ಜಾತಿ ಹೆಸರಲ್ಲಿ ರಾಜಕಾರಣಿ ಉದ್ಧಾರವಾದಷ್ಟು…

-ಚಿದಂಬರ ಬೈಕಂಪಾಡಿ

ದೇಶದ ಸಮಗ್ರ ಚಿಂತನೆ, ದೇಶ ಕಟ್ಟುವ ಕಲ್ಪನೆ ಒಬ್ಬ ರಾಜಕಾರಣಿಯಿಂದ ಸಾಮಾನ್ಯ ಪ್ರಜೆ ನಿರೀಕ್ಷೆ ಮಾಡುವುದು ಅಪರಾಧವಲ್ಲ. ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಟ್ ಅಮಾಡುವಾಗ ಇದ್ದ ಕಲ್ಪನೆ ದೇಶದ ಅಖಂಡತೆ, ಐಕ್ಯತೆಯನ್ನು ಉಳಿಸಿಕೊಳ್ಳುವುದೇ ಆಗಿತ್ತು. ದೇಶ ಒಡೆಯುವ, ಜಾತಿಯ ಹೆಸರಲ್ಲಿ, ಭಾಷೆಯ ಹೆಸರಲ್ಲಿ ವಿಭಜಿಸುವ ಮೂಲ ಆಶಯವಿರಲಿಲ್ಲ. ಆದರೂ ದೇಶ ವಿಭಜನೆಯಾಯಿತು, ಅದು ಇಂದಿಗೂ ಇತಿಹಾಸದಲ್ಲಿ ಉಳಿದಿರುವ ಕಪ್ಪು ಚುಕ್ಕೆ. ಅದರಿಂದಲಾದರೂ ಪಾಠಕಲಿಯಬೇಕಿತ್ತು ರಾಜಕಾರಣಿಗಳು, ಕಲಿಯಲಿಲ್ಲ ಎನ್ನುವುದು ದುರಂತ.

ಈ ಮಾತುಗಳನ್ನು ಹೇಳಬೇಕಾದ ಅನಿವಾರ್ಯತೆಗೆ ಕಾರಣ ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ಹಿನ್ನೆಲೆ. ಚುನಾವಣೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರದ್ದೇ ಆದ ಘನತೆಯಿದೆ, ಮತಕ್ಕೂ ಪಾವಿತ್ರ್ಯತೆ ಇದೆ. ಮತದಾರರಿಂದ ಆರಿಸಿ ಹೋಗುವ ಪ್ರತಿನಿಧಿಗೂ ಅಷ್ಟೇ ಘನತೆಯಿದೆ. ನಮ್ಮ ಪರವಾಗಿ ಶಾಸನ ಸಭೆಯಲ್ಲಿ ಧ್ವನಿಎತ್ತಲು, ನಮ್ಮ ಕಷ್ಟು ಸುಖಗಳನ್ನು ಪರಮೋಚ್ಛ ವೇದಿಕೆಯಲ್ಲಿ ಪ್ರತಿಪಾದಿಸಲು ಜನರು ಕೊಡುವ ಅಧಿಕಾರ. ಜನರಿಂದ, ಜನರಿಗಾಗಿ ಕೆಲಸ ಮಾಡಲು ಆಯ್ಕೆ ಮಾಡಿಕಳುಹಿಸುವ ನಮ್ಮ ಪ್ರತಿನಿಧಿ ಎನ್ನುವ ಹೆಮ್ಮೆ ಮತದಾರನಿಗೆ. ನಮ್ಮಿಂದ ಆಯ್ಕೆಯಾದ ಪ್ರತಿನಿಧಿಯ ಕರ್ತವ್ಯ ಜನರ ಹಕ್ಕನ್ನು ರಕ್ಷಿಸುವುದು, ಜನರ ಸೇವೆ ಮಾಡುವುದು. ನಾವು ಆಯ್ಕೆ ಮಾಡುವ ವ್ಯಕ್ತಿಯನ್ನು ಅವನ ಬದ್ಧತೆ, ಕರ್ತವ್ಯಶೀಲತೆ, ಜನಪರ ಕಾಳಜಿಗಳನ್ನು ಮಾನದಂಡವಾಗಿಟ್ಟುಕೊಂಡು ಮತಹಾಕಿ ಆಯ್ಕೆ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಿಯಮ.

ಜನಪ್ರತಿನಿಧಿಯಾದವರು ನಮಗೆ ಎದುರಾಗುವ ಸವಾಲುಗಳನ್ನು ನಿಭಾಯಿಸುವುದು, ಐಕ್ಯತೆ, ಸಾರ್ವಭೌಮತೆಯನ್ನು ರಕ್ಷಿಸುವುದು ಬಹುಮುಖ್ಯ. ಆದರೆ ಹಾಗೆ ಮಾಡುತ್ತಿದ್ದಾರೆಯೇ, ಮುಂದೆ ಮಾಡುತ್ತಾರೆಯೇ ಎನ್ನುವ ಅನುಮಾನಗಳು ಕಾಡುತ್ತಿವೆ. ಯಾಕೆಂದರೆ ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ, ಸಮಾಜವಿದೆ. ಅಖಂಡತೆಗೆ, ಸಾರ್ವಭೌಮತೆಗೆ, ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಹೊಸ ಹೊಸ ಸವಾಲುಗಳು ಧುತ್ತನೆ ಎದುರಾಗುತ್ತಿವೆ. ಇವುಗಳನ್ನು ಎದುರಿಸುವಂಥ ಕಲ್ಪನೆ, ಚಿಂತನೆಯಿದ್ದವರನ್ನು ಆರಿಸಿಕಳುಹಿಸಬೇಕು ಎನ್ನುವ ಆಶಯಕ್ಕೇ ಭಂಗವಾಗುತ್ತಿದೆ. ನಮ್ಮ ಮುಂದಿರುವ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದೇ ಸವಾಲು ಈಗ.

ದೇಶವನ್ನು ಕಟ್ಟುವ ಬದಲು ಒಡೆಯುವ ಮನಸ್ಥಿತಿಯವರು, ಅಖಂಡತೆಯನ್ನು ಉಳಿಸುವ ಚಿಂತನೆಯ ಬದಲು ಜಾತಿ, ಭಾಷೆ ಹೆಸರಲ್ಲಿ ಒಡೆಯುವವರು ಮತಯಾಚನೆಗೆ ಮುಂದಾಗಿದ್ದಾರೆ. ನಮಗೆ ಬೇಕಾಗಿರುವುದು ದೇಶ ಒಡೆಯುವವರಲ್ಲ ಕಟ್ಟುವವರು. ಜಾತಿಯ ಹೆಸರಲ್ಲಿ ಜನರನ್ನು ವಿಭಜಿಸುವವರು ಬೇಕಾಗಿಲ್ಲ, ಜಾತ್ಯಾತೀತವಾಗಿ ಎಲ್ಲರನ್ನೂ ಒಗ್ಗಟ್ಟಿನಿಂದ ಇರುವಂತೆ ಮಾಡುವವರು ಬೇಕಾಗಿದ್ದಾರೆ.

ಜಾತಿಯೇ ಈಗಿನ ರಾಜಕಾರಣದ ನಿರ್ಣಾಯಕ ಸ್ಥಿತಿಗೆ ಬಂದಿರುವುದು ಅತ್ಯಂತ ಅಪಾಯಕಾರಿ. ಜಾತಿಯ ವಿನಾಶದ ಭಾಷಣ ಮಾಡುತ್ತಲೇ ಜಾತಿಯನ್ನು ಮುಂದಿಟ್ಟುಕೊಂಡು ಕಣಕ್ಕಿಳಿಯುವ ಅರ್ಹತೆ ಗಿಟ್ಟಿಸಿಕೊಳ್ಳುತ್ತಿರುವುದು ಭವಿಷ್ಯದಲ್ಲಿ ಎಂಥ ಸನ್ನಿವೇಶ ನಿರ್ಮಾಣವಾಗಬಹುದು ಎನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ.

ಜಾತಿ ಮನಸ್ಥಿತಿ ಹೊರತು ರೋಗವನ್ನು ಗುರುತಿಸುವಂಥ ಮಾನದಂಡವಾಗಬಾರದು. ಸಮಾನತೆ, ಸಹಬಾಳ್ವೆ, ಸಮಪಾಲು ಎನ್ನುವ ಸಮಾಜವಾದದ ಹಿಂದಿರಬೇಕಾದ ಜಾತಿ ಈಗ ಮುಂದಿದೆ. ಸಮಾನತೆ ಹಿಂದೆ ಜಾತಿ ಮುಂದೆ ಇದು ಅಪಾಯಕಾರಿ. ಜಾತಿ ಹೆಸರಲ್ಲಿ ರಾಜಕಾರಣ ಮಾಡುವುದು ಹೇಡಿತನವೇ ಹೊರತು ವೀರತ್ವ ಖಂಡಿತಕ್ಕೂ ಅಲ್ಲ. ರಾಜಕೀಯ ಇತಿಹಾಸವನ್ನು ತಿರುವಿನೋಡಿದರೆ ಜಾತಿಯೇ ಆಧಾರವಾಗಿದ್ದರೆ ಈಗಲೂ ಸೋನಿಯಾ ಗಾಂಧಿ, ಅಡ್ವಾಣಿ ಸಹಿತ ಯಾರೇ ಆದರೂ ಗೆಲ್ಲಲು ಸಾಧ್ಯವಿಲ್ಲ. ಜಾತಿಯನ್ನು ಮಾನದಂಡವಾಗಿಟ್ಟುಕೊಂಡು ಜನ ಮತ ಹಾಕುತ್ತಿದ್ದರೆ ಚಿಕ್ಕಮಗಳೂರಲ್ಲಿ ಇಂದಿರಾ ಗಾಂಧಿ, ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಆಯ್ಕೆಯಾಗಲು ಸಾಧ್ಯವೇ ಇರಲಿಲ್ಲ.

ಈ ಕ್ಷಣದಲ್ಲೂ ಇಂಥ ಅಭ್ಯರ್ಥಿ ಇಂಥ ಜಾತಿಯವರಷ್ಟೇ ಮತ ಹಾಕಿದರೆ ಗೆದ್ದು ಬರುತ್ತಾರೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಕರ್ನಾಟಕದ 224 ಕ್ಷೇತ್ರಗಳಲ್ಲಿ ಯಾವ ಒಬ್ಬ ಅಭ್ಯರ್ಥಿಯೂ ತನ್ನ ಜಾತಿಯ ಮತಗಳಲ್ಲದೆ ಅನ್ಯ ಜಾತಿಯ ಒಂದೇ ಒಂದು ಮತವಿಲ್ಲದೆ ಆಯ್ಕೆಯಾಗುತ್ತೇನೆ ಎನ್ನುವುದು ಸಾಧ್ಯವೇ? ಇದು ವಾಸ್ತವ.

ಆದರೆ ಈಗಿನ ರಾಜಕೀಯ ವ್ಯವಸ್ಥೆಯ ಮಾನಸಿಕ ಸ್ಥಿತಿಯೇ ರೋಗಗ್ರಸ್ಥವಾಗಿದೆ. ರಾಜಕಾರಣಿಗಳು ಜಾತಿಯ ರೋಗದಿಂದ ಬಳಲುತ್ತಿದ್ದಾರೆ. ತಮ್ಮ ರೋಗವನ್ನು ಸಾಮಾನ್ಯ ಮತದಾರನಿಗೂ ವರ್ಗಾಯಿಸಿದ್ದಾರೆ. ಜಾತಿಯ ಹೆಸರಲ್ಲಿ ಟಿಕೆಟ್ ಹಂಚಿಕೆ ಮಾಡುತ್ತಿರುವುದೇ ಈ ರೋಗದ ಮೊದಲ ಲಕ್ಷಣ. ಜಾತಿಗೆ ಪ್ರಾತಿನಿಧ್ಯ ಸಿಗಬೇಕೇ ಹೊರತು ಪಾರುಪತ್ಯವಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಕೊಡುವಾಗ ಜಾತಿಯೂ ಒಂದು ಅಂಶಹೊರತು ಅದೇ ನಿರ್ಣಾಯಕವಲ್ಲ.

ಹೆಣ್ಣು ಮತ್ತು ಗಂಡು ಎನ್ನುವುದೇ ಎರಡು ಜಾತಿಯೆನ್ನುವ ರಾಜಕಾರಣಿಗಳ ಸಾಮಾಜಿಕ ನ್ಯಾಯದ ಭಾಷಣ ಅನುಷ್ಠಾನವಾಗಿದೆಯೇ? 224 ಕ್ಷೇತ್ರಗಳಲ್ಲಿ ಸರಿಸುಮಾರು 122 ಕ್ಷೇತ್ರಗಳನ್ನು ಯಾವ ರಾಜಕೀಯ ಪಕ್ಷ ಮಹಿಳೆಯರಿಗೆ ಬಿಟ್ಟುಕೊಟ್ಟಿದೆ? ಹಾಗೆ ಬಿಟ್ಟು ಕೊಟ್ಟು ಸಾಮಾಜಿಕ ನ್ಯಾಯ ಹೇಳುವ ಮಾನಸಿಕ ಸ್ಥಿತಿ ಯಾವ ಪಕ್ಷಕ್ಕಿದೆ?

ಜಾತಿಯನ್ನು ಅದೆಷ್ಟು ವೈಭವೀಕರಿಸಿ ಟಿಕೆಟ್ ಹಂಚಲಾಗುತ್ತಿದೆಯೆಂದರೆ ಅನ್ಯಜಾತಿಯವರ ಬೆಂಬಲವೇ ಅನಗತ್ಯ ಎನ್ನುವಂಥ ಉದ್ಧಟತನ ಎನ್ನುವಷ್ಟರಮಟ್ಟಿಗೆ. ಕ್ಷೇತ್ರವಾರು ಜಾತಿಯ ಮತದಾರರ ಅಂಕೆ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡುವ ಸೂತ್ರವೇ ಅಪಾಯಕಾರಿ.

ಇಷ್ಟಕ್ಕೂ ಜಾತಿ ಆಧಾರದಲ್ಲಿ ಆಯ್ಕೆಯಾಗಿ ಹೋದ ಯಾವ ರಾಜಕಾರಣಿ ತನ್ನ ಜಾತಿಯನ್ನು ಉದ್ಧಾರ ಮಾಡಿದ್ದಾನೆ ಎನ್ನುವ ಮಾಹಿತಿಯಿದ್ದರೆ ಮುಕ್ತವಾಗಿ ಹಂಚಿಕೊಳ್ಳಿ. ಜಾತಿಯ ಹೆಸರಲ್ಲಿ ರಾಜಕಾರಣಿ ಉದ್ಧಾರವಾದಷ್ಟು ಪ್ರಮಾಣದಲ್ಲಿ ಅವನ ಜಾತಿ ಉದ್ಧಾರವಾಗಿಲ್ಲ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಜನಸಮೂಹವನ್ನು ಇಡಿಯಾಗಿ ನೋಡಿಕೊಂಡು ರಾಜಕಾರಣ ಮಾಡಿದವರು ಈಗಲೂ ಜನಮಾನಸದಲ್ಲಿ ಉಳಿದಿದ್ದಾರೆ. ಜಾತಿ ಹೆಸರಲ್ಲಿ ರಾಜಕಾರಣ ಮಾಡಲು ಹೋಗಿ ಕಸದಬುಟ್ಟಿಗೆ ಸೇರಿದವರೇ ಬಹಳ ಮಂದಿ.

ಯಾವುದೇ ಕಾರಣಕ್ಕೂ ಜಾತಿಯನ್ನು ನಿರಾಕರಿಸಲು ಸಾಧ್ಯವಿಲ್ಲ, ಆದರೆ ಅದನ್ನೇ ಸಮಾನತೆಯನ್ನು ಪ್ರತಿಪಾದಿಸುವ ವ್ಯವಸ್ಥೆಯಲ್ಲಿ ಆರಾಧಿಸಲು ಸಾಧ್ಯವಿಲ್ಲ, ಬಾರದು ಕೂಡಾ. ಜಾತಿ ವೈಯಕ್ತಿಕವಾಗಿ ಆ ವ್ಯಕ್ತಿಯ ಖಾಸಗಿತನ. ಖಾಸಗಿತನವೆಂಬುದು ಬೀದಿಯಲ್ಲಿ ಹರಾಜಾಗಬಾರದು. ಒಕ್ಕೂಟ ವ್ಯವಸ್ಥೆಯ ಮೂಲ ಅಡಿಪಾಯಕ್ಕೇ ಅಪಾಯಕಾರಿಯಾಗಿ ಜಾತಿರಾಜಕಾರಣ ಬಿಂಬಿತವಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಚರ್ಚೆಯಾಗಬೇಕಿದೆ. ಜಾತಿಗಳ ನಡುವೆ ವೈಷಮ್ಯ ಬೆಳೆಯಲು ಇದಕ್ಕಿಂತ ಬೇರೆ ಕಾರಣಬೇಕೇ? ಜಾತಿಯ ಬಲವಿಲ್ಲದಿದ್ದರೆ ರಾಜಕಾರಣ ಮಾಡಲು ಸಾಧ್ಯವಿಲ್ಲ ಎನ್ನುವ ಮಾನಸಿಕ ಸ್ಥಿತಿಯೇ ಪ್ರಶ್ನಾರ್ಹ.

Leave a Reply

Your email address will not be published. Required fields are marked *