ಲಿಂಗಪ್ರಮಾಣ ಹಾಗೂ ಅತ್ಯಾಚಾರದ ಹಾವಳಿ…

– ಡಾ.ಎಸ್.ಬಿ.ಜೋಗುರ

ದೆಹಲಿ ಮಾತ್ರವಲ್ಲ ದೇಶದ ಯಾವ ನಗರಗಳೂ… ಹಳ್ಳಿಗಳೂ ಬರುವ ದಿನಗಳಲ್ಲಿ ಮಹಿಳೆಯರ ಪಾಲಿಗೆ ಸೇಫ಼್ ಆಗಿ ಉಳಿದಿಲ್ಲ ಎನ್ನುವುದಕ್ಕೆ ಈಗ ಅಲ್ಲಲ್ಲಿ ಮತ್ತೆ ಮತ್ತೆ ಮರುಕಳುಹಿಸುತ್ತಿರುವ ಅತ್ಯಾಚಾರ ಪ್ರಕರಣಗಳೇ ಸಾಕ್ಷಿ. ರಾಜ್ಯದ ರಾಜಧಾನಿಯಿಂದ ಹಿಡಿದು ತುತ್ತತುದಿಯ ಬೀದರ, ಗುಲಬರ್ಗಾ ಜಿಲ್ಲೆಯವರೆಗೂ ಅತ್ಯಾಚಾರಗಳದ್ದೇ ಹಾವಳಿ.

ಒಂದೆಡೆ ಹರಿಯಾಣಾ, ದೆಹಲಿಯಂಥಾ ರಾಜ್ಯಗಳಲ್ಲಿ ಲಿಂಗ ಪ್ರಮಾಣ ತೀವ್ರವಾಗಿ ಅಸಮತೋಲನದ ಸ್ಥಿತಿಯನ್ನು ತಲುಪಿರುವದಿದೆ. ಕೊಂಡು ತಂದ ಹೆಂಡತಿಯರ ಕತೆಗಳು ಮಾಮೂಲಾಗುತ್ತಿವೆ. ಹಾಗೆಯೇ ದೇಶವ್ಯಾಪಿಯಾಗಿ ಹೆಣ್ಣು ಸಂತಾನದ ಬರವಿರುವ ಹಾಗೆ ವಿವಾಹಕ್ಕೆ ಆಯಾ ಜಾತಿಗಳಲ್ಲಿ ಸಾಕಷ್ಟು ಕನ್ಯೆಯರ ಕೊರತೆಯಿರುವ ನಡುವೆ, ಆಯಾ ಜಾತಿಯ ಉಪಜಾತಿಗಳಲ್ಲಿ ಹಿಂದೆಂದೂ ನಡೆಯದಷ್ಟು ಮದುವೆಗಳು ಈಗೀಗ ನಡೆಯುತ್ತಿವೆ. sex ratioಅದಕ್ಕೆ ಕಾರಣ ಮಹಿಳೆಯರ ಲಿಂಗ ಪ್ರಮಾಣದಲ್ಲಿ ಇಳಿಮುಖತೆ ಆಗಿರುವುದೇ ಆಗಿದೆ. 2011 ರ ಅಂಕಿಅಂಶಗಳ ಪ್ರಕಾರ ನಮ್ಮ ದೇಶದ ಅನೇಕ ಕಡೆಗಳಲ್ಲಿ 1000 ಪುರುಷರಿಗೆ 900 ಕ್ಕಿಂತಲೂ ಕಡಿಮೆ ಸ್ತ್ರೀಯರಿರುವ ರಾಜ್ಯಗಳ ಸಂಖ್ಯೆಯೇ ಸುಮಾರು 9 ರಷ್ಟಿದೆ. ಈಗ ಅತ್ಯಾಚಾರದಿಂದಲೇ ಸುದ್ದಿಯಾಗುತ್ತಿರುವ ದೆಹಲಿಯಲ್ಲಿ 1000 ಪುರುಷರಿಗೆ 866 ರಷ್ಟು ಮಹಿಳೆಯರಿದ್ದಾರೆ. ಹರಿಯಾಣಾದಲ್ಲಿ 877, ಪಂಜಾಬದಲ್ಲಿ 893, ಜಮ್ಮು-ಕಾಶ್ಮೀರದಲ್ಲಿ 883, ಸಿಕ್ಕಿಮ್‌ನಲ್ಲಿ 889, ಯುನಿಯನ್ ಟೆರಿಟರಿಗಳಾದ ಅಂದಮಾನ್ ಮತ್ತು ನಿಕೋಬಾರ್, ಚಂಡಿಗಡ್, ದಾದ್ರ ಮತ್ತು ನಾಗರ ಹವೇಲಿ ದಮನ್ ಮತ್ತು ದ್ಯು ಇಲ್ಲೆಲ್ಲಾ ಮಹಿಳೆಯರ ಲಿಂಗಪ್ರಮಾಣದಲ್ಲಿ ಸಮರೂಪವಿಲ್ಲ. ದಮನ್ ಮತ್ತು ದ್ಯು ನಲ್ಲಂತೂ 1000 ಪುರುಷರಿಗೆ ಬರೀ 618 ರಷ್ಟು ಮಹಿಳೆಯರಿದ್ದಾರೆ. ಕರ್ನಾಟಕ ರಾಜ್ಯವನ್ನು ಗಣನೆಗೆ ತೆಗೆದುಕೊಂಡಾಗ ಇಲ್ಲಿಯ ಲಿಂಗ ಪ್ರಮಾಣ 968 ರಷ್ಟಿದೆ. ಹೀಗಿರುವಾಗಲೂ ನಮ್ಮಲ್ಲಿಯೂ ಅತ್ಯಾಚಾರದ ಪ್ರಕರಣಗಳು ಕಡಿಮೆಯಿಲ್ಲ.

ದೆಹಲಿಯ ಅತ್ಯಾಚಾರ ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿತ್ತು. ಅತ್ಯಂತ ಅಮಾನವೀಯವಾಗಿ, ತುಚ್ಚವಾಗಿ ನಡೆದ ಈ ಕೃತ್ಯ 23 ವರ್ಷದ ಯುವತಿಯನ್ನು ನುಂಗಿಹಾಕಿತು. ಕೊನೆಗೂ ಆ ಪಾತಕಿಗಳು ಅವಳನ್ನು ಕೊಂದರು. ದೆಹಲಿಯ ಜನತೆ ರೊಚ್ಚಿಗೆದ್ದು, ಪಾರ್ಲಿಮೆಂಟಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಪ್ರಯತ್ನಿಸಿದ್ದರೊಂದ ಪ್ರಯೋಜನಗಳಾಗಿವೆಯೆಂದು ಅನಿಸದಿದ್ದರೂ ಈ ಬಗೆಯ ಬೃಹತ್ ಪ್ರತಿಭಟನೆ ಈ ವರೆಗೂ ಅತ್ಯಾಚಾರವನ್ನು ವಿರೋಧಿಸಿ ಈ ದೇಶದಲ್ಲಿ ನಡೆದಿರುವದಿಲ್ಲ. ಹಾಗೆ ನಡೆದಿದ್ದರೂ ಇಡೀ ದೇಶದ ಗಮನವನ್ನು ತನ್ನೆಡೆಗೆ ಸೆಳೆವ ನಿಟ್ಟಿನಲ್ಲಿ ಇರಲಿಲ್ಲ. ದೆಹಲಿ ಅತ್ಯಾಚಾರದ ಘಟನೆ ಹಾಗಾಗಲಿಲ್ಲ. ಇನ್ನೇನು ಜನ ಮರೆತುಬಿಡುತ್ತಾರೆ ಎಂದವರಿಗೆ ಶಾಕ್ ಕಾದಿತ್ತು. ಜನ ಬೀದಿಗಿಳಿದರು, ಪೋಲಿಸರ ದಬ್ಬಾಳಿಕೆಗೂ ಜಗ್ಗಲಿಲ್ಲ. ಈ ದೇಶದ ಎಲ್ಲ ಬಗೆಯ ಅನಿಷ್ಟಗಳನ್ನು ಇದೇ ರೀತಿಯಲ್ಲಿ ಜನ ಬೀದಿಗಿಳಿದು ಪ್ರತಿಭಟಿಸುವ ಸಂಸ್ಕೃತಿಯೊಂದು ಸಿದ್ಧ ಮಾದರಿಯಾಗಿ ರೂಪಗೊಳ್ಳದ ಹೊರತು ಜನರ ಸ್ಮರಣೆ ತಾತ್ಕಾಲಿಕ ಎಂದು ಸವಾರಿ ಮಾಡುವ ಪ್ರಭುತ್ವಕ್ಕೆ ಬುದ್ಧಿ ಬರದು.

ದೆಹಲಿಯ ಚಲಿಸುವ ಬಸ್ಸಿನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಹೀಗೆನ್ನುವಾಗಲೇ ಆ ಸೈತಾನರು ಆಕೆಯ ಮೇಲೆ ಮಾಡಿರಬಹುದಾದ ಹಲ್ಲೆಯ ಭೀಕರತೆಯನ್ನು ನಾವು ಊಹಿಸಬಹುದಾಗಿದೆ. ಬರುವ ಫ಼ೆಬ್ರುವರಿ ತಿಂಗಳಲ್ಲಿ ಹಸೆಮಣೆ ಏರಬೇಕಿದ್ದ ಆ ಯುವತಿ ಚಿತೆಯನ್ನು ಏರಬೇಕಾಯಿತು. ಈ ಬಗೆಯ ಪೈಶಾಚಿಕ ಕೃತ್ಯಗಳು ಈಗೀಗ ಮತ್ತೆ ಮತ್ತೆ ದೇಶದ ಇತರೆಡೆಗಳಲ್ಲಿಯೂ ನಿರಂತರವಾಗಿ ನಡೆಯುತ್ತಿವೆ. rape-illustrationದೆಹಲಿಯ ಪ್ರಕರಣ ನಡೆದು ಇನ್ನೂ ತಿಂಗಳೂ ಕಳೆದಿಲ್ಲ, ಅದಾಗಲೇ ನಮ್ಮ ರಾಜ್ಯದಲ್ಲಿ ಹತ್ತಾರು ಈ ಬಗೆಯ ಅತ್ಯಾಚಾರದ ಪ್ರಕರಣಗಳು ನಡೆಯುತ್ತಲೇ ಇವೆ. ಅವು ತೀರಾ ಸಹಜ ಎನ್ನುವ ಹಾಗೆ ಘಟಿಸಿ, ಮರೆಯಾಗುತ್ತಿವೆ. ಈಚೆಗಷ್ಟೇ ಪ್ರವಾಸಕ್ಕೆ ತೆರಳುತ್ತಿದ್ದ ಬಾಲಕಿಗೆ ಡ್ರಾಪ್ ಕೊಡುವದಾಗಿ ಹೇಳಿ ಬೈಕ್ ಮೇಲೆ ಕರೆದೊಯ್ದು ಅತ್ಯಾಚಾರ ನಡೆಸಿದ ಬಗ್ಗೆ ಹಾಸನ ಜಿಲ್ಲೆಯ ಗೊರೂರು ತಾಲೂಕಿನಲ್ಲಿ ವರದಿಯಾಗಿದೆ. ಈ ಅತ್ಯಾಚಾರ ಎನ್ನುವದು ಒಂಥರಾ ಸಮೂಹ ಸನ್ನಿಯಾಗಿ ಪರಿವರ್ತನೆ ಹೊಂದುತ್ತಿದೆಯೇನೋ..? ಎನ್ನುವಷ್ಟು ತೀವ್ರವಾಗಿ ಜರುಗುತ್ತಿವೆ.

ಹೀಗೇ ಆದರೆ ಮುಂಬರುವ ದಿನಗಳಲ್ಲಿ ಮಹಿಳೆಯರ ಲಿಂಗ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ. ಇಲ್ಲಿಯವರೆಗೆ ಪಾಲಕರು ವರದಕ್ಷಿಣೆಗೆ ಹೆದರಿ ಹೆಣ್ಣು ಸಂತಾನವನ್ನು ತಿರಸ್ಕರಿಸುತ್ತಿದ್ದರೆ, ಈಗ ಈ ಅತ್ಯಾಚಾರದ ಸುಳಿಯಿಂದ ಅವರನ್ನು ಕಾಯುವದೇ ಹರಸಾಹಸ ಎಂದು ಬಗೆದು ಹೆಣ್ಣು ಸಂತಾನವನ್ನು ನಿರ್ಲಕ್ಷಿಸಬಹುದಾದ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ಇಡೀ ಸಮಾಜದ ಮನ:ಸ್ಥಿತಿಯೇ ಇಂದು ನೆಟ್ಟಗಿಲ್ಲ. ಹಾಗಾಗಿಯೇ ಪ್ರತಿನಿತ್ಯ ಬರೀ ಕೊಲೆ, ಸುಲಿಗೆ, ಅತ್ಯಾಚಾರ, ದರೋಡೆ, ಆತ್ಮಹತ್ಯೆ ಇಂಥವುಗಳೇ ಹೆಚ್ಚೆಚ್ಚು ವಿಜೃಂಭಿಸುತ್ತಿವೆ. ಪ್ರಭುತ್ವಗಳು ದುರ್ಬಲ ಮತ್ತು ಅಸಹಾಯಕರ ಬೆನ್ನಿಗೆ ನಿಂತದ್ದು ಚರಿತ್ರೆಯೊಳಗೂ ನಮಗೆ ಕಾಣಸಿಗುವದಿಲ್ಲ. ನಮ್ಮ ರಕ್ಷಣೆಯನ್ನು ನಾವೇ ಮಾಡಿಕೊಳ್ಳಬೇಕು, ನಮ್ಮ ಮಕ್ಕಳನ್ನು ನಾವೇ ಕಾಯಬೇಕು.

ಮೂಲದಿಂದಲೂ ಲಿಂಗ ತರತಮ ನೀತಿಯನ್ನು ಒಪ್ಪಿಕೊಂಡು, ಅನುಸರಿಸಿಕೊಂಡು ಬಂದ ನಮ್ಮ ಪಿತೃಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಯ ಮೇಲಾಗುವ ಎಲ್ಲ ಬಗೆಯ ದೌರ್ಜನ್ಯಗಳು ಸಹ್ಯ ಎನ್ನುವ ಮನೋಭಾವದ ಎದುರು ಈ ಬಗೆಯ ಅತ್ಯಾಚಾರಗಳು ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಯಾವ ಬಗೆಯ ಗಮನ ಸೆಳೆಯುತ್ತದೆ ಎನ್ನುವದೇ ಒಂದು ದೊಡ್ದ ಜಿಜ್ಞಾಸೆ. ಫ಼ೆಮಿನಿಜಂ ನೆಲೆಯಲ್ಲಿ ನಿಂತು ಮಾತನಾಡುವವರಿಗೆ ಪುರುಷ ಪದವನ್ನೂ ಸಹಿಸಲಾಗುವದಿಲ್ಲ. sex-ratioಹೀಗಿರುವ ನಡುವೆ ಮಹಿಳಾ ಸಬಲೀಕರಣದ ಮಾತು ಒಂದು ಸೈದ್ಧಾಂತಿಕ ಹೇಳಿಕೆಯಾಗಿ ಉಳಿಯಬಲ್ಲುದಷ್ಟೆ. ಗಂಡು-ಹೆಣ್ಣು ಇಬ್ಬರ ಸಹಭಾಗಿತ್ವದ ಹೋರಾಟದಲ್ಲಿರುವ ಶಕ್ತಿಗೆ ಮಾತ್ರ ಸಂಚಲನವನ್ನುಂಟು ಮಾಡಬಹುದಾದ ಗುಣಗಳಿವೆ. ಆ ದಿಸೆಯಲ್ಲಿಯೇ ಮಹಿಳೆಯ ಮೇಲಾಗುವ ದೌರ್ಜನ್ಯಗಳನ್ನು ವಿರೋಧಿಸಬೇಕಿದೆ.

ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಹೀಗೆ ನಡೆಯಬಹುದಾದ ದೌರ್ಜನ್ಯಗಳು ಸಾಂಸ್ಕೃತಿಕ ಯಜಮಾನಿಕೆಯ ಡೌಲಿನೊಂದಿಗೆ ನಡೆಯುತ್ತವೆ. ಏನೇ ಮಾಡಿದರೂ ಮೇಲ್ಮುಖಮಾಡಿ ನಡೆಯುವದೇ ತಮ್ಮ ಜಾತಿಯ ಗುಣ ಎಂದು ಪ್ರತಿಪಾದನೆ ಮಾಡುವವರನ್ನು ಅಲ್ಲಿ ಸಹಿಸಿಕೊಳ್ಳುವವರೂ ಇದ್ದಾರೆ. ಹೀಗಿರುವ ನಡುವೆ ದಮನಿತರ ಮೇಲೆ ನಡೆಯುವ ಈ ಲೈಂಗಿಕ ಅತ್ಯಾಚಾರಗಳು ಎಷ್ಟರ ಮಟ್ಟಿನ ನ್ಯಾಯವನ್ನು ಗ್ರಾಮೀಣ ಭಾಗಗಳಲ್ಲಿ ಒದಗಿಸಬಹುದು ಎನ್ನುವದೇ ಒಂದು ದೊಡ್ಡ ಪ್ರಶ್ನೆ.

ಹೀಗೆ ನಿರಂತರವಾಗಿ ಅತ್ಯಾಚಾರದ ಪ್ರಕರಣಗಳು ಘಟಿಸುತ್ತಾ ನಡೆದರೆ, ಅದು ಖಂಡಿತವಾಗಿ ಲಿಂಗ ಪ್ರಮಾಣದ ಅಂತರವನ್ನು ಇನ್ನಷ್ಟು ಹೆಚ್ಚಿಸುವದರಲ್ಲಿ ಸಂಶಯವೇ ಬೇಡ.

2 thoughts on “ಲಿಂಗಪ್ರಮಾಣ ಹಾಗೂ ಅತ್ಯಾಚಾರದ ಹಾವಳಿ…

  1. Mahesh

    ಮಹಿಳೆಯರ ಮೇಲೆ ಆಗುವ ಅತ್ಯಾಚಾರಕ್ಕೆ ಲಿಂಗ ಅಸಮತೋಲನ ಕಾರಣ ಎನ್ನುವದಕ್ಕಿಂತ, ಲಿಂಗಪ್ರಮಾಣದಲ್ಲಿನ ಅಸಮತೋಲನ ಮತ್ತು ಅತ್ಯಾಚಾರ ಎರಡಕ್ಕೂ ಪುರುಷ ಪ್ರಧಾನ ವ್ಯವಸ್ಥೆಯೇ ಹೆಚ್ಚು ಕಾರಣ ಎನ್ನುವುದೇ ಹೆಚ್ಚು ಸತ್ಯ.

    Reply
  2. santoshkumar

    ಭಾರತದಲ್ಲಿ ಮಹಿಳೆಯರ ಮೇಲೆ ದೌರ್ಜನ್ನಯ ನಡೆಯುವುದಕ್ಕೆ ಪುರುಷ ಪ್ರಧಾನ ವ್ಯವಸ್ಥೆ ಹಾಗೂ ಲಿಂಗ ಅಸಮತೋಲನ ಕಾರಣವಾಗಿರಲಾರದು ಏಕೆಂದರೆ ಮೊದಲು ಮಾನವರಲ್ಲಿನ ಮಾನಸಿಕ ಕ್ರೀಯೆಗಳ ಮೇಲಿನ ಸ್ಥಿಮಿತತೆ ಇಲ್ಲದೆ ಇರುವುದು ಪ್ರಮುಖ ಕಾರಣವಾಗಿದೆ ಯಾವಾಗ ಎಲ್ಲಾ ಜನರಲ್ಲಿ ನಾವೆಲ್ಲರೂ ಒಂದೇ ಇಲ್ಲಿರುವ ಎಲ್ಲರೂ ನಮ್ಮ ಬಂಧು ಭಾಂಧವರು ಎಂಬ ಅರಿವು ಮೂಡುವುದೋ ಅಲ್ಲಿಯವರೆಗೆ ಇಂತಹ ಪ್ರಕರನಗಳು ನಡೆಯುತ್ತಲೆ ಇರುತ್ತವೆ ಇವುಗಳನ್ನು ಮಟ್ಟ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ

    Reply

Leave a Reply

Your email address will not be published. Required fields are marked *