ಸಿದ್ದಿಕಿ ಪ್ರಕರಣ : ಆಗಿದ್ದೇನು? ಅನ್ಯಾಯಕ್ಕೆ ನ್ಯಾಯ ಹೇಗೆ?

– ಗೌತಮ್ ರಾಜ್

ಆರು ತಿಂಗಳ ಹಿಂದಿನ ಮಾತು; ಬೆಂಗಳೂರು ಪೋಲೀಸರ ಅಂಗ ಸಂಸ್ಥೆಯಾಗಿರುವ ಸೆಂಟ್ರಲ್ ಕ್ರೈಂ ಬ್ರಾಂಚ್ ಆಗಸ್ಟ್ 29, 2012 ರಂದು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಒಟ್ಟು ಹನ್ನೊಂದು ಜನ ಮುಸ್ಲಿಂ ಯುವಕರನ್ನು ಬಂಧಿಸಿತು. ಮರುದಿನ ರಾಜ್ಯದ ಡಿಜಿಪಿ ಲಾಲ್ ರುಕೊಮಾ ಪಚಾವೋ ಪತ್ರಿಕಾ ಘೋಷ್ಠಿಯಲ್ಲಿ ಈ ವಿವರಗಳನ್ನು ರಾಜ್ಯದ ಜನತೆಯ ಮುಂದೆ ಮಂಡಿಸಿದರು – ಈ ಹನ್ನೊಂದು ಜನ ಯುವಕರು ಲಷ್ಕರ್-ಎ-ತೊಯ್ಬಾ ಮತ್ತು ಹುಜಿ ಉಗ್ರವಾದಿ ಸಂಸ್ಥೆಗಳಿಗೆ ಕೆಲಸ ಮಾಡುತ್ತಿದ್ದು, ಮೊದಲ ಬಾರಿಗೆ ಬಾಂಬು ಸಿಡಿಸುವುದನ್ನು ಕೈಬಿಟ್ಟು ಟಾರ್ಗೆಟೆಡ್ ಅಸಾಸಿನೇಷನ್‌ಗೆ ಕೈಹಾಕಿದ್ದು, ಅವರು ಕನ್ನಡಪ್ರಭ ಪತ್ರಿಕೆಯ ಸಂಪಾದಕ ವಿಶ್ವೇಶ್ವರ ಭಟ್, ಅಂಕಣಕಾರ ಪ್ರತಾಪ ಸಿಂಹ,  VRL ಸಂಸ್ಥೆಯ ಮಾಲೀಕ ವಿಜಯ ಸಂಕೇಶ್ವರ, ಮತ್ತು ಹುಬ್ಬಳ್ಳಿಯ ಸಂಸದ ಪ್ರಹ್ಲಾದ್ ಜೋಶಿಯವರನ್ನು ಮುಗಿಸಲು ಸಂಚು ರೂಪಿಸಿದ್ದರು – ಎಂದು. ಅವತ್ತು ಸಿಸಿಬಿಯವರು ಒಂದು ಬಂದೂಕನ್ನು ಕೂಡ ವಶಪಡಿಸಿಕೊಂಡಿದ್ದರು.

ಈ ವಿವರಗಳು ಹೊರಬೀಳುತ್ತಿದ್ದಂತೆಯೇ ನಾಡಿನ ಜನರನ್ನು ಬೆಚ್ಚಿಬೀಳಿಸಿದ್ದು ಬಂಧಿತ ಯುವಕರ ವಿವರಗಳು. ಬಂಧಿತರಲ್ಲಿ ಒಬ್ಬsiddiqui ಮುತಿ-ಉರ್-ರೆಹಮಾನ್ ಸಿದ್ದಿಕಿ, ಪ್ರತಿಷ್ಠಿತ ಪ್ರಜಾವಾಣಿ ಸಮೂಹದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪತ್ರಕರ್ತನಾಗಿದ್ದ, ಮತ್ತೊಬ್ಬ ಐಜಾಜ್ ಅಹಮದ್ ಮಿರ್ಜಾ ಅತಿ ಸುನ್ನಿತವಾದ ಡಿಆರ್‌ಡಿಒ ಸಂಸ್ಥೆಯಲ್ಲಿ ವಿಜ್ಞಾನಿಯಾಗಿದ್ದ, ಒಬ್ಬ ಎಂಸಿಎ ವಿದ್ಯಾರ್ಥಿ, ಒಬ್ಬ ವೈದ್ಯ, ಮತ್ತೊಬ್ಬನ ತಂದೆ ಸದ್ಯ ಸೇವೆಯಲ್ಲಿರುವ ಅರಣ್ಯ ಅಧಿಕಾರಿ. ಪ್ರಜ್ಞಾವಂತರು ನಿಜಕ್ಕೂ ಬೆಚ್ಚಿಬಿದ್ದಿದ್ದರು.

ನಂತರ ಕೂಡ ಇನ್ನೂ ನಾಲ್ಕು ಜನರನ್ನು ನಗರದಿಂದಲೇ ಸಿಸಿಬಿ ಪೋಲೀಸರು ಬಂಧಿಸಿದರು. ಅಲ್ಲಿಗೆ ಒಟ್ಟಾರೆ 15 ಜನರನ್ನು ಈ ಪ್ರಕರಣದ ಸಂಬಂಧ ಬಂಧಿಸಲಾಯಿತು. ಆ ನಂತರದಲ್ಲಿ ಮಾದ್ಯಮದ ವರದಿಗಳನ್ನೂ ನೀವು ಓದಿಯೇ ಇರುತ್ತೀರಿ – ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಿಕಿ ಈ ಗುಂಪಿನ ನಾಯಕನೆಂದೂ, ಅಸಲು ಆತ ಡೆಕ್ಕನ್ ಹೆರಾಲ್ಡ್ ಪತ್ರಿಕೆಗೆ ಕೆಲಸಕ್ಕೆ ಸೇರಿದ್ದೇ ಅದರ ಎದುರಿರುವ ಮೆಟ್ರೋವನ್ನು ಉಡಾಯಿಸಲು ಎಂಬಲ್ಲಿಂದ ಹಿಡಿದು ಎಲ್ಲ ಗಾಳಿಪಟಗಳಿಗೂ ಸಂಕ್ರಾಂತಿಯ ಸಂಭ್ರಮ! ಈ ಎಲ್ಲ ಪಟಗಳನ್ನೂ ಹಾರಿಸುತ್ತಿದ್ದದ್ದು ಈ ಪ್ರಕರಣದ ತನಿಖೆ ನಡೆಸುತ್ತಿದ್ದವರೇ!

ಆ ನಂತರ ನವೆಂಬರ್‌ನಲ್ಲಿ ಈ ಪ್ರಕರಣದ ತನಿಖೆಯನ್ನು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ (NIA) ಕೈಗೆತ್ತಿಕೊಂಡಿತು. ಮೊನ್ನೆ ಬುಧವಾರ ಫೆಬ್ರವರಿ 20ನೇ ತಾರೀಖು ಎನ್‌ಐಎ ಈ ಪ್ರಕರಣದಲ್ಲಿ ಆರೋಪಟ್ಟಿಯನ್ನು ಸಲ್ಲಿಸಿದೆ. ಎನ್‌ಐಎ ಹೊರಡಿಸಿರುವ ಪತ್ರಿಕಾ ಹೇಳಿಕೆಯಲ್ಲಿ ಅನೇಕ ವಿಷಯಗಳನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಈ ಮೊದಲೇ ಹೇಳಿದ ಹಾಗೆ ಈ ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 15. ಎನ್‌ಐಎ ಈಗ ಒಟ್ಟು 12 ಮಂದಿಯ ಮೇಲೆ ಆರೋಪಟ್ಟಿಯನ್ನು ಸಲ್ಲಿಸಿದೆ. ಈ ಹನ್ನೆರಡು ಮಂದಿಯಲ್ಲಿ 11 ಮಂದಿ ಈಗಾಗಲೇ ಬಂಧಿತರಾಗಿದ್ದರೆ, ಒಬ್ಬ ಜಾಕೀರ್ ಉಸ್ತಾದ್ ಸೌದಿ ಅರೇಬಿಯಾದಲ್ಲಿ ಕೂತಿರುವ ಹ್ಯಾಂಡ್ಲರ್. ಅಲ್ಲಿಗೆ ಒಟ್ಟು ಬಂಧಿತ 15 ಮಂದಿಯಲ್ಲಿ ನಾಲ್ವರ ವಿರುದ್ಧ ಎನ್‌ಐಎ ಆರೋಪಟ್ಟಿಯನ್ನು ಸಲ್ಲಿಸಿಲ್ಲ. ಇಲ್ಲಿರುವುದು ಸುದ್ದಿ.

ಎನ್‌ಐಎ ಮೂಲಗಳು ತಿಳಿಸುವಂತೆ ಮತ್ತು ಆರೋಪಪಟ್ಟಿಯ ಪ್ರತಿಯನ್ನು ಸ್ವತಃ ನಾನು ಕಂಡಿರುವಂತೆ, ಈ ನಾಲ್ವರು – ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ, ಸೈಯದ್ ಯೂಸುಫ್ ನಳಬಂದ್, ಐಜಾಜ್ ಅಹಮದ್ ಮಿರ್ಜಾ ಮತ್ತು ಸೈಯದ್ ತಂಜೀಮ್. ಈ ನಾಲ್ವರಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಎನ್‌ಐಎ ಅತ್ಯಂತ ಸ್ಪಷ್ಟವಾಗಿ ಹೇಳಿದೆ: “ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ ಮತ್ತು ಸೈಯದ್ ಯೂಸುಫ್ ನಳಬಂದ್ ಅವರ ವಿರುದ್ಧ ನಮಗೆ ಯಾವುದೇ ಸಾಕ್ಷ್ಯಾದಾರಗಳು ಸಿಕ್ಕಿಲ್ಲವಾದ್ದರಿಂದ ಅವರನ್ನು ಎಲ್ಲ ಆರೋಪಗಳಿಂದಲೂ ವಿಮುಕ್ತಗೊಳಿಸುತ್ತಿದ್ದೇವೆ. ಇನ್ನು ಐಜಾಜ್ ಅಹಮದ್ ಮಿರ್ಜಾ ವಿರುದ್ಧ ಇನ್ನೂ ತನಿಖೆ ಬಾಕಿಯಿದ್ದು ಅದಕ್ಕೆ ಮತ್ತಷ್ಟು ಕಾಲಾವಕಾಶ ನೀಡಬೇಕು. ಸದ್ಯದ ಮಟ್ಟಿಗೆ ಆತನ ವಿರುದ್ಧವೂ ಪ್ರಬಲ ಸಾಕ್ಷ್ಯಾಧಾರಗಳಿಲ್ಲ. ಇನ್ನು ನಾಲ್ಕನೆಯ ಸೈಯದ್ ತಂಜೀಮ್ – ಈತನನ್ನು ಬಂಧಿಸಿದ್ದೇ ನವೆಂಬರ್‌ನಲ್ಲಿ. ಹಾಗಾಗಿ ಈತನ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಇನ್ನೂ ಒಂದು ತಿಂಗಳ ಕಾಲಾವಕಾಶವಿದೆ. ಹಾಗಾಗಿ ಈ ನಾಲ್ವರ ವಿರುದ್ಧ ಆರೋಪಪಟ್ಟಿಯನ್ನು ಸಲ್ಲಿಸಿಲ್ಲ.”

ಅಲ್ಲಿಗೆ ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ ಇಷ್ಟರಲ್ಲೇ ಗೌರವಯುತವಾಗಿ ಹೊರಬರುವ ಸಾಧ್ಯತೆಗಳಿವೆ. ಉಗ್ರವಾದಿಗಳ ತಂಡದ ನಾಯಕನೆಂದೇ ಬ್ರಾಂಡ್ ಆಗಿಹೋಗಿದ್ದ ಸಿದ್ಧಿಕಿಯನ್ನು ಎನ್‌ಐಎ ದೋಷಮುಕ್ತಗೊಳಿಸಿದೆ. ಆರು ತಿಂಗಳ ಕಾಲ ಜೈಲಿನಲ್ಲಿ ಕೊಳೆತ ಮೇಲೆ, ಉಗ್ರವಾದಿಯೆಂಬ ಅಪಾದನೆಯನ್ನು ಹೊತ್ತ ಮೇಲೆ ಈಗ ಕಡೆಗೂ ನ್ಯಾಯ ಸಿಕ್ಕಿದೆ, ಇಲ್ಲವೆನ್ನುತ್ತಿಲ್ಲ. ಆದರೆ ಇದು ನ್ಯಾಯವೇ?

ಒಂದು ಕ್ಷಣ – ಇಫ್ತಿಕಾರ್ ಗಿಲಾನಿ, ಶಹಿನಾ ಕೆಕೆ, ನವೀನ್ ಸೂರಿಂಜೆ ಮತ್ತಿತರೆ ಪತ್ರಕರ್ತರ ಪ್ರಕರಣಗಳೊಂದಿಗೆ ಈ ಪ್ರಕರಣವನ್ನು ಜೊತೆಗೂಡಿಸಿ ಇದು ಸರ್ಕಾರವು ಪತ್ರಕರ್ತ ಸಮೂಹವನ್ನು ದಮನಿಸಲು ನಡೆಸಿರುವ ಷಡ್ಯಂತ್ರ ಎಂದು ಬೊಬ್ಬಿಡುವುದು ಬೇಡ. ಪ್ರತಿ ಪ್ರಕರಣಕ್ಕೂ ಅದರದೇ ಆದ ಹಿನ್ನೆಲೆಯಿದೆ. ಮತ್ತು ಸಿದ್ಧಿಕಿಯನ್ನು ವೈಯಕ್ತಿಕವಾಗಿ ಬಲ್ಲ ನಾನು ಕಂಡಂತೆ ಈ ಪ್ರಕರಣದಲ್ಲಿ ಸಿದ್ಧಿಕಿಯನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡಿದ್ದಲ್ಲ.

ಆದದ್ದಿಷ್ಟು. ಕನ್ನಡಪ್ರಭದ ಅಂಕಣಕಾರ ಪ್ರತಾಪ ಸಿಂಹರನ್ನು ಮುಗಿಸಲು ಕೆಲ ಮುಸ್ಲಿಂ ಹುಡುಗರು ನಗರದಲ್ಲಿ ಸಂಚು ರೂಪಿಸಿ ಓಡಾಡುತ್ತಿದ್ದಾರೆ ಎಂಬ ಮಾಹಿತಿ ಸಿಸಿಬಿಯವರಿಗೆ ಲಭಿಸುತ್ತದೆ. siddiqui-arrestಈ ಕುರಿತು ಅಸಲು ಕೆಲಸ ಮಾಡಿದವರು ಆಂಧ್ರದ ಗುಪ್ತಚರ ಇಲಾಖೆ. ಹೈದರಾಬಾದಿನ ವಿವಾದಿತ ಇಮಾಮ್ ಒಬ್ಬರ ಕುಟುಂಬದ ಒಬ್ಬನ ಚಲನವಲನಗಳನ್ನು ಗಮನಿಸುತ್ತಿದ್ದವರಿಗೆ ಆತ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಶುರು ಮಾಡುವುದು ಆಶ್ಚರ್ಯವಾಗುತ್ತದೆ. ಆತನನ್ನು ಹಿಂಬಾಲಿಸಿ ನಗರಕ್ಕೆ ಬಂದವರಿಗೆ ಆತ ಜೆಸಿ ನಗರದ ಮುನಿರೆಡ್ಡಿಪಾಳ್ಯದ ಒಂದು ರೂಮಿನ ಸಣ್ಣ ಮನೆಯಲ್ಲಿ ಕೆಲವರನ್ನು ಬೇಟಿಯಾಗುತ್ತಿದ್ದಾನೆಂದೂ ತಿಳಿಯುತ್ತದೆ.

ಆ ಮನೆಯಲ್ಲಿ ವಾಸ ಇದ್ದವರು ಐದು ಮಂದಿ – ಎಲ್ಲರೂ ಹುಬ್ಬಳ್ಳಿಯ ಓಲ್ಡ್ ಸಿಟಿ ಭಾಗದ ಮುಸ್ಲಿಂ ಯುವಕರು, ಬೆಂಗಳೂರಿನಲ್ಲಿ ಬದುಕು ಅರಸಿ ಬಂದವರು – ಪತ್ರಕರ್ತ ಮುತಿ-ಉರ್-ರೆಹಮಾನ್ ಸಿದ್ಧಿಕಿ, ಸೈಯದ್ ಯೂಸುಫ್ ನಳಬಂದ್, ಐಜಾಜ್ ಅಹಮದ್ ಮಿರ್ಜಾ, ಆತನ ತಮ್ಮ ಶೋಯೆಬ್ ಅಹಮದ್ ಮಿರ್ಜಾ ಮತ್ತು ರಿಯಾಜ್ ಅಹಮದ್ ಬ್ಯಾಹಟ್ಟಿ. ಇವರ ಬಗ್ಗೆ ತನಿಖೆ ಮಾಡುತ್ತಾ ಹೋದಾಗ ಹುಬ್ಬಳ್ಳಿಯಲ್ಲಿ ಇವರ ಸಂಪರ್ಕ ಇದ್ದ ಐದು ಮಂದಿ ಬಯಲಾಗುತ್ತಾರೆ. ಆನಂತರ ಆಂಧ್ರದ ಗುಪ್ತಚರ ಇಲಾಖೆ ಬೆಂಗಳೂರಿನ ಸಿಸಿಬಿಗೆ ಈ ಮಾಹಿತಿಯನ್ನು ಸ್ಪೂನ್‌ಫೀಡ್ ಮಾಡುತ್ತದೆ.

ಧಿಗ್ಗನೆದ್ದು ಕೂತ ಸಿಸಿಬಿ ಪೋಲೀಸರು ಆಗಸ್ಟ್ 29 ರ ಮುಂಜಾವು ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಏಕಕಾಲಕ್ಕೆ ದಾಳಿ ನಡೆಸಿ ಒಟ್ಟು 11 ಮಂದಿಯನ್ನು ಬಂಧಿಸಿಬಿಟ್ಟರು, ಜೇಮ್ಸ್ ಬಾಂಡ್‌ಗಳಂತೆ ಪೋಸುಕೊಟ್ಟವರು ಪ್ರಥಮ ಮಾಹಿತಿ ವರದಿಯಲ್ಲೇ ಆತ್ಮರತಿಯ ರಂಜನೀಯ ಕಥೆಗಳನ್ನು ಬರೆದುಕೊಂಡರು. ಪ್ರತಾಪ ಸಿಂಹ ತಮ್ಮನ್ನು ಚೆ ಗೋವೆರಾನಿಗೆ ಹೋಲಿಸಿಕೊಂಡರು.

ನಂತರದ್ದು ಮೀಡಿಯಾ ಮ್ಯಾನೇಜ್‌ಮೆಂಟ್. ನಮ್ಮ ಗುಪ್ತಚರ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿದ್ದವರೊಬ್ಬರು ಅದನ್ನು “ಪರ್ಸೆಪ್ಷನ್ ಮ್ಯಾನೇಜ್‌ಮೆಂಟ್” ಎಂದು ಕರೆಯುತ್ತಾರೆ. ಅದನ್ನು ಅದ್ಭುತವಾಗಿ ಮಾಡಿದರು ಸಿಸಿಬಿಯ ಜೇಮ್ಸ್ ಬಾಂಡುಗಳು. ಸ್ವತಃ ತಮ್ಮ ನೌಕರನೇ ಬಂಧಿತನಾಗಿದ್ದ ಡೆಕ್ಕನ್ ಹೆರಾಲ್ಡ್, ದಿ ಹಿಂದೂ ಪತ್ರಿಕೆಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಪತ್ರಿಕೆಗಳು ಇದಕ್ಕೆ ಬಲಿಯಾದವುಗಳೇ,

ಈಗ ಎನ್‌ಐಎ ತನಿಖೆ ನಡೆಸಿ ಆರೋಪಪಟ್ಟಿ ಹಾಕುವಾಗ ಜೆಸಿ ನಗರದ ಮುನಿರೆಡ್ಡಿಪಾಳ್ಯದ ಮನೆಯಿಂದ ನಮ್ಮ ಸಿಸಿಬಿಯವರು ಬಂಧಿಸಿದ್ದ ಐವರಲ್ಲಿ ಮೂವರ ವಿರುದ್ಧ ಯಾವುದೇ ಆರೋಪಪಟ್ಟಿಯನ್ನು ಸಲ್ಲಿಸಿಲ್ಲ. ಇದರಲ್ಲಿ ಸ್ವಂತ ಅಣ್ಣ ತಮ್ಮಂದಿರಾದ ಐಜಾಜ್ ಅಹಮದ್ ಮಿರ್ಜಾ ಮತ್ತು ಶೋಯೆಬ್ ಅಹಮದ್ ಮಿರ್ಜಾ ಅವರಲ್ಲಿ ಶೋಯೆಬ್ ಅಹಮದ್ ಮಿರ್ಜಾನನ್ನು ಈ ಉಗ್ರ ಸಂಚಿನ ಪ್ರಮುಖ ರೂವಾರಿಯೆಂದು ಗುರುತಿಸಿದರೆ, ಆತನ ಅಣ್ಣ ಡಿಆರ್‌ಡಿಒದಲ್ಲಿ ವಿಜ್ಞಾನಿಯಾಗಿದ್ದ ಐಜಾಜ್ ಅಹಮದ್ ಮಿರ್ಜಾ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದಿರುವುದು ಎನ್‌ಐಎ ತನಿಖೆಯ ನಿಷ್ಪಕ್ಷಪಾತತೆ ಮತ್ತು ಪಾರದರ್ಶಕತೆಗೆ ದ್ಯೋತಕ. ಒಂದು ವೃತ್ತಿಪರ ತನಿಖೆಯ ಉದಾಹರಣೆ. ಹೀಗೆ ಯಾವುದೇ ಸಾಕ್ಷ್ಯಗಳಿಲ್ಲವೆಂದು ನಮ್ಮ ಮುತಿ-ಉರ್-ರೆಹಮಾನ್ ಸಿದ್ಧಿಕಿಯನ್ನೂ ಸಹ ಎನ್‌ಐಎ ಎಲ್ಲ ಆರೋಪಗಳಿಂದಲೂ ಮುಕ್ತಗೊಳಿಸಿದೆ.

ಅಷ್ಟೇ ಅಲ್ಲ ನಮ್ಮ ಸಿಸಿಬಿಯವರು ಬಂಧಿಸಿದ ಎಲ್ಲ ಹದಿನೈದು ಜನರ ವಿರುದ್ಧವೂ ಐಪಿಸಿಯ ಸೆಕ್ಷನ್ 121 ರ ಅಡಿ (ಭಾರತ ಪ್ರಭುತ್ವದ ವಿರುದ್ಧ ಯುದ್ಧ ಸಾರುವುದು) ಕೇಸು ಹಾಕಿದ್ದರು. ಆದರೆ ಎನ್‌ಐಎ ಈ ಕೇಸನ್ನು ಕೈಬಿಟ್ಟಿದೆ. ಯುಎಪಿಎ, 1967 ರ ಸೆಕ್ಷನ್ 10, 13, 17 ಮತ್ತು 18 ರಡಿಯಷ್ಟೇ ಪ್ರಕರಣ ದಖಲಿಸಿದ್ದಾರೆ. ಇದು ಅತ್ಯಂತ ಫೇರ್ ಆದ ಕ್ರಮ. ನಾಲ್ವರು ಹುಡುಗರು ಒಂದು ಬಂದೂಕು ಹಿಡಿದು ತಮ್ಮ ಕೋಮಿನ ವಿರುದ್ಧ ಬರೆಯುತ್ತಿದ್ದಾನೆಂಬ ಒಂದು ಸಿಟ್ಟು ಮತ್ತು ಮತಾಂಧತೆಯಲ್ಲಿ ಆತನನ್ನು ಹೊಡೆಯಲು ಹುಚ್ಚರಂತೆ ತಿರುಗುವುದು ಹೇಗೆ ಪ್ರಭುತ್ವದ ವಿರುದ್ಧ ಯುದ್ಧ ಸಾರಿದಂತಾಗುತ್ತದೆ?

ನಿಜ, ಎನ್‌ಐಎ ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡದ್ದರಿಂದ ನ್ಯಾಯ ದೊರಕಿತು. ಇಂಥ ಪ್ರಕರಣಗಳಲ್ಲಿ ಎಲ್ಲ ಆಸೆಗಳನ್ನೂ ಕಳೆದುಕೊಂಡಿದ್ದ ನಮ್ಮಂಥವರಿಗೆ ಒಂದು ಆಶಾಭಾವನೆಯನ್ನು ಚಿಗುರಿಸಿರುವುದು ದಿಟ. ಆದರೆ ಈಗ ಸಿಸಿಬಿ ಪೋಲೀಸರ ವಿರುದ್ಧ ಯಾವ ಕ್ರಮ ಕೈಗೊಳ್ಳಬೇಕು? ಒಂದು ಮನೆಯಲ್ಲಿ ಐವರು ಹುಡುಗರು ಇದ್ದರೆಂದ ಮಾತ್ರಕ್ಕೆ ಐವರನ್ನು ಹೆಡೆಮುರಿಗೆ ಕಟ್ಟಿ ತಂದವರು ಈಗ ಏನು ಹೇಳುತ್ತಾರೆ? ಅವರ ವಿರುದ್ಧ ಯಾವ ಕ್ರಮವೂ ಇಲ್ಲವೇ? ತಮ್ಮನ್ನು ಅಂತಹ ಕ್ರಮಗಳಿಂದ ರಕ್ಷಿಸಿಕೊಳ್ಳಲು ಬಹುಶಃ ಯುಎಪಿಎ, 1967 ದ ಸೆಕ್ಷನ್ 18 ನ್ನೂ ಆರೋಪಪಟ್ಟಿಯಲ್ಲಿ ಸೇರಿಸಿದ್ದಾರೆ.
Section 18, UAPA, 1967:
Protection of action taken in good faith.
No suit, prosecution or other legal proceeding shall lie against the District Magistrate or any officer authorised in this behalf by the Government or the District Magistrate in respect of anything which is in good faith done or intended to be done in pursuance of this Act or any rules or orders made thereunder.

ಇದಕ್ಕೆ ಏನು ಹೇಳಬೇಕು? ಸಿದ್ಧಿಕಿ ಹೊರಬರುತ್ತಾನೆ ನಿಜ. ಆದರೆ ನೀವು ಸುಮ್ಮನೆ ಮುತಿ-ಉರ್-ರೆಹಮಾನ್ ಸಿದ್ಧಿಕಿಯ ಹೆಸರು ಹೊಡೆದು ನೋಡಿ ಗೂಗಲ್ಲಿನಲ್ಲಿ – ನೂರು ಪುಟಗಳು ಪುಟಿಯುತ್ತವೆ ಆತನನ್ನು “ಮಾಸ್ಟರ್ ಮೈಂಡ್” ಎಂದು ಘೋಷಿಸುತ್ತಾ. ಇದರಿಂದ ಬಿಡುಗಡೆ? ಆತ ಜೀವನದುದ್ದಕ್ಕೂ ಈ ಉಗ್ರವಾದಿ ಎಂಬ ಹಣೆಪಟ್ಟಿಯನ್ನು ಹೊರಲೇಬೇಕಲ್ಲವೇ? ಸಮಾಜ ಮುಖ್ಯವಾಹಿನಿಯ ಮಾತು ಬಿಡಿ. ನಮ್ಮ ಪೋಲೀಸ್ ವ್ಯವಸ್ಥೆ, ಗುಪ್ತಚರ ವ್ಯವಸ್ಥೆಯ ಕಣ್ಣಲ್ಲಿ ಈಗಲೂ ಆತ ಸಾಕ್ಷ್ಯಾಧಾರಗಳು ಲಭಿಸದೆ ತಪ್ಪಿಸಿಕೊಂಡ ಒಬ್ಬ ಉಗ್ರ ಅಷ್ಟೆ. ಆತ ಜೀವನ ಪರ್ಯಂತ ನಮ್ಮ ಪೋಲೀಸ್ ಮತ್ತು ಗುಪ್ತಚರ ಇಲಾಖೆಗಳ ರಡಾರ್‌ನಲ್ಲಿ ಇದ್ದೇ ಇರುತ್ತಾನೆ. ಪ್ರತಿ ಉಗ್ರವಾದಿ ದಾಳಿಯ ನಂತರವೂ ಆತ ತನ್ನ ಇನ್ನೋಸೆನ್ಸ್ ಅನ್ನು ಋಜು ಮಾಡುತ್ತಲೇ ಇರಬೇಕು. 2001 ರ ಸುಮಾರಿನಲ್ಲಿ ಪಾಕಿಸ್ತಾನಕ್ಕೆ ಗುಪ್ತಚರ ಏಜೆಂಟನಾಗಿ ಕೆಲಸ ಮಾಡುವ ಆರೋಪದ ಮೇಲೆ ಬಂಧಿತನಾಗಿ ನಂತರ ಖುಲಾಸೆಯಾದ ಪತ್ರಕರ್ತ ಇಫ್ತಿಕಾರ್ ಗಿಲಾನಿಯನ್ನು ನಮ್ಮ ದೆಹli ಪೋಲೀಸರು ಅಫ್ಜಲ್ ಗುರುವನ್ನು ನೇಣಿಗೇರಿಸಿದ ಕೂಡಲೇ ಗೃಹ ಬಂಧನದಲ್ಲಿರಿಸಿದರು. ಆತ ಇವತ್ತು ರಾಷ್ಟ್ರೀಯ ಪತ್ರಿಕೆಯೆನ್ನಿಸಿಕೊಂಡಿರುವ ಡಿಎನ್‌ಎದ ಹಿರಿಯ ಸಂಪಾದಕ! ಇದಕ್ಕೆ ಬೆಲೆ ಕಟ್ಟುವವರಾರು?

ಇವತ್ತು ಶನಿವಾರ ಎನ್‌ಐಎದಲ್ಲಿ ಈ ಪ್ರಕರಣದ ವಿಚಾರಣೆಯಿದ್ದು, ಸಿದ್ಧಿಕಿಯ ಬಿಡುಗಡೆಯ ಕ್ರಮಗಳು ಶುರುವಾಗುತ್ತವೆ. ಮಂಗಳವಾರದಂದು ಆತ ಸ್ವತಂತ್ರ ಹಕ್ಕಿಯಾಗಿ ಹೊರಬರುವ ಎಲ್ಲ ನಿರೀಕ್ಷೆಗಳಿವೆ. ಆತ ಹೊರಬಂದ ಮೇಲೆ ಮತ್ತೆ ಆತನನ್ನು ಮುಖ್ಯವಾಹಿನಿಗೆ ತರಬೇಕಿದೆ. ಆತನನ್ನು ಹೇಗೆ ನಡೆಸಿಕೊಳ್ಳುತ್ತದೆ ನಮ್ಮ ಸಮಾಜ ಎಂಬುದರ ಮೇಲೆ ಅದರ ಪ್ರಬುದ್ಧತೆಯನ್ನು ಅಳೆಯಬಹುದಾಗಿದೆ. ಈ ನಿಟ್ಟಿನಲ್ಲಿ “ಡೆಕ್ಕನ್ ಹೆರಾಲ್ಡ್ ಪತ್ರಿಕೆ” ಇನ್ನೂ ಆತನನ್ನು ಕೆಲಸದಿಂದ ತೆಗೆದುಹಾಕದೆ ಇಟ್ಟುಕೊಂಡಿರುವುದು ಅತ್ಯಂತ ಸ್ವಾಗತಾರ್ಹ. ಮಂಗಳವಾರ ಆತ ಹೊರಬಂದರೆ ಬುಧವಾರದಿಂದಲೇ ಆತ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಲು ಶುರು ಮಾಡಬಹುದೆಂಬ ವರ್ತಮಾನವಿದೆ. ಪ್ರಜಾವಾಣಿ ಸಮೂಹದ ಈ ಕ್ರಮವನ್ನು ನಾವು ಸ್ವಾಗತಿಸುವ ಅವಶ್ಯಕತೆಯಿದೆ. ಅಂತೆಯೇ ಒಂದು ದಕ್ಷ, ವೃತ್ತಿಪರ, ಪಾರದರ್ಶಕ ತನಿಖೆಗಾಗಿ ಎನ್‌ಐಎಗೆ ಒಂದು ಕೃತಜ್ಞತೆ ಸಲ್ಲಿಸಬೇಕಿದೆ.

ಕೊನೆಯದಾಗಿ ಒಂದು ಮಾತು – ಪ್ರತಾಪ ಸಿಂಹ ಮತ್ತು ಅವರಂತೆ ಬರೆಯುವವರಿಗೆ: ಒಂದು ಕೋಮಿನ ತಮ್ಮದೇ ವಯಸ್ಸಿನ ತಮ್ಮಷ್ಟೇ ಬಿಸಿರಕ್ತದ ವಿದ್ಯಾವಂತ ಹುಡುಗರು ತಮ್ಮ ಬರವಣಿಗೆಯಿಂದ ಬೇಸತ್ತು, ಹೌಹಾರಿ ರೇಜಿಗೆಯಾಗಿ ಕೊಲ್ಲಲು ಹವಣಿಸುತ್ತಾರೆಂದರೆ ಆ ಬರವಣಿಗೆ ಅವರ ಮನಸ್ಸುಗಳನ್ನು ಎಷ್ಟು ಘಾಸಿಗೊಳಿಸಿರಬಹುದು? ಟೀಕೆಯನ್ನು ಸಹಿಸಿಕೊಳ್ಳಲಾಗದವರು, ಇವರಂತೆಯೇ ಮತಾಂಧರೂ ಆಗಿರುವ ಹುಡುಗರು ಪೆನ್ನು ಹಿಡಿದು ಉತ್ತರಿಸುವ ಬದಲು ಬಂದೂಕು ಹಿಡಿದರು. ಅದು ಅವರ ಅಭಿವ್ಯಕ್ತಿ ಮತ್ತು ಅಪರಾಧ. ಬರವಣಿಗೆ ಎದೆಗೆ ಬಿದ್ದ ಅಕ್ಷರವಾಗಬೇಕು. ಒಂದು ಕೋಮಿನ ವಿರುದ್ಧ ಒಂದು ತೀರದ ನಂಜನ್ನಿಟ್ಟುಕೊಂಡು ಬರೆಯುವುದು ಪ್ರಚಾರ ಮತ್ತು ಅಪಪ್ರಚಾರದ ಬರವಣಿಗೆ. ಇಂತಹದು ಪತ್ರಿಕೋದ್ಯಮವಾ? ಚೆ ಗೋವೆರಾನಿಗೆ ಹೋಲಿಸಿಕೊಂಡು ಆ ಹಿರಿಯ ಚೇತನದ ಸ್ಮೃತಿಗೂ ಅವಮಾನ ಮಾಡಿ ಭ್ರಮೆಗಳಲ್ಲಿ ತೇಲುವ ಬದಲು ಇದು ಆತ್ಮಾವಲೋಕನಕ್ಕೆ ಸಕಾಲ.

11 thoughts on “ಸಿದ್ದಿಕಿ ಪ್ರಕರಣ : ಆಗಿದ್ದೇನು? ಅನ್ಯಾಯಕ್ಕೆ ನ್ಯಾಯ ಹೇಗೆ?

 1. Ananda Prasad

  ನಿರಪರಾಧಿಗಳನ್ನು ಸಂಶಯದ ಮೇಲೆ ಬಂಧಿಸಿ ಮಾನಸಿಕ, ಸಾಮಾಜಿಕ ಚಿತ್ರಹಿಂಸೆ ನೀಡಿದ್ದಕ್ಕಾಗಿ ದೊಡ್ಡ ಮೊತ್ತದ ದಂಡವನ್ನು ಬಂಧಿಸಲ್ಪಟ್ಟವರಿಗೆ ನೀಡುವ ಕಾನೂನನ್ನು ರೂಪಿಸಬೇಕಾದ ಅಗತ್ಯ ಇದೆ ಹಾಗೂ ಸಮರ್ಪಕ ಆಧಾರ ಇಲ್ಲದೆ ಬಂಧಿಸಿ ಜೈಲಲ್ಲಿ ಇಡುವುದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಬೇಕಾದ ಅಗತ್ಯ ಇದೆ. ನಾವು ನಾಗರಿಕರೆಂದು ಹೇಳಿಕೊಳ್ಳಬೇಕಾದರೆ ಇಂಥ ಒಂದು ವ್ಯವಸ್ಥೆಯ ಅಗತ್ಯ ಇದೆ. ಮೊಹಮದ್ ಹನೀಫ್ ಅವರನ್ನು ಆಷ್ಟ್ರೇಲಿಯ ಸರ್ಕಾರ ಬಂಧಿಸಿ ನಂತರ ನಿರಪರಾಧಿ ಎಂದು ತೀರ್ಮಾನ ಆದ ನಂತರ ಅವರಿಗೆ ಅಲ್ಲಿನ ಸರ್ಕಾರ ದೊಡ್ಡ ಮೊತ್ತದ ಪರಿಹಾರವನ್ನು ನೀಡಿದಂತೆ ನಮ್ಮ ದೇಶದಲ್ಲೂ ಒತ್ತಾಯ ರೂಪುಗೊಳ್ಳಬೇಕು. ಇಲ್ಲದೆ ಹೋದರೆ ನಿರಪರಾಧಿಗಳನ್ನು ಜೈಲಿಗೆ ತಳ್ಳಿ ಮಾನಸಿಕ, ಸಾಮಾಜಿಕ, ದೈಹಿಕ ಚಿತ್ರಹಿಂಸೆ ನೀಡುವ ಅನಾಗರಿಕ ವರ್ತನೆ ನಿಲ್ಲಲಾರದು.

  Reply
  1. ತ.ನಂ.ಜ್ಞಾನೇಶ್ವರ

   ನಾನು ಪ್ರಜಾವಾಣಿಯನ್ನು ಇಷ್ಟಪಡುತ್ತೇನೆ. ಏಕೆಂದರೆ ಅದು ಜಾತ್ಯತೀತ ನಿಲುವನ್ನೂ, ವೈಚಾರಿಕತೆಯನ್ನೂ ಪೋಷಿಸುತ್ತಾ ಬಂದಿದೆ.

   Reply
   1. prasad raxidi

    ಪ್ರಜಾವಾಣಿ ಕೂಡಾ ತನ್ನ ಸೂಕ್ಷ್ಮ ಸಂವೇದನೆಯನ್ನು ಜಾತ್ಯತೀತ ನಿಲುವನ್ನು ಕಳೆದುಕೊಂಡಿದೆ. ಹಳೆಯದೇಕೆ ….22/2/13 ರಲ್ಲಿ ಪ್ರಕಟವಾಗಿರುವ ಕಾರ್ಟೂನನ್ನು ನೋಡಿ….

    Reply
 2. kiran

  ಇಡೀ ಬರಹದ ಆಶಯವನ್ನು ಒಪ್ಪಬಹುದು. ಆದರೆ ಘಟನೆಯನ್ನು ಬರೆಯುತ್ತ ಬರೆಯುತ್ತ “ಸ್ವತಃ ತಮ್ಮ ನೌಕರನೇ ಬಂಧಿತನಾಗಿದ್ದ ಡೆಕ್ಕನ್ ಹೆರಾಲ್ಡ್, ದಿ ಹಿಂದೂ ಪತ್ರಿಕೆಗಳನ್ನು ಬಿಟ್ಟರೆ ಮಿಕ್ಕೆಲ್ಲಾ ಪತ್ರಿಕೆಗಳು ಇದಕ್ಕೆ ಬಲಿಯಾದವುಗಳೇ,” ಎಂದು ಬಿಟ್ಟರೆ ಕೆಲವರಿಗಾದರೆ ನಗು ಬಾರದೆ ಇರದು. ಬಹುಶಃ ಆ. 30ರ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಎದುರಿಗಿದ್ದರೆ ಓದಿ ನೋಡಿ…ಮನೆಯಲ್ಲಿ ಬಿದ್ದ ಹೆಣವನ್ನು ಹೊರಹಾಕುವ ಭರಾಟೆಯಲ್ಲಿ ಎಷ್ಟು ಅಸೂಕ್ಷ್ಮ ವರದಿ ಪ್ರಕಟವಾಗಿದೆ ಎಂಬುದು ತಿಳಿಯುತ್ತದೆ.
  ಇನ್ನೊಂದು ಮಾತು. ಕಳೆದ ಏಳು ತಿಂಗಳಿನಲ್ಲಿ ಪ್ರಕರಣದ ಕುರಿತು ವಿವರವಾದ ಫಾಲೋ ಅಪ್ ಸಿಕ್ಕಿದ್ದು “ವಿಜಯ ಕರ್ನಾಟಕ”ದಲ್ಲಿ ಮಾತ್ರವೇ. ಅವರು ಯಾವ ಜೇಮ್ಸ್ ಬಾಂಡ್ಗಳಿಗೂ ಬಲಿಯಾಗದೆ ನ್ಯಾಯಾಲಯದಲ್ಲಿ ಸಲ್ಲಿಕೆಯಾಗುತ್ತಿದ್ದ ದಾಖಲೆಗಳನ್ನು ಇಟ್ಟುಕೊಂಡು ಬರೆದ ವರದಿಗಳು ಎಲ್ಲಾ ಅಪರಾಧ ವರದಿಗಾರರಿಗೂ ಮಾದರಿಯಾಗಬೇಕು. ಬಹುಶಃ ಇದು ನಮ್ಮ ಇಂಗ್ಲಿಷ್ ಪತ್ರಕರ್ತರ ಮಿತಿಗಳಿಗೆ ಉತ್ತಮ ಉದಾಹರಣೆ…

  Reply
  1. ತ.ನಂ.ಜ್ಞಾನೇಶ್ವರ

   ‘ವಿಜಯ ಕರ್ನಾಟಕ’ದಲ್ಲಿ ಕೆಲವು ಹಿಂದುತ್ವವಾದಿ ಬರಹಗಾರರಿದ್ದಾರೆ.

   Reply
 3. Naveen_H

  ಎಲ್ಲರನ್ನೂ ಒಂದೇ ದೃಷ್ಟಿಯಲ್ಲಿ ನೋಡುವದು ಅಕ್ಷಮ್ಯ ಹಾಗೂ ಅಪಾಯಕಾರಿ. ಆದರೆ ಬೇರೆ ವಿಧಿ ಇಲ್ಲಾ. ಲೇಖಕರು ತಿಳಿಸಿದಂತೆ “ಈಗ ಎನ್‌ಐಎ ತನಿಖೆ ನಡೆಸಿ ಆರೋಪಪಟ್ಟಿ ಹಾಕುವಾಗ ಜೆಸಿ ನಗರದ ಮುನಿರೆಡ್ಡಿಪಾಳ್ಯದ ಮನೆಯಿಂದ ನಮ್ಮ ಸಿಸಿಬಿಯವರು ಬಂಧಿಸಿದ್ದ ಐವರಲ್ಲಿ ಮೂವರ ವಿರುದ್ಧ ಯಾವುದೇ ಆರೋಪಪಟ್ಟಿಯನ್ನು ಸಲ್ಲಿಸಿಲ್ಲ.” ಅಂದರೆ ಇನ್ನಿಬ್ಬರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.

  ಒಂದು ವೇಳೆ ಇಬ್ಬರನ್ನೇ ಬಂಧಿಸಿದ್ದರೆ ನೀವೇ ಇದೇ ಪ್ರಶ್ನೆಯನ್ನೇ ಕೇಳ್ತಿದ್ರಿ ಇನ್ನುಳಿದ ಮೂವರು ಸಾಚಾಗಳು ಅಂತ ಪೊಲೀಸರು ಹೇಗೆ ನಿರ್ಧರಿಸಿದರು. ಒಂದೇ ರೂಮಿನಲ್ಲಿರುವವರು, ಜೊತೆಗೆ ಮಾತು, ಕಥೆ, ಊಟ ಮಾಡುವವರು ಹೀಗೆ ಎಲ್ಲರ ಮೇಲೂ ಅನುಮಾನ ಬರುವದು ಸಾಮಾನ್ಯ ಅದೂ ಪೋಲಿಸ್ ರಿಗೆ.

  ಸಧ್ಯ ಏನ್.ಐ.ಎ. ಸರಿಯಾದ ತನಿಖೆ ನಡೆಸಿ ಅಮಾಯಕರನ್ನು ಕೈ ಬಿಟ್ಟಿರುವದು ಹಾಗೂ ಸರಿಯಾದ ಸೆಕ್ಷನ್ ಗಳಲ್ಲಿ ಕೇಸು ದಾಖಲಿಸಿರುವದು ಸಮಾಧಾನಕರ ಸಂಗತಿ. ಇದು ಯಾರಿಗೆ ಬೇಕಾದರೂ ಆಗಬಹುದು. ಪೋಲಿಸ್ಹೆಂ ರು ಎಂತೆನ್ತಹುದೋ ಪೆಟ್ಟಿ ಕೇಸ್ ಗಳಲ್ಲೇ ಯಾರ್ಯಾರನ್ನೋ “ಎತ್ತಾಕೊಂಡು” ಹೋಗ್ತಾರಂತೆ ^^ ಇನ್ನು ಇಂಥಾ ಕೇಸ್ ಹೇಳಬೇಕಾ? ಸಧ್ಯ ಏನ್.ಐ.ಎ.ದಲ್ಲಿ ತಲೆ ಇದ್ದವರು ಇದ್ದಾರಲ್ಲಾ ಅಷ್ಟೇ ಸಮಾಧಾನಕರ ವಿಷಯ.

  Reply
  1. ತ.ನಂ.ಜ್ಞಾನೇಶ್ವರ

   ಒಬ್ಬ ಕಳ್ಳತನ ಮಾಡಿದರೆ ಅವನ ಮನೆಯವರನ್ನೆಲ್ಲಾ ಬಂಧಿಸುತ್ತಾರೆಯೇ?

   Reply
   1. Naveen_H

    ಕಳ್ಳ ಒಂದು ರೂಮಿನಲ್ಲಿ ಇದ್ದರೆ ಅವನ ಜೋತೆಗಾರನ್ನೂ ಜಾಲಾಡ್ತಾರೆ, ಮನೆಯಲ್ಲಿದ್ದರೆ ಮನೆಯನ್ನೆಲ್ಲ ಜಾಲಾಡಿ ಕದ್ದ ವಸ್ತು ಯಾವ್ದಾದ್ರು ಇದೆಯಾ ಅಂತ ನೋಡ್ತಾರೆ. ಹೌದು ತಾನೇ??

    Reply
 4. Uttamaprabhu

  From the very next day both Deccan Herald and Prajavani began carrying ‘fictional’ stories against Matiur Rahman Siddiqui. Deccan Herald didn’t give Siddiqui a benefit of doubt to its employee who has been working for them for the last three years. As far as the Prajavani is concerned, now it may not have a place to hide it’s face. It’s Hubli bureau provided spiciest stories. The so called ‘the most credible newspapers’ disowned it’s unfortunate employee the moment he was picked up by the police.

  And one more thing. From the charge sheet details this case looks like a purely a murder-conspiracy case. But, one wonders, then how on earth the state ccb made it into an anti-national activity?!

  Reply
 5. Bapuji

  Dear friends , I am happy that Siddiqui and his friend has walked out of jail, are given clean chit. I personally feel that the News paper management that enjoys credibility and has good journalists like Dinesh Ameen Mattu . But, the Deccan Herald management should honor Siddiqui with a job in higher position and boost his morale also of the Muslims who have become easy targets like Dalits in recent years for only reasons they are born as Muslims . All Muslims are not bad, and all other Hindus, Christians, Buddhist… are not good. There are black sheeps in all the religions. I appeal my journalist friend, and his friend who has been suspected after the Hyderabad blast , should also be given a job. The police should exhibit their social obligation to see that these innocents should be accommodate in good position in leading companies. The Investigation officers should not jump into conclusions or target particular religion, community immediately after the blast and should act with greater responsibility to avoid such grave mistakes. These mistakes will also rise doubts over the efficiency of the intelligence and investigative agency and demoralise youths. jaihind.

  Reply

Leave a Reply

Your email address will not be published.