ಪ್ರಾಮಾಣಿಕ ಪತ್ರಕರ್ತನಿಗೆ ಪತ್ರಕರ್ತರ ಸಂಘದಿಂದ ಬಹಿಷ್ಕಾರ !?

– ದಿನೇಶ್ ಕುಮಾರ್ ಎಸ್.ಸಿ.

ಇದು ನನ್ನ ಮಟ್ಟಿಗಂತೂ ಬೆಚ್ಚಿಬೀಳಿಸುವ ಸುದ್ದಿ.

ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ “ದಿ ಹಿಂದೂ” ಪತ್ರಿಕೆಯ ಹಿರಿಯ ವರದಿಗಾರ ಸತೀಶ್ ಜಿ.ಟಿ.ಯವರಿಗೆ ನೋಟೀಸೊಂದು ಹೋಗಿದೆ. ನಿಮ್ಮನ್ನು ಸಂಘದ ಸದಸ್ಯತ್ವದಿಂದ ಉಚ್ಛಾಟಿಸಲಾಗುವುದು, ಯಾವುದೇ ಪತ್ರಿಕಾಗೋಷ್ಠಿ ವರದಿಗೆ ಕರೆಯಲಾಗುವುದಿಲ್ಲ ಮತ್ತು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತನಾಗಿ ಭಾಗವಹಿಸಲು ಅವಕಾಶ ನೀಡುವುದಿಲ್ಲ ಎಂಬುದು ಈ ನೋಟೀಸಿನ ಒಟ್ಟು ತಾತ್ಪರ್ಯ.

“ದಿ ಹಿಂದೂ” ಪತ್ರಿಕೆ ರಾಷ್ಟ್ರಮಟ್ಟದಲ್ಲಿ ಪತ್ರಿಕಾಮೌಲ್ಯವನ್ನು ಉಳಿಸಿಕೊಂಡು ಬಂದಿರುವ ಕೆಲವೇ ಪತ್ರಿಕೆಗಳಲ್ಲಿ ಒಂದು. The_Hindu_logoಈ ಪತ್ರಿಕೆಯ ಬಹುತೇಕ ವರದಿಗಾರರು ಶುದ್ಧಹಸ್ತರಾಗಿಯೇ ಇರುತ್ತಾರೆ. ಸತೀಶ್ ಹಿಂದೆ ಡೆಕ್ಕನ್ ಹೆರಾಲ್ಡ್‌ನಲ್ಲಿ ಕೆಲಸ ಮಾಡಿದವರು. ಗ್ರಾಮೀಣ ಭಾಗದ ವರದಿಗಾರಿಕೆಯ ಆಸಕ್ತಿಯಿಂದಾಗಿ ಈಗ ಹಾಸನ-ಚಿಕ್ಕಮಗಳೂರು ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಯಿಂದ ನಗರಕ್ಕೆ ಬರುವ ಪತ್ರಕರ್ತರೇ ಹೆಚ್ಚಿರುವ ಸಂದರ್ಭದಲ್ಲಿ ಸತೀಶ್ ಬೆಂಗಳೂರೆಂಬ ಮಾಯಾನಗರಿ ಬಿಟ್ಟು ಹಾಸನಕ್ಕೆ ತೆರಳಿದವರು. ಹಾಸನ-ಚಿಕ್ಕಮಗಳೂರು ಜಿಲ್ಲಾ ವರದಿಗಾರಿಕೆ ಆರಂಭಿಸಿದಾಗಿನಿಂದ ಆ ಎರಡೂ ಜಿಲ್ಲೆಗಳ ನಿಜವಾದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಂತೆ ಬರೆದಿದ್ದಾರೆ. ಯಾರಿಗೂ ಅಂಜದೆ, ಅಳುಕದೆ ತಮ್ಮ ವೃತ್ತಿಧರ್ಮವನ್ನು ಪಾಲಿಸುತ್ತ ಬಂದಿದ್ದಾರೆ.

ಇಂಥ ಸತೀಶ್ ವಿರುದ್ಧ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಯಾಕಾದರೂ ನೋಟೀಸು ಕೊಟ್ಟಿದೆ? Satish_GTಇದರ ಹಿನ್ನೆಲೆ ಏನು ಎಂಬುದಕ್ಕೆ ನೋಟೀಸಿನಲ್ಲೇ ಸ್ಪಷ್ಟ ಉತ್ತರವಿದೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಯೊಬ್ಬರ ವಿರುದ್ಧ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ದೂರು ನೀಡಿ ಅಪಮಾನಗೊಳಿಸಲಾಗಿದೆ ಎಂಬುದು ನೋಟೀಸಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

ಸತೀಶ್ ಯಾಕಾಗಿ ಈ ದೂರನ್ನು ನೀಡಿದರು? ಆ ದೂರಿನಲ್ಲಿ ಏನಿದೆ ಎಂಬುದಕ್ಕೆ ಸತೀಶ್ ಕೊಟ್ಟ ದೂರೇ ಎಲ್ಲ ಉತ್ತರ ಹೇಳುತ್ತದೆ. ಸತೀಶ್ ನೀಡಿದ ದೂರು ಈ ಕೆಳಕಂಡಂತಿದೆ.

ಇಂದ.
ಸತೀಶ್ ಜಿ.ಟಿ.
ವರದಿಗಾರ,
ದಿ ಹಿಂದು,
ಹಾಸನ.

ಗೆ.
ಅಧ್ಯಕ್ಷರು,
ಕರ್ನಾಟಕ ವೃತ್ತಿನಿರತ ಪತ್ರಕರ್ತರ ಸಂಘ,
ಬೆಂಗಳೂರು.

ಅಧ್ಯಕ್ಷರೆ,

ವಿಷಯ: ಹಾಸನದಲ್ಲಿ ಬೆಳಕಿಗೆ ಬಂದ ‘ಪ್ಯಾಕೆಜ್ ಸಂಸ್ಕೃತಿ’ ಮತ್ತು ಸಂಘದ ಪದಾಧಿಕಾರಿಯೊಬ್ಬರಿಂದ ಮುಖ್ಯವಾಹಿನಿ ಪತ್ರಿಕೆಗಳ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ನಿಮಗೆ ದೂರು ಸಲ್ಲಿಸುವುದು.

‘ಭ್ರಷ್ಟರಿಂದ ಪತ್ರಿಕೋದ್ಯಮವನ್ನು ಮುಕ್ತ ಗೊಳಿಸುವುದು’ – ಈ ಸಂಘದ ಆಶಯಗಳಲ್ಲಿ ಒಂದು ಎಂದು ಭಾವಿಸಿ ಹಾಗೂ ನಾನು ಕೆಲಸ ಮಾಡುತ್ತಿರುವ “ದಿ ಹಿಂದು” ಪತ್ರಿಕೆಯ ಮ್ಯಾನೇಜ್‌ಮೆಂಟ್‌ನವರ ಸೂಚನೆ ಮೇರೆಗೆ ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ.

ದಿನಾಂಕ ಅಕ್ಟೋಬರ್ 3 ರಂದು ಹಾಸನ ನಗರದಲ್ಲಿ ಕಾಂಗ್ರೆಸ್ ಪಕ್ಷ ಮಹಿಳಾ ಸಮಾವೇಶ ಆಯೋಜಿಸಿತ್ತು. ಸಮಾವೇಶದ ಬಗ್ಗೆ ಹಾಸನ ಜಿಲ್ಲೆಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಶಿವರಾಂ ಕೆಲವೇ ದಿನಗಳ ಹಿಂದೆ ಪತ್ರಿಕಾ ಗೋಷ್ಟಿ ನಡೆಸಿ ಪತ್ರಕರ್ತರಿಗೆ ಮಾಹಿತಿ ನೀಡಿದ್ದರು.

ಸಮಾವೇಶದ ದಿನ (ಅಕ್ಟೋಬರ್ 3ರಂದು) ಬೆಳಗ್ಗೆ 11.01 ಗಂಟೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೀಲಾವತಿಯವರು ದೂರವಾಣಿ ಮೂಲಕ (ಅವರ ದೂರವಾಣಿ ಸಂಖ್ಯೆ 94486 55043) ನನ್ನನ್ನು ಸಂಪರ್ಕಿಸಿ ‘ನೀವು ದಯಮಾಡಿ ಕಾರ್ಯಕ್ರಮಕ್ಕೆ ಬನ್ನಿ’ ಎಂದರು. ಅದಕ್ಕೂ ಮೊದಲು “ಕಾಂಗ್ರೆಸ್‌ನವರು ನನಗೆ ಮತ್ತು ಕೆಲ ಸ್ಥಳೀಯ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರಷ್ಟೆ. ಆದರೆ ಸುದ್ದಿವಾಹಿನಿಯ ವರದಿಗಾರರು ಈ ಬಗ್ಗೆ ಏನೇನೋ ಮಾತನಾಡುತ್ತಿದ್ದಾರೆ…” – ಹೀಗೆ ಹೇಳಿದರು. ಅವರ ಮಾತಿನ ಹಿನ್ನೆಲೆ ಗ್ರಹಿಸಲಾಗಲಿಲ್ಲ. ಆದರೆ ಕಾರ್ಯಕ್ರಮಕ್ಕೆ ದಯಮಾಡಿ ಬನ್ನಿ ಎಂದು ಹೇಳಿದ್ದು ಮಾತ್ರ ಸ್ಪಷ್ಟ.

ಇದೇ ರೀತಿ ಇನ್ನೊಂದು ಇಂಗ್ಲಿಷ್ ಪತ್ರಿಕೆ ವರದಿಗಾರನಿಗೂ ದೂರವಾಣಿ ಕರೆ ಮಾಡಿ, ಆ ವರದಿಗಾರ ರಜೆಯ ಮೇಲೆ ಊರಿಗೆ ತೆರಳಿದ್ದರೂ, “ಹೇಗಾದರೂ ಮಾಡಿ ಒಂದೇ ಒಂದು ಸಾಲಿನಷ್ಟಾದರೂ ಈ ಕಾರ್ಯಕ್ರಮದ ವರದಿ ನಿಮ್ಮ ಪತ್ರಿಕೆಯಲ್ಲಿ ಬರುವಂತೆ ಮಾಡು, ಬೇಕಾದರೆ ನಿನ್ನ ಕಾಲಿಗೆ ಬೀಳುತ್ತೇನೆ..” ಎಂದು ಲೀಲಾವತಿಯವರು ಗೋಗರೆದಿದ್ದರು. ವರದಿಗಾರ ಮಿತ್ರ ಈ ಸಂಗತಿಯನ್ನು ಆಪ್ತರ ಬಳಿ ಹಂಚಿಕೊಂಡಿದ್ದಾನೆ.

ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಕ್ಕೆ ಹೀಗೆ ಇವರು ಆಹ್ವಾನ ನೀಡಿದ್ದು ಮತ್ತು ಗೋಗರೆದಿದ್ದು ತೀರಾ ವಿಚಿತ್ರ ಎನಿಸಿತು. ಕೆಲವೇ ನಿಮಿಷಗಳ ನಂತರ ಈ ವರ್ತನೆ ಮೂಲ ಉದ್ದೇಶ ಸ್ಪಷ್ಟವಾಯಿತು.

ಸುದ್ದಿ ವಾಹಿನಿಯೊಂದರ ವರದಿಗಾರ ಮಿತ್ರನಿಗೆ, ಬಿ.ಶಿವರಾಂ ಪತ್ರಿಕಾಗೋಷ್ಟಿಗೆ ತಡವಾಗಿ ಬಂದಿದ್ದರ ಕಾರಣ, ಕಾಂಗ್ರೆಸ್ ಸಮಾವೇಶದ ಬಗ್ಗೆ ಮಾಹಿತಿ ಇರಲಿಲ್ಲ. ಸಮಾವೇಶದ ದಿನ ಹೈಸ್ಕೂಲ್ ಆವರಣದಲ್ಲಿ ಶಾಮಿಯಾನ ಹಾಕಿದ್ದನ್ನು ನೋಡಿ, ಅಲ್ಲಿಯೇ ಇದ್ದ ಹಾಸನ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಲಿತಮ್ಮನವರನ್ನು ವಿಚಾರಿಸಿದ್ದಾರೆ. ಆಗ ಅವರಿಂದ ಬಂದ ಉತ್ತರ, “ಯಾಕ್ರಿ ಕಾರ್ಯಕ್ರಮದ ಬಗ್ಗೆ ಗೊತ್ತಿಲ್ಲವಾ? ನಿಮಗೆ ಕೊಡಬೇಕಾದ ಪ್ಯಾಕೇಜನ್ನೆಲ್ಲಾ ನಿಮ್ಮ ಸಂಘದ ಅಧ್ಯಕ್ಷೆ ಲೀಲಾವತಿಯವರಿಗೆ ಕೊಟ್ಟಿದ್ದೇವಲ್ಲ, ಅವರು ಹೇಳಲಿಲ್ಲವಾ? ಇನ್ನು ನಿಮಗೆ ಕೊಡಬೇಕಾದ್ದು ಏನಾದರೂ ಇದ್ದರೆ, ಬನ್ನಿ ತಗೊಂಡು ಹೋಗಿ ಸುದ್ದಿ ಮಾಡಿ..” ಎಂದು ದರ್ಪದಿಂದಲೇ ಮಾತನಾಡಿದ್ದಾರೆ.

ಯಾವ ಸುದ್ದಿಗೂ ಯಾವ ದಿನವೂ ಯಾರ ಬಳಿಯೂ ಪುಡಿಕಾಸು ಕೇಳದ ನಾವು ಪಕ್ಷವೊಂದರ ಸಮಾವೇಶದಲ್ಲಿ ಸಾರ್ವಜನಿಕವಾಗಿ ಹೀಗೆ ಅನ್ನಿಸಿಕೊಳ್ಳಬೇಕಾಯಿತಲ್ಲ ಎಂದು ಕ್ರುದ್ಧನಾದ ವರದಿಗಾರ ತಕ್ಷಣ ಲೀಲಾವತಿಯವರಿಗೆ ದೂರವಾಣಿ ಕರೆ ಮಾಡಿ ಏನಿದರ ಮರ್ಮ ಎಂದು ಕೇಳಿದ್ದಾನೆ. ತಾನು ಕೆಲಸ ಮಾಡುತ್ತಿರುವ ಸುದ್ದಿ ಸಂಸ್ಥೆ ಹೆಸರಿನಲ್ಲಿ ‘ಪ್ಯಾಕೇಜ್’ ಕೇಳುವ ಮತ್ತು ಆ ಮೂಲಕ ಚಾನೆಲ್‌ಗೆ ಮಸಿ ಬಳಿಯುತ್ತಿರುವ ಬಗ್ಗೆ ತನ್ನ ಸಿಟ್ಟು ವ್ಯಕ್ತ ಪಡಿಸಿದ್ದಾನೆ.

ಈ ಘಟನೆಯಿಂದ ವಿಚಲಿತನಾದ ವರದಿಗಾರ ಇತರೆ ಮಿತ್ರರೊಂದಿಗೆ ತನ್ನ ನೋವನ್ನು ಹಂಚಿಕೊಂಡಾಗ ಲೀಲಾವತಿಯವರು ಫೋನ್ ಮಾಡಿದ್ದರ ಹಿಂದಿನ ಉದ್ದೇಶ ಅರ್ಥವಾಯಿತು. ವರದಿಗಾರನೊಂದಿಗೆ ಸಂಭಾಷಣೆ ನಂತರ ಕಾಂಗ್ರೆಸ್ ನಾಯಕಿ ಶ್ರೀಮತಿ ಲಲಿತಮ್ಮನವರು ಪತ್ರಕರ್ತರ ಸಂಘದ ಅಧ್ಯಕ್ಷರಾದ ಲೀಲಾವತಿಯವರಿಗೆ ದೂರವಾಣಿ ಕರೆ ಮಾಡಿ ಯಾಕ್ರಿ ಯಾರಿಗೂ ನೀವು ಕಾರ್ಯಕ್ರಮದ ಬಗ್ಗೆ ಹೇಳಿಲ್ಲವೇ ಎಂದು ಕೇಳಿದ್ದಾರೆ. ಆ ನಂತರ ನನಗೂ ಮತ್ತು ಇನ್ನಿತರೆ ಮಿತ್ರರಿಗೂ ಲೀಲಾವತಿಯವರು ದೂರವಾಣಿ ಕರೆ ಮಾಡಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಗೋಗರೆದಿದ್ದಾರೆ.

ಈ ಸನ್ನಿವೇಶಗಳನ್ನು ಗಮನಿಸಿದಾಗ ನಮ್ಮ (ದಿ ಹಿಂದು) ಪತ್ರಿಕೆಯನ್ನೂ ಸೇರಿದಂತೆ ಮುಖ್ಯವಾಹಿನಿಯ ಪತ್ರಿಕೆಗಳ ಹೆಸರುಗಳನ್ನು ಬಳಸಿಕೊಂಡು ಈ ಘನ ಸಂಘದ ಜಿಲ್ಲಾಧ್ಯಕ್ಷರು ‘ಪ್ಯಾಕೇಜ್’ ಸ್ವೀಕರಿಸಿರುವ ಅನುಮಾನ ಬರುತ್ತದೆ. ಅನುಮಾನಕ್ಕೆ ಕಾರಣಗಳನ್ನು ಹೀಗೆ ಪಟ್ಟಿ ಮಾಡಬಹುದು.

1. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಿಲತಮ್ಮನವರು ಸಮಾವೇಶದ ಸ್ಥಳದಲ್ಲಿ ಸುದ್ದಿ ವಾಹಿನಿಯ ವರದಿಗಾರನಿಗೆ ಹೇಳಿರುವ ಮಾತುಗಳು – ‘ಎಲ್ಲರಿಗೂ ಸೇರಿ ಪ್ಯಾಕೇಜನ್ನು ಈಗಾಗಲೇ ನಿಮ್ಮ ಅಧ್ಯಕ್ಷರಿಗೆ ನೀಡಿದ್ದೇವಲ್ಲ, ನಿಮಗೂ ಮತ್ತೇನಾದರೂ ಬೇಕಿದ್ದರೆ ತಗೊಂಡು ಹೋಗಿ ಸುದ್ದಿ ಮಾಡಿ..’ ಈ ಮಾತುಗಳನ್ನು ಕೇಳಿಸಿಕೊಂಡ ವರದಿಗಾರನ ಜೊತೆ ಕೆಮಾರಮನ್ ಕೂಡಾ ಇದ್ದರು. ರಾಷ್ಟೀಯ ಪಕ್ಷವೊಂದರ ಜವಾಬ್ದಾರಿ ಸ್ಥಾನದಲ್ಲಿರುವವರ ಹೇಳಿರುವ ಮಾತನ್ನು ಅಲ್ಲಗಳೆಯಲಾದೀತೆ?

2. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಲೀಲಾವತಿಯವರು ನನಗೆ ಮತ್ತು ಇತರೆ ಪತ್ರಕರ್ತರಿಗೆ ದೂರವಾಣಿ ಕರೆಮಾಡಿ ಕಾಂಗ್ರೆಸ್ ಸಮಾವೇಶಕ್ಕೆ ಬರುವಂತೆ ಆಹ್ವಾನಿಸಿದ್ದು. (ಇವರು ಪ್ಯಾಕೇಜ್ ಲಾಭ ಪಡೆಯದಿದ್ದರೆ ನಮಗೆ ಫೋನ್ ಮಾಡಿ ಆಹ್ವಾನಿಸಲು ಇವರ್ಯಾರು? ಅಥವಾ ಇವರೇನು ಕಾಂಗ್ರೆಸ್ ಕಾರ್ಯಕರ್ತರೆ?)

3. “ಕಾರ್ಯಕ್ರಮದ ವರದಿ ಒಂದು ಸಾಲಿನಷ್ಟಾದರೂ ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುವಂತೆ ನೋಡಿಕೋ, ಬೇಕಾದರೆ ನಿನ್ನ ಕಾಲಿಗೆ ಬೀಳುತ್ತೇನೆ..” ಎಂದು ಸಂಘದ ಅಧ್ಯಕ್ಷರು ಕೋರುತ್ತಾರೆಂದರೆ ಅದರ ಹಿಂದಿನ ಮರ್ಮವೇನು? ಪತ್ರಕರ್ತರ ಸಂಘದ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕ್ರಮ ಪ್ರಮುಖ ಪತ್ರಿಕೆಗಳಲ್ಲಿ ವರದಿಯಾಗುವಂತೆ ನೋಡಿಕೊಳ್ಳುತ್ತೇನೆಂದು ಪಕ್ಷದ ನೇತಾರರಿಗೆ ಭರವಸೆ ನೀಡಿದ್ದರೆ?

ರಾಷ್ಟ್ರಮಟ್ಟದಲ್ಲಿ ‘ಪೇಯ್ಡ್ ನ್ಯೂಸ್’ ವಿರುದ್ಧ ದನಿ ಎತ್ತಿರುವವರ ಪೈಕಿ ದಿ ಹಿಂದು ಪತ್ರಿಕೆ ಪ್ರಮುಖವಾದದ್ದು. ಪ್ರಸ್ತುತ ಘಟನೆಯಲ್ಲಿ ನಮ್ಮ ಪತ್ರಿಕೆಯ ಹೆಸರನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವ ಸಂಶಯಗಳಿವೆ. ಈ ಬಗ್ಗೆ ನಮ್ಮ ಸಂಸ್ಥೆಗೂ ಮಾಹಿತಿ ನೀಡಿದ್ದೇನೆ. ಅವರ ಸೂಚನೆ ಮೇರೆಗೆ ಈ ದೂರನ್ನು ನಿಮಗೆ ಸಲ್ಲಿಸುತ್ತಿದ್ದೇನೆ. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೀರೆಂದು ನಿರೀಕ್ಷಿಸುತ್ತೇನೆ.

ಇತಿ,
ಸತೀಶ್ ಜಿ.ಟಿ
ಹಾಸನ
05-10-2012

• ದೂರು ನೀಡುತ್ತಿರುವುದು ನಮ್ಮ ಸಂಸ್ಥೆಯ ಸೂಚನೆ ಮೇರೆಗೆ. ಮಿತ್ರರು ಪ್ರತಿನಿಧಿಸುವ ಸಂಸ್ಥೆಗಳು ದೂರು ನೀಡುವ ನಿರ್ಧಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದು ಗೊತ್ತಿಲ್ಲ. ಹಾಗಾಗಿ ನಾನು ಈ ಪತ್ರದಲ್ಲಿ ಉಲ್ಲೇಖಿಸಿರುವ ವರದಿಗಾರ ಮಿತ್ರರನ್ನು ಮತ್ತು ಅವರು ಪ್ರತಿನಿಧಿಸುವ ಸುದ್ದಿ ಸಂಸ್ಥೆಗಳನ್ನು ಹೆಸರಿಸಿಲ್ಲ.
• ಈ ದೂರಿನ ಪ್ರತಿಯನ್ನು ಹಾಸನ ಜಿಲ್ಲಾ ಸಂಘದ ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಯವರಿಗೂ ಕಳುಹಿಸುತ್ತಿದ್ದೇನೆ. ಅಧ್ಯಕ್ಷರ ಮೇಲೆಯೇ ಆರೋಪ ಇರುವುದರಿಂದ, ಅವರಿಗೆ ಪ್ರತಿ ಕಳುಹಿಸುವುದು ಅರ್ಥಹೀನ ಎಂಬುದು ನನ್ನ ಅನಿಸಿಕೆ.

ಈ ದೂರನ್ನು ನೀಡಿರುವುದು 2012ರ ಅಕ್ಟೋಬರ್ 5ರಂದು. “ದಿ ಹಿಂದೂ” ನಂಥ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಯಾವುದೇ ಪತ್ರಕರ್ತ ತಮ್ಮ ಹೆಸರಲ್ಲಿ, ತಮ್ಮ ಸಂಸ್ಥೆ ವಿಷಯದಲ್ಲಿ ಸುದ್ದಿಗಾಗಿ ಕಾಸು ಎತ್ತುತ್ತಿರುವುದು ಕಂಡುಬಂದರೆ ಏನನ್ನು ಮಾಡಬಹುದೋ ಅದನ್ನೇ ಸತೀಶ್ ಮಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕ್ರಮ ಕೈಗೊಳ್ಳುವುದಿರಲಿ, ದೂರು ತಲುಪಿರುವ ಕುರಿತು ಒಂದು ಸಾಲಿನ ಪ್ರತಿಕ್ರಿಯೆಯನ್ನೂ ಸತೀಶ್ ಅವರಿಗೆ ನೀಡಿಲ್ಲ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಗಳನ್ನು ಗಮನಿಸಿದರೆ ಇಂಥ ಪ್ರತಿಕ್ರಿಯೆ, ಕ್ರಮ ಕೈಗೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ. ಅದು ಬೇರೆಯ ವಿಷಯ.

ತಮಾಶೆಯೆಂದರೆ ಈಗ ನಾಲ್ಕು ತಿಂಗಳ ಬಳಿಕ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸತೀಶ್ ಅವರ ಸದಸ್ಯತ್ವ ರದ್ದುಗೊಳಿಸುವುದಾಗಿ ಗುಟುರು ಹಾಕುತ್ತಿದೆ. ಪತ್ರಿಕಾಗೋಷ್ಠಿಗಳಿಗೆ ಸೇರಿಸುವುದಿಲ್ಲ ಎಂದು ಯಜಮಾನಿಕೆ ದರ್ಪ ಪ್ರದರ್ಶಿಸಿದೆ.

ಹಾಸನ ಜಿಲ್ಲೆಯ ಪತ್ರಿಕಾರಂಗದ ಇತಿಹಾಸ ದೊಡ್ಡದು. ಇಲ್ಲಿ ತಮ್ಮ ಇಡೀ ಜೀವನವನ್ನೇ ಪತ್ರಿಕಾವೃತ್ತಿಗೆ ಸಮರ್ಪಿಸಿದ ಕೃ.ನ,ಮೂರ್ತಿಯಂಥವರಿದ್ದರು. ಪತ್ರಿಕಾವೃತ್ತಿಯನ್ನೇ ಒಂದು ಚಳವಳಿಯನ್ನಾಗಿಸಿಕೊಂಡ ಆರ್.ಪಿ.ವೆಂಕಟೇಶ್ ಮೂರ್ತಿ, ಮಂಜುನಾಥ ದತ್ತ ಅಂಥವರಿದ್ದಾರೆ. ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಿ ನಂತರ ಬೆಂಗಳೂರು ಸೇರಿದಂತೆ ಬೇರೆಬೇರೆ ಕಡೆ ಪ್ರತಿಷ್ಠಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವರಿದ್ದಾರೆ. ಶೇಷಾದ್ರಿ, ರಂಗನಾಥ್, ಎಚ್.ಬಿ.ಮದನ್ ಗೌಡ, ವೈ.ಪಿ.ರಾಜೇಗೌಡ, ಬಿ.ಜೆ.ಮಣಿ, ಮಂಜುನಾಥ್, ಕೆಂಚೇಗೌಡ, ಪ್ರಸನ್ನ ಕುಮಾರ್, ಬಾಳ್ಳು ಗೋಪಾಲ್, ಡಿ.ಜಿ.ರಾಜೇಶ್, ರವಿ ನಾಕಲಗೋಡು, ವೇಣು, ವೆಂಕಟೇಶ್, ರವಿಕುಮಾರ್, ಹರೀಶ್, ಬಿ.ಮಂಜು ಹೀಗೆ ನೆನಪಿಸಿಕೊಳ್ಳಲು ಹಾಸನದಲ್ಲಿ ಹತ್ತು ಹಲವಾರು ಹೆಸರುಗಳಿವೆ.

ಹೀಗಿರುವಾಗ ಇಂಥ ಅನೈತಿಕವಾದ, ಮುಖೇಡಿಯಾದ ತೀರ್ಮಾನವನ್ನು ಜಿಲ್ಲಾ ಪತ್ರಕರ್ತರ ಸಂಘ ತೆಗೆದುಕೊಳ್ಳುತ್ತದೆ ಎಂದು ನಂಬುವುದಾದರೂ ಹೇಗೆ? ಅಷ್ಟಕ್ಕೂ ಸಂಘದಿಂದ ಉಚ್ಛಾಟಿಸಿದ ಮಾತ್ರಕ್ಕೆ, ಪತ್ರಿಕಾಗೋಷ್ಠಿ ವರದಿಗಾರಿಕೆಗೆ ನಿರ್ಬಂಧಿಸಿದ ಮಾತ್ರಕ್ಕೆ ಸತೀಶ್ ಅವರ ವೃತ್ತಿಜೀವನವನ್ನು ಕಸಿದುಕೊಳ್ಳಲಾದೀತೆ? ಒಂದು ವೇಳೆ ಸತೀಶ್ ವೃತ್ತಿಯನ್ನು ಕಸಿದುಕೊಳ್ಳುವುದು ಸಂಘದ ಹವಣಿಕೆಯಾದರೆ ಇದೆಂಥ ಸಂಘ?

ನಾನು ಹಲವು ವರ್ಷಗಳ ಕಾಲ ಇದೇ ಹಾಸನ ಜಿಲ್ಲೆಯಲ್ಲಿ ಪತ್ರಿಕಾ ವೃತ್ತಿ ನಡೆಸಿದವನು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷನಾಗಿ, ಜಿಲ್ಲಾ ಸಂಘದ ಕಾರ್ಯಕಾರಿಣಿ ಸದಸ್ಯನಾಗಿಯೂ ಕೆಲಸ ಮಾಡಿದ್ದೇನೆ. ಈ ನೋಟೀಸನ್ನು ಗಮನಿಸಿದಾಗ ನಿಜಕ್ಕೂ ನೋವಾಯಿತು. ಸತೀಶ್ ಅವರನ್ನು ಅವಮಾನಿಸುವ ಭರದಲ್ಲಿ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘ ತನ್ನನ್ನು ತಾನು ಅಪಮಾನಿಸಿಕೊಂಡಿದೆ. ಕಾಸಿಗಾಗಿ ಸುದ್ದಿ ವಿರುದ್ಧ ಧ್ವನಿಯೆತ್ತಿದ ಪತ್ರಕರ್ತನ ನ್ಯಾಯಶೀಲತೆಯನ್ನು, ವೃತ್ತಿಧರ್ಮವನ್ನು ಗೌರವಿಸುವ, ಪ್ರಶಂಶಿಸುವ ಬದಲು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡು ಪಾತಾಳಕ್ಕೆ ಇಳಿದಿದೆ.

ಮೇಲೆ ಉಲ್ಲೇಖಿಸಿದ, ಉಲ್ಲೇಖಿಸದೇ ಇರುವ ಹಾಸನ ಜಿಲ್ಲೆಯ ಎಲ್ಲ ಪತ್ರಕರ್ತ ಮಿತ್ರರಿಗೆ ನನ್ನದೊಂದು ಪ್ರೀತಿಯ ಮನವಿ. ಇದೊಂದು ಕಪ್ಪುಚುಕ್ಕೆ ಅಳಿಸುವುದು ನಿಮ್ಮ ಕೈಯಲ್ಲೇ ಇದೆ. ಸತೀಶ್ ಅವರಿಗೆ ಕಳುಹಿಸಿರುವ ನೋಟೀಸನ್ನು ಬೇಷರತ್ತಾಗಿ ಹಿಂದಕ್ಕೆ ಪಡೆಯುವ ಕೆಲಸ ತುರ್ತಾಗಿ ಆಗಬೇಕಿದೆ. ಕಾಸಿಗಾಗಿ ಸುದ್ದಿ ವಿರುದ್ಧ ರಾಷ್ಟ್ರಮಟ್ಟದಲ್ಲಿ ಅಭಿಯಾನ ತೀವ್ರಗತಿಯಲ್ಲಿ ನಡೆಯುತ್ತಿರುವ ಸಂದರ್ಭದಲ್ಲಿ ಹಾಸನ ಜಿಲ್ಲೆಯ ಪತ್ರಕರ್ತರು ಈ ನೋಟೀಸಿನ ಕಾರಣಕ್ಕೆ ತಲೆತಗ್ಗಿಸಿ ನಿಲ್ಲುವಂತಾಗಬಾರದು. ಸತೀಶ್ ಅವರಿಗೆ ತಮ್ಮ ವೃತ್ತಿಯನ್ನು ಯಾರ ಅಡ್ಡಿ, ಆತಂಕ, ಹಸ್ತಕ್ಷೇಪ, ಬೆದರಿಕೆಗಳು ಇಲ್ಲದಂತೆ ನಡೆಸಿಕೊಂಡು ಹೋಗುವಂತೆ ಸಹಕರಿಸಬೇಕು.

ಅದು ಸಾಧ್ಯವಾಗದೆ ಹೋದರೆ, ನಾಡಿನ ನ್ಯಾಯಪರವಾದ ಮನಸ್ಸುಗಳು ಅನಿವಾರ್ಯವಾಗಿ ಜಿಲ್ಲಾ ಪತ್ರಕರ್ತರ ಸಂಘದ ಎದುರೇ ಬಂದು ಧರಣಿ ನಡೆಸಿ, ನಿಮ್ಮ ಕಣ್ಣುಗಳನ್ನು ತೆರೆಸಬೇಕಾದೀತು. ವಿಷಯ ದೊಡ್ಡದಾಗುವ ಮುನ್ನ ಜಿಲ್ಲಾ ಪತ್ರಕರ್ತರು ಎಲ್ಲದಕ್ಕೂ ತೆರೆ ಎಳೆದಾರೆಂಬ ನಂಬಿಕೆ ನನ್ನದು. ಯಾಕೆಂದರೆ ಜಿಲ್ಲೆಯ ಪತ್ರಕರ್ತರು ಒಬ್ಬ ಪ್ರಾಮಾಣಿಕ ಪತ್ರಕರ್ತನನ್ನು ಬಲಿ ತೆಗೆದುಕೊಳ್ಳುವಷ್ಟು ಅಮಾನವೀಯರು, ಹೇಡಿಗಳು, ಫ್ಯಾಸಿಸ್ಟ್‌ಗಳು ಅಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತು.

23 thoughts on “ಪ್ರಾಮಾಣಿಕ ಪತ್ರಕರ್ತನಿಗೆ ಪತ್ರಕರ್ತರ ಸಂಘದಿಂದ ಬಹಿಷ್ಕಾರ !?

  1. Kevin Mendonsa

    Being worked in Hassan , I have closely noticed behaviour of Leelavathi. I protest against such behaviour.

    Reply
  2. ದಿನೇಶ್ ಕುಕ್ಕುಜಡ್ಕ

    ಸತೀಶ್, ಹ್ಯಾಟ್ಸಾಫ್ ನಿಮಗೆ. ನ್ಯಾಯಪರ ಕೆಲಸಕ್ಕೆ ಪ್ರತಿಫಲವಾಗಿ ಯಾವುದೇ ಸಂಸ್ಥೆಯಿಂದ ‘ಹೊರದಬ್ಬಿಸಿ’ಕೊಳ್ಳಬೇಕಾಗಿ ಬಂದಲ್ಲಿ ಅತ್ಯಂತ ಹೆಮ್ಮೆಯಿಂದ ಕೊರಳಪಟ್ಟಿ ನೀಡಿ…ಲಾವ ಕಕ್ಕುವ ನೆಲದಲ್ಲೇ ದಣಿವಾರಿಸುವ ಜೀವಜಲವೂ ಹುಟ್ಟುತ್ತದೆ! ಧೃತಿಗೆಡದಿರಿ.

    Reply
  3. Alvin Mendonca

    I am in Hassan and I know what type of drama is going on. That day i was on leave and same Leelavathi had called me asked to report the program but i had refused to.Here i do not want to mention how she had requested with me. Now they blame Puttappa and Satish sir for protesting against such behavior. Here being sincere is a sin.

    Reply
  4. prasad raxidi

    ಘೋರ ನೈತಿಕ ಅಧಃಪತನದ ಸಂದರ್ಭದಲ್ಲಿ ನಾವಿದ್ದೇವೆನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ, ಯಾವುದೇ ಜನಪರ ಹೋರಾಟ ಕಾಳಜಿಗಳನ್ನು ನಿರಧಯವಾಗಿ ಹೊಸಕಿಹಾಕಲು ಬಯಸುವವರ ಪಡೆಯೇ ತಯಾರಾಗಿ ನಿಂತಿದೆ. ನಿರಂತರ ವಸೂಲಿ ಕಾಯಕ ನಡೆಸುತ್ತಿರುವವರು ಸುದ್ದಿ ಶೂರರಾಗಿ ಪ್ರಗತಿಪರರ ಮುಖವಾಡದಲ್ಲಿ ಎಲ್ಲ ಕಡೆ ಮಿಂಚುತ್ತಿರುವಾಗ ಸತೀಶ್ ನಂತವರು ಮಾತ್ರ ಭರವಸೆಯ ಬೆಳಕು, …. ನಮ್ಮಂತವರು ನಿಮ್ಮ ಜೊತೆಗೆ ಖಂಡಿತ ಇದ್ದಾರೆ ಸತೀಶ್…….

    Reply
  5. udupibitsಶ್ರೀರಾಮ ದಿವಾಣ, ಉಡುಪಿ.

    ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕ್ರಮ ಖಂಡನಾರ್ಹ. ಸತೀಶ್ ರವರ ಪತ್ರಕ್ಕೆ ರಾಜ್ಯ ಸಂಘ ಇನ್ನಾದರೂ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಇಲ್ಲದಿದ್ದರೆ ರಾಜ್ಯ ಸಂಘವೂ ತನ್ನ ಘನತೆಯನ್ನು ಕಳೆದುಕೊಂಡಂತಾಗುತ್ತದೆ. ಹಾಸನ ಜಿಲ್ಲೆಯಲ್ಲಿರುವ ಪ್ರಾಮಾಣಿಕ ಪತ್ರಕರ್ತರು ಸತೀಶ್ ಜೊತೆಗೆ ನಿಲ್ಲುವ ಮೂಲಕ ಭ್ರಷ್ಟ ಪತ್ರಕರ್ತರಿಗೆ ಸೆಡ್ಡು ಹೊಡೆಯಬೇಕು. ಸತೀಶ್ ಅವರದು ಸಹಜವಾದ ನಡೆ, ಈ ನಡೆಗೆ ಸಂಘದ ಓರ್ವ ಸಾಮಾನ್ಯ ಸದಸ್ಯನಾಗಿ ನನ್ನ ಪೂರ್ಣ ಬೆಂಬಲವಿದೆ.

    Reply
  6. Chee Ja Rajeeva

    ಎಲ್ಲ ಊರುಗಳಲ್ಲೂ ಇಂಥ ಹುಳುಕುಗಳಿವೆ. ಆದರೆ, ಸಂಘದಲ್ಲಿರುವ ಕೆಲವು ನಿಷ್ಕ್ರಿಯ ಸ್ವಭಾವದ ಪತ್ರಕರ್ತರ ಕಾರಣಕ್ಕಾಗಿ ಇಂತಹ ಹುಳುಕುಗಳ ವಿರುದ್ಧ ಗಟ್ಟಿಯಾಗಿ ದನಿ ಎತ್ತಲು ಸಾಧ್ಯವಾಗುತ್ತಿಲ್ಲ. ಈ ನಿಷ್ಕ್ರಿಯ ಪತ್ರಕರ್ತರು ನಮ್ಮ ಗೆಳೆಯರು ಅಥವಾ ಒಡನಾಡಿಗಳೇ ಆಗಿರುತ್ತಾರೆ. ಅವರು ವೈಯಕ್ತಿಕ ನೆಲೆಯಲ್ಲಿ ಪ್ರಾಮಾಣಿಕರಾಗಿದ್ದರೂ, ಕೆಟ್ಟದ್ದನ್ನು ಮಾತ್ರ ಅವರು ಖಂಡಿಸುವುದಿಲ್ಲ. ರೋಲ್ಕಾಕಾಲ್ ಮಾಡುವವರನ್ನು, ರಾಜಕೀಯ ಮುಖಂಡರ ಆಸ್ಥಾನ ಪಂಡಿತರಾಗಿರುವವರನ್ನು, ಜಾತಿವಾದಿಗಳನ್ನು( ಈ ಎಲ್ಲರೂ ಒಂದರ್ಥದಲ್ಲಿ ಅಪ್ರಾಮಾಣಿಕರೆ) ತಮ್ಮೊಂದಿಗೆ ಇಟ್ಟುಕೊಂಡು, ಅವರೊಂದಿಗೆ ಉತ್ತಮ ಬಾಂಧವ್ಯವನ್ನೂ ಹೊಂದಿರುತ್ತಾರೆ.

    ಇದನ್ನು ಪ್ರಶ್ನಿಸಿದರೆ, ಅಪ್ರಾಮಾಣಿಕರ ಅನುಪಸ್ಥಿತಿಯಲ್ಲಿ- ಅವರ ದುರ್ವತನೆ ಬಗ್ಗೆ ಮಾತನಾಡುತ್ತಾರೆ. ಬಳಿಕ ತಾನು ಮಾತನಾಡಿದ ಸಂಗತಿಯನ್ನೇ, ಅಪ್ರಾಮಾಣಿಕ ಪತ್ರಕರ್ತನಿಗೂ ತಿಳಿಸಿಬಿಡುತ್ತಾರೆ !
    ಪ್ರಶ್ನಿಸಿದವನು, ಪ್ರಾಮಾಣಿಕನಾಗಿದ್ದರೆ ಸರಿ. ಇಲ್ಲದಿದ್ದರೆ, ಅವನ ವ್ಯಕ್ತಿತ್ವ ಹರಣ ಶುರುವಾಗಿರುತ್ತೆ !

    ಏನೂ ಸಿಗಲಿಲ್ಲ ಅಂದ್ರೆ, ಪ್ರಶ್ನಿಸಿದ ಪತ್ರಕರ್ತನ ಜಾತಿ(ಒಂದು ವೇಳೆ ಆತನೇನಾದರೂ ತೀರಾ ಮೇಲ್ಜಾತಿಯೋ, ತೀರಾ ಕೆಳಜಾತಿಯೋ ಆಗಿದ್ದರೆ, ಮುಗಿದೇ ಹೋಯ್ತು), ಕುಲ, ಸಿದ್ಧಾಂತ, ಅವನ ಪೂರ್ವಾಶ್ರಮದ ಚರಿತ್ರೆ – ಹೀಗೆ ಎಲ್ಲವನ್ನೂ ಪತ್ತೆ ಹಚ್ಚಿ, ಅದನ್ನೇ ಚರ್ಚೆಗೆ ಇಡುತ್ತಾರೆ.

    ನನ್ನ ಪ್ರಕಾರ ಸಕ್ರಿಯ ದುರ್ಜನ ಪತ್ರಕರ್ತರಂತೆ, ನಿಷ್ಕ್ರಿಯ ಸಜ್ಜನ ಹಿರಿಯ ಪತ್ರಕರ್ತರೂ ಖಂಡನೆಗೆ ಅರ್ಹ.

    ಸತೀಶ್ ಒಂದು ಹೆಜ್ಜೆ ಮುಂದೆ ಹೋಗಿ, ಸಂಘಕ್ಕೆ ದೂರು ನೀಡುವ ಮೂಲಕ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರ ಕಾರ್ಯವನ್ನು ಎಲ್ಲರೂ ಬೆಂಬಲಿಸೋಣ.

    ನಮ್ಮೊಂದಿಗಿರುವ ಭ್ರಷ್ಟ ಪತ್ರಕರ್ತರ ವಿರುದ್ಧ ದನಿ ಎತ್ತೋಣ. ಕನಿಷ್ಠ ಪಕ್ಷ ಅವರಿಗೆ ಶಿಕ್ಷೆ ಆಗದಿದ್ದರೂ, ಸ್ವಲ್ಪ ನಾಚಿಕೆಯಾದರೂ ಆಗಲಿ.

    ಈ ರೀತಿ ಮಾಡುವ ಮೂಲಕ, ಹೊಸದಾಗಿ ಪತ್ರಿಕೋದ್ಯಮಕ್ಕೆ ಬರುತ್ತಿರುವ ಯುವ ಪತ್ರಕರ್ತರಲ್ಲಿ ಭರವಸೆ ಹಾಗೂ ಎಚ್ಚರಿಕೆಯನ್ನು ಮೂಡಿಸೋಣ.
    -ಚೀ. ಜ. ರಾಜೀವ

    Reply
  7. Raghavendra Thekkar

    ಪ್ರಾಮಾಣಿಕತೆಗೆ ಪುರಸ್ಕಾರ ಅಷ್ಟಕಷ್ಟೆ. ಇದು ಯಾವ ಕ್ಷೇತ್ರಕ್ಕೂ ಹೊರತಾದ ಮಾತಲ್ಲ.ಆದರೆ ಪ್ರಾಮಾಣಿಕತೆ ಅಳಿದಿಲ್ಲ , ಅಂತಹ ಪ್ರಾಮಾಣಿಕ ಮನಸ್ಸುಗಳನ್ನೊಳಗೊಂಡ ವ್ಯಕ್ತಿಗಳು ಪ್ರಾಮಾಣಿಕರ ಜೊತೆ ಇದ್ದೆ ಇರುತ್ತವೆ. Satish Shile ನಿಮ್ಮ ಜೊತೆ ನಾವಿದ್ದೇವೆ,ಅದದ್ದಾಗಲಿ ಬಂದದ್ದು ಬರಲಿ….ಯಶಸ್ಸು ನಿಮ್ಮದಾಗಿರುತ್ತದೆ, ಅಪ್ರಾಮಾಣಿಕರೀಗೆ, ಧ್ವನಿ ಅಡಗಿಸಬಯಸುವವರಿಗೆ ಹೇಳೊದಿಷ್ಟೆ Get well soon guys…..

    Reply
  8. ಹೆಚ್.ಎನ್. ಜ್ಞಾನೇಶ್ಡರ

    ಯಾರೂ ಒಬ್ಬರು ಹೇಳಿದ್ದನ್ನೇ ಕೇಳಿ ತೀರ್ಮಾನ ತೆಗೆದುಕೂಳ್ಳಬಾರದು, ಹಾಸನ ಸಂಘದಲ್ಲಿ ಕೂಡ ಎಲ್ಲರೂ ಸೇರಿಯೆ ತೀರ್ಮಾನ ವಾಗುವುದು.

    Reply
  9. Ananda Prasad

    ಪ್ರಾಮಾಣಿಕ ಪತ್ರಕರ್ತನಿಗೆ ಜೈಲು (ನವೀನ ಸೂರಿಂಜೆ -ತನ್ನ ಕರ್ತವ್ಯ ನಿರ್ವಹಿಸಿದ್ದಕ್ಕೆ ಸರ್ಕಾರ ಕೊಟ್ಟ ಬಹುಮಾನ), ಪ್ರಾಮಾಣಿಕ ಪತ್ರಕರ್ತನಿಗೆ ಬಹಿಷ್ಕಾರ (ಪ್ರಾಮಾಣಿಕತೆಯಿಂದ ತನ್ನ ಕರ್ತವ್ಯ ನಿರ್ವಹಿಸಿದ್ದ ಕ್ಕೆಸತೀಶ್ ಅವರಿಗೆ ಹಾಸನ ಜಿಲ್ಲಾ ಪತ್ರಕರ್ತರ ಸಂಘದಿಂದ ದೊರಕಿದ ಬಹುಮಾನ) ಇದು ಕರ್ನಾಟಕ ನಾಗರಿಕತೆಯಿಂದ ಅನಾಗರಿಕತೆಯೆಡೆಗೆ ಸಾಗುತ್ತಿರುವ ಸ್ಪಷ್ಟ ಸೂಚನೆಯಾಗಿದೆ

    Reply
  10. Jyothi Anand, Hassan, Bangalore

    ಈ ವಿಚಾರವನ್ನು ಮೊದಲೇ ಹಾಸನ ಪರ್ತಕರ್ತರ ಸಂಘ ವಿಚಾರಿಸಿ ಸಂಘದ ಘನವೆತ್ತ ಅಧ್ಯಕ್ಷರ ವಿರುದ್ದ ಕ್ರಮ ಕೈಗೊಂಡು ಸತೀಶ್ ಶಿಲೆ ಹಾಗು ಪಬ್ಲಿಕ್ ಟೀವಿ ವರದಿಗಾರ ಪುಟ್ಟಪ್ಪ ಇವರಿಗೆ ನ್ಯಾಯ ದೊರಕಿಸ ಬಹುದಿತ್ತು ಆದರೆ ಯಾರದೋ ವೋತ್ತಾಯಕ್ಕೆ ಮಣಿದು ಸಂಘದ ಪದಾದಿಕಾರಿಗಳು ದಿ ಹಿಂದೂ ಹಾಗು ಪಬ್ಲಿಕ್ ಟೀವಿ ವರದಿಗಾರರ ಮೇಲೆ ಆಶ್ಚರ್ಯ ಉಂಟು ಮಾಡುವ ಕ್ರಮ ಕೈಗೆತ್ತು ಕೊಳ್ಳಲು ಮುಂದಾಗಿದೆ.
    ನನಗೆ ತಿಳಿದಿರುವಂತೆ ಆ ದಿನ ಎಲ್ಲ ಪ್ರತಿಷ್ಟಿತ ದಿನ ವಾಹಿನಿಗಳ ಹೆಸರಲ್ಲಿ ಪ್ಯಕಾಜ್ ರಾಜಕೀಯ ನಡೆದಿದೆ. ಅದರಂತೆ ಟೈಮ್ಸ್ ಆಫ್ ಇಂಡಿಯಾ ವರದಿಗಾರ ಆಲ್ವಿನ್ ಗೆ ಫೋನಾಯಿಸಿದ ಪ್ಯಕಾಜ್ ಅದ್ಯಕ್ಷರು “ನಿಮ್ಮ ಕಾಲಿಗದರು ಬೀಳುತ್ತೇನೆ ನಿಮ್ಮ ಪ್ರರ್ತ್ರಿಕೆಯಲ್ಲಿ ಒಂದು ಸಲಾದರು ವರದಿ ಮಾಡಿ. ನನ್ನ ಬಗ್ಗೆ ಇಲ್ಲಿ ಒಳ್ಳೆ ಅಭಿಪ್ರಾಯ ಇಲ್ಲ ಯಾಕೆಂದರೆ ನನ್ನ ಅದಿಕಾರ ಅವರಿಗೆ ಇಷ್ಟವಿರೈಲ್ಲ ಹಾಗು ಅವರಿಕೆ ನನ್ನ ಬಗ್ಗೆ ಮತ್ಸರ ಇದೆ. ನನ್ನಲ್ಲಿ ಕಾಂಗ್ರೆಸ್ ಮಹಿಳ ಅದ್ಯ್ಕ್ಷಕರ ವಿನಂತಿ ಇದೆ ಆದರೆ ನಾನು ಅದನ್ನು ಎಲ್ಲ ಪತ್ರಿಕ್ಗೆ ತಿಳಿಸಲು ಮರೆತೇ. ಆಲ್ವಿನ್ ನೀನು ಚಿಕ್ಕವನು ನಿನ್ನ ಕಾಲಿಗಾದರು ಬೀಳುವೆ ನಿನ್ನ ಪತ್ರಿಕೆಯಲ್ಲಿ ಒಂದು ಸಾಲಾದರೂ ವರದಿ ಮಾಡು” ಎಂದು ಗೋಗರೆದಿದ್ದಾರೆ. ಆದರೆ ಆ ವರದಿಗಾರ ನಾನು ಊರಲ್ಲಿ ರಜೆ ನಿಮಿತ್ತ ಬಂದಿದ್ದೇನೆ ಎಂದು ಹೇಳಿ ಫೋನ್ ಇಟ್ಟಿದ್ದಾರೆ. ತದ ನಂತರ ನಡೆದ ಘಟನೆಯೇ ಬೇರೆ.
    ಈಗ ಒಬ್ಬ ವರದಿಗಾರನ ಕಾಲು ಹಿಡಿಯಲು ಮುಂದಾದ 36 ವರ್ಷ ಪ್ರತ್ರಿಕ ರಂಗದಲ್ಲಿ ದುಡಿದ ಮಹಿಳೆ ಈ ರೀತಿ ವರ್ಥೆನೆ ತೋರಲು ಕರಣ ವೆನಾದರು ಏನು>?
    ಇದರಲ್ಲಿ ತಪ್ಪಾದರೂ ಯಾರದು? ನೀತಿ, ನಿಯಮ, ಆದರ್ಶಾ ಹಾಗು ಆಸೆಯಿಂದ ಸಮಾಜ ಸೇವೆಗೆ ಬಂದ ಈ ಯುವ ಪರ್ತಕರ್ತರ ಮೇಲೆ ಈ ರೀತಿಯ ಸಂಘದ ವರ್ತನೆ ಸರಿಯೇ?
    ಇದನ್ನೂ ಒಂದು ಸಂಘ ಎನ್ನಲು ಸಾದ್ಯವೇ?

    Reply
  11. shiv manipal

    sanga samsthegalu eruvude haalu maaduvudakke antha nanna hiriya mithrarobbaru heluthiddaru… adu parthakarthara sangadallu kandaddu ashcharyave sari…. parthakarthara sangadavarige lekhani kadga yembudu thilidide annisutthe…sathish can b a independent writer also …we all will support sathish bcz he is done a great a job…. olleya barahagararannu ulisi aaga deshavannu ulisidanthe…. parthakartha mithra sathish naavu nimmondigiddeve nimma horatakke namma bembala saada ede…

    Reply
  12. Mahamud

    ಜಿ ಟಿ ಸತೀಶ್ ಹಿಂದೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿದ್ದ ಸತೀಶ್ ಶಿಲೆ ಅವರೆಯೇ? ಅವರ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ಕೇಳಿದ್ದೇನೆ. ಪತ್ರಕರ್ತರ ಭ್ರಷ್ಟಾಚಾರ ಹೊಸ ಸುದ್ದಿಯೇನೂ ಅಲ್ಲ. ಪುಟ್ಟ ‘ಬೂತಾಯಿ” ಮೀನುಗಳ ಸುದ್ದಿ ಹೊರಗೆ ಬರುತ್ತದೆ. ಆದರೆ ತಿಮಿಂಗಿಲಗಳ ಬಗ್ಗೆ ಜನರಿಗೆ ತಿಳಿಯಬೇಕು.

    Reply
  13. Bapuji

    It is unfortunate that honest journalist with integrity are targeted. As Rajeev puts it , the scribes from poor, humble background and those from weaker sections, first generation journalist will be the target. Though, Satish has filed a complaint with KUWJ. The President , also a veteran, working journalist , who recently campaigned for freedom of press, should have pulled up Leelavathi and warned her of disciplinary action for targeting a good and young journalist. But, his silence and many on the `non working journalists’ in KUWJ have not taken it seriously. It is high time that corrupt journalists should be cornered to uphold the ethics and spirit of Indian Journalism, if not global. I fear that this incident will demoralize the young and energetic scribes who have dreamt big. I feel that we should all fight against intellectual corruption that is equally dangerous, tarnished image of profession in recent years. The Scribes who wrote big on Anna Hazare movement should first clean up their house before pointing at others . Let truth prevail over the evils like … : Jai hind

    Reply
  14. rudranna

    satish nivu madiruv karyakke abhinandanegalu. nanu hassana dalli kelasa madiddene, aga ee riti iralilla. alli olleya geleyariddare. pramanikariddare. adare sanga da ee kelasa khandaniya

    Reply
  15. nagaraj hettur

    ದಿನೂ ಅವರೇ ಸತೀಶ್ ನಮ್ಮೊಳಗಿನ ನಾವೇಲ್ಲ ಇಷ್ಟ ಪಡುವ ಪ್ರಾಮಾಣಿಕ ಹಾಗೂ ನಿಜವಾದ ಪತ್ರಕರ್ತ. ಅವರನ್ನು ನೋಡಿದಾಗಲೆಲ್ಲ ಹಾಸನದಲ್ಲಿ ಪತ್ರಿಕೋದ್ಯಮ ಉಳಿಯುತ್ತಿರುವ ಬಗ್ಗೆ ಹೆಮ್ಮೆಯಾಗುತ್ತದೆ. ಇಲ್ಲಿ ಪ್ರಾಮಾಣಿಕ ಪತ್ರಕರ್ತರಿಗೆ ಬೆಲೆ ಇಲ್ಲ ಭಟ್ಟಂಗಿಗಳಿಗೆ ಮಾತ್ರ ಬೆಲೆ. ಇಲ್ಲಿ ಯಾರೂ ಬೇಕಾದರೂ ಪತ್ರಕರ್ತ ಾಗಬಹುದು. ಉಸಿರುಗಟ್ಟುವ ವಾತಾವರಣ. ಅದನ್ನು ಅನುಭವಿಸಿದವರಷ್ಟೇ ಅರಿವಾಗುವುದು. ಸತೀಶ್ ಗೆ ಯಾವುದೇ ತೊಂದರೆ ಇಲ್ಲ. ಆದರೆ ಇಲ್ಲಿನ ಕೆಲ ಪತ್ರಕರ್ತರಿಗೆ ಸಂಘವೇ ಅವರ ಮನೆ ಆಸ್ತಿ. ಒಂದಕ್ಷರ ಬರೆಯಲು ಬಾರದವರೆಲ್ಲ ಸಂಘದ ಸದಸ್ಯರು. ರಾಜ್ಯ ಸಂಘ ಏನು ಮಾಡುತ್ತಿದೆ ಗೊತ್ತಿಲ್ಲ. ೊಂದು ನೀತಿಯೇ ಇಲ್ಲದ ಸಂಘದ ಬಗ್ಗೆ ಏನು ಹೇಳಬೇಕು.. ಗೊತ್ತಾಗುತ್ತಿಲ್ಲ. ಆದರೆ ಪ್ರಾಮಾಣಿಕ ಪತ್ರಕರ್ತರಿಗೆ ಇದರಿಂದ ಹಿನ್ನೆಡೆಯಾಗುವುದು ಬೇಡ. ಸತೀಶ್ ಮತ್ತು ಪುಟ್ಟು ಅವರಿಗೆ ನಮ್ಮ ಬೆಂಬಲ ಇದೆ. ಹಾಗೆ ರಾಜ್ಯ ಸಂಘದ ಅಧ್ಯಕ್ಷರು ಏನು ಮಾಡುತ್ತಿದ್ದಾರೆ. ನಿಯಂತ್ರಣ ಸಾಧಿಸಲು ಸಾಧ್ಯವಾಗದಿದ್ದರೆ ಸಂಘ ಹಾಸನ ಪತ್ರಕರ್ತರ ಆಸ್ತಿ ಎಂದು ಬರೆದುಕೊಡಲಿ …
    -ನಾಗರಾಜ್ ಹೆತ್ತೂರು

    Reply
  16. ತುಳುವ

    ಕೇವಲ ದೊಡ್ಡ ಕುಳಗಳಿಗೆ ಮಾತ್ರ ಸೀಮಿತವಾಗಿದ್ದ ಪ್ಯಾಕೇಜ್ ಜಿಲ್ಲೆ-ತಾಲೂಕು ಮಟ್ಟಕ್ಕೂ ಇಳಿದುಬಿಟ್ಟಿದೆ. ಯಾವ ಸುದ್ದಿಯನ್ನು ಯಾವ ಪತ್ರಿಕೆಯಲ್ಲಿ ಓದಿ ಎಷ್ಟು ಶೇಕಡಾ ನಂಬಬೇಕು ಎನ್ನುವುದು ಇಂದಿನ ಸವಾಲು!

    Reply
  17. kp nagarja

    ಅನ್ಯಾಯ ವಿರುದ್ಧ ಧ್ವನಿ ಎತ್ತಿದ್ರೆ ನಿಮಗೆ ಬಹಿಷ್ಕಾರ…! ಅನ್ನೋ ತತ್ವವನ್ನು ಹಾಸನ ಜಿಲ್ಲಾ ಪತ್ರಕರ್ತರ ಸಂಘ ಅಳವಡಿಸಿಕೊಂಡಿದೆಯಾ..? ಸಂಘಕ್ಕೆ ನಾಚಿಕೆಯಾಗಬೇಕು. ವೈಯಕ್ತಿಕವಾಗಿ ಸತೀಶ್ ಶಿಲೆ ನನ್ನ ಪಾಲಿಗೆ ಅಣ್ಣ. ಪಬ್ಲಿಕ್ ಟಿವಿಯ ಪುಟ್ಟಪ್ಪ ಪ್ರೀತಿಯ ಸ್ನೇಹಿತ. ಈ ಸಂಬಂಧವನ್ನು ಹೊರಗೆ ಇಟ್ಟು ನೋಡಿದ್ರೂ ಕೂಡ ಹಾಸನದ ಪತ್ರಕರ್ತರ ಸಂಘದ ನಿಧರ್ಾರ ನನಗೆ ತಮಾಷೆ ಎನ್ನಿಸುತ್ತಿದೆ. ಬೇಲಿಯೇ ಎದ್ದು ಹೊಲ ಮೇಯುತ್ತಿರುವುದನ್ನು ಕಂಡರು ಕಾಣದಂತೆ ಇರಬೇಕೆಂದು ಪತ್ರಕರ್ತರ ಸಂಘ ಬಯುಸುವುದಾದ್ರೆ ಅಂತಹ ಸಂಘ ಪತ್ರಕರ್ತರಿಗೆ ಏಕೆ ಬೇಕು..? ಪತ್ರಕರ್ತರನ್ನು ಪತ್ರಿಕಾಗೋಷ್ಠಿಗೆ ಬರಬೇಡಿ ಅನ್ನೋಕೆ ಪತ್ರಕರ್ತರ ಸಂಘಕ್ಕೆ ಆ ಅಧಿಕಾರ ಕೊಟ್ಟವರು ಯಾರು…? ಇಂತಹ ಸಂಘದ ಸದಸ್ಯತ್ವವನ್ನು ಇಬ್ಬರು ಪತ್ರಕರ್ತರು ಸ್ವ ಇಚ್ಛೆಯಿಂದ ಧಿಕ್ಕಾರಿಸಲಿ. ಸಂಘಕ್ಕೆ ಅದು ಪಾಠವಾಗಲಿ.

    Reply
  18. rupa hasana

    sathish avarantha ditta praamaanika patrakartanige naythika bembala bittu mattenuu maadalaaguttilla emba khedhavide.

    Rupa

    Reply
  19. shamantha D.S

    Disgusting….It is not only in small towns , even in Bangalore also this type of incidents are common…. it is still disgusting to know our Madhyam academy and KWJU silence…. shamantha D.S

    Reply
  20. sarjashankar haralimata

    Patrikodyamada ghanatheyannu ethi hidida sathishge needida notisannu vapasu padedu sambhadisidavru thamma thappannu thiddikollali. sathish hinde nadina ella prajnavanthariddare embudu avara gamanadallirali
    -sarjashankar haralimata

    Reply

Leave a Reply

Your email address will not be published. Required fields are marked *