Daily Archives: February 22, 2013

ರಿಯಲ್ ಎಸ್ಟೇಟ್‌ನ ಒಂದು ರಿಯಲ್ ಕತೆ

– ಬಸವರಾಜು

ರಜನೀಕಾಂತ್… ಒಂದು ಕಾಲದಲ್ಲಿ ಬಿಟಿಎಸ್ ಕಂಡಕ್ಟರ್ ಆಗಿದ್ದ ಇವರು, ಇವತ್ತು ಭಾರತೀಯ ಸಿನಿಮಾ ಲೋಕದ ಸೂಪರ್ ಸ್ಟಾರ್. ಅಂತಾರಾಷ್ಟ್ರೀಯ ಮಟ್ಟದ ಜನಪ್ರಿಯ ವ್ಯಕ್ತಿ. ಬೆಂಗಳೂರಿನ ಹನುಮಂತನಗರದ ರಜನೀಕಾಂತ್ ಕಂಡಕ್ಟರ್ ಕೆಲಸ ಬಿಟ್ಟು, ಬಣ್ಣದ ಬದುಕನ್ನು ಅರಸಿ ಮದ್ರಾಸಿಗೆ ಹೋಗಿದ್ದು, ಜನಪ್ರಿಯ ಚಿತ್ರತಾರೆಯಾಗಿ ರೂಪುಗೊಂಡದ್ದು ಇವತ್ತು ದಂತಕತೆ.

ನಾವಿಲ್ಲಿ ಪ್ರಸ್ತಾಪಿಸಲಿರುವ ವ್ಯಕ್ತಿಯ ಕತೆ ಕೂಡ ರಜನೀಕಾಂತ್ ಥರದ್ದೆ. LNR2ಆದರೆ ಕೊಂಚ ಬೇರೆ. ರಜನಿ ನಟನಾಗಲು ಕಂಡಕ್ಟರ್ ಕೆಲಸ ಬಿಟ್ಟರೆ, ಈ ನಮ್ಮ ಕಥಾನಾಯಕ ರಿಯಲ್ ಎಸ್ಟೇಟ್ ಬ್ರೋಕರ್ ಆಗಲು ಕಂಡಕ್ಟರ್ ಕೆಲಸ ಬಿಟ್ಟರು. ಕ್ಲಿಕ್ ಆದರು.

ಹೆಸರು- ಲಕ್ಷ್ಮಿನಾರಾಯಣ ರಾಜ ಅರಸ್.
ವಿದ್ಯಾಭ್ಯಾಸ- ಎಸ್‌ಎಸ್‌ಎಲ್‌ಸಿ.
ವೃತ್ತಿ- ಬಿಟಿಎಸ್ ಕಂಡಕ್ಟರ್, ಬ್ಯಾಡ್ಜ್ ನಂಬರ್ 6259.
ಊರು- ರಾಮೋಹಳ್ಳಿ, ದೊಡ್ಡ ಆಲದಮರಕ್ಕೆ ಮೂರು ಕಿ.ಮಿ. ದೂರ ಮತ್ತು ಮಂಚನಬೆಲೆ ಡ್ಯಾಂಗೆ ಹತ್ತಿರ.

ಲಕ್ಷ್ಮಿನಾರಾಯಣ ಬಿಟಿಎಸ್ ಕಂಡಕ್ಟರ್ ಆಗಿದ್ದು 20 ವರ್ಷಗಳ ಹಿಂದೆ. ಈಗ ಇವರು ಕಂಡಕ್ಟರ್ ಅಲ್ಲ, ರಿಯಲ್ ಎಸ್ಟೇಟ್ ಕಿಂಗ್!

ಕಿಂಗ್ ಎಂದು ಕರೆಯುವುದು ಸುಲಭ. ಆದರೆ ಅವರನ್ನು ನೋಡಿದರೆ, ಕಿಂಗ್ ಎಂದು ಕರೆಯಲಿಕ್ಕೆ ಇರಬೇಕಾದ ಕನಿಷ್ಠ ಕುರುಹುಗಳೂ ಕಾಣುವುದಿಲ್ಲ. ಅಂದರೆ, ಇವತ್ತಿನ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿರುವವರ ಗೆಟಪ್ಪು, ಗತ್ತು, ದಿಮಾಕು, ದೌಲತ್ತು ಯಾವುದೂ ಇಲ್ಲ. ಮೂರ್‍ನಾಲ್ಕು ಐಶಾರಾಮಿ ವೆಹಿಕಲ್‌ಗಳಿಲ್ಲ, ಹಿಂದೆ ಮುಂದೆ ಸುಳಿದಾಡುವ ಶಿಷ್ಯರಿಲ್ಲ, ವೈಟ್ ಅಂಡ್ ವೈಟ್ ಸೂಟಿಲ್ಲ, ಹಣೆಯಲ್ಲಿ ಕಾಸಗಲ ಕುಂಕುಮವಿಲ್ಲ, ಇಂಪೋರ್‍ಟೆಡ್ ಗಾಗಲ್, ಶೂಸ್‌ಗಳಿಲ್ಲ, ಕತ್ತಿನಲ್ಲಿ ನಾಯಿಗೆ ಹಾಕುವಂತಹ ಭಾರೀ ತೂಕದ ಚಿನ್ನದ ಚೈನಿಲ್ಲ, ಕೈಯಲ್ಲಿ ಬ್ರೇಸ್ ಲೆಟ್ ಇಲ್ಲ, ಐದು ಬೆರಳಿಗೆ ಐದು ಉಂಗುರಗಳಂತೂ ಇಲ್ಲವೇ ಇಲ್ಲ.

ವಯಸ್ಸು ೪೧, ಆರೂವರೆ ಅಡಿ ಹೈಟು, ಕಪ್ಪು ಮೈಬಣ್ಣ, ಕಣ್ಣಿಗೊಂದು ಕನ್ನಡಕ, ಸಾಧಾರಣವೆನ್ನಿಸುವ ಡ್ರೆಸ್, ಸಾದಾ ಸೀದಾ ನಡೆ, ನುಡಿ… ಥೇಟ್ ಪಕ್ಕದ್ಮನೆ ಹುಡುಗ.

ಲಕ್ಷ್ಮಿಯವರೆ, ಮತ್ತೆ ಕಿಂಗ್ ಆಗಿದ್ದು ಹೇಗೆ?

“ನಮ್ಮದು ಬಡ ಕುಟುಂಬ, ಮನೆ ತುಂಬಾ ಮಕ್ಕಳು, ಜಮೀನಿತ್ತು, ಆದರೆ ಹುಟ್ಟುವಳಿ ಇರ್‍ಲಿಲ್ಲ. LNR1ನಮ್ ತಂದೆಯವರು ಬಿಟಿಎಸ್‌ನಲ್ಲಿ ಮೆಕ್ಯಾನಿಕ್ ಆಗಿದ್ದರು. 1987 ರಲ್ಲಿ, ನಾನಿನ್ನೂ ಆಗ ಚಿಕ್ಕ ಹುಡುಗ, ನಮ್ಮಪ್ಪ ತೀರಿಕೊಂಡರು. ಅನುಕಂಪದ ಆಧಾರದ ಮೇಲೆ ನಮ್ಮ ಮನೆಯಲ್ಲಿ ಯಾರಿಗಾದರೂ ಕೆಲಸ ಕೊಡಲಿಕ್ಕೆ, ಆಗ ನಾವ್ಯಾರೂ ಎಸ್‌ಎಸ್‌ಎಲ್‌ಸಿ ಕೂಡ ಮಾಡಿರ್‍ಲಿಲ್ಲ. ಗೌರ್‍ಮೆಂಟ್ ಕೆಲಸ ಬಿಟ್ರೆ ಹೋಗ್ತದಲ್ಲ ಅಂತ ಕಷ್ಟಬಿದ್ದು ನಾನೇ ಎಸ್‌ಎಸ್‌ಎಲ್‌ಸಿ ಮುಗಿಸಿದೆ, ಅಪ್ಪ ಸತ್ತು ಮೂರು ವರ್ಷಕ್ಕೆ ನನಗೆ ಬಿಟಿಎಸ್ ಕಂಡಕ್ಟರ್ ಕೆಲಸ ಸಿಕ್ತು. ನನ್ನ ಬ್ಯಾಡ್ಜ್ ನಂಬರ್ 6259. ಮೊದಲು ನಾನು ಕೆಲಸ ಮಾಡಿದ್ದು ಬೆಂಗಳೂರಿನ ಬಿಟಿಎಸ್‌ನ 11 ನೇ ಡಿಪೋನಲ್ಲಿ.

“1991 ರಿಂದ 1998 ರವರೆಗೆ ಬಿಟಿಎಸ್‌ನಲ್ಲಿ ನಾನು ಕಂಡಕ್ಟರ್ ಕೆಲಸ ಮಾಡಿದೆ. ಸಿಟಿ ಸುತ್ತಾಡ್ತಾ, ಟಿಕೆಟ್ ಹರೀತಾ, ರಿಯಲ್ ಎಸ್ಟೇಟ್ ವ್ಯವಹಾರದತ್ತ ಗಮನ ಹರಿಸಿದೆ. ನನಗೆ ಆಗ ಅದು ರಿಯಲ್ ಎಸ್ಟೇಟ್ ಅಂತಾನೂ ಗೊತ್ತಿರಲಿಲ್ಲ. ಎಕ್ಸ್‌ಟ್ರಾ ಇನ್‌ಕಮ್ ಬರೋ ಒಂದು ವ್ಯವಹಾರ ಅಂತ ಗೊತ್ತಿತ್ತು, ಓಡಾಡ್ತಾ ಇದ್ದೆ. ಎಷ್ಟರಮಟ್ಟಿಗೆ ಅಂದ್ರೆ ಕಂಡಕ್ಟರ್ ಕೆಲಸಕ್ಕೆ ಚಕ್ಕರ್ ಹೊಡೆದು, ಯಾರ್‍ಯಾರಿಂದೇನೋ ಹೋಗ್ತಿದ್ದೆ, ಇಡೀ ದಿನ ಅಲೆದರೂ ಒಂದು ರೂಪಾಯಿ ಗಿಟ್ತಿರಲಿಲ್ಲ. ಹಿಂಗೆ 1992 ರಿಂದ 2000 ದವರೆಗೆ, ಸುಮಾರು ಎಂಟು ವರ್ಷ ಸಾರ್… ಒಂದೇ ಒಂದು ವ್ಯವಹಾರವೂ ಕುದುರಲಿಲ್ಲ. ಅತ್ತ ಅಬ್ಸೆಂಟ್ ಆಗಿ, ಸಸ್ಪೆಂಡ್ ಆಗಿ ಕಂಡಕ್ಟರ್ ಕೆಲಸವೂ ಹೋಯ್ತು. ಲೈಫ್ ಬಗ್ಗೆ ಭಾರೀ ಬೇಜಾರಾಯ್ತು. ಮನೆ ಪರಿಸ್ಥಿತಿ ಬೇರೆ ಸರಿಯಿರಲಿಲ್ಲ. ಬದುಕೋದೆ ಕಷ್ಟ ಅನ್ನಿಸಿಬಿಡ್ತು.

“ಇಂಥ ಸಂದರ್ಭದಲ್ಲಿಯೇ, ಒಂದಿನ ನನ್ನ ಫ್ರೆಂಡ್ ಒಬ್ಬ ಬಂದು, ‘ನಮ್ಮ ಪರಿಚಯದವರೊಬ್ಬರು ಪೆಪ್ಸಿ ಕಂಪನಿಲಿದಾರೆ, ವಿನಾಯಕ ನಗರದಲ್ಲಿ ಅವರದೊಂದು ಸೈಟ್ ಇದೆ, ಮಾರಾಟ ಮಾಡಿಸಿಕೊಡು’ ಅಂದ. ನಾನು ಅವರನ್ನು ಮೀಟ್ ಮಾಡಿ, ರೇಟ್ ಕೇಳಿ, ಗಿರಾಕಿಗಳನ್ನು ಹುಡುಕೋಕೆ ಶುರು ಮಾಡಿದೆ. ಅದೇನು ಗ್ರಹಚಾರವೋ ಯಾರೊಬ್ರು ಮುಂದೆ ಬರಲಿಲ್ಲ, ಇದೂ ಕೂಡ ಸಾಧ್ಯವಾಗಲಿಲ್ಲವಲ್ಲ ಎಂದು ಕಂಗಾಲಾದೆ. ಕೊನೆಗೊಂದು ನಿರ್ಧಾರಕ್ಕೆ ಬಂದು, ಎಲ್ಲೆಲ್ಲೋ ಸಾಲಸೋಲ ಮಾಡಿ ೮ ಸಾವಿರ ಹೊಂದಿಸಿಕೊಂಡು ಆ ಸೈಟನ್ನ ನಾನೇ ಕೊಂಡುಕೊಂಡೆ. ಅದೇ ನೋಡಿ ನಾನ್ ಮಾಡಿದ ಮೊಟ್ಟಮೊದಲ ರಿಯಲ್ ಎಸ್ಟೇಟ್ ಡೀಲು. ಆ ಸೈಟ್ ಕೊಂಡು ಎಂಟು ತಿಂಗಳಿಗೆ ಒಂದು ಒಳ್ಳೆ ಆಫರ್ ಬಂತು, 40 ಸಾವಿರಕ್ಕೆ ಆ ಸೈಟ್ ಮಾರಾಟ ಆಯ್ತು. ಎಂಟು ವರ್ಷದಲ್ಲಿ ಸಿಗದಿದ್ದದ್ದು ಎಂಟೇ ತಿಂಗಳಲ್ಲಿ ಸಿಕ್ತು.

“ಆ 40 ಸಾವಿರದಲ್ಲಿ ನಾನು… ನಮ್ಮೂರಿನ ಶ್ಯಾನುಭೋಗರ ಮಗ, ‘ನನ್ ಒಂದು ಎಕರೆ ಜಮೀನು ಮಾರ್‍ತೀನಿ ಗಿರಾಕಿ ಇದ್ರೆ ನೋಡಿ’ ಅಂತ ಹೇಳಿದ್ದು ನೆನಪಾಯಿತು, ಅವತ್ತು ಅಮಾವಾಸ್ಯೆ ರಾತ್ರಿ, ಸಾಮಾನ್ಯವಾಗಿ ಮಾರೋರು, ಕೊಳ್ಳೋರು ಯಾರು ಅವತ್ತು ಮಾತೂ ಆಡಲ್ಲ, ನಾನು ಅದ್ನೇನು ನೋಡ್ಲಿಲ್ಲ, ಅವರೂ ಕೇಳ್ಲಿಲ್ಲ, ಒಂದು ಎಕರೆ ಜಮೀನು 1 ಲಕ್ಷ 90 ಸಾವಿರಕ್ಕೆ ಮಾತಾಯಿತು. ಕೈಯಲ್ಲಿದ್ದ 40 ಸಾವಿರ ಅಡ್ವಾನ್ಸ್ ಅಂತ ಅವರ ಮುಂದೆ ಇಟ್ಟೆ, ಅಗ್ರಿಮೆಂಟ್ ಮಾಡಿಕೊಂಡು ಬಂದೆ. ಐದಾರು ತಿಂಗಳಲ್ಲಿ ಅದೇ ಒಂದು ಎಕರೆ ಜಮೀನು, ನೀವು ನಂಬಲ್ಲ, 6 ಲಕ್ಷಕ್ಕೆ ಮಾರಾಟ ಆಯ್ತು. 40 ಸಾವಿರದಿಂದ 4 ಲಕ್ಷಕ್ಕೆ ಸಡನ್ ಜಂಪ್ ಆದೆ.

“ಈ ವ್ಯವಹಾರದಲ್ಲಿ ಒಂದು ಟ್ರಿಕ್ ಇದೆ, ಎಲ್ಲರೂ ಏನ್ ಮಾಡ್ತರೆ, ಕೈಗೆ ದುಡ್ಡು ಬರ್ತಿದ್ದಹಾಗೆ ಗಾಡಿ, ಕ್ಲಬ್ಬು, ಕುಡಿತ, ಫ್ರೆಂಡ್ಸು ಅಂತ ಶೋಕಿಗೇ ಸಿಕ್ಕಾಪಟ್ಟೆ ಖರ್ಚು ಮಾಡ್ತರೆ. ಆದರೆ ನನಗೆ ಬಡತನ ಬೆನ್ನಿಗಿತ್ತಲ್ಲ, ಅದು ಬಿಡಲಿಲ್ಲ. ನಾಲ್ಕು ಲಕ್ಷವನ್ನು ಹತ್ತಾರು ಪ್ರಾಪರ್ಟಿ ಮೇಲೆ ಹಾಕ್ದೆ, ಅಗ್ರಿಮೆಂಟ್ ಮಾಡ್ಕೊಂಡೆ, ಹತ್ತಾರು ವರ್ಷ ಅದೇ ವ್ಯವಹಾರದಲ್ಲಿ ಓಡಾಡ್ತಿದ್ನಲ್ಲ, ಗಿರಾಕಿಗಳನ್ನು ಹಿಡಿಯೋದು, ಮಾರಾಟ ಮಾಡೋದು, ರಿಜಿಸ್ಟ್ರೇಷನ್ನು ಎಲ್ಲ ಗೊತ್ತಿತ್ತು, ಅನುಕೂಲ ಆಯ್ತು. ಅದರಲ್ಲೂ 2003 ರಿಂದ 2007 ರವರೆಗಿನ ಟೈಮ್ ಇದೆಯಲ್ಲ, ಅದು ರಿಯಲ್ ಎಸ್ಟೇಟ್‌ನ ಪ್ರೈಮ್ ಟೈಮು. ಬೂಮ್ ಟೈಮು, ಆಗ ನಾನು ಕ್ಲಿಕ್ ಆದೆ… ನಿಮ್ಮ ಪ್ರಕಾರ ‘ಕಿಂಗ್’ ಅಂತಿದೀರಲ್ಲ ಅದಾದೆ.”

ರಾಮೋಹಳ್ಳಿಯ ವ್ಯಾಪ್ತಿಗೆ ಬರುವ ಮೂರೂವರೆ ಎಕರೆ ಜಮೀನನ್ನು ಹೀಗೆಯೇ 18 ಲಕ್ಷಕ್ಕೆ ಖರೀದಿಸಿದ್ದ ಲಕ್ಷ್ಮಿನಾರಾಯಣ ರಾಜ ಅರಸ್, ಅದರ ಅರ್ಧ ಎಕರೆಯನ್ನು ಕೇವಲ ಒಂದು ವರ್ಷದ ಅವಧಿಯೊಳಗೆ 20 ಲಕ್ಷಕ್ಕೆ ಮಾರಿದ್ದರು. ಅಷ್ಟೇ ಅಲ್ಲ, ಮಿಕ್ಕ ಮೂರು ಎಕರೆಯಲ್ಲಿ, ಅದರಿಂದಲೇ ಬಂದ 20 ಲಕ್ಷ ಹಣವನ್ನು ವಿನಿಯೋಗಿಸಿ, ಸುತ್ತಮುತ್ತಲ ಹಳ್ಳಿಯ ಮಕ್ಕಳಿಗಾಗಿ 1 ರಿಂದ 10 ರ ತನಕದ ಸ್ಕೂಲ್‌ವೊಂದನ್ನು ತೆರೆದಿದ್ದರು. LNR5ಸ್ಕೂಲಿಗೆ ‘ಎಲ್‌ಎನ್‌ಆರ್ ವಿದ್ಯಾ ಸಂಸ್ಥೆ’ ಎಂದು ಹೆಸರಿಟ್ಟಿದ್ದರು. ಆ ಸ್ಕೂಲಿನ ಕೊಠಡಿಯಲ್ಲಿ ಕೂತು ಕಂಡಕ್ಟರ್‌ನಿಂದ ರಿಯಲ್ ಎಸ್ಟೇಟ್ ಕಿಂಗ್ ಆದ ಕತೆಯನ್ನು ಬಿಚ್ಚಿಡುತ್ತಿದ್ದರು.

ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಆ ಸ್ಕೂಲ್ ಎಷ್ಟು ವ್ಯವಸ್ಥಿತವಾಗಿದೆ ಎಂದರೆ, ನುರಿತ ಅನುಭವಿ ಟೀಚರ್‌ಗಳು, ಸುಸಜ್ಜಿತ ಕೊಠಡಿಗಳು, ಎಲ್ಲ ಕೊಠಡಿಗಳಲ್ಲೂ ಸ್ಮಾರ್ಟ್ ಬೋರ್ಡ್‌ಗಳು, ಸುತ್ತಮುತ್ತಲ ಹಳ್ಳಿಯ ಮಕ್ಕಳನ್ನು ಕರೆತರಲು ೫ ವ್ಯಾನ್‌ಗಳು, ಅದೆಲ್ಲಕ್ಕಿಂತ ಮುಖ್ಯವಾಗಿ ಕೈಗೆಟುಕುವ ದರದಲ್ಲಿ ಸ್ಕೂಲ್ ಫೀಸು. ಸ್ಕೂಲ್ ಶುರು ಮಾಡಿ ಮೂರು ವರ್ಷಗಳಾಗಿವೆ, ಆಗಲೇ 600 ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಕುತೂಹಲಕರ ಸಂಗತಿ ಎಂದರೆ, ಆ ಅಷ್ಟೂ ಮಕ್ಕಳು ಸ್ಕೂಲ್‌ನ ಮಾಲೀಕ ಲಕ್ಷ್ಮಿಯನ್ನು ಬಹಳವಾಗಿ ಇಷ್ಟಪಡುತ್ತವೆ ಮತ್ತು ಎಲ್ಲೇ ಇದ್ದರೂ ಗುರುತು ಹಿಡಿದು ಮಾತನಾಡಿಸುತ್ತವೆ.

ಈ ವ್ಯಕ್ತಿಯ ವಿಶೇಷತೆ ಇಷ್ಟೇ ಅಲ್ಲ, ವ್ಯವಹಾರ ಗರಿಗಟ್ಟಿದ ಮೇಲೆ, ಹಣ ದ್ವಿಗುಣಗೊಂಡ ಮೇಲೆ ಅವರಿಗಾಗಿ ಒಂದು ಫಾರ್ಮ್ ಹೌಸ್ ಕಟ್ಟಿಸಿಕೊಂಡರು. ಆದರೆ ಅದೇನನ್ನಿಸಿತೋ, ಅದನ್ನು ‘ಆಸರೆ ಸೇವಾ ಟ್ರಸ್ಟ್’ ಎಂಬ ಅನಾಥಾಶ್ರಮಕ್ಕೆ ಬರೆದು ಕೊಟ್ಟರು. ಅವರೇ ಖುದ್ದು ನಿಂತು, ಅನಾಥಾಶ್ರಮಕ್ಕೆ ಒಂದು ಟ್ರಸ್ಟ್ ರಚಿಸಿ, ರಿಜಿಸ್ಟರ್ ಮಾಡಿಸಿದರು. ಅಲ್ಲೀಗ ನಾಡಿನ ಮೂಲೆ ಮೂಲೆಯಿಂದ ಬಂದ 21 ಅನಾಥ ಮಕ್ಕಳಿವೆ. ಆ ಮಕ್ಕಳಿಗೆ ಉಚಿತ ಊಟ, ಬಟ್ಟೆ, ವಸತಿ ಮತ್ತು ತಮ್ಮದೇ ಸ್ಕೂಲಿನಲ್ಲಿ ಉಚಿತ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. LNR3ಸದ್ಯಕ್ಕೆ ಅನಾಥಾಶ್ರಮಕ್ಕೆ ತಿಂಗಳಿಗೆ 40 ಸಾವಿರ ಖರ್ಚು ಬರುತ್ತಿದೆ. ಲಕ್ಷ್ಮಿ ಆ ಖರ್ಚಿಗೂ ಒಂದು ದಾರಿ ಮಾಡಿದ್ದಾರೆ. ಅದೇನೆಂದರೆ, ಲಕ್ಷ್ಮಿ ರಾಮೋಹಳ್ಳಿಯಲ್ಲಿ ಒಂದು ಸುಸಜ್ಜಿತವಾದ ಕಲ್ಯಾಣ ಮಂಟಪ ಕಟ್ಟಿಸಿದ್ದಾರೆ. ಸುತ್ತಮುತ್ತಲ ಹಳ್ಳಿಯವರಿಗಾಗಿ ಅತ್ಯಂತ ಕಡಿಮೆ ಅಂದರೆ, 2 ದಿನಕ್ಕೆ 25 ಸಾವಿರ ರೂ. ಬಾಡಿಗೆ ಪಡೆಯುತ್ತಾರೆ. ಬಡವರಾದರೆ ಅವರು ಕೊಟ್ಟಷ್ಟು ಇವರು ಪಡೆದಷ್ಟು. ಈ ಕಲ್ಯಾಣ ಮಂಟಪದಿಂದ ಬರುವ ಆದಾಯದಲ್ಲಿ, ತಿಂಗಳಲ್ಲಿ ಒಂದು ದಿನದ ಬಾಡಿಗೆಯನ್ನು ಅನಾಥಾಶ್ರಮಕ್ಕೆ ಮೀಸಲಿಟ್ಟಿದ್ದಾರೆ. ಮಿಕ್ಕಿದ್ದನ್ನು ತಮ್ಮ ಸ್ವಂತ ಜೇಬಿನಿಂದ ಹಾಕುತ್ತಿದ್ದಾರೆ.

ಜನಪರವಾಗಿ ಇರಬೇಕು ಅನ್ನಿಸಿದ್ದು ಯಾಕೆ? ಎಂದರೆ.

“ನನಗೇ ಗೊತ್ತಿರಲಿಲ್ಲ, ನಾನು ಈ ಮಟ್ಟಕ್ಕೆ ಬೆಳಿತೀನಿ ಅಂತ, ಅವತ್ತೊಂದು ದಿನ ನನಗೇನೂ ಇರಲಿಲ್ಲ, ಇವತ್ತು ಎಲ್ಲಾ ಇದೆ. ಅದೆಲ್ಲ ಬಂದಿದ್ದೇ ಈ ಜನರಿಂದ. ಅಂದಮೇಲೆ ಅದೆಲ್ಲ ಅವರಿಗೇ ಹೋಗಲಿ ಅನ್ನೋದು ನನ್ನ ಪಾಲಿಸಿ. ಅದಕ್ಕೆ ರಾಜಕಾರಣೀನೆ ಆಗಬೇಕು, ಅಧಿಕಾರವೇ ಇರಬೇಕು ಅಂತೇನಿಲ್ವಲಾ? ನೋಡಿ, ಇವತ್ತಿಗೂ ಅಪ್ಪ ಕಟ್ಟಿಸಿದ ಹಳ್ಳಿಯ ಹಳೆ ಹಂಚಿನ ಮನೆಯಲ್ಲಿಯೇ ವಾಸವಾಗಿದ್ದೇನೆ. ಮನೇಲಿ ಮಿಕ್ಸಿ ಇಲ್ಲ, ಒಳಕಲ್ಲಿದೆ. ಹಳ್ಳಿಯವರ ಜೊತೆ ಹಳ್ಳಿಯವನಾಗಿಯೇ ಇದ್ದೇನೆ. ಇದರಲ್ಲಿಯೇ ಖುಷಿ ನನಗೆ.

“ಬೆಂಗಳೂರಿನಿಂದ ಮಂಚನಹಳ್ಳಿ ಡ್ಯಾಂವರೆಗೆ ಯಾವುದೇ ಜಮೀನಿರಲಿ, ಸೈಟಿರಲಿ, ಯಾವ್ಯಾವುದು ಯಾರ್‍ಯಾರಿಗೆ ಸೇರಿದ್ದು ಅಂತ ನೋಡ್ತಿದ್ದ ಹಾಗೇ ಹೇಳ್ತೀನಿ, ಎಂಥದೇ ತಕರಾರಿರಲಿ ಬಗೆಹರಿಸ್ತೀನಿ. ಅದಕ್ಕೆ ಜನ ನನ್ನ ಹುಡಕ್ಕೊಂಡು ಬರ್‍ತಾರೆ. ನಂಬಿಕೆ ಮುಖ್ಯ. ರಿಯಲ್ ಎಸ್ಟೇಟ್ ವ್ಯವಹಾರ ಅಂದಮೇಲೆ ಅಲ್ಲಿ ಕೋರ್ಟು, ಕೇಸು, ಹೊಡೆದಾಟ, ರೌಡಿಗಳು, ಲಾಯರ್‍ಸ್, ಪೊಲೀಸು, ಎಲ್ಲ ಇದ್ದದ್ದೇ. ಆದರೆ ನಾನು ಕೈ ಹಾಕಿದ ವ್ಯವಹಾರದಲ್ಲಿ ಅದ್ಯಾವುದೂ ಇರಲ್ಲ ಅಂಥಾಲ್ಲ, ಇರ್ತದೆ ತುಂಬಾ ಕಡಿಮೆ.”

ಸಾಮಾನ್ಯವಾಗಿ ದುಡ್ಡು ಬಂದ ಮೇಲೆ, ಅದರಲ್ಲೂ ರಿಯಲ್ ಎಸ್ಟೇಟ್‌ನಿಂದ ಬಂದು ಈ ಮಟ್ಟಕ್ಕೆ ಬೆಳೆದ ಮೇಲೆ, ರಕ್ಷಣೆಗಾಗಿ ಯಾವುದಾದರೂ ಪಕ್ಷ ಸೇರಿ ರಾಜಕಾರಣಿಯಾಗುತ್ತಾರೆ, ಅಧಿಕಾರ ಪಡೆಯುತ್ತಾರೆ. ನೀವು ಆ ಹಾದಿಯಲ್ಲಿ ಏನಾದರೂ? ಎಂದರೆ.

“2005 ರಿಂದ 2010 ರವರೆಗೆ ರಾಮೋಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯನಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೆ. LNR4ಅದು ನಾನಾಗಿ ಬಯಸಿ ಆಗಿದ್ದಲ್ಲ, ಜನ ಮಾಡಿದ್ದು. ಆಗ ಜನರಿಗಾಗಿ ನನ್ನ ಕೈಲಾದ ಸೇವೆಯನ್ನೂ ಮಾಡಿದೆ. ಆದರೆ ರಾಜಕೀಯ ನಮಗಲ್ಲ… ಅದಕ್ಕೆ ಜಾತಿ, ಹಣ, ತೋಳ್ಬಲ ಅಷ್ಟೇ ಅಲ್ಲ ಇನ್ನೂ ಏನೇನೋ ಇರಬೇಕು. ರಾಮೋಹಳ್ಳಿಯಲ್ಲಿ ನಮ್ಮ ಜಾತಿಯ ಜನಗಳಿರೋದು 10 ಮನೆ. ಒಕ್ಕಲಿಗರು ಹೆಚ್ಚಾಗಿದಾರೆ. ಆದರೆ ಅವರೆಲ್ಲ ನಮ್ಮನ್ನ ಅಣ್ಣತಮ್ಮಂದಿರಂತೆಯೇ ಕಾಣ್ತರೆ. ನಾನೂ ಅಷ್ಟೆ, ಸುತ್ತಮುತ್ತಲಿನ ಹಳ್ಳಿಯ ಜನಕ್ಕೆ ನನ್ನ ಕೈಲಾದ ಸಹಾಯ ಮಾಡಿದರೆ, ಅಷ್ಟೇ ಸಾಕು. ನೋಡಿ, ಅವರ ಮಕ್ಕಳೆಲ್ಲ ನನ್ನ ಸ್ಕೂಲಿನಲ್ಲಿ ಓದ್ತಿದಾರೆ. ಕೆಲವರು ಫೀಸು ಕಟ್ಟಕ್ಕಾಗದೆ ಇದ್ರು ಅವರಿಗೆಲ್ಲ ನನ್ನ ಸ್ಕೂಲಿನಲ್ಲಿ ಸೀಟ್ ಕೊಟ್ಟಿದೀನಿ. ಅವರ್‍ನ ಅಷ್ಟೆ ಪ್ರೀತಿಯಿಂದ ನೋಡ್ಕೊಂಡಿದೀನಿ. ಇದಕ್ಕೆ ರಾಜಕೀಯ ಯಾಕ್ ಬೇಕೇಳಿ… ಜೊತೆಗೆ ಈಗ ನನಗೆ ರಾಜಕೀಯಕ್ಕಿಂತ ಈ ಕಲ್ಯಾಣ ಮಂಟಪ, ಸ್ಕೂಲು, ಅನಾಥಾಶ್ರಮ… ಸಮಾಜ ಸೇವಾ ಕಾರ್ಯಗಳನ್ನು ಚೆನ್ನಾಗಿ ನಡೆಸಿಕೊಂಡು ಹೋದ್ರೆ ಸಾಕು.”

ನಿಮ್ಮ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿಮಗಾದ ವಿಚಿತ್ರ ಅನುಭವಗಳು?

“ಈ ವ್ಯವಹಾರಾನೇ ವಿಚಿತ್ರ. ಬೆಂಗಳೂರಿನ ಸುತ್ತಮುತ್ತಲ ಜಾಗ ಇದೆಯಲ್ಲ, ಇದು ಮಣ್ಣಲ್ಲ ಹೊನ್ನು. ಇವತ್ತು ಎಲ್ರೂ, ಕಸ ಗುಡಿಸುವ ಜವಾನರಿಂದ ಹಿಡಿದು ಐಎಎಸ್ ಅಧಿಕಾರಿಗಳವರೆಗೆ, ಪೆಟ್ಟಿಗೆ ಅಂಗಡಿಯ ಮಾಲೀಕನಿಂದ ಫಿಲ್ಮ್ ಪ್ರೊಡ್ಯೂಸರ್‌ಗಳವರೆಗೆ, ಪುಡಿ ಪುಢಾರಿಗಳಿಂದ ಮಂತ್ರಿಗಳವರೆಗೆ, ಲೋಕಲ್ ರೌಡಿಗಳಿಂದ ಡಾನ್‌ಗಳವರೆಗೆ, ಪೊಲೀಸ್ ಪೇದೆಯಿಂದ ಐಪಿಎಸ್ ಆಫೀಸರ್‌ವರೆಗೆ… ಇಂಥೋರಿಲ್ಲ ಅನ್ನುವ ಹಾಗೇ ಇಲ್ಲ, ಎಲ್ಲರೂ ರಿಯಲ್ ಎಸ್ಟೇಟ್ ವ್ಯವಹಾರ ಮಾಡೋರೆ. ಎಲ್ರೂ ಕಾಗದ ಪತ್ರ ಹಿಡಕ್ಕೊಂಡು ಓಡಾಡರೆ, ಎಲ್ಲೋದ್ರು ಅದೇ ಮಾತೆ. ಯಾಕಂದ್ರೆ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಹಾಗಿದೆ. ಇವತ್ತು ಭಿಕಾರಿಯಾಗಿದ್ದೋನು ನಾಳೆ ಇದ್ದಕ್ಕಿದ್ದಂತೆ ಕೋಟ್ಯಧಿಪತಿಯಾಗಬಹುದು. ಹಣ ಎಲ್ಲರಲ್ಲೂ ಆಸೆ ಹುಟ್ಟಿಸಿಬಿಟ್ಟಿದೆ. ಆದರೆ ಎಲ್ಲರೂ ಶ್ರೀಮಂತರಾಗಲಿಕ್ಕಾಗಲ್ಲ, ಎಲ್ಲರಿಗೂ ಈ ವ್ಯವಹಾರ ಮಾಡಕ್ಕಾಗಲ್ಲ.

“ಈಗ ನನ್ನದೇ ಅನುಭವ ತಗೊಂಡ್ರೆ, ನನ್ನ ಜೊತೆ ಜೊತೆಗೇ ನಮ್ಮ ಸುತ್ತಮುತ್ತಲಿನ ಹಳ್ಳಿಯ ಸುಮಾರು 25 ಜನ ನನ್ನ ಸ್ನೇಹಿತರೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡ್ತಿದ್ದರು. ಈ 25 ರಲ್ಲಿ ನಾನೊಬ್ಬನೇ, ಇವತ್ತು ಈ ಮಟ್ಟಕ್ಕೆ ಇರೋದು. ಉಳಿದೋರೆಲ್ಲ… ಕೆಲವರು ಉಳಿದೇ ಇಲ್ಲ. ಸಿಕ್ಕಾಪಟ್ಟೆ ದುಡ್ಡು, ಸಿಕ್ಕಾಪಟ್ಟೆ ರಿಸ್ಕು… ಅಷ್ಟೇ ಸಾರ್.

“ವಿಚಿತ್ರ ಅನುಭವ ಕೇಳಿದ್ರಲ್ವಾ… ಒಂದು ಸೈಟಿತ್ತು. ಅದಕ್ಕೆ ನಾನೇ ಮೊದಲ ಮೀಡಿಯೇಟರ್. ನೀವು ನಂಬ್ತೀರಾ, ಅದು ಇಲ್ಲಿಯವರೆಗೆ ಏಳು ಕೈ ಬದಲಾಗಿದೆ, ಏಳಕ್ಕೂ ನಾನೇ ಮೀಡಿಯೇಟರ್. ಮೊದಲ ಸಲ ಮಾರಾಟವಾದ ಆ ಸೈಟಿನ ಅಮೌಂಟಿತ್ತಲ್ಲ, ಅಷ್ಟೇ ಅಮೌಂಟು ನನಗೆ ಕಮಿಷನ್ ಬಂದಿದೆ. ಈ ಕಮಿಷನ್ ಹೇಗೆ ಅಂದ್ರೆ, 25 ಸಾವಿರದಿಂದ 50 ಸಾವಿರದವರೆಗಿನ ವ್ಯವಹಾರ ಆದ್ರೆ 2%. 50 ಸಾವಿರದಿಂದ ಮೇಲೆ ಎಷ್ಟೇ ಕೋಟಿಯಾಗಲಿ 1% ಕಮಿಷನ್.”

ಇವತ್ತಿನ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಯಾರ ಕೈಯಲ್ಲಿದೆ?

“ಹಳ್ಳಿಯ ಜನರ ಕೈಯಲ್ಲಂತೂ ಇಲ್ಲ. ಜಮೀನಾದ್ರು ಇದೆಯಾ ಅಂದ್ರೆ ಅದೂ ಇಲ್ಲ. ಇವತ್ತಿನ ರಿಯಲ್ ಎಸ್ಟೇಟ್ ಪೂರ್ತಿ ಉಳ್ಳವರ ಕೈಯಲ್ಲಿದೆ. ಹಾಗೆಯೇ ಶೇಠುಗಳು, ಶೆಟ್ರುಗಳು, ಮಾರ್ವಾಡಿಗಳು, ರಾಜಕಾರಣಿಗಳು, ಸ್ವಾಮೀಜಿಗಳ ಕೈಯಲ್ಲಿದೆ. ಆದರೆ ಅವರ್‍ಯಾರೂ ಓಪನ್ನಾಗಿ ಕಾಣಿಸಿಕೊಳ್ಳೋದಿಲ್ಲ. ಲೋಕಲ್ ಜನಗಳನ್ನು ಮುಂದೆ ನಿಲ್ಲಿಸ್ತಾರೆ, ಹಣ ಹಾಕ್ತರೆ, ನೂರಾರು ಎಕರೆ ಜಮೀನು ತೆಗೀತರೆ. ಬರೀ ಕೈ ಬದಲಾಗೋದ್ರೊಳಗೆ ಕೋಟ್ಯಂತರ ರೂಪಾಯಿ ದುಡೀತಾರೆ…. ಹಂಗೇ ಕೋಟ್ಯಂತರ ಕಳಕೊಂಡಿರೋರು, ನೂರಾರು ಥರದ ಮೋಸಕ್ಕೆ ಒಳಗಾಗಿರೋರು ಇಲ್ಲಿ ಬೇಕಾದಷ್ಟು ಜನ ಇದಾರೆ…”, ಎನ್ನುವ ಲಕ್ಷ್ಮಿನಾರಾಯಣ ರಾಜ ಅರಸ್, ತಾವೂ ಅದೇ ಹೊಸಗಾಲದ ವ್ಯವಹಾರದಲ್ಲಿದ್ದರೂ, ದುಡಿದ ದುಡ್ಡಿಂದ ಮತ್ತಷ್ಟು ಹಣ ಮಾಡುವ ಉದ್ದಿಮೆಗಳತ್ತ ಎಲ್ಲರ ಗಮನವಿದ್ದರೂ, ಸಮಾಜ ಸ್ಮರಿಸಿಕೊಳ್ಳುವ ಸೇವೆ ಸಲ್ಲಿಸಬೇಕು ಎಂಬುದರತ್ತ ತುಡಿಯುವ, ಎಲ್ಲರೊಂದಿಗೆ ಬೆರೆತು ಬಾಳುವುದರಲ್ಲಿಯೇ ಖುಷಿ ಕಾಣುವ ಅಪರೂಪದ ಆಸಾಮಿ. ಅವರೇ ಬೇರೆ, ಅವರ ಶೈಲಿಯೇ ಬೇರೆ… ರಜನೀಕಾಂತ್ ಥರ.