Daily Archives: February 25, 2013

ಕುಲಪತಿಗಳಲ್ಲ, ಇವರು ಹಣಪತಿಗಳು…

– ಜಿ.ಮಹಂತೇಶ್, ಭದ್ರಾವತಿ

“ಆ ಕುರ್ಚಿ ಮೇಲೆ ಅವರು ಕುಳಿತಿರುತ್ತಿದ್ದರೆ ದೇವರೆ ಆ ಕುರ್ಚಿ ಮೇಲೆ ಕುಳಿತುಕೊಂಡಿದ್ದರು ಎಂದು ನನಗೆ ಭಾಸವಾಗುತ್ತಿತ್ತು. ಅಂಥಾ ದೇವರು ಕೂತಿದ್ದ ಕುರ್ಚಿ ಮೇಲೆ ಇವತ್ತು ಅರ್ಹತೆ, ಮುನ್ನೋಟ ಇಲ್ಲದವರೆಲ್ಲ ಕುಳಿತು ಕುರ್ಚಿ ಮಹತ್ವಕ್ಕೆ ಧಕ್ಕೆ ತಂದು ಬಿಟ್ಟರು.”

ಇಲ್ಲಿ ಕುರ್ಚಿ ಎಂದು ಹೇಳುತ್ತಿರುವುದು ಒಂದು ಪ್ರತಿಷ್ಠಿತ ವಿಶ್ವವಿದ್ಯಾಲಯದ ಕುಲಪತಿ ಕುರ್ಚಿ ಬಗ್ಗೆ. ಇಲ್ಲಿ ಕೂತಿದ್ದ ದೇವರು ಯಾರೆಂದರೆ, kuvempuಜಗತ್ತಿಗೆ ವಿಶ್ವಮಾನವ ಸಂದೇಶವನ್ನು ಸಾರಿದ ಯುಗದ ಕವಿ. ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಹಿರಿಯ ಪ್ರಾಧ್ಯಾಪಕ ಹಾಗೂ ಕಟು ವಿಮರ್ಶಕರೊಬ್ಬರು ವಿಶ್ವವಿದ್ಯಾಲಯ ಆವರಣದಲ್ಲಿ ಹಣದ ವಹಿವಾಟು ಮತ್ತು ಜಾತಿಯ ಗಲೀಜನ್ನು ಕಂಡು, “ಇಂಥಾ ವೈಸ್ ಛಾನ್ಸಲರ್​ಗಳೆಲ್ಲ ವಿಶ್ವವಿದ್ಯಾಲಯವನ್ನು ಹಾಳು ಮಾಡಿಬಿಟ್ಟರು” ಎಂದು ತಣ್ಣಗೆ ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ಮೌನವಾದರು.

ಶತಮಾನೋತ್ಸವ ಹೊಸ್ತಿಲಲ್ಲಿರುವ ವಿಶ್ವವಿದ್ಯಾಲಯದಲ್ಲಿ ಅದೇ ಮೌನ ಈಗ ಹೆಪ್ಪುಗಟ್ಟಿದೆ. ಹೌದು, ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆ ಎನ್ನುವುದು ಇವತ್ತು ಹರಾಜಿನಲ್ಲಿ ಕೂಗಿ ಉಳ್ಳವರು ಅದನ್ನು ಖರೀದಿಸುತ್ತಿರುವ ಸರಕಾಗಿದೆ. ಕಳೆದ ಏಳೆಂಟು ವರ್ಷಗಳಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಪ್ರಕ್ರಿಯೆಗಳನ್ನು ನೋಡಿದರೆ ಇದು ಅರಿವಿಗೆ ಬರುತ್ತದೆ.

ಕುಲಪತಿಗಳ ನೇಮಕದಲ್ಲಿ ಮೂಗಿಗೆ ಬಡಿಯುತ್ತಿರುವುದು ಜಾತಿಯ ಕಮಟು ವಾಸನೆ. ವಿಶ್ವವಿದ್ಯಾಲಯವನ್ನು ಮುನ್ನಡೆಸಬೇಕಾದ ಕುಲಪತಿಗಳು ಕೋಟಿ ಕೋಟಿ ರೂಪಾಯಿ ಕೊಟ್ಟು ನೇಮಕವಾಗುತ್ತಿರುವ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲೂ ವ್ಯಾಪಕ ಚರ್ಚೆಗೀಡಾಗಿತ್ತು. ವಿಧಾನ ಮಂಡಲದ ಅಧಿವೇಶನದಲ್ಲಿ ಕುಲಪತಿಗಳ ನೇಮಕದ ಭ್ರಷ್ಟಾಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು, ’ಶೈಕ್ಷಣಿಕ ವಲಯದಲ್ಲಿ ಉತ್ತಮ ಅನುಭವ ಹೊಂದಿರುವ ಪ್ರಾಧ್ಯಾಪಕರ ಮನಸ್ಸಿಗೆ ನೋವಾಗಿದೆ. ಇದು ನಿಜಕ್ಕೂ ವಿಷಾದನೀಯ,’ ಎಂದು ಮಂಗಳೂರಿನ ಸಮಾರಂಭದಲ್ಲಿ ಹೇಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಆದರೆ, ಇದು ವಿಷಾದ ವ್ಯಕ್ತಪಡಿಸಿ, ಸುಮ್ಮನೆ ಕೂರುವ ಸಂಗತಿಯೂ ಅಲ್ಲ. ಸರಳ ಮತ್ತು ಸುಲಭದ ವಿಚಾರವೂ ಅಲ್ಲ. ವಿಶ್ವವಿದ್ಯಾಲಯಗಳು ಈಗ ಬ್ಯುಸಿನೆಸ್ ಸೆಂಟರ್​ಗಳಾಗುತ್ತಿವೆ. ಕೇಂದ್ರ ಧನ ಸಹಾಯ ಆಯೋಗ ಮತ್ತು ರಾಜ್ಯ ಸರ್ಕಾರ ಕೋಟಿ ಕೋಟಿಗಳ ಲೆಕ್ಕದಲ್ಲಿ ಅನುದಾನದ ಹೊಳೆಯನ್ನೇ ಹರಿಸುತ್ತಿರುವುದರಿಂದ ಎಲ್ಲರೂ ತಮ್ಮ ಶೈಕ್ಷಣಿಕ ಜೀವಮಾನದಲ್ಲಿ ಒಮ್ಮೆಯಾದರೂ ಕುಲಪತಿಗಳಾಗಲೇಬೇಕು ಎಂದು ವಿಧಾನಸೌಧದ ಮೂರನೇ ಮಹಡಿಯ ಕಂಬಗಳನ್ನು ಸುತ್ತು ಹಾಕುತ್ತಿರುವುದೇನೂ ಗುಟ್ಟಾಗಿ ಉಳಿದಿಲ್ಲ.

ಶತಮಾನೋತ್ಸವ ಹೊಸ್ತಿಲಲ್ಲಿರುವ ವಿಶ್ವವಿದ್ಯಾಲಯಕ್ಕೆ ಕುಲಪತಿ ಹುದ್ದೆಗೆ ನೇಮಕಕ್ಕೆ ಸಂಬಂಧಿಸಿದಂತೆ ನಡೆದಿರುವ ಎಲ್ಲಾ ಪ್ರಕ್ರಿಯೆಗಳು ಅನುಮಾನಕ್ಕೀಡಾಗಿದೆ. ಶೋಧನಾ ಸಮಿತಿಗೆ ಸದಸ್ಯರೊಬ್ಬರ ನೇಮಕದಿಂದ ಹಿಡಿದು, ಕುಲಪತಿ ಹುದ್ದೆಗೆ ಕೂರುವವರೆಗೂ ಎಲ್ಲಾ ಪ್ರಕ್ರಿಯೆಗಳನ್ನು ತನಿಖೆಗೆ ಅಥವಾ ವಿಚಾರಣೆಗೆ ಒಳಪಡಿಸಿದರೆ, ಬಹಳಷ್ಟು ಸತ್ಯಗಳು ಹೊರಗೆ ಬರುವುದರಲ್ಲಿ ಅನುಮಾನವಿಲ್ಲ. ಕುಲಾಧಿಪತಿಗಳ ಕಚೇರಿಯಿಂದಲೇ ನೇಮಕ ಪತ್ರವನ್ನು ಖುದ್ದು ಪಡೆದುಕೊಂಡು ನೇರವಾಗಿ ವಿಶ್ವವಿದ್ಯಾಲಯಕ್ಕೆ ಹೋಗಿ ಅಧಿಕಾರ ಸ್ವೀಕರಿಸಿರುವುದನ್ನು ನೋಡಿದರೇ ಎಂಥವರಿಗೂ ಅನುಮಾನ ಬರದಿರದು.

ಈ ನೇಮಕ ಪ್ರಕ್ರಿಯೆ ಆದ ನಂತರ ಇನ್ನೆರಡು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗಳಿಗೆ ಆಗಿರುವ ನೇಮಕದ ಹಿಂದೆಯೂ ಇಂಥದ್ದೇ ಅನುಮಾನಗಳು ಎದುರಾಗಿವೆ. ಶತಮಾನೋತ್ಸವ ಸಂಭ್ರಮದ ಹೆಜ್ಜೆಗಳನ್ನಿಡುತ್ತಿರುವ ವಿಶ್ವವಿದ್ಯಾಲಯಕ್ಕೆ ನೇಮಕವಾದವರೇ ಇನ್ನೆರಡು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗೆ ನೇಮಕ ಮಾಡಿಸುವ “ಗುತ್ತಿಗೆ” ಪಡೆದುಕೊಂಡಿದ್ದರು, ಹೀಗಾಗಿ ಅವರ ಇಚ್ಛೆಯಂತೆ ಎರಡೂ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗಿದ್ದಾರೆ ಎಂಬ ಚರ್ಚೆ ಈಗ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿರುವುದೇನೂ ಗುಟ್ಟಾಗಿ ಉಳಿದಿಲ್ಲ.

ತಾವು ಬಯಸಿದವರೇ ಕುಲಪತಿಗಳಾಗಬೇಕು ಎಂದು “ಗುತ್ತಿಗೆ” ಪಡೆದುಕೊಂಡ ಪ್ರಭೃತಿಗಳು, ನೇಮಕ ಪತ್ರಕ್ಕೆ ಸಹಿ ಮಾಡಿಸಲು ರಾತ್ರಿ ಇಡೀ ರಾಜಭವನದಲ್ಲಿ ತಂಗಿದ್ದರು ಎಂಬ ಸುದ್ದಿಯೂ ಶೈಕ್ಷಣಿಕ ವಲಯದಲ್ಲಿ ಹರಿದಾಡುತ್ತಿದೆ. ಸತ್ಯಾಂಶಗಳು ಬಯಲಿಗೆ ಬರಬೇಕಾದರೆ, ಕುಲಪತಿಗಳ ನೇಮಕ ದಿನಾಂಕದ ಹಿಂದುಮುಂದಿನ ದಿನಗಳಲ್ಲಿ ಯಾರ್‍ಯಾರು ರಾಜಭವನದಲ್ಲಿ ತಂಗಿದ್ದರು ಎನ್ನುವ ಮಾಹಿತಿ ಹೊರಬೀಳಬೇಕಷ್ಟೆ.

ಇಲ್ಲಿ, ಇನ್ನೂ ಒಂದು ವಿಚಾರವನ್ನು ಹೇಳಬೇಕು. ಅದೇನಂದರೇ ವಿಶ್ವವಿದ್ಯಾಲಯ ಕುಲಪತಿಗಳ ನೇಮಕದಲ್ಲಿ ಸಾಮಾಜಿಕ ನ್ಯಾಯ ಪಾಲನೆ ಬಗ್ಗೆ. ಇತ್ತೀಚೆಗೆ vc-rangappaಮೂವರು ಕುಲಪತಿಗಳಾಗಿ ನೇಮಕವಾಗಿರುವ ವಿಶ್ವವಿದ್ಯಾಲಯಗಳ ಮಟ್ಟಿಗೆ ಹೇಳುವುದಾದರೇ ಸಾಮಾಜಿಕ ನ್ಯಾಯ ಕಸದ ಬುಟ್ಟಿಗೆ ಸೇರಿದೆ ಎಂಬುದು ನಿರ್ವಿವಾದ. ಮೂರು ವಿಶ್ವವಿದ್ಯಾಲಯಗಳಿಗೆ ನೇಮಕವಾಗಿರುವ ಮೂರೂ ಮಂದಿ ಒಂದೇ ಸಮುದಾಯಕ್ಕೆ ಸೇರಿದವರು ಎಂಬುದು ಇಲ್ಲಿ ಗಮನಾರ್ಹ. ಸಾಮಾಜಿಕ ನ್ಯಾಯವನ್ನು ಕಾಪಾಡಬೇಕಾದ ಕುಲಾಧಿಪತಿಗಳೇ ಅದನ್ನು ಕಸದ ಬುಟ್ಟಿಗೆ ಎಸೆದಿರುವುದು ನಿಜಕ್ಕೂ ದುರಂತ ಎಂದು ಹೇಳದೇ ಬೇರೆ ವಿಧಿ ಇಲ್ಲ.

ಮೊನ್ನೆ ಮೊನ್ನೆ ಪ್ರಧಾನಿ ಮನಮೋಹನ್ ಸಿಂಗ್ ದೇಶದ ವಿಶ್ವವಿದ್ಯಾಲಯಗಳ ಕಾರ್ಯಕ್ಷಮತೆ ಬಗ್ಗೆ ತುಸು ಬೇಸರ ಮತ್ತು ಅಸಮಾಧಾನದಿಂದಲೇ ಮಾತನಾಡಿದ್ದರು. ಜಗತ್ತಿನ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೂ ವಿಶ್ವವಿದ್ಯಾಲಯ ಇಲ್ಲ ಎಂದು ಬೇಸರಿಸಿದ್ದರು. ಕುಲಪತಿಗಳ ನೇಮಕದಲ್ಲಿ ಹಣದ ಪ್ರಭಾವ ಮತ್ತು ಜಾತಿಯ ಗಲೀಜು ಎಲ್ಲಿವರೆಗೆ ಇರುತ್ತದೆಯೋ ಅಲ್ಲಿವರೆಗೆ ಇಂಥ ಅಸಮಾಧಾನದ ಮಾತುಗಳು ಕೇಳಿ ಬರುತ್ತಲೇ ಇರುತ್ತವೆ. ಜಿಲ್ಲೆಗೊಂದು ವಿಶ್ವವಿದ್ಯಾಲಯ ಬೇಕು ಎಂದು ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಕುಲಪತಿಗಳ ನೇಮಕದ ಬಗ್ಗೆ ಇನ್ನಷ್ಟು ಗಂಭೀರವಾಗಿ ಚರ್ಚೆಗಳಾಗಬೇಕಿದೆ. ವಿಶ್ವವಿದ್ಯಾಲಯಕ್ಕೆ ವಿವಿಧ ಮೂಲಗಳಿಂದ ಹರಿದು ಬರುತ್ತಿರುವ ಅನುದಾನದ ಲೆಕ್ಕಾಚಾರವೂ ಪರಿಣಾಮಕಾರಿಯಾಗಿ ಪರಿಶೋಧನೆ ಆಗಬೇಕಿದೆ. ಬ್ಯುಸಿನೆಸ್ ಸೆಂಟರ್‌ಗಳಾಗುತ್ತಿರುವ ವಿಶ್ವವಿದ್ಯಾಲಯಗಳನ್ನು ಶೈಕ್ಷಣಿಕ ಸಂಶೋಧನೆ ವ್ಯಾಪ್ತಿಗೆ ತರುವುದು ಮತ್ತು ಬೋಧನಾ ಅನುಭವ ಹಾಗೂ ಮುನ್ನೋಟ ಇರುವ ಪ್ರಾಧ್ಯಾಪಕರನ್ನು ಕುಲಪತಿಗಳನ್ನಾಗಿ ನೇಮಿಸುವುದೊಂದೇ ಇದಕ್ಕೆ ಪರಿಹಾರ. ಇದು ಇವತ್ತಿನ ಅಗತ್ಯ ಮತ್ತು ಅನಿವಾರ್ಯವೂ ಹೌದು.