ಶಾಪವಿಮೋಚನೆಯತ್ತ ಕರ್ನಾಟಕ

– ಆನಂದ ಪ್ರಸಾದ್

ಕಳೆದ ಕೆಲವು ವರ್ಷಗಳಿಂದ ಕರ್ನಾಟಕಕ್ಕೆ ಧಾರ್ಮಿಕ ಮೂಲಭೂತವಾದಿ ಬಿಜೆಪಿ ಹಾಗೂ ಸಂಘ ಪರಿವಾರದ ರೂಪದಲ್ಲಿ ವಕ್ಕರಿಸಿದ್ದ ಶಾಪ ವಿಮೋಚನೆಯಾಗುವ ದಿನಗಳು ಹತ್ತಿರುವಾಗುತ್ತಿವೆಯೇ ಎಂದು ಇತ್ತೀಚೆಗಿನ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ನೋಡಿದಾಗ ಅನಿಸುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆ. ಇಂಥ ದಿನಗಳಿಗಾಗಿ ಕರ್ನಾಟಕದ ಪ್ರಜ್ಞಾವಂತರು ಹಾಗೂ ಪ್ರಗತಿಪರ ನಿಲುವಿನ ಜನ ಕಾಯುತ್ತಿದ್ದಾರೆ. ಏನೆಲ್ಲಾ ಕಸರತ್ತು, ಅಧಿಕಾರದ ದುರುಪಯೋಗ, election_countingಧಾರ್ಮಿಕ ವೇಷ ತೊಟ್ಟು ಕುಣಿದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಜೊತೆ ಎರಡನೇ ಸ್ಥಾನಕ್ಕೆ ಬಿಜೆಪಿ ತಳ್ಳಲ್ಪಟ್ಟಿದೆ. ಇದು ಸಂಘ ಪರಿವಾರದ ಕಪಿಮುಷ್ಟಿಯಿಂದ ರಾಜ್ಯ ಮುಕ್ತಿಪಡೆಯುವ ಆಶಾಭಾವನೆಯನ್ನು ಮೂಡಿಸಿದೆ. ಮುಖ್ಯವಾಗಿ ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಹಸ್ತಕ್ಷೇಪ ಆಡಳಿತದ ಎಲ್ಲಾ ಹಂತಗಳಲ್ಲೂ ಆವರಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಮಂಕಾಗಿತ್ತು. ಇದರಿಂದ ಈ ಭಾಗ ಬಿಡುಗಡೆಯಾಗುವ ಲಕ್ಷಣಗಳು ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಿಂದ ಕಂಡುಬಂದಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಧಾರ್ಮಿಕ ಮೂಲಭೂತವಾದದ ಪ್ರಯೋಗಶಾಲೆಯಾಗಿ ಈ ಎರಡು ಜಿಲ್ಲೆಗಳಲ್ಲಿ ಪ್ರಜ್ಞಾವಂತರಿಗೆ ಸಂಘ ಪರಿವಾರ ಹಾಗೂ ಬಿಜೆಪಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಿರುಕುಳ ಕೊಡುತ್ತಿದ್ದದ್ದು ಇಲ್ಲಿ ಮುಕ್ತ ಚಿಂತನೆಗೆ ಅವಕಾಶವಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಆಡಳಿತದಲ್ಲೂ ಹಸ್ತಕ್ಷೇಪ ನಡೆಸಲಾರಂಭಿಸಿದ ಸಂಘದ ಮುಖಂಡರು ಚುನಾವಣೆಗೆ ನಿಂತು ಗೆಲ್ಲದೆಯೇ ತಮ್ಮ ಸರ್ವಾಧಿಕಾರ ಮನೋಭಾವನೆಯನ್ನು ಆಡಳಿತದಲ್ಲಿ ತೋರಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಸಮರ್ಪಕ ಪರ್ಯಾಯ ರಾಜಕೀಯ ಇಲ್ಲದೆ ಹೋದುದೇ ಇಂಥ ಒಂದು ಅಪಾಯಕಾರೀ ಬೆಳವಣಿಗೆಗೆ ಕಾರಣವಾಗಿದೆ. ಧಾರ್ಮಿಕವಾಗಿ ಹೆಚ್ಚು ನಂಬಿಕೆ ಉಳ್ಳ ಕರ್ನಾಟಕದ ಜನ ಧಾರ್ಮಿಕತೆಯ ವೇಷ ತೊಟ್ಟ ಬಿಜೆಪಿ ಹಾಗೂ ಸಂಘ ಪರಿವಾರದ ಆಡಳಿತ ಬಂದರೆ ಹೆಚ್ಚು ಉತ್ತಮ ಆಡಳಿತ ನೀಡಬಹುದೇನೋ ಎಂಬ ಭ್ರಮೆಗೆ ಸಿಲುಕಿ ಇಡೀ ರಾಜ್ಯವೇ ಐದು ವರ್ಷಗಳ ಕಾಲ ಮೇರೆ ಇಲ್ಲದ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆಯ ಹಗಲುದರೋಡೆಗೆ ಒಳಗಾಗಿ ನರಳುವಂತೆ ಆಯಿತು.srhiremath ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್. ಹಿರೇಮಠ ಅವರ ಪ್ರಯತ್ನ ಇಲ್ಲದೆ ಇದ್ದಿದ್ದರೆ ಗಣಿಧಣಿಗಳು ಜೈಲಿಗೆ ಹೋಗದೆ ಈಗಲೂ ರಾಜ್ಯದಲ್ಲಿ ಅಟ್ಟಹಾಸ ಮೆರೆಯುತ್ತಿದ್ದರು. ಸದ್ಯ ಅವರು ಜೈಲಿನಲ್ಲಿರುವ ಕಾರಣ ರಾಜ್ಯದ ರಾಜಕೀಯ ಸ್ವಲ್ಪವಾದರೂ ಸುಧಾರಿಸಿದೆ. ರೆಡ್ಡಿಯ ಅಕ್ರಮ ಗಣಿಗಾರಿಕೆಯ ಹಣದ ಬಲದಲ್ಲಿ ಕಟ್ಟಿದ ಬಿ.ಎಸ್. ಆರ್. ಕಾಂಗ್ರೆಸ್ ಪಕ್ಷದ ಗೋಮುಖವ್ಯಾಘ್ರತನವನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಳ್ಳಾರಿಯ ಜನ ಹಿಮ್ಮೆಟ್ಟಿಸಿರುವುದು ಇಡೀ ರಾಜ್ಯವೇ ನಿಟ್ಟುಸಿರುಬಿಡುವ ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಜೆಡಿಎಸ್ ಪಕ್ಷವು ಚುನಾವಣೆಗಳಲ್ಲಿ ಬಿಜೆಪಿಯ ಸಮಬಲಕ್ಕೆ ಬರುವಷ್ಟು ಸ್ಥಾನಗಳನ್ನು ಗಳಿಸಿರುವುದು ರಾಜ್ಯದ ಮಟ್ಟಿಗೆ ಇನ್ನೊಂದು ಆಶಾದಾಯಕ ಬೆಳವಣಿಗೆಯಾಗಿದೆ. ಜೆಡಿಎಸ್ ಮುಂಬರುವ ದಿನಗಳಲ್ಲಿ ಬಿಜೆಪಿಯಂಥ ಧಾರ್ಮಿಕ ಮೂಲಭೂತವಾದಿ ಪಕ್ಷದ ಜೊತೆ ಕೈ ಜೋಡಿಸದೆ ಅವಕಾಶವಾದಿ ರಾಜಕಾರಣದಿಂದ ದೂರ ಉಳಿದರೆ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಬೆಳೆಯುವ ಸಂಭವ ಇದೆ. ಒಂದು ವೇಳೆ ಅಧಿಕಾರದ ಆಸೆಗೆ ಧಾರ್ಮಿಕ ಮೂಲಭೂತವಾದಿ ಪಕ್ಷವಾದ ಬಿಜೆಪಿ ಜೊತೆ ಕೈ ಜೋಡಿಸಿದರೆ ಅದರ ಬೆಳವಣಿಗೆ ಸ್ಥಗಿತವಾಗಲಿದೆ.

ಯಡಿಯೂರಪ್ಪ ಯಡಿಯೂರಪ್ಪ ನೇತೃತ್ವದ ಕೆಜೆಪಿಯೂ ಮಹತ್ವದ ಸಾಧನೆ ತೋರಿಸುವಲ್ಲಿ ವಿಫಲವಾಗಿದೆ. ಯಾವುದೇ ತತ್ವ, ಸಿದ್ಧಾಂತ ಇಲ್ಲದ ಭ್ರಷ್ಟತೆಯ ಗರ್ಭದಿಂದ ಮೂಡಿಬಂದ ಕೆಜೆಪಿಯೂ ಮುಂಬರುವ ದಿನಗಳಲ್ಲಿ ಹೆಚ್ಚಿನ ಬೆಳವಣಿಗೆ ತೋರಿಸುವ ಸಂಭವ ಇಲ್ಲ. ಇದು ಕೊನೆಗೆ ಬಿಜೆಪಿಯಲ್ಲಿ ವಿಲೀನವಾಗುವ ಸಂಭವವೇ ಹೆಚ್ಚು. ಪಕ್ಷೇತರರು ಈ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿಸಿ ಬಂದಿರುವುದು ಪ್ರಮುಖ ರಾಜಕೀಯ ಪಕ್ಷಗಳ ಬಗ್ಗೆ ನಂಬಿಕೆ ಕಳೆದುಕೊಂಡಿರುವುದರ ದ್ಯೋತಕವಾಗಿ ಕಾಣುತ್ತದೆ. ಕಾಂಗ್ರೆಸ್ ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ನಿಚ್ಚಳ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಂಭವ ಇದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತೋರಿಸುತ್ತಿವೆ. ಇದು ನಿಜವಾಗುವ ಸಂಭವವೇ ಹೆಚ್ಚು ಏಕೆಂದರೆ ಸದ್ಯಕ್ಕೆ ಬೇರೆ ಪರ್ಯಾಯ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಪರ್ಯಾಯ ಶಕ್ತಿಯಾಗುವಷ್ಟು ಬೆಳೆದಿಲ್ಲ. ಸಮೀಕ್ಷೆಗಳು ಜೆಡಿಎಸ್ ವಿಧಾನಸಭಾ ಚುನಾವಣೆಗಳಲ್ಲಿ ಮೊದಲು ಇದ್ದಷ್ಟೇ ಸ್ಥಾನಗಳನ್ನು ಗಳಿಸಬಹುದು ಎಂದು ಹೇಳುತ್ತವೆಯಾದರೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಜೆಡಿಎಸ್ ಬಿಜೆಪಿಗೆ ಸಮನಾಗಿ ಸಾಧನೆ ಮಾಡಿರುವುದು ನೋಡಿದರೆ ಅದು ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಮೂಲಭೂತವಾದಿ ಬಿಜೆಪಿ ಜೊತೆಗೂಡದೆ ಸಮರ್ಥ voteಪ್ರತಿಪಕ್ಷವಾಗಿ ಕೆಲಸ ಮಾಡಿದರೆ ಐದು ವರ್ಷಗಳ ನಂತರ ಜೆಡಿಎಸ್ ಅಧಿಕಾರಕ್ಕೆ ಬರುವಷ್ಟು ಬೆಳೆಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಬಿಜೆಪಿಗೆ ಒಂದು ಅವಕಾಶ ಕೊಟ್ಟು ನೋಡಿರುವ ಜನ ಅದರ ಭ್ರಷ್ಟತೆ, ಅಧಿಕಾರದಾಹ, ಸರ್ವಾಧಿಕಾರಿ ಮನೋಭಾವ, ಅದರ ಸಂಘ ಪರಿವಾರಕ್ಕೆ ಸಂವಿಧಾನಬಾಹಿರವಾಗಿ ಗುಲಾಮನಂತೆ ನಡೆದುಕೊಳ್ಳುವ ರೀತಿಯಿಂದ ರೋಸಿಹೊಗಿರುವುದು ಸ್ಪಷ್ಟ. ಹೀಗಾಗಿ ಇದು ಮೊದಲಿನಂತೆ ಮೂರನೇ ಸ್ಥಾನಕ್ಕೆ ತಳ್ಳಲ್ಪಡುವ ಸಂಭವ ಅಧಿಕವಾಗಿದೆ ಮತ್ತು ಹಾಗಾದರೆ ಕನ್ನಡನಾಡಿಗೆ ಒಳಿತಾಗಲಿದೆ. ಕನ್ನಡನಾಡು ಮೊದಲಿನಿಂದಲೂ ಮೂಲಭೂತವಾದಿಗಳ ತವರು ಆಗಿರಲಿಲ್ಲ. ಇಲ್ಲಿ ಸಾಕಷ್ಟು ಪ್ರಗತಿಪರ ನಿಲುವಿನ ಶಕ್ತಿಗಳು ಹಾಗೂ ಮಾಧ್ಯಮಗಳು ಇವೆ. ಜನ ಧಾರ್ಮಿಕತೆಯ ವೇಷ ಹಾಕಿದ ಕಪಟಿಗಳ ಬಗ್ಗೆ ಎಚ್ಚತ್ತುಕೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಹಾಗೂ ಇದು ಅಗತ್ಯವಾಗಿ ಆಗಬೇಕಾಗಿರುವ ಬೆಳವಣಿಗೆಯೂ ಹೌದು.

4 thoughts on “ಶಾಪವಿಮೋಚನೆಯತ್ತ ಕರ್ನಾಟಕ

  1. Naveen_H

    ಸಧ್ಯದ ರಾಜ್ಯ ಸರ್ಕಾರ ಅತ್ಯಂತ ಕೆಟ್ಟ ಆಡಳಿತದ ಸರ್ಕಾರ ಎನ್ನುವದರಲ್ಲಿ ಎರಡು ಮಾತಿಲ್ಲ. ಆನಂದ್ ಪ್ರಸಾದರ ಆತುರ ಅರ್ಥ ಆಗತ್ತೆ. ಆದರೆ ೨೦೦೭ರಲ್ಲೂ ಸ್ಥಳೀಯ ಸಂಸ್ಥೆ ಗಳ ಚುನಾವಣೆಯಲ್ಲಿ ಕಂಗ್ರೆಸ್ಸೇ ೧೬೦೬ ಸೀಟ್ ಗಳಿಸಿ ಮೊದಲ ಸ್ಥಾನದಲ್ಲಿತ್ತು. ಆದರೂ ಮುಂದೆ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಜನ ಕಾಂಗ್ರೆಸ್ಸ್ ಗೆ ಅಧಿಕಾರ ನೀಡಲಿಲ್ಲ.
    ಈ ಬಾರಿ ಕಾಂಗ್ರೆಸ್ಸ್ ನ ಸ್ಥಿತಿ ಇನ್ನೂ ವಿಚಿತ್ರ. ಕಾರ್ಯಕರ್ತರು, ಜಿಲ್ಹಾ ಮಟ್ಟದ ನಾಯಕರು ಸ್ಥಳೀಯ ಸುಂಸ್ಥೆ ಚುನಾವಣೆ ಗೆದ್ದ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್ಸ್ ಪರ ಗಾಳಿ ಬೀಸುತ್ತಿದ್ದಂತೆ ಒಂದು ಟಿಕೆಟ್ ಗೆ ನಾಲ್ಕು ಜನ ಆಕಾಂಕ್ಷಿಗಳು ಈಗಾಗಲೇ ಹುಟ್ಟಿಕೊಂಡಿದ್ದಾರೆ. ಇಂತಹದರಲ್ಲಿ ಪೂರ್ತಿ ಎಲ್ಲಾ ೩೦೦೦+ ವಾರ್ಡ್ ಗಳ ಮತದಾರರ ಸಂಖ್ಯೆ ಒಂದು ವಿಧಾನ ಸಭಾ ಮತಕ್ಷೇತ್ರದ ಮತದಾರರಿಗಿಂತಲೂ ಕಡಿಮೆ ಹೀಗಿರುವಾಗ ಇದನ್ನು ಒಂದು ಅಚ್ಚುಕಟ್ಟಾದ ಒಪೀನಿಯನ್ ಪೋಲ್ ಥರ ನೋಡಬಹುದೇ ಹೊರತು ಕಾಂಗ್ರೆಸ್ಸ್ ಗೆದ್ದೇ ಬಿಟ್ಟಿತು ಅನ್ನುವದು ಸ್ವಲ್ಪ ಹೆಚ್ಚೇ ಆತುರದಲ್ಲಿ ಹೇಳಿದ ಮಾತಾಗತ್ತೆ. ನಿಜ ಹೇಳ್ಬೇಕಂದ್ರೆ ಈ ಹೊತ್ತಿನಲ್ಲಿ ಏನಾದರೂ ಕೆಜೆಪಿ, ಬಿಜೆಪಿ ಒಳ ಒಪ್ಪಂದ ಮಾಡಿಕೊಂಡು, ಓಟು ಒಡೆಯದಂತೆ ನೋಡಿಕೊಂಡು ಸ್ವಲ್ಪ ಚಳಿ ಬಿಟ್ಟು ಗ್ರಾಮೀಣ ವಲಯದಲ್ಲಿ ಪಂಚಾಯತಿ ಮೆಂಬರ್ ಗಳ ಮನ ಗೆದ್ದರೆ ಫಲಿತಾಂಶ ಏನು ಬೇಕಾದ್ರೂ ಆಗಬಹುದು!!

    Reply
  2. Ananda Prasad

    ೨೦೦೮ರ ವಿಧಾನಸಭಾ ಚುನಾವಣೆ ನಡೆದಾಗ ಪರಿಸ್ಥಿತಿ ಭಿನ್ನವಾಗಿತ್ತು. ಆಗ ಯಡಿಯೂರಪ್ಪನವರು ಜೆಡಿಎಸ್ ವಚನಭಂಗದ ಕೂಗು ಎಬ್ಬಿಸಿ ಜನರ ಅನುಕಂಪ ಗಳಿಸುವಲ್ಲಿ ಯಶಸ್ವಿಯಾದರು ಮಾತ್ರವಲ್ಲ ಕರ್ನಾಟಕದಲ್ಲಿ ಬಿಜೆಪಿ ಅದುವರೆಗೆ ಅಧಿಕಾರಕ್ಕೆ ಬಂದಿರಲಿಲ್ಲ. ಹೀಗಾಗಿ ಎಚ್ಚರಿಕೆಯಿಂದಲೇ ಪೂರ್ತಿ ಬಹುಮತ ಕೊಡದೆ ಬಿಜೆಪಿಗೆ ಒಂದು ಅವಕಾಶ ಕೊಟ್ಟರು. ೨೦೧೩ರಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಬಿಜೆಪಿಯ ಆಡಳಿತ ವೈಖರಿ ನೋಡಿ ಆಗಿದೆ. ಕೊನೆ ಕ್ಷಣದಲ್ಲಿ ಬಿಜೆಪಿ ಏನೇ ಕಸರತ್ತು, ಆಮಿಷ, ಆಶ್ವಾಸನೆ ನೀಡಿದರೂ ದೃಢ ನಿರ್ಧಾರ ಮಾಡಿರುವ ಮತದಾರರ ಮೇಲೆ ಅದು ಪರಿಣಾಮ ಬೀರುವ ಸಂಭವ ಇಲ್ಲ. ಬಿಜೆಪಿ ಕೆಜೆಪಿ ಒಳ ಒಪ್ಪಂದವಲ್ಲ ಬಿಜೆಪಿಯಲ್ಲಿ ವಿಲೀನವಾಗಿ ಕೆಜೆಪಿ ವಿಲೀನವಾಗಿ ಒಟ್ಟಿಗೆ ಚುನಾವಣೆಗೆ ಹೋದರೂ ಬಿಜೆಪಿ ಹೀನಾಯ ಸೋಲಿನೆಡೆಗೆ ಸಾಗುವ ಸಂಭವ ಹೆಚ್ಚಾಗಿದೆ.

    Reply

Leave a Reply

Your email address will not be published. Required fields are marked *