ಒಂದು ಜಾಹೀರಾತು : ಅನುವಾದಿತ ಸಣ್ಣಕತೆ

[ರಾಜ್ಯದಲ್ಲಿ ಕಳೆದೆರಡು ವರ್ಷಗಳಿಂದ ಬರಗಾಲ. ಕಳೆದ ಮೂರ್ನಾಲ್ಕು ತಿಂಗಳಿನಲ್ಲಿ ಅಕ್ಕಿ-ರಾಗಿಯ ಬೆಲೆ ಶೇ.50 ಹೆಚ್ಚಿದೆ. ಚುನಾವಣೆಗಳು ಹತ್ತಿರ ಬರುತ್ತಿವೆ. ನಾನಾ ತರಹದ ನಾಟಕಗಳು ರಾಜ್ಯದ ರಂಗಸ್ಥಳದಲ್ಲಿ ಆಡಲ್ಪಡಲಿವೆ. ಆದರೆ ಈ ನಾಟಕಗಳ ವ್ಯಂಗ್ಯದ ಆಹಾರ ತಾವೇ ಎಂದು ಜನಸಾಮಾನ್ಯರಿಗೆ ಅನ್ನಿಸದ ಹಾಗೆ ನಟಿಸಲಿದ್ದಾರೆ ರಾಜಕಾರಣಿಗಳು ಮತ್ತು ಅವರ ಚೇಲಾಗಳು. ನಾನು ದಶಕದ ಹಿಂದೆ ತೆಲುಗಿನಿಂದ ಅನುವಾದಿಸಿದ್ದ ಈ ಸಣ್ಣಕತೆ ಈ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳುವುದು ಸೂಕ್ತ ಮತ್ತು ಈಗಲೂ ಪ್ರಸ್ತುತ ಎಂದು ಇಲ್ಲಿ ಪ್ರಕಟಿಸುತ್ತಿದ್ದೇನೆ. ಇದು 2003 ರಲ್ಲಿ ದಟ್ಸ್‌ಕನ್ನಡ.ಕಾಮ್‌ನಲ್ಲಿ ಪ್ರಕಟವಾಗಿತ್ತು. ರವಿ…]

– ತೆಲುಗು ಮೂಲ: ಶಿವಂ
– ಕನ್ನಡಕ್ಕೆ : ರವಿ ಕೃಷ್ಣಾರೆಡ್ಡಿ

“ಎಲ್ಲಿ ಒಂದು ನಗು ನಗಿ!” ದಿನಪತ್ರಿಕೆಯಲ್ಲಿನ ಒಂದು ಟೂತ್‌ಪೇಸ್ಟ್ ಜಾಹೀರಾತು ಕೇಳುತ್ತಿದೆ.

ನಗು! ಎಷ್ಟು ದಿನಗಳಾದವು ಅವನು ನಕ್ಕು! ಬಹುಶಃ ಹದಿನೈದು ವರ್ಷವಾದರೂ ಆಗಿರಬೇಕು. ಹೌದು. ಹದಿನೈದು ವರ್ಷಗಳು.

ಅವನಿಗೆ ಹದಿನೇಳು ಇದ್ದಾಗ ಶಾಲಾಮಾಸ್ತರ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಜಾರಿ ಬಿದ್ದು ಬಿಟ್ಟ. ವೆಂಕಟರಾವು ಇರಬಹುದು, ಮಾಸ್ತರರನ್ನು ಹಿಡಿದು ನಿಲ್ಲಿಸಲು ಹೋದ. ಮಾಸ್ತರು ಕ್ರೋಧದಿಂದ ವೆಂಕಟರಾವಿನ ಬೆನ್ನಿನ ಮೇಲೆ ಬೆತ್ತವನ್ನು ಚೂರು ಚೂರು ಮಾಡಿದ್ದರು. ಎಲ್ಲರೂ ನಕ್ಕಿದ್ದರಾಗ. ಅವನೂ ನಕ್ಕಿದ್ದ ಎಲ್ಲರ ಜೊತೆಗೆ. ಅವನ ಕಣ್ಣಲ್ಲಿ ನೀರು ತುಳುಕಿತ್ತು ಆ ನಗುವಿಗೆ.

ಅದೇ ಕೊನೆಯ ಸಾರಿ ನಕ್ಕಿದ್ದು ಗುರುತಿರುವುದು. ಆಮೇಲೆ ಅವನಿಗೆ ಈ ಪ್ರಪಂಚದಲ್ಲಿ ಏನನ್ನು ನೋಡಿ ನಗಬೇಕೊ ತಿಳಿದಿದ್ದಿಲ್ಲ. ಕಾಂಗ್ರೆಸ್‌ನವರು ಲಾಠಿಛಾರ್ಜ್‌ಗಳನ್ನು ತಿನ್ನುವುದನ್ನು ನೋಡಿದ. ಹೆಂಡತಿ ಮಕ್ಕಳನ್ನು ಬಿಟ್ಟು ಜೈಲಿನಲ್ಲಿ ಕೊಳೆಯುವುದನ್ನು ನೋಡಿದ. drought-dead-cowಅನಾರೋಗ್ಯದಿಂದ ತನ್ನ ತಂದೆ ವೈದ್ಯೋಪಚಾರಕ್ಕೆ ಸಹ ಗತಿಯಿಲ್ಲದೆ ಬಾಧೆ ಪಡುತ್ತಾ ಸಾಯುವುದನ್ನು ನೋಡಿದ. ಬಂಗಾಳ ಬರಗಾಲದಲ್ಲಿ ಜನರು ಎಲೆಗಳನ್ನು ಆಯ್ದು ತಿನ್ನುವುದನ್ನು ನೋಡಿದ.

ಯಾರೂ ಆತನನ್ನು ಆ ದಿನಗಳಲ್ಲಿ ನಗು ಎಂದು ಕೇಳದೆ ಹೋದರು. ಕೊನೆಗೆ ಟೂತ್‌ಪೇಸ್ಟ್ ಕಂಪನಿಯವರೂ ಕೂಡಾ.

“ಆತನು ಯಾವಾಗಲೂ ನಗುತ್ತಲೇ ಇರುತ್ತಾನೆ.” ಎನ್ನುತ್ತಿತ್ತು, ಎನ್ನುತ್ತಿದೆ ಈ ಟೂತ್‌ಪೇಸ್ಟ್ ಜಾಹೀರಾತು.

ಜಾಹೀರಾತಿನಲ್ಲಿನ ಚಿತ್ರದ ಮುಖ ಅವನ ಮುಖದ ಹಾಗೆ ಇಲ್ಲ. ಥೇಟು ಅವನ ಆಫೀಸರ್ ಮುಖದ ರೀತಿ ಶುಭ್ರವಾಗಿ, ನುಣ್ಣಗೆ ಇದೆ. ಅವನ ಆಫೀಸರ್ ಮುಖದ ಹಾಗೆ ನಗುತ್ತಾ ಇದೆ.

ಅವನ ಆಫೀಸರ್‌ಗೆ ಏಳು ನೂರು ರೂಪಾಯಿಗಳ ಸಂಬಳ. ಆಫೀಸಿಗೆ ಕಾರಿನಲ್ಲಿ ಬರುತ್ತಾರೆ. ಕಲ್ಲು-ಮಣ್ಣು ಇಲ್ಲದ ಅಚ್ಚ ಬಿಳಿಯ ಮಲ್ಲಿಗೆ ಹೂವಿನಂತಹ ಅಕ್ಕಿ ರೇಷನಿಂಗ್ ದಿನಗಳಲ್ಲಿ ಸಹ ಚೀಲಗಳಲ್ಲಿ ಅವರ ಮನೆಗೆ ಬರುತ್ತದೆ. ಅವರಿಗೆ ಕಾಯಿಲೆ ಬಂದರೆ ಡಿ.ಎಂ.ಒ. ಮನೆಗೆ ಬಂದು ಸ್ವತಃ ಔಷಧ ಕೊಟ್ಟು ಹೋಗುತ್ತಾನೆ. ಅದಕ್ಕೇ ಅವರು ಯಾವಾಗಲೂ ನಗುತ್ತಿರುತ್ತಾರೆ ಮತ್ತೆ.

“ಒಳ್ಳೆಯ ದಂತಪಂಕ್ತಿಯಿಂದ ನಗುವ ಆ ನಗು ಆರೋಗ್ಯ.” ಮತ್ತೇ ಜಾಹಿರಾತು. ಅವನದು ಒಳ್ಳೆಯ ಹಲ್ಲುವರಸೆ. ಅವನಿಗೆ ಆರೋಗ್ಯವಾಗಿರುವುದು ಎಂದರೆ ಬಹಳ ಇಷ್ಟ. ಹದಿನೈದು ವರ್ಷದ ಹಿಂದೆ ನಗುತ್ತಿದ್ದ. ಮತ್ತೆ ನಕ್ಕು ಆರೋಗ್ಯವಾಗಿ ಇರೋಣ ಎಂದು ಅವನ ಉದ್ದೇಶ. ಆದರೆ ಅವನಿಗೆ ನಗು ಬರುತ್ತಿಲ್ಲ. ಎರಡನೇ ಪ್ರಪಂಚ ಯುದ್ಧ ಮುಗಿದ ತಕ್ಷಣ ನಗೋಣ ಎನ್ನಿಸಿತ್ತು ಅವನಿಗೆ. ಯುದ್ಧದಲ್ಲಿ ಗಂಡಂದಿರನ್ನು, ತಂದೆಯರನ್ನು ಕಳೆದುಕೊಂಡ ಅಮಾಯಕ ಜನರು ಜ್ಞಾಪಕ ಬಂದರು. ಅವರ ಶೋಕಗಳು ಅವನ ಕಿವಿಯಲ್ಲಿ ಗಿಂಗುರುಗುಟ್ಟಿದವು. ನಗಲಾರದೆ ಹೋದನವನು.

ಭಾರತ ದೇಶ ಸ್ವತಂತ್ರ ದೇಶ ಆಗಲಿದೆ ಎಂದರು. ತುಟಿಗಳು ಬಿರಿದವು. ಆನಂದದಿಂದ ಪ್ರಪಂಚ ಪ್ರತಿಧ್ವನಿಸುವ ಹಾಗೆ ಗಹಗಹಿಸಿ ನಗಬೇಕೆಂದು ಅವನ ಉದ್ದೇಶ. ಭಾರತ ಮಾತೆ ಎರಡು ಭಾಗಗಳಾಗಿ ಕತ್ತರಿಸಲ್ಪಟ್ಟಳು. ಹಿಂದೂಗಳು ಮುಸಲ್ಮಾನರನ್ನು, ಮುಸಲ್ಮಾನರು ಹಿಂದೂಗಳನ್ನು ಕತ್ತರಿಸುತ್ತ ಸಾಗಿದರು. ರಕ್ತ ಪ್ರವಾಹದಂತೆ ಹರಿಯಿತು. ಅವನ ತುಟಿಗಳು ವಿಷಾದಕರವಾಗಿ ಕೊಂಕು ತಿರುಗಿ ಮುದುಡಿಕೊಂಡವು.

ಪ್ರಜಾಪ್ರಭುತ್ವವೆಂದರು. ತಿನ್ನುವುದಕ್ಕೆ ತಿಂಡಿ, ಇರುವುದಕ್ಕೆ ಮನೆ ಇರುತ್ತದೆ ಎಂದುಕೊಂಡನು ಅವನು. ಹೊಟ್ಟೆ ತುಂಬಾ ತಿಂದು, ಬಿಡುವಿದ್ದಾಗಲೆಲ್ಲ ತಣ್ಣನೆಯ ಅಂಗಳದ ಚಪ್ಪರದ ಕೆಳಗೆ ಕುಳಿತುಕೊಂಡು ಹೊಟ್ಟೆ ಬಿರಿಯುವ ಹಾಗೆ ತಾವೆಲ್ಲ ನಗುವುದೇ ಇನ್ನು ಮುಂದೆ ಎಂದುಕೊಂಡನು. ಬಂದಿತು ಅವರ ಪ್ರಭುತ್ವ. ಕೆರೆಯ ಬಳಿ ಗುಡಿಸಲಲ್ಲಿ ಇದ್ದ ರೌಡಿ ಸುಬ್ಬಯ್ಯ ತಮ್ಮನ್ನು ಆಳುವವರ ಗುಂಪಿಗೇರಿದ; ಕಿರುನಗೆ ನಗುತ್ತ ಸಾಗಿದ. ಇವನು ಮಾತ್ರ ಇಲ್ಲಿಯವರೆಗೂ ಸಂಬಳ-ಜೀತ ಎನ್ನುತ್ತಾ, ಆರೋಗ್ಯ ಅನ್ನುತ್ತಾ, ಮುಕ್ಕುತ್ತ ಮುಲುಗುತ್ತಲೆ ಇದ್ದಾನೆ.

“ನಿರ್ಮಲವಾದ, ಶುಭ್ರವಾದ ಆ ಕಿರುನಗೆ ಈಗಲೇ ನಿಮ್ಮದಾಗುತ್ತದೆ.” toothpaste-smile-2ಮಾತುಗಳು, ಒಣಮಾತುಗಳು. ನಿರ್ಮಲವಾದವು, ಶುಭ್ರವಾದವು ಯಾವೂ ತಮ್ಮದಲ್ಲ. ಕಿರುನಗೆ ಮಾತ್ರ ತಮ್ಮದು ಹೇಗೆ ಆಗುತ್ತದೆ? ಶುಭ್ರವಾದದ್ದೇನಾದರು ತಮಗೆ ಉಳಿದಿದ್ದರೆ ಅದು ಖಂಡಿತ ಮನಸ್ಸು ಮಾತ್ರವೆ. ಅದೂ ಕೂಡ ಉಳಿಯದೆ ಹೋಗಿದ್ದರೆ, ಎಂದೋ ಅವನು ನಕ್ಕಿರಬಹುದಿತ್ತು. ಸತ್ಯಕ್ಕಾಗಿ, ನ್ಯಾಯಕ್ಕಾಗಿ ಹೃದಯಕ್ಕೆ ಇಷ್ಟು ಬಾಧೆ ಏತಕ್ಕೆ ಕೊಡಬೇಕು?

ನಿರ್ಮಲವೂ, ಶುಭ್ರವೂ? ಏನ್ ಮಾತವು? ಆ ಮಾತುಗಳಿಗೆ ಅಸಲು ಅರ್ಥವೇ ಹೋಗಿದೆ ಅವನಿಗೆ. ಅವರು ಬಳಸುವ ತುಪ್ಪವೇ ಶುದ್ಧವಾದದ್ದಲ್ಲ. ತಾವು ತಿನ್ನುವ ತಿಂಡಿಕಾಳು ಪುಷ್ಠಿಕರವಾದುವು ಅಲ್ಲ. ತಮ್ಮ ಮಕ್ಕಳು ಕುಡಿಯುವ ಹಾಲು, ಮಜ್ಜಿಗೆ ಶುದ್ಧವಾದದ್ದಲ್ಲ. ತಾವು ಉಸಿರಾಡುವ ಗಾಳಿ ಶುಭ್ರವೇ, ನಿರ್ಮಲವೆ?

ಮನೆಗಳ ಹತ್ತಿರ ಕಾರ್ಖಾನೆಗಳು ಇರಬಾರದಂತೆ. ಅವನ ಮನೆಯ ಪಕ್ಕವೇ ಒಂದು ಕಾರ್ಖಾನೆ. ರಾತ್ರಿಯೆಲ್ಲಾ ಭುಕ್, ಭುಕ್, ಭುಕ್, ಭುಕ್ ಎಂದು ಒಂದೇ ಕೂಗು. ಬೆಳಿಗ್ಗೆ ಏಳುವಷ್ಟರಲ್ಲಿ ಅವನ ಮನೆಯ ತುಂಬಾ ಫ್ಯಾಕ್ಟರಿಯ ಕೆಟ್ಟಗಾಳಿಗೆ ಆ ಧೂಳು ಯಾವಾಗಲೂ ಹಾರುತ್ತಲೇ ಇರುತ್ತವೆ. ಕಣ್ಣಿಗೆ ಕಾಣದ ಆ ಧೂಳನ್ನು ಅವರು ಯಾವಾಗಲೂ ಒಳಗೆ ಕರೆಯುತ್ತಲೆ ಇರುತ್ತಾರೆ. ತಮ್ಮ ಆರೋಗ್ಯ ಸರಿಯಾಗಿ ಇರುವುದಿಲ್ಲ. ತಾವೆಂದೂ ಕಿರುನಗೆ ನಗುವುದಿಲ್ಲ.

ಅಸಲಿಗೆ, ಪದಗಳಿಗೆ ಬೆಲೆಯೇ ಹೋಗಿದೆ. ‘ಶುಭ್ರವೂ’, ‘ನಿರ್ಮಲವೂ’ ಎಂಬ ಎರಡು ಪದಗಳಿಗೇ ಅಲ್ಲ. ಬಹಳ ಪದಗಳಿಗೆ. ‘ದಯೆ’, ‘ಸತ್ಯ’, ‘ನೀತಿ’, ‘ವಿಚಕ್ಷಣೆ’, ‘ವಿವೇಕ’, ‘ನ್ಯಾಯ’ ಮೊದಲಾದ ಪದಗಳು ಅಸಲಿಗೆ ಮುಗ್ಗು ಹಿಡಿದುಹೋಗಿವೆ. ರಾಜಕಾರಣಿಗಳು ಚುನಾವಣೆಗಳಿಗೆ ಮೊದಲು ಪ್ರಚಾರಕ್ಕೆ ಉಪಯೋಗಿಸುವ ಆಯುಧಗಳವು ಇವತ್ತಿನ ಸಂದರ್ಭದಲ್ಲಿ. ಚುನಾವಣೆ ಮುಗಿದಾಕ್ಷಣವೆ ಈ ಪದಗಳು ಅವರ ಸ್ವಂತ ಆಸ್ತಿಗಳ ಹಾಗೆ ಭದ್ರವಾಗಿ ಮುಚ್ಚಿಡಲ್ಪಡುತ್ತವೆ. ಹೇಗೆ ನಗು ಬರುತ್ತದೆ ಅವನಿಗೆ? ಹೇಗೆ ಅವನದಾಗುತ್ತದೆ ಆ ನಗು?

“ಹೇಗೆ ಎನ್ನುವಿರಾ? ಇಂದೇ ಯಾವ ಅಂಗಡಿಯಲ್ಲಾದರೂ ಕೇಳಿ…”

ಬಹಳ ತಾಳ್ಮೆ ಈ ವಿದೇಶಿ ವ್ಯಾಪಾರಿಗಳಿಗೆ. ತಮ್ಮಂತಹ ಮೂಢರಿಗೆ ಅಪಾರವಾದ ವಿಜ್ಞಾನದಿಂದ ಕಿರುನಗೆಯನ್ನು ಕೊಳ್ಳುವುದನ್ನು ಕಲಿಸುತ್ತಾರೆ. “ನಮ್ಮ ಹೊಟ್ಟೆ ಸುಡುತ್ತಿವೆ. ನಮ್ಮ ದೇಶವನ್ನು ಗೆದ್ದಲುಹುಳುಗಳು ಹಿಂಡಿ ಹಿಪ್ಪೆ ಮಾಡುತ್ತಿವೆ. ನಿಮಗೇನಾದರು ತಿಳಿದರೆ ನಮ್ಮ ದೇಶದಿಂದ ಗೆದ್ದಲುಹುಳುಗಳನ್ನು ನಿವಾರಿಸುವುದನ್ನು ತಿಳಿಸಿಕೊಡಿ. ನಮ್ಮ ಹೊಟ್ಟೆ ಉರಿ ಆರುವ ಮಾರ್ಗ ಹೇಳಿ. ನಮ್ಮ ದೇಶವನ್ನು ಸಾರವಂತ ಮಾಡಿಕೊಳ್ಳುತ್ತೇವೆ.” ಎಂದು ಕೇಳಿದರೆ ಒಂದು ಟೂತ್‌ಪೇಸ್ಟ್ ಕಿರುನಗೆಯನ್ನು ಬಿಡುತ್ತಾರೆ. “ನಿಮ್ಮ ದೇಶದ ಸಂಪತ್ತು ನಮಗೆ ಬೇಕು.” ಅನ್ನರು. “ಆನಂದವೇ ಆರೋಗ್ಯ! ಆನಂದಕ್ಕೆ ಚಿಹ್ನೆ ಈ ಕಿರುನಗೆ. ಎಲ್ಲಿ, ಕೊಳ್ಳಿರಿ, ನಗುತ್ತಿರಿ.” ಅಂತಾರೆ.

ಹೇಗೆ ಕೊಳ್ಳುವುದು ಆ ಟೂತ್‌ಪೇಸ್ಟು? ಹೇಗೆ ನಗುವುದು ಆ ನಗುವನ್ನು? ಅವನ ಸಂಬಳ 72 ರೂಪಾಯಿಗಳು. colgate-adಅವನ ತಾಯಿಗೆ ಮುವ್ವತ್ತೆರಡು ಹಲ್ಲುಗಳು. ಅವನ ಹೆಂಡತಿ ಸೀರೆ ಉಡುತ್ತಾಳೆ. ಅವನ ತಮ್ಮ ಶಾಲೆಯಲ್ಲಿ ಫೀಸು ಕಟ್ಟುತ್ತಿದ್ದಾನೆ. ಅವನಾ? ಅವನು! ನಗಬೇಕಿನಿಸುತ್ತದೆ ಆದರೆ ಶಕ್ತಿಯಿಲ್ಲದೆ ಹೋಗಿದೆ.

“ಚಿಕ್ಕ ಟ್ಯೂಬು ಹದಿನೆಂಟಾಣೆ ಮಾತ್ರವೆ.” ಕೈನಿಂದ ಜಾರಿಬಿದ್ದ ಪತ್ರಿಕೆಯಲ್ಲಿನ ಆ ಜಾಹೀರಾತು ಕೆಳಗೆ ಬಿದ್ದರೂ ಚೀರುತ್ತಿದೆ. ಹದಿನೆಂಟಾಣೆ ಮಾತ್ರವೆ! ಈ ‘ಮಾತ್ರವೆ’ ಎನ್ನುವ ಪದವೆ ಬಹಳ ಚೆನ್ನಾಗಿದೆ. ಎರಡು ವರ್ಷದಿಂದ ‘ಮಾತ್ರವೆ’ ಅವನು ಚಪ್ಪಲಿ ಸಹಾ ಇಲ್ಲದೆ ನಡೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದಾನೆ. ಹಿರೋಷಿಮಾ ನಾಗಸಾಕಿಗಳ ಮೇಲೆ ‘ಮಾತ್ರವೆ’ ಅಣುಬಾಂಬುಗಳನ್ನು ಸುರಿಯಲಾಗಿದೆ. ಕೊರಿಯಾದಲ್ಲಿ ಯುದ್ಧ 12 ತಿಂಗಳಿನಿಂದ ‘ಮಾತ್ರವೆ’ ಜರುಗುತ್ತಿದೆ. ಆಂಧ್ರದ ಜನರಿಗೆ ತಿಂಡಿಕಾಳಿನ ಬರ ಐದು ವರ್ಷದಿಂದ ‘ಮಾತ್ರವೆ’. ಭಾರತದೇಶದಲ್ಲಿ ಜೀವನ್ಮೃತರು ಹೊಸಾ ಲೆಕ್ಕದ ಪ್ರಕಾರ 37 ಕೋಟಿ ‘ಮಾತ್ರವೆ’.

ನಗಬಹುದಾದವರು ಇನ್ನು ನಗಬಹುದು!

Leave a Reply

Your email address will not be published. Required fields are marked *