Daily Archives: April 9, 2013

“ಪ್ರಾಥಮಿಕ ಚುನಾವಣೆ”ಗಳ ಮೂಲಕ ಅಭ್ಯರ್ಥಿಗಳನ್ನು ಆರಿಸಿ…

– ರವಿ ಕೃಷ್ಣಾರೆಡ್ಡಿ

ವಾರದಿಂದೀಚೆಗೆ ನಡೆಯುತ್ತಿರುವ ಕರ್ನಾಟಕದ ಮೂರೂ ಪ್ರಮುಖ ಪಕ್ಷಗಳ ಟಿಕೆಟ್ ಹಂಚಿಕೆ ಪ್ರಕ್ರಿಯೆ ತೀರಾ ನಾಚಿಕೆಗೇಡಿನ ಸಂಗತಿಯಾಗಿ ಹೋಗಿದೆ. ಇದು ಅಪಾರ ಭ್ರಷ್ಟತೆ, ಸ್ವಜನಪಕ್ಷಪಾತ, ಮತ್ತು ಗುಲಾಮಗಿರಿಯ ಮುಂದುವರಿಕೆ ಮಾತ್ರವಲ್ಲದೆ, ಅಪ್ರಜಾಸತ್ತಾತ್ಮಕ ಕೂಡ. ಬಹಳ ಸರಳವಾದ ಅಭ್ಯರ್ಥಿ ಆಯ್ಕೆಯನ್ನು ತಮ್ಮ ಸ್ವಾರ್ಥಕ್ಕಾಗಿ ತೀರಾ ಕಗ್ಗಂಟಾಗಿಸಿಕೊಂಡು ರಾಜಕೀಯ ಪಕ್ಷಗಳು ನಿರ್ವಹಿಸುತ್ತಿರುವ ಈ ರೀತಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆಯಲ್ಲಿ ಅವು ಮೌಲ್ಯ ಮತ್ತು ಸಿದ್ಧಾಂತಗಳಿಗೆ ಯಾವುದೇ ಬೆಲೆಯನ್ನು ನೀಡುತ್ತಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡುತ್ತದೆ.

ಯಾವುದೇ ರಾಜಕೀಯ ಪಕ್ಷ ಯಾರೊಬ್ಬರ ಸ್ವತ್ತೂ ಅಲ್ಲ. ಅದು ಆ ಪಕ್ಷದ ಸದಸ್ಯರಿಗೆ ಸೇರಿದ್ದು ಮತ್ತು ಅದರ ನಾಯಕರು ಆ ಸದಸ್ಯರ ಚುನಾಯಿತ ಪ್ರತಿನಿಧಿಗಳು ಮಾತ್ರ. ಆದರೆ ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಆಂತರಿಕ ಪ್ರಜಾಪ್ರಭುತ್ವದ ಯಾವೊಂದೂ ನಿಯಮಗಳನ್ನು ಪಾಲಿಸುತ್ತಿಲ್ಲ. ದುರದೃಷ್ಟಕರ ಸಂಗತಿ ಏನೆಂದರೆ, ಆ ಪಕ್ಷಗಳ ಅನೇಕ ಮೊದಲ ಸಾಲಿನ ನಾಯಕರಿಗೆ ಯಾವುದೇ ಸೈದ್ದಾಂತಿಕೆ ಹಿನ್ನೆಲೆ ಇಲ್ಲ. ಓದುವ ಅಭ್ಯಾಸವೇ ಇಲ್ಲದ, ಜನಪರ ಚಿಂತನೆಗಳೇ ಇಲ್ಲದ, ಹಣದ ಥೈಲಿ ಮತ್ತು ಚಮಚಾಗಿರಿಯಂತಹ ಅನೈಸರ್ಗಿಕ ಮಾರ್ಗಗಳ ಮೂಲಕ ನಾಯಕರಾಗಿರುವ ಇವರಿಗೆ “ನೈಜ ಪ್ರಜಾಪ್ರಭುತ್ವ” ಮತ್ತು “ಆಂತರಿಕ ಪ್ರಜಾಪ್ರಭುತ್ವ” ಎಂಬ ಪದಪುಂಜಗಳು ಅರ್ಥವಾಗುವುದಾದರೂ ಹೇಗೆ?

ಈ ಪಕ್ಷಗಳು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿದ್ದೇ ಆದಲ್ಲಿ ಟಿಕೆಟ್ ಹಂಚಿಕೆ ಎಂಬ ವಿಷಯ ತಲೆನೋವಿನ ಅಥವ ಲಾಭ-ನಷ್ಟಗಳ ಸಂಗತಿಯೇ ಅಲ್ಲ. ಅದು ಸ್ಥಳೀಯ ಮಟ್ಟಗಳಲ್ಲಿಯೇ ನಿರ್ಧಾರವಾಗುವಂತಹುದು. ಪ್ರಜಾಪ್ರಭುತ್ವ ಪ್ರಬುದ್ಧತೆಯನ್ನು ಪಡೆದುಕೊಂಡಿರುವ ಅನೇಕ ದೇಶಗಳಲ್ಲಿ ಇದು ನಿಭಾಯಿಸಲ್ಪಡುವುದೇ ಹೀಗೆ. ಒಂದು ವಿಧಾನಸಭಾ ಕ್ಷೇತ್ರದಲ್ಲಿರುವ ಆಯಾ ಪಕ್ಷದ ಪ್ರಾಥಮಿಕ ಸದಸ್ಯರೇ ತಮ್ಮ ಕ್ಷೇತ್ರದ ತಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅಧಿಕಾರ ಮತ್ತು ಗೌರವ ಹೊಂದಿರುತ್ತಾರೆ. ಒಂದು ಪಕ್ಷದ ಅಭ್ಯರ್ಥಿಯಾಗಿ ನಿಲ್ಲಬೇಕೆನ್ನುವ ಮನುಷ್ಯ ತನ್ನ ಕ್ಷೇತ್ರದ ತನ್ನ ಪಕ್ಷದ ಸದಸ್ಯರ ಮತ್ತು ಕಾರ್ಯಕರ್ತರ ಗೌರವ ಮತ್ತು ಬೆಂಬಲ ಗಳಿಸುವುದು ಮುಖ್ಯವೇ ಹೊರತು ಆತನ ಹಣ ಮತ್ತು ಪ್ರಭಾವ ಆ ಪಕ್ಷದ ನಾಯಕರನ್ನು ಹೇಗೆ ಮುಟ್ಟುತ್ತದೆ ಎನ್ನುವುದು ಅಲ್ಲ. ವಿಕೇಂದ್ರಿಕರಣ ಎನ್ನುವುದು ರಾಜಕೀಯ ಪಕ್ಷಗಳೂ ಪಾಲಿಸಬೇಕಾದ ನಿಯಮ.

ದುರದೃಷ್ಟವಷಾತ್,  ನಮ್ಮ ರಾಜ್ಯದ ಮೂರೂ ಪ್ರಮುಖ ಪಕ್ಷಗಳಲ್ಲಿ ಇಂತಹ ಅಭ್ಯಾಸವೇ ಇಲ್ಲ. DBChandregowdaಜನಬೆಂಬಲ ಪಡೆದಿರುವ ರಾಜಕಾರಣಿಗಳೂ ಸಹ ಕೊನೆಯ ದಿನದ ತನಕ ತಮ್ಮ ಪಕ್ಷದ ’ಬಿ-ಫಾರ್ಮ್’ ಕೈಗೆ ಸಿಗುತ್ತದೆಯೋ ಅಥವ ಕೈ ತಪ್ಪುತ್ತದೆಯೋ ಎನ್ನುವ ಭಯಾತಂಕಗಳಲ್ಲಿಯೇ ಇರುತ್ತಾರೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರದ ಅತಿ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್‌ನ ಉದಾಹರಣೆಗಳನ್ನೇ ತೆಗೆದುಕೊಳ್ಳುವುದಾದರೆ, ಶೃಂಗೇರಿ ಕ್ಷೇತ್ರಕ್ಕೆ ಸ್ಪರ್ಧಿಸಬೇಕು ಎಂದುಕೊಂಡಿದ್ದ ಮಾಜಿ ಸ್ಫೀಕರ್ ಡಿ.ಬಿ.ಚಂದ್ರೇಗೌಡರಿಗೆ ಕೊನೆಯ ಗಳಿಗೆಯವರೆಗೂ “ಆಟ” ಆಡಿಸಿ ಕೊಡಲಾಯಿತು. ಪ್ರಚಾರಕ್ಕೆ ಬಳಸಬೇಕಾದ ಅಮೂಲ್ಯ ಸಮಯವನ್ನು ಇಂತಹ ಕ್ಷುಲ್ಲಕ ವಿಚಾರಗಳಿಗಾಗಿ ಅಲ್ಲಿನ ಅಭ್ಯರ್ಥಿ ಹಾಳುಮಾಡಿಕೊಳ್ಳಬೇಕಾಯಿತು. ಅದೇ ರೀತಿ ದಾವಣಗೆರೆ-ಉತ್ತರ ಕ್ಷೇತ್ರದಲ್ಲಿ ಒಬ್ಬ ವ್ಯಕ್ತಿಗೆ ನೀಡಿದ್ದ ಬಿ=ಫಾರ್ಮ್ ಅನ್ನು ಅಲ್ಲಿಯ ಒತ್ತಡಗಳಿಂದಾಗಿ ಶಾಮನೂರು ಶಿವಶಂಕರಪ್ಪನವರ ಮಗ ಮಲ್ಲಿಕಾರ್ಜುನರ ಹೆಸರಿಗೆ ಕೈಯ್ಯಲ್ಲಿ ಅಳಿಸಿ-ತಿದ್ದಿ ಬರೆದ ಕಾರಣ ಆ ಬಿ-ಫಾರ್ಮ್ ತಿರಸ್ಕೃತವಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಇಲ್ಲದಂತಾಗಿತ್ತು. ಶೃಂಗೇರಿಯಲ್ಲಿ ಸೋಲುಂಡ ಡಿ.ಬಿ.ಚಂದ್ರೇಗೌಡರು ಮುಂದಿನ ಚುನಾವಣೆಯ ಹೊತ್ತಿಗೆ ಕಾಂಗ್ರೆಸ್ ಪಕ್ಷದಲ್ಲಿ ಸಿಗುವುದಕ್ಕಿಂತ “ಹೆಚ್ಚಿನ” ಗೌರವ ಬಿಜೆಪಿಯಲ್ಲಿ ಸಿಗುತ್ತದೆ ಎಂದು ಆ ಪಕ್ಷ ಸೇರಿಕೊಂಡರು.

ಇದೆಲ್ಲವನ್ನೂ ಸರಿಪಡಿಸುವ ಇಚ್ಚೆ ನಮ್ಮ ನಡುವೆಯ ಸಭ್ಯ ರಾಜಕಾರಣಿಗಳಿಗೂ ಇದ್ದಂತಿಲ್ಲ. VRSudarshanತಮಗೆ ಟಿಕೆಟ್ ನೀಡಲಾಗುತ್ತಿಲ್ಲ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ರಾಜ್ಯದ ಸಭ್ಯ ರಾಜಕಾರಣಿಗಳಲ್ಲಿ ಒಬ್ಬರಾದ ಕಾಂಗ್ರೆಸ್‌ನ ವಿ.ಆರ್.ಸುದರ್ಶನ್‌ರವರು ತಮ್ಮ ವರಿಷ್ಟರಿಗೆ ಪತ್ರ ಬರೆದಿದ್ದರು. ಅದರಲ್ಲಿ ಅಡ್ದ-ಮತದಾನ ಮಾಡಿ ಪಕ್ಷವಿರೋಧಿ ಚಟುವಟಿಕೆ ಮಾಡಿದವರಿಗೆಲ್ಲ ಟಿಕೆಟ್ ನೀಡಿ, ಆ ಬಗ್ಗೆ ಪಕ್ಷಕ್ಕೆ ಪ್ರಾಮಾಣಿಕ ವರದಿ ನೀಡಿದ ತಮಗೇ ಟಿಕೆಟ್ ನಿರಾಕರಿಸಲಾಗುತ್ತಿದೆ, ಇದು ಸರಿಯಲ್ಲ ಎಂದು ದೂರಿದ್ದರು.  ಆದರೆ, ಸುದರ್ಶನ್‌ರವರು ಇದಕ್ಕಿಂತ ಪ್ರಮುಖ ವಿಷಯವಾದ ಟಿಕೆಟ್ ಹಂಚಿಕೆಯ ವಿಧಾನವನ್ನೇ ಪ್ರಶ್ನಿಸಿ, ತಮ್ಮ ಪಕ್ಷದಲ್ಲಿ “ಪ್ರಾಥಮಿಕ ಚುನಾವಣೆ”ಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಧಾನ ಅನುಸರಿಸಬೇಕೆಂದು ಪ್ರಬಲವಾಗಿ ಆಗ್ರಹಿಸಿದ್ದರೆ ಅದು ದೀರ್ಘಕಾಲೀನವಾದ ಸಕಾರಾತ್ಮಕ ಪರಿಣಾಮ ಬೀರುತ್ತಿತ್ತು. ಇಂತಹವರೇ ವಿಸ್ಮೃತಿಯಲ್ಲಿ ಮುಳುಗಿ ತಮ್ಮ ಒಂದು ಟಿಕೆಟ್‌ಗೆ ಬಡಿದಾಡುವಂತಾಗಿಬಿಟ್ಟರೆ ಅದು ಈ ರಾಜಕೀಯ ಪಕ್ಷಗಳ ಸಂಸ್ಕೃತಿ ಮತ್ತು ಅಪ್ರಸ್ತುತತೆಯನ್ನು ತೋರಿಸುತ್ತದೆ.

ರಾಜಕಾರಣ ಮಾಡಬೇಕಿರುವುದು ವ್ಯಕ್ತಿಯೊಬ್ಬನ ತೆವಲಿಗಾಗಲಿ ಅಥವ ಸ್ವಾರ್ಥಕ್ಕಾಗಲಿ ಅಲ್ಲ. ಜನರಿಗಾಗಿ, ಸಮುದಾಯದ ಹಿತಕ್ಕಾಗಿ, ಸಮಾಜ ಕಟ್ಟುವುದಕ್ಕಾಗಿ ರಾಜಕಾರಣ ಮಾಡಬೇಕಿದೆ. ಆದರೆ ಈ ವಿಷಯ ಈಗಿನ ದಡ್ದ ಮತ್ತು ಅಹಂಕಾರಿ ರಾಜಕೀಯ ನಾಯಕರಿಗೆ ಬೇಕಿಲ್ಲ. ಬೇಸರದ ಸಂಗತಿ ಏನೆಂದರೆ ಇದು ರಾಜಕೀಯ ಪಕ್ಷಗಳ ಪೋಷಕರಾದ ಆ ಪಕ್ಷಗಳ ಸದಸ್ಯರಿಗೂ ಗೊತ್ತಿರುವುದಿಲ್ಲ. ಆದರೆ ಇದೆಲ್ಲವನ್ನೂ ಅರಿಯುವ ಮತ್ತು ಆಗ್ರಹಿಸುವ ಜವಾಬ್ದಾರಿ ನಾಡಿನ ಪ್ರಜ್ಞಾವಂತರ ಮತ್ತು ಮತದಾರರ ಮೇಲಿದೆ.