ಅಲ್ಲೂ ಬುಳುಬುಳು, ಇಲ್ಲೂ ಬುಳು ಬುಳು.. ಬೇಡ

-ಡಾ.ಎಸ್.ಬಿ.ಜೋಗುರ

ಧಾರವಾಡದ ಸಾಹಿತ್ಯ ಸಂಭ್ರಮವನ್ನು ಅನೇಕರು ಅಲ್ಲಿಯ ಮಾರ್ಗಸೂಚಿಗಳನ್ನಿಟ್ಟುಕೊಂಡು ಹೊರಗುಳಿದರು. ಒಂದು ತಾತ್ವಿಕವಾದ ಕಾರಣಕ್ಕಾಗಿ ಹೊರಗುಳಿದರೂ ಅಲ್ಲಿ ನಡೆದಿರುವ ಆರೋಗ್ಯಪೂರ್ಣ ಮತ್ತು ಔಚಿತ್ಯಪೂರ್ಣ ಚರ್ಚೆಗಳನ್ನು ತಾತ್ವಿಕವಾದ ಭಿನ್ನಾಭಿಪ್ರಾಯಗಳನ್ನು ಮೀರಿಯೂ ಒಪ್ಪಿಕೊಳ್ಳಬೇಕಾದ ಅವಶ್ಯಕತೆಯಿದೆ.

ಕೇವಲ ಪ್ರತಿರೋಧವೊಂದೇ ಎಲ್ಲದಕ್ಕೂ ಪರಿಹಾರವಲ್ಲ. ಎಡ-ಬಲಗಳ ತಾತ್ವಿಕ ಸಿದ್ಧಾಂತಗಳ ಜೊತೆಜೊತೆಗೆ ಅಂತಿಮವಾಗಿ ಉಳಿಯಬೇಕಾದುದು ಒಳ್ಳೆಯತನ ಮಾತ್ರ. ತತ್ವ ಸಿದ್ಧಾಂತಗಳಿಗೆ ಅಂಟಿಕೊಂಡಿರುವ ಸಾಹಿತಿಗಳ ಪ್ರಮಾಣಕ್ಕಿಂತ ಹತ್ತಾರು ಪಟ್ಟು ಅವುಗಳಿಂದ ವಿಚಲಿತರಾದವರಿದ್ದಾರೆ. ನಡುವೆಯೇ ಕೆಲವರು ಟಿ.ಎ., ಡಿ.ಎ. ಸಾಹಿತಿಗಳಿದ್ದಾರೆ. ಸಾಹಿತ್ಯ ಸಮ್ಮೇಳನಗಳಿರಲಿ, ಗೋಷ್ಟಿಗಳಿರಲಿ ಅಂತಿಮವಾಗಿ ಉಳಿಯಬಹುದಾದ ಚರ್ಚೆ ಮತ್ತು ತಿರುಳು ಇವರ ಬಾಯಲ್ಲಿ ಈ ಟಿ.ಎ., ಡಿ.ಎ.ಗೆ ಸಂಬಂಧಿಸಿದ್ದಾಗಿರುತ್ತದೆ. ಇಷ್ಟು ಕೊಟ್ಟರೆ ಬರ್ತೀವಿ ಎಂದು ಸಂಘಟಕರಿಗೆ ಬರೆ ಹಾಕುವ ರೀತಿಯಲ್ಲಿ ಗೆರೆ ಕೊರೆಯುವ ಸಾಹಿತಿ sahitya-sambhramaಮಹೋದಯರೂ ಅಲ್ಲಿದ್ದಾರೆ ಎನ್ನುವುದನ್ನು ನಾನು ಕೇಳಿದ್ದೇನೆ. ಇಂಥವರನ್ನು ಬೆಳ್ಳಬೆಳತನ ಕುಳ್ಳರಿಸಿಕೊಂಡು ರಾಮಾಯಣ ಹೇಳಿದರೂ ಬೆಳಿಗ್ಗೆ ಎದ್ದದ್ದೇ ಮತ್ತೆ ಇವರಿಡೊ ಪ್ರಶ್ನೆ ಸೀತೆ ರಾಮನಿಗೆ ಏನಾಗಬೇಕು..?

ಧಾರವಾಡದ ಸಾಹಿತ್ಯ ಸಂಭ್ರಮದ ಕಾರ್ಯಕ್ರಮ ಮಾರ್ಗಸೂಚಿಯೇ ನೆಟ್ಟಗಿಲ್ಲವೆಂದು ತಕರಾರು ತೆಗೆದವರ ಎದುರಲ್ಲಿ ಅತ್ಯಂತ ಸಾತ್ವಿಕವಾದದ್ದಾದರೂ ಸವಾಲುಗಳಂತೂ ಇವೆ. ಅನೇಕರು ಇವರು ಸಂಭ್ರಮವನ್ನು ಠೀಕಿಸಿ ದೂರ ಉಳಿದರು ನೋಡೊಣ ಇವರು ಹೇಗೆ ಮಾಡ್ತಾರೆ ಅಂತ ಕಾಯ್ದು ಕುಳಿತವರಿದ್ದಾರೆ. ಇವರಲ್ಲಿ ಕೆಲವರು ಅಲ್ಲೂ ಬುಳು ಬುಳು ಇಲ್ಲೂ ಬುಳು ಬುಳು ಜಾತಿಯವರೂ ಇದ್ದಾರೆ. ಇವರನ್ನು ಸಾಧ್ಯವಾದ ಮಟ್ಟಿಗೆ ಕೈ ಬಿಡುವದೇ ಉತ್ತಮ. ಜೊತೆಗೆ ಅಡ್ದಗೋಡೆಯ ದ್ವೀಪದಂತಿರುವ ವ್ಯಕ್ತಿತ್ವಗಳೂ ಇವೆ. ಇವು ಎರಡೂ ಬದಿಗೆ ಬೆಳಕಾಗದೇ ಇರೋ ಬೆಳಕನ್ನೆಲ್ಲಾ ಬುಡದ ಕತ್ತಲನ್ನು ಕಳೆಯುವಲ್ಲಿಯೇ ಖರ್ಚು ಮಾಡಿಬಿಡುವವರು. ಇವರಿಂದಲೂ ಈ ಪ್ರಗತಿಪರ ಸಾಹಿತ್ಯ ವೇದಿಕೆ ಪಾಠ ಕಲಿಯಬೇಕಿದೆ.

ಎಷ್ಟೇ ಆಗಲಿ ಹಿರಿಯರು ಎನ್ನುವ ರಿಯಾಯತಿ ಎದುರು ಬಂದಾಗ ಕೈ ಮುಗಿದು ನಮಸ್ಕರಿಸುವುದಕ್ಕೆ ಸೀಮಿತಗೊಳಿಸುವದು ಉತ್ತಮ. ಒಟ್ಟಾರೆ ಯಾವುದನ್ನು ಟೀಕಿಸಿ, ಸರಿಯಾದದ್ದಲ್ಲ ಎಂದು ದೂರ ಸರಿಯಲಾಯಿತೋ ಮತ್ತೆ ಅದೇ ತತ್ವಗಳ ಸನಿಹಕ್ಕೆ ಬಾರದ ಹಾಗೆ ಎಚ್ಚರ ವಹಿಸುವದರಲ್ಲಿಯೇ ಬರುವ ಮಾರ್ಚ್ ತಿಂಗಳಲ್ಲಿ ಜರುಗುವ ಸಾಹಿತ್ಯ ಚಟುವಟಿಕೆಗಳ ಅರ್ಥವಂತಿಕೆ ಅಡಗಿದೆ.

ಈಗಾಗಲೇ ಸ್ನೇಹಿತರ ವಲಯದಲ್ಲಿ ಮಾತುಗಳು ಶುರುವಾಗಿವೆ. ಆ ಮಾತುಗಳ ಆರಂಭದಲ್ಲಿಯೇ ನೋಡೊಣ ನೀವು ಹೇಗೆ ಮಾಡುತ್ತೀರಿ..? ಎನ್ನುವ ಸವಾಲಿರುತ್ತದೆ. ಅವರು ಹಾಗೆ ಸವಾಲನ್ನು ಚ್ಯಾಲೆಂಜ್ ಥರಾ ಇಡುವಲ್ಲಿಯೂ ಒಂದು ತರ್ಕವಡಗಿದೆ. ಸಂಭ್ರಮ, ಉತ್ಸವಕ್ಕೆ ಪರ್ಯಾಯವಾಗಿ ನಾವು ಏನೋ ಒಂದು ವಿಶಿಷ್ಟವಾದುದನ್ನು ಮಾಡಿ ತೋರಿಸುತ್ತೇವೆ ಎಂದು ಮುನ್ನಡೆದಾಗ ಎರಡೂ ಕಡೆಯೂ ಸಲ್ಲಲು ಯತ್ನಿಸುವ ಮನಸುಗಳಿಗೆ ಇಲ್ಲಿ ಅವಕಾಶವನ್ನು ನೀಡಲೇಬಾರದು. ಅವರು ಹೀಗೇ ಬೇಕಾದರೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ, ಆದರೆ ವೇದಿಕೆಯನ್ನು ಮಾತ್ರ ಅವರಿಗೆ ಹಂಚಬಾರದು. ಈಗಾಗಲೇ ಒಂದು ಬಗೆಯ ಮಾನಸಿಕ ಸ್ತರವನ್ನು ಅವರು ಸಂಪಾದಿಸಿದವರು. ಅವರನ್ನು ನಾವು ಒಳಗೊಂಡರೆ ನಾವು ಮಾಡುತ್ತಿರುವದು ಕೂಡಾ ಸಾಹಿತ್ಯ ಸಂಭ್ರಮದ ಮುಂದುವರೆದ ಭಾಗವೇ ಆಗುತ್ತದೆ. ಆ ದಿಶೆಯಲ್ಲಿ ಈಗ ಸಾಹಿತ್ಯಕ ಚಟುವಟಿಕೆಗಳನ್ನು ರೂಪಿಸಹೊರಟವರಿಗೆ ತಿಳಿದಿರಲಿ, ಈ ದ್ವಂದ್ವವಾದಿಗಳು ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಳ್ಳಲಿ, ಆದರೆ ಗೋಷ್ಟಿಗಳಲ್ಲಿ ಅವಕಾಶ ಕೊಡುವುದು ಬೇಡ.

One thought on “ಅಲ್ಲೂ ಬುಳುಬುಳು, ಇಲ್ಲೂ ಬುಳು ಬುಳು.. ಬೇಡ

  1. Naveen_H

    ಸಾಹಿತ್ಯ ಸಂಭ್ರಮ ಸಮ್ಮೇಳನ ಯಾಕೆ ಬೆಂಬಲಿಸಬೇಕು – ಹೀಗೊಂದು ದೃಷ್ಟಿಕೋನ :

    ಇಷ್ಟೆಲ್ಲಾ ಗೊಂದಲಗಳಿಗೆ ಮೂಲ ಕಾರಣ ಪ್ರತಿನಿಧಿಗಳ ಶುಲ್ಕ ಹಾಗೂ ಕರಾರುಗಳೇ. ಸಾಹಿತ್ಯ ಸಂಭ್ರಮ ವಿರೋಧಿಸಿ ಬರೆಯುವವರು ಒಂದು ಸ್ಪಷ್ಟೀಕರಣ ಕೊಡಬೇಕು. ಸರ್ಕಾರವನ್ನು ಹಣ ಕೇಳಿದರೆ ಸರ್ಕಾರದ ಹಂಗು, ಸಂಘ ಸಂಸ್ಥೆಗಳಿಂದ ಹಣ ಕೇಳಿದರೆ ಅವರ ಹಂಗು, ಅಥವಾ ಅವರ ಹಿತಾಸಕ್ತಿಗೆ ಅನುಗುಣವಾಗಿ ಸಮ್ಮೇಳನವನ್ನು ನಡೆಸಬೇಕಾಗುತ್ತದೆ. ಹಾಗಿದ್ದಾಗ ಜನರಿಂದಲೇ ದೇಣಿಗೆ, ಪ್ರತಿನಿಧಿ ಶುಲ್ಕ ಪಡೆದು ಯಾರ ಹಂಗೂ ಇಲ್ಲದೇ ಸಮ್ಮೇಳನ ನಡೆಸಿದರೆ ಏನು ತಪ್ಪು?? ಹೇಗೂ ಯಾರ ಹಂಗೂ ಇರಲ್ಲ, ಏನು ಬೇಕಾದರೂ ಚರ್ಚಿಸಬಹುದು, ಯಾರನ್ನು ಬೇಕಾದರೂ ವಿಮರ್ಶಿಸಬಹುದು, ಆಗ ಅದು ನಿಜವಾದ ಪ್ರಜಾಪ್ರಭುತ್ವದ ರೀತಿಯಲ್ಲಿ ನಡೆದ ಸಮ್ಮೇಳನ ಆಗುವದಿಲ್ಲವೇ??

    ಇನ್ನು ಎಷ್ತೊಂತ ಸರ್ಕಾರದ ಹಂಗಿನಲ್ಲಿ, ಸರ್ಕಾರದ ದುಡ್ಡಿನಲ್ಲಿ ಸಂಮೆಳನವೆಂಬ ಜಾತ್ರೆಗಳನ್ನು ನಡೆಸುವದು? ಇದರಿಂದ ಸಾಮಾನ್ಯ ಜನಕ್ಕೆ ಏನು ಲಾಭ?? ಸರ್ಕಾರಕ್ಕಂತು ಬುದ್ಹಿ ಇಲ್ಲಾ. ಜನಪ್ರಿಯತೆಗೊಸ್ಕರವೋ ಪತ್ರಿಕೆಯಲ್ಲಿ ಬೈತಾರೆ ಅಂತನೋ ಕೋಟಿ ಕೋಟಿಗಟ್ಟಲೆ ಹಣವನ್ನು ಸಮ್ಮೇಳನಕ್ಕೆ ನೀಡುತ್ತಲೇ ಇರುತ್ತದೆ. ಇದರಿಂದ ಆಗುವದಾದರೂ ಏನು? ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ! ಇದಕ್ಕಿಂತಲೂ ಖಾಸಗಿ ಸಮ್ಮೇಳನಗಳು ಒಳ್ಳೆಯವಲ್ಲವೇ? ಸರ್ಕಾರಗಳು ಕೆಲವೊಮ್ಮೆ ಸಬ್ಸಿಡಿ, ಸವಲತ್ತುಗಳನ್ನು ನೀಡಿ ನೀಡಿ ಜನರಿಗೆ ಆಯಾ ವಸ್ತುಗಳ ನಿಜ ಮೌಲ್ಯವೇ ತಿಳಿಯದಂತೆ ಮಾಡತ್ತೆ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆಗಳು. ಹಾಗೇ ಸಾಹಿತ್ಯ ಸಮ್ಮೇಳನಗಳೂ ಕೂಡ.
    ಇನ್ನು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಕೆಲ ಜನರ ನಡೆವಳಿಕೆ ಆ ದೇವರಿಗೆ ಪ್ರೀತಿ. ಮೊದಲೇ ಸಾಹಿತ್ಯ ಸಮ್ಮೇಳನಗಳೆಂದರೆ ಸರ್ಕಾರಿ ಕೃಪಾ ಪೋಷಿತ ಜಾತ್ರೆ. ಇಲ್ಲಿ ಉಂಡವನೇ ಜಾಣ. ಕೆಲ ಜಾಣ ಇಲ್ಲಿ ಬರುವದೇ ತಮ್ಮ ಬೇಳೆ ಬೇಯಿಸಿಕೊಳ್ಳುವದಕ್ಕೆ. ಇನ್ನು ಪತ್ರಿಕೆಗಳಲ್ಲಿ ಯಾವ ವಿಷಯಗಳು ಪ್ರಧಾನ ಸುದ್ದಿಯಗುತ್ತವೆ ಎಂದು ಬೇರೆ ಹೇಳಬೇಕಾಗಿಲ್ಲ. ಒಬ್ಬರು ಪ್ರಾತಿನಿಧ್ಯ ಸಿಗಲಿಲ್ಲ ಅಂತ ವಿರೋಧಿಸುತ್ತಾರೆ, ಇನ್ನೊಬ್ರು ಊಟ ಸಿಗಲಿಲ್ಲ ಅಂತ ವಿದೊಧಿಸುತ್ತಾರೆ, ಮತ್ತೊಂದಿಷ್ಟು ಜನ ಕಿಟ್ ಸಿಗಲಿಲ್ಲ ಅಂತ ವಿರೋಧಿಸುತ್ತಾರೆ! ಮಾರನೆಯ ದಿನದ ಪತ್ರಿಕೆಯಲ್ಲಿ ಇವೇ ಮುಖ್ಯ ಸುದ್ದಿ! ಸಾಹಿತ್ಯಿಕವಾಗಿ ಯಾರು ಏನು ಹೇಳಿದ್ರು ಅನ್ನುವದೆಲ್ಲ ಒಳ ಪುಟಗಳಲ್ಲಿ ಮಾತ್ರ. ಅಂಥದರಲ್ಲಿ ಕನಿಷ್ಠ ಶಿಸ್ತನ್ನು ಅಪೇಕ್ಷಿಸುವದು ತಪ್ಪೇ? ಅಂತ ಒಂದು ಸುನ್ಸ್ಕ್ರುತಿಯನ್ನು ನಿರ್ಮಿಸುವದು ಇಂದಿನ ಅಗತ್ಯವಲ್ಲವೇ??

    ಸಾಹಿತ್ಯ ಸಂಭ್ರಮದವರ ಕೆಲವೊಂದು ನಿಯಮಗಳು ಅತಿರೆಕವಗಿದ್ದವು ಹಾಗೂ ನಿಯಮಗಳನ್ನು ಜೈಪುರ್ ಲಿಟ್ ಫೆಸ್ಟ್ ನಿಂದ ಮಕ್ಕಿ ಕಾಕ್ಕಿ ಕಾಪಿ ಮಾಡುವ ಬದಲು ಅವನ್ನು ಒಳ್ಳೆಯ ನಾಗರೀಕ ಸೌಮ್ಯ ಭಾಷೆಯಲ್ಲಿ ಹೇಳಬಹುದಿತ್ತು. ಈ ಒಂದು ವಿಷಯದಲ್ಲಿ ವಿರೋಧವಿದೆ. ಆದರೆ ಪ್ರತಿನಿಧಿ ಶುಲ್ಕ ಬೇಡ, ಶಿಸ್ತು ಬೇಡ ಅಂದರೆ ಕೇವಲ ಸರ್ಕಾರಿ ಕೃಪಾಪೋಷಿತ ಜತ್ರೆಗಳನ್ನೇ ಮಾಡುತ್ತಾ, ರೊಟ್ಟಿ, ಹಿಂಡಿ, ಚಟ್ನಿಪುಡಿ ಸವಿಯುತ್ತ ಮೂರು ದಿನ ಮಜಾ ಉಡಾಯಿಸಿ ಪುಸ್ತಕಮಳಿಗೆ, ಗೊಷ್ಟಿಗಳಿಗಿಂತಾ ಬಟ್ಟೆಬರೆ, ಬಳೆ,ರಿಬ್ಬನ್ನು, ಕಬ್ಬಿನ ಹಾಲು, ಭಜಿ ಮಾರುವವರಿಗೆ ವ್ಯಾಪಾರ ಮಾಡಿ ಪಯ್ದ್ ಲೀವ್ ಗಾಗಿ ವೋಚರನ್ನು ಪಡಿಯುವದನ್ನು ಮರೆಯದೆ ಮನೆ ದಾರಿ ಹಿಡಿಯಬೇಕಾಗತ್ತೆ. ಹಾಗೂ ಇಷ್ಟೆಲ್ಲಾ ಮಾಡಿ ಆಮೇಲೆ ಸಮ್ಮೇಳನಗಳು ಹೇಗೆ ಗಂಭೀರ ಸಾಹಿತ್ಯ ಚರ್ಚೆಗೆ ವೇದಿಕೆಯಾಗದೆ ಜಾತ್ರೆ, ದುಂದು ವೆಚ್ಚಕ್ಕೆ ದಾರಿ ಆಯಿತು ಅಂತ ಪುಟಗಟ್ಟಲೆ ಪೋಸ್ಟ್ ಮಾರ್ಟ್ ಮ್ ಬರೆಯುವ ಅವಕಾಶವೂ ಇರತ್ತೆ.

    ನವೀನ ಎಚ್
    ಪುಣೆ

    Reply

Leave a Reply

Your email address will not be published. Required fields are marked *