ಸಿದ್ದಿಕಿ ಪ್ರಕರಣ: ‘ಮಾಸ್ಟರ್ ಮೈಂಡ್’ ಎಂದವರು ಈಗ ಏನ್ಮಾಡ್ತಾರೆ?

– ಸುಧಾಂಶು ಕಾರ್ಕಳ

ಡೆಕ್ಕನ್ ಹೆರಾಲ್ಡ್ ವರದಿಗಾರ ಮುತಿ-ಉರ್-ರಹಮಾನ್ ಸಿದ್ದಿಕಿ ವಿರುದ ರಾಷ್ಟ್ರೀಯ ತನಿಖೆ ಸಂಸ್ಥೆ (ಎನ್‌ಐ‌ಎ) ತನ್ನ ಚಾರ್ಜಶೀಟ್ ನಲ್ಲಿ ಯಾವುದೇ ಉಲ್ಲೇಖ ಮಾಡದೆ ಅವರ ವಿರುದ್ಧ ಹೊರಿಸಲಾಗಿದ್ದ ಆರೋಪಗಳನ್ನು ಸಾಬೀತುಪಡಿಸಲು ಆಗಲಿಲ್ಲ ಎಂಬ ಸೂಚನೆ ನೀಡಿದೆ.siddiqui ಆರು ತಿಂಗಳ ಕಾಲ ಸಿದ್ದಿಕಿ ಆತ ಅನುಭವಿಸಿದ ಶಿಕ್ಷೆ, ಅವಮಾನ, ಎದುರಿಸಿದ ಅನುಮಾನದ ಕಣ್ಣುಗಳು, ಟಾರ್ಚರ್, ತನ್ನದೇ ವೃತ್ತಿಯ ಹಲವರು ಕಟ್ಟಿದ ಕತೆಗಳು..ಎಲ್ಲವನ್ನೂ ನೆನಸಿಕೊಂಡರೆ ಆತಂಕ, ಭಯ, ಬೇಸರ ಎಲ್ಲವೂ ಒಮ್ಮೆಗೇ.

ಇಷ್ಟು ದಿನಗಳ ಕಾಲ ತನಿಖೆ ಮಾಡಿದ ನಂತರವೂ ತನಿಖಾ ಸಂಸ್ಥೆಗೆ ಆತನ ವಿರುದ್ಧ ಚಾಜ್ರ್ ಶೀಟ್ ಹಾಕಲಾಗಲಿಲ್ಲ. ಆದರೆ ನಾಡಿನ ಪ್ರಮುಖ ಪತ್ರಿಕೆಗಳು ಸಿದ್ದಿಕಿ ವಿರುದ್ಧ ಪುಂಖಾನುಪುಂಖವಾಗಿ ಕತೆ ಬರೆದವು. ಟೈಮ್ಸ್ ಆಫ್ ಇಂಡಿಯಾ ಎಂಬ ದೇಶದ ನಂಬರ್ 1 ಪತ್ರಿಕೆ ಸಿದ್ದಿಕಿಯನ್ನು ಭಯೋತ್ಪಾದಕ ಚಟುವಟಿಕೆಗಳ ಹಿಂದಿನ ‘ಮಾಸ್ಟರ್ ಮೈಂಡ್’ ಎಂದು ಬಣ್ಣಿಸಿತು.

ಅಷ್ಟೇ ಏಕೆ, ಬಂಧನವಾದ ಮಾರನೆಯ ದಿನವೇ ಬಂಧಿತರನ್ನೆಲ್ಲಾ ಮುಲಾಜಿಲ್ಲದೆ ‘ಉಗ್ರರು’ ಎಂದು ಹಣೆಪಟ್ಟಿಕಟ್ಟಿದ್ದು ಸಂಯಮ ಕಳೆದುಕೊಂಡಿರುವ ಮಾಧ್ಯಮ. ಆತ ಸಿದ್ದಿಕಿ ಅಲ್ಲದೆ ಸಿದ್ದಯ್ಯನೋ, ಸಿದ್ದಲಿಂಗೇಶನೋ ಆಗಿದ್ದರೆ ‘ಉಗ್ರ’ ಎಂದು ಘೋಷಿಸುವ ಉತ್ಸಾಹವನ್ನು ಮಾಧ್ಯಮ ತೋರಿಸುತ್ತಿತ್ತೇ? (ಇಂತಹದೇ ಆರೋಪ ಹೊತ್ತು ಜೈಲು ವಾಸ ಅನುಭವಿಸುತ್ತಿರುವ ಪ್ರಜ್ಞಾಳನ್ನು ಇಂದಿಗೂ ಮಾಧ್ಯಮ ‘ಸಾಧ್ವಿ ಪ್ರಜ್ಞಾ’ ಎಂದೇ ಸಂಬೋಧಿಸುತ್ತಿದ್ದಾರೆ. ಸಿದ್ದಕಿಗೆ ಸಿಕ್ಕ ‘ಉಗ್ರ’ ಪಟ್ಟ ಆಕೆಗೆ ಏಕಿಲ್ಲ?)

ಸಿದ್ದಿಕಿಯಿಂದ ಪೊಲೀಸರು ಲ್ಯಾಪ್ ಟಾಪ್ ವಶಪಡಿಸಿಕೊಂಡರು. ಅವನ ಬಳಿ ವಿದೇಶಿ ಕರೆನ್ಸಿ ಇತ್ತು, ವಿದೇಶಿ ಬ್ಯಾಂಕ್ ಅಕೌಂಟ್ ಇತ್ತು..- ಹೀಗೆ ಏನೆಲ್ಲಾ ಕತೆ ಬರೆದರಲ್ಲಾ..ಈಗ ಕ್ಷಮೆ ಕೇಳುವ ಸೌಜನ್ಯ ತೋರುತ್ತಾರಾ? ಒಂದು ಪತ್ರಿಕೆಯವರು ಬರೆದರು – ಅವನ ಲ್ಯಾಪ್ ಟ್ಯಾಪ್ ನಲ್ಲಿ ಗೋಧ್ರ ಹತ್ಯಾಕಾಂಡ ಕುರಿತ ವಿಡಿಯೋ ತುಣುಕುಗಳಿದ್ದವು ಮತ್ತು ಇಬ್ಬರು ಪತ್ರಕರ್ತರು ನರೇಂದ್ರ ಮೋದಿಯನ್ನು ಭೇಟಿ ಮಾಡುತ್ತಿರುವ ಚಿತ್ರವೂ ಸಿಕ್ಕಿತು. ಗೋಧ್ರ ಹತ್ಯಾಕಾಂಡದ ದೃಶ್ಯಗಳು ಇಂದು ಲಕ್ಷಾಂತರ ಲ್ಯಾಪ್ ಟಾಪ್ ಗಳಲ್ಲಿ ಇರಬಹುದು. ಹಾಗಾದರೆ ಅವರೆಲ್ಲರೂ ಲಷ್ಕರ್-ಎ-ತೊಯಬಿ ಸಂಘಟನೆಯವರು ಎನ್ನಬೇಕೆ?

ಸಿದ್ದಿಕಿ ವಿರುದ್ಧ ಆರೋಪಗಳೆಲ್ಲವೂ ಗಂಭೀರವಾದವು. ಅವರ ಜೊತೆಗೆ ಇದ್ದವರಿಗೂ, ಅವನ ಬಗ್ಗೆ ಚೆನ್ನಾಗಿ ಗೊತ್ತಿದ್ದವರಿಗೂ ಆ ಆರೋಪಗಳು ದಂಗು ಪಡಿಸಿದವು. ಅವರ ಪರವಾಗಿ ದನಿ ಎತ್ತಿದ್ದವರ ಸಂಖ್ಯೆ ತೀರಾ ಕಡಿಮೆಯಾಗಲು ಇದೂ ಕಾರಣ. ಎಲ್ಲಾ ಪತ್ರಿಕೆಗಳು, ಟಿವಿ ಚಾನೆಲ್ ಗಳು ಸಿದ್ದಕಿ ಒಬ್ಬ ಉಗ್ರ ಎನ್ನುತ್ತಿರುವಾಗ ಪರ ವಹಿಸುವುದು ಹೇಗೆ?

ಸದ್ಯ ಎನ್‌ಐ‌ಎ ಅವರ ವಿರುದ್ಧ ದೋಷಾರೋಪಣೆ ಮಾಡಿಲ್ಲ. ಹಾಗಾದರೆ, ಕಳೆದ ಆರು ತಿಂಗಳು ಅವರು ಕಳೆದುಕೊಂಡಿದ್ದನ್ನೆಲ್ಲಾ ಹಿಂದಕ್ಕೆ ಪಡೆಯಲು ಸಾಧ್ಯವೇ? ಪೊಲೀಸರು ಕೊಟ್ಟ ಟಾರ್ಚರ್ ಮರೆಯಲು ಸಾಧ್ಯವೇ? ಅವರ ಮಧ್ಯಮ ವರ್ಗದ ಕುಟುಂಬ ಅನುಭವಿಸಿರುವ ಯಾತನೆಗೆ ಸಮಾಧಾನ ಹೇಳುವವರಾರು? ಎಂತಹ ಅಸಹ್ಯ ಪರಿಸ್ಥಿತಿ ಇದೆ ನೋಡಿ, ಸಿದ್ದಿಕಿ ವಿರುದ್ಧ ಸುಳ್ಳೇ ಸುಳ್ಳೆ ವರದಿ ಮಾಡಿದವರು ಮುಂದೆ ಬಂದು ಒಂದೇ ಒಂದು ಸಾಲಿನ ‘ತಪ್ಪಾಯ್ತು’ ಎಂದು ಬರೆಯುವುದಿಲ್ಲ.

ಡೆಕ್ಕನ್ ಹೆರಾಲ್ಡ್‌ನಲ್ಲಿ ಮುಖ್ಯ ಸ್ಥಾನದಲ್ಲಿರುವ ರಶೀದ್ ಕಪ್ಪನ್ ಅವರು ತಮ್ಮ ಫೇಸ್ ಬುಕ್ ಸ್ಟೇಟಸ್‍ನಲ್ಲಿ ಸಿದ್ದಿಕಿಯನ್ನು ವರದಿಗಾರನನ್ನಾಗಿ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ. ಇದು ಸಮಾಧಾನಕರ ಸಂಗತಿ. ಮುಂದಿನ ದಿನಗಳಲ್ಲಿ ಸಿದ್ದಿಕಿ ವರದಿಗಾರಿಕೆಗೆ ಬೀದಿಗೆ ಬಂದರೆ, ಅವರ ವಿರುದ್ದ arnabಕಪೋಲ ಕಲ್ಪಿತ ಸುದ್ದಿ ಬರೆದ ಸಹೋದ್ಯೋಗಿಗಳು ಅನುಮಾನದ ಕಣ್ಣುಗಳಿಂದ ನೋಡುವುದನ್ನೇ ನಿಲ್ಲಿಸುತ್ತಾರಾ?

ದೆಹಲಿ ವಿ.ವಿ ಕಾಲೇಜಿನ ಉಪನ್ಯಾಸಕ ಎಸ್. ಆರ್. ಗಿಲಾನಿ ಪಾರ್ಲಿಮೆಂಟ್ ದಾಳಿ ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗಿದ್ದರೂ “ಟೈಮ್ಸ್ ನೌ”ನ ಅರ್ನಾಬ್ ಗೋಸ್ವಾಮಿ ಕಣ್ಣಲ್ಲಿ ಇಂದಿಗೂ ಆರೋಪಿ. ಅಫ್ಜಲ್ ಗುರು ನೇಣುಗಂಬಕ್ಕೆ ಏರಿದ ಸಂದರ್ಭದ ಟಿವಿ ಚರ್ಚೆಯಲ್ಲಿ ‘ಗಿಲಾನಿ ಹೇಗೋ ಬಚಾವಾಗಿಬಿಟ್ಟ’ ಎಂದು ಕೀಳು ಮಟ್ಟದ ಟೀಕೆ ಮಾಡಿದ್ದರು ಗೋಸ್ವಾಮಿ. ಗಿಲಾನಿ ಮತ್ತೊಂದು ಚಾನೆಲ್ ನಲ್ಲಿ ಸಂವಾದಕನಾಗಿ ಪಾಲ್ಗೊಳ್ಳುವುದನ್ನೂ ಮೂದಲಿಸಿದ್ದರು. ಹೀಗಿರುವಾಗ ಸಿದ್ದಿಕಿ ಬಗ್ಗೆ ಮಾಧ್ಯಮದ ಬೀದಿ ಬೀದಿಗಳಲ್ಲಿರುವ ಮರಿ ಗೋಸ್ವಾಮಿಗಳು ಭಿನ್ನವಾಗಿ ವರ್ತಿಸುತ್ತಾರೆಂದು ನಿರೀಕ್ಷಿಸುವುದು ಕಷ್ಟಕರ. ಸಿದ್ದಿಕಿಗೆ ಯಶಸ್ಸು ಲಭಿಸಲಿ. ಹೆಚ್ಚು ಗೋಜಲುಗಳಿಲ್ಲದೆ ಎಲ್ಲಾ ಆರೋಪಗಳಿಂದ ಮುಕ್ತನಾಗಿ ಹೊರಗೆ ಬರಲಿ.

2 thoughts on “ಸಿದ್ದಿಕಿ ಪ್ರಕರಣ: ‘ಮಾಸ್ಟರ್ ಮೈಂಡ್’ ಎಂದವರು ಈಗ ಏನ್ಮಾಡ್ತಾರೆ?

  1. Vasanth

    Our TV anchors have no head. TV 9 channel has already accused IM as the mastermind behind Hydrabad twin blast. I don’t how they got the information. Police are still searching for the clue, here our TV anchors sitting in newsroom with makeup found Raju Batkal and other IM members responsible for the crime. How come? They also told the viewers how they planned for the blast for the last six months. These people are most irresponsible and have no knowledge of anything except blody communication skills in front of the camera.

    Reply

Leave a Reply

Your email address will not be published.