Daily Archives: February 10, 2013

ಬಿಜಾಪುರದ ಭವ್ಯ ಸನ್ಮಾನ ಸಾಹಿತ್ಯ ಸಮ್ಮೇಳನ..!

– ಡಾ.ಎಸ್.ಬಿ.ಜೋಗುರ

ಒಂದು ಕಾಲವಿತ್ತು ಬರೆಯುವ, ಯೋಚಿಸುವದನ್ನು ದಮನ ಮಾಡುವ ಸಲುವಾಗಿಯೇ ಪ್ರಭುತ್ವಗಳು ಗಸ್ತು ಹೊಡೆದು ಕಾಯುತ್ತಿದ್ದವು. ಪ್ರಭುತ್ವದ ಬುಡಕ್ಕೆ ತಿವಿಯುವ ಚೂಪುತನದ ವಿಚಾರಗಳಿದ್ದರಂತೂ ಸಹಿಸುತ್ತಲೇ ಇರಲಿಲ್ಲ. ಕಾರ್ಲ ಮಾರ್ಕ್ಸ್ ಜರ್ಮನಿಯಿಂದ ಇಂಗ್ಲಂಡಗೆ, ಇಂಗ್ಲಂಡಿನಿಂದ ಫ಼್ರಾನ್ಸ್‌ಗೆ ಸುತ್ತಿದ್ದು ವಿದೇಶಿ ಪ್ರವಾಸಕ್ಕಾಗಿ ಅಲ್ಲ. ಅವನ ಬರವಣಿಗೆಯ ಚೂಪುತನಕ್ಕೆ ಬೆದರಿ, ಅಲ್ಲಿಯ ಪ್ರಭುತ್ವಗಳು ಅವನನ್ನು ಹಾಗೆ ಸುತ್ತಿಸಿರುವದಿದೆ. ಚರಿತ್ರೆಯುದ್ದಕ್ಕೂ ಇಂಥಾ ಹತ್ತಾರು ಘಟನೆಗಳು ನಡೆದಿರುವದಿದೆ. 1928 ರ ಸಂದರ್ಭದಲ್ಲಿ ಇಟಲಿಯಲ್ಲಿ ಫ಼್ಯಾಶಿಷ್ಟರು ಪಟ್ಟದಲ್ಲಿರುವಾಗ ಕಮ್ಯುನಿಷ್ಟ ಪಕ್ಷದ ನೇತಾರ ಮತ್ತು ಚಿಂತಕನಾಗಿದ್ದ ಆಂಟೊನಿಯೋ ಗ್ರಾಮ್ಸಿ, ಪ್ರಗತಿಪರ ಧೋರಣೆಯನ್ನಿಟ್ಟುಕೊಂಡು ಮಾತನಾಡುವದೇ ತಪ್ಪು ಎನ್ನುವ ಹಾಗೆ ಅವನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದು ಮಾತ್ರವಲ್ಲದೇ ಪ್ರಭುತ್ವದ ಪರವಾಗಿರುವ ಅಧಿಕಾರಿಯೊಬ್ಬ ನ್ಯಾಯಾಧೀಶರ ಎದುರು ಈ ಮನುಷ್ಯ ಎರಡು ದಶಕಗಳ ಕಾಲ ಆಲೋಚನೆ ಮಾಡುವ ಸಾಮರ್ಥ್ಯವನ್ನೇ ಕಳೆದುಕೊಳ್ಳಬೇಕು ಅಂಥಾ ಶಿಕ್ಷೆಯನ್ನು ಕೊಡಿ ಎಂದು ಕೇಳಿಕೊಂಡಿದ್ದ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅತ್ಯಂತ ಕುತ್ಸಿತ ಬುದ್ದಿಯ ಬಳಕೆಯ ಮೂಲಕ ಹಾಗೆ ಪ್ರಗತಿಪರರಾಗಿರುವವರನ್ನು ಆಗಾಗ ಬೇರೆ ಬೇರೆ ಮಾರ್ಗಗಳನ್ನು ಬಳಸಿ ಮೆತ್ತಗೆ ಮಾಡುವ ಕ್ರಮ ಜಾರಿಯಲ್ಲಿದೆ. ಯೋಚನೆ, ಪ್ರಶ್ನೆ, ತರ್ಕಗಳನ್ನೇ ಸಹಿಸದಿರುವ ಪ್ರಭುತ್ವಗಳು ಯಾವಾಗಲೂ ಇದನ್ನೇ ಮಾಡುತ್ತ ಬಂದಿವೆ. ದಮನಿತರ ದನಿಯಾಗಿ ಇಲ್ಲವೇ ಶೋಷಿತರ ಪರವಾಗಿ ಪ್ರಭುತ್ವಗಳು ಯಾವ ಕಾಲದಲ್ಲೂ ನಿಂತಿರುವ ಉದಾಹರಣೆಗಳಿಲ್ಲ. ಇಂಗ್ಲಂಡ ದೇಶದ ಸಮಾಜಶಾಸ್ತ್ರಜ್ಞ ಸ್ಪೆನ್ಸರ್ “ಇದ್ದವರ ಭಯದಿಂದ ರಾಜ್ಯ ಹುಟ್ಟಿತು” ಎಂದು ಹೇಳಿರುವ ಹಿನ್ನೆಲೆಯೂ ಇದೇ ಆಗಿದೆ. ಇಲ್ಲಿ ಇದ್ದವರ ಎನ್ನುವದನ್ನು ಸ್ಪೆನ್ಸರ್ ಜೀವಂತವಿರುವವರ ಎನ್ನುವ ಅರ್ಥದಲ್ಲಿ ಹೇಳಿದ್ದರೂ ನಾವದನ್ನು ಉಳ್ಳವರ ಭಯದಿಂದ ಎಂತಲೂ ಗ್ರಹಿಸಬಹುದಾಗಿದೆ

ಈಗೀಗ ಸಾಹಿತ್ಯಕ ವಲಯದಲ್ಲಿ ಒಂದು ಬಗೆಯ ಮುಗಮ್ಮಾದ ಪರಿಸರ ಒಡಮೂಡತೊಡಗಿದೆ. ಅತ್ಯಂತ ಪ್ರಜಾಪ್ರಾತಿನಿಧಿಕ ರೂಪದಲ್ಲಿ ನಡೆಯಬೇಕಾದ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನಗಳೇ ತೀರಾ ಅಂದಾದುಂದಿಯಾಗಿ ನಡೆಯುತ್ತವೆ. ನಾಡು ನುಡಿಯ ಚಿಂತನೆಗೆ ಅಲ್ಲಿ ಸಮಯ ಉಳಿದರೆ ಮಾತ್ರ ಅವಕಾಶ, ಮಿಕ್ಕದ್ದೆಲ್ಲಾ ಬರೀ ಮೆರವಣಿಗೆ, ಊರುಣಿಗೆ, ಸನ್ಮಾನ, ಹಾರ ತುರಾಯಿ, ಊಟ, ತಿಂಡಿಯಲ್ಲೇ ಮುಗಿದುಹೋಗುತ್ತದೆ. sanmana-sammelanaಸದ್ಯ ಬಿಜಾಪುರದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಸಮ್ಮೇಳನವನ್ನೇ ನೋಡಿ. ಅಲ್ಲಿಯ ಆಮಂತ್ರಣ ಪತ್ರಿಕೆಯಲ್ಲಿ ಸಾಹಿತಿಗಳಿಗಿಂತಲೂ ರಾಜಕಾರಣಿಗಳ ಸಂಖ್ಯೆಯೇ ಹೆಚ್ಚಿಗಿದೆ. ಜೊತೆಗೆ ನೂರಕ್ಕಿಂತಲೂ ಹೆಚ್ಚು ಜನರಿಗೆ ಸನ್ಮಾನ ಇಲ್ಲಿ ನಡೆಯಲಿದೆ. ಹೀಗೆ ಸನ್ಮಾನ, ಹಾರ ತುರಾಯಿಗಳಿಗೆ ತಗಲುವ ವೆಚ್ಚ ಯಾರದ್ದು..? ಬಿಜಾಪುರ ಜಿಲ್ಲೆಯಲ್ಲಿ ಬರದ ಭೀಕರತೆ ಅದಾಗಲೇ ಆರಂಭವಾಗಿದೆ. ದನಕರುಗಳಿಗೆ ಮೇವಿಲ್ಲ, ಕೃಷಿಗೆ ಬಿಡಿ, ಕುಡಿಯಲೂ ನೀರು ಇಲ್ಲದ ಸ್ಥಿತಿಯಲ್ಲಿ ಅನೇಕ ಗ್ರಾಮಗಳಿವೆ. ಹೀಗಿರುವಾಗ ಈ ನೂರಕ್ಕಿಂತಲೂ ಹೆಚ್ಚು ಜನರಿಗೆ ಸನ್ಮಾನ ಮಾಡುವ ಹರಕತ್ತಾದರೂ ಏನಿದೆ..? ಸಮ್ಮೇಳನ ಎನ್ನುವದು ಒಂದು ಅಕೌಂಟೇಬಲ್ ಆಗಿರುವ ಚಟುವಟಿಕೆ. ಪೈಸೆಗೆ ಪೈಸೆ ಲೆಕ್ಕ ಕೊಡಬೇಕು. ಹೀಗಿರುವಾಗ ಯಾವುದಕ್ಕೆ ಒತ್ತು ಕೊಡಬೇಕು, ಯಾವುದಕ್ಕೆ ಕೊಡಬಾರದು ಎನ್ನುವದು ರಾಜ್ಯದ ಅಧ್ಯಕ್ಷರಾದಿಯಾಗಿ, ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವವರಾದಿಯಾಗಿ ಯೋಚಿಸಬೇಕು. ಸ್ವಯಂಪ್ರೇರಣೆಯಿಂದ ಮೆರವಣಿಗೆ ಮತ್ತು ಸನ್ಮಾನಗಳು ಬೇಡ ಎನ್ನುವ ಮಾತು ಮೂಡಬೇಕು. ಅಂದಾಗ ಆ ಸಾಹಿತ್ಯ ಸಮ್ಮೇಳನ ಪ್ರಾಜ್ಞರ ಸಭೆಯಾಗಿ, ಸಮ್ಮೇಳನವಾಗಿ ಹೆಸರಾಗುವದು. ಇಲ್ಲದಿದ್ದರೆ ಅದೊಂದು ಮೋಜಿನ ಜಾತ್ರೆಯಷ್ಟೇ ಮಹತ್ವ ಪಡೆಯುತ್ತದೆ. ಸಾಹಿತಿಗಳಾದವರು ಬರೀ ವೈಚಾರಿಕತೆಯನ್ನು ಕುರಿತು ಬರೆಯುವವರು ಮಾತ್ರವೇ..? ಅನುಸರಣೆ ಇಲ್ಲವೇ..? ನಡೆ ನುಡಿಯೊಳಗೆ ಹೊಂದಾಣಿಕೆ ಬೇಡ, ಒಂದುತನ ಬೇಕು.

ಎಲ್ಲೋ ಒಂದೆಡೆ ಸಾಹಿತ್ಯಕ ಚಟುವಟಿಕೆಗಳು ನಡೆಯುತ್ತಿವೆ ಎಂತಾದರೆ ಸಮಾಜಮುಖಿಯಾದ ಒಂದಿಷ್ಟು ನಿಲುವುಗಳು, ತೀರ್ಮಾನಗಳು ತೀರಾ ಅವಶ್ಯ. ಸಮಾಜದ ಕಡೆಗೆ ಬೆನ್ನು ಮಾಡಿ ನಡೆಸುವ ಯಾವುದೇ ಸಾಹಿತ್ಯಕ ಚಟುವಟಿಕೆಗಳಿಗೆ ಅರ್ಥವಿಲ್ಲ. ಸಾಹಿತ್ಯ ಸರ್ವರಿಗಲ್ಲ ಅಂತ ಹೇಳುವವರಿಗೆ ಅದು ಕೇವಲ ಕೆಲವರಿಗಲ್ಲ ಎನ್ನುವ ಮಾತನ್ನೂ ಹೇಳಬೇಕಾಗುತ್ತದೆ. ನಿಮ್ಮ ಬರವಣಿಗೆಗೆ ಸಮಾಜದ ಕಟ್ಟ ಕಡೆಯವನ ಬದುಕಿನ ಬವಣೆಗಳು ಸರಕಾಗಬಹುದಾದರೆ, ಅವನ ಜೀವನಗಾಥೆ ನಿಮ್ಮ ಪ್ರಶಸ್ತಿಗೆ ಫ಼ಲವಾಗಬಹುದಾದರೆ ಅವನೆಡೆಗೆ ಬೆನ್ನು ಮಾಡದೇ ಮುಖ ಮಾಡಿ ನಿಲ್ಲುವಲ್ಲಿಯೂ ಒಂದು ಬಗೆಯ ತಾತ್ವಿಕತೆಯಿದೆ. ಸಾವಿರಾರು ವರ್ಷಗಳಿಂದ ಗುಣಕ್ಕೆ ಮತ್ಸರವಿಲ್ಲ ಎಂದು ಹೇಳುತ್ತಲೇ ಜಾತಿ, ಜನಾಂಗ, ವರ್ಣ, ಲಿಂಗದ ಆಧಾರದ ಮೇಲೆ ತರತಮನೀತಿಗಳನ್ನು ಅನುಸರಿಸಿಕೊಂಡು ಬರಲಾಗಿದೆ. ಪಶ್ಚಿಮದ ರಾಷ್ಟ್ರಗಳು ಈ ದಿಶೆಯಲ್ಲಿ ತೀರಾ ಉದಾರವಾದಿಗಳು ಎಂದು ಅವರನ್ನು ಅನುಕರಿಸಿದವರೆಲ್ಲಾ ಅವರಂಥಾದರೇ ಹೊರತು ನಮ್ಮಂಥಾಗಲಿಲ್ಲ. ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿಯೂ ದಟ್ಟವಾದ ಪಾಶ್ಚಿಮಾತ್ಯ ಪ್ರಭುತ್ವದ ಅನುಭವವಿರುವ ಶಕ್ತಿಗಳೇ ನಮ್ಮನ್ನು ಪರೋಕ್ಷವಾಗಿ ನಮ್ಮ ಗಮನಕ್ಕೆ ಬಾರದ ಹಾಗೆ ಆಳುತ್ತಿವೆ. ಹಾಗೆ ಆಳುವ ಚಾಣಾಕ್ಷತೆ ಕೂಡಾ ಪಾಶ್ಚ್ಯಾತ್ಯ ಸಂಸ್ಕೃತಿಯ ಮೂಲಕ ಕಲಿತಿರುವದೇ ಆಗಿದೆ. 1960 ರ ಸಂದರ್ಭದಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಅಮೇರಿಕೆಯ ಲಿಂಕನ್ ಮೆಮೊರಿಯಲ್ ಹಾಲ್ ಎದುರು ಕಿಕ್ಕಿರಿದು ತುಂಬಿರುವ ಜನರನ್ನು ಉದ್ದೇಶಿಸಿ ಮಾತನಾಡುತ್ತಾ, “ನಾನು ನನ್ನ ನಾಲ್ಕು ಮಕ್ಕಳನ್ನು ಜನಾಂಗ ಭೇದದಿಂದ ಗುರುತಿಸದೇ, ಅವರ ಸಾಮರ್ಥ್ಯದ ಮೇಲೆ ಗುರುತಿಸುವಂತಾಗುವವರೆಗೂ ಈ ಜನಾಂಗಬೇಧ ವಿರೋಧಿ ಆಂದೋಲನವನ್ನು ಮುಂದುವರೆಸುತ್ತೇನೆ,” ಎಂದಿದ್ದರು. ಅವರ ನಂತರವೂ ಅಮೇರಿಕೆಯ ಶಾಲೆಗಳಲ್ಲಿ ಈಗಲೂ ಕರಿಯರು, ಬಿಳಿಯರು ಎನ್ನುವ ತರತಮ ನೀತಿಗಳು ನಮ್ಮ ಜಾತಿಪದ್ಧತಿಯಷ್ಟೇ ನಿರುಮ್ಮುಳವಾಗಿ ಉಳಿದಿವೆ. ಜಾತಿಯನ್ನು ಬೇರೆ ಬೇರೆ ಕಾರಣಗಳಿಗಾಗಿ ಸಮರ್ಥಿಸಿಕೊಳ್ಳುವವರು ಇರುವ ಹಾಗೆ ಅಲ್ಲಿಯೂ ಜನಾಂಗಭೇದವನ್ನು ಬೇರೆ ಬೇರೆ ಕಾರಣಗಳಿಗಾಗಿ ಸಮರ್ಥಿಸಿಕೊಳ್ಳುವವರಿದ್ದಾರೆ. ಇಂಥಾ ಅಂತರಗಳನ್ನು ನೀಗಬೇಕಾದ ಶಕ್ತಿ ಸಾಹಿತ್ಯದಲ್ಲಿದೆ. ಆದರೆ ಅದು ಕೂಡಾ ಸುಖಲೋಲುಪತೆಯ ಸಹವಾಸಕ್ಕೆ ಹಾತೊರೆಯುತ್ತಿರುವದು ವಿಷಾದನೀಯ…