ನಿಮ್ಮ ಮನೆ ಬಾಗಿಲಿಗೆ ಬರುವವರನ್ನು ನೋಡಿ


– ಚಿದಂಬರ ಬೈಕಂಪಾಡಿ


 

ಕರ್ನಾಟಕದ ವಿಧಾನಸಭೆಯ 224 ಸ್ಥಾನಗಳಿಗೆ ಮೇ 5 ರಂದು ನಡೆಯುವ ಚುನಾವಣೆಯಲ್ಲಿ ಮತದಾರ ಪ್ರಭುಗಳು ಆಯ್ಕೆ ಮಾಡಬೇಕಾಗಿದೆ. ತಮಗೆ ಬೇಕಾದವರನ್ನು, ತಮ್ಮ ಉದ್ಧಾರ ಮಾಡುವವರನ್ನು ಹೆಕ್ಕಿ ತೆಗೆದು ವಿಧಾನಸೌಧಕ್ಕೆ ಕಳುಹಿಸಬೇಕಾಗಿದೆ. ಇದು ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಸಾಮಾನ್ಯ ಆಯ್ಕೆ ಪ್ರಕ್ರಿಯೆ. ನಮ್ಮನ್ನು ಯಾರು ಆಳಬೇಕು ಎನ್ನುವುದನ್ನು ನಾವೇ ನಿರ್ಧರಿಸುವಂಥ ಸದವಕಾಶ. ನಮ್ಮ ಮನೆ ಮುಂದೆ ಬಂದು ನಿಲ್ಲುವ, ಮತ ಹಾಕಿರೆಂದು ಕೈಮುಗಿದು ದೈನ್ಯತೆಯಿಂದ ಕೇಳುವ ಆ ಮುಖವನ್ನು ನಾವೂ-ನೀವು ಎಷ್ಟು ಬಾರಿ ಕಂಡಿದ್ದೇವೆ? ಆ ವ್ಯಕ್ತಿಯಿಂದ ಸಮಾಜಕ್ಕೆ ಎಷ್ಟು ಒಳಿತಾಗಿದೆ? ಸಮಾಜದಿಂದ ಆ ವ್ಯಕ್ತಿಗೆಷ್ಟು ಲಾಭವಾಗಿದೆ? ಆ ವ್ಯಕ್ತಿಯ ಜೊತೆಗೆ ಮತ ಯಾಚಿಸಲು ಬಂದವರು ಯಾವ ವ್ಯಕ್ತಿತ್ವ ಹೊಂದಿದವರು? ಮತಹಾಕಿ ಆರಿಸಿ ಕಳುಹಿಸಿದ ಮೇಲೆ ಅವರನ್ನು ನೋಡಲು, ಅವರಿಂದ ನಮ್ಮ ಕೆಲಸ ಮಾಡಿಸಿಕೊಳ್ಳಲು ಸುಲಭವೇ? ಕೆಲಸ ಮಾಡಿಕೊಡಬಲ್ಲರೇ? ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡರೆ ಆಯ್ಕೆ ಮಾಡುವುದು ಸುಲಭವಾಗುತ್ತದೆ. ಯಾಕೆಂದರೆ ನಿಮ್ಮ ಮುಂದೆ ಹಲವು ಮಂದಿ ಇರುತ್ತಾರೆ. ಪಕ್ಷದ ಹಿನ್ನೆಲೆ, ಮನೆತನದ ಪೂರ್ವಇತಿಹಾಸ, ಅವರ ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ, election_countingಕಾರ್ಯಕ್ಷಮತೆ ಇತ್ಯಾದಿಗಳೆಲ್ಲವನ್ನೂ ಅಳೆದು ತೂಗಿ ಆಯ್ಕೆ ಮಾಡಬೇಕೇ, ಬೇಡವೇ ಎನ್ನುವ ನಿರ್ಧಾರಕ್ಕೆ ಬರಲು ಅವಕಾಶವಿದೆ.

ಹಿಂದಿನ ಚುನಾವಣೆಯಲ್ಲಿ ಹೀಗೆಯೇ ಮನೆ ಬಾಗಿಲಿಗೆ ಬಂದು ಮತಯಾಚನೆ ಮಾಡಿ ನಿಮ್ಮ ಮತ ಪಡೆದು ಆಯ್ಕೆಯಾದ ಮೇಲೆ ಮಾಡಿದ್ದೇನು? ಸಮಾಜಕ್ಕೆ ಕೊಟ್ಟ ಕೊಡುಗೆಯೇನು? ಮತ್ತೆ ಕಣಕ್ಕಿಳಿದಿರುವ ಈ ವ್ಯಕ್ತಿಗೆ ಮತ್ತೆ ವಿಧಾನ ಸೌಧದ ಮೆಟ್ಟಿಲೇರಲು ಅವಕಾಶ ಮಾಡಿಕೊಡಬೇಕೇ? ಎನ್ನುವುದನ್ನು ನಿರ್ಧರಿಸುವವರು ನೀವೇ ಆಗಿರುತ್ತೀರಿ. ಇಷ್ಟೆಲ್ಲಾ ಅಂಶಗಳನ್ನು ವಿಚಾರ ವಿಮರ್ಶೆ ಮಾಡಿ ಮತದಾರ ಮತ ಹಾಕುತ್ತಿದ್ದಾನೆಯೇ? ಇಂಥ ಅಳೆದು, ತೂಗಿ ಆಯ್ಕೆ ಮಾಡಲು ಅವಕಾಶವಾಗಿದೆಯೇ? ಎನ್ನುವ ಪ್ರಶ್ನೆಗಳನ್ನು ಕೇಳಿದರೆ ಭ್ರಷ್ಟರು, ಅಪ್ರಾಮಾಣಿಕರು ಸಾಲುಗಟ್ಟಿ ಜೈಲು ಸೇರುತ್ತಿರುವವರು ನಮ್ಮವರೇ ಅಲ್ಲವೇ? ನಾವೇ ಆರಿಸಿ ಕಳುಹಿಸಿದವರಲ್ಲವೇ? ಎನ್ನುವ ಉತ್ತರ ಸುಲಭವಾಗಿ ಸಿಗುತ್ತದೆ.

ರಾಜಕಾರಣ ಭ್ರಷ್ಟವಾಗಿದೆ ಎನ್ನುವ ಮಾತಿನ ಹಿಂದಿರುವ ಸತ್ಯ ವ್ಯಕ್ತಿ ಭ್ರಷ್ಟನಾಗಿದ್ದಾನೆ ಎನ್ನುವುದು. ಭ್ರಷ್ಟಾಚಾರದ ಬಗ್ಗೆ ವಾಹಿನಿಗಳಲ್ಲಿ ಕುಳಿತು ಮಾತನಾಡುವವರು ಭ್ರಷ್ಟಾಚಾರ ಎನ್ನುವುದನ್ನು ರಾಜಕಾರಣದ ಅವಿಭಾಜ್ಯ ಅಂಗ ಎನ್ನುವಂತೆ ಮಾತನಾಡುತ್ತಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಆದರೆ ಭ್ರಷ್ಟಾಚಾರ ಮಾಡಿದವನೇ ಮಾತನಾಡುವುದಕ್ಕೆ ನೈತಿಕತೆಯಾದರೂ ಎಲ್ಲಿದೆ? ಭ್ರಷ್ಟಾಚಾರ ತಾನಾಗಿಯೇ ಹುಟ್ಟಿಕೊಂಡದ್ದಲ್ಲ, ವ್ಯಕ್ತಿಯಿಂದ ಹುಟ್ಟು ಪಡೆದುಕೊಂಡಿದೆ, ಆದ್ದರಿಂದ ಭ್ರಷ್ಟಾಚಾರ ಹುಟ್ಟು ಹಾಕಿದ ವ್ಯಕ್ತಿಯೇ ಭ್ರಷ್ಟ ಹೊರತು ರಾಜಕಾರಣವಲ್ಲ. ರಾಜಕಾರಣಿ ಪ್ರಾಮಾಣಿಕನಾಗಿದ್ದರೂ ಅವನೂ ಆ ವ್ಯವಸ್ಥೆಯ ಭಾಗವಾಗಿ ಹೋಗುತ್ತಿರುವುದು ದುರಂತ. ಆದ್ದರಿಂದಲೇ ನಿಮ್ಮ ಮತಯಾಚನೆಗೆ ಬರುವವರು ರಾಜಕಾರಣದಲ್ಲಿ ಶುದ್ಧ ಹಸ್ತರಾಗಿದ್ದರೂ ಆ ವ್ಯವಸ್ಥೆಯನ್ನು ಸೇರಿದ ಮೇಲೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಭ್ರಷ್ಟರಾಗುತ್ತಿದ್ದಾರೆ. ಇದಕ್ಕೆ ಒಂದು ಪಕ್ಷ ಮಾತ್ರ ಸೀಮಿತವಲ್ಲ, ಎಲ್ಲಾ ರಾಜಕೀಯ ಪಕ್ಷಗಳು ಕೂಡಾ ಎದುರಾಳಿಯನ್ನು ಮಣಿಸಲು ಅದೇ ತಂತ್ರ ಅನುಸರಿಸುತ್ತವೆ, ಅವುಗಳಿಗೆ ಅದು ಅನಿವಾರ್ಯವಾಗಿದೆ. ಇಂಥ ಅನಿವಾರ್ಯತೆ ಮತದಾರನಿಗೆ ಇರಬೇಕೇ? ಯಾಕೆ ತಾವು ಆಯ್ಕೆ ಮಾಡುವ ವ್ಯಕ್ತಿಯನ್ನು ಇಂಥ ಅನಿವಾರ್ಯತೆಯ ಒತ್ತಡಕ್ಕೆ ಒಳಗಾಗಿ ಆಯ್ಕೆ ಮಾಡಬೇಕು?

ಭ್ರಷ್ಟರನ್ನು ಆಯ್ಕೆ ಮಾಡಲೇ ಬೇಕು ಎನ್ನುವ ಅನಿವಾರ್ಯತೆ ಮತದಾರನಿಗೆ ಖಂಡಿತಕ್ಕೂ ಇಲ್ಲ. ಆದರೆ ಅಂಥ ಪ್ರಬುದ್ಧತೆ ಮತದಾರನಿಗೆ ಬಂದಿಲ್ಲ. ಅಣ್ಣಾ ಹಜಾರೆ ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ. ಯಾಕೆಂದರೆ ಅವರು ರಾಜಕೀಯ ಪಕ್ಷ ಸ್ಥಾಪಿಸಿದರೆ ಚುನಾವಣೆ ಎದುರಿಸಲು ಬಂಡವಾಳ ಹೊಂದಿಸಿಕೊಳ್ಳಬೇಕು. ಬಂಡವಾಳವಿಲ್ಲದಿದ್ದರೆ ಅವರು ಸ್ಪರ್ಧೆಗೆ ಇಟ್ಟ ಠೇವಣಿಯೂ ಸಿಗುವುದಿಲ್ಲ ಎನ್ನುವ ಸತ್ಯ ಅವರಿಗೆ ಚೆನ್ನಾಗಿ ಗೊತ್ತಿದೆ. ಜನರನ್ನು ಮತಗಟ್ಟೆಗೆ ಕರೆತಂದು ಮತ ಹಾಕಿಸಿ ಗೆಲ್ಲುವಂಥ ರಾಜಕಾರಣವೇ ಈಗ ನಡೆಯುತ್ತಿರುವುದು. ಮತದಾರ ತಾನಾಗಿಯೇ ಮತಗಟ್ಟೆಗೆ ಬಂದು ಮತ ಚಲಾಯಿಸುವಂಥ ವ್ಯವಸ್ಥೆ ಖಂಡಿತಕ್ಕೂ ಇದೆ. INDIA-ELECTIONಆದರೆ ಹೀಗೆ ಸ್ವಪ್ರೇರಣೆಯಿಂದ ಮತಚಲಾಯಿಸುವವರ ಸಂಖ್ಯೆ ಶೇ.10 ರಿಂದ 15 ಮಾತ್ರ. ಶೇ. 20 ರಷ್ಟು ಮಂದಿ ಮತದಾನದಿಂದ ದೂರವೇ ಉಳಿಯುತ್ತಾರೆ. ಶೇ.20 ರಷ್ಟು ಮಂದಿ ಜಾತಿ ಹಿನ್ನೆಲೆಯಲ್ಲಿ ಮತ ಚಲಾಯಿಸುತ್ತಾರೆ. ಶೇ.20 ರಷ್ಟು ಮಂದಿ ಅಭ್ಯರ್ಥಿಯ ಹಣಬಲದ ಪ್ರಭಾವಕ್ಕೆ ಒಳಗಾಗುತ್ತಾರೆ. ಶೇ.20 ಮಂದಿ ಹಣ ಮತ್ತು ಪ್ರಭಾವ ಎರಡನ್ನೂ ಅವಲಂಬಿಸಿ ಆಯ್ಕೆ ಮಾಡುತ್ತಾರೆ. ಶೇ.5 ರಷ್ಟು ಮಂದಿ ಅತಂತ್ರರು. ಅವರಿಗೆ ಹಣ ಸಿಗಬಹುದು, ಸಿಗದೆಯೂ ಇರಬಹುದು. ಸಿಕ್ಕಿದರೆ ಖುಷಿ, ಸಿಗದಿದ್ದರೆ ಅಸಹಾಯಕತೆ ಅಷ್ಟೇ.

ಇಂಥ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿರುವಾಗ ಯಾರನ್ನು ದೂಷಿಸಬೇಕು? ಯಾಕೆ ದೂಷಿಸಬೇಕು?

ಅವಕಾಶವಾದಿ ರಾಜಕಾರಣ, ಹಣಬಲದ ರಾಜಕಾರಣ, ಸಾಮಾಜಿಕ ಬದ್ಧತೆಯ ರಾಜಕಾರಣ; ಹೀಗೆ ಮೂರು ಗುಂಪುಗಳನ್ನಾಗಿ ಮಾಡಿದರೆ ಪಾರುಪತ್ಯ ಮೆರೆಯುವುದು ಮೊದಲ ಎರಡು ಗುಂಪೇ ಹೊರತು ಮೂರನೆಯ ಗುಂಪು ಮೂಲೆಗುಂಪಾಗುತ್ತದೆ. ಅಣ್ಣಾ ಹಜಾರೆಯನ್ನು ಮೂರನೇ ಗುಂಪಿಗೆ ನಾಯಕ ಅಂದುಕೊಂಡರೆ ಸಾಮಾಜಿಕ ಬದ್ಧತೆಯ ರಾಜಕಾರಣ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗುತ್ತದೆ. ಈ ಸತ್ಯ ಅಣ್ಣಾನಿಗೂ ಗೊತ್ತು. ರಾಮಲೀಲಾ ಮೈದಾನದಲ್ಲಿ ಲಕ್ಷಾಂತರ ಮಂದಿ ಅಣ್ಣಾನ ಭಾಷಣ ಕೇಳಲು ಬರುತ್ತಾರೆ, ಆದರೆ ಅವರೆಲ್ಲರೂ ಅಣ್ಣಾನ ಬೆನ್ನಿಗೆ ನಿಲ್ಲುವುದಿಲ್ಲ, ನಿಲ್ಲಲು ವ್ಯವಸ್ಥೆ ಬಿಡುವುದಿಲ್ಲ. ಆದ್ದರಿಂದಲೇ ಅಣ್ಣಾ ಜನಜಾಗೃತಿ ಮೂಡಿಸುವ ಅಭಿಯಾನಕ್ಕೆ ಶರಣಾದರು.

ಈ ದೇಶದ ರಾಜಕೀಯ ಇತಿಹಾಸದ ಪುಟಗಳನ್ನು ಅವಲೋಕಿಸಿದರೆ ರೈತಶಕ್ತಿಯ ಮುಂದೆ ಬೇರೆ ಯಾವ ಶಕ್ತಿಯೂ ಮಂಡಿಯೂರಲೇ ಬೇಕು. vote-participate-democracyಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಿದ್ದರೂ ರೈತಶಕ್ತಿಯೇ ಬಲಿಷ್ಠ. ಆದರೆ ರೈತಶಕ್ತಿಯನ್ನು ಮುಷ್ಟಿಯಲ್ಲಿಟ್ಟುಕೊಂಡಿರುವ ಶಕ್ತಿ ಯಾವುದು? ಮಹೇಂದ್ರ ಸಿಂಗ್ ಟಿಕಾಯತ್ ಈ ದೇಶ ಕಂಡ ಸಮರ್ಥ ರೈತ ನಾಯಕ. ಅವರ ಒಂದು ಕರೆಗೆ ರಾಜಧಾನಿ ದೆಹಲಿ ಜನಸಾಗರವಾಗುತ್ತಿತ್ತು, ಸರ್ಕಾರ ನಡುಗುತ್ತಿತ್ತು. ಪ್ರೊ.ನಂಜುಂಡಸ್ವಾಮಿ ಈ ರಾಜ್ಯ ಕಂಡ ಮೇಧಾವಿ, ಚಿಂತಕ, ರೈತ ನಾಯಕ. ವಿಧಾನಸಭೆಯೊಳಗೆ ಅವರು ಮಾತಿಗೆ ನಿಂತರೆ ಕಂಚಿನಕಂಠ ಮೊಳಗುತ್ತಿತ್ತು. ಕೆಂಟುಕಿ ಚಿಕನ್ ವಿರುದ್ಧ ಎರಡು ದಶಕಗಳ ಹಿಂದೇಯೇ ಧ್ವನಿ ಎತ್ತಿದ್ದ ಪ್ರೊಫೆಸರ್ ಈಗ ಇಲ್ಲ, ಆದರೆ ಅವರ ಮಾತುಗಳು ಇಂದಿಗೂ ಪ್ರಸ್ತುತ. ಅವರು ಕಟ್ಟಿ ಬೆಳೆಸಿದ ರೈತ ಸಂಘಟನೆ ಈಗ ಏನಾಗಿದೆ?

ಆದ್ದರಿಂದ ಈ ಚುನಾವಣೆಯ ಕಾಲಘಟ್ಟದಲ್ಲಿ ಜನ ಚಿಂತನೆ ಮಾಡಬೇಕು ಎನ್ನುವುದು ಕಳಕಳಿ ಮಾತ್ರ. ಅದು ಆಗುತ್ತದೆ ಎನ್ನುವ ನಂಬಿಕೆ ಇಡುವಂತಿಲ್ಲ. ಜನ ತಾವಾಗಿಯೇ ಎಚ್ಚೆತ್ತುಕೊಳ್ಳಬೇಕು ಹೊರತು ಅಣ್ಣಾ ಎಚ್ಚೆತ್ತಿಸಬೇಕು ಎನ್ನುವುದು ನಿರೀಕ್ಷೆಯಾಗಬಾರದು. ಬಹಳ ಜನ ಯಾವಾಗ ಮಲಗುವುದು ಎನ್ನುವುದನ್ನೇ ನಿರೀಕ್ಷೆ ಮಾಡುತ್ತಾರೆ ಹೊರತು ನಿದ್ದೆ ಮಾಡಿದ್ದು ಸಾಕು ಬೇಗ ಏಳಬೇಕು ಎನ್ನುವುದನ್ನು ಬಯಸುವುದಿಲ್ಲ. ಈಗ ಜನ ಮಲಗಿದರೆ ರಾಜಕಾರಣಿಗಳು ಅಂಥ ಸಂದರ್ಭವನ್ನೇ ಕಾಯುತ್ತಿರುತ್ತಾರೆ. ಜನ ರಾಜಕಾರಣಿಗಳನ್ನು ಕಾಯುವ ವ್ಯವಸ್ಥೆ ನಿಲ್ಲಬೇಕು, ರಾಜಕಾರಣಿಗಳು ಜನರನ್ನು ಕಾಯುವಂತಾಗಬೇಕು. ಈ ಕಾಯುವಿಕೆ ಚುನಾವಣೆ ಕಾಲದಲ್ಲಿ ಮಾತ್ರವಲ್ಲ, ಚುನಾವಣೆ ನಂತರವೂ.

One thought on “ನಿಮ್ಮ ಮನೆ ಬಾಗಿಲಿಗೆ ಬರುವವರನ್ನು ನೋಡಿ

  1. Ananda Prasad

    ಹಣ, ಹೆಂಡ, ಬೇರೆ ಕೊಡುಗೆಗಳನ್ನು ನೀಡಿ ಮತ ಕೊಳ್ಳಲು ಬರುವವರನ್ನು ಆಧಾರ ಸಹಿತ ಹಿಡಿದು ಪೊಲೀಸರಿಗೆ ಹಾಗೂ ಚುನಾವಣಾ ಆಯೋಗದ ಅಧಿಕಾರಿಗಳಿಗೆ ದೂರು ನೀಡಿ ಅವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳುವ ಜಾಗೃತಿಯನ್ನು ಜನರು ಬೆಳೆಸಿಕೊಂಡಾಗ ಇಂಥ ಅಕ್ರಮ ಹಾಗೂ ದೇಶದ್ರೋಹದ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯ. ಮತದಾರರು ತಮಗೆ ಹಣ ಹಾಗೂ ಕೊಡುಗೆಗಳನ್ನು ನೀಡಲು ಬರುವವರ ಮಾತು ಹಾಗೂ ದೃಶ್ಯಗಳನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಅದನ್ನು ಆಧಾರವಾಗಿ ಬಳಸಿ ಅಂಥವರಿಗೆ ಶಿಕ್ಷೆ ಆಗುವಂತೆ ನೋಡಿಕೊಂಡರೆ ಇಂಥ ನೀಚ ಪ್ರವೃತ್ತಿ ಕಡಿಮೆಯಾಗಬಹುದು. ಅದೇ ರೀತಿ ಮಾಧ್ಯಮದ ಮಂದಿ ರಹಸ್ಯ ಕ್ಯಾಮೆರಾಗಳನ್ನು ಬಳಸಿ ಇಂಥ ಕೆಲಸ ಮಾಡುವ ನೀಚ ದೇಶದ್ರೋಹಿಗಳನ್ನು ಬಯಲಿಗೆ ಎಳೆಯುವ ಕೆಲಸವನ್ನು ಮಾಡಬೇಕಾದ ಅಗತ್ಯ ಇದೆ. ಮಾಧ್ಯಮದವರು ಇಂಥ ಕೆಲಸ ಮಾಡಲು ಮುಂದೆ ಬರದಿದ್ದರೆ ಯಾವುದಾದರೂ ಸಂಘಟನೆಗಳು ರಹಸ್ಯ ಕ್ಯಾಮೆರಾಗಳ ಮೂಲಕ ಇಂಥ ನೀಚ ಕೆಲಸಗಳನ್ನು ದಾಖಲಿಸಿ ಚುನಾವಣಾ ಆಯೋಗ ಹಾಗೂ ಪೊಲೀಸರಿಗೆ ದೂರು ನೀಡುವ ಜಾಗೃತಿ ಬೆಳೆಸಬೇಕಾದ ಅಗತ್ಯ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಬೇಕಾದರೆ ಇಂಥ ಜಾಗೃತಿ ಮತದಾರರಲ್ಲಿ ಬೆಳೆಯಬೇಕಾದ ಅಗತ್ಯ ಇದೆ. ಅದೇ ರೀತಿ ಮತದಾರರಲ್ಲಿ ಲಂಚ ಪಡೆದು ಓಟು ಹಾಕುವುದು ದೇಶದ್ರೋಹ, ಇದು ಭಯೋತ್ಪಾದನೆಯಂತೆ ದೇಶಕ್ಕೆ ಮಾಡುವ ದ್ರೋಹ ಎಂಬ ಜಾಗೃತಿ ಬೆಳೆಸಬೇಕಾದ ಅಗತ್ಯ ಇದೆ.

    Reply

Leave a Reply

Your email address will not be published. Required fields are marked *