ಸ್ವಘೋಷಿತ ಬುರುಡೇ ದಾಸರೂ ಮತ್ತವರ ಕ್ಯಾಕ್ಟಸ್ ಗುಂಪುಗಳೂ

– ಬಿ.ಶ್ರೀಪಾದ ಭಟ್

“ಏನೋ ಮಾಡಲು ಹೋಗಿ ಏನು ಮಾಡಿದೆ ನೀನು” ಎನ್ನುವ ಹಾಡಿನ ಸಾಲಿನಂತೆ ಆಯಿತೇ ಬುದ್ಧಿಜೀವಿ ಮತ್ತು ಚಿಂತಕ ಆಶೀಶ್ ನಂದಿಯವರ ಪರಿಸ್ಥಿತಿ? ಬಹುಶಃ ಇರಲಾರದು. ಏಕೆಂದರೆ ಆ ರೀತಿಯಾಗಿ ತಾನಂದುಕೊಂಡಿದ್ದು ಮತ್ತೊಂದು ಬಗೆದಾಗ, ಅದರ ಪರಿಣಾಮವಾಗಿ ಪಶ್ಚತ್ತಾಪದಲ್ಲಿ ಬೇಯುವವರಿಗೆ ಮಾತ್ರ ಮೇಲಿನ ಮಾತು ಅನ್ವಯಿಸುತ್ತದೆ. ಆದರೆ ಸಧ್ಯಕ್ಕೆ ಆಶೀಶ್ ನಂದಿಯವರು ಅಂತಹ ಪ್ರಾಯಶ್ಚಿತ್ತದಲ್ಲಿ ತೊಳಲಾಡುತ್ತಿರುವಂತೆ ಕಾಣಿಸುತ್ತಿಲ್ಲ. Nandy_ashisಜೊತೆಗೆ ಇಂಡಿಯಾದ ಖ್ಯಾತ ಚಿಂತಕರು, ಜ್ಞಾನಪೀಠಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಗಳ ಹಿಡಿದುಕೊಂಡು “ಹಮ್ ಹೈ ಆಪಕೆ ಸಾಥ್” ಎಂದು ಆಶೀಶ್ ನಂದಿಯವರ ಬೆಂಬಲಕ್ಕೆ ನಿಂತಾಗ ಇನ್ಯಾತಕ್ಕೆ ಭಯ??

ಆಭಿವ್ಯಕ್ತಿ ಸ್ವಾತಂತ್ರ್ಯದ ಆಯಧವನ್ನು ಹಿಡಿದುಕೊಂಡು ಮುನ್ನುಗ್ಗುವವರಿಗೆ ತಾವು ದಿಟ್ಟತನದವರೆಂಬ ಅಪಾರ ಆತ್ಮವಿಶ್ವಾಸವಿರುತ್ತದೆ. ಇದು ವಿಚಿತ್ರವಾದರೂ ಸತ್ಯ. ಈ ಸತ್ಯವು ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವ, ಆ ಮೂಲಕ ಹಿಂಸೆ, ಕೊಲೆಗಳಿಗೆ ಕಾರಣವಾಗುವ ಎಲ್ಲಾ ಧರ್ಮದ ಮೂಲಭೂತವಾದಿಗಳಿಗೆ ಮತ್ತು ಲುಂಪೆನ್ ಗುಂಪಿಗೆ ಅನ್ವಯಿಸಿದ ಹಾಗೆ ಸೆಕ್ಯುಲರ್ ಚಿಂತಕರಾದ, ಮಾನವತಾವಾದಿ ಬುದ್ಧಿಜೀವಿ ಆಶೀಶ್ ನಂದಿಯಂತಹವರಿಗೂ ಅನ್ವಯಿಸುತ್ತದೆ. ಇಲ್ಲದಿದ್ದರೆ ಭ್ರಷ್ಟಾಚಾರಕ್ಕೆ ಜಾತಿ ಎಂಬುದಿಲ್ಲ, ಭ್ರಷ್ಟಾಚಾರವೇ ಒಂದು ಜಾತಿಯೆಂದು ಪ್ರತಿಯೊಬ್ಬ ಸಾಮಾನ್ಯ ನಾಗರಿಕನಿಗೂ ಗೊತ್ತಿರುವಂತಹ ಸತ್ಯವನ್ನು ಬುದ್ಧಿಜೀವಿಗಳೆಂದು ಖ್ಯಾತರಾದ ಆಶೀಶ್ ನಂದಿಯವರಿಗೂ ಗೊತ್ತಾಗದೇ ಹೋಯಿತೆ?? ಸಾಧ್ಯವಿಲ್ಲ. ಗೊತ್ತಿರುತ್ತದೆ. ಆದರೆ ಅನೇಕ ಸಂಧಿಗ್ಧ ವಿಷಯಗಳನ್ನು ಸರಳವಾಗಿ ಚಿಂತಿಸಬೇಕಾದಂತಹ ಅಗತ್ಯದ ಸಂದರ್ಭದಲ್ಲಿ ಈ ಆಶೀಶ್ ನಂದಿ ತರಹದವರು ಸಂಕೀರ್ಣವಾಗಿ ಮಾತನಾಡಿ ಜನಸಾಮಾನ್ಯರು ತಲೆ ಕರೆದುಕೊಳ್ಳುವಂತೆ, ಕಣ್ಣು ಕಣ್ಣು ಬಿಡುವಂತೆ ಮಾಡುತ್ತಾರೆ. ಆದರೆ ಈ ಭ್ರಷ್ಟಾಚಾರಕ್ಕೆ ಕೂಡ ಜಾತಿ ಇದೆ ಎನ್ನುವ ಸಂಕೀರ್ಣ ಚರ್ಚೆಯನ್ನು ಓಬಿಸಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಹೆಚ್ಚು ಭ್ರಷ್ಟರು ಎಂದು ಸರಳಗೊಳಿಸಿ ಹೇಳಿಕೆ ನೀಡಿ ಈ ರೀತಿ ಪ್ರಜ್ಞಾವಂತರಿಂದ ಟೀಕೆಗೊಳಗಾದ ಆಶೀಶ್ ನಂದಿಯವರ ಕುರಿತಾಗಿ ಸಧ್ಯಕ್ಕೆ ಅನುಕಂಪವಂತೂ ಹುಟ್ಟುತ್ತಿಲ್ಲ.

ಮೇಲ್ಜಾತಿಗೆ ಸೇರಿದವರ ಭ್ರಷ್ಟತೆ ಕಣ್ಣಿಗೆ ಕಾಣದಂತೆ ಮರೆಮೋಸದಿಂದ ಹಾಗೂ ಅದನ್ನು ಜಾಣ ಕಿವುಡು, ಜಾಣ ಕುರುಡುತನದಿಂದ ಅಲ್ಲಲ್ಲಿಯೇ ಮುಚ್ಚಿಹಾಕಿ ಕಾಲಕ್ರಮೇಣ ಅದು ತಂತಾನೆ ಸಾಯುವಂತೆ ನೋಡಿಕೊಳ್ಳಲಾಗುತ್ತದೆ. ಇದಕ್ಕೆ ಕೆಲವು ಉದಾಹರಣೆಯಾಗಿ ಚಿಮ್ಮನ್ ಚೋರ್ ಎಂದು ಕುಪ್ರಸಿದ್ದರಾದ ಚಿಮನ್‌ಭಾಯಿ ಪಟೇಲ್, ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಭ್ರಷ್ಟತೆ ನಡೆಸಿದರೆಂದು ಆರೋಪಕ್ಕೆ ಒಳಗಾಗಿದ್ದ ಪ್ರಮೋದ್ ಮಹಾಜನ್, ಸತೀಶ್ ಶರ್ಮ, ಪಿ.ವಿ.ನರಸಿಂಹ ರಾವ್, Jagan-reddyyeddyurappa-SirigereTaralabaluತೊಂಬತ್ತರ ದಶಕದ ಆರಂಭದಲ್ಲಿ ದೇಶದ ಆರ್ಥಿಕತೆಯ ಮಹಾನ್ ಭ್ರಷ್ಟತೆಯ ಕರ್ಮಕಾಂಡಕ್ಕೆ ಕಾರಣನಾದ ಹರ್ಷದ ಮೆಹ್ತ, ಹವಾಲಾದ ಕೇತನ್ ಮೆಹ್ತ, ಭ್ರಷ್ಟಾಚಾರದ ಆರೋಪಕ್ಕೆ ಒಳಗಾದ ಅಟಲ್ ಬಿಹಾರಿ ವಾಜಪೇಯಿಯವರ ಅಳಿಯ, ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪಗಳಿರುವ ಶರದ್ ಪವಾರ್ ಮತ್ತು ಅವರ ಮಗಳು ಮತ್ತು ಅಳಿಯ, ಆದರ್ಶ ಹೌಸಿಂಗ್ ಹಗರಣದ ಅಶೋಕ್ ಚೌಹಾಣ್, ದಿವಂಗತ ವಿಲಾಸ್ ರಾವ್ ದೇಶಮುಖ್, ಸಂಸತ್ತಿನಲ್ಲಿ ಪ್ರಶ್ನೆ ಕೇಳುವುದಕ್ಕಾಗಿ ಲಂಚದ ಆರೋಪ ಎದುರಿಸುತ್ತಿರುವ ಮೇಲ್ಜಾತಿಯ ಸಂಸದರು, ಅಮರ್ ಸಿಂಗ್ ಅವರ ಕರ್ಮಕಾಂಡಗಳು, ಲಲಿತ್ ಮೋದಿ, ಸುರೇಶ್ ಕಲ್ಮಾಡಿ, ಯಾವ ಮೇಲ್ಜಾತಿಗೂ ಕಡಿಮೆ ಇಲ್ಲದ ಮಾರನ್ ಸೋದರರೂ, ಸುಖರಾಮ್, ವೀರಭದ್ರ ಸಿಂಗ್, ಶ್ರೀಪ್ರಕಾಶ್ ಜೈಸ್ವಾಲ್, ಜಗನ್‌ಮೋಹನ್ ರೆಡ್ಡಿ, ಕನಾಟಕವನ್ನು ಭ್ರಷ್ಟತೆಯ ಕಾರಣಕ್ಕಾಗಿ ಕುಪ್ರಸಿದ್ದಗೊಳಿದ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ, ಇವರೆಲ್ಲ ಕೇವಲ ಉದಾಹರಣೆಗಳು. ಇನ್ನೂ ಅಸಂಖ್ಯಾತರಿದ್ದಾರೆ.

ಈ ಭ್ರಷ್ಟತೆಯ ಅಪಾದನೆಗಗೊಳಗಾಗಿರುವ ಮೇಲಿನವರೆಲ್ಲ ಬ್ರಾಹ್ಮಣ, ಬನಿಯಾ, ಕ್ಷತ್ರಿಯ, ರಾಜಪುತ್, ಠಾಕೂರ್, ರೆಡ್ಡಿಗಳು, ಲಿಂಗಾಯತರು, ಹೀಗೆ ಅನೇಕ ಬಗೆಯ ಸವರ್ಣೀಯ ಜಾತಿಗೆ ಸೇರಿದವರು. ಇವರಲ್ಲನೇಕರು ತಮ್ಮ ಭ್ರಷ್ಟತೆಗೆ ಟೀಕೆಗೊಳಗಾಗಿದ್ದಾರೆ ನಿಜ, ಆದರೆ ಅದಕ್ಕೂ ಮಿಗಿಲಾಗಿ ಸಮಾಜವು ಇವತ್ತಿಗೂ ಇವರನ್ನು ತಿರಸ್ಕರಿಸದೆ, ಬದಲಾಗಿ ಕಿಂಗ್ ಮೇಕರ್‌ಗಳೆಂದೇ ಗುರುತಿಸುತ್ತದೆ. ಯಾವುದೇ ಸಂದರ್ಭದಲ್ಲಿಯೂ ಚುನಾವಣೆ ನಡೆದರೂ ಗೆದ್ದು ಬರುತ್ತಾರೆ ಮತ್ತು ತಮ್ಮ ಸಹಚರರನ್ನೂ ಗೆಲ್ಲಿಸುತ್ತಾರೆ ಎಂದು ಮಾಧ್ಯಮದವರೂ, ಅವರ ಕ್ಷೇತ್ರದ ಜನತೆ ಒಕ್ಕೊರಲಿಂದ ಪ್ರತಿಪಾದಿಸುತ್ತಾರೆ. ಅನೇಕ ವೇಳೆ ಈ ಪ್ರತಿಪಾದನೆಯಲ್ಲಿ ಹೆಮ್ಮೆ ತುಳುಕಾಡುತ್ತಿರುತ್ತದೆ. ಇದೇಕೆ ಹೀಗೆ?

ಇದಕ್ಕೆ ಉತ್ತರವೂ ಸಂಕೀರ್ಣವೇನೋ.ಮೊದಲನೆಯ ಕಾರಣವೇನೆಂದರೆ ಶ್ರೇಣೀಕೃತ ಸಮಾಜಕ್ಕೆ, ವರ್ಣಾಶ್ರಮದ ವ್ಯವಸ್ಥೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಬಹುಪಾಲು ಭಾರತೀಯರ ಮನಸ್ಥಿತಿ. ಈ ಮೇಲ್ಜಾತಿಯವರ ಭ್ರಷ್ಟತೆಯನ್ನು ಸಮಾಜವು ಮೊದಲಿಗೆ ಟೀಕಿಸಿದರೂ ಕ್ರಮೇಣ ಇನ್ನೇನು ಮಾಡಲಾಗುತ್ತದೆ, ವ್ಯವಸ್ಥೆಯೇ ಭ್ರಷ್ಟಗೊಂಡಿದೆಯಲ್ಲವೇ ಎಂದು ತಮ್ಮಷ್ಟಕ್ಕೇ ತಾನೇ ಸಮಾಜಾಯಿಷಿಕೊಳ್ಳುತ್ತ ತಮ್ಮ ತಮ್ಮ ಜಾತಿಯ ಭ್ರಷ್ಟರನ್ನು ವ್ಯವಸ್ಥೆಯ ಪಿತೂರಿಗೆ ಬಲಿಯಾದವರೆಂದೇ ವ್ಯಾಖ್ಯಾನಿಸಿ ಸಮಾಧಾನ ಪಟ್ಟುಕೊಳ್ಳುತ್ತಾರೆ. ಎರಡನೇಯದಾಗಿ ಈ ಮೇಲ್ಜಾತಿಯ ಭ್ರಷ್ಟಾಚಾರದ ಸಂಕೀರ್ಣತೆ. ಈ ಭ್ರಷ್ಟ ವ್ಯವಹಾರವೂ ಅನೇಕ ಮಜಲುಗಳಲ್ಲಿ, ಬೇನಾಮಿಯಾಗಿ ನಡೆದಿರುತ್ತದೆ. ಇದರ ಚಹರೆಗಳು ಅಗೋಚರವಾಗಿರುತ್ತವೆ. ಇವರ ಲಂಚಗುಳಿತನದ ಚರ್ಚೆ ಅನಿವಾರ್ಯವಾಗುವುದಿಲ್ಲ. ಅನೇಕ ಸಂದರ್ಭಗಳಲ್ಲಿ ಅಧಿಕಾರದಲ್ಲಿರುವ ಸಂಬಂಧಪಟ್ಟ ವ್ಯಕ್ತಿ ಎಲ್ಲಿಯೂ ನೇರವಾಗಿ ತನ್ನನ್ನು ತಾನು ಗುರುತಿಸಿಕೊಳ್ಳುವುದಿಲ್ಲ. ಬದಲಾಗಿ ಈತನ ಸಂಬಂಧಿಕರು, ಮಕ್ಕಳು ಅರೋಪಗಳಿಗೆ ಒಳಗಾಗಿರುತ್ತಾರೆ. ಮತ್ತು ಹಣಕಾಸಿನ ವಹಿವಾಟು ಸಹ ಎಲ್ಲಿಯೂ ಮುಕ್ತವಾಗಿರುವುದಿಲ್ಲ, ದಾಖಲೆಗಳು ಶೋಧನೆಗೆ ದಕ್ಕವುದಿಲ್ಲ. ಲಂಚದ ಸ್ವರೂಪವು ಅನೇಕ ವೇಳೆ ಉಡುಗೊರೆಗಳ ರೂಪದಲ್ಲಿರುತ್ತದೆ. ಈ ರೀತಿಯಾಗಿ ಉಡುಗೊರೆಗಳ ರೂಪದಲ್ಲಿ ದೊರೆತ ಕೋಟ್ಯಾಂತರ ಬೆಲೆಬಾಳುವ ಜಮೀನುಗಳು, ಬಂಗಲೆಗಳು, ಉದ್ಯಮಗಳನ್ನು ಲಂಚವೆಂದು ಸಾಬೀತುಗೊಳಿಸಲು ನ್ಯಾಯಾಂಗದಲ್ಲಿ ಬೆವರಿಳಿಸಿ ಸೆಣೆಸಬೇಕಾಗುತ್ತದೆ.graft-corruption ಏಕೆಂದರೆ ಮೇಲಿನ ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳಿಗೆ ಜಾತಿಯ ಕಾರಣಕ್ಕಾಗಿ ಮತ್ತು ಹಣದ ಬಲದಿಂದ ದೇಶದ ಖ್ಯಾತಿವೆತ್ತ ವಕೀಲರನ್ನು ನೇಮಿಸಿಕೊಳ್ಳುವಷ್ಟು ಛಾತಿ ಇರುತ್ತದೆ. ಇವರನ್ನು ಮುಕ್ತಗೊಳಿಸಲು ಇವರ ಹಿಂದೆ ಅನೇಕ ನುರಿತ ಸಿಎಗಳ, ಆರ್ಥಿಕ ತಜ್ಞರ ಪಡೆಯೇ ತಯಾರಿರುತ್ತದೆ. ಹೀಗಾಗಿ ಇಡೀ ಅವ್ಯವಹಾರವೇ ಸಂಕೀರ್ಣಗೊಂಡು ವಿಚಾರಣೆಯು ವರ್ಷಗಳವರೆಗೆ ನಡೆದು ಕಾಲಕ್ರಮೇಣ ಜನಸಾಮಾನ್ಯರ ಮನಸ್ಸಿನಿಂದ ಮರೆಯಾಗುತ್ತದೆ.

ಆದರೆ ಓಬಿಸಿ ಮತ್ತು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದ ಬಹುಪಾಲು ಅಧಿಕಾರಿಗಳು ಮತ್ತು ರಾಜಕಾರಣಿಗಳ ಭ್ರಷ್ಟಾಚಾರ ಇಷ್ಟೊಂದು ಕಗ್ಗಂಟಾಗಿರುವುದಿಲ್ಲ. ಸರಳ ಮತ್ತು ನೇರ. ಈ ವರ್ಗಕ್ಕೆ ಸೇರಿದ ಭ್ರಷ್ಟರು ನೇರವಾಗಿ ಹಣವನ್ನು ಪಡೆದು, ನೇರವಾಗಿ ಅದನ್ನು ತಮ್ಮ ಬ್ಯಾಂಕಿನಲ್ಲಿ ಜಮಾವಣೆ ಮಾಡುತ್ತಾರೆ. ಮೊನ್ನೆಯವರೆಗೂ ವಠಾರಗಳಲ್ಲಿ, ಕೇರಿಗಳಲ್ಲಿ ಜೀವಿಸುತ್ತಿದ್ದ ಇವರ ಬದುಕು ಅಧಿಕಾರದಿಂದ ಗಳಿಸಿದ ಭ್ರಷ್ಟತೆಯಿಂದ ದಿನಬೆಳಗಾಗುವುದರಲ್ಲಿ ಕಣ್ಣು ಕುಕ್ಕುವಂತೆ ಐಷಾರಾಮಿ ಜೀವನಕ್ಕೆ ರೂಪಾಂತರಗೊಳ್ಳುವುದು ಸಹಜವಾಗಿಯೇ ಪ್ರತಿಯೊಬ್ಬರಿಗೂ ದಿಗ್ಭ್ರಮೆ ಹುಟ್ಟಿಸುತ್ತದೆ. ಇದೂ ಸಹ ಹೇಳಿದಷ್ಟು ಸರಳವಲ್ಲ. ಅನೇಕ ಸಂಕೀರ್ಣ ಮಜಲುಗಳನ್ನೊಳಗೊಂಡಿದೆ. ಮತ್ತು ಬಹು ಮುಖ್ಯವಾಗಿ ಜಾತೀಯತೆಯಿಂದ ಮಲಿನಗೊಂಡ ಭಾರತೀಯ ಮನಸ್ಸುಗಳೆಂದೂ ತಳ ಸಮುದಾಯಗಳೂ ಐಶ್ವರ್ಯವಂತರಾಗುವುದನ್ನು, ತಮ್ಮ ಸಮಸಮಕ್ಕೆ ಬದುಕುವುದನ್ನು ಅರಗಿಸಿಕೊಳ್ಳಲಾರವು. ಇಂತಹ ತಳಸಮುದಾಯವು ವ್ಯಾಪಕ ಭ್ರಷ್ಟ್ಟಾಚಾರದ ಆರೋಪವನ್ನು ಎದುರಿಸಿದಾಗ ನೋಡಿ ನಾನು ಹೇಳಲಿಲ್ಲವೇ ಎನ್ನುವ ಮುಖಭಾವವನ್ನು ವ್ಯಕ್ತಪಡಿಸುತ್ತದೆ ಇಂಡಿಯಾದ ಜಾತೀಯತೆಯ ಮನಸ್ಸು.

ಮತ್ತೊಂದು, ಮುಖ್ಯವಾಗಿ ಇಂದು ಮೇಲ್ಜಾತಿಗಳಿಗೆ ಸೇರಿದವರೆಲ್ಲ ಕಳೆದೆರಡು ದಶಕಗಳಿಂದ ಖಾಸಗೀ ಕ್ಷೇತ್ರಗಳ ಕಾರ್ಪೋರೇಟ್ ಗೂಡುಗಳಿಗೆ ವಲಸೆ ಹೋಗಿದ್ದರೆ, ತಳ ಸಮುದಾಯದ ಗುಂಪು ಸರ್ಕಾರಿ ಹುದ್ದೆಗಳಿಗೆ ಭರ್ತಿಯಾಗಿದ್ದಾರೆ. ಅದೊಂದೇ ಅವರಿಗಿರುವ ಆರ್ಥಿಕ ಭದ್ರತೆಯ ತಂಗುದಾಣ. meritocracyಸರ್ಕಾರಿ ವಲಯಗಳಲ್ಲಿ ಸಂಪೂರ್ಣವಾಗಿ ನೆಲೆಗೊಂಡಿರುವ ಭ್ರಷ್ಟಾಚಾರದ ತೆಕ್ಕೆಗೆ ಜಾತಿ ಬೇಧವಿಲ್ಲದೆ ಪ್ರತಿಯೊಬ್ಬರೂ ಸಹಜವಾಗಿಯೇ ಬಿದ್ದಿದ್ದಾರೆ. ಆದರೆ ತಳಸಮುದಾಯಗಳು ಮತ್ತು ಓಬಿಸಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅವರೂ ಸಹ ಸಹಜವಾಗಿಯೇ ಭ್ರಷ್ಟರೆಂದೇ ಪರಿಗಣಿಸಲ್ಪಡುತ್ತಾರೆ. ಸರ್ಕಾರಿ ಮತ್ತು ಖಾಸಗೀ ಕ್ಷೇತ್ರಗಳ ನಡುವಿನ ಕಾರ್ಯ ವೈಖರಿಗಳು, ಬಿಕ್ಕಟ್ಟುಗಳು, ಶೈಲಿಗಳು ಸಂಪೂರ್ಣ ವಿಭಿನ್ನವಾಗಿವೆ. ಇದನ್ನು ವಿವರಿಸಲು ಮತ್ತೊಂದು ವೇದಿಕೆಯೇ ಬೇಕಾಗುತ್ತದೆ. ಇಂದು ಸರ್ಕಾರಿ ವಲಯಗಳಲ್ಲಿ ಇರುವಷ್ಟೇ ಭ್ರಷ್ಟತೆ ಖಾಸಗೀ ಕ್ಷೇತ್ರಗಳಲ್ಲೂ ಇದೆ. ಇದನ್ನು ಇಂದು ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ನನ್ನಂತಹವರು ವೈಯುಕ್ತಿಕವಾಗಿ,ಕಣ್ಣಾರೆ ಕಂಡಿದ್ದೇವೆ. ಆದರೆ ಸರ್ಕಾರಿ ಕ್ಷೇತ್ರದ ವ್ಯಾಪ್ತಿ ಮತ್ತು ಹರಹು ನೇರವಾಗಿ ಸಾರ್ವಜನಿಕರನ್ನು ಒಳಗೊಳ್ಳುವುದರಿಂದ ಇಲ್ಲಿನ ಭ್ರಷ್ಟತೆ ನೇರ ಮತ್ತು ಪಾರದರ್ಶಕ ಮತ್ತು ಲಂಚದ ಕೈಗಳಿಗೆ ಹೆಜ್ಜೆ ಹೆಜ್ಜೆಗೂ ಮುಖಾಮುಖಿಯಾಗುತ್ತಿರುತ್ತೇವೆ. ಇದು ಸಹಜವಾಗಿಯೇ ಸಮಾಜದಲ್ಲಿ ಆಕ್ರೋಶವನ್ನು ಹುಟ್ಟು ಹಾಕುತ್ತದೆ. ಆದರೆ ಖಾಸಗೀ ವಲಯಗಳಲ್ಲಿ ಇದರ ಅವಶ್ಯಕತೆಯೇ ಇರುವುದಿಲ್ಲವಾದ್ದರಿಂದ ಇಲ್ಲಿನ ಭ್ರಷ್ಟಾಚಾರದ ವ್ಯಾಪ್ತಿ ಸೀಮಿತವಾಗಿರುತ್ತದೆ. ಹಾಗೂ ಸಾರ್ವಜನಿಕರಿಗೆ ಗೋಚರಿಸುವುದಿಲ್ಲ. ಅನುಭವಿಸುವುದೂ ಇಲ್ಲ.

ಆದರೆ ನಮ್ಮ ಮಾನಸಿಕ ಭ್ರಷ್ಟತೆ ಎಷ್ಟಿದೆಯೆಂದರೆ ಈ ಕ್ಷಣಕ್ಕೂ ದಲಿತರಿಗೆ ಖಾಸಗೀ ವಲಯದ ಬಾಗಿಲನ್ನು ತೆರೆದೇ ಇಲ್ಲ!! ಇಂದಿಗೂ ಖಾಸಗೀ ವಲಯಗಳಲ್ಲಿ ದಲಿತ ನಿದೇಶಕರಾಗಲೀ, ಸಿಇಓಗಳಾಗಲಿ, ಜನರಲ್ ಮ್ಯಾನೇಜರ್‌ಗಳಾಗಲೀ, ಮ್ಯಾನೇಜರ್‌ಗಳಾಗಲಿ ಕಾಣುವುದೂ ಇಲ್ಲ!! ಖಾಸಗೀ ವಲಯದ, ಕಾರ್ಪೋರೇಟ್ ಜಗತ್ತಿನ ಈ ಅಸ್ಪೃಶ್ಯತೆಯ ಆಚರಣೆಯನ್ನು ಆಶೀಶ್ ನಂದಿಯಂತಹ ಸಮಾಜ ವಿಜ್ಞಾನಿಗಳು ವಿವರವಾಗಿ ವಿವರಿಸಬೇಕಾಗಿತ್ತು. ಆದರೆ ಇದನ್ನು ಮಾಡಲಿಲ್ಲ. ಇದಕ್ಕೆ ಬಹು ಮುಖ್ಯ ಕಾರಣ ಆಶೀಶ್ ನಂದಿಯಂತಹ ಸಮಾಜ ವಿಜ್ಞಾನಿಗಳು ಎಂದೂ ಸಹ ತಮ್ಮನ್ನು ಕಾರ್ಯ ಕ್ಷೇತ್ರಗಳ ಪ್ರಯೋಗರಂಗದಲ್ಲಿ (Field Experiments) ತೊಡಗಿಸಿಕೊಳ್ಳಲೇ ಇಲ್ಲ. ಸಮಾಜದ ಸಂರಚನೆ, ಅದರ ನಡಾವಳಿಗಳು ಮತ್ತು ಬಹಿರಂಗವಾಗಿ ವ್ಯಕ್ತಗೊಳ್ಳುವ ಅನೇಕ ಮಾದರಿಗಳನ್ನು, ಚಹರೆಗಳನ್ನು, ಊಳಿಗ ಮಾನ್ಯತೆಯನ್ನು ನಮಗೆಲ್ಲ ವಿಶದವಾಗಿ ಪರಿಚಯಿಸಲು ನೇರವಾಗಿ ಕಾರ್ಯ ಕ್ಷೇತ್ರಗಳಿಗೆ ತೆರಳಿ ಕೈ, ಮೈಗಳನ್ನು ಕೊಳೆ ಮಾಡಿಕೊಳ್ಳಬೇಕಾಗಿದ್ದ ಆಶೀಶ್ ನಂದಿಯಂತಹ ಸಮಾಜ ಶಾಸ್ತ್ರಜ್ಞರು ಅಲ್ಲಿಗೆ ತೆರಳುವುದಿರಲಿ, ಕಾರ್ಯಕ್ಷೇತ್ರಗಳ ಮುಖಗಳನ್ನೇ ನೋಡಿದಂತಿಲ್ಲ. ಇವರೆಲ್ಲ ಎಷ್ಟು ಬಾರಿ ನಗರದ ಕೊಳಗೇರಿಗಳಿಗೆ ಭೇಟಿ ಕೊಟ್ಟಿದ್ದಾರೆ? ಎಷ್ಟು ಬಾರಿ ಪಟ್ಟಣಗಳ ಸ್ಲಂಗಳನ್ನು ಅಧ್ಯಯನ ಮಾಡಿದ್ದಾರೆ? ಈ ಸೋ ಕಾಲ್ಡ್ ಸಮಾಜ ಶಾಸ್ತ್ರಜ್ಞರಿಗೆ ಗ್ರಾಮಗಳ ಕೇರಿಗಳ ಸ್ವರೂಪಗಳೇನಾದರೂ ಗೊತ್ತೇ? ಇವಾವುದನ್ನು ಮಾಡದೆ ಕೇವಲ ನಾಲ್ಕು ಗೋಡೆಗಳ ನಡುವೆ ವಿಶ್ವದ ಖ್ಯಾತ ಪಂಡಿತರೆನ್ನಲ್ಲ ಆಧ್ಯಯನ ಮಾಡಿ, ಅರಗಿಸಿಕೊಂಡು ನಮಗೆ ದೇಶ, ಕಾಲ, ಸಮಾಜದ ಕುರಿತಾಗಿ ಅಸ್ಖಲಿತವಾಗಿ ಬೋಧಿಸುವ ಇವರೆಲ್ಲರ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗುತ್ತದೆ. ಇವರೆಷ್ಟೇ ಪ್ರಾಮಾಣಿಕರಾಗಿದ್ದರೂ ಸಹ ಇವರ ಪಾಂಡಿತ್ಯವೆಲ್ಲ ಪಾಮರರಿಗೆ ಬಂಡ್ವಾಳಿಲ್ಲದ ಬಡಾಯಿಯಂತೆ ಗೋಚರಿಸಲಾರಂಬಿಸುತ್ತದೆ.

ಕಳೆದ ನಲ್ವತ್ತು ವರ್ಷಗಳಿಂದ ಚಿಂತಕರೆಂದು ಖ್ಯಾತರಾಗಿರುವ ಆಶೀಶ್ ನಂದಿ ಮಾದರಿಯ ಸಮಾಜ ವಿಜ್ಞಾನಿಗಳಿಗೆ ಅಂಬೇಡ್ಕರ್ ಶಾಲೆ ಎಂದಿಗೂ ಅರಿವಾಗಲೇ ಇಲ್ಲ. ಒಂದು ವೇಳೆ ಅರಿವಾಗಿದ್ದರೆ ಇಪ್ಪತ್ತೊಂದನೇ ಶತಮಾನದಷ್ಟೊತ್ತಿಗೆ Young_Ambedkarಅಂಬೇಡ್ಕರ್ ಮತ್ತವರ ಮಾದರಿ ಚಿಂತನೆಗಳು ಸಮಾಜದ ಮುನ್ನಲೆಗೆ ಬರುತ್ತವೆ ಮತ್ತು ಮಿಕ್ಕೆಲ್ಲ ಅಧ್ಯಯನಗಳು ಬಾಬಾ ಸಾಹೇಬರ ಸುತ್ತಲೇ ಸುತ್ತುತ್ತಿರುತ್ತವೆ ಎಂದು ಎಂಬತ್ತರ ದಶಕದಲ್ಲೇ ಈ ಪಂಡಿತರು ಹೇಳಬೇಕಾಗಿತ್ತು. ಆದರೆ ಇವರೆಂದೂ ಅಂಬೇಡ್ಕರ್ ಅವರನ್ನು ಓದಿಕೊಂಡಿಯೇ ಇಲ್ಲವಾದ್ದರಿಂದ ಈ ಆಶೀಶ್ ನಂದಿ ಮಾದರಿಯ ಸಮಾಜ ವಿಜ್ಞಾನಿಗಳಿಂದ ಈ ಮಟ್ಟವನ್ನು ನಿರೀಕ್ಷಿಸುವುದೂ ತಪ್ಪೇನೋ. ಇವರದೇನಿದ್ದರೂ ಎಡಪಂಥೀಯ ಇಲ್ಲ ಬಲಪಂಥೀಯ ಜಿಜ್ಞಾಸೆಗಳ ಒಣ ಚರ್ಚೆಗಳಷ್ಟೆ. ಈ ಎರಡು ಇಸಂಗಳ ಪ್ರಲೋಭನೆಯಿಂದ ಹೊರಬರಲಾರದೆ ಅಲ್ಲಿಯೇ ಗೊರಕೆ ಹೊಡೆಯುತ್ತಿರುವ ಈ ಗುಂಪಿಗೆ ಸತ್ಯದ ಪ್ರತಿಪಾದನೆಯ ಮುಖ್ಯ ಮುಖಗಳು ಇಂದಿಗೂ ಗೊತ್ತಿಲ್ಲ. ತಾವು ಮಾತನಾಡಿದ್ದೆಲ್ಲವೂ ಚಾರಿತ್ರಿಕ ಸತ್ಯಗಳೆಂದೇ ನಂಬಿರುವ ಈ ಪಂಡಿತರಷ್ಟು ನಗೆಪಾಟಲಿಗೀಡಾದಷ್ಟು ಚಿಂತಕರು ಮತ್ತೆಲ್ಲಿಯೂ ಸಿಗಲಾರರೇನೋ.

5 thoughts on “ಸ್ವಘೋಷಿತ ಬುರುಡೇ ದಾಸರೂ ಮತ್ತವರ ಕ್ಯಾಕ್ಟಸ್ ಗುಂಪುಗಳೂ

  1. gopinatha rao

    ನಮ್ಮಲ್ಲಿ ಇಂದು ಹೊಸ ಹೊಸ ಅತಿರೇಕದ ವಾದಗಳು ಹುಟ್ಟಿಕೊಳ್ಳುತ್ತಿವೆ. ಭ್ರಷ್ಟಾಚಾರ ನಮ್ಮಲ್ಲಿಯ ಒಂದು ಸಮಸ್ಯೆ. ಅದು ನೀಗಲೇ ಬೇಕು. ಜಾತಿವಾದ ಇನ್ನೊಂದು ಸಮಸ್ಯೆ ಅದೂ ನೀಗಬೇಕು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಅದೂ ನಿಲ್ಲಬೇಕು. ಇವುಗಳಲ್ಲಿ ಎರಡು ಮಾತಿಲ್ಲ. ಈ ಸಮಸ್ಯೆಗಳನ್ನು ಮತ್ತೂ ಕೆಣಕಿ, ಕೆದಕಿ, ಅರೆದು ಭಟ್ಟಿ ಇಳಿಸಿ ಇದು ಮೇಲ್ಜಾತಿಯವರ ಭ್ರಷ್ಟಾಚಾರ, ಇದು ಕೆಳಜಾತಿಯವರ ಭ್ರಷ್ಟಾಚಾರ, ಇದು ಅಲ್ಪ ಸಂಖ್ಯಾತರ ಜಾತಿವಾದ, ಇದು ಪ್ರಬಲಕೋಮಿನ ಜಾತಿವಾದ ಅಥವಾ ಇದು ಗ್ಯಾಂಗ್ ರೇಪ್, ಇದು ಮಾಮೂಲಿ ರೇಪ್ ಎಂದೆಲ್ಲ ಡಿಸೆಕ್ಷನ್ ಮಾಡಿ ವಿಶ್ಲೇಸಿಸಿ, ಯಾರನ್ನೋ ದೂರಿ ಯಾವುದರಮೇಲೋ ಗೂಬೆ ಕೂರಿಸಿ ಇನ್ಯಾವುದೋ ವಿಷಯವನ್ನು ಎಳೆದುತಂದು ಮಾತಾಡುವುದು ಯಾಕೆ? ಮೇಲ್ಜಾತಿಯವ ಮಾಡಿದ್ರೂ ನಿಮ್ನವರ್ಗದವ ಮಾಡಿದ್ರೂ ಭ್ರಷ್ಟಾಚಾರ ಭ್ರಷ್ಟಾಚಾರವೇ. ಹರೆಯದ ಹುಡುಗಿಯ ಮೇಲೆಯಾದರೂ ಪರಿಚಯಸ್ಥರ ಮೇಲೆ ಮಾಡಿದರೂ ಮೈನರ್ ಮೇಲಾದರೂ ಮುದುಕಿಯ ಮೇಲಾದರೂ ಹರೆಯದ ಹುಡುಗ ಮಾಡಿದರೂ ಅರುವತ್ತರ ಅಪ್ಪ ಮಾಡಿದರೂ ರೇಪು ರೇಪೇ.. ಶಿಕ್ಷೆಯಾಗಲೇಬೇಕು. full stop.

    ಇನ್ನಾದರೂ ಜಾತಿವಾದ ಭ್ರಷ್ಟಾಚಾರಕ್ಕಿಂತ ದೊಡ್ಡ ಸಮಸ್ಯೆ, ಮೈನರ್ ಮೇಲಿನ ರೇಪು ಮುದುಕಿಯ ಮೇಲಿನ ರೇಪಿಗಿಂತ ದೊಡ್ದ ಅಪರಾಧ ಎಂದೆಲ್ಲ ನಾವು ಹುಚ್ಚರ ಹಾಗೆ ವಾದ ಮಾಡುವುದನ್ನು ನಿಲ್ಲಿಸಿ ಇವುಗಳ ತಡೆಗೆ ಸಾಧ್ಯವಿರುವ ಉಪಾಯಗಳ ಬಗೆಗೆ ಯೋಚಿಸೋಣವೇ?

    Reply
    1. ಭಾರತೀಯ

      ಸರಿಯಾಗಿ ಹೇಳಿದಿರಿ … ಸಮಸ್ಯೆ ಒಂದಿರುತ್ತದೆ … ಚರ್ಚೆ ಇನ್ನೊಂದಿರುತ್ತದೆ … ಕೊನೆಗೆ ದಾರಿ ಯಾವುದಯ್ಯ ಎಂದು ಕೇಳುವ ಪರಿಸ್ಥಿತಿ ಇರುತ್ತದೆ.

      Reply
  2. ತೇಜ ಸಚಿನ್ ಪೂಜಾರಿ

    @gopinatha rao ನೀವು ಸರಿಯಾಗಿಯೇ ಹೇಳಿದ್ದೀರಾ. ಆದರೆ ನಿಮ್ಮ ವಾದ ಮಾನ್ಯತೆ ಪಡೆದುಕೊಳ್ಳುವುದು ಜಾತಿ ಆಧಾರಿತ ಶೋಷಣೆ ಹಾಗೂ ಅಸಮಾನತೆಗಳು ಮುಕ್ತವಾದ ಸಮಾಜದಲ್ಲಿಯೇ ಆಗಿದೆ. ನಿಮ್ಮ ಕಾಮೆಂಟುಗಳನ್ನು ನಾನೇ ಮುಂದುವರೆಸಿದಲ್ಲಿ, “ಉಡುಪಿಯಲ್ಲೋ ತಿರುಪತಿಯಲ್ಲೋ ಬ್ರಾಹ್ಮಣ ಪೂಜೆ ಮಾಡಿದರೂ ಪೂಜೆನೇ ದಲಿತ ಮಾಡಿದರೂ ಪೂಜೇನೇ, ದೇವಸ್ಥಾನದಲ್ಲಿ ಬ್ರಾಹ್ಮಣರು ಮಾತ್ರವೇ ಊಟ ಮಾಡಿದರೂ ಊಟನೇ ಬ್ರಾಹಣ ದಲಿತ ಇಬ್ರೂ ಒಟ್ಟು ಸೇರಿ ಊಟ ಮಾಡಿದ್ರೂ ಅದೂ ಊಟನೇ”, ಹೀಗಾಗುತ್ತದೆ. ಅಂದ ಮಾತ್ರಕ್ಕೆ ಅಪರಾಧಗಳು ಜಾತಿಯ ನೆಲೆಯಲ್ಲಿ ಸಮರ್ಥನೆಯಾಗುತ್ತವೆಯಂದಲ್ಲ. ಆದರೆ ಒಂದು ಜಾತಿಗೆ ಕೈ ತೋರಿಸಿ “ನೀನೇ ಕರಪ್ಟ್” ಅನ್ನೋ ಚರ್ಬಿಯ ಮಾತುಗಳನ್ನು ಒಪ್ಪಲು ಸಾಧ್ಯವೇ ಇಲ್ಲ. ಅಂತಹ ಮಾತುಗಳಿಗೆ, ಮನಸ್ಥಿತಿಗಳಿಗೆ ಅರಂಭದಲ್ಲೇ ಧಿಕ್ಕಾರ ಕೂಗಬೇಕು. ಅದನ್ನು ಇಲ್ಲಿ ಶ್ರೀಪಾದ್ ಭಟ್ರು ಸರಿಯಾಗಿಯೇ ಮಾಡಿದ್ದಾರೆ.

    Reply
  3. Gopinatha Rao

    ಪ್ರಿಯ ತೇಜ್,
    ಶೋಷಣೆ ಮತ್ತು ಅಸಮಾನತೆ ಮುಕ್ತ ಸಮಾಜ ಎನ್ನುವುದು ಒಂದು ಸದಾಶಯ ಮಾತ್ರ. ಎಲ್ಲಿಯೂ ಇಲ್ಲ, ಎಲ್ಲಿಯೂ ಇರಲಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು ಅನ್ನುವುದು ಮಾತ್ರ ಸರಿ. ಅವರು ಮಾಡಿದ್ದು ಇದಕ್ಕಿಂತಲೂ ದೊಡ್ಡ ಅಪರಾಧ, ಇವರು ಮಾಡಿದರೆ ಮಾತ್ರ ತಪ್ಪು ಅಂತ ಯಾಕೆ ಹೇಳ್ತೀರಿ, ಅವರು ಮಾತ್ರ ತಪ್ಪು ಮಾಡಬಹುದಾ, ತಪ್ಪು ಮಾಡಬೇಡಿ ಅಂತ ಅವರಿಗೂ ಹೇಳಿ,ಎಂದೆಲ್ಲ ಹೇಳುವುದು ಯಾಕೆ?

    ನೋಡಿ ನಾನು ಹೇಳಿದ ಹಾಗೆಯೇ ಆಯ್ತು. ನೀವೀಗ ಉಡುಪಿ ತಿರುಪತಿ ಎಳೆದು ತಂದಿರಿ!

    Reply
  4. Naveen_H

    Fun thing is both Teja Sachin Pujary and Gopinath Rao telling exactly same thing i.e., one should not dissect the corruption/criminality and should protest and prosecute irrespective of cast and creed. But still both are arguing.

    But Teja Sachin Pujary took the opportunity to convey the same meaning by dragging Udupi, tirupati etc just to express his anguish over Brahmin community while Gopinath Rao is neutral.

    Let the fight continue…

    Reply

Leave a Reply

Your email address will not be published. Required fields are marked *