Daily Archives: April 30, 2013

ಕರ್ನಾಟಕದ ಮುಂದಿನ ದಿನಗಳಿಗೆ ಮುನ್ನುಡಿ…

ಸ್ನೇಹಿತರೇ,

ಇನ್ನೊಂದೆರಡು ವಾರ, ಮತ್ತೆ ವರ್ತಮಾನ.ಕಾಮ್ ನಿಧಾನವಾಗಿ ಪ್ರತಿದಿನ ನಿಯತಕಾಲಿಕವಾಗುತ್ತದೆ ಎನ್ನುವ ವಿಶ್ವಾಸವಿದೆ.

ನಿಮಗೆ ಗೊತ್ತಿರುವಂತೆ, ನಾನು ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರಕ್ಕೆ ಲೋಕ್‌ಸತ್ತಾ ಪಕ್ಷದಿಂದ ಸ್ಪರ್ಧಿಸುತ್ತಿದ್ದೇನೆ. ಜನರ ಪ್ರತಿಕ್ರಿಯೆ ಬಹಳ ಚೆನ್ನಾಗಿದೆ. ಇಲ್ಲಿ ಕೊನೆಯ ಗಳಿಗೆಯವರೆಗೂ ಬಿಜೆಪಿ ಅಭ್ಯರ್ಥಿ ಘೋಷಣೆ ಆಗಿರಲಿಲ್ಲ. ನಿಲ್ಲಲು ಯಾರೂ ಇಲ್ಲದಂತಹ ಪರಿಸ್ಥಿತಿ ಅಲ್ಲಿತ್ತು. ಜೆಡಿಎಸ್ ಇಲ್ಲಿ ಎಂದೂ ಲೆಕ್ಕಕ್ಕಿರಲಿಲ್ಲ, ಮತ್ತು ಅಂತಹುದರಲ್ಲಿ ಈಗ ಬಂಡಾಯ ಅಭ್ಯರ್ಥಿ ಬೇರೆ ಕಣದಲ್ಲಿದ್ದಾರೆ. ಕಾಂಗ್ರೆಸ್ ನಾವೇ ಗೆಲ್ಲುತ್ತೇವೆ ಎನ್ನುವ ಅತೀವ ವಿಶ್ವಾಸದಲ್ಲಿದೆ, ಆದರೆ, ಎಲ್ಲಾ ಪಕ್ಷದ ಕಾರ್ಯಕರ್ತರಿಗೆ ಸಾಧ್ಯವಾದರೆ ನಾನು ಆಯ್ಕೆಯಾಗಲಿ ಎನ್ನುವಷ್ಟು ನನ್ನ ಬಗ್ಗೆ ಮತ್ತು ನಮ್ಮ ಪಕ್ಷದ ಬಗ್ಗೆ ಪ್ರೀತಿ, ಅಭಿಮಾನ, ಗೌರವವಿದೆ.

ಸುಮಾರು ಎರಡೂವರೆ ತಿಂಗಳಿನಿಂದ ನಾವು ಪ್ರಚಾರ ಮಾಡುತ್ತಿದ್ದೇವೆ, ಇಷ್ಟೂ ದಿನಗಳ ನಮ್ಮ ಪ್ರಚಾರಕ್ಕೆ ಇಲ್ಲಿಯವರೆಗೆ ಸುಮಾರ 5+ ಲಕ್ಷ ರೂಪಾಯಿ ಖರ್ಚಾಗಿದೆ. ಅದು ಕೇವಲ ಕರಪತ್ರಗಳ ಮುದ್ರಣಕ್ಕೆ ಮತ್ತು ಹಂಚಲು ನಮ್ಮ ಕಾರ್ಯಕರ್ತರಿಗೆ ಕೊಡಲಾಗಿರುವ ಸಂಬಳದ ಖರ್ಚು, ಅಷ್ಟೇ. ಸುಮಾರು ನಾಲ್ಕು ಲಕ್ಷ ಕರಪತ್ರಗಳನ್ನು ಹಂಚಲಾಗಿದೆ. ನಾನು ಈ ಹಿಂದೆ ಬರೆದಿದ್ದೆ: ಒಳ್ಳೆಯ ಚುನಾವಣೆ ನಡೆಸಲು ಹದಿನಾರು ಲಕ್ಷ ಸಾಕು ಎಂದು. ನಾನು ಹತ್ತು ಲಕ್ಷದ ಮಿತಿಯನ್ನೂ ದಾಟುವಂತೆ ಕಾಣುತ್ತಿಲ್ಲ. ಈ ಕ್ಷೇತ್ರದಲ್ಲಿ ಚುನಾವಣಾಧಿಕಾರಿಗಳಿಗೆ ಅಭ್ಯರ್ಥಿಗಳು Ravi-SripadBhat-Sriharshaಸಲ್ಲಿಸಿರುವ ಖರ್ಚಿನ ಲೆಕ್ಕದ ಪ್ರಕಾರ ನಾವು ಕಾಂಗ್ರೆಸ್ ಮತ್ತು ಬಿಜೆಪಿಯವರಿಗಿಂತ ಹೆಚ್ಚು ಖರ್ಚು ಮಾಡಿದ್ದೇವೆ, ನಾಮಪತ್ರ ಸಲ್ಲಿಸಿದ ದಿನದಿಂದ (ಏಪ್ರಿಲ್ 15) ತೋರಿಸಬೇಕಾದ ಲೆಕ್ಕದ ಪ್ರಕಾರ ನಮ್ಮ ಖರ್ಚು ಮೂರು ಲಕ್ಷ ದಾಟಿದ್ದರೆ, ಕಾಂಗ್ರೆಸ್ ಮತ್ತು ಬಿಜೆಪಿಯವರದು ಒಂದು ಲಕ್ಷವನ್ನೂ ದಾಟಿಲ್ಲ. ಇವರ ಲೆಕ್ಕಗಳಂತಹ ಸುಳ್ಳಿನ, ಮೋಸದ, ಅಪ್ರಾಮಾಣಿಕತೆಯ ನಡವಳಿಕೆಗಳು ನಮ್ಮಲ್ಲಿ ಆಕ್ರೋಶ ಹುಟ್ಟಿಸಬೇಕು.

ಅಂದ ಹಾಗೆ, ಇಲ್ಲಿಯವರೆಗೆ ಬಿಟಿಎಮ್ ಲೇಔಟ್ ವಿಧಾನಸಭಾ ಕ್ಷೇತ್ರದ ನಮ್ಮ ಚುನಾವಣಾ ಪ್ರಚಾರಕ್ಕೆಂದು ರೂ 4,83,902 ಹಣ ಸಂಗ್ರಹವಾಗಿದೆ. ನನ್ನ ಕಡೆಯಿಂದ 2 ಲಕ್ಷ ಹಣ ಹಾಕಿಕೊಂಡಿದ್ದೇನೆ. ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ಜನ ಈ ಪ್ರಯತ್ನಕ್ಕೆ ತಮ್ಮ ದೇಣಿಗೆ ನೀಡಿದ್ದಾರೆ. ಅವರೆಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.

ಉಳಿದಿರುವ ಈ ವಾರದ ಪ್ರಚಾರಕ್ಕೆ ಕನಿಷ್ಟ 4-5 ಲಕ್ಷ ರೂಪಾಯಿಯಾದರೂ ಬೇಕು. ಆಗ ನಾವು ಇನ್ನೂ ಪ್ರಭಾವಶಾಲಿ ಪ್ರಚಾರ ಕೈಗೊಳ್ಳಬಹುದು. ಬೆಂಬಲಿಸಬೇಕು ಎಂದು ನಿಮಗನ್ನಿಸಿದಲ್ಲಿ ದಯವಿಟ್ಟು ಮನಸ್ಸು ಮಾಡಿ ಮತ್ತು ಬೆಂಬಲಿಸಿ. ನೀವಲ್ಲದಿದ್ದರೆ ಇನ್ಯಾರು? ಈಗಲ್ಲದಿದ್ದರೆ ಇನ್ಯಾವಾಗ?

ದೇಣಿಗೆ ಕೊಟ್ಟವರ ಮತ್ತು ಹೇಗೆ ಕೊಡಬೇಕು ಎನ್ನುವ ವಿವರಗಳು ಈ ಪುಟದಲ್ಲಿವೆ: http://wp.me/P3aJQl-h

ನಮ್ಮಲ್ಲಿ ಅನೇಕ ಜನ ಸಭೆಗಳಲ್ಲಿ ಮತ್ತು ಖಾಸಗಿ ಚರ್ಚೆಗಳಲ್ಲಿ ಆದರ್ಶ, ನ್ಯಾಯ, ನೀತಿ, ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ, ಕ್ರಿಯೆಯ ಸಂದರ್ಭ ಬಂದಾಗ ಆಷಾಢಭೂತಿಗಳಾಗುತ್ತಾರೆ. ನನಗೆ ಗೊತ್ತಿರುವ ಜನರಲ್ಲಿ ಹತ್ತಕ್ಕು ಒಬ್ಬರು ಧನಸಹಾಯ ಮಾಡಿದ್ದರೂ ನಮ್ಮ ಹಣ ಸಂಗ್ರಹ ಹತ್ತು ಲಕ್ಷ ಮೀರಬೇಕಿತ್ತು. ಪ್ರಚಾರಕ್ಕೆ ಬರುತ್ತೇವೆ ಎಂದವರೆಲ್ಲ ಬಂದಿದ್ದರೆ ಇಷ್ಟೊತ್ತಿಗೆ ಈ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿತ್ತು. ವಿಚಾರ ಗೊತ್ತಿರುವವರಿಗೆ ನಾನು ಪದೇಪದೇ ನೆನಪಿಸುವುದಿಲ್ಲ ಮತ್ತು ಕೇಳುವುದಿಲ್ಲ. ಮಾಡಬೇಕು ಎನ್ನುವುದು ಅವರ ಮನದಾಳದಿಂದ ಬರಬೇಕು, ಬಲವಂತದಿಂದಾಗಲಿ, ಮುಲಾಜಿಗಾಗಲಿ ಅಲ್ಲ.

ನನಗೆ ನಾನು ಏನು ಮಾಡುತ್ತಿದ್ದೇನೆ ಮತ್ತು ಏಕೆ ಮಾಡುತ್ತಿದ್ದೇನೆ ಎನ್ನುವುದು ಸ್ಪಷ್ಟವಾಗಿರುವುದರಿಂದ ಬಹಳ ಆತ್ಮತೃಪ್ತಿಯಿಂದ ಕೆಲಸ ಮಾಡುತ್ತಿದ್ದೇನೆ. ಈ ಒಂದು ತಿಂಗಳಿನಷ್ಟು ದೈಹಿಕ ಶ್ರಮ ಹಿಂದೆಂದೂ ಹಾಕಿರಲಿಲ್ಲ. ಆದರೆ ಹುಮ್ಮಸ್ಸು ಮತ್ತು ಸಂತೋಷ ಇಮ್ಮಡಿಗೊಳ್ಳುತ್ತಲೇ ಇದೆ. ಕರ್ನಾಟಕದ ಮುಂದಿನ ದಿನಗಳ ಚುನಾವಣಾ ಪದ್ದತಿ ಹೇಗಿರಬೇಕು ಎನ್ನುವುದಕ್ಕೆ ಈ ಚುನಾವಣೆ ಮುನ್ನುಡಿ ಬರೆಯುತ್ತದೆ ಎನ್ನುವ ವಿಶ್ವಾಸವಿದೆ.

ಆದರೆ, ಈ ಚುನಾವಣೆ ಮತ್ತದೇ ಭ್ರಷ್ಟ, ಅಸಮರ್ಥ, ಅನೀತಿಯ ರಾಜಕಾರಣಿಗಳನ್ನೇ ವಿಧಾನಸಭೆಗೆ ಕಳುಹಿಸುತ್ತದೆ ಮತ್ತು ಕರ್ನಾಟಕದ ಮುಂದಿನ ನಾಲ್ಕೈದು ವರ್ಷಗಳು ಹಿಂದಿನ ನಾಲ್ಕೈದು ವರ್ಷಗಳಿಗಿಂತ ಭಿನ್ನವಾಗೇನೂ ಇರುವುದಿಲ್ಲ. ಅದಕ್ಕೆ ನಮ್ಮ ಪ್ರಜ್ಞಾವಂತರ (?) ನಿಷ್ಕ್ರಿಯತೆ, ಸಣ್ಣತನ, ನಿರಾಶಾವಾದಗಳೇ ಕಾರಣವಾಗಬಹುದೇ ಹೊರತು ಬೇರೆ ಅಲ್ಲ. ಒಳ್ಳೆಯ, ಸಮರ್ಥ, ಪ್ರಜ್ಞಾವಂತ ಜನ ರಾಜಕೀಯಕ್ಕೆ ಬರುವುದಕ್ಕೆ ಮತ್ತು ಬೆವರು ಹರಿಸುವುದಕ್ಕೆ (ತಮಗಾಗಿ ಅನ್ನುವುದಕ್ಕಿಂತ ತಾವು ನಂಬಿದ ಸಾರ್ವಕಾಲಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ) ಇದು ಸೂಕ್ತ ಸಮಯವೂ ಆಗುತ್ತದೆ.

ಅಂದ ಹಾಗೆ, ನಮ್ಮ ಪ್ರಚಾರದ ಫೋಟೊಗಳು ಮತ್ತಿತರ ವಿವರಗಳು ನನ್ನ ವೆಬ್‍‌ಸೈಟ್‌ನಲ್ಲಿವೆ: www.ravikrishnareddy.com

ನಮಸ್ಕಾರ,
ರವಿ…