Monthly Archives: January 2013

ಕಲ್ಯಾಣ ರಾಜ್ಯದಲ್ಲಿ ನ್ಯಾಯದ ಬುನಾದಿಗಾಗಿ ಹುಡುಕಾಟ

– ಬಿ.ಶ್ರೀಪಾದ ಭಟ್

ಮೂವತ್ತರ ದಶಕದಲ್ಲಿ ಸಾರ್ವಜನಿಕವಾಗಿ ಸಂಕಿರಣಗಳಲ್ಲಿ ಭಾಗವಹಿಸಿ ಮಾತನಾಡುತ್ತ ಚಿಂತಕ ಜಾರ್ಜ ಅರ್ವೆಲ್, “ಸ್ವತಂತ್ರ ಚಿಂತನೆಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮೊದಲ ಶತೃಗಳೆಂದರೆ ಮಾಧ್ಯಮಗಳು. ಕೆಲವೇ ಬಂಡವಾಳಶಾಹಿಗಳ ಹಿಡಿತದಲ್ಲಿರುವುದು, ರೇಡಿಯೋದ ಮೇಲೆ ಏಕಾಧಿಪತ್ಯ ಸಾಧಿಸುವುದು, ಅಧಿಕಾರಶಾಹಿ ಮತ್ತು ನಾಗರಿಕರು ಪುಸ್ತಕಗಳನ್ನು ಓದಲು ನಿರಾಕರಿಸುವುದು,” ಎಂದು ನಿರ್ಭಿಡೆಯಿಂದ ಹೇಳುತ್ತ ಲೇಖಕರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿರುವುದು ಅದನ್ನು ಸಮರ್ಥಿಸಬೇಕಾದ ಜನರಿಂದಲೇ ಎಂದು ಆತಂಕ ವ್ಯಕ್ತಪಡಿಸಿದ್ದ. ಇದಕ್ಕೆ ಉದಾಹರಣೆಯಾಗಿ George_Orwellಧಾರ್ಮಿಕ ಮತ್ತು ಕ್ಯಾಥೋಲಿಕ್ ಮೂಲಭೂತವಾದಿಗಳ ವಿರುದ್ಧ ಸೆಣೆಸಬೇಕಾದಂತಹ ಸಂದರ್ಭದಲ್ಲೇ ಕಮ್ಯನಿಷ್ಟರ ಸರ್ವಾಧಿಕಾರದ ವಿರುದ್ಧವೂ ಪ್ರತಿಭಟಿಸಬೇಕಾಗುವಂತಹ ಸಂದರ್ಭ ಸೃಷ್ಟಿಯಾಗಿರುವುದು ದುರಂತವೇ ಸರಿ ಎಂದು ಮರುಗಿದ್ದ. ಇದಕ್ಕೆ ಉಕ್ರೇನಿನ ಬರಗಾಲ, ಸ್ಪಾನಿಷ್‌ನ ಜನಾಂಗೀಯ ಯುದ್ಧ ಮತ್ತು ಪೋಲೆಂಡಿನ ಅಸಹಾಯಕತೆಯನ್ನು ಉದಾಹರಿಸಿದ್ದ. ಮಧ್ಯಯುಗೀನ ಧಾರ್ಮಿಕ ಆಳ್ವಿಕೆಯ ಕಾಲದಲ್ಲಿ ಹತ್ತಿಕ್ಕಲ್ಪಟ್ಟಿದ್ದ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯವು ಏಕಚಕ್ರಾಧಿಪತ್ಯದ ಆಧುನಿಕ ಕಾಲದಲ್ಲೂ ಅಂಚಿಗೆ ತಳ್ಳಲ್ಪಟ್ಟಿರುವುದಕ್ಕೆ ವಿಷಾದಿಸಿದ್ದ. ಆದರೆ ಒಂದು ಪ್ರಮುಖ ವ್ಯತ್ಯಾಸವೆಂದರೆ ಆಧುನಿಕ ಏಕಚಕ್ರಾಧಿಪತ್ಯದ ಸಂದರ್ಭದಲ್ಲಿ ಸಿದ್ಧಾಂತಗಳು ಅಸ್ಥಿರವಾಗಿರುತ್ತವೆ, ಇದರ ಕಾರಣಕ್ಕಾಗಿಯೇ ಮರಳಿ ಮರಳಿ ಇತಿಹಾಸವನ್ನು ಪುನರಚಿಸಲು ಸುಳ್ಳುಗಳು ನಿರಂತರವಾಗಿ ಬದಲಾವಣೆಗೊಳ್ಳುತ್ತಿರುತ್ತವೆ ಎಂದು ಆರ್ವೆಲ್ ಪ್ರತಿಪಾದಿಸಿದ. ಇದು ನಂಬಿಕೆಯ ಕಾಲದ ಬದಲಾಗಿ ವಿಕ್ಷಿಪ್ತತೆಯ ಕಾಲದ ಹುಟ್ಟಿಗೆ ಕಾರಣವಾಗುತ್ತದೆ ಎಂದು ವಿವರಿಸಿದ. ಎಂಬತ್ತು ವರ್ಷಗಳ ಹಿಂದೆ ಜಾರ್ಜ ಅರ್ವೆಲ್ ಹೇಳಿದ ಮಾತುಗಳು: “ನಮ್ಮ ಕಾಲಘಟ್ಟದಲ್ಲಿ ಬೌದ್ಧಿಕ ಸ್ವಾತಂತ್ರ್ಯವು, ಒಂದು ದಿಕ್ಕಿನಲ್ಲಿ ಏಕಚಕ್ರಾಧಿಪತ್ಯದ ವಿರೋಧಿಗಳಾದ ಪ್ರಜಾಪ್ರಭುತ್ವವಾದಿಗಳಾದ ಅಕಡೆಮಿಕ್ ಬುದ್ಧಿಜೀವಿಗಳ ಮೂಲಕ, ಮತ್ತು ಮತ್ತೊಂದು ದಿಕ್ಕಿನಲ್ಲಿ ವ್ಯವಸ್ಥೆಯ ಭಾಗವಾಗಿರುವ ಅಧಿಕಾರಶಾಹಿ ಮತ್ತು ಸರ್ವಾಧಿಕಾರಿ ಆಡಳಿದಿಂದ ನಿರಂತರ ಹಲ್ಲೆಗೊಳಗಾಗುತ್ತಿರುತ್ತದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಪತ್ರಕರ್ತ ಮತ್ತು ಲೇಖಕ ತನ್ನ ಐಡೆಂಟಿಟಿ ಮತ್ತು ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳಲು ಸಕ್ರಿಯ ಹಿಂಸಾವಾದಿಗಳ ವಿರುದ್ಧಕ್ಕಿಂತಲೂ ಗೊತ್ತುಗುರಿಯಿಲ್ಲದ ಘೋಷಿತ ನಾಗರಿಕ ವ್ಯವಸ್ಥೆಯ ವಿರುದ್ಧ ಸೆಣಸಬೇಕಾಗುತ್ತದೆ.”

ತೃತೀಯ ಜಗತ್ತಿನ ತಲ್ಲಣಗಳು, ಬಿಕ್ಕಟ್ಟುಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವೂ ಸಹ ಒಂದಾಗಿರುವುದು ನಾಗರಿಕತೆಯ ಮಿತಿಗಳನ್ನು ಸೂಚಿಸುತ್ತದೆ. ಸಾಕ್ರೆಟೀಸ್, ಗೆಲಿಲಿಯೋ ಸಂಬಂಧಿತ ದಮನಕಾರಿ ದಿನಗಳಿಂದ ಹಿಡಿದು, ಮುದ್ರಣಗಳ ಮೇಲೆ ನಿರ್ಬಂಧ ಹೇರಿದ ರೋಮನ್ ಕ್ಯಾಥೋಲಿಕ್‌ನ ಕಾಲವನ್ನು ಹಿಂದಿಕ್ಕಿ, ಬ್ರಿಟೀಷರ ವಸಾಹತುಶಾಹಿ ಆಳ್ವಿಕೆ ಶುರುವಾದಾಗಿನ ಕಾಲದಿಂದ ಇಂದಿನವರೆಗಿನ ಸುಮಾರು ಮುನ್ನೂರು ವರ್ಷಗಳ ಕಾಲಘಟ್ಟವನ್ನು ಅವಲೋಕಿಸಿದಾಗಲೂ ಅನೇಕ ಸ್ಥಿತ್ಯಂತರಗಳನ್ನು, ಆಳವಾದ ಪಲ್ಲಟಗಳನ್ನು ಕಾಣಬಹುದು. ಪೂರ್ವ ಮತ್ತು ಪಶ್ಚಿಮಗಳ ಸಂಗಮದ ಕಾಲಘಟ್ಟವೆಂದೇ ಕರೆಯಲ್ಪಡುವ ಮುನ್ನೂರು ವರ್ಷಗಳ ಈ ಪಯಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವು ತನ್ನ ಆಕೃತಿಯನ್ನು ಗಟ್ಟಿಗೊಳಿಸಲು, ಆಳದ ಪೊಳ್ಳುತನದಿಂದ ಹೊರಬಂದು ಸುಭದ್ರ ನೆಲೆಗೆ ಶಾಶ್ವತವಾಗಿ ನೆಲೆಯೂರಲು ಇಂದಿಗೂ ಸಾಧ್ಯವಾಗುತ್ತಿಲ್ಲ. ರಾಜರ ಆಳ್ವಿಕೆಯ ದಿನಗಳಿಂದ ಶುರುವಾಗಿ, ಬ್ರಿಟೀಷರ ವಸಾಹತುಶಾಹಿಯ ಸರ್ವಾಧಿಕಾರದ ಆಡಳಿತದ ಮೂಲಕ ಇಂದು ಜಗತ್ತಿನ ಬಲು ದೊಡ್ಡ ಪ್ರಜಾಪ್ರಭುತ್ವಗಳಲ್ಲೊಂದೆಂದು ಹೆಮ್ಮೆಯಿಂದ ಬೀಗುತ್ತಿರುವ ಇಂಡಿಯಾದ ಇಂದಿನ ವರ್ತಮಾನದ ದಿನಗಳವರೆಗೆ ಅಭಿವ್ಯಕ್ತಿ ಸ್ವಾತ್ರಂತ್ರ್ಯವು ಸದಾ ಕಾಲ ಅಭದ್ರತೆಯಿಂದ ನರಳುತ್ತಿದೆ. ಪ್ರಜಾಪ್ರಭುತ್ವದಲ್ಲಿ ರಾಜಕೀಯ ವಿದ್ಯಾಮಾನಗಳನ್ನು, ಅಲ್ಲಿನ ಸ್ಥಿತ್ಯಂತರಗಳನ್ನು ಚರ್ಚಿಸಲು ಬಳಕೆಗೊಂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಪರಿಕಲ್ಪನೆಯು ಕಾಲಕ್ರಮೇಣ ಪ್ರಜಾಪ್ರಭುತ್ವದ ಕುರೂಪಗಳಾದ ಭ್ರಷ್ಟಾಚಾರ, ವಂಶಾಡಳಿತದ ಹೆಳವಂಡಗಳು, ಕೋಮುವಾದದ ಕ್ರೌರ್ಯದ ಕುರಿತಾಗಿನ ಚರ್ಚೆಗಳವರೆಗೂ ಮುಂದುವರೆಯಿತು.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳು ದಮನಗೊಂಡಿದ್ದಕ್ಕೆ ವಿವರಣೆಗಳು ಮತ್ತು ಸಮಜಾಯಿಷಿಗಳು ಇರಬಹುದಾದರೂ ತದನಂತರ ಎಂಬತ್ತರ ದಶಕದಿಂದ ಶುರುವಾಗಿ ಇಲ್ಲಿನವರೆಗಿನ ಮಾನವ ಹಕ್ಕುಗಳ ದಮನಕ್ಕೆ ಯಾವುದೇ ಸಮರ್ಥನೆ ನೀಡಲು ಸಾಧ್ಯವಿಲ್ಲ. ಇದಕ್ಕೆ ವ್ಯಕ್ತಿಗತ ಭಯವೇ ಮೂಲ ಕಾರಣವೆಂದು ಸಕಾರಣವಾಗಿ ಹೇಳಲಾಗುತ್ತಿದ್ದರೂ ನಿರ್ಭಿಡೆಯಿಂದ ವರ್ತಿಸಲು ಅನುಕೂಲಕರ ವಾತಾವರಣವನ್ನು ನಾವೆಲ್ಲಿ ನಿರ್ಮಿಸಿದ್ದೇವೆ? ಹಿಂಸೆ ಎನ್ನುವುದು ಹಲವಾರು ರೂಪಗಳಲ್ಲಿ ಸದಾ ಅಸ್ತಿತ್ವದಲ್ಲಿರುವಂತಹ ವಾಸ್ತವ ಸ್ಥಿತಿಯಲ್ಲಿ, ವ್ಯವಸ್ಥೆಯ ಅಮಾನವೀಯ, ಜೀವವಿರೋಧಿ ಕಟ್ಟುಪಾಡುಗಳನ್ನು ಉಲ್ಲಂಘಿಸುತ್ತಾ ಸತ್ಯದ ಪರವಾಗಿ ನಿರಂತರವಾಗಿ ಅಹಿಂಸಾತ್ಮಕವಾಗಿ ಹೋರಾಡಲು ಸಮಾಜವು ಯಾವ ಕಾಲಕ್ಕೂ ಸಮ್ಮತಿಯನ್ನು ನೀಡುವುದಿಲ್ಲ. ಅಳಿದುಳಿದ ಅವಕಾಶಗಳನ್ನು ಸಹ ಹೆಚ್ಚೂಕಡಿಮೆ ನಿರ್ದಯವಾಗಿ ಅಳಿಸಿಹಾಕಿಬಿಡುತ್ತದೆ. ದಮನಿತರ ಪರವಾಗಿ ಸಂಘಟನೆಯನ್ನು ರೂಪಿಸಿ ಶೋಷಣೆಯ ವಿರುದ್ಧ ಸಾರ್ವಜನಿಕವಾಗಿ ಪ್ರತಿಭಟಿಸತೊಡಗಿದರೆ ತತ್‌ಕ್ಷಣದಲ್ಲಿ ಇನ್ನೊಂದು ಬಗೆಯ ವಿಶೇಷ ಕಾರ್ಯಪಡೆಗಳೆಂಬ ಸಮಿತಿಗಳು ಹುಟ್ಟಿಕೊಂಡು ನ್ಯಾಯ ಹಂಚಿಕೆಯ ಕುರಿತಾಗಿ ಮಾತನಾಡತೊಡಗುತ್ತವೆ. ಆಗ ಪ್ರಾಮಾಣಿಕ ಮತ್ತು ಅಪ್ರಾಮಾಣಿಕತೆಯ ನಡುವಿನ ಗೆರೆಯೇ ಅಳಿಸಿ ಹೋಗಿ ಪ್ರಜ್ಞಾವಂತರಿಗೆ ಯಾವ ಕಡೆಗೆ ವಾಲುವುದೆಂದು ಗೊತ್ತಾಗದೆ ಕಕ್ಕಾಬಿಕ್ಕಿಯಾಗುತ್ತಾರೆ, ನಂತರ ಕ್ರಮೇಣ ನಿಷ್ಕ್ರಿಯರಾಗುತ್ತಾರೆ.

ಹಿಂದೊಮ್ಮೆ ಡಿ.ಆರ್.ನಾಗರಾಜ್ ಅವರು ನ್ಯಾಯಕ್ಕೆ ಬುನಾದಿ ಯಾವುದು ಎಂದು ಮಾರ್ಮಿಕವಾಗಿ ಕೇಳಿದ್ದರು. DR nagarajಏಕೆಂದರೆ ಮೂಲಭೂತವಾಗಿ ಸಂಪ್ರದಾಯಸ್ಥವಾದ ಭಾರತೀಯ ಮನಸ್ಸು ಪ್ರಜ್ಞಾಪೂರ್ವಕವಾಗಿಯೇ ಎಳಸು ಎಳಸಾಗಿ ವರ್ತಿಸುತ್ತಾ ಅನೇಕ ಮೌಲಿಕ ವಿಚಾರಧಾರೆಗಳ ಪ್ರತಿರೋಧದ ನೆಲೆಗಳನ್ನು ಹೊಸಕಿ ಹಾಕುತ್ತದೆ. ಅತ್ಯಂತ ಕ್ಲಿಷ್ಟ ಪ್ರಶ್ನೆಗಳಿಗೆ ಸರಳ ಉತ್ತರಗಳಿದ್ದರೂ ಸಹ ಅದನ್ನು ಜಟಿಲಗೊಳಿಸಿಬಿಡುತ್ತದೆ ಭಾರತದ ಸಂಪ್ರದಾಯವಾದಿ ಮನಸ್ಸು. ನಮಗರಿವಿಲ್ಲದೆ ಇಂಡಿಯಾದ ನಾಗರಿಕನ ಹಕ್ಕುಗಳ ರಕ್ಷಣೆಯಾಗಿರುವ ಸಂವಿಧಾನವನ್ನೇ ತೆರೆಮೆರೆಗೆ ಸರಿಸಿ ನಿಷ್ಕ್ರಿಯಗೊಳಿಸಿಬಿಡುತ್ತದೆ. ಇಲ್ಲದಿದ್ದರೆ ಬಿನಾಯಕ್ ಸೇನ್ ಮೂರು ವರ್ಷಗಳ ಕಾಲ ಜೈಲಿನಲ್ಲಿರುತ್ತಿದ್ದರೇ?ಇಲ್ಲದಿದ್ದರೆ ಆದಿವಾಸಿ ಮಹಿಳೆ ಸೋನು ಸೂರಿ ಇಂದಿಗೂ ಜೈಲಿನಲ್ಲಿ ಕೊಳೆಯುತ್ತಿದ್ದರೆ? ಇಲ್ಲದಿದ್ದರೆ ಸೂಕ್ಷ್ಮ ಹೆಣ್ಣುಮಗಳು ಖುಷ್ಬೂ ಕೋರ್ಟಗೆ ಅಲೆಯುವಂತಾಗುತ್ತಿತ್ತೆ? ಕಲಾವಿದ ಎಂ.ಎಫ್.ಹುಸೇನ್ ದೇಶಭ್ರಷ್ಟರಾಗಿ ಅಲೆಯಬೇಕಾಗಿತ್ತೆ? 2002 ರ ಮುಸ್ಲಿಂರ ಹತ್ಯಾಕಾಂಡದ ವಿರುದ್ಧ ದನಿಯೆತ್ತಿದ ದಿಟ್ಟ ಮಹಿಳೆಯರಾದ ನಫೀಜ ಅಲಿ ಮತ್ತು ದಿವ್ಯ ಭಾಸ್ಕರ್ ಗುಜರಾತ್ ಸರ್ಕಾರದಿಂದ ಕಿರುಕುಳಕ್ಕೆ ಒಳಗಾಗಬೇಕಿತ್ತೆ? ಇಂದಿನವರೆಗೂ ಫಿಜಾ ಮತ್ತು ಪರ್ಜಾನಿಯ ಚಿತ್ರಗಳು ಗುಜರಾತ್‌ನಲ್ಲಿ ಬಿಡುಗಡೆಯ ಭಾಗ್ಯದ ಸೌಭಾಗ್ಯವಿಲ್ಲದೆ ಡಬ್ಬದಲ್ಲೇ ಉಳಿಯುತ್ತಿದ್ದವೇ?ರೋಹಿನ್ಟನ್ ಮಿಸ್ತ್ರಿ ಮತ್ತು ಎ.ಕೆ.ರಾಮಾನುಜನ್ ಪುಸ್ತಕಗಳು ನಿಷೇಧಿಸಲ್ಪಡುತ್ತಿದ್ದವೇ? ಶಹೀನ ಮತ್ತು ರೇಣು ಎನ್ನುವ ಮಹಾರಾಷ್ಟ್ರದ ತರುಣಿಯರು ಪತ್ರಕರ್ತರು ಜೈಲಿಗೆ ಹೋಗಬೇಕಿತ್ತೆ? ಇನ್ನೂ ನೂರಾರು ಉದಾಹರಣೆಗಳಿವೆ.

ಇಂದು ಪ್ರಾಮಾಣಿಕ ಪತ್ರಕರ್ತ ನವೀನ ಸೂರಿಂಜೆ ವ್ಯವಸ್ಥೆಯ ಮತ್ತು ಪಟ್ಟಭದ್ರರ ವಿರುದ್ಧ ನಿರ್ಭಿಡೆಯಿಂದ, ಪ್ರಾಮಾಣಿಕವಾಗಿ ಬರೆದಿದ್ದಕ್ಕೆ ಬಂಧಿತನಾಗಿ ಕಳೆದ ಮೂರು ತಿಂಗಳಿಂದ ಜೈಲಿನಲ್ಲಿರಬೇಕಾದಂತಹ ದುಸ್ಥಿತಿ ಬಂದೊದಿಗಿದೆ. ಇದಕ್ಕೆ ಮೂಲಭೂತ ಕಾರಣಗಳನ್ನು ಎಂಬತ್ತು ವರ್ಷಗಳ ಹಿಂದೆ ಸತ್ಯವನ್ನು ನುಡಿದ ಆರ್ವೆಲ್‌ನ ಮಾತುಗಳಲ್ಲಿ ಕಾಣಬಹುದು. ಪತ್ರಕರ್ತನಾಗಿ ಸೂರಿಂಜೆಯಂತಹವರು ತಮ್ಮ ಪ್ರಾಮಾಣಿಕ ಅಭಿವ್ಯಕ್ತಿಯನ್ನು Justiceದಾಖಲಿಸಲು ವ್ಯವಸ್ಥೆಯು ನಿರಂತರವಾಗಿ ಪ್ರತಿರೋಧ ತೋರಿಸುತ್ತಿರುವುದು ಇದೇ ಮೊದಲೇನಲ್ಲ. ಕಳೆದ ದಶಕಗಳಲ್ಲಿ ಇಂತಹ ನೂರಾರು ಘಟನೆಗಳು ಜರುಗಿವೆ. ಪತ್ರಕರ್ತನ ಅಭಿವ್ಯಕ್ತಿ ಸ್ವಾತಂತ್ರ್ಯ ನಿರಂತರವಾಗಿ ಚಾಲ್ತಿಯಲ್ಲಿಡಲು ಅನೇಕ ಕಾನೂನುಗಳು ಸೃಷ್ಟಿಯಾದರೂ ಇದೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಲು ನೂರಕ್ಕೂ ಮೇಲ್ಪಟ್ಟು ಕಾನೂನುಗಳು ಜಾರಿಯಲ್ಲಿವೆ. ಇಲ್ಲಿ ಪ್ರಜಾಪ್ರಭುತ್ವವನ್ನು ಕಾಪಾಡಲು ಪ್ರತಿಯೊಬ್ಬ ನಾಗರೀಕನಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂದು ಕಾನೂನುಗೊಳಿಸಲಾಗಿದ್ದರೂ ವಾಸ್ತವದಲ್ಲಿ ಅವನ ಪ್ರತಿಯೊಂದು ಮಾತುಗಳು ಮತ್ತು ನಡೆಗಳನ್ನು ಅಕ್ಷರಶಃ ತನಿಖೆಗೊಳಪಡಿಸಲಾಗುತ್ತದೆ ಮತ್ತು ಪ್ರಭುತ್ವವು ಕಾನೂನನ್ನು ತನ್ನ ಮೂಗಿನ ನೇರಕ್ಕೆ ತಿರುಚಿ ಸಂಬಂಧಪಟ್ಟ ವ್ಯಕ್ತಿಯನ್ನು ಹಿಂಸೆಗೆ, ಅವಮಾನಕ್ಕೆ ಒಳಪಡಿಸಲಾಗುತ್ತದೆ. ಕಾನೂನುಬದ್ಧವಾಗಿಯೇ ರಚಿಸಲ್ಪಟ್ಟ ಮಾನವ ಹಕ್ಕುಗಳ ಅಯೋಗವು ವರ್ಷಗಳ ಕಾಲ ಅಧ್ಯಕ್ಷನಿಲ್ಲದೆ ಕೊಳೆಯುತ್ತಿರುತ್ತದೆ. ಇದರ ಅರಿವೂ ಸಹ ನಾಗರಿಕ ಸಮಾಜಕ್ಕೆ ಇರುವುದಿಲ್ಲ. ಇದು ಮೇಲ್ನೋಟಕ್ಕೆ ಎಲ್ಲವೂ ಸುಗಮವಾಗಿರುವಂತೆ ಕಂಡರೂ ವ್ಯವಸ್ಥೆಯೊಳಗಡೆ ಒಂದು ಬಗೆಯಲ್ಲಿ ಅಗೋಚರವಾದ ಭಯದ ವಾತಾವರಣ ನಿರ್ಮಾಣಗೊಂಡಿರುತ್ತದೆ.ಇದಕ್ಕಾಗಿ ತುರ್ತುಪರಿಸ್ಥಿಯನ್ನು ಹೇರುವ, ಆ ಮೂಲಕ ಸೆನ್ಸಾರ್‌ಶಿಪ್ ಅನ್ನು ಜಾರಿಗೊಳಿಸುವ ಪರಿಸ್ಥಿತಿಯ ಅಗತ್ಯವೇ ಇರುವುದಿಲ್ಲ. ಪ್ರಜಾಪ್ರಭುತ್ವದ ಪರಿಧಿಯೊಳಗೇ ಇವೆಲ್ಲವೂ ನಿರ್ಮಾಣಗೊಂಡಿರುತ್ತವೆ ಮತ್ತು ನಿರ್ಮಾಣಗೊಳ್ಳುತ್ತಿರುತ್ತವೆ. ಈ ಬಗೆಯ ನಿರ್ಮಿತಿಯನ್ನೇ ಚೊಮೆಸ್ಕಿ “Friendly Fascism” ಎಂದು ಕರೆದ. ಇಲ್ಲಿ ಎಲ್ಲವೂ ಸುಸೂತ್ರವಾಗಿರುವಂತೆ ಭಾಸವಾದರೂ ಯಾವುದೂ ಸುಸಂಬದ್ಧವಾಗಿರುವುದಿಲ್ಲ. ಇದರ ಇನ್ನೊಂದು ಮುಖವೇ ಸಮಾಜದ ಕೋಮುವಾದಿ ಗುಂಪುಗಳಾದ ಫ್ಯಾಸಿಸ್ಟ್ ಮನೋಸ್ಥಿತಿಯ ಸಂಘ ಪರಿವಾರ, ಜಮಾತೆ, ತೊಗಾಡಿಯಾಗಳು, ಮೋದಿಗಳು, ಮುತಾಲಿಕ್‌ಗಳು, ಬುಖಾರಿಗಳು, ಅಕ್ಬರುದ್ದೀನ್ ಓವೈಸಿಗಳು, ಇತ್ಯಾದಿ ಮೂಲಭೂತವಾದಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನೇ ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ದ್ವೇಷದ ವಾತಾವರಣವನ್ನು ಹುಟ್ಟು ಹಾಕುವುದು ಮತ್ತು ಸಾವಿರಾರು ಸಾವುನೋವಿಗಳಿಗೆ ಕಾರಣಕರ್ತರಾಗುವುದು. ಇದನ್ನು ಉದಾಹರಿಸುತ್ತ ಕಡೆಗೆ ಇವನ್ನೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಗಳೆಂದು ಕರೆದು ಒಂದೇ ಏಟಿಗೆ ಎಲ್ಲಾ ಬಗೆಯ ಕೈದೀಪಗಳನ್ನು ಒಡೆದು ಹಾಕುವ ಹುನ್ನಾರಗಳೂ ನಿರಂತರವಾಗಿ ಜಾರಿಗೊಳ್ಳುತ್ತಿರುತ್ತವೆ.

ಒಟ್ಟಾರೆ ಈ ಬಗೆಯ ಬಿಕ್ಕಟ್ಟಿಗೆ ಮೂಲಭೂತ ಕಾರಣಗಳನ್ನು ನಾವೆಲ್ಲಿ ಹುಡುಕಬೇಕು?

ಹೆಚ್ಚೂ ಕಡಿಮೆ ಪ್ರಜೆಗಳೇ ಪ್ರಭುಗಳೆಂಬ ಪರಿಕಲ್ಪನೆಯೇ ಅಳಿಸಿ ಹೋಗಿ ಹಣಬಲ, ತೋಳ್ಬಲವಿರುವ ಪ್ರಭುಗಳೇ ಪ್ರಭುತ್ವದ ವಾರಸುದಾರರೆನ್ನುವ ಕಟು ವಾಸ್ತವವು ಕೇಂದ್ರೀಕರಣಗೊಳ್ಳುತ್ತಿರುವ ವ್ಯವಸ್ಥೆಯೇ? ಅಧಿಕಾರಿಶಾಹಿಯ ಮಾತಿರಲಿ, ಜನಸಾಮಾನ್ಯರೂ ಸಹ ಇನ್ನೂ ರಾಷ್ಟ್ರಪ್ರಭುತ್ವದ, activism-alice-walkerರಾಜಧರ್ಮದ ಗುಂಗಿನಿಂದ ಹೊರಬರಲಾಗದಂತಹ ಗುಲಾಮಿ ಮನಸ್ಥಿತಿಯ ಬೌದ್ಧಿಕ ನೆಲೆಗಳೇ? ಬಾಹ್ಯದ ಜೀವನಕ್ರಮದಲ್ಲಿ ಆಧುನಿಕರಾಗುತ್ತಿದ್ದರೂ ಅಂತರ್ಯದಲ್ಲಿ ಪ್ರಗತಿಪರರಾಗಲು ನಿರಾಕರಿಸುವ ಅಕ್ಷರಸ್ತರ ಕಠೋರ, ಸನಾತನ ಮನಸ್ಸುಗಳೇ? ತಮ್ಮ ಮನಸ್ಸಿಗೆ ಮಂಪರು ಕವಿದಂತೆ ಆಡುತ್ತಿರುವ ಮಧ್ಯಮವರ್ಗದ ಪ್ರಜ್ಞಾವಂತರೇ? ರಾಜ್ಯಾಂಗ ಮತ್ತು ಕಾರ್ಯಾಂಗದ ಪ್ರತಿನಿಧಿಗಳು, ವಕ್ತಾರರು ಸ್ವಹಿತಾಸಕ್ತಿ ಮತ್ತು ಸ್ವಜನ ಪಕ್ಷಪಾತಕ್ಕಾಗಿ ಪರಸ್ಪರ ಒಳ ಒಪ್ಪಂದದ ಮೂಲಕ ಬಹಿರಂಗವಾಗಿಯೇ ಸಂವಿಧಾನವನ್ನೇ ಧಿಕ್ಕರಿಸಿ ಇಡೀ ವ್ಯವಸ್ಥೆಯನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಾಗ ಬುದ್ಧಿಜೀವಿಗಳು, ಅಕಡೆಮಿಕ್ ಚಿಂತಕರು ಇದರ ವಿರುದ್ಧ ಹೇಗೆ ಮುಖಾಮುಖಿಯಾಗುತ್ತಾರೆ? ಈಗಿನಂತೆ ಪ್ರಜಾಪ್ರಭುತ್ವದ ಹಕ್ಕುಗಳನ್ನು ಕೇವಲ ಭಾಷಣಗಳ, ಲೇಖನಗಳ ಮೂಲಕ ಸಮರ್ಥಿಸಿಕೊಳ್ಳುವುದರಲ್ಲೇ ಮೈಮರೆಯುತ್ತಾರೆಯೇ? ಅಥವಾ ಬೌದ್ಧಿಕ ಕಸರತ್ತನ್ನು ಚಣಕಾಲ ಕೈಬಿಟ್ಟು ಸಾರ್ವಜನಿಕವಾಗಿ ಸಕ್ರಿಯವಾಗುತ್ತ ಮುಖ್ಯ ಅಜೆಂಡಾಗಳನ್ನಿಟ್ಟುಕೊಂಡು ತಲೆಮಾರುಗಳನ್ನು ರೂಪಿಸುತ್ತಾರೆಯೇ? ತಮ್ಮ ಅಮೂರ್ತ ಪಾಂಡಿತ್ಯವನ್ನು ಬಳಸಿಕೊಂಡು, ಜನಸಾಮಾನ್ಯರೊಂದಿಗೆ ಬೆರೆಯುತ್ತಾ, ಮಾನವ ಹಕ್ಕುಗಳ ವ್ಯಾಪ್ತಿಯನ್ನು ಬಲಗೊಳಿಸುವತ್ತ ಧೃಢ ಹೆಜ್ಜೆಯನ್ನಿಡುತ್ತ ಸಂವಿಧಾನ ವಿರೋಧಿ ಶಕ್ತಿ ಕೇಂದ್ರಗಳನ್ನು ಅಸ್ಥಿರಗೊಳಿಸಲು ಅಹಿಂಸಾತ್ಮಕವಾಗಿ ಮುನ್ನುಗ್ಗುತ್ತಾರೆಯೇ?

ಧಾರವಾಡ ಸಾಹಿತ್ಯ ಸಂಭ್ರಮ – ಭ್ರಮೆಗಳು

– ಸಂಗಮೇಶ ತುಕ್ಕಾನಟ್ಟಿ

ಧಾರವಾಡದಲ್ಲಿ ಅದೇನೋ  ಸಾಂಸ್ಕೃತಿಕ-ಸಾಮಾಜಿಕ ಅನಾಹುತ ಸಂಭವಿಸುತ್ತಿದೆಯೇನೋ ಎಂಬಂತೆ ಸಾಮಾಜಿಕ ತಾಣಗಳಲ್ಲಿ ಎರಡು-ಮೂರು ದಿನಗಳ ಹಿಂದೆ ಹುಯಿಲೆಬ್ಬಿತು. “ಧಾರವಾಡ ಸಾಹಿತ್ಯ ಸಂಭ್ರಮ”ಕ್ಕೆ ಆಹ್ವಾನಿತರಾಗಿದ್ದ ಅಗ್ರಗಣ್ಯರು ಒಬ್ಬೊಬ್ಬರಾಗಿ ತಾವು ಆ ಕಾರ್‍ಯಕ್ರಮಕ್ಕೆ ಹೋಗುವುದಿಲ್ಲ ಎಂದು ಘೋಷಿಸಿದರು.

ಅವರ ಹೇಳಿಕೆಗಳು..ಅರೇ, ಇಡೀ ಕಾರ್ಯಕ್ರಮವೇ ರದ್ದಾಗುತ್ತದೆಯೇನೋ ಎಂಬ ಗೊಂದಲ ಸೃಷ್ಟಿಸಿದ್ದಂತೂ ನಿಜ. ಒಂದರ್ಥದಲ್ಲಿ ಅಂತಹದೊಂದು ಕಾರ್ಯಕ್ರಮ ನಡೆಯುವ ಬಗ್ಗೆ ಮಾಹಿತಿ ಇಲ್ಲದಿದ್ದ ಅನೇಕರಿಗೆ ಈ ಹೇಳಿಕೆಗಳ ಮೂಲಕ ’ಜ್ಞಾನೋದಯ’ ಆಯಿತು.

ಸಂಘಟಕರು ಹೇಳುವಂತೆ ಅವರು ಜೈಪುರ ಸಾಹಿತ್ಯ ಹಬ್ಬದಿಂದ ಪ್ರೇರಿತರಾಗಿ ಧಾರವಾಡದಲ್ಲಿ ಇಂತಹದೊಂದು ಕಾರ್ಯಕ್ರಮ ಆಯೋಜಿಸಿದ್ದಾರೆ. ಅವರಿಗಾದ ಪ್ರೇರಣೆ ಎಷ್ಟು ಗಾಢವಾಗಿತ್ತೆಂದರೆ, ಜೈಪುರ ಕಾರ್ಯಕ್ರಮದ ಸಂಘಟಕರು ವಿಧಿಸಿದ್ದ ನಿಯಮಾವಳಿಗಳನ್ನೇ ಅನುವಾದ ಮಾಡಿ ಪ್ರಕಟಿಸಿದರು.Dharwad Sahithya Sambrama Broucher - 2 ಸಲ್ಮಾನ್ ರಶ್ದಿಯಂತಹ ವಿವಾದಿತ ಲೇಖಕರು ಭಾಗವಹಿಸುವ ನಿರೀಕ್ಷೆಯಲ್ಲಿ ಅಲ್ಲಿಯ ಸಂಘಟಕರು ತುಸು ಹೆಚ್ಚೇ ಎನ್ನಬಹುದಾದ ನಿಯಮಾವಳಿಗಳನ್ನು ರೂಪಿಸಿಕೊಂಡಿದ್ದರು. ಹಾಗಾಗಿಯೇ ಶಸ್ತ್ರಾಸ್ತ್ರಗಳನ್ನು ತರಬಾರದು ಎನ್ನುವ ಸೂಚನೆಯಿತ್ತು. ಆದರೆ ಧಾರವಾಡದ ಕಾರ್ಯಕ್ರಮಕ್ಕೆ ಅವೆಲ್ಲವೂ ಬೇಕಿಲ್ಲ.

ಅದರಲ್ಲೂ ಕೆಲವು ಸೂಚನೆಗಳಂತೂ ಅಸಂಬದ್ಧ. ಸಭೆಯಲ್ಲಿ ಗಂಭೀರವಾಗಿ ವರ್ತಿಸಬೇಕು.. ಸಭೆಯ ಆಸ್ತಿ ಪಾಸ್ತಿಗಳಿಗೆ ಹಾನಿಮಾಡಿದಲ್ಲಿ ಪ್ರತಿನಿಧಿಗಳೇ ನಷ್ಟ ಭರಿಸಬೇಕು.. ಎನ್ನುವಂತಹ ಮಾತುಗಳ ಅಗತ್ಯವೇನಿತ್ತು? ಇವುಗಳ ಕಾರಣಕ್ಕೆ ಹಲವು ಲೇಖಕರು ಇಡೀ ಕಾರ್ಯಕ್ರಮದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹಲವರ ವಿರೋದಕ್ಕೆ ಮುಖ್ಯ ಕಾರಣ ಆಗಿರುವುದು – ಪ್ರವೇಶ ಶುಲ್ಕ ಮತ್ತು ನಿಯಮಾವಳಿಗಳು. ಅನೇಕರಿಗೆ ಇದು ಜಾಗತೀಕರಣದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ದೊಡ್ಡ ವ್ಯಾಪಾರೀ ಮನೋಭಾವದ ಕಾರ್ಯಕ್ರಮವಾಗಿ ಕಾಣುತ್ತಿದೆ. ಆಹ್ವಾನ ಪತ್ರಿಕೆಯಲ್ಲಿ ಹಲವರಿಗೆ ಜಾಹೀರಾತು ಕಂಪನಿಗಳು ಕಾಣಿಸಿವೆ.

ಆದರೆ ಕಾರ್ಯಕ್ರಮ ಸಂಘಟಕರ ಉತ್ಸಾಹಕ್ಕೂ, ವಿರೋಧ ವ್ಯಕ್ತಪಡಿಸುತ್ತಿರುವವರ ಉಮ್ಮೇದಿಗೂ ತಾಳ-ಮೇಳ ಕಾಣುತ್ತಿಲ್ಲ. ಸಂಘಟಕರ ಉತ್ಸಾಹಕ್ಕಿಂತಲೂ ವಿರೋಧಿಸುವವರ ಉಮ್ಮೇದಿ ತುಸು ಹೆಚ್ಚಾಗಿದೆ. ಅನೇಕರು ತಮ್ಮ ನಿಷ್ಟುರ ಮಾತುಗಳಿಂದ ಸ್ಪಷ್ಟ ಆಲೋಚನೆಗಳಿಂದಲೇ ವಿರೋಧಿಸಿದ್ದರೆ, ಮತ್ತೆ ಕೆಲವರ ಮಾತುಗಳಲ್ಲಿ ಸ್ಪಷ್ಟತೆ ಇಲ್ಲ.

ಕತೆಗಾರ ಕುಂವೀಯವರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ್ದಾರೆ. ವಿಚಿತ್ರ ನೋಡಿ, ಅಮೆರಿಕಾದಲ್ಲಿ ನಡೆದ ಅಕ್ಕ ಕನ್ನಡ ಸಮ್ಮೇಳನಕ್ಕೆ ಭಾಗವಹಿಸಲು ಇವರಿಗೆ ಇಂತಹ ಯಾವ ಮುಜುಗರವೂ ಆಗಲೇ ಇಲ್ಲ. ಅಲ್ಲಿಯ ಸಂಘಟಕರು ನಡೆಸಿದ ಕಾರ್ಯಕ್ರಮ ರೂಪು-ರೇಷೆ ಬೇರೆಯಾಗಿತ್ತೆ? ಇವರೇ ಅನೇಕ ಕಾರ್ಯಕ್ರಮದಲ್ಲಿ, ಆಪ್ತರಲ್ಲಿ ಹೇಳಿಕೊಂಡಂತೆ, ಅವರು ಅಮೆರಿಕಾ ವೀಸಾಗಾಗಿ ಅಮೆರಿಕಾ ಎಂಬೆಸಿ ಮುಂದೆ ಮುಜುಗರ ಅನುಭವಿಸಬೇಕಾಯಿತು. ಅಮೆರಿಕಾದ ಕಾರ್ಯಕ್ರಮಕ್ಕೂ ಕರ್ನಾಟಕ ಸರಕಾರ ಹಣ ನೀಡಿತ್ತು. ಸಾಹಿತಿ, ಕಲಾವಿದರನ್ನು ಅಲ್ಲಿಗೆ ಕಳುಹಿಸುವ ಜವಾಬ್ದಾರಿಯನ್ನು ಹೊತ್ತಿತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೂ ಅಮೆರಿಕಾ ತನಕ ಹೋಗಿಬಂದವರು ಧಾರವಾಡದ ಕಾರ್ಯಕ್ರಮ ವಿರೋಧಿಸುತ್ತಾರೆ ಎಂದರೆ ಅನುಮಾನದಿಂದಲೇ ಗ್ರಹಿಸಬೇಕಾಗುತ್ತದೆ.

ಕರ್ನಾಟಕದಲ್ಲಿ ನೀನಾಸಂ ಪ್ರತಿ ವರ್ಷ ಸಂಸ್ಕೃತಿ ಶಿಬಿರ ನಡೆಸುತ್ತದೆ. ಅದರ ಪ್ರವೇಶ ಶುಲ್ಕ ಈಗ 1,800 ರೂ ಇರಬಹುದು. ನೀನಾಸಂ ಕಾರ್ಯಕ್ರಮಗಳಿಗೂ ಸರಕಾರದ ಅನುದಾನ ಇರುವುದು ಗೊತ್ತಿರುವ ಸಂಗತಿ.

ಈ ಲೇಖಕ ಧಾರವಾಡದ ಸಂಘಟಕರನ್ನು ಸಂಪರ್ಕಿಸಿದಾಗ ತಿಳಿದದ್ದು, ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಐದು ಲಕ್ಷ ರೂಗಳನ್ನು ನೀಡಲು ಒಪ್ಪಿದೆಯಂತೆ. ಉಳಿದಂತೆ ಅವರು ಕೆಲ ಸಂಘ ಸಂಸ್ಥೆಗಳ ಮೊರೆ ಹೋಗಿದ್ದಾರೆ. ಅವರು ಈಗ ಹೇಳುವ ಪ್ರಕಾರ ಕಾರ್ಯಕ್ರಮದ ಒಟ್ಟು ವೆಚ್ಚ 16 ರಿಂದ 18 ಲಕ್ಷ ರೂ ಎಂದು ಅಂದಾಜಿಸಿದ್ದಾರೆ. ಹಾಗಾದರೆ ಸಂಭ್ರಮದ ಅಧ್ಯಕ್ಷರು ಮೊದಲು ತಮ್ಮ ವೆಬ್ ತಾಣದಲ್ಲಿ ಅಂದಾಜು ವೆಚ್ಚ 31 ಲಕ್ಷ ಎಂದು ಹೇಳಿದ್ದೇಕೆ? ವಾದ-ವಿವಾದ ಎದ್ದ ತಕ್ಷಣ ಅಂದಾಜು ವೆಚ್ಚ ಅರ್ಧದಷ್ಟು ಕಡಿಮೆಯಾಯಿತೆ?

ಮತ್ತು ಸರ್ಕಾರದಿಂದ ಪ್ರಾಯೋಜಕತ್ವ ಪಡೆದ ಮೇಲೆ ಇಷ್ಟು ದುಬಾರಿಯಾಗಿ ಪ್ರವೇಶ ಶುಲ್ಕ ಇಡಬೇಕೆ? ಸಂಪನ್ಮೂಲ ವ್ಯಕ್ತಿಗಳು ಮತ್ತು ಪ್ರೇಕ್ಷಕರಿಬ್ಬರೂ ಸೇರಿ ನಾಲ್ಕು ನೂರು ಜನರನ್ನು ದಾಟದ ಈ “ಸಂಭ್ರಮ”ಕ್ಕೆ 16 ಲಕ್ಷ ರೂಪಾಯಿ ಖರ್ಚು ಬರುತ್ತದೆ ಎಂದರೆ, ಒಬ್ಬೊಬ್ಬರಿಗೆ ತಲಾ ನಾಲ್ಕು ಸಾವಿರ ವೆಚ್ಚ ಬೀಳುತ್ತದೆ. ಈ ಕೋನದಿಂದ ನೋಡಿದರೆ, ಯಾವ ಕಾರ್ಯಕ್ರಮಕ್ಕೆ ಮತ್ತು ಯಾರಿಗೆ ಇವರು ಹತ್ತಾರು ಸಾವಿರ ಕೊಟ್ಟು ಕರೆಸಿಕೊಳ್ಳುತ್ತಿದ್ದಾರೆ? ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ?

ದುಡ್ಡು ತೆಗೆದುಕೊಂಡು ಸಾಹಿತ್ಯ ಕಾರ್ಯಕ್ರಮ ಆಯೋಜಿಸುವುದು ಅಕ್ಷಮ್ಯ ಅಪರಾಧವೇನಲ್ಲ. ಆದರೆ, ಸರ್ಕಾರದಿಂದ ದುಡ್ಡು -ಅದು ಯಾವುದೇ ಪ್ರಮಾಣದಲ್ಲಿರಲಿ- ತೆಗೆದುಕೊಂಡಾಗ ಆಯೋಜಕರು ಮತ್ತು ಸರ್ಕಾರ ಇಬ್ಬರೂ ಕೆಲವು ನಿಬಂಧನೆಗಳನ್ನು ಹಾಕಿಕೊಳ್ಳಬೇಕಾಗುತ್ತದೆ. ಅದು ಇಲ್ಲಿ ಆದಂತೆ ಕಂಡುಬರುವುದಿಲ್ಲ.

ಇದೇ ಸಂದರ್ಭದಲ್ಲಿ, ಈ ಕಾರ್ಯಕ್ರಮಕ್ಕೆ ಪ್ರತಿರೋಧವಾಗಿ ಧಾರವಾಡದ ಇನ್ನೊಂದು ಸಾಹಿತಿ-ಬರಹಗಾರರ ವರ್ಗ ಪ್ರತಿ-ಸಮ್ಮೇಳನ ನಡೆಸಲು ಹೊರಟಿದೆ. ಅದು ಕೇವಲ ಈ ವರ್ಷ ನಡೆಸುವುದರ ಬದಲು ಪ್ರತಿ ವರ್ಷ ನಡೆಸಲು ಅಥವ ತಾವೇ ಒಂದು ಪರ್ಯಾಯ ಕೊಡಲು ಸಾಧ್ಯವಾಗಿದ್ದೇ ಆದರೆ ಅವರ ಪ್ರಾಮಾಣಿಕತೆಗೂ ಬೆಲೆ ಬರುತ್ತದೆ.

ಈ ವಿಷಯದ ಕಾರಣದಿಂದಲಾದರೂ ಬಹಳ ದಿನಗಳಿಂದ ನಿದ್ದೆ ಹೋದಂತಿದ್ದ ಧಾರವಾಡದ ಕನ್ನಡ ಸಾಂಸ್ಕೃತಿಕ ಲೋಕ ಕನ್ನಡ ಮತ್ತು ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಗತ್ಯಗಳ ಬಗ್ಗೆ ಕ್ರಿಯಾಶೀಲವಾಗುವುದಾದರೆ, ಒಳ್ಳೆಯದೇ.

ನ್ಯಾಯವು ಅನ್ಯಾಯ, ಅನ್ಯಾಯವೇ ನ್ಯಾಯ

-ಮಹದೇವ ಹಡಪದ ಸಾಲಾಪೂರ

ಭಾರತದಲ್ಲಿ ಶಿಕ್ಷೆಯನ್ನು ಕೊಡಬೇಕಾದವರು ಮತ್ತು ಕೊಡಿಸಬೇಕಾದವರು ಮಧ್ಯವರ್ತಿಗಳಂತೆ ದಲ್ಲಾಳಿಗಳಾಗಿರುತ್ತಾರೆ. ಅನ್ಯಾಯ, ವಂಚನೆ, ಮೋಸ, ಕ್ರೌರ್ಯ, ಸುಲಿಗೆಗಳೆಲ್ಲವನ್ನು ಇಂಥ ದಲ್ಲಾಳಿಗಳು ಮುಚ್ಚಿ ಹಾಕುವ ಸಲುವಾಗಿ ಹೊಂದಾಣಿಕೆಯ ಸೂತ್ರವೊಂದನ್ನು ಮುಂದಿಟ್ಟುಕೊಂಡು ವ್ಯಾಜ್ಯಗಳನ್ನು ಅಳಿಸಿ ಹಾಕಿಬಿಡುತ್ತಾರೆ. ನಮ್ಮ ಹಳ್ಳಿ ಕಡೆಗೆ ಹೀಗೆ ವ್ಯವಹರಿಸಲು ಮುಂದಾಗುವ ಮಹಾಶಯರನ್ನು ನರಿಬುದ್ಧಿ ಚತುರರೆಂದು, ನರಿಮನಿ ವಕೀಲರೆಂದು ಗುರುತಿಸಲ್ಪಡುತ್ತಾರೆ. ಆದರೆ ಹಾಕಿರುವ ಬೇಲಿಯೇ ಒಬ್ಬರ ಪರವಾಗಿ ನಿಂತು ಇನ್ನೊಬ್ಬರನ್ನು ಪರಿಹಾರದ ಖೆಡ್ಡಾಕ್ಕೆ ಕೆಡವಿ ಅನ್ಯಾಯದ ಪರ ಸಬೂಬು ಹೇಳುವಂತ ಘಟನೆಗಳು ಎಲ್ಲ ವ್ಯಾಜ್ಯಗಳ ಮೂಲದಲ್ಲಿ ನಡೆದಿರುತ್ತದೆ ಅನ್ನುವುದು ಮುಸುಕಿನೊಳಗಿನ ಮಾತು. ಬಲಿಷ್ಠರ ಬೆನ್ನು ಕಾಯುವ ಇಂಥ ಸಮೂಹಗಳ ದೈವಾಧಾರಿತ ನ್ಯಾಯಮಂಡಳಿಗಳು ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಾದ ಮೇಲೆ ನ್ಯಾಯ ಕೇಳಿ ಸರಕಾರದ ಕಡತಗಳಲ್ಲಿ ಅನ್ಯಾಯಗಳು ದಾಖಲುಗೊಳ್ಳುತ್ತವೆ. ಹಾಗೆ ದಾಖಲಾಗುವ ಸಂದರ್ಭದಲ್ಲೂ ಲಾಬಿಗಳು ನಡೆಯುವ ಕಾರಣದಿಂದ ಎಷ್ಟೋ ತಕರಾರುಗಳನ್ನ ಪೋಲಿಸರೇ ತಳ್ಳಿ ಹಾಕಿಬಿಡುವ ಸಂಗತಿಗಳು ದಾಖಲಾಗದ ಭಾರತದ ಇತಿಹಾಸದಲ್ಲಿ ನಡೆದು ಹೋಗಿವೆ.

ಈ ಹಳ್ಳಿಗಳ ಹೊಟ್ಟೆಯನ್ನು ಬಗೆದರೆ ಅದೆಷ್ಟು ಅತ್ಯಾಚಾರಗಳು ಮಾನ ಮರ್ಯಾದೆಯ ಹೆಸರಲ್ಲಿ ಗಪ್ಪುಗಾರಾಗಿಲ್ಲ…? ಕಾಣೆಯಾಗಿದ್ದಾರೆ, ಆತ್ಮಹತ್ಯೆ ಎಂಬ ಹೆಸರಿನಲ್ಲಿ ಅದೇಸೊಂದು ಮರ್ಯಾದೆ ಹತ್ಯೆಗಳು ನಡೆದಿಲ್ಲ…? ಇಂಥಪ್ಪ ಕಥನಗಳು ಗೊತ್ತಿದ್ದರೂ ಸಂಸ್ಕೃತಿಯ ಹೆಸರಿನಲ್ಲಿ ಭಾರತದ ಪರ ವಕಾಲತ್ತು ವಹಿಸಿ ಮಾತನಾಡುವ ಮೂರ್ಖರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿರುತ್ತಾರೆ.

ನ್ಯಾಯ ಕಟ್ಟೆ, ಮಠದ ಅಂಗಳ, ಗ್ರಾಮ ಚಾವಡಿ, ಪಂಚಾಯತ್ ಕಟ್ಟೆಯಿಂದ ಹೊರಬಿದ್ದ ಗ್ರಾಮಭಾರತದ ಜನ ಈಗ ಪ್ರಜ್ಞಾವಂತರಾಗಿದ್ದು ಎಲ್ಲ sowjanya-rape-murderವ್ಯಾಜ್ಯಗಳನ್ನ ಕೋರ್ಟು ಕಟಕಟೆಗೆ ಎಳೆದು ತಂದು ನ್ಯಾಯ ಕೇಳಲು ಮುಂದಾಗುತ್ತಿದ್ದಾರೆ. ಆದರೆ ಪೋಲೀಸರು ಇವತ್ತಿನ ದಿನಮಾನದಲ್ಲಿ ಉಳ್ಳವರ, ಅನ್ಯಾಯದ ಪರವಹಿಸಿ ವ್ಯಾಜ್ಯಗಳನ್ನು ಬಗೆಹರಿಸುವ ಪ್ರಕರಣಗಳು ಎಗ್ಗಿಲ್ಲದೆ ನಡೆಯುತ್ತಿರುವುದಕ್ಕೆ ಈ ದಲ್ಲಾಳಿಗಳು ಕುಮ್ಮಕ್ಕು ಕೊಡುತ್ತಿದ್ದಾರೆ. ಎರಡು ಕೋಮಿನ, ಜಾತಿ-ಜನಾಂಗಗಳ, ಊರುಗಳ, ಪಂಗಡಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳಗಳಾದಾಗ ಸಾಮಾಜಿಕ ವಾತಾವರಣವನ್ನು ತಿಳಿಗೊಳಿಸಲು ಇಂಥ ಹೊಂದಾಣಿಕೆಗಳು ನಡೆಯುತ್ತವಲ್ಲ ಅದು ಉತ್ತಮವಾದ ಯೋಚನೆ ಅನ್ನಬಹುದು. ಆದರೆ ಅತ್ಯಾಚಾರಕ್ಕೊಳಗಾದವಳು, ಅನ್ಯಾಯಕ್ಕೊಳಗಾದ ವ್ಯಕ್ತಿ, ನ್ಯಾಯ ಕೊಡಿಸಿ ಎಂದು ಠಾಣೆಗೆ ಬಂದರೆ ಅಂಥವರ ಮೂಗಿಗೆ ತುಪ್ಪ ಸವರಿ ಇಡೀ ಪ್ರಕರಣವನ್ನು ಇಲ್ಲವಾಗಿಸುವ ನೀಚತನ ಅಸಹ್ಯ ಹುಟ್ಟಿಸುವಂತದ್ದು. ಇದು ಪ್ರಜಾಪ್ರಭುತ್ವದ ಆಂತರ್ಯವನ್ನು ಸಡಿಲುಗೊಳಿಸುತ್ತದೆ. ತುಂಬು ಗರ್ಭಿಣಿಯಾದ ಬೆಕ್ಕು ಎಳೆಂಟು ಮರಿಗಳಿಗೆ ಜನ್ಮಕೊಟ್ಟ ತಕ್ಷಣದಲ್ಲಿಯೇ ಮೂರು ನಾಲ್ಕು ಮರಿಗಳನ್ನು ತಾನೇ ತಿಂದು ಸದೃಢವಾಗುವ ಹಾಗೆ ವ್ಯವಸ್ಥೆಯನ್ನು ಒಳಗೊಳಗೆ ನುಂಗಿಹಾಕುವ ಈ ಕೆಟ್ಟ ಚಾಳಿಯೂ ಭಾರತದಿಂದ ಪ್ರಚೋದಿತವಾಗಿ ಉಳಿದುಕೊಂಡು ಬಂದಿದೆ ಹೊರತು ಪಾಶ್ಚಾತ್ಯದಿಂದ ಬಂದುದಲ್ಲ. ವ್ಯವಸ್ಥೆ ಹೊಸಕಿದ ಒಂದೆರಡು ಘಟನೆಗಳನ್ನು ಇಲ್ಲಿ ಹಂಚಿಕೊಳ್ಳಬಯಸುತ್ತೇನೆ.

1) ಹದಿನೈದು ವರ್ಷದ ಹಿಂದೆ ದೆಹಲಿ ಅತ್ಯಾಚಾರಕ್ಕಿಂತಲೂ ಘೋರವಾದ ಅತ್ಯಾಚಾರವೊಂದು ತಾಲ್ಲೂಕು ಕೇಂದ್ರದಿಂದ ಇಪ್ಪತ್ತೈದು ಕಿ.ಮೀ. ದೂರದ ಒಂದು ಹಳ್ಳಿಯಲ್ಲಿ ನಡೆದು ಹೋಗಿತ್ತು. ನಾಲ್ಕೈದು ಜನರ ಗುಂಪು ಒಂದು ವಾರಕಾಲ ಬಿಟ್ಟುಬಿಡದೆ ನಿರಂತರ ಘಾಸಿಗೊಳಿಸಿದ್ದರು. ಅವಳ ಸಹಾಯಕ್ಕೆ ಪ್ರಿಯಕರನೂ ಇರಲಿಲ್ಲ, ತಾಯ್ತಂದೆಯರೂ ಬರಲಿಲ್ಲ. ಮಗಳು ಕಾಣೆಯಾಗಿದ್ದಾಳೆಂದು ಪೋಲಿಸರಲ್ಲಿ ದೂರು ಕೊಟ್ಟಾದ ಮೇಲೆ ಆಕೆಯನ್ನ ಊರ ಹೊರಗೆ ಬಿಸಾಡಿಯೂ ಹೋಗಿರಲಿಲ್ಲ. ಯಾರದೋ ಜೊತೆ ಓಡಿ ಹೋಗಿದ್ದಾಳೆಂದು ಊರವರೆಲ್ಲ ಮಾತಾಡುತ್ತಿದ್ದಾಗ ಆಕೆ ಗೌಡರ ಕಬ್ಬಿನ ತೋಟದ ನಡುವೆ ಮೈ-ಮನ ಸೋತು ಗಂಡಸಿನ ಕ್ರೌರ್ಯಕ್ಕೆ ಶರಣಾಗಿ ಒರಗಿದ್ದಳು. ನಾನು ಕಂಡಂತೆ ಆ ಹುಡುಗಿ ಮೈತುಂಬ ಬಟ್ಟೆ ತೊಟ್ಟು, ಅಣ್ಣ, ಚಿಕ್ಕಪ್ಪ, ದೊಡಪ್ಪ ಎಂದು ನೀತಿ ಹಿಡಿದು ಮಾತಾಡುವುದರಲ್ಲಿ ಎಂದೂ ದಾರಿ ತಪ್ಪಿರಲಿಲ್ಲ. ಕುರಿ ಕಾಯುವ ಹುಡುಗನೊಬ್ಬ ಈ ನಾಲ್ಕೈದು ಜನ ಆ ಕಬ್ಬಿನ ಗದ್ದೆಗೆ ಹೋಗಿಬರುತ್ತಿರುವುದನ್ನು ನೋಡಿ ನೋಡಿ, ಆ ಜಾಗ ಪತ್ತೆ ಹಚ್ಚಿ ಊರವರಿಗೆ ಸುದ್ದಿ ಮುಟ್ಟಿಸಿದ ಮೇಲೆ ಊರೆಲ್ಲ ಗುಲ್ಲೆದ್ದಿತ್ತು. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಕ್ಕ ನಂತರ ಆಕೆ ಬದುಕಿ ಬಂದಿದ್ದಳು. ಆದರೆ ಊರಿನ ದೈವ ಮತ್ತು ಪೋಲೀಸರ ಎದುರಿನಲ್ಲಿ ಪರಿಹಾರದ ರೂಪದ ಹೊಂದಾಣಿಕೆ ಸೂತ್ರಕ್ಕೆ ಒಪ್ಪಿಕೊಂಡ ಆ ಅಪರಾಧಿಗಳು ಆ ಪ್ರಕರಣದಿಂದ ನುಣುಚಿಕೊಂಡಿದ್ದರು. ಆಕೆ ತೀರ್ಮಾನ ಯಾರಿಗೂ ಬೇಕಿರಲಿಲ್ಲ. ಅವರು ಈಡುಗಂಟಾಗಿ ನೀಡಿದ್ದ ಹಣಕ್ಕೆ ಅವಳು ಬಲಿಪಶುವಾಗಿದ್ದಳು. ಮುಂದಿನ ಕಥೆಯಲ್ಲಿ ಅವಳೇ ಸತ್ತಳೋ… ಯಾರಾದರೂ ಹೊಡೆದು ಉರುಲು ಹಾಕಿದರೋ… ಆಕೆ ಹೆಣವಾಗಿ ಹಗ್ಗಕ್ಕೆ ಶರಣಾಗಿದ್ದಳು. ಆ ಎಲ್ಲ ಪುಢಾರಿಗಳಲ್ಲಿ ಕೆಲವರು ಈಗ ಊರಿನಲ್ಲಿ ಓಣಿ ಮೆಂಬರ್ರುಗಳಾಗಿ ಸುಖವಾಗಿದ್ದಾರೆ. ದೆಹಲಿ ಅತ್ಯಾಚಾರವನ್ನು ಚಡ್ಡಿಗಳ ರೀತಿಯಲ್ಲಿಯೇ ಸಮರ್ಥಿಸಿಕೊಳ್ಳುತ್ತಿದ್ದಾರೆ. ಇಂಥ ಇವರು ಗೋಡ್ಸೆ ಭಕ್ತ/ಪ್ರಿಯ ದೇಶಪ್ರೇಮಿಗಳಂತೆ ಪೋಸು ಕೊಡುತ್ತಿರುವುದು ಇಂಡಿಯಾದ ವರ್ಚಸ್ಸಾಗಿದೆ.

2) ನಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬಳಿಗೆ ತೀವ್ರ ಉಬ್ಬಸವಾಗಿ ಉಸಿರೇ ನಿಂತು ಹೋದಂತಾಗಲು ನಾನು ನನ್ನೊಂದಿಗೆ ಇಬ್ಬರು ವಿದ್ಯಾರ್ಥಿ ಮಿತ್ರರ ಸಹಾಯದಿಂದ ಹೊಸದುರ್ಗದ ಸರಕಾರಿ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ದೆವು. ಆಗ ರಾತ್ರಿ 11:40. ಆದ್ದರಿಂದ ಹೊಸದುರ್ಗದ ಪ್ರಮುಖ ರಸ್ತೆಗಳು ಸ್ತಬ್ಧವಾಗಿ ನಿದ್ದೆ ಹೋದಂತಿದ್ದವು. ಆ ಹುಡುಗಿಗೆ ಆಕ್ಸಿಜೆನ್ ಹಾಕಿ ಬೆಡ್‍ರೆಸ್ಟ್ ಮಾಡಲು ಬಿಟ್ಟು ಹೊರ ಹೋದ ಶ್ರೀಧರ್ ಡಾಕ್ಟರ್ ತರಾತುರಿಯಲ್ಲಿ ಡ್ರಿಪ್ ಹಾಕಲು ಹಿಂದೆ ಮುಂದೆ ಓಡಾಡುತ್ತಿದ್ದರು. ಏನದು ಎಂದು ತಿರುಗಿ ನೋಡುವುದರೊಳಗೆ ಸರಿಸುಮಾರು ಮುವ್ವತ್ತೈದು ವರ್ಷದ ಹೆಂಗಸೊಬ್ಬಳನ್ನು ಐದಾರು ಜನ ಗಂಡಸರೊಂದಿಗೆ ಕರೆದುಕೊಂಡು ಬಂದು ಹಾಸಿಗೆ ಮೇಲೆ ಮಲಗಿಸಿದರು. ಬೆನ್ನಲ್ಲೆ ಮೂರು ಜನ ಗಂಡಸರೊಂದಿಗೆ ಪೋಲೀಸ ವ್ಯಾನೂ ಬಂದಿತ್ತು.

ಗಡಸು ಧ್ವನಿಯಲ್ಲಿ ಅವರನ್ನು ವಿಚಾರಿಸುತ್ತಿದ್ದ ಕ್ರಮದಿಂದಲೇ ಆ ಮೂವರು ಕಾಮುಕರು ಆಕೆಯ ಮೇಲೆ ಎರಗಿದ್ದರೆಂಬುದು ತಿಳಿಯುತ್ತಿತ್ತು. ಆ ಕ್ರೂರಿಗಳ ಬಗ್ಗೆ ಆಕೆಯ ಮನೆಯವರು ಆಕ್ರೋಶಭರಿತರಾದ್ದರಿಂದ ಅಪರಾಧಿಗಳನ್ನು ಕೂಡಲೆ ಠಾಣೆಗೆ ಕರೆದೊಯ್ಯಲಾಯಿತು. ತಡರಾತ್ರಿಯಾದ್ದರಿಂದ ವಿದ್ಯಾರ್ಥಿನಿಯನ್ನ ಮತ್ತವಳ ಜೊತೆಗೆ ಇಬ್ಬರನ್ನು ಅಲ್ಲಿಯೇ ಬಿಟ್ಟು ಉಳಿದ ನಾವೆಲ್ಲ ತಿರುಗಿ ಹಳ್ಳಿಗೆ ಹೊರಟೆವು. ಆ ದಿನದ ನಿದ್ದೆಯನ್ನ ಆ ಹೆಂಗಸಿನ ದೈನೇಸಿ ಸ್ಥಿತಿ ಕದ್ದಿದ್ದ ಕಾರಣಕ್ಕೆ ದೆಹಲಿ ಅತ್ಯಾಚಾರ, ಹಾಸನ, ಚಿಕ್ಕಮಗಳೂರು, ಕುಂದಾಪೂರ, ಬೆಂಗಳೂರು ಹೀಗೆ ಕಳೆದ ಹದಿನೈದು ದಿನದಿಂದ ಸುದ್ದಿಯಾಗುತ್ತಲಿರುವ ಎಲ್ಲ ಘಟನೆಗಳು ಮತ್ತೆ ನೆನಪಾಗುತ್ತಲಿದ್ದವು. ಆದರೆ ಮರುದಿನ ನಾನು ಕೇಳಿದ ಸುದ್ದಿ ಇಡೀ ಪ್ರಕರಣವನ್ನು ಮುಚ್ಚಿಹಾಕಿತ್ತು. ರಾತ್ರಿ ಸಂಭವಿಸಿದ ಆ ಅತ್ಯಾಚಾರ ಬೆಳಗಾಗುತ್ತಲೆ ಹಣಕಾಸಿನ ಹೊಂದಾಣಿಕೆಯಲ್ಲಿ ಮುಕ್ತಾಯವಾಗಿತ್ತು.

ಇದು ಈ ಭಾರತದ ತಮಸ್ಸಿನಲ್ಲಿ ಜರುಗಿರುವ ದುರಂತ ಕಥನಗಳ ಒಂದೆರಡು ಸಣ್ಣ ಉದಾಹರಣೆಗಳು. ನ್ಯಾಯಾಂಗದಲ್ಲಿನ ಕೆಲವು ಅನ್ಯಾಯಗಳ ಕುರಿತಾಗಿ ಬ್ರೆಖ್ಟ್ ಒಂದಂಕಿನ ಸುಂದರವಾದ “ಎಕ್ಸಪ್ಷನ್ ಆ್ಯಂಡ್ ದಿ ರೂಲ್” ಎಂಬ ನಾಟಕವೊಂದನ್ನು ಬರೆದಿದ್ದಾರೆ. The_Bulgarian_rapeಏನೂ ತಪ್ಪು ಮಾಡದಿರುವ ಕೂಲಿಯಾಳಿನ ವಿರುದ್ಧವೇ ತೀರ್ಪನ್ನು ಕೊಟ್ಟು ಬಿಡುವ ಆ ಸಂದರ್ಭ ಮೇಲುನೋಟಕ್ಕೆ ಅನ್ಯಾಯ ಅನ್ನಿಸಿದರೂ ಕೊಲೆಯಾಗುವ ಮುಂಚೆ ಕೂಲಿಯಾಳು ಸಂಶಯ, ಗುಮಾನಿಗಳಿಗೆ ಆಸ್ಪದ ಕೊಡುವ ರೀತಿಯಲ್ಲಿ ನಡೆದುಕೊಂಡದ್ದು ಉಳ್ಳವನ ಪರವಾಗಿ ವಾದ ಗೆಲ್ಲಲು ಕಾರಣವಾಗಿಬಿಡುವ ಸಾಮಾಜಿಕ ವ್ಯಂಗ್ಯ ನಾಟಕದಲ್ಲಿದೆ. ಅಂತೆಯೇ ನಮ್ಮಲ್ಲಿನ ಈ ಒಳ ಒಪ್ಪಂದದ ಸೂತ್ರಗಳು ನ್ಯಾಯಾಲಯದ ಮೆಟ್ಟಿಲೇರಲಿಕ್ಕೆ ಬಿಡದಿರುವುದು ನ್ಯಾಯಾಂಗವನ್ನು ಅವಮಾನಿಸಿದಂತಹ ನೀಚತನದ ಕೆಲಸವಾಗುತ್ತದೆ. ಇಂಥ ವ್ಯವಸ್ಥೆಯ ವಿರುದ್ಧ ಹೋರಾಡಿದಾಗ ಪ್ರಬಲ ಕಾನೂನುಗಳು ಒಂದಷ್ಟು ಜನರ ಬದುಕಿಗೆ ಸಹಾಯವಾಗಬಹುದು.

ಪ್ರಜಾ ಸಮರ – 18 (ನಕ್ಸಲ್ ಕಥನ)


– ಡಾ.ಎನ್.ಜಗದೀಶ್ ಕೊಪ್ಪ


 

ಕರ್ನಾಟಕಕ್ಕೆ ನಕ್ಸಲ್ ಚಳುವಳಿ ಕಾಲಿಟ್ಟು ಒಂದು ದಶಕ ಕಳೆಯಿತು. ಹಲವು ಕನಸು ಮತ್ತು ಆದರ್ಶಗಳನ್ನು ನಕ್ಸಲ್ ಚಳುವಳಿಯ ಜೊತೆ ಹೊತ್ತು ತಂದ ಸಾಕೇತ್ ರಾಜನ್ ಈಗ ನಮ್ಮ ನಡುವೆ ಇಲ್ಲ. ಸಾಕೇತ್ ನಂತರ ತಂಡವನ್ನು ಮುನ್ನೆಡೆಸುತ್ತಿದ್ದ ನೂರ್ ಜುಲ್ಫಿಕರ್ ಅಲಿಯಾಸ್ ಶ್ರೀಧರ್ ಎಂಬುವವರು ಕೂಡ ಈಗ ಹೋರಾಟವನ್ನು ತೊರೆದು ಹೊರ ಬಂದಿದ್ದಾರೆ, ಅಲ್ಲದೇ ತಮ್ಮ 25 ವರ್ಷಗಳ ನಕ್ಸಲ್ ಹೋರಾಟದ ಹಿನ್ನೆಲೆಯಲ್ಲಿ “ಭಾರತದ ಕ್ರಾಂತಿ ಮತ್ತು ಮಾವೋವಾದಿ ಚಳವಳಿ” ಎಂಬ ಕೃತಿಯನ್ನು ಹೊರತಂದಿದ್ದು, ಈ ಕೃತಿಯಲ್ಲಿ ಭಾರತದ ನಕ್ಸಲ್ ಹೋರಾಟವನ್ನು ವಿಮರ್ಶೆಗೆ ಒಡ್ಡಿದ್ದಾರೆ. ಆನಂತರ ನಾಯಕತ್ವ ವಹಿಸಿದ್ದ ಕೃಷ್ಣಮೂರ್ತಿ ಅನಾರೋಗ್ಯಕ್ಕೆ ತುತ್ತಾದರೆ, ನಂತರ ವ್ಯಕ್ತಿ ವಿಕ್ರಮ್ ಗೌಡ ಪೊಲೀಸರಿಗೆ ಬಲಿಯಾಗಿದ್ದಾನೆ.

ಕಳೆದ ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ನಡೆದ ಪೊಲೀಸರು ಮತ್ತು ನಕ್ಸಲರ ನಡುವಿನ ಸಂಘರ್ಷದಲ್ಲಿ 25 ಕ್ಕೂ ಹೆಚ್ಚು ಮಂದಿಯಷ್ಟು ಹತ್ಯೆಯಾಗಿದ್ದಾರೆ. ಇವರಲ್ಲಿ ಇಬ್ಬರು ಪೊಲೀಸ್ ಮಾಹಿತಿದಾರರು (ಶೇಷಯ್ಯ ಮತ್ತು ಸುಧಾಕರಗೌಡ ?) ಹಾಗೂ ಕಾಂಗ್ರೆಸ್ ಮುಖಂಡ ವೆಂಕಟೇಶ್ ನಕ್ಸಲರಿಂದ ಹತ್ಯೆಯಾಗಿದ್ದಾರೆ. ಇಬ್ಬರು ಗಿರಿಜನ ದಂಪತಿಗಳು (ರಾಮೇಗೌಡ ಮತ್ತು ಕಾವೇರಮ್ಮ) ಪೊಲೀಸರು ಮತ್ತು ನಕ್ಸಲರ ನಡುವಿನ ಗುಂಡಿನ ದಾಳಿಯಲ್ಲಿ ಬಲಿಯಾದ ಅಮಾಯಕರು. ಸಾಕೇತ್ ರಾಜನ್, ಶಿವಲಿಂಗು, ಸುಂದರೇಶ್, ವಿಕ್ರಮ್ ಗೌಡ, ವಸಂತ್ ಗೌಡ, ನಾರವಿ ದಿವಾಕರ್, ಅಜಿತ್ ಕುಸುಬಿ, ಉಮೇಶ್, ಹಾಜಿಮಾ, ಪಾರ್ವತಿ, ಗೌತಮ್ ಪರಮೇಶ್ವರ್, ಎಲ್ಲಪ್ಪ, ಸೇರಿದಂತೆ ಒಟ್ಟು ಹದಿನೈದು ಮಂದಿ ಶಂಕಿತ ನಕ್ಸಲರು ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ನಕ್ಸಲರ ಗುಂಡಿಗೆ ಅಸಿಸ್ಟೆಂಟ್ ಪೊಲೀಸ್‌ ಇನ್ಸ್‌ಪ್ಪೆಕ್ಟರ್ ವೆಂಕಟೇಶ್ ಮತ್ತು ಪೇದೆ ಗುರುಪ್ರಸಾದ್ ಹಾಗೂ ಗುಂಡಿನ ಚಕಮಕಿ ವೇಳೆ ಪೊಲೀಸರ ಗುಂಡು ತಗುಲಿದ ಮಹಾದೇವ ಮಾನೆ ಎಂಬ ಪೇದೆಯೂ ಸೇರಿದಂತೆ (ಪಶ್ಚಿಮಘಟ್ಟದ ಅರಣ್ಯದಲ್ಲಿ) ಒಂಬತ್ತು ಮಂದಿ ಪೊಲೀಸರು ಹತರಾಗಿದ್ದಾರೆ. ಇವರಲ್ಲಿ ಕರ್ನಾಟಕ ಸಶಸ್ತ್ರ ಮೀಸಲು ಪಡೆಯ ಆರು ಪೊಲೀಸರು ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೆಂಕಮನಹಳ್ಳಿಯಲ್ಲಿ ಹತರಾದರು. ಇವರ ಜೊತೆ ಓರ್ವ ಬಸ್ ಕ್ಲೀನರ್ ಕೂಡ ನಕ್ಸಲರ ಗುಂಡಿಗೆ ಬಲಿಯಾದ.

ಹತ್ತು ವರ್ಷಗಳ ಹಿಂದೆ ಪಶ್ಚಿಮ ಘಟ್ಟದ ಅರಣ್ಯ ರಕ್ಷಣೆ ಮತ್ತು ಕುದುರೆ ಮುಖ ಅಭಯಾರಣ್ಯ ಯೋಜನೆಯಿಂದ ನೆಲೆ ಕಳೆದುಕೊಳ್ಳುತ್ತಿರುವ ಸ್ಥಳೀಯ ಬುಡಕಟ್ಟು western ghatsಜನರಿಗೆ ನ್ಯಾಯ ಕೊಡಿಸಲು ಪಶ್ಚಿಮ ಘಟ್ಟದ ಅರಣ್ಯಕ್ಕೆ ನಕ್ಸಲರು ಕಾಲಿಟ್ಟ ನಂತರ ಅಭಿವೃದ್ಧಿಗಿಂತ ಅನಾಹುತಕ್ಕೆ ದಾರಿಯಾಯಿತೆಂದು ಹೇಳಬಹುದು. ಹೆಚ್ಚು ಮಾವೋವಾದಿಗಳು ಪಶ್ಚಿಮಘಟ್ಟಕ್ಕೆ ಕಾಲಿಡುವ ಮುನ್ನವೇ ಅನೇಕ ಜನಪರ ಸಂಘಟನೆಗಳು ಮತ್ತು ಪರಿಸರವಾದಿಗಳು ಈ ಸಮಸ್ಯೆಯನ್ನು ಕೈಗೆತ್ತಿಕೊಂಡು ಹೋರಾಡುತ್ತಿದ್ದರು. ಇವರಲ್ಲಿ ಕಲ್ಕುಳಿ ವಿಠಲ ಹೆಗ್ಡೆ ಮುಖ್ಯರಾದವರು. ನಕ್ಸಲರು ಈ ಪ್ರದೇಶಕ್ಕೆ ಬಂದ ನಂತರ ಎಲ್ಲರನ್ನೂ ನಕ್ಸಲರಂತೆ ಭಾವಿಸುವ, ಕಾಣುವ ಮನೋಭಾವವನ್ನು ಕರ್ನಾಟಕ ಪೊಲೀಸರು ಬೆಳಸಿಕೊಂಡರು. ಇದರಿಂದಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಇದ್ದುಕೊಂಡು ಹೋರಾಟ ನಡೆಸುತ್ತಿದ್ದ ಹೋರಾಟಗಾರರಿಗೆ ತೀವ್ರ ಹಿನ್ನಡೆಯಾಯಿತು.

ಅರಣ್ಯದ ಆದಿವಾಸಿಗಳ ಹಿತ ಕಾಪಾಡಲು ಬಂದ ನಕ್ಸಲರು ಇಂದು ಅರಣ್ಯವಾಸಿಗಳ ಹಿತ ಕಾಪಾಡುವುದಿರಲಿ, ತಮ್ಮ ಹಿತ ಕಾಪಾಡಿಕೊಳ್ಳುವುದು ಕಷ್ಟವಾಗಿದೆ. ಇವರು ನಿರೀಕ್ಷೆ ಮಾಡಿದಷ್ಟು ಪ್ರೋತ್ಸಾಹ ಸ್ಥಳಿಯರಿಂದ ಸಿಗಲು ಸಾಧ್ಯವಾಗದೇ ಅಕ್ಷರಶಃ ಅತಂತ್ರರಾಗಿದ್ದಾರೆ. ಇದರ ಜೊತೆಯಲ್ಲೇ ಪಶ್ಚಿಮ ಘಟ್ಟದ ಚಿಕ್ಕಮಗಳೂರು, ಮಂಗಳೂರು, ಉಡುಪಿ, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಅರಣ್ಯದಂಚಿನಲ್ಲಿ ಬದುಕುತ್ತಿರುವ ಬಡಜನತೆಯನ್ನು ಆತಂಕದ ಮಡುವಿಗೆ ನೂಕಿದ್ದಾರೆ. ಈ ಪ್ರದೇಶಗಳಲ್ಲಿ ಒಬ್ಬ ಸಾಮಾನ್ಯ ಬಡವ ಸ್ಥಳಿಯ ದಿನಸಿ ಅಂಗಡಿಗೆ ಹೋಗಿ ಐದು ಕೆ.ಜಿ. ಅಕ್ಕಿ ಅಥವಾ ಒಂದು ಕೆ.ಜಿ. ಸಕ್ಕರೆ ಕೊಂಡರೆ, ಇಲ್ಲವೇ ಅರ್ಧ ಕೆ.ಜಿ. ಚಹಾ ಪುಡಿ ಖರೀದಿ ಮಾಡಿದರೆ, ತನ್ನ ಮನೆಗೆ ಹಿಂತಿರುಗುವ ದಾರಿಯಲ್ಲಿ ಅಥವಾ ಬಸ್‌ನಲ್ಲಿ ಎದುರಾಗುವ ಗುಪ್ತ ದಳದ ಪೊಲೀಸರಿಂದ ನೂರಾರು ಪ್ರಶ್ನೆಗಳನ್ನು ಎದುರಿಸಬೇಕಾಗಿದೆ. ಸಮರ್ಪಕ ಉತ್ತರ ನೀಡದಿದ್ದರೆ ನಕ್ಸಲರ ಬೆಂಬಲಿಗ ಎಂಬ ಆರೋಪದಡಿ ಪೊಲೀಸರ ಕಿರುಕುಳ ಅನುಭವಿಸಬೇಕಾಗಿದೆ.‍

ಕರ್ನಾಟಕದ ಅರಣ್ಯದಲ್ಲಿ ಹೋರಾಡುತ್ತಿರುವ ಅಥವಾ ಇರಬಹುದಾದ ಇಪ್ಪತ್ತು ಮಂದಿ ನಕ್ಸಲರಲ್ಲಿ ವಿಚಾರಧಾರೆ ಹಿನ್ನೆಲೆ ಇರುವ ವ್ಯಕ್ತಿಗಳು ತೀರಾ ಕಡಿಮೆ. ಸಾಕೇತ್ ರಾಜನ್ ದಾಳಿಯ ಸಂದರ್ಭದಲ್ಲಿ ಕಾಲಿಗೆ ಗುಂಡು ತಗುಲಿ ಅಪಾಯದಿಂದ ಪಾರಾಗಿದ್ದ ನೂರ್ ಜುಲ್ಫಿಕರ್ ಅಲಿಯಾಸ್ ಶ್ರೀಧರ್ ಎಂಬುವವರು ಕೆಲವು ಸದಸ್ಯರ ಜೊತೆ ಹೋರಾಟ ತೊರೆದು ಹೊರಬಂದ ನಂತರ ಈಗನ ಹೋರಾಟಗಾರರಲ್ಲಿ ಸೈದ್ಧಾಂತಿಕ ನಿಲುವುಗಳು ಇದ್ದಂತಿಲ್ಲ. ಸಾಕೇತ್ ನಿಧನದ ನಂತರ ಕರ್ನಾಟಕದ ಉಸ್ತುವಾರಿ ಹೊತ್ತಿದ್ದ ಚುರುಕುರಿ ರಾಜ್‌ಕುಮಾರ್ ನೇತೃತ್ವದಲ್ಲಿ 2007 ರಲ್ಲಿ ನಡೆದ ಗುಪ್ತ ಸಭೆಯಲ್ಲಿ ಹೋರಾಟ ಮುನ್ನೆಡೆಸುವ ಕಾರ್ಯ ವಿಧಾನದ ಬಗ್ಗೆ ತೀವ್ರ ಚರ್ಚೆಯಾಯಿತು. ಕರ್ನಾಟಕದಲ್ಲಿ ಮೂರು ತಂಡಗಳಾಗಿ (ನೇತ್ರಾವತಿ, ಶರಾವತಿ ಮತ್ತು ತುಂಗಭದಾ) ಕ್ರಿಯಾಶೀಲವಾಗಿದ್ದ ಕೆಲವರು ಸಮಾಜದ ಅನುಕಂಪವಿಲ್ಲದೆ ಯಾವುದೇ ಹೋರಾಟ ವ್ಯರ್ಥ ಎಂಬ ವಾದವನ್ನು ಮುಂದಿಟ್ಟು ನಗರ ಪ್ರದೇಶಗಳಲ್ಲಿದ್ದು ಯುವ ವಿದ್ಯಾವಂತ ಯುವಕರನ್ನು ಚಳುವಳಿಗೆ ಸೆಳೆಯಬೇಕು ಎಂಬ ತಮ್ಮ ಯೋಜನೆಯನ್ನು ಮುಂದಿಟ್ಟರು. ಆದರೆ ಕೆಲವರು ಇದನ್ನು ವಿರೋಧಿಸಿ ಗೆರಿಲ್ಲಾ ತಂತ್ರದ ಯುದ್ದ ಮಾದರಿಯನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಹಠ ಹಿಡಿದಾಗ ಅನಿವಾರ್ಯವಾಗಿ ಕೆಲವು ಸುಧಾರಣಾವಾದಿಗಳು 2007 ರಲ್ಲಿ ಹೋರಾಟ ತೊರೆದು ಹೊರಬಂದರು. 1980 ರಿಂದಲೂ ಕರ್ನಾಟಕದ ಉಸ್ತುವಾರಿ ಹೊತ್ತಿದ್ದ ಅಜಾದ್ ಅಲಿಯಾಸ್ ಚುರುಕುರಿ ರಾಜ್‌ಕುಮಾರ್ 2010 ರವರೆಗೆ ಆಂಧ್ರಪ್ರದೇಶದಿಂದ ಬೆಂಗಳೂರು ನಗರಕ್ಕೆ ಗುಪ್ತವಾಗಿ ಬೇಟಿ ನೀಡಿ ನಕ್ಸಲರಿಗೆ ಮಾರ್ಗದರ್ಶನದ ಜೊತೆಗೆ ಆರ್ಥಿಕ ನೆರವು ನೀಡಿ ಹೋಗುತ್ತಿದ್ದರು.

ಅಜಾದ್ ಅಲಿಯಾಸ್ ಚುರುಕುರಿ ರಾಜಕುಮಾರ್ 1952 ರಲ್ಲಿ ಹುಟ್ಟಿದ್ದು, ಆಂಧ್ರದ ಕೃಷ್ಣ ಜಿಲ್ಲೆಯಿಂದ ಬಂದವರು. ಭಾರತದ ಮಾವೋವಾದಿ ನಕ್ಸಲ್ ಚಳುವಳಿಯಲ್ಲಿ ಮುಖ್ಯನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡು, ಕೇಂದ್ರ ಪಾಲಿಟ್‌ಬ್ಯೂರೊ ಸದಸ್ಯರಾಗಿ ಮತ್ತು ಸಂಘಟನೆಯ ವಕ್ತಾರರಾಗಿ ನಿರ್ವಹಿಸುತ್ತಿದ್ದರು. ಆಂದ್ರದ ಜಿಲ್ಲಾ ಕೇಂದ್ರವಾದ ವಾರಂಗಲ್ ಪಟ್ಟಣದ ನ್ಯಾಷನಲ್ ಇನ್ಸಿಟ್ಯೂಟ್ ಆಪ್ ಟೆಕ್ನಾಲಜಿ ಎಂಬ ಪ್ರತಿಷ್ಟಿತ ಕಾಲೇಜಿನಿಂದ ಇಂಜಿನಿಯರಿಂಗ್‌ನಲ್ಲಿ ಎಂ.ಟೆಕ್. ಪದವಿ ಪಡೆದು ಪೀಪಲ್ಸ್ ವಾರ್ ಗ್ರೂಪ್‌ಗೆ ಸೇರ್ಪಡೆಯಾಗಿದ್ದರು. 1975 ಮತ್ತು 1978 ರಲ್ಲಿ ಆಂಧ್ರ ಪೊಲೀಸರಿಂದ ಬಂಧಿತರಾಗಿ ನಂತರ ಜಾಮೀನಿನ ಮೇಲೆ ಹೊರಬಂದು ತಲೆತಪ್ಪಿಸಿಕೊಂಡಿದ್ದರು. ಆಂಧ್ರ ಸರ್ಕಾರ ಅಜಾದ್ ಸುಳಿವೆಗೆ 12 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಕರ್ನಾಟಕದ ಸಾಕೇತ್ ರಾಜನ್ ಮತ್ತು ಸಿರಿಮನೆ ನಾಗರಾಜ್ ಹಾಗೂ ರಾಯಚೂರು ಜಿಲ್ಲೆ ಕಾರ್ಯಕತರು ನಕ್ಸಲ್ ಸಂಘಟನೆಗೆ ಸೇರುವಲ್ಲಿ ಅಜಾದ್ ಪ್ರಭಾವವಿತ್ತು. ಅಂತಿಮವಾಗಿ 2010 ರ ಜೂನ್ ಒಂದರಂದು ನೆರೆಯ ಮಹಾರಾಷ್ಟ್ರದಲ್ಲಿ ಅಜಾದ್ ಮತ್ತು ಜೊತೆಗಿದ್ದ ಹೇಮಚಂದ್ರ ಪಾಂಡೆ ಎಂಬ ಯುವ ಪತ್ರಕರ್ತನನ್ನು ಬಂಧಿಸಿದ ಆಂಧ್ರ ಪೊಲೀಸರು ಮಾರನೇ ದಿನ ನಸುಕಿನ ಜಾವ ಅಂದ್ರದ ಗಡಿ ಜಿಲ್ಲೆಯಾದ ಅದಿಲಾಬಾದ್ ಅರಣ್ಯಕ್ಕೆ ಕರೆತಂದು ಇಬ್ಬರನ್ನು ಗುಂಡಿಟ್ಟು ಕೊಂದರು. (ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕು ಆಯೋಗದಲ್ಲಿ ಆಂಧ್ರ ಪೊಲೀಸರ ವಿರುದ್ದ ದೂರು ದಾಖಲಾಗಿದೆ.) ಅಜಾದ್ ನಿಧನಾ ನಂತರ ಕರ್ನಾಟಕದ ನಕ್ಸಲ್ ಚಳುವಳಿ ದಿಕ್ಕು ದಿಸೆಯಿಲ್ಲದೆ, ಸೈದ್ಧಾಂತಿಕ ತಳಹದಿಯಿಲ್ಲದೆ ಸಾಗುತ್ತಿದೆ.

ಕರ್ನಾಟಕ ಪೊಲೀಸರು ತಮ್ಮ ಗುಪ್ತದಳ ಇಲಾಖೆಯಿಂದ ಸಕ್ರಿಯವಾಗಿರುವ ನಕ್ಸಲರ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅವರಲ್ಲಿ ಉಡುಪಿಯ ಹೆಬ್ರಿ ಸಮೀಪದ ವಿಕ್ರಂ ಗೌಡ (2006 ರ ಡಿಸಂಬರ್ 26 ರಂದು ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ), ಬೆಳ್ತಂಗಡಿಯ ಸುಂದರಿ, ಶೃಂಗೇರಿಯ ಬಿ.ಜಿ ಕೃಷ್ಣಮೂರ್ತಿ, ತೀರ್ಥಹಳ್ಳಿ ಸಮೀಪದ ಹೊಸಗದ್ದೆಯ ಪ್ರಭಾ, ಕೊಪ್ಪ ತಾಲ್ಲೂಕಿನ ನಿಲುಗುಳಿ ಪದ್ಮನಾಭ, ಶೃಂಗೇರಿ ಸಮೀಪದ ಮುಂಡಗಾರು ಲತಾ, ಮೂಡಿಗೆರೆಯ ಕನ್ಯಾಕುಮಾರಿ ಮತ್ತು ಎ.ಎಸ್. ಸುರೇಶ, ಬೆಂಗಳೂರಿನ ರಮೇಶ್ ಅಲಿಯಾಸ್ ಶ್ರೀನಿವಾಸ್ ಮತ್ತು ಈಶ್ವರ್, ಕಳಸದ ಸಾವಿತ್ರಿ, ವನಜಾ ಅಲಿಯಾಸ್ ಜಲಜಾಕ್ಷಿ, ಭಾರತಿ, ಮನೋಜ್, ರಾಯಚೂರು ಜಿಲ್ಲೆಯ ಕಲ್ಪನಾ, ಜಾನ್ ಅಲಿಯಾಸ್ ಜಯಮ್ಮ, ಚಿಕ್ಕಮಗಳೂರು ಜಿಲ್ಲೆಯ ಕಿಗ್ಗದ ರವೀಂದ್ರ, ಚಿತ್ರದುರ್ಗ ಮೂಲದ ಇಂಜಿನಿಯರಿಂಗ್ ಪದವಿ ತೊರೆದು ಬಂದ ನೂರ್ ಜುಲ್ಫಿಕರ್, ತಮಿಳುನಾಡಿನ ಮಧುರೈನ ವೀರಮಣಿ ಅಲಿಯಾಸ್ ಮುರುಗನ್ (ಈತ ಗಂಗಾಧರ್ ಹೆಸರಿನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುತ್ತಾನೆ), ಕೇರಳದ ನಂದಕುಮಾರ್, ಆತನ ಸಂಗಾತಿ ಶಿವಮೊಗ್ಗ ಮೂಲದ ಸಿಖ್ ಜನಾಂಗದ ಆಶಾ, ತಮಿಳುನಾಡಿನ ಧರ್ಮಪುರಿಯ ಕುಪ್ಪಸ್ವಾಮಿ, ಮುಖ್ಯರಾದವರು. (ಇವರಲ್ಲಿ ಈದು ಎನ್‌ಕೌಂಟರ್ ನಲ್ಲಿ ಗಾಯಗೊಂಡಿದ್ದ ಸೊರಬದ ವಿಷ್ಣು ಅಲಿಯಾಸ್ ದೇವೆಂದ್ರಪ್ಪ ಜೀವಂತ ವಿರುವ ಬಗ್ಗೆ ಗೊಂದಲವಿದೆ.)

ಇವರುಗಳಲ್ಲಿ ಕರ್ನಾಟಕ ಪೊಲೀಸರು ವಿಕ್ರಮ್ ಗೌಡ, ಬಿ.ಜಿ,ಕೃಷ್ನಮೂರ್ತಿ, ಹೊಸಗದ್ದೆ ಪ್ರಭಾ, ನಿಲುಗುಳಿ ಪದ್ಮನಾಭ, ಮುಂಡಗಾರು ಲತಾ, ಕನ್ಯಾಕುಮಾರಿ ಮತ್ತು ಸುರೇಶ ಇವರುಗಳ ಸುಳಿವಿಗೆ 5 ಲಕ್ಸ ರೂಪಾಯಿ ಬಹುಮಾನ ಮತ್ತು ಬೆಂಗಳೂರಿನ ರಮೇಶ್, ಈಶ್ವರ್ ಇವರಿಗೆ 3 ಲಕ್ಷ ರೂ, ಸಿರಿಮನೆ ನಾಗರಾಜು, ನೂರ್ ಜುಲ್ಫಿಕರ್, ಸುಂದರಿ, ಸಾವಿತ್ರಿ, ವನಜ, ಭಾರತಿ, ಮನೋಜ್ ಕಲ್ಪನಾ, ರವೀಂದ್ರ ಇವರುಗಳ ಸುಳಿವಿಗಾಗಿ ಒಂದು ಲಕ್ಷ ರೂ ಬಹುಮಾನ ಘೋಷಿಸಿದ್ದರು.

ಇತ್ತೀಚೆಗಿನ ದಿನಗಳ ಕರ್ನಾಟಕ ನಕ್ಸಲಿಯರ ನಡೆಯನ್ನು ಆತ್ಮಾಹುತಿಯ ಮಾರ್ಗದತ್ತ ಮುನ್ನೆಡೆಯುತ್ತಿರುವ ಮೂರ್ಖರ ಪಡೆಯೆಂದು ಘಂಟಾಘೋಷವಾಗಿ ಹೇಳಬಹುದು.

ಇಡೀ ಭಾರತದ ನಕ್ಸಲ್ ಚಳುವಳಿಯನ್ನು ಅವಲೋಕಿಸದಾಗ ನಕ್ಸಲಿಯರ ಬಗ್ಗೆ ಸಂಯಮ ಮತ್ತು ಮಾನವೀಯ ಅನುಕಂಪದ ನೆಲೆಯಲ್ಲಿ Western_Ghat_forestನಡೆದುಕೊಂಡ ಪೊಲೀಸರೆಂದರೇ, ಅವರು ಕರ್ನಾಟಕದ ಪೊಲೀಸರು ಮಾತ್ರ ಎಂದು ನಿಸ್ಸಂಕೋಚವಾಗಿ ಹೇಳಬಹುದು. ನಕ್ಸಲ್ ಚರಿತ್ರೆಯಲ್ಲಿ ಆಂಧ್ರ ಪೊಲೀಸರ ಬರ್ಭರತೆ ಮತ್ತು ರಾಕ್ಷಸಿ ಗುಣ ಹಾಗೂ ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಡದ ಪೊಲೀಸರ ಅನಾಗರೀಕ ವರ್ತನೆಯನ್ನು ಭಾರತದ ಇತಿಹಾಸದಲ್ಲಿ ಯಾವೊಬ್ಬ ನಾಗರೀಕ ಕ್ಷಮಿಸಲಾರ. ದೇಶದಲ್ಲಿ ಪ್ರಪಥಮ ಬಾರಿಗೆ ನಕ್ಸಲರ ಶರಣಗಾತಿಗೆ ಅವಕಾಶ ಕಲ್ಪಿಸಿಕೊಟ್ಟ ಮತ್ತು ಶರಣಾದ ನಕ್ಸಲಿಗರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ವಿಶೇಷ ಪ್ಯಾಕೇಜ್ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ ಸರ್ಕಾರ, ಈ ಅವಕಾಶವನ್ನು 2008 ಮತ್ತು 2009 ರಲ್ಲಿ ಸಮರ್ಥವಾಗಿ ಬಳಸಿಕೊಂಡ ಹಾಗಲಗಂಚಿ ವೆಂಕಟೇಶ, ಹೊರಳೆ ಜಯ, ಮಲ್ಲಿಕಾ ಮತ್ತು ಕೋಮಲಾ ಈದಿನ ನಮ್ಮಗಳ ನಡುವೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.

ಕರ್ನಾಟಕ ಸರ್ಕಾರದ ಇಂತಹ ಮಾನವೀಯ ನೆಲೆಯ ನಿರ್ಧಾರದ ಹಿಂದೆ, ಕರ್ನಾಟಕ ಕಂಡ ಅಪರೂಪದ ದಕ್ಷ ಹಾಗೂ ಮಾತೃ ಹೃದಯದ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯವರ ಶ್ರಮವಿದೆ. ತಾವು ಸೇವೆಯಿಂದ ನಿವೃತ್ತರಾಗುವ ಕೆಲವೇ ದಿನಗಳ ಹಿಂದೆ ನಕ್ಸಲ್ ಪೀಡಿತ ಪ್ರದೇಶಗಳಿಗೆ ಬೇಟಿ ನೀಡಿ ನಮ್ಮ ಯುವಕರು ಮಾವೋವಾದಿ ನಕ್ಸಲರಾಗಿ ಪೊಲೀಸರ ಗುಂಡಿಗೆ ಬಲಿಯಾಗುವುದು ವೈಯಕ್ತಿವಾಗಿ ನನಗೆ ನೋವು ತರುವ ವಿಚಾರ ಎಂದು ಹೇಳಿಕೊಂಡಿದ್ದರು. ಹೋರಾಟ, ಕ್ರಾಂತಿ ನೆಪದಲ್ಲಿ ದಾರಿ ತಪ್ಪಿರುವ ಯುವಕರನ್ನು ಮರಳಿ ಸಮಾಜದ ಮುಖ್ಯವಾಹಿನಿಗೆ ತರಬೇಕೆಂಬ ಕನಸು ಬಿದರಿಯವರಿಗೆ ಇತ್ತು. ನಿವೃತ್ತಿಯ ನಂತರವೂ ಅವರು ಇದಕ್ಕಾಗಿ ಶ್ರಮಿಸುತ್ತಿದ್ದಾರೆ.

ಕಳೆದ ನವಂಬರ್‌ನಲ್ಲಿ ಹಾಸನ ಜಿಲ್ಲೆಯ ಸಕಲೇಶ್ವರ ಬಳಿಯ ಬಿಸಿಲೆ ಘಾಟ್ ಬಳಿ ಪೊಲೀಸರು ಸೃಷ್ಟಿಸಿದ ಚಕ್ರವ್ಯೂಹಕ್ಕೆ ಸಿಲುಕಿ ಸಾಯುವ ಸಂದರ್ಭದಲ್ಲಿ ಶರಣಾಗತಿಯ ನಾಟಕವಾಡಿ ತಪ್ಪಿಸಿಕೊಂಡ ನಕ್ಸಲರ ಬಗ್ಗೆ ಯಾವೊಬ್ಬ ಪ್ರಜ್ಙಾವಂತ ನಾಗರೀಕ ಅನುಕಂಪ ಅಥವಾ ಗೌರವ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಕರ್ನಾಟಕ ಸರ್ಕಾರ ಒಂದು ವಾರ ಕಾಲ ನಕ್ಸಲರ ವಿರುದ್ಧ ಕಾರ್ಯಾಚರಣೆ ನಿಲ್ಲಿಸುವುದಕ್ಕೆ ಶಂಕರ್ ಬಿದರಿಯವರ ಕಳಕಳಿಯ ಮನವಿ ಕಾರಣವಾಗಿತ್ತು. ಕರ್ತವ್ಯ ಮತ್ತು ಕಾನೂನು ವಿಷಯದಲ್ಲಿ ಅತ್ಯಂತ ಕಠಿಣವಾಗಿ ನಡೆದುಕೊಳ್ಳುತ್ತಿದ್ದ ಶಂಕರ್ ಬಿದರಿಯವರು ಸಹಾಯ ಅಥವಾ ಮಾನವೀಯತೆಯ ವಿಷಯದಲ್ಲಿ ಒಬ್ಬ ಅಪ್ಪಟ ಹೃದಯವಂತ ತಂದೆಯಂತೆ ವರ್ತಿಸುತ್ತಿದ್ದರು. ಕನ್ನಡದ ಹಿರಿಯ ಅನುಭಾವ ಕವಿ ಮತ್ತು ಬೇಂದ್ರೆಯವರ ಆತ್ಮ ಸಂಗಾತಿಯಂತಿದ್ದ ಮಧುರ ಚೆನ್ನ ಇವರ ಪುತ್ರಿಯನ್ನು ವಿವಾಹವಾಗಿರುವ ಶಂಕರ್ ಬಿದರಿ ವೀರಪ್ಪನ್ ಕಾರ್ಯಾಚರಣೆಯ ಸಂದರ್ಭದಲ್ಲಿ ತಮಗೆ ಬಹುಮಾನವಾಗಿ ಬಂದ ಒಂದು ಕೋಟಿ ಐವತ್ತು ಲಕ್ಷ ರೂಪಾಯಿಗಳಲ್ಲಿ ಕೇವಲ ಇಪ್ಪತ್ತೈದು ಲಕ್ಷ ರೂಪಾಯಿಗಳನ್ನು ಮಾತ್ರ ತೆಗೆದುಕೊಂಡು ಉಳಿದ ಹಣವನ್ನು ಪೊಲೀಸರ ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡಿದ ಅಪರೂಪದ ವ್ಯಕ್ತಿ. (ತಾವು ಇಟ್ಟುಕೊಂಡಿದ್ದ ಹಣವನ್ನು ಸಹ ತಮ್ಮ ಮಡದಿಗೆ ಕೊಡುಗೆಯಾಗಿ ನೀಡಿದ್ದಾರೆ.) ಇಂತಹ ಮಾನವೀಯ ಮುಖವುಳ್ಳ ಅಧಿಕಾರಿಯ ಮಾರ್ಗದರ್ಶನದಲ್ಲಿ ಶರಣಾಗುವ ಅವಕಾಶವನ್ನು ತೊರೆದು ಬಂದೂಕಿನ ಜೊತೆಯಲ್ಲಿ ಗುರಿ ತಲುಪುತ್ತೇವೆ ಎಂದು ನಂಬಿ ಹೊರಟವರನ್ನು ಸಮಾಜ ನಂಬಲಾರದು. ಈ ಬಗ್ಗೆ ಮಾವೋವಾದಿ ನಕ್ಸಲರು ಮತ್ತು ಇವರಿಗೆ ಬೆಂಬಲವಾಗಿ ನಿಂತವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳಿತು.

ಭಾರತದಲ್ಲಿ ಪಶ್ಚಿಮ ಬಂಗಾಳಕ್ಕೆ ಮುನ್ನವೇ ನಕ್ಸಲ್ ಚಳುವಳಿಯನ್ನು ಹುಟ್ಟಿಹಾಕಿದ ನಮ್ಮ ನೆರೆಯ ಆಂಧ್ರಪ್ರದೇಶದಲ್ಲಿ ಈ ಹೋರಾಟNaxal-india ವಿಜೃಂಭಿಸಿದ ರೀತಿಯಲ್ಲಿ ನೆರೆಯ ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಏಕೆ ಯಶಸ್ವಿಯಾಗಲಿಲ್ಲ ಎಂಬುದನ್ನು ಅರಿಯಲು ನಾವು ಒಮ್ಮೆ ಇತಿಹಾಸದತ್ತ ತಿರುಗಿನೋಡಬೇಕಿದೆ. ಆಂಧ್ರದಲ್ಲಿ ಅಂದಿನ ದಿನಗಳಲ್ಲಿ ಅಸ್ತಿತ್ವದಲ್ಲಿದ್ದ ಜಮೀನ್ದಾರಿ ಪದ್ದತಿಯಾಗಲಿ, ಹೆಚ್ಚಿನ ಸಂಖ್ಯೆಯ ಆದಿವಾಸಿ ಜನಾಂಗವಾಗಲಿ ದಕ್ಷಿಣದ ಇತರೆ ರಾಜ್ಯಗಳಲ್ಲಿ ಇರಲಿಲ್ಲ. ತಮಿಳುನಾಡಿನಲ್ಲಿ ನಕ್ಸಲ್ ಚಳುವಳಿ ಹುಟ್ಟುವ ಮುನ್ನವೇ ಪೆರಿಯಾರ್ ರಾಮಸ್ವಾಮಿಯಂತಹವರು ಮತ್ತು ಕೇರಳದಲ್ಲಿ ನಾರಾಯಣ ಗುರು ಅಂತಹ ಮಹಾನುಭಾವರು ಸಮಾಜದ ಅಸಮಾನತೆಯ ವಿರುದ್ದ ಸಮರ ಸಾರಿ ಸಾಮಾಜಿಕ ಸುಧಾರಣೆಯಲ್ಲಿ ಯಶಸ್ವಿಯಾಗಿದ್ದರು. 1980 ರ ದಶಕದಲ್ಲಿ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ನಕ್ಸಲ್ ಚಳುವಳಿ ಹುಟ್ಟು ಹಾಕುವ ಪ್ರಯತ್ನ ನಡೆಯಿತಾದರೂ ಪ್ರಯೋಜನವಾಗಲಿಲ್ಲ. ಅಲ್ಲಿರುವ ಬಹುತೇಕ ರಾಜಕೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳಾಗಿರುವುದರಿಂದ ನಕ್ಸಲ್ ಹೋರಾಟಗಾರರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿ ಜನರ ಸಮಸ್ಯೆಗಳ ಬಗ್ಗೆ ಹೋರಾಡುವ ಗುಣಗಳನ್ನು ಮೈಗೂಡಿಸಿಕೊಂಡಿವೆ. ಇನ್ನು ಕೇರಳ ರಾಜ್ಯದಲ್ಲಿ 1968 ರಲ್ಲೇ ಇಂತಹ ಪ್ರಯತ್ನ ನಡೆಯಿತಾದರೂ ಯಶಸ್ವಿಯಾಗಲಿಲ್ಲ. ಇ.ಎಂ.ಎಸ್. ನಂಬೂದರಿಪಾಡ್‌ರಂತಹ ಕಮ್ಯುನಿಸ್ಟ್ ನಾಯಕರ ನೇತೃತ್ವದಲ್ಲಿ ಎಡಪಕ್ಷ ಅಧಿಕಾರಕ್ಕೆ ಬಂದಿದ್ದರಿಂದ ಕೇರಳದಲ್ಲಿ ಪ್ರಮುಖ ಸಮಸ್ಯೆಯಾಗಿದ್ದ ಗೇಣಿದಾರರ ಸಮಸ್ಯೆಯನ್ನು ಕಮ್ಯೂನಿಷ್ಟ್ ಸರ್ಕಾರ ಬಗೆಹರಿಸಿತು. ಚಾರು ಮುಜಂದಾರ್‌ರ ಅನುಯಾಯಿಗಳು ಹಾಗೂ ಹಿರಿಯ ಮಾವೋವಾದಿ ನಾಯಕರಾದ ವೇಣು ಮತ್ತು ಕೆ. ಅಜಿತಾ ಎಂಬುವರು ( ಅಜಿತಾ 9 ವರ್ಷಗಳ ಕಾಲ ಸೆರೆಮನೆ ವಾಸ ಅನುಭವಿಸಿದ ಹಿರಿಯ ನಾಯಕಿ) ಕೇರಳದಲ್ಲಿ ನಕ್ಸಲ್ ಚಳುವಳಿ ವಿಫಲವಾದುದರ ಕುರಿತು ಬಣ್ಣಿಸುವುದು ಹೀಗೆ: “ಕೇರಳದ ಉತ್ತರದ ಜಿಲ್ಲೆಗಳಲಿ ಆದಿವಾಸಿಗಳ ಮತ್ತು ಗೇಣಿದಾರರ ಸಮಸ್ಯೆ ಇತ್ತು ನಿಜ. ಆದರೆ ಅಧಿಕಾರದಲ್ಲಿ ಎಡಪಕ್ಷವಿದ್ದುದರಿಂದ ನಂತರದ ದಿನಗಳಲ್ಲಿ ಎಲ್ಲಾ ರೀತಿಯ ಪ್ರತಿಭಟನೆಗೆ ಮತ್ತು ಹೋರಾಟಕ್ಕೆ ಬಹಿರಂಗವಾಗಿ ಅವಕಾಶವಿದ್ದ ಸಂದರ್ಭದಲ್ಲಿ ಬಂದೂಕು ಹಿಡಿದು ಅರಣ್ಯದಲ್ಲಿ ಮರೆಯಾಗಿ ಹಿಂಸಾತ್ಮಕ ಹೋರಾಟ ನಡೆಸುವ ಅವಶ್ಯಕತೆ ನಮಗೆ ಕಾಣಲಿಲ್ಲ.”

ಇಂತಹ ಸತ್ಯದ ಅನುಭವದ ಮಾತುಗಳನ್ನು ಕರ್ನಾಟಕದಲ್ಲಿ ಹೋರಾಡುತ್ತಿರುವ ಮಾವೋವಾದಿಗಳು ಮನಗಾಣಬೇಕಿದೆ. ಕರ್ನಾಟಕ ರಾಜ್ಯಕ್ಕೆ ನಕ್ಸಲ್ ಹೊರಾಟ ಕಾಲಿಡುವ ಮುನ್ನವೆ ಈ ನೆಲದಲ್ಲಿ ಎಲ್ಲಾ ರೀತಿಯ ಸಮಸ್ಯೆಗಳು ಇದ್ದವು. ಪರಿಸರದ ಉಳಿವಿಗಾಗಿ, ದಲಿತರು ಹಕ್ಕು ಮತ್ತು ರಕ್ಷಣೆಗಾಗಿ, ಕೃಷಿ ಕೂಲಿಕಾರ್ಮಿಕರ ಸೂಕ್ತ ವೇತನಕ್ಕಾಗಿ, ಮತ್ತು ತಾನು ಬೆಳೆದ ಫಸಲಿಗೆ ಸೂಕ್ತ ಬೆಲೆಯಿಲ್ಲದೆ ಪರದಾಡುತ್ತಿದ್ದ ರೈತರು, ಗೇಣಿದಾರರ ಸಮಸ್ಯೆ, ಆರಣ್ಯದಿಂದ ಒಕ್ಕಲೆಬ್ಬಿಸಲಾದ ಅರಣ್ಯವಾಸಿಗಳ ಸಮಸ್ಯೆ, ಎಲ್ಲವೂ ಇದ್ದವು. ಅವುಗಳಿಗೆ ಯಾರೂ ಬಂದೂಕಿನಿಂದ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಚಿಸಲಿಲ್ಲ. ಅವುಗಳಿಗೆ ಪ್ರಜಾಪ್ರಭುತ್ವ ನೀಡಿರುವ ಸಂವಿಧಾನ ಬದ್ದ ಹಕ್ಕುಗಳ ಅಡಿಯಲ್ಲಿ ಸೂಕ್ತವಾದ ಪರಿಹಾರ ಕಂಡುಕೊಳ್ಳುವ ಸಲುವಾಗಿ ಅನೇಕ ಹೋರಾಟದ ವೇದಿಕೆಗಳು ಅಸ್ತಿತ್ವದಲ್ಲಿ ಇದ್ದವು. ಈಗಲೂ ಇವೆ ಎಂಬ ಸತ್ಯವನ್ನು ಕನಾಟಕದ ಮಾವೋವಾದಿಗಳು ಅರಿಯಬೇಕಿದೆ.

ಸುಮಾರು ಮುವತ್ತು ವರ್ಷಗಳಿಂದ ಬಿಳಿಗಿರಿ ರಂಗನ ಬೆಟ್ಟದಲ್ಲಿ ಸೋಲಿಗರ ಉನ್ನತಿಗಾಗಿ ಶ್ರಮಿಸುತ್ತಿರುವ ಡಾ.ಸುದರ್ಶನ್ ಮತ್ತು ಹೆಗ್ಗಡದೇವನಕೋಟೆ ಸುತ್ತಮುತ್ತಲಿನ ಬುಡಕಟ್ಟು ಜನಾಂಗಗಳ ಅಭಿವೃದ್ಧಿಗಾಗಿ ಗೆಳಯರ ತಂಡ ಕಟ್ಟಿಕೊಂಡು ಸ್ವಯಂ ಸೇವಾ ಸಂಸ್ಥೆ ಮೂಲಕ ದುಡಿಯುತ್ತಿರುವ ಡಾ.ಬಾಲಸುಬ್ರಮಣ್ಯಂ ಇವರುಗಳ ಬದುಕು, ತ್ಯಾಗ ಮನೋಭಾವ ಇವೆಲ್ಲವನ್ನು ಮಾವೋವಾದಿಗಳು ತಮ್ಮ ಚಿಂತನಾ ಧಾರೆಯಲ್ಲಿ ಅಳವಡಿಸಿಕೊಳ್ಳುವುದು ಒಳಿತು. ಚಾಮರಾಜನಗರದಲ್ಲಿ ರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿರುವ ಪ್ರೊ.ಜಯದೇವ ಇವರು ಹಿಂದುಳಿದ ವರ್ಗಗಳ ಮಕ್ಕಳು ಮತ್ತು ಬುಡಕಟ್ಟು ಜನಾಂಗಗಳ ಮಕ್ಕಳ ಶಿಕ್ಷಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಕನ್ನಡದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಪುತ್ರರಾದ ಜಯದೇವರವರು, ಈ ಮಕ್ಕಳಿಗಾಗಿ ವಿವಾಹವಾಗದೆ ಅವಿವಾಹಿತರಾಗಿ ಉಳಿದು ಚಾಮರಾಜನಗರದಲ್ಲಿ ಎಲೆಮರೆ ಕಾಯಿಯಂತೆ ವಾಸಿಸುತ್ತಾ ಐವತ್ತು ಮಕ್ಕಳನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಓದಿಸುತ್ತಿದ್ದಾರೆ. ಈ ಮೂವರು ಮಹನೀಯರು ಗಿರಿಜನ ಅಭಿವೃದ್ಧಿಗಾಗಿ ಮೂರು ದಶಕಗಳಿಂದ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಸಹ ಎಂದೂ ವ್ಯವಸ್ಥೆಯ ವಿರುದ್ಧ ಕೈಗೆ ಬಂದೂಕ ತೆಗೆದುಕೊಳ್ಳಲಿಲ್ಲ. ಏಕೆಂದರೇ, ಉರಿಯುವ ಬೆಂಕಿಯಂತೆ ತಣ್ಣನೆಯ ಮಂಜುಗೆಡ್ಡೆ ಕೂಡ ಶಕ್ತಿಶಾಲಿ ಎಂಬುದನ್ನು ಬಲ್ಲ ಪ್ರಜ್ಞಾವಂತರಿವರು.

ಹೋರಾಟಗಳ ಬಗ್ಗೆ ಪ್ರವಾದಿಯೊಬ್ಬನ ಪ್ರವಚನದ ಹಾಗೆ ಅಥವಾ ನಮ್ಮ ಧಾರವಾಡದ ಎಮ್ಮೆಗಳು ಒಂದೂವರೆ ಕಿಲೋಮೀಟರ್ ಉದ್ದ ಸಗಣಿ ಹಾಕುವ ರೀತಿ ಮಾತನಾಡುವುದು ಅತಿಸುಲಭ. ಕ್ರಾಂತಿಯ ಕುರಿತು ಇಂತಹ ಮಾತುಗಳನ್ನಾಡುವ ಮುನ್ನ ಈವರೆಗೆ ಕರ್ನಾಟಕದಲ್ಲಿ naxals-indiaನಕ್ಸಲರ ಗುಂಡಿಗೆ ಬಲಿಯಾದ ರಾಯಚೂರು ಜಿಲ್ಲೆ ಮತ್ತು ಮಂಗಳೂರು, ಉಡುಪಿ ಜಿಲ್ಲೆಗಳ ಯುವಕರ ಕುಟುಂಬಗಳು ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಯಾರಾದರೂ ಹೋಗಿ ನೋಡಿದ ಉದಾಹರಣೆಗಳು ಇವೆಯಾ? ಗುಂಡಿಗೆ ಬಲಿಯಾದ ಯುವಕರ ಅಮಾಯಕ ಕುಟುಂಬಗಳು ಪೊಲೀಸರಿಗೆ ಹೆದರಿ ತಮ್ಮ ಮಕ್ಕಳ ಶವಗಳನ್ನು ತಮ್ಮ ಸುಪರ್ದಿಗೆ ಪಡೆಯಲು ಹಿಂಜರಿದ ಬಗ್ಗೆ ಎಲ್ಲಿಯೂ ವರದಿಯಾಗಲಿಲ್ಲ. ಕಳೆದ ನವಂಬರ್‌ನಲ್ಲಿ ಉಡುಪಿ ಜಿಲ್ಲೆಯ ಸುಬ್ರಮಣ್ಯದ ಬಳಿ ಗುಂಡಿಗೆ ಬಲಿಯಾದ ರಾಯಚೂರಿನ ಯುವಕ ಎಲ್ಲಪ್ಪನ ಶವವನ್ನು ತನ್ನೂರಿಗೆ ಕೊಂಡೊಯ್ಯಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ಅವನ ಸಹೋದರ ತಾಯಪ್ಪ ಎಂಬಾತ ಆಸ್ಪತ್ರೆ ಎದುರು ಕಣ್ಣೀರು ಹಾಕುತ್ತಾ ನಿಂತಿದ್ದಾಗ, ನಕ್ಸಲ್ ಚಳುವಳಿ ಕುರಿತ ಅಥವಾ ಕ್ರಾಂತಿ ಕುರಿತಾದ ಯಾವ ಭಾಷಣಗಳು, ಹೇಳಿಕೆಗಳು ಆತನ ನೆರವಿಗೆ ಬರಲಿಲ್ಲ. ಕೆಲವರ ತೆವಲಿಗೆ ಮತ್ತು ಅಪ್ರಬುದ್ಧ ಪ್ರಯೋಗಗಳಿಗೆ ಬಡವರ ಕುಟುಂಬಗಳ ಮುಗ್ಧ ಹುಡುಗರು ಬಲಿ ಕೊಡುತ್ತಿರುವ ಇಂತಹ ಹೋರಾಟ ಮತ್ತು ಚಳುವಳಿಗಳಿಗೆ ಯಾವ ಅರ್ಥವಿದೆ? ಇದರಿಂದ ಭವಿಷ್ಯದಲ್ಲಿ ಪ್ರಯೋಜನವಿದೆಯಾ? ಯಾವುದೋ ಒಂದು ಕಾಲಘಟ್ಟದಲ್ಲಿ ಪ್ರಸ್ತುತವಾಗಿದ್ದ ಹೋರಾಟ ಮತ್ತು ಚಿಂತನೆಗಳನ್ನು ಆಯಾ ಕಾಲಕ್ಕೆ ಅನುಗುಣವಾಗಿ ಪರಿಷ್ಕರಿಸದೆ ವರ್ತಮಾನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೋದರೆ, ಅಲ್ಲಿ ಸಫಲತೆಗಿಂತ ವಿಫಲತೆಯನ್ನು ನಾವು ಕಾಣಬೇಕಾಗುತ್ತದೆ. ಪ್ರತಿಯೊಂದು ದಶಕದಲ್ಲಿ ಈ ನೆಲಕ್ಕೆ ಹೊಸ ತಲೆಮಾರು ಸಮಾಜಕ್ಕೆ ಸೇರ್ಪಡೆಯಾಗುತ್ತಿದ್ದು ಅದರ ಚಿಂತನಾಕ್ರಮ ನಮ್ಮ ಹಳೆಯ ಆಲೋಚನಾ ಕ್ರಮಗಳಿಗಿಂತ ಭಿನ್ನವಾಗಿದೆ. ಈಗಿನ ಯುವ ಶಕ್ತಿಗೆ ಸರ್ಕಾರವನ್ನು ಅಥವಾ ಸಮಾಜವನ್ನು ಮಣಿಸಲು ಯಾವುದೇ ಆಯುಧ ಬೇಕಾಗಿಲ್ಲ ಎಂಬ ಸತ್ಯವನ್ನು ನಾವು ಅರಿಯದಿದ್ದರೇ ವರ್ತಮಾನದ ನಾಗರೀಕ ಸಮಾಜದಲ್ಲಿ ಬದುಕಲು ನಾವು ಅಯೋಗ್ಯರು ಎಂದರ್ಥ.

ದಶಕಗಳಿಂದ ಮಹಿಳಾ ಮೀಸಲಾತಿ ಕುರಿತ ಮಸೂದೆಯೊಂದು ಎಲ್ಲಾ ರಾಜಕೀಯ ಪಕ್ಷಗಳ ಅಗೋಚರ ಅಪವಿತ್ರ ಮೈತ್ರಿಯಿಂದಾಗಿ ಸಂಸತ್ತಿನಲ್ಲಿ ಕೊಳೆಯುತ್ತಾ ಬಿದ್ದಿದೆ. ಆದರೆ, ಕಳೆದ ಡಿಸೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ನಡೆದ ಯುವತಿಯ ಮೇಲಿನ ಅತ್ಯಾಚಾರದಿಂದ ಸಿಡಿದೆದ್ದ ದೇಶದ ಯುವಜನತೆ, ಕೇವಲ ಸರ್ಕಾರಗಳನ್ನು ಮಾತ್ರವಲ್ಲ, ನ್ಯಾಯಲಯಗಳು, ಸಮಾಜ ಎಲ್ಲವೂ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಇಡೀ ದೇಶಾದ್ಯಂತ ಬೀದಿಗಿಳಿದು ಹೋರಾಡಿದ ಯುವಕ ಮತ್ತು ಯುವತಿಯರ ಕೈಗಳಲ್ಲಿ ಆಯುಧ ಅಥವಾ ಬಂದೂಕಗಳಿರಲಿಲ್ಲ, ಬದಲಾಗಿ ಭಿತ್ತಿ ಪತ್ರ ಮತ್ತು ಉರಿಯುವ ಮೇಣದ ಬತ್ತಿಗಳಿದ್ದವು. ಇದೆಲ್ಲಕ್ಕಿಂತ ಹೆಚ್ಚಾಗಿ ವ್ಯವಸ್ಥೆಯನ್ನು ಮಣಿಸಬೇಕೆಂಬ ಸಾತ್ವಿಕ ಸಿಟ್ಟಿತ್ತು. ಕಣ್ಣೆದುರುಗಿನ ಇಂತಹ ವಾಸ್ತವ ಸತ್ಯಗಳನ್ನು ಗ್ರಹಿಸದೆ ಕ್ರಾಂತಿಯ ಬಗ್ಗೆ, ಹೋರಾಟಗಳ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವುದು, ಇಲ್ಲವೇ ಬರೆಯುವುದೆಂದರೆ, ಅದು ಗಾಳಿಯಲ್ಲಿ ಕತ್ತಿ ತಿರುಗಿಸುವ ಕೆಲಸವಾಗಬಲ್ಲದು ಅಷ್ಟೇ.

(ಮುಂದಿನ ವಾರ ಅಂತಿಮ ಅಧ್ಯಾಯ)

“ಮಲೆನಾಡ ಗಾಂಧಿ”ಯೊಡನೆಯ ಭೇಟಿ ಹುಟ್ಟಿಸಿದ ಪ್ರಶ್ನೆಗಳು, ಹೆಚ್ಚಿಸಿದ ಭರವಸೆಗಳು..

– ರವಿ ಕೃಷ್ಣಾರೆಡ್ಡಿ

ಮೊನ್ನೆ ಸೋಮವಾರ, ಸಂಕ್ರಾಂತಿಯಂದು, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪಕ್ಕೆ ಹೋಗಿದ್ದೆ. ಕೊಪ್ಪದಲ್ಲಿ ವಕೀಲರಾಗಿರುವ ಗೆಳೆಯ ಸುಧೀರ್ ಕುಮಾರ್ ಮುರೊಳ್ಳಿಯವರೊಡನೆ ಅಲ್ಲಿಯ ಮಾಜಿ ಶಾಸಕ ಮತ್ತು ಕರ್ನಾಟಕದ ಮಾಜಿ ಸಚಿವ, ನಿವೃತ್ತ ರಾಜಕಾರಣಿ ಹೆಚ್.ಜಿ.ಗೋವಿಂದ ಗೌಡರನ್ನು ಭೇಟಿಯಾಗಿದ್ದೆ. ನನ್ನೊಡನೆ ಇದ್ದ ಇನ್ನೊಬ್ಬ ಗೆಳೆಯ ಸತೀಶ್, ಗೌಡರನ್ನು ಸಂದರ್ಶನ ಮಾಡಿದರು.

ರಾಜ್ಯದ ಇನ್ನೊಬ್ಬ ದೇಶಪ್ರಸಿದ್ಧ ಗೌಡರು ನಮಗೆಲ್ಲಾ ಗೊತ್ತು. ಇತ್ತೀಚೆಗೆ ಅವರು ಮಾತನಾಡುತ್ತ, ಪಕ್ಕದ ರಾಜ್ಯದ ಕರುಣಾನಿಧಿಯವರಿಗೊದಗಿರುವ ಕೌಟುಂಬಿಕ ವಿಷಮ ಪರಿಸ್ಥಿತಿಯನ್ನು ತಾನು ತನ್ನ ಇಳಿಕಾಲದಲ್ಲಿ ನೊಡಲು ಇಚ್ಚಿಸುವುದಿಲ್ಲ ಎಂತಲೊ, ಹಾಗಾಗಲು ಬಿಡುವುದಿಲ್ಲ ಎಂತಲೋ ಅಂದಿದ್ದರು. ಅದು ಅವರ ಮತ್ತೊಬ್ಬ ಸೊಸೆ ರಾಜಕೀಯಕ್ಕೆ ಬರುವ ವಿಷಯಕ್ಕೆ ಮತ್ತು ಅವರ ಕುಟುಂಬದಲ್ಲಿ ನಡೆಯುತ್ತಿರುವ ಮೇಲಾಟಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಉತ್ತರಿಸಿದ ರೀತಿ.

“ಮಲೆನಾಡ ಗಾಂಧಿ” ಎಂದೇ ಗುರುತಿಸಲಾಗುವ ಕೊಪ್ಪದ ಗೋವಿಂದ ಗೌಡರು ರಾಜಕೀಯ ನಿವೃತ್ತಿ ಘೋಷಿಸಿ ಸುಮಾರು 13 ವರ್ಷವಾಯಿತು. govindagowdaಅವರು ಜನತಾ ದಳದ ಸರ್ಕಾರದಲ್ಲಿ ಸಚಿವರಾಗಿದ್ದಾಗಲೇ, ಅಂದರೆ 1999 ರಲ್ಲಿ ನಡೆದ ರಾಜಕೀಯ ಕಚ್ಚಾಟಗಳನ್ನು ನೋಡಿ, ಇದು ತಮಗೆ ತರವಲ್ಲ ಎಂದು ಮತ್ತೊಮ್ಮೆ ಚುನಾವಣೆಗೆ ನಿಲ್ಲಲಿಲ್ಲ. ಆಗ ಅವರಿಗೆ ಬಹುಶಃ 73 ವರ್ಷವಾಗಿತ್ತೇನೊ. ಈಗ ಅವರಿಗೆ 87; ಇನ್ನು ಮೂರ್ನಾಲ್ಕು ತಿಂಗಳಿನಲ್ಲಿ 88 ತುಂಬುತ್ತದೆ. ಆರೋಗ್ಯವಾಗಿದ್ದಾರೆ. ಈಗಲೂ ಪತ್ರಿಕೆ-ಪುಸ್ತಕಗಳನ್ನು ಓದುತ್ತಾರೆ. ಅವರ ಶ್ರೀಮತಿಯವರಾದ ಶಾಂತಕ್ಕನವರಿಗೆ 82 ಇರಬಹುದು. ಬಹಳ ಹಸನ್ಮುಖದ ಅವರೂ ಆರೋಗ್ಯದಿಂದಿದ್ದಾರೆ. ತಮ್ಮ ಮತ್ತು ತಮ್ಮ ಪತಿಯ ಬಟ್ಟೆಗಳನ್ನು ಅವರೇ ಒಗೆಯುತ್ತಾರೆ.

ಬಹುಶಃ ಅರವತ್ತು-ಎಪ್ಪತ್ತು ದಾಟಿದ ಕರ್ನಾಟಕದ ಯಾವೊಬ್ಬ ಮಾಜಿ ಸಚಿವನೂ ಗೋವಿಂದ ಗೌಡರಷ್ಟು ನೆಮ್ಮದಿಯ, ಸಂತೋಷದ, ಮತ್ತು ವೈಯಕ್ತಿಕ ವಿಷಾದಗಳಿಲ್ಲದ ಜೀವನ ನಡೆಸುತ್ತಿರುವುದು ಸಂದೇಹ. ಇಂತಹ ಮುಪ್ಪಿನ ಜೀವನ ಗಳಿಸಿಕೊಳ್ಳಲಾಗದೆ ಏನೆಲ್ಲಾ ಸಾಧಿಸಿದರೂ ಏನು ಪ್ರಯೋಜನ?

ಇತ್ತೀಚಿನ ಯುವಕರಿಗೆ ಗೋವಿಂದ ಗೌಡರ ಪರಿಚಯ ಇಲ್ಲದಿರಬಹುದು. ಆದರೆ, 1996 ರ ನಂತರದಲ್ಲಿ ಸರ್ಕಾರಿ ಶಾಲೆಗಳ ಅಧ್ಯಾಪಕರಾಗಿ ನೇಮಕಗೊಂಡ ಪ್ರತಿಯೊಬ್ಬ ಅಧ್ಯಾಪಕನಿಗೂ ಗೋವಿಂದ ಗೌಡರ ಹೆಸರು ಗೊತ್ತಿರಲೇಬೇಕು. ಸರಿಯಾಗಿ ಒಂದು ಲಕ್ಷ ಐದು ಸಾವಿರ ಅಧ್ಯಾಪಕರು (1,05,000) ಯಾವುದೇ ಸಂದರ್ಶನಗಳಿಲ್ಲದೆ, ಲಂಚ ಕೊಡದೆ, ವಶೀಲಿ-ಪ್ರಭಾವಗಳನ್ನು ಬಳಸದೆ, ಅತ್ಯಂತ ಪಾರದರ್ಶಕವಾಗಿ ತಮ್ಮ ಅಂಕಪಟ್ಟಿಗಳ ಆಧಾರದ ಮೇಲೆ ಸರ್ಕಾರಿ ಅಧ್ಯಾಪಕರಾಗಿ ನೇಮಕಗೊಂಡರು. ಅದನ್ನು ಮಾಡಿದ್ದು ಆಗಿನ ಶಿಕ್ಷಣ ಸಚಿವರಾಗಿದ್ದ ಹೆಚ್.ಜಿ.ಗೋವಿಂದ ಗೌಡರು. ಆಗ ಅವರಿಗೆ ನೆರವಾದವರು ರಾಜ್ಯದ ಐಎ‌ಎಸ್ ಅಧಿಕಾರಿಗಳಾದ ಎಸ್.ವಿ.ರಂಗನಾಥ್ (ಈಗಿನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು) ಮತ್ತು ಹರೀಶ್‌ ಗೌಡ.

ಗೋವಿಂದ ಗೌಡರು ಮಾತನಾಡುತ್ತ ಹೇಳಿದ್ದು, ಸಂದರ್ಶನಗಳ ಮೂಲಕ ನೇಮಿಸುವ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ಮನಗಂಡೇ ತಾನು ಸಂದರ್ಶನ-ರಹಿತ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು. ಸಚಿವರೂ ಒಳ್ಳೆಯವರಿದ್ದರು. ತಮ್ಮ ಕೈಕೆಳಗಿನ ಅಧಿಕಾರಿಗಳೂ ಒಳ್ಳೆಯವರಿರುವಂತೆ ನೋಡಿಕೊಂಡರು. ಯಾವುದೋ ಒಂದು ಗತಕಾಲದ ಸಂದರ್ಭದಲ್ಲಾದರೂ (ಹದಿನೈದು ವರ್ಷಗಳ ಹಿಂದೆ) ಕರ್ನಾಟಕದಲ್ಲಿ ಭ್ರಷ್ಟತೆಯ ಯಾವೊಂದು ಕುರುಹುಗಳೂ ಇಲ್ಲದೆ ಸರ್ಕಾರಿ ನೇಮಕಾತಿಗಳಾದವು.

ನಿಮಗೆ ಗೊತ್ತಿರಲಿ, ಸರ್ಕಾರಿ ಕೆಲಸಗಳಿಗೆಂದು ನಡೆಸುವ ಸಂದರ್ಶನಗಳಷ್ಟು ಶುದ್ದ ಮೋಸದ, ಅಕ್ರಮದ, ಭ್ರಷ್ಟಾಚಾರದ ವ್ಯವಸ್ಥೆ ಇನ್ನೊಂದಿಲ್ಲ. ಅಪಾಯಕಾರಿ ಹುಚ್ಚುನಾಯಿಗಳೆಲ್ಲ ಈ ಸಂದರ್ಶನದ ಪ್ಯಾನೆಲ್‌ಗಳಲ್ಲಿ ಇರುತ್ತಾರೆ. ಕೆಪಿಎಸ್‌ಸಿ ನೇಮಕಾತಿಯಲ್ಲಿ ನಡೆಯುವಷ್ಟು ಭ್ರಷ್ಟತೆಗೆ ಹೋಲಿಕೆಗಳೇ ಇಲ್ಲವೇನೋ. ಪ್ರತಿಯೊಬ್ಬ ಜಾತಿಯ ಪ್ರಭಾವಿ ಮುಖಂಡನೂ ತಮ್ಮ ಜಾತಿಯವನೊಬ್ಬ ಕೆಪಿಎಸ್‍ಸಿ ಸದಸ್ಯನಾಗಬೇಕೆಂದು ಬಯಸುತ್ತಾರೆ ಮತ್ತು ಅದು ದುಡ್ಡು ಮಾಡಲೆಂದೇ ಇರುವ ಸದಸ್ಯತ್ವ. ರಾಜ್ಯದ ಯಾವೊಬ್ಬ ಘನತೆವೆತ್ತ ಅಧಿಕಾರಸ್ಥ ರಾಜಕೀಯ ಮುಖಂಡನೂ ಈ ಕ್ರಮವನ್ನು ಬದಲಿಸಲು ಹೋಗಿಲ್ಲ.

ನನಗೆ ಇತ್ತೀಚೆಗೆ ಗೊತ್ತಾದ ಈ ಉದಾಹರಣೆಯ ಮೂಲಕ ಕೆಪಿಎಸ್‌ಸಿಯಲ್ಲಿ ನಡೆಯುವ ಸಂದರ್ಶನ ಎಂಬ ಮಹಾನ್ ಭ್ರಷ್ಟತೆಯನ್ನು ವಿವರಿಸಲು ಯತ್ನಿಸುತ್ತೇನೆ. ನಾಲ್ಕೈದು ವರ್ಷಗಳ ಹಿಂದೆ ರಾಜ್ಯದಲ್ಲಿ ಅನೇಕ ಸರ್ಕಾರಿ ಕಾಲೇಜುಗಳಿಗೆ ಸಾವಿರಾರು ಅಧ್ಯಾಪಕರನ್ನು ನೇಮಿಸಲಾಯಿತು. ಒಬ್ಬ ಅಭ್ಯರ್ಥಿಗೆ ಎಲ್ಲಾ ಲಿಖಿತ ಪರೀಕ್ಷೆಗಳಲ್ಲಿ ಅತ್ಯುತ್ತಮ ಎನ್ನಬಹುದಾದಷ್ಟು, 85% ಅಂಕಗಳು ಬಂದಿದ್ದವು. ಸಂದರ್ಶನಕ್ಕೆಂದು ಇರುವುದು 25 ಅಂಕಗಳು. ಆ ಅಭ್ಯರ್ಥಿಗೆ ಸಂದರ್ಶನದಲ್ಲಿ ಕೇವಲ ಮೂರೇ ಮೂರು ಅಂಕಗಳು (ಅಂದರೆ ಸುಮಾರು 12%) ಬಂದರೂ ಲಿಖಿತ ಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ಕೆಲಸ ಖಚಿತ. ಆ ಅಭ್ಯರ್ಥಿ ಯಾವುದೇ ಜಾತಿ ವಶೀಲಿಬಾಜಿ ಮಾಡಲಿಲ್ಲ, ಹಣ ಕೊಟ್ಟು ಕೆಲಸ ಖಚಿತಪಡಿಸಿಕೊಳ್ಳುವ ಸಂಪ್ರದಾಯವನ್ನೂ ಪಾಲಿಸಲಿಲ್ಲ. ಆದರೆ ಸಂದರ್ಶನ ನಡೆಸಿದ ಅಧಮರು, ಹೊಟ್ಟೆಗೆ ಅನ್ನ ತಿನ್ನದ ಕೊಳಕರು, ನೀಚರು, ಲೋಫರ್‌ಗಳು, ಉತ್ತಮವಾಗಿ ಪ್ರಶ್ನೆಗಳಿಗೆ ಉತ್ತರಿಸಿದ ಆ ಅರ್ಹ ಅಭ್ಯರ್ಥಿಗೆ ಕೊಟ್ಟ ಅಂಕಗಳು ಕೇವಲ ಎರಡು. ಶೇ.ಹತ್ತಕ್ಕೂ ಕಡಿಮೆ. ಆ ಅಭ್ಯರ್ಥಿ ಎರಡನೇ ಸಲ ಅರ್ಜಿ ಹಾಕಿದಾಗಲೂ ಇದೇ ಪುನರಾವರ್ತನೆ. ಈ ಸಂದರ್ಶನ ನಡೆಸುವ ಹುಚ್ಚು-ಕಜ್ಜಿ ನಾಯಿಗಳನ್ನು ಏನು ಮಾಡಬೇಕು? ಅದನ್ನು ಈಗಲೂ ಮುಂದುವರೆಸುತ್ತಿರುವ ನಮ್ಮ ರಾಜಕಾರಣಿಗಳನ್ನು ಮತ್ತು ಅಧಿಕಾರಶಾಹಿಯನ್ನು ಹೇಗೆ ಶಿಕ್ಷಿಸಬೇಕು? ಒಳ್ಳೆಯತನವನ್ನು, ಯೋಗ್ಯತೆಯನ್ನು, ಪ್ರಾಮಾಣಿಕತೆಯನ್ನು ಶಿಕ್ಷಿಸುವ ಈ ಸಮಾಜಕ್ಕೆ ಭವಿಷ್ಯವುಂಟೆ?

ಈ ಹಿನ್ನೆಲೆಯಲ್ಲಿ ನೋಡಿದಾಗ ಕೇವಲ ಹದಿನೈದು ವರ್ಷದ ಹಿಂದೆ ಗೋವಿಂದ ಗೌಡರು ಮಾಡಿದ ಕಾರ್ಯ ನಮಗೆ ಗತಕಾಲದ್ದೆಂದು ಅನ್ನಿಸುತ್ತದೆ. ಈ ಹತ್ತು-ಹದಿನೈದು ವರ್ಷಗಳಲ್ಲಿ ಸಮಾಜ ಈ ಪರಿ ಸಂಪೂರ್ಣವಾಗಿ ಕೆಟ್ಟಿದ್ದಾದರೂ ಹೇಗೆ?

ಗೋವಿಂದ ಗೌಡರು ಹೇಳಿದ ಇನ್ನೊಂದು ಮಾತು: ಅವರಿಗೆ ಐವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಅವರ ಯಾವೊಬ್ಬ ಅಳಿಯನಾಗಲಿ ಮತ್ತು ಮಗನಾಗಲಿ, ಅವರು ಸಚಿವರಾಗಿರುವ ತನಕವೂ ತಾನು ಇಂತಹವರ ಮಗ ಅಥವ ಅಳಿಯ ಎಂದುಕೊಂಡು ವಿಧಾನಸೌಧದ ಒಳಗೆ ಕಾಲಿಡಲಿಲ್ಲ. ಅವರು ರಾಜಕೀಯದಲ್ಲಿರುವ ತನಕವೂ ಅವರ ಮಗ ರಾಜಕೀಯಕ್ಕೆ ಬರಲು ಬಿಡಲಿಲ್ಲ. ಈಗ ಅವರ ಮಗನಿಗೆ ಸುಮಾರು 57 ವರ್ಷ ಇರಬಹುದು. ಇತ್ತೀಚೆಗೆ ಕಾಂಗ್ರೆಸ್ ಸೇರಿಕೊಂಡಿರುವ ಅವರಿಗೆ ಅಪ್ಪನ ಕಡೆಯಿಂದ ಯಾವೊಂದು ರಾಜಕೀಯ ಬೆಂಬಲವೂ, ವಶೀಲಿಬಾಜಿಯೂ ಇಲ್ಲ. ಆತ ರಾಜಕೀಯ ಮಾಡಬೇಕಿದ್ದರೆ ಆತನೇ ಹೆಸರು ಸಂಪಾದಿಸಿಕೊಂಡು ತನ್ನ ಸ್ವಂತ ಯೋಗ್ಯತೆಯ ಮೇಲೆ ರಾಜಕೀಯ ಮಾಡಲಿ ಎನ್ನುವುದು ಅಪ್ಪನ ನಿಲುವು. ತಮ್ಮ ಹೆಂಡತಿಯರನ್ನು, ಮಕ್ಕಳನ್ನು, ಅಳಿಯರನ್ನು, ಮೊಮ್ಮಕ್ಕಳನ್ನು, ಕೊನೆಗೆ ಪ್ರೇಯಸಿಯರನ್ನೂ ಸಹ, ಅನೈತಿಕ ಮಾರ್ಗಗಳಿಂದ ರಾಜಕೀಯ ನಾಯಕರನ್ನಾಗಿ ಪ್ರತಿಷ್ಠಾಪಿಸಲು ಯತ್ನಿಸುತ್ತಿರುವ ನಮ್ಮ ರಾಜಕೀಯ ನಾಯಕರು ಗೋವಿಂದ ಗೌಡರ ಜೀವನಾಚರಣೆಯನ್ನು ಗಮನಿಸಿ ತಮ್ಮ ಕುಕೃತ್ಯಗಳಿಗೆ ನೇಣು ಹಾಕಿಕೊಳ್ಳಬೇಕು.

ಇವತ್ತಿನ ರಾಜಕೀಯ ಮತ್ತು ಸಾಮಾಜಿಕ ಪರಿಸ್ಥಿತಿಯ ಬಗ್ಗೆ ನಮ್ಮೆಲ್ಲರಿಗೂ ಇರುವಷ್ಟೇ ಅಸಮಾಧಾನ ಈ ವಯಸ್ಸಿನಲ್ಲಿಯೂ ಗೋವಿಂದ ಗೌಡರಿಗೆ ಇದೆ. ಹಾಗೆಂದು ಅವರು ನಮಗೆ ಕೇವಲ ನಿರಾಶೆಯ ಮಾತನಾಡಿ ಕಳುಹಿಸಲಿಲ್ಲ. ಬದಲಿಗೆ ಇನ್ನಷ್ಟು ಉತ್ಸಾಹ ತುಂಬಿ, ಜೀವನಪ್ರೀತಿಯನ್ನು ಹೆಚ್ಚಿಸಿ ಕಳುಹಿಸಿದರು.

ಕರ್ನಾಟಕದಲ್ಲಿ ಈಗ ಬದುಕಿರುವ ಎಷ್ಟು ಹಿರಿಯ ರಾಜಕಾರಣಿಗಳ ಬಗ್ಗೆ ನಾವು ಹೀಗೆ ಪ್ರೀತಿಯಿಂದ ಮತ್ತು ಗೌರವದಿಂದ ಮಾತನಾಡಲು ಸಾಧ್ಯ?