Daily Archives: March 28, 2013

ಕಾನೂನು ಕೈಗೆತ್ತಿಕೊಳ್ಳುವ ಬಲಪಂಥೀಯರಿಗೆ ಈ ದೇಶದಲ್ಲಿ ಯಾಕೆ ಶಿಕ್ಷೆ ಆಗುವುದಿಲ್ಲ?

– ಆನಂದ ಪ್ರಸಾದ್

ನಮ್ಮ ದೇಶದಲ್ಲಿ ಕಾನೂನು ಕೈಗೆತ್ತಿಕೊಂಡು ಹಿಂಸಾಚಾರವನ್ನು ಪ್ರೇರೇಪಿಸಿದ ಬಲಪಂಥೀಯರಿಗೆ ಶಿಕ್ಷೆ ಆಗುವುದು ಕಂಡುಬರುವುದು ಬಹಳ ಕಡಿಮೆ. ಕಾನೂನು ಕೈಗೆತ್ತಿಕೊಂಡು ಸಶಸ್ತ್ರ ಹೋರಾಟದ ಹಾದಿ ಹಿಡಿದಿರುವ ನಕ್ಸಲರಿಗೆ ಹೆಚ್ಚಾಗಿ ಶಿಕ್ಷೆಯಾಗುತ್ತದೆ. ನ್ಯಾಯಾಲಯದಲ್ಲಿ ನಕ್ಸಲರು ಸಾಕ್ಷ್ಯಗಳಿಲ್ಲದೆ ಬಿಡುಗಡೆಯಾಗಬಹುದೆಂದು ಪೊಲೀಸರೇ ಎಷ್ಟೋ ನಕ್ಸಲ್ ನಾಯಕರನ್ನು ಯಾವುದೇ ವಿಚಾರಣೆಯಿಲ್ಲದೆ ನಕಲಿ ಎನ್ಕೌಂಟರ್ ಹೆಸರಿನಲ್ಲಿ ಕೊಂದುಹಾಕುತ್ತಾರೆ. ನಕ್ಸಲರು ಹಿಂಸೆಯ communal-clashಹಾದಿ ಹಿಡಿದಿರುವ ಕಾರಣ ಇದರ ಬಗ್ಗೆ ಜನರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ನ್ಯಾಯಾಲಯವು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ಐದು ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದು ಅವರಿಗೆ ಕ್ಷಮಾದಾನ ನೀಡಬೇಕು, ನೀಡಬಾರದು ಎಂಬ ಬಗ್ಗೆ ವಿಭಿನ್ನ ಪ್ರತಿಕ್ರಿಯೆಗಳು ಹುಟ್ಟಿಕೊಂಡಿವೆ. ಕಾನೂನು ಎಲ್ಲರಿಗೂ ಒಂದೇ, ಅದರಲ್ಲಿ ಭೇದ ಇರಬಾರದು. ಇದೇ ರೀತಿ ಬಲಪಂಥೀಯ ಹಿಂಸಾಚಾರ ಪ್ರೇರೇಪಿಸಿದ ನಾಯಕರಿಗೂ ಶಿಕ್ಷೆ ಆಗಬೇಕಾದ ಅಗತ್ಯ ಇದೆ. ಹಾಗಾದಾಗ ಮಾತ್ರ ಧಾರ್ಮಿಕ ವಿಷಯಗಳನ್ನು ರಾಜಕೀಯ ಅಧಿಕಾರಸಾಧನೆಗಾಗಿ ದುರ್ಬಳಕೆ ಮಾಡಿ ದುರಾಡಳಿತ ನೀಡುವ ದುಷ್ಟರಿಗೆ ಪಾಠ ಕಲಿಸಿದಂತೆ ಆಗುತ್ತದೆ ಹಾಗೂ ಅಂಥವರು ಮತ್ತೆ ಮತ್ತೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ವಿಷಯಗಳನ್ನು ಉಪಯೋಗಿಸಿಕೊಳ್ಳುವುದನ್ನು ನಿಯಂತ್ರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಧ್ಯ.

1992ರಲ್ಲಿ ಬಾಬ್ರಿ ಮಸೀದಿಯನ್ನು ನ್ಯಾಯಾಲಯದ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಬೇಕು ಎಂಬ ಆದೇಶದ ಹೊರತಾಗಿಯೂ ಬಲಪಂಥೀಯ ಹಿಂದುತ್ವವಾದಿಗಳು ಕರಸೇವೆಯ ನೆಪದಲ್ಲಿ ಉರುಳಿಸಿದರು.್ ಇದು ಹಾಡಹಗಲೇ ನಡೆದ ಬಲಪಂಥೀಯರು ಸಂವಿಧಾನವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಂಡ ಕೃತ್ಯವಾದರೂ ಈವರೆಗೂ ಈ ಕೇಸಿನಲ್ಲಿ ಸಂಬಂಧಪಟ್ಟ ಯಾರಿಗೂ ಶಿಕ್ಷೆ ಆಗಿಲ್ಲದಿರುವುದು ಏನನ್ನು ಸೂಚಿಸುತ್ತದೆ ಇದು ಸೂಚಿಸುವುದು ಏನೆಂದರೆ ಬಲಪಂಥೀಯರು ಕಾನೂನನ್ನು ಉಲ್ಲಂಘಿಸಿದರೆ ಅವರಿಗೆ ಕ್ಷಮಾದಾನ ಇದೆಯೆಂದು ಅಲ್ಲವೇ? ಬಲಪಂಥೀಯರ ಈ ದ್ವಂದ್ವ ನೀತಿಯನ್ನು ಪ್ರಜ್ಞಾವಂತರು ಪ್ರಶ್ನಿಸಬೇಕಾದ ಅಗತ್ಯ ಇದೆ. ಬಾಬ್ರಿ ಮಸೀದಿಯ ಜಾಗದಲ್ಲಿ ಹಿಂದೆ ರಾಮನ ದೇವಾಲಯ ಇತ್ತು, ಅದನ್ನು ಹಿಂದೆ ಮುಸ್ಲಿಂ ಆಕ್ರಮಣಕಾರರು ನಾಶಪಡಿಸಿ ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದರು ಎಂಬುದು ಬಲಪಂಥೀಯರ ವಾದ ಹಾಗೂ ಅಲ್ಲಿ ರಾಮಮಂದಿರ ನಿರ್ಮಿಸಬೇಕು ಎಂಬುದು ಅವರ ವಾದ. ಇದು ನಿಜವಾಗಿದ್ದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಇರುವ ನಮ್ಮ ದೇಶದಲ್ಲಿ ಅದಕ್ಕೊಂದು ನಾಗರಿಕ ವಿಧಾನ ಇದೆ ಅಲ್ಲವೇ? ಅಂಥ ನಾಗರಿಕ ವಿಧಾನಗಳಲ್ಲಿ ಒಂದು ನ್ಯಾಯಾಲಯದ ಮೊರೆ ಹೋಗಿ ತೀರ್ಪು ಬರುವವರೆಗೂ ಕಾಯುವುದು. ಇಲ್ಲವಾದರೆ ಇದೇ ವಿಷಯವನ್ನು ಮುಖ್ಯ ಚುನಾವಣಾ ವಿಷಯವಾಗಿ ಎತ್ತಿಕೊಂಡು ಸ್ಪರ್ಧಿಸಿ ಮೂರನೇ ಎರಡು ಬಹುಮತವನ್ನು ಪಡೆದು ಸಂಸತ್ತಿನಲ್ಲಿ ಒಂದು ಮಸೂದೆಯನ್ನು ಮಂಡಿಸಿ ಅದನ್ನು ಅಗತ್ಯ ಮೂರನೇ ಎರಡು ಬಹುಮತದ ಮೂಲಕ ಪಾಸು ಮಾಡಿಸಿಕೊಂಡು ನಂತರ ಮುಂದುವರಿದಿದ್ದರೆ ಬಾಬ್ರಿ ಮಸೀದಿ ನಾಶದಿಂದ ದೇಶದಲ್ಲಿ ಉಂಟಾದ ಭೀಕರ ಗಲಭೆಗಳು ನಡೆಯುತ್ತಿರಲಿಲ್ಲ. ಹೀಗಾಗಿ ಬಲಪಂಥೀಯ ಹಿಂದುತ್ವವಾದಿಗಳು ದೇಶದ ಸಂವಿಧಾನವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಂಡು assam_violenceಮಹಾ ಹಿಂಸಾಚಾರಕ್ಕೆ ಕಾರಣರಾದುದು ಸ್ಪಷ್ಟ. ಈ ಸಂದರ್ಭದಲ್ಲಿ ನಡೆದ ಗಲಭೆಗಳಲ್ಲಿ 2000 ಸಾವಿರಕ್ಕೂ ಅಧಿಕ ಜನ ಸಾವಿಗೀಡಾದರು. ಇದರಿಂದ ದೇಶಕ್ಕೆ ಉಂಟಾದ ರಾಷ್ಟ್ರೀಯ ನಷ್ಟ 20,000 ಕೋಟಿ ರೂಪಾಯಿಗಳು ಎಂದು ಮಾಧ್ಯಮಗಳು ವರದಿ ಮಾಡಿವೆ. ಗುಜರಾತಿನಲ್ಲಿ 2002ರಲ್ಲಿ ನಡೆದ ಗಲಭೆಗಳಲ್ಲಿ 10,000 ಕೋಟಿ ರೂಪಾಯಿಗಳ ರಾಷ್ಟ್ರೀಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈಯೆಲ್ಲಾ ಗಲಭೆಗಳು ಮತೀಯವಾದಿಗಳು ಅಧಿಕಾರ ಪಡೆಯಲು ನಡೆಸಿದ ಕಸರತ್ತಿನ ಫಲವಾಗಿ ಉಂಟಾಗಿವೆ. ಇದು ಬಲಪಂಥೀಯರ ದೇಶಭಕ್ತಿಯ ಒಂದು ಸ್ಯಾಂಪಲ್. ದೇಶಭಕ್ತಿಯ ಬಗ್ಗೆ ಬಹಳ ಬೊಬ್ಬೆ ಹಾಕುವ ಬಲಪಂಥೀಯರು ವಿವೇಕ ಹಾಗೂ ವಿವೇಚನೆಯಿಂದ ವರ್ತಿಸಿದ್ದಿದ್ದರೆ ಈ ಎಲ್ಲ ಗಲಭೆಗಳನ್ನು ತಡೆಯಬಹುದಿತ್ತು. 1992ರ ಮುಂಬೈ ಗಲಭೆಯಲ್ಲಿ ತನಿಖಾ ಆಯೋಗ ಪಾತ್ರವಿದೆ ಎಂದು ಸೂಚಿಸಿದ ಬಲಪಂಥೀಯರಿಗೂ ಯಾವುದೇ ಶಿಕ್ಷೆ ಆಗಿಲ್ಲ. ಇದರಿಂದಾಗಿ ನಮ್ಮ ದೇಶದ ನ್ಯಾಯನಿರ್ಣಯ ವ್ಯವಸ್ಥೆ ಹಾಗೂ ಅದನ್ನು ಜಾರಿಮಾಡಬೇಕಾದ ಆಡಳಿತ ವ್ಯವಸ್ಥೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪನಂಬಿಕೆ ಮೂಡುವುದರಲ್ಲಿ ಸಂಶಯವಿಲ್ಲ.

ದೇಶಕ್ಕೆ ಈ ಮಟ್ಟದ ಹಾನಿ ಮಾಡಿದವರಿಗೆ ಈವರೆಗೂ ಶಿಕ್ಷೆಯಾಗಿಲ್ಲ. ಬಾಬ್ರಿ ಮಸೀದಿಯ ನಾಶಕ್ಕೆ ಕಾರಣರಾದ ಮತೀಯವಾದಿಗಳು ಯಾರು, ಅವರು ಮಾಡಿದ ಜನರನ್ನು ಉದ್ರೇಕಿಸುವ ಭಾಷಣಗಳು, ವೀಡಿಯೊಗಳು ಇವುಗಳ ಆಧಾರದ ಮೇಲೆ ಅವರಿಗೆ ಶಿಕ್ಷೆ ವಿಧಿಸಲು ಸಾಧ್ಯವಿದೆ, ಆದರೂ ಅವರಿಗೆ ಶಿಕ್ಷೆ ಆಗುವುದಿಲ್ಲ ಎಂದರೆ ಅವರನ್ನು ಶಿಕ್ಷಿಸಲು ಆಡಳಿತ ಹಾಗೂ ನ್ಯಾಯಾಂಗ ವಿಫಲವಾಗಿದೆ ಎಂದಲ್ಲವೇ? ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕಾದರೆ ಕಾನೂನು ಕೈಗೆತ್ತಿಕೊಳ್ಳುವ ಎಲ್ಲರಿಗೂ ಶಿಕ್ಷೆ ಆಗಬೇಕಾದ ಅಗತ್ಯ ಇದೆ.