ಸಂವೇದನೆಗಳಿಗೆ ಸಂಖ್ಯಾಶಾಸ್ತ್ರದ ಅಳವಡಿಕೆಯೇ ಸಂಶೋಧನೆಯಲ್ಲ

-ಡಾ.ಎಸ್.ಬಿ.ಜೋಗುರ

kaalavve-vachanaಮಾ 15, 2013 ರ ಎಚ್.ಎಸ್.ಶಿವಪ್ರಕಾಶರ ಅಂಕಣದಿಂದ ದಿನಪತ್ರಿಕೆಯೊಂದರಲ್ಲಿ ಆರಂಭವಾದ ವಚನ ಚಳವಳಿ ಮತ್ತು ಜಾತಿವ್ಯವಸ್ಥೆಯ ಬಗೆಗಿನ ಚರ್ಚೆ ಇಲ್ಲಿಯವರೆಗೆ ಸಾಗಿಬಂದಿರುವದಾದರೂ ಅಲ್ಲಿ ಬಹುತೇಕ ಹೊಗೆ ಎಬ್ಬಿಸುವ ಯತ್ನಗಳಿವೆಯೇ ಹೊರತು ಬೆಳಕು ಮೂಡಿಸುವ ಪ್ರಯತ್ನಗಳು ಕಾಣಸಿಗುವದಿಲ್ಲ. ಅಷ್ಟಕ್ಕೂ ವಚನಗಳನ್ನು ಸಂಖ್ಯಾಶಾಸ್ತ್ರೀಯ ವಿಧಾನಕ್ಕೆ ಅಳವಡಿಸಿ, ಪ್ರತಿಶತದಲ್ಲಿ ಅಲ್ಲಿಯ ಜಾತಿ ವಿರೋಧಿ ನಿಲುವನ್ನು ಚರ್ಚಿಸಿರುವದು ಒಂದು ಹೊಸ ಬಗೆಯ ಪ್ರಯೋಗವೆನಿಸಿದರೂ ಮನುಷ್ಯ ಸಂವೇದನೆಗಳನ್ನು ಸ್ಕೇಲ್ ಮೂಲಕ ಅಳೆಯುವ ವಿಚಿತ್ರ ಬಗೆಯ ಯತ್ನ ಮತ್ತು ವಿತಂಡವಾದವಾಗಿ ಅದು ತೋರಿರುವಲ್ಲಿ ಸಂಶಯವಿಲ್ಲ. ಎಷ್ಟು ಪ್ರಮಾಣದ ವಚನಗಳು ಏನು ಮಾತನಾಡುತ್ತವೆ ಎನ್ನುವದು ಮುಖ್ಯವಲ್ಲ, ಅಲ್ಲಿಯ ಧ್ವನಿ ಜೀವಪರವಾಗಿದೆಯೋ ಇಲ್ಲವೋ ಎನ್ನುವದು ಮುಖ್ಯ. ಹೆರಿಗೆ ನೋವು ಎನ್ನುವ ತಲೆಬರಹದ ಕವಿತೆಯಲ್ಲಿರುವ ಇಪ್ಪತ್ತು ಸಾಲುಗಳಲ್ಲೂ ಆ ಪದ ಬಳಕೆಯಾಗಿಲ್ಲದ ಕಾರಣ ಅದು ಹೆರಿಗೆ ನೋವನ್ನು ಸಮರ್ಪಕವಾಗಿ ಗ್ರಹಿಸಿಲ್ಲ ಎಂದು ಹೇಳಬಲ್ಲಿರೇನು..? ಹಾಗೆ ಶರಾ ಎಳೆಯುವದೇ ಸಂಶೋಧನೆ ಎಂದುಕೊಳ್ಳುವದಾದರೆ ಇಂಥಾ ಸಂಶೋಧನೆ ಮಾಡದಿರುವದೇ ಒಳಿತು. ಅಷ್ಟಕ್ಕೂ ಚಾರಿತ್ರಿಕವಾದ ಸಂಗತಿಗಳನ್ನು ಆಧರಿಸಿ ಸಂಶೋಧನೆ ಮಾಡುವ ಸಂದರ್ಭದಲ್ಲಿ ಅಂತೆ-ಅಂತೆಗಳ ಬೊಂತೆ ತೀರಾ ಸಹಜ. ಇದೇ ಇಂಥಾ ಸಂಶೋಧಕರ ಪಾಲಿಗೆ ವರವಾಗಿದೆ. ಅಂದಾಜುಗಳನ್ನು. ಊಹೆಗಳನ್ನು, ತರ್ಕಗಳನ್ನು ಕರಾರುವಕ್ಕಾಗಿ ಮಾತನಾಡುವದೇ ಸಂಶೋಧನೆಯಲ್ಲ. ಜಾತಿಯಂಥ ಅಮೂರ್ತ, ಭಾವನಾತ್ಮಕ ವಿಷಯ 12 ನೇ ಶತಮಾನದಲ್ಲಿ ಹೊಂದಿರಬಹುದಾದ ಜಿಗುಟತನ, ಗಡಸುತನಗಳ ಎಳ್ಳಷ್ಟೂ ಅರಿವಿರದಿದ್ದರೂ ಅದನ್ನು ಸಂಖ್ಯಾಶಾಸ್ತ್ರೀಯವಾಗಿ ಪ್ರಮಾಣೀಕರಿಸಿ ಮಾತನಾಡುವದಿದೆಯಲ್ಲ.. ಅದೇ ಅತ್ಯಂತ ಅತಾರ್ಕಿಕವಾದುದು.

ಅಷ್ಟಕ್ಕೂ ಜಾತಿಯ ಬೇರು ನಮ್ಮ ಸಮಾಜದಲ್ಲಿ ತೀರಾ ಪ್ರಾಚಿನ ಕಾಲದಿಂದಲೂ ಅಸ್ತಿತ್ವದಲ್ಲಿವೆ. ಕ್ರಿ.ಪೂ. 300 ರ ಸಂದರ್ಭದಲ್ಲಿ ಈ ದೇಶಕ್ಕೆ ಭೇಟಿ ನೀಡಿದ ಗ್ರೀಕ್ ದೇಶದ ಮೆಗಾಸ್ತನಿಸ್ ಇಲ್ಲಿಯ ಜನಸಮೂಹ ವೃತ್ತಿಯಾಧಾರಿತ ಪ್ರತ್ಯೇಕಿತ ಸಮೂಹಗಳಲ್ಲಿ ಬದುಕುವ ಬಗ್ಗೆ ಉಲ್ಲೇಖಿಸಿದ್ದಾರೆ. ಆಯಾ ಕಸುಬುದಾರರು ಅವರವರ ಕಸುಬುದಾರಿಕೆಯ ಮನೆತನದ ಕನ್ಯೆಯನ್ನೇ ವಿವಾಹವಾಗುವ ಮಾತನಾಡಿರುವದನ್ನು ನೋಡಿದರೆ ಕುಲಕಸುಬುಗಳು, ಒಳಬಾಂಧವ್ಯ ವಿವಾಹಸಮೂಹಗಳು ಆಗಲೇ ಅಸ್ಥಿತ್ವದಲ್ಲಿ ಇದ್ದವು ಎನ್ನುವ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ. [ಸೊಸೈಟಿ ಇನ್ ಇಂಡಿಯಾ-ಡೆವಿಡ್ ಮೆಂಡಲ್ ಬಾಮ್] ಡಾ.ಜಿ.ಎಸ್.ಘುರ್ರೆ ಹೇಳುವ ಹಾಗೆ “ಜಾತಿ ಎನ್ನುವದು ಇಂಡೊ-ಆರ್ಯನರ ಕೊಡುಗೆ. ಅವರು ಕ್ರಿ .ಪೂರ್ವ 2500 ರ ಸಂದರ್ಭದಲ್ಲಿ ಭಾರತದ ನೆಲವನ್ನು ಪ್ರವೇಶ ಮಾಡಿದ್ದೇ ದಾಸರು, ದಶ್ಯುಗಳು ಎನ್ನುವ ಪರಿಕಲ್ಪನೆಯನ್ನು ಹುಟ್ಟುಹಾಕುವ ಮೂಲಕ, ಜಾತಿ ವ್ಯವಸ್ಥೆಗೆ ಜನ್ಮ ನೀಡಿದರು.” [ಕಾಸ್ಟ್ ಆಂಡ್ ರೇಸ್ ಇನ್ ಇಂಡಿಯಾ -ಪು 162-163] ಜಾತಿಯ ಹುಟ್ಟಿನ ಬಗೆಗೆ ಯಾವುದೇ ರೀತಿಯ ಖಚಿತವಾದ ಆಧಾರಗಳಿಲ್ಲದಿದ್ದರೂ ಅದು ಪ್ರಾಚೀನಕಾಲದಿಂದಲೂ ನಮ್ಮೊಂದಿಗೆ, ನಮ್ಮ ಸಂಸ್ಕೃತಿ ಪರಂಪರೆಯ ಭಾಗವಾಗಿತ್ತು ಎನ್ನುವದನ್ನು ಅಲ್ಲಗಳೆಯಲಾಗದು.

ಇನ್ನು ಯೂರೋಪಿಯನ್ನರೇ ನಮಗೆ ಜಾತಿಯ ಮಾರಕ ಪರಿಣಾಮಗಳನ್ನು ತಿಳಿಸಿಕೊಟ್ಟರು ಎನ್ನುವ ವಿಚಾರದಲ್ಲಿ ಮಾತ್ರ ಯಾವುದೇ ಹುರುಳಿಲ್ಲ. ಯಾಕೆಂದರೆ ಇವತ್ತಿಗೂ ವಿದೇಶಿಯರಿಗೆ ಭಾರತವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗಿಲ್ಲ. ಭಾರತ ಅಂದರೆ ಕೇವಲ ಹಿಂದು-ಮುಸ್ಲಿಂ ಧರ್ಮಗಳ ಸಾಂಸ್ಕೃತಿಕ ಸಂಘರ್ಷದ ನೆಲೆಯೆಂದೇ ಗ್ರಹಿಸಿರುವ ಅವರಿಗೆ, ಜಾತಿಯಂಥಾ ಸೂಕ್ಷ್ಮಾತಿಸೂಕ್ಷ್ಮ ಸಂಸ್ಥೆಯ ಗ್ರಹಿಕೆ ಅವರಿಗೆ ಸುಲಭಸಾಧ್ಯ ಎಂದು ನಂಬುವದೇ ಕಷ್ಟ. ಜಾತಿಯ ಬಗೆಗೆ ವಿದೇಶಿಯರು ನೀಡಿರುವ ವ್ಯಾಖ್ಯೆಗಳನ್ನೇ ಆ ದಿಸೆಯಲ್ಲಿ ಪರಿಶೀಲಿಸಬಹುದು. ಅಮೇರಿಕೆಯ ಸಿ.ಎಚ್.ಕೂಲೇ ಎನ್ನುವವರು “ವರ್ಗಗಳು ಯಾವಾಗ ಅನುವಂಶಿಯವಾಗಿ ಪರಿಣಮಿಸುತ್ತವೆಯೋ ಅದನ್ನೇ ಜಾತಿ ಎಂದು ಕರೆಯಬೇಕು” ಎನ್ನುತ್ತಾರೆ. ಈ ಕೂಲೇ ಅವರಿಗೆ ವರ್ಗ ಮತ್ತು ಜಾತಿಯ ನಡುವಿನ ಅಂತರಗಳ ಗ್ರಹಿಕೆಯೇ ಸಾಧ್ಯವಾದಂತಿಲ್ಲ. ಇನ್ನು ಮೆಕಾಯಿವರ್ ಪೇಜ್ ಎನ್ನುವ ಚಿಂತಕರು “ವ್ಯಕ್ತಿಯ ಅಂತಸ್ತು ಪೂರ್ವನಿರ್ಧರಿತವಾಗಿದ್ದು, ಅದನ್ನು ಬದಲಾಯಿಸುವ ಆಸೆ ವ್ಯಕ್ತಿಗೆ ಇಲ್ಲದಿದ್ದರೆ ಅದೇ ಜಾತಿ,” ಎಂದಿರುವದನ್ನು ನೋಡಿದರೆ ಬದಲಾಯಿಸುವ ಆಸೆ ವ್ಯಕ್ತಿಗೆ ಇದ್ದರೂ ಮೇಲ್ಮುಖ ಸಂಚಲನೆಗೆ ಅವಕಾಶಗಳಿಲ್ಲದಿರುವ ಬಗ್ಗೆ ಮೆಕಾಯಿವರ್ ಅವರ ಗ್ರಹಿಕೆಗೂ ಸಿಕ್ಕಂತಿಲ್ಲ ಎನ್ನುವದನ್ನು ಗಮನಿಸಿದರೆ ವಿದೇಶಿಯರಿಗೆ ಈ ಜಾತಿ ಎನ್ನುವ ಸಂಸ್ಥೆಯನ್ನೇ ಸರಿಯಾಗಿ ಗ್ರಹಿಸಲಾಗಿಲ್ಲ. ಕುರುಡರು ಕಂಡ ಆನೆಯ ವಿವರಣೆಯಂತಿರುವ ಅವರ ವಿಚಾರಧಾರೆಗಳನ್ನೇ ಸರಿ ಎನ್ನುವದು ಎಷ್ಟು ಸಮಂಜಸ..?

ಗಾಂಧೀಜಿಯವರು ಆಫ಼್ರಿಕಾದಲ್ಲಿ ವರ್ಣ ಭೇದ ನೀತಿಯ ವಿರುದ್ಧ ಹೋರಾಟ ಮಾಡಿದರು ಅಂದ ಮಾತ್ರಕ್ಕೆ ಅಲ್ಲಿಯವರೆಗೆ ಆಫ್ರಿಕನ್ನರಿಗೆ ವರ್ಣಬೇಧ ನೀತಿಯ ಅರಿವೇ ಇರಲಿಲ್ಲ, ಅದು ಸಾಧ್ಯವಾದದ್ದು ಗಾಂಧೀಜಿಯಿಂದ ಮಾತ್ರ ಎಂದಷ್ಟೇ ಮೇಲ್ ಮೇಲಿನ ವಿವರಣೆಯಾಗಿ ಜಾತಿ ಪದ್ಧತಿಯ ವಿಷಯವಾಗಿ ಯುರೋಪಿನ ಚಿಂತಕರನ್ನು ಕುರಿತು ತುತ್ತೂರಿ ಊದಿರುವಂತಿದೆ. ಇನ್ನೊಂದು ಆತ್ಯಂತಿಕವಾದ ಸಂಗತಿಯಿದೆ. ಜಾತಿ ಎನ್ನುವದು ಭಾರತೀಯ ಸಮಾಜದ ಏಕಮೇವ ಲಕ್ಷಣ. ಇದರ ಆಚರಣೆ, ಸಂಪ್ರದಾಯ, ಕಟ್ಟಳೆಗಳೇ ಇವತ್ತಿಗೂ ಇದನ್ನು ಅನುಸರಿಸುವ ಭಾರತೀಯರಿಗೇ ಸಷ್ಟವಾಗಿಲ್ಲ, ಅಂತಹದರಲ್ಲಿ ಹೊರಗಿನಿಂದ ಬಂದು, ಹೊರಗಿನಿಂದ ನಿಂತು ಈ ಜಾತಿ ಎನ್ನುವ ಸಂಕೀರ್ಣ ಸಂಸ್ಥೆಯನ್ನು ಗ್ರಹಿಸಲು ಸಾಧ್ಯವೇ ಇಲ್ಲ.

ವಚನಕಾರರ ಜೊತೆಗೆ ತಿರುಗಾಡಿ, ಅವರ ವಚನಗಳ ರಚನೆಗೆ ತಾವೇ ಖುದ್ದಾಗಿ ಒಂದು ಕಮ್ಮಟವನ್ನು ರಚಿಸಿ ನಿರ್ವಹಿಸಿದ್ದೇವೆ ಎನ್ನುವಂತೆ ಪ್ರತಿಶತದಲ್ಲಿ ಜಾತಿವಿರೋಧದ ನೆಲೆಯನ್ನು ಗುರುತಿಸುವ ಕುಖ್ಯಾತ ಸಂಶೋಧಕರು ಒಂದನ್ನು ತಿಳಿದಿರಬೇಕು. ಚಾರಿತ್ರಿಕವಾದ ಆಧಾರಗಳನ್ನು ಇಟ್ಟುಕೊಂಡು ಅಧ್ಯಯನ ಮಾಡಲಾಗುವ ಸಂಶೋಧನೆ, ಅಂಕಿ ಅಂಶಗಳನ್ನು ಲೇಪಿಸಿದ ಮಾತ್ರಕ್ಕೆ ಖಚಿತವಾಗುವದಿಲ್ಲ. ಬುದ್ದ ಮನೆ ಬಿಟ್ಟು ತೆರಳುವಾಗಿನ ಮಾನಸಿಕ ಸ್ಥಿತಿ ಕೇವಲ ಅವನಿಗೆ ಮಾತ್ರವಲ್ಲದೇ ಹೊರಗೆ ನಿಂತು ಗ್ರಹಿಸಿದ ಇನ್ಯಾರಿಗೂ ಸಾಧ್ಯವಿಲ್ಲ. ಅವಕಾಶ ಸಿಕ್ಕರೆ ಇಂಥಾ ಬುದ್ದನ ಮನ:ಸ್ಥಿತಿಯನ್ನೂ ಪ್ರತಿಶತದಲ್ಲಿ ಅಳತೆ ಮಾಡಿ ಮಾತನಾಡುವ ಖ್ಯಾತ ಸಂಶೋಧಕರು ಭವಿಷ್ಯದಲ್ಲಿ ಬಂದರೂ ಅಚ್ಚರಿ ಪಡಬೇಕಿಲ್ಲ. ಇನ್ನೊಂದು ಸಾರ್ವತ್ರಿಕ ಸತ್ಯವಿದೆ. ಯಾವುದೇ ಒಬ್ಬ ಲೇಖಕ ಇಲ್ಲವೇ ಸಂಶೋಧಕ ಏನೇ ಮಾತನಾಡಿದರೂ ಬರೆದರೂ ತನ್ನ ಮತಿಯ ಮಿತಿಯ ಒಳಗಡೆ ಮಾತ್ರ. ಯುರೋಪಿಯನ್ನರೇ ನಮಗೆ ಜಾತಿ ಎನ್ನುವದು ಒಂದು ಅನಿಷ್ಟ ಎನ್ನುವದನ್ನು ತೋರಿಸಿಕೊಟ್ಟರು, ತಿಳಿಸಿಕೊಟ್ಟರು ಎನ್ನುವದನ್ನು ಒಪ್ಪುವ, ತಿರಸ್ಕರಿಸುವ ಪ್ರಶ್ನೆಯೂ ನಮ್ಮ ನಮ್ಮ ಮತಿಯ ಮಿತಿಗೆ ಸಂಬಂಧಪಡುತ್ತದೆ.

3 thoughts on “ಸಂವೇದನೆಗಳಿಗೆ ಸಂಖ್ಯಾಶಾಸ್ತ್ರದ ಅಳವಡಿಕೆಯೇ ಸಂಶೋಧನೆಯಲ್ಲ

  1. Dr.kiran.m gajanur

    ಸನ್ಮಾನ್ಯ ಜೋಗುರ ಅವರೆ ನಾವು ಒಬ್ಬ ಸಾಮಾಜಶಾಸ್ತ್ರ ಚಿಂತಕರಾಗಿ ಒಂದು ಪ್ರಶ್ನಗೆ ಪ್ರತಿಕ್ರಿಯಿಸಬೇಕೇ ಹೊರತು ನಾಲ್ಕು ಕಾದಂಬರಿ ಒದಿದವರಂತಲ್ಲ “ಕರ್ನಾಟಕದ ಬೌಧ್ಧಿಕ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಸೈಂಧಾಂತಿಕ ಹಂತದ ಅಥವಾ ಸಿದ್ಧಾಂತಗಳನ್ನು ಕಟ್ಟುವ ಮತ್ತು ಬೆಳೆಸುವ ಮಟ್ಟದ ಸಂಶೋಧನೆ ನಡೆಯುತ್ತಿಲ್ಲ ಬದಲಾಗಿ ಇಗಾಗಲೇ ಮಂಡಿತವಾಗಿರುವ/ವಾಗುತ್ತಿರುವ ಸಿದ್ಧಾಂತಗಳ ನೆಲೆಯಲ್ಲಿ ನಮ್ಮ ಸಮಾಜಿಕ ಸನ್ನಿವೇಶಗಳನ್ನು ವಿವರಿಸುವ ಮತ್ತು ಅವುಗಳ ಬೆಳಕಿನಲ್ಲಿ ತಮ್ಮ ಅನುಕೂಲಕ್ಕೆ ಪೂರಕ ಐಡಿಯಾಲಜಿಗಳನ್ನು ಸೃಷ್ಟಿಸಿ ಆ ಮೂಲಕ ತಮ್ಮ ಐಡೆಂಟಿಟಿ ಉಳಿಸಿಕೊಳ್ಳುವ ಕೆಲಸ ಹೆಚ್ಚಾಗಿ ನಡೆಯುತ್ತಿದೆ ಇದಕ್ಕೆ ಕಾರಣ ಕರ್ನಾಟಕದ ಬಹುಪಾಲು ಸಮಾಜ ಚಿಂತಕರಿಗೆ ಸೈಂಧಾಂತಿಕ ಮಾದರಿಯ ಸಂಶೋಧನೆಯ ತರಬೇತಿಯೇ ಇಲ್ಲದಿರುವುದು.

    ಆದ್ದರಿಂದಲೇ ಇಲ್ಲಿ ನಡೆದ ಬಹುಪಾಲು ರಾಜಕೀಯ ಮತ್ತು ಸಮಾಜಿಕ ಚಳುವಳಿಗಳ ಸೈಂದ್ಧಾಂತಿಕ ನೆಲೆ ಪಕ್ಕದ ತಮಿಳುನಾಡು ಮತ್ತು ಆಂಧ್ರ ರಾಜ್ಯಗಳಿಂದ ಆಮದಾಗಿದೆ” (ಉದಾ; ಹಿಂದುಳಿದ ಮತ್ತು ದಲಿತ ಹೋರಾಟ) ಮೇಲಿನ ಹೇಳಿಕೆ ಕರ್ನಾಟಕದ ವಿದ್ವತ್ ವಲಯದ ಕುರಿತು ಒಂದು ಟೀಕೆಯ ಮಾದರಿಯಲ್ಲಿ ಹಲವು ದಶಕಗಳಿಂದ ಚಾಲ್ತಿಯಲ್ಲಿದೆ. ಮತ್ತು ಈಗ ಡಂಕಿನ್ ಮತ್ತು ಬಾಲಗಂಗಾಧರ ಅವರ ವಚನಗಳ ಕುರಿತ ಲೇಖನದ ಚರ್ಚೆಯಲ್ಲಿ ಭಾಗವಹಿಸಿದ ವಿದ್ವಾಂಸರ ಅಭಿಪ್ರಾಯಗಳು ಮೇಲಿನ ಹೇಳಿಕೆಯನ್ನೆ ಗಟ್ಟಿಗೊಳಿಸುತ್ತಿವೆ. ಒಬ್ಬ ಪ್ರಬುಧ್ದ ಚಿಂತಕರಾಗಿ ತಾವು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಇತರರಿಗೆ ಮಾದರಿ ಆಗಿ ನಿಮ್ಮಿಂದ ನಾವು ಕಲಿಯುವ. . . . .

    ವಚನಗಳ ಬಗ್ಗೆ ಹಾಗೂ ಲಿಂಗಾಯಿತ, ವೀರಶ್ಯೆವ ಜಾತಿ/ಸಮುದಾಯಗಳ ಬಗ್ಗೆ ಸಾಕಷ್ಟು ಅಧ್ಯಯನಗಳು ಈಗಾಲೇ ನಡೆದಿವೆ. ಅಂತಹ ವಿವರಣೆಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಅದರ ಆದಾರದ ಮೇಲೆ ಢಂಕಿನ್ ತಮ್ಮದೇ ಆದ ಊಹಾಸಿದ್ಧಾಂತವನ್ನು ಮಂಡಿಸಿದ್ದಾರೆ. ಭಾರತದ ಜಾತಿ ವ್ಯವಸ್ಥೆ ಹಾಗೂ ರಿಲಿಜನ್ ಕುರಿತು ಬಾಲಗಂಗಾಧರ ಅವರ ಸಂಶೋಧನೆ ಅವರ ಊಹಾ ಸಿದ್ಧಾಂತಕ್ಕೆ ಮೂಲ ಪ್ರೇರಣೆಯಾಗಿದೆ. ಹಾಗಿದ್ದಲ್ಲಿ ಇಲ್ಲಿ ಚರ್ಚೆಗೊಳಪಡಬೇಕಾಗಿರುವ ಅಂಶಗಳೆಂದರೆ ಢಂಕಿನ್ ಹಾಗೂ ಬಾಲುರವರ ವಾದ ಪ್ರಚಲಿತ ವಿಧ್ಯಮಾನವಾದ ಜಾತಿಗಳ ಸ್ವರೂಪದ ಬಗ್ಗೆ ಇದೂವರೆಗಿನ ವಿವರಣೆಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆಯೇ ಮತ್ತು ಅವುಗಳಿಗಿಂತಲೂ ಹೆಚ್ಚು ಸಮರ್ಥವಾದ ವಿವರಣೆಯನ್ನು ನಮ್ಮ ಮುಂದಿಡುವಲ್ಲಿ ಅವರು ಯಶಸ್ವಿಯಾಗಿದ್ದಾರೆಯೇ ಎನ್ನುವುದು. ಢಂಕಿನ್‍ರವರ ಈ ಸಂಶೋಧನೆಯ ಬಗ್ಗೆ ಎತ್ತಬಹುದಾದ ಇಂತಹ ಪ್ರಶ್ನೆಗಳಿಗೂ ಸಂಶೋಧನೆಯನ್ನು ಕ್ಯೆಗೆತ್ತಿಕೊಳ್ಳುವ ಹಿಂದೆ ಇದ್ದಿಬಹುದಾದ ಉದ್ದೇಶಗಳಿಗೂ ಏನಾದರೂ ಸಂಬಂಧವಿದೆಯೇ?

    ಢಂಕಿನ್ ಅವರ ವಾದಕ್ಕೆ ಬಂದ ಪ್ರತಿಕ್ರಿಯೆಯನ್ನು ನೋಡಿದಾಗ ಸಂಶೋದನೆಯ ಸ್ವರೂಪದ ಬಗ್ಗೆ ಏಳುವ ಕೆಲವು ಪ್ರಶ್ನೆಗಳೆಂದರೆ: ಸದುದ್ದೇಶಗಳನ್ನು ಹೊಂದಿರುವ ಸಾಮಾಜಿಕ/ಸಾಂಸ್ಕøತಿಕ ಚಳುವಳಿಯ ಸ್ಯೆದ್ಧಾಂತಿಕ ನೆಲೆಯನ್ನು ಸಮಸ್ಯೀಕರಿಸುವ ಕೆಲಸವನ್ನು ಸಂಶೋಧನೆ ಕ್ಯೆಗೆತ್ತಿಕೊಳ್ಳಬೇಕೆ ಬೇಡವೆ? ಬ್ರಾಹ್ಮಣೇತರ, ದಲಿತ, ಬಂಡಾಯ ಇತ್ಯಾದಿ ಪ್ರಗತಿಪರ ಚಳುವಳಿಗಳ ಸಿದ್ಧಾಂತಗಳಲ್ಲಿರುವ ವ್ಯೆರುಧ್ಯಗಳನ್ನು ತೋರಿಸಿದರೆ ಅವುಗಳ ಮೂಲ ಆಶಯವನ್ನು ವಿರೋದಿಸಿದಂತಾಗುತ್ತದೆಯೆ? ವಚನಗಳು ಜಾತಿ ವ್ಯವಸ್ಥೆಯ ವಿರುದ್ಧವಾಗಿಲ್ಲ ಎಂದು ಹೇಳಿದರೆ ಅದು ವಚನಗಳ ಮಹತ್ವವನ್ನು ಕಡೆಗಣಿಸಿದಂತಾಗುತ್ತದೆಯೇ? ಪ್ರಚಲಿತ ನಂಬಿಕೆ, ಸಿದ್ಧಾಂತಗಳನ್ನು ವಿಮರ್ಶೆಗೊಳಪಡಿಸುವುದು ಅವುಗಳನ್ನು ಹತ್ತಿಕ್ಕುವ ಹುನ್ನಾರವಾಗುತ್ತದೆ ಎಂದಾದರೆ ಅಂತಹ ಚಳುವಳಿಗಳನ್ನು ಕುರಿತು ಮೂಲಭೂತ ಜಿಜ್ಞಾಸೆಯೇ ಸಾಧ್ಯವಿಲ್ಲ ಎಂದು ಹೇಳಿದಂತಾಗುವುದಿಲ್ಲವೆ? ಯಾವುದೇ ಒಂದು ಸಿದ್ಧಾಂತ ಜೀವಂತವಾಗಿ ಉಳಿಯಬೇಕಾದರೆ ಅದು ನಿರಂತರ ವಿಮರ್ಶೆಗೋಳಪಡುತ್ತಿರಬೇಕು ಮತ್ತು ಅಂತಹ ಪ್ರಕ್ರಿಯೆಯಲ್ಲಿ ಅದರ ಮೂಲ ಸ್ವರೂಪ ಬದಲಾಗುತ್ತಾ ಹೋಗುತ್ತದೆ. ಇಲ್ಲವಾದಲ್ಲಿ ಅದೊಂದು ನಿರ್ಜೀವ ಐಡಿಯಾಲಜಿಯಾಗಿಬಿಡುತ್ತದೆ. ಮಾಕ್ರ್ಸವಾದ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದಿದೆ. ಅದು ಎಷ್ಟರ ಮಟ್ಟಿಗೆ ಬದಲಾಗಿದೆ ಎಂದರೆ ‘ಮಾಕ್ರ್ಸ ಇಂದು ಜೀವಂತವಾಗಿದ್ದರೆ ಅವನು ಮಾಕ್ರ್ಸವಾದಿಯಾಗಿರುತ್ತಿಲಿಲ್ಲ’ ಎಂದು ಹೇಳುವಷ್ಟರ ಮಟ್ಟಿಗೆ. ಚರ್ಚೆಯಲ್ಲಿ ಭಾಗವಹಿಸುತ್ತಿರುವವರು ಇದನ್ನೆಲ್ಲಾ ಹೇಳುತ್ತಿದ್ದಾರೆ ಎನ್ನುವುದು ನನ್ನ ಅಭಿಪ್ರಾಯವಲ್ಲ. ಆದರೆ ಢಂಕಿನ್ ಅವರ ವಾದದಲ್ಲಿರಬಹುದಾದ ವ್ಯೆರುಧ್ಯಗಳು, ಪೂರ್ವಾಗ್ರಹಗಳು ಮತ್ತು ಅವರ ಸಂಶೋಧನಾ ವಿಧಾನದಲ್ಲಿರಬಹುದಾದ ಧೋಷಗಳನ್ನು ಅವರು ಮಂಡಿಸುವ ವಾದದ ಚೌಕಟ್ಟಿನಲ್ಲಿ ಚರ್ಚಿಸದೆ ಅವರ ಸಂಶೋಧನೆಯನ್ನು ಸಂಶೋಧನೆಗೆ ಅತೀತವಾದ ಅಂದರೆ ಇಂತಹ ಒಂದು ಸಂಶೋಧನೆಯನ್ನು ಕ್ಯೆಗೆತ್ತಿಕೊಳ್ಳುವ ಹಿಂದಿರುವ ಒಳಸಂಚು ಇತ್ಯಾದಿಗಳ ನೆಲೆಯೆಂದ ಚರ್ಚಿಸತೊಡಗಿದರೆ ಮೇಲಿನ ಪ್ರಶ್ನೆಗಳು ಸಹಜವಾಗಿಯೇ ಏಳುತ್ತವೆ. ಕೊನೆಯಲ್ಲಿ ಒಂದು ಮಾತು ಒಂದು ಅರ್ಥಪೂರ್ಣ ಹಾಗೂ ಅರೋಗ್ಯ ಪೂರ್ಣ ಚರ್ಚೆಯಲ್ಲಿ ವಾದಿ ಪ್ರತಿವಾದಿಗಳಿಬ್ಬರಿಗೂ ಸಮಾನ ಅವಕಾಶವಿರಬೇಕಲ್ಲವೆ?

    Reply
  2. s.b.jogur

    Dr.kiran avare, samaajavijnaanagalalliruva saiddhaantika adhyanaada khachitatege bahumukhyavaada todaku avu vastugalannu kuritu vyavaharisade, vishayagalannu kuritu vyavaharisuvade aagide.prachalita vidyamaanagala adhyayanadalliyoo aa todaku eduraaguttade. aneka samaajashaastrajnaru adannu samaajavijnaanagala miti endu karediruvaaga, yathaarthate, saarvatrikate, khachitateya prashne samaadhaanakara uttaradallide enisuvadillave..?

    Reply
  3. Dr.kiran.m gajanur

    ನೋಡಿ ಸಾರ್ ಸಮಾಜ ವಿಜ್ಷಾನದ ಹಿನ್ನಲೆಯಿಂದ ಬಂದ ನಾವು ಅದರ ಸೈಂಧಾಂತಿಕರಣದಲ್ಲಿ( ಬಾರತದ ಸಂಧರ್ಭದಲ್ಲಿ) ಇರುವ ದೋಷಗಳ ಕುರಿತು ಬಹಳ ಎಚ್ಚರಿಕೆಯ ಸಂಶೋಧನೆ ಮಾಡಬೇಕಿದೆ ಆ ದಾರಿಯಲ್ಲಿ ಹಿಂದೆ ಸೈದ್ ಸಿಕ್ಕಿದ್ದರು ಈಗ ಬಾಲು ಸಿಕ್ಕಿದ್ದಾರೆ ಅವರೆ ಅಂತಿಮ ಅಲ್ಲ ಅವರ ಹೈಪೂಥಿಸಿಸ್ ಒಡೆದರೆ ಜೋಗುರಾ ಸರ್ ಸಹ ನನಗೆ ಇಷ್ಟವಾಗುತ್ತರೆ ಆದರೆ ಆ ಮಟ್ಟದ ಕೆಲಸ ನಾವು ಮಾಡುತ್ತಿಲ್ಲ ಅದನ್ನು ಬಿಟ್ಟು ಸಂಶೋಧನೆಯನ್ನೆ ಮಾಡದೆ ಕೆಲವ ಹೇಳಿಕೆಗಳಿಗೆ ಆರೋಪಾ ಪ್ರತ್ಯರೋಪಗಳಿಗೆ ಸಿಮಿತವಾಗುತ್ತಿದ್ದವೆ ಹೀಗೆ ಆದರೆ ಸಂಶೋಧಕರಿಗೂ ರಾಜಕಾರಣಿಗಳಿಗೂ ವ್ಯತ್ಯಾಸವೇ ಇರುವುದಿಲ್ಲ ಇದು ನನ್ನ ಭಾವನೆ ಆದ್ದರಿಂಧ ದಯಮಾಡಿ ಬಾಲು ಅವರ ಸಂಶೋಧನೆಯನ್ನು ಒದಿ ವಯಕ್ತಿಕವಾಗಿ ಅಲ್ಲದೆ ವೈಜ್ಙಾನಿಕವಾಗಿ ವಿವರ್ಶಿಸಿದರೆ ಖಂಡಿತ ಒಳ್ಳೆಯ ಒಳನೋಟಗಳು ನಮ್ಮ ದಾರಿಯಲ್ಲಿ ನಮಗೆ ಸಿಗುತ್ತವೆ. . . . .

    Reply

Leave a Reply

Your email address will not be published. Required fields are marked *