ಜನ ಬುದ್ಧಿವಂತರೋ, ರಾಜಕಾರಣಿಗಳು ಬುದ್ಧಿವಂತರೋ?


– ಚಿದಂಬರ ಬೈಕಂಪಾಡಿ


 

ಜನ ಬುದ್ಧಿವಂತರೋ, ರಾಜಕಾರಣಿಗಳು ಬುದ್ಧಿವಂತರೋ ?- ಇಂಥ ಪ್ರಶ್ನೆ ಕೇಳುವ ಅನಿವಾರ್ಯತೆಗೂ ಕಾರಣವಿದೆ. ಮತಹಾಕುವ ಜನ ಬಾಯಿಬಿಟ್ಟು ಇಂಥದ್ದೇ ಪಕ್ಷಕ್ಕೆ ಎಂದಾಗಲೀ, ಈ ಅಭ್ಯರ್ಥಿಗೆ ಅಂತಾಗಲೀ ನಿರ್ದಿಷ್ಟವಾಗಿ ಹೇಳುವುದಿಲ್ಲ. ಯಾರು ಕೇಳಿದರೂ ನಿಮ್ಮ ಪಕ್ಷಕ್ಕೇ ನಮ್ಮ ಮತ ಅಂತಲೋ, ನಿಮಗೇ ನಮ್ಮವರ ಮತವೆಂದೋ ಹೇಳುತ್ತಾರೆ. ಆದರೆ ಅವರ ಆಯ್ಕೆ ಯಾವುದಾದರೂ ಒಂದು ಆಗಿರುತ್ತದೆ.

ಹಾಗೆಯೇ ರಾಜಕಾರಣಿಗಳು ಅಪ್ಪಿ ತಪ್ಪಿ ಜನರ ಸಮಸ್ಯೆಗಳನ್ನು ಆಧರಿಸಿ ಮತ ಕೇಳುವುದಿಲ್ಲ. ತಮ್ಮ ಪಕ್ಷ, ತಮ್ಮ ನಾಯಕರ ವರ್ಚಸ್ಸು, ಅವರ ಸಾಧನೆಯನ್ನು ಹೇಳಿಕೊಂಡು ಮತಯಾಚನೆ ಮಾಡುತ್ತಾರೆ.

ಜನರು ತಮ್ಮ ಮತ ಯಾರಿಗೆ ಎಂದು ಗುಟ್ಟು ಬಿಡದಿರುವುದಕ್ಕೆ ತನ್ನ ಮತದ ಪಾವಿತ್ರ್ಯತೆ ಉಳಿಸಿಕೊಳ್ಳುವುದು. ಆದರೆ ರಾಜಕಾರಣಿಗಳು ಜನರ ಸಮಸ್ಯೆಗಳ ಹಿನ್ನೆಲೆಯಲ್ಲಿ ಮತ ಕೇಳದಿರುವುದಕ್ಕೆ ಅವುಗಳನ್ನು ನಿವಾರಿಸಲು ಸಾಧ್ಯವಿಲ್ಲ ಎನ್ನುವ ಸ್ಪಷ್ಟವಾದ ಅರಿವಿನಿಂದ. ಜನರಿಗೆ ಬೇಕಾಗಿರುವವರು ತಮ್ಮ ಸಮಸ್ಯೆಗಳಿಗೆ ಕಿವಿಯಾಗುವವರು, voteತಮಗೆ ಧ್ವನಿಯಾಗುವವರು. ಕಿವಿಯಾಗದವರು, ಧ್ವನಿಯಾಗದವರು ಕೇವಲ ಭಾಷಣ ಮಾಡಿಯೇ ರಾಜಕಾರಣದಲ್ಲಿ ಚಲಾವಣೆಯಲ್ಲಿರುತ್ತಾರೆ. ಆದರೆ ಇಂಥವರನ್ನು ಜನ ಒಂದಲ್ಲಾ ಒಂದು ಸಲ ಗುರುತಿಸಿ ಮನೆಗೆ ಕಳುಹಿಸುತ್ತಾರೆ. ಅಂಥ ಎಚ್ಚರಿಕೆ ಸಂದೇಶ ಚುನಾವಣೆಯ ಮೂಲಕ ರವಾನೆಯಾದಾಗ ಮಾತ್ರ ಜನ ನಿರೀಕ್ಷೆ ಮಾಡಲು ಅವಕಾಶವಾಗುತ್ತದೆ.

ರಾಜ್ಯದ 224 ಕ್ಷೇತ್ರಗಳಿಗೆ ಮೇ 5 ರಂದು ನಡೆಯುವ ಚುನಾವಣೆಯಲ್ಲಿ ಜನ ನಿರ್ಧರಿಸುವ ಮುನ್ನವೇ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ, ಯಾರು ಮುಖ್ಯಮಂತ್ರಿಯಾಗುತ್ತಾರೆಂದು ಮಾಧ್ಯಮಗಳು ಭವಿಷ್ಯ ನುಡಿದಿವೆ. ಚುನಾವಣೆಗೂ ಮುನ್ನವೇ ಬರುತ್ತಿರುವ ಇಂಥ ಜನಮತವನ್ನು ರಾಜಕೀಯ ಪಕ್ಷಗಳು ಯಾವರೀತಿ ಸ್ವೀಕರಿಸುತ್ತಿವೆ ಎನ್ನುವುದೂ ಮುಖ್ಯ.

ಜನಮತ ತಮ್ಮ ಪರವಾಗಿ ಬಂದಿದ್ದರೆ ಖುಷಿ ಪಡುತ್ತಾರೆ, ವಿರುದ್ಧವಾಗಿ ಬಂದಿದ್ದರೆ ಕೆಂಡಕಾರುತ್ತಾರೆ. ಮತದಾರನ ಮನದಾಳವನ್ನು ಮಾಧ್ಯಗಳು ಅರ್ಥಮಾಡಿಕೊಂಡಿರುವುದಾಗಿ ಹೇಳುತ್ತಿರುವುದು ಅದು ಆ ಮಾಧ್ಯಮಗಳ ವೈಯಕ್ತಿಕವಾದ ನಿಲುವು ಮತ್ತು ಅದು ನಿಜವಾದ ಜನಮತಕ್ಕೆ ಹತ್ತಿರವಿರಬಹುದು, ಇಲ್ಲದೆಯೂ ಇರಬಹುದು.
ರಾಜಕೀಯದಲ್ಲಿ ಟ್ರೆಂಡ್ ಎನ್ನುವ ಪದ ಬಹಳಷ್ಟು ಬಳಕೆಯಲ್ಲಿದೆ. ಟ್ರೆಂಡ್ ಶಾಶ್ವತವಲ್ಲ. ಕ್ಷಣ ಕ್ಷಣಕ್ಕೆ ಬದಲಾವಣೆಯಾಗುತ್ತಿರುತ್ತದೆ. ಒಂದು ದಿನದಲ್ಲಿ ಒಂದು ಪಕ್ಷ ಅಥವಾ ಅಭ್ಯರ್ಥಿಯ ಪರ ಜನರಿಗಿರುವ ಒಲವು ಮತ್ತೊಂದು ದಿನದಲ್ಲೂ ಹಾಗೆಯೇ ಇರುವುದಿಲ್ಲ. ಏರಿಳಿತವಾಗಬಹುದು, ಏರಿಕೆಯೇ ಹೆಚ್ಚಾಗಿರಬಹುದು, ಇಳಿಕೆಯೇ ಅತಿಯಾಗಿರಬಹುದು. ಈ ಟ್ರೆಂಡ್ ಶಾಶ್ವತವಲ್ಲದ ಕಾರಣ ಅದನ್ನೇ ಪೂರ್ಣವಾಗಿ ನಂಬುವಂತಿಲ್ಲ.

ಈಗಿನ ರಾಜಕಾರಣದಲ್ಲಿ ಟ್ರೆಂಡ್‌ಗಳ ಹಾವಳಿ ಹೆಚ್ಚಾಗಿದೆ. ಇದನ್ನು ನಂಬಿಯೇ ವಾಸ್ತವವನ್ನು ಮರೆತು ಭ್ರಮೆಗೆ ಒಳಗಾಗುತ್ತಾರೆ. INDIA-ELECTIONಈ ಭ್ರಮೆಗಳ ಭರಾಟೆ ರಾಜಕಾರಣಿಗಳು ಮೈಮರೆಯುವಂತೆ ಮಾಡುತ್ತಿವೆ ಎನ್ನುವುದನ್ನು ಮರೆಯುವಂತಿಲ್ಲ. ಚುನಾವಣಾ ಪೂರ್ವ ಸಮೀಕ್ಷೆ ನಿರ್ದಿಷ್ಟವಾಗಿ ಒಂದು ಪಕ್ಷದ ಪರವಾಗಿ ಬಂದಿದ್ದರೂ ಅದು ಪ್ರೀಮೆಚೂರ್.

ನಿರ್ದಿಷ್ಟವಾಗಿ ಗೆಲ್ಲುವ, ಅಧಿಕಾರಕ್ಕೇರುವ ಪಕ್ಷವನ್ನು ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶವನ್ನು ಮಾನದಂಡವಾಗಿಟ್ಟುಕೊಂಡು ಆ ದಿನ ಊಹಿಸಿದ್ದಾಗಿನ ಸ್ಥಿತಿ ಟಿಕೆಟ್ ಹಂಚಿಕೆ ಕಾಲಕ್ಕೆ ಬದಲಾಗಿದೆ. ಅಭ್ಯರ್ಥಿಗಳು ಕಣಕ್ಕಿಳಿಯುವ ತವಕದಲ್ಲಿರುವ ಈ ಹಂತದಲ್ಲಿ ಕಾಣುತ್ತಿರುವ ಟ್ರೆಂಡ್ ಆಧರಿಸಿ ಏನನ್ನೂ ಹೇಳುವಂತಿಲ್ಲ. ಯಾವುದೇ ಪಕ್ಷ ಗೆಲುವನ್ನು ಬಯಸುವುದು ತಪ್ಪಲ್ಲ. ಸ್ಪರ್ಧೆ ಮಾಡುವುದು ಗೆಲ್ಲಬೇಕು ಎನ್ನುವ ಉದ್ದೇಶದಿಂದಲೇ ಆದರೂ ಮತದಾರರು ಮನಸ್ಸು ಮಾಡಬೇಕು. ಮತದಾರನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುವುದಾದರೆ ಅವನ ಮುಂದಿರುವ ಆಯ್ಕೆಯ ಮಾನದಂಡಗಳೇ ಬೇರೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣಗಳನ್ನು ಬದಿಗಿಟ್ಟು ತನ್ನ ಆಯ್ಕೆ ಏನೆಂದು ನಿರ್ಧರಿಸಲು ಮತದಾರ ತಿಣುಕಾಡುತ್ತಿದ್ದಾನೆ. ಅವನ ಆಶೋತ್ತರಗಳಿಗೆ ಸ್ಪಂದಿಸುವ ಅಭ್ಯರ್ಥಿಯನ್ನು ಕಣದಲ್ಲಿದ್ದವರ ಪೈಕಿ ಅನಿವಾರ್ಯವಾಗಿ ಆಯ್ಕೆ ಮಾಡಬೇಕಾಗಿದೆ. ಅಂಥ ಮುಖಗಳು ಇನ್ನಷ್ಟೇ ಅನಾವರಣವಾಗಬೇಕಿದೆ. vote-participate-democracyಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಮೇಲೆ ಜನ ಒಲವು ತೋರಿಸಿರುವುದು ನಿಜವಾದರೂ ಆ ಒಲವಿನ ಹಿಂದೆ ತೀರಾ ಖಾಸಗಿತನವಿತ್ತು. ತನ್ನ ಪರಿಸರವನ್ನು ಗಮನದಲ್ಲಿಟ್ಟುಕೊಂಡೇ ಮತಚಲಾಯಿಸಿದ್ದ. ಆದರೆ ವಿಧಾನ ಸಭೆಯಲ್ಲಿ ಅಂಥ ಸ್ಥಿತಿ ಇಲ್ಲ. ಪಕ್ಷ, ಜಾತಿ, ಅಭ್ಯರ್ಥಿಯ ಪ್ರಭಾವಗಳೂ ಮುಖ್ಯವಾಗುತ್ತವೆ. ಬಿಜೆಪಿ, ಕೆಜೆಪಿ, ಜೆಡಿಎಸ್, ಕಾಂಗ್ರೆಸ್, ಬಿಎಸ್‌ಆರ್, ಈ ಐದೂ ಪಕ್ಷಗಳು ತಮ್ಮ ತಮ್ಮ ಅಜೆಂಡಾವನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತವೆ. ಎಲ್ಲಾ ಪಕ್ಷಗಳಲ್ಲೂ ಬಂಡಾಯವಿದೆ, ಜೊತೆಗೆ ಪಕ್ಷೇತರರ ಸ್ಪರ್ಧೆಯೂ ಇದೆ. ಏಕಗಂಟಿನಲ್ಲಿ ಮತಗಳು ಯಾವ ಪಕ್ಷಕ್ಕೂ ಬೀಳುವುದಿಲ್ಲ. ಯಾಕೆಂದರೆ ಅವರ ಮುಂದೆ ಆಯ್ಕೆಗೆ ಹಲವು ಮುಖಗಳಿವೆ. ಜಾತಿ, ಧರ್ಮ, ಭಾಷೆ, ಹಣ, ಪಕ್ಷ ಇವುಗಳ ಆಧಾರದಲ್ಲಿ ಹಂಚಿಕೆಯಾಗುತ್ತವೆ. ಹೀಗಾಗಬಾರದು ಎನ್ನುವುದು ನಿರೀಕ್ಷೆಯಾದರೂ ಹಾಗೆ ಆಗುವುದು ಈಗಿನ ರಾಜಕೀಯದ ಅನಿವಾರ್ಯತೆ, ಪರಿಸ್ಥಿತಿಯ ಒತ್ತಡ. ಮತದಾರನ ಕಣ್ಣಮುಂದಿರುವ ಅಭ್ಯರ್ಥಿಗೆ ಗೆಲುವು ಅನಿವಾರ್ಯವಾದರೂ ಅವನಿಗೆ ಎಲ್ಲರೂ ಅನಿವಾರ್ಯವಲ್ಲ.

ಪಕ್ಷಕ್ಕೆ ಗೆದ್ದು ಅಧಿಕಾರಕ್ಕೇರುವುದೇ ಮುಖ್ಯಹೊರತು ಇಂಥವರೇ ಗೆಲ್ಲಬೇಕೆಂಬ ಸ್ವಾರ್ಥವಿಲ್ಲ. ಆದರೆ ನಾಯಕರಿಗೆ ತಮ್ಮದೇ ಆದ ಹಿಡನ್ ಅಜೆಂಡಾಗಳಿರುತ್ತವೆ. ತನ್ನ ಬೆಂಬಲಿಗರು ಗೆದ್ದು ಬರಬೇಕು ಎನ್ನುವ ಸ್ವಾರ್ಥ ಹೆಡೆಯೆತ್ತಿರುತ್ತದೆ. ಈ ಕಾರಣದಿಂದಲೇ ಪಕ್ಷಗಳಲ್ಲಿ ನಾಯಕರೊಳಗೇ ಆಂತರಿಕವಾದ ಲೆಕ್ಕಾಚಾರಗಳಿರುತ್ತವೆ. ಕೆಲವು ಆಯಕಟ್ಟಿನ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎನ್ನುವ ಅರಿವಿದ್ದೇ ಕಣಕ್ಕಿಳಿಸುವ ತಂತ್ರಗಾರಿಕೆಯೂ ಈಗಿನ ರಾಜಕೀಯದ ಒಳಸುಳಿ.

ಇಂಥ ತಾಜಾಸ್ಥಿತಿ ರಾಜಕೀಯದಲ್ಲಿರುವುದರಿಂದಲೇ ಮತದಾರ ಯಾರನ್ನು ಬೆಂಬಲಿಸುತ್ತಾನೆ ಎನ್ನುವುದು ಇನ್ನೂ ಅನಿಶ್ಚಿತ. ಟಿಕೆಟ್ ಹಂಚಿಕೆಯ ನಂತರದ ರಾಜಕೀಯ ಸ್ಥಿತಿ ನಿರ್ಣಾಯಕ ಪಾತ್ರವಹಿಸುತ್ತದೆ. ಈ ಚುನಾವಣೆಯಲ್ಲೂ ಬಂಡಾಯ ಈಗಿನ ಟ್ರೆಂಡ್. ಅದು ಹುಟ್ಟುಹಾಕುವ ಅಲೆಗಳು ಪೂರ್ವನಿರ್ಧಾರಿತ ಲೆಕ್ಕಾಚಾರಗಳನ್ನು ಬುಡಮೇಲು ಮಾಡುತ್ತದೆ. ಹೀಗಾಗುವುದು ರಾಜಕೀಯ ಪಕ್ಷಗಳ ನಾಯಕರುಗಳ ಸ್ವಯಂಕೃತ ಅಪರಾಧ ಹೊರತು ಮತದಾರ ಕೊಡುವ ತೀರ್ಮಾನವಲ್ಲ. ಮತದಾರನ ಇಂಗಿತವನ್ನು ಅರ್ಥಮಾಡಿಕೊಳ್ಳದ ರಾಜಕೀಯ ಪಕ್ಷ, ನಾಯಕರು ಸೋಲಿಗೆ ಕಾರಣರಾಗುತ್ತಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ಬಂದಿರುವ ಪಕ್ಷೇತರರ ಸಂಖ್ಯೆ ಈ ವಿಧಾನಸಭಾ ಚುನಾವಣೆಯ ಫಲಿತಾಂಶದ ದಿಕ್ಸೂಚಿಯ ಟ್ರೆಂಡ್. ಬಂಡಾಯ ಎದ್ದಷ್ಟೂ ಅಪಾಯ ಆ ಪಕ್ಷಕ್ಕೆ. ಇದು ರಾಜಕೀಯ ಪಕ್ಷಗಳ ನಾಯಕರುಗಳಿಗೂ ಗೊತ್ತಿದೆ. ಆದರೂ ಜಾಣಕುರುಡುತನ ಪ್ರದರ್ಶಿಸುವುದು ಅವರ ಚತುರತೆಯಲ್ಲ.

One thought on “ಜನ ಬುದ್ಧಿವಂತರೋ, ರಾಜಕಾರಣಿಗಳು ಬುದ್ಧಿವಂತರೋ?

  1. Desha

    Its better to vote for respective voter’s CAST Candidate than any party. now a days CAST is FIRST then PARTY is NEXT. If you do not have your cast candidate in your Constituency at least look for less corrupted candidate of any party. if you do not find that also then your option is better Rule 49-O.

    Reply

Leave a Reply

Your email address will not be published. Required fields are marked *