Daily Archives: April 20, 2013

ಸಾತ್ವಿಕ ರಾಜಕಾರಣಿಯಯೊಬ್ಬನ ಸಿಟ್ಟು ಮತ್ತು ಪತನ

– ಡಾ. ಎನ್. ಜಗದಿಶ್ ಕೊಪ್ಪ

ಪ್ರಸಕ್ತ ರಾಜಕಾರಣ ಮತ್ತು ಚುನಾವಣೆಯ ಕುರಿತಂತೆ ಏನನ್ನೂ ಬರೆಯಬಾರದು ಮತ್ತು ಪ್ರತಿಕ್ರಿಯಸಬಾರದು ಎಂದು ನಾನೇ ಸ್ವತಃ ಹಾಕಿಕೊಂಡಿದ್ದ ಲಕ್ಷ್ಮಣ ರೇಖೆಯನ್ನು ದಾಟುತ್ತಿದ್ದೇನೆ. ಇದಕ್ಕೆ ಕಾರಣವಾದ ವಾದ ಅಂಶತವೆಂದರೆ, ನನ್ನ ಜಿಲ್ಲೆಯಾದ ಮಂಡ್ಯದ ಕೆ.ಆರ್, ಪೇಟೆ ಕೃಷ್ಣ ಅವರ ರಾಜಕೀಯ ನಿಲುವು ಮತ್ತು ಬಂಡಾಯ, ಪರೋಕ್ಷವಾಗಿ ಈ ಲೇಖನಕ್ಕೆ ಪ್ರೇರಣೆಯಾಗಿದೆ.

ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಕೆ.ವಿ.ಶಂಕರಗೌಡ, ಜಿ.ಮಾದೇಗೌಡ ಇವರ ನಂತರ ನೈತಿಕತೆಯ ನೆಲೆಗಟ್ಟಿನಲ್ಲಿ ಪ್ರಾಮಾಣಿಕವಾದ ರಾಜಕೀಯ ಜೀವನ  ಮಾಡಿದವರಲ್ಲಿ  ಕೃಷ್ಣ ಕೂಡ ಒಬ್ಬರು. ವೃತ್ತಿಯಲ್ಲಿ ವಕೀಲರಾಗಿದ್ದ ಕೆ.ಆರ್. ಪೇಟೆ ಕೃಷ್ಣ, ತಮ್ಮ ಸುದೀರ್ಘ ಮೂರೂವರೆ ದಶಕದ ರಾಜಕಾರಣದಲ್ಲಿ ಎರಡು ಬಾರಿ ಲೋಕಸಭಾ ಚುನಾವಣೆ ಮತ್ತು ಆರು ವಿಧಾನಸಭಾ ಚುನಾವಣೆ ಎದುರಿಸಿದವರು. ಇದರಲ್ಲಿ ಒಂದು ಬಾರಿ ಸಂಸತ್ ಸದಸ್ಯರಾಗಿ ಮತ್ತು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿದ್ದರು. ಒಮ್ಮೆ ವಿಧಾನ ಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದವರು.

ಇಂತಹ ಸುಧೀರ್ಘ ಅನುಭವವುಳ್ಳ ಕೃಷ್ಣರವರಿಗೆ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಜೆ.ಡಿ.ಎಸ್ ಪಕ್ಷ  ಟಿಕೇಟ್ ನಿರಾಕರಿಸಿದೆ. ಇದಕ್ಕೆ ಪ್ರಮುಖ ಕಾರಣ ಅವರ ಬಳಿ ಚುನಾವಣೆ ಎದುರಿಸಲು ಹಣವಿಲ್ಲ ಎಂಬುದು ಅವರ ಅನರ್ಹತೆಗೆ ಕಾರಣವಾಗಿದೆ. ಕೃಷ್ಣರವರ ಪಾಮ್ರಾಣಿಕವಾದ ಮತ್ತು  ಸರಳ ಬದುಕನ್ನು ಇಟ್ಟುಕೊಂಡು ಇಂದಿನ ರಾಜಕೀಯ ವಿದ್ಯಾಮಾನವನ್ನು ಗಮನಿಸಿದರೆ, ಒಂದರ್ಥದಲ್ಲಿ ಇಂತಹವರು ವರ್ತಮಾನದ ರಾಜಕಾರಣಕ್ಕೆ ಅಸಮರ್ಥರು ನಿಜ.

ಏಕೆಂದರೆ,  ಕೃಷ್ಣ ಲೋಕ ಸಭಾ ಸದಸ್ಯರಾಗಿದ್ದ  ಅವಧಿಯಲ್ಲಿ  ಸಂಸತ್ ಅಧಿವೇಶನ ಇಲ್ಲದ ದಿನಗಳಲ್ಲಿ  ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 5 ಗಂಟೆಯವರೆಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿದ್ದ ತಮ್ಮ ಕೊಠಡಿಯಲ್ಲಿ ಕುಳಿತು ಜನಸಾಮಾನ್ಯರ ಕಷ್ಟ ಸುಖಗಳನ್ನು ವಿಚಾರಿಸುತ್ತಿದ್ದರು. ಮಧ್ಯಾಹ್ನದ ವೇಳೆ ಯಾರಾದರೂ ಗೆಳೆಯರು ಕರೆದರೆ ಅವರ ಮನೆಗಳಿಗೆ ಹೋಗಿ ಊಟ ಮಾಡಿ ಬರುತ್ತಿದ್ದರು.  ಅವರ ಪತ್ನಿ ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ಕಾರಣ ಪ್ರತಿ ದಿನ ಮೈಸೂರಿನಿಂದ ಮಂಡ್ಯ ನಗರಕ್ಕೆ ಸರ್ಕಾರಿ ಬK.r.pete.ಸ್ ನಲ್ಲಿ ಬಂದು ಹೋಗುತ್ತಿದ್ದರು. ಒಬ್ಬ ಸಂಸತ್ ಸದಸ್ಯ ಹೀಗೂ ಇರಬಹುದಾ? ಬದುಕಬಹುದಾ? ಎಂಬ ನನ್ನ ಜಿಜ್ಞಾಸೆಗೆ ಕಾರಣವಾದವರು ಕೃಷ್ಣ.

ಕಳೆದ ಐದು ವರ್ಷದ ವರೆಗೆ ನನ್ನ ಕುಟುಂಬ ಮಂಡ್ಯ ನಗರದ ಜಿಲ್ಲಾಧಿಕಾರಿ ಕಚೇರಿಯ ಬಳಿ ವಾಸವಾಗಿದ್ದರಿಂದ ಅವರ ಬದುಕನ್ನು ಮತ್ತು ಕಾರ್ಯಚಟುವಟಿಕೆಯನ್ನು ತೀರಾ ಹತ್ತಿರದಿಂದ ನೋಡಲು ಸಾಧ್ಯವಾಯಿತು. ನನ್ನ ಮನೆಯ ಗೋಡೆಯ ಆಚೆಗಿನ ಬದಿಗಿನ ಮನೆಯಲ್ಲಿ ನನ್ನ ಸೋದರತ್ತೆಯ ಮಗ, ಬಾಲ್ಯದ ಸಹಪಾಠಿ ಹಾಗೂ ದಕ್ಷಿಣ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯನಾಗಿದ್ದ ಕೆ.ಟಿ.ಶ್ರೀಕಂಠೇಗೌಡ ವಾಸಿಸುತ್ತಿದ್ದರಿಂದ ಸಾಮಾನ್ಯವಾಗಿ ಮಧ್ಯಾಹ್ನದ ವೇಳೆಯಲ್ಲಿ ಊಟಕ್ಕೆ ಕಾಲ್ನಡಿಗೆಯಲ್ಲಿ ಅವನ ಮನೆಗೆ ಬರುತ್ತಿದ್ದರು.

ಇದೇ ಕೃಷ್ಣ ಕನರ್ಾಟಕ ವಿಧಾನಸಬೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಿನಗಳಲ್ಲಿ ತಮ್ಮ ಕುಟುಂಬ ಮೈಸೂರಿನಲ್ಲಿ ವಾಸವಾಗಿದ್ದ ಕಾರಣ, ಸ್ಪೀಕರ್ಗೆ ಮೀಸಲಿದ್ದ ಬಂಗಲೆಯನ್ನು ನಿರಾಕರಿಸಿ ಸಾಮಾನ್ಯ ಶಾಸಕನಂತೆ ಶಾಸಕರಭವನದ ಕೊಠಡಿಯಲ್ಲಿ ವಾಸವಾಗಿದ್ದರು. ಜನ ಸಾಮಾನರ್ಯ ಕಷ್ಟ ಸುಖಗಳಿಗೆ ಭಾಗಿಯಾಗುತ್ತಾ, ಎಂದೂ ಎಂಜಲು ಕಾಸಿಗೆ ಕೈಯೊಡ್ಡದೆ ಇವೋತ್ತಿಗೂ ಬಸ್ಸುಗಳಲ್ಲಿ ಓಡಾಡುವ ಕೃಷ್ಣರವರಿಗೆ ಚುನಾವಣೆ ಎದುರಿಸಲು ಹಣವಿಲ್ಲ ಎಂಬ ಏಕೈಕ ಕಾರಣಕ್ಕೆ ಕೆ.ಆರ್ ಪೇಟೆ ಕ್ಷೇತ್ರದಿಂದ ಜಾತ್ಯಾತಿತ ಜನತಾದಳ ಟಿಕೇಟ ನಿರಾಕರಿಸಲಾಗಿದೆ. ಇದನ್ನು ಹೇಗೆ ಅರ್ಥೈಸಿಕೊಳ್ಳಬೇಕು, ಅಥವಾ ಜೀರ್ಣಿಸಿಕೊಳ್ಳಬೇಕು ತಿಳಿಯುತ್ತಿಲ್ಲ. ಒಬ್ಬ ಸಾಮಾನ್ಯ ಗ್ರಾಮ ಪಂಚಾಯಿತಿ ಸದಸ್ಯ ಈ ದಿನ ಕಾರಿನಲ್ಲಿ ಓಡಾಡುವಾಗ, ಕೃಷ್ಣರವರು ಒಂದರ್ಥದಲ್ಲಿ ವರ್ತಮಾನದ ರಾಜಕೀಯಕ್ಕೆ ಖಂಡಿತಾ ಅಸಮರ್ಥರು ಎಂದು ಸಮಾಧಾನಪಟ್ಟುಕೊಳ್ಳಬೇಕೆ? ತಿಳಿಯದು.

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಕೃಷ್ಣ, ಇಂದಿನ ಹಣ ಹೆಂಡದ ರಾಜಕೀಯದ ಹುಚ್ಚು ಹೊಳೆಯಲ್ಲಿ ಈಜಿ ಖಂಡಿತಾ ದಡ ಸೇರಲಾರರು. ಆದರೆ, ಅವರೊಳಗಿನ ಸಾತ್ವಿಕ ಸಿಟ್ಟನ್ನು ಮಾತ್ರ ನಾನು ಗೌರವಿಸದೆ ಇರಲಾರೆ.

ಕೊನೆಯ ಮಾತು- ಟಿಕೇಟ್ ನಿರಾಕರಿಸಿದ ಬಗ್ಗೆ ನಾನು ಜೆ.ಡಿ.ಎಸ್. ಪಕ್ಷದ ನಾಯಕರನ್ನು ವಿಚಾರಿಸಿದಾಗ, ಎಂಟು ಚುನಾವಣೆಯನ್ನು ಎದುರಿಸಿ, ಎಪ್ಪತ್ತು ವರ್ಷವಾದ ನಂತರವೂ ಕೃಷ್ಣರವರಿಗೆ  ಮತ್ತೇ ಟಿಕೇಟ್ ನೀಡಬೇಕೆ? ಎಂದು ಅವರು ಪ್ರಶ್ನಿಸಿದಾಗ ಈ ಪ್ರಶ್ನೆಗೂ ನನ್ನಲ್ಲಿ ಉತ್ತರವಿರಲಿಲ್ಲ.