ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯೇ?

-ಬಸವರಾಜು

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಹೋದಲ್ಲಿ ಬಂದಲ್ಲಿ “ನಾನು ಕೂಡ ಸಿಎಂ ಪದವಿ ಆಕಾಂಕ್ಷಿ” ಎಂದು ಬಹಿರಂಗವಾಗಿಯೇ ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಕಲ್ಚರ್ ಅರಿತವರು, ಹೈಕಮಾಂಡ್ ಅರ್ಥ ಮಾಡಿಕೊಂಡವರು ಯಾರೂ ಹೀಗೆ ಮಾತನಾಡಲಾರರು. ಆದರೆ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದು ಏಳು ವರ್ಷಗಳಾದರೂ ಸಿದ್ದರಾಮಯ್ಯನವರು ಇನ್ನೂ ಫ್ಯೂಡಲ್ ಗುಣಗಳನ್ನು ಬಿಟ್ಟಿಲ್ಲ. ಸಿದ್ದರಾಮಯ್ಯನವರ ದುರಾದೃಷ್ಟವೋ ಏನೋ, ಅವರ “ಸಿಎಂ ಆಕಾಂಕ್ಷಿ” ಒಬ್ಬೊಬ್ಬರಿಗೆ ಒಂದೊಂದು ರೀತಿ ಕೇಳಿಸುತ್ತಿದೆ. ಹತ್ತಾರು ವಿರೋಧಿಗಳನ್ನು ಹುಟ್ಟುಹಾಕಿದೆ. ಸಮಸ್ಯೆಯನ್ನು ಸೃಷ್ಟಿಸುತ್ತಿದೆ.

ಹಾಗೆ ನೋಡಿದರೆ, ಸಿದ್ದರಾಮಯ್ಯನವರು ಚಾಣಾಕ್ಷ ರಾಜಕಾರಣಿಯಲ್ಲ. ಇವತ್ತಿನ ರಾಜಕಾರಣಕ್ಕೆ ಬೇಕಾದ ಡ್ಯಾಷಿಂಗ್ ಗುಣಗಳಿಲ್ಲ. Siddaramaiahಆದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ತರದವರು. ಅಷ್ಟೇ ಅಲ್ಲ, ಜನಪರವಾಗಿ ಚಿಂತಿಸುವವರು. ನೆಲ-ಜಲ-ಭಾಷೆಯ ವಿಷಯದಲ್ಲಿ ಬದ್ಧತೆಯಿಂದ ವರ್ತಿಸುವವರು. ಜೊತೆಗೆ ರಾಮಮನೋಹರ ಲೋಹಿಯಾರ ಚಿಂತನೆಗಳಿಂದ ಪ್ರಭಾವಿತರಾಗಿ ಸಮಾಜವಾದಿ ಹೋರಾಟ, ಎಡಪಂಥೀಯ ವಿಚಾರಧಾರೆಗಳತ್ತ ಒಲವುಳ್ಳವರು. ಹಿಂದುಳಿದವರು, ಬಡವರು, ದಲಿತರ ಪರ ಕಾಳಜಿ ಕಳಕಳಿಯುಳ್ಳವರು. ತಮ್ಮ ಹಿಂಬಾಲಕರಿಗೆ, ಜಾತಿಯವರಿಗೆ ಅನುಕೂಲ ಮಾಡಿಕೊಟ್ಟರೂ, ಕಡು ಭ್ರಷ್ಟರ ಪಟ್ಟಿಗೆ ಸೇರದವರು. ಅಧಿಕಾರದಲ್ಲಿದ್ದಾಗ ಜನರತ್ತ ನೋಡದೆ “ಹಾಂ ಹೂಂ” ಎನ್ನುವ ಅಹಂಕಾರದ ಮೂಟೆಯಂತೆ ಕಂಡರೂ, ಕೇಡಿ ರಾಜಕಾರಣದಿಂದ ದೂರವಿರುವವರು.

ಇಂತಹ ಸಿದ್ಧರಾಮಯ್ಯನವರು ಹುಟ್ಟಿದ್ದು 12 ಆಗಸ್ಟ್, 1948ರಲ್ಲಿ, ಮೈಸೂರು ತಾಲೂಕಿನ ವರುಣಾ ಹೋಬಳಿಯ ಸಿದ್ದರಾಮನಹುಂಡಿಯಲ್ಲಿ. ರಾಜಕೀಯ ರಂಗಕ್ಕೆ ಧುಮುಕಿದ್ದು 1978ರಲ್ಲಿ, ತಾಲೂಕ್ ಬೋರ್ಡ್ ಮೆಂಬರ್ ಆಗುವ ಮೂಲಕ. ಆನಂತರ 1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊಟ್ಟ ಮೊದಲಬಾರಿಗೆ ಭಾರತೀಯ ಲೋಕದಳ ಪಕ್ಷದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಸಿದ್ದರಾಮಯ್ಯನವರು, ಆ ನಂತರ ಜನತಾ ಪಕ್ಷ ಸೇರಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಕರ್ನಾಟಕದಾದ್ಯಂತ ಪರಿಚಿತರಾದರು. 1985ರಲ್ಲಿ ಮತ್ತೆ ಶಾಸಕರಾಗಿ ಚುನಾಯಿತರಾದ ಸಿದ್ದರಾಮಯ್ಯನವರು, ಮೊದಲ ಬಾರಿಗೆ ಪಶು ಸಂಗೋಪನೆ ಮಂತ್ರಿಯಾದರು. ಅಲ್ಲಿಂದ ಇಲ್ಲಿಯವರೆಗೆ, ತಮ್ಮ 35 ವರ್ಷಗಳ ಸುದೀರ್ಘ ರಾಜಕೀಯ ಬದುಕಿನಲ್ಲಿ ಹತ್ತು ಹಲವು ಹುದ್ದೆಗಳನ್ನು ನಿರ್ವಹಿಸಿ ನಿಭಾಯಿಸಿ ಹೆಸರು ಗಳಿಸಿದರು. ಈಗ ಮುಖ್ಯಮಂತ್ರಿ ಗಾದಿಯ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.

ಸದ್ಯದ ಸಂದರ್ಭದಲ್ಲಿ ಕಾಂಗ್ರೆಸ್ಸಿಗೆ ಗೆಲುವಿನ ಗಾಳಿ ಬೀಸುತ್ತಿದೆ, ಸಿದ್ದರಾಮಯ್ಯನವರ ಮುಖ್ಯಮಂತ್ರಿಯಾಗುವ ಕನಸು ಈಡೇರುವ ಕಾಲ ಕೂಡಿ ಬರುತ್ತಿದೆ. ಆದರೆ ಸಿದ್ದರಾಮಯ್ಯನವರ ಒರಟು ಸ್ವಭಾವ ಅವಕಾಶಗಳಿಂದ ವಂಚಿತರನ್ನಾಗಿಸುತ್ತಿದೆ. ಸಿದ್ದರಾಮಯ್ಯನವರನ್ನು ಹತ್ತಿರದಿಂದ ಬಲ್ಲವರು, “ಪಾರ್ಟಿಗೆ ಸೇರಿಸಿಕೊಂಡು ಮೊದಲು ಮಂತ್ರಿ ಮಾಡಿದವರು ರಾಮಕೃಷ್ಣ ಹೆಗಡೆಯವರು. ಸಿದ್ದರಾಮಯ್ಯನವರು ಅವರನ್ನು ಬಿಟ್ಟು ದೇವೇಗೌಡರ ಹಿಂದೆ ಹೋದರು. ಗೌಡರು ಸಿದ್ದರಾಮಯ್ಯರನ್ನು ಪಕ್ಷದ ಅಧ್ಯಕ್ಷರನ್ನಾಗಿಸಿದರು. ಉಪಮುಖ್ಯಮಂತ್ರಿಯನ್ನಾಗಿಸಿದರು. ಸಿದ್ದರಾಮಯ್ಯನವರು ಗೌಡರನ್ನೂ ಬಿಟ್ಟರು. siddaramaiah_dharam_khargeಈಗ ಕಾಂಗ್ರೆಸ್ಸಿನಲ್ಲಿದ್ದಾರೆ. ಆ ಪಕ್ಷದ ರೀತಿ ರಿವಾಜುಗಳನ್ನು ಅರಿತು ವರ್ತಿಸಬೇಕಾದವರು, ಹೋದಲ್ಲಿ ಬಂದಲ್ಲಿ ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದಾರೆ. ಇದು ಅವರ ಹಾದಿಗೆ ತೊಡಕಾದರೂ ಆಗಬಹುದು” ಎನ್ನುತ್ತಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಪಕ್ಷದಲ್ಲಿ ಸದ್ಯಕ್ಕೆ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ- ಇವರಿಬ್ಬರದೇ ಕಾರುಬಾರು. ಹೈಕಮಾಂಡ್ ಕೂಡ ಕುರುಬ-ದಲಿತ ಜಾತಿ ಸಮೀಕರಣವನ್ನು ಮುಂದಿಟ್ಟು, ಸಿದ್ದರಾಮಯ್ಯ- ಪರಮೇಶ್ವರ್ ಅವರುಗಳ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯನ್ನು ಎದುರಿಸುವುದೆಂದು ನಿರ್ಧರಿಸಿದೆ. ಹೈಕಮಾಂಡ್ ಹೀಗೆ ನಿರ್ಧರಿಸಿದ ಮೇಲೆ, ಸಿದ್ದರಾಮಯ್ಯನವರು ಮುತ್ಸದ್ದಿ ರಾಜಕಾರಣಿಯಂತೆ ವರ್ತಿಸಿ ಎಲ್ಲರ ನಾಯಕನಾಗಿ ಹೊರಹೊಮ್ಮಬೇಕಾದವರು, ಯಾಕೋ ಎಲ್ಲರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಪರಮೇಶ್ವರ್ ಗುಂಪು, ಎಸ್.ಎಂ. ಕೃಷ್ಣರ ಗುಂಪು ಮತ್ತು ಹಿರಿಯ ನಾಯಕರ ಗುಂಪುಗಳಿಗೆ ಕಂಡರಾಗದ ವ್ಯಕ್ತಿಯಾಗುತ್ತಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವ ಖಾತೆಗೆ ರಾಜೀನಾಮೆ ಕೊಟ್ಟು ಎಸ್.ಎಂ. ಕೃಷ್ಣ ಮರಳಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದಾಗ,smkrsihwig ನಿಜಕ್ಕೂ ಕಂಗಾಲಾದವರು ಜೆಡಿಎಸ್‌ನ ದೇವೇಗೌಡ ಮತ್ತು ಕುಮಾರಸ್ವಾಮಿ. ಜೆಡಿಎಸ್‌ಗೆ ಬಲ ಇರುವುದೇ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಹಳೆ ಮೈಸೂರು ಪ್ರಾಂತ್ಯದಲ್ಲಿ. ಅಲ್ಲಿಗೆ ಮತ್ತೊಬ್ಬ ಒಕ್ಕಲಿಗ ನಾಯಕ ಬಂದರೆ, ಪಕ್ಷಾಂತರದ ಮೂಲಕ ಶಾಸಕರನ್ನು ಪಕ್ಷಕ್ಕೆ ಸೆಳೆದುಕೊಂಡರೆ ಸಹಜವಾಗಿಯೇ ಜೆಡಿಎಸ್ ಸೊರಗುತ್ತದೆ. ಇದನ್ನರಿತ ಅಪ್ಪಮಕ್ಕಳು ಕೃಷ್ಣರ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಸಿದ್ಧರಾಗುತ್ತಿದ್ದರು. ಅಷ್ಟರಲ್ಲಿ ಸಿದ್ದರಾಮಯ್ಯನವರೇ ಕೃಷ್ಣರ ವಿರುದ್ಧ ಉಗ್ರ ವಿರೋಧ ವ್ಯಕ್ತಪಡಿಸಿ ಹೈಕಮಾಂಡ್ ಮೇಲೆ ಒತ್ತಡ ಹೇರಿ ಕೃಷ್ಣರಿಗೆ ಯಾವ ಸ್ಥಾನವನ್ನೂ ನೀಡದಿರುವಂತೆ ನೋಡಿಕೊಂಡರು.

ಹೈಕಮಾಂಡ್ ಮೇಲೆ ಒತ್ತಡ ಹಾಕಲು ಸಿದ್ದರಾಮಯ್ಯನವರನ್ನು ಮುಂದೆ ಬಿಟ್ಟು, ಬೆನ್ನ ಹಿಂದೆ ನಿಂತು ಬೆಂಬಲಿಸಿದವರು ಯಾರು ಎಂದರೆ, “ಕೃಷ್ಣರನ್ನು ಕಂಡರಾಗದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಆಸ್ಕರ್ ಫರ್ನಾಂಡಿಸ್, ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್ ಮತ್ತು ಶ್ಯಾಮನೂರು ಶಿವಶಂಕರಪ್ಪನವರು” ಎಂದು ಹೆಸರು ಹೇಳಲು ಇಚ್ಛಿಸದ ಕಾಂಗ್ರೆಸ್ಸಿನ ಹಿರಿಯ ನಾಯಕರೊಬ್ಬರು ಕಾಂಗ್ರೆಸ್ಸಿನೊಳಗಿನ ಗುಂಪು ರಾಜಕಾರಣವನ್ನು ಬಿಚ್ಚಿಟ್ಟರು. ಮುಂದುವರೆದು, “ಈ ಗುಂಪಿಗೆ ಮುಂದಿನ ಮುಖ್ಯಮಂತ್ರಿಯಾಗುವ ಆಸೆ ಇದೆ. ಸೀನಿಯಾರಿಟಿ ಮುಂದೆ ಮಾಡಿ ಖರ್ಗೆಯವರನ್ನು ಸಿಎಂ ಮಾಡಿದರೆ, ಸಿದ್ದರಾಮಯ್ಯನವರಿಗೆ ಡೆಪ್ಯೂಟಿ ಸಿಎಂ ಮಾಡುವುದು. ಇಲ್ಲ, ಚುನಾವಣೆಯನ್ನು ಎದುರಿಸಿದವರೇ ಸಿಎಂ ಆಗಬೇಕು ಎಂದರೆ, ಪರಮೇಶ್ವರ್ ಬಿಟ್ಟು ಸಿದ್ದುವನ್ನು ಬೆಂಬಲಿಸುವುದು ಈ ಗುಂಪಿನ ಒಳ ಒಪ್ಪಂದ” ಎನ್ನುತ್ತಾರೆ ಆ ಹಿರಿಯರು.

ಹೀಗಾಗಿ ಈ ಗುಂಪು ಕೃಷ್ಣರನ್ನು, ಅವರ ಶಿಷ್ಟಕೋಟಿಯನ್ನು ವ್ಯವಸ್ಥಿತವಾಗಿ ಅಧಿಕಾರ ರಾಜಕಾರಣದಿಂದ ದೂರವಿಡಲು ಈ ಸಂಚನ್ನು ರೂಪಿಸಿತು. ಹೈಕಮಾಂಡ್ ಕೂಡ ಈ ಸಂಚಿಗೆ ಬಲಿಯಾಗಿ, ಕೃಷ್ಣರಿಗೆ ಯಾವ ಸ್ಥಾನಮಾನ ನೀಡದಂತೆ ನೋಡಿಕೊಂಡಿತು. ಮುಂದುವರೆದು, ಲಿಂಗಾಯಿತ ಕೋಮಿನ ವೀರಣ್ಣ ಮತ್ತಿಕಟ್ಟಿಯನ್ನು ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿಸಿತು. ಅಲ್ಲಿಗೆ ಕೃಷ್ಣರ ಅಧ್ಯಾಯ ಮುಗಿಯಿತು. ಸಿದ್ದರಾಮಯ್ಯನವರ ಹಾದಿ ಸುಗಮವಾಯಿತು.

ಹೀಗಾಗಿದ್ದು, ಕಾಂಗ್ರೆಸ್ಸಿನ ಕೃಷ್ಣ ಮತ್ತವರ ಗುಂಪಿಗಷ್ಟೇ ಅಲ್ಲ, ಸಿದ್ದರಾಮಯ್ಯನವರನ್ನು ಕಂಡರಾಗದ ಜೆಡಿಎಸ್‌ನ devegowda_kumaraswamyದೇವೇಗೌಡ ಮತ್ತವರ ಮಕ್ಕಳಿಗೆ ಸಹಿಸಲಸಾಧ್ಯ ಸಂಕಟ ತಂದಿಟ್ಟಿದೆ. ಮತ್ತೊಂದು ಕಡೆ, ಬಿಜೆಪಿಯ ಮತ್ತೊಬ್ಬ ಕುರುಬ ಜನಾಂಗದ ನಾಯಕ ಕೆ.ಎಸ್. ಈಶ್ವರಪ್ಪನವರ ಮೆರೆದಾಟಕ್ಕೆ ಬ್ರೇಕ್ ಹಾಕಿದೆ. ಸಹಜವಾಗಿ ಈಗ ಇವರೆಲ್ಲರೂ ಸಿದ್ದು ಮೇಲೆ ಬಿದ್ದಿದ್ದಾರೆ. ಹೇಗಾದರೂ ಸರಿ, ಸಿದ್ದು ಸಿಎಂ ಆಗದಂತೆ ನೋಡಿಕೊಳ್ಳಬೇಕೆಂಬ ಒಳ ಒಪ್ಪಂದಕ್ಕೆ ಬಂದಿದ್ದಾರೆ. ಅವರೆಲ್ಲರ ಕಣ್ಣು ವರುಣಾ ಕ್ಷೇತ್ರದತ್ತ ನೆಟ್ಟಿದೆ.

ಸಿದ್ದರಾಮಯ್ಯನವರ ಉಡಾಫೆ ಗುಣಕ್ಕೆ ಸರಿಯಾಗಿ, ಮೈಸೂರಿನ ವರುಣಾದಿಂದ ಗೆದ್ದುಬಂದ ದಿನದಿಂದ ಇಲ್ಲಿಯವರೆಗೆ ಪಾರ್ಟಿಯೊಳಗಿನ ಕಸರತ್ತಿನಲ್ಲಿ ಕಳೆದುಹೋಗಿ, ಹೈಕಮಾಂಡಿನ ಜೊತೆ ಜಗಳಕ್ಕಿಳಿದು ವಿರೋಧಪಕ್ಷದ ನಾಯಕನ ಸ್ಥಾನ ಗಿಟ್ಟಿಸುವಲ್ಲಿ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಮತ ನೀಡಿ ಗೆಲ್ಲಿಸಿದ ಮತದಾರರನ್ನೇ ಮರೆತುಬಿಟ್ಟಿದ್ದಾರೆ. ಜೊತೆಗೆ ಕ್ಷೇತ್ರವನ್ನು ಮಗ ರಾಕೇಶನ ಉಸ್ತುವಾರಿಗೆ ಕೊಟ್ಟಿದ್ದರಿಂದ, ಆ ಹುಡುಗಾಟಿಕೆಗೆ ಜನ ಬೆಚ್ಚಿ ಬಿದ್ದು ಸಿದ್ದರಾಮಯ್ಯನವರಿಂದ ದೂರವಾಗಿದ್ದಾರೆ.

ಸಿದ್ದರಾಮಯ್ಯನವರು ಕೈಬಿಟ್ಟ ಕ್ಷೇತ್ರ ವಿರೋಧಿಗಳ ಪಾಲಾಗಿದೆ. ವರುಣಾ ಕ್ಷೇತ್ರಕ್ಕೆ ಸೇರಿದ, ಯಡಿಯೂರಪ್ಪನವರ ಬಲಗೈ ಬಂಟ ಕಾಪು ಸಿದ್ದಲಿಂಗಸ್ವಾಮಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹುಟ್ಟಿದೆ. ಜೊತೆಗೆ ಕ್ಷೇತ್ರದಲ್ಲಿ 42 ಸಾವಿರ ಲಿಂಗಾಯತ ಕೋಮಿನ ಮತದಾರರಿರುವುದು, ಇದಕ್ಕೆ ಸುತ್ತೂರು ಸ್ವಾಮಿಗಳ ಸಹಕಾರವಿರುವುದು ಸಿದ್ದಲಿಂಗಸ್ವಾಮಿಗೆ ಆನೆಬಲ ಬಂದಂತಾಗಿದೆ. ಅಷ್ಟೇ ಅಲ್ಲ, ಯಡಿಯೂರಪ್ಪನವರು ಸಿಎಂ ಆಗಿದ್ದಾಗ, ಸಿದ್ದಲಿಂಗಸ್ವಾಮಿಗೆ ತಾವೇ ಶಾಸಕರಂತೆ ಓಡಾಡುತ್ತ, ಸರ್ಕಾರದಿಂದ ಹತ್ತೆಂಟು ಕೋಟಿ ರೂಪಾಯಿಗಳ ಯೋಜನೆಗಳನ್ನು ತಂದು ಸುರಿಯುತ್ತ, ಕೇಳಿದವರಿಗೆಲ್ಲ ಹಣ ಕೊಟ್ಟು ಆಪ್ತರಾಗಿದ್ದಾರೆ. ಸಿದ್ದರಾಮಯ್ಯನವರ ಮಗನ ಅಟಾಟೋಪಕ್ಕೆ ಬೇಸತ್ತಿದ್ದ ಜನ ಸಿದ್ದಲಿಂಗಸ್ವಾಮಿ ಕೆಲಸ ಮತ್ತು ಹಣಕ್ಕೆ ಮನಸೋತು, ಅವರಿಗಿಂತ ಇವರೇ ವಾಸಿ ಎನ್ನತೊಡಗಿದ್ದಾರೆ.

ಮತ್ತೊಂದು ಬದಿಯಿಂದ ಜೆಡಿಎಸ್‌ನ ದೇವೇಗೌಡರು, “ಬೆನ್ನಿಗೆ ಚೂರಿ ಹಾಕಿ ಹೋದವನು, ಅದು ಹೇಗೆ ಮುಖ್ಯಮಂತ್ರಿಯಾಗುತ್ತಾನೋ ನೋಡ್ತೀನಿ” ಎಂದು ಹಠಕ್ಕೆ ಬಿದ್ದಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದು ಎದುರಿಗೆ ನಿಲ್ಲಿಸಲು ಐನಾತಿ ಆಸಾಮಿಯನ್ನೇ ಅಭ್ಯರ್ಥಿಯನ್ನಾಗಿ ಹುಡುಕಿದ್ದಾರೆ. ಮೈಸೂರಿನ ದೇವರಾಜ ಠಾಣೆಯಲ್ಲಿ ಎಸಿಪಿಯಾಗಿದ್ದ ಚೆಲುವರಾಜು ಎಂಬ ನಾಯಕ ಜನಾಂಗದ ಪೊಲೀಸ್ ಅಧಿಕಾರಿ, ಸ್ವಯಂನಿವೃತ್ತಿ ಪಡೆದು ಮನೆಗೆ ಮರಳಿದ್ದಾರೆ. ಜೊತೆಗೆ ಸೇವೆಯಲ್ಲಿದ್ದಾಗ ಒಳ್ಳೆಯ ಹೆಸರನ್ನೂ ಸಂಪಾದಿಸಿದ್ದಾರೆ. ಈಗ ಗೌಡರು ಈ ಚೆಲುವರಾಜು ಅವರನ್ನು ಸಿದ್ದರಾಮಯ್ಯನವರ ವಿರುದ್ಧ ಕಣಕ್ಕಿಳಿಸುತ್ತಿದ್ದಾರೆ. ಹಾಗೆ ನೋಡಿದರೆ, ವರುಣಾ ಕ್ಷೇತ್ರದಲ್ಲಿ 35 ಸಾವಿರ ಕುರುಬ ಮತದಾರರಿದ್ದಾರೆ. ಇವರಷ್ಟೇ ಸಂಖ್ಯೆಯಲ್ಲಿ ನಾಯಕರ ಜನಾಂಗದ ಜನರೂ ಇದ್ದಾರೆ.

ಇದಷ್ಟೇ ಅಲ್ಲ, ಮುಂಬರುವ ಚುನಾವಣೆ ಮತ್ತು ಚುನಾವಣಾ ನಂತರ ಬಿಜೆಪಿ-ಜೆಡಿಎಸ್ ಒಂದಾಗುವ ಸೂಚನೆಗಳಿವೆ. KS-Eshwarappaಒಳಒಪ್ಪಂದವೂ ನಡೆದಿದೆ. ಹೀಗಾಗಿ ದೇವೇಗೌಡರ ಮಾತು ಈಗ ಬಿಜೆಪಿಗೆ ವೇದವಾಕ್ಯವಾಗಿದೆ. ಮೊದಲೇ ಸಿದ್ಧರಾಮಯ್ಯನವರನ್ನು ಕಂಡರಾಗದ ಈಶ್ವರಪ್ಪ, ದೇವೇಗೌಡರ ತಂತ್ರಕ್ಕೆ ತಲೆಬಾಗಿ ಬಿಜೆಪಿಯಿಂದ ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿ ಹಾಕದೆ ಜೆಡಿಎಸ್ ಅಭ್ಯರ್ಥಿಯನ್ನೇ ಬೆಂಬಲಿಸಿದರೆ, ಬಿಜೆಪಿಯ ಮತಗಳ ಜೊತೆಗೆ ಜೆಡಿಎಸ್‌ನ ಮತಗಳು ಸೇರಿ ನಾಯಕ ಜನಾಂಗದ ಚೆಲುವರಾಜು, ಸಿದ್ದರಾಮಯ್ಯನವರನ್ನು ಹಿಂದಿಕ್ಕುವ ಸಾಧ್ಯತೆಗಳಿವೆ. ಇದೇ ಫಾರ್ಮುಲಾ 2006 ರಲ್ಲಿ ನಡೆದ ವರುಣಾ ಉಪಚುನಾವಣೆಯಲ್ಲಿ ಕಾರ್ಯರೂಪಕ್ಕೆ ಬಂದಿತ್ತು, ಕೇವಲ 257 ಓಟುಗಳಿಂದ ಸಿದ್ಧರಾಮಯ್ಯ ಏದುಸಿರು ಬಿಟ್ಟು ಗೆದ್ದಿದ್ದರು. ಇದು ಮತ್ತೆ ಪುನರಾವರ್ತನೆಯಾಗಲಿದೆ.

ಹಾಗೆಯೇ ಮತ್ತೊಂದು ಬದಿಯಿಂದ ಕಾಪು ಸಿದ್ದಲಿಂಗಸ್ವಾಮಿ, ಸುತ್ತೂರು ಸ್ವಾಮಿ, ಯಡಿಯೂರಪ್ಪನವರ ಹೊಡೆತವೂ ಬಿದ್ದರೆ ಸಿದ್ದು ಮೇಲೇಳುವುದು ಕಷ್ಟವಿದೆ. ಇದಲ್ಲಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ಸಿನ ಸಿದ್ದರಾಮಯ್ಯನವರ ವಿರೋಧಿ ಗುಂಪು ಒಳಗಿಂದೊಳಗೇ ಸಿದ್ದರಾಮಯ್ಯನವರ ವಿರೋಧಿಗಳೊಂದಿಗೆ ಕೈ ಜೋಡಿಸಿದರೆ, ಅಲ್ಲಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದಿರಲಿ, ಶಾಸಕರಾಗುವುದೂ ಕಷ್ಟವಾಗುತ್ತದೆ.

ಈಗ ಸಿದ್ದರಾಮಯ್ಯನವರ ಮುಂದಿರುವ ದಾರಿ- ತಮ್ಮ ಗುಣಸ್ವಭಾವವನ್ನು ಬದಲಿಸಿಕೊಳ್ಳುವುದು, ಕಾಂಗ್ರೆಸ್ ಕಲ್ಚರ್ ಅಳವಡಿಸಿಕೊಳ್ಳುವುದು, ವಿರೋಧಿಗಳ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು. ಇದು ಸಿದ್ದರಾಮಯ್ಯನವರಿಗೆ ಸಾಧ್ಯವೇ?

3 thoughts on “ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿಯೇ?

  1. Vasanth

    ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವ ಎಲ್ಲಾ ಅಹ೵ತೆ ಇದೆ? ಅಲ್ಲದೇ ಇವತ್ತಿನ ದುಷ್ಟ ರಾಜಕೀಯ ಪರಿಸ್ಥಿತಿಯಲ್ಲಿ ಈ ರಾಜ್ಯದ ಮುಖ್ಯಮಂತ್ರಿಯಾಗಲಿಕ್ಕೆ ಯೋಗ್ಯ ವ್ಯಕ್ತಿ ಸಿದ್ದರಾಮಯ್ಯ ಮಾತ್ರ.

    Reply
  2. Ananda Prasad

    ಒಟ್ಟಿನಲ್ಲಿ ಎಲ್ಲ ‘ಶತ್ರುಗಳೂ’ ಜೊತೆಗೂಡಿ ಸಿದ್ಧರಾಮಯ್ಯನವರಿಗೆ ಮುಳುಗುನೀರು ತಂದಿಟ್ಟರೂ ಅಚ್ಚರಿ ಇಲ್ಲ. ಸಿದ್ಧರಾಮಯ್ಯನವರು ಜಾತಿ ಮೀರಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಿದ್ದರೆ ಎಷ್ಟೇ ಶತ್ರುಗಳು ಸೇರಿದರೂ ಹೆದರಬೇಕಾಗಿರಲಿಲ್ಲ. ಅಲ್ಲದೆ ತನ್ನ ಮಗನ ಕಾರುಬಾರುಗಳನ್ನು ಹದ್ದುಬಸ್ತಿನಲ್ಲಿಡಬೇಕಾಗಿತ್ತು. ಹೀಗೆ ಮಾಡದೆ ಸಿದ್ಧರಾಮಯ್ಯನವರು ನಿರ್ಲಕ್ಷ್ಯ ವಹಿಸಿದ್ದಾರೆ. ‘ಮಾಡಿದ್ದುಣ್ಣೋ ಮಹರಾಯ’ ಎಂಬ ಪರಿಸ್ಥಿತಿಯನ್ನು ಅವರೇ ತಂದುಕೊಂಡಿರುವಂತೆ ಕಾಣುತ್ತದೆ.

    Reply
    1. adithya.

      ಯಾವ ಕಾರಣಕ್ಕೂ ಸಿದ್ದರಾಮಯ್ಯನವರು ವರುಣಾ ವಿಧಾನಸಭೆ ಕ್ಷೇತ್ರದಲ್ಲಿ ಸೋಲುವುದಿಲ್ಲ. ಪ.ಜಾತಿ ಕುರುಬ ಹಾಗೂ ಇತರೆ ಹಿಂದುಳಿದ ಮತಗಳು ಸಿದ್ದರಾಮಯ್ಯ ನವರ ಕೈಬಿಡುವುದಿಲ್ಲ. ಕೇವಲ ಜಾತಿ ರಾಜಕೀಯದಿಂದ ಗೆಲ್ಲಲು ಸಾಧ್ಯವಿಲ್ಲ. ಸಿದ್ದರಾಮಯ್ಯರವರು ಎಲ್ಲಾ ಜಾತಿಗಳ ನಾಯಕರು ಅವರು ಗೆದ್ದೆ ಗೆಲ್ಲುತ್ತಾರೆ.

      Reply

Leave a Reply

Your email address will not be published. Required fields are marked *