ಒಂದು ಸಿನೇಮಾವನ್ನು ವಿರೋಧಿಸುವದೇ ಚಿತ್ರ ಮೀಮಾಂಸೆಯಲ್ಲ..


-ಡಾ.ಎಸ್.ಬಿ. ಜೋಗುರ


 

ಜಾಗತೀಕರಣದ ಸಂದರ್ಭದಲ್ಲಿಯೂ ಮುಕ್ತ ಮಾರುಕಟ್ಟೆಯಲ್ಲಿಯ ಕೊಳ್ಳುಬಾಕುತನದ ಸಂಸ್ಕೃತಿಯ ನಡುವೆಯೂ ಒಂದು ಸಿನೇಮಾ, ಒಂದು ಪೇಂಟಿಂಗ್ ಅನ್ನು ಸೃಜನಶೀಲ ನೆಲೆಯಲ್ಲಿ ನೋಡುವ, ಗ್ರಹಿಸುವ ಗುಣಗಳು ಕಡಿಮೆಯಾಗುತ್ತಿವೆ. ಜಾಗತೀಕರಣದ ಭರಾಟೆ ಇನ್ನೂ ಹೊಸ್ತಿಲಲ್ಲಿರುವಾಗ ಈ ಬಗೆಯ ಧಾವಂತಗಳು ಸ್ವಲ್ಪ ಕಡಿಮೆಯಾಗಿದ್ದವು. ಅದು ನಡುಮನೆಯಿಂದ ಬಚ್ಚಲುಮನೆಗೆ ವಿಸ್ತರಿಸಿದಂತೆಲ್ಲಾ ಜಗತ್ತು ಚಿಕ್ಕದಾಗುತ್ತಾ ಬಂತು ಎಂದುಕೊಳ್ಳುವಾಗಲೇ ಮನುಷ್ಯನ ಎದೆ ಅಗಲಗೊಳ್ಳಲಿಲ್ಲ ಎನ್ನುವ ಸತ್ಯವನ್ನು ಮರೆಯುವದಾದರೂ ಹೇಗೆ..?

ಹಿಂದೆಂದಿಗಿಂತಲೂ ಇಂದು ಜಾತಿ, ಧರ್ಮದ ಭಾವನೆಗಳು ಹೆಚ್ಚೆಚ್ಚು ಹುತ್ತಕಟ್ಟತೊಡಗಿವೆ. ಒಬ್ಬ ಕ್ರಿಯಾಶೀಲ ನಿರ್ದೇಶಕ, ನಟನ ಚಿತ್ರವೊಂದಕ್ಕೆ ವಿರೋಧಿಸುವ ಮೂಲಕವೇ ಚಿತ್ರ ಮೀಮಾಂಸೆ ಮಾಡಬಯಸುವವರ ದೊಡ್ದ ದೊಡ್ಡ ಪಡೆಗಳೇ ಈಗ ತಯಾರಾಗುತ್ತಿವೆ. viswaroopam-tamilಜೊತೆಗೆ ರಾಜಕೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ಇಂಥಾ ಸಮೂಹಗಳ ಬೆನ್ನಿಗೆ ಪ್ರಭುತ್ವಗಳು ಪರೋಕ್ಷವಾಗಿ ನಿಲ್ಲುವ ಪರಿಪಾಠಗಳೂ ಈಗ ಹೊಸ ನೆಲೆಯಲ್ಲಿ ಆರಂಭಗೊಂಡಿವೆ. ಪಶ್ಚಿಮದ ಎಲ್ಲ ಬಗೆಯ ಅಳವಡಿಕೆಗಳನ್ನು ಸಿನೇಮಾದಲ್ಲಿ ಇಷ್ಟಪಡುವ ನಾವು, ಅಲ್ಲಿಯ ಸಿನೇಮಾಗಳ ವೈಚಾರಿಕತೆಯನ್ನು, ಅವು ಬಿಂಬಿಸುವ ಕಠೋರ ಸತ್ಯವನ್ನು ಮಾತ್ರ ನಮಗೆ ಅರಗಿಸಿಕೊಳ್ಳಲಾಗುವದಿಲ್ಲ. ಪಶ್ಚಿಮದ ಭೌತಿಕತೆಯ ಅನುಕರಣೆ ಸಾಧ್ಯವಾದ ಹಾಗೆ ಇವತ್ತಿಗೂ ಪೂರ್ವದ ಬೌದ್ಧಿಕತೆಯಲ್ಲಿ ಆ ಬಗೆಯ ಅನುಕರಣೆ ಸಾಧ್ಯವಾಗದಿದ್ದುದೇ ಪೂರ್ವ ದೇಶಗಳ ಸಾಂಸ್ಕೃತಿಕ ಜಿಗುಟುತನಕ್ಕೆ ಒಂದು ಕಾರಣವೂ ಹೌದು. ಡಿ.ಟಿ.ಎಚ್.ಮೂಲಕ ಸಿನೇಮಾ ಪ್ರದರ್ಶನ ಸಾಧ್ಯವಾಯಿತಾದರೂ ಚಿತ್ರಮಂದಿರಗಳು ಅದೇ ವೇಗದಲ್ಲಿ ಆವಿಷ್ಕಾರಗೊಳ್ಳಲಿಲ್ಲ, ಪ್ರೇಕ್ಷಕ ಮತ್ತೆ ಎಂದಿನಂತೆ ಮುಂದಿನ ಖುರ್ಚಿಯ ಮೇಲೆ ಕಾಲಿಟ್ಟು, ಪಿಚಕ್ ಎಂದು ಉಗಿಯುತ್ತಾ ಸಿನೇಮಾ ನೋಡುವ ರೀತಿಯಲ್ಲಿ ಮಾತ್ರ ಯಾವುದೇ ಬಗೆಯ ಬದಲಾವಣೆಗಳಾಗಲಿಲ್ಲ.

ಈ ಬಗೆಯ ಸಾಂಸ್ಕೃತಿಕ ಹಿಂಬೀಳುವಿಕೆಯ ಅಂತರ ನಮ್ಮಂಥಾ ರಾಷ್ಟ್ರಗಳಲ್ಲಿ ತುಂಬಾ ತೀವ್ರವಾದ ಹಂತದಲ್ಲಿದೆ. ಕೊನ್ರಾಡ್ ಎನ್ನುವ ಚಿಂತಕ ಹೇಳುವ ಹಾಗೆಮ್ “ನಾವು ಪಶ್ಚಿಮದವರು ಅವರಿಗೆ ಮಾತನಾಡುವದನ್ನು, ಚಿಂತಿಸುವದನ್ನು ಕಲಿಸಿದ್ದೇವೆ. ಅವರು ಬಂಡುಕೋರರಾಗಿ ಕಂಡುಬಂದರೂ ನಮಗೆ ಬಾಲಿಶವಾಗಿಯೇ ತೋರುತ್ತಾರೆ.” ಎಂದಿರುವ ಮಾತನ್ನು ನೋಡಿದಾಗ ಪೂರ್ವದ ಚಿಂತನೆ ಪಶ್ಚಿಮದ ಪ್ರಭಾವದಿಂದಲೇ ರೂಪಗೊಂಡಿದೆ ಎನ್ನುವಂತಿದೆ. ಆದರೆ ತನ್ನ ಅಸ್ಮಿತೆಯನ್ನು ಬಿಟ್ಟುಕೊಟ್ಟು ಯಾವ ರಾಷ್ಟ್ರವೂ ಪ್ರಭಾವಳಿಗೆ ಸಿಲುಕದು ಎನ್ನುವ ಸತ್ಯವನ್ನೂ ಮರೆಯುವಂತಿಲ್ಲ. ಸಾಂಸ್ಕೃತಿಕ ಅಳವಡಿಕೆಯ ಸಂದರ್ಭದಲ್ಲಿ ಚಿನ್ಮಯಿ ಮತ್ತು ಮೃಣ್ಮಯಿ ಎನ್ನುವ ಎರಡೂ ಸಂಗತಿಗಳು ಸೂಕ್ಷ್ಮವಾಗಿ ಕೆಲಸ ಮಾಡುತ್ತಿರುತ್ತವೆ.

ವಾಸ್ತವದಲ್ಲಿಯ ಘಟನೆಯೊಂದನ್ನು ಆಧರಿಸಿ ಸಿನೇಮಾ ಮಾಡಿದಾಗ ಅಲ್ಲಿ ಸ್ವಲ್ಪ ಪ್ರಮಾಣದ ಉಪ್ಪು-ಖಾರ ಸಾಮಾನ್ಯ. ಅದನ್ನು ಯಥಾವತ್ತಾಗಿ ತೆರೆಯ ಮೇಲೆ ತರಲಾಗುವದಿಲ್ಲ. ಇಲ್ಲಿ ಬರುವ ಪಾತ್ರಗಳೆಲ್ಲಾ ಕಾಲ್ಪನಿಕ ಎನ್ನುವ ಹೇಳಿಕೆಯನ್ನು ಚಿತ್ರದ ಆರಂಭದಲ್ಲಿಯೇ ತೋರಿಸಿಯಾದ ಮೇಲೂ ಆ ಚಿತ್ರದ ಯಾವುದೋ ಒಂದು ಸಂಭಾಷಣೆ, ಸನ್ನಿವೇಶವನ್ನು ಅಪಾರ್ಥವಾಗಿಸಿಕೊಂಡು ಅರಗಿಸಿಕೊಳ್ಳಲಾಗದೇ ಚಿತ್ರ ನಿರ್ದೇಶಕ, ನಿರ್ಮಾಪಕನ ವಿರುದ್ಧ ಹರಿಹಾಯುವ ಪರಿಪಾಠ ಸರಿಯಲ್ಲ. ಸಿನೇಮಾ ಒಂದನ್ನು ಸಿನೇಮಾ ಆಗಿಯೇ ನೋಡಬೇಕು ಹೊರತು ಒಂದು ಪೂರ್ವಾಗ್ರಹವನ್ನಿಟ್ಟುಕೊಂಡು ಅಲ್ಲ. ಸಿನೇಮಾದಲ್ಲಿ ಪಶ್ಚಿಮದ ಎಲ್ಲ ಬಗೆಯ ತಂತ್ರಗಾರಿಕೆ ಇಷ್ಟವಾಗುವ ಹಾಗೆ ಅಲ್ಲಿಯ ಕತೆ ಮತ್ತು ಆ ಚಿತ್ರದ ಸೃಜನಶೀಲ ಗುಣ ಯಾಕೆ ಇಷ್ಟವಾಗುವದಿಲ್ಲ..? ಒಂದು ಸಿನೇಮಾ ನೋಡುವ ಮುನ್ನವೇ ಅದರ ಬಗ್ಗೆ ನಮ್ಮ ಮೆದುಳಲ್ಲಿ ಒಂದಷ್ಟು ಅಂತೆಕಂತೆಗಳು ತಳಕಂಡಿರುತ್ತವೆ. ಹಾಗಾಗಿ ಬರೀ ನೆಗಿಟಿವ್ ಅದ ಆಲೋಚನೆಗಳಿಗೆ ಆ ಚಿತ್ರ ತೆರೆದುಕೊಳ್ಳುತ್ತಾ ಹೋಗುತ್ತದೆ. ಒಂದು ಹಂತದಲ್ಲಿ ಧಾರ್ಮಿಕ, ಜನಾಂಗೀಯ ಸಾಂಸ್ಕೃತಿಕ ಹಿರಿಮೆ ಗರಿಮೆಗಳ ಚಿತ್ರವೊಂದು ಪಶ್ಚಿಮದಲ್ಲೂ ಸಣ್ಣ ಪ್ರಮಾಣದ ಪ್ರತಿರೋಧದ ಧ್ವನಿ ಎಬ್ಬಿಸಬಹುದಾದರೂ ಅದು ಇಡೀ ಚಿತ್ರವನ್ನೇ ನಿಷೇಧಿಸಬೇಕು ಎಂದಿರುವದಿಲ್ಲ.

ನಮ್ಮ ಸಂಸ್ಕೃತಿ ಮತ್ತು ರಾಷ್ಟ್ರೀಯ ಗಡಿಗಳ ಎಲ್ಲೆಗಳನ್ನು ಮೀರಿ ಸಿನೇಮಾ ನೋಡುವ, ಗ್ರಹಿಸುವ ಗುಣ ಅಂತರ್ಗತವಾಗಬೇಕಿದೆ. ಈ ಬಗೆಯ ಗುಣದ ಕೊರತೆಯಿಂದಾಗಿ ನಮ್ಮಲ್ಲಿ ಆಗಾಗ ಕೆಲ ಸಿನೇಮಾಗಳು ವಿವಾದಕ್ಕೆ ಸಿಲುಕಿ ಸುದ್ದಿಯಾಗುತ್ತವೆ. ಹೀಗೆ ವಿವಾದಕ್ಕೆ ಸಿಲುಕುವ ಸಿನೇಮಗಳ ಸಾಲಲ್ಲಿ ಹೇಳ ಹೆಸರಿಲ್ಲದೇ ಮೂಲೆ ಸೇರಬೇಕಿದ್ದ ಚಲನಚಿತ್ರಗಳು ಕೂಡಾ ಈ ವಿವಾದದಿಂದ ಕೆಲಕಾಲ ಸುದ್ದಿಯಲ್ಲಿರುತ್ತವೆ. ಯಾವುದೋ ಒಂದು ಡೈಲಾಗ್, ಒಂದು ಹಾಡು, ಒಂದು ದೃಶ್ಯ ಈ ಬಗೆಯ ವಿವಾದಗಳಿಗೆ, ಕಿರಿಕಿರಿಗಳಿಗೆ ಕಾರಣವಾಗುವದಿದೆ. ನಟ ಕಮಲ ಹಾಸನನ vishwaroopam“ವಿಶ್ವರೂಪಂ” ಚಿತ್ರ ಈ ಬಗೆಯ ವಿವಾದಕ್ಕೆ ಸಿಲುಕಿತು. ಅದಕ್ಕಿಂತಲೂ ದೊಡ್ದ ಸುದ್ದಿ ಎಂದರೆ ಕಮಲ ಹಾಸನನಂಥ ನಟರಿಗೆ, ಈ ದೇಶದಲ್ಲಿ ಕ್ರಿಯಾಶೀಲರಿಗೆ ನೆಲೆಯೇ ಇಲ್ಲ ಎನ್ನುವ ಭಾವನೆ ಕಾಡಿದ್ದು, ತನ್ನ ಚಿತ್ರ ಪ್ರದರ್ಶನಕ್ಕೆ ಅಡ್ದಿಯಾದರೆ ತಾನು ಇಲ್ಲಿರುವದಿಲ್ಲ ವಿದೇಶಕ್ಕೆ ತೆರಳುತ್ತೇನೆ ಎಂದು ಮಾತನಾಡಿದ್ದು ಮಾತ್ರ ಯಾಕೋ ಸರಿಯಾದುದಲ್ಲ ಎನಿಸುತ್ತದೆ.

“ವಿಶ್ವರೂಪಂ” ಚಿತ್ರ ಮೀಮಾಂಸಕರ ವಲಯದಲ್ಲಿ ಒಳ್ಳೆಯ ಹೆಸರನ್ನು ಪಡೆದಿರುವದಿದೆ. ಕರ್ನಾಟಕವನ್ನೊಳಗೊಂಡು ಉತ್ತರಪ್ರದೇಶ, ಪಂಜಾಬ, ದೆಹಲಿ ಇನ್ನಿತರ ಭಾಗಗಳಲ್ಲಿಯೂ ಚೆನ್ನಾಗಿ ಪ್ರದರ್ಶವಾಗುತ್ತಿದೆ. ಹೀಗಿರುವಾಗಲೂ ಕಮಲ ಹಾಸನ್ ದೃತಿಗೆಡುವ ಅವಶ್ಯಕತೆಯಿಲ್ಲ. ಜೊತೆಗೆ ಕಳೆದ ಅನೇಕ ವರ್ಷಗಳಲ್ಲಿ ಕಮಲ ಹಾಸನ್ ಹಿಟ್ ಚಿತ್ರವನ್ನು ಕೊಟ್ಟಿದ್ದು ತೀರಾ ಕಡಿಮೆ. ಅವನ “ದಶಾವತಾರಂ” ಚಿತ್ರ ಬಿಡುಗಡೆಗೂ ಮುನ್ನ ಸುದ್ದಿಯಾದಷ್ಟು ಬಿಡುಗಡೆಯ ನಂತರ ಆಗಲಿಲ್ಲ. ಈಗ ವಿಶ್ವರೂಪಂ ಒಳ್ಳೆಯ ಹೆಸರನ್ನು ವಿಮರ್ಶಕರ ವಲಯದಲ್ಲಿ ಪಡೆಯುತ್ತಿರುವಾಗಲೇ ಕಮಲಹಾಸನ್ ನೊಂದು ಹಾಗೆ ವಿದೇಶಕ್ಕೆ ತೆರಳುತ್ತೇನೆ ಎಂದು ಮಾತನಾಡಿರುವದು ಆತನ ಅನೇಕ ಅಭಿಮಾನಿಗಳಿಗೆ ನಿರಾಶೆಯನ್ನುಂಟು ಮಾಡಿರುವದಂತೂ ಹೌದು. ಕೊನೆಗೂ ಚಿತ್ರದ ಕೆಲವು ಸನ್ನಿವೇಶಗಳಿಗೆ ಕತ್ತರಿ ಪ್ರಯೋಗವಾಗುವ ಮೂಲಕ ತಮಿಳುನಾಡಿನಲ್ಲೂ ಅದು ಬಿಡುಗಡೆಯಾಯಿತು. ಕಮಲ ಹಾಸನ್ ನಟಿಸಿರುವ ಯಾವುದೇ ಚಿತ್ರವಾಗಿರಲಿ ಅದು ವಿವಾದದ ಮೂಲಕ ಸುದ್ದಿಯಾಗಬೇಕಿಲ್ಲ. ಅದು ಕಮಲ್‌ಗೂ ಬೇಕಿಲ್ಲ. ಹೀಗಿರುವಾಗಲೂ ಕೆಲವರು ಇದನ್ನು ಸುದ್ದಿಗಾಗಿ ಮಾಡಿದ ಗಿಮಿಕ್ ಎಂದರು. ಕಮಲ ಹಾಸನನಂತಹ ಪ್ರತಿಭಾವಂತ ನಟ, ನಿರ್ದೇಶಕನಿಗೆ ಈ ಬಗೆಯ ಗಿಮಿಕ್ ಹಂಗಿಲ್ಲ. ಅದು ಬೇಕಿರುವದು ವಿವಾದದ ಮೂಲಕವೇ ಸುದ್ದಿಯಾಗಬಯಸುವ ನಟ, ನಿರ್ದೇಶಕರಿಗೆ ಮಾತ್ರ.

ಹಿಂದೆ ದೀಪಾ ಮೆಹತಾ “ಫ಼ೈಯರ್” ಮತ್ತು “ವಾಟರ್” ಸಿನೇಮಾ ಬಿಡುಗಡೆಯ ಸಂದರ್ಭದಲ್ಲೂ ಇದೇ ಬಗೆಯ ವಿವಾದವಾಗಿತ್ತು. “ವಾಟರ್” ಸಿನೇಮಾ ಶೂಟಿಂಗಿಗೂ ಅಡೆತಡೆಯೊಡ್ದಿದ ಪುಂಡರು, ಆ ಸಿನೇಮಾ ಇನ್ನೂ ಶೂಟಿಂಗ್ ಹಂತದಲ್ಲಿರುವಾಗಲೇ ವಿವಾದವನ್ನು ಹುಟ್ಟು ಹಾಕಿ, ಆರಂಭದ ಹಂತದಿಂದಲೇ ಆ ಚಿತ್ರಕ್ಕೆ ಪುಗ್ಸಟ್ಟೆ ಪಬ್ಲಿಸಿಟಿಯನ್ನು ನೀಡಿರುವದಿತ್ತು. ಆ ಸಂದರ್ಭದಲ್ಲಿ ಪ್ರತಿರೋಧಿಸಿದ ತಂಡ ಬೇರೆ, ಈಗ ವಿಶ್ವರೂಪಂ ಚಿತ್ರವನ್ನು ಪ್ರತಿರೋಧಿಸುತ್ತಿರುವವರು ಬೇರೆ. ಆದರೆ ಮನಸ್ಥಿತಿಗಳು ಮಾತ್ರ ಒಂದೇ. ಒಂದು ಸಿನೇಮಾ, ಪೇಟಿಂಗ್, ಗ್ರಂಥವನ್ನು ಮುಕ್ತವಾಗಿ ಸ್ವಾಗತಿಸುವ ಮನೋಭಾವ ಮೈಗೂಡುವವರೆಗೂ ಸೃಜನಶೀಲ ಚಿತ್ರ ನಿರ್ದೇಶಕ, ಕಲಾಕಾರ, ಲೇಖಕನ ಶ್ರಮಕ್ಕೆ ಸರಿಯಾದ ಸಾರ್ಥಕತೆ ಸಿಗದು.

Leave a Reply

Your email address will not be published.