ಕನ್ನಡಕ್ಕೆ ಬಂದ ರಾಮ್ ಗೋಪಾಲ್ ವರ್ಮ

– ಡಾ. ಎನ್. ಜಗದಿಶ್ ಕೊಪ್ಪ

ಇತ್ತೀಚೆಗಿನ ವರ್ಷಗಳ ಭಾರತೀಯ ಚಲನ ಚಿತ್ರರಂಗ ಜಗತ್ತಿನಲ್ಲಿ ರಾಮ್ ಗೋಪಾಲ್ ವರ್ಮ ಎಂಬ ಹೆಸರು ಸದಾ ಸುದ್ದಿಯಲ್ಲಿರುತ್ತದೆ. ತೆಲಗು ಚಿತ್ರರಂಗದ ಮೂಲಕ ಚಿತ್ರಜಗತ್ತಿಗೆ ಕಾಲಿಟ್ಟು, ನಂತರ ಬಾಲಿವುಡ್ ಚಿತ್ರ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಮ ಗೋಪಾಲ್ ವರ್ಮ ತನ್ನ ಪ್ರತಿಭೆಯಿಂದಾಗಿ ಖ್ಯಾತಿ, ಕುಖ್ಯಾತಿ ಎರಡನ್ನೂ ಒಟ್ಟಿಗೆ ಗಳಿಸಿ, ದಕ್ಕಿಸಿಕೊಂಡ ಅಪರೂಪದ ಪ್ರತಿಭಾವಂತ.

ಇದೀಗ ತನ್ನ ಮಾತೃಬಾಷೆಯಾದ ತೆಲಗು ಭಾಷೆಯಲ್ಲಿ “ನಾ ಇಷ್ಟಂ” ಹೆಸರಿನಲ್ಲಿ ತನ್ನ ಆತ್ಮ ಕಥೆಯನ್ನು ಬರೆದಿರುವ ರಾಮ್ ಗೋಪಾಲ್ ತನ್ನ ಬಿಚ್ಚು ಮನಸ್ಸಿನ ವ್ಯಕ್ತಿತ್ವದಿಂದಾಗಿ ಮತ್ತಷ್ಟು ಇಷ್ಟವಾಗುತ್ತಾನೆ. ಕನ್ನಡದ ಪ್ರತಿಭಾವಂತ ಕಲಾವಿದರಲ್ಲಿ ಒಬ್ಬರಾಗಿರುವ ಸೃಜನ್ ಈ ಕೃತಿಯನ್ನು “ನನ್ನಿಷ್ಟ” srujan-ramgopalvarmaಹೆಸರಿನಲ್ಲಿ ಕನ್ನಡಕ್ಕೆ ತಂದಿದ್ದಾರೆ.

ತೆಲಗು ಭಾಷೆಯಿಂದ ಕನ್ನಡಕ್ಕೆ ಅನುವಾದವಾಗಿರುವ ಈ ಕೃತಿ ಅನುವಾದದ ಕೃತಿ ಎಂದು ನಂಬಲು ಸಾಧ್ಯವಿಲ್ಲದ ರೀತಿಯಲ್ಲಿ ಸೃಜನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಹುಮುಖ ಪ್ರತಿಭೆಯ ಸೃಜನ್ ಮೂಲತಃ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ತಮ್ಮ ನಿಜ ನಾಮಧೇಯ ಶ್ರೀಕಾಂತ್ ಹೆಸರಿನಲ್ಲಿ ದಕ್ಷಿಣ ಭಾರತದ ವರ್ಣಚಿತ್ರ ಕಲಾವಿದರ ಬಗ್ಗೆ ಪರಿಚಯ ಲೇಖನಗಳನ್ನು ಬರೆದು ಲೇಖಕರಾಗಿಯೂ ಕೂಡ ಪರಿಚಿತರಾಗಿದ್ದರು. ಇದೀಗ ರಾಮ್ ಗೊಪಾಲ್ ವರ್ಮನ ಅತ್ಮ ಕಥನವನ್ನು ಕನ್ನಡಕ್ಕೆ ತರುವುದರ ಮೂಲಕ ಶ್ರೇಷ್ಠ ಅನುವಾದಕರಾಗಿ ಕೂಡ ಹೊರಹೊಮ್ಮಿದ್ದಾರೆ.

ರಾಮ್ ಗೋಪಾಲ್ ವರ್ಮ 1980 ರ ದಶಕದಲ್ಲಿ ಚಿತ್ರರಂಗದ ಯಾವುದೇ ಅನುಭವ ಇಲ್ಲದೆ, “ಶಿವ” ಎಂಬ ಚಿತ್ರವನ್ನು ನಿರ್ದೇಶನ ಮಾಡಿ, ದಾಖಲೆ ನಿರ್ಮಿಸಿ, ತೆಲಗು ಚಿತ್ರರಂಗಕ್ಕೆ ಹೊಸ ಭಾಷ್ಯವನ್ನು ಬರೆದ ಪ್ರತಿಭಾವಂತ. ನನಗಿನ್ನೂ ನೆನಪಿದೆ. 1989 ರ ನವಂಬರ್ ತಿಂಗಳಿನಲ್ಲಿ ಬೆಂಗಳೂರಿನ ಕಪಾಲಿ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದ್ದ ಶಿವ ಚಿತ್ರವನ್ನು ನೋಡಿ ನಾನು ಬೆರಗಾಗಿದ್ದೆ. ನಾಗಾರ್ಜುನ ನಾಯಕನಾಗಿ ಅಭಿನಯಿಸಿರುವ ಈ ಚಿತ್ರ ತೆಲಗು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿತ್ತು. ತೆಲಗು ಚಿತ್ರರಂಗದ ನಾಯಕರಾದ ಎನ್.ಟಿ.ಆರ್, ಎ.ನಾಗೇಶ್ವರರಾವ್, ಶೋಬನ್ ಬಾಬು, ಕೃಷ್ಣ ಮುಂತಾದ ನಟರ, ಏಕತಾನತೆಯಿಂದ ಕೂಡಿದ್ದ ಸಾಮಾಜಿಕ ಚಿತ್ರಗಳನ್ನು ನೋಡಿ ಬೇಸತ್ತಿದ್ದ ಜನಕ್ಕೆ, ವಿಜಯವಾಡ ಕಾಲೇಜಿನ ವಿದ್ಯಾರ್ಥಿಯೊಬ್ಬ ಪರಿಸ್ಥಿತಿಯ ಕೈ ಕೂಸಾಗಿ ರೌಡಿಯಾಗಿ ಬದಲಾಗುವ ತಾಜಾ ಅನುಭವವನ್ನು ವರ್ಮಾನ ಸಿನಿಮಾದಲ್ಲಿ ನೋಡಿ ಥ್ರಿಲ್ಲಾಗಿದ್ದರು.

ಅನಿರೀಕ್ಷಿತವಾಗಿ ದೊರೆತ ಯಶಸ್ಸನ್ನು ಅರ್ಥಪೂರ್ಣವಾಗಿ ಬಳಸಿಕೊಂಡ ರಾಮ್ ಗೋಪಾಲ್ ವರ್ಮ, ನಂತರ “ಕ್ಷಣ ಕ್ಷಣಂ” ಎಂಬ ಇನ್ನೊಂದು ಥ್ರಿಲ್ಲರ್ ಸಿನಿಮಾ ತೆಗೆದು ಆಂಧ್ರದಲ್ಲಿ ಯುವ ಪ್ರತಿಭಾವಂತ ನಿರ್ದೇಶಕ ಎಂದು ಹೆಸರುವಾಸಿಯಾದ.

ಈ ಎರಡು ಚಿತ್ರಗಳ ಯಶಸ್ವಿನಿಂದಾಗಿ ಮುಂಬೈನ ಬಾಲಿವುಡ್ ಜಗತ್ತಿಗೆ ಜಿಗಿದ ರಾಮ್ ಗೋಪಾಲ್ , ಅಲ್ಲಿಯೂ ಕೂಡ ರಂಗೀಲಾ ಮತ್ತು ಸತ್ಯ ಚಿತ್ರಗಳ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮ ಪ್ರತಿಬೆಯ ಮೂಲಕ ಗಮನ ಸೆಳೆದ. ಮುಂಬೈನ ಕೊಳಚೆಗೇರಿಯ ಯುವಕರು ಭೂಗತ ಜಗತ್ತಿಗೆ ಬಲಿಯಾಗು ಕಥೆಯುಳ್ಳ ಸತ್ಯ ಸಿನಿಮಾ ಇಡೀ ಭಾರತದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಅವನೊಳಗಿದ್ದ ಮಹಾತ್ವಾಂಕ್ಷೆಯ ಹಪಾ ಹಪಿ ಈದಿನ ರಾಮ್ ಗೋಪಾಲ್ ವರ್ಮನನ್ನು ಕೆಟ್ಟ ನಿರ್ದೇಶಕ ಎಂಬ ಸ್ಥಾನಕ್ಕೆ ದೂಡಿದೆ. ಭಾರತ ಚಿತ್ರ ರಂಗದ ಪ್ರತಿಭಾವಂತ ನಿದೇಶಕನಾಗುವ ಎಲ್ಲಾ ಲಕ್ಷಣಗಳಿದ್ದ ವರ್ಮ, ವ್ಯವಹಾರದ ಬೆನ್ನು ಹತ್ತಿದ ಫಲವಾಗಿ ಸಿನಿಮಾ ಎಂದರೇ ಅದೊಂದು ದೃಶ್ಯಕಾವ್ಯ ಎಂಬುದನ್ನು ಮರೆತು, ಬೀದಿ ಬದಿಯಲ್ಲಿ ಆ ಕ್ಷಣಕ್ಕೆ ಕಡಲೆ ಹಿಟ್ಟು ಕಲೆಸಿ ಮಾಡುವ ಬೊಂಡ ಎಂಬಂತೆ ತಿಂಗಳಿಗೊಂದು ಸಿನಿಮಾ ತಯಾರಿಸುತ್ತಿದ್ದಾನೆ. ಈ ಕಾರಣಕ್ಕಾಗಿ ತನ್ನ ನಿರ್ಮಾಣ ಸಮಸ್ಥೆಯ ಹೆಸರನ್ನು ಸಿನಿಮಾ ಪ್ಯಾಕ್ಟರಿ ಎಂದು ಕರೆದುಕೊಂಡಿದ್ದಾನೆ.

ವರ್ಮನ ಕುರಿತಂತೆ ನಮ್ಮ ಅಸಮಾಧಾನಗಳು ಏನೇ ಇರಲಿ, ಈವರೆಗೆ ದಕ್ಷಿಣ ಭಾರತದ ಸುಂದರ ಚೆಲುವೆಯರನ್ನು ಮಾತ್ರ (ಪದ್ಮಿನಿ, ವೈಜಯಂತಿಮಾಲಾ, ಹೇಮಾಮಾಲಿನಿ, ಶ್ರೀದೇವಿ ಇತ್ಯಾದಿ) ನಾಯಕಿರಾಗಿ ಬರಮಾಡಿಕೊಳ್ಳುತ್ತಿದ್ದ ಹಿಂದಿ ಚಿತ್ರರಂಗ, ದಕ್ಷಿಣ ಭಾರತದ ನಾಯಕರನ್ನು ಮತ್ತು ತಂತ್ರಜ್ಞರನ್ನು ಮುಕ್ತವಾಗಿ ಒಪ್ಪಿಕೊಂಡಿದ್ದು ಕಡಿಮೆ. ಇದರಲ್ಲಿ ವಿ.ಶಾಂತರಾಂ ಮತ್ತು ಗುರುದತ್‌ರವರನ್ನು ಮಾತ್ರ ಹೊರತು ಪಡಿಸಬಹುದು. ನಂತರ ಬಾಲಿವುಡ್ ನಲ್ಲಿ ವರ್ಮಾ ಉಂಟು ಮಾಡಿದ ಸಂಚಲನವನ್ನು ಮರೆಯಲಾಗದು.

ನನ್ನಿಷ್ಟ ಎನ್ನುವ ಆತ್ಮ ಕಥನದಲ್ಲಿ ಮುಕ್ತವಾಗಿ ಎಲ್ಲವನ್ನೂ ತೆರೆದುಕೊಂಡಿರುವ ರಾಮಗೋಪಾಲ್ ವರ್ಮ, ತಾನು ಸಿನಿಮಾಗಳಿಗಾಗಿ ಯಾವ ಯಾವ ದೃಶ್ಯವನ್ನು, ಮತ್ತು ಪರಿಕಲ್ಪನೆಯನ್ನು ಎಲ್ಲೆಲ್ಲಿ ಕದ್ದೆ ಎಂಬುದನ್ನು ಹೇಳಿಕೊಳ್ಳುವುದರ ಮೂಲಕ ಮತ್ತಷ್ಟು ಆತ್ಮೀಯನಾಗುತ್ತಾನೆ. ಯಾವುದೇ ಕಪಟವಿಲ್ಲದೆ ತನ್ನ ಬದುಕು, ಭಗ್ನಪ್ರೇಮ ಮತ್ತು ತಂದೆ ತಾಯಿ ಮೇಲಿನ ಪ್ರೀತಿ ಹಾಗೂ ತೆಲಗು ಸಿನಿಮಾ ರಂಗದ ಒಡನಾಟ ಎಲ್ಲವನ್ನೂ ಮುಕ್ತವಾಗಿ ತೆರೆದಿಟ್ಟಿದ್ದಾನೆ.

ಸೃಜನ್ ಅನುವಾದವಂತೂ ಓದನ್ನು ಮತ್ತಷ್ಟು ಅಪ್ತವಾಗುವಂತೆ ಮಾಡಿದೆ. ಪಲ್ಲವ ವೆಂಕಟೇಶ್ ಇವರ ಪುಸ್ತಕದ ಮೇಲಿನ ಪ್ರೀತಿ, ಈ ಕೃತಿಯ ಚಂದನೆಯ ಮುದ್ರಣದಿಂದಾಗಿ ಮತ್ತೊಮ್ಮೆ ಸಾಬೀತಾಗಿದೆ. ರಾಮ್ ಗೋಪಾಲ್ ವರ್ಮನನ್ನು ಕನ್ನಡಕ್ಕೆ ಪ್ರೀತಿಯಿಂದ ಪರಿಚಯಿಸಿರುವ ಸೃಜನ್ ಮತ್ತು ಪಲ್ಲವ ವೆಂಕಟೇಶ್ ಇವರಿಗೆ ಅಭಿನಂದನೆಗಳು.

14 thoughts on “ಕನ್ನಡಕ್ಕೆ ಬಂದ ರಾಮ್ ಗೋಪಾಲ್ ವರ್ಮ

  1. ವಿಜಯ್

    >> ವರ್ಮನ ಕುರಿತಂತೆ ನಮ್ಮ ಅಸಮಾಧಾನಗಳು ಏನೇ ಇರಲಿ, ಈವರೆಗೆ ದಕ್ಷಿಣ ಭಾರತದ ಸುಂದರ ಚೆಲುವೆಯರನ್ನು ಮಾತ್ರ (ಪದ್ಮಿನಿ, ವೈಜಯಂತಿಮಾಲಾ, ಹೇಮಾಮಾಲಿನಿ, ಶ್ರೀದೇವಿ ಇತ್ಯಾದಿ) ನಾಯಕಿರಾಗಿ ಬರಮಾಡಿಕೊಳ್ಳುತ್ತಿದ್ದ ಹಿಂದಿ ಚಿತ್ರರಂಗ, ದಕ್ಷಿಣ ಭಾರತದ ನಾಯಕರನ್ನು ಮತ್ತು ತಂತ್ರಜ್ಞರನ್ನು ಮುಕ್ತವಾಗಿ ಒಪ್ಪಿಕೊಂಡಿದ್ದು ಕಡಿಮೆ. ಇದರಲ್ಲಿ ವಿ.ಶಾಂತರಾಂ ಮತ್ತು ಗುರುದತ್‌ರವರನ್ನು ಮಾತ್ರ ಹೊರತು ಪಡಿಸಬಹುದು.<<

    ರೆಸೂಲ್ ಪೂಕುಟ್ಟಿ, ಮಣಿರತ್ನಂ, ಸಂತೋಶ ಸಿವನ್, ಎ.ಆರ್.ರೆಹಮಾನ್, ಪ್ರಿಯದರ್ಶನ್, ಸಾಬು ಸಿರಿಲ್, ಪ್ರಭುದೇವ ಇವರೆಲ್ಲ ಎಲ್ಲಿಯವರು?
    ಉತ್ತರದ ನಾಯಕಿರನ್ನು ಅಪ್ಪಿಕೊಂಡಂತೆ, ಉತ್ತರ ಭಾರತದ ನಾಯಕರನ್ನು ದಕ್ಷಿಣ ಭಾರತದ ಚಿತ್ರರಂಗ ಅಪ್ಪಿಕೊಂಡಿದೆಯಾ?
    ಗುರುದತ್, ಶಾಂತಾರಾಂ ಇಲ್ಲಿದ್ದು ಅಲ್ಲಿಗೆ ಹೋದವರಲ್ಲ. ಅಲ್ಲಿಯೇ ಪ್ರಾರಂಭ ಮಾಡಿ ನಂತರ ಬೆಳೆದವರು.

    Reply
  2. jagadishkoppa

    ವಿಜಯ್ ಅವರೇ, ಶಾಂತರಾಂ, ಹುಬ್ಬಳ್ಳಿ ಡೆಕ್ಕನ್ ಡಾಕೀಸ್ ನಲ್ಲಿ ಗೇಟ್ ಕೀಪರ್ ಆಗಿದ್ದು ನಂತರ ಮುಂಬೈಗೆ ಹೋದವರು. ಗುರುದತ್ತ್ ದಕ್ಷಿಣ ಕನ್ನಡ ಜಿಲ್ಲೆಯವರು.. ನೀವು ಹೇಳಿರುವ ರೆಹಮಾನ್ ಇವರಿಗಿಂತ ಮುಂಚಿತವಾಗಿ ಕೆ.ಬಾಲಚಂದರ್, ಕಮಲ್ ಹಾಸನ್, ರಜನಿ, ಕನ್ನಡದ ಪುಟ್ಟಣ್ಣ ಕಣಗಾಲ್ ಎಲ್ಲರೂ ಹಿಂದಿ ಚಿತ್ರರಂಗಕ್ಕೆ ಹೋಗಿ ಬಂದವರಾಗಿದ್ದಾರೆ. ಆದರೆ ಅವರಿಗೆ ಮಣೆಹಾಕಲಿಲ್ಲ.. ಈಗ ಹಿಂದಿ ಚಿತ್ರರಂಗ ವಿಶ್ವ ವ್ಯಾಪಿ ಹರಡಿಕೊಂಡಿರುವುದರಿಂದ ರೆಹಮಾನ್ ಪ್ರಭುದೇವ, ರಸೂಲ್ ಪೂಕುಟ್ಟಿಗೆ ಮಣೆ ಹಾಕಿದೆ. ಇದು ನಿಮ್ಮ ಗಮನಕ್ಕಿರಲಿ. ನಾನು 32 ವರ್ಷ ಪತ್ರಿಕೋದ್ಯದಲ್ಲಿ ಮಣ್ಣು ಹೊತ್ತವನು. ಇತಿಹಾಸದ ಪ್ರಜ್ಞೆ ಇಲ್ಲದೆ ಏನನ್ನೂ ಬರೆಯುವುದಿಲ್ಲ.

    Reply
    1. ವಿಜಯ್

      >>ಹುಬ್ಬಳ್ಳಿ ಡೆಕ್ಕನ್ ಡಾಕೀಸ್ ನಲ್ಲಿ ಗೇಟ್ ಕೀಪರ್ ಆಗಿದ್ದು ನಂತರ ಮುಂಬೈಗೆ ಹೋದವರು. ಗುರುದತ್ತ್ ದಕ್ಷಿಣ ಕನ್ನಡ ಜಿಲ್ಲೆಯವರು <>ಕೆ.ಬಾಲಚಂದರ್, ಕಮಲ್ ಹಾಸನ್, ರಜನಿ, ಕನ್ನಡದ ಪುಟ್ಟಣ್ಣ ಕಣಗಾಲ್ ಎಲ್ಲರೂ ಹಿಂದಿ ಚಿತ್ರರಂಗಕ್ಕೆ ಹೋಗಿ ಬಂದವರಾಗಿದ್ದಾರೆ. ಆದರೆ ಅವರಿಗೆ ಮಣೆಹಾಕಲಿಲ್ಲ<>ಈಗ ಹಿಂದಿ ಚಿತ್ರರಂಗ ವಿಶ್ವ ವ್ಯಾಪಿ ಹರಡಿಕೊಂಡಿರುವುದರಿಂದ ರೆಹಮಾನ್ ಪ್ರಭುದೇವ, ರಸೂಲ್ ಪೂಕುಟ್ಟಿಗೆ ಮಣೆ ಹಾಕಿದೆ.<>ಇದು ನಿಮ್ಮ ಗಮನಕ್ಕಿರಲಿ. ನಾನು 32 ವರ್ಷ ಪತ್ರಿಕೋದ್ಯದಲ್ಲಿ ಮಣ್ಣು ಹೊತ್ತವನು. ಇತಿಹಾಸದ ಪ್ರಜ್ಞೆ ಇಲ್ಲದೆ ಏನನ್ನೂ ಬರೆಯುವುದಿಲ್ಲ.<<
      ಈ ವಾಕ್ಯದ ಅವಶ್ಯಕತೆ ಇರಲಿಲ್ಲ. ಇದು ನಾನು ಏನೇ ಬರೆದರೂ ನನ್ನ ಅನುಭವ ನೋಡಿ ನೀವು ಒಪ್ಪಿಕೊಳ್ಳಬೇಕು ಎನ್ನುವಂತಿದೆ. ಈಗಿನ ಕಾಲಕ್ಕೆ ಇದು ಹೊಂದುವುದಿಲ್ಲ. ನಿಮಗೆ ಗೊತ್ತಿರುವಷ್ಟು ಅಲ್ಲವಾದರೂ ನನಗೂ ತಕ್ಕ ಮಟ್ಟಿಗೆ ನಮ್ಮ ದೇಶದ ಎಲ್ಲ ಆಗು ಹೋಗುಗಳ ಬಗ್ಗೆ ಜ್ಞಾನವಿದೆ.

      Reply
  3. jagadishkoppa

    ವಿಜಯ್ ಮೊದಲು ನಾನು ಬರೆದಿರುವ ” ದಕ್ಷಿಣ ಭಾರತದ ನಾಯಕರನ್ನು ಮತ್ತು ತಂತ್ರಜ್ಞರನ್ನು ಒಪ್ಪಿಕೊಂಡಿದ್ದು ಕಡಿಮೆ ” ಎಂಬ ವಾಖ್ಯದ ಅರ್ಥವನ್ನು ಗ್ರಹಿಸಿ. ೆರಡನೇಯದಾಗಿ ಉತ್ತರದ ನಾಯಕರನ್ನು ದಕ್ಷಿಣ ಭಾರತ ೊಪ್ಪಿಕೊಂಡಿದೆಯಾ? ಎಂಬ ಅಸಂಬದ್ಧ ಪ್ರಶ್ನೆ ಕೇಳುವ ಮುನ್ನ ಒಂದು ಹಿಂದಿ ಚಿತ್ರ ದಕ್ಷಿಣ ಭಾರತದಲ್ಲಿ ಪ್ರತಿ ರಾಜ್ಯಕ್ಕೆ ಎಷ್ಟು ಕೋಟಿ ರೂಪಾಯಿಗಳಿಗೆ ಮಾರಾಟವಾಗುತ್ತಿದೆ ಎಂಬುದನ್ನು ಬೆಂಗಳೂರಿನ ಹಂಚಿಕೆದಾರರ ಬಳಿ ಕೇಳಿ ತಿಳಿದುಕೊಳ್ಳಿ.ದಕ್ಷಿಣ ಭಾರತದ ಚಿತ್ರಗಳು ಅಷ್ಟು ಮೊತ್ತದಲ್ಲಿ ಹಿಂದಿಗೆ ಮಾರಾಟವಾದ ದಾಖಲೆಗಳಿದ್ದರೆ ತಿಳಿಸಿ. ನೀವು ಹೇಳುವ ಮಣಿರತ್ನಂ ರವರ ಬಾಂಬೆ ಹಿಂದಿ ಚಿತ್ರಕ್ಕೆ ಬಂಡವಾಳ ಹೂಡಿದ್ದು ಸ್ವತಃ ಅವರ ಸಹೋದರ. 1981ರಲ್ಲಿ ಬಾಲಚಂದರ್ ಮರೋಚರಿತ್ರ ಎಂಬ ತೆಲುಗು ಚಿತ್ರವನ್ನು ಹಿಂದಿಯಲ್ಲಿ ಏಕ್ ದುಜೆಕೆ ಲಿಯೆ ಎಂಬ ಹೆಸರಿನಲ್ಲಿ ನಿರ್ಮಿಸಿದಾಗ ಹಣ ತೊಡಗಿಸಿದ್ದು, ಎಲ್.ವಿ. ಪ್ರಸಾದ್,( ದಕ್ಷಿಣ ಭಾರತದ ಹೆಸರಾಂತ ನಿರ್ಮಾಪಕ) ರೆಹಮಾನ್ ಬಾಂಬೆ ಚಿತ್ರದಮೂಲಕ, ರಸೂಲ್ ಆಸ್ಕರ್ ಪ್ರಶಸ್ತಿ ವಿಜೇತ ಇಂಗ್ಲೀಷ್ ಚಿತ್ರ “ಸ್ಲಂ ಡಾಗ್ ಮಿಲೇನಿಯರ್ ಮೂಲಕ ಹೆಸರು ಮಾಡಿದ ನಂತರ ಹಿಂದಿ ಚಿತ್ರ ರಂಗ ಇತ್ತೀಚೆಗಿನ ದಿನಗಳಲ್ಲಿ ಅವರನ್ನು ಪರಿಗಣಿಸುತ್ತಿದೆ. ಅದೇ ರೀತಿ ಹಲವಾರು ತೆಲಗು ಮತ್ತು ತಮಿಳು ಚಿತ್ರಗಳು ಹಿಂದಿಗೆ ರಿಮೇಕ್ ಆಗುತ್ತಿರುವುದರಿಂದ ಹಾಡು, ನೃತ್ಯಕ್ಕೆ ಪ್ರಭುದೇವನನ್ನು ಪರಿಗಣಿಸಲಾಗುತ್ತಿದೆ. ಏಕೆಂದರೆ, ಮೂಲ ಚಿತ್ರಗಳಲ್ಲಿ ಆತನೇ ನೃತ್ಯ ನಿರ್ದೇಶಕ. ನಾನು ಲೇಖನದಲ್ಲಿ ಬರೆದಿರುವ ಸಂಗತಿ 20 ವರ್ಷಗಳ ಹಿಂದೆ ವರ್ಮಾ ಹಿಂದಿ
    ಚಿತ್ರರಂಗ ಪ್ರವೇಶಿಸಿದಾಗ ಇದ್ದ ಪರಿಸ್ಥಿತಿಯನ್ನು ಮಾತ್ರ. ಮೊದಲು ಲೇಖನದ ಮೂಲ ಸಾರವನ್ನು ಗ್ರಹಿಸಿ. ನಂತರ ಪ್ರತಿಕ್ರಿಯೆ ನೀಡಿ.

    Reply
    1. ಪ್ರಜೆ

      ಹುಬ್ಬಳ್ಳಿ ಟಾಕೀಸ್​ನಲ್ಲಿ ಗೇಟ್​ ಕೀಪರ್ ಕೆಲಸ ಮಾಡಿದ್ದರು ಅಂದ ಮಾತ್ರಕ್ಕೆ ಶಾಂತಾರಾಂ ಕನ್ನಡ ಸಿನಿಮಾದಲ್ಲಿ ಕೆಲಸ ಮಾಡಿದ್ದರು ಅನ್ನಬಹುದೇ? ನನಗೆ ತಿಳಿದ ಮಟ್ಟಿಗೆ ಮೂಲತಃ ಕೊಲ್ಹಾಪುರದವರಾದ ಅವರ ಮನೆಮಾತು ಮರಾಠಿಯಾಗಿತ್ತು. ಇನ್ನು ಗುರುದತ್​ ಹುಟ್ಟಿದ್ದು ಬೆಂಗಳೂರಿನಲ್ಲಿ. ಬೆಳೆದಿದ್ದು ಬಂಗಾಳದಲ್ಲಿ. (ಅವರ ಪೂರ್ವಜರು ದಕ್ಷಿಣ ಕನ್ನಡದವರು ಅಂದ ಮಾತ್ರಕ್ಕೆ ಗುರುದತ್​ ಕನ್ನಡ ಸಿನಿಮಾದಲ್ಲಿ ಕೆಲಸ ಮಾಡಿದವರು ಅನ್ನಬಹುದೇ?)

      ದಕ್ಷಿಣ ಭಾರತದ ಕಮಲಹಾಸನ್​, ರಜನಿಕಾಂತ್​, ಚಿರಂಜೀವಿ, ವಿಷ್ಣುವರ್ಧನ್​ ಉತ್ತರದಲ್ಲಿ ಮಿಂಚೋದಕ್ಕೆ ಸಾಧ್ಯವಾಗಿಲ್ಲ. ಅದೇ ರೀತಿ ಉತ್ತರದ ನಾಯಕರನ್ನೂ ದಕ್ಷಿಣದವರು ಮೆಚ್ಚಿಕೊಂಡಿಲ್ಲ. (ಉದಾಹರಣೆಗೆ ಅನಿಲ್​ಕಪೂರ್​, ನಾಸೀರುದ್ದೀನ್​ ಶಾರನ್ನು ನೆನಪಿಸಿಕೊಳ್ಳಿ​) ಹಾಗಂತ ಪೋಷಕ ಪಾತ್ರಗಳಲ್ಲಿ ಉತ್ತರ ಮತ್ತು ದಕ್ಷಿಣ ಎರಡೂ ಕಡೆಯ ಸಮ್ಮಿಲನ ಆಗಿರೋದನ್ನ ನೋಡ್ಬಹುದು.(ಉದಾಹರಣೆಗೆ ಕೋಟಾ ಶ್ರೀನಿವಾಸರಾವ್​, ಪ್ರಕಾಶ್​ರಾಜ್​, ಓಂಪುರಿ, ಆಶಿಶ್ ವಿದ್ಯಾರ್ಥಿ…)
      ಹಾಗಾಗಿ ಈ ವಿಷಯಗಳಲ್ಲಿ ವಿಜಯ್​ ಅವರ ಅಭಿಪ್ರಾಯ ಸರಿಯಾಗಿದೆ.

      ಇಲ್ಲೊಂದು ವಿಷಯವನ್ನು ಗಮನಿಸಬೇಕು; ಹಿಂದಿ ಸಿನಿಮಾಗಳು ದಕ್ಷಿಣ ಭಾರತದಲ್ಲಿ (ಕರ್ನಾಟಕ-ಆಂಧ್ರದಲ್ಲಿ ಹೆಚ್ಚು; ತಮಿಳುನಾಡು-ಕೇರಳದಲ್ಲಿ ಕಡಿಮೆ) ಸೇಲ್​ ಆಗ್ತವೆ ಅಂದ್ರೆ ಅದಕ್ಕೆ ಕಾರಣ ಭಾಷೆ. ನಾವೆಷ್ಟೇ ನಿರಾಕರಿಸಿದರೂ ಒಂದು ಮಟ್ಟಿಗೆ ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿದೆ. ಹಾಗಾಗಿ ಆ ಭಾಷೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಜನ ದೇಶದಾದ್ಯಂತ ಇದ್ದಾರೆ. ಹಾಗಾಗಿ ಸಿನಿಮಾಗಳೂ ಮಾರಾಟವಾಗ್ತವೆ.

      ಹಿಂದಿಗಿಂತಲೂ ಒಳ್ಳೆಯ ನಟರು/ನಿರ್ದೇಶಕರು ಬಂಗಾಳಿ ಸಿನಿಮಾದಲ್ಲಿದ್ದಾರೆ. ಅವರ ಸಿನಿಮಾಗಳು ದಕ್ಷಿಣ ಭಾರತದಲ್ಲಿ ಯಾವತ್ತಾದರೂ ತೆರೆಕಂಡಿವೆಯೇ? ಪಂಜಾಬಿ, ಒರಿಯಾ, ಗುಜರಾತಿಯಂಥ ಭಾಷೆಗಳಿಗೂ ಇದನ್ನು ಅನ್ವಯಿಸಬಹುದು. ಕನ್ನಡ ಅಥವಾ ತಮಿಳಿನ ಒಂದು ಪದವೂ ಅರ್ಥವಾಗದಂಥ ಮಂದಿ ಉತ್ತರ ಭಾರತದಲ್ಲಿದ್ದಾರೆ. ಹಾಗಿರುವಾಗ ದಕ್ಷಿಣದ ಸಿನಿಮಾಗಳು ಉತ್ತರಕ್ಕೆ ಮಾರಾಟವಾಗುತ್ತವೆಯೇ ಎಂಬ ಪ್ರಶ್ನೆಯೇ ಪರಮ ಅಸಂಬದ್ಧ.

      ತಂತ್ರಜ್ಱರ ವಿಷಯಕ್ಕೆ ಬಂದ್ರೆ ವಿ.ಕೆ ಮೂರ್ತಿಯವರಂಥ ಅಪ್ಪಟ ಕನ್ನಡಿಗ ಛಾಯಾಗ್ರಾಹಕರಿಂದ ಹಿಡಿದು ಚೀತಾ ಯಜ್ಱೇಶ್​ ಶೆಟ್ಟಿಯಂಥ ಫೈಟ್​ಮಾಸ್ಟರ್​ವರೆಗೆ ಅನೇಕ ದಕ್ಷಿಣ ಭಾರತೀಯರು ಹಿಂದಿ ಚಿತ್ರರಂಗದಲ್ಲಿ ಹಿಂದಿನಿಂದಲೂ ಇದ್ದಾರೆ.

      ಕೊನೆಯದಾಗಿ `…ಹಾಡು ನೃತ್ಯಕ್ಕೆ ಪ್ರಭುದೇವನನ್ನು ಪರಿಗಣಿಸಲಾಗುತ್ತಿದೆ` ಅಂದಿದ್ದಾರೆ ಲೇಖಕರು. ಪ್ರಭುದೇವ ನೃತ್ಯನಿರ್ದೇಶನದಿಂದ ಸಿನಿಮಾ ನಿರ್ದೇಶಕನ ಪಟ್ಟಕ್ಕೆ ಬಡ್ತಿ ಪಡೆದು ಆಗಲೇ ಎಂಟು
      ವರ್ಷಗಳಾಗಿವೆ. (ಹಿಂದಿಯ ವಾಂಟೆಡ್​, ರೌಡಿ ರಾಥೋಡ್​ ಸಿನಿಮಾಗಳು ಈತನ ನಿರ್ದೇಶನದವು). ಈ ವಿಷಯ ಪ್ರಖಂಡ ಪತ್ರಕರ್ತರ ಗಮನಕ್ಕೆ ಬಾರದೇ ಇದ್ದುದು ವಿಷಾದದ ಸಂಗತಿ!

      Reply
      1. jagadishkoppa

        ಸ್ವಾಮಿ ಪ್ರಜೆಗಳೇ ಪ್ರಭುದೇವ, ನೀ ವಸ್ತಾನುಂಟೆ ನಾ ವದ್ದುಂಟುವಾ ಎಂಬ ತೆಲಗು ಚಿತ್ರರಂಗದ ,ೂಲಕ ನಿರ್ದೇಶಕನಾದ ಸಂಗತಿ ನನಗೂ ಗೊತ್ತು. ಮೊದಲು ನಿಮ್ಮ ಹೆಸರನ್ನು ಬಹಿರಂಗಗೊಳಿಸುವ ಬುದ್ಧಿಯನ್ನು ಕಲಿಯಿರಿ. ಇಂತಹ ಮುಖಹೇಡಿ ಪ್ರತಿಕ್ರಿಯೆ ಬೇಡ.

        Reply
        1. jagadishkoppa

          ಗುರುದತ್ತನ ಬಹುತೇಕ ಸಿನಿಮಾಗಳಿಗೆ ವಿ.ಕೆ. ಮೂರ್ತಿ ಛಾಯಾ ಚಿತ್ರಗ್ರಾಹಕ ನಾದ ವಿಷಯ ತಿಳಿಯದ ಮೂರ್ಖನಲ್ಲ ನಾನು. ನೀವೆಲ್ಲಾ ಮೊದಲು,” ಅವಕಾಶ ಸಿಕ್ಕಿದ್ದು ಬಹುತೇಕ ಕಡಿಮೆ” ಎಂದರೇ ಏನರ್ಥ ಎಂಬುದರ ಬಗ್ಗೆ ಮೊದಲು ತಿಳಿಯಿರಿ.

          Reply
          1. ಪ್ರಜೆ

            ಮಹಾನುಭಾವರೇ,
            ನೀವು ಮಂಡಿಸಿರುವ ವಿಷಯಕ್ಕೆ ಬೇರೆ ಆಯಾಮಗಳೂ ಇವೆ ಅನ್ನೋದನ್ನ ವರ್ತಮಾನ ಓದುಗರ ಗಮನಕ್ಕೆ ತರೋದು ನನ್ನ ಉದ್ದೇಶವಾಗಿತ್ತೇ ವಿನಾ ನಿಮ್ಮ ತಿಳುವಳಿಕೆ ಬಗ್ಗೆ ಬೊಟ್ಟು ಮಾಡುವುದಾಗಿರಲಿಲ್ಲ.
            ಹಾಗಾಗಿ `ನನಗೆಲ್ಲ ಗೊತ್ತು’,`ನಾನು ಮೂರ್ಖನಲ್ಲ’ ಇತ್ಯಾದಿ ಹೇಳಿಕೆಗಳ ಮೂಲಕ ತಾವು ಮೈ ಪರಚಿಕೊಳ್ಳುವ ಅಗತ್ಯವಿರ್ಲಿಲ್ಲ.

            ಮತ್ತೆ ಪ್ರತಿಕ್ರಿಯಿಸಬೇಕಾದ ಅಗತ್ಯ ಬಂದಿದ್ದು ಈ ಕಾರಣಕ್ಕೆ.
            ನಿಮ್ಮ ಪ್ರತಿಕ್ರಿಯೆ 1ರಲ್ಲಿ ಹೀಗೆ ಹೇಳಿದ್ದೀರಿ: ”…ಅದೇ ರೀತಿ ಹಲವಾರು ತೆಲಗು ಮತ್ತು ತಮಿಳು ಚಿತ್ರಗಳು ಹಿಂದಿಗೆ ರಿಮೇಕ್ ಆಗುತ್ತಿರುವುದರಿಂದ ಹಾಡು, ನೃತ್ಯಕ್ಕೆ ಪ್ರಭುದೇವನನ್ನು ಪರಿಗಣಿಸಲಾಗುತ್ತಿದೆ. ಏಕೆಂದರೆ, ಮೂಲ ಚಿತ್ರಗಳಲ್ಲಿ ಆತನೇ ನೃತ್ಯ ನಿರ್ದೇಶಕ.”

            ನಿಮ್ಮ ಪ್ರತಿಕ್ರಿಯೆ 2 ರಲ್ಲಿ ಅದು ಹೀಗಿದೆ: ” ಪ್ರಭುದೇವ, ನೀ ವಸ್ತಾನುಂಟೆ ನಾ ವದ್ದುಂಟುವಾ ಎಂಬ ತೆಲಗು ಚಿತ್ರರಂಗದ ,ೂಲಕ ನಿರ್ದೇಶಕನಾದ ಸಂಗತಿ ನನಗೂ ಗೊತ್ತು.” ಇದನ್ನು ಹೇಗೆ ಅಥರ್ೈಸಿಕೊಳ್ಳಬೇಕು?

            ಎರಡನೇದಾಗಿ ನನ್ನ ಹೆಸರು ಕೇಳಿದ್ದೀರಿ;
            ಲೇಖನಗಳಿಗೆ ಪ್ರತಿಕ್ರಿಯಿಸುವಾಗ ಯಾವುದೇ ಸಿದ್ಧಾಂತ, ಧರ್ಮಗಳ ಕಟ್ಟುಪಾಡಿಗೆ ಸಿಕ್ಕಿಕೊಳ್ಳಬಾರದು/ ಸಿಕ್ಕಿಹಾಕಿಕೊಂಡಿಲ್ಲ ಅನ್ನೋದನ್ನ ಸಾಂಕೇತಿಕವಾಗಿ ಪ್ರಜೆ (ಕಾಮನ್ ಮ್ಯಾನ್) ಹೆಸರು ಬಳಸುವ ಮೂಲಕ ಬಿಂಬಿಸಿದ್ದೇನೆ; ಮುಖೇಡಿತನದಿಂದಲ್ಲ.
            ನನ್ನ ಹೆಸರು ರವಿ. ವೃತ್ತಿಯಿಂದ ಪತ್ರಕರ್ತ. ನಿಮ್ಮ ಸವರ್ೀಸಿಗಾದಷ್ಟು ವಯಸ್ಸು ನನ್ನದು. ಬೆಂಗಳೂರಿನ ಶ್ರೀನಗರದ ಪುಟ್ಟ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಎಂಟು ವರ್ಷಗಳ ವೃತ್ತಿಜೀವನದಲ್ಲಿ ಐದಾರು ಮಂದಿ ಖ್ಯಾತ ಪತ್ರಕರ್ತರ ಕೈಕೆಳಗೆ ಕೆಲಸ ಮಾಡಿದ್ದೇನೆ. ಈವರೆಗೆ ಯಾರೂ ನಿಮ್ಮಷ್ಟು ಧಾಷ್ಟ್ರ್ಯದಿಂದ ವತರ್ಿಸಿಲ್ಲ.

            ಇಷ್ಟಕ್ಕೂ ಒಂದು ಸಂವಾದ ಅಥವಾ ಚಚರ್ೆ, ಪಾಲ್ಗೊಂಡ ಇಬ್ಬರ ತಿಳುವಳಿಕೆಯನ್ನೂ ಹೆಚ್ಚಿಸುವ ಹಾಗಿರಬೇಕು. ನಿಮ್ಮ ವಾದಕ್ಕೆ ಪೂರಕವಾದ ಮಾಹಿತಿಗಳನ್ನು ಮಂಡಿಸಿದರೆ ನನ್ನಂಥ ಪಾಮರನ ಅರಿವೂ ಹೆಚ್ಚುತ್ತೆ. ಅದು ಬಿಟ್ಟು `ನಾನೊಬ್ಬ ಸರ್ವಜ್ಞ. ಹೇಳಿದ್ದನ್ನು ಸುಮ್ಮನೆ ಒಪ್ಪಿಕೋ’ ಅನ್ನುವ ಹಿಟ್ಲರ್ ಧೋರಣೆ ತೋರಿದರೆ ಅದರಿಂದ ಕೇವಲ ರೇಜಿಗೆಯಷ್ಟೇ ಹೆಚ್ಚೀತು. ಇಷ್ಟಕ್ಕೂ ನಿಮಗೆ ಬೇರೆಯವರ ಮಾತು ಕೇಳುವ ವ್ಯವಧಾನ ಇಲ್ಲ ಅನ್ನೋದನ್ನ ನಿಮ್ಮ ಪ್ರತಿಕ್ರಿಯೆಗಳ ಮೂಲಕ ಸ್ಪಷ್ಟಪಡಿಸಿದ್ದೀರಿ. ಇನ್ನು ಪ್ರತಿಕ್ರಿಯಿಸುವುದಿಲ್ಲ. ಧನ್ಯವಾದಗಳು.

  4. ವಿಜಯ್

    ಮೇಲಿನ ಪ್ರತಿಕ್ರಿಯೆ ಸರಿಯಾಗಿ ಪ್ರಕಟವಾಗಿಲ್ಲ. ಮತ್ತೊಮ್ಮೆ ಇಲ್ಲಿ ಕೆಳಗೆ ಹಾಕುತ್ತಿದ್ದೇನೆ.
    >>ಹುಬ್ಬಳ್ಳಿ ಡೆಕ್ಕನ್ ಡಾಕೀಸ್ ನಲ್ಲಿ ಗೇಟ್ ಕೀಪರ್ ಆಗಿದ್ದು ನಂತರ ಮುಂಬೈಗೆ ಹೋದವರು. ಗುರುದತ್ತ್ ದಕ್ಷಿಣ ಕನ್ನಡ ಜಿಲ್ಲೆಯವರು <>ಕೆ.ಬಾಲಚಂದರ್, ಕಮಲ್ ಹಾಸನ್, ರಜನಿ, ಕನ್ನಡದ ಪುಟ್ಟಣ್ಣ ಕಣಗಾಲ್ ಎಲ್ಲರೂ ಹಿಂದಿ ಚಿತ್ರರಂಗಕ್ಕೆ ಹೋಗಿ ಬಂದವರಾಗಿದ್ದಾರೆ. ಆದರೆ ಅವರಿಗೆ ಮಣೆಹಾಕಲಿಲ್ಲ<<
    ಭಾಷೆ ಬರದ ನಾಯಕ ನಟರನ್ನು ಯಾವುದೇ ಚಿತ್ರರಂಗ ಸುಲಭವಾಗಿ ಬಿಟ್ಟು ಕೊಳ್ಳುವುದಿಲ್ಲ. ಎಲ್ಲ ಕಡೆ ನಾಯಕಿರನ್ನು ಆಮದು ಮಾಡಿಕೊಳ್ಳುತ್ತಾರೆಯೆ ಹೊರತು ನಾಯಕರನ್ನಲ್ಲ. ಇದು ಪುರುಷ ಕೇಂದ್ರಿತ ಸಮಾಜದ ಸಿಂಪಲ್ ಲಾಜಿಕ್. ಪುಟ್ಟಣ್ಣ ಕಣಗಾಲ್, ಕೆ ಬಾಲಚಂದರ್ ಹಿಂದಿ ಚಿತ್ರರಂಗಕ್ಕೆ ಹೋಗಿ ಮಾಡುವುದೇನಿತ್ತು? ಹಿಂದಿ ಚಿತ್ರರಂಗವಿರುವುದೇ ಉತ್ತರವರನ್ನು ಮನರಂಜಿಸಲು. ಚಿತ್ರ ಕಥೆಗಳೆಲ್ಲ ಉತ್ತರದವೆ. ಹೀಗಿರುವಾಗ ಇಲ್ಲಿಯ ಮಣ್ಣಿನ ಮಕ್ಕಳಾದ ಪುಟ್ಟಣ್ಣ ಕಣಗಾಲ್, ಕೆ ಬಾಲಚಂದರ್ ರಿಂದ ಅವಕ್ಕೆ ನ್ಯಾಯ ಸಲ್ಲಿಸಲು ಆಗುತ್ತಿತ್ತೆ?. ಮುಂಬಯಿಯ ವಾತಾವರಣಕ್ಕೆ ಒಗ್ಗಿದ ಶ್ಯಾಮ್ ಬೆನೆಗಲ್ ಸಫಲರಾದರೊ ಇಲ್ಲವೊ? ಕನ್ನಡ, ತಮಿಳು, ತೆಲಗು ಚಿತ್ರರಂಗಗಳ ಕೊಡು-ಕೊಳ್ಳುವಿಕೆ ಬೇರೆ. ಹಿಂದಿ ಚಿತ್ರರಂಗಕ್ಕೆ ಹೋಗುವುದು ಬೇರೆ.

    Reply
  5. ವಿಜಯ್

    >>ಈಗ ಹಿಂದಿ ಚಿತ್ರರಂಗ ವಿಶ್ವ ವ್ಯಾಪಿ ಹರಡಿಕೊಂಡಿರುವುದರಿಂದ ರೆಹಮಾನ್ ಪ್ರಭುದೇವ, ರಸೂಲ್ ಪೂಕುಟ್ಟಿಗೆ ಮಣೆ ಹಾಕಿದೆ.<>ಇದು ನಿಮ್ಮ ಗಮನಕ್ಕಿರಲಿ. ನಾನು 32 ವರ್ಷ ಪತ್ರಿಕೋದ್ಯದಲ್ಲಿ ಮಣ್ಣು ಹೊತ್ತವನು. ಇತಿಹಾಸದ ಪ್ರಜ್ಞೆ ಇಲ್ಲದೆ ಏನನ್ನೂ ಬರೆಯುವುದಿಲ್ಲ.<<
    ಈ ವಾಕ್ಯದ ಅವಶ್ಯಕತೆ ಇರಲಿಲ್ಲ. ಇದು ನಾನು ಏನೇ ಬರೆದರೂ ನನ್ನ ಅನುಭವ ನೋಡಿ ನೀವು ಒಪ್ಪಿಕೊಳ್ಳಬೇಕು ಎನ್ನುವಂತಿದೆ. ಈಗಿನ ಕಾಲಕ್ಕೆ ಇದು ಹೊಂದುವುದಿಲ್ಲ. ನಿಮಗೆ ಗೊತ್ತಿರುವಷ್ಟು ಅಲ್ಲವಾದರೂ ನನಗೂ ತಕ್ಕ ಮಟ್ಟಿಗೆ ನಮ್ಮ ದೇಶದ ಎಲ್ಲ ಆಗು ಹೋಗುಗಳ ಬಗ್ಗೆ ಜ್ಞಾನವಿದೆ

    Reply
  6. ವಿಜಯ್

    ನಿಮ್ಮ ದಕ್ಷಿಣದ ನಾಯಕರನ್ನು ಹಿಂದಿ ಚಿತ್ರ ಒಪ್ಪಿಕೊಂಡಿದೆಯೆ ಎಂಬ ಪ್ರಶ್ನೆ ಎಷ್ಟು ಅಸಂಬದ್ಧವಾದದ್ದು ಎಂದು ತೋರಿಸಲು ನಾನು ಬಳಸಿದ್ದು ಉತ್ತರದ ನಾಯಕನ್ನು ದಕ್ಷಿಣ ಅಪ್ಪಿಕೊಂಡಿದೆಯೆ ಎಂದು. ಉಳಿದ ಉತ್ತರ ಮೇಲಿನ ಪ್ರತಿಕ್ರಿಯೆಯಲ್ಲಿದೆ.

    ‘ಬೆಂಗಳೂರಿನ ಹಂಚಿಕೆದಾರರ ಬಳಿ ಕೇಳಿ ತಿಳಿದುಕೊಳ್ಳಿ.ದಕ್ಷಿಣ ಭಾರತದ ಚಿತ್ರಗಳು ಅಷ್ಟು ಮೊತ್ತದಲ್ಲಿ ಹಿಂದಿಗೆ ಮಾರಾಟವಾದ ದಾಖಲೆಗಳಿದ್ದರೆ ತಿಳಿಸಿ.’
    ಉತ್ತರದ ರಾಜ್ಯಗಳಲ್ಲೆಕೆ ಜೋಳದ ರೊಟ್ಟಿ ಖಾನಾವಳಿಗಳಿಲ್ಲ, ಇಲ್ಲೇಕೆ ನಾರ್ಥ ಇಂಡಿಯನ್ ಊಟ ಸಿಗುವ ಹೊಟೆಲ್ ಗಳು ಸಾಕಷ್ಟಿವೆ ಎಂದ ಹಾಗಾಯಿತು. ಯಾವುದಕ್ಕೆ ಗ್ರಾಹಕರು ಹೆಚ್ಚಿರುತ್ತಾರೊ, ಮಾರುಕಟ್ಟೆ ಇದೆಯೋ ಅವಕ್ಕೆ ಬೇಡಿಕೆ ಹೆಚ್ಚು.

    Reply
  7. ವಿಜಯ್

    ಮಣಿರತ್ನಂ, ಬಾಲಚಂದರ ಚಿತ್ರ ನಿರ್ಮಿಸಿದ್ದು ದ.ಭಾರತದ ನಿರ್ಮಾಪಕರು ಎಂಬುದು ಇಲ್ಲಿ ಮುಖ್ಯವೆ? ನಿರ್ಮಾಪಕನಿಗೆ ಚಿತ್ರ ಉಳಿದೆಲ್ಲ ಉದ್ಯಮದಂತೆ ಒಂದು ಉದ್ಯಮ. ಮಾರುಕಟ್ಟೆ ಇದೆ, ಹಣ ಸಂಪಾದಿಸಬಹುದು ಎಂಬ ಭರವಸೆ ಇದ್ದರೆ ದಕ್ಷಿಣದ ನಿರ್ಮಾಪಕ ಆಸ್ಸಾಮಿ ಚಿತ್ರವನ್ನು ಬೇಕಾದರೂ ಮಾಡುತ್ತಾನೆ. ಜಿತೇಂದ್ರ ಮಾಡಿದ ಸಾಕಷ್ಡು ಹಿಟ್ ಮೂವಿಗಳ ನಿರ್ಮಾಪಕರು, ನಿರ್ದೇಶಕರು ಆಂದ್ರದವರು.

    ಇಪ್ಪತ್ತು ವರ್ಷದ ಈಚೆಗೆ ಆದದ್ದು ಜಾಗತಿಕರಣ ಮತ್ತು ತಂತ್ತಜ್ಞಾನದ ಪ್ರಭಾವ. ರಾಮಗೋಪಾಲ ವರ್ಮನ ಹಿಂದಿ ಸಿನೇಮಾ ಪಯಣವನ್ನು ಕೆ.ಬಾಲಚಂದರ, ಪುಟ್ಟಣ್ಣ ಕಣಗಾಲ್ ಪಯಣಕ್ಕೆ ಹೋಲಿಸಲಾಗದು. ಹೋಲಿಸಿದರೆ ಅದು ಆಗಿನ ಪಿ.ಬಿ ಶ್ರೀನಿವಾಸ್ ಅಸಫಲ ಹಿಂದಿ ಪಯಣವನ್ನು ಈಗಿನ ಶಂಕರ ಮಹಾದೇವನ್ ಸಫಲ ಪಯಣಕ್ಕೆ ಹೋಲಿಸಿದಂತಿರುತ್ತದೆ!.

    Reply
  8. ವಿಜಯ್

    ದೊಡ್ಡ ಪ್ರತಿಕ್ರಿಯೆಗಳು ಸರಿಯಾಗಿ ಪ್ರಕಟವಾಗುತ್ತಿಲ್ಲ. ಮಾಡರೆಟರ್ ದಯವಿಟ್ಟು ಪರಿಶಿಲಿಸಿ.

    ‘ಹುಬ್ಬಳ್ಳಿ ಡೆಕ್ಕನ್ ಡಾಕೀಸ್ ನಲ್ಲಿ ಗೇಟ್ ಕೀಪರ್ ಆಗಿದ್ದು ನಂತರ ಮುಂಬೈಗೆ ಹೋದವರು. ಗುರುದತ್ತ್ ದಕ್ಷಿಣ ಕನ್ನಡ ಜಿಲ್ಲೆಯವರು ‘
    ಇದು ನನಗೂ ಗೊತ್ತು. ನಾನು ಹೇಳಿದ್ದು ‘ಗುರುದತ್, ಶಾಂತಾರಾಂ ಇಲ್ಲಿದ್ದು ಅಲ್ಲಿಗೆ ಹೋದವರಲ್ಲ. ಅಲ್ಲಿಯೇ ಪ್ರಾರಂಭ ಮಾಡಿ ನಂತರ ಬೆಳೆದವರು.’ ಎಂದು. ಅಂದರೆ ಇವರು ಇಲ್ಲಿಯ ಕನ್ನಡ ಚಿತ್ರರಂಗದಲ್ಲಿದ್ದು ಅಲ್ಲಿಗೆ ಹೋದವರಲ್ಲ, ಕನ್ನಡದಲ್ಲಿ ನಾಯಕರಾಗಿದ್ದವರಲ್ಲ, ಮುಂಬಯಿ ಚಿತ್ರರಂಗದಲ್ಲೇ ಬೆಳವಣಿಗೆ ಕಂಡವರು ಅಂತ. ಇದನ್ನು ಐಶ್ವರ್ಯ ರೈ , ಶಿಲ್ಪಾ ಶೆಟ್ಟಿ, ರೋಹಿತ ಶೆಟ್ಟಿ, ಸುನೀಲ್ ಶೆಟ್ಟಿ ಬೆಳವಣಿಗೆಗೆ ಹೋಲಿಸಬಹುದು.

    ‘ಈಗ ಹಿಂದಿ ಚಿತ್ರರಂಗ ವಿಶ್ವ ವ್ಯಾಪಿ ಹರಡಿಕೊಂಡಿರುವುದರಿಂದ ರೆಹಮಾನ್ ಪ್ರಭುದೇವ, ರಸೂಲ್ ಪೂಕುಟ್ಟಿಗೆ ಮಣೆ ಹಾಕಿದೆ.’
    ಇನ್ನೂ ಸಾಕಷ್ಟು ಜನ ದಕ್ಷಿಣ ಭಾರತೀಯ ಟೆಕ್ನಿಶಿಯನ್ಸ್ ಹಿಂದಿ ಚಿತ್ರರಂಗದಲ್ಲಿದ್ದಾರೆ. ನಾನು ಕೊಟ್ಟಿದ್ದು ವಿಖ್ಯಾತರಾದ ಕೆಲವರ ಹೆಸರುಗಳನ್ನಷ್ಟ, ನೀವು ಹಿಂದಿ ಚಿತ್ರರಂಗ ದಕ್ಷಿಣದವರಿಗೆ ಮಣೆ ಹಾಕಲಿಲ್ಲ ಎಂದಿದ್ದಕ್ಕೆ.

    Reply
  9. ವಿಜಯ್

    ‘ಕೆ.ಬಾಲಚಂದರ್, ಕಮಲ್ ಹಾಸನ್, ರಜನಿ, ಕನ್ನಡದ ಪುಟ್ಟಣ್ಣ ಕಣಗಾಲ್ ಎಲ್ಲರೂ ಹಿಂದಿ ಚಿತ್ರರಂಗಕ್ಕೆ ಹೋಗಿ ಬಂದವರಾಗಿದ್ದಾರೆ. ಆದರೆ ಅವರಿಗೆ ಮಣೆಹಾಕಲಿಲ್ಲ’

    ಭಾಷೆ ಬರದ ನಾಯಕ ನಟರನ್ನು ಯಾವುದೇ ಚಿತ್ರರಂಗ ಸುಲಭವಾಗಿ ಬಿಟ್ಟು ಕೊಳ್ಳುವುದಿಲ್ಲ. ಎಲ್ಲ ಕಡೆ ನಾಯಕಿರನ್ನು ಆಮದು ಮಾಡಿಕೊಳ್ಳುತ್ತಾರೆಯೆ ಹೊರತು ನಾಯಕರನ್ನಲ್ಲ. ಇದು ಪುರುಷ ಕೇಂದ್ರಿತ ಸಮಾಜದ ಸಿಂಪಲ್ ಲಾಜಿಕ್. ಪುಟ್ಟಣ್ಣ ಕಣಗಾಲ್, ಕೆ ಬಾಲಚಂದರ್ ಹಿಂದಿ ಚಿತ್ರರಂಗಕ್ಕೆ ಹೋಗಿ ಮಾಡುವುದೇನಿತ್ತು? ಹಿಂದಿ ಚಿತ್ರರಂಗವಿರುವುದೇ ಉತ್ತರವರನ್ನು ಮನರಂಜಿಸಲು. ಚಿತ್ರ ಕಥೆಗಳೆಲ್ಲ ಉತ್ತರದವೆ. ಹೀಗಿರುವಾಗ ಇಲ್ಲಿಯ ಮಣ್ಣಿನ ಮಕ್ಕಳಾದ ಪುಟ್ಟಣ್ಣ ಕಣಗಾಲ್, ಕೆ ಬಾಲಚಂದರ್ ರಿಂದ ಅವಕ್ಕೆ ನ್ಯಾಯ ಸಲ್ಲಿಸಲು ಆಗುತ್ತಿತ್ತೆ?. ಮುಂಬಯಿಯ ವಾತಾವರಣಕ್ಕೆ ಒಗ್ಗಿದ ಶ್ಯಾಮ್ ಬೆನೆಗಲ್ ಸಫಲರಾದರೊ ಇಲ್ಲವೊ? ಕನ್ನಡ, ತಮಿಳು, ತೆಲಗು ಚಿತ್ರರಂಗಗಳ ಕೊಡು-ಕೊಳ್ಳುವಿಕೆ ಬೇರೆ. ಹಿಂದಿ ಚಿತ್ರರಂಗಕ್ಕೆ ಹೋಗುವುದು ಬೇರೆ.

    ‘ಇದು ನಿಮ್ಮ ಗಮನಕ್ಕಿರಲಿ. ನಾನು 32 ವರ್ಷ ಪತ್ರಿಕೋದ್ಯದಲ್ಲಿ ಮಣ್ಣು ಹೊತ್ತವನು. ಇತಿಹಾಸದ ಪ್ರಜ್ಞೆ ಇಲ್ಲದೆ ಏನನ್ನೂ ಬರೆಯುವುದಿಲ್ಲ’
    ಈ ವಾಕ್ಯದ ಅವಶ್ಯಕತೆ ಇರಲಿಲ್ಲ. ಇದು ನಾನು ಏನೇ ಬರೆದರೂ ನನ್ನ ಅನುಭವ ನೋಡಿ ನೀವು ಒಪ್ಪಿಕೊಳ್ಳಬೇಕು ಎನ್ನುವಂತಿದೆ. ಈಗಿನ ಕಾಲಕ್ಕೆ ಇದು ಹೊಂದುವುದಿಲ್ಲ. ನಿಮಗೆ ಗೊತ್ತಿರುವಷ್ಟು ಅಲ್ಲವಾದರೂ ನನಗೂ ತಕ್ಕ ಮಟ್ಟಿಗೆ ನಮ್ಮ ದೇಶದ ಎಲ್ಲ ಆಗು ಹೋಗುಗಳ ಬಗ್ಗೆ ಜ್ಞಾನವಿದೆ.

    Reply

Leave a Reply to ವಿಜಯ್ Cancel reply

Your email address will not be published. Required fields are marked *