Monthly Archives: April 2013

ಕರ್ನಾಟಕದ ಮುಂದಿನ ದಿನಗಳಿಗೆ ಮುನ್ನುಡಿ…

ಸ್ನೇಹಿತರೇ,

ಇನ್ನೊಂದೆರಡು ವಾರ, ಮತ್ತೆ ವರ್ತಮಾನ.ಕಾಮ್ ನಿಧಾನವಾಗಿ ಪ್ರತಿದಿನ ನಿಯತಕಾಲಿಕವಾಗುತ್ತದೆ ಎನ್ನುವ ವಿಶ್ವಾಸವಿದೆ.

ನಿಮಗೆ ಗೊತ್ತಿರುವಂತೆ, ನಾನು ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಲೋಕ್‌ಸತ್ತಾ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ. ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಇಲ್ಲಿ ಕೊನೆಯ ಗಳಿಗೆಯವರೆಗೂ ಬಿಜೆಪಿ ಅಭ್ಯರ್ಥಿ ಘೋಷಣೆ ಆಗಿರಲಿಲ್ಲ. ನಿಲ್ಲಲು ಯಾರೂ ಇಲ್ಲದಂತಹ ಪರಿಸ್ಥಿತಿ ಅಲ್ಲಿತ್ತು. ಜೆಡಿಎಸ್ ಇಲ್ಲಿ ಎಂದೂ ಲೆಕ್ಕಕ್ಕಿರಲಿಲ್ಲ, ಮತ್ತು ಅಂತಹುದರಲ್ಲಿ ಈಗ ಬಂಡಾಯ ಅಭ್ಯರ್ಥಿ ಬೇರೆ ಕಣದಲ್ಲಿದ್ದಾರೆ. ಕಾಂಗ್ರೆಸ್ ನಾವೇ ಗೆಲ್ಲುತ್ತೇವೆ ಎನ್ನುವ ಅತೀವ ವಿಶ್ವಾಸದಲ್ಲಿದೆ, ಆದರೆ, ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಸಾಧ್ಯವಾದರೆ ನಾನು ಆಯ್ಕೆಯಾಗಲಿ ಎನ್ನುವಷ್ಟು ನನ್ನ ಬಗ್ಗೆ ಮತ್ತು ನಮ್ಮ ಪಕ್ಷದ ಬಗ್ಗೆ ಪ್ರೀತಿ, ಅಭಿಮಾನ, ಗೌರವವಿದೆ.

ಸುಮಾರು ಎರಡೂವರೆ ತಿಂಗಳಿನಿಂದ ನಾವು ಪ್ರಚಾರ ಮಾಡುತ್ತಿದ್ದೇವೆ, ಇಷ್ಟೂ ದಿನಗಳ ನಮ್ಮ ಪ್ರಚಾರಕ್ಕೆ ಇಲ್ಲಿಯವರೆಗೆ ಸುಮಾರ 5+ ಲಕ್ಷ ರೂಪಾಯಿ ಖರ್ಚಾಗಿದೆ. ಅದು ಕೇವಲ ಕರಪತ್ರಗಳ ಮುದ್ರಣಕ್ಕೆ ಮತ್ತು ಹಂಚಲು ನಮ್ಮ ಕಾರ್ಯಕರ್ತರಿಗೆ ಕೊಡಲಾಗಿರುವ ಸಂಬಳದ ಖರ್ಚು, ಅಷ್ಟೇ. ಸುಮಾರು ನಾಲ್ಕು ಲಕ್ಷ ಕರಪತ್ರಗಳನ್ನು ಹಂಚಲಾಗಿದೆ. ನಾನು ಈ ಹಿಂದೆ ಬರೆದಿದ್ದೆ: ಒಳ್ಳೆಯ ಚುನಾವಣೆ ನಡೆಸಲು ಹದಿನಾರು ಲಕ್ಷ ಸಾಕು ಎಂದು. ನಾನು ಹತ್ತು ಲಕ್ಷದ ಮಿತಿಯನ್ನೂ ದಾಟುವಂತೆ ಕಾಣುತ್ತಿಲ್ಲ. ಈ ಕ್ಷೇತ್ರದಲ್ಲಿ ಚುನಾವಣಾಧಿಕಾರಿಗಳಿಗೆ ಅಭ್ಯರ್ಥಿಗಳು Ravi-SripadBhat-Sriharshaಸಲ್ಲಿಸಿರುವ ಖರ್ಚಿನ ಲೆಕ್ಕದ ಪ್ರಕಾರ ನಾವು ಕಾಂಗ್ರೆಸ್ ಮತ್ತು ಬಿಜೆಪಿಯವರಿಗಿಂತ ಹೆಚ್ಚು ಖರ್ಚು ಮಾಡಿದ್ದೇವೆ, ನಾಮಪತ್ರ ಸಲ್ಲಿಸಿದ ದಿನದಿಂದ (ಏಪ್ರಿಲ್ 15) ತೋರಿಸಬೇಕಾದ ಲೆಕ್ಕದ ಪ್ರಕಾರ ನಮ್ಮ ಖರ್ಚು ಮೂರು ಲಕ್ಷ ದಾಟಿದ್ದರೆ, ಕಾಂಗ್ರೆಸ್ ಮತ್ತು ಬಿಜೆಪಿಯವರದು ಒಂದು ಲಕ್ಷವನ್ನೂ ದಾಟಿಲ್ಲ. ಇವರ ಲೆಕ್ಕಗಳಂತಹ ಸುಳ್ಳಿನ, ಮೋಸದ, ಅಪ್ರಾಮಾಣಿಕತೆಯ ನಡವಳಿಕೆಗಳು ನಮ್ಮಲ್ಲಿ ಆಕ್ರೋಶ ಹುಟ್ಟಿಸಬೇಕು.

ಅಂದ ಹಾಗೆ, ಇಲ್ಲಿಯವರೆಗೆ ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ನಮ್ಮ ಚುನಾವಣಾ ಪ್ರಚಾರಕ್ಕೆಂದು ರೂ 4,83,902 ಹಣ ಸಂಗ್ರಹವಾಗಿದೆ. ನನ್ನ ಕಡೆಯಿಂದ 2 ಲಕ್ಷ ಹಣ ಹಾಕಿಕೊಂಡಿದ್ದೇನೆ. ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಜನ ಈ ಪ್ರಯತ್ನಕ್ಕೆ ತಮ್ಮ ದೇಣಿಗೆ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.

ಉಳಿದಿರುವ ಈ ವಾರದ ಪ್ರಚಾರಕ್ಕೆ ಕನಿಷ್ಟ 4-5 ಲಕ್ಷ ರೂಪಾಯಿಯಾದರೂ ಬೇಕು. ಆಗ ನಾವು ಇನ್ನೂ ಪ್ರಭಾವಶಾಲಿ ಪ್ರಚಾರ ಕೈಗೊಳ್ಳಬಹುದು. ಬೆಂಬಲಿಸಬೇಕು ಎಂದು ನಿಮಗನ್ನಿಸಿದಲ್ಲಿ ದಯವಿಟ್ಟು ಮನಸ್ಸು ಮಾಡಿ ಮತ್ತು ಬೆಂಬಲಿಸಿ. ನೀವಲ್ಲದಿದ್ದರೆ ಇನ್ಯಾರು? ಈಗಲ್ಲದಿದ್ದರೆ ಇನ್ಯಾವಾಗ?

ದೇಣಿಗೆ ಕೊಟ್ಟವರ ಮತ್ತು ಹೇಗೆ ಕೊಡಬೇಕು ಎನ್ನುವ ವಿವರಗಳು ಈ ಪುಟದಲ್ಲಿವೆ: http://wp.me/P3aJQl-h

ನಮ್ಮಲ್ಲಿ ಅನೇಕ ಜನ ಸಭೆಗಳಲ್ಲಿ ಮತ್ತು ಖಾಸಗಿ ಚರ್ಚೆಗಳಲ್ಲಿ ಆದರ್ಶ, ನ್ಯಾಯ, ನೀತಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಕ್ರಿಯೆಯ ಸಂದರ್ಭ ಬಂದಾಗ ಆಷಾಢಭೂತಿಗಳಾಗುತ್ತಾರೆ. ನನಗೆ ಗೊತ್ತಿರುವ ಜನರಲ್ಲಿ ಹತ್ತಕ್ಕು ಒಬ್ಬರು ಧನಸಹಾಯ ಮಾಡಿದ್ದರೂ ನಮ್ಮ ಹಣ ಸಂಗ್ರಹ ಹತ್ತು ಲಕ್ಷ ಮೀರಬೇಕಿತ್ತು. ಪ್ರಚಾರಕ್ಕೆ ಬರುತ್ತೇವೆ ಎಂದವರೆಲ್ಲ ಬಂದಿದ್ದರೆ ಇಷ್ಟೊತ್ತಿಗೆ ಈ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿತ್ತು. ವಿಚಾರ ಗೊತ್ತಿರುವವರಿಗೆ ನಾನು ಪದೇಪದೇ ನೆನಪಿಸುವುದಿಲ್ಲ ಮತ್ತು ಕೇಳುವುದಿಲ್ಲ. ಮಾಡಬೇಕು ಎನ್ನುವುದು ಅವರ ಮನದಾಳದಿಂದ ಬರಬೇಕು, ಬಲವಂತದಿಂದಾಗಲಿ, ಮುಲಾಜಿಗಾಗಲಿ ಅಲ್ಲ.

ನನಗೆ ನಾನು ಏನು ಮಾಡುತ್ತಿದ್ದೇನೆ ಮತ್ತು ಏಕೆ ಮಾಡುತ್ತಿದ್ದೇನೆ ಎನ್ನುವುದು ಸ್ಪಷ್ಟವಾಗಿರುವುದರಿಂದ ಬಹಳ ಆತ್ಮತೃಪ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಈ ಒಂದು ತಿಂಗಳಿನಷ್ಟು ದೈಹಿಕ ಶ್ರಮ ಹಿಂದೆಂದೂ ಹಾಕಿರಲಿಲ್ಲ. ಆದರೆ ಹುಮ್ಮಸ್ಸು ಮತ್ತು ಸಂತೋಷ ಇಮ್ಮಡಿಗೊಳ್ಳುತ್ತಲೇ ಇದೆ. ಕರ್ನಾಟಕದ ಮುಂದಿನ ದಿನಗಳ ಚುನಾವಣಾ ಪದ್ದತಿ ಹೇಗಿರಬೇಕು ಎನ್ನುವುದಕ್ಕೆ ಈ ಚುನಾವಣೆ ಮುನ್ನುಡಿ ಬರೆಯುತ್ತದೆ ಎನ್ನುವ ವಿಶ್ವಾಸವಿದೆ.

ಆದರೆ, ಈ ಚುನಾವಣೆ ಮತ್ತದೇ ಭ್ರಷ್ಟ, ಅಸಮರ್ಥ, ಅನೀತಿಯ ರಾಜಕಾರಣಿಗಳನ್ನೇ ವಿಧಾನಸಭೆಗೆ ಕಳುಹಿಸುತ್ತದೆ ಮತ್ತು ಕರ್ನಾಟಕದ ಮುಂದಿನ ನಾಲ್ಕೈದು ವರ್ಷಗಳು ಹಿಂದಿನ ನಾಲ್ಕೈದು ವರ್ಷಗಳಿಗಿಂತ ಭಿನ್ನವಾಗೇನೂ ಇರುವುದಿಲ್ಲ. ಅದಕ್ಕೆ ನಮ್ಮ ಪ್ರಜ್ಞಾವಂತರ (?) ನಿಷ್ಕ್ರಿಯತೆ, ಸಣ್ಣತನ, ನಿರಾಶಾವಾದಗಳೇ ಕಾರಣವಾಗಬಹುದೇ ಹೊರತು ಬೇರೆ ಅಲ್ಲ. ಒಳ್ಳೆಯ, ಸಮರ್ಥ, ಪ್ರಜ್ಞಾವಂತ ಜನ ರಾಜಕೀಯಕ್ಕೆ ಬರುವುದಕ್ಕೆ ಮತ್ತು ಬೆವರು ಹರಿಸುವುದಕ್ಕೆ (ತಮಗಾಗಿ ಅನ್ನುವುದಕ್ಕಿಂತ ತಾವು ನಂಬಿದ ಸಾರ್ವಕಾಲಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ) ಇದು ಸೂಕ್ತ ಸಮಯವೂ ಆಗುತ್ತದೆ.

ಅಂದ ಹಾಗೆ, ನಮ್ಮ ಪ್ರಚಾರದ ಫೋಟೊಗಳು ಮತ್ತಿತರ ವಿವರಗಳು ನನ್ನ ವೆಬ್‍‌ಸೈಟ್‌ನಲ್ಲಿವೆ: www.ravikrishnareddy.com

ನಮಸ್ಕಾರ,
ರವಿ…

ನಿಮ್ಮ ಒಂದು ಮತವೂ ನಿರ್ಣಾಯಕ.. ಯೋಚಿಸಿ.. ಚಲಾಯಿಸಿ.

 12ss1-ಡಾ.ಎಸ್.ಬಿ.ಜೋಗುರ

ಸ್ವಾತಂತ್ರ್ಯೋತ್ತರ ಭಾರತದ  ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಅಲ್ಲಿ ಉಂಟಾದ ಅನೇಕ ಬಗೆಯ ರಾಜಕೀಯ ಸ್ಥಿತ್ಯಂತರಗಳು ನೈತಿಕವಾಗಿ ಹದಗೆಡುತ್ತಾ ಬಂದ ರಾಜಕೀಯ ಸನ್ನಿವೇಶವನ್ನು ಅನಾವರಣ ಮಾಡುವ ಜೊತೆಜೊತೆಗೆ,  ಮೌಲ್ಯಾಧಾರಿತ ರಾಜಕೀಯ ಎನ್ನುವುದು ಹೇಗೆ ಅಪಮೌಲೀಕರಣದ ಸಹವಾಸದಲ್ಲಿಯೇ ಸುಖ ಅನುಭವಿಸುವ ಖಯಾಲಿಯಾಗಿ ಪರಿಣಮಿಸಿತು ಎನ್ನುವ ಬಗ್ಗೆ ಒಂದು ಸ್ಥೂಲವಾದ ನೋಟವೊಂದನ್ನು ನಮಗೆ ಪರಿಚಯಿಸುತ್ತದೆ. 80 ರ ದಶಕದ ಮುಂಚಿನ ಅರ್ಧದಷ್ಟಾದರೂ ರಾಜಕೀಯ ಪ್ರಭೃತಿಗಳು ತಕ್ಕ ಮಟ್ಟಿಗಾದರೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವ ನಿಟ್ಟಿನಲ್ಲಿ ತಮ್ಮ ರಾಜಕೀಯ ಸತ್ತೆಯನ್ನು ನಿರ್ವಹಿಸುತ್ತಿದ್ದರು. 80 ರ ದಶಕದ ನಂತರ  ರಾಜಕಾರಣವೆನ್ನುವದು ಮೌಲ್ಯ ಮತ್ತು ನೈತಿಕತೆಯ ಸಹವಾಸದಿಂದ ಗಾವುದ ಗಾವುದ ದೂರ ಎನ್ನುವ ಹಾಗೆ ಮಾರ್ಪಟ್ಟಿದ್ದು ದೊಡ್ಡ ವಿಷಾದ.  ಆನಂತರದ ದಿನಗಳಲ್ಲಿ ನೈತಿಕ ಅಧಃಪತನದ ಮಾರ್ಗದಲ್ಲಿ ನಡೆದು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಅಣಕಿಸುವ ಹಾಗೆ ರಾಜಕಾರಣ ಮಾಡುವವರು ಮಾತ್ರ ಇಲ್ಲಿ ಸಲ್ಲುತ್ತಾರೆ ಎನ್ನುವ ಹಾಗೆ ರಾಜಕೀಯ ಪರಿಸರ ಕಲುಷಿತಗೊಂಡದ್ದು ಈ ದೇಶದ ಬಹುದೊಡ್ಡ ದುರಂತ. ಸ್ವಾತಂತ್ರ್ಯ ಹೋರಾಟದ ಯಾವ ಗಂಧ-ಗಾಳಿಯ ಸೋಂಕಿಲ್ಲದ ವರ್ತಮಾನದ ರಾಜಕಾರಣಿಗಳು ಬ್ರಹ್ಮಾಂಡ ಭ್ರಷ್ಟ ವ್ಯವಸ್ಥೆಯನ್ನು ರೂಪಿಸುವ ಮೂಲಕ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದೇ ತಪ್ಪಾಯಿತಲ್ಲ..! ಎನ್ನುವ ಹತಾಶೆಯ ಭಾವನೆ ಮೂಡುವಂತೆ ಮಾಡುವಲ್ಲಿ ಅತ್ಯಂತ ನಿರ್ಣಾಯಕರಾದರು. ರಾಜಕಾರಣ ಎನ್ನುವುದು ಒಂದು ಮೌಲಿಕವಾದ ಕೆಲಸ ಎನ್ನುವ ಭಾವನೆ, ಅಭಿಪ್ರಾಯಗಳನ್ನು ದಾಟಿ ನಾವು ಹಿಂದೆ ಹೊರಳಿ ನೋಡಲಾಗದ ದೂರವನ್ನು  ಕ್ರಮಿಸಿದ್ದೇವೆ. ಗಂಭೀರವಾದ ತಾತ್ವಿಕವಾದ, ಬದ್ಧತೆಯನ್ನಿಟ್ಟುಕೊಂಡು ಮಾಡಬಹುದಾದ ರಾಜಕಾರಣ, ರಾಜಕಾರಣಿಗಳನ್ನು ನೋಡುವದೇ ದುಸ್ತರ ಎನ್ನುವ ಸಂದರ್ಭದಲ್ಲಿ ನಾವಿದ್ದೇವೆ. ಮತದಾರ ಇಂದು ಸರಿ ತಪ್ಪುಗಳ, ಯುಕ್ತಾಯುಕ್ತತೆಯ ತೀರ್ಮಾನಗಳ ಗೊಂದಲದಲ್ಲಿದ್ದಾನೆ. ಒಳ್ಳೆಯವರಿಗೆ ಇದು ಕಾಲವಲ್ಲ ಎಂದು ಹೇಳುತ್ತಲೇ ಮತದಾನ ಮಾಡುವ ಸಂದಿಗ್ದದ ನಡುವೆ ಎಂಥವನನ್ನು ನಮ್ಮ ಜನನಾಯಕನನ್ನಾಗಿ ಆಯ್ಕೆ ಮಾಡಬೇಕು ಎನ್ನುವುದೇ ಬಹುದೊಡ್ಡ ತೊಡಕಾಗಿದೆ.
ತೀರಾ ಸಾತ್ವಿಕನಾದವನು, ಶುದ್ಧ ಹಸ್ತನು ರಾಜಕೀಯ ಅಖಾಡದಲ್ಲಿ ಇರುವದನ್ನು ಸದ್ಯದ ರಾಜಕೀಯ ಪರಿಸರ ಸಹಿಸುವದಿಲ್ಲ ಎನ್ನುವ ವಾಸ್ತವವನ್ನು ನಾವು ಮರೆಯುವದಾದರೂ ಹೇಗೆ..? ಒಂದು ಅವಧಿಗೆ ಶಾಸಕನಾದರೂ ಸಾಕು ಕೋಟಿಗಟ್ಟಲೆ ಹಣ ಕಮಾಯಿಸುವ ಇವರ ದುಡಿಮೆಯಾದರೂ ಎಂಥದ್ದು..? ಎನ್ನುವ ಪ್ರಶ್ನೆ ನಮ್ಮ ಜನಸಾಮಾನ್ಯನ ಒತ್ತಡದ ಬದುಕಿನ ನಡುವೆ ಉದ್ಭವವಾಗಲೇ ಇಲ್ಲ. ಇದೇ ಭ್ರಷ್ಟ ರಾಜಕಾರಣಿಗಳಿಗೆ ವರವಾಗುತ್ತಿದೆ. ಇಂದು ಬಹುತೇಕ ರಾಜಕೀಯ ಪಕ್ಷಗಳು, ರಾಜಕಾರಣಿಗಳು ನಮ್ಮ ಜನಸಮುದಾಯವನ್ನು ದುಡಿಮೆಯಿಂದ ವಂಚಿಸುವ ಜೊತೆಗೆ ಅವರನ್ನು ಆಲಸಿಗಳನ್ನಾಗಿಸುವ, ಪರಾವಲಂಬಿ ಪ್ರಜೆಗಳನ್ನಾಗಿಸುವ ಸಕಲ ಷಂಡ್ಯಂತ್ರಗಳನ್ನೂ ಹೊಸೆಯುತ್ತಿವೆ. 1 ರೂ ಗೆ 1 ಕಿಲೊ ಅಕ್ಕಿ ಕೊಡುವ ಭರವಸೆಯನ್ನು ನೋಡಿದರೆ ನನ್ನ ಮಾತಿನ ತಾತ್ಪರ್ಯ ನಿಮಗಾಗುತ್ತದೆ. ಎಲ್ಲೋ ಒಂದು ಕಡೆ ಇಡೀ ದೇಶದ ಆರ್ಥಿಕ ವ್ಯವಸ್ಥೆಯನ್ನು ದಿವಾಳಿ ಎಬ್ಬಿಸುವ ದಿವಾಳಿಕೋರತನದ ನೀತಿ ಇಂದಿನ ರಾಜಕಾರಣಿಗಳ ತಲೆ ಹೊಕ್ಕಂತಿದೆ. ಇಂದು ನಾವು ಯಾರಿಗೆ ಮತ ನೀಡಬೇಕು ಎನ್ನುವುದು ಅತ್ಯಂತ ಜಟಿಲವಾದ ಪ್ರಶ್ನೆ. ಎರಡು ದಶಕಗಳ ಹಿಂದೆ ನಮ್ಮ ಎದುರಲ್ಲಿ ಕೊನೆಯ ಪಕ್ಷ ಆಯ್ಕೆಗಳಾದರೂ ಇದ್ದವು. ಈಗ ಹಾಗಿಲ್ಲ. ನೀವು ಎಷ್ಟೇ ಸಾರಾಸಾರ ವಿವೇಚಿಸಿ ಮತದಾನ ಮಾಡಿದರೂ ನಿಮ್ಮ ಜನನಾಯಕ ಬ್ರಹ್ಮಾಂಡ ಭ್ರಷ್ಟ ಎನ್ನುವುದು ಆಯ್ಕೆಯಾದ ಕೆಲವೇ ತಿಂಗಳಲ್ಲಿ ಬಟಾಬಯಲಾಗಿ ಪಶ್ಚಾತ್ತಾಪ ಪಡುವ ಸ್ಥಿತಿ ಎದುರಾಗುತ್ತದೆ.
ಪ್ಲೇಟೊ ರಂಥಾ ದಾರ್ಶನಿಕರು ಆದರ್ಶ ರಾಜ್ಯದ ನಿಮರ್ಾಣದ ಬಗ್ಗೆ ಮಾತನಾಡುವಾಗ ರಾಜಕೀಯ ನಾಯಕರಾಗುವವರು ತತ್ವಜ್ಞಾನಿಗಳಾಗಿರಬೇಕು ಇಲ್ಲವೇ ತತ್ವಜ್ಞಾನಿಗಳಾದವರು ರಾಜರಾಗಬೇಕು ಎಂದಿರುವದಿತ್ತು. ಇಂಥಾ ಯಾವುದೇ ಮಾನದಂಡಗಳು ನಮ್ಮಲ್ಲಿಲ್ಲ. ಅವನು ಶತಪಟಿಂಗ, ಶತದಡ್ಡ ಇಂಥಾ ನೂರಾರು ಶತ ಅನಿಷ್ಟಗಳ ನಡುವೆಯೂ ಆತ ಆಯ್ಕೆಯಾಗುವ ಸಾಧ್ಯತೆಗಳಿವೆ. ನಮ್ಮಲ್ಲಿ ರಾಜಕಾರಣಿಯಾಗಲು ಕನಿಷ್ಟ ವಿದ್ಯಾರ್ಹತೆ ಇಲ್ಲ, ನಿವೃತ್ತಿಯ ವಯಸ್ಸಿಲ್ಲ ಅವನಿಗೆ ನಡೆದಾಡಲಾಗದಿದ್ದರೂ ಅವನು ನಮ್ಮ ಜನನಾಯಕ. ಕೋಟಿ ಕೋಟಿ ಕಮಾಯಿಸಿದರೂ ಯಾರೂ ಕಿಮಿಕ್ ಅನ್ನುವಂಗಿಲ್ಲ. ಇಂಥಾ ಪರಿಸರದ ನಡುವೆ ರಾಜಕಾರಣಿಯಾಗುವುದು ಯಾರಿಗೆ ಬೇಡ..? ಜಾಗತೀಕರಣದ ಸಂದರ್ಭದಲ್ಲಿಯ ಮುಕ್ತ ಮಾರುಕಟ್ತೆಯ ಸೂತ್ರಕ್ಕೆ ಅಳವಡಿಕೆಯಾದಂತೆ ಇಂದಿನ ರಾಜಕಾರಣದಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧೆ ಸುವಂತಾಗಿದೆ. ಎಲ್ಲ ವಲಯಗಳಲ್ಲಿ ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುವಾಗ ಆತನ ಅನುಭವವನ್ನು ಪರಿಶೀಲಿಸಲಾಗುತ್ತದೆ. ಇಲ್ಲಿ ಅಂಥಾ ಯಾವ ಅನುಭವವೂ ಬೇಕಿಲ್ಲ. ಆಯ್ಕೆಯಾದ ನಂತರ ಆತನ ಅನುಭವ ಸಂಪಾದನೆ ಆರಂಭವಾಗುತ್ತದೆ. ತಂದೆ ಇಲ್ಲವೇ ತಾಯಿ ಈಗಾಗಲೇ ರಾಜಕಾರಣಿಯಾಗಿ ಅಪಾರ ಪ್ರಮಾಣದ ಆಸ್ತಿಯನ್ನು ಸಂಪಾದಿಸಿರುವದೇ ಅವರ ಮಕ್ಕಳ ಪಾಲಿಗೆ ರಾಜಕೀಯ ಪ್ರವೇಶ ಪಡೆಯಲಿರುವ ವಿಶೇಷ ಅರ್ಹತೆ. ಜಾತಿ, ಧರ್ಮ, ಹಣ, ಹೆಂಡ ಮುಂತಾದವುಗಳನ್ನೇ ಆಧರಿಸಿ ರಾಜಕೀಯ ಅಖಾಡಕ್ಕೆ ಧುಮುಕುವವರಿಂದ ಮತದಾರ ನಿರೀಕ್ಷಿಸುವದಾದರೂ ಏನನ್ನು..?
ಇಂದು ರಾಜಕೀಯ ವಿದ್ಯಮಾನಗಳ ಬಗ್ಗೆ ತೀರಾ ಗಹನವಾದ ತಿಳುವಳಿಕೆಯಿದ್ದು ರಾಜಕೀಯ ಪ್ರವೇಶ ಮಾಡುವವರು ಅಪರೂಪವಾಗುತ್ತಿದ್ದಾರೆ. ರಾಜಕೀಯ ಸತ್ತೆಯ ಭಾಗವಾಗಿ ಗೂಟದ ಕಾರಲ್ಲಿ ಮೆರೆಯುವ ಖಯಾಲಿ, ಮಕ್ಕಳು ಮೊಮ್ಮಕ್ಕಳು ಅನಾಮತ್ತಾಗಿ ದುಡಿಯದೇ ಬದುಕುವ ಹಾಗೆ ಹಣ ಕೂಡಿ ಹಾಕುವ ಹಪಾಪಿತನ, ಖುರ್ಚಿಗಾಗಿ ಕಿತ್ತಾಟ, ಹುಚ್ಚಾಟ ಮತ್ತೆಲ್ಲಾ ಆಟಗಳನ್ನು ಆಡುವದೇ ರಾಜಕಾರಣ ಎಂದು ಬಗೆದಿರುವ ತೀರಾ ಹಗುರಾಗಿರುವ ರಾಜಕೀಯ ನಾಯಕರ ಸಂಖ್ಯೆ ಈಗೀಗ ಹೆಚ್ಚುತ್ತಿದೆ. ಅನೇಕ ಬಗೇಯ ಕ್ರಿಮಿನಲ್ ಆರೋಪಗಳನ್ನು ಹೊತ್ತವರು ಕೂಡಾ  ತಮಗೊಂದು ಅವಕಾಶ ಕೊಡಿ ಎಂದು ಮತ ಕೇಳುವುದು ಬಹುಷ: ಈ ದೇಶದಲ್ಲಿ ಮಾತ್ರ ಸಾಧ್ಯ. ಇಂಥವರೇ ಹೆಚ್ಚಾಗಿರುವ ಸದ್ಯದ ರಾಜಕೀಯ ಸಂದರ್ಭದಲ್ಲಿ ಜನ ಸಾಮಾನ್ಯನಿಗೆ ಎಂಥವನಿಗೆ ಮತ ಚಲಾಯಿಸಬೇಕು ಎನ್ನುವುದು ಬಹುದೊಡ್ಡ ತೊಡಕಾಗಿದೆ. ಯಾವದೋ ಒಬ್ಬ ರಾಜಕಾರಣಿ ಕೊಡುವ ಒಂದಷ್ಟು ಚಿಲ್ಲರೆ ಹಣ, ಒಂದು ದರಿದ್ರ ಮದ್ಯದ ಬಾಟಲ್ ಗಳಿಗೆ ನಮ್ಮ ಮತವನ್ನು, ನಮ್ಮತನವನ್ನು ಒತ್ತೆಯಿಟ್ಟು ರಾಜ್ಯವನ್ನು ಲೂಟಿಕೋರರ ಕೈಗೆ ಕೊಡುವುದು ಬೇಡ. ಸಾರಾಸಾರ ವಿವೇಚಿಸಿ ಮತ ಚಲಾಯಿಸಿ. ನೀವು ತೆಗೆದುಕೊಳ್ಳುವ ತೀರ್ಮಾನದಲ್ಲಿಯೇ ಈ ರಾಜ್ಯದ ನಾಯಕತ್ವ ಅಡಗಿದೆ. ಭ್ರಷ್ಟರಿಗೆ ಮತ ಚಲಾಯಿಸದಿರಿ. ನಿಮ್ಮ ಒಂದು ಮತವೂ ನಿರ್ಣಾಯಕವಾಗಲಿದೆ. ಸರಿಯಾದ ಅಭ್ಯರ್ಥಿಯನ್ನು ಗುರುತಿಸಿ ಮತ ಚಲಾಯಿಸಿ.

ಹರ್ಷ ಮ೦ದೇರ್ ಬರಹ 4: ಕೊರೆಯುವ ಚಳಿಯಲ್ಲಿ ಸೂರಿಲ್ಲದ ಇರುಳು


– ಹರ್ಷ ಮ೦ದರ್

ಕೃಪೆ: ದಿ ಹಿ೦ದು, ೩೦ ಜನವರಿ ೨೦೧೦

ಅನುವಾದ: ಸ೦ವರ್ತ ‘ಸಾಹಿಲ್’’

ದೆಹಲಿಯ ಬೀದಿಗಳಲ್ಲಿ ಬದುಕು ಸಾಗಿಸುತ್ತಿರುವ ನಿರ್ವಸಿತರ ಪಾಲಿಗೆ ಚಳಿಗಾಲ ಬಹಳ ಕ್ರೂರಿ ಮತ್ತು ನಿರ್ದಯಿ. ಮ೦ಜನ್ನು ಹೊದ್ದು ಮಲಗಿದ ಶಹರದಲ್ಲಿ ಅರೆನಿದ್ರಾವಸ್ಥೆಯಲ್ಲಿ ಈ ಅಸ೦ಖ್ಯ ಜನರು ಒಣಗಿದ ಎಲೆ, ಮರದ ಕೊ೦ಬೆ, ಹರಿದ ಬಟ್ಟೆ – ಇವುಗಳನ್ನೆಲ್ಲಾ ಒಟ್ಟು ಸೇರಿಸಿ ಬೆ೦ಕಿ ಹಚ್ಚಿ ಇರುಳು ಪೂರ್ತ ಮೈ ಕಾಸಿಕೊಳ್ಳುತ್ತಾರೆ. ಹಲವರು ಮಲಗುವುದು ಭ್ರ್ರೊಣಾವಸ್ಥೆಯ ಶಿಶುವಿನ ಭ೦ಗಿಯಲ್ಲಿ. ತೆಳುವಾದ ಹೊದಿಕೆಯನ್ನು ಹೊದ್ದು, ಮೂಳೆ-ಚರ್ಮದ ದೆಹವನ್ನು ಮತ್ತೊ೦ದು ದೆಹಕ್ಕೆ ಒತ್ತಿಕೊ೦ಡು. ಬೀದಿಯ ನಾಯಿಯೂ ಕೆಲವೊಮ್ಮೆ ಒಳ ಸೆರಿಕೊಳ್ಳುತ್ತದೆ. ಎಲ್ಲರೂ ಮೈಯ ಶಾಖ ಹ೦ಚಿಕೊಳ್ಳುತ್ತಾರೆ, ಇರುಲು ಕಳೆಯಲು. ಮತ್ತೆ ಕೆಲವರು ಒ೦ಟಿಯಾಗಿ ಮರಗಟ್ಟಿದ೦ತೆ ದೆಹವನ್ನು ಭಿಗಿಯಾಗಿ ಹಿಡಿದುಕೊ೦ಡು ಮಲಗುತ್ತಾರೆ, ಚಳಿಯಲ್ಲಿ ಮತ್ತಷ್ಟೂ ಮರಗಟ್ಟುತ್ತಾ. ಪ್ರತಿ ಚಳಿಗಾಲದ ರಾತ್ರಿ ಮತ್ತಷ್ಟು ಅನಾಮಿಕ ಹೆಣದ ರಾಶಿಯನ್ನು ಹಿ೦ದೆ ಬಿಟ್ಟು ಮುನ್ನಡೆಯುತ್ತದೆ. ರಿಕ್ಷಾ ಚಾಲಕ, ಬಲೂನ್ ಮಾರುವಾತ, ಅಮಾನುಷ ಗ೦ಡ೦ದಿರಿ೦ದ ಬೀದಿಗೆಸೆಯಲ್ಪಟ್ಟ ಹೆಣ್ಣು ಮಕ್ಕಳು, ಮುದುಕ-ಮುದುಕಿಯರು- ಹೀಗೆ ಚಳಿಯನ್ನು ಹೊರಾಡಿ ಗೆಲ್ಲಲಾಗದ ಅಸ೦ಖ್ಯ ಮ೦ದಿ. ದೆಹಲಿವಾಸಿಗಳ ಪೈಕಿ ತೊ೦ಬತ್ತು ಶೆಖಡದಷ್ಟು ಜನರಿಗೆ ಯಾವುದೆ ರೀತಿಯ ವಸತಿ ವ್ಯವಸ್ಥೆ ಇಲ್ಲ. ಆಕಾಶವೆ ಸೂರು.

ಜಾಮಾ ಮಸೀದಿಯ ಸುತ್ತಲಿನ ಉದ್ಯಮಶೀಲರು ಸರ್ಕಾರ ಮಾಡಬೆಕಾಗಿದ್ದು ಮಾಡದ ಕೆಲ್ಸದಿನ್ದ ಲಾಭ ಪಡೆಯುತ್ತಿದ್ದಾರೆ. ರಜಾಯಿಯೊ೦ದನ್ನು ಇರುಳಿಗೆ ಹತ್ತು ರೂಪಾಯಿಯ೦ತೆ ಬಾಡಿಗೆ ನೀಡುವ ವ್ಯವಸ್ಥೆ ಇದೆ. ಹಾಸಿಗೆ ಬೀಕಾದಲ್ಲಿ ಮೆಲೆ ಹತ್ತು ರೂಪಾಯಿ. ಗೊಡೆಗಳಿಲ್ಲದ ಪ್ಲಾಸ್ಟಿಕ್ ಸೂರಿನ ತಾತ್ಕಾಲಿಕ ವಸತಿಗಳು ಚಳಿಗಾಲದ ಸಮಯದಲ್ಲಿ ಸರ್ಕಾರಿ ಜಾಗದಲ್ಲಿ ಎದ್ದು ನಿಲ್ಲುತ್ತವೆ. ಅವುಗಳ ಕೆಳಗದೆ ಮ೦ಚ ಮತ್ತು ಹೊದಿಕೆ. ಬೆಚ್ಚಗೆ ಇರುಳು ಕಳೆಯಲು ಮೂವತ್ತು ರೂಪಾಯಿ ಹೊದಿಸಲಾಗುವ ಮ೦ದಿಗೆ ಇದುವೇ ಆಶ್ರಯ. ಇ೦ಥಾ ಪ್ರೈವೇಟ್ ಜಾಗಗಳಲ್ಲಿನ ಮತ್ತೊ೦ದು ಲಾಭವೇನೆ೦ದರೆ ಪೊಲೀಸರ ಸಮಸ್ಯೆ ಇರದಿರುವುದು. ಅವರಿಗೆ ಸ್ವಲ್ಪ ’ಸ೦ಬಳ’ ನೀಡಲಾಗಿರುತ್ತದೆ.

ಚಳಿಗಾಲ ಬಹಳ ಕಠಿಣ ಆಯ್ಕೆಗಳನ್ನು ಬಡ ಜನರ ಮು೦ದಿಡುತ್ತದೆ. ರಜಾಯಿ ಹೊದ್ದು ಬೆಚ್ಚಗೆ ಮಲಗಬೆಕಾದರೆ ಊಟದ ಆಲೊಚನೆಯನ್ನೂ ಕೈಬಿಡಬೇಕಾಗುತ್ತದೆ. ಅದೇ ಸಒಶೋಧನೆಗಳು ಕ೦ಡುಕೊ೦ಡ ಸತ್ಯವೆನೆ೦ದರೆ ಅತಿರೇಖದ ಹವಾಮಾನಕ್ಕೆ ತೆರೆದ ಜೀವಗಳಿಗೆ ಅತಿ ಹೆಚ್ಚು ಪೌಷ್ಟಿಕಾ೦ಶದ ಅವಶ್ಯಕತೆಯಿರುತ್ತದೆ. ರಾತ್ರಿ ಬಹಳವಾದರು ಮೊಹಮ್ಮದ್ ಶರೀಫ್ ತನ್ನ ಸೈಕಲ್ ರಿಕ್ಷಾ ಹಿಡಿದು ಗಿರಾಕಿಗಾಗಿ ಹುಡುಕುತ್ತಿರುವುದನ್ನು ಕಾಣಬಹುದು. ಈ ಹುಡುಕಾಟ ಇಪ್ಪತ್ತು ರೂಪಾಯಿ ಸ೦ಪಾದಿಸಲಿಕ್ಕಾಗಿ. “ಇನ್ನೂ ಇಪ್ಪತ್ತು ರೂಪಾಯಿ ಸಿಕ್ಕಿದರೆ ರಜಾಯಿ ಹೊದ್ದು ಮಲಗಬಹುದು,” ಎನ್ನುತಾನೆ ಆತ. “ದಿನವೊ೦ದಕ್ಕೆ ಸುಮಾರೊ ನೂರೈವತ್ತು ರೂಪಾಯಿ ಸ೦ಪಾದಿದರೆ ಅದರಲ್ಲಿ ನಲವತ್ತೈದು ರೂಪಾಯಿ ಮಾಲೀಕನಿಗೆ ಮತ್ತು ನಲವತ್ತು ರೂಪಯಿ ಊಟಕ್ಕೆ. ಕುಡಿಯುವ ನೀರು, ಶೌಚ, ಸ್ನಾನ ಎಲ್ಲದಕ್ಕೂ ಹಣ ನೀಡಬೆಕು. ಇಲ್ಲಿ ದುಡ್ದೇ ದೊಡ್ಡಪ್ಪ. ಕೆಲವೊಮ್ಮೆ ಊಟಕ್ಕೂ ನನ್ನ ಬಳಿ ಹಣ ಇರುವುದಿಲ್ಲ. ಕೆಲವೊಮ್ಮೆ ರಜಾಯಿ ಪಡೆಯಲೂ ಹಣ ಇದ್ರುವುದಿಲ್ಲ. ಅ೦ಥಾ ರಾತ್ರಿಗಳನ್ನು ಕಳೆಯುವುದು ಬಹಳ ಕಷ್ಟದ ಕೆಲಸ.”

ಯಾವುದೇ ರೀತಿಯ ಸ೦ಪಾದನೆ ಇಲ್ಲದ ಹಲವಾರು ಮ೦ದಿ ಈ ಶಹರದಲ್ಲಿದ್ದಾರೆ. ಜಾಮಾ ಮಸೀದಿಯ ಬಳಿ ಮಾನಸಿಕ ಆರೊಗ್ಯ ಸ್ವಲ್ಪ ಹದಗೆಟ್ಟಿರುವ ಮುದಿ ಹೆ೦ಗಸು ರಜಾಯಿ ಹೊದ್ದು ಮಲಗಿರುವುದನ್ನು ಕ೦ಡರೆ ಆಶ್ಚರ್ಯವಾಗಬಹುದು. ಅಲ್ಲಿ ಸುತ್ತಮುತ್ತಲಿನ ಜನರು ಹೇಳುವ ಪ್ರಕಾರ ಅಲ್ಲಿಯ ಕೆಲವು ಮ೦ದಿ ಪ್ರತಿನಿತ್ಯ ತಮ್ಮ ತಮ್ಮ ಕಿಸೆಯಿ೦ದ ಒ೦ದಿಷ್ಟು ಹಣ ಸೆರಿಸಿ ಬಾಡಿಗೆ ರಜಾಯಿ ಕೊಳ್ಳಲಾಗದ ನಿರ್ವಸಿತರಿಗೆ ಬಾಡಿಗೆ ರಜಾಯಿ ಕೊಡಿಸುತ್ತಾರೆ. ಅತ್ಯ೦ತ ಸಹಜವಾಗಿ, “ನಾವು ಇಷ್ಟೂ ಮಾಡದಿದ್ದರೆ ಅವರು ಬದುಕುಳಿಯುವುದು ಬಾರಿ ಕಷ್ಟ,” ಎ೦ದು ಅವರೆಲ್ಲಾ ಹೇಳುತ್ತಾರೆ.

ನಮ್ಮ ತ೦ಡ ಅಲ್ಲಿದ್ದ ರಾತ್ರಿ ಹೆ೦ಗಸೊಬ್ಬಳು ಬದುಕಿನ೦ಚಿನಲ್ಲಿ ಕು೦ತಿದ್ದಳು. ಬಾಡಿಗೆಯ ರಜಾಯಿಯನ್ನು ಮೂಟೆ ಬಿಚ್ಚಿದ೦ತೆ ಬಿಚ್ಚಿದರೆ ಹಸಿದ ಹೊಟ್ಟೆಯ ಹೆ೦ಗಸು. ಸಾವಿಗೆ ಸಮೀಪವಾದ೦ತೆ ಇದ್ದಳು ಆಕೆ. ಕೆಲ ದಿನಗಲ ಹಿ೦ದೆ ನೆಡೆಯಲಾಗದೆ ಆಕೆ ಕುಸಿದಾಗ ನಿತ್ಯ ಕೂಲಿ ಕಾರ್ಮಿಕರ ಅಲ್ಲಿಗೆ ಕರೆತ೦ದಿದ್ದರು. ಉಣ್ಣಿಸಿದರೂ ಆಕೆಯ ಬಾಯಿಯಿ೦ದ ಸ್ವರ ಹೊರಡುತ್ತಿರಲಿಲ್ಲ. ನಮ್ಮೊ೦ದಿಗಿದ್ದ ಸಾಮಾಜಿಕ ಕಾರ್ಯಕರ್ತ ದೀಪಕ್ ತಕ್ಷಣ ಪೋಲೀಸರಿಗೆ ಫೋನ್ ಮಾಡಿ ಆ ಹೆ೦ಗಸನ್ನು ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದ. ಆದರೆ ದೆಹಲಿಅ ಅದೆಷ್ಟು ಗಲ್ಲಿಗಳಲ್ಲಿ ಅದೆಷ್ಟು ಜನ ಈ ಹೆ೦ಗಸಿನ೦ತೆ ಇನ್ನೇನು ಮುರಿದುಹೊಗಲಿರುವ ಉಸಿರಿನ ದಾರ ಹಿಡಿದು ಕು೦ತಿದಾರೋ!

ನಿಜಾಮುದ್ದೀನ್ ಬಳಿ ಅನಾಮಿಕ ಹೆಣಗಳನ್ನು ಠಿಕಾಣೆಗೆ ಸೆರಿಸುವ ಮಧ್ಯವಯಸ್ಕನೊಬ್ಬನನ್ನು ನಾವು ಭೇಟಿಯಾದೆವು. ಕೆಲವೊಮ್ಮೆ ಪೋಲೀಸರು ಆತನಿಗೆ ಸೂಚನೆ ನೀಡಿದರೆ ಮತ್ತೆ ಕೆಲವೊಮ್ಮೆ ಉಳಿದ ನಿರ್ವಸಿತರು ಬೀದಿಯಿ೦ದ ಹೆಣ ಎತ್ತಲು ಹೇಳುತ್ತಾರೆ. ಸತ್ತ ವ್ಯಕ್ತಿಯ ಧರ್ಮ ಪತ್ತೆ ಹಚ್ಚಲು ಆತ ಪ್ರಯತ್ನಿಸುತ್ತಾನೆ. ಹಿ೦ದು ದೇಹವಾದರೆ ಸುಡಲು, ಮುಸ್ಲಿ೦ ದೆಹವಾದರೆ ಹೂಳಲು. ಸ್ಥಳೀಯರು- ಹೆಚ್ಚಾಗಿ ನಿರ್ವಸಿತರೇ- ಹಣ ಒಟ್ಟು ಮಾಡಿ ಅ೦ತ್ಯಕ್ರಿಯೆಯ ಖರ್ಚು ನಿಭಾಯಿಸುತ್ತಾರೆ. ಅದರಲ್ಲೊ೦ದಿಷ್ಟು ಹಣ ಉಲಿದರೆ ಇವನ ತಿ೦ಡಿ ತೀರ್ಥಕ್ಕೆ. ಈ ಚಳಿಗಾಲ (೨೦೧೦) ಬಹಳ ಕ್ರೂರವಾಗಿತ್ತು ಎ೦ದು ಹೇಳುತ್ತಾ ಆತ ಒ೦ದೇ ದಿನದಲ್ಲಿ ಹತ್ತು ಹೆಣಗಳನ್ನು ಎತ್ತಿದ ಪ್ರಸ೦ಗವನ್ನು ನೆನಪಿಸಿಕೊ೦ಡ. ಪೋಸ್ಟ್ ಮಾರ್ಟಮ್ ಬಹಳ ಅಪರೂಪವಾದರೆ ಕೆಲವು ಸಾವುಗಳು ಸರಕಾರಿ ದಾಖಲೆಗಳನ್ನೂ ಸೆರುವುದಿಲ್ಲ.

ನನ್ನ ಯುವ ಸಹೋದ್ಯೋಗಿ ತಾರೀಖ್ ದಿಲ್ಲಿಯ ಗಲ್ಲಿ ಗಲ್ಲಿಗಳನ್ನು ರಾತ್ರಿಯಿಡೀ ಸುತ್ತುತ್ತಾ ನಿರಾಶ್ರಿತರಿಗೆ ಹೊದಿಕೆಗಳನ್ನು ಹ೦ಚುತ್ತಾನೆ. ತಾ ಕ೦ಡ ದೃಶ್ಯಗಳಿ೦ದ ನಡುಗಿಹೋಗಿದ್ದಾನೆ. ಬಾ೦ಗ್ಲ ಸಾಹೇಬ್ ಗುರುದ್ವಾರದ ಎದುರು ನಮಾಜ಼್ ಮಾಡುವ೦ತೆ ಬಾಗಿ ತನ್ನ ತಲೆಯನ್ನೇ ನೆಲದೊಳಗೆ ಹುಗಿಯುವ೦ತೆ ಒತ್ತುತ್ತಿರುವ ಒಬ್ಬನನ್ನು ಆತ ಕ೦ಡಿದ್ದಾನೆ, ಅವನು ಚೀರುವುದನ್ನು ಕೇಳಿದ್ದಾನೆ. ಚಿಕ್ಕವನಿದ್ದಾಗ ಚಳಿಗಾಲವನ್ನು ಇಷ್ಟ ಪಡುತ್ತಿದ್ದ ತಾರೀಖ್, “ಈಗ ಚಳಿಗಾಲ ನನ್ನಲ್ಲಿ ಭಯ ಹುಟ್ಟಿಸುತ್ತದೆ,” ಎನ್ನುತ್ತಾನೆ.

ನಮ್ಮ ಪರ್ಯಠಣೆಯಲ್ಲಿ ನಮಗೆ ತಿಳಿದು ಬ೦ದಿದ್ದೇನೆ೦ದರೆ ಹಲವಾರು ಮ೦ದಿ ನಿರಾಶ್ರಿತರಾಗಲು ಕಾರಣ ಸರಕಾರ ಅವರ ಸಣ್ಣ ಪುಟ್ಟ ಜೊಪಡಿಗಳನ್ನು ಕೆಡವಿ ಹಾಕಿ ಬದಲಿ ವ್ಯವಸ್ಥೆ ಮಾಡದೆ ಹೊದದ್ದು. ಅ೦ಥಾ ಸುಮಾರು  ಇನ್ನೂರೈವತ್ತು ಸ೦ಸಾರಗಳು ನಿಜ಼ಾಮುದ್ದೀನ್ ಪಾರ್ಕ್ನಲ್ಲಿ ಮಲಗುತ್ತವೆ. ಅಲ್ಲಿ ಕುಸುಮ್ ಸ೦ಸಾರವೂ ಒ೦ದು. ದೂರದ ಅಸ್ಸಾ೦ನಿ೦ದ ದಶಕಗಳ ಹಿ೦ದೆ ಉದ್ಯೊಗವನ್ನರಸುತ್ತಾ ದಿಲ್ಲಿ ಸೆರಿದ ಕುಸುಮ್ ತನಗಾಗಿ ಒ೦ದು ಮನೆಯ೦ಥಾ ಮನೆಯೊ೦ದನ್ನು ಕಟ್ಟಿಕೊ೦ಡಿದ್ದಳು. ಕೆಲ ವರ್ಷಗಳ ಹಿ೦ದೆ ಸರಕಾರ ಆ ಮನೆಯನ್ನು ಕೆಡವಿದ ನ೦ತರ ಆಕೆ ಇರುಳುಗಳನ್ನೆಲ್ಲಾ ಕಳೆದಿರುವುದು ಪಾರ್ಕಿನಲ್ಲೇ. ಮಳೆಗಾಲ, ಚಳಿಗಾಲ, ಸೆಖೆಗಾಲ- ಎಲ್ಲವೂ ಪಾರ್ಕಿನಲ್ಲೇ. ಒ೦ಟಿ ಹೆ೦ಗಸರಿಗೆ ಬೀದಿಯಲ್ಲಿ ಜೀವನ ನೆಡೆಸುವುದು ಸುಲಭವಲ್ಲ. ಹಾಗಾಗಿ ಅವಳು, ಬೀದಿಗೆ ಬಿದ್ದ ಬಹಳಷ್ಟು ಹೆ೦ಗಸರ೦ತೆ, ನಿರ್ವಸಿತ ಗ೦ಡಸರ ಆಶ್ರಯ ಪಡೆಯುತ್ತಾಳೆ. ಅದರಲ್ಲಿ ಕೆಲವರು ದೆಹಕ್ಕೆ ಗಾಯ ಮಾಡಿ ಹೊದರೆ ಕೆಲವರು ಆತ್ಮಸ್ಥೈರ್ಯಕ್ಕೇ ಏಟು ನೀಡಿ ಹೊದರು. ಮತ್ತೂ ಕೆಲವರು ಜೀವವೊ೦ದನ್ನು ಕೈಗಿಟ್ಟು ಹೊದರು. ಕುಸುಮ್ ಮನೆಗೆಲಸಕ್ಕೆ ಹೊದರೂ ಅದರಿ೦ದ ಅವಳಿಗೆ ಆರ್ನೂರು ರೂಪಾಯಿಗಿ೦ತ ಜಾಸ್ತಿ ಪಡೆಯಲು ಸಾಧ್ಯವಾಗುವುದಿಲ್ಲ.  ಆಕೆ ತನ್ನ ಮಕ್ಕಳೊ೦ದಿಗೆ ದರ್ಗಾದ ಮು೦ದೆ ಭಿಕ್ಷೆ ಬೇಡಿ ಹೊಟ್ಟೆ ತು೦ಬಿಸಿಕೊಳ್ಳುತ್ತಾಳೆ. ಆದರೂ ತಿ೦ಗಳೊ೦ದಕ್ಕೆ ನೂರಿಪ್ಪತ್ತು ರೂಪಾಯಿ ಖರ್ಚು ಮಾಡಿ ತನ್ನ ಮಗನನ್ನು ಪ್ರೈವೇಟ್ ಶಾಲೆಯೊ೦ದಕ್ಕೆ ಕಳುಹಿಸುತ್ತಾಳೆ. ಮಗಲನ್ನೂ ಶಾಲೆಗೆ ಕಳುಹಿಸಲು ಬೆಕಾದ ತಯಾರಿ ನೆಡೆದಿದೆ.

ಮಕ್ಕಳನ್ನೂ ಒಳಗೊ೦ಡ೦ತೆ ಹಲವು ನಿರಶ್ರಿತರು ನಿರ್ದಯಿ ಚಳಿಯ ಅಟ್ಟಹಾಸ ಎದುರಿಸಲು ಮಾದಕದ್ರವ್ಯಗಳನ್ನು ಬಳಸುತ್ತಾರೆ. ಅವರ ನಿದ್ರಾಸ್ಥಿತಿಯ, ಸೊತುಹೊದ, ಗಾಜಿನ೦ಥಾ ಕಣ್ಣಿನಲ್ಲಿ ಪ್ರಕೃತಿ ಮತ್ತು ಈ ಶೆಹರದ ವಿಕೃತಿಯನ್ನು ಹೋರಾಡಿದ ಫಲವಾಗಿ, ಶತಮಾನಗಳ ಎಕಾ೦ತ ಮತ್ತು ನಾಚಿಕೆ ಕಾಣಿಸುತ್ತದೆ.

ದೆಹಲಿಯ ಯಾವ ಅತಿರೇಖದ ಹವಾಮಾನದಲ್ಲಿ ಅತ್ಯ೦ತ ಜೀವವಿರೋಧಿ ಹವಾಮಾನ ಎ೦ದು ಕೇಳಿದರೆ ಕೆಲವರು ಚಳಿಗಾಲ ಮತ್ತೆ ಕೆಲವರು ಮಳೆಗಾಲ ಎನ್ನುತ್ತಾರೆ. ಮಳೆಗಾಲದಲ್ಲಿ ರಾತ್ರಿ ಹೊತ್ತು ಮಲಗುವುದು, ಅಡುಗೆ ಮಾಡುವುದು ಎಲ್ಲ ಕಷ್ಟವಾಗುತ್ತದಲ್ಲದೆ ಅವರ ವಸ್ತುಗಳೆಲ್ಲಾ ಮಳೆಯಲ್ಲಿ ಒದ್ದೆಯಾಗುತ್ತದೆ.

ಇವೆಲ್ಲದರ ಮಧ್ಯ , ವಾಹನಗಳ ಸಾಗರದ ನಡುವೆ ದ್ವೀಪವೊ೦ದನ್ನು ಮಾಡಿಕೊ೦ಡು ಬದುಕುತ್ತಿರುವ ಹೆ೦ಗಸೊಬ್ಬಳನ್ನು ಕ೦ಡೆವು. ಕಳೆದ ಹದಿನೇಳು ವರ್ಷಗಳಿ೦ದ ಆಕೆ ಪ್ಲಾಸ್ಟಿಕ್ ಶೀಟ್ ಒ೦ದರ ಕೆಳಗಡೆ ವಾಸ ಮಾಡುತ್ತಾ ಬ೦ದಿದ್ದಾಳೆ. ಆಕೆಯ ಬದುಕು ಸಹ್ಯವಾದದ್ದು ಆಕೆ ತನ್ನ೦ತೆಯೇ ನಿರ್ಗತಿಕವಾದ ಅನಾಥ ಹುಡುಗನೊಬ್ಬನನ್ನು  ಸಾಕಲಾರ೦ಭಿಸಿದಾಗ. ಆ ಹುಡುಗ ಈಗ ಬೆಳೆದಿದ್ದಾನೆ ಮಾತ್ರವಲ್ಲದೆ ಸ್ವ೦ತ ಕರುಳಿನ೦ತೆ ಈಕೆಯನ್ನು ನೊಡಿಕೊಳ್ಳುತ್ತಾನೆ.

“ಬಡವರ ಕತೆಯೇ ಇಷ್ಟು,” ಎನ್ನುತ್ತಾನೆ ಸೈಕಲ್ ರಿಕ್ಷಾ ಚಾಲಕ ಶರೀಫ್.  “ಆದರೂ ನಾನು ಕಷ್ಟ ಪಟ್ಟು ದುಡಿಯುತ್ತೇನೆ. ಹಾಗಾಗಿ ಕಷ್ಟದ ಜೀವನವಾದರು ಆತ್ಮಗೌರವದಿ೦ದ ಬದುಕುತ್ತೇನೆ,” ಎನ್ನುತ್ತಾನೆ ಆತ.

ಅನುವಾದಕರ ಪರಿಚಯ:ಸಮೂಹ ಮಧ್ಯಮ ವಿಷಯದಲ್ಲಿ ಸ್ನಾತಕೋತ್ತರ ಪಡೆದ ಸಂವರ್ತ ಮಣಿಪಾಲದಲ್ಲಿ ಹುಟ್ಟಿ ಬೆಳೆದವರು. ಮಣಿಪಾಲ ಸಮೂಹ ಮಾಧ್ಯಮ ಸಂಸ್ಥೆಯಲ್ಲಿ ಶಿಕ್ಷಕರಾಗಿ ದಿ ಹಿಂದೂ ಪತ್ರಿಕೆಯಲ್ಲಿ ಪತ್ರಕರ್ತರಾಗಿ ದುಡಿದಿರುವ ಇವರು ದೆಹಲಿಯ ಜವಾಹರಲಾಲ್ ನೆಹರು ವಿ.ವಿ. ಇಂದ ಎಮ್.ಫಿಲ್ ಪದವಿ ಪಡೆದು ಸಧ್ಯ ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಚಿತ್ರಕಥಾ ಲೇಖನ ಅಧ್ಯಯನ ನಿರತರು.

ಬಯಲಿನಲ್ಲಿರುವ ದೀಪ

– ಬಿ.ಶ್ರೀಪಾದ ಭಟ್

ನಾನು ವಾಸವಿರುವ ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ಆಶೋಕ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಚೇತನ್ ಗೌಡ. ಆರ್ ಅಶೋಕ್ ಕುರಿತಾಗಿ ಹೆಚ್ಚಿಗೆ ಹೇಳುವುದಕ್ಕೇನಿಲ್ಲ. ಆದರೆ ಯಾರೀತ ಚೇತನ್ ಗೌಡ ?? ಕೇವಲ ಒಂದು ತಿಂಗಳ ಹಿಂದಷ್ಟೇ  ಧೂಮಕೇತುವಂತೆ ಉದುರಿದ ಈ ಅಭ್ಯರ್ಥಿಯ ಹಿನ್ನೆಲೆ ಏನು ? ಕೆದಕಿದಾಗ ಗೊತ್ತಾಗಿದ್ದು ಈ ಚೇತನ್ ಗೌಡ ನಾಗಮಂಗಲದ ಶಿವರಾಮೇ ಗೌಡರ ಮಗ. ಯಾವ ಶಿವರಾಮೇ ಗೌಡ ?? ಇಪ್ಪತ್ತು ವರ್ಷಗಳ ಹಿಂದೆ ನಡೆದ ಕಂಚುಗನಹಳ್ಳಿ ಗಂಗಾಧರ ಮೂರ್ತಿಯ ಕೊಲೆ ಕೇಸಿನ ಆರೋಪಿ. ಕಳೆದ ಇಪ್ಪತ್ತು ವರ್ಷಗಳಲ್ಲಿ, ಅಧಿಕಾರದ ಲಾಲಸೆಯಲ್ಲಿ ಹೆಚ್ಚೂ ಕಡಿಮೆ ಕರ್ನಾಟಕದ ಮೂರು ಪ್ರಮುಖ ಪಕ್ಷಗಳಲ್ಲಿ ಸುತ್ತಾಡಿ ಸದ್ಯಕ್ಕೆ ಪಕ್ಷೇತರರು. ಇನ್ನೂ ಇವರು ಕಾಂಗ್ರೆಸ್ ಸೇರಿದಂತಿಲ್ಲ. ಆದರೆ ಅಷ್ಟರಲ್ಲೇ ಅವರ ಮಗನಿಗೆ ಕಾಂಗ್ರೆಸ್ ಸೀಟು ದಕ್ಕಿಸಿಕೊಂಡಿದ್ದಾರೆ, ಕಾಂಗ್ರೆಸ್ಸಿನವರಲ್ಲದೆಯೂ !!!

ಇದು ಕಾಂಗ್ರೆಸ್ ತಲುಪಿರುವ ಅನೈತಿಕ ಮಟ್ಟಕ್ಕೆ, ಭ್ರಷ್ಟತೆಯ ಗಂಗೋತ್ರಿಗೆ ಸಾವಿರಾರು ಉದಾಹರಣೆಗಳಲ್ಲೊಂದು. ನಾನು ನಗರಗೆರೆ ರಮೇಶ ಅವರೊಂದಿಗೆ ಸುಮಾರು ಸಲ ಚರ್ಚಿಸಿದೆ. ಈಗ ನಾವ್ಯಾರಿಗೆ ಓಟು ಮಾಡಬೇಕು ?? ಕಳೆದರೆಡು ಚುನಾವಣೆಗಳಲ್ಲಿ ಅಮಾಯಕ ಅಭ್ಯರ್ಥಿಯಾಗಿದ್ದ ಕಾಂಗ್ರೆಸ್ನ ಗುರುಪಾದ ನಾಯ್ಡು ಅವರಿಗೆ ಮತ ಹಾಕುತ್ತಿದ್ದ ನಾವೆಲ್ಲ ಈ ಬಾರಿ ಪಕ್ಷೇತರ ಆಭ್ಯರ್ಥಿಗೆ ಮತ ನೀಡಬೇಕಾದಂತಹ ಪರಿಸ್ಥಿತಿ.

ಕೋಮುವಾದಿ, ಭ್ರಷ್ಟ ಪಕ್ಷವಾದ ಬಿಜೆಪಿಗೆ ಅನಿವಾರ್ಯವಾಗಿಯೇ ಪರ್ಯಾಯ ಪಕ್ಷವೆಂದು ಇಂದು ನಮ್ಮ ಹಿರಿಯ ಪ್ರಗತಿಪರ ಕಾಮ್ರೇಡರಿಂದ ಸಮರ್ಥನೆ ಪಡೆದುಕೊಂಡಿರುವ ಈ ಕಾಂಗ್ರೆಸ್ ಇಂದು ಕರ್ನಾಟಕದಲ್ಲಿ ಅಭ್ಯರ್ಥಿಗಳ ಆಯ್ಕೆಗಾಗಿ ಆನುಸರಿಸಿರುವ ಮಾನದಂಡ, ಆಯ್ಕೆ87393882ಯಾದ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದಾಗ ಇದು ಭ್ರಷ್ಟತೆಯಲ್ಲಿ, ಅನೈತಿಕತೆಯಲ್ಲಿ ಬಿಜೆಪಿಗೆ ಯಾವುದೇ ಬಗೆಯಲ್ಲಿಯೂ ಕಡಿಮೆ ಇಲ್ಲವೆಂದು ಸಾಬೀತಾಗಿದೆ.

ಬೆಂಗಳೂರಿನಲ್ಲಿ ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಹೆಚ್ಚೂ ಕಡಿಮೆ ಇಪ್ಪತ್ತರಿಂದ ಇಪ್ಪತ್ತೆರಡರವರೆಗಿನ ಕ್ಷೇತ್ರಗಳ ಅಭ್ಯರ್ಥಿಗಳು ಆಯ್ಕೆಗೆ ಅರ್ಹರೇ ಅಲ್ಲ. ಸುದರ್ಶನರಂತಹ ಹಿರಿಯ ಪ್ರಜ್ಞಾವಂತ, ಸೆಕ್ಯುಲರ್ ರಾಜಕಾರಣಿಗೆ ಸೀಟು ನೀಡಲಾಗದಷ್ಟು ಭ್ರಷ್ಟಗೊಂಡಿರುವ ಕಾಂಗ್ರೆಸ್, ನಮ್ಮ ಮತ್ತೊಬ್ಬ ಸೆಕ್ಯುಲರ್ ಮತ್ತು ಸಾಹಿತಿಗಳಾದ ಎಲ್.ಹನುಮಂತಯ್ಯನವರಿಗೆ ಸೀಟು ನೀಡಲಾಗದಷ್ಟು ಅನೈತಿಕತೆಯಲ್ಲಿ ಮುಳುಗಿರುವ ಕಾಂಗ್ರೆಸ್, ಯಾವ ಬಗೆಯಲ್ಲಿ ಅನಿವಾರ್ಯ ?? ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಲಾಡ್ ಯಾವ ಪುರುಷಾರ್ಥಕ್ಕೆ ಗೆಲ್ಲಬೇಕು ?? ಒಂದು ವೇಳೆ ಈ ಭ್ರಷ್ಟತೆಯ ಆರೋಪಕ್ಕೊಳಗಾಗಿರುವ, ಯಾವುದೇ ಕನಿಷ್ಟ ಅರ್ಹತೆಗಳಿಲ್ಲದ ಅನಿಲ್ ಲಾಡ್ ಗೆದ್ದರೆ, ಗಣಿ ಚೋರರಾದ ರೆಡ್ಡಿಗಳನ್ನು ಸೋಲಿಸಿದ್ದಕ್ಕೆ ಸಮರ್ಥನೆ ನೀಡಬೇಕಾಗುತ್ತದೆ. ದಾವಣಗೆರೆಯಲ್ಲಿ ಎಂಬತ್ತರ ಹರೆಯದ ಶ್ಯಾಮನೂರು ಒಂದು ಕಡೆಗೆ ಅಭ್ಯರ್ಥಿ, ಮತ್ತೊಂದು ತುದಿಯ ದಾವಣಗೆರೆಗೆ ಅವರ ಮಗ ಮಲ್ಲಿಕಾರ್ಜುನ ಅಭ್ಯರ್ಥಿ  ಬೆಂಗಳೂರಿನ ವಿಜಯನಗರ ಮತ್ತು ಗೋವಿಂದರಾಜ ನಗರದಲ್ಲೂ ಇದೇ ಕರ್ಮಕಾಂಡ. ಇವೆರಡರಲ್ಲಿ ಅಪ್ಪ ಕೃಷ್ಣಪ್ಪ ಮಗ ಪ್ರಿಯಾ ಕೃಷ್ಣ ಅಭ್ಯರ್ಥಿಗಳು. ಡಿ.ಕೆ.ಶಿವ ಕುಮಾರ್ ಅವರನ್ನು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಯಾವ ಬಗೆಯಲ್ಲಿ ಸಹಿಸಿಕೊಳ್ಳಲು ಸಾಧ್ಯ?? ಇಂತಹ ನೂರಾರು ಉದಾಹರಣೆಗಳಿವೆ.

ಮಸಲ ಕಾಂಗ್ರೆಸ್ ಏನಾದರೂ ಬಹುಮತ ಗಳಿಸಿ ಅಧಿಕಾರಕ್ಕೆ ಬಂದರೆ ಮಂತ್ರಿಮಂಡಲ ರಚನೆಗೆ ಬೇಕಾಗುವ ಕನಿಷ್ಟ ಮೂವತ್ತು ಮಂತ್ರಿಗಳನ್ನು ಆಯ್ಕೆ ಮಾಡಬೇಕಾದರೆ ನೈತಿಕವಾಗಿ, ಅನುಭವದ ಸಾಂದ್ರತೆಯ ಹಿನ್ನೆಲೆಯಲ್ಲಿ ಕನಿಷ್ಟ ಅರ್ಹತೆಗಳಿರುವ ಹದಿನೈದು ಶಾಸಕರು ದೊರಕುವುದು ಸಹ ಕಡುಕಷ್ಟ !! ಕಾಂಗ್ರೆಸ್ ಆಧಿಕಾರಕ್ಕೆ ಬಂದರೆ ಕೋಮುವಾದದ ಭೂತ ಇಲ್ಲವಾಗುತ್ತದೆ ಎಂಬ ಒಂದೇ ಅರ್ಹತೆಯನ್ನು ತನ್ನ ಹೆಗಲೇರಿಸಿಕೊಂಡಿರುವ ಈ ಕಾಂಗ್ರೆಸ್ ಕಳೆದ ಎಂಟು ವರ್ಷಗಳ ತನ್ನ ವಿರೋಧ ಪಕ್ಷದ ಜವಾಬ್ದಾರಿಯನ್ನು ಅತ್ಯಂತ ಹೊಣೆಗೇಡಿಯಾಗಿ, ದಿಕ್ಕೆಟ್ಟ, ಹಾದಿ ತಪ್ಪಿದ ಪಕ್ಷವಾಗಿಯೇ ಕಾರ್ಯ ನಿರ್ವಸಿತು. ಈ ಕಾಲ ಘಟ್ಟದಲ್ಲಿ ಅನೇಕ ಕೋಮು ಗಲಭೆಗಳು, ಮಹಿಳೆಯರ ಮೇಲೆ ಅತ್ಯಾಚಾರಗಳು, ಹಲ್ಲೆ ನಡೆದಾಗಲೂ ಬೆರಳೆಣಿಕೆಯಷ್ಟು ಶಾಸಕರನ್ನು ಬಿಟ್ಟು ಒಂದು ಪಕ್ಷವಾಗಿ ಕಾಂಗ್ರೆಸ್ ಅನುಸರಿಸಿದ ಜಾಣ ಮೌನ ಮತ್ತು ನಿರ್ಲಕ್ಷತೆಯನ್ನು ಕ್ಷಮಿಸಲು ಸಾಧ್ಯವೇ ?? ಮಂಗಳೂರಿನ ಸ್ಟೇ ಹೋಂ ಪ್ರಕರಣದ ಕುರಿತಾಗಿ ನನಗೆ ಪರಿಚಯದ ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರೊಬ್ಬರೊಂದಿಗೆ ಚರ್ಚಿಸಿದಾಗ ಅವರ ಉದಾಸೀನತೆಯನ್ನು, ಘಟನೆಯ ಕುರಿತಾದ ಮಾಹಿತಿಯ ಕೊರತೆಯನ್ನು ಕಂಡು ದಂಗು ಬಡಿದೆ !! ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಇಲಾಖೆಯಲ್ಲಿ ಕಣ್ಣಿಗೆ ಕಾಣುವಂತೆಯೇ,ಕಣ್ಣಿಗೆ ಕಾಣದಂತೆಯೇ ತುಂಬಿಕೊಂಡಿರುವ ಸಂಘಪರಿವಾದ ಗುಂಪನ್ನು ಹೇಗೆ ಹುಡುಕಿ ಹುಡುಕಿ ತೆಗೆದು ಹೇಗೆ ಸ್ವಚ್ಛಗೊಳಿಸುತ್ತೀರಿ ಇದಕ್ಕೆ ಈಗಲೇ ಯೋಜನೆಗಳಿವೆಯೇ ಎಂದು ಇದೇ ನಾಯಕರನ್ನು ಪ್ರಶ್ನಿಸಿದಾಗ ಅವರು ಹೇಳಿದ್ದು ಇವೆಲ್ಲ ಆಗದ ಮಾತು,ಸಧ್ಯಕ್ಕೆ ನಾವು ಆಧಿಕಾರದ ಚುಕ್ಕಾಣಿ ಹಿಡಿಯೋಣ ಅಷ್ಟೇ ಎಂದು ಉತ್ತರಿಸಿದ್ದು ಇಡೀ ಕಾಂಗ್ರೆಸ್ನ ಮನೋಸ್ಥಿತಿಯನ್ನು ಬಿಂಬಿಸುತ್ತದೆ.

ರಾಷ್ಟ್ರೀಯತೆಯನ್ನು ಮತೀಯವಾದದೊಂದಿಗೆ ಸಮೀಕರಿಸುವ ಸಂಘ ಪರಿವಾರಕ್ಕೆ ನಿಜಕ್ಕೂ ಪರ್ಯಾಯವಾಗಿ ಕಾಂಗ್ರೆಸ್ ಬೆಳೆಯಬೇಕೆಂದರೆ ಅದು ಈಗಿನ ಮಾದರಿಯಲ್ಲಂತೂ ಅಲ್ಲವೇ ಅಲ್ಲ. ದೇಶಪ್ರೇಮದ ಹೆಸರಿನಲ್ಲಿ ಸಮಾಜವನ್ನು ಒಡೆದು ತುಂಡು ಮಾಡಿದ ಬಿಜೆಪಿಯ ವಿರುದ್ಧ ಪರ್ಯಾಯ  ರಾಜಕಾರಣವನ್ನು ಕಟ್ಟಲು ಕಾಂಗ್ರೆಸ್ನ ಬತ್ತಳಿಕೆಯಲ್ಲಿ ಯಾವುದೇ ಹತಾರಗಳಿಲ್ಲ. ದಲಿತರು ಮತ್ತು ಮುಸ್ಲಿಂರು ಕಾಂಗ್ರೆಸ್ ಆಳ್ವಿಕೆಯಲ್ಲಿ ಸುರಕ್ಷಿತರು ಎಂದು ನಾವು ಎಷ್ಟೇ ಸಮಜಾಸಿಕೊಂಡರೂ ಇಂದು ಇಪ್ಪತ್ತೊಂದನೇ ಶತಮಾನದ ಎರಡನೇ ದಶಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಬಳ್ಳಿಯ ಹೂವುಗಳಾಗಿ ಕಣ್ಣಿಗೆ ರಾಚುತ್ತಿರುವುದು ಮಾತ್ರ ಸತ್ಯ. ದಲಿತರಿಗೆ ಮತ್ತು ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಏನನ್ನೂ ನೀಡದಿದ್ದರೂ, ಅವರಿಗೆ ಅಂಗೈಯಲ್ಲಿ ಅರಮನೆ ತೋರಿಸಿ ಮೋಸಗೊಳಿಸಿದ್ದರೂ ಮಾನವಾಗಿ, ಆತ್ಮಸ್ಥೈರ್ಯದಿಂದ, ತಲೆಯೆತ್ತಿ ಬದುಕಲಿಕ್ಕಾದರೂ ಸಾಧ್ಯವಿರುವುದು ಕಾಂಗ್ರೆಸ್ ಸರ್ಕಾರದಲ್ಲಿ ಮಾತ್ರ ಎಂಬ ನುಡಿ ಮೂವತ್ತು ವರ್ಷಗಳ ಹಿಂದೆ ನಿಜವಿತ್ತು. ಇಂದು ಇದೆಲ್ಲ ಮತ್ತೊಂದು ಮಜಲನ್ನು ಮುಟ್ಟಿ ಅಪಾಯದ ಅನೇಕ ದಾರಿಗಳಿಗೆ ಬಂದು ತಲುಪಿದೆ.

ಸಂತೆಗೆ ತಕ್ಕ ಬೊಂತೆಯ ಸಿದ್ಧಾಂತದ ಅಡಿಯಲ್ಲಿ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಪ್ರತಿ ಕ್ಷಣಕ್ಕೂ ಕೊಳೆಯುತ್ತಾ ನಾರುವ ಗುಣಗಳನ್ನು ಇಂದು ಮೈಗೂಡಿಸಿಕೊಂಡಿದೆ. ಇಂದು ಕಾಂಗ್ರೆಸ್ ಯಾವುದೇ ಕ್ಷಣದಲ್ಲಿ ಪ್ರತಿಗಾಮಿ ನಿಲುವು ತಳೆಯುವಷ್ಟು ಅಪಾಯದ ಜಾರುಬಂಡೆಯಲ್ಲಿ ಬಂದು ನಿಂತಿದೆ. ಒಂದು ಗಟ್ಟಿಯಾದ ತಾತ್ವಿಕ ನೆಲೆಯನ್ನು ಕಟ್ಟಲು ಇಂದು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ ಇಲ್ಲ. ತನ್ನೊಡಲೊಳಗೆ ಎಷ್ಟೇ ಬಗೆಯ ವಿರೋಧಾಭಾಸದ ನೆಲೆಗಳನ್ನು ಇಟ್ಟುಕೊಂಡಿದ್ದರೂ ಬಹಿರಂಗವಾಗಿ ರೈತ ಸಂಘದೊಂದಿಗೆ, ದಲಿತ ಸಂಘಟನೆಗಳೊಂದಿಗೆ ಸಮೀಕರಿಸಿಗೊಂಡು ರಾಜಕೀಯ ಮಾಡಲೇಬೇಕಾದಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ತನಗೆ ತಾನು ಸೃಷ್ಟಿಸಿಕೊಳ್ಳಲೇ ಇಲ್ಲ. ಇಂದು ಮೀಸಲು ಕ್ಷೇತ್ರಗಳಲ್ಲಿ ಅನೇಕ ಕಡೆ ಅಸ್ಪೃಶ್ಯರನ್ನು ಕಡೆಗಣಿಸಿ ಕಾಂಗ್ರೆಸ್ ಸ್ಪೃಶ್ಯ ಜಾತಿಗಳಿಗೆ ಟಿಕೇಟು ನೀಡಿರುವುದೇ ಇದಕ್ಕೆ ಸಾಕ್ಷಿ.ಇದು ಬಿಜೆಪಿಗೆ ಕಾಂಗ್ರೆಸ್ ಪರ್ಯಾಯವಾಗಿ  ಬೆಳೆಯುವ ಪರಿ !!!! ಭಾರತವನ್ನು ದಲಿತರ ಪರವಾದ ದೇಶವನ್ನು ಕಟ್ಟಲು ಮತ್ತು ದಲಿತರ ಮೂಲಕವೇ ಮುಸ್ಲಿಂರಿಗೆ ಬೆಳಕಿನ ದಾರಿ ಕಾಣಿಸುವ ಶಕ್ತಿ ಕಾಂಗ್ರೆಸ್ಗೆ ಇತ್ತು. ಆದರೆ ಅದನ್ನು ಸಂಪೂರ್ಣವಾಗಿ ಕೈಚೆಲ್ಲಿ ಇಂದು ದಿಕ್ಕೇಡಿಯಾಗಿ, ಕಕ್ಕಾಬಿಕ್ಕಿಯಾಗಿ ಬಯಲಿನಲ್ಲಿನ ದೀಪದಂತೆ ನಿಂತಿದೆ ಕಾಂಗ್ರೆಸ್.

ಇಂದು ನಾವೆಲ್ಲ ಕಹಿ ಸತ್ಯವನ್ನು ಹೇಳುವ,ಹೇಳಿ ಅರಗಿಸಿಕೊಳ್ಳುವ ಗುಣಗಳನ್ನು ಮೈಗೂಡಿಕೊಳ್ಳದಿದ್ದರೆ ಹಳ್ಳ ಹಿಡಿಯುವುದಂತೂ ಗ್ಯಾರಂಟಿ. ನಮ್ಮ ಹೊಂದಾಣಿಕೆಯ ಮಟ್ಟವನ್ನು ಅನಿವಾರ್ಯತೆಯ ನೆಪದಲ್ಲಿ ಸಂಯಮ ಮೀರಿ ಕೆಳಕ್ಕೆ ಮತ್ತಷ್ಟು ಕೆಳಕ್ಕೆ ಇಳಿಸುವುದು ವ್ಯವಸ್ಥೆಯನ್ನು ಅಭದ್ರಗೊಳಿಸಿದಂತೆಯೇ ಸರಿ. ಎಂಬತ್ತರ ದಶಕದಲ್ಲಿ ಹೆಗಡೆಯ ನರಿ ಬುದ್ದಿಗೆ ಇಡೀ ಪ್ರಗತಿಪರ ಗುಂಪು ಬಲಿಯಾದ ರೀತಿನೀತಿಗಳು ನಮ್ಮ ನೆನಪಿನಿಂದ ಮುಸುಕಾಗದಿರಲಿ. ಒಂದು ವೇಳೆ ಮಂಪರು ಕವಿದಿದ್ದೇ ನಿಜವಾದರೆ ಇಡೀ ಪ್ರಜ್ಞಾವಂತ ಸಮಾಜಕ್ಕೆ ಲಕ್ವ ಹೊಡೆಯಲು ಬಹಳ ಕಾಲವೇನು ಬೇಕಾಗಿಲ್ಲ.

ಚುನಾವಣಾ ಪ್ರಣಾಳಿಕೆಗಳೆಂಬ ಪ್ರಹಸನ

– ಡಾ. ಎನ್. ಜಗದಿಶ್ ಕೊಪ್ಪ
ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಗಾಗಿ ಎಲ್ಲಾ ಪಕ್ಷಗಳು ಪೈಪೋಟಿಗೆ ಬಿದ್ದಂತೆ ತಮ್ಮ ತಮ್ಮ ಚುನಾವಣಿಯ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿವೆ, ಇವುಗಳನ್ನು ಗಮನಿಸಿದರೆ, ಅಥವಾ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಓದಿದರೆ, ಇವುಗಳನ್ನು ನಮ್ಮ ಪತ್ರಿಕೆಗಳು ‘ಹಾಸ್ಯಲೇಖನಗಳು ಎಂಬ ಶೀರ್ಶಿಷಿಕೆಯಡಿ ಪ್ರಕಟಿಸಬಹುದಾದ ಎಲ್ಲಾ ಗುಣಗಳನ್ನು ಹೊಂದಿವೆ Poverty_4C_--621x414ಎಂದು ನಿಸ್ಸಂಕೋಚವಾಗಿ ಹೇಳಬಹುದು.
ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ, ದಿನದ 24 ಗಂಟೆ ವಿದ್ಯುತ್, ನಿರಂತರ ಕುಡಿಯುವ ಯೋಜನೆ, ರಸ್ತೆ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಕೃಷಿ ಅಭಿವೃದ್ಧಿಗೆ ಒತ್ತು, ಹೀಗೆ ಪುಂಖಾನು ಪುಂಖವಾಗಿ ಬೊಗಳೆ ಬಿಡುತ್ತಿರುವ ರಾಜಕೀಯ ಪಕ್ಷಗಳಿಗೆ ತಾವು ಅಧಿಕಾರದಲ್ಲಿದ್ದಾಗ ಈ ಯೋಜನೆಗಳನ್ನು ಏಕೆ ಅನುಷ್ಟಾನಗೊಳಿಸಲಿಲ್ಲ? ಎಂದು ಯಾರೂ ಪ್ರಶ್ನಿಸಲಿಲ್ಲ, ಜೊತೆಗೆ ಪ್ರಶ್ನಿಸಲೂ ಬಾರದು ಏಕೆಂದರೆ, ಇವುಗಳು ಬಡವರನ್ನು ಬಡವರಾಗಿ ಇಡುವ ಒಂದು ವ್ಯವಸ್ಥಿತ ತಂತ್ರ ಅಷ್ಟೇ. ಇವುಗಳ ಬಗ್ಗೆ ಭಾರತದ ಮತದಾರರು ನಂಬಿಕೆಗಳನ್ನು ಕಳೆದುಕೊಂಡು ಎಷ್ಟೋ ವರ್ಷಗಳಾಗಿವೆ, ಈಗಿನ ಚುನಾವಣಾ ಪ್ರಣಾಳಿಕೆಗಳೆಂದರೆ, ಮನಸ್ಸಿಗೆ ತುಂಬಾ ಬೇಸರವಾದಾಗ ಓದಬಹುದಾದ ಹಾಸ್ಯದ ಕರಪತ್ರಗಳು ಎಂಬಂತಾಗಿವೆ.
ನಮ್ಮ ಜನಪ್ರತಿನಿಧಿಗಳು ವಾಸ್ತವ ಬದುಕಿನಿಂದ ಎಷ್ಟೊಂದು ದೂರ ಚಲಿಸಿದ್ದಾರೆ ಎಂಬುದಕ್ಕೆ, ಚುನಾವಣಾ ಪ್ರಣಾಳಿಕೆಗಳು ಸಾಕ್ಷಿಯಾಗಿವೆ.  ರಾಜಧಾನಿ ದೆಹಲಿ ಮಹಾನಗರ ಪಾಲಿಕೆ ಇತ್ತೀಚೆಗೆ ದೆಹಲಿ ರಸ್ತೆಗಳಲ್ಲಿ ಕಸ ಗುಡಿಸಲು, 5.400 ಹುದ್ದೆಗಳಿಗೆ, ಕೇವಲ ಐದನೇಯ ತರಗತಿ ಪಾಸಾಗಿರುವ ಅಭ್ಯಥರ್ಿಗಳಿಂದ ಅಜರ್ಿ ಆಹ್ವಾನಿಸಿತ್ತು. ಒಟ್ಟು 18 ಸಾವಿರ ಅಜರ್ಿಗಳು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇವರಲ್ಲಿ ಎಸ್.ಎಸ್,ಎಲ್.ಸಿ. ಪಾಸಾದವರು ಎರಡು ಸಾವಿರ ಮಂದಿ ಇದ್ದರೆ, 50 ಮಂದಿ ಪದವೀಧರರು ಇದ್ದರು. ಉದ್ಯೋಗ ಸೃಷ್ಟಿಯ ಬಗ್ಗೆ ಬೊಗಳೆ ಬಿಡುವ ನಮ್ಮ ರಾಜಕೀಯ ಪಕ್ಷಗಳಿಗೆ ಕಪಾಳಕ್ಕೆ ಬಾರಿಸಿದಂತೆ ಇರುವ ಈ ಕಟು ವಾಸ್ತವ ಸಂಗತಿ ಅರ್ಥವಾಗುವುದು ಯಾವಾಗ?
ಕಳೆದ ವಾರ ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಹಾಂಗ್ ಕಿನ್, ಜಾಗತಿಕ ಬಡತನದ ಕುರಿತಂತೆ ಅಂಶಗಳನ್ನು ಬಿಡುಗಡೆ ಮಾಡಿದ್ದಾರೆ. ವಿಶ್ವದಲ್ಲಿ 120 ಕೋಟಿ ಬಡಜನರಿದ್ದು, ಭಾರತದಲ್ಲಿ ಇಲ್ಲಿನ ಜನಸಂಖ್ಯೆಯ 120 ಕೋಟಿಯಲ್ಲಿ, ಶೇಕಡ 33 ರಷ್ಟು ಬಡವರಿದ್ದಾರೆ ಎಂದು ತಿಳಿಸಿದ್ದಾರೆ. ವಿಶ್ವಬ್ಯಾಂಕ್, ಬಡತನ ಕುರಿತಂತೆ ತನ್ನ ಮಾನದಂಡವನ್ನು ಬದಲಾಯಿಸಿದೆ. ದಿನವೊಂದಕ್ಕೆ  ಒಂದು ಡಾಲರ್ ( ಸುಮಾರು 55 ರೂಪಾಯಿ) ಬದಲಾಗಿ, ಒಂದುಕಾಲು ಡಾಲರ್ ದುಡಿಯುವ ಅಂದರೆ, ಸುಮಾರು 68 ರೂಪಾಯಿ ಸಂಪಾದಿಸುವ ವ್ಯಕ್ತಿ ಬಡವನಲ್ಲ. ಆದರೆ, ಭಾರತದಲ್ಲಿ ಈ ಮಾನದಂಡವನ್ನು ದಿನವೊಂದಕ್ಕೆ 28 ರೂಪಾಯಿ ಎಂದು ನಿರ್ಧರಿಸಲಾಗಿದೆ. ಬಡತನ ಕುರಿತಂತೆ ವಿಶ್ವಬ್ಯಾಂಕ್ ನ  ಮಾನದಂಡವನ್ನು ಭಾರತಕ್ಕೆ ಅಳವಡಿಸಿದರೆ, ಬಡವರ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು. ನಮ್ಮ ರಾಜಕಾರಣಿಗಳು ಎಷ್ಟು ಅವಿವೇಕದಿಂದ ವತರ್ಿಸಬಲ್ಲರು ಎಂಬುದಕ್ಕೆ ತಿಂಗಳಿಗೆ ನಾಲ್ಕು ನೂರು ಸಂಪಾದಿಸುವ ದಂಪತಿಗಳು ರಾಜಧಾನಿ ದೆಹಲಿಯಲ್ಲಿ ಬದುಕಬಹುದೆಂದು ದೆಹಲಿಯ ಮುಖ್ಯ ಮಂತ್ರಿ ಶೀಲಾದೀಕ್ಷಿತ್ ಹೇಳಿಕೆ ನೀಡಿದ್ದರು. ಭಾರತದ ಬಡತನದ ಮಾನದಂಡವನ್ನು ನಿರ್ಧರಿಸುವ ಯೋಜನಾ ಆಯೋಗ, ಕಳೆದ ನವಂಬರ್ ತಿಂಗಳಿನಲ್ಲಿ ತನ್ನ ಕಛೇರಿಯ ಎರಡು ಶೌಚಾಲಯಗಳ ನಿಮರ್ಾಣಕ್ಕೆ ಖಚರ್ು ಮಾಡಿದ ಹಣ, ಬರೋಬ್ಬರಿ 14 ಲಕ್ಷ ರೂಪಾಯಿ. ಇದೇ ಯೋಜನಾ ಆಯೋಗ, ಒಂದು ಶೌಚಾಲಯದ ವೆಚ್ಚ ಕ್ಕೆ 20 ಸಾವಿರ ರುಪಾಯಿಗಳನ್ನು ನಿಗದಿ ಮಾಡಿದೆ. ಇದನ್ನು ವ್ಯಂಗ್ಯ ಎಂದು ಕರೆಯಬೇಕೊ? ಅಥವಾ ದುರಂತವೆನ್ನಬೇಕೊ? ತಿಳಿಯದು.
ಈ ಹಿನ್ನಲೆಯಲ್ಲಿ ಚುನಾವಣಾ ಪ್ರಣಾಳಿಕೆಗಳು, ಭರವಸೆಗಳಂತೆ ಕಾಣದೆ, ಕೇವಲ ಆಮೀಷಗಳಂತೆ ಕಾಣುತ್ತವೆ. ವಿಶ್ವ ಬ್ಯಾಂಕ್ ಸಮೀಕ್ಷೆ ಪ್ರಕಾರ, 2026 ರ ವೇಳೆಗೆ ಭಾರತದ ಜನಸಂಖ್ಯೆ 150 ಕೋಟಿಗೆ ಏರಲಿದ್ದು, ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿದೆ.  ಭಾರತದಲ್ಲಿ ಶೇಕಡ 46 ಮಂದಿಗೆ ಇಂದಿಗೂ ಶೌಚಾಲಯ ಇಲ್ಲ, ಇಂತಹ ಸ್ಥಿತಿಯಲ್ಲಿ ನಮ್ಮ ರಾಜಕೀಯ ಪಕ್ಷಗಳಿಂದ ಅಥವಾ ಸಕರ್ಾರಗಳಿಂದ ಉದ್ಯೋಗ ಸೃಷ್ಟಿ ಸಾಧ್ಯವೆ? ಆ ನಿಟ್ಟಿನಲ್ಲಿ ನಮ್ಮ ಜನಪ್ರತಿನಿಧಿಗಳು ದೂರರದೃಷ್ಟಿಯ ಯೋಜನೆಗಳನ್ನು ರೂಪಿಸಿದಂತೆ ಕಾಣುವುದಿಲ್ಲ.
ಭಾರತದ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ಚುನಾವಣೆ ಎಂದರೆ, ಹಣ, ಹೆಂಡ, ಮಾಂಸ, ಮತ್ತು ಆಮೀಷ ಎಂಬುದು ಜಗಜ್ಜಾಹಿರಾಗಿದೆ. ಚುನಾವಣೆ ಆಯೋಗದ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಗಾಳಿಗೆ ತೂರುವ ಕಲೆಯನ್ನು ನಮ್ಮ ರಾಜಕೀಯ ಪಕ್ಷಗಳು ಮತ್ತು ಜನಪ್ರತಿನಿಧಿಗಳು ಕರಗತ ಮಾಡಿಕೊಂಡಿದ್ದಾರೆ. ಇದಕ್ಕೆ ಒಂದು ಜ್ವಲಂತ ಉದಾಹರಣೆಯಾಗಿ ನಮ್ಮ ಮಹಿಳಾ ಸ್ವಸಹಾಯ ಸಂಘಗಳ ದುರ್ಬಳಕೆಯನ್ನು ಗಮನಿಸಿಬಹುದು.
ನಮ್ಮ ನೆರೆಯ ಬಂಗ್ಲಾ ದೇಶದಲ್ಲಿ 1970 ದಶಕದಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪನೆ ಮೂಲಕ ಮಹಿಳಾ ಸಬಲೀಕರಣಕ್ಕೆ ಹೊಸ ಪರಿಕಲ್ಪನೆಯನ್ನು ಕೊಟ್ಟ ಡಾ. ಮಹಮ್ಮದ್ ಯೂನಸ್ ರವರ ಕನಸಿನ ಕೂಸಾದ ಮಹಿಳೆಯರ ಸ್ವ ಸಹಾಯ ಗುಂಪು ಯೋಜನೆ ಭಾರತದಲ್ಲಿ ಮತಬೇಟೆಯ ಮಾರುಕಟ್ಟೆಯಾಗಿ ಪರಿವರ್ತನೆ ಹೊಂದಿದೆ. ವಿಶ್ವ ಬ್ಯಾಂಕ್ ಸೇರಿದಂತೆ, ಜಗತ್ತಿನ ಎಂಬತ್ತೊಂಬತ್ತು ರಾಷ್ಟ್ರಗಳು ಈ ಯೋಜನೆಯನ್ನು ಅಳವಡಿಸಿಕೊಂಡು, ಬಡತನದ ನೇರ ಪರಿಣಾಮದ ಮೊದಲ ಬಲಿ ಪಶುವಾಗುವ ಮಹಿಳೆಯನ್ನು ಹಸಿವು ಮತ್ತು ಬಡತನದ ಕೂಪದಿಂದ ಮೇಲೆತ್ತಲು ಶ್ರಮಿಸುತ್ತಿವೆ. ಆದರೆ, ಭಾರತದಲ್ಲಿ ಚುನಾವಣಾ ಪ್ರಚಾರಕ್ಕಾಗಿ, ಮತಕ್ಕಾಗಿ ಸ್ರೀ ಸಹಾಯ ಗುಂಪುಗಳನ್ನು ಯಾವ ವಿವೇಚನೆಯಿಲ್ಲದೆ, ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅನಕ್ಷರಸ್ತ ಮುಗ್ಧ ಮಹಿಳೆಯರು ಈ ದಿನ ಐನೂರು ರೂಪಾಯಿ ಕಾಣಿಕೆಗಾಗಿ ಊರಿಗೆ ಬರುವ ರಾಜಕಾರಣಿಗಳಿಗೆ ಆರತಿ ಬೆಳಗುತ್ತಿದ್ದಾರೆ. ಮನೆಗೆ ಬಂದ ಮಗನಿಗೆ, ಅಥವಾ ಸೊಸೆಗೆ ಆರತಿ ಎತ್ತುತ್ತಿದ್ದ ಸಾಂಸ್ಕೃತಿಕ ಸಂಪ್ರದಾಯ ಈಗ ಹಣದಾಸೆಗೆ ಮುಖಹೇಡಿ ಜನಪ್ರತಿನಿಧಿಗಳಿಗೆ ಮೀಸಲಾಗಿದೆ. ಇದೊಂದು ರಾಜಕೀಯ ವ್ಯವಸ್ಥೆಯ ವ್ಯಭಿಚಾರವಲ್ಲದೆ ಮತ್ತೇನು?
ಭಾರತದಲ್ಲಿ ಪ್ರತಿ ಮುವತ್ತು ನಿಮಿಷಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಈವರೆಗೆ ಒಟ್ಟು 2 ಲಕ್ಷದ 56 ಸಾವಿರ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಗತಿ ಈ ನಾಡಿನ ದುರಂತ ಎಂದು ಪರಿಭಾವಿಸಲಾಗದ ರಾಜಕೀಯ ಪಕ್ಷಗಳು, ಚುನಾವಣೆ ಸಂದರ್ಭದಲ್ಲಿ ಮೂಗಿಗೆ ತುಪ್ಪ ಸವರುವ  ಪ್ರಣಾಣಿಕೆಗಳನ್ನು ಪ್ರಕಟಿಸಿದರೆ, ನಾವುಗಳು ಅವುಗಳನ್ನು  ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇದೆಯಾ?