ನಾಡೋಜ ಗೌರವ: ಆಯ್ಕೆಯಾದವರ ಸಾಧನೆಗಳೇನು?

-ಶಿವರಾಜ್

ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಈ ವರ್ಷದ ನಾಡೋಜ ಪ್ರಶಸ್ತಿಗೆ ಆಯ್ಕೆ ಮಾಡಿದವರಲ್ಲಿ ಇಬ್ಬರ ಹೆಸರು ಕುತೂಹಲ ಹುಟ್ಟಿಸುತ್ತವೆ. ಅವರು – ಬೆಂಗಳೂರು ದೂರದರ್ಶನ ಕೇಂದ್ರ ನಿರ್ದೇಶಕ ಮಹೇಶ್ ಜೋಶಿ ಮತ್ತು ಕರ್ನಾಟಕ ಲೋಕ ಸೇವಾ ಆಯೋಗ ಅಧ್ಯಕ್ಷ ಗೋನಾಳ ಭೀಮಪ್ಪ.

ಮಹೇಶ್ ಜೋಶಿ ಸದ್ಯ ಕೇಂದ್ರ ಸರಕಾರದ ನೌಕರ. ಅವರ ಕೆಲಸವೇ ದೂರದರ್ಶನವನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವುದು. mahesh-joshiಆದರೆ ಇಂದಿಗೂ ನಿಜ ಅರ್ಥದಲ್ಲಿ ದೂರವೇ ಉಳಿದಿರುವುದು ಈ ದೂರದರ್ಶನ ಮಾತ್ರ. ಹಲವು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿ, ಆಯ್ದ ವೀಕ್ಷಕರನ್ನು ಆಹ್ವಾನಿಸಿ ಜೋಶಿಯವರು ತಮ್ಮ ಶೋ ನಡೆಸುವುದು ಎಲ್ಲರಿಗೂ ಗೊತ್ತು. ಅವರಿಗೆ ಪರದೆಯ ಮೇಲೆ ಕಾಣಿಸಿಕೊಳ್ಳುವುದರ ಬಗ್ಗೆ ತೀವ್ರ ಮೋಹ. ಗಣ್ಯ ಅತಿಥಿಗಳನ್ನು ಅವರು ಅಪ್ಪಿ ಸಭೆಗೆ ಬರಮಾಡಿಕೊಳ್ಳುವಾಗ ಒಬ್ಬ ಕೆಮರಾಮನ್ ಬಾಗಿಲಲ್ಲೇ ಇರಬೇಕು. ಅವರು ಮಾತು ಎಲ್ಲಿಯೂ ಎಡಿಟ್ ಆಗದೆ ಪ್ರಸಾರ ಆಗಬೇಕು. ಇನ್ನೂ ವಿಶಿಷ್ಟ ಅಂದರೆ ಬಹುತೇಕ ಫ್ರೇಮ್ ಗಳಲ್ಲಿ ಅವರು ಖಾಯಂ ಆಬ್ಜೆಕ್ಟ್!

ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಬಂದಿತ್ತು. ಪ್ರಶಸ್ತಿ ಘೋಷಣೆ ಆದ ದಿನ ಅವರ ಸುದ್ದಿ ಸಮಯದಲ್ಲಿ ಅವರದೇ ದೊಡ್ಡ ಸುದ್ದಿ. ಅಷ್ಟೇ ಅಲ್ಲ, ಇತರ ಸುದ್ದಿ ಸಂಸ್ಥೆಗಳ ನೌಕರರಿಗೆ ಅವರ ಆಪ್ತರು ಸಂಪರ್ಕಮಾಡಿ ಅವರ ಫೋಟೋ ಪ್ರಕಟ ಮಾಡಲು ವಿನಂತಿಸಿಕೊಂಡಿದ್ದು ಅನೇಕರಿಗೆ ಗೊತ್ತು. ನಾಡೋಜ ಅಂದರೆ, ನಾಡಿನ ಗುರು ಎಂದರ್ಥ. ಯಾವ ಕೋನದಿಂದಲೂ ಮಹೇಶ ಜೋಶಿಯವರನ್ನು ಗುರು ಎಂದು ಒಪ್ಪಿಕೊಳ್ಳಲು ಮನಸ್ಸಾಗುತ್ತಿಲ್ಲ.

ಇನ್ನೊಬ್ಬರು gonal-bhimappaಗೋನಾಳ್ ಭೀಮಪ್ಪ. ಕೆಎಎಸ್ ಅಧಿಕಾರಿಯಾಗಿ ಸರಕಾರಿ ಸೇವೆ ಸೇರಿದರು. ನಂತರ ಐಎಎಸ್ ದರ್ಜೆಗೆ ಏರಿ ಹಲವು ಇಲಾಖೆಗಳಲ್ಲಿ ದುಡಿದಿದ್ದಾರೆ. ಸದ್ಯ ಕರ್ನಾಟಕ ಲೋಕ ಸೇವಾ ಆಯೋಗದ ಅಧ್ಯಕ್ಷರು. ಇತ್ತೀಚೆಗೆ ಅವರ ನೇತೃತ್ವದಲ್ಲಿ ಕೆ.ಪಿ.ಎಸ್.ಸಿ. ಮಾಡಿರುವ ಘನಕಾರ್ಯವಾದರೂ ಏನು ಅಂತ ಘನ ವಿಶ್ವವಿದ್ಯಾನಿಲಯದ ಕುಲಪತಿಯವರು ವಿವರಿಸಬೇಕು.

ಮಾನ್ಯರು ಅತ್ಯಂತ ಹಿಂದುಳಿದ ಸಮುದಾಯಕ್ಕೆ ಸೇರಿದವರು. ಅವರು ಅಂತಹ ಉನ್ನತ ಹುದ್ದೆಗೆ ಹೋಗಿದ್ದಾರೆ. ಅದು ನಿಜಕ್ಕೂ ಸಾಧನೆಯೇ. ಅನುಮಾನವಿಲ್ಲ. ಕೆ.ಪಿ.ಎಸ್.ಸಿ ಸುತ್ತ-ಮುತ್ತ ಅಲೆದಾಡುವ ಪಕ್ಷಿ, ಕ್ರಿಮಿ, ಕೀಟ, ನಾಯಿಕುನ್ನಿಗಳಿಗೂ ಗೊತ್ತು, ಅಲ್ಲಿಯ ವ್ಯವಸ್ಥೆಯಲ್ಲಿ ಪ್ರಾಮಾಣಿಕತೆ ಇಲ್ಲ, ಪಾರದರ್ಶಕ ವ್ಯವಸ್ಥೆಯನ್ನಂತೂ ಕೇಳಲೇಬೇಡಿ. ಅವರನ್ನು ಈ ಹುದ್ದೆಗೆ ನೇಮಕ ಮಾಡಿದ್ದನ್ನು ತಮ್ಮ ದಲಿತ-ಪರ ಧೋರಣೆಗೆ ದ್ಯೋತಕ ಎಂಬಂತೆ ಆಗಾಗ ಜಾತ್ಯತೀತ ಜನತಾದಳ ನಾಯಕರು ಹೇಳಿಕೊಳ್ಳುವುದುಂಟು. (ಈ ಹಿಂದಿನ ಅಧ್ಯಕ್ಷರು, ಇದೇ ಪಕ್ಷದವರಿಗೆ ನಿಷ್ಠರಾಗಿದ್ದವರು, H-N-Krishnaನಂತರ ಕೆಲದಿನ ಜೈಲು ಕಂಡು ಬರಬೇಕಾಯಿತು.)

ಕೆ.ಪಿ.ಎಸ್.ಸಿ ಅಧ್ಯಕ್ಷರಾದ ನಂತರ ಅವರ ಮಹತ್ತರ ಸಾಧನೆ ಏನು ಎಂಬುದು ಸಮಾಜಕ್ಕೆ ಗೊತ್ತಾಗಿಲ್ಲ. ಭೀಮಪ್ಪನವರ ಅಭಿಮಾನಿಗಳು ಕೇಳಬಹುದು ಅವರು ಅಧ್ಯಕ್ಷರಾದಾಗಿನಿಂದ ಎಷ್ಟು ದಲಿತ ಹುಡುಗರಿಗೆ ಕಾಸು-ಕರಿಮಣಿ ಇಲ್ಲದೆ ಕೆಲಸ ಸಿಕ್ಕಿದೆ ಅಂತ ನಿಮಗೇನು ಗೊತ್ತು? ಆ ರೀತಿ ದಲಿತ ಹುಡುಗರಿಗೆ ಅನುಕೂಲ ಆಗಿದ್ದರೆ ಸಂತೋಷ. ಆದರೆ, ಅದು ಸಾಧನೆಯೆ?

ಆಯೋಗದಿಂದ ಭರ್ತಿಯಾಗುವ ಹುದ್ದೆಗಳಲ್ಲಿ ಶೇ 50 ರಷ್ಟು ಹುದ್ದೆಗಳು ಸಾಮಾನ್ಯ ಅಭ್ಯರ್ಥಿಗಳಿಗೆ. ಈ ಹಿಂದಿನ ಅಧ್ಯಕ್ಷರು ಈ ಹುದ್ದೆಗಳನ್ನು ತುಂಬುವಾಗ ಒಂದು ಜಾತಿಯ ಅಭ್ಯರ್ಥಿಗಳನ್ನೇ ಓಲೈಸಿದ್ದಾರೆ ಎಂಬ ಆರೋಪ ಇದೆ. ಆದರೆ, ಎಷ್ಟೇ ಅರ್ಹತೆ ಇದ್ದರೂ ಹಿಂದುಳಿದ ಮತ್ತು ದಲಿತ ಅಭ್ಯರ್ಥಿಗಳು ತಮ್ಮ ಮೀಸಲಾತಿ ಹೊರತಾಗಿ ಸಾಮಾನ್ಯ ಅಭ್ಯರ್ಥಿಗಳ ಜೊತೆ ಪೈಪೋಟಿ ಮಾಡಿ ಕೆಲಸ ಗಿಟ್ಟಿಸಿಕೊಳ್ಳಲು ಸಾಧ್ಯವಾಗಿರುವುದು ಅಪರೂಪ. ಗೋನಾಳ್ ಭೀಮಪ್ಪನವರು ಆ ಹುದ್ದೆಗೆ ಬಂದಾಗಿನಿಂದ ಈ ನಿಟ್ಟಿನಲ್ಲಿ ಏನಾದರೂ ಬದಲಾವಣೆಗಳಾಗಿವೆಯೇ? ಬಲ್ಲವರು ಹೇಳಬೇಕು.

ಹಂಪಿ ವಿಶ್ವವಿದ್ಯಾನಿಲಯದ ಮಾತಷ್ಟೇ ಏಕೆ? ಬೇರೆ ವಿ.ವಿ.ಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಿಲ್ಲ. ಮೊನ್ನೆ ಮೊನ್ನೆ ಧಾರವಾಡ ವಿ.ವಿ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೂ ಗೌರವ ಡಾಕ್ಟರೇಟ್ ಘೋಷಿಸಿತು. ಅಲ್ಲಲ್ಲಿ ವಿರೋಧ ವ್ಯಕ್ತವಾಯಿತು. ಮುಜುಗರ ಎದುರಿಸಲಾಗದೆ, ಮುಖ್ಯಮಂತ್ರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿಲ್ಲ. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ವಿದೇಶದ ವಿ.ವಿಯೊಂದು ಗೌರವ ಡಾಕ್ಟರೇಟ್ ನೀಡಿತ್ತು. ತಮ್ಮ ಹೆಸರಿನ ಮುಂದೆ ಡಾ ಎಂದು ಬರೆಸಿಕೊಂಡಿದ್ದ ಯಡಿಯೂರಪ್ಪ ಕೆಲವೇ ದಿನಗಳ ನಂತರ ಅದನ್ನು ತೆಗೆಸಿದರು.

ವಿಶ್ವವಿದ್ಯಾನಿಲಯಗಳು ಜ್ಞಾನದ ಕೇಂದ್ರಗಳು. ಆ ಘನತೆಗೆ ತಕ್ಕಂತೆ ನಡೆದುಕೊಂಡರೆ ಗೌರವ ಗಳಿಸುತ್ತವೆ. ಆಯ್ಕೆಗಳು ಹಳ್ಳ ಹಿಡಿದಲ್ಲಿ, ಅಪರೂಪಕ್ಕೊಮ್ಮೆ ಇಂತಹ ಮನ್ನಣೆ ಗಳಿಸುವ ಉತ್ತಮರಿಗೂ ಕಳಂಕ ತಗುಲುವ ಅಪಾಯ ಇದೆ. ಜೊತೆಗೆ ಅರ್ಹರು ನಮ್ಮ ಸಮಾಜದಲ್ಲಿ ಇಲ್ಲವೇ ಎಂಬ ಪ್ರಶ್ನೆಯೂ ಏಳಬಹುದು.

ಇದೇ ಕಾರಣಕ್ಕೆ ಅನೇಕರಿಗೆ ಪ್ರಶ್ನೆ ಕಾಡುತ್ತಿದೆ – ದೇವನೂರು ಮಹದೇವ ಅವರನ್ನು ನಾಡೋಜ ಗೌರವಕ್ಕೆ ಆಯ್ಕೆ ಮಾಡಲು ಇಷ್ಟು ವರ್ಷ ಬೇಕಾಯಿತೆ?

6 thoughts on “ನಾಡೋಜ ಗೌರವ: ಆಯ್ಕೆಯಾದವರ ಸಾಧನೆಗಳೇನು?

  1. ಓದುಗ, ಬೆಂಗಳೂರು

    ಲೇಖಕರು ಬಹಳ ಸರಿಯಾದ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. ಹೆಚ್ಚಿನ ಪ್ರಶಸ್ತಿಗಳು ತಮ್ಮ ಬೆಲೆಯನ್ನು ಕಳೆದುಕೊಂಡಿರುವ ಸಂದರ್ಭದಲ್ಲಿ ನಾಡೋಜ ಪ್ರಶಸ್ತಿಯ ಬಗ್ಗೆ ಅಭಿಮಾನವಿತ್ತು. ಆದರೆ ಕಳೆದ ಬಾರಿ ಕರಾವಳಿಯ ಉಡುಪಿ ಜಿಲ್ಲೆಯ ಉದ್ಯಮಿಯೊಬ್ಬರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಕೊಡಮಾಡುವ ಪ್ರತಿಷ್ಟಿತ ನಾಡೋಜ ಪ್ರಶಸ್ತಿಯೂ ಸಿಕ್ಕಿದೆಯೆಂದು ತಿಳಿದು ಬಹಳ ಅಚ್ಚರಿಯಾಯಿತು, ಜೊತೆಗೆ ಅದರ ಬಗ್ಗೆ ಇದ್ದ ಅಭಿಮಾನವೂ…. , “ದುಡ್ಡಿನ” ಬಲದಿಂದ “ಸಮಾಜ ಸೇವೆಯನ್ನು” ಮಾಡುತ್ತಿರುವಂತಹ ವ್ಯಕ್ತಿಗಳಿಗೆ ಸಿಗುವ ಪ್ರಶಸ್ತಿ ದೇವನೂರುರವರಿಗೆ ಪಾಲಿಗೆ ಬಂದಿರುವುದು (ಅದೂ ಕೂಡಾ ತಡವಾಗಿ) ನೋಡಿ ಓಂದು ರೀತಿಯ ಬೇಸರವೂ ಆಯಿತು.

    Reply
  2. ಓದುಗ

    ಅಷ್ಟಿಷ್ಟು ಮಾನ ಉಳಿಸಿಕೊಂಡಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಹೀಗೆ ಹಳ್ಳ ಹಿಡಿದರೆ ಹೇಗೆ?.ಲೇಖಕರು ಸಮಯೋಚಿತ ಪ್ರಶ್ನೆ ಎತ್ತಿದ್ದಾರೆ. ಇಂತಹ ಪ್ರಶಸ್ತಿ, ಸನ್ಮಾನಗಳನ್ನು ನಿಷೇಧಿಸಿದರೆ ಉತ್ತಮ. ಬಾಲ ಬಡಿಯುವುದಾದರೂ ಕೊಂಚ ನಿಂತು ಬುದ್ದಿಜೀವಿಗಳು ಒಳ್ಳೆಯ ಕೆಲಸಗಳಿಗೆ ತಲೆ ಹಾಕುವಂತಾದೀತು.

    Reply
  3. ಹೆಚ್.ಎನ್. ಜ್ಞಾನೇಶ್ಡರ

    ಪ್ರಶಸ್ತಿಗಳು ಬಂದಾಗ ಪಡೆದವರ ಬಗ್ಗೆ ತಿಳಿದು ಮಾತನಾಡಿ ದೂರದರ್ಶನ ಕೇಂದ್ರ ನಿರ್ದೇಶಕ ಮಹೇಶ್ ಜೋಷಿ ಬಗ್ಗೆ ಸರಿಯಾಗಿ ತಿಳಿಯದೆ ಹೀಗೆ ಲೇಖನ ಬರೆಯಬಾರದು, ಸರ್ಕಾರಿ ಇಲಾಖೆ ಗಳಲ್ಲಿ ಉತ್ತಮವಾಗಿ ಕೆಲಸ ನಿರ್ವಹಣೆಯಾಗುತ್ತಿರುವ ಸಂಸ್ತೆಗಳಲ್ಲಿ ದೂರದರ್ಶನವು ಒಂದು,
    ಮಹೇಶ್ ಜೋಷಿಯವರಿಗಿಂತ ಮುಂಚೆ ತುಂಬಾ ಜನ ದೂರದರ್ಶನ ಕೇಂದ್ರದ ನಿರ್ದೇಶಕರಾಗಿದ್ದಾರೆ, ಅವರಿಗೆ ಬರದ ಪ್ರಶಸ್ತಿ ಇವರಿಗೆ ಬಂದಿದೆ ಎಂದರೆ ಜೋಷಿಯವರು ಸಮರ್ಥರು ಎಂದೇ ಅರ್ಥ, ಬೇರೆಯವರ ಬಗ್ಗೆ ಹೀಗೆಳೆಯುದು ಉತ್ತಮವಾದ ಕೆಲಸವಲ್ಲಾ……………………..

    Reply
  4. Ananda Prasad

    ಮಹೇಶ್ ಜೋಷಿಯವರಿಗೆ ನಾಡೋಜ ಪ್ರಶಸ್ತಿ ನೀಡಿರುವುದು ಏಕೆ ಎಂಬುದು ಎಲ್ಲ ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಜೋಷಿಯವರಲ್ಲಿ ಪ್ರಚಾರಪ್ರಿಯತೆ ಎದ್ದು ಕಾಣುತ್ತದೆ ಹಾಗೂ ಇದು ಅತಿರೇಕದ ಪರಮಾವಧಿಯೂ ಹೌದು. ಇದು ಒಂದು ತಡೆಯಲಾರದ ಗೀಳಿನಂತೆ ಕಂಡುಬರುತ್ತದೆ. ದೂರದರ್ಶನದ ಕಾರ್ಯಕ್ರಮಗಳ ಗುಣಮಟ್ಟ ಎಳ್ಳಷ್ಟೂ ಸುಧಾರಿಸಿಲ್ಲ. ಮೊದಲು ಹೇಗಿತ್ತೋ ಈಗಲೂ ಹಾಗೇ ಇದೆ. ಖಾಸಗಿ ವಾಹಿನಿಗಳಲ್ಲಿ ಕಂಡುಬರುವ ಚುರುಕುತನ ದೂರದರ್ಶನದಲ್ಲಿ ಇಲ್ಲ. ಸಮಕಾಲೀನ ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಿಕ ಚರ್ಚೆಯಾಗಲಿ, ಸಮಕಾಲೀನ ಘಟನೆಗಳ ಬಗ್ಗೆ ವಿಶ್ಲೇಷಣೆಗಳಾಗಲಿ ಇದರಲ್ಲಿ ಕಂಡುಬರುವುದಿಲ್ಲ. ಹೀಗಾಗಿ ಡಿಟಿಎಚ್ ಪ್ರಸಾರ ಬಂದ ನಂತರ ದೂರದರ್ಶನವನ್ನು ನೋಡುವವರು ಬಹಳ ಕಡಿಮೆ.

    Reply
  5. Mamatha Nandakumar

    Mamatha Nandakumar
    ದೇಶಕ್ಕೆ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಇಲ್ಲಿ ಕಡೆಗಾಣಿಸಿದ್ದಾರೆ

    Reply
  6. Oduga

    Am one of the syndicate member of Hampi vv. starting from vc, every one oppose the name of Mahesh Joshi. But his name is imposed by Governor Mr Hansraj Bharadwaj !
    Regarding Mr Gonal, he selected for social justice. on that movement, we are not able to find the suitable name from LEFT. Using RTI, ple apply for syndicate proceedings and find the truth
    excuse me. am not able to reveal my name.

    Reply

Leave a Reply

Your email address will not be published. Required fields are marked *