Daily Archives: February 18, 2013

ನಾಡೋಜ ಗೌರವ: ಆಯ್ಕೆಯಾದವರ ಸಾಧನೆಗಳೇನು?

-ಶಿವರಾಜ್

ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಈ ವರ್ಷದ ನಾಡೋಜ ಪ್ರಶಸ್ತಿಗೆ ಆಯ್ಕೆ ಮಾಡಿದವರಲ್ಲಿ ಇಬ್ಬರ ಹೆಸರು ಕುತೂಹಲ ಹುಟ್ಟಿಸುತ್ತವೆ. ಅವರು – ಬೆಂಗಳೂರು ದೂರದರ್ಶನ ಕೇಂದ್ರ ನಿರ್ದೇಶಕ ಮಹೇಶ್ ಜೋಶಿ ಮತ್ತು ಕರ್ನಾಟಕ ಲೋಕ ಸೇವಾ ಆಯೋಗ ಅಧ್ಯಕ್ಷ ಗೋನಾಳ ಭೀಮಪ್ಪ.

ಮಹೇಶ್ ಜೋಶಿ ಸದ್ಯ ಕೇಂದ್ರ ಸರಕಾರದ ನೌಕರ. ಅವರ ಕೆಲಸವೇ ದೂರದರ್ಶನವನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವುದು. mahesh-joshiಆದರೆ ಇಂದಿಗೂ ನಿಜ ಅರ್ಥದಲ್ಲಿ ದೂರವೇ ಉಳಿದಿರುವುದು ಈ ದೂರದರ್ಶನ ಮಾತ್ರ. ಹಲವು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ, ಆಯ್ದ ವೀಕ್ಷಕರನ್ನು ಆಹ್ವಾನಿಸಿ ಜೋಶಿಯವರು ತಮ್ಮ ಶೋ ನಡೆಸುವುದು ಎಲ್ಲರಿಗೂ ಗೊತ್ತು. ಅವರಿಗೆ ಪರದೆಯ ಮೇಲೆ ಕಾಣಿಸಿಕೊಳ್ಳುವುದರ ಬಗ್ಗೆ ತೀವ್ರ ಮೋಹ. ಗಣ್ಯ ಅತಿಥಿಗಳನ್ನು ಅವರು ಅಪ್ಪಿ ಸಭೆಗೆ ಬರಮಾಡಿಕೊಳ್ಳುವಾಗ ಒಬ್ಬ ಕೆಮರಾಮನ್ ಬಾಗಿಲಲ್ಲೇ ಇರಬೇಕು. ಅವರು ಮಾತು ಎಲ್ಲಿಯೂ ಎಡಿಟ್ ಆಗದೆ ಪ್ರಸಾರ ಆಗಬೇಕು. ಇನ್ನೂ ವಿಶಿಷ್ಟ ಅಂದರೆ ಬಹುತೇಕ ಫ್ರೇಮ್ ಗಳಲ್ಲಿ ಅವರು ಖಾಯಂ ಆಬ್ಜೆಕ್ಟ್!

ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಪ್ರಶಸ್ತಿ ಘೋಷಣೆ ಆದ ದಿನ ಅವರ ಸುದ್ದಿ ಸಮಯದಲ್ಲಿ ಅವರದೇ ದೊಡ್ಡ ಸುದ್ದಿ. ಅಷ್ಟೇ ಅಲ್ಲ, ಇತರ ಸುದ್ದಿ ಸಂಸ್ಥೆಗಳ ನೌಕರರಿಗೆ ಅವರ ಆಪ್ತರು ಸಂಪರ್ಕಮಾಡಿ ಅವರ ಫೋಟೋ ಪ್ರಕಟ ಮಾಡಲು ವಿನಂತಿಸಿಕೊಂಡಿದ್ದು ಅನೇಕರಿಗೆ ಗೊತ್ತು. ನಾಡೋಜ ಅಂದರೆ, ನಾಡಿನ ಗುರು ಎಂದರ್ಥ. ಯಾವ ಕೋನದಿಂದಲೂ ಮಹೇಶ ಜೋಶಿಯವರನ್ನು ಗುರು ಎಂದು ಒಪ್ಪಿಕೊಳ್ಳಲು ಮನಸ್ಸಾಗುತ್ತಿಲ್ಲ.

ಇನ್ನೊಬ್ಬರು gonal-bhimappaಗೋನಾಳ್ ಭೀಮಪ್ಪ. ಕೆಎಎಸ್ ಅಧಿಕಾರಿಯಾಗಿ ಸರಕಾರಿ ಸೇವೆ ಸೇರಿದರು. ನಂತರ ಐಎಎಸ್ ದರ್ಜೆಗೆ ಏರಿ ಹಲವು ಇಲಾಖೆಗಳಲ್ಲಿ ದುಡಿದಿದ್ದಾರೆ. ಸದ್ಯ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರು. ಇತ್ತೀಚೆಗೆ ಅವರ ನೇತೃತ್ವದಲ್ಲಿ ಕೆ.ಪಿ.ಎಸ್.ಸಿ. ಮಾಡಿರುವ ಘನಕಾರ್ಯವಾದರೂ ಏನು ಅಂತ ಘನ ವಿಶ್ವವಿದ್ಯಾನಿಲಯದ ಕುಲಪತಿಯವರು ವಿವರಿಸಬೇಕು.

ಮಾನ್ಯರು ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದವರು. ಅವರು ಅಂತಹ ಉನ್ನತ ಹುದ್ದೆಗೆ ಹೋಗಿದ್ದಾರೆ. ಅದು ನಿಜಕ್ಕೂ ಸಾಧನೆಯೇ. ಅನುಮಾನವಿಲ್ಲ. ಕೆ.ಪಿ.ಎಸ್.ಸಿ ಸುತ್ತ-ಮುತ್ತ ಅಲೆದಾಡುವ ಪಕ್ಷಿ, ಕ್ರಿಮಿ, ಕೀಟ, ನಾಯಿಕುನ್ನಿಗಳಿಗೂ ಗೊತ್ತು, ಅಲ್ಲಿಯ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಇಲ್ಲ, ಪಾರದರ್ಶಕ ವ್ಯವಸ್ಥೆಯನ್ನಂತೂ ಕೇಳಲೇಬೇಡಿ. ಅವರನ್ನು ಈ ಹುದ್ದೆಗೆ ನೇಮಕ ಮಾಡಿದ್ದನ್ನು ತಮ್ಮ ದಲಿತ-ಪರ ಧೋರಣೆಗೆ ದ್ಯೋತಕ ಎಂಬಂತೆ ಆಗಾಗ ಜಾತ್ಯತೀತ ಜನತಾದಳ ನಾಯಕರು ಹೇಳಿಕೊಳ್ಳುವುದುಂಟು. (ಈ ಹಿಂದಿನ ಅಧ್ಯಕ್ಷರು, ಇದೇ ಪಕ್ಷದವರಿಗೆ ನಿಷ್ಠರಾಗಿದ್ದವರು, H-N-Krishnaನಂತರ ಕೆಲದಿನ ಜೈಲು ಕಂಡು ಬರಬೇಕಾಯಿತು.)

ಕೆ.ಪಿ.ಎಸ್.ಸಿ ಅಧ್ಯಕ್ಷರಾದ ನಂತರ ಅವರ ಮಹತ್ತರ ಸಾಧನೆ ಏನು ಎಂಬುದು ಸಮಾಜಕ್ಕೆ ಗೊತ್ತಾಗಿಲ್ಲ. ಭೀಮಪ್ಪನವರ ಅಭಿಮಾನಿಗಳು ಕೇಳಬಹುದು ಅವರು ಅಧ್ಯಕ್ಷರಾದಾಗಿನಿಂದ ಎಷ್ಟು ದಲಿತ ಹುಡುಗರಿಗೆ ಕಾಸು-ಕರಿಮಣಿ ಇಲ್ಲದೆ ಕೆಲಸ ಸಿಕ್ಕಿದೆ ಅಂತ ನಿಮಗೇನು ಗೊತ್ತು? ಆ ರೀತಿ ದಲಿತ ಹುಡುಗರಿಗೆ ಅನುಕೂಲ ಆಗಿದ್ದರೆ ಸಂತೋಷ. ಆದರೆ, ಅದು ಸಾಧನೆಯೆ?

ಆಯೋಗದಿಂದ ಭರ್ತಿಯಾಗುವ ಹುದ್ದೆಗಳಲ್ಲಿ ಶೇ 50 ರಷ್ಟು ಹುದ್ದೆಗಳು ಸಾಮಾನ್ಯ ಅಭ್ಯರ್ಥಿಗಳಿಗೆ. ಈ ಹಿಂದಿನ ಅಧ್ಯಕ್ಷರು ಈ ಹುದ್ದೆಗಳನ್ನು ತುಂಬುವಾಗ ಒಂದು ಜಾತಿಯ ಅಭ್ಯರ್ಥಿಗಳನ್ನೇ ಓಲೈಸಿದ್ದಾರೆ ಎಂಬ ಆರೋಪ ಇದೆ. ಆದರೆ, ಎಷ್ಟೇ ಅರ್ಹತೆ ಇದ್ದರೂ ಹಿಂದುಳಿದ ಮತ್ತು ದಲಿತ ಅಭ್ಯರ್ಥಿಗಳು ತಮ್ಮ ಮೀಸಲಾತಿ ಹೊರತಾಗಿ ಸಾಮಾನ್ಯ ಅಭ್ಯರ್ಥಿಗಳ ಜೊತೆ ಪೈಪೋಟಿ ಮಾಡಿ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿರುವುದು ಅಪರೂಪ. ಗೋನಾಳ್ ಭೀಮಪ್ಪನವರು ಆ ಹುದ್ದೆಗೆ ಬಂದಾಗಿನಿಂದ ಈ ನಿಟ್ಟಿನಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ? ಬಲ್ಲವರು ಹೇಳಬೇಕು.

ಹಂಪಿ ವಿಶ್ವವಿದ್ಯಾನಿಲಯದ ಮಾತಷ್ಟೇ ಏಕೆ? ಬೇರೆ ವಿ.ವಿ.ಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಮೊನ್ನೆ ಮೊನ್ನೆ ಧಾರವಾಡ ವಿ.ವಿ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೂ ಗೌರವ ಡಾಕ್ಟರೇಟ್ ಘೋಷಿಸಿತು. ಅಲ್ಲಲ್ಲಿ ವಿರೋಧ ವ್ಯಕ್ತವಾಯಿತು. ಮುಜುಗರ ಎದುರಿಸಲಾಗದೆ, ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ವಿದೇಶದ ವಿ.ವಿಯೊಂದು ಗೌರವ ಡಾಕ್ಟರೇಟ್ ನೀಡಿತ್ತು. ತಮ್ಮ ಹೆಸರಿನ ಮುಂದೆ ಡಾ ಎಂದು ಬರೆಸಿಕೊಂಡಿದ್ದ ಯಡಿಯೂರಪ್ಪ ಕೆಲವೇ ದಿನಗಳ ನಂತರ ಅದನ್ನು ತೆಗೆಸಿದರು.

ವಿಶ್ವವಿದ್ಯಾನಿಲಯಗಳು ಜ್ಞಾನದ ಕೇಂದ್ರಗಳು. ಆ ಘನತೆಗೆ ತಕ್ಕಂತೆ ನಡೆದುಕೊಂಡರೆ ಗೌರವ ಗಳಿಸುತ್ತವೆ. ಆಯ್ಕೆಗಳು ಹಳ್ಳ ಹಿಡಿದಲ್ಲಿ, ಅಪರೂಪಕ್ಕೊಮ್ಮೆ ಇಂತಹ ಮನ್ನಣೆ ಗಳಿಸುವ ಉತ್ತಮರಿಗೂ ಕಳಂಕ ತಗುಲುವ ಅಪಾಯ ಇದೆ. ಜೊತೆಗೆ ಅರ್ಹರು ನಮ್ಮ ಸಮಾಜದಲ್ಲಿ ಇಲ್ಲವೇ ಎಂಬ ಪ್ರಶ್ನೆಯೂ ಏಳಬಹುದು.

ಇದೇ ಕಾರಣಕ್ಕೆ ಅನೇಕರಿಗೆ ಪ್ರಶ್ನೆ ಕಾಡುತ್ತಿದೆ – ದೇವನೂರು ಮಹದೇವ ಅವರನ್ನು ನಾಡೋಜ ಗೌರವಕ್ಕೆ ಆಯ್ಕೆ ಮಾಡಲು ಇಷ್ಟು ವರ್ಷ ಬೇಕಾಯಿತೆ?

ಅಮೀನ್ ಮಟ್ಟುರವರ ಲೇಖನಕ್ಕೆ ಒಂದು ಮಾರುತ್ತರ

ದಿನೇಶ್ ಅಮೀನ್ ಮಟ್ಟುರವರಿಗೆ ನಮಸ್ಕಾರಗಳು,

ಕನ್ನಡ ಮಾಧ್ಯಮ ಲೋಕದ ಜನಪ್ರಿಯ ಅಂಕಣ “ಅನಾವರಣ”ದ 04/02/2013 ಲೇಖನದಲ್ಲಿ ತಾವು ಆಶಿಶ್ ನಂದಿಯವರ ವಿವಾದಾತ್ಮಕ ಮಾತುಗಳ ಬಗ್ಗೆ ಬರೆದಿದ್ದೀರಿ. ಕನ್ನಡದ ಸಹಸ್ರಾರು ಓದುಗರಂತೆ ನಾನೂ ಕೂಡಾ ತಮ್ಮ ಅನಾವರಣ ಅಂಕಣದ ಓದುಗ. ಅದರಲ್ಲಿ ತಾವು ಕೊಡುವ ವಿಚಾರ, ಮಾಹಿತಿ, ವಿಶ್ಲೇಷಣೆ, ಒಳನೋಟ ನನ್ನಂತಹ ಹಲವು ರಾಜಕೀಯ, ಸಾಮಾಜಿಕ ಕಾರ್ಯಕರ್ತರಿಗೆ ದಾರಿದೀಪ. ಆದರೆ ಆಶಿಶ್ ನಂದಿಯವರ ವಿವಾದಾತ್ಮಕ ಹೇಳಿಕೆಯನ್ನು aminmattu-prajavaniಆಧರಿಸಿ ತಾವು ಕಳೆದ ಸೋಮವಾರ ಬರೆದ ಬರಹವನ್ನು ಓದಿದ ನಂತರ ನನ್ನಲ್ಲಿ ಹಲವು ಪ್ರಶ್ನೆಗಳು ಉದ್ಭವವಾಗಿವೆ. ನೀವು ಆಶಿಶ್ ನಂದಿಯವರನ್ನು ನಿಮ್ಮಂತಹ ಲಕ್ಷಾಂತರ ಏಕಲವ್ಯರು ವೈಚಾರಿಕ ಸ್ಪಷ್ಟತೆಯನ್ನು ರೂಪಿಸಿಕೊಳ್ಳಲು ನೆರವಾದ ಗುರು ಎಂದು ಸಂಬೋಧಿಸಿದ್ದೀರಿ. ಗುರುಭಕ್ತಿಯ ಕಾರಣಕ್ಕಾಗಿ ಅವರಾಡಿದ ಮಾತುಗಳನ್ನು ವಿಮರ್ಶೆ ಇಲ್ಲದೆ ಬಾಯಿ ಮುಚ್ಚಿಕೊಂಡು ಅನುಮೋದಿಸುವುದನ್ನು ಆಶಿಶ್ ನಂದಿ ಒಪ್ಪಿಕೊಳ್ಳಲಾರರು ಎಂದು ಕೂಡಾ ಬರೆದಿದ್ದೀರಿ. ಹಾಗೆಯೇ ನಿಮ್ಮ ಬರಹಗಳಿಂದ ಪ್ರೇರಿತರಾದ ಏಕಲವ್ಯರು ಕನ್ನಡ ನಾಡಿನಲ್ಲಿ ತುಂಬಾ ಮಂದಿಯಿದ್ದಾರೆ. ಅವರಲ್ಲಿ ನಾನೂ ಕೂಡ ಒಬ್ಬ ಗುರುಭಕ್ತಿಯ ಕಾರಣಕ್ಕಾಗಿ ಬಾಯಿ ಮುಚ್ಚಿಕೊಂಡು ಒಪ್ಪಿಕೊಳ್ಳುವುದನ್ನು ತಾವು ಕೂಡ ಒಪ್ಪಿಕೊಳ್ಳಲಾರಿರಿ ಎಂದು ಭಾವಿಸುತ್ತಾ ತಮ್ಮ ಬರಹದ ಬಗ್ಗೆ ಒಂದೆರೆಡು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದೇನೆ.

ಆಶಿಶ್ ನಂದಿಯವರು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಸಿಪಿಐ(ಎಮ್)‌ನಂತಹ ಒಂದು ರಾಜಕೀಯ ಪಕ್ಷದ ಒಬ್ಬ ಸದಸ್ಯನಾಗಿ ನಾನು ಒಪ್ಪಿಕೊಳ್ಳುವುದಿಲ್ಲ. ಅದೇ ಸಂದರ್ಭದಲ್ಲಿ ಆಶಿಶ್ ನಂದಿಯವರನ್ನು ಬಂಧಿಸಬೇಕು, ಜೈಲಿಗೆ ತಳ್ಳಬೇಕು ಎಂಬಿತ್ಯಾದಿ ಅತಿರೇಕದ ಅಭಿಪ್ರಾಯಗಳೂ ನನ್ನಲ್ಲಿಲ್ಲ. ಇದು ನನ್ನ ಹಾಗೂ ನಾನು ಕೆಲಸ ಮಾಡುವ ಪಕ್ಷದ ನಿಲುವು.

ಆಶಿಶ್ ನಂದಿಯವರ ಹೇಳಿಕೆಯ ಕೊನೆಯ ಭಾಗವನ್ನು ಇಟ್ಟುಕೊಂಡು ಆಧರಿಸಿ ಬರೆದ ನಿಮ್ಮ ಅಂಕಣದ ಕೊನೆಯ ಭಾಗದಲ್ಲಿ ಸಿಪಿಐ(ಎಮ್) ಪಕ್ಷದ ಪ್ರಾಮಾಣಿಕತೆಯನ್ನು ವಿಮರ್ಶೆಗೆ ಒಡ್ಡಿದ್ದೀರಿ. ಪಶ್ಚಿಮ ಬಂಗಾಳ ಭ್ರಷ್ಟಾಚಾರ ಮುಕ್ತ ಸ್ವಚ್ಛ ರಾಜ್ಯವಾಗಿರಲು ಅಲ್ಲಿ ಒಬಿಸಿ, ಎಸ್ಸಿ, ಎಸ್ಟಿಗಳು ಅಧಿಕಾರಕ್ಕೆ ಬರದೇ ಇರುವುದು ಕಾರಣ ಎಂಬ ಆಶಿಶ್ ನಂದಿಯವರು ಮಾತು ಖಂಡಿತ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅಲ್ಲಿನ ವ್ಯವಸ್ಥೆ ಭ್ರಷ್ಟಾಚಾರದಿಂದ ಮುಕ್ತವಾಗಿದ್ದರೆ ಅದಕ್ಕೆ ಅಲ್ಲಿನ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನೇತೃತ್ವದ ಚಳವಳಿ ಮತ್ತು ಮೂರುವರೆ ದಶಕಗಳ ನಿರಂತರ ಆಡಳಿತ ಕಾರಣ ಅನ್ನುವುದು ನಿಷ್ಪಕ್ಷಪಾತಿಗಳು ಒಪ್ಪಲೇಬೇಕಾದ ಸತ್ಯ. ತಾವೂ ಕೂಡಾ “ಅಲ್ಲಿನ ಶೇಕಡಾ 90ರಷ್ಟು ಎಡಪಕ್ಷಗಳ ಜನಪ್ರತಿನಿಧಿಗಳು ಪ್ರಾಮಾಣಿಕರೆನ್ನುವುದು ನಿರ್ವಿವಾದ” ಎಂದು ಅಭಿಪ್ರಾಯ ಪಟ್ಟಿದ್ದೀರಿ.. ಆದರೆ ಮುಂದುವರಿದು, “ಅಲ್ಲಿನ ಸಿಪಿಎಂನ ಪದಾಧಿಕಾರಿಗಳು, ಪಕ್ಷದ ಲೋಕಲ್ ಕಮಿಟಿ ಸೆಕ್ರೆಟರಿಗಳು ಭ್ರಷ್ಟರು. ಅವರ ಆದಾಯ ವೃದ್ಧಿಯ ಬಗ್ಗೆ ಯಾರಾದರೂ ತನಿಖೆ ನಡೆಸಿದರೆ ಸ್ವಚ್ಛ ರಾಜ್ಯದ ಬಣ್ಣ ಬಯಲಾಗಬಹುದು” ಎಂದು ಬರೆದಿದ್ದೀರಿ. (ತಾವು ಬಹಳ ಸಲ ಕಮ್ಯುನಿಸ್ಟ್ ಆಡಳಿತ ಕಾಲದಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದೀರಿ, ಚುನಾವಣಾ ಸಮೀಕ್ಷೆಗಾಗಿ ಬಂಗಾಳದ ಹಳ್ಳಿ, ಹಳ್ಳಿ ತಿರುಗಿದ್ದೀರಿ, ತುಂಬಾ ಸಲ ಬಂಗಾಳದ ಬಗ್ಗೆ ಬರೆದಿದ್ದೀರಿ, ಆದರೆ ಯಾವತ್ತೂ ಸಿಪಿಐ(ಎಮ್) ಪಕ್ಷದ ಪದಾಧಿಕಾರಿಗಳು ಭ್ರಷ್ಟರಾಗಿದ್ದಾರೆ ಎಂದು ಬರೆದದ್ದು ನೆನಪಿಲ್ಲ.)

ಸಿಪಿಐ(ಎಮ್) ಪಕ್ಷದಲ್ಲಿ ಜನಪ್ರತಿನಿಧಿಗಳು ಸ್ವಯಂಭೂಗಳಲ್ಲ, ಬದಲಿಗೆ ಅದೇ ಪಕ್ಷದ ಪದಾಧಿಕಾರಿಗಳು ಹಾಗೂ ಲೋಕಲ್ ಕಮಿಟಿ ಸೆಕ್ರೆಟರಿಗಳ ಮಧ್ಯದಿಂದಲೇ ಆಯ್ಕೆಯಾಗಿ ಬಂದಿರುತ್ತಾರೆ. ಹೀಗಿರುವಾಗ ಜನಪ್ರತಿನಿಧಿಗಳು ಪ್ರಾಮಾಣಿಕರಾಗಿರುವುದು, ಪದಾಧಿಕಾರಿಗಳು ಮಾತ್ರ ಭ್ರಷ್ಟರಾಗುವುದು ಹೇಗೆ ಸಾಧ್ಯ? ನಮ್ಮ ಬಂಡವಾಳಶಾಹಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಭ್ರಷ್ಟರಾಗಲು ಅತೀ ಹೆಚ್ಚು ಸಾಧ್ಯತೆ, ಅವಕಾಶ, ಆಮಿಶಗಳು ಇರುವುದು ಜನಪ್ರತಿನಿಧಿಗಳಿಗೇ ಆಗಿದೆ. ಆದಾಗ್ಯೂ ಸಿಪಿಐ(ಎಮ್) ಜನಪ್ರತಿನಿಧಿಗಳು ಪ್ರಾಮಾಣಿಕರಾಗಿ ಉಳಿದಿದ್ದಾರೆ ಎಂದಾದಲ್ಲಿ ಅದೇ ಪಕ್ಷದ ಪದಾಧಿಕಾರಿಗಳು ಭ್ರಷ್ಟರಾಗಿದ್ದಾರೆ ಎಂದರೆ ಅರ್ಥ ಏನು?

ಇನ್ನು ಪಶ್ಚಿಮ ಬಂಗಾಳದ ಮೇಲ್ಜಾತಿಯ ಜಮೀನ್ದಾರರು ಸಾವಿರಾರು ಎಕರೆ ಜಮೀನನ್ನು ಸ್ವ-ಇಚ್ಛೆಯಿಂದ ಗೇಣಿದಾರರಿಗೆ ಬಿಟ್ಟುಕೊಟ್ಟಿದ್ದಾರೆ ಎಂಬ ಮಾತಿನ್ನು ಪಶ್ಚಿಮ ಬಂಗಾಳದ ಇತಿಹಾಸವನ್ನು ಬಲ್ಲವರಾರೂ ಒಪ್ಪಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಲ್ಲಿ ಜಮೀನ್ದಾರ ಪದ್ಧತಿ ಅಳಿದು, ಭೂಹೀನರಿಗೆ ಭೂಮಿಯ ಒಡೆತನ ಸಿಕ್ಕಿದ್ದು ಸಿಪಿಐ(ಎಮ್) ನೇತೃತ್ವದ ಐತಿಹಾಸಿಕ ಸಮರಶೀಲ ಹೋರಾಟ ಮತ್ತು ಜ್ಯೋತಿ ಬಸು ನಾಯಕತ್ವದ ಎಡಪಕ್ಷಗಳ ಸರಕಾರ ಜಾರಿಗೆ ತಂದ ಪ್ರಬಲ ಭೂಮಸೂದೆ ಕಾಯ್ದೆಯಿಂದಾಗಿಯೇ ಹೊರತು ಭೂಮಾಲೀಕರ ಸ್ವಇಚ್ಛೆಯಿಂದಲ್ಲ ಎಂಬುದು ಕಮ್ಯುನಿಸ್ಟ್ ಪಕ್ಷಗಳ ಪ್ರಬಲ ವಿರೋಧಿಗಳು ಸಹ ಒಪ್ಪುವ ಮಾತು. (ಕಮ್ಯುನಿಸ್ಟ್ ವಿಚಾರಧಾರೆಯಿಂದ ಪ್ರಭಾವಿತರಾಗಿ, ಕಮ್ಯುನಿಸ್ಟ್ ಪಕ್ಷದ ಚಳುವಳಿಯ ಭಾಗವಾದ ಕೆಲವು ಭೂಮಾಲಕರು ತಾವು ಒಪ್ಪಿಕೊಂಡ ಆದರ್ಶದ ಭಾಗವಾಗಿ ಸ್ವಇಚ್ಛೆಯಿಂದ ಭೂಮಿಯನ್ನು ಗೇಣಿದಾರರಿಗೆ ಹಂಚಿದ ಪ್ರಕರಣಗಳನ್ನು ಬಿಟ್ಟು.)

ಹಾಗೆಯೇ ಜಮೀನು ಬಿಟ್ಟುಕೊಟ್ಟ ಮೇಲ್ಜಾತಿಗಳಿಗೆ ಅಧಿಕಾರ ಸಿಕ್ಕಿದೆ, ಅದಿನ್ನೂ ಅವರ ಕೈಯಲ್ಲಿ ಭದ್ರವಾಗಿ ಉಳಿದಿದೆ ಎಂಬ ಅಭಿಪ್ರಾಯವನ್ನು ಕೂಡಾ ಒಪ್ಪುವುದು ಸಾಧ್ಯವಿಲ್ಲ. jyothi-basuಜ್ಯೋತಿ ಬಸುವಿನಂತಹ ನಾಯಕ 23 ವರ್ಷ ಅರ್ಹವಾಗಿಯೇ ಮುಖ್ಯಮಂತ್ರಿಯಾಗಿ ರಾಜ್ಯವಾಳಿದ್ದನ್ನು ಅವರ ಜಾತಿಯ ಕಾರಣಕ್ಕಾಗಿ ಮೇಲ್ಜಾತಿಗಳ ಆಡಳಿತ ಎಂಬ ಅಭಿಪ್ರಾಯಕ್ಕೆ ಬರಲು ಹೇಗೆ ಸಾಧ್ಯ? ಪಶ್ಚಿಮ ಬಂಗಾಳ ಸೇರಿ ಕಮ್ಯುನಿಸ್ಟ್ ಚಳುವಳಿ ಬೆಳೆದು ಬಂದದ್ದೇ ಮೇಲ್ಜಾತಿಗಳ ಕಪಿಮುಷ್ಟಿಯಲ್ಲಿದ್ದ ಆಳುವ ವರ್ಗಗಳ ವಿರುದ್ಧದ ಹೋರಾಟಗಳ ಮೂಲಕವೇ ಎಂಬುದು ತಮಗೆ ತಿಳಿದಿಲ್ಲಾ ಎಂದು ಭಾವಿಸುವುದು ಹೇಗೆ? ಪಶ್ಚಿಮ ಬಂಗಾಳದಲ್ಲಿ ಮೂರುವರೆ ದಶಕಗಳ ಕಾಲ ರಾಜಕೀಯ ಅಧಿಕಾರ ಇದ್ದದ್ದು ಮೇಲ್ಜಾತಿಗಳ ಕೈಯಲ್ಲಿ ಅಲ್ಲ. ಕಾರ್ಖಾನೆ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಭೂಹೀನರು, ಗೇಣಿದಾರರು, ಕೃಷಿ ಕೂಲಿ ಕಾರ್ಮಿಕರು, ಹೀಗೆ ಬಹುತೇಕ ಕೆಳಜಾತಿಗಳೇ ಇರುವ ಶೋಷಿತ ಜನ ವಿಭಾಗವನ್ನು ಪ್ರತಿನಿಧಿಸುವ ಸಿಪಿಐ(ಎಮ್) ಪಕ್ಷದ ಕೈಯಲ್ಲಿ. ಜ್ಯೋತಿ ಬಸು ಸೇರಿ ಅಧಿಕಾರ ಸ್ಥಾನದಲ್ಲಿದ್ದ ಮೇಲ್ಜಾತಿಗೆ ಸೇರಿದ ಕಾಮ್ರೇಡುಗಳು ತಮ್ಮ ಸ್ವಜಾತಿಯಲ್ಲಿದ್ದ ಜಾತಿವಾದ, ಶೋಷಣೆಯ ವಿರುದ್ಧ ಸಿಡಿದೆದ್ದು ಶೋಷಿತ ಜಾತಿಯ ಜನತೆಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಪಶ್ಚಿಮ ಬಂಗಾಳದ ಕಮ್ಯುನಿಸ್ಟ್ ಪಕ್ಷದ ಆಡಳಿತದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮೇಲ್ಜಾತಿಯಿಂದ ಬಂದವರಾಗಿದ್ದರೂ ಮಂತ್ರಿಮಂಡಲ, ಜನಪ್ರತಿನಿಧಿಗಳಲ್ಲಿ ಕೆಳಜಾತಿಗಳು, ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹೆಚ್ಚಿನ ಪ್ರಭಾವಶಾಲಿ ಪ್ರತಿನಿಧಿಗಳು ಇದ್ದರು ಮತ್ತು ಪಕ್ಷದ ಒಳಗಡೆ ಅವರು ಪ್ರಭಾವಶಾಲಿಗಳಾಗಿದ್ದರು (ಲೋಕಲ್ ಕಮಿಟಿ ಸೆಕ್ರೆಟರಿಗಳಲ್ಲಿ ಕೆಳಜಾತಿಗೆ ಸೇರಿದವರೇ ಅಧಿಕ) ಎಂಬುದನ್ನು ನೀವು ಕಡೆಗಣಿಸಿದ್ದೀರಿ.

ಇದಕ್ಕಿಂತಲೂ ಮುಖ್ಯ ವಿಚಾರವನ್ನು ನೀವು ಚರ್ಚೆಗೆ ಒಳಪಡಿಸಿಲ್ಲ. ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಮ್) ಪಕ್ಷ ಸಾಮಾನ್ಯ ಕ್ಷೇತ್ರದಲ್ಲಿಯೂ ಸಹ ಪರಿಶಿಷ್ಟ ಅಭ್ಯರ್ಥಿಗಳನ್ನು ನಿಲ್ಲಿಸಿ ಚುನಾವಣೆಯಲ್ಲಿ ಗೆಲ್ಲಿಸಿದೆ. ಇದು ಬೇರೆ ಪಕ್ಷಗಳಲ್ಲಿ, ಬೇರೆ ರಾಜ್ಯಗಳಲ್ಲಿ ಸಾಧ್ಯವಿದೆಯೇ? ನಮ್ಮದೇ ರಾಜ್ಯದಲ್ಲಿ ಮಲ್ಲಿಕಾರ್ಜುನ ಖರ್ಗೆಯಂತಹ ಪ್ರಭಾವಿ ನಾಯಕ ಸತತ ಏಳೆಂಟು ಬಾರಿ ಗೆದ್ದ ಮೀಸಲು ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಾಗ ಇನ್ನೊಂದು ಮೀಸಲು ಕ್ಷೇತ್ರಕ್ಕೆ ವಲಸೆ ಹೋದದ್ದನ್ನು ನಾನು ಇಲ್ಲಿ ನೆನಪಿಸಬಯಸುತ್ತೇನೆ. ದಲಿತರು ಮಾತ್ರವಲ್ಲ ಇತರೆ ಹಿಂದುಳಿದವರು, ಅಲ್ಪಸಂಖ್ಯಾತರು ಹೀಗೆ ಎಲ್ಲಾ ವರ್ಗಗಳ ದಮನಿತರಿಗೆ ಭೂಮಿ, ರಾಜಕೀಯ ಅಧಿಕಾರವನ್ನು ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಮ್) ಪಕ್ಷ ನೀಡಿದೆ. ಹೀಗಿರುವಾಗ ಪಕ್ಷದ ಆಡಳಿತವನ್ನು ಜಾತಿವಾದಿ ಎನ್ನಲು ಸಾಧ್ಯವೇ? ಅಂತೆಯೇ, ಇಷ್ಟೆಲ್ಲಾ ವಾಸ್ತವಾಂಶಗಳು ಇರುವಾಗ ತಮ್ಮ ಅಂಕಣ ಬರಹದಲ್ಲಿ ಆಶಿಶ್ ನಂದಿಯವರ ಹೇಳಿಕೆಯನ್ನು ಮುಂದಿಟ್ಟು ಪಶ್ಚಿಮ ಬಂಗಾಳದ ಸಿಪಿಐ(ಎಮ್) ಪಕ್ಷದ ಬಗ್ಗೆ ತಾವು ಬರೆದ ಬರಹದ ಹಿನ್ನಲೆಯಲ್ಲಿ ಆಶಿಶ್ ನಂದಿಯವರೇ ಪ್ರತಿಪಾದಿಸುತ್ತಾ ಬಂದ ಆಧುನಿಕೋತ್ತರವಾದ ಮತ್ತು ಅದರ ಉಪವಾದ ಅನನ್ಯತೆಯ ವಾದ ಪ್ರಭಾವವೂ ಒಂದು ಕಾರಣ ಆಗಿರಬಹುದು ಎಂಬುದು ನನ್ನ ಅಭಿಪ್ರಾಯ.

ಇತೀ ತಮ್ಮ ಪ್ರೀತಿಯ,
ಮುನೀರ್ ಕಾಟಿಪಳ್ಳ