ಕಾನೂನು ಕೈಗೆತ್ತಿಕೊಳ್ಳುವ ಬಲಪಂಥೀಯರಿಗೆ ಈ ದೇಶದಲ್ಲಿ ಯಾಕೆ ಶಿಕ್ಷೆ ಆಗುವುದಿಲ್ಲ?

– ಆನಂದ ಪ್ರಸಾದ್

ನಮ್ಮ ದೇಶದಲ್ಲಿ ಕಾನೂನು ಕೈಗೆತ್ತಿಕೊಂಡು ಹಿಂಸಾಚಾರವನ್ನು ಪ್ರೇರೇಪಿಸಿದ ಬಲಪಂಥೀಯರಿಗೆ ಶಿಕ್ಷೆ ಆಗುವುದು ಕಂಡುಬರುವುದು ಬಹಳ ಕಡಿಮೆ. ಕಾನೂನು ಕೈಗೆತ್ತಿಕೊಂಡು ಸಶಸ್ತ್ರ ಹೋರಾಟದ ಹಾದಿ ಹಿಡಿದಿರುವ ನಕ್ಸಲರಿಗೆ ಹೆಚ್ಚಾಗಿ ಶಿಕ್ಷೆಯಾಗುತ್ತದೆ. ನ್ಯಾಯಾಲಯದಲ್ಲಿ ನಕ್ಸಲರು ಸಾಕ್ಷ್ಯಗಳಿಲ್ಲದೆ ಬಿಡುಗಡೆಯಾಗಬಹುದೆಂದು ಪೊಲೀಸರೇ ಎಷ್ಟೋ ನಕ್ಸಲ್ ನಾಯಕರನ್ನು ಯಾವುದೇ ವಿಚಾರಣೆಯಿಲ್ಲದೆ ನಕಲಿ ಎನ್ಕೌಂಟರ್ ಹೆಸರಿನಲ್ಲಿ ಕೊಂದುಹಾಕುತ್ತಾರೆ. ನಕ್ಸಲರು ಹಿಂಸೆಯ communal-clashಹಾದಿ ಹಿಡಿದಿರುವ ಕಾರಣ ಇದರ ಬಗ್ಗೆ ಜನರೂ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಇತ್ತೀಚೆಗೆ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ನ್ಯಾಯಾಲಯವು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ಐದು ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದು ಅವರಿಗೆ ಕ್ಷಮಾದಾನ ನೀಡಬೇಕು, ನೀಡಬಾರದು ಎಂಬ ಬಗ್ಗೆ ವಿಭಿನ್ನ ಪ್ರತಿಕ್ರಿಯೆಗಳು ಹುಟ್ಟಿಕೊಂಡಿವೆ. ಕಾನೂನು ಎಲ್ಲರಿಗೂ ಒಂದೇ, ಅದರಲ್ಲಿ ಭೇದ ಇರಬಾರದು. ಇದೇ ರೀತಿ ಬಲಪಂಥೀಯ ಹಿಂಸಾಚಾರ ಪ್ರೇರೇಪಿಸಿದ ನಾಯಕರಿಗೂ ಶಿಕ್ಷೆ ಆಗಬೇಕಾದ ಅಗತ್ಯ ಇದೆ. ಹಾಗಾದಾಗ ಮಾತ್ರ ಧಾರ್ಮಿಕ ವಿಷಯಗಳನ್ನು ರಾಜಕೀಯ ಅಧಿಕಾರಸಾಧನೆಗಾಗಿ ದುರ್ಬಳಕೆ ಮಾಡಿ ದುರಾಡಳಿತ ನೀಡುವ ದುಷ್ಟರಿಗೆ ಪಾಠ ಕಲಿಸಿದಂತೆ ಆಗುತ್ತದೆ ಹಾಗೂ ಅಂಥವರು ಮತ್ತೆ ಮತ್ತೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಧಾರ್ಮಿಕ ವಿಷಯಗಳನ್ನು ಉಪಯೋಗಿಸಿಕೊಳ್ಳುವುದನ್ನು ನಿಯಂತ್ರಿಸಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಸಾಧ್ಯ.

1992ರಲ್ಲಿ ಬಾಬ್ರಿ ಮಸೀದಿಯನ್ನು ನ್ಯಾಯಾಲಯದ ಯಥಾಸ್ಥಿತಿಯನ್ನು ಕಾಯ್ದುಕೊಂಡು ಹೋಗಬೇಕು ಎಂಬ ಆದೇಶದ ಹೊರತಾಗಿಯೂ ಬಲಪಂಥೀಯ ಹಿಂದುತ್ವವಾದಿಗಳು ಕರಸೇವೆಯ ನೆಪದಲ್ಲಿ ಉರುಳಿಸಿದರು.್ ಇದು ಹಾಡಹಗಲೇ ನಡೆದ ಬಲಪಂಥೀಯರು ಸಂವಿಧಾನವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಂಡ ಕೃತ್ಯವಾದರೂ ಈವರೆಗೂ ಈ ಕೇಸಿನಲ್ಲಿ ಸಂಬಂಧಪಟ್ಟ ಯಾರಿಗೂ ಶಿಕ್ಷೆ ಆಗಿಲ್ಲದಿರುವುದು ಏನನ್ನು ಸೂಚಿಸುತ್ತದೆ ಇದು ಸೂಚಿಸುವುದು ಏನೆಂದರೆ ಬಲಪಂಥೀಯರು ಕಾನೂನನ್ನು ಉಲ್ಲಂಘಿಸಿದರೆ ಅವರಿಗೆ ಕ್ಷಮಾದಾನ ಇದೆಯೆಂದು ಅಲ್ಲವೇ? ಬಲಪಂಥೀಯರ ಈ ದ್ವಂದ್ವ ನೀತಿಯನ್ನು ಪ್ರಜ್ಞಾವಂತರು ಪ್ರಶ್ನಿಸಬೇಕಾದ ಅಗತ್ಯ ಇದೆ. ಬಾಬ್ರಿ ಮಸೀದಿಯ ಜಾಗದಲ್ಲಿ ಹಿಂದೆ ರಾಮನ ದೇವಾಲಯ ಇತ್ತು, ಅದನ್ನು ಹಿಂದೆ ಮುಸ್ಲಿಂ ಆಕ್ರಮಣಕಾರರು ನಾಶಪಡಿಸಿ ಅಲ್ಲಿ ಬಾಬ್ರಿ ಮಸೀದಿ ನಿರ್ಮಿಸಿದರು ಎಂಬುದು ಬಲಪಂಥೀಯರ ವಾದ ಹಾಗೂ ಅಲ್ಲಿ ರಾಮಮಂದಿರ ನಿರ್ಮಿಸಬೇಕು ಎಂಬುದು ಅವರ ವಾದ. ಇದು ನಿಜವಾಗಿದ್ದರೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಇರುವ ನಮ್ಮ ದೇಶದಲ್ಲಿ ಅದಕ್ಕೊಂದು ನಾಗರಿಕ ವಿಧಾನ ಇದೆ ಅಲ್ಲವೇ? ಅಂಥ ನಾಗರಿಕ ವಿಧಾನಗಳಲ್ಲಿ ಒಂದು ನ್ಯಾಯಾಲಯದ ಮೊರೆ ಹೋಗಿ ತೀರ್ಪು ಬರುವವರೆಗೂ ಕಾಯುವುದು. ಇಲ್ಲವಾದರೆ ಇದೇ ವಿಷಯವನ್ನು ಮುಖ್ಯ ಚುನಾವಣಾ ವಿಷಯವಾಗಿ ಎತ್ತಿಕೊಂಡು ಸ್ಪರ್ಧಿಸಿ ಮೂರನೇ ಎರಡು ಬಹುಮತವನ್ನು ಪಡೆದು ಸಂಸತ್ತಿನಲ್ಲಿ ಒಂದು ಮಸೂದೆಯನ್ನು ಮಂಡಿಸಿ ಅದನ್ನು ಅಗತ್ಯ ಮೂರನೇ ಎರಡು ಬಹುಮತದ ಮೂಲಕ ಪಾಸು ಮಾಡಿಸಿಕೊಂಡು ನಂತರ ಮುಂದುವರಿದಿದ್ದರೆ ಬಾಬ್ರಿ ಮಸೀದಿ ನಾಶದಿಂದ ದೇಶದಲ್ಲಿ ಉಂಟಾದ ಭೀಕರ ಗಲಭೆಗಳು ನಡೆಯುತ್ತಿರಲಿಲ್ಲ. ಹೀಗಾಗಿ ಬಲಪಂಥೀಯ ಹಿಂದುತ್ವವಾದಿಗಳು ದೇಶದ ಸಂವಿಧಾನವನ್ನು ಉಲ್ಲಂಘಿಸಿ ಕಾನೂನು ಕೈಗೆತ್ತಿಕೊಂಡು assam_violenceಮಹಾ ಹಿಂಸಾಚಾರಕ್ಕೆ ಕಾರಣರಾದುದು ಸ್ಪಷ್ಟ. ಈ ಸಂದರ್ಭದಲ್ಲಿ ನಡೆದ ಗಲಭೆಗಳಲ್ಲಿ 2000 ಸಾವಿರಕ್ಕೂ ಅಧಿಕ ಜನ ಸಾವಿಗೀಡಾದರು. ಇದರಿಂದ ದೇಶಕ್ಕೆ ಉಂಟಾದ ರಾಷ್ಟ್ರೀಯ ನಷ್ಟ 20,000 ಕೋಟಿ ರೂಪಾಯಿಗಳು ಎಂದು ಮಾಧ್ಯಮಗಳು ವರದಿ ಮಾಡಿವೆ. ಗುಜರಾತಿನಲ್ಲಿ 2002ರಲ್ಲಿ ನಡೆದ ಗಲಭೆಗಳಲ್ಲಿ 10,000 ಕೋಟಿ ರೂಪಾಯಿಗಳ ರಾಷ್ಟ್ರೀಯ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈಯೆಲ್ಲಾ ಗಲಭೆಗಳು ಮತೀಯವಾದಿಗಳು ಅಧಿಕಾರ ಪಡೆಯಲು ನಡೆಸಿದ ಕಸರತ್ತಿನ ಫಲವಾಗಿ ಉಂಟಾಗಿವೆ. ಇದು ಬಲಪಂಥೀಯರ ದೇಶಭಕ್ತಿಯ ಒಂದು ಸ್ಯಾಂಪಲ್. ದೇಶಭಕ್ತಿಯ ಬಗ್ಗೆ ಬಹಳ ಬೊಬ್ಬೆ ಹಾಕುವ ಬಲಪಂಥೀಯರು ವಿವೇಕ ಹಾಗೂ ವಿವೇಚನೆಯಿಂದ ವರ್ತಿಸಿದ್ದಿದ್ದರೆ ಈ ಎಲ್ಲ ಗಲಭೆಗಳನ್ನು ತಡೆಯಬಹುದಿತ್ತು. 1992ರ ಮುಂಬೈ ಗಲಭೆಯಲ್ಲಿ ತನಿಖಾ ಆಯೋಗ ಪಾತ್ರವಿದೆ ಎಂದು ಸೂಚಿಸಿದ ಬಲಪಂಥೀಯರಿಗೂ ಯಾವುದೇ ಶಿಕ್ಷೆ ಆಗಿಲ್ಲ. ಇದರಿಂದಾಗಿ ನಮ್ಮ ದೇಶದ ನ್ಯಾಯನಿರ್ಣಯ ವ್ಯವಸ್ಥೆ ಹಾಗೂ ಅದನ್ನು ಜಾರಿಮಾಡಬೇಕಾದ ಆಡಳಿತ ವ್ಯವಸ್ಥೆ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪನಂಬಿಕೆ ಮೂಡುವುದರಲ್ಲಿ ಸಂಶಯವಿಲ್ಲ.

ದೇಶಕ್ಕೆ ಈ ಮಟ್ಟದ ಹಾನಿ ಮಾಡಿದವರಿಗೆ ಈವರೆಗೂ ಶಿಕ್ಷೆಯಾಗಿಲ್ಲ. ಬಾಬ್ರಿ ಮಸೀದಿಯ ನಾಶಕ್ಕೆ ಕಾರಣರಾದ ಮತೀಯವಾದಿಗಳು ಯಾರು, ಅವರು ಮಾಡಿದ ಜನರನ್ನು ಉದ್ರೇಕಿಸುವ ಭಾಷಣಗಳು, ವೀಡಿಯೊಗಳು ಇವುಗಳ ಆಧಾರದ ಮೇಲೆ ಅವರಿಗೆ ಶಿಕ್ಷೆ ವಿಧಿಸಲು ಸಾಧ್ಯವಿದೆ, ಆದರೂ ಅವರಿಗೆ ಶಿಕ್ಷೆ ಆಗುವುದಿಲ್ಲ ಎಂದರೆ ಅವರನ್ನು ಶಿಕ್ಷಿಸಲು ಆಡಳಿತ ಹಾಗೂ ನ್ಯಾಯಾಂಗ ವಿಫಲವಾಗಿದೆ ಎಂದಲ್ಲವೇ? ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳ್ಳಬೇಕಾದರೆ ಕಾನೂನು ಕೈಗೆತ್ತಿಕೊಳ್ಳುವ ಎಲ್ಲರಿಗೂ ಶಿಕ್ಷೆ ಆಗಬೇಕಾದ ಅಗತ್ಯ ಇದೆ.

6 thoughts on “ಕಾನೂನು ಕೈಗೆತ್ತಿಕೊಳ್ಳುವ ಬಲಪಂಥೀಯರಿಗೆ ಈ ದೇಶದಲ್ಲಿ ಯಾಕೆ ಶಿಕ್ಷೆ ಆಗುವುದಿಲ್ಲ?

  1. Naveen_H

    ಒಂದು ವಿಷಯ ಎಲ್ಲರೂ ಗಮನಿಸಿರಬಹುದು. ಬರಬರುತ್ತ ವರ್ತಮಾನ.com ನಲ್ಲಿ ಕಾಮೆಂಟ್ ಮಾಡುವವರ ಅಥವಾ ಅಭಿಪ್ರಾಯ ಹಂಚಿಕೊಳ್ಳುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇತ್ತೀಚಿಗೆ ಅಂತೂ ನಾವು ಅನೇಕ ಶೂನ್ಯ ಪ್ರತಿಕ್ರಿಯೆಗಳ ಲೇಖನಗಳನ್ನು ಕಾಣಬಹುದು. ಯಾಕೆ ಎಂದು ಎಂದಾದರೂ ಯೋಚನೆ ಮಾಡಿದ್ದೀರಾ?
    ಅದಕ್ಕೆ ಅನೇಕ ಕಾರಣಗಳೂ ಇರಬಹುದು. ಅದರಲ್ಲಿ ಒಂದು ಕಾರಣ ನಾನು ಹೇಳಬಲ್ಲೆ. ಅದೆಂದರೆ ಆನಂದ್ ಪ್ರಸಾದ್ ನಂಥ ಲೇಖಕರು. ಇವರಿಗೆ ಆ ಸಂಘ ಪರಿವಾರ ಏನು ಮಾಡಿದೆಯೋ ದೇವರೇ ಬಲ್ಲ. ಆದರೆ ಇವರ ಕಣ್ಣಲ್ಲಿ ಸಂಘ ಪರಿವಾರ ಬಿಜೆಪಿ ಮಾತ್ರ ಸದಾ ವಿಲನ್. ಪ್ರತಿ ಪಕ್ಷದ ಸಿದ್ಧನ್ತಗಳಲ್ಲೂ ಒಳ್ಳೆಯ ಕೆಟ್ಟ ಆಂಶಗಳು ಇರಬಹುದು ಆದರೆ ಬಿಜೆಪಿಯಲ್ಲಿ ಮಾತ್ರ ಕೇವಲ ಕೆಟ್ಟ ಆನ್ಷಗಳೇ ಇವೆ.

    ಇದೇ ಲೇಖನದಲ್ಲೂ ಲೇಖಕರ ಕಾರುವ ನಂಜನ್ನು ಕಾಣಬಹುದು. ಇವರಿಗೆ ಗುಜರಾತ್ ಗಲಭೆ ತನಿಖ ವರದಿ, ಕೋರ್ಟ್ ತೀರ್ಪು ನೀಡಿದ್ದು, ಸುಮಾರು ಇಪ್ಪತ್ತು ಜನ ಪಟೇಲ್ ಜನಾಂಗದ ಯುವಕರಿಗೆ ಶಿಕ್ಷೆ ನೀಡಿದ್ದು, ಒಬ್ಬ ಕ್ಯಾಬಿನೆಟ್ ದರ್ಜೆ ಸಚಿವೆಗೆ ಜೈಲು ಶಿಕ್ಷೆ ನೀಡಿದ್ದು ಎಲ್ಲವೂ ನಿಜವಾಗಿಯೂ ಗೊತ್ತಿಲ್ಲವೋ ಅಥವಾ ಗೊತ್ತಿಲ್ಲದಂತೆ ನಟಿಸುತ್ತಾರೋ ನಾ ಕಾಣೆ.

    ಇಂದು ಈ ದೇಶದಲ್ಲಿ ಬಿಜೆಪಿ ಗೆ ಒಂದು ಸಿಂಪತಿ ಹುಟ್ಟಿದ್ದರೆ ಅದಕ್ಕೆ ಇಂಥ ಸೆಕ್ಯುಲರ್ ವಾದಿಗಳ ಕೊಡುಗೆ ಅಲ್ಲಗೆಳೆಯುವಂತಿಲ್ಲ. ಆನಂದ್ ಪ್ರಸಾದರ, ದಿ ಹಿಂದೂ ಪತ್ರಿಕೆ, ಗೋಮುಖ ವ್ಯಾಘ್ರ ಬುದ್ಧಿಜೀವಿಗಳ ಪ್ರತಿ ಒಂದೊಂದು ಹೇಳಿಕೆ, ಒಂದೊಂದು ಲೇಖನ ಒಂದು ನೂರು ಬಿಜೆಪಿ ಪರ ವಾಲಿಸುತ್ತಿದೆ ಎಂದು ಹೇಳಬಹುದು.

    -ನವೀನ ಎಚ್

    Reply
  2. Ananda Prasad

    ಗುಜರಾತ್ ಗಲಭೆಗಳಿಗೂ ಹತ್ತು ವರ್ಷಗಳ ಮೊದಲು ನಡೆದ ಬಾಬ್ರಿ ಮಸೀದಿ ಧ್ವಂಸಕ್ಕೆ ಕಾರಣರಾದವರಿಗೆ ಈ ದೇಶದಲ್ಲಿ ಶಿಕ್ಷೆ ಆಗಿಲ್ಲ. ಅದೇ ರೀತಿ ೯೨-೯೩ರಲ್ಲಿ ನಡೆದ ಮುಂಬೈ ಗಲಭೆಗಳಲ್ಲಿ ತನಿಖಾ ಆಯೋಗ ಬೊಟ್ಟು ಮಾಡಿದ ಬಲಪಂಥೀಯರಿಗೂ ಶಿಕ್ಷೆ ಆಗಿಲ್ಲ. ‘ಇದ್ದದ್ದನ್ನು ಇದ್ದ ಹಾಗೆ ಹೇಳಿದರೆ ಕೆಂಡದಂಥ ಕೋಪ’ ‘ಖಂಡಿತವಾದಿ ಲೋಕವಿರೋಧಿ ‘ ಎಂಬ ಲೋಕೋಕ್ತಿಗಳೇ ಇವೆ. ಹೀಗೆಂದು ಸತ್ಯವನ್ನು ಹೇಳದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲಾರದು. ಅದಕ್ಕಾಗಿ ನನ್ನ ಸ್ಪಷ್ಟ ಹಾಗೂ ನೇರ ಅನಿಸಿಕೆಗಳನ್ನು ದೇಶದ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಹಿತದೃಷ್ಟಿಯಿಂದ ಹೇಳಿದ್ದೇನೆಯೋ ಹೊರತು ನನಗೆ ಸಂಘ ಅಥವಾ ಬಿಜೆಪಿ ಮೇಲೆ ವೈಯಕ್ತಿಕ ದ್ವೇಷವೇನೂ ಇಲ್ಲ. ಸಂಘ ಹಾಗೂ ಬಿಜೆಪಿಯ ಕಾರ್ಯಶೈಲಿ ನೋಡಿದರೆ ಇವೆರಡೂ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕ. ಇವೆರಡೂ ಪ್ರವರ್ಧಮಾನಕ್ಕೆ ಬಂದದ್ದೇ ಧರ್ಮಗಳನ್ನು ಪರಸ್ಪರ ಎತ್ತಿ ಕಟ್ಟುವ ಮೂಲಕ. ಈ ನೀತಿ ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ನೀಡುತ್ತದೆ. ಹಾಗಾಗಿ ಇದರ ವಿರುದ್ಧ ಪ್ರಜ್ಞಾವಂತರು ಧ್ವನಿ ಎತ್ತಬೇಕಾದದ್ದು ಅನಿವಾರ್ಯ. ಇದನ್ನು ನಂಜು ಎಂದು ತಿಳಿದರೆ ಏನೂ ಮಾಡುವಂತಿಲ್ಲ.

    ಇನ್ನು ವರ್ತಮಾನದಲ್ಲಿ ಮಾತ್ರ ಶೂನ್ಯ ಪ್ರತಿಕ್ರಿಯೆಯ ಲೇಖನಗಳು ಬರುವುದಲ್ಲ. ಬೇರೆ ಕನ್ನಡ ಅಂತರ್ಜಾಲ ಪತ್ರಿಕೆಗಳಲ್ಲೂ ಇದನ್ನು ಕಾಣಬಹುದು. ವರ್ತಮಾನಕ್ಕೆ ಒಂದು ಸ್ಪಷ್ಟವಾದ ಆಶಯ ಇದೆ. ಆ ಆಶಯ ಉಳ್ಳವರು ಕಡಿಮೆ ಇರಬಹುದು. ( ಗಾಳಿ ಬಂದ ಕಡೆಗೆ ತೂರುವ ಗುಣ ಇಲ್ಲದಿರುವ, ತನ್ನ ಆಶಯಗಳಿಗೆ ಬದ್ಧವಾಗಿರುವ ‘ವರ್ತಮಾನ ‘ ತನ್ನ ನಿಲುವನ್ನು ಬಿಟ್ಟುಕೊಟ್ಟು ನಡೆಯಬೇಕಾದ ಅಗತ್ಯ ಇಲ್ಲ.) ಹೀಗಾಗಿ ಪ್ರತಿಕ್ರಿಯೆ ಬರುವುದು ಕಡಿಮೆ ಇರಬಹುದು. ನಮ್ಮ ಜನರಲ್ಲಿ ಇರುವ ಪ್ರತಿಕ್ರಿಯಾ ಶೂನ್ಯತೆಯ ಮನೋಭಾವವೂ ಇದಕ್ಕೆ ಕಾರಣ. ಹಾಗೆಂದು ನಾನು ದೇಶದ ಪ್ರಜ್ಞಾವಂತ ನಾಗರಿಕನಾಗಿ ನನ್ನ ಕರ್ತವ್ಯ ಮಾಡದೆ ಇರಲು ಆಗುವುದಿಲ್ಲ. ಇದು ಯಾವುದೇ ಸ್ವಾರ್ಥದಿಂದ ಮಾಡುವ ಕ್ರಿಯೆಯೂ ಅಲ್ಲ. ಯಾರ ಹೊಗಳಿಕೆ ಗಿಟ್ಟಿಸಲು ಬರೆಯುವುದೂ ಅಲ್ಲ.

    Reply
  3. Umesh

    Anand Prasad, I want to ask you one question, how many leftists/Marxists were convicted when they indulged in genocide of poor farmers at Nandigram in West Bengal..?

    Reply
  4. mallikarjunasj

    ತಪ್ಪು ಯಾವುದು ಎಂದು ತೋರಿಸುತ್ತೀರಿ, ಥ್ಯಾಂಕ್ಸ್…
    ಹಾಗಾದರೆ, ಸರಿ ಯಾವುದು?
    ಚಡ್ಡಿಗಳು ತಪ್ಪು ಓಕೇ,..ಕಾಂಗ್ರೆಸ್/ಕಮ್ಯೂನಿಸ್ಟರು ಸರಿಯೇ?

    Reply
    1. Ananda Prasad

      ಕಾಂಗ್ರೆಸ್/ಕಮ್ಯುನಿಷ್ಟರು ಸರಿ ಎಂದು ನಾನು ಹೇಳಿಲ್ಲ. ಆದರೆ ಕಾಂಗ್ರೆಸ್/ಕಮ್ಯುನಿಷ್ಟರು ಧರ್ಮ, ದೇವರು, ಗೋವು, ಮಂದಿರ ಮೊದಲಾದವುಗಳನ್ನು ರಾಜಕೀಯ ಲಾಭಕ್ಕೆ ಬಿಜೆಪಿಯವರಂತೆ ಬಳಸಿದ ಉದಾಹರಣೆ ಇಲ್ಲ.

      Reply
  5. Mahesh

    ಇವುಗಳಷ್ಟೇ ಅಲ್ಲ. ಆಸ್ಸಾಂನಲ್ಲಿ 2191 ಮುಸ್ಸಿಂರನ್ನು ಕೇವಲ 6 ಗಂಟೆಗಳಲ್ಲಿ ಅಮಾನುಷವಾಗಿ ಹತ್ಯೆ ಮಾಡಿದ 1983ರ ನೆಲ್ಲಿ ಹತ್ಯಾಕಾಂಡ ನಡೆಸಿದವರಿಗೂ ಯಾವ ಶಿಕ್ಷೆಯಾಗಿಲ್ಲ. ಸರಕಾರವೇ ಕೇಸ್ ಗಳನ್ನು ವಾಪಸ್ ಕೂಡಾ ಪಡೆದುಕೊಂಡಿದೆ. ಈ ಹತ್ಯಾಕಾಂಡ ನಡೆಸಿದವರು ಮತ್ತು ಅವರನ್ನು ರಕ್ಷಿಸಿದವರು ಯಾವ ಪಂಥೀಯರು ಎನ್ನುವುದು ನನಗೆ ನಿಜಕ್ಕೂ ಗೊತ್ತಿಲ್ಲ.

    Reply

Leave a Reply

Your email address will not be published. Required fields are marked *