ರಾಜಕಾರಣದಲ್ಲಿ ನಿಷ್ಠೆ ಮತ್ತು ಬದ್ಧತೆ ಶಾಶ್ವತವೇ?


– ಚಿದಂಬರ ಬೈಕಂಪಾಡಿ


 

ರಾಜಕೀಯದಲ್ಲಿ ಬದ್ಧತೆ ಮತ್ತು ನಿಷ್ಠೆ ಅತ್ಯಂತ ಹೆಚ್ಚು ಮಾನ್ಯವಾಗುವಂಥ ಮೌಲ್ಯಗಳು. ಬದ್ಧತೆ ಮತ್ತು ನಿಷ್ಠೆ ತನ್ನ ನಾಯಕರಿಗೆ, ಸಮೂಹಕ್ಕೆ ಮತ್ತು ಪಕ್ಷಕ್ಕೆ. ಇದು ಸರಳ ವ್ಯಾಖ್ಯಾನ. ಪ್ರಸುತ ರಾಜಕೀಯ ಸ್ಥಿತಿಯಲ್ಲಿ ಅಥವಾ ಈಗಿನ ಬದಲಾಗಿರುವ ವಾತಾವರಣದಲ್ಲಿ ಬದ್ಧತೆ ಮತ್ತು ನಿಷ್ಠೆಯನ್ನು ಕನ್ನಡಕ ಹಾಕಿಕೊಂಡು ಹುಡುಕಬೇಕಾಗಿದೆ. ಮೌಲ್ಯಗಳು ಅಪಮೌಲ್ಯಗಳಾಗಿರುವುದೇ ಹೆಚ್ಚು. ಮೌಲ್ಯಾಧಾರಿತ ರಾಜಕಾರಣದ ಹೆಸರು ಹೇಳುವುದು ಕೂಡಾ ರಾಜಕಾರಣಿಗಳಿಗೆ ಗೊತ್ತಿಲ್ಲವೋ ಅಥವಾ ಹಾಗೆ ಹೇಳಿ ಅದನ್ನು ಯಾಕೆ ಅಪಮೌಲ್ಯ ಮಾಡುವುದು ಎನ್ನುವ ತಿಳುವಳಿಕೆಯ ಕಾರಣವೋ ಗೊತ್ತಿಲ್ಲ. ಅಂತೂ “ಮೌಲ್ಯಾಧಾರಿತ ರಾಜಕಾರಣ” ಎನ್ನುವ ಪದ ಬಳಕೆ ಕಡಿಮೆಯಾಗಿದೆ. ರಾಮಕೃಷ್ಣ ಹೆಗಡೆ ಅವರಿಗೆ ಈ ಪದ ಬಳಕೆ ಬಿಟ್ಟು ಭಾಷಣವೇ ಇರುತ್ತಿರಲಿಲ್ಲ. ಎಲ್ಲ ಸಂದರ್ಭದಲ್ಲೂ ಅವರ ಬಾಯಿಂದ ಒಂದೆರಡು ಸಲವಾದರೂ ‘ಮೌಲ್ಯಾಧಾರಿತ’Ramakrishna-Hegdeಎನ್ನುವ ಪದ ಬಳಕೆಯಾಗುತ್ತಿತ್ತು. ಹಾಗೆಯೇ ನಜೀರ್ ಸಾಬ್ ಅವರಿಗೆ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವ ಪದ ಬಳಕೆ ಇಷ್ಟವಾಗಿತ್ತು. ಸಾರ್ವಜನಿಕ ಸಭೆಯಾಗಲೀ, ಅಧಿಕಾರಿಗಳ ಜೊತೆ ನಡೆಸುವ ಪ್ರಗತಿ ಪರಿಶೀಲನಾ ಸಭೆಯಾಗಲೀ ನಜೀರ್ ಸಾಬ್ ಅವರು ಸಹಜವಾಗಿಯೇ ಈ ಪದ ಬಳಕೆ ಮಾಡುತ್ತಿದ್ದರು. ಇದರ್ಥ ಅವರಿಗೆ ಆ ಪದಗಳ ಮೇಲಿದ್ದ ಬದ್ಧತೆ ಅದೆಷ್ಟು ಎನ್ನುವುದು ಅರಿವಾಗುತ್ತದೆ.

ಈ ಉದಾಹರಣೆಯನ್ನು ಯಾಕೆ ಕೊಡಬೇಕಾಯಿತೆಂದರೆ ಈಗಿನ ರಾಜಕಾರಣದಲ್ಲಿ ಬದ್ಧತೆ ಮತ್ತು ನಿಷ್ಠೆ ಎರಡೂ ಇಲ್ಲ ಎನ್ನುವುದು ಸರ್ವರಿಗೂ ಗೊತ್ತಿದೆ. ಹಾಗೆಯೇ ಇವು ಇರಬೇಕೇ? ಅವುಗಳ ಅನಿವಾರ್ಯತೆ ಇದೆಯೇ? ಎನ್ನುವ ಪ್ರಶ್ನೆಯೂ ಉದ್ಭವಿಸುತ್ತಿದೆ. ಪಕ್ಷಾಂತರ ನಡೆಯುತ್ತಿರುವುದನ್ನು ಮತ್ತು ಆಪರೇಷನ್ ಕಮಲ, ಆಪರೇಷನ್ ಕಾಂಗ್ರೆಸ್ ಅಥವಾ ಆಪರೇಷನ್ ಜೆಡಿಎಸ್ ಹೀಗೆ ಈ ಆಪರೇಷನ್‌ಗಳು ಬದ್ಧತೆ ಮತ್ತು ನಿಷ್ಠೆ ಎರಡೂ ಅನಿವಾರ್ಯವಲ್ಲ ಎನ್ನುವುದಕ್ಕೆ ಸಾಕ್ಷಿ.

ರಾಜಕೀಯವಾಗಿ, ಸೈದ್ಧಾಂತಿಕವಾಗಿ ಕಡು ವಿರೋಧಿಯಾದ ಬಿಜೆಪಿ ಮತ್ತು ಜೆಡಿಎಸ್ ಅಥವಾ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ನಡೆಸುತ್ತವೆ ಎನ್ನುವುದಾದರೆ ಸೈದ್ಧಾಂತಿಕ ಬದ್ಧತೆಯನ್ನು ಎಲ್ಲಿ ಹುಡುಕುವಿರಿ? ಕಾಂಗ್ರೆಸ್ ಪಕ್ಷದಿಂದ ಸಿಡಿದು ಹೋದ ಎನ್‌ಸಿಪಿ, ತೃಣಮೂಲ ಕಾಂಗ್ರೆಸ್ ಮತ್ತೆ ಯುಪಿಎ ಮುಂಚೂಣಿಯಲ್ಲಿರುವ ಕಾಂಗ್ರೆಸ್ ಜೊತೆಗೆ ಸರ್ಕಾರ ಮಾಡುತ್ತವೆ, ಸಂಪುಟದಲ್ಲಿ ಭಾಗಿಯಾಗುತ್ತವೆ ಅಂತಾದರೆ ಸೈದ್ಧಾಂತಿಕ ಚೌಕಟ್ಟಿಗೆ ಎಲ್ಲಿದೆ ಬದ್ಧತೆ?

ಆದ್ದರಿಂದ ಬದ್ಧತೆ ಮತ್ತು ನಿಷ್ಠೆ ಎರಡೂ ಈಗಿನ ರಾಜಕಾರಣಕ್ಕೆ ಅನಿವಾರ್ಯವಲ್ಲ. ನಾಯಕರಿಗೂ ಬದ್ಧತೆ ಇರಬೇಕಾಗಿಲ್ಲ, ನಾಯಕರೆಂದು ಒಪ್ಪಿಕೊಂಡವರಿಗೂ ಬದ್ಧತೆ ಮತ್ತು ನಿಷ್ಠೆ ಇರಲೇಬೇಕೆನ್ನುವ ಕಟ್ಟುಪಾಡು ಬೇಕಾಗಿಲ್ಲ.

ಕರ್ನಾಟಕದ ರಾಜಕೀಯ ಸ್ಥಿತಿಯನ್ನೇ ಅವಲೋಕಿಸಿದರೆ ನಾಲ್ಕು ದಶಕಗಳ ಕಾಲ ಹಿಂದುತ್ವ, ಬಿಜೆಪಿ ಸಿದ್ಧಾಂತವನ್ನು ಪ್ರತಿಪಾದಿಸುತ್ತಾ ರಾಜಕೀಯದಲ್ಲಿ ನೆಲೆ, ಬೆಲೆ ಗಳಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ತೊರೆದ ಮೇಲೆ ತಾವು ಯಾರಿಗೆ ನಿಷ್ಠೆ ತೋರಿಸುತ್ತಿದ್ದರೋ, ಯಾವ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ, ನಿಷ್ಠರಾಗಿದ್ದರೋ ಅವರನ್ನು ಹಿಗ್ಗಾಮುಗ್ಗಾ ಝಾಡಿಸುತ್ತಿದ್ದರೇ? ತಮ್ಮನ್ನು ಪದಚ್ಯುತಗೊಳಿಸಿದ ಕಾರಣಕ್ಕೆ ಆಕ್ರೋಶಗೊಂಡು ಪರ್ಯಾಯ ಪಕ್ಷ ಸ್ಥಾಪಿಸಿದ ಯಡಿಯೂರಪ್ಪ ಪ್ರತಿಪಾದಿಸುವ ಮೌಲ್ಯಗಳು ಯಾವುವು? yeddyurappa_rssಸಂಘ ಪರಿವಾರ ಕಲಿಸಿದ ನೀತಿ ಪಾಠ, ಬಿಜೆಪಿ ಕಲಿಸಿದ ತತ್ವ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಅವರು ಈಗ ಕೆಜೆಪಿ ಕಟ್ಟಿಲ್ಲ. ಅವರು ಈಗ ಯಾವ ಸಿದ್ಧಾಂತವನ್ನೂ ಪ್ರತಿಪಾದಿಸುತ್ತಿಲ್ಲ. ಅವರು ಆಡುತ್ತಿರುವ ಮಾತು, ಮಾಡುತ್ತಿರುವ ಭಾಷಣದ ತುಣುಕುಗಳನ್ನು ಅವಲೋಕಿಸಿದರೆ ನಿಮಗೆ ಅವರು ನಾಲ್ಕು ದಶಕಗಳಿಂದ ನಂಬಿಕೊಂಡು, ಪಾಲಿಸಿಕೊಂಡು ಬಂದ ತತ್ವ, ಸಿದ್ಧಾಂತ, ನಿಷ್ಠೆಯ ಲವಲೇಶವೂ ಗೋಚರಿಸುವುದಿಲ್ಲ. ನಿಜವಾಗಿಯೂ ಅವರು ಕಾಂಗ್ರೆಸ್ ಪಕ್ಷ ಅಥವಾ ಬಿಜೆಪಿಗಿಂತಲೂ ಹೆಚ್ಚು ಸೆಕ್ಯೂಲರ್ ಎನ್ನುವ ರೀತಿಯಲ್ಲಿ ತಮ್ಮನ್ನು ಬಿಂಬಿಸಿಕೊಳ್ಳುತ್ತಿದ್ದಾರೆ, ಮಾತು, ನಡವಳಿಕೆ ಮೂಲಕ. ಯಾಕೆಂದರೆ ಅದು ಈಗ ಅವರಿಗೆ ಅನಿವಾರ್ಯ. ಅವರು ತೋರಿಸಿದ ಪಕ್ಷ ನಿಷ್ಠೆಯಾಗಲೀ, ಬದ್ಧತೆಯಾಗಲೀ ಈಗ ಅವರ ನೆರವಿಗೆ ಬಂದಿಲ್ಲ ಆ ಪಕ್ಷ ಮತ್ತು ನಾಯಕರಿಂದ. ಆದ್ದರಿಂದಲೇ ಈಗ ಅವರು ಜನರಿಗೆ ಬದ್ಧರಾಗಿ, ಜನರಿಗೆ ನಿಷ್ಠರಾಗಿ, ಅಭಿವೃದ್ಧಿ ಮಾಡುವ ಕನಸು ನನಸು ಮಾಡುವುದಕ್ಕಾಗಿ ಹೆಚ್ಚಾಗಿ ಈ ನಾಡನ್ನು ಕಲ್ಯಾಣ ಕರ್ನಾಟಕ ಮಾಡುವುದಕ್ಕಾಗಿ ಕೆಜೆಪಿ ಕಟ್ಟಿದ್ದಾರಂತೆ. ಇವರೊಂದಿಗೆ ಹೆಜ್ಜೆ ಹಾಕಿರುವ ವಿ.ಧನಂಜಯ ಕುಮಾರ್ ಕೂಡಾ ಕಟ್ಟಾ ಸಂಘ ಪರಿವಾರ, ಹಿಂದುತ್ವ ಪ್ರತಿಪಾದನೆ ಮಾಡಿಕೊಂಡೇ ರಾಜಕೀಯದಲ್ಲಿ ತಮ್ಮ ನಿರೀಕ್ಷೆಗೂ ಮೀರಿದ ಸ್ಥಾನ ಪಡೆದಿದ್ದರು. ಅಟಲ್, ಅಡ್ವಾಣಿ, ರಾಜನಾಥ್ ಸಿಂಗ್ ಅವರ ಕಣ್ಣಿಗೆ ಯಡಿಯೂರಪ್ಪ, ಧನಂಜಯ ಕುಮಾರ್ ಭವಿಷ್ಯದ ಬೆಳಕಾಗಿದ್ದವರು, ಅವರುಗಳ ಒಡನಾಟದಲ್ಲಿ ಬೆಳೆದವರು. ಅಂಥ ಬದ್ಧತೆ, ನಿಷ್ಠೆಯನ್ನೂ ತೊರೆಯುವುದು ಸಾಧ್ಯವಾಗುವುದು ರಾಜಕೀಯದಲ್ಲಿ ಮಾತ್ರ, ಅದರಲ್ಲೂ ಅಧಿಕಾರಕ್ಕಾಗಿ ಮಾತ್ರ.

ಬಿಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಶ್ರೀರಾಮುಲು ಸುಷ್ಮಾ ಅವರಿಗೆ ತೋರಿಸಿದ ನಿಷ್ಠೆ, ಬಿಜೆಪಿಗೆ ವ್ಯಕ್ತಪಡಿಸಿದ್ದ ಬದ್ಧತೆಯನ್ನು ನಿರಾಕರಿಸಲು ಸಾಧ್ಯವೇ? ಬಳ್ಳಾರಿಯಲ್ಲಿ ಹೆಸರಿರದಿದ್ದ ಬಿಜೆಪಿಯನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ್ದವರು ರೆಡ್ಡಿ ಬ್ರದರ್ಸ್. ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಿ ಗಣಿನಾಡಿನಲ್ಲಿ ಕಮಲ ಕಲರವಕ್ಕೆ ಕಾರಣರು ಎನ್ನುವುದು ವಾಸ್ತವ ಸತ್ಯ. ಹೆತ್ತ ತಾಯಿಗಿಂತಲೂ ಹೆಚ್ಚು ನಿಷ್ಠೆ ತೋರಿಸುತ್ತಿದ್ದ ಶ್ರೀರಾಮುಲು, ಮಗನಿಗಿಂತೇನೂ ಕಡಿಮೆ ಪ್ರೀತಿ ಹರಿಸದ ಸುಷ್ಮಾ ಈ ಇಬ್ಬರಲ್ಲಿ ಯಾವ, ಬದ್ಧತೆ, ಯಾರಿಗೆ ಬದ್ಧತೆ, ಯಾವ ನಿಷ್ಠೆ, ಯಾರಿಗೆ ನಿಷ್ಠೆ ಹುಡುಕುತ್ತೀರಿ?

ಬದ್ಧತೆ ಮತ್ತು ನಿಷ್ಠೆ ಕಾಣೆಯಾಗುತ್ತಿರುವ ಹಿನ್ನೆಲೆಯನ್ನು ವಿವರಿಸಲು ಮಾತ್ರ ಕೆಲವೇ ಕೆಲವು ಹೆಸರುಗಳನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿದೆ ಹೊರತು ಇವಿಷ್ಟೇ ಹೆಸರೆಂದು ಯಾರೂ ಭಾವಿಸಬೇಕಾಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದ ಮರುಕ್ಷಣದಿಂದಲೇ ಮಹಾತ್ಮಾ ಗಾಂಧಿ ಅವರಿಗೂ ಬದ್ಧತೆ ಮತ್ತು ನಿಷ್ಠೆ ನಿರಂತರವಾಗಿ ಉಳಿಯಲಾರವು ತನ್ನ ಒಡನಾಡಿಗಳಲ್ಲಿ ಎನ್ನುವ ಸುಳಿವು ಸಿಕ್ಕಿತ್ತು. ಆದ್ದರಿಂದಲೇ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷ ವೇದಿಕೆ ಮಾತ್ರ, ಅದರ ಕೆಲಸ ಮುಗಿಯಿತು, ಅದನ್ನು ವಿಸರ್ಜಿಸುವುದೇ ಸೂಕ್ತವೆಂದು ಹೆಳಿದ್ದರು. ಅಲ್ಲಿಂದಲೇ ಪಕ್ಷ ವಿಭಜನೆಯ ಆರಂಭ ಎನ್ನುವುದನ್ನು ಮರೆಯುವಂತಿಲ್ಲ.

ಆಗಲೇ ಹೊಸ ಪಕ್ಷ, ಅವರವರ ಬದ್ಧತೆ, ನಿಷ್ಠೆಗೆ ಅನುಗುಣವಾಗಿ ಸ್ಥಾಪನೆಯಾದವು, ಅವುಗಳಲ್ಲಿ ನಂಬಿಕೆಯುಳ್ಳವರು, ವಿಶ್ವಾಸವಿರುವವರು ಸೇರಿಕೊಂಡರು. ಆಡಳಿತ ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್, ಇಂದಿರಾ ಕಾಂಗ್ರೆಸ್ ಹೀಗೆ ವಿಭಜನೆಯಾಗುತ್ತಾ 70ರ ದಶಕದಲ್ಲಿ ಮತ್ತಷ್ಟು ಹೊಸ ಹೊಸ ಪಕ್ಷಗಳು ಜನ್ಮ ತಳೆದವು.

ಕಾಂಗ್ರೆಸ್ ಪಕ್ಷದ ಮೇಲೆ, ಇಂದಿರಾ ಗಾಂಧಿ ಮೇಲೆ ದೇವರಾಜ ಅರಸು ಅವರಿಗಿದ್ದ ಬದ್ಧತೆ, Devaraj Arasನಿಷ್ಠೆಯನ್ನು ಪ್ರಶ್ನೆ ಮಾಡಲು ಸಾಧ್ಯವಿತ್ತೇ? ಆದರೆ ಅವರೂ ತಮ್ಮ ಹಾದಿ ಬದಲಿಸಿಕೊಂಡರು ಅಧಿಕಾರಕ್ಕಾಗಿ. ಆದ್ದರಿಂದ ಬದ್ಧತೆ, ನಿಷ್ಠೆ ನಾಪತ್ತೆಯಾಗುತ್ತಿರುವುದು ಈಗಷ್ಟೇ ಎನ್ನುವಂತಿಲ್ಲ, ಅದರ ಪ್ರಮಾಣ ಹೆಚ್ಚಾಗಿದೆ ಎನ್ನುವುದನ್ನು ನಿರಾಕರಿಸುವಂತಿಲ್ಲ. ವೀರೇಂದ್ರ ಪಾಟೀಲ್ ಇಂದಿರಾ ವಿರುದ್ಧವೇ ಚಿಕ್ಕಮಗಳೂರಲ್ಲಿ ಸ್ಪರ್ಧಿಸಿದ್ದರು. ಮತ್ತೆ ವೀರೇಂದ್ರ ಪಾಟೀಲ್ ಕಾಂಗ್ರೆಸ್ ಮೂಲಕವೇ ಮುಖ್ಯಮಂತ್ರಿಯಾದರು. ಹಾಗಾದರೆ ನಿಷ್ಠೆ, ಬದ್ಧತೆಗೆ ಯಾವ ವ್ಯಾಖ್ಯಾನ ಕೊಡುತ್ತೀರಿ.

ಎಸ್.ಬಂಗಾರಪ್ಪ ಕಾಂಗ್ರೆಸ್ ಪಕ್ಷವನ್ನು ಹೇಗೆ ಜರೆದಿದ್ದರು. ನರಸಿಂಹ ರಾವ್ ಅವರನ್ನು ಚೇಳು ಎಂದಿದ್ದರು. ಮತ್ತೆ ಕಾಂಗ್ರೆಸ್ ಸೇರಿ ಎಲ್ಲವು ಕಳೆದುಹೋದ ಅಧ್ಯಾಯವೆಂದಿದ್ದರು.

ಹೀಗೆ ವಿಶ್ಲೇಷಿಸುತ್ತಾ ಹೋದರೆ ಬದ್ಧತೆ ಮತ್ತು ನಿಷ್ಠೆಯ ಪಲ್ಲಟಗಳ ಪರಾಕಾಷ್ಠೆ ಇನ್ನು ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಟಿಕೆಟ್ ಹಂಚಿಕೆ ಪ್ರಕ್ರಿಯೆ ಮುಗಿಸಿದ ಮರುದಿನವೇ ತಾವು ಬದುಕಿನುದ್ದಕ್ಕೂ ಹೇಳುತ್ತಲೇ ಬಂದ ಸಿದ್ಧಾಂತ, ತೋರಿಸುತ್ತಾ ಬಂದ ನಿಷ್ಠೆ, ಬದ್ಧತೆಯನ್ನು ಬಿಟ್ಟು ಯಾರು ಯಾವ ಪಕ್ಷದ ಕದ ತಟ್ಟುತ್ತಾರೆಂದು ನೋಡುತ್ತಿರಿ. ಈ ಹಿಂದೆ ಎಂದೂ ಆಗದಿದ್ದಷ್ಟು ವಲಸೆ ನಡೆಯಲಿವೆ. ನಿಷ್ಠೆ, ಬದ್ಧತೆ ಅನಿವಾರ್ಯವಲ್ಲವೆಂದು ಸಾರಿ ಹೇಳಿರುವ ಯಡಿಯೂರಪ್ಪ ಟಿಕೆಟ್ ಸಿಗದೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ತೊರೆದು ಬರುವವರಿಗೆ ಮಣೆ ಹಾಕಲಿದ್ದಾರೆ. ಆಗ ಟಿಕೆಟ್ ಕೊಟ್ಟರೆ ಯಡಿಯೂರಪ್ಪ ಅವರಿಗೆ ಬದ್ಧತೆ, ಅವರ ಕೆಜೆಪಿ ಪಕ್ಷಕ್ಕೆ ನಿಷ್ಠೆ. ಯಡಿಯೂರಪ್ಪ ಹೇಳುವ ಸಿದ್ಧಾಂತಕ್ಕೆ ಬದ್ಧರು ಮತ್ತು ನಿಷ್ಠರು. ಅಂತಿಮವಾಗಿ ಉಳಿದು ಬಿಡುವ ಪ್ರಶ್ನೆ ಇಲ್ಲೂ ಬದ್ಧತೆ, ನಿಷ್ಠೆ ಶಾಶ್ವತವೇ?

One thought on “ರಾಜಕಾರಣದಲ್ಲಿ ನಿಷ್ಠೆ ಮತ್ತು ಬದ್ಧತೆ ಶಾಶ್ವತವೇ?

  1. ತುಳುವ

    motive of entering into politics is changed now. probably your other article on corruption answers the questions raised by you.

    Reply

Leave a Reply

Your email address will not be published. Required fields are marked *