ಸುಡುಹಗಲ ಸೊಲ್ಲು : ಜನಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ


– ಸರ್ಜಾಶಂಕರ ಹರಳಿಮಠ


 

[ದಿ.23 ಮತ್ತು 24 ರಂದು ಧಾರವಾಡದಲ್ಲಿ ಕರ್ನಾಟಕ ಜನ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಆತ್ಮವಿಮರ್ಶೆಯ ಮಾತುಗಳು.]

ಈ ಹೊತ್ತು, ನೆರಳೇ ಇಲ್ಲದ ಸುಡು ಹಗಲಿನಲ್ಲಿ ನಿಂತಿರುವಂತೆ ನನಗೆ ಭಾಸವಾಗುತ್ತಿದೆ. ನೀರಿಲ್ಲದೆ ಒಣಗಿರುವ ಬಾಯಲ್ಲಿ ನಾನಾಡುವ ಈ ಕೆಳಗಿನ ಮಾತುಗಳು ನಿಮಗೆ ಕರ್ಕಶವೆನಿಸಬಹುದು, ಹೇಳದೆ ನನಗೆ ಬೇರೆ ದಾರಿಯಿಲ್ಲ.

ಎಲ್ಲಾ ಕಾಲವೂ ಬಿಕ್ಕಟ್ಟಿನದೇ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಈ ಮಾತು ಸ್ವಲ್ಪ ಸಮಸ್ಯಾತ್ಮಕವಾದದ್ದು ಎಂದು ಅನ್ನಿಸುತ್ತಿದೆ. ಕಾಲಕ್ಕೆ ಸ್ಪಂದಿಸುವ ರೀತಿಯಲ್ಲಿ ಕಾಲ ಕೆಲವರಿಗೆ ಬಿಕ್ಕಟ್ಟಿನದಾಗಿಯೂ ಹಲವರಿಗೆ ಬಿಕ್ಕಟ್ಟಿಲ್ಲದ ನೆಮ್ಮದಿಯದ್ದಾಗಿಯೂ ಕಾಣಬಹುದು. ಒಂದು ಪತ್ರಿಕಾಗೋಷ್ಟಿಯಲ್ಲಿ janasahitya-samaveshaರೈತನಾಯಕರೊಬ್ಬರಿಗೆ ಪತ್ರಕರ್ತರು ರೈತಸಂಘದ ನಿಮ್ಮ ಬಣವೇಕೆ ಯಾವುದೇ ಹೋರಾಟ ಮಾಡುತ್ತಿಲ್ಲ ಎಂದು ಕೇಳಿದಾಗ ಅವರು ತಣ್ಣಗೆ ಉತ್ತರಿಸಿದ್ದೇನೆಂದರೆ ‘ರೈತರಿಗೆ ಸದ್ಯ ಯಾವುದೇ ಸಮಸ್ಯೆಯಿಲ್ಲ, ಅದಕ್ಕೆ ಹೋರಾಟವನ್ನೂ ಹಮ್ಮಿಕೊಂಡಿಲ್ಲ.’ ಆದರೆ ಅವರು ಈ ಮಾತು ಆಡುವಾಗಲೂ ವಿದ್ಯುತ್ ಸಮಸ್ಯೆಯಿಂದ, ಕುಸಿತಗೊಂಡ ಬೆಲೆಗಳಿಂದಾಗಿ ರೈತರು ತತ್ತರಿಸುತ್ತಿದ್ದರು, ದೊಡ್ಡ ಉದ್ಯಮಿಗಳಿಗಾಗಿ ಇವರ ಕೃಷಿಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿತ್ತು, ಮತ್ತು ಸಾಲದಿಂದ ದಿಕ್ಕೆಟ್ಟ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈ ರೈತಮುಖಂಡರು ಈ ಕಾರಣಗಳನ್ನಿಟ್ಟುಕೊಂಡು ಈ ಹಿಂದೆ ಅನೇಕ ಹೋರಾಟಗಳನ್ನು ಮಾಡಿದ್ದರು. ಆದರೀಗ ಅವರು ನೆಮ್ಮದಿಯಾಗಿದ್ದರು. ಏಕೆಂದರೆ ಸರ್ಕಾರ ಅವರಿಗೆ ತಿಂಗಳಿಗೆ ಲಕ್ಷ ರೂಪಾಯಿ ಆದಾಯದ ನಿಗಮವೊಂದರ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿತ್ತು.

ಹಾಗೆಯೇ, ನಮ್ಮ ನಾಡಿನ ಗಾಳಿಯಾಡುವ ಪ್ರತಿಸ್ಥಳದಲ್ಲೂ ಸಮಸ್ಯೆಗಳಿವೆ, ಸಂಕಟಗಳಿವೆ. ಧರ್ಮದ ಕಾರಣಕ್ಕೆ ಕೊಲೆಗಳು, ವೃದ್ಧಾಶ್ರಮವಾಗುತ್ತಿರುವ ಹಳ್ಳಿಗಳು, ಕೃಷಿಬಿಕ್ಕಟ್ಟಿನಿಂದ ತತ್ತರಿಸುತ್ತಿರುವ ರೈತರು, ಬಿಗಿಯಾಗುತ್ತಿರುವ ಜಾತಿ ಸಂಕೋಲೆಗಳು, ಮಹಿಳೆಯರ ಮೇಲಿನ ಅತ್ಯಾಚಾರಗಳು, ಅಗೋಚರವಾದ ಆಕೆಯ ಮೇಲಿನ ಕುಟುಂಬದೊಳಗಿನ ಹಿಂಸೆಗಳು… ಇಂತಹ ನೂರು ಸಮಸ್ಯೆಗಳನ್ನು ಪಟ್ಟಿ ಮಾಡಬಹುದು. ಆದರೆ ಇದನ್ನು ತಮ್ಮ ಸಮಸ್ಯೆಯೆಂದು ತಮ್ಮೊಳಗೆ ತೆಗೆದುಕೊಳ್ಳುವವರಿಗೆ ಮಾತ್ರ ಇದು ಸಮಸ್ಯೆ. ಈ ಎಲ್ಲಾ ಸಂಕಟಗಳಿಗೆ ಎಷ್ಟು ಜನ ಮಿಡಿಯುತ್ತಾರೆಂಬುದನ್ನು ಅಂದಾಜಿಸುವುದೂ ಒಂದು ಬಗೆಯಲ್ಲಿ ಕಷ್ಟದ ಕೆಲಸ. ಈ ಸಂಕಟಗಳಿಗೆ ಮರುಗುವವರ ಸಂಖ್ಯೆ ಸಾಕಷ್ಟಿರಬಹುದು. ಆದರೆ ಇವರ ಮರುಗುವಿಕೆ ಸಂಕಟದ ನಿವಾರಣೆಯ ದಿಕ್ಕಿನಲ್ಲಿ ಕ್ರಿಯಾತ್ಮಕವಾಗದಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಈ ಕ್ರಿಯೆ ಎನ್ನುವುದು ಕೂಡ ಹಲವು ಬಗೆಯದ್ದು. ಈ ಸಮಸ್ಯೆಗಳಿಗೆ ಮುಖಾಮುಖಿಯಾಗಿ ಅದನ್ನು ನಿವಾರಿಸಲು ಹೋರಾಟಗಾರ ಪ್ರಯತ್ನಿಸುತ್ತಾನೆ. ಸಂವೇದನಾಶೀಲ ಲೇಖಕ ತನ್ನ ಬರವಣಿಗೆಯಲ್ಲಿ ಅದನ್ನು ಎದುರುಗೊಳ್ಳುತ್ತಾನೆ. ತನ್ನ ದಾರಿಯನ್ನು ಸ್ಪಷ್ಟಪಡಿಸಿಕೊಳ್ಳಲು ಲೇಖಕ ಹೋರಾಟಗಾರನಿಗೆ ನೆರವು ನೀಡಿದ್ದು ಇತಿಹಾಸದುದ್ಧಕ್ಕೂ ನಡೆದಿದೆ. ಕುವೆಂಪು ಅವರ ಸಾಹಿತ್ಯ ಕರ್ನಾಟಕದಲ್ಲಿ ಶೂದ್ರ ಚಳುವಳಿಯನ್ನು ನಿರ್ದೇಶಿಸಿದ್ದನ್ನು ಇಲ್ಲಿ ನಾವು ಗಮನಿಸಬಹುದು. ಲಂಕೇಶ್ ಪತ್ರಿಕೆ ಈ ನಿಟ್ಟಿನಲ್ಲಿ ದೊಡ್ಡ ಕೆಲಸವನ್ನೇ ಮಾಡಿತು. ದಲಿತ ಚಳವಳಿ, ರೈತ ಚಳವಳಿ ಈ ನಾಡಿನಲ್ಲಿ ಒಂದು ಕಾಲಘಟ್ಟದ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಇದರಲ್ಲೆಲ್ಲ ಲೇಖಕ ಸಮೂಹದ ಪಾತ್ರವೂ ಮುಖ್ಯವಾಗಿದೆ. ಆದರಿಂದು ಲೇಖಕರಾದ ನಾವು ಎಷ್ಟು ಜನ ಲೋಕದ ನಿತ್ಯಸಂಕಟಗಳಿಗೆ ಸ್ಪಂದಿಸುತ್ತಿದ್ದೇವೆ ಎನ್ನುವುದು ಪ್ರಶ್ನೆ.

ಈ ಕಾಲಘಟ್ಟ ಒಬ್ಬ ಲೇಖಕನಿಂದ ಸಮಾಜಕ್ಕೆ ಸ್ಪಂದಿಸುವ, ಅದನ್ನು ತಿದ್ದುವ ಬರವಣಿಗೆಯನ್ನು ಮಾತ್ರವಲ್ಲ, ಆತನಿಂದ ಹೋರಾಟವನ್ನೂ ನಿರೀಕ್ಷಿಸುತ್ತಿದೆ ಎನಿಸುತ್ತಿದೆ. ‘ಸುಮ್ಮನೆ ಬರೆದುಕೊಂಡಿದ್ದರೆ ಸಾಲದು, ಬರೆದಿದ್ದನ್ನು ಸಾಧಿಸಲು ಬೀದಿಗಿಳಿಯಿರಿ’ ಎಂದು ಹೋರಾಟಗಾರರ ಬಾಯಲ್ಲಿ ಸಮಾಜವೇ ಹೇಳಿಸುತ್ತಿದೆ ಎನಿಸುತ್ತಿದೆ.

ಬಂಡಾಯ ಸಾಹಿತ್ಯ ಸಂಘಟನೆ ಅಥವಾ ಜಾಗೃತ ಸಾಹಿತ್ಯ ಸಮ್ಮೇಳನ ಅಂತಿಮವಾಗಿ ಸಮಾಜವನ್ನು ದೃಷ್ಟಿಯಲ್ಲಿಟ್ಟುಕೊಂಡಿದ್ದರೂ ಅದು ನೇರವಾಗಿ ಸಾಹಿತ್ಯದ ಉದ್ದೇಶವನ್ನು ಪ್ರಶ್ನಿಸುತಿತ್ತು. ಸಾಹಿತ್ಯದ ಸಾಮಾಜಿಕ ಹೊಣೆಗಾರಿಕೆ ಕುರಿತು ಮರುಚಿಂತನೆ ಮತ್ತು ಹೊಸ ಸಮಾಜ ನಿರ್ಮಾಣಕ್ಕೆ ಬೇಕಾದ ನೆಲೆ ಹಾಗೂ ಪ್ರೇರಣೆಗಳ ಕುರಿತು ಕರ್ನಾಟಕ ಜನಸಾಹಿತ್ಯ ಸಮಾವೇಶ ನಡೆಯುತ್ತಿದೆಯೆಂದು ನಾವಿಲ್ಲಿ ಹೇಳಿಕೊಂಡರೂ ಅದಕ್ಕಿಂತಲೂ ಮಿಗಿಲಾದ ನಮ್ಮೆದುರಿನ ಬಿಕ್ಕಟ್ಟುಗಳನ್ನು ನಾವು ಮುಖಾಮುಖಿಯಾಗಲೇಬೇಕಾಗಿದೆ. ಸಾಹಿತ್ಯಕ್ಷೇತ್ರವನ್ನೊಳಗೊಂಡು ಎಲ್ಲ ಕ್ಷೇತ್ರಗಳೂ ಭ್ರಷ್ಟಗೊಂಡಿರುವ, ಸಾಹಿತಿಗಳನ್ನೂ ಒಳಗೊಂಡಂತೆ ಸಂವೇದನಾರಹಿತ ಸಮಾಜ ರೂಪುಗೊಳ್ಳುತ್ತಿರುವ, ಒಂದು ರೀತಿಯಲ್ಲಿ ಸಾಹಿತಿಗಳನ್ನೂ ಒಳಗೊಂಡಂತೆ ಎಲ್ಲರಲ್ಲೂ ಜಾತಿಪ್ರಜ್ಞೆ ಹರಳುಗಟ್ಟುತ್ತಿರುವ ಅತ್ಯಂತ ಸಂಕೀರ್ಣ ಕಾಲಘಟ್ಟವಿದು. ಈ ಕಾಲವನ್ನು ಮುಖಾಮುಖಿಯಾಗಲು ಬಾಹ್ಯ ಸಮಾಜಕ್ಕೆ ಮಾತ್ರವಲ್ಲ ಸ್ವತಃ ನಮಗೂ ಆತ್ಮವಿಮರ್ಶೆಯ ಚಿಕಿತ್ಸೆ ಬೇಕಾಗಿದೆ. ನಮ್ಮ ಮಿತಿಗಳನ್ನು ಮೀರುತ್ತ ಹೊಸ ದಿಗಂತದೆಡೆಗೆ ನೋಡಬೇಕಾಗಿದೆ.

“…ಸಾಹಿತಿ ಪ್ರತ್ಯೇಕ ಜೀವಿಯಾಗಿ ಉಳಿದು ಉಪಯೋಗವಿಲ್ಲ. ತನ್ನ ಜನತೆಯ ಸುಖ ದುಃಖಗಳಲ್ಲಿ, ರಾಗ ದ್ವೇಷಗಳಲ್ಲಿ, ಧಾರ್ಮಿಕತೆಯಲ್ಲಿ, ಕನಸು ಮನಸುಗಳಲ್ಲಿ, ಕೊನೆಗೆ ಅಂಧಶ್ರದ್ಧೆಗಳಲ್ಲಿ ಕೂಡ ಅವನು ಒಂದಾಗಬೇಕು. ಈ ಸಂಗತಿ ಸಾಹಿತ್ಯದ ಆದರ್ಶವಾಗಿರದೆ ಅದರ ಮೂಲಭೂತ ಅವಶ್ಯಕತೆಯಾಗಿದೆ…” [ಲಂಕೇಶ್]. ಆದರೆ ಸಾಹಿತಿಗಳ ಜವಾಬ್ದಾರಿ ಈಗ ಇನ್ನೂ ಹೆಚ್ಚಿದೆ.

ಜಾಗೃತ ಸಾಹಿತ್ಯ ಸಮ್ಮೇಳನದ ತಮ್ಮ ಉದ್ಘಾಟನಾ ಭಾಷಣದಲ್ಲಿ lankeshಲಂಕೇಶ್ ಅವರು ಈ ಸಮ್ಮೇಳನ ಸಂಘಟಿಸಲು ಕಾರಣವಾದ ಅಂಶಗಳನ್ನು ಪ್ರಸ್ತಾಪಿಸುತ್ತ ಸಾಹಿತ್ಯಿಕ ಕಾರಣಗಳನ್ನು ವಿವರವಾಗಿ ಚರ್ಚಿಸುತ್ತ “ಅಗತ್ಯ ಬಿದ್ದರೆ” ಒಟ್ಟಾಗಿ ಜನವಿರೋಧಿ ಘಟನೆಗಳ ವಿರುದ್ಧ ಪ್ರತಿಭಟಿಸುವ ವಾತಾವರಣ ಮೂಡಿಸುವುದು ಅನಿವಾರ್ಯವಾಗಿತ್ತು ಎಂದು, ಇದು ಸಾಹಿತ್ಯದ ಅಂತಹ ಪ್ರಧಾನವಾದ ಕೆಲಸವಲ್ಲ ಎಂಬ ದನಿಯಲ್ಲಿ ಹೇಳುತ್ತಾರೆ. ಬಹುಶಃ ಆ ಕಾಲವೂ ಸಾಹಿತಿಗಳಿಂದ ಹೋರಾಟವನ್ನು ನಿರೀಕ್ಷಿಸುತ್ತಿರಲಿಲ್ಲವೇನೋ. ಆದರೆ ಪ್ರತಿಕ್ಷಣವೂ ಜನವಿರೋಧಿ ಕೃತ್ಯಗಳು ಜರುಗುವ ಈ ಹೊತ್ತಿನಲ್ಲಿ ಇಂತಹವುಗಳನ್ನು ಪ್ರತಿಭಟಿಸುವ ಮತ್ತು ಪ್ರತಿಭಟಿಸುವ ವಾತಾವರಣವನ್ನು ಮೂಡಿಸುವುದೇ ಸಾಹಿತಿಗಳ ಮತ್ತು ಸಾಹಿತ್ಯದ ಆದ್ಯತೆಯ ಜವಾಬ್ದಾರಿ ಎಂದು ನನಗನ್ನಿಸುತ್ತಿದೆ.

ಆದರೆ ಬಹುತೇಕ ಸಾಹಿತಿಗಳು ಹೋರಾಟದ ಬಗ್ಗೆ ಕಳಕಳಿ ತೋರಿದರೂ ಅದು ವಿಶ್ವಾಸಾರ್ಹ ಎನಿಸುತ್ತಿಲ್ಲ. ಪ್ರಧಾನವೆಂದು ತೋರುವ ಸಾಹಿತ್ಯಲೋಕ ಹೋರಾಟಗಾರರನ್ನು ಮತ್ತು ಹೋರಾಟನಿರತ ಲೇಖಕಮಿತ್ರರನ್ನು ಒಂದು ಬಗೆಯ ಅಸ್ಪೃಶ್ಯ ಭಾವನೆಯಲ್ಲಿ ನೋಡುವುದನ್ನು ಗಮನಿಸಬಹುದು. ಮೂಲಭೂತವಾಗಿ ಹೋರಾಟಗಳ ಬಗ್ಗೆಯೇ ಸಾಹಿತ್ಯವಲಯಕ್ಕೆ ಅಸ್ಪೃಶ್ಯ ಭಾವನೆಯಿರುವಂತಿದೆ. ಹೋರಾಟಗಳು ಕಣ್ಮರೆಯಾಗಿವೆ ಎಂದು ಮತ್ತೆ ಮತ್ತೆ ದುಃಖಗೊಂಡವರಂತೆ ಗೊಣಗುವ ಸಾಹಿತಿಗಳು ಸದ್ಯ ಚಾಲ್ತಿಯಲ್ಲಿರುವ ಮಹಿಳಾಪರ ಹೋರಾಟ, ಕೋಮು ಸೌಹಾರ್ದ ಚಳವಳಿ, ಎಡಪಂಥೀಯ ಚಳವಳಿಗಳಲ್ಲಿ ಎಷ್ಟರಮಟ್ಟಿಗೆ ತೊಡಗಿಸಿಕೊಂಡಿದ್ದಾರೆ? ಗಣಿದೊರೆಗಳ ಅಟ್ಟಹಾಸಕ್ಕೆ, ಭ್ರಷ್ಟ ರಾಜಕಾರಣಿಗಳ ಸ್ವಜನಪಕ್ಷಪಾತವನ್ನು ಎದುರಿಸಲಾರದೆ ಚಳವಳಿಗಳೂ ಕಳೆಗುಂದುತ್ತಿದ್ದಾಗ ಕಾನೂನು ಹೋರಾಟದ ಮೂಲಕ ಇವರನ್ನೆಲ್ಲ ಜೈಲಿಗಟ್ಟಿದ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿದ ಇದೇ ಧಾರವಾಡದ ಎಸ್.ಆರ್.ಹಿರೇಮಠರನ್ನು ಸಾಹಿತ್ಯಲೋಕದ ಎಷ್ಟು ಜನ ಬೆಂಬಲಿಸಿದ್ದೇವೆ? ಚಳವಳಿಗಳಿಗೆ ಪೂರಕವಾಗಿ ಎಷ್ಟು ಸಾಹಿತ್ಯ ರಚಿಸಿದ್ದೇವೆ? ಹೋರಾಟಗಾರರು ನಮ್ಮ ಬೆಂಬಲ ಕೇಳಿದಾಗ ಎಷ್ಟರಮಟ್ಟಿಗೆ ಸ್ಪಂದಿಸಿದ್ದೇವೆ?

ಸರ್ಕಾರಿ ಹುದ್ದೆಯಲ್ಲಿರುವ ಸಾಹಿತಿಗಳು ಆ ಕಾರಣಕ್ಕೆ ನೇರವಾಗಿ ಚಳುವಳಿಗಲ್ಲಿ ಭಾಗವಹಿಸಲಾಗದೆಂದು ನೀಡುವ ಕಾರಣ ಹುರುಳಿಲ್ಲದ್ದು. ಹೀಗಿದ್ದರೂ ಪರೋಕ್ಷವಾಗಿ ಚಳುವಳಿಗಳಲ್ಲಿ ಭಾಗವಹಿಸಲು ಸಾಧ್ಯವಿದೆ. ಬ್ರಿಟೀಷ್ ಸರ್ಕಾರದ ವಿರುದ್ಧ ನಾಟಕಗಳನ್ನು ಮಾಡುತ್ತ ಸ್ವಾತಂತ್ರ್ಯ ಚಳುವಳಿಗೆ ಪೂರಕವಾಗಿ ಕೆಲಸ ಮಾಡುತ್ತಿದ್ದ ಕನ್ನಡ ಮತ್ತು ಮರಾಠಿ ರಂಗಭೂಮಿಯ ಕಲಾವಿದರು ಸರ್ಕಾರ ಇಂತಹ ನಾಟಕಗಳನ್ನು ನಿಷೇಧಿಸಿದಾಗ ಪುರಾಣದ ಘಟನೆಗಳನ್ನು ನೆಪವಾಗಿರಿಸಿಕೊಂಡು ಚಳುವಳಿಗೆ ಪ್ರೇರಕವಾದ ನಾಟಕಗಳನ್ನಾಡುತ್ತಿದ್ದುದನ್ನು ಇತ್ತೀಚೆಗೆ ಬಿಡುಗಡೆಗೊಂಡ karnataki“ಅಮೀರ್ ಬಾಯಿ ಕರ್ನಾಟಕಿ” ಕೃತಿ ಹೃದಯಂಗಮವಾಗಿ ಚಿತ್ರಿಸುತ್ತದೆ. ಪ್ರಭುತ್ವವನ್ನು ಜಾಣತನದಿಂದ ಮರೆಮಾಚಿ ಹೋರಾಟಕ್ಕೆ ಬೆಂಬಲಿಸುವ ಇಂತಹ ದಾರಿಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಇದೂ ಸಾಧ್ಯವಾಗದಿದ್ದರೆ ಕನಿಷ್ಟ ಹೋರಾಟಗಳಿಗೆ ಆರ್ಥಿಕ ನೆರವನ್ನಂತೂ ನೀಡಲು ಸಾಧ್ಯವಿದೆ. ಆದರೆ ವೈಯುಕ್ತಿಕವಾಗಿ ಉತ್ತಮ ಆದಾಯ ತರುವ ನೌಕರಿಗಳಲ್ಲಿರುವ ಸಾಹಿತಿಗಳು ಹೋರಾಟಗಳಿಗೆ ಎಷ್ಟರಮಟ್ಟಿನ ಹಣಕಾಸಿನ ಸಹಕಾರವನ್ನು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಉತ್ತರ ನಿರಾಶಾದಾಯಕವಾಗಿದೆ.

ನಾವು ಇಲ್ಲಿ ಏಕೆ ಸೇರುತ್ತಿದ್ದೇವೆ? ಸಾಹಿತ್ಯ ಜನರಿಂದ ದೂರ ಹೋಗುತ್ತಿದೆ ಅಥವಾ ಸಾಹಿತ್ಯ ಕ್ಷೇತ್ರವನ್ನು ಕಾರ್ಪೋರೆಟ್ ವಲಯ ಕಬ್ಜಾ ಮಾಡಿಕೊಳ್ಳುತ್ತಿದೆ, ಇದನ್ನು ತಪ್ಪಿಸಿ ಜನರತ್ತ ಸಾಹಿತ್ಯವನ್ನು ಕೊಂಡೋಯ್ಯಬೇಕು ಎಂಬ ಉದ್ದೇಶದಿಂದ ತಾನೇ? ಆದರೆ ಇಂತಹ ಕಾಳಜಿಯ ಬಗ್ಗೆ ನೈಜ ಪ್ರಾಮಾಣಿಕತೆ ನಮ್ಮೆಲ್ಲರಲ್ಲೂ ಇದೆಯೇ?

ನಾವು ನಮ್ಮ ಬೆನ್ನು ತಿರುಗಿಸಿ ನೋಡಿದಾಗ ಹಿಂದೆಯೂ ಆ ಕಾಲಘಟ್ಟದ ಒಟ್ಟಾರೆ ಇಂತಹುದೇ ಉದ್ದೇಶಗಳಿಗಾಗಿಯೇ ಹುಟ್ಟಿದ ಬಂಡಾಯ ಸಾಹಿತ್ಯ ಸಂಘಟನೆ ಹಾಗೂ ಜಾಗೃತ ಸಾಹಿತ್ಯ ಸಮಾವೇಶದೊಳಗೆ ಸೇರಿದವರು ಏನೇನಾದರು? ಸಾಮುದಾಯಿಕವಾಗಿ ಈ ಸಂಘಟನೆಗಳು ಆ ಕಾಲಘಟ್ಟದ ತುರ್ತಿಗೆ ಸ್ಮಂದಿಸಿದ್ದನ್ನು ಮರೆಯಲಾಗುವುದಿಲ್ಲ. ಆದರೆ ಈ ಸಮ್ಮೇಳನಗಳಲ್ಲಿ ಒಟ್ಟಾದವರು ಎಷ್ಟು ಜನ ತಮ್ಮ ವಿಚಾರಗಳಿಗೆ ಬದ್ಧರಾಗಿ ಉಳಿದಿದ್ದಾರೆ? ಕೆಲವರು ಅಧಿಕಾರ ಸ್ಥಾನಗಳಿಗಾಗಿ ರಾಜಕಾರಣಿಗಳನ್ನೂ ಮೀರಿಸುವ ಕೆಲಸಗಳಲ್ಲಿ ತೊಡಗಿದರು. ಸಾಹಿತ್ಯ ಸಮ್ಮೇಳನಗಳಲ್ಲಿ ಮೆರವಣಿಗೆ ವಿರೋಧಿಸಿದ್ದ ದೊಡ್ಡ ಸಾಹಿತಿಗಳು ತಾವು ಅಧ್ಯಕ್ಷರಾದಾಗ ಮುತ್ತೈದೆಯರ ಪೂರ್ಣಕುಂಭದೊಂದಿಗೆ ಮೆರವಣಿಗೆಯಲ್ಲಿ ಸಾಗಿದರು. ಇನ್ನೊಬ್ಬರು ನಾಲ್ಕು ಜನ ಹೊರುವ ಪಲ್ಲಕ್ಕಿಯಲ್ಲಿ ಕುಳಿತು ಸಂಭ್ರಮಿಸಿದರು. ನಾಳೆ ನಾವುಗಳು ಕೂಡ ಇಲ್ಲಿ ಮಾಡುವ ಭಾಷಣಗಳ ವಿರುದ್ಧ ಹೋದರೂ ನನಗೆ ಅಚ್ಚರಿಯಿಲ್ಲ. ಯಾಕೆಂದರೆ ನಾವೆಲ್ಲಾ ಈ ಆಕಾಂಕ್ಷೆಗಳಿಂದ ದೂರವಾಗಿ ನಮ್ಮನ್ನು ನಾವೇ ಮೀರಿಬಿಟ್ಟಿದ್ದೇವೆ ಎಂದು ಹೇಳಿಕೊಳ್ಳಲು ಸಾಕ್ಷಿಗಳೆಲ್ಲಿದೆ?

ಈ ಐಡೆಂಟಿಟಿ ಕ್ರೈಸಿಸ್ ಎಲ್ಲರ ಸಮಸ್ಯೆ. ಬಹುಶಃ ನಮ್ಮಲ್ಲಿ ಒಂದಷ್ಟು ಜನ ಪ್ರಶಸ್ತಿ, ಸನ್ಮಾನ, ಬೇರೆ ವೇದಿಕೆಗಳಲ್ಲಿ ಸ್ಥಾನಮಾನಗಳು ದೊರಕಿದ್ದರೆ ಇಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ ಎನಿಸುತ್ತದೆ. ಅದನ್ನು ಇನ್ನಷ್ಟು ವಿವರವಾಗಿ ಹೇಳಬಯಸುತ್ತೇನೆ.

ಇಂದು ಪತ್ರಿಕೆಗಳು ಬಂಡವಾಳಶಾಹಿಗಳ ಕೈಯಲ್ಲಿವೆ. ಇವು ಜನಪರ ಪತ್ರಿಕೆಗಳು, ಇವು ಜನವಿರೋಧಿ ಪತ್ರಿಕೆಗಳು ಎಂದು ಸರಳವಾಗಿ ವಿಂಗಡಿಸಲಾಗದಂತೆ ಇವುಗಳ ಸ್ವರೂಪವಿದೆ. ಇಲ್ಲಿ ಎಲ್ಲಿ ತಾನು ಬರೆಯಬೇಕು ಎನ್ನುವುದನ್ನು ನಿರ್ಧರಿಸಿಕೊಳ್ಳಲಾಗದಷ್ಟು ನಾವಿಂದು ಅಸಹಾಯಕರಿದ್ದೀವಿ. ಆದರೆ ಪ್ರಚ್ಚನ್ನ ಕೋಮುವಾದಿಯಾಗಿರುವ ಪತ್ರಿಕೆಗಳಲ್ಲಿ ನಾವೇಕೆ ಕಾಣಿಸಿಕೊಳ್ಳುತ್ತಿದ್ದೇವೆ? ಯಥಾಸ್ಥಿತಿವಾದಿಗಳಾದ ಮಠಗಳು, ಕರಾವಳಿಯಲ್ಲಿ ರಾಕ್ಷಸನಂತೆ ಬೆಳೆದ ಹಿಂದೂ ಕೋಮುವಾದ ಮತ್ತು ಅದಕ್ಕೆ ಪ್ರತಿಕ್ರಿಯೆಯಾಗಿ ಸಣ್ಣ ಪ್ರಮಾಣದಲ್ಲಿ ಮೂಡಿದ ಮುಸ್ಲಿಂ ಮೂಲಭೂತವಾದಕ್ಕೆ ಮೂಲವಾದವರು ನಡೆಸುವ ಸಾಹಿತ್ಯ ಸಮ್ಮೇಳನಗಳಲ್ಲಿ ಸಂಭ್ರಮದಿಂದ ಭಾಗವಹಿಸಲು ನಮಗೆ ಹೇಗೆ ಸಾಧ್ಯವಾಗುತ್ತದೆ?

ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದು, ಸಮಾರಂಭಗಳಲ್ಲಿ ಸನ್ಮಾನಿಸಿಕೊಳ್ಳುವುದು ಬಹುಶಃ ಎಲ್ಲರಲ್ಲಿಯೂ ಇರುವ ದೌರ್ಬಲ್ಯವಿರಬೇಕು.

ಮೊಗೇರಿ ಗೋಪಾಲ ಕೃಷ್ಣ ಅಡಿಗ

ಮೊಗೇರಿ ಗೋಪಾಲ ಕೃಷ್ಣ ಅಡಿಗ

ಜಾಗೃತ ಸಾಹಿತ್ಯ ಸಮ್ಮೇಳನದಲ್ಲಿ ’ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಕ್ಕೆ ನನಗೆ ನಾಚಿಕೆಯಾಗುತ್ತಿದೆ, ಅದನ್ನು ಬೇಕಾದರೆ ವಾಪಸು ಕೊಡುತ್ತೇನೆ’ ಎಂದಿದ್ದ ಗೊಪಾಲಕೃಷ್ಣ ಅಡಿಗರು ಇನ್ನೊಂದು ಪ್ರಶಸ್ತಿ ಬಂದಾಗ ಖುಷಿಯಿಂದ ಪಡೆದಿದ್ದರು. ಇದನ್ನು ಪ್ರಶ್ನಿಸಿದರೆ ‘ನಾನೂ ಮನುಷ್ಯನೇ ಅಲ್ಲವೆ’ ಎಂದು ಸಣ್ಣದನಿಯಲ್ಲಿ ಸಮರ್ಥಿಸಿಕೊಂಡಿದ್ದರು. ಇದನ್ನು ಮೀರದೆ ನಮಗೆ ಗತ್ಯಂತರವಿಲ್ಲ. ನಾವು ಪ್ರಕಟವಾಗುವ ಮತ್ತು ನಾವು ಮಾತನಾಡಲು ನಿಲ್ಲುವ ಜಾಗದ ಬಗ್ಗೆ ನಾವು ಖಚಿತವಾಗಿರದಿದ್ದರೆ ನಾವಾಡುವ ಮಾತೂ ವಿಶ್ವಾಸಾರ್ಹತೆ ಪಡೆಯುವುದಿಲ್ಲ.

ಇನ್ನೊಂದು ನಮ್ಮನ್ನು ಇನ್ನೂ ನಿಯಂತ್ರಿಸುತ್ತಿರುವ ಜಾತಿಪ್ರಜ್ಞೆ. ನಿಜವಾಗಿಯೂ ನಾವು ಜಾತ್ಯಾತೀತರಾಗಿದ್ದೇವೆಯೇ ಅಥವಾ ಹೊರನೋಟಕ್ಕೆ ಹಾಗೆ ನಟಿಸುತ್ತಿದ್ದೇವೆಯೇ ಎಂಬ ಅನುಮಾನ ಬರುತ್ತಿದೆ.

ಇನ್ನು ನಮ್ಮನ್ನು ಆವರಿಸಿರುವ ‘ದಾಹ’.

ಒಂದು ಘಟನೆ ನೆನಪಾಗುತ್ತಿದೆ. ಶಿವಮೊಗ್ಗದಲ್ಲಿ ಹಲವು ಕಾಲ ನೆಲೆಸಿದ್ದ ಸಾಹಿತಿಗಳೊಬ್ಬರು ಯಾವುದೋ ಕಾರಣಕ್ಕೆ ಬೇರೆ ಜಿಲ್ಲೆಗೆ ಹೋಗಿ ನೆಲೆಸಿದರು. ಅವರು ಇಲ್ಲಿಂದ ಹೋಗಿ ಅನೇಕ ವರ್ಷಗಳಾದ ನಂತರದ ಈ ಕಾಲದಲ್ಲಿ ಶಿವಮೊಗ್ಗದಲ್ಲಿ ತಲೆ ತಿರುಗಿಸುವಂತಹ ಬದಲಾವಣೆಗಳಾಗಿವೆ. ಭೂದಾಹದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಿಂದಾಗಿ ಹತ್ತು ಸಾವಿರವಿದ್ದ ಕನಿಷ್ಟ ಅಳತೆಯ ನಿವೇಶನದ ಬೆಲೆ ಹದಿನೈದು-ಇಪ್ಪತ್ತು ಲಕ್ಷಕ್ಕೇರಿದೆ. ಸಾಮಾನ್ಯರಿರಲಿ, ಮೇಲ್ಮಧ್ಯಮ ವರ್ಗದವರೂ ನಿವೇಶನದ ಕನಸು ಕಾಣದಂತಾಗಿದೆ. ಕಡಿಮೆ ದರದಲ್ಲಿ ಸಿಗುವ ನಗರಸಭೆಯ ನಿವೇಶನಕ್ಕೆ ಅನೇಕ ವರ್ಷ ಕಾಯಬೇಕಾಗಿದೆ. ಅದೂ ಸಿಗುತ್ತದೆಂಬ ಗ್ಯಾರಂಟಿಯಿಲ್ಲ. ಈ ಸಮಯದಲ್ಲಿಯೇ ಸಾಹಿತಿಗಳಿಗೆ ಹದಿನೈದು ವರ್ಷದ ಹಿಂದೆ ತಾವು ಶಿವಮೊಗ್ಗದಲ್ಲಿದ್ದಾಗ ಅಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಕ್ಕೆ ಅರ್ಜಿ ಹಾಕಿದ್ದು ನೆನಪಾಗಿದೆ. ಸೀನಿಯಾರಿಟಿ ಬೇರೆ ಇದ್ದುದರಿಂದ ಅವರು ಅರ್ಜಿ ಹಾಕಿದ್ದಾರೆ. ಅವರಿಗದು ಸಿಕ್ಕಿದೆ ಕೂಡ. ಆದರೆ ಅವರಿಗೆ ಅವರು ನೆಲೆನಿಂತ ಊರಲ್ಲಿಯೇ ಸ್ವಂತ ಮನೆಯಿದೆ. ಮಕ್ಕಳು ಇವರಿಗೆ ಪ್ರೀತಿಯಿಂದ ಇನ್ನೊಂದು ನಿವೇಶನವನ್ನು ಕೊಂಡುಕೊಟ್ಟಿದ್ದಾರೆ. ಶಿವಮೊಗ್ಗದ ನಿವೇಶನದಲ್ಲೇನೂ ಮನೆ ಕಟ್ಟುವುದಿಲ್ಲ. ಇದನ್ನರಿತು ಇನ್ನೂ ನಿವೇಶನ ಇರದ ಬಾಡಿಗೆ ಮನೆಯಿಲ್ಲಿರುವ shimoga-udaಅವರ ಪರಿಚಿತರೊಬ್ಬರು ಅವರನ್ನು ನೀವೀಗ ಮಂಜೂರಾದ ನಿವೇಶನವನ್ನು ಮಾರುತ್ತೀರಾ ಎಂದು ಕೇಳಿದ್ದಾರೆ. ಹೌದು ಎನ್ನುವ ಉತ್ತರ ಬಂದಿದೆ. ಉತ್ಸಾಹಗೊಂಡ ಇವರು ಬೆಲೆ ಕೇಳಿದ್ದಾರೆ. ಅವರು ಹೇಳಿದ ಬೆಲೆ ಕೇಳಿ ಇವರು ಭೂಮಿಗಿಳಿದು ಹೋಗಿದ್ದಾರೆ. ಆದರೆ ಸಾಹಿತಿಗಳೇನೂ ಇಲ್ಲದ ಬೆಲೆ ಹೇಳಿರಲಿಲ್ಲ. ಆ ನಿವೇಶನದ ಈಗಿನ ಮಾರುಕಟ್ಟೆ ದರ ಇಪ್ಪತ್ತೈದು ಲಕ್ಷ. ಅಷ್ಟನ್ನೇ ಅವರು ಹೇಳಿದ್ದು. ಅವರು ಆ ನಿವೇಶನ ಕೊಳ್ಳಲು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಕೊಟ್ಟ ಹಣ ಮೂರು ಲಕ್ಷ ಮಾತ್ರವಾಗಿತ್ತು.!

ಈ ದಾಹಕ್ಕೆ ಏನೆನ್ನುವುದು? ಇಂತಹ ದಾಹವೇ ನಮ್ಮನ್ನು ಜನರತ್ತ ಹೋಗದಿರುವಂತೆ ತಡೆದಿರುವುದು. ಜಾಗತೀಕರಣದ ಪರಿಣಾಮವಾದ ಈ ಮೇರೆಯಿಲ್ಲದ ದಾಹವೇ ಎಲ್ಲರಂತೆ ನಮ್ಮನ್ನೂ ಕೆಟ್ಟ ಲೋಭಿಗಳನ್ನಾಗಿ ಮಾಡಿದೆ. ಇಂತಹ ದಾಹಗಳನ್ನು ಮೀರದಿದ್ದರೆ ನಾವು ಈ ಸಮಾವೇಶದಲ್ಲಿ ಮಾತನಾಡುವುದೆಲ್ಲ ಹಾಸ್ಯಗೋಷ್ಟಿಯ ರಂಜನೆಯ ಮಾತಾಗುತ್ತದೆ.

ಇಷ್ಟೆಲ್ಲಾ ಒಂದು ರೀತಿಯ ಉಪದೇಶಾತ್ಮಕವಾಗಿ ಹೇಳಿದ ನಾನೂ ಈ ತಲೆಮಾರಿನ ಸಾಹಿತಿಗಳು ಮೀರಬೇಕಾದ ಈವರೆಗೆ ಹೇಳಿದ ಮಿತಿಗಳನ್ನು ಹೊಂದಿರಬಹುದು. ಕಡು ಆತ್ಮವಿಮರ್ಶೆಯಲ್ಲಿ ಧ್ಯಾನಿಸದಿದ್ದರೆ, ಎಲ್ಲರಂತೆ ನಮ್ಮನ್ನೂ ಆವರಿಸಿರುವ ‘ದಾಹ’ವನ್ನು ನೀಗಿಕೊಳ್ಳದಿದ್ದರೆ, ನಮ್ಮ ಆಳದಲ್ಲಿರಬಹುದಾದ ಜಾತಿಕುರುಹುಗಳನ್ನು ಮೀರದಿದ್ದರೆ, ನಾಡನ್ನು ಬಾಧಿಸುತ್ತಿರುವ ಸಂಕಟಗಳ ನಿವಾರಣೆಯ ಹೋರಾಟಗಳಿಗೆ ಕೈಜೋಡಿಸದಿದ್ದರೆ, ಪ್ರಶಸ್ತಿ ಸನ್ಮಾನಗಳ ಗುಂಗಿನಿಂದ ಹೊರಬರದಿದ್ದರೆ, ನಮ್ಮಿಂದ ನಮ್ಮ ಜನಕ್ಕೆ ಏನೂ ದಕ್ಕುವುದಿಲ್ಲ. ಮಾತ್ರವಲ್ಲ ನಮ್ಮಿಂದ ಒಳ್ಳೆಯ ಸಾಹಿತ್ಯ ನಿರ್ಮಾಣವೂ ಸಾಧ್ಯವಾಗುವುದಿಲ್ಲ.

4 thoughts on “ಸುಡುಹಗಲ ಸೊಲ್ಲು : ಜನಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ

  1. ಪ್ರೇಮಶೇಖರ

    ಚಿಂತನಾರ್ಹ ಮಾತುಗಳು. ಬಹುತೇಕ ಸಾಹಿತಿಗಳಲ್ಲಿ ಹೋರಾಟಗಳ ಬಗ್ಗೆ, ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಶ್ವಾಸಾರ್ಹ ಕಾಳಜಿ ಇಲ್ಲದಿರುವುದಕ್ಕೆ ಮುಖ್ಯ ಕಾರಣ ಬೇರೇನೇನನ್ನೋ ಗಳಿಸಿಕೊಳ್ಳುವುದಕ್ಕೆ ಸಾಹಿತ್ಯ ಒಂದು ಮಾರ್ಗ ಎಂದವರು ನಂಬಿರುವುದು ಎಂದು ನನಗನಿಸುತ್ತದೆ. ಒಂದಷ್ಟು ಬರೆಯುವುದರಿಂದ ಮತ್ತು ಅದನ್ನು ಉಪಯೋಗಿಸಿಕೊಂಡು ಅಸಾಹಿತ್ಯಕ ಮಾರ್ಗಗಳಿಂದ, ಪ್ರಶಸ್ತಿ, ಸನ್ಮಾನ, ಹಣ, ಪದವಿಗಳನ್ನು ಗಳಿಸಬಹುದೆಂಬುದನ್ನು (ಹಾಗೆ ಮಾಡಿರುವ ಮತ್ತು ಮಾಡುತ್ತಿರುವ) ಕೆಲವು ಸಾಹಿತ್ಯ ದಿಗ್ಗಜಗಳಿಂದ ಅವರು ಅರಿತಿದ್ದಾರೆ. ಹೀಗಾಗಿಯೇ ಅವರು ನೀವು ಉದಾರಹರಿಸಿದಂತಹ ಆ ಅಯೋಗ್ಯ ರೈತನಾಯಕನಂತೆಯೇ ಅಗಿಹೋಗಿದ್ದಾರೆ. ದುರಂತವೆಂದರೆ ಅಂತಹವರನ್ನೇ ಒಳ್ಳೆಯ ಸಾಹಿತಿಗಳೆಂದು ಒಪ್ಪಿಕೊಳ್ಳುವ, ಸಮರ್ಥಿಸುವ, ಪುರಸ್ಕರಿಸುವ ಪ್ರಕ್ರಿಯೆಯೊಂದು ಸಾಹಿತ್ಯವಲಯದಲ್ಲೀಗ ಭರದಲ್ಲಿ ನಡೆಯುತ್ತಿದೆ.

    Reply
  2. prasad raxidi

    ಭ್ರಷ್ಟಾಚಾರದ ವಿರುದ್ಧ ನಾವೆಲ್ಲ ಹೋರಾಡುತ್ತೇವೆಂದು ಹೊರಟಾಗ ನಮ್ಮೂರಿನ ಹಿರಿಯರು ಹೇಳಿದ ಮಾತು ಸಾರ್ವತ್ರಿಕ ಸತ್ಯ “ನೀವೇನೂ ಮಾಡಬೇಡಿ ನಿಮ್ಮ ನಿಮ್ಮಲ್ಲೇ “ನಡೆ ಮತ್ತು ನುಡಿ” ಯ ಅಂತರ ಕಡಿಮೆ ಕಡಿಮೆ ಮಾಡಿಕೊಳ್ಳಿ…ಸಾಕು ಭ್ರಷ್ಟಾಚಾರ ನಿವಾರಣೆ ಯಾಗುತ್ತದೆ…!

    Reply
  3. Ivan

    ನೂರಕ್ಕೆ ನೂರು ಸತ್ಯವಾದ ಮಾತು ‘ನಮ್ಮ ನಮ್ಮಲ್ಲೇ ನಡೆ ಮತ್ತು ನುಡಿಯ’ ಅಂತರ ಕಡಿಮೆ ಮಾಡಿದರೆ ಬಹಳಷ್ಟು ಭ್ರಷ್ಟಾಚಾರ ಕಡಿಮೆಯಾಗುತ್ತದೆ.

    Reply
  4. suma embar

    Araliya chiguru thampagide.
    Arali marada kattegaluliyali ,
    Alli jeeva jeevagala odaluri tanidu
    ullaasada sallaapadalli
    pada pada kuudali.

    Reply

Leave a Reply

Your email address will not be published. Required fields are marked *