ನವೀನ್ ಸೂರಿಂಜೆ ಮೇಲಿನ ಆರೋಪಗಳನ್ನು ಕೈಬಿಡಲು ಸರ್ಕಾರದ ನಿರ್ಧಾರ

ಸ್ನೇಹಿತರೆ,

ನಮ್ಮ ಹಲವು ಓದುಗರಿಗೆ ಮತ್ತು ವರ್ತಮಾನ.ಕಾಮ್‌ನ ಫೇಸ್‌ಬುಕ್ ವಲಯದವರಿಗೆ (http://www.facebook.com/vartamaana) ಈ ವಿಷಯ ನೆನ್ನೆಯೇ ಗೊತ್ತಾಗಿತ್ತು. ನೆನ್ನೆ (31/1/13) ನಡೆದ ರಾಜ್ಯ ಸಚಿವ-ಸಂಪುಟದ ಸಭೆಯಲ್ಲಿ ನವೀನ್ ಸೂರಿಂಜೆಯವರ ವಿರುದ್ಧ  ಹೂಡಲಾಗಿದ್ದ ಆರೋಪಗಳನ್ನು ಹಿಂದೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.

ರಾಜ್ಯದ ಪತ್ರಕರ್ತರು, ಲೇಖಕರು, ಪ್ರಗತಿಪರ ಹೋರಾಟಗಾರರು ಜನವರಿ 5 ರಿಂದ 7 ರವರೆಗೆ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹದ ಎರಡನೇ ದಿನದ ಸಂಜೆ ಗೃಹಸಚಿವ ಆರ್.ಅಶೋಕ್ ಸ್ಥಳಕ್ಕೆ ಆಗಮಿಸಿ ನವೀನ್ ಸೂರಿಂಜೆಯವರ ಮೇಲಿನ ಆರೋಪಗಳನ್ನು ಕೈಬಿಡಲು ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ಕೊಟ್ಟಿದ್ದದ್ದು ನಿಮಗೆ ತಿಳಿದಿರುವಂತಹುದೆ. ಆದರೆ, ಈ ಪ್ರಕ್ರಿಯೆ ಸಂಪುಟದ ಮುಂದೆ ಬರಲು ಮೂರು-ನಾಲ್ಕು ವಾರಗಳ ಸುದೀರ್ಘ ಸಮಯವನ್ನೇ ತೆಗೆದುಕೊಂಡಿತು. naveen-soorinjeಹಲವು ಸಂದರ್ಭಗಳಲ್ಲಿ ಅದೃಷ್ಟವೂ (ಸಮಯ) ನಮ್ಮ ಕಡೆ ಇರಲಿಲ್ಲ.  ಮಧ್ಯೆಮಧ್ಯೆ ಬಂದ  ದೀರ್ಘ ರಜೆಗಳು, ಅಧಿಕಾರಶಾಹಿಯ ನಿಧಾನಗತಿ,  ಸಂಬಂಧಪಟ್ಟ ಅಧಿಕಾರಿಗಳು ರಜೆ ಮೇಲೆ ಹೋಗಿದ್ದು, ಹೀಗೇ ಏನೇನೊ ಆಗಿ ನಮ್ಮೆಲ್ಲರ ತಾಳ್ಮೆ ಮತ್ತು ಪ್ರಯತ್ನವನ್ನೇ ಪ್ರಶ್ನಿಸಿಕೊಳ್ಳುವಂತೆ ಆಗಿಬಿಟ್ಟಿತ್ತು. ಆದರೂ ಹತ್ತಾರು ಜನರ ಎಡಬಿಡದ ಪ್ರಯತ್ನಗಳಿಂದ ಸೂರಿಂಜೆ ಪ್ರಕರಣದ ಕಡತ ಎಲ್ಲಾ ಅಧಿಕಾರಶಾಹಿಯ ಹಂತಗಳನ್ನು ದಾಟಿ ನೆನ್ನೆ ಸಂಪುಟ-ಸಭೆಯ ಮುಂದೆ ಬಂದಿತು. ಸರ್ಕಾರದ ಹಲವು ಸಚಿವರ ಪ್ರಯತ್ನದ ಫಲವಾಗಿ ಪ್ರಕರಣ ಹಿಂದೆಗೆದುಕೊಳ್ಳಬೇಕೆಂಬ ತೀರ್ಮಾನವೂ ಆಯಿತು.

ಆದರೆ, ನವೀನ್ ಸೂರಿಂಜೆ ತಕ್ಷಣವೇ ಬಿಡುಗಡೆ ಆಗುವುದಿಲ್ಲ. ಕಾನೂನು ಪ್ರಕ್ರಿಯೆಗಳು ಮುಗಿಯಲು ಇನ್ನೂ ಒಂದು ವಾರ ಹಿಡಿಯಬಹುದು. ಬಹುಶಃ ಮುಂದಿನ ವಾರದಲ್ಲಿ ನವೀನ್ ಜೈಲಿನಿಂದ ಹೊರಬರುವ ನಿರೀಕ್ಷೆ ಇದೆ.

ಈ ಇಷ್ಟೂ ದಿನಗಳಲ್ಲಿ ಹಲವಾರು ಜನ ನೇರವಾಗಿ ಕೆಲಸ ಮಾಡಿದ್ದರೆ, ಮತ್ತೂ ಹಲವರು ಪರೋಕ್ಷವಾಗಿ ಸಹಾಯಹಸ್ತ ಚಾಚಿದ್ದರು. ಈ ಒಂದು ತಿಂಗಳಿನಲ್ಲಿ ಸಂಬಂಧಪಟ್ಟವರು ಪರಸ್ಪರ ಕರೆ ಮಾಡಿರುವ ಮತ್ತು ಸಂದೇಶಗಳನ್ನು ಕಳುಹಿಸಿರುವ ಸಂಖ್ಯೆ ಲೆಕ್ಕವಿಲ್ಲದಷ್ಟು. ಮಾಡುವ ಕೆಲಸ ಇನ್ನೂ ಇದೆ. ಆದರೆ ಒಂದು ಪ್ರಮುಖ ಘಟ್ಟ ದಾಟಿಯಾಗಿದೆ.

ಮತ್ತೊಮ್ಮೆ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ  ಈ ತಾರ್ಕಿಕ ಹಂತ ಮುಟ್ಟಿಸಲು ನೆರವಾದ ಎಲ್ಲರಿಗೂ, ಶರಣು.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ


ಇದು ನೆನ್ನೆಯ ಸಚಿವ ಸಂಪುಟದ ತೀರ್ಮಾನದ ಬಗ್ಗೆ ಇಂದು ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿಗಳು:

ವಿಜಯ ಕರ್ನಾಟಕ:
vijaykarnataka_020113

ಪ್ರಜಾವಾಣಿ:
prajavani_020113

The Hindu:
hindu_010213

2 thoughts on “ನವೀನ್ ಸೂರಿಂಜೆ ಮೇಲಿನ ಆರೋಪಗಳನ್ನು ಕೈಬಿಡಲು ಸರ್ಕಾರದ ನಿರ್ಧಾರ

  1. Ananda Prasad

    ನವೀನ್ ಪ್ರಕರಣ ಸಚಿವ ಸಂಪುಟ ಸಭೆಯ ಮುಂದೆ ಬರಲು ವಿಳಂಬವಾಗಲು ಸರ್ಕಾರದ ಮೇಲೆ ‘ದೇಶಭಕ್ತ’ ಸಂಘಟನೆಯ ಹಿಡಿತ ಇರುವುದು ಪ್ರಧಾನ ಕಾರಣ. ‘ದೇಶಭಕ್ತರಿಗೆ ‘ ಇರುವ ತಮ್ಮ ಕೃತ್ಯಗಳನ್ನು ಬಯಲಿಗೆಳೆದು ದೇಶಾದ್ಯಂತ ಮುಜುಗರ ಉಂಟುಮಾಡಿದ ವ್ಯಕ್ತಿಯನ್ನು ಸಾಧ್ಯವಾದಷ್ಟೂ ಹೆಚ್ಚ್ಚು ಸಮಯ ಜೈಲಿನಲ್ಲಿ ಕೊಳೆಯುವಂತೆ ಮಾಡುವ ಸೇಡಿನ ಮನೋಭಾವವೇ ಇದಕ್ಕೆ ಕಾರಣ. ಸರ್ಕಾರದ ಮೇಲೆ ‘ದೇಶಭಕ್ತರ’ ಪ್ರಭಾವ ಮತ್ತು ಹಿಡಿತ ಯಾವ ಮಟ್ಟದಲ್ಲಿ ಇದೆ ಎಂದು ಇದರಿಂದ ತಿಳಿಯುತ್ತದೆ.

    Reply
  2. Mahesh

    ಈ ಸಂದರ್ಭದಲ್ಲಿ ಹಟಬಿಡದೇ, ದಿಟ್ಟವಾದ ಹೋರಾಟ ನಡೆಸಿದ ವರ್ತಮಾನ ಬಳಗಕ್ಕೆ ಶುಭಹಾರೈಕೆಗಳು

    Reply

Leave a Reply

Your email address will not be published. Required fields are marked *