Daily Archives: February 21, 2013

ಸರಕಾರಿ ಸೇವೆ ಮೆಚ್ಚಿ ಕೊಡೋಕೆ, ನಾಡೋಜ ಪದವಿಯೇನು ಇಂಕ್ರಿಮೆಂಟಾ?

– ಶಿವರಾಜ್

ಹಂಪಿ ವಿ.ವಿ ನಾಡೋಜ ಗೌರವ ಪದವಿ ಕುರಿತ ಲೇಖನಕ್ಕೆ ವರ್ತಮಾನದ ಕೆಲ ಓದುಗರು ಪ್ರತಿಕ್ರಿಯಿಸಿದ್ದಾರೆ. ಅವರಲ್ಲಿ ಒಬ್ಬರು, ಮಹೇಶ್ ಜೋಶಿ ಆ ಪ್ರಶಸ್ತಿಗೆ ಅರ್ಹರು, ಅವರ ಕೊಡುಗೆಯನ್ನು ಪರಿಗಣಿಸದೆ ಅವರನ್ನು ಹೀಗಳೆಯುವುದು ಸರಿಯಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಮಹೇಶ್ ಜೋಶಿಯವರು ಈ ಗೌರವ ಪದವಿಗೆ ಹೇಗೆ ಅರ್ಹರು ಎಂಬುದನ್ನು ನಮ್ಮೆಲ್ಲರಿಗಿಂತ ಮಿಗಿಲಾಗಿ ಸೂಕ್ತ ಉತ್ತರ ಕೊಡಬಲ್ಲವರು ಹಂಪಿ ವಿ.ವಿ.ಯ ಆಯ್ಕೆ ಸಮಿತಿ. ಪ್ರಶಸ್ತಿ ಪ್ರದಾನ ಸಮಾರಂಭದ ದಿನ ವಿ.ವಿ.ಯವರು ಪುರಸ್ಕೃತರ ವಿವರಗಳನ್ನೊಳಗೊಂಡ ಕೈಪಿಡಿಯೊಂದನ್ನು ಸಭೆಯಲ್ಲಿ ಹಾಜರಿದ್ದವರಿಗೆ ಹಂಚಿದ್ದಾರೆ. ಅದರಲ್ಲಿ ಮಹೇಶ್ ಜೋಶಿ ಏಕೆ ಈ ಗೌರವಕ್ಕೆ ಪಾತ್ರರಾದರು ಎಂಬುದಕ್ಕೆ ವಿವರಗಳಿವೆ.

ಅವರ ನೌಕರಿ, ಪದವಿ ಮಾಹಿತಿ ಇದೆ. 2005 ರ ನಂತರ ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾಗಿ mahesh-joshiಅಧಿಕಾರ ವಹಿಸಿಕೊಂಡ ನಂತರದ ಅವರ ಸಾಧನೆಗಳ ವಿವರಗಳಿವೆ. ಅವೆಂದರೆ, “ದೂರದರ್ಶನವನ್ನು ಸಮೀಪ ದರ್ಶನವನ್ನಾಗಿಸಿದ್ದು, ವಿನೂತನವಾದ ಹೆಲೋ ಸಿ.ಎಂ, ಹೆಲೋ ಮಿನಿಸ್ಟರ್, ಹೆಲೋ ಲೋಕಾಯುಕ್ತ.. ಇತರ ಕಾರ್ಯಕ್ರಮಗಳು, ದೃಷ್ಟಿ ವಿಕಲಚೇತನರಿಗೆ ಶಿಕ್ಷಣ ಹಾಗೂ ತರಬೇತಿ ನೀಡಿ ವಾರ್ತಾವಾಚಕರನ್ನಾಗಿ ಮಾಡಿದ್ದು, ಹುತಾತ್ಮರಿಗೆ ಭಾವಪೂರ್ಣ ಕಾರ್ಯಕ್ರಮ, ಸ್ಮರಣಾಂಜಲಿ ಕಾರ್ಯಕ್ರಮ, ಕಾನೂನು ವಾರ್ತೆ, ಮಾನವ ಹಕ್ಕುಗಳ ವಾರ್ತೆ, ಮಧುರ ಮಧುರವೀ ಮಂಜುಳಗಾನ…”

ಖಾಸಗಿ ಚಾನೆಲ್‌ನಲ್ಲಿ ಪ್ರೊಗ್ರಾಮ್ ಹೆಡ್ ಅಥವಾ ನಾನ್-ಫಿಕ್ಷನ್ ಹೆಡ್ ಕೆಲಸ ನಿರ್ವಹಿಸುತ್ತಿರುವ ಬಹುತೇಕ ಯುವಕರು ಇದಕ್ಕಿಂತಲೂ ಅನೇಕ ಅತ್ಯುತ್ತಮ ಕಾರ್ಯಕ್ರಮಗಳನ್ನು ತಮಗಿರುವ ನೂರಾರು ಮಿತಿಗಳಲ್ಲಿ ರೂಪಿಸಿ ಯಶಸ್ಸು ಕಂಡಿದ್ದಾರೆ. ಪಂಪನಿಗೆ ಬಿರುದಾಗಿದ್ದ “ನಾಡೋಜ” ಎಂಬ ಗೌರವ ಪದವಿಗೆ ಇಂತಹ ಕಾರ್ಯಕ್ರಮಗಳನ್ನು ರೂಪಿಸಿದ ಅರ್ಹತೆ ಸಾಕೆ? ನಾಡಿಗೆ ಗುರುವಾಗಿದ್ದುಕೊಂಡು ಮಾರ್ಗದರ್ಶನ ಮಾಡಬಲ್ಲಂತಹ ಅರ್ಹತೆಯನ್ನು ಸೂಚಿಸುವ ಅದ್ಯಾವ ಘನಕಾರ್ಯ ಸನ್ಮಾನ್ಯ ಮಹೇಶ್ ಜೋಶಿಯವರಿಂದ ಆಗಿದೆ ಎಂಬುದನ್ನು ಅವರನ್ನು ಮೆಚ್ಚುವವರೇ ಹೇಳಬೇಕು.

ಜೆಡಿಎಸ್ ಮುಖಂಡರಾದ ಹೆಚ್.ಡಿ.ಕುಮಾರಸ್ವಾಮಿ ಅಥವಾ ರೇವಣ್ಣನವರ ಮಕ್ಕಳ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಅನುಯಾಯಿಗಳು ರಾಮನಗರ, ಹಾಸನಗಳಲ್ಲಿ ಫ್ಲೆಕ್ಸ್ ಹಾಕಿ ಅವರಿಗೆ ಶುಭಾಶಯ ಹೇಳುವುದು ರೂಢಿ. ಥೇಟ್ ಅದೇ ಮಾದರಿಯಲ್ಲಿ ಮಹೇಶ್ ಜೋಶಿಗೆ ಶುಭಾಶಯಗಳನ್ನು ಹೇಳುವ ಫ್ಲೆಕ್ಸ್‌ಗಳು ಹಂಪಿಯಲ್ಲಿ ರಾರಾಜಿಸಿದವು. (ವಿ.ವಿ.ಯ ಕುಲಪತಿಯ ಕಣ್ಣಿಗೆ ಅವು ಬಿದ್ದಿದ್ದರಿಂದ ಬಹುಬೇಗ ಅವನ್ನು ವಿ.ವಿ ಸಿಬ್ಬಂದಿ ಕಿತ್ತು ಹಾಕಿದರು.) ಗೌರವ ಪದವಿ ಸ್ವೀಕರಿಸುವವರ ನಡವಳಿಕೆಯಲ್ಲಿ ಕನಿಷ್ಟ ಸೌಜನ್ಯ ಬೇಡವೆ?

ವಿಶ್ವವಿದ್ಯಾನಿಲಯದ ಕಾರಿಡಾರುಗಳಲ್ಲಿ ಚರ್ಚೆಯಾಗುತ್ತಿರುವ ಮಾತು, “ಜೋಶಿಗೆ ಯಾವ ಅರ್ಹತೆ ಆಧಾರದಲ್ಲಿ ನಾಡೋಜ ಕೊಟ್ಟರು?” ನುಡಿ ಹಬ್ಬ (ಘಟಿಕೋತ್ಸವ)ದ ದಿನ ಬೆಳಗಿನ ಕಾರ್ಯಕ್ರಮವೊಂದರಲ್ಲಿ ಡಾ.ಕಾಳೇಗೌಡ ನಾಗವಾರ ಇಂಥದೇ ಪ್ರಶ್ನೆಯನ್ನು ಸೂಚ್ಯವಾಗಿ ಎತ್ತಿದರು. “ನಾಡೋಜ ಗೌರವಕ್ಕೆ ಆಯ್ಕೆ ಮಾಡುವಾಗ ನಾವು ಹತ್ತಲ್ಲ, ಇಪ್ಪತ್ತು ಸಾರಿ ಯೋಚಿಸಬೇಕು..” ಎಂದರು. ಖಾಸಗಿಯಾಗಿ ಗೆಳೆಯರೊಡನೆ ಮಾತನಾಡುವಾಗ ನಾಡೋಜ ಪದವಿಗೆ ಕುಂದುಂಟಾಗುತ್ತಿರುವ ಬಗ್ಗೆ ಮತ್ತಷ್ಟು ಬೇಸರ ವ್ಯಕ್ತಪಡಿಸಿದರು. ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅಲ್ಲ, “ಮೇಲಿನವರಿಂದ” ಒತ್ತಡ ಬಂದು ಜೋಶಿಯವರ ಹೆಸರು ನಾಡೋಜ ಗಳಿಸುವವರ ಪಟ್ಟಿಗೆ ಸೇರಿಕೊಂಡಿದೆ ಎಂಬ ಮಾತುಗಳೂ ಕೇಳಿಬಂದಿವೆ.

ರೂಪುರೇಷೆ:
ಕುಲಪತಿ ಡಾ.ಹಿ.ಚಿ.ಬೋರಲಿಂಗಯ್ಯನವರು hichiboralingayyaನುಡಿಹಬ್ಬ (ಘಟಿಕೋತ್ಸವ)ಕ್ಕಾಗಿ ಸಿದ್ಧಪಡಿಸಿದ್ದ ಭಾಷಣದಲ್ಲಿ ನಾಡೋಜ ಗೌರವ ಪದವಿಯ ಅವಾಂತರಗಳ ಬಗ್ಗೆ ಪ್ರಸ್ತಾಪಿಸಿರುವುದು, ಅರ್ಹರನ್ನು ಆಯ್ಕೆ ಮಾಡುವಾಗ ನಡೆದಿರಬಹುದಾದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತದೆ. (ಅವರ ಲಿಖಿತ ಭಾಷಣ ಸಮಾರಂಭದಲ್ಲಿ ವಿತರಿಸಿದ ಕೈಪಿಡಿಯಲ್ಲಿದೆ. ಆದರೆ ತಾಂತ್ರಿಕ ಕಾರಣಗಳಿಂದ ಅವರ ಭಾಷಣವನ್ನು ಕುಲಸಚಿವ ಮಂಜುನಾಥ ಬೇವಿನಕಟ್ಟಿ ಓದಬೇಕಾಯಿತು. ಅವರು ಅಲ್ಲಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡು ಓದಿದರು. ಪ್ರಸ್ತುತ ಪ್ಯಾರಾವನ್ನು ಅವರು ಓದಲಿಲ್ಲ).

ಕುಲಪತಿ ಹೇಳುತ್ತಾರೆ (ಪುಟ 9):

“ಕನ್ನಡ ವಿಶ್ವವಿದ್ಯಾನಿಲಯವು ಪ್ರತಿ ವರ್ಷ ತನ್ನ ನುಡಿಹಬ್ಬದಲ್ಲಿ ನೀಡುತ್ತಿರುವ ಘಟಿಕೋತ್ಸವ ಪುರಸ್ಕಾರವಾದ ನಾಡೋಜ ಪದವಿಗೆ ಸಂಬಂಧಿಸಿದಂತೆ ಇತ್ತೀಚಿನ ವರ್ಷಗಳಲ್ಲಿ, ಆಯ್ಕೆಯ ಸಂಬಂಧದ ಕೆಲವು ಸಮಸ್ಯೆಗಳು ತಲೆದೋರುತ್ತಿವೆ. ಆಯ್ಕೆ ವಿಧಾನ, ಅವರ ವಯಸ್ಸು, ಅರ್ಹತೆ ಮತ್ತು ಎಷ್ಟು ಜನರಿಗೆ ನೀಡಬೇಕೆಂಬ ತೀರ್ಮಾನಗಳನ್ನು ಪರಿಶೀಲಿಸಿ ಅದಕ್ಕೊಂದು ತಕ್ಕ ರೂಪರೇಷೆಯನ್ನು ಸಿದ್ಧಪಡಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರನ್ನೊಳಗೊಂಡಂತೆ ಕನ್ನಡ ನಾಡಿನ ಹಿರಿಯರೊಂದಿಗೆ ಚರ್ಚಿಸಿ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸುವ ಮೂಲಕ ಈ ಪುರಸ್ಕಾರಕ್ಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಮೌಲ್ಯ ತಂದುಕೊಡುವುದು ನನ್ನ ಆಶಯವಾಗಿದೆ.”

ಅಂತಹದೊಂದು ರೂಪುರೇಷೆ ತೀರಾ ಅಗತ್ಯ. ಬೋರಲಿಂಗಯ್ಯನವರು ತಮ್ಮ ಮಾತುಗಳಲ್ಲಿ ಈ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಿದ್ದಾರೆ ಮತ್ತು ಅವರು ಆಯ್ಕೆ ಪಟ್ಟಿ ಸಿದ್ಧಪಡಿಸುವಾಗ ಎದುರಿಸಿರಬಹುದಾದ ಸಮಸ್ಯೆಗಳನ್ನು ಇತರರಲ್ಲಿ ನಿವೇದಿಸಿಕೊಂಡಿದ್ದಾರೆ.

ಸರಕಾರಿ ಕೆಲಸ ಮಾಡಿದವರಿಗೂ ನಾಡೋಜ ಕೊಡುವುದಾದರೆ, ಅದಕ್ಕೊಂದು ಘನತೆ ಬೇಡವೆ? ಅವರ ಕೆಲಸ ಮನ್ನಣೆ ಗಳಿಸಿದ್ದರೆ ಸರಕಾರ ಅವರಿಗೆ ಬಡ್ತಿಯನ್ನೋ, ಇಂಕ್ರಿಮೆಂಟನ್ನೋ ಕೊಡಲಿ. ಅದು ಬಿಟ್ಟು ಒಂದು ವಿಶ್ವವಿದ್ಯಾನಿಲಯ ಅಂತಹವರನ್ನು ಕರೆದು ಗೌರವ ನಾಡೋಜ ಕೊಡುವುದೆಂದರೆ!