Daily Archives: March 1, 2013

ಅತಿ ದೈವಭಕ್ತಿ ಇದ್ದೂ ನಮ್ಮ ದೇಶ ನಾಗರಿಕತೆಯಲ್ಲಿ ಯಾಕೆ ಹಿಂದೆ?

– ಆನಂದ ಪ್ರಸಾದ್

ನಮ್ಮ ದೇಶವು ಸಾವಿರಾರು ವರ್ಷಗಳ ಇತಿಹಾಸವುಳ್ಳ ಅಧ್ಯಾತ್ಮಿಕ ಪರಂಪರೆ ಹೊಂದಿದೆ ಹಾಗೂ ಪ್ರಪಂಚದಲ್ಲೇ ಶ್ರೇಷ್ಠ ಸಂಸ್ಕೃತಿ ಉಳ್ಳ ದೇಶವೆಂದು ಹಿಂದುತ್ವವಾದಿಗಳು ಅವಕಾಶ ಸಿಕ್ಕಿದಾಗಲೆಲ್ಲ ಹೇಳಿಕೊಳ್ಳುತ್ತಿರುತ್ತಾರೆ. ಆದರೆ ನಮ್ಮ ದೇಶದ ಎಲ್ಲಾ ರಂಗಗಳಲ್ಲೂ ಇದಕ್ಕೆ ವ್ಯತಿರಿಕ್ತವಾದ ಅನುಭವ ಜನತೆಗೆ ಆಗುತ್ತಾ ಇರುತ್ತದೆ. ನಮ್ಮ ದೇಶದ ಜನ ದೇವರಲ್ಲಿ ಅಪಾರವಾದ ಭಕ್ತಿ ಹಾಗೂ ಶ್ರದ್ಧೆ ತೋರಿಸುತ್ತಾರೆಯೇ ವಿನಃ ಅದೇ ಶ್ರದ್ಧೆ ಹಾಗೂ ಕಾಳಜಿಯನ್ನು ತಮ್ಮ ಸಹಮಾನವರ ಬಗ್ಗೆ ತೋರಿಸುವುದಿಲ್ಲ. ಹೀಗಾಗಿ ಆಧ್ಯಾತ್ಮಿಕ ಶ್ರದ್ಧೆ ಹಾಗೂ ದೇವರ ಭಕ್ತಿಗೂ ಹಾಗೂ ನಾಗರಿಕತೆಯ ವಿಕಾಸಕ್ಕೂ ಸಂಬಂಧ ಇರುವಂತೆ ಕಾಣುವುದಿಲ್ಲ. tirupati-brahmotsavತೀರಾ ಇತ್ತೀಚೆಗಿನ ಕೆಲವು ಶತಮಾನಗಳ ಇತಿಹಾಸವುಳ್ಳ ಅಮೇರಿಕಾ ಹಾಗೂ ಯೂರೋಪಿನ ದೇಶಗಳು ನಾಗರಿಕತೆಯಲ್ಲಿ ನಮಗಿಂತ ಮುನ್ನಡೆ ಸಾಧಿಸಿರುವುದು ಕಂಡುಬರುತ್ತದೆ. ಅಲ್ಲಿನ ದೇಶಗಳು ತಮ್ಮ ನಾಗರಿಕರ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಿವೆ. ಅಲ್ಲಿನ ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳಿರಲಿ, ರಾಜಕಾರಣಿಗಳಿರಲಿ ನಮ್ಮ ದೇಶಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಕಾಳಜಿಯನ್ನು ತಮ್ಮ ದೇಶದ ಪ್ರಜೆಗಳ ಬಗ್ಗೆ ತೋರಿಸುತ್ತಾರೆ. ತೀರಾ ಇತ್ತೀಚೆಗಿನ ಇತಿಹಾಸ ಉಳ್ಳ ಅಲ್ಲಿನ ದೇಶಗಳು ಇದನ್ನು ಸಾಧಿಸಿರುವುದು ಅಲ್ಲಿನ ನಾಗರಿಕತೆ ನಮ್ಮ ದೇಶಕ್ಕಿಂತ ಮುಂದುವರಿದಿರುವುದನ್ನು ತೋರಿಸುತ್ತದೆ.

ನಮ್ಮ ದೇಶದಲ್ಲಿ ರಾಜಕಾರಣಿಗಳಾಗಲಿ, ಸರ್ಕಾರೀ ಅಧಿಕಾರಿಗಳಾಗಲೀ ಹೆಚ್ಚಿನವರೂ ಪರಮ ದೈವಭಕ್ತರೇ ಆಗಿರುತ್ತಾರೆ. ಇಂಥ ದೈವಶ್ರದ್ಧೆ ಇದ್ದೂ ಭ್ರಷ್ಟಾಚಾರ, ಮೋಸ, ವಂಚನೆ, ತಮ್ಮ ಕೆಲಸ ನಿರ್ವಹಿಸುವಲ್ಲಿ ಉದಾಸೀನತೆ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ದೈವಭಕ್ತಿ ತಮ್ಮ ಸ್ವಾರ್ಥ ಸಾಧನೆಗೆ ಮಾತ್ರ ನಮ್ಮ ಜನರಲ್ಲಿ ಇರುವಂತೆ ಕಂಡುಬರುತ್ತದೆ. ನಮ್ಮ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿವರ್ಗ ಭ್ರಷ್ಟಾಚಾರದಲ್ಲಿ ಇಡೀ ಪ್ರಪಂಚದಲ್ಲೇ ಮೊದಲ ಕೆಲ ಸ್ಥಾನಗಳಲ್ಲೇ ಇರುತ್ತಾರೆ. ದೈವಭಕ್ತರಲ್ಲಿ ತಮ್ಮ ಸಹಮಾನವರ ಬಗ್ಗೆ ಹೆಚ್ಚಿನ ಕಾಳಜಿ ಇಲ್ಲದೆ ಹೋದರೆ ದೈವಭಕ್ತಿ ಇದ್ದು ಏನು ಪ್ರಯೋಜನ? ಯುರೋಪ್ ಹಾಗೂ ಅಮೇರಿಕಾ ದೇಶಗಳ ಉದ್ಯಮಿಗಳು ನಮ್ಮ ದೇಶದ ಉದ್ಯಮಿಗಳಷ್ಟು ಪರಮ ದೈವಭಕ್ತರಲ್ಲದಿದ್ದರೂ tirupati-brahmotsavತಮ್ಮ ಸಂಪಾದನೆಯ ಬಹುಪಾಲನ್ನು ಸಮಾಜದ ಒಳಿತಿಗೆ ದಾನ ಮಾಡುವ ಕಾಳಜಿ ತೋರಿಸುತ್ತಾರೆ. ಆದರೆ ಪರಮ ದೈವಭಕ್ತರಾಗಿರುವ ನಮ್ಮ ಕೋಟ್ಯಾಧಿಪತಿ ಉದ್ಯಮಿಗಳು ಸಮಾಜದ ಒಳಿತಿಗೆ ದಾನ ನೀಡುವ ಪ್ರಮಾಣ ಬಹಳ ಕಡಿಮೆ ಇದೆ. ನಿಜವಾಗಿ ಪರಮ ದೈವಭಕ್ತರಲ್ಲಿ ಈ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗಿತ್ತು.

ಪಾಶ್ಚಾತ್ಯ ದೇಶಗಳಲ್ಲಿ ಉದ್ಯೋಗದ ಹಿನ್ನೆಲೆಯಲ್ಲಿ ಮೇಲು ಕೀಳು ಎಂದು ಸಾಮಾಜಿಕ ಭೇದಭಾವ ಪ್ರವೃತ್ತಿ ಅಷ್ಟಾಗಿ ಕಂಡುಬರುವುದಿಲ್ಲ. ನಮ್ಮ ದೇಶದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಅತ್ಯಂತ ವಿದ್ಯಾವಂತ ವರ್ಗ ಕೂಡ ವ್ಯಕ್ತಿಯ ಉದ್ಯೋಗ ನೋಡಿಕೊಂಡು ಮೇಲುಕೀಳು ತಾರತಮ್ಯ ತೋರಿಸುವ ಪ್ರವೃತ್ತಿ ಎದ್ದು ಕಾಣುತ್ತದೆ. ಜಾತಿ ತಾರತಮ್ಯ ಇದ್ದದ್ದೇ. ಇದು ನಾವು ಪಾಶ್ಚಾತ್ಯರಿಗಿಂತ ನಾಗರಿಕತೆಯಲ್ಲಿ ಹಿಂದುಳಿದಿರುವುದನ್ನು ತೋರಿಸುತ್ತದೆ. ಸಹಸ್ರಾರು ವರ್ಷಗಳ ಸಂಸ್ಕೃತಿ ಹೊಂದಿದೆ ಎಂದು ಹೇಳಲಾಗುವ ನಮಗಿಂತ ಕೆಲವು ನೂರು ವರ್ಷಗಳ ಸಂಸ್ಕೃತಿ ಹೊಂದಿರುವ ಪಾಶ್ಚಾತ್ಯರು ತಮ್ಮ ನಾಗರಿಕರ ನಡುವೆ ಪರಸ್ಪರ ಸಾಧಿಸಿರುವ ಈ ಸಮಾನತೆ ಅವರನ್ನು ನಾಗರಿಕತೆಯಲ್ಲಿ ದೈವಭಕ್ತ ನಮ್ಮ ಸಮಾಜಕ್ಕಿಂತ ಎಷ್ಟೋ ಎತ್ತರದಲ್ಲಿ ನಿಲ್ಲಿಸುತ್ತದೆ. ಪ್ರಾಮಾಣಿಕತೆ, ಸಹಮಾನವರಿಗೆ ತೋರಿಸುವ ಕಾಳಜಿಯಲ್ಲೂ ಪಾಶ್ಚಾತ್ಯ ದೇಶಗಳ ನಾಗರಿಕರು ನಮಗಿಂತ ಎಷ್ಟೋ ಎತ್ತರದಲ್ಲಿ ನಿಂತಿರುವುದು ಕಂಡುಬರುತ್ತದೆ. ನಮ್ಮ ದೇಶದಲ್ಲಿ ನಾವು ಯಾವುದಾದರೂ ವ್ಯಕ್ತಿಗಳಿಗೆ ಅಥವಾ ಏನಾದರೂ ಮಾಹಿತಿ ಕೇಳಿ ಪತ್ರ ಬರೆದರೆ ಬಹಳಷ್ಟು ಸಂದರ್ಭಗಳಲ್ಲಿ ಉತ್ತರ ಬರುವುದಿಲ್ಲ. ಆದರೆ ಪಾಶ್ಚಾತ್ಯ ದೇಶಗಳ ಜನರಿಗೆ ಯಾವುದೇ ಮಾಹಿತಿ ಕೇಳಿ ಪತ್ರ ಬರೆದರೂ ಹೆಚ್ಚಿನ ಸಂದರ್ಭಗಳಲ್ಲೂ, ನಮಗೆ ಅವರು ಪರಿಚಿತರಲ್ಲದಿದ್ದರೂ ಉತ್ತರ ಬರುತ್ತದೆ.

ನಮ್ಮ ದೇಶದಲ್ಲಿ ಯಾವುದೇ ಯೋಜನೆ ಕೈಗೊಂಡರೂ ನಿರಾಶ್ರಿತಗೊಂಡವರಿಗೆ, ಸಂತ್ರಸ್ತರಿಗೆ ದಶಕಗಳೇ ಕಳೆದರೂ ಸಮರ್ಪಕ ಪರಿಹಾರ ದೊರೆಯುವುದಿಲ್ಲ. ಕೈತುಂಬಾ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು ಜನರ ಅವಶ್ಯಕತೆಗಳಿಗೆ ಎಂದೂ ಸ್ಪಂದಿಸುವುದಿಲ್ಲ. maha-kumbhಆದರೆ ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ನಾಗರಿಕರಿಗೆ, ಯೋಜನೆಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರ ದೊರಕುತ್ತದೆ. ಅಧಿಕಾರಿಗಳು ಜನರ ಅವಶ್ಯಕತೆಗಳಿಗೆ ಶೀಘ್ರ ಸ್ಪಂದಿಸುತ್ತಾರೆ. ಪ್ರಪಂಚದಲ್ಲಿಯೇ ನಮ್ಮದು ಅತ್ಯುನ್ನತ ನಾಗರಿಕತೆ, ಸಂಸ್ಕೃತಿ ಎಂದು ನಮ್ಮ ಹಿಂದುತ್ವವಾದಿಗಳು ಹಾಗೂ ಆಧ್ಯಾತ್ಮವಾದಿಗಳು ಇಲ್ಲಿ ಜಂಭ ಕೊಚ್ಚುತ್ತಾರಾದರೂ ಇಲ್ಲಿನ ಅಧಿಕಾರಿಗಳ ಜನಪರ ಕಾಳಜಿ ಶೂನ್ಯದ ಸಮೀಪ ಇರುತ್ತದೆ. ಅಧ್ಯಾತ್ಮ ಹಾಗೂ ದೈವಭಕ್ತಿಗೂ ಜನರ ನಾಗರಿಕತೆಯ ಮಟ್ಟಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಇದರಿಂದ ಕಂಡುಬರುತ್ತದೆ. ನಮ್ಮ ದೈವಭಕ್ತಿ ಹಾಗೂ ಆಧ್ಯಾತ್ಮದ ಅತಿ ಗೀಳು ನಮ್ಮಲ್ಲಿ ಉನ್ನತ ನಾಗರಿಕತೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿಲ್ಲ. ರಾಜಕೀಯ ನಾಯಕರಲ್ಲಿ ಧರ್ಮ, ದೈವಭಕ್ತಿ ಬಗ್ಗೆ ಬಹಳ ಮಾತಾಡುವವರಲ್ಲಿಯೇ ಸಹಮಾನವರ ಬಗ್ಗೆ ಕಾಳಜಿ ಕಡಿಮೆ ಇರುವುದು ಕಂಡುಬರುತ್ತದೆ. ಧರ್ಮ, ದೇವರ ಬಗ್ಗೆ ಜನರನ್ನು ಪ್ರಚೋದಿಸಿ ರಾಜಕೀಯ ಮಾಡುವ ಪಕ್ಷಗಳಲ್ಲೇ ಹೆಚ್ಚಿನ ಭ್ರಷ್ಟಾಚಾರ, ಸಂವೇದನಾಹೀನತೆ ಇರುವ ರಾಜಕಾರಣಿಗಳು ಕಂಡುಬರುತ್ತಾರೆ. ಇಂಥ ರಾಜಕೀಯ ಪಕ್ಷಗಳು ಬೆಳವಣಿಗೆಯಾದ ನಂತರ ನಮ್ಮ ದೇಶದ ರಾಜಕೀಯ ಮತ್ತಷ್ಟು ಕಲುಷಿತವಾಗಿದೆ. ಹೀಗಾಗಿ ಧರ್ಮ, ದೇವರು, ಸಂಸ್ಕೃತಿಯ ಬಗ್ಗೆ ಜನರನ್ನು ಪ್ರಚೋದಿಸಿ ರಾಜಕೀಯ ಮಾಡುವ ಜನರ ಬಗ್ಗೆ ನಾವು ಜಾಗೃತರಾಗದೆ ದೇಶದ ನಾಗರಿಕತೆಯ ವಿಕಾಸ ಸಾಧ್ಯವಿರುವಂತೆ ಕಾಣುವುದಿಲ್ಲ.