Daily Archives: February 2, 2013

ರತನ್ ಟಾಟಾ ಎಂಬ ಅಪ್ಪಟ ಮನುಷ್ಯನ ಕುರಿತು


– ಡಾ.ಎನ್.ಜಗದೀಶ್ ಕೊಪ್ಪ


 

ಕಳೆದ ಇಪ್ಪತ್ತೈದು ವರ್ಷಗಳಿಂದ ಓರ್ವ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ, ಸಂಶೋಧಕನಾಗಿ ಭಾರತದ ವಾಣಿಜ್ಯ ಮತ್ತು ಕೃಷಿ ಮತ್ತು ಕೈಗಾರಿಕೆಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದವನು ನಾನು. ಕೈಗಾರಿಕೋದ್ಯಮಿಗಳ ನಡೆ, ನುಡಿಗಳು ನನ್ನ ಆಸಕ್ತಿಯ ಅಂಶಗಳಲ್ಲಿ ಒಂದು. ಭಾರತದ ಅತಿ ದೊಡ್ಡ ಉದ್ಯಮವಾದ ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷನಾಗಿ ಇಪ್ಪೊತ್ತೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿ; ಮೊನ್ನೆ ಮೊನ್ನೆ ನಿವೃತ್ತರಾದ ರತನ್ ಟಾಟಾ ಬಗ್ಗೆ ಮೊದಲಿನಿಂದಲೂ ನನಗೆ ಕುತೂಹಲವಿತ್ತು. ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿ ಉಳಿದು ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ನಿವೃತ್ತರಾದ ರತನ್ ಟಾಟಾ ಮೊನ್ನೆ ಮುಂಬೈ ನಗರದಿಂದ ತಮ್ಮ ಖಾಸಗಿ ವಿಮಾನವನ್ನು ತಾವೇ ಹಾರಿಸಿಕೊಂಡು ಹುಬ್ಬಳ್ಳಿ ನಗರಕ್ಕೆ ಬಂದಿದ್ದರು. ತಮ್ಮ ಎರಡು ದಿನಗಳ ಕಾರ್ಯಕ್ರಮದಲ್ಲಿ ಸಭಿಕರೊಂದಿಗೆ ಮುಕ್ತವಾಗಿ ತಮ್ಮ ಬದುಕಿನ ಕೆಲವು ವಿಚಾರ ಮತ್ತು ವಿಷಾದಗಳನ್ನು ಹಂಚಿಕೊಂಡರು. ಅವರ ಮಾತುಗಳನ್ನು ಕೇಳಿದಾಗ ಈ ದೇಶದಲ್ಲಿ ನಂಬಿಕೆಗೆ ಅರ್ಹರಾದ ವ್ಯಕ್ತಿಗಳಲ್ಲಿ ರತನ್‌ಟಾಟಾ ಕೂಡ ಒಬ್ಬರು ಎಂದು ನನಗೆ ಕೂಡಲೇ ಅನಿಸಿತು.

ಬಂಡವಾಳಶಾಹಿ ಜಗತ್ತು ಮತ್ತು ಅದರ ವಾರಸುದಾರರ ಮಾತುಗಳನ್ನು ಅಷ್ಟು ಸುಲಭವಾಗಿ ಒಪ್ಪಬಾರದೆಂಬುದು ನನ್ನ ನಿಲುವು. ಆದರೆ ರತನ್ ಟಾಟಾ ಅವರ ಮಾತುಗಳಲ್ಲಿ ಕಪಟತನವಿರಲಿಲ್ಲ. ಅವರು ಆಡಿದ ಪ್ರತಿಮಾತುಗಳು ಹೃದಯದಿಂದ ಬಂದ ನುರಿತ ಅನುಭವಿ ದಾರ್ಶನಿಕನೊಬ್ಬನ ಮಾತುಗಳಂತಿದ್ದವು.

ಹುಬ್ಬಳ್ಳಿ ನಗರದಲ್ಲಿ ದೇಶಪಾಂಡೆ ಪೌಂಡೆಶನ್ ಆಯೋಜಿಸಿದ್ದ “ಅಭಿವೃದ್ಧಿಯ ಸಂವಾದಗಳು” ಕಾರ್ಯಕ್ರಮದಲ್ಲಿ ರತನ್ ಟಾಟಾ ಪಾಲ್ಗೊಂಡಿದ್ದರು. RatanTataತಮ್ಮ ಬಾಲ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಅತ್ಯಂತ ನೋವು ಮತ್ತು ವಿಷಾದದಿಂದ ಉತ್ತರಿಸಿದ ಟಾಟಾ, ನನಗೆ ಬಾಲ್ಯವೆಂಬುದೇ ಇರಲಿಲ್ಲ, ಎಲ್ಲಾ ಮಕ್ಕಳಂತೆ ಬಾಲ್ಯದ ಸುಖ ಅನುಭವಿಸುವ ಸ್ವಾತಂತ್ರ್ಯ ನನಗಿರಲಿಲ್ಲ ಎಂದು ಹೇಳಿದರು. ಚಿಕ್ಕ ವಯಸ್ಸಿನಲ್ಲೇ ದೂರದ ಅಮೇರಿಕಾಕ್ಕೆ ಹೋಗಿ ಶಿಕ್ಷಣ ಕಲಿತಿದ್ದು, ಅಲ್ಲಿ ವಿಧ್ಯಾಭ್ಯಾಸ ಮುಗಿಸಿ ಇಪ್ಪತ್ತೊಂದನೇ ವಯಸ್ಸಿಗೆ ಭಾರತಕ್ಕೆ ಬಂದು ಟಾಟಾ ಕಂಪನಿಯಲ್ಲಿ ತೊಡಗಿಸಿಕೊಂಡು ತಮ್ಮ ಬಾಲ್ಯ, ಯೌವನ ಕಳೆದು ಹೋದದ್ದನ್ನು ಹೇಳಿ, ಬಾಲ್ಯ ನೆನಪಿಸಿಕೊಂಡರೆ ಬೇಸರವಾಗುತ್ತದೆ. ನಿಮಗಿದ್ದ ಬಾಲ್ಯ ಎಂದೂ ನನಗೆ ದಕ್ಕಲಿಲ್ಲ ಎಂದರು.

ನಿವೃತ್ತಿ ನಂತರದ ದಿನಗಳನ್ನು ಅತ್ಯಂತ ಖುಷಿಯಿಂದ ಹೇಳಿಕೊಂಡ ರತನ್, ನಿವೃತ್ತಿಯಾದ ಮೇಲೆ ನನಗಿಂತ ನನ್ನ ಮುದ್ದಿನ ಎರಡು ನಾಯಿಗಳು ಹೆಚ್ಚು ಖುಷಿಯಾಗಿವೆ ಎಂದು ಹೇಳುತ್ತಾ ನಕ್ಕರು. ಮುಂಬೈ ನಗರದ ತನ್ನ ಬಂಗಲೆಯಲ್ಲಿ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾ, ಸಮಾಜ ಸೇವೆಯಲ್ಲಿ ತೊಡಗಿರುವ ಬಗ್ಗೆ ತಿಳಿಸಿದರು.

ಒಬ್ಬ ದಕ್ಷ ಆಡಳಿತಗಾರನಾಗಿ, ಟಾಟಾ ಕಂಪನಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿದ ರತನ್ ಟಾಟಾಗೆ ಭಾರತದ ಹಳ್ಳಿಗಳ ಕುರಿತು ಇರುವ ಕಾಳಜಿ ಮತ್ತು ಈವರೆಗೆ ಸದುಪಯೋಗವಾಗದೆ ಉಳಿದಿರುವ ಗ್ರಾಮೀಣ ಜಗತ್ತಿನ ಮಾನವ ಸಂಪನ್ಮೂಲಗಳ ಕುರಿತಂತೆ ತುಂಬಾ ಒಳ್ಳೆಯ ಒಳನೋಟಗಳಿವೆ.

ಸಧೃಡ ಭಾರತ ನಿರ್ಮಾಣವಾಗಬೇಕಾದರೆ ನಾವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಇಂಜಿನಿಯರ್‌ಗಳು ಮತ್ತು ತಂತ್ರಜ್ಙರನ್ನು ರೂಪಿಸಬೇಕು, ಇದಕ್ಕಾಗಿ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಹಳ್ಳಿಗಳ ಯುವಕರಿಗೆ ಉನ್ನತ ಶಿಕ್ಷಣ ನೀಡುವಾಗ ಮಾನವೀಯ ಮುಖಗಳನ್ನು ಹೊಂದಿರಬೇಕು ಎಂದು ರತನ್ ಟಾಟಾ ಪ್ರತಿಪಾದಿಸುತ್ತಿದ್ದಾಗ, ನನಗೆ ಅವರ ಅಜ್ಜ ನೆನಪಾದರು. ರತನ್ ಕೂಡ ಟಾಟಾ ಕುಟುಂಬದ ಕುಡಿಯಲ್ಲವೆ? ಎಂದು ಮನಸ್ಸಿಗೆ ಅನಿಸತೊಡಗಿತು. ಇಂತಹದ್ದೇ ದೃಷ್ಟಿಕೋನ ಇವರ ತಾತ ಜೇಮ್ಸ್ ಶೇಟ್‌ಜಿ ಟಾಟಾರಿಗೆ ಇದ್ದ ಕಾರಣ ಜಗತ್ತಿನ ಅತಿಶ್ರೇಷ್ಠ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೈನ್ಸ್ ಸಂಸ್ಥೆ ಬೆಂಗಳೂರಿನಲ್ಲಿ ತಲೆ ಎತ್ತಲು ಸಾಧ್ಯವಾಯಿತು. 1907 ರಲ್ಲಿ ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಉಚಿತವಾಗಿ ಸ್ಥಳ ನೀಡಿದ ಫಲವಾಗಿ ನಾನೂರು ಎಕರೆ ಪ್ರದೇಶದಲ್ಲಿ 1909 ರ ಮೇ 27 ರಂದು ಟಾಟಾ ಇನ್ಸಿಟ್ಯೂಟ್ ಎಂಬ ಹೆಸರಿನಲ್ಲಿ ಈ ಸಂಸ್ಥೆ ತಲೆ ಎತ್ತಿತು. IIScಭಾರತದ ನೆಲದಲ್ಲಿ ದೇಶೀಯ ಪ್ರತಿಭೆಗಳನ್ನು ತಯಾರು ಮಾಡಬೇಕೆಂಬ ಟಾಟಾ ಅವರ ಕನಸು ಈಗ ನೆನಸಾಗಿದೆ. ಹಲವು ಶಾಖೆಗಳಾಗಿ ಬೆಳೆದಿರುವ ಈ ಸಂಸ್ಥೆಯ ಆವರಣದಲ್ಲಿ ಗಿಡ ಮರಗಳ ಹಸಿರಿನ ನಡುವೆ ಓಡಾಡುವುದು ಮನಸ್ಸಿಗೆ ಮುದ ನೀಡುತ್ತದೆ.

ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಸೇವೆ ಕುರಿತಂತೆ ಖಚಿತ ನಿಲುವು ಹೊಂದಿರುವ ರತನ್ ಟಾಟಾ, ಸಿರಿವಂತರು, ಅಥವಾ ಉದ್ಯಮ ಸಂಸ್ಥೆಗಳು ಕೇವಲ ಹಣವನ್ನು ಧಾನ ಮಾಡಿದರೆ ಸಮಾಜ ಸೇವೆಯಾಗುವುದಿಲ್ಲ, ನೀಡಿದ ಹಣ ಸದ್ಭಳಕೆಯಾಗುವ ಹಾಗೆ ನಿಗಾ ವಹಿಸಬೇಕು ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕಾಗಿರುವುದು ಸಮಾಜ ಸೇವೆಯ ಕರ್ತವ್ಯಗಳಲ್ಲಿ ಒಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೊನೆಯಲ್ಲಿ ತಮ್ಮ ಕನಸಿನ ಕೂಸಾದ ನ್ಯಾನೊ ಕಾರು ಮಾರುಕಟ್ಟೆಯಲ್ಲಿ ವಿಫಲವಾದುದಕ್ಕೆ ಮತ್ತು ಮಧ್ಯಮ ವರ್ಗದ ಮನ ಗೆಲ್ಲಲಾಗದ ನೋವಿನ ಕಥನವನ್ನು ವಿವರಿಸಿದರು. ನ್ಯಾನೊ ಕಾರು ರತನ್ ಟಾಟಾ ಅವರ ಕನಸು. ಮಳೆಗಾಲದ ಒಂದು ರಾತ್ರಿ ಕಂಪನಿಯ ಕೆಲಸ ಮುಗಿಸಿ ತಮ್ಮ ಐಷಾರಾಮಿ ಕಾರಿನಲ್ಲಿ ರತನ್ ಟಾಟಾ ಮನೆಗೆ ವಾಪಾಸ್ಸಾಗುತ್ತಿದ್ದರು. ಆದಿನ ಮುಂಬೈ ನಗರದಲ್ಲಿ ಜೋರು ಮಳೆ. ಮಧ್ಯಮ ವರ್ಗದ ದಂಪತಿಗಳಿಬ್ಬರು ತೀವ್ರ ಅನಾರೋಗ್ಯಕ್ಕೆ ತುತ್ತಾದ ತಮ್ಮ ಮಗುವನ್ನು ಸುರಿಯುತ್ತಿರುವ ಮಳೆಯಲ್ಲೇ ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವುದನ್ನು ನೋಡಿದರು. ಆ ಕ್ಷಣವೆ ಮಧ್ಯಮ ವರ್ಗಕ್ಕೆ ಕೈಗೆಟುಕುವ ಬೆಲೆಯಲ್ಲಿ ಕಾರು ತಯಾರಿಸಬೇಕೆಂಬ ಕನಸು ಅವರೆದೆಯಲ್ಲಿ ಚಿಗುರೊಡೆಯಿತು. ಕನಸನ್ನು ನೆನಸಾಗಿಸಲು ಅವರು ಅನೇಕ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸಿದರು. ಇವುಗಳಲ್ಲಿ ಕಾರು ತಯಾರಿಕಾ ಘಟಕಕ್ಕೆ ಸಂಬಂಧಿಸದಂತೆ ಸರ್ಕಾರ ಭೂಮಿ ನೀಡಿದ ವಿಚಾರದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹೋರಾಟ ಒಂದು ದೊಡ್ಡ ಅಧ್ಯಾಯ.

ಎಲ್ಲಾ ಅಡೆ ತಡೆಗಳನ್ನು ದಾಟಿ ಗುಜರಾತಿನ ಘಟಕದ ಮೂಲಕ ಅಂತಿಮವಾಗಿ ಕಾರು ಮಾರುಕಟ್ಟೆಗೆ ಬಂದಾಗ ಟಾಟಾ ಅವರ Tata-with-Nanoನಿರೀಕ್ಷೆ ಸುಳ್ಳಾಯಿತು. ಬಟ್ಟೆ ಬದಲಿಸುವಂತೆ ಕಾರು, ಟಿವಿ, ರೆಪ್ರಿಜೇಟರ್, ಮೊಬೈಲ್ ಹೀಗೆ ಎಲ್ಲವನ್ನು ಬದಲಿಸುವ ಹುಚ್ಚಿಗೆ ಬಲಿ ಬಿದ್ದಿರುವ ಮಧ್ಯಮ ವರ್ಗದ ಜನಕ್ಕೆ ನ್ಯಾನೊ ಇಷ್ಟವಾಗಲಿಲ್ಲ. ಇದರಿಂದ ವಿಚಲಿತಗೊಂಡ ರತನ್‌ ಟಾಟಾ ಈ ಕುರಿತು ಸಮೀಕ್ಷೆ ನಡೆಸಿದಾಗ, “ನ್ಯಾನೊ ಕಾರು ಕೊಂಡರೆ ಸಮಾಜದಲ್ಲಿ ನಮ್ಮನ್ನು ಕೀಳಾಗಿ ನೋಡುತ್ತಾರೆ. ಈ ಕಾರಣಕ್ಕಾಗಿ ಸಾಲಮಾಡಿ ಒಳ್ಳೆಯ ಕಾರು ಖರೀದಿಸಲು ಇಷ್ಟ ಪಡುತ್ತೇವೆ,” ಎಂಬ ಮಧ್ಯಮ ವರ್ಗದ ಜನರ ಭ್ರಮೆ ನೋಡಿ ಅವರಿಗೆ ತೀವ್ರ ವಿಷಾದವಾಯಿತು.

ಇಂತಹ ಒಂದು ಸೋಲನ್ನು ಯಾವುದೇ ಮುಚ್ಚು ಮರೆಯಿಲ್ಲದೆ ರತನ್ ಟಾಟಾ ಹೇಳಿಕೊಂಡಾಗ ನನಗೆ ಅವರ ಬಗ್ಗೆ ಇದ್ದ ಗೌರವ ಇಮ್ಮಡಿಸಿತು. ಜೊತೆ ಜೊತೆಗೆ ಸದಾ “ನಾನೇ ಸೃಷ್ಟಿ ಬ್ರಹ್ಮ” ಎಂಬಂತೆ ಮಾತನಾಡುವ ನಮ್ಮ ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ ನೆನಪಾದರು.