Daily Archives: March 27, 2013

ರಾಜಕಾರಣದ ಭ್ರಷ್ಟ ಸುಳಿಗಳ ನೋಟ


– ಚಿದಂಬರ ಬೈಕಂಪಾಡಿ


 

ಜಾಗತಿಕವಾಗಿ ಮಲೇಶಿಯಾಕ್ಕೆ ಭ್ರಷ್ಟಾಚಾರದಲ್ಲಿ ಅಗ್ರಪಟ್ಟ. ನಂತರದ ಸ್ಥಾನ ಮೆಕ್ಸಿಕೋ, ಕಡೆಯ ಸ್ಥಾನ ಜಪಾನ್ ಎನ್ನುವುದು ಅಧ್ಯಯನ ವರದಿಯ ತಿರುಳು. ಭ್ರಷ್ಟಾಚಾರ ವಿಶ್ವಮಾನ್ಯವಾಗಿದೆ. ಭಾರತದಲ್ಲಿ ರಾಜಕಾರಣದ ಮೂಲಕವೇ ಭ್ರಷ್ಟಾಚಾರ ಹುಟ್ಟಿಕೊಂಡಿತು ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಪಕ್ಷ ಮುನ್ನಡೆಸಲು ಅಗತ್ಯವಾದ ಸಂಪನ್ಮೂಲ ಸಂಗ್ರಹ ಭ್ರಷ್ಟಾಚಾರದ ಮೂಲ. ರಾಜಕೀಯ ಇತಿಹಾಸದ ಪುಟಗಳನ್ನು ತಿರುವಿದಾಗ ಅರಿವಿಗೆ ಬರುವ ಸಂಗತಿಯೆಂದರೆ 60 ರ ದಶಕದಲ್ಲಿ ರಾಜಕೀಯ ಪಕ್ಷಗಳಿಗೆ ಸಂಪನ್ಮೂಲ ಸಂಗ್ರಹಿಸುವ ಅನಿವಾರ್ಯತೆ ಇರಲಿಲ್ಲ. 70 ರ ದಶಕದಲ್ಲಿ ಇದರ ಉಗಮ. ಕಾರ್ಪೊರೇಟ್ ಸಂಸ್ಥೆ ತಾನಾಗಿಯೇ ಪಾರ್ಟಿ ಫಂಡ್‌ಗೆ ದೇಣಿಗೆ ನೀಡುವ ಸಂಪ್ರದಾಯ ಆರಂಭ ಮಾಡಿತು. ಅದಕ್ಕೆ ಪ್ರತಿಯಾಗಿ ಗುತ್ತಿಗೆ ಪಡೆಯುವುದಕ್ಕೆ ಪರ್ಸೆಂಟೇಜ್ ವ್ಯವಹಾರ. ಇದು ಯಾವ ಮಟ್ಟಕ್ಕೆ ಬೆಳೆಯಿತೆಂದರೆ ಈಗ ತಳಮಟ್ಟದ ಗ್ರಾಮಪಂಚಾಯತ್ ಗುತ್ತಿಗೆ ಪಡೆಯುವುದಕ್ಕೂ ಪರ್ಸೆಂಟೇಜ್ ಫಿಕ್ಸ್ ಮಾಡಲಾಗಿದೆ. ಇದನ್ನು ಯಾರಾದರೂ ಅಲ್ಲಗಳೆಯಲು ಸಾಧ್ಯವೇ?

70 ರ ದಶಕದಲ್ಲಿ ಒಂದು ಲೋಕಸಭಾ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ 50 ಲಕ್ಷ ರೂಪಾಯಿ ವೆಚ್ಚ ಮಾಡಬೇಕಾಗಿತ್ತು. ಅಷ್ಟೊಂದು ಸಂಪನ್ಮೂಲ ಹೊಂದಿಸಿಕೊಳ್ಳುವುದಕ್ಕೆ ಅಭ್ಯರ್ಥಿಗೆ ಅಸಾಧ್ಯವಾಗುತ್ತಿತ್ತು. ಈ ಕಾರಣಕ್ಕೆ ಪಕ್ಷದ ವತಿಯಿಂದ ಇಂತಿಷ್ಟು ಫಂಡ್ ಕೊಡುವ ಸಂಪ್ರದಾಯ ಬೆಳೆಯಿತು. ಆ ಕಾಲದಲ್ಲಿ ಗರಿಷ್ಠ ಒಂದು ಲೋಕಸಭಾ ಕ್ಷೇತ್ರದ ಸಿರಿವಂತ ಅಭ್ಯರ್ಥಿ 2 ಕೋಟಿ ರೂಪಾಯಿ ವೆಚ್ಚ ಮಾಡಿದ್ದು ದಾಖಲೆ, ಈಗ?

ಒಂದು ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆಗೆ ಅಭ್ಯರ್ಥಿಗಳು ಮಾಡುವ ಖರ್ಚು ಹುಬ್ಬೇರಿಸುವಂತೆ ಮಾಡುತ್ತದೆ. ಯಾವುದೇ ದೇಶ ಆರ್ಥಿಕವಾಗಿ ಬಲಿಷ್ಠವಾಗಿದ್ದರೂ ಭ್ರಷ್ಟವಾಗಿದ್ದರೆ ಆ ದೇಶ ಬಲಿಷ್ಠವಲ್ಲ ಎನ್ನುವುದು ಆರ್ಥಿಕ ಥಿಯರಿ. ಆದರಿಂದಲೇ ಭಾರತ ಶ್ರೀಮಂತಿಕೆಯಿದ್ದರೂ ಬಡ ದೇಶ.

ಭ್ರಷ್ಟಾಚಾರವನ್ನು ಹುಟ್ಟು ಹಾಕಿದ ದೇಣಿಗೆ ಸಂಸ್ಕೃತಿ ಈಗ ರಾಜಕಾರಣವನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡಿದೆ. ಹಿಂದೆ ಆಡಳಿತ ಪಕ್ಷಗಳಿಗೆ ಮಾತ್ರ ಸಾಧ್ಯವಿದ್ದ ದೇಣಿಗೆ ಪಡೆಯುವ ಸಾಮರ್ಥ್ಯ ಈಗ ವಿರೋಧ ಪಕ್ಷಗಳಿಗೂ ಸಾಧ್ಯವಾಗಿದೆ. ಯಾಕೆಂದರೆ ತಾವೇ ಅಧಿಕಾರಕ್ಕೆ ಬರುತ್ತೇವೆ ಎನ್ನುವ ಭರವಸೆಯಿಂದ. ಈಗಲೂ ಪಕ್ಷಗಳು ನಿಧಿ ಸಂಗ್ರಹಿಸುವ ಸಂಪ್ರದಾಯವಿದೆ. ಹಿಂದೆಯೂ ಬಿ-ಫಾರಂ ಪಡೆಯಲು ಅಭ್ಯರ್ಥಿಗಳು ಹಂತಹಂತವಾಗಿ ಹಣಕೊಡಬೇಕಾಗಿತ್ತು, ಈಗಲೂ ಅದು ಮುಂದುವರಿದಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಕರ್ನಾಟಕದ ಮಟ್ಟಿಗೆ ರಾಜಕಾರಣವನ್ನು ಭ್ರಷ್ಟಾಚಾರ ಆವರಿಸಿಕೊಂಡುಬಿಟ್ಟಿದೆ. ರಾಜಕಾರಣದಲ್ಲಿ ಶುದ್ಧ ಹಸ್ತ ಎನ್ನುವ ಮಾತಿಗೆ ಒಬ್ಬೊಬ್ಬರು ಒಂದೊಂದು ರೀತಿಯಾಗಿ ವ್ಯಾಖ್ಯಾನಿಸುತ್ತಾರೆ. ಅತೀ ಭ್ರಷ್ಟ, ಇದ್ದವರಲ್ಲಿಯೇ ಕಡಿಮೆ ಭ್ರಷ್ಟ ಎನ್ನುವ ಮಟ್ಟಿಗೆ ಸಮಾಧಾನಪಟ್ಟುಕೊಳ್ಳಬೇಕಾಗಿದೆ. ಭ್ರಷ್ಟಾಚಾರ ಮಾಡಿಯೂ ಜಾಣತನದಿಂದ ನಿಭಾಯಿಸುವವರಿದ್ದಾರೆ. ಭ್ರಷ್ಟಾಚಾರವನ್ನು ಅರಗಿಸಿಕೊಳ್ಳುವಂಥ ಸಾಮರ್ಥ್ಯವನ್ನು ಗಳಿಸಿದವರೂ ಇದ್ದಾರೆ. ಚುನಾವಣೆ ಕಾಲಘಟ್ಟದಲ್ಲಿ ಮಾತ್ರ ಕೇಳಿ ಬರುವ ಭ್ರಷ್ಟಾಚಾರದ ಆರೋಪಗಳಿಗೆ ಅಷ್ಟೊಂದು ಮಹತ್ವ ಕೊಡಬೇಕಾಗಿಲ್ಲ ಅಂದುಕೊಂಡರೂ ಜವಾಬ್ದಾರಿಯುತ ಸ್ಥಾನದಲ್ಲಿದ್ದವರ ಬಗ್ಗೆ ಆರೋಪ ಬಂದಾಗ ಏನು ಮಾಡಬೇಕು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ.

ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರ ಮೇಲೆ ಅಬಕಾರಿ ಸಚಿವ ರೇಣುಕಾಚಾರ್ಯ ಮಾಡಿರುವ ಆರೋಪ ತಾಜಾ. ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆ ಕಾಲದಲ್ಲಿ ತಾವು ಸದಾನಂದ ಗೌಡರ ಕೋರಿಕೆಯಂತೆ ಹಣಕೊಟ್ಟಿದ್ದೆ ಎಂದಿದ್ದಾರೆ. ತಮ್ಮಲ್ಲಿ ಹಣಕೊಟ್ಟಿರುವುದಕ್ಕೆ ದಾಖಲೆಗಳಿವೆ, ಸೂಕ್ತ ಕಾಲದಲ್ಲಿ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದಾರೆ. ಒಂದು ವೇಳೆ ದಾಖಲೆ ಇಟ್ಟುಕೊಂಡಿದ್ದರೆ ನಿಜಕ್ಕೂ ರೇಣುಕಾಚಾರ್ಯ ಬುದ್ಧಿವಂತ ರಾಜಕಾರಣಿ. ಹಣಪಡೆದು ದಾಖಲೆ ಮೂಲಕ ಸಿಕ್ಕಿಹಾಕಿಕೊಂಡರೆ ಸದಾನಂದ ಗೌಡರು ದಡ್ಡ ರಾಜಕಾರಣಿ ಎನ್ನುವುದು ಇಲ್ಲಿ ಮುಖ್ಯವಲ್ಲ. ರಾಜಕಾರಣದ ವ್ಯವಸ್ಥೆ ಯಾವ ಮಟ್ಟಕ್ಕೆ ತಲುಪಿದೆ ಎನ್ನುವುದು ಅತೀ ಮುಖ್ಯ.

ಕರ್ನಾಟಕದಲ್ಲಿ ರಾಜಕಾರಣಿಗಳ ಮೇಲೆ ಅದರಲ್ಲೂ ಗುರುತರವಾದ ಜವಾಬ್ದಾರಿ ನಿಭಾಯಿಸುವಂಥವರ ವಿರುದ್ಧ ಆರೋಪಗಳು ಹೊಸತೇನೂ ಅಲ್ಲ. ಗುಂಡೂರಾವ್, ರಾಮಕೃಷ್ಣ ಹೆಗಡೆ, ಎಸ್.ಬಂಗಾರಪ್ಪ, ಎಸ್.ಎಂ.ಕೃಷ್ಣ, ಧರಂ ಸಿಂಗ್, ವೀರಪ್ಪ ಮೊಯ್ಲಿ, ಎಚ್.ಡಿ.ಕುಮಾರಸ್ವಾಮಿ. ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದ ಗೌಡ ಹೀಗೆ ಎಲ್ಲರ ವಿರುದ್ಧವೂ ಒಂದಲ್ಲ ಒಂದು ಆರೋಪ ಥಳುಕು ಹಾಕಿಕೊಂಡಿದೆ.

ಅತ್ಯಂತ ಮುಖ್ಯವಾಗಿ ಎರಡು ಕಾರಣಗಳಿಂದಾಗಿ ರಾಜಕಾರಣ ಭ್ರಷ್ಟಾಚಾರದ ಸುಳಿಗೆ ಸಿಲುಕಿದೆ. ಅಧಿಕಾರದ ಮೇಲೆ ಕುಳಿತ ವ್ಯಕ್ತಿ ಪಕ್ಷ ಮುನ್ನಡೆಸಲು ಸಂಪನ್ಮೂಲ ಒದಗಿಸಬೇಕು ಎನ್ನುವುದು ಮೊದಲ ಕಾರಣವಾದರೆ ಸಹಜವಾಗಿಯೇ ಮತ್ತೊಂದು ಕಾರಣ ಸ್ವಹಿತಾಸಕ್ತಿ. ರಾಜಕಾರಣಿ ಸನ್ಯಾಸಿಯಲ್ಲ, ಸನ್ಯಾಸಿಗಳೆಲ್ಲರೂ ಭ್ರಷ್ಟಾಚಾರದಿಂದ ಹೊರತಲ್ಲ ಎನ್ನುವುದು ಬೇರೆಯೇ ಮಾತು.

ಚುನಾವಣೆ ಎನ್ನುವುದು ಯಾವಾಗ ದುಬಾರಿಯಾಯಿತೋ ಆ ಕ್ಷಣದಿಂದಲೇ ಭ್ರಷ್ಟಾಚಾರದ ವೇಗ ಮತ್ತು ವ್ಯಾಪ್ತಿ ಹೆಚ್ಚಾಯಿತು. corruption-india-democracyಯಾವುದೇ ಮುಖ್ಯಮಂತ್ರಿ ಒಂದು ಪಕ್ಷದ ಹಿನ್ನೆಲೆಯಿಂದಾಗಿ ಅಧಿಕಾರಕ್ಕೇರಿದರೂ ಸಂಪನ್ಮೂಲಕ್ಕೆ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎನ್ನುವುದು ಅಲಿಖಿತ ನಿಯಮ ಈಗಿನ ರಾಜಕಾರಣದಲ್ಲಿ. ಈ ಮಾತನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಹಾಗೊಂದು ವೇಳೆ ಅಲ್ಲಗಳೆದರೆ ಆತ್ಮವಂಚನೆಯಾಗುತ್ತದೆ. ಆದ್ದರಿಂದ ಭ್ರಷ್ಟಾಚಾರಕ್ಕೆ ಮಿತಿಯೂ ಇಲ್ಲ, ಮಾನದಂಡವೂ ಇಲ್ಲ. ಪೊಲೀಸ್ ಠಾಣೆ ಸ್ಥಾಪನೆಯಾಯಿತೆಂದರೆ ಅಲ್ಲಿ ಕಳವು, ಹೊಡೆದಾಟ, ವ್ಯಾಜ್ಯಗಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುವ ಮಾತಿದೆ. ಯಾಕೆಂದರೆ ಆ ಠಾಣೆಯವರಿಗೂ ಕೆಲಸಬೇಕಲ್ಲ. ಹಾಗೆಯೇ ಭ್ರಷ್ಟಾಚಾರ ತಡೆಗೆ ಲೋಕಾಯುಕ್ತ ಅಸ್ತಿತ್ವಕ್ಕೆ ಬಂದ ಮೇಲೆ ರಾಜಕಾರಣಿಗಳು, ಅಧಿಕಾರಸ್ಥರು ಸಾಲುಗಟ್ಟಿ ಕೋರ್ಟು ಕಚೇರಿಗೆ ಎಡತಾಕುವಂತಾಗಿದೆ. ಯಾಕೆಂದರೆ ಅದು ಕೆಲಸ ಮಾಡುತ್ತಿದೆ, ಮಾಡಲೇ ಬೇಕು.

ಚುನಾವಣಾ ವೆಚ್ಚವನ್ನು ನಿಯಂತ್ರಣ ಮಾಡುವ ಮೊದಲೇ ಅಭ್ಯರ್ಥಿಗಳು ಮಾಡುತ್ತಿದ್ದ ವೆಚ್ಚಕ್ಕಿಂತೇನೂ ಈಗ ಕಡಿಮೆಯಾಗಿದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ವೆಚ್ಚ ಮಾಡುವ ವಿಧಾನಗಳು ಮಾತ್ರ ಬದಲಾಗಿವೆ. ಅತ್ಯಂತ ಮಹತ್ವದ ಅಂಶವೆಂದರೆ ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ ತನ್ನ ಸ್ವಂತ ದುಡಿಮೆಯನ್ನು ಹೂಡಿಕೆ ಮಾಡಿ ಚುನಾವಣೆ ಗೆಲ್ಲುವುದು ಸಾಧ್ಯವಿಲ್ಲ, ಅಧಿಕಾರದ ಚುಕ್ಕಾಣಿ ಹಿಡಿಯುವುದು ಅಸಾಧ್ಯ. ಸಂಪನ್ಮೂಲ ಹೊಂದಿಸಿಕೊಳ್ಳುತ್ತಾರೆ, ಹೊಂದಿಸಿಕೊಳ್ಳಲೇ ಬೇಕು. ಇಂಥ ವ್ಯವಸ್ಥೆಯ ಭಾಗವಾಗಿ ರಾಜಕಾರಣದಲ್ಲಿ ಭ್ರಷ್ಟಾಚಾರ ಬೆಳೆದುಬಂದಿದೆ. ಚುನಾವಣಾ ವ್ಯವಸ್ಥೆಯಲ್ಲೇ ಬದಲಾವಣೆಯಾಗಬೇಕು ಎನ್ನುವುದು ನಿರೀಕ್ಷೆಯಾದರೂ ಅಂಥ ಮಾನಸಿಕ ಸ್ಥಿತಿ ರಾಜಕಾರಣಿಗಳಲ್ಲಿ ಬೆಳೆಯುವುದು ಯಾವಾಗ? ಸೈಕಲ್ ತುಳಿದುಕೊಂಡೇ ರಾಜಕೀಯಕ್ಕೆ ಇಳಿದ ವ್ಯಕ್ತಿ ಅದೇ ಸೈಕಲ್‌ಗೆ ತನ್ನನ್ನು ಸೀಮಿತಗೊಳಿಸಿಕೊಳ್ಳುವಂಥ ಮನಸ್ಥಿತಿ ಉಳಿಸಿಕೊಳ್ಳಲು ಸಾಧ್ಯವೇ? ಸಾಧ್ಯವಾಗಲಿ ಎನ್ನುವುದು ಈ ಕ್ಷಣದ ಆಶಯ.