Daily Archives: April 17, 2013

ಕನ್ನಡಕ್ಕೆ ಬಂದ ರಾಮ್ ಗೋಪಾಲ್ ವರ್ಮ

– ಡಾ. ಎನ್. ಜಗದಿಶ್ ಕೊಪ್ಪ

ಇತ್ತೀಚೆಗಿನ ವರ್ಷಗಳ ಭಾರತೀಯ ಚಲನ ಚಿತ್ರರಂಗ ಜಗತ್ತಿನಲ್ಲಿ ರಾಮ್ ಗೋಪಾಲ್ ವರ್ಮ ಎಂಬ ಹೆಸರು ಸದಾ ಸುದ್ದಿಯಲ್ಲಿರುತ್ತದೆ. ತೆಲಗು ಚಿತ್ರರಂಗದ ಮೂಲಕ ಚಿತ್ರಜಗತ್ತಿಗೆ ಕಾಲಿಟ್ಟು, ನಂತರ ಬಾಲಿವುಡ್ ಚಿತ್ರ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಮ ಗೋಪಾಲ್ ವರ್ಮ ತನ್ನ ಪ್ರತಿಭೆಯಿಂದಾಗಿ ಖ್ಯಾತಿ, ಕುಖ್ಯಾತಿ ಎರಡನ್ನೂ ಒಟ್ಟಿಗೆ ಗಳಿಸಿ, ದಕ್ಕಿಸಿಕೊಂಡ ಅಪರೂಪದ ಪ್ರತಿಭಾವಂತ.

ಇದೀಗ ತನ್ನ ಮಾತೃಬಾಷೆಯಾದ ತೆಲಗು ಭಾಷೆಯಲ್ಲಿ “ನಾ ಇಷ್ಟಂ” ಹೆಸರಿನಲ್ಲಿ ತನ್ನ ಆತ್ಮ ಕಥೆಯನ್ನು ಬರೆದಿರುವ ರಾಮ್ ಗೋಪಾಲ್ ತನ್ನ ಬಿಚ್ಚು ಮನಸ್ಸಿನ ವ್ಯಕ್ತಿತ್ವದಿಂದಾಗಿ ಮತ್ತಷ್ಟು ಇಷ್ಟವಾಗುತ್ತಾನೆ. ಕನ್ನಡದ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರಾಗಿರುವ ಸೃಜನ್ ಈ ಕೃತಿಯನ್ನು “ನನ್ನಿಷ್ಟ” srujan-ramgopalvarmaಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

ತೆಲಗು ಭಾಷೆಯಿಂದ ಕನ್ನಡಕ್ಕೆ ಅನುವಾದವಾಗಿರುವ ಈ ಕೃತಿ ಅನುವಾದದ ಕೃತಿ ಎಂದು ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ಸೃಜನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಹುಮುಖ ಪ್ರತಿಭೆಯ ಸೃಜನ್ ಮೂಲತಃ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ತಮ್ಮ ನಿಜ ನಾಮಧೇಯ ಶ್ರೀಕಾಂತ್ ಹೆಸರಿನಲ್ಲಿ ದಕ್ಷಿಣ ಭಾರತದ ವರ್ಣಚಿತ್ರ ಕಲಾವಿದರ ಬಗ್ಗೆ ಪರಿಚಯ ಲೇಖನಗಳನ್ನು ಬರೆದು ಲೇಖಕರಾಗಿಯೂ ಕೂಡ ಪರಿಚಿತರಾಗಿದ್ದರು. ಇದೀಗ ರಾಮ್ ಗೊಪಾಲ್ ವರ್ಮನ ಅತ್ಮ ಕಥನವನ್ನು ಕನ್ನಡಕ್ಕೆ ತರುವುದರ ಮೂಲಕ ಶ್ರೇಷ್ಠ ಅನುವಾದಕರಾಗಿ ಕೂಡ ಹೊರಹೊಮ್ಮಿದ್ದಾರೆ.

ರಾಮ್ ಗೋಪಾಲ್ ವರ್ಮ 1980 ರ ದಶಕದಲ್ಲಿ ಚಿತ್ರರಂಗದ ಯಾವುದೇ ಅನುಭವ ಇಲ್ಲದೆ, “ಶಿವ” ಎಂಬ ಚಿತ್ರವನ್ನು ನಿರ್ದೇಶನ ಮಾಡಿ, ದಾಖಲೆ ನಿರ್ಮಿಸಿ, ತೆಲಗು ಚಿತ್ರರಂಗಕ್ಕೆ ಹೊಸ ಭಾಷ್ಯವನ್ನು ಬರೆದ ಪ್ರತಿಭಾವಂತ. ನನಗಿನ್ನೂ ನೆನಪಿದೆ. 1989 ರ ನವಂಬರ್ ತಿಂಗಳಿನಲ್ಲಿ ಬೆಂಗಳೂರಿನ ಕಪಾಲಿ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದ ಶಿವ ಚಿತ್ರವನ್ನು ನೋಡಿ ನಾನು ಬೆರಗಾಗಿದ್ದೆ. ನಾಗಾರ್ಜುನ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ತೆಲಗು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿತ್ತು. ತೆಲಗು ಚಿತ್ರರಂಗದ ನಾಯಕರಾದ ಎನ್.ಟಿ.ಆರ್, ಎ.ನಾಗೇಶ್ವರರಾವ್, ಶೋಬನ್ ಬಾಬು, ಕೃಷ್ಣ ಮುಂತಾದ ನಟರ, ಏಕತಾನತೆಯಿಂದ ಕೂಡಿದ್ದ ಸಾಮಾಜಿಕ ಚಿತ್ರಗಳನ್ನು ನೋಡಿ ಬೇಸತ್ತಿದ್ದ ಜನಕ್ಕೆ, ವಿಜಯವಾಡ ಕಾಲೇಜಿನ ವಿದ್ಯಾರ್ಥಿಯೊಬ್ಬ ಪರಿಸ್ಥಿತಿಯ ಕೈ ಕೂಸಾಗಿ ರೌಡಿಯಾಗಿ ಬದಲಾಗುವ ತಾಜಾ ಅನುಭವವನ್ನು ವರ್ಮಾನ ಸಿನಿಮಾದಲ್ಲಿ ನೋಡಿ ಥ್ರಿಲ್ಲಾಗಿದ್ದರು.

ಅನಿರೀಕ್ಷಿತವಾಗಿ ದೊರೆತ ಯಶಸ್ಸನ್ನು ಅರ್ಥಪೂರ್ಣವಾಗಿ ಬಳಸಿಕೊಂಡ ರಾಮ್ ಗೋಪಾಲ್ ವರ್ಮ, ನಂತರ “ಕ್ಷಣ ಕ್ಷಣಂ” ಎಂಬ ಇನ್ನೊಂದು ಥ್ರಿಲ್ಲರ್ ಸಿನಿಮಾ ತೆಗೆದು ಆಂಧ್ರದಲ್ಲಿ ಯುವ ಪ್ರತಿಭಾವಂತ ನಿರ್ದೇಶಕ ಎಂದು ಹೆಸರುವಾಸಿಯಾದ.

ಈ ಎರಡು ಚಿತ್ರಗಳ ಯಶಸ್ವಿನಿಂದಾಗಿ ಮುಂಬೈನ ಬಾಲಿವುಡ್ ಜಗತ್ತಿಗೆ ಜಿಗಿದ ರಾಮ್ ಗೋಪಾಲ್ , ಅಲ್ಲಿಯೂ ಕೂಡ ರಂಗೀಲಾ ಮತ್ತು ಸತ್ಯ ಚಿತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮ ಪ್ರತಿಬೆಯ ಮೂಲಕ ಗಮನ ಸೆಳೆದ. ಮುಂಬೈನ ಕೊಳಚೆಗೇರಿಯ ಯುವಕರು ಭೂಗತ ಜಗತ್ತಿಗೆ ಬಲಿಯಾಗು ಕಥೆಯುಳ್ಳ ಸತ್ಯ ಸಿನಿಮಾ ಇಡೀ ಭಾರತದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಅವನೊಳಗಿದ್ದ ಮಹಾತ್ವಾಂಕ್ಷೆಯ ಹಪಾ ಹಪಿ ಈದಿನ ರಾಮ್ ಗೋಪಾಲ್ ವರ್ಮನನ್ನು ಕೆಟ್ಟ ನಿರ್ದೇಶಕ ಎಂಬ ಸ್ಥಾನಕ್ಕೆ ದೂಡಿದೆ. ಭಾರತ ಚಿತ್ರ ರಂಗದ ಪ್ರತಿಭಾವಂತ ನಿದೇಶಕನಾಗುವ ಎಲ್ಲಾ ಲಕ್ಷಣಗಳಿದ್ದ ವರ್ಮ, ವ್ಯವಹಾರದ ಬೆನ್ನು ಹತ್ತಿದ ಫಲವಾಗಿ ಸಿನಿಮಾ ಎಂದರೇ ಅದೊಂದು ದೃಶ್ಯಕಾವ್ಯ ಎಂಬುದನ್ನು ಮರೆತು, ಬೀದಿ ಬದಿಯಲ್ಲಿ ಆ ಕ್ಷಣಕ್ಕೆ ಕಡಲೆ ಹಿಟ್ಟು ಕಲೆಸಿ ಮಾಡುವ ಬೊಂಡ ಎಂಬಂತೆ ತಿಂಗಳಿಗೊಂದು ಸಿನಿಮಾ ತಯಾರಿಸುತ್ತಿದ್ದಾನೆ. ಈ ಕಾರಣಕ್ಕಾಗಿ ತನ್ನ ನಿರ್ಮಾಣ ಸಮಸ್ಥೆಯ ಹೆಸರನ್ನು ಸಿನಿಮಾ ಪ್ಯಾಕ್ಟರಿ ಎಂದು ಕರೆದುಕೊಂಡಿದ್ದಾನೆ.

ವರ್ಮನ ಕುರಿತಂತೆ ನಮ್ಮ ಅಸಮಾಧಾನಗಳು ಏನೇ ಇರಲಿ, ಈವರೆಗೆ ದಕ್ಷಿಣ ಭಾರತದ ಸುಂದರ ಚೆಲುವೆಯರನ್ನು ಮಾತ್ರ (ಪದ್ಮಿನಿ, ವೈಜಯಂತಿಮಾಲಾ, ಹೇಮಾಮಾಲಿನಿ, ಶ್ರೀದೇವಿ ಇತ್ಯಾದಿ) ನಾಯಕಿರಾಗಿ ಬರಮಾಡಿಕೊಳ್ಳುತ್ತಿದ್ದ ಹಿಂದಿ ಚಿತ್ರರಂಗ, ದಕ್ಷಿಣ ಭಾರತದ ನಾಯಕರನ್ನು ಮತ್ತು ತಂತ್ರಜ್ಞರನ್ನು ಮುಕ್ತವಾಗಿ ಒಪ್ಪಿಕೊಂಡಿದ್ದು ಕಡಿಮೆ. ಇದರಲ್ಲಿ ವಿ.ಶಾಂತರಾಂ ಮತ್ತು ಗುರುದತ್‌ರವರನ್ನು ಮಾತ್ರ ಹೊರತು ಪಡಿಸಬಹುದು. ನಂತರ ಬಾಲಿವುಡ್ ನಲ್ಲಿ ವರ್ಮಾ ಉಂಟು ಮಾಡಿದ ಸಂಚಲನವನ್ನು ಮರೆಯಲಾಗದು.

ನನ್ನಿಷ್ಟ ಎನ್ನುವ ಆತ್ಮ ಕಥನದಲ್ಲಿ ಮುಕ್ತವಾಗಿ ಎಲ್ಲವನ್ನೂ ತೆರೆದುಕೊಂಡಿರುವ ರಾಮಗೋಪಾಲ್ ವರ್ಮ, ತಾನು ಸಿನಿಮಾಗಳಿಗಾಗಿ ಯಾವ ಯಾವ ದೃಶ್ಯವನ್ನು, ಮತ್ತು ಪರಿಕಲ್ಪನೆಯನ್ನು ಎಲ್ಲೆಲ್ಲಿ ಕದ್ದೆ ಎಂಬುದನ್ನು ಹೇಳಿಕೊಳ್ಳುವುದರ ಮೂಲಕ ಮತ್ತಷ್ಟು ಆತ್ಮೀಯನಾಗುತ್ತಾನೆ. ಯಾವುದೇ ಕಪಟವಿಲ್ಲದೆ ತನ್ನ ಬದುಕು, ಭಗ್ನಪ್ರೇಮ ಮತ್ತು ತಂದೆ ತಾಯಿ ಮೇಲಿನ ಪ್ರೀತಿ ಹಾಗೂ ತೆಲಗು ಸಿನಿಮಾ ರಂಗದ ಒಡನಾಟ ಎಲ್ಲವನ್ನೂ ಮುಕ್ತವಾಗಿ ತೆರೆದಿಟ್ಟಿದ್ದಾನೆ.

ಸೃಜನ್ ಅನುವಾದವಂತೂ ಓದನ್ನು ಮತ್ತಷ್ಟು ಅಪ್ತವಾಗುವಂತೆ ಮಾಡಿದೆ. ಪಲ್ಲವ ವೆಂಕಟೇಶ್ ಇವರ ಪುಸ್ತಕದ ಮೇಲಿನ ಪ್ರೀತಿ, ಈ ಕೃತಿಯ ಚಂದನೆಯ ಮುದ್ರಣದಿಂದಾಗಿ ಮತ್ತೊಮ್ಮೆ ಸಾಬೀತಾಗಿದೆ. ರಾಮ್ ಗೋಪಾಲ್ ವರ್ಮನನ್ನು ಕನ್ನಡಕ್ಕೆ ಪ್ರೀತಿಯಿಂದ ಪರಿಚಯಿಸಿರುವ ಸೃಜನ್ ಮತ್ತು ಪಲ್ಲವ ವೆಂಕಟೇಶ್ ಇವರಿಗೆ ಅಭಿನಂದನೆಗಳು.