Daily Archives: March 20, 2013

ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚು ಮಾರಕ

– ಆನಂದ ಪ್ರಸಾದ್

ಬಿಜೆಪಿ ಅಂತರಿಕ ಪ್ರಜಾಪ್ರಭುತ್ವವಿರುವ ಪಕ್ಷ ಎಂದು ಹೇಳಿಕೊಂಡರೂ ಅದರ ಕಾರ್ಯಶೈಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾಗಿಲ್ಲ. ಅದು ತಾನು ಬೇರೆ ಪಕ್ಷಗಳಿಗಿಂತ ಭಿನ್ನ ಎಂದು ಹೇಳಿಕೊಂಡರೂ ಅದರ ಕಾರ್ಯಶೈಲಿ ಉಳಿದ ಪಕ್ಷಗಳಿಗಿಂತಲೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೆಚ್ಚು ಮಾರಕವಾಗಿದೆ. BJP-RSS-Gadkariಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಚುನಾಯಿತರಾದವರು ಆಡಳಿತ ನಡೆಸಬೇಕಾದುದು ಎಂಬುದು ಸಾಮಾನ್ಯ ತಿಳುವಳಿಕೆ. ಆದರೆ ಬಿಜೆಪಿಯಲ್ಲಿ ಜನರಿಂದ ಚುನಾಯಿತರಾದವರ ಮೇಲೆ ಅಧಿಕಾರ ಚಲಾಯಿಸುವ ಜನರಿಂದ ಚುನಾಯಿತವಾಗಿರದ ಸಂಘದ ಮುಖಂಡರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಪಹಾಸ್ಯ ಮಾಡುವ ರೀತಿಯಲ್ಲಿ ವರ್ತಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಸಂವಿಧಾನಬಾಹಿರ ಮಾತ್ರವಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಅಧ್ಯಕ್ಷರನ್ನು ಪಕ್ಷದ ಸದಸ್ಯರು ಚುನಾವಣೆಯ ಮೂಲಕ ಆರಿಸಬೇಕಾದುದು ಸರಿಯಾದ ಕ್ರಮ. ಆದರೆ ಬಿಜೆಪಿಯಲ್ಲಿ ಸಂಘದ ಮುಖಂಡರು ಅಧ್ಯಕ್ಷರನ್ನು ಹೇರುವುದನ್ನು ಪ್ರಜಾಪ್ರಭುತ್ವ ಎಂದು ಹೇಳಲು ಸಾಧ್ಯವೇ? ತಮಗೆ ನಿಷ್ಠರಾಗಿರುವವರನ್ನು, ತಮ್ಮ ಆಜ್ಞೆ ಪಾಲಿಸುವವರನ್ನು ಸಂಘದ ಮುಖಂಡರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಮುಖ್ಯಮಂತ್ರಿ ಸ್ಥಾನಕ್ಕೆ ಬರುವಂತೆ ಮಾಡಿ ರಾಜ್ಯದ ಆಡಳಿತದ ಮೇಲೆ ತಮ್ಮ ಪ್ರಭಾವ ಬೀರುವುದನ್ನು ನಮ್ಮ ರಾಜ್ಯದಲ್ಲಿ ಕಾಣುತ್ತಿದ್ದೇವೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಪಾಳೇಗಾರಿಕೆ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಇದನ್ನು ಪ್ರಜೆಗಳು ಮತದಾನ ಮಾಡುವಾಗ ಗಂಭೀರವಾಗಿ ಯೋಚಿಸಬೇಕಾಗಿದೆ. ಬಿಜೆಪಿಯ ಈ ನಡವಳಿಕೆಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗಂಭೀರವಾದ ಅಪಾಯ ಉಂಟಾಗುವ ಸಂಭವ ಇದೆ. ಎಲ್ಲಿ ಸಂಘ ಪರಿವಾರದ ಪ್ರಭಾವ ಹೆಚ್ಚಾಗಿದೆಯೋ ಅಲ್ಲೆಲ್ಲ ಸರಕಾರಿ ಯಂತ್ರ ಸಂಘದ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ಕಂಡುಬರುತ್ತದೆ. ಯಾರು ಸಂಘದ ನಿಲುವುಗಳನ್ನು ವಿರೋಧಿಸುತ್ತಾರೆಯೋ ಅವರ ಮೇಲೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕಿರುಕುಳ ಕೊಡುವ ಪ್ರವೃತ್ತಿ ಕಂಡುಬರುತ್ತಾ ಇದೆ. ಇದು ಬಿಜೆಪಿ ಹಾಗೂ ಸಂಘ ಪರಿವಾರ ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ದೇಶ ಯಾವ ರೀತಿ ಸರ್ವಾಧಿಕಾರಕ್ಕೆ ಒಳಗಾಗಬೇಕಾಗಿ ಬರಬಹುದು ಎಂಬುದರ ಸ್ಪಷ್ಟ ಮುನ್ಸೂಚನೆಯಾಗಿದೆ.

ನಿಜ, ದೇಶದಲ್ಲಿರುವ ಪ್ರಧಾನ ಪಕ್ಷವಾದ ಕಾಂಗ್ರೆಸ್ ಪಕ್ಷದಲ್ಲಾಗಲೀ, ಇತರ ಇತರ ಪ್ರಾದೇಶಿಕ ಪಕ್ಷಗಳಲ್ಲಾಗಲೀ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿಲ್ಲ. ಆದರೂ ಅವುಗಳು ಬಿಜೆಪಿಯಷ್ಟು ದಬ್ಬಾಳಿಕೆಯ ವಾತಾವರಣವನ್ನು ದೇಶದಲ್ಲಿ ಇದುವರೆಗೆ ಉಂಟುಮಾಡಿಲ್ಲ. ಬಿಜೆಪಿಯ ಹಲವು ನಾಯಕರಿಗೆ ಸೌಮ್ಯವಾಗಿ ಮಾತಾಡುವುದೇ ಗೊತ್ತಿಲ್ಲ. ಇತರರ ಮೇಲೆ ಹಾರಿ ಆಕ್ರಮಣ ಮಾಡುವ ರೀತಿಯಲ್ಲಿ ಉಗ್ರ ಸ್ವರದಲ್ಲಿ ಮಾತಾಡುವುದನ್ನು ನಾವು ಕಾಣಬಹುದು. ಇದು ಪ್ರಜಾಪ್ರಭುತ್ವಕ್ಕೆ ಯೋಗ್ಯವಾದ ನಡವಳಿಕೆಯಲ್ಲ. ಬಿಜೆಪಿಯ ಒಂದು ರಾಜ್ಯದ ಮುಖ್ಯಮಂತ್ರಿ ಚುನಾವಣೆಯಲ್ಲಿ ಗೆದ್ದರೆ ಎಲ್ಲಾ ಬಿಜೆಪಿ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಆ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ಒಡ್ಡೋಲಗದ ರೀತಿಯಲ್ಲಿ ನೆರೆಯುವುದನ್ನು ನೋಡಿದರೆ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪಕ್ವವಾದ ನಡವಳಿಕೆಯನ್ನು ರೂಢಿಸಿಕೊಂಡಿಲ್ಲ ಎಂಬುದು ಕಂಡುಬರುತ್ತದೆ. ಕಾಂಗ್ರೆಸ್ ಪಕ್ಷವಾಗಲಿ ಬೇರಾವುದೇ ಪಕ್ಷವಾಗಲೀ ಈ ರೀತಿ ರಾಜಪ್ರಭುತ್ವದ ಶೈಲಿಯನ್ನು ಅಳವಡಿಸಿಕೊಂಡಿಲ್ಲ.

ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಪುರೋಹಿತಶಾಹಿ ಕಂದಾಚಾರಗಳನ್ನು ಸರ್ಕಾರೀ ಮಟ್ಟದಲ್ಲಿ ಹೆಚ್ಚು ಹೆಚ್ಚು ಜಾರಿಗೆ ತರಲಾಗುತ್ತಿರುವುದು ಕೂಡ ಉತ್ತಮ ಬೆಳವಣಿಗೆಯಲ್ಲ. ಮಂತ್ರಿಗಳು, ಮುಖ್ಯಮಂತ್ರಿಗಳು ತಮ್ಮ ಅಧಿಕಾರ ವಹಿಸಿಕೊಳ್ಳುವಾಗ ಪೂಜೆ, ಹೋಮ ಹವನಗಳನ್ನು ಮಾಡಿಸುವುದು, ವಾಸ್ತುವಿನ ಹೆಸರಿನಲ್ಲಿ ಸರ್ಕಾರಿ ನಿವಾಸಗಳನ್ನು, ಕಟ್ಟಡಗಳನ್ನು ಬೇಕಾಬಿಟ್ಟಿಯಾಗಿ ಜನತೆಯ ತೆರಿಗೆಯ ಹಣದಲ್ಲಿ ನಿರ್ಲಜ್ಜವಾಗಿ ಬದಲಾಯಿಸುವುದು ಇವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ಯೋಗ್ಯರಲ್ಲ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಇಂದು ದೇಶದಲ್ಲಿ ಕಾಂಗ್ರೆಸ್ಸಿಗೆ ಪರ್ಯಾಯವಾಗಿ ಪ್ರಬಲವಾದ ರಾಷ್ಟ್ರೀಯ ಪಕ್ಷವೊಂದರ ಅವಶ್ಯಕತೆ ಇರುವುದು 750px-BJP-flag.svg[1]ನಿಜವಾದರೂ ಆ ಸ್ಥಾನವನ್ನು ತುಂಬಲು ಬಿಜೆಪಿ ಯೋಗ್ಯವಾದ ಪಕ್ಷವಾಗಿ ಕಂಡುಬರುತ್ತಿಲ್ಲ. ಏಕೆಂದರೆ ಬಿಜೆಪಿ ಜನಪರ ಹೋರಾಟಗಳ ಮೂಲಕ ದೇಶವ್ಯಾಪಿ ಬೆಳೆದ ಪಕ್ಷವಲ್ಲ. ಬಿಜೆಪಿ ಜನತೆಯ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಸುಲಭವಾಗಿ ಬೆಳೆದಿರುವ ಕಾರಣ ಆ ಪಕ್ಷದವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಅವಶ್ಯಕತೆಗಳು ಏನು ಎಂಬುದೇ ತಿಳಿದಿಲ್ಲ. ಬಿಜೆಪಿ ಈ ರೀತಿ ಅಸಹಜವಾಗಿ ಬೆಳೆದ ಕಾರಣ ಬೇರೆ ರಾಷ್ಟ್ರೀಯ ಪಕ್ಷವೊಂದರ ಬೆಳವಣಿಗೆ ಆಗುವುದು ಕಷ್ಟ. ಏಕೆಂದರೆ ಈಗಾಗಲೇ ಎರಡು ಬಲಿಷ್ಠ ಪಕ್ಷಗಳು ಇರುವಲ್ಲಿ ಮೂರನೆಯ ಪಕ್ಷವೊಂದನ್ನು ಬೆಳೆಸುವುದು ನಮ್ಮ ದೇಶದಲ್ಲಿ ಬಹಳ ಕಷ್ಟವಿದೆ. ಜನರಲ್ಲಿ ಹೊಸ ಚಿಂತನೆಗಳಾಗಲೀ, ಯೋಚಿಸಿ ಮತ ನೀಡುವ ಪ್ರಭುದ್ಧತೆಯಾಗಲೀ ಬೆಳೆದಿರದ ಕಾರಣ ಹೀಗಾಗುತ್ತದೆ. ಜನರಲ್ಲಿ ಹೊಸ ಚಿಂತನೆಗಳಿಗೆ ಸ್ಪಂದಿಸುವ ವಿಚಾರಶೀಲತೆ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಅಸ್ತಿತ್ವದಲ್ಲಿ ಇರುವ ಪಕ್ಷಗಳು ಯೋಗ್ಯವಾಗಿಲ್ಲ ಎಂದು ಕಂಡುಬಂದರೆ ಹೊಸ ವ್ಯವಸ್ಥೆಯನ್ನು ಕಟ್ಟಿ ಬೆಳೆಸುವ ಅವಕಾಶ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆ. ಅದನ್ನು ನಮ್ಮ ಜನ ಉಪಯೋಗಿಸಿಕೊಂಡು ಪ್ರಭುದ್ಧರಾಗಿ ಒಗ್ಗಟ್ಟಿನಿಂದ ಮತದಾನವನ್ನು ಹೊಸ ವ್ಯವಸ್ಥೆಯ ಪರವಾಗಿ ಮಾಡಿದರೆ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಬದಲಾಯಿಸಬಹುದು. ಹೊಸ ಪ್ರಯೋಗಗಳಿಗೆ ನಾವು ಸ್ಪಂದಿಸುತ್ತಾ ಬಂದರೆ ಕಾಲಾನುಕ್ರಮದಲ್ಲಿ ವ್ಯವಸ್ಥೆ ಬದಲಾಗಿಯೇ ಆಗುತ್ತದೆ ಅದಕ್ಕಾಗಿ ನಾವು ಎಚ್ಚತ್ತುಕೊಂಡು ಪ್ರಜಾಪ್ರಭುತ್ವಕ್ಕೆ ಮಾರಕವಾದ ಪಕ್ಷಗಳನ್ನು ತಿರಸ್ಕರಿಸಿ ಹೊಸ ಪಕ್ಷಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ರೂಪಿಸಬೇಕಾದ ಅಗತ್ಯ ಇದೆ.