Daily Archives: January 31, 2013

₹ 16 ಲಕ್ಷದಲ್ಲಿ ಚುನಾವಣೆಗೆ ಸ್ಪರ್ಧಿಸಬಹುದೇ?


– ರವಿ ಕೃಷ್ಣಾರೆಡ್ಡಿ


 

ಇಂದು ದೇಶದ ಬಹುತೇಕ ಕಡೆ ಚುನಾವಣೆಗಳನ್ನು ಹಣ ನಿರ್ಧರಿಸುತ್ತಿದೆ. ಜಾತಿಯೂ ನಿರ್ಧರಿಸುತ್ತದೆ. ಆದರೆ, ಈಗಲೂ ಬಹುತೇಕ ಕ್ಷೇತ್ರಗಳಲ್ಲಿ ಎಲ್ಲಾ ಪ್ರಮುಖ ಪಕ್ಷಗಳು ಗೆಲ್ಲಬಲ್ಲ, ಬಹುಸಂಖ್ಯಾತ ಜಾತಿಯ ಅಭ್ಯರ್ಥಿಗೇ ಟಿಕೆಟ್ ನೀಡುವುದರಿಂದ ಕೊನೆಗೂ ಮುಖ್ಯವಾಗುವುದು ಯಾರು ಹೆಚ್ಚು ಹಣ ಮತ್ತು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಹೆಚ್ಚು ಶಿಸ್ತುಬದ್ಧವಾಗಿ ವಿನಿಯೋಗಿಸುತ್ತಾರೆ ಎನ್ನುವುದು.

ಅಮೇರಿಕದಂತಹ ದೇಶಗಳಲ್ಲಿ ಚುನಾವಣಾ ವೆಚ್ಚದ ಮಿತಿಗಳಿಲ್ಲ. ಆಭ್ಯರ್ಥಿ ತನ್ನ ದುಡ್ಡನ್ನೇ ಬಳಸಬಹುದು ಅಥವ ಆತನಿಗೆ ಬಲವಿದ್ದಷ್ಟು ಹಣವನ್ನು ಜನರಿಂದ, ಸಂಘ-ಸಂಸ್ಥೆಗಳಿಂದ ಕೂಡಿಸಿ ಅಷ್ಟನ್ನೂ ಖರ್ಚು ಮಾಡಬಹುದು. ಅಲ್ಲಿ ಕೆಲವೊಂದು ನಿಬಂಧನೆಗಳಿವೆ, ಉದಾಹರಣೆಗೆ, ಒಬ್ಬ ಪ್ರಜೆ ಒಬ್ಬ ಆಭ್ಯರ್ಥಿಗೆ ಇಂತಿಷ್ಟು ಮೊತ್ತಕ್ಕಿಂತ ಹೆಚ್ಚಿಗೆ ನೀಡುವ ಹಾಗಿಲ್ಲ.

ನಮ್ಮ ದೇಶದಲ್ಲಿ ಆಯಾಯ ರಾಜ್ಯಗಳಿಗೆ ಸಂಬಂಧಿಸಿದಂತೆ ಅಭ್ಯ್ರರ್ಥಿಗಳಿಗೆ ಚುನಾವಣಾ ವೆಚ್ಚದ ಮಿತಿ ಇದೆ. ಪರಿಷ್ಕೃತ ಪಟ್ಟಿಯ ಪ್ರಕಾರ ರಾಜ್ಯದlincolnಲೋಕಸಭಾ ಅಭ್ಯರ್ಥಿ 40 ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುವ ಹಾಗೆ ಇಲ್ಲ. ವಿಧಾನಸಭಾ ಅಭ್ಯರ್ಥಿಯ ಮಿತಿ 16 ಲಕ್ಷ ರೂಗಳು. ಆದರೆ, ಪ್ರಮುಖ ಅಭ್ಯರ್ಥಿಗಳು ಖರ್ಚು ಮಾಡಲಿರುವ ಹಣ ಹತ್ತಾರು ಕೋಟಿಗಳನ್ನು ದಾಟಲಿದೆ. ಐದು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ರಾಜ್ಯದ ಹಲವಾರು ಕಡೆ ಅನೇಕ ಅಭ್ಯರ್ಥಿಗಳು ಸುಮಾರು ಐವತ್ತು ಕೋಟಿಗೂ ಹೆಚ್ಚು ಖರ್ಚು ಮಾಡಿದ್ದರು ಎಂಬ ಸುದ್ದಿಗಳಿದ್ದವು. ಆದರೆ ಅವರಲ್ಲಿ ಯಾರೊಬ್ಬರದೂ ತಮ್ಮ ವೆಚ್ಚದ ಮಿತಿಯನ್ನು ಚುನಾವಣಾ ಆಯೋಗಕ್ಕೆ ಕೊಟ್ಟಾಗ ಅದು ಹತ್ತು ಲಕ್ಷಕ್ಕೆ ಮೀರಿದ (ಆಗಿನ ಮಿತಿ) ಉದಾಹರಣೆಗಳಿಲ್ಲ. ಬರಲಿರುವ ಚುನಾವಣೆಯಲ್ಲಿ ನೂರು ಕೋಟಿಯ ತನಕ ಖರ್ಚು ಮಾಡುವ ಒಬ್ಬಿಬ್ಬರಾದರೂ ನಮ್ಮಲ್ಲಿದ್ದಾರೆ. ಅಂದಹಾಗೆ, ನನ್ನೂರಿನ ಗ್ರಾಮಪಂಚಾಯಿತಿಯ ಸದಸ್ಯನೊಬ್ಬ ಸುಮಾರು 75 ಲಕ್ಷ ರೂಪಾಯಿಗಳನ್ನು ಕೇವಲ ಸಾವಿರ ಚಿಲ್ಲರೆ ಓಟಿಗೆ (ಆದರಲ್ಲಿ ಆತ ಪಡೆದದ್ದು ಸುಮಾರು ಐದಾರು ನೂರು ಓಟು ಇರಬಹುದು) ಖರ್ಚು ಮಾಡಿ ಗೆದ್ದ ಎನ್ನುತ್ತಾರೆ ನನ್ನೂರಿನ ಜನ. ಇನ್ನು ಅದರ ನೂರಿನ್ನೂರು ಪಟ್ಟು ದೊಡ್ಡದಾದ ಅಸೆಂಬ್ಲಿ ಕ್ಷೇತ್ರಕ್ಕೆ ನೂರು ಕೋಟಿ ಹೆಚ್ಚೇನೂ ಅಲ್ಲ.

ಆದರೆ ಇದು, ನ್ಯಾಯ ಸಮ್ಮತವೇ? ಕಾನೂನು ಸಮ್ಮತವೇ? ಕಾನೂನು ಬರೆಯುವವರ ಮೊದಲ ಅರ್ಹತೆಯೇ ಕಾನೂನು ಮುರಿಯುವುದಾದರೆ–ಇಷ್ಟು ಸ್ವಚ್ಚಂದವಾಗಿ–ಈ ದೇಶದ ಪ್ರಜಾಪ್ರಭುತ್ವಕ್ಕೆ ಭವಿಷ್ಯವಿದೆಯೇ? ಇದೆಲ್ಲ ಗೊತ್ತಿರುವ ಜನ ಸುಮ್ಮನಿರುವುದಾದರೆ, ಅವರ ಆತ್ಮಸಾಕ್ಷಿ ಬದುಕಿದೆಯೇ?

ಇನ್ನು, ಕೇವಲ 16 ಲಕ್ಷಗಳಲ್ಲಿ ಚುನಾವಣಾ ಖರ್ಚು ನಿಭಾಯಿಸುವುದು ಸಾಧ್ಯವೇ?

ಬೇರೆಯೆಲ್ಲ ವಿಚಾರಗಳನ್ನು ಬದಿಗಿಟ್ಟು, ಕೇವಲ ಮೇಲಿನ ಈ ಒಂದು ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸುತ್ತೇನೆ. ಒಂದೇ ಪದದ ಉತ್ತರ, ಹೌದು? ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಕೇವಲ ಹದಿನಾರು ಲಕ್ಷ ರೂಪಾಯಿಗಳಿಗೆ ನೀವು ಒಂದು ಉತ್ತಮ ಚುನಾವಣಾ ಪ್ರಚಾರ ಮಾಡಬಹುದು.

ಹೇಗೆ?

ಮೊದಲಿಗೆ, ಯಾರೊಬ್ಬರಿಗೂ ಓಟಿಗಾಗಿ ದುಡ್ಡು ಕೊಡುವುದಿಲ್ಲ, ಹೆಂಡ ಕುಡಿಸುವುದಿಲ್ಲ, ಬಾಡೂಟ-ಮೃಷ್ಟಾನ್ನ ಭೋಜನಗಳ ಪಾರ್ಟಿ ಇಲ್ಲ, ಮತದಾರರಿಗೆ ಇನ್ಯಾವುದೇ ತರಹದ ಸೀರೆ-ರವಿಕೆ-ಉಂಗುರ-ವಾಚು-ಅಕ್ಕಿ-ಬೇಳೆಗಳ ಚುನಾವಣಾ ಹಿಂದಿನ ದಿನದ ಕಾಣಿಕೆಗಳಿಲ್ಲ. ಈ ಷರತ್ತುಗಳ ಮೇಲೆ ಪ್ರಚಾರ ಮಾಡಿದ್ದೇ ಆದರೆ, ಆ ಹದಿನಾರು ಲಕ್ಷ ರೂಪಾಯಿಗಳಲ್ಲಿ ಒಂದಷ್ಟು ಉಳಿಯಲೂ ಬಹುದು.

ಒಂದು ವಿಧಾನಸಭಾ ಕ್ಷೇತ್ರದಲ್ಲಿ ಸರಾಸರಿ ಎರಡು ಲಕ್ಷ ಮತದಾರರಿದ್ದಾರೆ. ಒಂದು ಮನೆಯಲ್ಲಿ ಸರಾಸರಿ ಎರಡೂವರೆ ಓಟಿದೆ ಎಂದುಕೊಂಡರೆ, gandhi1ಸುಮಾರು 80000 ಮನೆಗಳಿರುತ್ತವೆ. ಈ ಲೆಕ್ಕಾಚಾರದ ಹಿನ್ನೆಲೆಯಲ್ಲಿ ನೀವು ಸುಮಾರು 4 ಲಕ್ಷ ರೂಪಾಯಿಗಳಿಗೆ A-4 ಸೈಜಿನ, ಎರಡೂ ಬದಿಯ ಕಲರ್ ಪ್ರಿಂಟ್ ಇರುವ 8 ಲಕ್ಷ ಕರಪತ್ರಗಳನ್ನು ಮುದ್ರಿಸಬಹುದು. ಅಂದರೆ, ಸರಾಸರಿ ಒಂದು ಮನೆಗೆ ಹತ್ತು ಸಲ ಹಂಚಬಹುದಾದಷ್ಟು. ಇನ್ನು ಚುನಾವಣೆಗೆ ಒಂದು ತಿಂಗಳ ಕಾಲ ಸುಮಾರು ಮುವ್ವತ್ತು ಕಾರ್ಯಕರ್ತರನ್ನು ಸರಾಸರಿ ಹತ್ತರಿಂದ-ಹದಿನೈದು ಸಾವಿರ ರೂಗಳ ಸಂಬಳಕ್ಕೆ ತೆಗೆದುಕೊಂಡರೆ, ಅದು ಸುಮಾರು 4 ಲಕ್ಷಗಳ ಖರ್ಚಿನದು. ಈ ಕಾರ್ಯಕರ್ತರ ಓಡಾಟಕ್ಕೆ, ಬಸ್ ಚಾರ್ಜಿಗೆ, ಗಾಡಿಗಳಿಗೆ, ಡೀಸೆಲ್‌ಗೆ, ಮತ್ತು ಊಟತಿಂಡಿಗೆ ಸುಮಾರು 2.5 ಲಕ್ಷ ರೂಪಾಯಿ (ಸುಮಾರು ನಲವತ್ತು ಜನರಿಗೆ ದಿನಕ್ಕೆ ಸರಾಸರಿ 200 ರೂಗಳು, ಸಂಬಳದ ಹೊರತಾಗಿ). ಸುಮಾರು ಒಂದು ಲಕ್ಷ ರೂಪಾಯಿಗೆ ಎರಡು ಜೀಪ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಅದಕ್ಕೆ ಮೈಕ್ ಅದು ಇದೂ ಎಂತಾದರೆ ಅದಕ್ಕೆ 1 ಲಕ್ಷ. ಇಡೀ ಕ್ಷೇತ್ರಕ್ಕೆ ಸುಮಾರು ಎರಡು ನೂರು ಬ್ಯಾನರ್‌ಗಳಿಗೆ ಐವತ್ತು ಸಾವಿರ. ಈ ಲೆಕ್ಕದಲ್ಲಿ ನೀವು ಒಂದು ತಿಂಗಳ ಕಾಲ ಸುಮಾರು ಮುವ್ವತ್ತು-ನಲವತ್ತು ಜನ ಕಾರ್ಯಕರ್ತರನ್ನಿಟ್ಟುಕೊಂಡು ಇಡೀ ಕ್ಷೇತ್ರದ ತುಂಬ ಪ್ರಚಾರ ಮಾಡಬಹುದು. ಸುಮಾರು 12 ಲಕ್ಷ ರೂಗಳಲ್ಲಿ.

ಅಭ್ಯರ್ಥಿ ಮಾತ್ರ ಪ್ರತಿದಿನ ಬೆಳಗ್ಗೆ ಆರರಿಂದ ರಾತ್ರಿ ಹತ್ತರ ತನಕ ತಿಂಗಳು ಪೂರ್ತಿ ಪ್ರಚಾರದಲ್ಲಿ ತೊಡಗಬೇಕಾಗುತ್ತದೆ. ಒಂದಿಬ್ಬರು ಉತ್ತಮ ಸಹಾಯಕರನ್ನಿಟ್ಟುಕೊಳ್ಳಬೇಕಾಗುತ್ತದೆ. ಇನ್ನು ಸಂಬಳ ತೆಗೆದುಕೊಳ್ಳದೇ ಪ್ರಚಾರಕ್ಕೆ ಬರಬಲ್ಲ ಸ್ನೇಹಿತರ, ಸಮಾನಮನಸ್ಕರ, ಹಿತೈಷಿಗಳ, ನೆಂಟರ ಪಡೆ ಜೊತೆಯಾದರಂತೂ ಮೂರ್ನಾಲ್ಕು ಲಕ್ಷಗಳ ಉಳಿತಾಯವೇ ಆಗುತ್ತದೆ ಮತ್ತು ಪ್ರಚಾರಕ್ಕೆ ಬಲವೂ ಸಿಗುತ್ತದೆ.

ಇನ್ನು ಚುನಾವಣೆಯ ದಿನ: ಒಂದು ಕ್ಷೇತ್ರದಲ್ಲಿ ಸರಾಸರಿ ಎರಡುನೂರು ಬೂತ್‌ಗಳಿರುತ್ತವೆ. ನಿಮಗೆ ಆ ದಿನ ಕನಿಷ್ಟ ಐದುನೂರರಿಂದ ಸಾವಿರ ಕಾರ್ಯಕರ್ತರು ಬೇಕು. ಒಂದು ಬೂತ್‌ಗೆ ಎರಡು ಸಾವಿರ ಖರ್ಚು ಇಟ್ಟುಕೊಂಡರೆ 4 ಲಕ್ಷ ರೂಪಾಯಿ ಖರ್ಚಾಗುತ್ತದೆ. ಇದೇ ಸ್ವಲ್ಪ ಕಷ್ಟದ ಕೆಲಸ. ನಿಮ್ಮ ಒಂದು ತಿಂಗಳ ಪರಿಶ್ರಮ ಎದ್ದು ಕಾಣಿಸುವುದು ಮತ್ತು ನಿರ್ಣಾಯಕವಾಗುವುದು ಅಂದೇ.

ಹೀಗೆ 16 ಲಕ್ಷ ರೂಗಳಲ್ಲಿ ಒಬ್ಬ ಅಭ್ಯರ್ಥಿ, ತಾನು ಯಾರು, ತನ್ನ ಪಕ್ಷ ಯಾವುದು, ತಾನು ಮಾಡಲಿರುವುದೇನು, ಅವರು ಯಾತಕ್ಕಾಗಿ ಆತನಿಗೆ ಮತ ಕೊಡಬೇಕು, ಇತ್ಯಾದಿಗಳ ಬಗ್ಗೆ ಕ್ಷೇತ್ರದ ಬಹುತೇಕ ಮತದಾರರಿಗೆ ಖಂಡಿತವಾಗಿ ತಿಳಿಸಬಹುದು. ಅಲ್ಲಿಗೆ ಆತನ ಕರ್ತವ್ಯ ಮುಗಿಯುತ್ತದೆ.

ಇನ್ನು, ಓಟು ಹಾಕುವುದು ಬಿಡುವುದು ಜನರಿಗೆ ಬಿಟ್ಟ ವಿಚಾರ. ಅಭ್ಯರ್ಥಿ ತಾನು ನೈತಿಕವಾಗಿ ಮತ್ತು ಕಾನೂನಿನ ಮಿತಿಯಲ್ಲಿ ಮಾತ್ರ ತನ್ನ ಕೆಲಸ ಮಾಡಬಲ್ಲ. ಜನರ ತೀರ್ಮಾನ ಅವರದು. ಅದು ಎಲ್ಲಾ ಸಮಯದಲ್ಲೂ ಜವಾಬ್ದಾರಿಯುತವಾಗಿರುತ್ತದೆ ಅಂತೇನಿಲ್ಲ. ನಮ್ಮ ಪ್ರಯತ್ನ ಮಾಡಲೇಬೇಕಾಗಿದ್ದದ್ದು ಮತ್ತು ಮೌಲ್ಯಯುತವಾದದ್ದು ಎಂದು ಅಭ್ಯರ್ಥಿಯ ಆತ್ಮಸಾಕ್ಷಿಗೆ ಅನ್ನಿಸುವುದೇ ಎಲ್ಲಕ್ಕಿಂತ ದೊಡ್ಡದು.

ಹಾಗೆಯೇ, ಈ ಹದಿನಾರು ಲಕ್ಷ ಹೊಂದಿಸುವುದು ಹೇಗೆ? ಅಭ್ಯರ್ಥಿಯಾದಾತ ತನ್ನ ದುಡ್ಡಿಗಿಂತ ತನ್ನ ಕ್ಷೇತ್ರದ ಪ್ರಜ್ಞಾವಂತ ಮತದಾರರಿಂದಲೇ ಇದನ್ನು ಶೇಖರಿಸುವುದು ನ್ಯಾಯವಾದುದು ಮತ್ತು ಜವಾಬ್ದಾರಿಯುತವಾದುದು. ಅಷ್ಟಕ್ಕೂ ತಮಗೆ ಬೇಕಾದ, ಅರ್ಹನಾದ, ಯೋಗ್ಯನಾದ, ಪ್ರತಿನಿಧಿಯನ್ನು ಆರಿಸಿಕೊಳ್ಳುವುದು ಜನರ ಜವಾಬ್ದಾರಿ. ಅದಕ್ಕೆ ಬೇಕಾದ ಖರ್ಚುಗಳನ್ನು ಭರಿಸುವುದೂ ಆ ಜವಾಬ್ದಾರಿಯ ಭಾಗ. ಆದರೆ, ಅದು ವಾಸ್ತವವೇ? ಅದು ಬೇರೆ ವಿಷಯ ಮತ್ತು ಅದರಲ್ಲಿ ಹೆಚ್ಚಿನ ಭಾಗ ಅಭ್ಯರ್ಥಿಯ ಮೇಲೆ ಅವಲಂಬಿತವಾಗಿರುತ್ತದೆ. ಪ್ರಜಾಪ್ರಭುತ್ವ ಹೇಗಿರಬೇಕು ಮತ್ತು ನಾವು ಏನು ಮಾಡಬೇಕು ಎನ್ನುವುದು ಪ್ರಜ್ಞಾವಂತರ ಜವಾಬ್ದಾರಿ. ಚುನಾವಣಾ ಸೋಲು-ಗೆಲುವು ನಂತರದ್ದು. ಇಂತಹ ಸಮುದ್ರ ಮಂಥನದಿಂದ ಇನ್ನೊಬ್ಬರ ದುಷ್ಟತನ ಕಡಿಮೆಯಾಗಿ, ಎಲ್ಲರಿಗಿಂತಲೂ ಯೋಗ್ಯನಾದ ಅಭ್ಯರ್ಥಿ ಆರಿಸಿಬಂದರೆ, ಅದೇ ಇಂತಹ ಪ್ರಯತ್ನಗಳ ಯಶಸ್ಸು ಮತ್ತು ಪ್ರಜಾಪ್ರಭುತ್ವದ ಸೊಗಸು.

ರಾಜ್ಯದಾದ್ಯಂತ ಈಗಿನ ಕೊಳಕು ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ, ತಮ್ಮ ಪಾತ್ರವೇನು ಮತ್ತು ತಾವು ಏನು ಮಾಡಬೇಕು-ಮಾಡಬಹುದುgandhi2ಎಂದುಕೊಳ್ಳುತ್ತಿರುವ ಪ್ರಜ್ಞಾವಂತರಿಗೆ, ಹೀಗೂ ಒಂದು ಪ್ರಯತ್ನ ಮಾಡಬಹುದು ಎಂದು ಇಷ್ಟನ್ನು ಬರೆದಿದ್ದೇನೆ. ಒಳ್ಳೆಯ ರಾಜಕೀಯ ಪಕ್ಷದಲ್ಲಿ ಅವಕಾಶ ಸಿಕ್ಕರೆ, ಪ್ರಯತ್ನಿಸಿ. ಇಲ್ಲವಾದರೆ, ಪಕ್ಷೇತರರಾಗಿಯಾದರೂ ನಿಂತು ಇಂದಿನ ಭ್ರಷ್ಟ ವ್ಯವಸ್ಥೆಯನ್ನು ವಿರೋಧಿಸಿ. ಹಾಗೆ ಮಾಡಲು ನೀವು ಹಾಕಿಕೊಳ್ಳಬೇಕಾದ ಒಂದೇ ಗಂಭೀರ ಪ್ರಶ್ನೆ, “ನನ್ನ ಕ್ಷೇತ್ರದ ಇತರೆ ಅಭ್ಯರ್ಥಿಗಳಿಗಿಂತ ಪ್ರಾಮಾಣಿಕತೆಯಲ್ಲಿ, ಕೆಲಸದಲ್ಲಿ, ಕಾಳಜಿಯಲ್ಲಿ, ಅಧ್ಯಯನದಲ್ಲಿ, ನಾನು ಉತ್ತಮನೋ ಅಲ್ಲವೋ?” ಎಂಬುದಷ್ಟೇ.

ನೀವು ನಿಲ್ಲದೇ ಇದ್ದರೂ, ಅಂತಹ ಒಬ್ಬ ವ್ಯಕ್ತಿಗೆ ಬೆಂಬಲಿಸುವ ಮೂಲಕ ನಿಮ್ಮ ರಾಜಕೀಯ ಸಕ್ರಿಯತೆಯನ್ನು ತೋರಿಸಬಹುದು ಮತ್ತು ಆ ಮೂಲಕ ನಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬಹುದು.

ಗಾಂಧಿ, ನೆಹರೂ, ಪಟೇಲ್, ಜೇಪಿ, ಗೋಪಾಲಗೌಡ, ಲಿಂಕನ್, ಮಂಡೇಲಾ, ಒಬಾಮ, ಇವರೆಲ್ಲ ಆರಿಸಿಕೊಂಡ, ದುಡಿದ ಈ ರಾಜಕೀಯ ಕ್ಷೇತ್ರ ಹೊಲಸಲ್ಲ. ನಾವು ಹಾಗಾಗಲು ಬಿಟ್ಟಿದ್ದೇವೆ; ನಮ್ಮ ನಿಷ್ಕ್ರಿಯೆ, ಆಲಸ್ಯ, ಕೃತಘ್ನತೆಯಿಂದ. ಪ್ರಜಾಪ್ರಭುತ್ವದಲ್ಲಿ ರಾಜಕಾರಣ ಇತರೆ ಎಲ್ಲಾ ಕ್ಷೇತ್ರಗಳಿಗಿಂತ ಪವಿತ್ರವಾದದ್ದು, ಆದರ್ಶನೀಯವಾದದ್ದು. ಹಾಗೆಯೇ ಕಠಿಣವಾದದ್ದು. ಅದನ್ನು ಎದುರಿಸಬಲ್ಲ ಛಲ ಮತ್ತು ನ್ಯಾಯನಿಷ್ಟೆ ನಿಮಗಿದ್ದರೆ ನಮ್ಮ ಮತ್ತು ನಮ್ಮ ಮುಂದಿನ ತಲೆಮಾರುಗಳ ಜೀವನ ಈಗಿನದಕ್ಕಿಂತ ಸಹನೀಯವೂ, ಶ್ರೀಮಂತವೂ, ಅರ್ಥಪೂರ್ಣವೂ ಆಗಿರುತ್ತದೆ. ಹಾಗೆ ಮಾಡುವುದು ಮತ್ತು ಇರುವುದು ನಮ್ಮೆಲ್ಲರ ಜವಾಬ್ದಾರಿಯೂ ಅಲ್ಲವೇ?

ಒಬ್ಬ ವ್ಯಕ್ತಿಗೆ ಜೀವಮಾನದಲ್ಲಿ ಕೆಲವೇ ಸಂದರ್ಭಗಳಲ್ಲಿ ಎದುರಾಗುವ ಇಂತಹ ಒಂದು ಸವಾಲಿಗೆ ನಮ್ಮ ಸಮಾಜದಲ್ಲಿ ಎಷ್ಟು ಜನ ಉತ್ತರಿಸಬಹುದು?

ಲಿಂಗಪ್ರಮಾಣ ಹಾಗೂ ಅತ್ಯಾಚಾರದ ಹಾವಳಿ…

– ಡಾ.ಎಸ್.ಬಿ.ಜೋಗುರ

ದೆಹಲಿ ಮಾತ್ರವಲ್ಲ ದೇಶದ ಯಾವ ನಗರಗಳೂ… ಹಳ್ಳಿಗಳೂ ಬರುವ ದಿನಗಳಲ್ಲಿ ಮಹಿಳೆಯರ ಪಾಲಿಗೆ ಸೇಫ಼್ ಆಗಿ ಉಳಿದಿಲ್ಲ ಎನ್ನುವುದಕ್ಕೆ ಈಗ ಅಲ್ಲಲ್ಲಿ ಮತ್ತೆ ಮತ್ತೆ ಮರುಕಳುಹಿಸುತ್ತಿರುವ ಅತ್ಯಾಚಾರ ಪ್ರಕರಣಗಳೇ ಸಾಕ್ಷಿ. ರಾಜ್ಯದ ರಾಜಧಾನಿಯಿಂದ ಹಿಡಿದು ತುತ್ತತುದಿಯ ಬೀದರ, ಗುಲಬರ್ಗಾ ಜಿಲ್ಲೆಯವರೆಗೂ ಅತ್ಯಾಚಾರಗಳದ್ದೇ ಹಾವಳಿ.

ಒಂದೆಡೆ ಹರಿಯಾಣಾ, ದೆಹಲಿಯಂಥಾ ರಾಜ್ಯಗಳಲ್ಲಿ ಲಿಂಗ ಪ್ರಮಾಣ ತೀವ್ರವಾಗಿ ಅಸಮತೋಲನದ ಸ್ಥಿತಿಯನ್ನು ತಲುಪಿರುವದಿದೆ. ಕೊಂಡು ತಂದ ಹೆಂಡತಿಯರ ಕತೆಗಳು ಮಾಮೂಲಾಗುತ್ತಿವೆ. ಹಾಗೆಯೇ ದೇಶವ್ಯಾಪಿಯಾಗಿ ಹೆಣ್ಣು ಸಂತಾನದ ಬರವಿರುವ ಹಾಗೆ ವಿವಾಹಕ್ಕೆ ಆಯಾ ಜಾತಿಗಳಲ್ಲಿ ಸಾಕಷ್ಟು ಕನ್ಯೆಯರ ಕೊರತೆಯಿರುವ ನಡುವೆ, ಆಯಾ ಜಾತಿಯ ಉಪಜಾತಿಗಳಲ್ಲಿ ಹಿಂದೆಂದೂ ನಡೆಯದಷ್ಟು ಮದುವೆಗಳು ಈಗೀಗ ನಡೆಯುತ್ತಿವೆ. sex ratioಅದಕ್ಕೆ ಕಾರಣ ಮಹಿಳೆಯರ ಲಿಂಗ ಪ್ರಮಾಣದಲ್ಲಿ ಇಳಿಮುಖತೆ ಆಗಿರುವುದೇ ಆಗಿದೆ. 2011 ರ ಅಂಕಿಅಂಶಗಳ ಪ್ರಕಾರ ನಮ್ಮ ದೇಶದ ಅನೇಕ ಕಡೆಗಳಲ್ಲಿ 1000 ಪುರುಷರಿಗೆ 900 ಕ್ಕಿಂತಲೂ ಕಡಿಮೆ ಸ್ತ್ರೀಯರಿರುವ ರಾಜ್ಯಗಳ ಸಂಖ್ಯೆಯೇ ಸುಮಾರು 9 ರಷ್ಟಿದೆ. ಈಗ ಅತ್ಯಾಚಾರದಿಂದಲೇ ಸುದ್ದಿಯಾಗುತ್ತಿರುವ ದೆಹಲಿಯಲ್ಲಿ 1000 ಪುರುಷರಿಗೆ 866 ರಷ್ಟು ಮಹಿಳೆಯರಿದ್ದಾರೆ. ಹರಿಯಾಣಾದಲ್ಲಿ 877, ಪಂಜಾಬದಲ್ಲಿ 893, ಜಮ್ಮು-ಕಾಶ್ಮೀರದಲ್ಲಿ 883, ಸಿಕ್ಕಿಮ್‌ನಲ್ಲಿ 889, ಯುನಿಯನ್ ಟೆರಿಟರಿಗಳಾದ ಅಂದಮಾನ್ ಮತ್ತು ನಿಕೋಬಾರ್, ಚಂಡಿಗಡ್, ದಾದ್ರ ಮತ್ತು ನಾಗರ ಹವೇಲಿ ದಮನ್ ಮತ್ತು ದ್ಯು ಇಲ್ಲೆಲ್ಲಾ ಮಹಿಳೆಯರ ಲಿಂಗಪ್ರಮಾಣದಲ್ಲಿ ಸಮರೂಪವಿಲ್ಲ. ದಮನ್ ಮತ್ತು ದ್ಯು ನಲ್ಲಂತೂ 1000 ಪುರುಷರಿಗೆ ಬರೀ 618 ರಷ್ಟು ಮಹಿಳೆಯರಿದ್ದಾರೆ. ಕರ್ನಾಟಕ ರಾಜ್ಯವನ್ನು ಗಣನೆಗೆ ತೆಗೆದುಕೊಂಡಾಗ ಇಲ್ಲಿಯ ಲಿಂಗ ಪ್ರಮಾಣ 968 ರಷ್ಟಿದೆ. ಹೀಗಿರುವಾಗಲೂ ನಮ್ಮಲ್ಲಿಯೂ ಅತ್ಯಾಚಾರದ ಪ್ರಕರಣಗಳು ಕಡಿಮೆಯಿಲ್ಲ.

ದೆಹಲಿಯ ಅತ್ಯಾಚಾರ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿತ್ತು. ಅತ್ಯಂತ ಅಮಾನವೀಯವಾಗಿ, ತುಚ್ಚವಾಗಿ ನಡೆದ ಈ ಕೃತ್ಯ 23 ವರ್ಷದ ಯುವತಿಯನ್ನು ನುಂಗಿಹಾಕಿತು. ಕೊನೆಗೂ ಆ ಪಾತಕಿಗಳು ಅವಳನ್ನು ಕೊಂದರು. ದೆಹಲಿಯ ಜನತೆ ರೊಚ್ಚಿಗೆದ್ದು, ಪಾರ್ಲಿಮೆಂಟಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಪ್ರಯತ್ನಿಸಿದ್ದರೊಂದ ಪ್ರಯೋಜನಗಳಾಗಿವೆಯೆಂದು ಅನಿಸದಿದ್ದರೂ ಈ ಬಗೆಯ ಬೃಹತ್ ಪ್ರತಿಭಟನೆ ಈ ವರೆಗೂ ಅತ್ಯಾಚಾರವನ್ನು ವಿರೋಧಿಸಿ ಈ ದೇಶದಲ್ಲಿ ನಡೆದಿರುವದಿಲ್ಲ. ಹಾಗೆ ನಡೆದಿದ್ದರೂ ಇಡೀ ದೇಶದ ಗಮನವನ್ನು ತನ್ನೆಡೆಗೆ ಸೆಳೆವ ನಿಟ್ಟಿನಲ್ಲಿ ಇರಲಿಲ್ಲ. ದೆಹಲಿ ಅತ್ಯಾಚಾರದ ಘಟನೆ ಹಾಗಾಗಲಿಲ್ಲ. ಇನ್ನೇನು ಜನ ಮರೆತುಬಿಡುತ್ತಾರೆ ಎಂದವರಿಗೆ ಶಾಕ್ ಕಾದಿತ್ತು. ಜನ ಬೀದಿಗಿಳಿದರು, ಪೋಲಿಸರ ದಬ್ಬಾಳಿಕೆಗೂ ಜಗ್ಗಲಿಲ್ಲ. ಈ ದೇಶದ ಎಲ್ಲ ಬಗೆಯ ಅನಿಷ್ಟಗಳನ್ನು ಇದೇ ರೀತಿಯಲ್ಲಿ ಜನ ಬೀದಿಗಿಳಿದು ಪ್ರತಿಭಟಿಸುವ ಸಂಸ್ಕೃತಿಯೊಂದು ಸಿದ್ಧ ಮಾದರಿಯಾಗಿ ರೂಪಗೊಳ್ಳದ ಹೊರತು ಜನರ ಸ್ಮರಣೆ ತಾತ್ಕಾಲಿಕ ಎಂದು ಸವಾರಿ ಮಾಡುವ ಪ್ರಭುತ್ವಕ್ಕೆ ಬುದ್ಧಿ ಬರದು.

ದೆಹಲಿಯ ಚಲಿಸುವ ಬಸ್ಸಿನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಹೀಗೆನ್ನುವಾಗಲೇ ಆ ಸೈತಾನರು ಆಕೆಯ ಮೇಲೆ ಮಾಡಿರಬಹುದಾದ ಹಲ್ಲೆಯ ಭೀಕರತೆಯನ್ನು ನಾವು ಊಹಿಸಬಹುದಾಗಿದೆ. ಬರುವ ಫ಼ೆಬ್ರುವರಿ ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಆ ಯುವತಿ ಚಿತೆಯನ್ನು ಏರಬೇಕಾಯಿತು. ಈ ಬಗೆಯ ಪೈಶಾಚಿಕ ಕೃತ್ಯಗಳು ಈಗೀಗ ಮತ್ತೆ ಮತ್ತೆ ದೇಶದ ಇತರೆಡೆಗಳಲ್ಲಿಯೂ ನಿರಂತರವಾಗಿ ನಡೆಯುತ್ತಿವೆ. rape-illustrationದೆಹಲಿಯ ಪ್ರಕರಣ ನಡೆದು ಇನ್ನೂ ತಿಂಗಳೂ ಕಳೆದಿಲ್ಲ, ಅದಾಗಲೇ ನಮ್ಮ ರಾಜ್ಯದಲ್ಲಿ ಹತ್ತಾರು ಈ ಬಗೆಯ ಅತ್ಯಾಚಾರದ ಪ್ರಕರಣಗಳು ನಡೆಯುತ್ತಲೇ ಇವೆ. ಅವು ತೀರಾ ಸಹಜ ಎನ್ನುವ ಹಾಗೆ ಘಟಿಸಿ, ಮರೆಯಾಗುತ್ತಿವೆ. ಈಚೆಗಷ್ಟೇ ಪ್ರವಾಸಕ್ಕೆ ತೆರಳುತ್ತಿದ್ದ ಬಾಲಕಿಗೆ ಡ್ರಾಪ್ ಕೊಡುವದಾಗಿ ಹೇಳಿ ಬೈಕ್ ಮೇಲೆ ಕರೆದೊಯ್ದು ಅತ್ಯಾಚಾರ ನಡೆಸಿದ ಬಗ್ಗೆ ಹಾಸನ ಜಿಲ್ಲೆಯ ಗೊರೂರು ತಾಲೂಕಿನಲ್ಲಿ ವರದಿಯಾಗಿದೆ. ಈ ಅತ್ಯಾಚಾರ ಎನ್ನುವದು ಒಂಥರಾ ಸಮೂಹ ಸನ್ನಿಯಾಗಿ ಪರಿವರ್ತನೆ ಹೊಂದುತ್ತಿದೆಯೇನೋ..? ಎನ್ನುವಷ್ಟು ತೀವ್ರವಾಗಿ ಜರುಗುತ್ತಿವೆ.

ಹೀಗೇ ಆದರೆ ಮುಂಬರುವ ದಿನಗಳಲ್ಲಿ ಮಹಿಳೆಯರ ಲಿಂಗ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ. ಇಲ್ಲಿಯವರೆಗೆ ಪಾಲಕರು ವರದಕ್ಷಿಣೆಗೆ ಹೆದರಿ ಹೆಣ್ಣು ಸಂತಾನವನ್ನು ತಿರಸ್ಕರಿಸುತ್ತಿದ್ದರೆ, ಈಗ ಈ ಅತ್ಯಾಚಾರದ ಸುಳಿಯಿಂದ ಅವರನ್ನು ಕಾಯುವದೇ ಹರಸಾಹಸ ಎಂದು ಬಗೆದು ಹೆಣ್ಣು ಸಂತಾನವನ್ನು ನಿರ್ಲಕ್ಷಿಸಬಹುದಾದ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ಇಡೀ ಸಮಾಜದ ಮನ:ಸ್ಥಿತಿಯೇ ಇಂದು ನೆಟ್ಟಗಿಲ್ಲ. ಹಾಗಾಗಿಯೇ ಪ್ರತಿನಿತ್ಯ ಬರೀ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ, ಆತ್ಮಹತ್ಯೆ ಇಂಥವುಗಳೇ ಹೆಚ್ಚೆಚ್ಚು ವಿಜೃಂಭಿಸುತ್ತಿವೆ. ಪ್ರಭುತ್ವಗಳು ದುರ್ಬಲ ಮತ್ತು ಅಸಹಾಯಕರ ಬೆನ್ನಿಗೆ ನಿಂತದ್ದು ಚರಿತ್ರೆಯೊಳಗೂ ನಮಗೆ ಕಾಣಸಿಗುವದಿಲ್ಲ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು, ನಮ್ಮ ಮಕ್ಕಳನ್ನು ನಾವೇ ಕಾಯಬೇಕು.

ಮೂಲದಿಂದಲೂ ಲಿಂಗ ತರತಮ ನೀತಿಯನ್ನು ಒಪ್ಪಿಕೊಂಡು, ಅನುಸರಿಸಿಕೊಂಡು ಬಂದ ನಮ್ಮ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯ ಮೇಲಾಗುವ ಎಲ್ಲ ಬಗೆಯ ದೌರ್ಜನ್ಯಗಳು ಸಹ್ಯ ಎನ್ನುವ ಮನೋಭಾವದ ಎದುರು ಈ ಬಗೆಯ ಅತ್ಯಾಚಾರಗಳು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ಬಗೆಯ ಗಮನ ಸೆಳೆಯುತ್ತದೆ ಎನ್ನುವದೇ ಒಂದು ದೊಡ್ದ ಜಿಜ್ಞಾಸೆ. ಫ಼ೆಮಿನಿಜಂ ನೆಲೆಯಲ್ಲಿ ನಿಂತು ಮಾತನಾಡುವವರಿಗೆ ಪುರುಷ ಪದವನ್ನೂ ಸಹಿಸಲಾಗುವದಿಲ್ಲ. sex-ratioಹೀಗಿರುವ ನಡುವೆ ಮಹಿಳಾ ಸಬಲೀಕರಣದ ಮಾತು ಒಂದು ಸೈದ್ಧಾಂತಿಕ ಹೇಳಿಕೆಯಾಗಿ ಉಳಿಯಬಲ್ಲುದಷ್ಟೆ. ಗಂಡು-ಹೆಣ್ಣು ಇಬ್ಬರ ಸಹಭಾಗಿತ್ವದ ಹೋರಾಟದಲ್ಲಿರುವ ಶಕ್ತಿಗೆ ಮಾತ್ರ ಸಂಚಲನವನ್ನುಂಟು ಮಾಡಬಹುದಾದ ಗುಣಗಳಿವೆ. ಆ ದಿಸೆಯಲ್ಲಿಯೇ ಮಹಿಳೆಯ ಮೇಲಾಗುವ ದೌರ್ಜನ್ಯಗಳನ್ನು ವಿರೋಧಿಸಬೇಕಿದೆ.

ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಹೀಗೆ ನಡೆಯಬಹುದಾದ ದೌರ್ಜನ್ಯಗಳು ಸಾಂಸ್ಕೃತಿಕ ಯಜಮಾನಿಕೆಯ ಡೌಲಿನೊಂದಿಗೆ ನಡೆಯುತ್ತವೆ. ಏನೇ ಮಾಡಿದರೂ ಮೇಲ್ಮುಖಮಾಡಿ ನಡೆಯುವದೇ ತಮ್ಮ ಜಾತಿಯ ಗುಣ ಎಂದು ಪ್ರತಿಪಾದನೆ ಮಾಡುವವರನ್ನು ಅಲ್ಲಿ ಸಹಿಸಿಕೊಳ್ಳುವವರೂ ಇದ್ದಾರೆ. ಹೀಗಿರುವ ನಡುವೆ ದಮನಿತರ ಮೇಲೆ ನಡೆಯುವ ಈ ಲೈಂಗಿಕ ಅತ್ಯಾಚಾರಗಳು ಎಷ್ಟರ ಮಟ್ಟಿನ ನ್ಯಾಯವನ್ನು ಗ್ರಾಮೀಣ ಭಾಗಗಳಲ್ಲಿ ಒದಗಿಸಬಹುದು ಎನ್ನುವದೇ ಒಂದು ದೊಡ್ಡ ಪ್ರಶ್ನೆ.

ಹೀಗೆ ನಿರಂತರವಾಗಿ ಅತ್ಯಾಚಾರದ ಪ್ರಕರಣಗಳು ಘಟಿಸುತ್ತಾ ನಡೆದರೆ, ಅದು ಖಂಡಿತವಾಗಿ ಲಿಂಗ ಪ್ರಮಾಣದ ಅಂತರವನ್ನು ಇನ್ನಷ್ಟು ಹೆಚ್ಚಿಸುವದರಲ್ಲಿ ಸಂಶಯವೇ ಬೇಡ.