆ ಒದಗಿಸುತ್ತದೆ, ಖ್ಯಾತಿ ತಂದು ಕೊಡುವ ಸಾಧ್ಯತೆಗಳಿವೆ ಎಂದುಕೊಂಡು ಹೊರಟರೆ ನಮ್ಮ ಕತೆ ಮುಗಿಯಿತೆಂದರ್ಥ. ಫಿನಿಷ್!!.

ಎಂಬತ್ತರ ದಶಕದಲ್ಲಿ ಯುವ ಹೋರಾಟಗಾರ, ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯಕ್ಕಾಗಿ ನೇಣುಗಂಬಕ್ಕೇರಿದ ಬೆಂಜಮಿನ್ ಮೋಲಾಯ್ಸ್ Benjamin_Moloise_Livesಕುರಿತಾಗಿ ಆ ಕಾಲದಲ್ಲಿ ವಿಧ್ಯಾರ್ಥಿಗಳಾಗಿದ್ದ ನಾವೆಲ್ಲ ಬಂಡಾಯ ಚಳುವಳಿಯ ಪ್ರಭಾವಳಿಯಲ್ಲಿ ಬರೆದ ಸಾವಿರಾರು ಪದ್ಯಗಳು ಕಸದ ಬುಟ್ಟಿಗೆ ಸೇರಲು ಬಹುಕಾಲ ಹಿಡಿಯಲಿಲ್ಲ! ಇದು ಒಂದು ಸಣ್ಣ ಉದಾಹರಣೆಯಷ್ಟೇ. ಇಂತಹವು ಸಾವಿರಾರಿವೆ. ಲಂಕೇಶರು ಆಗ ಬಂಡಾಯದ ನಮ್ಮನ್ನೆಲ್ಲ ಡಂಬಾಯದವರೆಂದು ವ್ಯಂಗವಾಡುತ್ತಿದ್ದುದು ಕೇವಲ ವ್ಯಂಗವಲ್ಲ, ಅವರ ಆಳದಲ್ಲಿ ನೋವಿತ್ತು. ನಾವು ವೈಯುಕ್ತಿಕವಾಗಿ ಸುಮ್ಮನೆ ಕುಳಿತಿಲ್ಲ, ನಮ್ಮಲ್ಲಿಯೂ ಸಾಮಾಜಿಕ ಪ್ರಜ್ಞೆಯಿದೆ, ನೋಡಿ ನಾವೆಲ್ಲ ಹೇಗೆ ತರುತ್ತೇವೆ ಸಾಮಾಜಿಕ ಬದಲಾವಣೆಗಳನ್ನು ಎಂದು ಅತ್ಯುತ್ಸಾಹದಿಂದ ಹೊರಟ ತೊಂಬತ್ತರ ದಶಕದ ನಮ್ಮ ತಲೆಮಾರಿನ ಆ ಗುಂಪು ಮುಗ್ಗರಿಸಲು ಬಹಳ ಕಾಲ ಬೇಕಾಗಲಿಲ್ಲ. ನಮ್ಮ ಕತ್ತಿವರಸೆಯ ಬೀದಿ ಹೋರಾಟದ ಈ ಆವೇಶ ನಮ್ಮ ತಲೆಮಾರಿಗೆ ಕಟು ಪ್ರಾಮಾಣಿಕತೆಯನ್ನು, ಸೈದ್ಧಾಂತಿಕ ಬದ್ಧತೆಯನ್ನು, ಜಾತ್ಯಾತೀತತೆಯನ್ನು ತಂದು ಕೊಟ್ಟಿದ್ದು ನಿಜವೇ. ಆದರೆ ಅದು ಯಾವುದೇ ಅನುಭವಗಳಿಲ್ಲದ, ಕೇವಲ ಸರಳ ಮಾದರಿಗಳಾದ ಸಮಾಜವಾದ, ಮಾರ್ಕ್ಸವಾದಗಳನ್ನು ಪುಂಖಾನುಪುಂಖವಾಗಿ ಉರುಹೊಡೆದು ಬೆಂಕಿಯುಗುಳುತ್ತಿದ್ದ, ಕೇವಲ ಬೌದ್ಧಿಕ ಕಸರತ್ತನ್ನು ನೆಚ್ಚುತ್ತಿದ್ದ ಈ ಮಾದರಿಯ ಗುಂಪನ್ನು ತೊಂಬತ್ತರ ದಶಕದಲ್ಲಿ ಲಂಕೇಶರು “ಅಗ್ನಿ ಭಕ್ಷಕರು” ಎಂದು ಕರೆದರು. ಇಲ್ಲದಿದ್ದರೆ ಕುವೆಂಪು “ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ” ಎಂದು ಸುಖಾ ಸುಮ್ಮನೆ ಹೇಳಲಿಲ್ಲ!! ಇಲ್ಲದಿದ್ದರೆ ಎಪ್ಪತ್ತರ ದಶಕದಲ್ಲಿ “ಹೊಸ ದಿಗಂತದೆಡೆಗೆ” ಎಂದು ಬರೆದ ತೇಜಸ್ವಿ, ಮೂವತ್ತು ವರ್ಷಗಳ ನಂತರ ಇಪ್ಪತ್ತೊಂದನೇ ಶತಮಾನದಲ್ಲಿ ಹೊಸ ಕಾಲದ, ಹೊಸ ಭಾಷೆಯ, ಹೊಸ ನುಡಿಕಟ್ಟಿನ ಅನ್ವೇಷಣೆ ಎಂದು “ಮಾಯಾಲೋಕ”ವನ್ನು ಬರೆದದ್ದು ಸುಮ್ಮನೆಯೇ? ಹಾಗೆಯೇ ಅನೇಕ ಪ್ರಗತಿಪರ ತಲೆಮಾರುಗಳನ್ನು ರೂಪಿಸಿದ ಈ ಜೀನಿಯಸ್ ಲೇಖಕರು ಅಕ್ಟಿವಿಸಂಗಳಿಗೆ ನಮಸ್ಕಾರ ಹೊಡೆದಿದ್ದೇಕೆ ಎಂಬುದನ್ನು ನಾವು ಸರಿಯಾಗಿ ಗ್ರಹಿಸದೆ ಹೋದರೆ ಅದು ನಮ್ಮೆಲ್ಲರ ಸೋಲು.

ಮೇಲಿನ ಎಲ್ಲ ವೈರುದ್ಧ್ಯಗಳು ಮತ್ತು ವಿರೋಧಾಭಾಸಗಳನ್ನು ಮೀರಲೆಂದೇನೋ ಎಂಬಂತೆ ಹುಟ್ಟಿಕೊಂಡಿದ್ದು ಯಾವುದೇ ಹಣೆಪಟ್ಟಿಗಳಿಲ್ಲದ, ಸಿದ್ಧಾಂತಗಳ ಹಂಗಿಲ್ಲದ ಸಾಹಿತಿಗಳ ಹೊಸ ಗುಂಪು ಅರ್ಥಾತ್ ಭಜನಾ ಮಂಡಳಿ. ಸಾಮಾಜಿಕ ಜವಾಬ್ದಾರಿಗಳ ಅವಶ್ಯಕತೆ ಏಕೆ ಎಂದು ಪ್ರಶ್ನಿಸುತ್ತಾರೆ ಈ ಭಜನಾ ಮಂಡಳಿಯ ಸದಸ್ಯರು. ಬಹುಪಾಲು ವಿಪ್ರವೃಂದವೇ ತುಂಬಿಕೊಂಡಿರುವ, ಯಾವುದೇ ಸಿದ್ಧಾಂತಗಳ ಹಂಗಿಲ್ಲದ ಈ ಭಜನಾ ಮಂಡಳಿಗೆ ಪರಸ್ಪರ ಬೆನ್ನು ಕೆರೆದುಕೊಳ್ಳುವ ಖ್ವಾಯಿಷ್ ಬಹಳ. ಅದೇ ಅವರ ಬಂಡವಾಳ. ಬ್ರಾಹ್ಮಣೇತರರಿಗೆ ಪ್ರವೇಶ ಬಹಳ ಕಡಿಮೆ. ಸಿಕ್ಕರೂ ಅವರು ನವ ಬ್ರಾಹ್ಮಣರಾಗಿರಬೇಕು!! ನಮ್ಮದು ದೇಶ ಮತ್ತು ಕಾಲದ ಸಾಹಿತ್ಯ ಎಂದು ಹೆಮ್ಮೆಯಿಂದ ಹೇಳುವ ಈ ಗುಂಪಿಗೆ ಆಕರ್ಷಕವಾಗಿ ಬರೆಯುವ ಜನಪ್ರಿಯ ಶೈಲಿ ಸಿದ್ಧಿಸಿದೆ. ಬರೆಯುವ ಕಸುಬುಗಾರಿಕೆಯನ್ನು ಅದ್ಭುತವೆನ್ನುವಷ್ಟರ ಮಟ್ಟಿಗೆ ತಮ್ಮದಾಗಿಸಿಕೊಂಡಿದ್ದಾರೆ. ಸಾಹಿತ್ಯವನ್ನು ಕೋಮುವಾದ, ಸಾಮಾಜಿಕ ಅಸಮಾನತೆ, ಶೋಷಣೆ, ವರ್ಗ ಸಂಘರ್ಷಗಳೆಂದು ವಿಂಗಡಿಸಬಾರದೆಂದು ಸ್ಪಷ್ಟವಾಗಿ ಹೇಳುತ್ತಾರೆ ಈ ವಟುಗಳು. ಅಕ್ರಮಗಳು, ಅಸಮಾನತೆಗಳ ಫಲವಾಗಿ ವ್ಯವಸ್ಥೆಯ ಹೊಳೆಯಲ್ಲಿ ಮನುಜನ ರಕ್ತವೇ ಹರಿದು ಹೋಗುತ್ತಿದ್ದರೂ ಅದಾವುದರ ಪರಿವಿಲ್ಲದೇ ದಂಡೆಯ ಮೇಲೆ ಕುಳಿತು ಹಕ್ಕಿ ಹಾರುತಿದೆ ನೋಡಿದಿರಾ ಎಂದು ರಮ್ಯವಾಗಿ, ಸುಶ್ರಾವ್ಯವಾಗಿ ಹಾಡುವ ಈ ಗುಂಪು, ಮುಂದುವರೆದು ರಸಾನುಭವವೇ ನಮ್ಮ ಜೀವಾಳ ಅದನ್ನು ನಮ್ಮ ಅನುಭವದಿಂದ ಹೆಕ್ಕಿ ಹೆಕ್ಕಿ ತೆಗೆದು ನಿಮಗೆ ರಸವತ್ತಾಗಿ ಉಣ ಬಡಿಸುತ್ತೇವೆ, ನೀವು ಸಹ ಅಷ್ಟೇ ಹೊಟ್ಟೆ ತುಂಬಾ ಉಂಡು ತೇಗಿರಿ ಎಂದು ಆಹ್ವಾನಿಸುತ್ತದೆ. ಅದರ ಪ್ರತಿಫಲವೇ ತಿಂಗಳಿಗೆ ಸರಾಸರಿ ಮೂರರಿಂದ ನಾಲ್ಕು ಪುಸ್ತಕಗಳ ಪ್ರಕಟಣೆ, ಚರ್ಚೆ, ವಡೆ, ಉಪ್ಪಿಟ್ಟು, ಕೇಸರಿ ಭಾತುಗಳ ಫಲಾಹಾರ, ಇತ್ಯಾದಿ,ಇತ್ಯಾದಿ. ಜಾಗತೀಕರಣವನ್ನು ಬಳಸಿಕೊಂಡ ಈ ಆಧುನಿಕ ಬ್ರಾಹ್ಮಣರ ಪ್ರಹಸನ ಇಂದು ಕೇಂದ್ರ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಕಳೆದ ಎಂಟು ವರ್ಷಗಳಿಂದ ಸಂಘ ಪರಿವಾರದ ಆಡಳಿತವಿರುವುದು ಹಾಗೂ ಇದೇ ಕಾಲಘಟ್ಟದಲ್ಲಿ ಈ ವಟುಗಳು ಪ್ರವರ್ಧಮಾನಕ್ಕೆ ಬಂದು ರಾಜ್ಯಾದ್ಯಾಂತ ನಳನಳಿಸುತ್ತಿರುವುದಕ್ಕೆ ಅನೇಕ ಒಳ ಸಂಬಂಧಗಳಿವೆ. ಅರೆಸ್ಸೆಸ್ ಗುಂಪು ಅಧಿಕಾರದಲ್ಲಿದ್ದರೆ ಬ್ರಾಹ್ಮಣ್ಯ ಮೇಲುಗೈ ಸಾಧಿಸುತ್ತದೆ ಎಂಬುದಕ್ಕೆ ಕಳೆದ ಒಂದು ದಶಕದಲ್ಲಿ ಮೇಲಿನ ಭಜನಾ ಮಂಡಳಿಯು ಗಳಿಸಿದ ಜನಪ್ರಿಯತೆಯೇ ಸಾಕ್ಷಿ.

ಸಾಹಿತ್ಯದಲ್ಲಿ ಶ್ರೇಷ್ಟತೆಯ ಕುರಿತಾಗಿ ನಮ್ಮ ಕಾಮ್ರೇಡ್‌ರು ಅನಗತ್ಯವಾಗಿ ತಲೆಕೆಡಿಸಿಕೊಂಡಿರುವುದರ ಬಗ್ಗೆ ಪೂರಕವಾಗಿ ಇಷ್ಟೆಲ್ಲವನ್ನು ಬರೆಯಬೇಕಾಗಿ ಬಂದಿದ್ದು. ತೊಂಬತ್ತರ ದಶಕದಲ್ಲಿ ನಡೆದ ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ಈ “ಶ್ರೇಷ್ಟತೆಯ ವ್ಯಸನ”ವೆನ್ನುವ ಪದವನ್ನು ಕೆ.ವಿ.ಸುಬ್ಬಣ್ಣ ಹುಟ್ಟು ಹಾಕಿದರು. DR nagarajಕಸಾಪದ ಅಸಾಹಿತ್ಯಕ ಧೋರಣೆಗೆ ವಿರುದ್ಧವಾಗಿ ಲಂಕೇಶ್, ಡಿ.ಆರ್.ನಾಗರಾಜ್, ಕಿ.ರಂ.ನಾಗರಾಜ್ ಮತ್ತವರ ಸ್ನೇಹಿತರು ನಡೆಸಿದ ಜಾಗೃತ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ಸಂದರ್ಭದಲ್ಲಿ ಗೋಪಾಲ ಕೃಷ್ಣ ಅಡಿಗರು ಸಾಹಿತ್ಯದಲ್ಲಿ ಶ್ರೇಷ್ಟತೆ ಎನ್ನುವುದು ನನಗೆ ಜೀವನ್ಮರಣದ ಪ್ರಶ್ನೆ ಎಂದರು. ಇದನ್ನು ಲಂಕೇಶರು ಸಂಪೂರ್ಣವಾಗಿ ಅನುಮೋದಿಸಿದರು. ಆದರೆ ಲಂಕೇಶ್ ಮತ್ತು ಅಡಿಗರು ಈ ಶ್ರೇಷ್ಟತೆಯನ್ನು ಎಂದಿಗೂ ವರ್ಣನಾತ್ಮಕಾವಾಗಿ ಹಾಗೂ ಸೌಂದರ್ಯಾತ್ಮಕವಾಗಿ ಬಳಸಿ ಹೇಳಿರಲಿಲ್ಲ.( ಇದರ ಕುರಿತಾಗಿ ಚಿಂತಕ ಡಿ.ಎಸ್.ನಾಗಭೂಷಣ ಅವರು 2011 ರಲ್ಲಿ, “ಸಂವಾದ” ಮಾಸ ಪತ್ರಿಕೆಯಲ್ಲಿ ಅತ್ಯಂತ ಮೌಲಿಕವಾದ, ವಿವರವಾದ, ಉತ್ತಮವಾದ ಲೇಖನವನ್ನು ಬರೆದಿದ್ದಾರೆ).

ಎಂಬತ್ತರ ದಶಕದಲ್ಲಿ ಈ ಯುವ ಸಮೂಹ ಬಂಡಾಯದ ಹೆಸರಿನಲ್ಲಿ, ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಕಸುವಿಲ್ಲದೆ, ತೆಳುವಾಗಿ ಬರೆದು ನಾಮಾವಶೇಷವಾಗಿ ಹೋಗುತ್ತಾರೆ ಎಂದು ಲಂಕೇಶರಿಗಂತೂ ಮನದಟ್ಟಾಗಿತ್ತು. ಅದಕ್ಕೇ ಬಂಡಾಯದ ಕೃತಿ “ಕಪ್ಪು ಕಾವ್ಯ”ಕ್ಕೆ ಬೆನ್ನುಡಿ ಬರೆಯುತ್ತಾ “ಕಾವ್ಯ ಕನ್ನಿಕೆಯ ತೊಡೆಯ ಮೇಲೆ ಮಲಗಿ ನಾವು ಅಳುವಂತಾದ್ದೇನಿದೆ” ಎಂದು ಪ್ರಶ್ನಿಸಿದ್ದರು. ಶತಮಾನಗಳು ದಾಟಿದರೂ ಲೇಖಕನೊಬ್ಬನ ಸಾಹಿತ್ಯವು ಕಣ್ಮರೆಯಾಗದೆ ತನ್ನ ಐಡೆಂಟಿಟಿಯನ್ನು ಕಳೆದುಕೊಳ್ಳದೆ ಬದುಕಿ ಉಳಿಯಬೇಕು, ಅಂತಹ ಸಾಹಿತ್ಯವನ್ನು ರಚಿಸಬೇಕೆಂದು ಲಂಕೇಶ್ ಸದಾ ಆಶಿಸುತ್ತಿದ್ದರು. ಕಾವ್ಯದ ಕುರಿತಾಗಿ ಬರೆಯುತ್ತಾ ಲಂಕೇಶರು ಹೇಳುತ್ತಾರೆ, “ಕಾವ್ಯದಲ್ಲಿ ಶ್ರೇಷ್ಟತೆ ಕುರಿತಾಗಿ ಮಾತನಾಡುವವರು, ಉತ್ತಮ ಕಾವ್ಯಕ್ಕಾಗಿ ಶೋಧಿಸುತ್ತಲೇ ಹೋಗುವ ವಿಮರ್ಶಕರು ನಿಜಕ್ಕೂ ಸೂಚಿಸುವುದು ಒಂದು ಸಮಾಜಕ್ಕೆ ಕಾವ್ಯ ಎಷ್ಟು ಅನಿವಾರ್ಯ ಎಂಬುದನ್ನು. ಒಬ್ಬ ಉತ್ತಮ ಕವಿಯ ಕಾವ್ಯ ಅಚ್ಚಾದಾಗ ಕೇವಲ ಇನ್ನೂರು ಜನ ಅದನ್ನು ಓದಬಹುದು, ಅವರಲ್ಲಿ ಅನೇಕರನ್ನು ಅದು ಮುಟ್ಟದಿರಬಹುದು. ಆದರೆ ಅದು ಅರ್ಥಪೂರ್ಣ ಕಾವ್ಯವಾಗಿದ್ದರೆ ಕೇವಲ ಹತ್ತು ಜನರ ಹೃದಯವನ್ನು ಮುಟ್ಟಿ ಒಂದು ಜನತೆಯ ನುಡಿಕಟ್ಟಿನ, ಪ್ರಜ್ಞೆಯ ಭಾಗವಾಗುವ ಶಕ್ತಿ ಪಡೆದಿರುತ್ತದೆ.” ಲಂಕೇಶರು ಸಾಹಿತ್ಯದಲ್ಲಿ ಶ್ರೇಷ್ಟತೆಯನ್ನು ಬಯಸಿದ್ದು ಈ ಹಿನ್ನೆಲೆಯಲ್ಲಿ. ಯಾವುದೇ ಪ್ರುಭುತ್ವದ ಮುಖವಾಣಿಯಾಗದೇ, ರಾಜೀ ಗುಣವನ್ನು, ಗುಲಾಮಗಿರಿಯನ್ನು ನಿರಾಕರಿಸಿ, ಸಮಾಜದ, ಜನತೆಯ ವಿಶ್ವಾಸಾರ್ಹತೆಯನ್ನು ನಿರಂತರವಾಗಿ ಉಳಿಸಿಕೊಂಡ ಸಾಹಿತ್ಯ ರಚನೆಗೊಳ್ಳಬೇಕು, ಅದು ತಂತಾನೇ ಶ್ರೇಷ್ಠ ಸಾಹಿತ್ಯವಾಗುತ್ತದೆ ಎಂದು ವಿವರಿಸಿದ ಲಂಕೇಶರು, ಇದಕ್ಕೆ ಉದಾಹರಣೆಯಾಗಿ ಯುರೋಪಿನ, ಅಮೇರಿಕಾದ, ಇಂಡಿಯಾದ ನೂರಾರು ಲೇಖಕರ ಸಾಹಿತ್ಯವನ್ನು ವಿವರಿಸಿದರು.

ಆದರೆ ಆಗ ಬಂಡಾಯ ಚಳುವಳಿಯೊಂದಿಗೆ ಜಗಳ ಕಾಯ್ದುಕೊಂಡಿದ್ದ ಲಂಕೇಶ್ ಮತ್ತು ಅವರ ಸ್ನೇಹಿತರ ವಿರುದ್ಧ ಈ ಶ್ರೇಷ್ಟತೆಯ ವ್ಯಸನದ ಪದಬಳಕೆಯು ಅಸ್ತ್ರವಾಗಿ ಪ್ರಯೋಗಗೊಂಡು ಇದೇ ಧೋರಣೆ ಮುಂದಿನ ಎರಡು ದಶಕಗಳ ಕಾಲ ಚಾಲ್ತಿಯದ್ದು ಯಾರಾದರೂ ಶ್ರೇಷ್ಟತೆ ಎಂದಾಕ್ಷಣ ಅವರ ವಿರುದ್ಧ ಈ ಶ್ರೇಷ್ಟತೆಯ ವ್ಯಸನವನ್ನು ಆರೋಪಿಸಿ ಬಾಯಿ ಮುಚ್ಚಿಸಲಾಗುತ್ತಿದೆ. ಇದರ ಮಿತಿಯನ್ನರಿಯದೆ ನಮ್ಮ ಪ್ರಗತಿಪರ ಸ್ನೇಹಿತರನೇಕರೂ ಸಹ ಮತ್ತೆ ಮತ್ತೆ ಈ ಶ್ರೇಷ್ಟತೆಯ ವ್ಯಸನದ ಕುರಿತಾಗಿ ಮಾತನಾಡುತ್ತಾ ಅದನ್ನು ಸಾರ್ವತ್ರೀಕರಿಸುತ್ತಿರುವುದು ನನ್ನಂತಹವರಿಗೆ ಸಹಮತವಿಲ್ಲ. ಈ ಟೀಕೆಯ ಮೂಲಕ ಮರಳಿ ನಾವು ಕಸವನ್ನೇ ಒಳಗೊಂಡ ಸಾಹಿತ್ಯದ ಸೃಷ್ಟಿಗೆ ಕಾರಣಕರ್ತರಾಗಬಾರದು.

ಹಾಗೆಯೇ, ಈ ಶ್ರೇಷ್ಟತೆಯ ವ್ಯಸನವನ್ನು ಬಳಸಿ ಟೀಕಿಸಿದ ಕೆ.ವಿ.ಸುಬ್ಬಣ್ಣರ ನೀನಾಸಂ ಮತ್ತು ಅದರ ಗುಂಪು ಇಂದು ಮಾಡುತ್ತಿರುವುದಾರೂ ಏನು? ಶ್ರೇಷ್ಟತೆಯ ಧ್ಯಾನವೇ!! ಒಂದು ಜಾತಿಯ ಒಳಪಂಗಡದ ನೆಲೆಯಲ್ಲಿ ಹುಟ್ಟಿಕೊಂಡ ಈ ನೀನಾಸಂನ ಶ್ರೇಷ್ಟತೆಯ ಧ್ಯಾನವನ್ನು ನಮ್ಮ ಪ್ರಗತಿಪರ ಗೆಳೆಯರು ಮೊದಲು ಪ್ರಶ್ನಿಸಬೇಕು. ಯಾವುದೇ ಸಿದ್ಧಾಂತಗಳ ಹಣೆಪಟ್ಟಿಯಿಲ್ಲವೆಂದು ಬರೆಯುತ್ತಿರುವ ಮೇಲಿನ ಭಜನಾ ಮಂಡಳಿಯ ವಿಪ್ರ ವೃಂದ ಹುಟ್ಟು ಹಾಕುತ್ತಿರುವ ಶ್ರೇಷ್ಟತೆಯ ವ್ಯಸನದ ಮಾದರಿಯನ್ನು ನಮ್ಮ ಪ್ರಗತಿಪರ ಗೆಳೆಯರ ಗುಂಪು ನೇರವಾಗಿ ಪ್ರಶ್ನಿಸಬೇಕು. ದೇಶಕಾಲದ ಶ್ರೇಷ್ಟತೆಯ ವ್ಯಸನವನ್ನು ನೇರವಾಗಿ ಸಂಬಂಧಿಸಿದವರಿಗೆ ಪ್ರಶ್ನಿಸದೆ ಕೇವಲ ಸಾಮಾನ್ಯವಾಗಿ ಗೊಣಗಿದ್ದು ನಮ್ಮೆಲ್ಲರ ಮಿತಿಯಲ್ಲವೇ? “ಸ್ವಪ್ನ ಸಾರಸ್ವತ” ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಆ ಕಾದಂಬರಿಯ ಮೂಲಭೂತವಾದಿ ಮತ್ತು ಜಾತಿವಾದಿ ಗುಣಗಳನ್ನು ಎತ್ತಿ ಚರ್ಚಿಸದೆ ಅದರ ಶ್ರೇಷ್ಟತೆಯನ್ನು ವಿಮರ್ಶಕರು ಹೊಗಳುತ್ತಿದ್ದಾಗ ನಾವೆಲ್ಲ ಅದರ ಶ್ರೇಷ್ಟತೆಯ ವ್ಯಸನವನ್ನು ಪ್ರಶ್ನಿಸಬೇಕಾಗಿತ್ತು. ಅಳ್ವಾಸ್ ನುಡಿಸಿರಿಯು ಲಜ್ಜೆಗೆಟ್ಟು ಶ್ರೇಷ್ಟತೆಯ ವ್ಯಸನವನ್ನು ಪ್ರದರ್ಶಿಸುತ್ತಿದ್ದರೆ ನಾವೆಲ್ಲ ಕಪ್ಪು ಬಾವುಟ ಹಿಡಿದು ಅಲ್ಲಿ ವೇದಿಕೆಯ ಮುಂದೆ ವಿರೋಧಿಸಬೇಕಾಗಿತ್ತು. ಸಂಸ್ಕಾರ ಕಾದಂಬರಿಯನ್ನು ಶ್ರೇಷ್ಠ ಕೃತಿಯೆಂದು ಮರಳಿ ಮರಳಿ ಸ್ಥಾಪಿಸಬಯಸುವ ಪಟ್ಟಭದ್ರ ಹಿತಾಸಕ್ತಿಗಳ ಶ್ರೇಷ್ಟತೆಯ ವ್ಯಸನವನ್ನು ನಾವು ನೇರವಾಗಿ ಪ್ರಶ್ನಿಸಬೇಕಲ್ಲವೇ? ಇಂತಹವು ಸಾವಿರ ಉದಾಹರಣೆಗಳಿವೆ.

ಹೊಸ ಸಾಹಿತ್ಯ ಚಳವಳಿಯನ್ನು ಕಟ್ಟುವ ಗುಂಗಿನಲ್ಲಿರುವ ನಾವೆಲ್ಲ ಸ್ಪಷ್ಟವಾಗಿ ತಿಳಿದುಕೊಳ್ಳಬೇಕಾಗಿರುವುದು ಕೆಲವು ಸ್ಥಾಪಿತ ಶಕ್ತಿ ಕೇಂದ್ರಗಳ ಕುರಿತಾಗಿ ಎಚ್ಚರಿಕೆಯ ಮತ್ತು ಸ್ಪಷ್ಟ ಮತ್ತು ನೇರವಾದ ನಿಲುವುಗಳು. ಮೇಲ್ನೋಟಕ್ಕೆ ಪ್ರಗತಿಪರರೆಂದು ಕಂಡುಬಂದರೂ ಯಾವುದೇ ಪ್ರಗತಿಪರ ಶಕ್ತಿಗಳನ್ನು ಆಪೋಶನ ಮಾಡಿಕೊಂಡು ವಾತಾಪಿ ಜೀರ್ಣೋಭವ ಎಂದು ಅರಗಿಸಿಕೊಳ್ಳುವ ಲೇಖಕರ ಮತ್ತು ಸಾಹಿತಿಗಳ ಕುರಿತಾಗಿ ಮ್ಮ ಪ್ರಗತಿಪರ ಗೆಳೆಯರ ಮೈಯೆಲ್ಲ ಕಣ್ಣಾಗಿರಲಿ ಎಂದೇ ಕಳಕಳಿಯಿಂದ ಆಶಿಸುತ್ತೇನೆ.

ಅಲ್ಲೂ ಬುಳುಬುಳು, ಇಲ್ಲೂ ಬುಳು ಬುಳು.. ಬೇಡ

-ಡಾ.ಎಸ್.ಬಿ.ಜೋಗುರ

ಧಾರವಾಡದ ಸಾಹಿತ್ಯ ಸಂಭ್ರಮವನ್ನು ಅನೇಕರು ಅಲ್ಲಿಯ ಮಾರ್ಗಸೂಚಿಗಳನ್ನಿಟ್ಟುಕೊಂಡು ಹೊರಗುಳಿದರು. ಒಂದು ತಾತ್ವಿಕವಾದ ಕಾರಣಕ್ಕಾಗಿ ಹೊರಗುಳಿದರೂ ಅಲ್ಲಿ ನಡೆದಿರುವ ಆರೋಗ್ಯಪೂರ್ಣ ಮತ್ತು ಔಚಿತ್ಯಪೂರ್ಣ ಚರ್ಚೆಗಳನ್ನು ತಾತ್ವಿಕವಾದ ಭಿನ್ನಾಭಿಪ್ರಾಯಗಳನ್ನು ಮೀರಿಯೂ ಒಪ್ಪಿಕೊಳ್ಳಬೇಕಾದ ಅವಶ್ಯಕತೆಯಿದೆ.

ಕೇವಲ ಪ್ರತಿರೋಧವೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಎಡ-ಬಲಗಳ ತಾತ್ವಿಕ ಸಿದ್ಧಾಂತಗಳ ಜೊತೆಜೊತೆಗೆ ಅಂತಿಮವಾಗಿ ಉಳಿಯಬೇಕಾದುದು ಒಳ್ಳೆಯತನ ಮಾತ್ರ. ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡಿರುವ ಸಾಹಿತಿಗಳ ಪ್ರಮಾಣಕ್ಕಿಂತ ಹತ್ತಾರು ಪಟ್ಟು ಅವುಗಳಿಂದ ವಿಚಲಿತರಾದವರಿದ್ದಾರೆ. ನಡುವೆಯೇ ಕೆಲವರು ಟಿ.ಎ., ಡಿ.ಎ. ಸಾಹಿತಿಗಳಿದ್ದಾರೆ. ಸಾಹಿತ್ಯ ಸಮ್ಮೇಳನಗಳಿರಲಿ, ಗೋಷ್ಟಿಗಳಿರಲಿ ಅಂತಿಮವಾಗಿ ಉಳಿಯಬಹುದಾದ ಚರ್ಚೆ ಮತ್ತು ತಿರುಳು ಇವರ ಬಾಯಲ್ಲಿ ಈ ಟಿ.ಎ., ಡಿ.ಎ.ಗೆ ಸಂಬಂಧಿಸಿದ್ದಾಗಿರುತ್ತದೆ. ಇಷ್ಟು ಕೊಟ್ಟರೆ ಬರ್ತೀವಿ ಎಂದು ಸಂಘಟಕರಿಗೆ ಬರೆ ಹಾಕುವ ರೀತಿಯಲ್ಲಿ ಗೆರೆ ಕೊರೆಯುವ ಸಾಹಿತಿ sahitya-sambhramaಮಹೋದಯರೂ ಅಲ್ಲಿದ್ದಾರೆ ಎನ್ನುವುದನ್ನು ನಾನು ಕೇಳಿದ್ದೇನೆ. ಇಂಥವರನ್ನು ಬೆಳ್ಳಬೆಳತನ ಕುಳ್ಳರಿಸಿಕೊಂಡು ರಾಮಾಯಣ ಹೇಳಿದರೂ ಬೆಳಿಗ್ಗೆ ಎದ್ದದ್ದೇ ಮತ್ತೆ ಇವರಿಡೊ ಪ್ರಶ್ನೆ ಸೀತೆ ರಾಮನಿಗೆ ಏನಾಗಬೇಕು..?

ಧಾರವಾಡದ ಸಾಹಿತ್ಯ ಸಂಭ್ರಮದ ಕಾರ್ಯಕ್ರಮ ಮಾರ್ಗಸೂಚಿಯೇ ನೆಟ್ಟಗಿಲ್ಲವೆಂದು ತಕರಾರು ತೆಗೆದವರ ಎದುರಲ್ಲಿ ಅತ್ಯಂತ ಸಾತ್ವಿಕವಾದದ್ದಾದರೂ ಸವಾಲುಗಳಂತೂ ಇವೆ. ಅನೇಕರು ಇವರು ಸಂಭ್ರಮವನ್ನು ಠೀಕಿಸಿ ದೂರ ಉಳಿದರು ನೋಡೊಣ ಇವರು ಹೇಗೆ ಮಾಡ್ತಾರೆ ಅಂತ ಕಾಯ್ದು ಕುಳಿತವರಿದ್ದಾರೆ. ಇವರಲ್ಲಿ ಕೆಲವರು ಅಲ್ಲೂ ಬುಳು ಬುಳು ಇಲ್ಲೂ ಬುಳು ಬುಳು ಜಾತಿಯವರೂ ಇದ್ದಾರೆ. ಇವರನ್ನು ಸಾಧ್ಯವಾದ ಮಟ್ಟಿಗೆ ಕೈ ಬಿಡುವದೇ ಉತ್ತಮ. ಜೊತೆಗೆ ಅಡ್ದಗೋಡೆಯ ದ್ವೀಪದಂತಿರುವ ವ್ಯಕ್ತಿತ್ವಗಳೂ ಇವೆ. ಇವು ಎರಡೂ ಬದಿಗೆ ಬೆಳಕಾಗದೇ ಇರೋ ಬೆಳಕನ್ನೆಲ್ಲಾ ಬುಡದ ಕತ್ತಲನ್ನು ಕಳೆಯುವಲ್ಲಿಯೇ ಖರ್ಚು ಮಾಡಿಬಿಡುವವರು. ಇವರಿಂದಲೂ ಈ ಪ್ರಗತಿಪರ ಸಾಹಿತ್ಯ ವೇದಿಕೆ ಪಾಠ ಕಲಿಯಬೇಕಿದೆ.

ಎಷ್ಟೇ ಆಗಲಿ ಹಿರಿಯರು ಎನ್ನುವ ರಿಯಾಯತಿ ಎದುರು ಬಂದಾಗ ಕೈ ಮುಗಿದು ನಮಸ್ಕರಿಸುವುದಕ್ಕೆ ಸೀಮಿತಗೊಳಿಸುವದು ಉತ್ತಮ. ಒಟ್ಟಾರೆ ಯಾವುದನ್ನು ಟೀಕಿಸಿ, ಸರಿಯಾದದ್ದಲ್ಲ ಎಂದು ದೂರ ಸರಿಯಲಾಯಿತೋ ಮತ್ತೆ ಅದೇ ತತ್ವಗಳ ಸನಿಹಕ್ಕೆ ಬಾರದ ಹಾಗೆ ಎಚ್ಚರ ವಹಿಸುವದರಲ್ಲಿಯೇ ಬರುವ ಮಾರ್ಚ್ ತಿಂಗಳಲ್ಲಿ ಜರುಗುವ ಸಾಹಿತ್ಯ ಚಟುವಟಿಕೆಗಳ ಅರ್ಥವಂತಿಕೆ ಅಡಗಿದೆ.

ಈಗಾಗಲೇ ಸ್ನೇಹಿತರ ವಲಯದಲ್ಲಿ ಮಾತುಗಳು ಶುರುವಾಗಿವೆ. ಆ ಮಾತುಗಳ ಆರಂಭದಲ್ಲಿಯೇ ನೋಡೊಣ ನೀವು ಹೇಗೆ ಮಾಡುತ್ತೀರಿ..? ಎನ್ನುವ ಸವಾಲಿರುತ್ತದೆ. ಅವರು ಹಾಗೆ ಸವಾಲನ್ನು ಚ್ಯಾಲೆಂಜ್ ಥರಾ ಇಡುವಲ್ಲಿಯೂ ಒಂದು ತರ್ಕವಡಗಿದೆ. ಸಂಭ್ರಮ, ಉತ್ಸವಕ್ಕೆ ಪರ್ಯಾಯವಾಗಿ ನಾವು ಏನೋ ಒಂದು ವಿಶಿಷ್ಟವಾದುದನ್ನು ಮಾಡಿ ತೋರಿಸುತ್ತೇವೆ ಎಂದು ಮುನ್ನಡೆದಾಗ ಎರಡೂ ಕಡೆಯೂ ಸಲ್ಲಲು ಯತ್ನಿಸುವ ಮನಸುಗಳಿಗೆ ಇಲ್ಲಿ ಅವಕಾಶವನ್ನು ನೀಡಲೇಬಾರದು. ಅವರು ಹೀಗೇ ಬೇಕಾದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ, ಆದರೆ ವೇದಿಕೆಯನ್ನು ಮಾತ್ರ ಅವರಿಗೆ ಹಂಚಬಾರದು. ಈಗಾಗಲೇ ಒಂದು ಬಗೆಯ ಮಾನಸಿಕ ಸ್ತರವನ್ನು ಅವರು ಸಂಪಾದಿಸಿದವರು. ಅವರನ್ನು ನಾವು ಒಳಗೊಂಡರೆ ನಾವು ಮಾಡುತ್ತಿರುವದು ಕೂಡಾ ಸಾಹಿತ್ಯ ಸಂಭ್ರಮದ ಮುಂದುವರೆದ ಭಾಗವೇ ಆಗುತ್ತದೆ. ಆ ದಿಶೆಯಲ್ಲಿ ಈಗ ಸಾಹಿತ್ಯಕ ಚಟುವಟಿಕೆಗಳನ್ನು ರೂಪಿಸಹೊರಟವರಿಗೆ ತಿಳಿದಿರಲಿ, ಈ ದ್ವಂದ್ವವಾದಿಗಳು ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಳ್ಳಲಿ, ಆದರೆ ಗೋಷ್ಟಿಗಳಲ್ಲಿ ಅವಕಾಶ ಕೊಡುವುದು ಬೇಡ.