ಯುವಕರು: ಮಾದಕ ವ್ಯಸನ ಮತ್ತು ಮಸಣ

-ಡಾ.ಎಸ್.ಬಿ.ಜೋಗುರ

“ವ್ಯಕ್ತಿಯೊಬ್ಬ ತನ್ನನ್ನು ತಾನು ಪ್ರೀತಿಸುವಷ್ಟು ಬೇರೆ ಯಾರನ್ನೂ ಪ್ರೀತಿಸುವುದಿಲ್ಲ.” ಎನ್ನುವ ಸತ್ಯವನ್ನು ಅಣಕಿಸಲೆಂಬಂತೆಯೇ ಈ ಬಗೆಯ ವ್ಯಸನ ಮತ್ತು ಅದರ ಬೆನ್ನಲ್ಲಿಯೇ ಮಸಣ ಎರಡನ್ನೂ ಅಪ್ಪಿಕೊಳ್ಳುವ ಅನಾಹುತಗಳಿಗೆ ಕಾರಣವಾದರೂ ಏನು ಎನ್ನುವ ಬಗ್ಗೆ ಡಾ ರಿಚರ್ಡ್ಸ್ ಫೀಲ್ಡ್ಸ್ ಎನ್ನುವವರು ತಮ್ಮ ಕೃತಿಯಾದ “ಡ್ರಗ್ಸ್ ಇನ್ ಪರ್ಸ್ಪೆಕ್ಟಿವ್” drugs-in-perspectiveಎನ್ನುವ ಕೃತಿಯಲ್ಲಿ ದೃಷ್ಟಾಂತಗಳ ಸಮೇತ ಚರ್ಚಿಸಿರುವದಿದೆ. ಮಾದಕ ವ್ಯಸನ ಎನ್ನುವುದು ಇತ್ತೀಚಿನ ದಿನಗಳಲ್ಲಿ ಒಂದು ವ್ಯಾಪಕವಾದ ಪಿಡುಗಾಗಿ ಪರಿಣಮಿಸುತ್ತಿದೆ. 1960-70 ರ ದಶಕದಲ್ಲಿ ಹಿಪ್ಪಿ ಸಂಸ್ಕೃತಿಯೊಂದಿಗೆ ಥಳಕು ಹಾಕಿಕೊಂಡು ಬೆಳೆದು ಬಂದ ಈ ವ್ಯಸನ, ಕ್ರಮೇಣವಾಗಿ ಯುವಜನತೆಯ ಶಕ್ತಿ ಮತ್ತು ಸತ್ವವನ್ನು ಹಿಂಡಿ ಹಿಪ್ಪೆ ಮಾಡುತ್ತಲೇ ನಡೆಯಿತು. ವೈದ್ಯಕೀಯ ಕಾರಣಗಳಿಗಾಗಿ ನಾವೆಲ್ಲರೂ ಒಂದಿಲ್ಲಾ ಒಂದು ರೀತಿಯ ಡ್ರಗ್ಸ್ ತೆಗೆದುಕೊಳ್ಳುವುದು ತೀರಾ ಅನಿವಾರ್ಯ. ಆದರೆ ಅದನ್ನು ವ್ಯಸನ ಎಂದು ಕರೆಯಲಾಗುವುದಿಲ್ಲ. ಅದರ ಮೇಲಿನ ಅವಲಂಬನೆಯ ಪ್ರಮಾಣ ಹೆಚ್ಚುತ್ತಾ ಹೋಗುವ, ಇಲ್ಲವೇ ಅದು ಬೇಕೇ ಬೇಕು ಎನ್ನುವ ಸ್ಥಿತಿ ತಲುಪಿದಾಗ ಮಾತ್ರ ಅದನ್ನು ಮಾದಕ ವ್ಯಸನ ಎಂದು ಕರೆಯಲಾಗುತ್ತದೆ. ತೀರಾ ಪ್ರಾಚೀನ ಕಾಲದಿಂದಲೂ ಮಾದಕ ದ್ರವ್ಯಗಳು ಇವೆಯಾದರೂ ಅವುಗಳನ್ನು ಹೀಗೆ ಮಂಪುಕಾರಕ, ಭ್ರಮಾಜನಕ ಸ್ಥಿತಿಯಲ್ಲಿ ಉಳಿಯುವ ಸಲುವಾಗಿಯೇ ಸೇವಿಸುವವರ ಪ್ರಮಾಣ ತೀರಾ ಕಡಿಮೆ. ಡಾ ರಿಚರ್ಡ್ ಫೀಲ್ಡ್ಸ್ ಪ್ರಾಚೀನ ಗ್ರೀಕರಲ್ಲಿಯೂ ಈ ಮಾದಕ ದ್ರವ್ಯದ ಬಳಕೆ ಇತ್ತು ಆದರೆ ತೀರಾ ಹಿತಮಿತವಾಗಿತ್ತು ಎಂದಿರುವದಿದೆ. ಸದ್ಯದ ನಾಗಾಲೋಟದ ತೀವ್ರ ಸ್ಪರ್ಧಾತ್ಮಕ ಸಂದರ್ಭದಲ್ಲಂತೂ ತೀವ್ರವಾಗಿ ಒಬ್ಬ ವ್ಯಸನಕ್ಕೆ ಅಂಟಿಕೊಂಡವನು ಪ್ರತಿ 20 ನಿಮಿಷಕ್ಕೆ ಒಂದರಂತೆ ಇಂಜೆಕ್ಟ್ ಮಾಡಿಕೊಳ್ಳುವದಿದೆ ಎಂದಿರುವರು.

ತಾನು ಅತ್ಯಂತ ಸ್ವನಿಯಂತ್ರಣ ಹೊಂದಿದವನು ಎಂದು ಹೇಳುವವರೂ ಇದರ ಸಹವಾಸದಿಂದ ತಪ್ಪಿಸಕೊಳ್ಳಲಾಗಲ್ಲ. ಅದರಲ್ಲೂ 15-24 ವರ್ಷ ವಯೋಮಿತಿಯ ಯುವಕರು ಈ ಬಗೆಯ ವ್ಯಸನಕ್ಕೆ ಅಂಟಿಕೊಳ್ಳುವದರಿಂದ ಒಂದು ದೇಶದ ಭವಿಷ್ಯವಾಗಬೇಕಾದವರು ಶಾಪವಾಗಿ ಪರಿಣಮಿಸುವ ಅಪಾಯಗಳೇ ಹೆಚ್ಚಾಗುತ್ತಿವೆ. ತೀರಾ ಇತ್ತೀಚಿಗೆ ಗಲ್ಲಿಗೇರಿಸಿದ ಕಸಬ್ ನನ್ನು ಈ ಮಾದಕ ದ್ರವ್ಯದ ಸಹವಾಸದಲ್ಲಿಯೇ ಆ ಬಗೆಯ ಕುಕೃತ್ಯದಲ್ಲಿ ನೂಕಲಾಗಿತ್ತು ಎನ್ನುವದನ್ನು ಮಾಧ್ಯಮಗಳು ಬಹಿರಂಗಗೊಳಿಸಿರುವದಿತ್ತು. ಇಂಥಾ ಅನೇಕ ಉದಾಹರಣೆಗಳು ನಮ್ಮ ನಡುವೆ ಇವೆ. ಒಂದು ಕಾಲದಲ್ಲಿ ಕೇವಲ ಶ್ರೀಮಂತರ ಚಟವಾಗಿದ್ದ ಈ ಮಾದಕ ವ್ಯಸನ, ಈಗೀಗ ಮಧ್ಯಮ ವರ್ಗದ ಸಂತಾನದ ಪಾಲಿಗೂ ಶಾಪವಾಗುತ್ತಿದೆ. ತೀರ ಈಚೆಗೆ ಮಂಗಳೂರಿನ ಸ್ನೇಹಾ ಎನ್ನುವ ಬಾಲಕಿ ಈ ವ್ಯಸನಕ್ಕೆ ಬಲಿಯಾದದ್ದು ಒಂದು ದೊಡ್ದ ದುರಂತ. ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದ ಆಕೆಯನ್ನು ಈ ಡ್ರಗ್ಸ್ ಎನ್ನುವ ಮಹಾಮಾರಿ ನುಂಗಿ ಹಾಕಿತು.

ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಸುಮಾರು 80 ಪ್ರತಿಶತ ಹೆರಾಯಿನ್ ಚಟಕ್ಕೆ ಅಂಟಿಕೊಂಡವರು 15-25 ವರ್ಷ ವಯೋಮಿತಿಯವರೇ no-to-drugsಇದ್ದಾರೆನ್ನುವದು ಅರಗಿಸಿಕೊಳ್ಳಲಾಗದ ಸತ್ಯ. ಪಂಜಾಬ ರಾಜ್ಯದಲ್ಲಂತೂ ಪ್ರತಿ 10 ಯುವಜನರಲ್ಲಿ 7 ಜನರು ಈ ಚಟಕ್ಕೆ ಅಂಟಿಕೊಂಡವರಿದ್ದಾರೆ ಎನ್ನುವುದನ್ನು ಅಕ್ಟೊಬರ್ 14, 2012 ರಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿರುವದಿದೆ. 2010 ರ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯೊಂದು ದೆಹಲಿಯ ಇಂದಿರಾಗಾಂಧಿ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಶಿಮ್ಲಾದ ಶಾಲೆಯೊಂದರ 2000 ವಿದ್ಯಾರ್ಥಿಗಳನ್ನು ಅಧ್ಯಯನ ಮಾಡಿ ಬೆಚ್ಚಿ ಬೀಳಬಹುದಾದ ವರದಿಯೊಂದನ್ನು ಹೊರಹಾಕಿದೆ. 55 ಪ್ರತಿಶತ ಬಾಲಕರು ಮತ್ತು 25 ಪ್ರತಿಶತ ಬಾಲಕಿಯರು ನಿಯಮಿತವಾಗಿ ಈ ಚಟಕ್ಕೆ ಅಂಟಿಕೊಂಡವರಿದ್ದಾರೆ ಎನ್ನುವ ಸತ್ಯ ಬಯಲಾಗಿದೆ.

ಈ ಬಗೆಯ ವ್ಯಸನಕ್ಕೆ ಕಾರಣಗಳು ಹತ್ತು ಹಲವಾರು. ಅಧ್ಯಯನದಲ್ಲಿ ಮಹತ್ತರ ಸಾಧನೆ ಮಾಡಬೇಕಾದ ಒತ್ತಡ, ತೀವ್ರವಾದ ಸ್ಪರ್ಧಾತ್ಮಕ ಜಗತ್ತು, ಪಾಲಕರ ಒತ್ತಾಸೆ ಮತ್ತು ವಿಪರೀತ ನಿರೀಕ್ಷೆ, ವೈಯಕ್ತಿಕ ವಿಘಟನೆ, ಕೌಟುಂಬಿಕ ವಿಘಟನೆ,ಗೆಳೆಯರ ಬಳಗ, ಕಾರ್ಯದೊತ್ತಡ, ಪ್ರಾಯದ ಸಂದರ್ಭ ಮತ್ತು ಕುತೂಹಲ, ಪ್ರೀತಿ-ಪ್ರಣಯ ವೈಪಲ್ಯತೆ. ಇಂಥಾ ಹತ್ತಾರು ಸಂಗತಿಗಳು ಯುವಕರನ್ನು ಮಾದಕವ್ಯಸನಕ್ಕೆ ಸಿಲುಕಿಸುವಲ್ಲಿ ಕಾರಣವಾಗುತ್ತಿವೆ. ಅಪ್ಪ-ಅಮ್ಮ ಇಬ್ಬರೂ ಉದ್ಯೋಗದಲ್ಲಿದ್ದು, ಮಕ್ಕಳು ಕೇಳುವದಕ್ಕಿಂತಲೂ ಹೆಚ್ಚಿನ ಪಾಕೇಟ್ ಮನಿ ಕೊಟ್ಟು ಖರ್ಚಿನ ವಿವರವನ್ನು ಕೇಳದಿರುವದೂ ಈ ಬಗೆಯ ದುಬಾರಿ ಹವ್ಯಾಸಗಳಿಗೆ ನಮ್ಮ ಸಂತಾನ ಬಲಿಯಾಗಲು ಕಾರಣ. ಈ ಬಗೆಯ ವ್ಯಸನಕ್ಕೆ ಅಂಟಿಕೊಂಡವರ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳು ವ್ಯಕ್ತಿ ಹಾಗೂ ಸಮಾಜ ಎರಡಕ್ಕೂ ಅಪಾಯಕಾರಿಯಾಗಿ ಪರಿಣಮಿಸುತ್ತದೆ. ಮಾದಕ ವ್ಯಸನಕ್ಕೆ ಅಂಟಿಕೊಂಡಿರುವವರನ್ನು ಗುರುತಿಸುವ ಬಗೆ ಹೇಗೆ..?

ಮಾದಕ ವ್ಯಸನಿಗಳನ್ನು ರಿಚರ್ಡ್ ಫ಼ೀಲ್ಡ್ ಹೀಗೆ ಗುರುತಿಸಿರುವದಿದೆ. ಹೊಣೆಗೇಡಿತನ, ಕಳಪೆ ಪ್ರಮಾಣದ ಶೈಕ್ಷಣಿಕ ಸಾಧನೆ, ಏಕಾಂಗಿಯಾಗಿರಲು ಬಯಸುವುದು, ಸಂಬಂಧಗಳಲ್ಲಿ ಬಿರುಕು, ವಿಚಿತ್ರ ಬಗೆಯ ವರ್ತನೆ, ಸಹನೆ, ತಾಳ್ಮೆ ಇಲ್ಲದಿರುವುದು, ಕಲಹ, ವೈಮನಸ್ಸು, ಅಪಘಾತದಲ್ಲಿ ಮತ್ತೆ ಮತ್ತೆ ಸಿಲುಕುವುದು, ನಿಸ್ತೇಜವಾಗಿರುವುದು, ಚಿಂತೆ ಮತು ಕಿರಿಕಿರಿಯನ್ನು ಅನುಭವಿಸುವುದು, ಊಟ ಕಡಿಮೆ..ತೂಕ ಕಡಿಮೆ, ನಿದ್ರಾಹೀನತೆ ಇಲ್ಲವೇ ಅಸ್ತವ್ಯಸ್ಥತೆ, ಕೈಗಳು ನಡುಗುವುದು. ಇಂಥಾ ಇನ್ನೂ ಅನೇಕ ಬಗೆಯ ಚಿತ್ರ ವಿಚಿತ್ರವಾದ ಲಕ್ಷಣಗಳನ್ನು ಹೊರನೋಟದಲ್ಲಿ ತೋರಬಹುದಾದರೂ ಒಳಗಡೆ ಅನುಭವಿಸುವ ನೋವು ಯಾತನೆ ಮಾತ್ರ ಅಗೋಚರವಾದುದು. ಜಗತ್ತಿನ ಶ್ರೇಷ್ಟ ಮನೋವಿಜ್ಞಾನಿ ಸಿಗ್ಮಂಡ್ ಫ಼್ರಾಯ್ಡ್ ಮತ್ತು ಅಮೇರಿಕೆಯ ಕತೆಗಾರ ಎಡ್ಗರ್ ಅಲೆನ್ ಪೋ, ಕಾಮಿಡಿಯನ್ ರಿಚರ್ಡ್ ಪ್ರೇಯರ್, ಈ ಬಗೆಯ ಮಾದಕ ವ್ಯಸನಿಗಳಾಗಿರುವ ಅನೇಕ ಉಲ್ಲೇಖಗಳು ದೊರೆಯುತ್ತವೆ.

ಇನ್ನು ಈ ಬಗೆಯ ಚಟದಿಂದ ಮುಕ್ತಿ ಪಡೆಯುವದಾದರೂ ಹೇಗೆ..? ರಿಚರ್ಡ್ ಫ಼ೀಲ್ಡ್ ತಮ್ಮ ಕೃತಿಯಲ್ಲಿ ಹತ್ತಾರು ಕೇಸ್ ಸ್ಟಡಿಗಳನ್ನು ಪರಿಚಯಿಸಿದ್ದಾರೆ. ಇವರಲ್ಲಿ ಬಹುತೇಕರು ಡ್ರಗ್ಸ್ ಸೇವನೆಯನ್ನು ಕೈಬಿಟ್ಟು, ನಂತರ ಶುರು ಮಾಡಿದವರೇ ಹೆಚ್ಚು. ಹಾಗಿದ್ದರೆ ಈ ಚಟದಿಂದ ಮುಕ್ತಿ ಇಲ್ಲವೇ..? ಖಂಡಿತ ಸಾಧ್ಯವಿದೆ. ಕುಟುಂಬದ ಸದಸ್ಯರ ನೆರವು, ಸ್ನೇಹಿತರ ನೆರವು, ವೈದ್ಯರ ಸಲಹೆ ಮತ್ತು ಚಿಕಿತ್ಸೆ, ಈ ಚಟವನ್ನು ಬಿಟ್ಟು ಸುಧಾರಣೆಯಾದವರ ಮೂಲಕ ತಿಳಿಹೇಳುವುದು.,ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳು, ಇಂಥಾ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಈ ಚಟಕ್ಕೆ ಸಿಲುಕಿರುವವರನ್ನು ಪಾರು ಮಾಡಬಹುದಾಗಿದೆ. ಅವರಿಗೆ ಸರಿಯಾದ ನಿಯಮಿತ ಚಿಕಿತ್ಸೆ ಮತ್ತು ಸಲಹೆಗಳ ಮೂಲಕ ಮತ್ತೆ ಹೊಸ ಮನುಷ್ಯರನ್ನಾಗಿ ಮಾಡಬಹುದಾಗಿದೆ. ಜೀವನ ಎನ್ನುವದು ಬರೀ ಚಟ ಅಲ್ಲ. ಅದನ್ನು ಮೀರಿಯೂ ಇದು ಅಮೂಲ್ಯವಾದುದು ಎಂದು ತಿಳಿ ಹೇಳಿ ಜೀವನಪ್ರೀತಿ ಹುಟ್ಟುವ ಹಾಗೆ ಮಾಡಬೇಕು. ಮಾದಕ ವ್ಯಸನಕ್ಕೆ ಯಾವುದೇ ಕಾರಣಕ್ಕೂ ಬಲಿಬೀಳಬಾರದು ಎನ್ನುವ ಮನೋಬಲವನ್ನು ಅವರಲ್ಲಿ ತುಂಬಬೇಕು.

Leave a Reply

Your email address will not be published. Required fields are marked *