ಅತಿ ದೈವಭಕ್ತಿ ಇದ್ದೂ ನಮ್ಮ ದೇಶ ನಾಗರಿಕತೆಯಲ್ಲಿ ಯಾಕೆ ಹಿಂದೆ?

– ಆನಂದ ಪ್ರಸಾದ್

ನಮ್ಮ ದೇಶವು ಸಾವಿರಾರು ವರ್ಷಗಳ ಇತಿಹಾಸವುಳ್ಳ ಅಧ್ಯಾತ್ಮಿಕ ಪರಂಪರೆ ಹೊಂದಿದೆ ಹಾಗೂ ಪ್ರಪಂಚದಲ್ಲೇ ಶ್ರೇಷ್ಠ ಸಂಸ್ಕೃತಿ ಉಳ್ಳ ದೇಶವೆಂದು ಹಿಂದುತ್ವವಾದಿಗಳು ಅವಕಾಶ ಸಿಕ್ಕಿದಾಗಲೆಲ್ಲ ಹೇಳಿಕೊಳ್ಳುತ್ತಿರುತ್ತಾರೆ. ಆದರೆ ನಮ್ಮ ದೇಶದ ಎಲ್ಲಾ ರಂಗಗಳಲ್ಲೂ ಇದಕ್ಕೆ ವ್ಯತಿರಿಕ್ತವಾದ ಅನುಭವ ಜನತೆಗೆ ಆಗುತ್ತಾ ಇರುತ್ತದೆ. ನಮ್ಮ ದೇಶದ ಜನ ದೇವರಲ್ಲಿ ಅಪಾರವಾದ ಭಕ್ತಿ ಹಾಗೂ ಶ್ರದ್ಧೆ ತೋರಿಸುತ್ತಾರೆಯೇ ವಿನಃ ಅದೇ ಶ್ರದ್ಧೆ ಹಾಗೂ ಕಾಳಜಿಯನ್ನು ತಮ್ಮ ಸಹಮಾನವರ ಬಗ್ಗೆ ತೋರಿಸುವುದಿಲ್ಲ. ಹೀಗಾಗಿ ಆಧ್ಯಾತ್ಮಿಕ ಶ್ರದ್ಧೆ ಹಾಗೂ ದೇವರ ಭಕ್ತಿಗೂ ಹಾಗೂ ನಾಗರಿಕತೆಯ ವಿಕಾಸಕ್ಕೂ ಸಂಬಂಧ ಇರುವಂತೆ ಕಾಣುವುದಿಲ್ಲ. tirupati-brahmotsavತೀರಾ ಇತ್ತೀಚೆಗಿನ ಕೆಲವು ಶತಮಾನಗಳ ಇತಿಹಾಸವುಳ್ಳ ಅಮೇರಿಕಾ ಹಾಗೂ ಯೂರೋಪಿನ ದೇಶಗಳು ನಾಗರಿಕತೆಯಲ್ಲಿ ನಮಗಿಂತ ಮುನ್ನಡೆ ಸಾಧಿಸಿರುವುದು ಕಂಡುಬರುತ್ತದೆ. ಅಲ್ಲಿನ ದೇಶಗಳು ತಮ್ಮ ನಾಗರಿಕರ ಬೆಳವಣಿಗೆಗೆ ಹೆಚ್ಚಿನ ಗಮನ ಹರಿಸಿವೆ. ಅಲ್ಲಿನ ದೇಶಗಳಲ್ಲಿ ಸರ್ಕಾರಿ ಅಧಿಕಾರಿಗಳಿರಲಿ, ರಾಜಕಾರಣಿಗಳಿರಲಿ ನಮ್ಮ ದೇಶಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನ ಕಾಳಜಿಯನ್ನು ತಮ್ಮ ದೇಶದ ಪ್ರಜೆಗಳ ಬಗ್ಗೆ ತೋರಿಸುತ್ತಾರೆ. ತೀರಾ ಇತ್ತೀಚೆಗಿನ ಇತಿಹಾಸ ಉಳ್ಳ ಅಲ್ಲಿನ ದೇಶಗಳು ಇದನ್ನು ಸಾಧಿಸಿರುವುದು ಅಲ್ಲಿನ ನಾಗರಿಕತೆ ನಮ್ಮ ದೇಶಕ್ಕಿಂತ ಮುಂದುವರಿದಿರುವುದನ್ನು ತೋರಿಸುತ್ತದೆ.

ನಮ್ಮ ದೇಶದಲ್ಲಿ ರಾಜಕಾರಣಿಗಳಾಗಲಿ, ಸರ್ಕಾರೀ ಅಧಿಕಾರಿಗಳಾಗಲೀ ಹೆಚ್ಚಿನವರೂ ಪರಮ ದೈವಭಕ್ತರೇ ಆಗಿರುತ್ತಾರೆ. ಇಂಥ ದೈವಶ್ರದ್ಧೆ ಇದ್ದೂ ಭ್ರಷ್ಟಾಚಾರ, ಮೋಸ, ವಂಚನೆ, ತಮ್ಮ ಕೆಲಸ ನಿರ್ವಹಿಸುವಲ್ಲಿ ಉದಾಸೀನತೆ ಹೆಚ್ಚಾಗಿ ಕಂಡುಬರುತ್ತದೆ. ಹೀಗಾಗಿ ದೈವಭಕ್ತಿ ತಮ್ಮ ಸ್ವಾರ್ಥ ಸಾಧನೆಗೆ ಮಾತ್ರ ನಮ್ಮ ಜನರಲ್ಲಿ ಇರುವಂತೆ ಕಂಡುಬರುತ್ತದೆ. ನಮ್ಮ ದೇಶದ ರಾಜಕಾರಣಿಗಳು ಮತ್ತು ಅಧಿಕಾರಿವರ್ಗ ಭ್ರಷ್ಟಾಚಾರದಲ್ಲಿ ಇಡೀ ಪ್ರಪಂಚದಲ್ಲೇ ಮೊದಲ ಕೆಲ ಸ್ಥಾನಗಳಲ್ಲೇ ಇರುತ್ತಾರೆ. ದೈವಭಕ್ತರಲ್ಲಿ ತಮ್ಮ ಸಹಮಾನವರ ಬಗ್ಗೆ ಹೆಚ್ಚಿನ ಕಾಳಜಿ ಇಲ್ಲದೆ ಹೋದರೆ ದೈವಭಕ್ತಿ ಇದ್ದು ಏನು ಪ್ರಯೋಜನ? ಯುರೋಪ್ ಹಾಗೂ ಅಮೇರಿಕಾ ದೇಶಗಳ ಉದ್ಯಮಿಗಳು ನಮ್ಮ ದೇಶದ ಉದ್ಯಮಿಗಳಷ್ಟು ಪರಮ ದೈವಭಕ್ತರಲ್ಲದಿದ್ದರೂ tirupati-brahmotsavತಮ್ಮ ಸಂಪಾದನೆಯ ಬಹುಪಾಲನ್ನು ಸಮಾಜದ ಒಳಿತಿಗೆ ದಾನ ಮಾಡುವ ಕಾಳಜಿ ತೋರಿಸುತ್ತಾರೆ. ಆದರೆ ಪರಮ ದೈವಭಕ್ತರಾಗಿರುವ ನಮ್ಮ ಕೋಟ್ಯಾಧಿಪತಿ ಉದ್ಯಮಿಗಳು ಸಮಾಜದ ಒಳಿತಿಗೆ ದಾನ ನೀಡುವ ಪ್ರಮಾಣ ಬಹಳ ಕಡಿಮೆ ಇದೆ. ನಿಜವಾಗಿ ಪರಮ ದೈವಭಕ್ತರಲ್ಲಿ ಈ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಇರಬೇಕಾಗಿತ್ತು.

ಪಾಶ್ಚಾತ್ಯ ದೇಶಗಳಲ್ಲಿ ಉದ್ಯೋಗದ ಹಿನ್ನೆಲೆಯಲ್ಲಿ ಮೇಲು ಕೀಳು ಎಂದು ಸಾಮಾಜಿಕ ಭೇದಭಾವ ಪ್ರವೃತ್ತಿ ಅಷ್ಟಾಗಿ ಕಂಡುಬರುವುದಿಲ್ಲ. ನಮ್ಮ ದೇಶದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಅತ್ಯಂತ ವಿದ್ಯಾವಂತ ವರ್ಗ ಕೂಡ ವ್ಯಕ್ತಿಯ ಉದ್ಯೋಗ ನೋಡಿಕೊಂಡು ಮೇಲುಕೀಳು ತಾರತಮ್ಯ ತೋರಿಸುವ ಪ್ರವೃತ್ತಿ ಎದ್ದು ಕಾಣುತ್ತದೆ. ಜಾತಿ ತಾರತಮ್ಯ ಇದ್ದದ್ದೇ. ಇದು ನಾವು ಪಾಶ್ಚಾತ್ಯರಿಗಿಂತ ನಾಗರಿಕತೆಯಲ್ಲಿ ಹಿಂದುಳಿದಿರುವುದನ್ನು ತೋರಿಸುತ್ತದೆ. ಸಹಸ್ರಾರು ವರ್ಷಗಳ ಸಂಸ್ಕೃತಿ ಹೊಂದಿದೆ ಎಂದು ಹೇಳಲಾಗುವ ನಮಗಿಂತ ಕೆಲವು ನೂರು ವರ್ಷಗಳ ಸಂಸ್ಕೃತಿ ಹೊಂದಿರುವ ಪಾಶ್ಚಾತ್ಯರು ತಮ್ಮ ನಾಗರಿಕರ ನಡುವೆ ಪರಸ್ಪರ ಸಾಧಿಸಿರುವ ಈ ಸಮಾನತೆ ಅವರನ್ನು ನಾಗರಿಕತೆಯಲ್ಲಿ ದೈವಭಕ್ತ ನಮ್ಮ ಸಮಾಜಕ್ಕಿಂತ ಎಷ್ಟೋ ಎತ್ತರದಲ್ಲಿ ನಿಲ್ಲಿಸುತ್ತದೆ. ಪ್ರಾಮಾಣಿಕತೆ, ಸಹಮಾನವರಿಗೆ ತೋರಿಸುವ ಕಾಳಜಿಯಲ್ಲೂ ಪಾಶ್ಚಾತ್ಯ ದೇಶಗಳ ನಾಗರಿಕರು ನಮಗಿಂತ ಎಷ್ಟೋ ಎತ್ತರದಲ್ಲಿ ನಿಂತಿರುವುದು ಕಂಡುಬರುತ್ತದೆ. ನಮ್ಮ ದೇಶದಲ್ಲಿ ನಾವು ಯಾವುದಾದರೂ ವ್ಯಕ್ತಿಗಳಿಗೆ ಅಥವಾ ಏನಾದರೂ ಮಾಹಿತಿ ಕೇಳಿ ಪತ್ರ ಬರೆದರೆ ಬಹಳಷ್ಟು ಸಂದರ್ಭಗಳಲ್ಲಿ ಉತ್ತರ ಬರುವುದಿಲ್ಲ. ಆದರೆ ಪಾಶ್ಚಾತ್ಯ ದೇಶಗಳ ಜನರಿಗೆ ಯಾವುದೇ ಮಾಹಿತಿ ಕೇಳಿ ಪತ್ರ ಬರೆದರೂ ಹೆಚ್ಚಿನ ಸಂದರ್ಭಗಳಲ್ಲೂ, ನಮಗೆ ಅವರು ಪರಿಚಿತರಲ್ಲದಿದ್ದರೂ ಉತ್ತರ ಬರುತ್ತದೆ.

ನಮ್ಮ ದೇಶದಲ್ಲಿ ಯಾವುದೇ ಯೋಜನೆ ಕೈಗೊಂಡರೂ ನಿರಾಶ್ರಿತಗೊಂಡವರಿಗೆ, ಸಂತ್ರಸ್ತರಿಗೆ ದಶಕಗಳೇ ಕಳೆದರೂ ಸಮರ್ಪಕ ಪರಿಹಾರ ದೊರೆಯುವುದಿಲ್ಲ. ಕೈತುಂಬಾ ಸಂಬಳ ಪಡೆಯುವ ಸರ್ಕಾರಿ ಅಧಿಕಾರಿಗಳು ಜನರ ಅವಶ್ಯಕತೆಗಳಿಗೆ ಎಂದೂ ಸ್ಪಂದಿಸುವುದಿಲ್ಲ. maha-kumbhಆದರೆ ಪಾಶ್ಚಾತ್ಯ ದೇಶಗಳಲ್ಲಿ ಅಲ್ಲಿನ ನಾಗರಿಕರಿಗೆ, ಯೋಜನೆಗಳ ಸಂತ್ರಸ್ತರಿಗೆ ಶೀಘ್ರ ಪರಿಹಾರ ದೊರಕುತ್ತದೆ. ಅಧಿಕಾರಿಗಳು ಜನರ ಅವಶ್ಯಕತೆಗಳಿಗೆ ಶೀಘ್ರ ಸ್ಪಂದಿಸುತ್ತಾರೆ. ಪ್ರಪಂಚದಲ್ಲಿಯೇ ನಮ್ಮದು ಅತ್ಯುನ್ನತ ನಾಗರಿಕತೆ, ಸಂಸ್ಕೃತಿ ಎಂದು ನಮ್ಮ ಹಿಂದುತ್ವವಾದಿಗಳು ಹಾಗೂ ಆಧ್ಯಾತ್ಮವಾದಿಗಳು ಇಲ್ಲಿ ಜಂಭ ಕೊಚ್ಚುತ್ತಾರಾದರೂ ಇಲ್ಲಿನ ಅಧಿಕಾರಿಗಳ ಜನಪರ ಕಾಳಜಿ ಶೂನ್ಯದ ಸಮೀಪ ಇರುತ್ತದೆ. ಅಧ್ಯಾತ್ಮ ಹಾಗೂ ದೈವಭಕ್ತಿಗೂ ಜನರ ನಾಗರಿಕತೆಯ ಮಟ್ಟಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಇದರಿಂದ ಕಂಡುಬರುತ್ತದೆ. ನಮ್ಮ ದೈವಭಕ್ತಿ ಹಾಗೂ ಆಧ್ಯಾತ್ಮದ ಅತಿ ಗೀಳು ನಮ್ಮಲ್ಲಿ ಉನ್ನತ ನಾಗರಿಕತೆಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿಲ್ಲ. ರಾಜಕೀಯ ನಾಯಕರಲ್ಲಿ ಧರ್ಮ, ದೈವಭಕ್ತಿ ಬಗ್ಗೆ ಬಹಳ ಮಾತಾಡುವವರಲ್ಲಿಯೇ ಸಹಮಾನವರ ಬಗ್ಗೆ ಕಾಳಜಿ ಕಡಿಮೆ ಇರುವುದು ಕಂಡುಬರುತ್ತದೆ. ಧರ್ಮ, ದೇವರ ಬಗ್ಗೆ ಜನರನ್ನು ಪ್ರಚೋದಿಸಿ ರಾಜಕೀಯ ಮಾಡುವ ಪಕ್ಷಗಳಲ್ಲೇ ಹೆಚ್ಚಿನ ಭ್ರಷ್ಟಾಚಾರ, ಸಂವೇದನಾಹೀನತೆ ಇರುವ ರಾಜಕಾರಣಿಗಳು ಕಂಡುಬರುತ್ತಾರೆ. ಇಂಥ ರಾಜಕೀಯ ಪಕ್ಷಗಳು ಬೆಳವಣಿಗೆಯಾದ ನಂತರ ನಮ್ಮ ದೇಶದ ರಾಜಕೀಯ ಮತ್ತಷ್ಟು ಕಲುಷಿತವಾಗಿದೆ. ಹೀಗಾಗಿ ಧರ್ಮ, ದೇವರು, ಸಂಸ್ಕೃತಿಯ ಬಗ್ಗೆ ಜನರನ್ನು ಪ್ರಚೋದಿಸಿ ರಾಜಕೀಯ ಮಾಡುವ ಜನರ ಬಗ್ಗೆ ನಾವು ಜಾಗೃತರಾಗದೆ ದೇಶದ ನಾಗರಿಕತೆಯ ವಿಕಾಸ ಸಾಧ್ಯವಿರುವಂತೆ ಕಾಣುವುದಿಲ್ಲ.

9 thoughts on “ಅತಿ ದೈವಭಕ್ತಿ ಇದ್ದೂ ನಮ್ಮ ದೇಶ ನಾಗರಿಕತೆಯಲ್ಲಿ ಯಾಕೆ ಹಿಂದೆ?

  1. Ananda Prasad

    ಹಿಂದೂ ಧರ್ಮದಲ್ಲಿ ಇಂದಿಗೂ ಮೇಲುಕೀಳು ಎಂಬ ತಾರತಮ್ಯ ಮಾಡುವುದು ಎದ್ದು ಕಾಣುತ್ತದೆ. ಬೇರೆ ಧರ್ಮಗಳಲ್ಲಿ ಈ ಮಟ್ಟದಲ್ಲಿ ಮೇಲುಕೀಳು ಎಂಬ ಭೇದಭಾವ ತೋರಿಸುವುದಿಲ್ಲ. ಅಧ್ಯಾತ್ಮ ಅಥವಾ ದೇವರ ಬಗ್ಗೆ ಅತಿ ಶ್ರದ್ಧೆ ತೋರಿಸದ ಪಾಶ್ಚಿಮಾತ್ಯ ದೇಶಗಳು ಹಾಗೂ ಜಪಾನಿನಂಥ ದೇಶಗಳು (ಅಲ್ಲಿಯೂ ದೇವರು/ಅಧ್ಯಾತ್ಮದ ಬಗ್ಗೆ ಅತಿ ಶ್ರದ್ಧೆ ಇಲ್ಲ) ತಮ್ಮ ದೇಶದ ಜನತೆಯ ಬಗ್ಗೆ ತೋರುವ ಕಾಳಜಿ ನಮ್ಮ ದೇಶದಲ್ಲಿ ಕಂಡುಬರುವುದಿಲ್ಲ. ದೇವರ ಬಗ್ಗೆ ಅತಿಯಾದ ಶ್ರದ್ಧೆ ತೋರಿಸದ ದೇಶಗಳು ನಾಗರಿಕತೆಯ ವಿಕಾಸದಲ್ಲಿ ಸಾಕಷ್ಟು ಮುಂದೆ ಹೋಗಿರುವುದು ಕಂಡುಬರುತ್ತದೆ.

    Reply
  2. Mahesh

    ಇಲ್ಲಿ ದೈವಭಕ್ತಿ ಇರಬೇಕೋ ಅಥವಾ ಬೇಡವೇ ಅನ್ನುವುದಕ್ಕಿಂತ ಸಮಾಜದಲ್ಲಿ ಪ್ರಶ್ನಿಸುವ ಮನೋಭಾವಕ್ಕೆ ಎಷ್ಟರ ಮಟ್ಟಿನ ಪ್ರೋತ್ಸಾಹ ಇದೆ ಎನ್ನುವುದು ಮುಖ್ಯ. ದೇವರು, ಧರ್ಮ ಎನ್ನುವುದನ್ನು ತಿರಸ್ಕರಿಸಿದ ಸಮಾಜ, ದೇಶಗಳೆಲ್ಲವೂ ನಾಗರಿಕತೆಯಲ್ಲಿ ಬೆಳೆದಿದೆ ಎನ್ನುವ ಹಾಗಿಲ್ಲ. ಉದಾಹರಣೆಗೆ ಚೀನಾ ಮತ್ತು ರಷ್ಯಾದಂತಹ ದೇಶಗಳು. ಯಾವ ಸಮಾಜ, ಸಂಸ್ಕೃತಿ ಮತ್ತು ವ್ಯಕ್ತಿಗಳು ತಮ್ಮನ್ನು ತಾವು ಕಟುವಾದ ಪ್ರಶ್ನೆಗಳಿಗೆ ಒಳಪಡಿಸಿಕೊಳ್ಳಲು ಹಿಂಜರಿಯುವದಿಲ್ಲವೋ ಅಂತಲ್ಲಿ ನಾಗರಿಕತೆಯೆನ್ನುವುದ ಬೆಳೆದಿದೆ ಮತ್ತು ಬೆಳೆದೇ ಬೆಳೆಯುತ್ತದೆ.

    Reply
    1. Anand Prasad

      ರಷ್ಯಾ ಮತ್ತು ಚೀನಾ ಕಮ್ಯುನಿಷ್ಟ್ ವ್ಯವಸ್ಥೆಯ ಅಡಿಯಲ್ಲಿ ಜನತೆಯ ಮೇಲೆ ನಾಸ್ತಿಕತೆಯನ್ನು ಹೇರಿದ್ದವು. ಬಲವಂತದ ಹೇರುವಿಕೆ ಪ್ರಯೋಜನವಿಲ್ಲ. ಅಲ್ಲದೆ ಯಾವುದೇ ವ್ಯವಸ್ಥೆಯೂ ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ನೀಡದಿದ್ದರೆ ಬೆಳೆಯಲಾರದು. ಕಮ್ಯುನಿಷ್ಟ್ ರಾಷ್ಟ್ರಗಳು ಇವನ್ನು ನಿರಾಕರಿಸಿದ ಕಾರಣ ಬೆಳೆಯಲಿಲ್ಲ. ಟೀಕೆ-ಟಿಪ್ಪಣಿ ಇಲ್ಲದೆ ಹೋದರೆ, ಅದನ್ನು ಹತ್ತಿಕ್ಕಿದರೆ ವ್ಯವಸ್ಥೆ ಕೊಳೆಯುತ್ತದೆ. ಹೀಗಾಗಿ ಕಮ್ಯುನಿಷ್ಟ್ ವ್ಯವಸ್ಥೆ ಹದಗೆಡುವುದು ವ್ಯವಸ್ಥೆಯ ನಾಯಕತ್ವಕ್ಕೆ ತಿಳಿಯಲೇ ಇಲ್ಲ. ಇಂದು ಪಾಶ್ಚಿಮಾತ್ಯ ದೇಶಗಳಲ್ಲಿ ಕಂಡುಬರುವ ನಾಸ್ತಿಕತೆ ಬಲವಂತವಾಗಿ ಹೇರಿದ್ದು ಅಲ್ಲ, ಅದು ವೈಚಾರಿಕತೆ ಹಾಗೂ ವಿಜ್ಞಾನದ ಬೆಳವಣಿಗೆಯಿಂದ ಜನತೆಯಲ್ಲಿ ಬೆಳೆಸಲ್ಪಟ್ಟದ್ದು. ಇದುವೇ ಅಲ್ಲಿನ ಪ್ರಜಾಪ್ರಭುತ್ವಗಳು ಹೆಚ್ಚು ಯಶಸ್ವಿಯಾಗಿ ಕೆಲಸ ಮಾಡಲು ಕಾರಣ.

      Reply
      1. omi

        nammalli prashniso avakaashavaadaroo ide.. bere kade adoo illa prasad ravare.. ide maathu itare dharmada mele bandiddare adara parinaama edurisuvudu nimage kashtavaagutittu ..bahushaha nimage religion goo dharmakkoo vyatyaasa gottillaveno.. anyways nanagoo sampradaayagalalli nambike illa .,. aadare nammade identity-nativity na moodalisodu ashtu sari ansalla

        Reply
  3. ಪ್ರಜೆ

    ತುಂಬಾ ಬಾಲಿಶ ಮತ್ತು ಅತಿರೇಕದ ಲೇಖನ. ಅಮೆರಿಕ ಮತ್ತು ಯುರೋಪ್ ದೇಶಗಳು ಪರಮ ನಾಗರೀಕ ಅಂತ ಲೇಖಕರು ಸರ್ಟಿಫಿಕೇಟು ಕೊಟ್ಟಿದ್ದಾರೆ. ಕೇವಲ ಚರ್ಮದ ಬಣ್ಣದ ಕಾರಣಕ್ಕೆ ಕರಿಯರನ್ನು ಪ್ರಾಣಿಗಳಿಗಿಂತಲೂ ಕಡೆಯಾಗಿ ನಡೆಸಿಕೊಂಡವರು ಇದೇ `ನಾಗರೀಕ` ಮಂದಿ. ಇವತ್ತಿಗೂ ಈ ಮನೋಭಾವ ರಾರಾಜಿಸ್ತಿದೆ ಅನ್ನೋದಕ್ಕೆ ಆಗಾಗ ನಿದರ್ಶನಗಳು ಸಿಗ್ತಿರ್ತವೆ. (ಬಿಗ್​ ಬ್ರದರ್​ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿಯನ್ನು ಜೇಡ್ ಗೂಡಿ ಹೀಯಾಳಿಸಿದ್ದು, ಬಿಳಿ ತೊಗಲಿನ ಕ್ರಿಕೆಟಿಗರು ಲಂಕನ್ನರು ಮತ್ತು ಏಷ್ಯನ್ನರನ್ನು ಹೀಯಾಳಿಸಿ ಮಾತಾಡೋದು ಇತ್ಯಾದಿ) ಜಗತ್ತಿನ ಬಹುತೇಕ ದೇಶಗಳ ಮೇಲೆ ದಬ್ಬಾಳಿಕೆ ನಡೆಸಿ ಅಲ್ಲಿನ ಸಂಪತ್ತು ಲೂಟಿ ಮಾಡಿದ್ದು ಮತ್ತು ಇವತ್ತಿಗೂ ಮಾಡ್ತಿರೋದು ಈ `ನಾಗರೀಕರ` ದೊಡ್ಡ ಸಾಧನೆ!
    ಪಾಶ್ಚಾತ್ಯರು ಧರ್ಮದ ಹಂಗು ಬಿಟ್ಟವರು ಅನ್ನೋ ಭಾವನೆ ಅರ್ಥಹೀನ. ಇತ್ತೀಚೆಗೆ ಐರ್​ಲೆಂಡ್​ನಲ್ಲಿ ಸವಿತಾ ಹಾಲಪ್ಪನವರ್​ ಅನ್ನೋ ಗರ್ಭಿಣಿ ಸಾವು ಕಂಡ ಪ್ರಕರಣಕ್ಕೆ ಪಾಶ್ಚಾತ್ಯರ ಧರ್ಮಾಂಧತೆಯೇ ಕಾರಣ. ಗರ್ಭಪಾತ ದೈವವಿರೋಧಿಯಾದ್ದು ಅನ್ನೋ ಚರ್ಚ್​ನ ಅಪ್ಪಣೆಯನ್ನ ಅಲ್ಲಿನ ಸಂಸತ್ತು ಚಾಚೂ ತಪ್ಪದೆ ಪಾಲಿಸ್ತಿತ್ತು.
    ಜಾತಿಯ ಮೇಲು ಕೀಳು ಕೇವಲ ಹಿಂದೂ ಧರ್ಮಕ್ಕಷ್ಟೇ ಸೀಮಿತ ಅಂದುಕೊಂಡಿದ್ರೆ ಅದು ಲೇಖಕರ ಅರಿವಿನ ಕೊರತೆಯಷ್ಟೇ. ಜಗತ್ತಿನ ಎಲ್ಲ ಧರ್ಮಗಳಲ್ಲೂ ಮೇಲು ಕೀಳಿನ ಭಾವನೆ ಇದೆ ಮತ್ತು ಆ ಕಾರಣಕ್ಕೆ ಎಲ್ಲ ಧರ್ಮಗಳಲ್ಲೂ ಪಂಗಡಗಳು ಹುಟ್ಟಿಕೊಂಡಿವೆ. ಜಗತ್ತಿನಲ್ಲೇ ಅತಿ ಹೆಚ್ಚು ಅತ್ಯಾಚಾರಗಳು ನಡೆಯೋದು `ನಾಗರೀಕ` ದೇಶ ಅಮೆರಿಕದಲ್ಲಿ. ಬೆನ್ನಿಹಿನ್​ನಂಥ ಪವಾಡ ಪುರುಷನನ್ನು ಒಪ್ಪಿ ಅಪ್ಪಿಕೊಂಡವರು ಇದೇ ಅಮೆರಿಕ ಮತ್ತು ಇಂಗ್ಲೆಂಡ್​ನ `ನಾಗರೀಕರು`. ಸಾಯಿಬಾಬಾ, ನಿತ್ಯಾನಂದನಂಥ ಢೋಂಗಿಗಳನ್ನು ಬೆಳೆಸಿದ್ದರಲ್ಲೂ ಈ `ನಾಗರೀಕ` ಭಕ್ತರ ದೊಡ್ಡ ಕೊಡುಗೆ ಇದೆ.
    ಇನ್ನು ಭ್ರಷ್ಟಾಚಾರದ ಮಾತು; ಜಗತ್ತಿನ ಅತಿ ಭ್ರಷ್ಟ ರಾಷ್ಟ್ರಗಳ ಟಾಪ್​ ಟೆನ್ ಪಟ್ಟಿಯಲ್ಲಿ 8 ಮುಸ್ಲಿಂ ರಾಷ್ಟ್ರಗಳಿವೆ. ಒಂದು ದಕ್ಷಿಣ ಅಮೆರಿಕದ್ದು ಮತ್ತೊಂದು ಬೌದ್ಧರ ನಾಡು ಅನಿಸಿಕೊಂಡಿರೋ ಕಮ್ಯುನಿಸಂ ಕಪಿಮುಷ್ಠಿಯ ಉತ್ತರ ಕೊರಿಯಾ! ಇನ್ನೂ ಹೇಳ್ಬೇಕಂದ್ರೆ ಕಮ್ಯೂನಿಸಂನ ತವರು ಅನ್ನಿಸಿಕೊಂಡಿರೋ ರಷ್ಯಾ, ಭ್ರಷ್ಟಾಚಾರದಲ್ಲಿ ಭಾರತಕ್ಕಿಂತ ಮುಂದಿದೆ.
    ಇಷ್ಟಕ್ಕೂ ಹಲವು ಧರ್ಮ, ರೀತಿ-ನೀತಿಗಳಿರೋ ಭಾರತವನ್ನು ಬಹುತೇಕ ಏಕಸಂಸ್ಕೃತಿಯ ಅಮೆರಿಕಾ, ಜಪಾನ್​ನಂಥ ದೇಶಗಳ ಜೊತೆ ಹೋಲಿಕೆ ಮಾಡೋದೇ ಅಸಂಬದ್ಧದ ತರ್ಕ. ಸುಮ್ಮನೆ ಹಿಂದೂ ಧರ್ಮವನ್ನ ಹೀಯಾಳಿಸುವುದನ್ನು ಬಿಡಿ; ಸಾಧ್ಯವಿದ್ದರೆ ವೈಯಕ್ತಿಕ ನೆಲೆಯಲ್ಲಿ ಭ್ರಷ್ಟಾಚಾರದ ನಿರ್ಮೂಲನೆ ಮಾಡಿ. ಯಾಕಂದ್ರೆ ಪ್ರಶ್ನೆಪತ್ರಿಕೆ ಒಂದು ದಿನ ಮುಂಚೆ ಸಿಗೋದಾದ್ರೆ ಕಾಸು ಕೊಟ್ಟು ಪಾಸಾಗ್ಬಿಡೋಣ ಅನ್ನೋ ಮನಸ್ಥಿತಿಯವ್ರು ನಾವು. ಅದಕ್ಕೆ ವೃಥಾ ಧರ್ಮವನ್ಯಾಕೆ ದೂಷಿಸಬೇಕು?

    Reply
  4. Ananda Prasad

    ಇದು ಹೀಯಾಳಿಸುವಿಕೆಗೆ ಬರೆದದ್ದು ಅಲ್ಲ. ನಮ್ಮ ಜನಗಳಲ್ಲಿ ವಿಚಾರ ವಿಮರ್ಶೆ ಬೆಳೆಯಬೇಕು ಎಂಬ ಉದ್ಧೇಶದಿಂದ ಬರೆದದ್ದು. ಪಾಶ್ಚಾತ್ಯ ದೇಶಗಳ ವ್ಯವಸ್ಥೆ ತಮ್ಮ ದೇಶದ ಜನತೆಯ ಒಳಿತಿಗೆ ರೂಪಿಸಿದ ಸಂವೇದನಾಶೀಲ ರಾಜಕೀಯ ಆಡಳಿತದ ಶೇಕಡಾ ಹತ್ತರಷ್ಟೂ ನಮ್ಮಲ್ಲಿ ರೂಪುಗೊಂಡಿಲ್ಲ. ಇದನ್ನು ಹೀಯಾಳಿಸುವಿಕೆ ಎಂದು ತಿಳಿದುಕೊಳ್ಳದೆ ಸವಾಲಾಗಿ ನಮ್ಮ ದೈವಭಕ್ತರು ತೆಗೆದುಕೊಂಡು ವ್ಯವಸ್ಥೆಯ ಸುಧಾರಣೆಯ ಬಗ್ಗೆ ಚಿಂತನೆ ನಡೆಸಬೇಕು ಎಂಬುದು ನನ್ನ ಉದ್ಧೇಶವೇ ಬೇರೆ ಇಲ್ಲ. ದೇವರ ಬಗ್ಗೆ ಅತಿಯಾಗಿ ಚಿಂತಿಸುವುದನ್ನು ಬಿಟ್ಟು ದೇಶದ ಸಹಮಾನವರ ಬಗ್ಗೆ ಚಿಂತನೆ ನಡೆಸಲು ಆರಂಭಿಸಿದರೆ ದೇಶದಲ್ಲಿ ಮಹತ್ತರ ಬದಲಾವಣೆಗಳು ಆಗಬಹುದು. ಇಲ್ಲದೆ ಹೋದರೆ ಧನಾತ್ಮಕ ಬದಲಾವಣೆಗಳು ಅಸಾಧ್ಯ. ದೈವಭಕ್ತರಿಗೆ ಇದು ರುಚಿಸದೆ ಹೋದರೂ ಹೇಳುವುದು ನಮ್ಮ ಕರ್ತವ್ಯ, ಅದಕ್ಕಾಗಿ ಹೇಳಿದ್ದೇನೆ.

    Reply
  5. Savitri

    ಮಾನ್ಯ ಆನಂದ್ ಪ್ರಸಾದರವರಿಗೆ ನಮಸ್ಕಾರಗಳು.
    ನೀವು ಲೇಖನವನ್ನು ಕೇವಲ ಒಂದು ದೃಷ್ಟಿ ಕೋನ ದಿಂದ ಬರೆದಿದ್ದೀರೆಂದು ಡಾಳಾಗಿ ಕಾಣುತ್ತಿದೆ. ನೀವು ಬರೆದಿದ್ದರಲ್ಲಿ ಸುಳ್ಳು ಅಂತ ಏನು ಇಲ್ಲ, ಆದರೆ ಕೇವಲ ಹಿಂದು ಧರ್ಮ ವನ್ನು ಗುರಿಯಾಗಿಟ್ಟುಕೊಂಡು ಬರೆದಿದ್ದೀರ. ಕಳೆದ ಏಳು ವರ್ಷಗಳಿಂದ ಅರಬ್ ದೇಶಗಳಲ್ಲಿ ವಾಸಿಸುತ್ತಿರುವ ನನಗೆ ಭಾರತಕ್ಕಿಂತ ಅತಿ ಹೆಚ್ಚು ಧರ್ಮ ಪಾಲನೆಯಲ್ಲಿ ತೊಡಗಿರುವ ಅರಬ್ ದೇಶಗಳಲ್ಲಿ ಸರ್ಕಾರೀ ಅಧಿಕಾರಿಗಳಾಗಲಿ ಅಥವ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಯಾರೆ ಆಗಲಿ ಹೆಚ್ಚಿನವರೂ ಪರಮ ದೈವಭಕ್ತರೇ ಆಗಿರುತ್ತಾರೆ. ಇಂಥ ದೈವಶ್ರದ್ಧೆ ಇದ್ದೂ ಭ್ರಷ್ಟಾಚಾರ, ಮೋಸ, ವಂಚನೆ, ತಮ್ಮ ಕೆಲಸ ನಿರ್ವಹಿಸುವಲ್ಲಿ ಉದಾಸೀನತೆ ಹೆಚ್ಚಾಗಿ ಕಂಡುಬರುತ್ತದೆ.
    ಇಲ್ಲೂ ಸಹ ಮೇಲು ಕೀಳು ಎಂದು ಸಾಮಾಜಿಕ ಭೇದಭಾವ ಪ್ರವೃತ್ತಿ ಇದೆ. ಈ ಬಗ್ಗೆ ಮುಂದೆ ಚರ್ಚಿಸೋಣ.
    ವಂದನೆಗಳೊಂದಿಗೆ
    ಸಾವಿತ್ರಿ

    Reply
  6. Ananda Prasad

    ನಾನು ಒಂದು ಧರ್ಮವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಬರೆದಿಲ್ಲ. ಆದರೂ ಹಿಂದುತ್ವವಾದಿಗಳ ಬಗ್ಗೆ ಲೇಖನದಲ್ಲಿ ಉಲ್ಲೇಖಿಸಿರುವ ಕಾರಣ ನಿಮಗೆ ಹಾಗೆ ಅನಿಸಿರುವ ಸಾಧ್ಯತೆ ಇದೆ. ನಾನು ನನ್ನ ದೇಶದಲ್ಲಿ ಸುತ್ತ ಮುತ್ತ ಇರುವ ಪರಿಸ್ಥಿತಿ ನೋಡಿ ರೋಸಿಹೋಗಿ ಇದನ್ನು ಬರೆದಿದ್ದೇನೆಯೇ ಹೊರತು ದೈವಭಕ್ತರನ್ನು ಹೀಯಾಳಿಸುವ ಉದ್ಧೇಶ ಅಂತೂ ಇಲ್ಲ. ಮುಸ್ಲಿಂ ದೇಶಗಳ ಪರಿಸ್ಥಿತಿ ಹೇಗಿದೆಯೋ ನನಗೆ ಗೊತ್ತಿಲ್ಲ. ನಾನು ಪಾಶ್ಚಾತ್ಯ ದೇಶಗಳ ಆಡಳಿತದ ಸಂವೇದನಾಶೀಲತೆಯ ಬಗ್ಗೆ ಓದಿ ತಿಳಿದುದರ ಬಗ್ಗೆ ಬರೆದಿದ್ದೇನೆ. ಅತೀ ಎನಿಸುವ ದೈವಶ್ರದ್ದೆ ಇಂದು ಪಾಶ್ಚಾತ್ಯ ದೇಶಗಳಲ್ಲಿ ಇಲ್ಲ. ಆದರೂ ಅಲ್ಲಿನ ಆಡಳಿತ ವ್ಯವಸ್ಥೆ ತನ್ನ ನಾಗರಿಕರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವುದು, ಉತ್ತಮ ವ್ಯವಸ್ಥೆ ರೂಪಿಸಿರುವುದು ಕಂಡುಬರುತ್ತದೆ. ಇದನ್ನು ನಾವು ಸವಾಲಾಗಿ ಸ್ವೀಕರಿಸಿ ಉತ್ತಮ ವ್ಯವಸ್ಥೆಯನ್ನು ರೂಪಿಸುವಲ್ಲಿ ಜಾಗೃತರಾಗಬೇಕು ಎಂಬ ಆಶಯದಿಂದ ಬರೆದಿದ್ದೇನೆ.

    Reply

Leave a Reply

Your email address will not be published. Required fields are marked *