ನವೀನ್ ಸೂರಿಂಜೆ : ಮುಖ್ಯಮಂತ್ರಿಗಳಿಗೊಂದು ಪತ್ರ…

– ರವಿ ಕೃಷ್ಣಾರೆಡ್ಡಿ

ಸ್ನೇಹಿತರೆ,

ರಾಜ್ಯ ಸರ್ಕಾರದ ಸಚಿವ-ಸಂಪುಟ ನವೀನ್ ಸೂರಿಂಜೆಯವರೆ ಮೇಲಿನ ಆಪಾದನೆಗಳನ್ನು ಕೈಬಿಡಲು ತೀರ್ಮಾನಿಸಿ ಇಂದಿಗೆ ಸರಿಯಾಗಿ ನಾಲ್ಕು ವಾರವಾಯಿತು. ಅದಾದ ನಂತರ ಮಾನ್ಯ ಮುಖ್ಯಮಂತ್ರಿಗಳು ನ್ಯಾಯಪ್ರಜ್ಞೆಯಿಂದ ವರ್ತಿಸಿದ್ದರೆ ಇಷ್ಟೊತ್ತಿಗೆ ನವೀನ್ ಸೂರಿಂಜೆ ಎಂದೋ ಬಿಡುಗಡೆ ಆಗಬೇಕಿತ್ತು. ಸಚಿವ ಸಂಪುಟದ ನಿರ್ಧಾರಗಳ ಮೇಲೆ ಮುಖ್ಯಮಂತ್ರಿ ಸಹಿ ಹಾಕುವ ಕ್ರಮ ಒಂದಿದೆ. ಅದು ಕೇವಲ ಶಿಷ್ಟಾಚಾರ. ಸಂಪುಟ ಸಭೆ ಆದ ದಿನವೇ ಅಥವ ಮಾರನೆಯ ದಿನವೇ ಮುಖ್ಯಮಂತ್ರಿ ಸಹಿ ಹಾಕುವ ಪ್ರಕ್ರಿಯೆ ಮುಗಿಯುತ್ತದೆ. ಶಿಷ್ಟಾಚಾರದಂತೆ ನಾಲ್ಕು ವಾರಗಳ ಹಿಂದೆ (31-01-13) ಆದ ಸಂಪುಟ ಸಭೆ ತೀರ್ಮಾನಗಳ ಮೇಲೆ ಮುಖ್ಯಮಂತ್ರಿ ಮಾರನೆಯ ದಿನ ಸಹಿ ಹಾಕಿದರು. ಆದರೆ ನವೀನ್ ಸೂರಿಂಜೆ ವಿಷಯದ ಮೇಲಿನ ನಿರ್ಧಾರದ ಕಡತಕ್ಕೆ ಸಹಿ ಹಾಕದೆ ಹಾಗೆಯೇ ಉಳಿಸಿಕೊಂಡರು. ಇಂತಹುದೊಂದು ಘಟನೆ ಬಹುಶ: ಇಲ್ಲಿಯವರೆಗಿನ ಯಾವೊಂದು ಸಚಿವ ಸಂಪುಟದ ತೀರ್ಮಾನದ ವಿಷಯಕ್ಕೂ ಆಗಿಲ್ಲ. ಇದೊಂದು ಕೆಟ್ಟ ಪರಂಪರೆ.

ಇದೆಲ್ಲ ಯಾಕಾಯಿತು, ಇದರ ಹಿಂದೆ ಯಾರಿದ್ದಾರೆ, ಇಷ್ಟಕ್ಕೂ ನಮ್ಮ ಮುಖ್ಯಮಂತ್ರಿಗಳ ಘನತೆ, ಧೀಮಂತಿಕೆ, ನಿಷ್ಟುರತೆ, ನ್ಯಾಯಪ್ರಜ್ಞೆ ಎಷ್ಟಿದೆ naveen-soorinjeಎನ್ನುವ ವಿವರಗಳಿಗೆ ನಾನು ಹೋಗುವುದಿಲ್ಲ. ಇವೆಲ್ಲವನ್ನೂ ಬದಿಗಿಟ್ಟು ನಮ್ಮ ಈ ಮುಖ್ಯಮಂತ್ರಿ ತಮಗೆ ವೈಯಕ್ತಿಕವಾಗಿ ಹೆಚ್ಚು ಅನಾನುಕೂಲವಾಗದ ಹಾಗೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ಅದು ನಮ್ಮನ್ನಾಳುವ ಜನರ ಸ್ವಾರ್ಥವನ್ನೂ, ಹೇಡಿತನವನ್ನೂ, ಅಧಿಕಾರಲೋಲುಪತೆಯನ್ನೂ, ನ್ಯಾಯಪ್ರಜ್ಞಾರಾಹಿತ್ಯವನ್ನೂ ತಿಳಿಸುತ್ತದೆ ಎಂದು ಭಾವಿಸುತ್ತೇನೆ.

ಇತ್ತೀಚಿನ ದಿನಗಳಲ್ಲಿ ಕೆಲವು ಪತ್ರಿಕೆಗಳು ಈ ವಿಷಯದ ಹಿಂದೆ ಬಿದ್ದಿದ್ದು ಫಾಲೊ-ಅಪ್ ಸ್ಟೋರಿಗಳನ್ನು ಮಾಡುತ್ತಿದ್ದಾರೆ (ದಿ ಹಿಂದು, ಡೆಕ್ಕನ್ ಕ್ರಾನಿಕಲ್). ರಾಜ್ಯದ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳೂ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಈ ಮೂಲಕ ಕೋರುತ್ತೇನೆ. ಹಾಗೆಯೇ, ನಾಡಿನ ನ್ಯೂಸ್ ಚಾನೆಲ್‌ಗಳೂ ಈ ವಿಷಯದ ಮೇಲೆ ಧ್ವನಿಯೆತ್ತಿ ತಮ್ಮ ಸಹೊದ್ಯೋಗಿಗೆ ನ್ಯಾಯ ದೊರಕಿಸಿಕೊಳ್ಳಬೇಕೆಂದೂ ವಿನಂತಿಸುತ್ತೇನೆ. ನವೀನ್ ಸೂರಿಂಜೆ ಜೈಲಿನಲ್ಲಿರುವ ಪ್ರತಿ ಕ್ಷಣವೂ ಅನ್ಯಾಯದ ವಿಸ್ತರಣೆ ಎಂದು ಪ್ರತ್ಯೇಕವಾಗಿ ಯಾರಿಗೂ ನೆನಪಿಸಬೇಕಿಲ್ಲ ಎಂದು ಭಾವಿಸುತ್ತೇನೆ.

ಇನ್ನು, ನಾನು, ನೀವು ಏನು ಮಾಡಬಹುದು? ಇಷ್ಟು ದಿನ ಕಾದದ್ದಾಯಿತು. ನೇರವಾಗಿ ಮುಖ್ಯಮಂತ್ರಿಗೇ ಪತ್ರ ಬರೆಯೋಣ, ಪೆಟಿಷನ್ ಮಾಡೋಣ. ಕೇವಲ ಅರ್ಧ ನಿಮಿಷದಲ್ಲಿ ನೀವು ಮುಖ್ಯಮಂತ್ರಿ ಕಚೇರಿಗೆ ಇಮೇಲ್ ಮಾಡಬಹುದು. ಅದಕ್ಕಾಗಿ ಈ ಪುಟದಲ್ಲಿ ಸುಲಭವಾದ ಸೌಲಭ್ಯ ಇದೆ. ಇಲ್ಲಿ ಕೆಳಗಿರುವ ಪತ್ರವನ್ನು ನೋಡಿ, ಅದಕ್ಕೆ ನಿಮ್ಮ ಸಹಮತಿಯಿದ್ದಲ್ಲಿ ನಿಮ್ಮ ಹೆಸರು, ಊರು, ಮತ್ತು ಇಮೇಲ್ ವಿಳಾಸ ನೀಡಿ “Sign Now” ಬಟನ್ ಒತ್ತಿದರೆ ಸಾಕು, ಈ ಪತ್ರ ನಿಮ್ಮ ಹೆಸರಿನಲ್ಲಿ ನೇರವಾಗಿ ಮುಖ್ಯಮಂತ್ರಿ, ಗೃಹ ಸಚಿವ, ಮತ್ತು ರಾಜ್ಯದ ಮುಖ್ಯಕಾರ್ಯದರ್ಶಿಗಳ ಇಮೇಲ್ ವಿಳಾಸಕ್ಕೆ ಹೋಗುತ್ತದೆ. ನಾವು ಇಷ್ಟನ್ನಾದರೂ ಮಾಡಬಹುದಲ್ಲವೇ?

[emailpetition id=”1″]
[signaturelist id=”1″]

One thought on “ನವೀನ್ ಸೂರಿಂಜೆ : ಮುಖ್ಯಮಂತ್ರಿಗಳಿಗೊಂದು ಪತ್ರ…

  1. Ananda Prasad

    ತಮ್ಮ ಸಹೋದ್ಯೋಗಿಯೊಬ್ಬ ತನ್ನ ಕರ್ತವ್ಯ ನಿರ್ವಹಿಸಿದ ಕಾರಣಕ್ಕಾಗಿ ಜೈಲಿನಲ್ಲಿ ಕೊಳೆಯುತ್ತಿರುವಾಗ ಈ ಬಗ್ಗೆ ರಾಜ್ಯದ ಪತ್ರಿಕೆಗಳು ಹಾಗೂ ಟಿವಿ ವಾಹಿನಿಗಳು ನಿರಂತರ ಧ್ವನಿ ಎತ್ತಿ ನ್ಯಾಯ ಸಿಗುವವರೆಗೂ ಹೊರಾಡಬೇಕಾಗಿತ್ತು. ಆದರೆ ರಾಜ್ಯದ ಮಾಧ್ಯಮಗಳು ಈ ವಿಷಯದಲ್ಲಿ ಮೌನವಾಗಿವೆ. ಇದನ್ನು ನೋಡುವಾಗ ರಾಜ್ಯದಲ್ಲಿ ಮಾಧ್ಯಮ ಸ್ವಾತಂತ್ರ್ಯ ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ಮೂಡುತ್ತದೆ. ಕರ್ನಾಟಕದಲ್ಲಿ ಮಾಧ್ಯಮಗಳು ಸರ್ಕಾರದ ಹಿಡಿತದಲ್ಲಿ ಇವೆಯೋ ಹೇಗೆ? ಅಥವಾ ಸರ್ಕಾರದ ಜಾಹೀರಾತುಗಳ ಆಸೆಯಿಂದ ಮಾಧ್ಯಮಗಳು ಹೀಗೆ ವರ್ತಿಸುತ್ತಿವೆಯೋ? ಅಥವಾ ಮಾಧ್ಯಮಗಳಿಗೆ ಸರ್ಕಾರದ ವತಿಯಿಂದ ಬೇರೆ ಆಮಿಷಗಳಿವೆಯೋ ಏನೋ?

    Reply

Leave a Reply

Your email address will not be published. Required fields are marked *