ರತನ್ ಟಾಟಾ ಎಂಬ ಅಪ್ಪಟ ಮನುಷ್ಯನ ಕುರಿತು


– ಡಾ.ಎನ್.ಜಗದೀಶ್ ಕೊಪ್ಪ


 

ಕಳೆದ ಇಪ್ಪತ್ತೈದು ವರ್ಷಗಳಿಂದ ಓರ್ವ ಅರ್ಥಶಾಸ್ತ್ರದ ವಿದ್ಯಾರ್ಥಿಯಾಗಿ, ಸಂಶೋಧಕನಾಗಿ ಭಾರತದ ವಾಣಿಜ್ಯ ಮತ್ತು ಕೃಷಿ ಮತ್ತು ಕೈಗಾರಿಕೆಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದವನು ನಾನು. ಕೈಗಾರಿಕೋದ್ಯಮಿಗಳ ನಡೆ, ನುಡಿಗಳು ನನ್ನ ಆಸಕ್ತಿಯ ಅಂಶಗಳಲ್ಲಿ ಒಂದು. ಭಾರತದ ಅತಿ ದೊಡ್ಡ ಉದ್ಯಮವಾದ ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷನಾಗಿ ಇಪ್ಪೊತ್ತೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿ; ಮೊನ್ನೆ ಮೊನ್ನೆ ನಿವೃತ್ತರಾದ ರತನ್ ಟಾಟಾ ಬಗ್ಗೆ ಮೊದಲಿನಿಂದಲೂ ನನಗೆ ಕುತೂಹಲವಿತ್ತು. ಬದುಕಿನುದ್ದಕ್ಕೂ ಬ್ರಹ್ಮಚಾರಿಯಾಗಿ ಉಳಿದು ತನ್ನ ಎಪ್ಪತ್ತನೇ ವಯಸ್ಸಿನಲ್ಲಿ ನಿವೃತ್ತರಾದ ರತನ್ ಟಾಟಾ ಮೊನ್ನೆ ಮುಂಬೈ ನಗರದಿಂದ ತಮ್ಮ ಖಾಸಗಿ ವಿಮಾನವನ್ನು ತಾವೇ ಹಾರಿಸಿಕೊಂಡು ಹುಬ್ಬಳ್ಳಿ ನಗರಕ್ಕೆ ಬಂದಿದ್ದರು. ತಮ್ಮ ಎರಡು ದಿನಗಳ ಕಾರ್ಯಕ್ರಮದಲ್ಲಿ ಸಭಿಕರೊಂದಿಗೆ ಮುಕ್ತವಾಗಿ ತಮ್ಮ ಬದುಕಿನ ಕೆಲವು ವಿಚಾರ ಮತ್ತು ವಿಷಾದಗಳನ್ನು ಹಂಚಿಕೊಂಡರು. ಅವರ ಮಾತುಗಳನ್ನು ಕೇಳಿದಾಗ ಈ ದೇಶದಲ್ಲಿ ನಂಬಿಕೆಗೆ ಅರ್ಹರಾದ ವ್ಯಕ್ತಿಗಳಲ್ಲಿ ರತನ್‌ಟಾಟಾ ಕೂಡ ಒಬ್ಬರು ಎಂದು ನನಗೆ ಕೂಡಲೇ ಅನಿಸಿತು.

ಬಂಡವಾಳಶಾಹಿ ಜಗತ್ತು ಮತ್ತು ಅದರ ವಾರಸುದಾರರ ಮಾತುಗಳನ್ನು ಅಷ್ಟು ಸುಲಭವಾಗಿ ಒಪ್ಪಬಾರದೆಂಬುದು ನನ್ನ ನಿಲುವು. ಆದರೆ ರತನ್ ಟಾಟಾ ಅವರ ಮಾತುಗಳಲ್ಲಿ ಕಪಟತನವಿರಲಿಲ್ಲ. ಅವರು ಆಡಿದ ಪ್ರತಿಮಾತುಗಳು ಹೃದಯದಿಂದ ಬಂದ ನುರಿತ ಅನುಭವಿ ದಾರ್ಶನಿಕನೊಬ್ಬನ ಮಾತುಗಳಂತಿದ್ದವು.

ಹುಬ್ಬಳ್ಳಿ ನಗರದಲ್ಲಿ ದೇಶಪಾಂಡೆ ಪೌಂಡೆಶನ್ ಆಯೋಜಿಸಿದ್ದ “ಅಭಿವೃದ್ಧಿಯ ಸಂವಾದಗಳು” ಕಾರ್ಯಕ್ರಮದಲ್ಲಿ ರತನ್ ಟಾಟಾ ಪಾಲ್ಗೊಂಡಿದ್ದರು. RatanTataತಮ್ಮ ಬಾಲ್ಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಅತ್ಯಂತ ನೋವು ಮತ್ತು ವಿಷಾದದಿಂದ ಉತ್ತರಿಸಿದ ಟಾಟಾ, ನನಗೆ ಬಾಲ್ಯವೆಂಬುದೇ ಇರಲಿಲ್ಲ, ಎಲ್ಲಾ ಮಕ್ಕಳಂತೆ ಬಾಲ್ಯದ ಸುಖ ಅನುಭವಿಸುವ ಸ್ವಾತಂತ್ರ್ಯ ನನಗಿರಲಿಲ್ಲ ಎಂದು ಹೇಳಿದರು. ಚಿಕ್ಕ ವಯಸ್ಸಿನಲ್ಲೇ ದೂರದ ಅಮೇರಿಕಾಕ್ಕೆ ಹೋಗಿ ಶಿಕ್ಷಣ ಕಲಿತಿದ್ದು, ಅಲ್ಲಿ ವಿಧ್ಯಾಭ್ಯಾಸ ಮುಗಿಸಿ ಇಪ್ಪತ್ತೊಂದನೇ ವಯಸ್ಸಿಗೆ ಭಾರತಕ್ಕೆ ಬಂದು ಟಾಟಾ ಕಂಪನಿಯಲ್ಲಿ ತೊಡಗಿಸಿಕೊಂಡು ತಮ್ಮ ಬಾಲ್ಯ, ಯೌವನ ಕಳೆದು ಹೋದದ್ದನ್ನು ಹೇಳಿ, ಬಾಲ್ಯ ನೆನಪಿಸಿಕೊಂಡರೆ ಬೇಸರವಾಗುತ್ತದೆ. ನಿಮಗಿದ್ದ ಬಾಲ್ಯ ಎಂದೂ ನನಗೆ ದಕ್ಕಲಿಲ್ಲ ಎಂದರು.

ನಿವೃತ್ತಿ ನಂತರದ ದಿನಗಳನ್ನು ಅತ್ಯಂತ ಖುಷಿಯಿಂದ ಹೇಳಿಕೊಂಡ ರತನ್, ನಿವೃತ್ತಿಯಾದ ಮೇಲೆ ನನಗಿಂತ ನನ್ನ ಮುದ್ದಿನ ಎರಡು ನಾಯಿಗಳು ಹೆಚ್ಚು ಖುಷಿಯಾಗಿವೆ ಎಂದು ಹೇಳುತ್ತಾ ನಕ್ಕರು. ಮುಂಬೈ ನಗರದ ತನ್ನ ಬಂಗಲೆಯಲ್ಲಿ ಸಾಕು ಪ್ರಾಣಿಗಳೊಂದಿಗೆ ಕಾಲ ಕಳೆಯುತ್ತಾ, ಸಮಾಜ ಸೇವೆಯಲ್ಲಿ ತೊಡಗಿರುವ ಬಗ್ಗೆ ತಿಳಿಸಿದರು.

ಒಬ್ಬ ದಕ್ಷ ಆಡಳಿತಗಾರನಾಗಿ, ಟಾಟಾ ಕಂಪನಿಯನ್ನು ಜಗತ್ತಿನಾದ್ಯಂತ ವಿಸ್ತರಿಸಿದ ರತನ್ ಟಾಟಾಗೆ ಭಾರತದ ಹಳ್ಳಿಗಳ ಕುರಿತು ಇರುವ ಕಾಳಜಿ ಮತ್ತು ಈವರೆಗೆ ಸದುಪಯೋಗವಾಗದೆ ಉಳಿದಿರುವ ಗ್ರಾಮೀಣ ಜಗತ್ತಿನ ಮಾನವ ಸಂಪನ್ಮೂಲಗಳ ಕುರಿತಂತೆ ತುಂಬಾ ಒಳ್ಳೆಯ ಒಳನೋಟಗಳಿವೆ.

ಸಧೃಡ ಭಾರತ ನಿರ್ಮಾಣವಾಗಬೇಕಾದರೆ ನಾವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಇಂಜಿನಿಯರ್‌ಗಳು ಮತ್ತು ತಂತ್ರಜ್ಙರನ್ನು ರೂಪಿಸಬೇಕು, ಇದಕ್ಕಾಗಿ ಸರ್ಕಾರಗಳು ಮತ್ತು ಖಾಸಗಿ ಸಂಸ್ಥೆಗಳು ಹಳ್ಳಿಗಳ ಯುವಕರಿಗೆ ಉನ್ನತ ಶಿಕ್ಷಣ ನೀಡುವಾಗ ಮಾನವೀಯ ಮುಖಗಳನ್ನು ಹೊಂದಿರಬೇಕು ಎಂದು ರತನ್ ಟಾಟಾ ಪ್ರತಿಪಾದಿಸುತ್ತಿದ್ದಾಗ, ನನಗೆ ಅವರ ಅಜ್ಜ ನೆನಪಾದರು. ರತನ್ ಕೂಡ ಟಾಟಾ ಕುಟುಂಬದ ಕುಡಿಯಲ್ಲವೆ? ಎಂದು ಮನಸ್ಸಿಗೆ ಅನಿಸತೊಡಗಿತು. ಇಂತಹದ್ದೇ ದೃಷ್ಟಿಕೋನ ಇವರ ತಾತ ಜೇಮ್ಸ್ ಶೇಟ್‌ಜಿ ಟಾಟಾರಿಗೆ ಇದ್ದ ಕಾರಣ ಜಗತ್ತಿನ ಅತಿಶ್ರೇಷ್ಠ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಇಂಡಿಯನ್ ಇನ್ಸಿಟ್ಯೂಟ್ ಆಪ್ ಸೈನ್ಸ್ ಸಂಸ್ಥೆ ಬೆಂಗಳೂರಿನಲ್ಲಿ ತಲೆ ಎತ್ತಲು ಸಾಧ್ಯವಾಯಿತು. 1907 ರಲ್ಲಿ ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಉಚಿತವಾಗಿ ಸ್ಥಳ ನೀಡಿದ ಫಲವಾಗಿ ನಾನೂರು ಎಕರೆ ಪ್ರದೇಶದಲ್ಲಿ 1909 ರ ಮೇ 27 ರಂದು ಟಾಟಾ ಇನ್ಸಿಟ್ಯೂಟ್ ಎಂಬ ಹೆಸರಿನಲ್ಲಿ ಈ ಸಂಸ್ಥೆ ತಲೆ ಎತ್ತಿತು. IIScಭಾರತದ ನೆಲದಲ್ಲಿ ದೇಶೀಯ ಪ್ರತಿಭೆಗಳನ್ನು ತಯಾರು ಮಾಡಬೇಕೆಂಬ ಟಾಟಾ ಅವರ ಕನಸು ಈಗ ನೆನಸಾಗಿದೆ. ಹಲವು ಶಾಖೆಗಳಾಗಿ ಬೆಳೆದಿರುವ ಈ ಸಂಸ್ಥೆಯ ಆವರಣದಲ್ಲಿ ಗಿಡ ಮರಗಳ ಹಸಿರಿನ ನಡುವೆ ಓಡಾಡುವುದು ಮನಸ್ಸಿಗೆ ಮುದ ನೀಡುತ್ತದೆ.

ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಸೇವೆ ಕುರಿತಂತೆ ಖಚಿತ ನಿಲುವು ಹೊಂದಿರುವ ರತನ್ ಟಾಟಾ, ಸಿರಿವಂತರು, ಅಥವಾ ಉದ್ಯಮ ಸಂಸ್ಥೆಗಳು ಕೇವಲ ಹಣವನ್ನು ಧಾನ ಮಾಡಿದರೆ ಸಮಾಜ ಸೇವೆಯಾಗುವುದಿಲ್ಲ, ನೀಡಿದ ಹಣ ಸದ್ಭಳಕೆಯಾಗುವ ಹಾಗೆ ನಿಗಾ ವಹಿಸಬೇಕು ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕಾಗಿರುವುದು ಸಮಾಜ ಸೇವೆಯ ಕರ್ತವ್ಯಗಳಲ್ಲಿ ಒಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೊನೆಯಲ್ಲಿ ತಮ್ಮ ಕನಸಿನ ಕೂಸಾದ ನ್ಯಾನೊ ಕಾರು ಮಾರುಕಟ್ಟೆಯಲ್ಲಿ ವಿಫಲವಾದುದಕ್ಕೆ ಮತ್ತು ಮಧ್ಯಮ ವರ್ಗದ ಮನ ಗೆಲ್ಲಲಾಗದ ನೋವಿನ ಕಥನವನ್ನು ವಿವರಿಸಿದರು. ನ್ಯಾನೊ ಕಾರು ರತನ್ ಟಾಟಾ ಅವರ ಕನಸು. ಮಳೆಗಾಲದ ಒಂದು ರಾತ್ರಿ ಕಂಪನಿಯ ಕೆಲಸ ಮುಗಿಸಿ ತಮ್ಮ ಐಷಾರಾಮಿ ಕಾರಿನಲ್ಲಿ ರತನ್ ಟಾಟಾ ಮನೆಗೆ ವಾಪಾಸ್ಸಾಗುತ್ತಿದ್ದರು. ಆದಿನ ಮುಂಬೈ ನಗರದಲ್ಲಿ ಜೋರು ಮಳೆ. ಮಧ್ಯಮ ವರ್ಗದ ದಂಪತಿಗಳಿಬ್ಬರು ತೀವ್ರ ಅನಾರೋಗ್ಯಕ್ಕೆ ತುತ್ತಾದ ತಮ್ಮ ಮಗುವನ್ನು ಸುರಿಯುತ್ತಿರುವ ಮಳೆಯಲ್ಲೇ ಸ್ಕೂಟರ್‌ನಲ್ಲಿ ಆಸ್ಪತ್ರೆಗೆ ಕೊಂಡೊಯ್ಯುವುದನ್ನು ನೋಡಿದರು. ಆ ಕ್ಷಣವೆ ಮಧ್ಯಮ ವರ್ಗಕ್ಕೆ ಕೈಗೆಟುಕುವ ಬೆಲೆಯಲ್ಲಿ ಕಾರು ತಯಾರಿಸಬೇಕೆಂಬ ಕನಸು ಅವರೆದೆಯಲ್ಲಿ ಚಿಗುರೊಡೆಯಿತು. ಕನಸನ್ನು ನೆನಸಾಗಿಸಲು ಅವರು ಅನೇಕ ಸವಾಲುಗಳು ಮತ್ತು ಅಡೆತಡೆಗಳನ್ನು ಎದುರಿಸಿದರು. ಇವುಗಳಲ್ಲಿ ಕಾರು ತಯಾರಿಕಾ ಘಟಕಕ್ಕೆ ಸಂಬಂಧಿಸದಂತೆ ಸರ್ಕಾರ ಭೂಮಿ ನೀಡಿದ ವಿಚಾರದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹೋರಾಟ ಒಂದು ದೊಡ್ಡ ಅಧ್ಯಾಯ.

ಎಲ್ಲಾ ಅಡೆ ತಡೆಗಳನ್ನು ದಾಟಿ ಗುಜರಾತಿನ ಘಟಕದ ಮೂಲಕ ಅಂತಿಮವಾಗಿ ಕಾರು ಮಾರುಕಟ್ಟೆಗೆ ಬಂದಾಗ ಟಾಟಾ ಅವರ Tata-with-Nanoನಿರೀಕ್ಷೆ ಸುಳ್ಳಾಯಿತು. ಬಟ್ಟೆ ಬದಲಿಸುವಂತೆ ಕಾರು, ಟಿವಿ, ರೆಪ್ರಿಜೇಟರ್, ಮೊಬೈಲ್ ಹೀಗೆ ಎಲ್ಲವನ್ನು ಬದಲಿಸುವ ಹುಚ್ಚಿಗೆ ಬಲಿ ಬಿದ್ದಿರುವ ಮಧ್ಯಮ ವರ್ಗದ ಜನಕ್ಕೆ ನ್ಯಾನೊ ಇಷ್ಟವಾಗಲಿಲ್ಲ. ಇದರಿಂದ ವಿಚಲಿತಗೊಂಡ ರತನ್‌ ಟಾಟಾ ಈ ಕುರಿತು ಸಮೀಕ್ಷೆ ನಡೆಸಿದಾಗ, “ನ್ಯಾನೊ ಕಾರು ಕೊಂಡರೆ ಸಮಾಜದಲ್ಲಿ ನಮ್ಮನ್ನು ಕೀಳಾಗಿ ನೋಡುತ್ತಾರೆ. ಈ ಕಾರಣಕ್ಕಾಗಿ ಸಾಲಮಾಡಿ ಒಳ್ಳೆಯ ಕಾರು ಖರೀದಿಸಲು ಇಷ್ಟ ಪಡುತ್ತೇವೆ,” ಎಂಬ ಮಧ್ಯಮ ವರ್ಗದ ಜನರ ಭ್ರಮೆ ನೋಡಿ ಅವರಿಗೆ ತೀವ್ರ ವಿಷಾದವಾಯಿತು.

ಇಂತಹ ಒಂದು ಸೋಲನ್ನು ಯಾವುದೇ ಮುಚ್ಚು ಮರೆಯಿಲ್ಲದೆ ರತನ್ ಟಾಟಾ ಹೇಳಿಕೊಂಡಾಗ ನನಗೆ ಅವರ ಬಗ್ಗೆ ಇದ್ದ ಗೌರವ ಇಮ್ಮಡಿಸಿತು. ಜೊತೆ ಜೊತೆಗೆ ಸದಾ “ನಾನೇ ಸೃಷ್ಟಿ ಬ್ರಹ್ಮ” ಎಂಬಂತೆ ಮಾತನಾಡುವ ನಮ್ಮ ಇನ್ಫೋಸಿಸ್ ಸಂಸ್ಥೆಯ ನಾರಾಯಣಮೂರ್ತಿ ನೆನಪಾದರು.

4 thoughts on “ರತನ್ ಟಾಟಾ ಎಂಬ ಅಪ್ಪಟ ಮನುಷ್ಯನ ಕುರಿತು

  1. Naveen_H

    ಈ ಲೇಖನದಿಂದ ನನ್ನಲ್ಲಿ ಜಗದೀಶ್ ಕೊಪ್ಪ ಅವರ ಬಗ್ಗೆ ಇದ್ದ ಒಂದು ತಪ್ಪು ಅಭಿಪ್ರಾಯ ಕಳಚಿದಂತಾಯಿತು. (ನಾನು ಇವರೊಬ್ಬ “ಪ್ರೊಪೆಸ್ಸಿನಲ್ ಸಮಾಜವಾದಿ” ಈ ದೇಶದಲ್ಲಿ ಬಡವರನ್ನು ಬಿಟ್ಟು ಉಳಿದೆಲ್ಲರೂ ಕೆಟ್ಟವರು ಎಂಬ ಅಭಿಪ್ರಾಯ ಹೊಂದಿದ್ದರೆ ಎಂದು ತಿಳಿದಿದ್ದೆ.)

    ಟಾಟಾ ಸಮೂಹ ಇಡೀ ಭಾರತದ ಉದ್ಯಮರನ್ಗದಲ್ಲಿಯೇ ಪ್ರತ್ಯೇಕವಾಗಿ ನಿಲ್ಲತ್ತೆ. ಬಹುಶಃ ಇದಕ್ಕೆ ಮೂಲ ಪುರುಷರು ಹಾಕಿ ಕೊಟ್ಟ ಮಾರ್ಗವೇ ಕಾರಣವಿರಬಹುದು. ಎಷ್ಟೇ ದೊಡ್ಡ ಉದಾರಿ ಉದ್ಯಮಿಯಾದರೂ ತನ್ನ ಗಳಿಕೆಯ ಅಬ್ಬಬ್ಬಾ ಅಂದರೆ ಶೇ ೧೦-೧೫ ರಷ್ಟು ದಾನಕ್ಕೆ ಮೀಸಲಿಡಬಹುದು. ಆದರೆ ಟಾಟಾ ಸಮೂಹದ ಮೂಲ ಸಂಸ್ಥೆಯಾದ ಟಾಟಾ ಸನ್ಸ್ ನಲ್ಲ್ಲಿ ಶೇ ೬೬ ರಷ್ಟು ಬಹುಮತದ ಪಾಲು ಇರುವದೆ ಟಾಟಾ ಧರ್ಮದತ್ತಿ ಸಂಸ್ಥೆಗಳದ್ದು ಹೀಗಾಗಿ ಲಾಭಗಳಿಕೆಯ ಅರ್ಧಕ್ಕೂ ಹೆಚ್ಚು ಹಣ ಹೋಗುವದೇ ದಾನಕ್ಕೆ!!

    ಇನ್ನು ಕೊನೆಯ ಸಾಲಿನಲ್ಲಿ ತಿಳಿಸಿದಂತೆ ರತನ್ ಟಾಟಾ ರಿಗೆ ಯಾವ ರಾಜಕೀಯ ಆಕಾಂಕ್ಷೆಗಳೂ ಇಲ್ಲಾ ಅಂತ ಕಾಣತ್ತೆ. ಹೀಗಾಗಿ ಪ್ರತಿ ರಾಷ್ಟ್ರಪತಿ ಚುನಾವಣೆ ಎದುರಾಗಲೂ “I am not in the race of Presidentship” ಎಂದು Times of India ದಲ್ಲಿ ಹೇಳಿಕೆ ಕೊಡುವ ಪ್ರಮೇಯವೇ ಬಂದಿಲ್ಲಾ.

    ಕೊನೆಯಲ್ಲಿ ಒಂದು ಮಾತು. ಟಾಟಾ ಎಲ್ಲೇ ಹೋದರೂ ಆ ಭಾಗದ ಅಭಿವೃದ್ಧಿಯ ಬಾಗಿಲು ತೆರೆಯುತ್ತದೆ. ಆ ಹಳ್ಳಿ ನಂದನವನ ಆಗುತ್ತದೆ ಎಂಬ ಮಾತಿದೆ. ಹಾಗಾದರೆ ಟಾಟಾ ಘಟಕದಿಂದ ಧಾರವಾಡ ತಾಲ್ಲೂಕಿನ , ಬೇಲೂರು, ಗರಗ ಮುಂತಾದ ಹಳ್ಳಿಗಳು ಯಾವ ಲಾಭ ಪಡೆದಿವೆ ಏನು ವಸ್ತು ಸ್ಥಿತಿ ಎಂದು ಧಾರವಾಡದಲ್ಲೇ ವಾಸಿಸುವ ಜದದೀಶ್ ಕೊಪ್ಪ ಅವರು ವಿವರಿಸಬೇಕು.

    Reply
  2. Shekhar (@angadiindu)

    ಅಭಿವೃದ್ಧಿ ತಕ್ಷಣವಾಗಿ ಗೋಚರಿಸಲು ಟಾಟಾರವರು ಧಾರವಾಡದಲ್ಲಿ ಸ್ಥಾಪಿಸಿರುವದು ಇನ್ಫೋಸಿಸ್,ವಿಪ್ರೋದಂಥ ( ಕೆಲವೇ ಜನರನ್ನು ಶ್ರೀಮಂತಗೊಳಿಸುವ ) ಐಟಿ ಸಂಸ್ತೆಗಳಲ್ಲ.
    ಟಾಟಾರವರ ಘಟಕ ಧಾರವಾಡಕ್ಕೆ ಬಂದು ಬಹಳ ದಿನಗಳಾಗಿಲ್ಲ. ಅಭಿವೃದ್ಧಿಯ ಪಥದಲ್ಲಿದೆ. ಸ್ವಲ್ಪ ಸಮಯ ಬೇಕು. ಗರಗ, ಕೋಟೂರು, ಬೇಲೂರು, ಮಮ್ಮಿಗಟ್ಟಿ, ನರೇಂದ್ರ ಅಲ್ಲದೇ ಧಾರವಾಡವೂ ನಂದನವನವಾಗುವಲ್ಲಿ ಯಾವ ಸಂಶಯವೂ ಇಲ್ಲ.
    ಸಂತಸದ ವಿಷಯವೆಂದರೆ, ಟಾಟಾರವರ ಉತ್ತರಾಧಿಕಾರಿ ಸೈರಸ್ ಮಿಸ್ತ್ರಿ ಅವರೂ ಸಹ ಟಾಟಾ ಸಂಸ್ಥೆಯನ್ನು ಸಮಾಜಮುಖೀ ಸಂಸ್ಥೆಯನ್ನಾಗಿ ಮುಂದುವರೆಸುವ ಎಲ್ಲ ಅರ್ಹತೆ ಹಾಗೂ ಮೌಲ್ಯಗಳನ್ನೂ ಹೊಂದಿದ್ದಾರೆ.

    Reply
  3. Naveen_H

    ಐಟಿ ಕಂಪನಿಗಳಾದ ವಿಪ್ರೊ ಇನ್ಫೋಸಿಸ್ ಕೆಲವೇ ಜನರನ್ನು ಶ್ರೀಮಂತಗೊಲಿಸಿಲ್ಲ. ಪೂರ್ತಿ ಒಂದು ಜನರೇಶನ್ ಅನ್ನೇ ಇವು ಶ್ರೀಮಂತಗೊಳಿಸಿವೆ. ಮುಂದುವರೆದವರೆಂಬ ಹಣೆಪಟ್ಟಿಯಿಂದ ಎಲ್ಲರಿಂದ ಹೀಯಾಳಿಸಿಕೊಳ್ಳುತ್ತ, ಎಲ್ಲಾ ಹರಿದು ಹಂಚಿ ಕೊನೆಗೆ ಉಳಿದದ್ದು ಚೂರು ಪಾರು ನೆಚ್ಚಿಕೊಳ್ಳುವ ಒಂದು ಪೂರ್ತಿ ಸಮೂಹ ಇಂದು ಎರಡು ಹೊತ್ತಿನ ಊಟ ಮಾಡುತ್ತಿದ್ದರೆ ಅದಕ್ಕೆ ವಿಪ್ರೊ, ಇನ್ಫೋಸಿಸ್ ದಂತಹ ಕಂಪನಿಗಳಿoದಲೇ!
    ಹತ್ತು ವರ್ಷದ ಹಿಂದೆ ಗದಗ್ ಪಟ್ಟಣದಲ್ಲಿ ಎಲ್ಲಿ ನೋಡಿದಲ್ಲಿ ಪ್ರಿಂಟಿಂಗ್ ಪ್ರೆಸ್ ಗಳು ಕಾಣುತ್ತಿದ್ದವು. ನಂತರ ತಿಳಿದದ್ದೆಂದರೆ ಈ ಚಿಕ್ಕ ಚಿಕ್ಕ ಪ್ರೆಸ್ ಗಳಿಗೆ ಮೂಲ ಆದಾಯ ದೊಡ್ಡ ಪ್ರೆಸ್ ಗಳು ನೀಡುವ ತಮ್ಮ ದೊಡ್ಡ ಕೆಲಸದ ಹೊರಗುತ್ತಿದೆ. ಹೀಗೆ ದೊಡ್ಡ ಪ್ರೆಸ್ ಗಳು ತಮ್ಮ ಕೆಲಸ ಚಿಕ್ಕ ಪ್ರೆಸ್ ಗಳಿಗೆ ಹೊರಗುತ್ತಿಗೆ ನೀಡುತ್ತಾ ಅವುಗಳ ಬೆಳವಣಿಗೆಗೆ ಕಾರಣವಾಗಿದ್ದವು. ಹಾಗೇ ಬೆಂಗಳೂರು ಇಂದು ಐ ಟಿ ರಾಜಧಾನಿ ಆಗಿದ್ದರೆ ಅದಕ್ಕೆ ಕೇವಲ ವಿಪ್ರೊ ಇನ್ಫೋಸಿಸ್ ಗಳು ಕಾರಣವಲ್ಲ ಹಾಗೂ ಆಗಲು ಸಾಧ್ಯವೂ ಇಲ್ಲಾ. ಗದಗ್ ನ ಪ್ರಿಂಟಿಂಗ್ ಪ್ರೆಸ್ ಗಳ ಥರ ಇನ್ಫೋಸಿಸ್ ವಿಪ್ರೊ ಗಳೂ ಕೂಡ ತಮ್ಮಲ್ಲಿ ಹೆಚ್ಚಾದ ಕೆಲಸವನ್ನು ಚಿಕ್ಕ ಚಿಕ್ಕ ಕಂಪನಿ ಗಳಿಗೆ ಹೊರಗುತ್ತಿಗೆ ನೀಡಿದ್ದಕ್ಕೆ ಇಂದು ದಕ್ಷಿಣ ಭಾಗದ ಬೆಂಗಳೂರಿನಲ್ಲಿ ಗಲ್ಲಿಗೊಂದರಂತೆ ಸಾಫ್ಟ್ ವೇರ್ ಕಂಪನಿಗಳು ಕಾಣುತ್ತಿವೆ. ಈಗಲೂ ಕೂಡ ವಿಪ್ರೊ ಈ ನೀತಿಯನ್ನು ಅನುಸರಿಸುತ್ತಿದೆ. ಆದ್ದರಿಂದಲೇ ನಾವು ಬೆಂಗಳೂರು ತುಂಬಾ ವಿಪ್ರೊ ಬೋರ್ಡ್ ಗಳನ್ನು ಕಾಣಬಹುದು! ಈಗೀಗ ಪುಣೆಯಲ್ಲಿಯೂ ವಿಪ್ರೊ ಇದೇ ನೀತಿ ಅನುಸರಿಸಿ ಅನೇಕ ಚಿಕ್ಕ ಐಟಿ ಕಂಪನಿಗಳ ಬೆಳವಣಿಗೆಗೆ ಕಾರಣವಾಗುತ್ತಿದೆ.
    ಅದೇ ರೀತಿ ಇಂದು ಉತ್ತರಭಾರತದ ಕೆಲವು ನಗರಗಳಾದ ಮಾನೆಸರ್, ಫಾರಿದಾಬಾದ್, ಮಹಾರಾಷ್ಟ್ರದ ಪುಣೆ, ಚಾಕನ್ ಮುಂತಾದೆಡೆ ಇಂದು ಆಟೋ ಉದ್ದಿಮೆ ಬ್ರುಹುತ್ ಪ್ರಮಾಣದಲ್ಲಿ ಉದ್ಯೋಗ ಅವಕಾಶವನ್ನು ನೀಡುತ್ತಿವೆ. ಇದಕ್ಕೆ ಕಾರಣ ಅಲ್ಲಿ ನೆಲೆಸಿರುವ ದೊಡ್ಡ ಕಂಪನಿಗಳು. ಆದರೆ ಇದೇ ಬೆಳವಣಿಗೆ ಟಾಟಾ ದಂತದ ಕಂಪನಿಯಿಂದ ಧಾರವಾಡದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ. ಇಂದಿಗೂ ಟಾಟಾ ತನ್ನ ಬಿಡಿಭಾಗಗಳ ಪೂರೈಕೆಗೆ ಪುಣೆಯಂತಹ ಪ್ರದೇಶಗಳನ್ನೇ ನೆಚಿಕೊಳ್ಳುತ್ತಿದೆ.
    ಇಲ್ಲಿ ತಪ್ಪು ಟಾಟಾವನ್ನು ದೂರಿ ಪ್ರಯೋಜನವಿಲ್ಲ.. ನಮ್ಮ ಸರ್ಕಾರ ಹಾಗು ಮೀಡಿಯಾ ಸಹ ಸಮಾನ ಭಾಗಿ. ಮೊದಲೇ ಸರ್ಕಾರ ಉದ್ದಿಮೆಗಳಿಗೆ ಪ್ರೋತ್ಸಾಹದಾಯಕ ವಾತಾವರಣ ನಿರ್ಮಿಸಲ್ಲ , ಅಂಥದರಲ್ಲಿ ಅಷ್ಟಿಷ್ಟು ಉತ್ತೇಜನ ನೀಡುತ್ತಿದ್ದರೆ ಅದಕ್ಕೆ ಮೊದಲ ಅಡ್ಡಗಾಲೆ ನಮ್ಮ ಪತ್ರಿಕೆಗಳು. ಪತ್ರಿಕೆಗಳು ಉದ್ದಿಮೆಗಳನ್ನು ವಿಲನ್ ಥರ ನೋಡುವದನ್ನು ಬಿಡುವವರೆಗೆ ಜನರ ಆರ್ಥಿಕ ಅಭಿವೃದ್ಧಿ ಸಾಧ್ಯವಿಲ್ಲ. ಹಾಗೇ ನಮ್ಮ ಸರ್ಕಾರಗಳೂ ಕೂಡ ತಮ್ಮ ನಡೆಯಲ್ಲಿ ಪ್ರಾಮಾಣಿಕತೆ ತೋರಿಸಿ ಪತ್ರಿಕೆ, ಜನರ ನಂಬಿಕೆ ಗಳಿಸುವದೂ ಅಷ್ಟೇ ಮುಖ್ಯ. ಅಂದಾಗ ಮಾತ್ರ ಒಂದು ವಲಯದ ನಿಜವಾದ ಅಭಿವೃದ್ದಿ ಸಾಧ್ಯ.
    ಒಂದು ಸಮುದಾಯದ ನಿಜವಾದ ಅಭಿವೃದ್ದಿ ಅಲ್ಲಿನ ಜನರ ಅರ್ಥಿಕ ಮಟ್ಟದ ಸುಧಾರಣೆ. ಅದು ಉದ್ಯೋಗ ನೀಡಿದರೆ ಮಾತ್ರ ಆಗತ್ತೆ ಹೊರತು ಕಂಪನಿಗಳು ಕೇವಲ ತಮ್ಮ ಸಾಮಾಜಿಕ ಭದ್ದತೆಯನ್ನು ತೋರಿಕೊಳ್ಳಲು ಯಾವದೋ ಊರಲ್ಲಿ ಸಮುದಾಯ ಭವನ, ಟಾಯ್ಲೆಟ್ ಗಳನ್ನು ನಿರ್ಮಿಸಿದರೆ ಸಾಧ್ಯವಿಲ್ಲ. ಅದು ಕೇವಲ ತಮ್ಮ ವಾರ್ಷಿಕ ವರದಿಯಲ್ಲಿ ಕಾಣಿಸುವ ಉದ್ದೇಶ ಈಡೇರತ್ತೆ ಹೊರತು ನಿಜದಲ್ಲಿ ಯಾವ ಸಾಧನೆಯು ಸಾಧ್ಯವಿಲ್ಲ.
    – ನವೀನ ಎಚ್

    Reply
  4. Arpitha

    Nano car madyamavargadavaru oppilla nija.Nano car kollalu summaru onduvare Lakshada tanaka karchaguttade adare ade belege olle conditionalliruva second hand cargalu sigtave mattu avu nano tagedukondre avamana andu kondiruva madyamavargadavaralli keelirime huttisuvudilla.Madyamavargada samasye car kolluvudalla adakke petrol tumbisuvudu.

    Reply

Leave a Reply

Your email address will not be published. Required fields are marked *