ಮಂಗಳೂರಿನಲ್ಲಿ ಸದ್ಯಕ್ಕೆ ನಡೆಯುತ್ತಿರುವುದು “ಆತ್ಮಹತ್ಯೆ”

– ತೇಜ ಸಚಿನ್ ಪೂಜಾರಿ

ಮಂಗಳೂರು ಮತ್ತೆ ಸುದ್ದಿಯಲ್ಲಿದೆ. ಕೋಮುವಾದ, ಮೋರಲ್ ಪೋಲಿಸಿಂಗ್, ಮಡೆಸ್ನಾನ, ಹೀಗೆ ನಾನಾ ನೇತ್ಯಾತ್ಮಕ ಕಾರಣಗಳಿಗಾಗಿ ದಕ್ಷಿಣ ಕನ್ನಡ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ವಾರ್ತೆಗಳಲ್ಲಿ ಮತ್ತೆ ಮತ್ತೆ ಪ್ರಸ್ತಾಪಿತವಾಗುತ್ತಿದೆ.

ಹಾಗೆ ನೋಡಿದಲ್ಲಿ ನಮ್ಮೂರಲ್ಲಿ ಸದ್ಯಕ್ಕೆ ನಡೆಯುತ್ತಿರುವುದು “ಆತ್ಮಹತ್ಯೆ”. ಇಲ್ಲಿ ನಮ್ಮನ್ನು ನಾವೇ ಸುಟ್ಟುಕ್ಕೊಳ್ಳುತ್ತಿದ್ದೇವೆ. ನಮ್ಮ ಹಿರೀಕರು ವಿಕಸಿಸಿದ ಸಾಮರಸ್ಯದ, ಸಹಿಷ್ಣುತೆಯ ಬಳುವಳಿಯನ್ನು ತ್ಯಜಿಸಿ ಅಹಂಕಾರದ ಹಾಗೂ ಅಧಃಪತನದ ಹಾದಿಯನ್ನು ಅನುಸರಿಸುತ್ತಿದ್ದೇವೆ. ಧರ್ಮ ಸಂಸ್ಕೃತಿಗಳ ಪಾಳೇಗಾರರ ಪಿತೂರಿಯ ದನಿಗಳಿಗೆ ಕಿವಿಯಾಗಿ ನಮಗೆ ನಾವೇ ಹಾನಿ ಮಾಡಿಕೊಳ್ಳುತ್ತಿದ್ದೇವೆ. ನಮ್ಮದೇ ನೆಲದಲ್ಲಿ ಸಾವಿರಾರು ವರ್ಷಗಳಲ್ಲಿ ಅರಳಿದ ಸಾಂಸ್ಕೃತಿಕ ವೈವಿಧ್ಯತೆಯನ್ನು ನಾಶಮಾಡಿ ಯಾವುದೋ ಅನ್ಯಾಯದ ವ್ಯವಸ್ಥೆಯು ಹೇರುತ್ತಿರುವ ಏಕತ್ವದ ವ್ಯವಸ್ಥೆಯೊಳಗೆ ಸ್ವಯಂ ಬಂಧಿಯಾಗುತ್ತಿದ್ದೇವೆ. kambala-mangaloreತುಳುವ, ಬ್ಯಾರಿ, ಕ್ರೈಸ್ತ, ಜೈನ, ಹೀಗೆ ಪ್ರತಿಯೊಬ್ಬ ಜನಾಂಗವೂ ತಲ ತಲಾಂತರದಿಂದ ಇಲ್ಲೇ ಇದ್ದು ಇಲ್ಲಿಗೇ ವಿಶೇಷವಾದ ಸಾಂಸ್ಕೃತಿಕ ಅಂಶಗಳನ್ನು ಬೆಳೆಸಿಕೊಂಡಿವೆ. ಆದರೆ ಅವೆಲ್ಲವನ್ನೂ ಆಯಾ ಧರ್ಮಗಳ ಹೊರಗಿನ ಸಾಂಸ್ಥಿಕ ಯಜಮಾನಿಕೆಯ ಕೈಗೆ ಒಪ್ಪಿಸುತ್ತಿದ್ದೇವೆ. ಹಾಗೆ ಮಾಡುತ್ತಾ ನಮ್ಮ ದುರ್ವಿಧಿಯನ್ನು ನಾವೇ ಆಹ್ವಾನಿಸಿಕೊಳ್ಳುತ್ತಿದ್ದೇವೆ. ನಮ್ಮ ವರ್ತಮಾನ ಹಾಗೂ ಭವಿತವ್ಯಗಳನ್ನು ಕೇವಲ ಹಿಂಸೆಯ ಅಧ್ಯಾಯಗಳನ್ನಾಗಿ ರೂಪಿಸುತ್ತಿದ್ದೇವೆ. ಮುಂದಿನ ಪೀಳಿಗೆಗೆ ಸಮರ ಸನ್ನಾಹದ, ಉಸಿರುಗಟ್ಟುವ ಭವಿಷ್ಯವೊಂದನ್ನು ನಿರ್ಮಿಸಿ ಕೊಡುತ್ತಿದ್ದೇವೆ. ತುಳು, ಬ್ಯಾರಿ ಹಾಗೂ ಕೊಂಕಣಿ ಭಾಷೆಗಳ ಇಂಪು ಒಂದೆಡೆ ಕೇಳಿಸದಂತಹ ಪ್ರತ್ಯೇಕತೆಯ ಅನಾಹುತಕಾರಿ ಸನ್ನಿವೇಶವನ್ನು ಕಟ್ಟುತ್ತಿದ್ದೇವೆ. “ಪ್ರಕ್ಷುಬ್ದ”, “ಗಲಭೆಪೀಡಿತ”, “ಅತಿ ಸೂಕ್ಷ್ಮ” ಇವೇ ಮೊದಲಾದ ವಿಶೇಷಣಗಳನ್ನು ನಮ್ಮ ಊರಿಗೇ ನಾವೇ ಗಳಿಸಿ ಕೊಟ್ಟು ಕೊರಳ ಕುಣಿಕೆಯನ್ನು ಬಿಗಿಗೊಳಿಸುತ್ತಿದ್ದೇವೆ.

***

ಪ್ರಸ್ತುತ ಮಂಗಳೂರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥೈಸುವಲ್ಲಿ ಇಲ್ಲಿಯ ಆರ್ಥಿಕ ಅಭಿವೃಧ್ಧಿಯ ಸ್ವರೂಪದ ಅಧ್ಯಯನ ಅವಶ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಭೌತಿಕ ನೆಲೆಯಲ್ಲಿ ಆರ್ಥಿಕ ಅಭಿವೃದ್ಧಿಗೆ ಸೂಕ್ತವಾದ ಪ್ರದೇಶವಾಗಿದೆ. ಇಲ್ಲಿ ಆರ್ಥಿಕ ಮೂಲಸೌಕರ್ಯಗಳು ಸಾಕಷ್ಟು ಬೆಳೆದಿವೆ. ಸಮುದ್ರ ತೀರ, ಮಳೆ, ಶಿಕ್ಷಣ, ಹಣಕಾಸು ಸಂಸ್ಥೆಗಳು, ಇವೇ ಮೊದಲಾದ ಪ್ರೇರಕ ಅಂಶಗಳು ವಿವಿಧ Industrial_Mangaloreಉದ್ಯಮಗಳ ಏಳಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿವೆ. ಹೀಗಾಗಿ ಸಹಜವಾಗಿಯೇ ಮಂಗಳೂರು ಆರ್ಥಿಕ ಪ್ರಗತಿಯ ಹಾದಿಯಲ್ಲಿದೆ. ಆದರೆ, ದುರಾದೃಷ್ಟವಶಾತ್ ಸದ್ಯದ ಜಗತ್ತಿನಲ್ಲಿ ಪ್ರತಿಪಾದನೆಯಾಗುತ್ತಿರುವ ಅಭಿವೃದ್ಧಿ ಪರಿಕಲ್ಪನೆಯ ಅಂತರ್ಯದಲ್ಲೇ ಹಲವು ಸಮಸ್ಯೆಗಳಿವೆ. ಅದು ಸಮಾನ ಹಾಗೂ ಸಾರ್ವತ್ರಿಕ ಏಳಿಗೆಗೆ ಕಾರಣವಾಗದೆ ಕೇವಲ ಅಸಮತೆಗಳನ್ನು ಸೃಷ್ಟಿಸುತ್ತಿದೆ. ಉಳ್ಳವರು ಹಾಗೂ ಇಲ್ಲದವರ ನಡುವಿನ ಭೇದವನ್ನು ಇನ್ನಷ್ಟು ವಿಸ್ತರಿಸಿ ಅದನ್ನು ಸಾಂಸ್ಥೀಕರಿಸುತ್ತಿದೆ. ಮಂಗಳೂರಿನಲ್ಲಿ ಇಂತಹ ಪ್ರವೃತ್ತಿಗಳು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿವೆ. ಶ್ರೀಮಂತರು ಆರ್ಥಿಕ ಪ್ರಗತಿಯ ಭರಪೂರ ಲಾಭ ಪಡೆದುಕೊಂಡು ಇನ್ನಷ್ಟು ಸಿರಿವಂತರಾಗುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಬಡವರು ಸಮರ್ಪಕ ನೆರವಿನ ಕೊರತೆಯಿಂದ ವೇಗದ ಜಗತ್ತಿನಲ್ಲಿ ಸ್ಪರ್ಧಿಸಲಾಗದೆ ಸೋತು ಮತ್ತಷ್ಟು ದಾರಿದ್ರ್ಯಕ್ಕೆ ತಳ್ಳಲ್ಪಡುತ್ತಿದ್ದಾರೆ. ಅಭಿವೃದ್ಧಿಯ ಇವೆರಡೂ ದ್ವಂದ್ವಗಳು ಮಂಗಳೂರಿನಲ್ಲಿ ಜೊತೆ ಜೊತೆಯಾಗಿಯೇ ಅಸ್ತಿತ್ವದಲ್ಲಿವೆ. ಹೀಗಾಗಿ, ದೃಗ್ಗೋಚರ ಆರ್ಥಿಕ ಅಸಮಾನತೆಗಳು ಬಡವರ್ಗಗಳಲ್ಲಿ ಅಸಮಧಾನವನ್ನು ಸೃಷ್ಟಿಸುತ್ತಿವೆ. ಅವರಲ್ಲಿ ಸುಪ್ತವಾದ ಅಸಹನೆಯು ಸಂಚಿತಗೊಳ್ಳುತ್ತಿದೆ.

ಸಾಮಾನ್ಯವಾಗಿ ಇಂತಹ ಮನೋನಿರ್ಮಿತಿಯು ಕ್ರಾಂತಿಕಾರಿ ಬದಲಾವಣೆಗೆ ಪೂರಕವಾದ ವೇದಿಕೆಯನ್ನು ಒದಗಿಸುತ್ತದೆ. udupi-mangaloreಆದರೆ ಮಂಗಳೂರಿನಲ್ಲಿ ಬಡವರ ಬೇಗುದಿ ಬಳಕೆಯಾಗುತ್ತಿರುವ ರೀತಿಯೇ ಭಿನ್ನವಾಗಿದೆ. ಇಲ್ಲಿ ಅದನ್ನು ದುಡಿಸಿಕೊಳ್ಳುತ್ತಿರುವುದು ದರ್ಪಿಷ್ಟ ಪ್ರತಿಗಾಮಿ ಸಾಂಸ್ಕ್ರತಿಕ ಯಜಮಾನಿಕೆ. ಬಡವರ ಅಸಮಧಾನ, ಸಿಟ್ಟು ಹಾಗೂ ಆಕ್ರೋಶದ ಸುಪ್ತಭಾವನೆಗಳನ್ನು ಮೇಲ್ವರ್ಗದ ಕೋಮುವಾದಿಗಳು ಹಾಗೂ ಪ್ರತಿಗಾಮಿಗಳು ಜಾತಿ, ಧರ್ಮ ಹಾಗೂ ಸಂಸ್ಕೃತಿಯ ನೆಲೆಯಲ್ಲಿ ಹಿಂಸೆಯಾಗಿ ಪರಿವರ್ತಿಸುತ್ತಿದ್ದಾರೆ. ಆ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಸಹನೆಗೆ ಒಂದು ನಿಯಂತ್ರಿತ ಔಟ್ಲೆಟ್ ಒದಗಿಸುತ್ತಿದ್ದಾರೆ. ಹೀಗಾಗಿಯೇ ಶ್ರೀಮಂತಿಕೆ ಅಥವಾ ಹೊಸದಾದ ಆರ್ಥಿಕ ಸ್ಥಾನಮಾನವನ್ನು ಪ್ರತಿನಿಧಿಸುತ್ತಿರುವ ಅಮ್ನೇಶಿಯಾ, ಹೋಂಸ್ಟೇಯಂತಹ ತಾಣಗಳು ಮತ್ತೆ ಮತ್ತೆ ದಾಳಿಗೊಳಗಾಗುತ್ತಿವೆ. ಮತ್ತು ದಾಳಿಕೋರರು ಬಹುತೇಕ ಸಣ್ಣಪುಟ್ಟ ಅಂಗಡಿಗಳನ್ನು ಇಟ್ಟುಕೊಂಡಿರುವ, ಕೂಲಿಕೆಲಸಗಳಿಗೆ ಹೋಗುವ, ಡ್ರೈವರ್ ಕಂಡಕ್ಟರ್ ಮೊದಲಾದ ಸಣ್ಣ ಆದಾಯದ ಕೆಲಸಗಳನ್ನು ಮಾಡುತ್ತಿರುವ ಬಡ ಹಾಗೂ ಕೆಳ ಮಧ್ಯಮ ವರ್ಗಕ್ಕೆ ಸೇರಿದವರೇ ಆಗಿರುತ್ತಾರೆ. ಇದು ಇನ್ನೊಂದು ನೆಲೆಯಲ್ಲಿ ಪ್ರಗತಿಪರ ಸಂಘಟನೆಗಳ ವೈಫಲ್ಯವನ್ನೂ ಸಂಕೇತಿಸುತ್ತದೆ.

***

ಆಧುನಿಕ ಜಗತ್ತಿನ ಬದುಕಿನಲ್ಲಿ ಮಧ್ಯಮ ವರ್ಗ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಪ್ರೆಂಚ್ ಕ್ರಾಂತಿಯಿಂದ ಹಿಡಿದು ಹಿಂದಿನವರೆಗೆ ಸಮಾಜದ ಹಲವು ಬದಲಾವಣೆಗೆ ಅದು ಕಾರಣವಾಗಿದೆ. ನಮ್ಮ ದೇಶದ ಇತಿಹಾಸದಲ್ಲೂ ಮಧ್ಯಮ ವರ್ಗವು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದ್ದ ವಿಚಾರ ನಮಗೆಲ್ಲಾ ತಿಳಿದಿದೆ. ಆದರೆ ಮಧ್ಯಮ ವರ್ಗ ಸಹಜವಾಗಿಯೇ ಬಹಳ ವೊಲಟೈಲ್ ಆಗಿರುತ್ತದೆ. ಸೃಷ್ಟಿ ಹಾಗೂ ಲಯ ಇವೆರಡನ್ನೂ ಒಡಲಲ್ಲಿಟ್ಟುಕೋಂಡೇ ಅದು ವ್ಯವಹರಿಸುತ್ತದೆ. ಅಂತೆಯೇ ಸ್ವಾತಂತ್ರ್ಯ ಆಂದೋಲನದ ಜತೆಜತೆಗೇ ಅದು ಕೋಮುವಾದವನ್ನೂ ಕೂಡಾ ಬೆಳೆಸಿದ್ದನ್ನು ನಾವು ಕಂಡಿದ್ದೇವೆ. ಹೀಗಾಗಿಯೇ ಸ್ವಾತಂತ್ರ್ಯ ಸಾಧನೆ ಹಾಗೂ ದೇಶ ವಿಭಜನೆ, ಇವೆರಡೂ ಮಧ್ಯಮ ವರ್ಗದ ಕೃತ್ಯಗಳು ಎಂಬುದಾಗಿ ಹಲವು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಮಧ್ಯಮ ವರ್ಗದ ಅನಾಹುತಕಾರಿ ಗುಣಗಳು ಸ್ವಾತಂತ್ರ್ಯೋತ್ತರ ಭಾರತದಲಲ್ಲಿ ಇನ್ನಷ್ಟು ವಿಸ್ತರಿಸಿದ್ದನ್ನು ನಾವು ಕಾಣುತ್ತಿದ್ದೇವೆ. ಐತಿಹಾಸಿಕ ಹಾಗೂ ತಾತ್ವಿಕ ನೆಲೆಯಲ್ಲಿ ನೋಡಿದಾಗ ತಕ್ಕ ಮಟ್ಟಿನ ಜಾತ್ಯಾತೀತತೆ ಮತ್ತು ಅನ್ಯತೆಗೆ ಗೌರವ- ಇವು ಮಧ್ಯಮ ವರ್ಗದ ಮೂಲಭೂತ ಮೌಲ್ಯಗಳಾಗಿರುತ್ತವೆ. ಆದರೆ ನಮ್ಮ ಇಂದಿನ ಮಧ್ಯಮ ವರ್ಗ ಅಂತಹ ತತ್ವಗಳಿಗೆ ವ್ಯತಿರಿಕ್ತವಾಗಿ ಆಘಾತಕಾರಿ ನೆಲೆಯಲ್ಲಿ ಬೆಳೆಯುತ್ತಿದೆ. ಅತಿ ರಾಷ್ಟ್ರೀಯತೆ, ಕೋಮುವಾದ, ನಿರಂಕುಶತೆ ಮೊದಲಾದ ಅಪಸವ್ಯಗಳನ್ನು ಪೋಷಿಸುತ್ತಾ ಮುನ್ನಡೆಯುತ್ತಿದೆ. ಗುಜರಾತ್‌ನಲ್ಲಿ ಮಧ್ಯಮ ವರ್ಗದ ಸ್ವರೂಪವನ್ನು ಚರ್ಚಿಸುತ್ತಾ ಚಿಂತಕ ಆಶಿಶ್ ನಂದಿಯವರು “ಸದ್ಯ ಮಧ್ಯಮ ವರ್ಗವನ್ನು ಪ್ರವೇಶಿಸುತ್ತಿರುವ ಜನರು ಮಧ್ಯಮ ವರ್ಗದ ಯಾವುದೇ ಮೌಲ್ಯಗಳನ್ನು ಹೊಂದಿರುವುದಿಲ್ಲ. ಬದಲಿಗೆ ಅವರು ಕೇವಲ ಮಧ್ಯಮ ವರ್ಗದ ಆದಾಯವನ್ನು ಹೊಂದಿರುತ್ತಾರೆ; ಮಧ್ಯಮ ವರ್ಗದ ಕೊಳ್ಳುಬಾಕತನವನ್ನು ಹೊಂದಿರುತ್ತಾರೆ.” ಎಂದು ವಿಶ್ಲೇಷಿಸಿದ್ದರು. Indian_Middle_Classಇದು ಕೇವಲ ಗುಜರಾತ್ ಮಾತ್ರವಲ್ಲದೆ ಇಡೀ ಭಾರತದ ಮಧ್ಯಮ ವರ್ಗದ ಸ್ವರೂಪವೂ ಆಗಿದೆ.

ಮಂಗಳೂರಿನಲ್ಲಿ ಕೂಡಾ ಇಂತಹದ್ದೇ ಸ್ವರೂಪದ ಬಲಿಷ್ಟ ಮಧ್ಯಮವರ್ಗವೊಂದು ಅಸ್ತಿತ್ವದಲ್ಲಿದೆ. ಅದು ತಮ್ಮ ಶ್ರೀಮಂತಿಕೆಯ ಫಲವಾಗಿ ಸಾಮಾಜಿಕ ಶ್ರೇಣೀಕರಣದಲ್ಲಿ ನಿಧಾನವಾಗಿ ಮೇಲೇರುತ್ತಿದೆ. ಮುಖ್ಯವಾಹಿನಿಯ ಧರ್ಮಗಳ ಯಜಮಾನಿಕೆಯೂ ಕೂಡಾ ಇಂತಹ ಹೊಸ ಸಮೃದ್ಧ ವರ್ಗಗಳ ಆಗಮನವನ್ನು ಸ್ವಾಗತಿಸುತ್ತಿದೆ. ಹೀಗಾಗಿ ತಮ್ಮ ಹೊಸದಾದ ಆರ್ಥಿಕ ಸ್ಥಾನಮಾನಗಳನ್ನು ಒಪ್ಪುತ್ತಾ ತಮಗೆ ವಿಶೇಷ ಗೌರವವನ್ನು ನೀಡುತ್ತಿರುವ ಮುಖ್ಯವಾಹಿನಿಯ ಧರ್ಮಗಳ ಕಡೆಗೆ ಅವರ ನಿಷ್ಟೆ ಇನ್ನಷ್ಟು ಗಟ್ಟಿಯಾಗುತ್ತಿದೆ. ಅದರ ರಕ್ಷಣೆಯ ನೂತನ ಚಾಂಪಿಯನ್‌ಗಳಾಗಲು ಮೇಲ್ ಮಧ್ಯಮ ವರ್ಗವು ಹೊರಟಿದೆ. ಪುರೋಹಿತಶಾಹಿಯ ಜತೆಗಿನ ಸಾಹಚರ್ಯ ಅವರಿಗೆ ಇನ್ನಷ್ಟು ಹುರುಪು ನಿಡುತ್ತಿದೆ. ಕರಾವಳಿಯಲ್ಲಿ ಆಗಾಗ್ಗೆ ನಡೆಯುತ್ತಿರುವ ಜೀರ್ಣೋದ್ಧಾರ, ನಾಗಮಂಡಲ, ಸಮಾಜೋತ್ಸವಗಳು ಇಂತಹದ್ದೇ ಪ್ರವೃತ್ತಿಗಳನ್ನು ಪ್ರತಿನಿಧಿಸುತ್ತವೆ. ಧಾರ್ಮಿಕ ಗೌರವ ಹಾಗೂ ಸ್ವೀಕರಣೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅದು ಧರ್ಮದ ಆಚರಣೆ, ಭೋಧನೆ ಹಾಗೂ ರಕ್ಷಣೆಯ ಕಾರ್ಯತಂತ್ರದಲ್ಲಿ ಮತ್ತಷ್ಟು ಕರ್ಮಠವಾಗುತ್ತಿದೆ.

***

ಮಂಗಳೂರು ಶೈಕ್ಷಣಿಕವಾಗಿ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ. ತ್ರಪ್ತಿಕರ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. Alvas-Campusದೊಡ್ಡ ಸಂಖ್ಯೆಯಲ್ಲಿ ವಿವಿಧ ಶಿಸ್ತುಗಳನ್ನು ಭೋಧಿಸುವ ಶಿಕ್ಷಣ ಸಂಸ್ಥೆಗಳಿವೆ. ಆದಾಗ್ಯೂ ಕರಾವಳಿಯ ಶೈಕ್ಷಣಿಕ ಸಾಧನೆ ಅದರ ಸಾಮಾಜಿಕ ನಡಾವಳಿಯಲ್ಲಿ ಪ್ರತಿಫಲಿತವಾಗುತ್ತಿಲ್ಲ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯದಾಗಿ, ಮಂಗಳೂರು ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಮಿತಿಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ನಮ್ಮ ಶೈಕ್ಷಣಿಕ ಸಂರಚನೆಯು ಬೌದ್ಧಿಕತೆಯ ಪ್ರಚೋದನೆಗೆ ಪ್ರಾಶಸ್ತ್ಯ ನೀಡದೆ ಕೇವಲ ಮಾಹಿತಿ ಜ್ಞಾನದ ಪ್ರಸರಣಕ್ಕೆ ಮಹತ್ವ ನೀಡುತ್ತದೆ. ಬೌದ್ಧಿಕತೆಯು ಚಿಂತನಾಶೀಲ ವೈಚಾರಿಕತೆಯನ್ನು ದಯಪಾಲಿಸುತ್ತದೆ. ಅದು ಪ್ರಶ್ನಾ ಮನೋಧರ್ಮವನ್ನು ಉದ್ದೀಪನ ಮಾಡುತ್ತದೆ. ಮಾಹಿತಿ ಜ್ಞಾನ ಕೇವಲ “ಯಥಾವತ್ ಸ್ವೀಕರಣೆ”ಯ ಆಯಾಮವನ್ನು ಹೊಂದಿರುತ್ತದೆ. ಹೀಗಾಗಯೇ ನಮ್ಮಲ್ಲಿ ಮಹಾ ಸುಳ್ಳಿನ ಕಂತೆಗಳಾದ ಕೋಮು ಭಾಷಣಗಳು ಅಥವಾ ಅವೈಜ್ಞಾನಿಕ ಮೌಡ್ಯ ಆಚರಣೆಗಳು ಯಾವುದೇ ಪ್ರಶ್ನೆಯಿಲ್ಲದೆ ಸ್ವೀಕರಣೆಯಾಗುತ್ತಿವೆ. ಮಡೆಸ್ನಾನ, ಬುರ್ಖಾದಂತಹ ಪದ್ದತಿಗಳು ಸಾಕ್ಷಾತ್ ಪೀಡಿತರಿಂದಲೇ ಸಮರ್ಥನೆಗೊಳ್ಳುತ್ತಿವೆ.

ಎರಡನೆಯದ್ದಾಗಿ, ಕರಾವಳಿಯ ಶೈಕ್ಷಣಿಕ ರಂಗವು ಅಲ್ಲಿಯ ಧಾರ್ಮಿಕ ಯಜಮಾನಿಕೆಯ ಕಪಿಮುಷ್ಟಿಯಲ್ಲಿದೆ. ದೇಗುಲ, ಪ್ರಾರ್ಥನಾ ಮಂದಿರಗಳು, ಧಾರ್ಮಿಕ ಸಂಸ್ಥಾಪನೆಗಳು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿವೆ. ಧಾರ್ಮಿಕೇತರ ನೆಲೆಯಲ್ಲಿ ನಡೆಯುತ್ತಿರುವ ಸಂಸ್ಥೆಗಳೂ ಕೂಡಾ ಸಾಂಸ್ಕ್ರತಿಕ ಯಜಮಾನಿಕೆಯ ಸ್ಪಷ್ಟ ನಿಯಂತ್ರಣದಲ್ಲಿವೆ. ಇಂತಹ ಎಕ್ಸ್‌ಕ್ಲೂಸಿವ್ ಶಿಕ್ಷಣ ವ್ಯವಸ್ಥೆಯಲ್ಲಿ ವೈಚಾರಿಕತೆ, ಪ್ರಗತಿಶೀಲತೆಯಂತಹ ಉನ್ನತಿಗಳನ್ನು ಅಪೇಕ್ಷಿಸುವುದು ಅಸಾಧ್ಯ. ಶಿಕ್ಷಣ, ವ್ಯಕ್ತಿತ್ವ ರೂಪಣೆಯ ಮೂಲಭೂತ ಅಂಶ. ಹಿಗಾಗಿ ಅದನ್ನೇ ನಿಯಂತ್ರಣದಲ್ಲಿಟ್ಟುಕೊಂಡು ಸಾಂಸ್ಕೃತಿಕ ಮೂಲಭೂತವಾದವು ಮುನ್ನಡೆಯುತ್ತಿದೆ.

***

ಶ್ರೀಮಂತ ಸಾಂಸ್ಕೃತಿಕ ಪರಂಪರೆ ಇರುವ ಕರಾವಳಿ ಪ್ರಾಂತ್ಯವನ್ನು ವಿವಿಧ ಸಾಂಸ್ಕ್ರತಿಕ ಕೂಟಗಳ ದರ್ಪಿಷ್ಟ ಯಜಮಾನಿಕೆಯು ಅಂಕೆಯಲ್ಲಿ ಹಿಡಿದುಕೊಳ್ಳಲು ಹವಣಿಸುತ್ತಿದೆ. ಧರ್ಮ, ಸಂಸ್ಕೃತಿ, ಕಲೆ, ಶಿಕ್ಷಣ ಹೀಗೆ ಸಾಂಸ್ಕ್ರತಿಕ ಬದುಕಿನ ಅಷ್ಟೂ ಕ್ಷೇತ್ರಗಳನ್ನು ಅದು ವ್ಯಾಪಿಸಿಕೊಂಡಿದೆ. ಹೀಗಾಗಿಯೇ ಮಠಮಂದಿರಗಳು ಇಲ್ಲಿಯ ಜನರ ಬದುಕಿನಲ್ಲಿ ಕೇಂದ್ರಸ್ಥಾನವನ್ನು ಪಡೆಯುತ್ತಿವೆ. ಮೂಲಭೂತವಾದಿ ಸ್ವರೂಪವನ್ನು ಹೊಂದಿರುವ ಯಜಮಾನಿಕೆಯು ಉಗ್ರ ಅಸಹಿಷ್ಣು ವ್ಯವಸ್ಥೆಯನ್ನು ನಿರ್ಮಿಸಲು ಯತ್ನಿಸುತ್ತಿದೆ. ವೈವಿಧ್ಯತೆಯನ್ನು ಕೆಡವಿ ಹಾಕಿ ಏಕತತ್ವವನ್ನು ಸ್ಥಾಪಿಸ ಹೊರಟಿದೆ. ತನ್ನದೇ ಅನುಕೂಲಕ್ಕೆ mangalore-attackತಕ್ಕಂತೆ ರೂಪಿತವಾದ ಶಾಸ್ತ್ರ ಪರಂಪರೆಯನ್ನು ಸಂವಿಧಾನಕ್ಕೆ ಪರ್ಯಾಯವಾಗಿ ಪ್ರಚುರ ಪಡಿಸುತ್ತಿದೆ. ಅಂತರ್ಜಾತಿ-ಅಂತರ್ಮತೀಯ ವಿವಾಹ ಆಥವಾ ಸಾಹಚರ್ಯಗಳ ವಿರೋಧ, ಮೋರಲ್ ಪೋಲಿಸಿಂಗ್‌ನಂತಹ ಪೃವ್ರತ್ತಿಗಳು, ದಬ್ಬಾಳಿಕೆಯ ಯಜಮಾನಿಕೆಗಳು, ಕರಾವಳಿಯಲ್ಲಿ ರೂಪಿಸಿದ ವ್ಯವಸ್ಥೆಯು ಬಲಗೊಂಡದ್ದನ್ನು ಸಂಕೇತಿಸುತ್ತದೆ. ಸಿರಿವಂತಿಕೆ, ಪ್ರಭುತ್ವ, ಹಾಗೂ ಮಾಧ್ಯಮದ ಜೊತೆಗಿನ ಅದರ ಕೂಡಾಟ ಅಪಾಯದ ಸಾಧ್ಯತೆಗಳನ್ನು ಇಮ್ಮಡಿಗೊಳಿಸಿದೆ. ಸಮಾವೇಶ ಹಾಗೂ ಸಂಸ್ಥೆಗಳನ್ನು ಸಂಘಟಿಸುವ ಮೂಲಕ ಜನಾನುರಾಗಿ ನೆಲೆಯನ್ನು ಪಡೆದುಕೊಳ್ಳುವ ಪ್ರಯತ್ನವನ್ನೂ ಕೂಡಾ ಅದು ಮಾಡುತ್ತಿದೆ. ತಾನು ಹಿನ್ನೆಲೆಯಲ್ಲಿದ್ದುಕೊಂಡೇ ಬಡ ಯುವಕರನ್ನು ದಾಳವಾಗಿ ಪ್ರಯೋಗಿಸುವ ಕಲೆಯನ್ನು ಅದು ಕರಗತ ಮಾಡಿಕೊಂಡಿದೆ.

ಕರಾವಳಿಯ ವಾತವರಣವನ್ನು ಕೆಡಿಸುವಲ್ಲಿ ವ್ಯವಸ್ಥೆ ಹಾಗೂ ಮಾಧ್ಯಮಗಳ ಪಾತ್ರವೂ ದೊಡ್ಡದಿದೆ. ಸರಕಾರಗಳ ವೈಫಲ್ಯದಿಂದಾಗಿ ನಮ್ಮ ವ್ಯವಸ್ಥೆಯನ್ನು ರೂಪಿಸಿರುವ ಸಂವಿಧಾನದ ಆಶಯಗಳು ವಾಸ್ತವದಲ್ಲಿ ಅನುಷ್ಠಾನಕ್ಕೆ ಬರದೆ ಹಾಗೆಯೇ ಉಳಿದುಕೊಂಡಿವೆ. ದಬ್ಬಾಳಿಕೆಯ ಯಾಜಮಾನ್ಯದ ವಿರುದ್ಧ ಬಂಡಾಯದ ದನಿಯೆತ್ತಿದವರನ್ನೇ ಹತ್ತಿಕ್ಕುವ ಪ್ರಯತ್ನಗಳನ್ನು ಪ್ರಭುತ್ವವು ಮಾಡುತ್ತಲಿದೆ. Mutalik-in-Mangaloreಮಾಧ್ಯಮಗಳು ಟಿಆರ್‌ಪಿ ಸಾಧನೆಗೈಯುವ ಸಲುವಾಗಿ ಮಿಥ್ಯೆಗಳು ಹಾಗೂ ಮೌಢ್ಯಗಳನ್ನು ಪ್ರಸರಿಸುತ್ತಿವೆ. ಟಿವಿ ವಾಹಿನಿಗಳ ಚರ್ಚಾಕೂಟಗಳಲ್ಲಿ ಪ್ರಮೋದ್ ಮುತಾಲಿಕ್‌ರಂತಹ ಮತೀಯ ಅತಿರೇಕವಾದಿಗಳೇ ವಿಜೃಂಭಿಸುತ್ತಿದ್ದಾರೆ. ಅವರ ಉದ್ರೇಕಕಾರಿ ಮಾತುಗಳೇ ನಮ್ಮ ಮಾಧ್ಯಮಗಳ ಬಂಡವಾಳವಾಗಿದೆ. ಪ್ರಗತಿಪರ ಸಂಘಟನೆಗಳು ಇಂತಹ ಪ್ರವೃತ್ತಿಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಿವೆಯಾದರೂ ಕೆಲವು ಬುದ್ದಿಜೀವಿ ಗುಂಪುಗಳು ಪ್ರತಿಭಟನೆಗೆ ಮೂಲಭೂತವಾದಿಗಳಷ್ಟೇ ಉಗ್ರತೆಯ ಮಾರ್ಗವನ್ನು ಅನುಸರಿಸುತ್ತಿವೆ. ಶ್ರೀಸಾಮಾನ್ಯರು ಪ್ರಾಮಾಣಿಕವಾಗಿ ಅನುಸರಿಸುತ್ತಾ ಬಂದಿರುವ ಧರ್ಮ ಸಂಸ್ಕೃತಿಗಳನ್ನೇ ಅವಮಾನಿಸುವ ಮಾತುಗಳನ್ನಾಡುತ್ತಿವೆ. ಇಂತಹ ಕೃತ್ಯಗಳು ಒಟ್ಟಾರೆ ಬುದ್ದಿಜೀವಿ ವರ್ಗದ ಮೆಲೆ ಜನಸಮೂಹದ ವಿಶ್ವಾಸ ಕಡಿಮೆಯಾಗುವಂತೆ ಮಾಡುತ್ತಿವೆ.

ಇವೆಲ್ಲದರ ಪರಿಣಾಮವೆಂಬಂತೆ ಇಂದು ಕರಾವಳಿಯ ದೌರ್ಭಾಗ್ಯವು ಇಮ್ಮಡಿಗೊಂಡಿದೆ.

One thought on “ಮಂಗಳೂರಿನಲ್ಲಿ ಸದ್ಯಕ್ಕೆ ನಡೆಯುತ್ತಿರುವುದು “ಆತ್ಮಹತ್ಯೆ”

  1. jagadishkoppa

    ಒಂದು ನಾಡಿನ ವರ್ತಮಾನದ ದುರಂತವನ್ನು ಅದ್ಭುತವಾಗಿ ವಿಶ್ಲೇಷಣೆಗೆ ಒಳಪಡಿಸಿದ್ದೀರಿ. ಯಾವುದೇ ಮಮಕಾರದವಿಲ್ಲದ ಇಂತಹ ನಿಷ್ಟುರ ಒಳನೋಟಗಳು ಮಾತ್ರ ದಿಕ್ಕೆಟ್ಟವರಿಗೆ ದಾರಿದೀಪವಾಗಬಲ್ಲವು. ಧನ್ಯವಾದಗಳು,

    Reply

Leave a Reply

Your email address will not be published. Required fields are marked *