Monthly Archives: April 2013

ಸಂವೇದನೆಗಳಿಗೆ ಸಂಖ್ಯಾಶಾಸ್ತ್ರದ ಅಳವಡಿಕೆಯೇ ಸಂಶೋಧನೆಯಲ್ಲ

-ಡಾ.ಎಸ್.ಬಿ.ಜೋಗುರ

kaalavve-vachanaಮಾ 15, 2013 ರ ಎಚ್.ಎಸ್.ಶಿವಪ್ರಕಾಶರ ಅಂಕಣದಿಂದ ದಿನಪತ್ರಿಕೆಯೊಂದರಲ್ಲಿ ಆರಂಭವಾದ ವಚನ ಚಳವಳಿ ಮತ್ತು ಜಾತಿವ್ಯವಸ್ಥೆಯ ಬಗೆಗಿನ ಚರ್ಚೆ ಇಲ್ಲಿಯವರೆಗೆ ಸಾಗಿಬಂದಿರುವದಾದರೂ ಅಲ್ಲಿ ಬಹುತೇಕ ಹೊಗೆ ಎಬ್ಬಿಸುವ ಯತ್ನಗಳಿವೆಯೇ ಹೊರತು ಬೆಳಕು ಮೂಡಿಸುವ ಪ್ರಯತ್ನಗಳು ಕಾಣಸಿಗುವದಿಲ್ಲ. ಅಷ್ಟಕ್ಕೂ ವಚನಗಳನ್ನು ಸಂಖ್ಯಾಶಾಸ್ತ್ರೀಯ ವಿಧಾನಕ್ಕೆ ಅಳವಡಿಸಿ, ಪ್ರತಿಶತದಲ್ಲಿ ಅಲ್ಲಿಯ ಜಾತಿ ವಿರೋಧಿ ನಿಲುವನ್ನು ಚರ್ಚಿಸಿರುವದು ಒಂದು ಹೊಸ ಬಗೆಯ ಪ್ರಯೋಗವೆನಿಸಿದರೂ ಮನುಷ್ಯ ಸಂವೇದನೆಗಳನ್ನು ಸ್ಕೇಲ್ ಮೂಲಕ ಅಳೆಯುವ ವಿಚಿತ್ರ ಬಗೆಯ ಯತ್ನ ಮತ್ತು ವಿತಂಡವಾದವಾಗಿ ಅದು ತೋರಿರುವಲ್ಲಿ ಸಂಶಯವಿಲ್ಲ. ಎಷ್ಟು ಪ್ರಮಾಣದ ವಚನಗಳು ಏನು ಮಾತನಾಡುತ್ತವೆ ಎನ್ನುವದು ಮುಖ್ಯವಲ್ಲ, ಅಲ್ಲಿಯ ಧ್ವನಿ ಜೀವಪರವಾಗಿದೆಯೋ ಇಲ್ಲವೋ ಎನ್ನುವದು ಮುಖ್ಯ. ಹೆರಿಗೆ ನೋವು ಎನ್ನುವ ತಲೆಬರಹದ ಕವಿತೆಯಲ್ಲಿರುವ ಇಪ್ಪತ್ತು ಸಾಲುಗಳಲ್ಲೂ ಆ ಪದ ಬಳಕೆಯಾಗಿಲ್ಲದ ಕಾರಣ ಅದು ಹೆರಿಗೆ ನೋವನ್ನು ಸಮರ್ಪಕವಾಗಿ ಗ್ರಹಿಸಿಲ್ಲ ಎಂದು ಹೇಳಬಲ್ಲಿರೇನು..? ಹಾಗೆ ಶರಾ ಎಳೆಯುವದೇ ಸಂಶೋಧನೆ ಎಂದುಕೊಳ್ಳುವದಾದರೆ ಇಂಥಾ ಸಂಶೋಧನೆ ಮಾಡದಿರುವದೇ ಒಳಿತು. ಅಷ್ಟಕ್ಕೂ ಚಾರಿತ್ರಿಕವಾದ ಸಂಗತಿಗಳನ್ನು ಆಧರಿಸಿ ಸಂಶೋಧನೆ ಮಾಡುವ ಸಂದರ್ಭದಲ್ಲಿ ಅಂತೆ-ಅಂತೆಗಳ ಬೊಂತೆ ತೀರಾ ಸಹಜ. ಇದೇ ಇಂಥಾ ಸಂಶೋಧಕರ ಪಾಲಿಗೆ ವರವಾಗಿದೆ. ಅಂದಾಜುಗಳನ್ನು. ಊಹೆಗಳನ್ನು, ತರ್ಕಗಳನ್ನು ಕರಾರುವಕ್ಕಾಗಿ ಮಾತನಾಡುವದೇ ಸಂಶೋಧನೆಯಲ್ಲ. ಜಾತಿಯಂಥ ಅಮೂರ್ತ, ಭಾವನಾತ್ಮಕ ವಿಷಯ 12 ನೇ ಶತಮಾನದಲ್ಲಿ ಹೊಂದಿರಬಹುದಾದ ಜಿಗುಟತನ, ಗಡಸುತನಗಳ ಎಳ್ಳಷ್ಟೂ ಅರಿವಿರದಿದ್ದರೂ ಅದನ್ನು ಸಂಖ್ಯಾಶಾಸ್ತ್ರೀಯವಾಗಿ ಪ್ರಮಾಣೀಕರಿಸಿ ಮಾತನಾಡುವದಿದೆಯಲ್ಲ.. ಅದೇ ಅತ್ಯಂತ ಅತಾರ್ಕಿಕವಾದುದು.

ಅಷ್ಟಕ್ಕೂ ಜಾತಿಯ ಬೇರು ನಮ್ಮ ಸಮಾಜದಲ್ಲಿ ತೀರಾ ಪ್ರಾಚಿನ ಕಾಲದಿಂದಲೂ ಅಸ್ತಿತ್ವದಲ್ಲಿವೆ. ಕ್ರಿ.ಪೂ. 300 ರ ಸಂದರ್ಭದಲ್ಲಿ ಈ ದೇಶಕ್ಕೆ ಭೇಟಿ ನೀಡಿದ ಗ್ರೀಕ್ ದೇಶದ ಮೆಗಾಸ್ತನಿಸ್ ಇಲ್ಲಿಯ ಜನಸಮೂಹ ವೃತ್ತಿಯಾಧಾರಿತ ಪ್ರತ್ಯೇಕಿತ ಸಮೂಹಗಳಲ್ಲಿ ಬದುಕುವ ಬಗ್ಗೆ ಉಲ್ಲೇಖಿಸಿದ್ದಾರೆ. ಆಯಾ ಕಸುಬುದಾರರು ಅವರವರ ಕಸುಬುದಾರಿಕೆಯ ಮನೆತನದ ಕನ್ಯೆಯನ್ನೇ ವಿವಾಹವಾಗುವ ಮಾತನಾಡಿರುವದನ್ನು ನೋಡಿದರೆ ಕುಲಕಸುಬುಗಳು, ಒಳಬಾಂಧವ್ಯ ವಿವಾಹಸಮೂಹಗಳು ಆಗಲೇ ಅಸ್ಥಿತ್ವದಲ್ಲಿ ಇದ್ದವು ಎನ್ನುವ ಬಗ್ಗೆ ಉಲ್ಲೇಖಗಳು ದೊರೆಯುತ್ತವೆ. [ಸೊಸೈಟಿ ಇನ್ ಇಂಡಿಯಾ-ಡೆವಿಡ್ ಮೆಂಡಲ್ ಬಾಮ್] ಡಾ.ಜಿ.ಎಸ್.ಘುರ್ರೆ ಹೇಳುವ ಹಾಗೆ “ಜಾತಿ ಎನ್ನುವದು ಇಂಡೊ-ಆರ್ಯನರ ಕೊಡುಗೆ. ಅವರು ಕ್ರಿ .ಪೂರ್ವ 2500 ರ ಸಂದರ್ಭದಲ್ಲಿ ಭಾರತದ ನೆಲವನ್ನು ಪ್ರವೇಶ ಮಾಡಿದ್ದೇ ದಾಸರು, ದಶ್ಯುಗಳು ಎನ್ನುವ ಪರಿಕಲ್ಪನೆಯನ್ನು ಹುಟ್ಟುಹಾಕುವ ಮೂಲಕ, ಜಾತಿ ವ್ಯವಸ್ಥೆಗೆ ಜನ್ಮ ನೀಡಿದರು.” [ಕಾಸ್ಟ್ ಆಂಡ್ ರೇಸ್ ಇನ್ ಇಂಡಿಯಾ -ಪು 162-163] ಜಾತಿಯ ಹುಟ್ಟಿನ ಬಗೆಗೆ ಯಾವುದೇ ರೀತಿಯ ಖಚಿತವಾದ ಆಧಾರಗಳಿಲ್ಲದಿದ್ದರೂ ಅದು ಪ್ರಾಚೀನಕಾಲದಿಂದಲೂ ನಮ್ಮೊಂದಿಗೆ, ನಮ್ಮ ಸಂಸ್ಕೃತಿ ಪರಂಪರೆಯ ಭಾಗವಾಗಿತ್ತು ಎನ್ನುವದನ್ನು ಅಲ್ಲಗಳೆಯಲಾಗದು.

ಇನ್ನು ಯೂರೋಪಿಯನ್ನರೇ ನಮಗೆ ಜಾತಿಯ ಮಾರಕ ಪರಿಣಾಮಗಳನ್ನು ತಿಳಿಸಿಕೊಟ್ಟರು ಎನ್ನುವ ವಿಚಾರದಲ್ಲಿ ಮಾತ್ರ ಯಾವುದೇ ಹುರುಳಿಲ್ಲ. ಯಾಕೆಂದರೆ ಇವತ್ತಿಗೂ ವಿದೇಶಿಯರಿಗೆ ಭಾರತವನ್ನು ಸರಿಯಾಗಿ ಗ್ರಹಿಸಲು ಸಾಧ್ಯವಾಗಿಲ್ಲ. ಭಾರತ ಅಂದರೆ ಕೇವಲ ಹಿಂದು-ಮುಸ್ಲಿಂ ಧರ್ಮಗಳ ಸಾಂಸ್ಕೃತಿಕ ಸಂಘರ್ಷದ ನೆಲೆಯೆಂದೇ ಗ್ರಹಿಸಿರುವ ಅವರಿಗೆ, ಜಾತಿಯಂಥಾ ಸೂಕ್ಷ್ಮಾತಿಸೂಕ್ಷ್ಮ ಸಂಸ್ಥೆಯ ಗ್ರಹಿಕೆ ಅವರಿಗೆ ಸುಲಭಸಾಧ್ಯ ಎಂದು ನಂಬುವದೇ ಕಷ್ಟ. ಜಾತಿಯ ಬಗೆಗೆ ವಿದೇಶಿಯರು ನೀಡಿರುವ ವ್ಯಾಖ್ಯೆಗಳನ್ನೇ ಆ ದಿಸೆಯಲ್ಲಿ ಪರಿಶೀಲಿಸಬಹುದು. ಅಮೇರಿಕೆಯ ಸಿ.ಎಚ್.ಕೂಲೇ ಎನ್ನುವವರು “ವರ್ಗಗಳು ಯಾವಾಗ ಅನುವಂಶಿಯವಾಗಿ ಪರಿಣಮಿಸುತ್ತವೆಯೋ ಅದನ್ನೇ ಜಾತಿ ಎಂದು ಕರೆಯಬೇಕು” ಎನ್ನುತ್ತಾರೆ. ಈ ಕೂಲೇ ಅವರಿಗೆ ವರ್ಗ ಮತ್ತು ಜಾತಿಯ ನಡುವಿನ ಅಂತರಗಳ ಗ್ರಹಿಕೆಯೇ ಸಾಧ್ಯವಾದಂತಿಲ್ಲ. ಇನ್ನು ಮೆಕಾಯಿವರ್ ಪೇಜ್ ಎನ್ನುವ ಚಿಂತಕರು “ವ್ಯಕ್ತಿಯ ಅಂತಸ್ತು ಪೂರ್ವನಿರ್ಧರಿತವಾಗಿದ್ದು, ಅದನ್ನು ಬದಲಾಯಿಸುವ ಆಸೆ ವ್ಯಕ್ತಿಗೆ ಇಲ್ಲದಿದ್ದರೆ ಅದೇ ಜಾತಿ,” ಎಂದಿರುವದನ್ನು ನೋಡಿದರೆ ಬದಲಾಯಿಸುವ ಆಸೆ ವ್ಯಕ್ತಿಗೆ ಇದ್ದರೂ ಮೇಲ್ಮುಖ ಸಂಚಲನೆಗೆ ಅವಕಾಶಗಳಿಲ್ಲದಿರುವ ಬಗ್ಗೆ ಮೆಕಾಯಿವರ್ ಅವರ ಗ್ರಹಿಕೆಗೂ ಸಿಕ್ಕಂತಿಲ್ಲ ಎನ್ನುವದನ್ನು ಗಮನಿಸಿದರೆ ವಿದೇಶಿಯರಿಗೆ ಈ ಜಾತಿ ಎನ್ನುವ ಸಂಸ್ಥೆಯನ್ನೇ ಸರಿಯಾಗಿ ಗ್ರಹಿಸಲಾಗಿಲ್ಲ. ಕುರುಡರು ಕಂಡ ಆನೆಯ ವಿವರಣೆಯಂತಿರುವ ಅವರ ವಿಚಾರಧಾರೆಗಳನ್ನೇ ಸರಿ ಎನ್ನುವದು ಎಷ್ಟು ಸಮಂಜಸ..?

ಗಾಂಧೀಜಿಯವರು ಆಫ಼್ರಿಕಾದಲ್ಲಿ ವರ್ಣ ಭೇದ ನೀತಿಯ ವಿರುದ್ಧ ಹೋರಾಟ ಮಾಡಿದರು ಅಂದ ಮಾತ್ರಕ್ಕೆ ಅಲ್ಲಿಯವರೆಗೆ ಆಫ್ರಿಕನ್ನರಿಗೆ ವರ್ಣಬೇಧ ನೀತಿಯ ಅರಿವೇ ಇರಲಿಲ್ಲ, ಅದು ಸಾಧ್ಯವಾದದ್ದು ಗಾಂಧೀಜಿಯಿಂದ ಮಾತ್ರ ಎಂದಷ್ಟೇ ಮೇಲ್ ಮೇಲಿನ ವಿವರಣೆಯಾಗಿ ಜಾತಿ ಪದ್ಧತಿಯ ವಿಷಯವಾಗಿ ಯುರೋಪಿನ ಚಿಂತಕರನ್ನು ಕುರಿತು ತುತ್ತೂರಿ ಊದಿರುವಂತಿದೆ. ಇನ್ನೊಂದು ಆತ್ಯಂತಿಕವಾದ ಸಂಗತಿಯಿದೆ. ಜಾತಿ ಎನ್ನುವದು ಭಾರತೀಯ ಸಮಾಜದ ಏಕಮೇವ ಲಕ್ಷಣ. ಇದರ ಆಚರಣೆ, ಸಂಪ್ರದಾಯ, ಕಟ್ಟಳೆಗಳೇ ಇವತ್ತಿಗೂ ಇದನ್ನು ಅನುಸರಿಸುವ ಭಾರತೀಯರಿಗೇ ಸಷ್ಟವಾಗಿಲ್ಲ, ಅಂತಹದರಲ್ಲಿ ಹೊರಗಿನಿಂದ ಬಂದು, ಹೊರಗಿನಿಂದ ನಿಂತು ಈ ಜಾತಿ ಎನ್ನುವ ಸಂಕೀರ್ಣ ಸಂಸ್ಥೆಯನ್ನು ಗ್ರಹಿಸಲು ಸಾಧ್ಯವೇ ಇಲ್ಲ.

ವಚನಕಾರರ ಜೊತೆಗೆ ತಿರುಗಾಡಿ, ಅವರ ವಚನಗಳ ರಚನೆಗೆ ತಾವೇ ಖುದ್ದಾಗಿ ಒಂದು ಕಮ್ಮಟವನ್ನು ರಚಿಸಿ ನಿರ್ವಹಿಸಿದ್ದೇವೆ ಎನ್ನುವಂತೆ ಪ್ರತಿಶತದಲ್ಲಿ ಜಾತಿವಿರೋಧದ ನೆಲೆಯನ್ನು ಗುರುತಿಸುವ ಕುಖ್ಯಾತ ಸಂಶೋಧಕರು ಒಂದನ್ನು ತಿಳಿದಿರಬೇಕು. ಚಾರಿತ್ರಿಕವಾದ ಆಧಾರಗಳನ್ನು ಇಟ್ಟುಕೊಂಡು ಅಧ್ಯಯನ ಮಾಡಲಾಗುವ ಸಂಶೋಧನೆ, ಅಂಕಿ ಅಂಶಗಳನ್ನು ಲೇಪಿಸಿದ ಮಾತ್ರಕ್ಕೆ ಖಚಿತವಾಗುವದಿಲ್ಲ. ಬುದ್ದ ಮನೆ ಬಿಟ್ಟು ತೆರಳುವಾಗಿನ ಮಾನಸಿಕ ಸ್ಥಿತಿ ಕೇವಲ ಅವನಿಗೆ ಮಾತ್ರವಲ್ಲದೇ ಹೊರಗೆ ನಿಂತು ಗ್ರಹಿಸಿದ ಇನ್ಯಾರಿಗೂ ಸಾಧ್ಯವಿಲ್ಲ. ಅವಕಾಶ ಸಿಕ್ಕರೆ ಇಂಥಾ ಬುದ್ದನ ಮನ:ಸ್ಥಿತಿಯನ್ನೂ ಪ್ರತಿಶತದಲ್ಲಿ ಅಳತೆ ಮಾಡಿ ಮಾತನಾಡುವ ಖ್ಯಾತ ಸಂಶೋಧಕರು ಭವಿಷ್ಯದಲ್ಲಿ ಬಂದರೂ ಅಚ್ಚರಿ ಪಡಬೇಕಿಲ್ಲ. ಇನ್ನೊಂದು ಸಾರ್ವತ್ರಿಕ ಸತ್ಯವಿದೆ. ಯಾವುದೇ ಒಬ್ಬ ಲೇಖಕ ಇಲ್ಲವೇ ಸಂಶೋಧಕ ಏನೇ ಮಾತನಾಡಿದರೂ ಬರೆದರೂ ತನ್ನ ಮತಿಯ ಮಿತಿಯ ಒಳಗಡೆ ಮಾತ್ರ. ಯುರೋಪಿಯನ್ನರೇ ನಮಗೆ ಜಾತಿ ಎನ್ನುವದು ಒಂದು ಅನಿಷ್ಟ ಎನ್ನುವದನ್ನು ತೋರಿಸಿಕೊಟ್ಟರು, ತಿಳಿಸಿಕೊಟ್ಟರು ಎನ್ನುವದನ್ನು ಒಪ್ಪುವ, ತಿರಸ್ಕರಿಸುವ ಪ್ರಶ್ನೆಯೂ ನಮ್ಮ ನಮ್ಮ ಮತಿಯ ಮಿತಿಗೆ ಸಂಬಂಧಪಡುತ್ತದೆ.

ಜಾತಿ ಹೆಸರಲ್ಲಿ ರಾಜಕಾರಣಿ ಉದ್ಧಾರವಾದಷ್ಟು…

-ಚಿದಂಬರ ಬೈಕಂಪಾಡಿ

ದೇಶದ ಸಮಗ್ರ ಚಿಂತನೆ, ದೇಶ ಕಟ್ಟುವ ಕಲ್ಪನೆ ಒಬ್ಬ ರಾಜಕಾರಣಿಯಿಂದ ಸಾಮಾನ್ಯ ಪ್ರಜೆ ನಿರೀಕ್ಷೆ ಮಾಡುವುದು ಅಪರಾಧವಲ್ಲ. ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಹೋರಾಟ್ ಅಮಾಡುವಾಗ ಇದ್ದ ಕಲ್ಪನೆ ದೇಶದ ಅಖಂಡತೆ, ಐಕ್ಯತೆಯನ್ನು ಉಳಿಸಿಕೊಳ್ಳುವುದೇ ಆಗಿತ್ತು. ದೇಶ ಒಡೆಯುವ, ಜಾತಿಯ ಹೆಸರಲ್ಲಿ, ಭಾಷೆಯ ಹೆಸರಲ್ಲಿ ವಿಭಜಿಸುವ ಮೂಲ ಆಶಯವಿರಲಿಲ್ಲ. ಆದರೂ ದೇಶ ವಿಭಜನೆಯಾಯಿತು, ಅದು ಇಂದಿಗೂ ಇತಿಹಾಸದಲ್ಲಿ ಉಳಿದಿರುವ ಕಪ್ಪು ಚುಕ್ಕೆ. ಅದರಿಂದಲಾದರೂ ಪಾಠಕಲಿಯಬೇಕಿತ್ತು ರಾಜಕಾರಣಿಗಳು, ಕಲಿಯಲಿಲ್ಲ ಎನ್ನುವುದು ದುರಂತ.

ಈ ಮಾತುಗಳನ್ನು ಹೇಳಬೇಕಾದ ಅನಿವಾರ್ಯತೆಗೆ ಕಾರಣ ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆ ಹಿನ್ನೆಲೆ. ಚುನಾವಣೆಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದರದ್ದೇ ಆದ ಘನತೆಯಿದೆ, ಮತಕ್ಕೂ ಪಾವಿತ್ರ್ಯತೆ ಇದೆ. ಮತದಾರರಿಂದ ಆರಿಸಿ ಹೋಗುವ ಪ್ರತಿನಿಧಿಗೂ ಅಷ್ಟೇ ಘನತೆಯಿದೆ. ನಮ್ಮ ಪರವಾಗಿ ಶಾಸನ ಸಭೆಯಲ್ಲಿ ಧ್ವನಿಎತ್ತಲು, ನಮ್ಮ ಕಷ್ಟು ಸುಖಗಳನ್ನು ಪರಮೋಚ್ಛ ವೇದಿಕೆಯಲ್ಲಿ ಪ್ರತಿಪಾದಿಸಲು ಜನರು ಕೊಡುವ ಅಧಿಕಾರ. ಜನರಿಂದ, ಜನರಿಗಾಗಿ ಕೆಲಸ ಮಾಡಲು ಆಯ್ಕೆ ಮಾಡಿಕಳುಹಿಸುವ ನಮ್ಮ ಪ್ರತಿನಿಧಿ ಎನ್ನುವ ಹೆಮ್ಮೆ ಮತದಾರನಿಗೆ. ನಮ್ಮಿಂದ ಆಯ್ಕೆಯಾದ ಪ್ರತಿನಿಧಿಯ ಕರ್ತವ್ಯ ಜನರ ಹಕ್ಕನ್ನು ರಕ್ಷಿಸುವುದು, ಜನರ ಸೇವೆ ಮಾಡುವುದು. ನಾವು ಆಯ್ಕೆ ಮಾಡುವ ವ್ಯಕ್ತಿಯನ್ನು ಅವನ ಬದ್ಧತೆ, ಕರ್ತವ್ಯಶೀಲತೆ, ಜನಪರ ಕಾಳಜಿಗಳನ್ನು ಮಾನದಂಡವಾಗಿಟ್ಟುಕೊಂಡು ಮತಹಾಕಿ ಆಯ್ಕೆ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಿಯಮ.

ಜನಪ್ರತಿನಿಧಿಯಾದವರು ನಮಗೆ ಎದುರಾಗುವ ಸವಾಲುಗಳನ್ನು ನಿಭಾಯಿಸುವುದು, ಐಕ್ಯತೆ, ಸಾರ್ವಭೌಮತೆಯನ್ನು ರಕ್ಷಿಸುವುದು ಬಹುಮುಖ್ಯ. ಆದರೆ ಹಾಗೆ ಮಾಡುತ್ತಿದ್ದಾರೆಯೇ, ಮುಂದೆ ಮಾಡುತ್ತಾರೆಯೇ ಎನ್ನುವ ಅನುಮಾನಗಳು ಕಾಡುತ್ತಿವೆ. ಯಾಕೆಂದರೆ ಅತ್ಯಂತ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶ, ಸಮಾಜವಿದೆ. ಅಖಂಡತೆಗೆ, ಸಾರ್ವಭೌಮತೆಗೆ, ಸಾಮರಸ್ಯಕ್ಕೆ ಧಕ್ಕೆಯಾಗುತ್ತಿದೆ. ಹೊಸ ಹೊಸ ಸವಾಲುಗಳು ಧುತ್ತನೆ ಎದುರಾಗುತ್ತಿವೆ. ಇವುಗಳನ್ನು ಎದುರಿಸುವಂಥ ಕಲ್ಪನೆ, ಚಿಂತನೆಯಿದ್ದವರನ್ನು ಆರಿಸಿಕಳುಹಿಸಬೇಕು ಎನ್ನುವ ಆಶಯಕ್ಕೇ ಭಂಗವಾಗುತ್ತಿದೆ. ನಮ್ಮ ಮುಂದಿರುವ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದೇ ಸವಾಲು ಈಗ.

ದೇಶವನ್ನು ಕಟ್ಟುವ ಬದಲು ಒಡೆಯುವ ಮನಸ್ಥಿತಿಯವರು, ಅಖಂಡತೆಯನ್ನು ಉಳಿಸುವ ಚಿಂತನೆಯ ಬದಲು ಜಾತಿ, ಭಾಷೆ ಹೆಸರಲ್ಲಿ ಒಡೆಯುವವರು ಮತಯಾಚನೆಗೆ ಮುಂದಾಗಿದ್ದಾರೆ. ನಮಗೆ ಬೇಕಾಗಿರುವುದು ದೇಶ ಒಡೆಯುವವರಲ್ಲ ಕಟ್ಟುವವರು. ಜಾತಿಯ ಹೆಸರಲ್ಲಿ ಜನರನ್ನು ವಿಭಜಿಸುವವರು ಬೇಕಾಗಿಲ್ಲ, ಜಾತ್ಯಾತೀತವಾಗಿ ಎಲ್ಲರನ್ನೂ ಒಗ್ಗಟ್ಟಿನಿಂದ ಇರುವಂತೆ ಮಾಡುವವರು ಬೇಕಾಗಿದ್ದಾರೆ.

ಜಾತಿಯೇ ಈಗಿನ ರಾಜಕಾರಣದ ನಿರ್ಣಾಯಕ ಸ್ಥಿತಿಗೆ ಬಂದಿರುವುದು ಅತ್ಯಂತ ಅಪಾಯಕಾರಿ. ಜಾತಿಯ ವಿನಾಶದ ಭಾಷಣ ಮಾಡುತ್ತಲೇ ಜಾತಿಯನ್ನು ಮುಂದಿಟ್ಟುಕೊಂಡು ಕಣಕ್ಕಿಳಿಯುವ ಅರ್ಹತೆ ಗಿಟ್ಟಿಸಿಕೊಳ್ಳುತ್ತಿರುವುದು ಭವಿಷ್ಯದಲ್ಲಿ ಎಂಥ ಸನ್ನಿವೇಶ ನಿರ್ಮಾಣವಾಗಬಹುದು ಎನ್ನುವುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ.

ಜಾತಿ ಮನಸ್ಥಿತಿ ಹೊರತು ರೋಗವನ್ನು ಗುರುತಿಸುವಂಥ ಮಾನದಂಡವಾಗಬಾರದು. ಸಮಾನತೆ, ಸಹಬಾಳ್ವೆ, ಸಮಪಾಲು ಎನ್ನುವ ಸಮಾಜವಾದದ ಹಿಂದಿರಬೇಕಾದ ಜಾತಿ ಈಗ ಮುಂದಿದೆ. ಸಮಾನತೆ ಹಿಂದೆ ಜಾತಿ ಮುಂದೆ ಇದು ಅಪಾಯಕಾರಿ. ಜಾತಿ ಹೆಸರಲ್ಲಿ ರಾಜಕಾರಣ ಮಾಡುವುದು ಹೇಡಿತನವೇ ಹೊರತು ವೀರತ್ವ ಖಂಡಿತಕ್ಕೂ ಅಲ್ಲ. ರಾಜಕೀಯ ಇತಿಹಾಸವನ್ನು ತಿರುವಿನೋಡಿದರೆ ಜಾತಿಯೇ ಆಧಾರವಾಗಿದ್ದರೆ ಈಗಲೂ ಸೋನಿಯಾ ಗಾಂಧಿ, ಅಡ್ವಾಣಿ ಸಹಿತ ಯಾರೇ ಆದರೂ ಗೆಲ್ಲಲು ಸಾಧ್ಯವಿಲ್ಲ. ಜಾತಿಯನ್ನು ಮಾನದಂಡವಾಗಿಟ್ಟುಕೊಂಡು ಜನ ಮತ ಹಾಕುತ್ತಿದ್ದರೆ ಚಿಕ್ಕಮಗಳೂರಲ್ಲಿ ಇಂದಿರಾ ಗಾಂಧಿ, ಬಳ್ಳಾರಿಯಲ್ಲಿ ಸೋನಿಯಾ ಗಾಂಧಿ ಆಯ್ಕೆಯಾಗಲು ಸಾಧ್ಯವೇ ಇರಲಿಲ್ಲ.

ಈ ಕ್ಷಣದಲ್ಲೂ ಇಂಥ ಅಭ್ಯರ್ಥಿ ಇಂಥ ಜಾತಿಯವರಷ್ಟೇ ಮತ ಹಾಕಿದರೆ ಗೆದ್ದು ಬರುತ್ತಾರೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಕರ್ನಾಟಕದ 224 ಕ್ಷೇತ್ರಗಳಲ್ಲಿ ಯಾವ ಒಬ್ಬ ಅಭ್ಯರ್ಥಿಯೂ ತನ್ನ ಜಾತಿಯ ಮತಗಳಲ್ಲದೆ ಅನ್ಯ ಜಾತಿಯ ಒಂದೇ ಒಂದು ಮತವಿಲ್ಲದೆ ಆಯ್ಕೆಯಾಗುತ್ತೇನೆ ಎನ್ನುವುದು ಸಾಧ್ಯವೇ? ಇದು ವಾಸ್ತವ.

ಆದರೆ ಈಗಿನ ರಾಜಕೀಯ ವ್ಯವಸ್ಥೆಯ ಮಾನಸಿಕ ಸ್ಥಿತಿಯೇ ರೋಗಗ್ರಸ್ಥವಾಗಿದೆ. ರಾಜಕಾರಣಿಗಳು ಜಾತಿಯ ರೋಗದಿಂದ ಬಳಲುತ್ತಿದ್ದಾರೆ. ತಮ್ಮ ರೋಗವನ್ನು ಸಾಮಾನ್ಯ ಮತದಾರನಿಗೂ ವರ್ಗಾಯಿಸಿದ್ದಾರೆ. ಜಾತಿಯ ಹೆಸರಲ್ಲಿ ಟಿಕೆಟ್ ಹಂಚಿಕೆ ಮಾಡುತ್ತಿರುವುದೇ ಈ ರೋಗದ ಮೊದಲ ಲಕ್ಷಣ. ಜಾತಿಗೆ ಪ್ರಾತಿನಿಧ್ಯ ಸಿಗಬೇಕೇ ಹೊರತು ಪಾರುಪತ್ಯವಲ್ಲ. ಸಮಾನತೆ, ಸಾಮಾಜಿಕ ನ್ಯಾಯ ಕೊಡುವಾಗ ಜಾತಿಯೂ ಒಂದು ಅಂಶಹೊರತು ಅದೇ ನಿರ್ಣಾಯಕವಲ್ಲ.

ಹೆಣ್ಣು ಮತ್ತು ಗಂಡು ಎನ್ನುವುದೇ ಎರಡು ಜಾತಿಯೆನ್ನುವ ರಾಜಕಾರಣಿಗಳ ಸಾಮಾಜಿಕ ನ್ಯಾಯದ ಭಾಷಣ ಅನುಷ್ಠಾನವಾಗಿದೆಯೇ? 224 ಕ್ಷೇತ್ರಗಳಲ್ಲಿ ಸರಿಸುಮಾರು 122 ಕ್ಷೇತ್ರಗಳನ್ನು ಯಾವ ರಾಜಕೀಯ ಪಕ್ಷ ಮಹಿಳೆಯರಿಗೆ ಬಿಟ್ಟುಕೊಟ್ಟಿದೆ? ಹಾಗೆ ಬಿಟ್ಟು ಕೊಟ್ಟು ಸಾಮಾಜಿಕ ನ್ಯಾಯ ಹೇಳುವ ಮಾನಸಿಕ ಸ್ಥಿತಿ ಯಾವ ಪಕ್ಷಕ್ಕಿದೆ?

ಜಾತಿಯನ್ನು ಅದೆಷ್ಟು ವೈಭವೀಕರಿಸಿ ಟಿಕೆಟ್ ಹಂಚಲಾಗುತ್ತಿದೆಯೆಂದರೆ ಅನ್ಯಜಾತಿಯವರ ಬೆಂಬಲವೇ ಅನಗತ್ಯ ಎನ್ನುವಂಥ ಉದ್ಧಟತನ ಎನ್ನುವಷ್ಟರಮಟ್ಟಿಗೆ. ಕ್ಷೇತ್ರವಾರು ಜಾತಿಯ ಮತದಾರರ ಅಂಕೆ ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡುವ ಸೂತ್ರವೇ ಅಪಾಯಕಾರಿ.

ಇಷ್ಟಕ್ಕೂ ಜಾತಿ ಆಧಾರದಲ್ಲಿ ಆಯ್ಕೆಯಾಗಿ ಹೋದ ಯಾವ ರಾಜಕಾರಣಿ ತನ್ನ ಜಾತಿಯನ್ನು ಉದ್ಧಾರ ಮಾಡಿದ್ದಾನೆ ಎನ್ನುವ ಮಾಹಿತಿಯಿದ್ದರೆ ಮುಕ್ತವಾಗಿ ಹಂಚಿಕೊಳ್ಳಿ. ಜಾತಿಯ ಹೆಸರಲ್ಲಿ ರಾಜಕಾರಣಿ ಉದ್ಧಾರವಾದಷ್ಟು ಪ್ರಮಾಣದಲ್ಲಿ ಅವನ ಜಾತಿ ಉದ್ಧಾರವಾಗಿಲ್ಲ ಎನ್ನುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಜನಸಮೂಹವನ್ನು ಇಡಿಯಾಗಿ ನೋಡಿಕೊಂಡು ರಾಜಕಾರಣ ಮಾಡಿದವರು ಈಗಲೂ ಜನಮಾನಸದಲ್ಲಿ ಉಳಿದಿದ್ದಾರೆ. ಜಾತಿ ಹೆಸರಲ್ಲಿ ರಾಜಕಾರಣ ಮಾಡಲು ಹೋಗಿ ಕಸದಬುಟ್ಟಿಗೆ ಸೇರಿದವರೇ ಬಹಳ ಮಂದಿ.

ಯಾವುದೇ ಕಾರಣಕ್ಕೂ ಜಾತಿಯನ್ನು ನಿರಾಕರಿಸಲು ಸಾಧ್ಯವಿಲ್ಲ, ಆದರೆ ಅದನ್ನೇ ಸಮಾನತೆಯನ್ನು ಪ್ರತಿಪಾದಿಸುವ ವ್ಯವಸ್ಥೆಯಲ್ಲಿ ಆರಾಧಿಸಲು ಸಾಧ್ಯವಿಲ್ಲ, ಬಾರದು ಕೂಡಾ. ಜಾತಿ ವೈಯಕ್ತಿಕವಾಗಿ ಆ ವ್ಯಕ್ತಿಯ ಖಾಸಗಿತನ. ಖಾಸಗಿತನವೆಂಬುದು ಬೀದಿಯಲ್ಲಿ ಹರಾಜಾಗಬಾರದು. ಒಕ್ಕೂಟ ವ್ಯವಸ್ಥೆಯ ಮೂಲ ಅಡಿಪಾಯಕ್ಕೇ ಅಪಾಯಕಾರಿಯಾಗಿ ಜಾತಿರಾಜಕಾರಣ ಬಿಂಬಿತವಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಚರ್ಚೆಯಾಗಬೇಕಿದೆ. ಜಾತಿಗಳ ನಡುವೆ ವೈಷಮ್ಯ ಬೆಳೆಯಲು ಇದಕ್ಕಿಂತ ಬೇರೆ ಕಾರಣಬೇಕೇ? ಜಾತಿಯ ಬಲವಿಲ್ಲದಿದ್ದರೆ ರಾಜಕಾರಣ ಮಾಡಲು ಸಾಧ್ಯವಿಲ್ಲ ಎನ್ನುವ ಮಾನಸಿಕ ಸ್ಥಿತಿಯೇ ಪ್ರಶ್ನಾರ್ಹ.

ಹರ್ಷ ಮಂದೇರ್ ಬರಹ – 2: ಧರೆಹೊತ್ತಿ ಉರಿದೊಡೆ…

Harsha Manderಮೂಲ ಲೇಖನ: ಹರ್ಷ ಮಂದೇರ್
ಕನ್ನಡಕ್ಕೆ: ಕುಮಾರ್ ಬುರಡಿಕಟ್ಟಿ

ಇಡೀ ಗುಜರಾತನ್ನು ತಲ್ಲಣಗೊಳಿಸಿದ ಆ ಭಯೋತ್ಪಾದನೆ ಮತ್ತು ಮಾರಣಹೋಮಗಳು ನಡೆದ ಹತ್ತು ದಿನಗಳ ತರುವಾಯ ಅತ್ಯಂತ ಜಿಗುಪ್ಸೆ, ಭೀತಿಗಳಿಂದ ಸ್ಥಂಭೀಭೂತನಾಗಿ ಅಲ್ಲಿಂದ ಮರಳಿದೆ. ನನ್ನ ಹೃದಯ ಉತ್ಸಾಹಶೂನ್ಯವಾಗಿತ್ತು, ಆತ್ಮ ಬಳಲಿತ್ತು ಮತ್ತು ಅಪರಾಧಿ ಮತ್ತು ನಾಚಿಕೆ ಪ್ರಜ್ಞೆಯ ಭಾರದಿಂದ ಬಾಹುಗಳು ನಿತ್ರಾಣಗೊಂಡಿದ್ದವು.

ಆ ಭೀಕರ ನರಮೇಧದಲ್ಲಿ ಬದುಕುಳಿದ ಸುಮಾರು 53,000 ಮಹಿಳೆಯರು, ಪುರುಷರು, ಮಕ್ಕಳುಮರಿಗಳನ್ನು ಅಹಮದಾಬಾದಿನ 29 ತಾತ್ಕಾಲಿಕ ನಿರಾಶ್ರಿತರಶಿಬಿರಗಳಲ್ಲಿ ಕೂಡಿಹಾಕಲಾಗಿತ್ತು. ಅವುಗಳ ಮೂಲಕ ಹಾದು ಹೋಗುತ್ತಿದ್ದಂತೆ ಅವು ಪ್ರದಶರ್ಿಸುತ್ತಿದ್ದ ಆ ಬಾಹ್ಯ ಸಂಕಟ ಹೃದಯವನ್ನೇ ಕಲಕುತ್ತಿದ್ದವು.

ಒಣಗಿ ನಿಸ್ತೇಜವಾಗಿದ್ದ ಕಣ್ಣುಗಳನ್ನು ಪಿಳಿಪಿಳಿ ಬಿಡುತ್ತಾ ಜನ ಪರಿಹಾರ ಸಾಮಗ್ರಿಗಳ ಪುಟ್ಟ ಪುಟ್ಟ ಪೊಟ್ಟಣಗಳನ್ನು ಹಿಡಿದುಕೊಂಡಿದ್ದರು. ಈ ಪ್ರಪಂಚದಲ್ಲಿ ಅವರಿಗಿದ್ದ ಆಸ್ತಿ ಅದಿಷ್ಟೆ. ಕೆಲವರು ಮೆಲುದನಿಯಲ್ಲಿ ಪಿಸುಗುಟ್ಟುತ್ತಿದ್ದರೆ, ಮತ್ತೆ ಕೆಲವರು ಈ ಶಿಬಿರಗಳಲ್ಲಿ ತಮ್ಮ ಮಕ್ಕಳಿಗೆ ಹಾಲು ಹೊಂದಿಸುವುದರಲ್ಲಿ, ದಾಳಿಗೊಳಗಾದವರ ಗಾಯಗಳಿಗೆ ಶುಶ್ರೂಷೆ ಮಾಡುವುದರಲ್ಲಿ ಹಾಗೂ ಮತ್ತಿತರ ತಮ್ಮ ದೈನಂದಿನ ಕೆಲಸಗಳಲ್ಲಿ ತಲ್ಲೀನರಾಗಿದ್ದರು.

ಆದರೆ ನೀವು ಈ ಶಿಬಿರಗಳಲ್ಲಿ ಎಲ್ಲಿಯೇ ಕುಳಿತುಕೊಳ್ಳಿ. ಕೀವುದುಂಬಿದ ದೊಡ್ಡ ಗಾಯವನ್ನು ಸೀಳಿದಾಗ ಹೊರಚಿಮ್ಮುವ ಕೀವಿನಂತೆ ಜನ ತಮ್ಮ ನೋವುಗಳನ್ನು ತೋಡಿಕೊಳ್ಳಲು ಪ್ರಾರಂಭಿಸಿಬಿಡುತ್ತಿದ್ದರು. ಅವರು ಬಿಚ್ಚಿಡುವ ಆ ಕತೆಗಳು ಅದೆಷ್ಟು ಭಯಾನಕವಾಗಿದ್ದವು ಎಂದರೆ ಬರೆಯುತ್ತಿದ್ದ ನನ್ನ ಪೆನ್ನು ತತ್ತರಿಸಿ ತಡವರಿಸುತ್ತಿತ್ತು.

ಮಹಿಳೆಯರ ಮೇಲೆ, ಪುಟ್ಟ ಪುಟ್ಟ ಮಕ್ಕಳ ಮೇಲೆ ಶಸ್ತ್ರಸಜ್ಜಿತ ಸಂಘಟಿತ ಯುವಕರ ಪಡೆ ನಡೆಸಿದ ಹೃದಯಹೀನ ಕ್ರೌರ್ಯದ ಭೀಬತ್ಸತೆಯನ್ನು ಈ ದೇಶ ಹಿಂದಿನ ಯಾವ ಗಲಭೆಗಳಲ್ಲೂ ನೋಡಿರಲಿಲ್ಲ. ಇದು ಈ ದೇಶ ಆಗಾಗ ನಾಚಿಕೆಯಿಂದ ತಲೆತಗ್ಗಿಸುವಂತೆ ಮಾಡಿದ ಕಳೆದ ಶತಮಾನದ ಎಲ್ಲಾ ಗಲಭೆಗಳ ಕ್ರೌರ್ಯಗಳಿಗಿಂತಲೂ ಮಿಗಿಲಾಗಿತ್ತು. ನಾನು ಅಲ್ಲಿ ಕೇಳಿದ, ನೋಡಿದ ಎಲ್ಲದನ್ನೂ ಬರೆಯಲಾಗದಿದ್ದರೂ ಅದರ ಒಂದು ಸಣ್ಣ ಭಾಗವನ್ನಾದರೂ ಬರೆಯಲೇಬೇಕು ಎಂದು ನನ್ನ ಮೇಲೆ ನಾನೇ ಒತ್ತಡ ಹೇರಿಕೊಂಡಿದ್ದೇನೆ. ಏಕೆಂದರೆ ನಮಗೆಲ್ಲಾ ಗೊತ್ತಿರುವಂತೆ ಇದೊಂದು ಬಹುಮುಖ್ಯ ವಿಷಯ. ಅಥವಾ ಈ ಬರವಣಿಗೆ ನನ್ನ ಮೇಲಿರುವ ಭಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಇದ್ದರೂ ಇರಬಹುದು.

ಎಂಟು ತಿಂಗಳ ತುಂಬು ಗಭರ್ಿಣಿಯೊಬ್ಬಳು ತನ್ನನ್ನು ಬಿಟ್ಟುಬಿಡಿ ಎಂದು ದಾಳಿಕೋರರಿಗೆ ಪರಿಪರಿಯಾಗಿ ಅಂಗಲಾಚುವುದನ್ನು ಕಂಡಾಗ ಏನನ್ನಿಸುತ್ತದೆ? ಆದರೆ, ಆ ದಾಳಿಕೋರರು ಆಕೆಯನ್ನು ಬಿಡುವುದಿಲ್ಲ. ಆಕೆಯ ಹೊಟ್ಟೆಯನ್ನು ಸೀಳಿ, ಭ್ರೂಣವನ್ನು ಹೊರತೆಗೆದು, ಆಕೆಯ ಕಣ್ಣೆದುರೇ ಅದನ್ನು ಕತ್ತರಿಸಿಹಾಕುತ್ತಾರೆ. ಹತ್ತೊಂಬತ್ತು ಜನರ ಇಡೀ ಕುಟುಂಬವನ್ನು ಮನೆಯೊಳಗೆ ಕೂಡಿಹಾಕಿ, ಇಡೀ ಮನೆಗೆ ನೀರು ನುಗ್ಗಿಸಿ, ಆಮೇಲೆ ಹೈಟೆನ್ಷನ್ ವಿದ್ಯುತ್ ತಂತಿಯಿಂದ ಆ ಮನೆಗೆ ವಿದ್ಯುತ್ ಸ್ಪರ್ಶ ಮಾಡಿ ಅಷ್ಟೂ ಜನರನ್ನು ನಿರ್ದಯವಾಗಿ ಕೊಂದುಹಾಕಿದ್ದನ್ನು ಕೇಳಿದಾಗ ಏನನ್ನಿಸುತ್ತದೆ?

ಏನನ್ನಿಸುತ್ತದೆ? ತನ್ನ ತಾಯಿ ಮತ್ತು ಆರು ಜನ ಸಹೋದರ-ಸಹೋದರಿಯರನ್ನು ತನ್ನ ಕಣ್ಣೆದುರೇ ಹೇಗೆ ಕೊಚ್ಚಿ ಕೊಚ್ಚಿ ಕೊಂದರು ಎಂಬುದನ್ನು ಜುಹಾಪರ ಶಿಬಿರದಲ್ಲಿದ್ದ ಆರು ವರ್ಷದ ಬಾಲಕ ವಿವರಿಸುತ್ತಾನೆ. ಅತ್ಯಾಶ್ಚರ್ಯಕರ ರೀತಿಯಲ್ಲಿ ಆ ಹುಡುಗ ಬದುಕುಳಿಯುತ್ತಾನೆ. ಕಣ್ಣೆದುರಿಗೆ ನಡೆಯುತ್ತಿದ್ದ ಭೀಬತ್ಸತೆಯನ್ನು ನೋಡಿ ಅವನು ಪ್ರಜ್ಞೆತಪ್ಪಿ ಕುಸಿದುಬಿದ್ದದ್ದನ್ನು ನೋಡಿ ಸತ್ತೇ ಹೋಗಿದ್ದಾನೆ ಎಂದುಕೊಂಡು ದಾಳಿಕೋರರು ಅಲ್ಲಿಂದ ಹೊರಟು ಹೋಗುತ್ತಾರೆ.

ನರಮೇಧಕ್ಕೆ ಅತ್ಯಂತ ಕೆಟ್ಟ ರೀತಿಯಲ್ಲಿ ಬಲಿಯಾದ ಜನವಸತಿ ಪ್ರದೇಶಗಳಲ್ಲಿ ಅಹ್ಮದಾಬಾದಿನ ನರೋಡ-ಪಾಟಿಯ ಕೂಡ ಒಂದು. ಅಲ್ಲಿ ಪೊಲೀಸ್ ಪೇದೆಯೊಬ್ಬ ಮೂರು ತಿಂಗಳ ಮಗನನ್ನು ಎತ್ತಿಕೊಂಡಿದ್ದ ಯುತಿಯೊಬ್ಬಳಿಗೆ ಸುರಕ್ಷಿತ ಜಾಗಕ್ಕೆ ಹೋಗುವಂತೆ ಹೇಳಿದ್ದನ್ನು, ಅವನ ಮಾತನು ಕೇಳಿ ಆಕೆ ಅತ್ತ ಹೋದಾಗ ಅಲ್ಲಿ ದಾಳಿಕೋರರ ಗುಂಪು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಆ ತಾಯಿ-ಮಗು ಇಬ್ಬರನ್ನೂ ಜೀವಂತವಾಗಿ ಸುಟ್ಟುಹಾಕಿದ್ದನ್ನು ನರೋಡ-ಪಾಟಿಯಾದ ಮಹಿಳೆಯೊಬ್ಬಳು ವಿವರಿಸುತ್ತಾಳೆ.

ಮಹಿಳೆಯರ ಮೇಲೆ ಲೈಂಗಿಕ ಕ್ರೌರ್ಯ ನಡೆಸುವುದನ್ನು ಒಂದು ಆಯುಧವನ್ನಾಗಿ ಈ ಗುಜರಾತ್ ಬರ್ಬರತೆಯಲ್ಲಿ ಬಳಸಿದಷ್ಟು ವ್ಯಾಪಕವಾಗಿ ಬೇರಾವ ಗಲಭೆಗಳಲ್ಲೂ ಬಳಸಿದ್ದನ್ನು ನಾನು ಎಂದೂ ನೋಡಿಲ್ಲ. ಹುಡುಗಿಯರು ಮತ್ತು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವುದರ ಬಗ್ಗೆ, ಅದರಲ್ಲೂ ಆ ಕುಟುಂಬ ಸದಸ್ಯರ ಕಣ್ಣೆದುರೇ ಈ ಅತ್ಯಾಚಾರಗಳನ್ನು ನಡೆಸಿರುವ ಬಗ್ಗೆ, ನಂತರ ಆ ಮಹಿಳೆಯರನ್ನು ಜೀವಂತವಾಗಿ ಸುಡುವ ಮೂಲಕವೋ ಅಥವಾ ಸುತ್ತಿಗೆಯಿಂದ ಜಜ್ಜುವ ಮೂಲಕವೋ (ಒಂದು ಘಟನೆಯಲ್ಲಿ ಸ್ಕ್ರೂಡ್ರೈವರ್ನಿಂದ ಇರಿಯುವ ಮೂಲಕ) ಕೊಂದುಹಾಕಿರುವ ಬಗ್ಗೆ ಸಾಕಷ್ಟು ವರದಿಗಳು ಎಲ್ಲಾ ಕಡೆಯಿಂದ ಬಂದಿವೆ. ಆಗಲೇ ಭೀತಿಯಿಂದ ತತ್ತರಿಸಿದ್ದ ಮಹಿಳೆಯರನ್ನು ಇನ್ನಷ್ಟು ಭೀತಿಯಿಂದ ಕುಸಿಯುವಂತೆ ಮಾಡಲು ಶಸ್ತ್ರಸಜ್ಜಿತ ದಾಳಿಕೋರರು ಅವರತ್ತ ಬಟ್ಟೆಬಿಚ್ಚಿಕೊಂಡು ಬರುತ್ತಿದ್ದ ಗಾಬರಿಹುಟ್ಟಿಸುವ ಕತೆಗಳನ್ನು ಅಮನ್ ಚೌಕ್ ನಿರಾಶ್ರಿತರ ಶಿಬಿರದಲ್ಲಿದ್ದ ಮಹಿಳೆಯರು ಹೇಳುತ್ತಾರೆ.

ಅಹ್ಮದಾಬಾದ್ನಲ್ಲಿ ನಾನು ಭೇಟಿಯಾದ ಬಹುತೇಕ ಜನರು (ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು, ದಾಳಿಯಲ್ಲಿ ಬದುಕುಳಿದವರು ಇತ್ಯಾದಿ) ಎಲ್ಲರೂ ಒಂದು ಅಂಶವನ್ನು ಒಪ್ಪಿಕೊಳ್ಳುತ್ತಾರೆ. ಅದೆಂದರೆ, ಗುಜರಾತ್ನಲ್ಲಿ ನಡೆದದ್ದು ಒಂದು ಗಲಭೆಯಲ್ಲ; ಅದೊಂದು ಭಯೋತ್ಪಾದಕ ದಾಳಿ, ವ್ಯವಸ್ಥಿತವಾಗಿ, ಯೋಜಿತವಾಗಿ ನಡೆಸಲಾದ ಮಾರಣಹೋಮ, ಒಂದು ಹತ್ಯಾಕಾಂಡ.

ಶಸ್ತ್ರಸಜ್ಜಿತ ಬಾಹ್ಯ ಶತ್ರುವಿನ ವಿರುದ್ಧ ನಡೆಸಲಾಗುವ ಮಿಲಿಟರಿ ಕಾಯರ್ಾಚರಣೆಯ ರೀತಿಯಲ್ಲಿ ಸಂಘಟಿಸಲಾಗಿದ್ದ ಲೂಟಿಯ ಬಗ್ಗೆ, ಸುಲಿಗೆಯ ಬಗ್ಗೆ ಪ್ರತಿಯೊಬ್ಬರೂ ಮಾತಾಡಿದರು.
ಪ್ರಾರಂಭದಲ್ಲಿ ಒಂದು ಟ್ರಕ್ಕು ಉದ್ರೇಕಕಾರಿ ಘೋಷಣೆಗಳನ್ನು ಕೂಗುತ್ತಾ ಬಂತು; ಅದರ ಹಿಂದೆಯೇ ಹಲವು ಟ್ರಕ್ಕುಗಳು ಖಾಕಿ ಚೆಡ್ಡಿಗಳನ್ನು ಹಾಕಿದ, ಹೆಗಲ ಮೇಲೆ ಕೇಸರಿ ಬಟ್ಟೆಯನ್ನು ಸುತ್ತಿಕೊಂಡ ಯುವಕರನ್ನು ತುಂಬಿಕೊಂಡು ಬಂದವು. ಎಲ್ಲರೂ ಅತ್ಯಾಧುನಿಕ ಸ್ಫೋಟಕಗಳನ್ನು, ಸ್ಥಳೀಯ ನಿಮರ್ಿತ ಶಸ್ತ್ರಾಸ್ತ್ರಗಳನ್ನು, ಬಾಕು-ಚೂರಿಗಳನ್ನು ಮತ್ತು ತ್ರಿಶೂಲಗಳನ್ನು ಇಟ್ಟುಕೊಂಡು ಶಸ್ತ್ರಸಜ್ಜಿತರಾಗಿದ್ದರು. ತಮ್ಮ ಕಾಯರ್ಾಚರಣೆಯ ಸಂದರ್ಭದಲ್ಲಿ ದಣಿವಾರಿಸಿಕೊಳ್ಳಲು ನೀರಿನ ಬಾಟಲಿಗಳನ್ನೂ ಅವರು ಇಟ್ಟುಕೊಂಡಿದ್ದರು.

ಗಲಭೆ ನಡೆಯುತ್ತಿದ್ದ ಸ್ಥಳಗಳಲ್ಲಿ ಗಲಭೆಕೋರರ ನಾಯಕರು ತಮ್ಮ ಮೊಬೈಲ್ ಫೋನ್ಗಳಲ್ಲಿ ಮಾತನಾಡುತ್ತಿರುವುದು ಕಂಡುಬರುತ್ತಿತ್ತು; ಅವರು ಸಮನ್ವಯ ಕೇಂದ್ರದಿಂದ ಸಲಹೆ, ಸೂಚನೆಗಳನ್ನು ಪಡೆಯುತ್ತಾ ಹಾಗೂ ಗಲಭೆಯ ಸ್ಥಳದಲ್ಲಿ ನಡೆಯುತ್ತಿದ್ದ ಘಟನಾವಳಿಗಳ ವರದಿಗಳನ್ನು ಸಮನ್ವಯ ಕೇಂದ್ರಕ್ಕೆ ರವಾನಿಸುತ್ತಿದ್ದರು. ಕೆಲವರು ಮುಸ್ಲಿಂ ಕುಟುಂಬಗಳ ಮನೆಗಳ ಮತ್ತು ಆಸ್ತಿಪಾಸ್ತಿಗಳ ವಿವರಗಳನ್ನೊಳಗೊಂಡ ದಾಖಲೆಗಳನ್ನು, ಕಂಪ್ಯೂಟರ್ ಸೃಜಿತ ಹಾಳೆಗಳನ್ನು ಹಿಡಿದುಕೊಂಡಿರುವುದು ಕಂಡುಬರುತ್ತಿತ್ತು. ಅಲ್ಪಸಂಖ್ಯಾತ ಸಮುದಾಯಗಳ ಒಡೆತನದಲ್ಲಿರುವ ಬಿಲ್ಡಿಂಗ್ಗಳ ಬಗ್ಗೆ, ಅವರ ಬಿಸಿನೆಸ್ ಕೇಂದ್ರಗಳ ಬಗ್ಗೆ ದಾಳಿಕೋರ ನಾಯಕರಿಗೆ ವಿವರವಾದ ಜ್ಞಾನವಿತ್ತು. ಉದಾಹರಣೆಗೆ, ಒಂದು ರೆಸ್ಟೋರೆಂಟ್ನ ಮಾಲಿಕತ್ವದಲ್ಲಿ ಹಿಂದೂ ಮತ್ತು ಮುಸ್ಲಿಂ ಇಬ್ಬರೂ ಪಾಲುದಾರರಾಗಿರುವುದು ಅಥವಾ ಯಾವ್ಯಾವ ಮುಸ್ಲಿಂ ಕುಟುಂಬದಲ್ಲಿ ಗಂಡನೋ ಅಥವಾ ಹಿಂದೂ ಹೆಂಡತಿಯೋ ಹಿಂದೂ ಆಗಿದ್ದಾರೆ ಎಂಬಿತ್ಯಾದಿ ವಿವರಗಳು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗೆ ಮುಸ್ಲಿಮರೊಂದಿಗೆ ಹಿಂದೂಗಳೂ ಸೇರಿಕೊಂಡಿದ್ದರೆ ಅಂತಹ ಕುಟುಂಬ ಮತ್ತು ಬಿಸಿನೆಸ್ ಕೇಂದ್ರಗಳ ಮೇಲೆ ದಾಳಿ ಮಾಡಬಾರದು ಎಂಬುದು ಅವರ ಉದ್ದೇಶವಾಗಿತ್ತು.

ಅದು ಖಂಡಿತವಾಗಿಯೂ ಸಮೂಹ ಕ್ರೋಧದ ಸ್ವಯಂಪ್ರೇರಿತ ಸ್ಫೋಟವಂತೂ ಅಲ್ಲವೇ ಅಲ್ಲ. ನಿಜಕ್ಕೂ ಅದೊಂದು ಯೋಜಿತ ನರಮೇಧ.

ಟ್ರಕ್ಕುಗಳು ಅಗಾಧ ಪ್ರಮಾಣದ ಗ್ಯಾಸ್ ಸಿಲೆಂಡರ್ಗಳನ್ನು ತುಂಬಿಕೊಂಡು ಬಂದಿದ್ದವು. ಮೊದಲು ಶ್ರೀಮಂತ ಮುಸ್ಲಿಂ ಮನೆಗಳನ್ನು, ಬಿಸಿನೆಸ್ ಕೇಂದ್ರಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗುತ್ತಿತ್ತು. ನಂತರ ಅಡುಗೆ ಅನಿಲದ ಸಿಲೆಂಡರುಗಳಿಂದ ಎಲ್ಪಿಜಿ ಅನಿಲವನ್ನು ಹಲವಾರು ನಿಮಿಷಗಳ ಕಾಲ ಈ ಬಿಲಿಂಗ್ ಮತ್ತು ಮನೆಯೊಳಗೆ ನುಗ್ಗಿಸಲಾಗುತ್ತಿತ್ತು. ಕೊನೆಗೆ ತರಬೇತುಗೊಂಡ ಯುವಕರು ಬೆಂಕಿ ಹಚ್ಚಿ ಇಡೀ ಕಟ್ಟಡವನ್ನು ಯಶಸ್ವಿಯಾಗಿ ಸುಟ್ಟುಹಾಕುತ್ತಿದ್ದರು.

ಕೆಲವೊಂದು ಕಡೆ ಬೃಹದಾಕಾರದ ಸಿಮೆಂಟ್ ಕಟ್ಟಡಗಳನ್ನು ಸ್ಫೋಟಿಸಿ ಕೆಡವುದಕ್ಕೆ ಕಬ್ಬಿಣ ಬೆಸುಗೆಗೆ ಬಳಸುವ ಅಸಟಲೀನ್ ಅನಿಲವನ್ನು ಬಳಸಲಾಗಿತ್ತು. ಕೆಲವೆಡೆ ಮಸೀದಿ ಮತ್ತು ದಗರ್ಾಗಳನ್ನು ಧ್ವಂಸಗೊಳಿಸಿ ಅವುಗಳ ಜಾಗದಲ್ಲಿ ಹನುಮಂತನ ಮೂತರ್ಿಗಳನ್ನು ಪ್ರತಿಷ್ಠಾಪಿಸಿ ಕೇಸರಿ ಬಾಟುಗಳನ್ನು ಹಾರಿಸಲಾಯಿತು. ಅಹ್ಮದಾಬಾದ್ ಸಿಟಿ ಕ್ರಾಸಿಂಗ್ನಲ್ಲಿದ್ದ ಕೆಲವು ದಗರ್ಾಗಳನ್ನು ರಾತ್ರೋರಾತ್ರಿ ಧ್ವಂಸಗೊಳಿಸಿ ಅವುಗಳ ಜಾಗದಲ್ಲಿ ರಸ್ತೆ ನಿಮರ್ಾಣ ಸಾಮಗ್ರಿಗಳನ್ನು ಹಾಕಲಾಯಿತು. ಕೆಲವೆಡೆಯಂತೂ ಇದನ್ನು ಎಷ್ಟೊಂದು ಪರಿಣಾಮಕಾರಿಯಾಗಿ ಮಾಡಲಾಯಿತೆಂದರೆ ದಗರ್ಾ ಧ್ವಂಸಗೊಂಡ ಈ ಜಾಗಕ್ಕೂ ಉಳಿದ ಮಾಮೂಲಿ ರಸ್ತೆಗೂ ಯಾವುದೇ ವ್ಯತ್ಯಾಸವೂ ಕಾಣುತ್ತಿರಲ್ಲ. ಈಗ ರಸ್ತೆಯ ಭಾಗವೇ ಆಗಿರುವ ಈ ಸ್ಥಳಗಳಲ್ಲಿ ವಾಹನ ದಟ್ಟಣಿ ಹರಿಯುತ್ತಿದ್ದು ಹಿಂದೆ ಅಲ್ಲೊಂದು ದಗರ್ಾವಿತ್ತು ಎಂಬುದರ ಸಣ್ಣ ಸುಳಿವೂ ಸಿಗುವುದಿಲ್ಲ.

ರಾಜ್ಯ ಪೊಲೀಸ್ ಮತ್ತು ಆಡಳಿತ ಯಂತ್ರಾಗಗಳ ಆತ್ಮಸಾಕ್ಷಿಯಿಲ್ಲದ ವೈಫಲ್ಯ ಮತ್ತು ಕ್ರಿಯಾಶೀಲ ಮೌನಸಮ್ಮತಿ ಇದ್ದುದನ್ನು ಬಹುತೇಕರು ಒಪ್ಪಿಕೊಳ್ಳುತ್ತಾರೆ. ಅನೇಕ ಕಡೆ ಪೊಲೀಸರೇ ಖುದ್ದಾಗಿ ಅಮಾಯಕ ಜನರನ್ನು ದಾಳಿಕೋರರ ಕೈಗೊಪ್ಪಿಸಿದ್ದಾರೆ. ದೊಂಬಿ, ಲೂಟಿ, ಅತ್ಯಾಚಾರ, ಕೊಲೆ, ಸುಲಿಗೆಗಳನ್ನು ನಡೆಸುತ್ತಿದ್ದ ಗುಂಪಿಗೆ ಪೊಲೀಸರೇ ಖುದ್ದಾಗಿ ರಕ್ಷಣೆ ಕೊಟ್ಟಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ದಂಗೆಕೋರರ ದಾಳಿಗಳಿಗೆ ಬಲಿಯಾಗುತ್ತಿದ್ದ ಅಮಾಯಕ ಮುಸ್ಲಿಮರು ಪೊಲೀಸರೆದುರು ಜೀವರಕ್ಷಣೆಗೆ ಅಂಗಲಾಚುತ್ತಿದ್ದರೂ ಪೊಲೀಸರು ಅದಕ್ಕೆ ಕಿವಿಗೊಟ್ಟಿಲ್ಲ.

ಮಾತ್ರವಲ್ಲ, ಪೊಲೀಸರೇ ಖುದ್ದಾಗಿ ದಾಳಿಕೋರರ ಜೊತೆ ಸೇರಿ ಸಮೂಹ ಹಿಂಸೆಗೆ ನೇರವಾಗಿ ಗುರಿಯಾಗಿದ್ದ ಅಲ್ಪಸಂಖ್ಯಾತ ಸಮುದಾಯದ ಜನರತ್ತ ವಿನಾ ಕಾರಣ ಗುಂಡು ಹಾರಿಸಿದ ಅನೇಕ ವರದಿಗಳು ಬಂದಿವೆ. ನಂತರ ಯಾವ ಅಲ್ಪಸಂಖ್ಯಾತ ಸಮುದಾಯ ನರಮೇಧದ ಪ್ರಧಾನ ಬಲಿಪಶುವಾಗಿತ್ತೋ ಅದೇ ಸಮುದಾಯದ ಜನರನ್ನೇ ಪೊಲೀಸರು ಹೆಚ್ಚಾಗಿ ಬಂಧಿಸಿದರು.
ಎರಡು ದಶಕಗಳಿಗೂ ಹೆಚ್ಚು ಭಾರತೀಯ ಆಡಳಿತ ಸೇವೆಯಲ್ಲಿ (ಐಎಎಸ್) ಕಾರ್ಯನಿರ್ವಹಿಸಿರುವ ನನಗೆ ಈ ಪೊಲೀಸ್ ಮತ್ತು ನಾಗರಿಕ ಸೇವೆಯಲ್ಲಿರುವ ನನ್ನ ಸಮಾನ ದಜರ್ೆಯ ಅಧಿಕಾರಿಗಳು ಮಾಡಿದ ಕರ್ತವ್ಯಲೋಪವನ್ನು ಕಂಡು ನಿಜಕ್ಕೂ ನಾಚಿಕೆಯಾಗುತ್ತಿದೆ. ಭುಗಿಲೇಳುತ್ತಿದ್ದ ಕ್ರೂರ ಹಿಂಸಾಚಾರವನ್ನು ತಡೆಯುವುದಕ್ಕಾಗಿ, ಅಮಾಯಕ ಮಹಿಳೆಯನ್ನು, ಮಕ್ಕಳನ್ನು ಸಂಘಟಿತ ಕೊಲೆಗಡುಕರ ದಾಳಿಗಳಿಂದ ರಕ್ಷಿಸುವುದಕ್ಕಾಗಿ ನಿಣರ್ಾಯಕ ಸಶಸ್ತ್ರ ಬಲಗಳನ್ನು ನಿಯೋಜಿಸುವ ಮುನ್ನ ಈ ಅಧಿಕಾರಿಗಳು ತಮ್ಮ ರಾಜಕೀಯ ಪರಿವೀಕ್ಷಕರ ಆದೇಶಗಳಿಗಾಗಿ ಕಾಯುತ್ತಾ ಕುಳಿತುಕೊಳ್ಳಬೇಕು ಎಂದು ಯಾವ ಕಾನೂನೂ ತಾಕೀತು ಮಾಡುವುದಿಲ್ಲ. ಅಂತಹ ಗಂಭೀರ ಸಂದರ್ಭದಲ್ಲಿ ಈ ಅಧಿಕಾರಿಗಳು ತತ್ಕ್ಷಣವೇ ಧೈರ್ಯ ಮತ್ತು ಸಹಾನುಭೂತಿಗಳಿಂದ ಸ್ವತಂತ್ರವಾಗಿ, ನಿಸ್ಪಕ್ಷಪಾತವಾಗಿ ಮತ್ತು ನಿಣರ್ಾಯಕವಾಗಿ ಕಾರ್ಯಪ್ರವೃತ್ತರಾಗಬೇಕು ಎಂದು ಕಾನೂನು ಪ್ರೋತ್ಸಾಹಿಸುತ್ತದೆ. ಅಹ್ಮದಾಬಾದಿನಲ್ಲಿ ಒಬ್ಬನೇ ಒಬ್ಬ ಅಧಿಕಾರಿ ಈ ರೀತಿಯಲ್ಲಿ ಕಾರ್ಯತತ್ಪರನಾಗಿದ್ದರೆ ಕೂಡಲೇ ಪೊಲೀಸ್ ಬಲಗಳನ್ನು ನಿಯೋಜಿಸಿ, ಸೈನ್ಯವನ್ನು ಕರೆಸಿ ಕೆಲವೇ ಗಂಟೆಗಳಲ್ಲಿ ಹಿಂಸಾಚಾರವನ್ನು ತಡೆಗಟ್ಟಿ ಜನರನ್ನು ರಕ್ಷಿಸಬಹುದಿತ್ತು.

ಸ್ಥಳೀಯ ಪೊಲೀಸ್ ಮತ್ತು ಆಡಳಿತ ಯಂತ್ರಾಂಗದ ಸಕ್ರಿಯ ಬೆಂಬಲವಿಲ್ಲದೇ ಯಾವ ಗಲಭೆಯೂ ಕೆಲವು ಗಂಟೆಗಳಿಗಿಂತ ಹೆಚ್ಚು ಕಾಲ ಮುಂದುವರೆಯಲಾರದು. ಗುಜರಾತಿನ ಪೊಲೀಸರ ಮತ್ತು ನಾಗರಿಕ ಆಡಳಿತಗಾರರ ಕೈಗೆ ನೂರಾರು ಅಮಾಯಕ ಜನರ ರಕ್ತ ಮೆತ್ತಿಕೊಂಡಿದೆ; ಮೌನದ ಮೂಲಕ ಈ ಷಡ್ಯಂತ್ರದಲ್ಲಿ ಪಾಲುದಾರನಾಗಿರುವ ಇಡೀ ರಾಷ್ಟ್ರದ ಉನ್ನತ ಅಧಿಕಾರಶಾಹಿಯ ಕೈಗೂ ಕೂಡ.

ಕೆಳ ದಜರ್ೆಯ ಪೊಲೀಸರು ಪರೋಕ್ಷವಾಗಿ ಹಿಂಸಾಚಾರದ ಬೆಂಬಲಕ್ಕೆ ನಿಂತಿರುವುದಕ್ಕೆ ಅವರು ಕೋಮುವಾದೀಕರಣಗೊಂಡಿರುವುದೂ ಕಾರಣ ಎಂದು ಹಿರಿಯ ಅಧಿಕಾರಿಗಳು ಹೇಳುವುದನ್ನೂ ನಾನು ಕೇಳಿದ್ದೇನೆ. ಇದೊಂದು ಕುಂಟುನೆಪವಷ್ಟೆ. ವೃತ್ತಿಪರತೆ ಮತ್ತು ಬದ್ಧತೆಗಳನ್ನು ಮೈಗೂಢಿಸಿಕೊಂಡ ಉನ್ನತ ಅಧಿಕಾರಿಗಳು ಇದೇ ಪಡೆಗಳಿಗೆ ನಾಯಕತ್ವ ನೀಡಿ ಮುನ್ನಡೆಸಿದಾಗ ಅವು ನಿಸ್ಪಕ್ಷಪಾತವಾಗಿ ಧೈರ್ಯದಿಂದ ಕಾರ್ಯನಿರ್ವಹಿಸಿವೆ. ಇಲ್ಲಿ ವೈಫಲ್ಯವಿರುವುದು ಉನ್ನತ ಪೊಲೀಸ್ ಮತ್ತು ನಾಗರಿಕ ಸೇವಾ ಅಧಿಕಾರಿಗಳ ನಾಯಕತ್ವದಲ್ಲೇ ಹೊರತು ತಮ್ಮ ಮೇಲಧಿಕಾರಿಗಳ ಆಜ್ಞೆಗಳನ್ನು ಕಡ್ಡಾಯವಾಗಿ ಪಾಲಿಸುವ ಹಾಗೆ ತರಬೇತುಗೊಳಿಸಲಾದ ಕೆಳದಜರ್ೆಯ ಖಾಕಿಪಡೆಯಲ್ಲಲ್ಲ ಎಂಬುದಂತೂ ಸ್ಪಷ್ಟ.

ಇಷ್ಟೆಲ್ಲಾ ಕ್ರೌರ್ಯ, ಅನ್ಯಾಯ, ಅತ್ಯಾಚಾರ, ಮಾನವ ಯಾತನೆಗಳು ನಡೆಯುತ್ತಿದ್ದರೂ ‘ನಾಗರಿಕ ಸಮಾಜ’, ಗಾಂಧಿವಾದಿಗಳು, ಅಭಿವೃದ್ಧಿ ಕಾರ್ಯಕರ್ತರು, ಎನ್ಜಿಓಗಳು ಹಾಗೂ ಕಚ್ ಮತ್ತು ಅಹ್ಮದಾಬಾದಿನಲ್ಲಿ ಭೂಕಂಪ ಸಂಭವಿಸಿದಾಗ ಬಹಳ ಕ್ರಿಯಾಶೀಲವಾಗಿದ್ದ ಆ ಕಪೋಲಕಲ್ಪಿತ ಗುಜರಾತಿ ಮಾನವಪ್ರೇಮಿಗಳು ಎಲ್ಲಿ ಹೋಗಿದ್ದರು?

ಹತ್ಯಾಕಾಂಡ ಭೀಕರವಾಗಿ ನಡೆಯುತ್ತಿದ್ದ ಸಮಯದಲ್ಲಿ ನಗರದ ಪ್ರಮುಖ ಅಭಯಾಶ್ರಮವಾಗಬೇಕಿದ್ದ ಅಹ್ಮದಾಬಾದಿನ ಸಬರಮತಿ ಆಶ್ರಮ ತನ್ನ ಆಸ್ತಿಪಾಸ್ತಿ ರಕ್ಷಿಸಿಕೊಳ್ಳುವುದಕ್ಕೋಸ್ಕರ ಬಾಗಿಲು ಮುಚ್ಚಿಕೊಂಡಿತ್ತು! ನರಬೇಟೆಗಾಗಿ ಮುನ್ನುಗ್ಗಿ ಬರುತ್ತಿದ್ದ ದಾಳಿಕೋರ ಗುಂಪುಗಳನ್ನು ತಡೆಯುವುದಕ್ಕೆ ಯಾವ ಗಾಂಧಿವಾದಿ ನಾಯಕರು ಅಥವಾ ಎನ್ಜಿಓ ನಿವರ್ಾಹಕರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಮುಂದೆ ಬಂದರು? ಈ ದೇಶದ ನಾಗರಿಕರಾಗಿ ನಾವು ಈಗಾಗಲೇ ನಮ್ಮ ಬೆನ್ನಮೇಲೆ ಹೊತ್ತುಕೊಂಡಿರುವ ನಾಚಿಕೆಗಳ ಭಾರಕ್ಕೆ ಇನ್ನೊಂದು ನಾಚಿಕೆಯನ್ನು ಸೇರಿಸಿಕೊಳ್ಳಲೇಬೇಕಾಗಿದೆ. ಅದೆಂದರೆ, ಗಲಭೆಗಳಲ್ಲಿ ಬಲಿಪಶುಗಳಾಗಿದ್ದ ಮುಸ್ಲಿಮರಿಗಾಗಿ ತೆರೆದ ಅಹ್ಮದಾಬಾದಿನ ಬಹುತೇಕ ನಿರಾಶ್ರಿತ ಶಿಬಿರಗಳ ನಿರ್ವಹಣೆ ಮತ್ತು ಖಚರ್ುವೆಚ್ಚಗಳನ್ನು ಮುಸ್ಲಿಂ ಸಂಘಟನೆಗಳೇ ನೋಡಿಕೊಳ್ಳಬೇಕಾದ ದುಸ್ಥಿತಿ ಇರುವುದು! ಇದನ್ನೆಲ್ಲಾ ನೋಡಿದರೆ, ಮುಸ್ಲಿಂ ಜನ ಅನುಭವಿಸಿದ ಆ ಭೀಕರ ನರಕಯಾತನೆ, ನೋವು, ದ್ರೋಹ ಮತ್ತು ಅನ್ಯಾಯಗಳು ಕೇವಲ ಇತರ ಮುಸ್ಲಿಮರ ಹೃದಯಗಳನ್ನು ಮಾತ್ರ ತಟ್ಟುತ್ತಿವೆ ಎಂಬಂತೆ; ಆ ಬಲಿಪಶುಗಳನ್ನು ಸಂತೈಸುವಲ್ಲಿ, ಅವರ ಕಣ್ಣೀರು ಒರೆಸುವಲ್ಲಿ, ಅವರನ್ನು ಪುನಶ್ಚೇತನಗೊಳಿಸುವಲ್ಲಿ ಮುಸ್ಲಿಮರಲ್ಲದ ನಮ್ಮೆಲ್ಲರ ಪಾಲು ಏನೂ ಇಲ್ಲ ಎಂಬಂತೆ ಅವರನ್ನು ಅವರ ಪಾಡಿಗೆ ಬಿಟ್ಟುಬಿಡಲಾಗಿದೆ. ಅಮಾಯಕ ಪ್ರಜೆಗಳಿಗೆ ಕರ್ಷಣೆ ಮತ್ತು ಪರಿಹಾರಗಳನ್ನು ಖಾತ್ರಿಯಾಗಿ ಕೊಡುವ ಪ್ರಾಥಮಿಕ ಜವಾಬ್ದಾರಿ ಹೊತ್ತುಕೊಂಡಿರುವ ಪ್ರಭುತ್ವದ ಇರುವಿಕೆ ಈ ಯಾವ ನಿರಾಶ್ರಿತ ಶಿಬಿರಗಳಲ್ಲೂ ಕಾಣಲಿಲ್ಲ; ನಿರಾಶ್ರಿತ ಶಿಬಿರಗಳನ್ನು ನಿರ್ವಹಿಸುವುದು, ಭದ್ರತೆಯನ್ನು ಖಾತ್ರಿಪಡಿಸುವುದು, ಅಲ್ಲಿ ರಕ್ಷಣಾರಹಿತವಾಗಿ ಕೂಡಿಹಾಕಲಾಗಿದ್ದ ಹತ್ತಾರು ಸಾವಿರ ಮಹಿಳೆ, ಪುರುಷ ಮತ್ತು ಮಕ್ಕಳ ಹಸಿದ ಹೊಟ್ಟೆಗೆ ಉಣಬಡಿಸುವುದಕ್ಕೆ ಅಗತ್ಯವಿರುವ ಸಂಪನ್ಮೂಲ ಒದಗಿಸುವುದು ಮುಂತಾದ ಎಲ್ಲಾ ಜವಾಬ್ದಾರಿಗಳಿಂದಲೂ ಸಕರ್ಾರ ವಿಮುಖವಾಗಿತ್ತು.

ನಾನು ಗುಜರಾತಿನಲ್ಲಿ ಅನುಭವಿಸಿದ ಏಕೈಕ ಸಮಾಧಾನಕರ, ಹೆಮ್ಮೆ ಮತ್ತು ಭರವಸೆಯ ಕ್ಷಣ ಎಂದರೆ ಮುಜಿದ್ ಅಹ್ಮದ್ ಮತ್ತು ರೋಷನ್ ಬೆಹನ್ ಎಂಬ ವ್ಯಕ್ತಿಗಳನ್ನು ನೋಡಿದ್ದು. ತಮ್ಮ ಸುತ್ತಲೂ ಬಿದ್ದಿದ್ದ ಧ್ವಂಸದ ಪಳೆಯುಳಿಕೆಗಳ ನಡುವೆಯೇ ದಣಿವರಿಯದಂತೆ ಮಾನವೀಯತೆಯಿಂದ ಕೆಲಸ ಮಾಡುತ್ತಿದ್ದ ಜೀವಗಳವು.

ಅಮನ್ ಚೌಕ್ ಶಿಬಿರದಲ್ಲಿ ಮಕ್ಕಳುಮರಿಗಳು ಊಟ, ಹಾಲು ಸಿಗದೇ ಪರಿತಪಿಸದಿರಲಿ ಎಂದು ಅಥವಾ ಅವರ ಗಾಯಗಳು ಚಿಕಿತ್ಸೆಯಿಲ್ಲದೇ ಉಲ್ಬಣಗೊಳ್ಳದಿರಲಿ ಎಂದು ಬೆಳಿಗ್ಗೆ ನಾಲ್ಕು ಗಂಟೆಯಿಂದ ಮಧ್ಯರಾತ್ರಿಯ ತನಕ ದಣಿವರಿಯದಂತೆ ಕೆಲಸ ಮಾಡಿದ ಸ್ವಯಂಸೇವಕರಿಗೆ ಅಲ್ಲಿನ ಮಹಿಳೆಯರು ತುಂಬಿದ ಹೃದಯದಿಂದ ಕೃತಜ್ಞರಾಗಿದ್ದರು. ಆ ಸ್ವಯಂಸೇವಕರ ನಾಯಕ ಮುಜಿದ್ ಅಹ್ಮದ್ ಒಬ್ಬ ಪಧವೀಧರನಾಗಿದ್ದು ಆತನ ಪುಟ್ಟ ಕೆಮಿಕಲ್ ಫ್ಯಾಕ್ಟರಿಯನ್ನೂ ಗಲಭೆಯಲ್ಲಿ ಸುಟ್ಟು ಹಾಕಲಾಗಿತ್ತು. ಆದರೆ, ತನ್ನ ಸ್ವಂತ ಉದ್ಯಮಕ್ಕಾದ ನಷ್ಟದ ಬಗ್ಗೆ ಚಿಂತಿಸುವುದಕ್ಕೆ ಆತನ ಬಳಿ ಸಮಯವಿರಲಿಲ್ಲ. ಆ ಶಿಬಿರದಲ್ಲಿದ್ದ ಸುಮಾರು 5000 ಜನರ ಹಸಿವನ್ನು ನೀಗಿಸುವುದಕ್ಕಾಗಿ ಆತ ಪ್ರತೀದಿನ ಸುಮಾರು 1600 ಕೇಜಿ ದವಸಧಾನ್ಯಗಳನ್ನು ಹೊಂದಿಸಬೇಕಿತ್ತು.
ಸುಮಾರು 60 ವರ್ಷದ ರೋಷನ್ ಬೆಹೆನ್ ಎಂಬ ಮಹಿಳೆಯ ಮುಂದೆಯೂ ಅದಕ್ಕಿಂತಲೂ ಗುರತರವಾದ ಸವಾಲುಗಳಿದ್ದವು. ಜುಹಾಪರ ಶಿಬಿರದಲ್ಲಿದ್ದ ಆಕೆ ಅಲ್ಲಿದ್ದವರ ಒಂದೊಂದು ಭಯಾನಕ ಕತೆಗಳನ್ನು ಕೇಳಿದಾಗಲೂ ಧಾರಾಕಾರವಾಗಿ ಸುರಿಯುತ್ತಿದ್ದ ಕಣ್ಣೀರ ಕೋಡಿಯನ್ನು ಒರೆಸಿಕೊಳ್ಳುತ್ತಾ ಕಾರ್ಯನಿರ್ವಹಿಸುತ್ತಿದ್ದಳು. ಆಕೆಯ ಬಳಿಯೂ ಯಾತನೆ ಮತ್ತು ಕ್ರೋಧಗಳ ಆಡಂಭರಗಳಿಗಾಗಿ ಸಮಯವಿರಲಿಲ್ಲ. ಆಕೆ ಮಲಗುತ್ತಿದ್ದುದೇ ವಿರಳ. ಅವಳ ಜೊತೆಗಿದ್ದ ಸ್ವಯಂಸ್ವೇವಕರು ಪ್ರಧಾನವಾಗಿ ಆ ಶಿಬಿರದ ಸುತ್ತಮುತ್ತಲಿದ್ದ ಕಾಮರ್ಿಕ ವರ್ಗದ ಬಡ ಮಹಿಳೆ ಮತ್ತು ಪುರುಷರೇ ಆಗಿದ್ದರು. ಹೃದಯಹೀನ ದಾಳಿಕೋರರ ಭೀಬತ್ಸತೆಯಿಂದ ಪಾರಾಗಿ ಈ ಪ್ರಾಥಮಿಕ ಶಾಲೆಯ ಆವರಣದಲ್ಲಿ ನೆರೆದಿದ್ದ ನೂರಾರು ಅಮಾಯಕ ಜನರಿಗೆ ತಾತ್ಕಾಲಿಕ ಶೌಚಾಲಯ, ಊಟ ಒದಗಿಸುವ, ಅವರನ್ನು ಸಂತೈಸುವ ಕೆಲಸದಲ್ಲಿ ಈ ಸ್ವಯಂ ಸೇವಕರು ತಲ್ಲೀನರಾಗಿದ್ದರು.

ನಾನು ಈ ನಿರಾಶ್ರಿತ ಶಿಬಿರಗಳ ಮೂಲಕ ಹಾದು ಹೋಗುತ್ತಿದ್ದಾಗ ನನಗೆ ಎದುರಾದ ಒಂದು ಪ್ರಶ್ನೆ ಎಂದರೆ ಈ ಕರಾಳ ಸನ್ನಿವೇಶದಲ್ಲಿ ಗಾಂಧಿಜಿ ಇದ್ದಿದ್ದರೆ ಏನು ಮಾಡುತ್ತಿದ್ದರು ಎಂಬುದು. ಗಾಂಧಿಜಿ ಶಾಂತಿಗಾಗಿ ಉಪವಾಸ ಮಾಡುತ್ತಿದ್ದಾಗ ಕಲ್ಕತ್ತಾದಲ್ಲಿ ನಡೆದ ಗಲಭೆಗಳನ್ನು ನೆನಪಿಸಿಕೊಂಡೆ. ತನ್ನ ಮಗನನ್ನು ಮುಸ್ಲಿಮರ ಗುಂಪು ಕೊಂದು ಹಾಕಿದ್ದರ ಬಗ್ಗೆ ಬಹಳ ಸಿಟ್ಟು ಮತ್ತು ಪ್ರತೀಕಾರ ಮನೋಭಾವದಿಂದ ಗಾಂಧೀಜಿಯೊಂದಿಗೆ ಮಾತನಾಡಲು ಒಬ್ಬ ಹಿಂದೂ ವ್ಯಕ್ತಿಯೊಬ್ಬ ಬರುತ್ತಾನೆ. ಆಗ ಗಾಂಧಿ ಈ ರೀತಿ ಹೇಳಿದ್ದರಂತೆ: ನಿನ್ನ ನೋವನ್ನು ಕಡಿಮೆ ಮಾಡಿಕೊಳ್ಳಬೇಕು ಎಂಬ ಬಯಕೆ ನಿನಗೆ ನಿಜಕ್ಕೂ ಇದ್ದರೆ, ಕೊಲೆಗೀಡಾದ ನಿನ್ನ ಮಗನ ವಯಸ್ಸಿನವನೇ ಆದ ಇನ್ನೊಬ್ಬ ಹುಡುಗನನ್ನು, ಹಿಂದೂಗಳ ದಾಳಿಯಲ್ಲಿ ತಂದೆತಾಯಿಗಳನ್ನು ಕಳೆದುಕೊಂಡು ಅನಾಥನಾಗಿರುವ ಒಬ್ಬ ಮುಸ್ಲಿಂ ಹುಡುಗನನ್ನು ಹುಡುಕು. ಅವನನ್ನು ನಿನ್ನ ಮಗನ ರೀತಿಯಲ್ಲೇ ಬೆಳೆಸು. ಆದರೆ, ಆತ ಮುಸ್ಲಿಮನಾಗಿ ಹುಟ್ಟಿರುವುದರಿಂದ ಅವನನ್ನು ಒಬ್ಬ ಮುಸ್ಲಿಮ ಶ್ರದ್ಧೆಯ ವ್ಯಕ್ತಿಯನ್ನಾಗಿಯೇ ಬೆಳೆಸು. ಆಗ ಮಾತ್ರವೇ ನೀನು ನಿನ್ನ ನೋವು, ಕೋಪ ಮತ್ತು ಪ್ರತೀಕಾರಕ್ಕಾಗಿನ ನಿನ್ನ ತುಡಿತವನ್ನು ನಿವಾರಿಸಿಕೊಳ್ಳುಲು ಸಾಧ್ಯ ಎಂಬುದು ನಿನಗೆ ಅರ್ಥವಾಗುತ್ತದೆ.

ಅಂತಹ ಮಾತುಗಳನ್ನು ಆಡುವಂಥವರು ಈಗಿಲ್ಲ. ಈಗಿರುವುದು ಅಮಾಯಕರ ಮೇಲಿನ ತಮ್ಮ ನಂಜುಕಾರಿ ಕೃತ್ಯಗಳನ್ನು ಸಮಥರ್ಿಸಿಕೊಳ್ಳುವುದಕ್ಕೆ ನ್ಯೂಟನ್ನ ಭೌತಶಾಸ್ತ್ರೀಯ ನಿಯಮಗಳನ್ನು ಪ್ರತಿಪಾದಿಸುವವರೇ. ನಾವು ಗಾಂಧೀಜಿಯ ಮಾತುಗಳನ್ನು ನಮ್ಮ ಹೃದಯಾಂತರಾಳದಲ್ಲಿ ಕಂಡುಕೊಳ್ಳಬೇಕಿದೆ; ನ್ಯಾಯ, ಪ್ರೀತಿ ಮತ್ತು ಸಹಿಷ್ಣುತೆಗಳ ಮೇಲೆ ಸಾಕಷ್ಟು ನಂಬಿಕೆಯಿಡಬೇಕಿದೆ.

ಗುಜರಾತಿನ ಕೊಲೆಗಡುಕ ಗುಂಪುಗಳು ನನ್ನಿಂದ ಬಹಳಷ್ಟನ್ನು ಕಿತ್ತುಕೊಂಡಿವೆ. ಅದರಲ್ಲಿ ಒಂದು ಎಂದರೆ ನಾನು ಆಗಾಗ ಬಹಳ ಹೆಮ್ಮೆ ಮತ್ತು ಬದ್ಧತೆಯಿಂದ ಹಾಡುತ್ತಿದ್ದ ಒಂದು ಹಾಡು. ಅದು: ಸಾರೆ ಜಹಾಂ ಸೆ ಅಚ್ಚಾ, ಹಿಂದೂಸ್ತಾನ ಹಮಾರ ಹಮಾರ… (ಇಡಿ ವಿಶ್ವಕ್ಕಿಂತ ನಮ್ಮ ಹಿಂದೂಸ್ತಾನವೇ ಉತ್ತಮ).

ಇದು ನಾನು ಮುಂದೆಂದೂ ಹಾಡಲಾರದ ಹಾಡು.


ಅನುವಾದಕರ ಪರಿಚಯ – ಶಿಕಾರಿಪುರ ತಾಲೂಕಿನ ಪುಟ್ಟ ಗ್ರಾಮ ಕಡೆನಂದಿಹಳ್ಳಿಯವರಾದ ಕುಮಾರ್ ಬುರಡಿಕಟ್ಟಿ ತಮ್ಮ ಶಾಲಾ ಕಾಲೇಜು ದಿನಗಳಿಂದಲೂ ಹಲವು ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದವರು. ಪ್ರಸ್ತುತ ಸಂಡೆ ಇಂಡಿಯನ್ ಪತ್ರಿಕೆಯ ಸಹಸಂಪಾದಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. LTTE ಚಳವಳಿ ಕುರಿತ “ಓ ಈಳಂ”, ನಕ್ಸಲೈಟ್ ಚಳವಳಿ ಕುರಿತ “ಜಂಗಲ್ ನಾಮ” ಮತ್ತು” ಕಾಶ್ಮೀರ-ರಣರಂಗವಾಗಿರುವ ಬೀದಿಗಳು” ಇವರ ಪ್ರಮುಖ ಕೃತಿಗಳು. ಗುಜರಾತ್ ಹತ್ಯಾಕಾಂಡ ಕುರಿತ ಸತ್ಯ ಶೋಧನ ಸಮಿತಿ ಸದಸ್ಯರಾಗಿದ್ದರು.

(ಹರ್ಷ ಮಂದೇರ್ ಅವರ ಲೇಖನಗಳ ಸಂಗ್ರಹವನ್ನು ಅಹರ್ನಿಶಿ ಪ್ರಕಾಶನ ಸದ್ಯದಲ್ಲೆ ಹೊರತರಲಿದೆ).

ಮತದಾರನ ಮುಂದೆ ಪ್ರಣಾಳಿಕೆಗಳೆಂಬ ಭ್ರಮೆಗಳು

-ಚಿದಂಬರ ಬೈಕಂಪಾಡಿ

ಕರ್ನಾಟಕ ವಿಧಾನ ಸಭೆಯಲ್ಲಿ ಅಧಿಕಾರ ಪ್ರತಿಷ್ಠಾಪನೆಗೆ ರಾಜಕೀಯ ಪಕ್ಷಗಳು ಅದೆಷ್ಟು ಉತ್ಸಾಹದಲ್ಲಿವೆ ಅಂದರೆ ತಮ್ಮನ್ನು ಜನ ಎಲ್ಲಿ ಕಡೆಗಣಿಸುವರೋ ಎನ್ನುವ ಆತಂಕ ಮಡುಗಟ್ಟಿದೆ. ಅಂಥ ಆತಂಕದಲ್ಲೂ ತಮ್ಮದೇ ಗೆಲುವು ಎನ್ನುವ ವಿಶ್ವಾಸವನ್ನು ಬಿಂಬಿಸುವುದರಲ್ಲೂ ಹಿಂದೆ ಬಿದ್ದಿಲ್ಲ. ಎಲ್ಲರೂ ಗೆಲ್ಲುವವರೇ, ಎಲ್ಲ ಪಕ್ಷಗಳು ಅಧಿಕಾರ ತಮಗೇ ಎನ್ನುವ ಮಾತುಗಳನ್ನಾಡುತ್ತಿವೆ. ಅಧಿಕಾರ ಯಾರ ಕೈಗೆ ಕೊಡುತ್ತಾನೆ ಮತದಾರ ಎನ್ನುವುದು ಮಾತ್ರ ಮೇ 8 ಕ್ಕೆ ಗೊತ್ತಾಗುವುದು. ಮತದಾರನ ಮನವೊಲಿಸಲು ಈಗ ಮಾಡುತ್ತಿರುವುದೆಲ್ಲವೂ ಬರೇ ಕಸರತ್ತು.

ಚುನಾವಣೆ ಕಾಲದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುವುದು ರಾಜಕೀಯ ಪಕ್ಷಗಳಿಗೆ ನಿಜಕ್ಕೂ ಪ್ರಸವ ವೇದನೆಯಷ್ಟೇ ಸುಖ ಮತ್ತು ಯಾತನೆ. ಒಂದಷ್ಟು ಮಂದಿಗೆ ಪ್ರನಾಳಿಕೆ ಸಿದ್ಧಪಡಿಸಲು ಪಕ್ಷಗಳು ಕೆಲಸ ಕೊಡುತ್ತವೆ. ಇಂಥ ಪ್ರಣಾಳಿಕೆ ಸಿದ್ಧಪಡಿಸಲು ಬೇಕಾಗಿರುವುದು ಬುದ್ಧಿವಂತಿಕೆ, ದೂರದೃಷ್ಟಿ, ಸಮಾಜಮುಖಿ ಚಿಂತನೆ ಇತ್ಯಾದಿ ಇತ್ಯಾದಿ. ಪ್ರಣಾಳಿಕೆ ಕೇವಲ ಘೋಷಣೆಗಳಾಗಿರಬಾರದು, ಅವು ಆ ಪಕ್ಷದ ಮುಖವಾಣಿಯಂತಿರಬೇಕು. ಸಾಮಾನ್ಯವಾಗಿ ಮೇಧಾವಿಗಳನ್ನು ಪ್ರಣಾಳಿಕೆ ಸಿದ್ಧಪಡಿಸುವ ಕೆಲಸಕ್ಕೆ ತೊಡಗಿಸುತ್ತಿದ್ದ ಕಾಲವೊಂದಿತ್ತು. ಪ್ರಣಾಳಿಕೆಯಲ್ಲಿ ಮಾಡಿದ ಘೋಷಣೆ ಅನುಷ್ಠಾನಕ್ಕೆ ಬರಬೇಕು ಎನ್ನುವ ಬದ್ಧತೆಯೂ ಇತ್ತು.

ಈಗ ಪ್ರಣಾಳಿಕೆ ಸಿದ್ಧಪಡಿಸಲು ಮೇಧಾವಿಗಳೂ ಬೇಕಾಗಿಲ್ಲ, ಅವುಗಳನ್ನು ಅನುಷ್ಠಾನಕ್ಕೆ ತರಬೇಕೆನ್ನುವ ಬದ್ಧತೆಯೂ ಅನಿವಾರ್ಯವಲ್ಲ. ಯಾಕೆಂದರೆ ಬದ್ಧತೆ ಎನ್ನುವುದೇ ಅಣಕ. jds-manifestoಬದ್ಧತೆಯಿದ್ದವನು ಈಗಿನ ರಾಜಕೀಯಕ್ಕೆ ನಾಲಾಯಕ್ ಎಂದುಕೊಂಡರೂ ತಪ್ಪಲ್ಲ. ರಾಜಕೀಯ ಪಕ್ಷಗಳು ಅಂದರೆ ರೆಡಿಮೇಡ್ ಬಟ್ಟೆ ಅಂಗಡಿಗಳಿದ್ದಂತೆ. ಯಾವಾಗ ಬೇಕಾದರೂ ಅಂಗಡಿಗೆ ಬಂದು ತಮಗೆ ಬೇಕಾದ ಉಡುಗೆಗಳನ್ನು ಖರೀದಿಸ ಬಹುದು. ಅಲ್ಲಿರುವ ಬಟ್ಟೆಗಳು ಯಾರಿಗಾದರೂ ಫಿಟ್ ಆಗಿಬಿಡುತ್ತವೆ. ಹಾಗೆಯೇ ಯಾವ ಪಕ್ಷದಿಂದಲಾದರೂ ಸರಿ, ಯಾವ ಕ್ಷಣದಲ್ಲಿ ಬಂದರೂ ಸರಿ ಸ್ವಾಗತಾರ್ಹ. ಇಂಥ ಕಾಲಘಟ್ಟದಲ್ಲಿ ನಿಂತಿರುವ ನಾವು ಯಾವ ಬದ್ಧತೆಯನ್ನು ನಿರೀಕ್ಷೆ ಮಾಡಬೇಕು, ಯಾರಿಂದ ನಿರೀಕ್ಷೆ ಮಾಡಬೇಕು, ಎನ್ನುವುದೇ ಪ್ರಶ್ನೆ.

ಹಾಗಾದರೆ ಇಂಥವರಿಂದ ನೀವು ನಿರೀಕ್ಷೆ ಮಾಡುವ ಪ್ರಣಾಳಿಕೆ ಹೇಗಿರಬಹುದು? ಈಗಿನ ಕಾಲಕ್ಕೆ ಅದು ಸೂಟ್ ಆಗುವುದೇ ಮುಖ್ಯ ಹೊರತು ಬೇರೆ ಎಲ್ಲವೂ ಗೌಣ.

ಪ್ರಣಾಳಿಕೆಯ ಈಗಿನ ಉದ್ದೇಶ ಜನರನ್ನು ತಮ್ಮತ್ತ ಸೆಳೆಯುವುದು. ಯಾವುದನ್ನು ಘೋಷಣೆ ಮಾಡಿದರೆ ಜನ ಸುಲಭವಾಗಿ ನಂಬುತ್ತಾರೆ ಎನ್ನುವುದು ಮತ್ತು ಅದು ಅತೀ ಹೆಚ್ಚು ಜನಾಕರ್ಷಣೆಯಾಗಿರಬೇಕು. ಜನಾಕರ್ಷಣೆಯ ಕೇಂದ್ರ ಬಿಂದು ಪ್ರಣಾಳಿಕೆ ಅಂದುಕೊಂಡಿರುವುದೇ ಮೂರ್ಖತನ. ಜನರು ಅಷ್ಟರಮಟ್ಟಿಗೆ ವಿವೇಚನಾಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆಂದು ರಾಜಕೀಯ ಪಕ್ಷಗಳು ಭಾವಿಸಿರಬೇಕು ಎನ್ನದೇ ವಿಧಿಯಿಲ್ಲ.

ಈಗ ರಾಜಕೀಯ ಪಕ್ಷಗಳು ಹೊರತಂದಿರುವ ಪ್ರಣಾಳಿಕೆಯನ್ನು ಗಮನಿಸಿದರೆ ಗೋಚರವಾಗುವ ಸೂಕ್ಷ್ಮ ಅಂಶಗಳು ಜಾತಿ, ಧರ್ಮ, ವೃತ್ತಿ ಇವುಗಳನ್ನು ಕೇಂದ್ರೀಕರಿಸಿದವು. ಜಾತೀವಾರು ಅಂಕೆ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಸೆಳೆಯಲು ಒಂದಷ್ಟು ಆ ಜನಸಮುದಾಯದ ದೌರ್ಬಲ್ಯವನ್ನು ಹೆಕ್ಕಿ ತೆಗೆದು ತೋರಿಸುವುದು. ಇಂಥ ವೃತ್ತಿಯವರಿಗೆ ಇಂಥ ಲಾಭ ಕೊಡುತ್ತೇವೆ, ಸವಲತ್ತು ಒದಗಿಸುತ್ತೇವೆ ಎನ್ನುವುದು ಆಮಿಷವೇ ಹೊರತು ಬೇರೆ ಅಲ್ಲ.

ಹೊಟ್ಟೆತುಂಬಿಸಿಕೊಳ್ಳುವುದಕ್ಕೆ ಬೇಕಾಗುವಷ್ಟು ಧವಸ, ಧಾನ್ಯ. ಸೋಮಾರಿತನ ಹೋಗಲಾಡಿಸುವುದಕ್ಕೆ ಅಗತ್ಯವಿದ್ದಷ್ಟು ಕೆಲಸ, ತೀರಿಸಲು ಸಾಧ್ಯವಿದ್ದಷ್ಟೇ ಸಾಲ. ಇರಲು ಸೂರು, ಕುಡಿಯಲು ಶುದ್ಧವಾದ ನೀರು, ಶಿಕ್ಷಣ ಕೊಡುವ ಬದ್ಧತೆಯ ಭರವಸೆಗಳನ್ನು ಯಾವ ಪಕ್ಷವೂ ಕೊಡುವುದಿಲ್ಲ. ಲಕ್ಷ ಕೋಟಿ ಬಜೆಟ್ ಮಂಡಿಸಿದರೆ ಹಳ್ಳಿಯ ಸಾಮಾನ್ಯ ರೈತನ ಆರ್ಥಿಕ ಸಾಮರ್ಥ್ಯ ವೃದ್ಧಿಸುತ್ತದೆಯೇ? ವರ್ಷಕ್ಕೆ ಲಕ್ಷ ಲಕ್ಷ ಉದ್ಯೋಗ ಸೃಷ್ಟಿ ಎನ್ನುವುದು ಅದೆಷ್ಟು ಹಸಿ ಹಸಿ ಸುಳ್ಳು ?

ಇಷ್ಟಕ್ಕೂ ಜನ ಪ್ರಣಾಳಿಕೆಯನ್ನು ನಂಬಿ ತಮ್ಮನ್ನು ಅಧಿಕಾರಕ್ಕೆ ತರುತ್ತಾರೆ ಎಂದು ರಾಜಕೀಯ ಪಕ್ಷಗಳು ಭಾವಿಸಿರುವುದೇ ತಪ್ಪು. ಪ್ರಣಾಳಿಕೆಯನ್ನು ಜನ ಸೀರಿಯಸ್ಸಾಗಿ ಸ್ವೀಕರಿಸಿದ್ದರೆ ಈ ದೇಶದ ಚಿತ್ರಣವೇ ಎಂದೋ ಬದಲಾಗಿಬಿಡುತ್ತಿತ್ತು. ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನೂ ಅಧಿಕಾರಕ್ಕೆ ಬಂದಿದ್ದ ರಾಜಕೀಯ ಪಕ್ಷಗಳು ಈಡೇರಿಸಿದ್ದರೆ ಈಗ ಪ್ರಣಾಳಿಕೆ ಸಿದ್ಧಪಡಿಸುವುದಕ್ಕೂ ರಾಜಕೀಯ ಪಕ್ಷಗಳು ಪರದಾಡಬೇಕಾಗುತ್ತಿತ್ತು. ಈಗ ವಿಷಯಗಳಿಗೆ, ಸಮಸ್ಯೆಗಳಿಗೆ ಬರಗಾಲವಿಲ್ಲ ಎನ್ನುವುದರಿಂದ ಯಾವುದನ್ನು ಬಿಂಬಿಸಬೇಕು ಎನ್ನುವುದೇ ಪ್ರಣಾಳಿಕೆ ಸಿದ್ಧಪಡಿಸುವವರಿಗೆ ಪ್ರಯಾಸ.

ನಿಜಕ್ಕೂ ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹೊರಹಾಕಿರುವ ಪ್ರಣಾಳಿಕೆಯಲ್ಲಿ ವಾಸ್ತವಿಕತೆಗಿಂತಲೂ ಭ್ರಮಾತ್ಮಕ ಅಂಶಗಳಿಗೇ ಹೆಚ್ಚಿನ ಒತ್ತು ಕೊಟ್ಟಿವೆ. ಇದರಲ್ಲಿ ಎಲ್ಲ ಪಕ್ಷಗಳೂ ಸಮಾನ ಮನಸ್ಥಿತಿಯವು.

ಪಾಲಿಕೆ ಕ್ಯಾಂಟಿನ್‌ಗಳಲ್ಲಿ 1 ರೂಪಾಯಿಗೆ ಇಡ್ಲಿ, ರಾಗಿ ಮುದ್ದೆ, ರೊಟ್ಟಿ, 5 ರೂಪಾಯಿಗೆ ಅನ್ನ ಸಾಂಬಾರ್ ಘೋಷಣೆ ಮಾಡಲಾಗಿದೆ. kjp_bsy_manifestoರಾಜ್ಯದಲ್ಲಿ ಏಳು ನಗರ ಪಾಲಿಕೆಗಳಿವೆ. ಈ ಕ್ಯಾಂಟಿನ್‌ಗಳಲ್ಲಿ ಮಾತ್ರ ಅಗ್ಗದ ದರದಲ್ಲಿ ಊಟ, ತಿಂಡಿ. ನಗರಸಭೆ, ಪುರಸಭೆ, ಜಿಲ್ಲಾಪಂಚಾಯತ್, ತಾಲೂಕ ಪಂಚಾಯತ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ಅಧಿಕಾರಿ ಕಚೇರಿ ಹೀಗೆ ಉಳಿದ ಸರ್ಕಾರಿ ಕಚೇರಿ ಕ್ಯಾಂಟೀನ್‌ಗಳಿಗೂ ವಿಸ್ತರಿಸಿದ್ದರೆ ಆಗುತ್ತಿರಲಿಲ್ಲವೇ ಎಂದು ಕೇಳಿದರೆ ತಪ್ಪೇ? ಪ್ರಣಾಳಿಕೆಗಳೆಲ್ಲವೂ ಪಾರದರ್ಶಕವಲ್ಲ, ಅವುಗಳ ಹಿಂದೆ ಹಿಡನ್ ಅಜೆಂಡಾ ಇರುತ್ತದೆ. ಇದಕ್ಕೆ ಈ ಚುನಾವಣೆಯಲ್ಲಿ ಹೊರಬಿದ್ದಿರುವ ಪ್ರಣಾಳಿಕೆಗಳೂ ಹೊರತಲ್ಲ.

ಈ ಕಾರಣಕ್ಕಾಗಿಯೇ ಜನ ಪ್ರಣಾಳಿಕೆಯನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸುವುದಿಲ್ಲ, ಪರಿಗಣಿಸುವ ಅಗತ್ಯವೂ ಇಲ್ಲ. ಇದು ಸ್ವತ: ರಾಜಕೀಯ ಪಕ್ಷಗಳಿಗೂ ಗೊತ್ತಿದೆ. ಇಂದಿರಾ ಗಾಂಧಿ ಅವರ ಗರೀಬಿ ಹಠಾವೋ, ರೋಟಿ ಕಪಡಾ, ಮಖಾನ್ ಅತ್ಯಂತ ಜನಪ್ರಿಯ ಸ್ಲೋಗನ್‌ಗಳಾಗಿದ್ದವು. ಇದೇ ಹೆಸರಲ್ಲಿ ಸಿನಿಮಾಗಳೂ ಬಂದವು. ಹಿಂದೆ ರಾಜಕೀಯದವರನ್ನು ಸಿನಿಮಾದವರು ಅನುಸರಿಸುತ್ತಿದ್ದರು. ಈಗ ಸಿನಿಮಾದವರನ್ನು ರಾಜಕೀಯದವರು ಅನುಸರಿಸುತ್ತಿದ್ದಾರೆ. ರಾತ್ರಿ ಬೆಳಗಾಗುವುದರೊಳಗೆ ಮಗ್ಗುಲು ಬದಲಿಸುವಷ್ಟೇ ಸಲೀಸಾಗಿ ಪಕ್ಷ ಬದಲಿಸುತ್ತಾರೆ. ಇದನ್ನು ಜನ ಒಪ್ಪಿಕೊಳ್ಳಬೇಕು ಎನ್ನುವ ನಿರೀಕ್ಷೆಯೂ ಅವರದ್ದಾಗಿರುತ್ತದೆ ಎನ್ನುವುದೇ ತಮಾಷೆ.

ಇಂಥ ತಮಾಷೆಗಳ ಭಾಗ ಚುನಾವಣಾ ಪ್ರಣಾಳಿಕೆಗಳು ಎನ್ನುವುದೇ ದುರಂತ. ಮತದಾರನ ಆಯ್ಕೆಗೂ, ಪ್ರಣಾಳಿಕೆಗೂ ಏನೂ ಸಂಬಂಧವಿರದು ಎನ್ನುವ ವಾಸ್ತವವನ್ನು ಮರೆಯುವಂತಿಲ್ಲ.

ವೋಟಿಗಾಗಿ ಪಟಗಳ ಪರಾಕ್ರಮಣದಲ್ಲಿ ಒಂದಷ್ಟು ವಿಶ್ರಾಂತಿ

– ಮಹಾದೇವ ಹಡಪದ

ಮಹಾತ್ಮರುಗಳ ಆದರ್ಶದ ಗುರುತಿಗಾಗಿ, ಆರಾಧನೆಯ ಭಾಗವಾಗಿ, ಅವರ ಗುಣಾವಗುಣಗಳನ್ನು ಎಳ್ಳಷ್ಟು ಅಳವಡಿಸಿಕೊಳ್ಳದ ಇವರ ದುಂದುಗಾರಿಕೆಯ ಪ್ರಚಾರದ ಭಿತ್ತಿಪತ್ರದಲ್ಲಿ, ಪಕ್ಷದ ಸಣ್ಣ-ದೊಡ್ಡ ಕರಪತ್ರ, ಫ್ಲೆಕ್ಸ್‌ ಮತ್ತು ಕಟೌಟಗಳಲ್ಲಿ ಎಲ್ಲ ಮಾಹಾನ್ ವ್ಯಕ್ತಿಗಳ ಪಟಗಳು ರಾರಾಜಿಸುತ್ತಿದ್ದವು. ಆ ಆದರ್ಶದ ಮಾದರಿ ವ್ಯಕ್ತಿತ್ವಗಳ ಚಿತ್ರದ ಕೆಳಗೆ ಈ ಪುಂಡರ ಭಯಂಕರ ವಿನಯದ, ಹುಸಿನಗೆಯ, ಕೈಮುಗಿದ, ಎರಡು ಬೆರಳೆತ್ತಿದ ಕಕ್ಕದ ಗೆಶ್ಚರ್ ಫೋಜುಗಳಲ್ಲಿ ಇವರ ಬಿಳಿ ವಸ್ತ್ರದ ಪಟಗಳಿದ್ದವು. ಮತದಾರನ ಆಯ್ಕೆ ತೋರಿಕೆಯದಾದರೆ, ಹಣ-ಹೆಂಡದ ಸೊತ್ತಾದರೆ, ಜಾತಿ ಅಭಿಮಾನ ಬೆಂಬಲಿಸಿದರೆ… ಕಳೆದೈದು ವರ್ಷದ ಮಠಸರ್ಕಾರ ಮತ್ತೆಷ್ಟನ್ನು ದಾನ ಮಾಡೀತು ಎಂಬ ಭಯ ಹುಟ್ಟಿತು. ಆ ಫ್ಲೆಕ್ಸ್‌ವೊಳಗಿನ ಚಿತ್ರಗಳು ಮಾತು ಮರೆತಿವೆ ಅನಿಸುತ್ತಿತ್ತು. ಅವುಗಳು ಪಾತ್ರವಾಗಿ ಈ ರಂಗದ ಮೇಲೆ ಬರುವ ಹಾಗೆ ಇದ್ದಿದ್ದರೆ…!? ಕನಸೊಳಗ ಬಂದಂಗ ನನ್ನ ಮನೋರಂಗದ ಆಳದೊಳಗ ಇಳಿದು ಕಷ್ಟ ಸುಖ ಹಂಚಿಕೊಂಡ ಚಿತ್ರದೊಳಗಿನ ವೋಟು ಕದಿಯುವ ಪಟಗಳಲ್ಲೂ ಚೈತನ್ಯ ಬತ್ತಿದಂತೆ ಭಾಸವಾಯ್ತು.

ಬಸವಣ್ಣ :
ಒಮ್ಮೆ ಕೈಲಾಸದಿಂದ ಶಿವನು “ವಾರದಲ್ಲೊಂದು ದಿವಸ ದುಡಿಮೆ ಮಾಡಿರಿ, ಉಳಿದ ದಿನಗಳಲ್ಲಿ ಶಿವನ ಪೂಜೆ ಮಾಡಿರಿ” ಎಂಬ ಸಂದೇಶವನ್ನು ಭೂಮಂಡಲದ ಸಮಸ್ತ ಜೀವಿಗಳಿಗೆ ತಲುಪಿಸಿ ಬಾ ಎಂದು ನಂದಿಯನ್ನು ಭೂಮಿಗೆ ಕಳಿಸುತ್ತಾನೆ. ಆದರೆ ನಂದಿಯು ಭೂಮಿಗೆ ಬಂದು “ವಾರದಲ್ಲೊಂದು ದಿನ ಪೂಜೆ ಮಾಡಿರಿ Basavaಉಳಿದ ದಿವಸಗಳಲ್ಲಿ ದುಡಿಮೆ ಮಾಡಿರಿ” ಎಂದು ಉಲ್ಟಾ ಹೇಳಿಬಿಡುತ್ತಾನೆ. ಆಗ ಅವನಿಗೆ ಆ ಶಿವನು ಕೊಟ್ಟ ಶಿಕ್ಷೆ.. ನಾನು ಹೇಳಿದ್ದನ್ನು ನೀನು ಸರಿಯಾಗಿ ತಲುಪಿಸಲಿಲ್ಲವಾದ ಕಾರಣ ನೀನು ಅವರೊಂದಿಗೆ ದುಡಿದುಕೊಂಡು ಬದುಕ ಹೋಗೆಂದು ನಂದಿಯನ್ನು ಭೂಮಂಡಲಕ್ಕೆ ಕಳಿಸಿಬಿಡುತ್ತಾನೆ. ಅಂದಿನಿಂದ ಇಂದಿನತನಕ ರೈತನ ಸಂಗಾತಿಯಾಗಿ ನಂದಿ ಹಗಲಿರುಳೆನ್ನದೆ ಭೂಮಿಯಲ್ಲಿ ದುಡಿಯುತ್ತಿದ್ದಾನೆ. ಎಂಬ ಕತೆ ಜನಪದರಲ್ಲಿ ಪ್ರಸಿದ್ಧವಾಗಿದೆ.

ಆ ಮೂಕ ಬಸವ ತಪ್ಪು ಸಂವಹನಕ್ಕಾಗಿ ಆ ಶಿಕ್ಷೆ ಅನುಭವಿಸುತ್ತಿರಲು ಅಹಿಂಸೆ ಮತ್ತು ಎಲ್ಲರೊಳಗಿನ ಪ್ರೀತಿಗೆ ಎಣ್ಣೆಬತ್ತಿಯಾಗಿ, ಮಾನವೀಯ ಮೌಲ್ಯಗಳನ್ನು ಮತ್ತಷ್ಟು ಗಟ್ಟಿಯಾಗಿ ಜನಮಾನಸದಲ್ಲಿ ನಿಲ್ಲಿಸಿದ ಕರುಣಾಮೂರ್ತಿ 12 ನೆಯ ಶತಮಾನದ ಈ ಬಸವ, ರಾಜನಕಿಂತ ಒಂದು ಕೈ ಮೇಲಾಗಿ ಕುದುರೆ ಏರಿ ಖಡ್ಗ ಹಿರಿದು ರಸ್ತೆಯ ತಿರುವಿನಲ್ಲೆಲ್ಲ ಮೂರ್ತಿಯಾಗಿದ್ದಾನೆ. ಇವರ ಅಡ್ಡನಾಡಿ ಕುಹಕತನಗಳ ಸಮರ್ಥನೆಗಾಗಿ, ಜಾತಿಸಂಘಟನೆಯ ದಾರ್ಷ್ಟ್ಯಕ್ಕಾಗಿ, ಈ ಬಸವ ಇವರ ಫ್ಲೆಕ್ಷಗಳಲ್ಲಿ ಬಂಧಿಯಾಗಿದ್ದಾನೆ.

ಮಠಗಳಿಗೆ ಭೇಟಿ ಕೊಡುವ ಪ್ರತಿಯೊಬ್ಬ ಶಾಸಕ, ಮಂತ್ರಿಮಹೋದಯರು ಸ್ವಾಮಿಗಳನ್ನು ಮೆಚ್ಚಿಸಲೋಸುಗ ಮಠಗಳಿಗೆ ಆರ್ಥಿಕ ಬೆಂಬಲ ನೀಡುತ್ತ ಬಂದಿದ್ದಾರೆ. ಇನ್ನು ಕೆಲವರ ಕಪ್ಪು ಹಣ ಬಿಳಿಯಾದದ್ದು ಮಠಗಳ ಕೃಪಾಶೀರ್ವಾದದಿಂದ ಅನ್ನುವುದು ಜಗಜ್ಜಾಹೀರು. ಇವರೆಲ್ಲರ ಆದರ್ಶದ ಆ ಬಸವಣ್ಣನೂ ಪಟದೊಳಗೆ ತಣ್ಣಗೆ ಕೂತಿರುವುದ ಕಂಡು ಪಾಪ! ಬಸವ ಎಂಬ ಮರುಕ ಹುಟ್ಟಿತು. ವೇದಿಕೆಯ ಮೆಲೆ ಕಳ್ಳ ಗುರುಗಳು ಸುಳ್ಳ ಶಿಷ್ಯರು ಕುಳಿತು ವಚನಕಾಲದ ಶರಣ ತತ್ವಗಳನ್ನು ಪಾಲಿಸಲು ಎದುರು ಕುಳಿತಿರುವ ಸಾವಿರಾರು ಮುಗ್ಧ ಭಕ್ತರಿಗೆ ಬೋಧೆ ಮಾಡುತ್ತಾರೆ. ಕಳ್ಳ-ಸುಳ್ಳರು ತಾವೆಂಬುದು ಮನದಟ್ಟಾಗಿದ್ದರೂ ತಾವಲ್ಲ, ನೀವು ಹೀಗೆ ಬದುಕಿ ಎಂದು ಮತ್ತೊಬ್ಬರಿಗೆ ಹೇಳುವ ಇವರ ನಡುವೆ ಆ ಬಸವ ಮೂಕನಾಗಿದ್ದಾನೆ. ವಚನ ಸಂದೆಶಗಳ ಹೆಸರಿನಲ್ಲಿ ಬಸವಣ್ಣನವರ ಪಟ ಮಾತ್ರ ಪ್ರಚಾರಕ್ಕೆ ಮತ್ತು ದುಡಿಮೆಗಾಗಿ ಬೇಕೆ ಹೊರತು ಅವರ ಆದರ್ಶಗಳು ಇವರಿಗೆ ಬೇಕಿಲ್ಲ – ಇವರ ಕೋಮಿನ ಮತದಾರರಿಗೆ ಬೆಕು. ಅವರೊಳಗಿನ ಜಾತಿಪ್ರಜ್ಞೆಯನ್ನು ಗಟ್ಟಿಗೊಳಿಸಲು ಬಳಸಿಕೊಳ್ಳುತ್ತಾರೆ. ಆತ್ಮಸಂವಾದದಲ್ಲಿ ಬಸವಣ್ಣ ನೂರಾರು ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುತ್ತ ತನ್ನೊಳಗೆ ತಾನೆ ಇರುವುದರಿಂದ ಲೋಕಕ್ಕಿಂತ ತನ್ನ ತಾನು ತಿದ್ದಿಕೊಳ್ಳಲಾರದ ಸ್ಥಿತಿಯಲ್ಲಿರುವ ಬಸವ ಕಂಡ.

ಅಂಬೇಡ್ಕರ್ :
ಬೆಳಕಿನ ದೊಂದಿ ಹಿಡಿದ ಸಾವಿರಾರು ನಕ್ಷತ್ರಗಳು ಮಿಣಕಮಿಣ ಮಿಂಚುತ್ತ ಫಳ್..ಫಳಾರ್ ಅಂತ ಮಿಂಚು ಸಿಡಿದು ಆಕಾಶ ಎರಡಾಗಿ ಸೀಳಿದ ಬೆಳಕಲ್ಲಿ ಯಾರೋ ನಿಂತಿದ್ದರು. ಅರೆ…! ಶಿಲ್ಪವಾಗಿರುವ ಮೂರ್ತಿ ಬೇರೆ ಇವರು ಬೇರೆ. ಇವರು ಬರುವಾಗ ಬೆನ್ನ ಹಿಂದೆ ಸರಿದು ಹೋಗುತ್ತಿದ್ದ ಕತ್ತಲಲ್ಲಿ ಎಷ್ಟೋ ಜೀವಿಗಳ ರೋದನ ಕೇಳುತ್ತಿತ್ತು. ಅದೆಲ್ಲದರ ನಡುವೆ ಭಗವತೋ ಅರಹತೋ ಸೊಲ್ಲಿನ ರಾಗ ಕೇಳುತ್ತಿತ್ತು.

ಪಂಚಶೀಲತತ್ವಗಳು ರಾಜಕೀಯದ ಅಖಾಡದೊಳಗ ಬಂದರೆ ಉತ್ಕಟವಾದ ಮನುಷ್ಯಪ್ರೀತಿ ಸಾಧ್ಯವಾಗತದ, ಆಗ ಮಾತ್ರ ಮನುಷ್ಯರನ್ನು Young_Ambedkarಮನುಷ್ಯರು ಪ್ರೀತಿಸುವ ಮತ್ತು ಶೋಷಣೆ ಮುಕ್ತ ಸಮಾಜ ಕಟ್ಟಲು ಸಾಧ್ಯವಾದೀತೆಂಬ ಹುಮ್ಮಸ್ಸಿನ ಮಾತು ನನ್ನೊಳಗೆ ಬೆಳೆಯುತ್ತಿದ್ದಂತೆ. ಆರ್.ಪಿ.ಆಯ್. ಕಾಂಗೈನೊಂದಿಗೆ ಹೊಂದಾಣಿಕೆ ಮಾಡಿಕೊಂಡಾಗಲೆ ಬಾಬಾಸಾಹೇಬರು ಭೂಮಿ ಮ್ಯಾಲಿನ ಆಶಯದ ಕಡೆ ಬೆನ್ನು ತಿರುಗಿಸಿರುವ ಹಾಗೆ ಕಾಣುತ್ತಿದ್ದರು. ಯುಗಪ್ರವರ್ತಕನ ವೇಷದೊಳಗೆ ಬಂದು ಹೋದಂತೆ ಕನಸಾಗಿ ಉಳಿದರೇನೋ ಅನಿಸುತ್ತಿದ್ದಾಗ ಮತ್ತೆ ಮೋಡ ಮರೆಯಾದಂತೆ ಬೆಳಕಿನ ಕಿಡಿ ಆಕಾಶದಗಲಕ್ಕೂ ಏಳತೊಡಗಿತು. ಬುದ್ಧ ನಗುವಿನೊಂದಿಗೆ ಕಾಣಿಸಿಕೊಂಡ ವ್ಯಕ್ತಿಯೋರ್ವ ಕತ್ತಲು ಬೆಳಕಿನಲ್ಲಿ ಓಡಾಡುತ್ತಿದ್ದ. ಆ ಬೆಳಕು ಗಪ್ಪಗಾರಾದಾಗ ಮತ್ತದೆ ನಿಶ್ಯಬ್ಧ.

ಆ ಕತ್ತಲಲ್ಲಿ ಅದೊಂದೇ ಮಾತು ಖಡಕ್ಕಾಗಿ ಆಗಸದಿಂದ ಕೇಳಿಬಂತು. “ಸುಡುಗಾಡದ ಅನುಭವ ಇಂಥದ್ದು ಎಂದರೆ ಸುಡುಗಾಡವನ್ನು ಅರಿತುಕೊಂಡಂತಾಗುವುದಿಲ್ಲ. ಮುನ್ನುಗ್ಗು, ನಿನಗೆ ನೀನೆ ಸೂರ್ಯನಾಗಿ ನಿಲ್ಲು.” ನನ್ನ ಪ್ರಪಂಚ ಸಣ್ಣದಿದೆ ಎಂದು ಹೇಳಬೇಕೆನ್ನುವಷ್ಟರಲ್ಲಿ ಮತ್ತೆ ನಮೋ ಭಗವತೋ ಅರಹತೋ ಕೇಳತೊಡಗಿತು. ಆಕೃತಿ ಕತ್ತಲಲ್ಲಿ ಕರಗಿತು. ಆ ಕತ್ತಲದ ರೋದನದಲ್ಲಿ ವೋಟಿನ ವ್ಯಾಪಾರ ಜೋರಾಗಿಯೇ ನಡೆದಿತ್ತು. ಫಂಡರಪುರದಲ್ಲಿ ಕುದುರೆ ವ್ಯಾಪಾರ ನಡೆಸುವ ಹಾಗೆ ಟವೆಲ್ಲನ್ನು ಕೈ ಮೇಲೆ ಹಾಕಿಕೊಂಡ ದಲ್ಲಾಳಿಗಳು, ಒಳಮುಚಗಿನಲ್ಲಿ ಏನೇನೋ ಲೆಕ್ಕಾಚಾರ ನಡೆಸುತ್ತಿದ್ದರು. ಖರೀದಿಗೆ ಕೊಟ್ಟವನಿಗೆ ಸಮಾಧಾನ ಆದಂತೆ ಕಂಡಾಗ ಅವನು ನಕ್ಕ ಇವನು ಗೆದ್ದ ಸಂಭ್ರಮದಲ್ಲಿದ್ದ.

ಗಾಂಧಿ :
ಕತ್ತಲೆಂದರೆ ಭಯಗೊಳ್ಳುವ ನನಗೆ ಕನಸುಗಳು ಬಿದ್ದದ್ದು ಅಪರೂಪವೇ ಅನ್ನಬೇಕು. ಆದರೆ ನೆನ್ನೆ ದಿನ ಒಂದು ಪಾತ್ರ ಏಕಾಕಿಯಾಗಿ ಇತಿಹಾಸದಿಂದ ಜಿಗಿದು ನೇರವಾಗಿ ನನ್ನ ಕಣ್ಣೊಳಗೆ ಮೂಡಿತ್ತು. ಜಗತ್ತೇ ನಮ್ರವಾಗಿ ನಮಿಸುವಾಗ ಇವನೇಕೆ ತಲೆಬಾಗುತ್ತಿಲ್ಲವೆಂಬ ಕುತೂಹಲದಿಂದ ಬಂದ ಪಾತ್ರವದು. ನನ್ನ ಹಾಸಿಗೆಯ ಹಿಂತುದಿಯಲ್ಲಿ ಕುಳಿತು ಮೆದುವಾಗಿ ನನ್ನ ಮೈದಡವಿ ಎಚ್ಚರಿಸಿ ಎದ್ದು ನಿಂತಿತು. ಅದೇ ಆ ಬೋಳುದಲೆ, ಉದ್ದಮೂಗಿನ ಚಪ್ಪಟೆಯ ಹಣೆ, ಮುಖದ ಆಳದಲ್ಲೆಲ್ಲೋ ಅವಿತು ಕುಳಿತಂತಿರುವ ಕಣ್ಣುಗಳಿಗೆ ವೃತ್ತಾಕಾರದ ಕನ್ನಡಕ, ಒಣಗಿ ಹೋಗಿದ್ದ ಒಣಕಲು ಕಡ್ಡಿಯಂತ ಆ ದೇಹ ವ್ಯಂಗ್ಯಚಿತ್ರದಿಂದ ಜೀವತಳೆದು ಮಾತಾಡಿಸಿ ಹೋಗಲು ಬಂದಂತಿತ್ತು. “ಇಷ್ಟು ತಡರಾತ್ರಿಗೆ ಬಂದ ನೀವು ಅದಾರು..? ನಿಮ್ಮ ನಾಮಾಂಕಿತವು ಅದೇನು..?” ಎಂದು ಅನಾಗರೀಕ ದೊಡ್ಡಾಟದ ಪಾತ್ರವಾಗಿ ಮಾತಾಡಿಸಿಬಿಟ್ಟೆ. “ರಾಮನೆಂದರೆ ಯಾರೆಂಬುದನ್ನು ಬಲ್ಲೆಯಾ?” ಬಚ್ಚಬಾಯಿಯಲ್ಲಿ ಹಲ್ಲಿಲ್ಲದಿದ್ದರೂ ಮಾತು ಸ್ಫಟಿಕವಾಗಿದ್ದವು. “ಓ ಹೌದೇನು ರಾಮರಲ್ಲಿ ನನಗೆ ಇಬ್ಬರು ರಾಮರ ಬಗ್ಗೆ ಗೊತ್ತುಂಟು” ಎಂದು ಬೀಗಿದೆ ನಾನು. “ವರ್ಗ ವ್ಯವಸ್ಥೆಯನ್ನು ಸುಭದ್ರ ಕಾಪಾಡಲು ಸೃಷ್ಟಿಸಲ್ಪಟ್ಟ ಮಹಾಕಾವ್ಯದ ಕ್ಷಾತ್ರ ಕುಲದ ಪಾತ್ರ ರಾಮನ ಬಗ್ಗೆ ಕೇಳುತ್ತಿದ್ದೀರಾ..? ಅಥವಾ ಸಂಸ್ಕೃತಿಯನ್ನು ಹಾಗೆ! ಹೀಗೆ! ಆ ಹಿಂದೆ ಹೇಗಿತ್ತು ಈಗ ಹೀಗಾಯ್ತಲ್ಲ ಅಂತ ರಾಷ್ಟ್ರದ ಭವಿಷ್ಯ ಭ್ರಮಿಸಲ್ಪಟ್ಟ್ಟು – ಇತಿಹಾಸವನ್ನು ಸರಿಪಡಿಸಲು ಟೊಂಕ ಕಟ್ಟಿರುವ ಪುಂಡರ, ಭಂಡರ ಗುಂಪುಗಾರಿಕೆಗೆ ವಸ್ತುವಾಗಿರುವ ರಾಮನೋ..? ಯಾವ ರಾಮ ಹೇಳಿ?” ಎಂದು ಮರುಪ್ರಶ್ನಿಸಿದಾಗ. ಆ ಬಂದಂಥ ಮಹಾನುಭಾವ ಕನಿಕರದಿಂದಲೇ “ಆ ರಾಮರು ಬೇರೆ – ನಾನು ಕೇಳುತ್ತಿರುವ ರಾಮ ಬೇರೆ” ಎಂದರು.

ಈ ಜಗತ್ತಿನಲ್ಲಿ ಮೂರನೆಯ ರಾಮನೊಬ್ಬನಿದ್ದಾನೆಯೇ? ಅಯ್ಯಯ್ಯೋ ಹಾಗಿದ್ದರೆ ಆ ರಾಮನ ಕುರಿತಾಗಿ ನಾನು ತಿಳಿದುಕೊಳ್ಳಲಿಲ್ಲವಲ್ಲ ಎಂದು ನೊಂದುಕೊಳ್ಳುತ್ತಿರುವಾಗಲೇ… “ನಿನಗೆ ತಿಳಿದಿರಲೋ ಹುಡಗಾ, ಅವನೊಬ್ಬ ಅಹಿಂಸಾತ್ಮಕ ರಾಮ. ಮನಸ್ಸಿನ ತೇಜಸ್ಸನ್ನು, ನೈತಿಕ ನಡೆಯನ್ನು ಕ್ಷಣಕ್ಷಣಕ್ಕೂ ನಿನ್ನಲ್ಲಿ ಒರೆಗೆ ಹಚ್ಚುವ ಅಂತಃಶ್ಯಕ್ತಿಯ ಸೂಚಕ ಈ ರಾಮ” ಎಂದು ಹೇಳುತ್ತಿದ್ದಾಗ ನನಗೆ ಈಗ ಬಂದಿರುವ ಇವರು ಯಾರೆಂಬ ಬೆರಗು ಮೂಡತೊಡಗಿತು. ನನ್ನ ಮನದೊಳಗಿನ ಪ್ರಶ್ನೆ ಕಣ್ಣೊಳಗಿನ ಕಸ/ಕೆಸರು ಚುಚ್ಚುವ ಹಾಗೆ ಆತನ ಎದೆಗೆ ನಾಟಿತೋ ಏನೋ ಅವರು ಕಸಿವಿಸಿಯಾಗುತ್ತಿದ್ದರು. “ಅಯ್ಯೋ ಹುಚ್ಚು ಹುಡುಗಾ ನಾನಪ್ಪಾ, ಬದುಕಿದ್ದಾಗಲೇ ಮಹಾತ್ಮನಾಗಿದ್ದ ಈ ದೇಶದ ಪಿತಾಮಹಾ! ನನ್ನ ಗುರುತು ಸಿಕ್ಕಲಿಲ್ಲವೇನಪ್ಪ ನಿನಗೆ?” ಕನಿಕರದ ಮುಗುಳ್ನಗೆ ತುಟಿಯಿಂದಾಚೆ ಮೂಡಲಿಲ್ಲ, ಆದರೂ ನಕ್ಕರು.

ಛೇ..! ನನ್ನ ತಲೆಯಲ್ಲಿ ಭೀಮಗಾತ್ರದ ಮಾನವೀಯ ಮುಖಗಳನ್ನು ಬಿಟ್ಟರೆ ಬೇರೆಲ್ಲ ಮುಖಗಳು 200px-MKGandhi[1]ಗೋಮುಖದ ಸೋಗಿನ ಪಾತ್ರಗಳಂತೆ ಇತಿಹಾಸದಲ್ಲಿ ಕುಣಿಯುತ್ತಿದ್ದವು. ಇವನಾರು…? ಶುದ್ಧೋದನನ ಮಗ ಸುಗತ ಸಿದ್ಧಾರ್ಥನೇ? ಅಲ್ಲ. ಬಾವಲಿ ಥರದ ಚಾಚು ರೆಕ್ಕೆಗಳಲ್ಲಿ ಅವಮಾನ ಹತಾಶೆಗಳೆಲ್ಲವನು ಮುಚ್ಚಿಟ್ಟುಕೊಂಡು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ಮನ್ನಣೆ ಕೊಡಿಸಿ, ಮಖಮಲ್ಲು ವಸ್ತ್ರದಲ್ಲಿ ಬೆಚ್ಚಗಿನ ಬದುಕಿಗೆ ಅಣಿಮಾಡಿಕೊಟ್ಟ ಬಾಬಾ ಸಾಹೇಬ್..? ಅವರೂ ಅಲ್ಲ. ಈ ದೇಶದ ಪ್ರತಿಯೊಬ್ಬ ದೀನ ದಲಿತರ ಹಿಂದುಳಿದವರ ಉದ್ಧಾರ ಮಾಡಲು ಬರುವ ಪ್ರತಿಯೊಬ್ಬರೂ ಮಹಾತ್ಮರೇ ಆಗಿರುವಾಗ ಈಗ ಬಂದಿರುವ ಇವರ್‍ಯಾರು..?

“ನೆತ್ತಿಮಾಸ ಆರದ ಎಳೆಗರುವಿನಂತೆ ಯಾಕೆ ನಿನ್ನ ಚಿತ್ತವನ್ನು ಚಂಗನೆ ಚಂಚಲಗೊಳಿಸುತ್ತಿರುವೆ ಹುಡುಗಾ… ನಾನು ಕಣಪ್ಪ ಕಂದ, ಹಳ್ಳಿಯ ಸಾಂಸ್ಕೃತಿಕ ಮಾದರಿಯಲ್ಲಿ ಇಡೀ ಭಾರತವನ್ನು ನನ್ನ ಕನಸಿನ ಗ್ರಾಮಭಾರತವಾಗಿಸಲು ಹವಣಿಸಿದವ. ಅದೇ ಮಾದರಿಯಿಟ್ಟುಕೊಂಡು ರಾಷ್ಟ್ರೀಯತೆಯನ್ನು ಜಾಗೃತಗೊಳಿಸಲು ಸತತ ಸೆಣಿಸಿದ ಸತ್ಯವಂತ ಅಹಿಂಸಾಮಾರ್ಗಿ ಗಾಂಧಿ,”

ನನ್ನ ದುರ್ದೆಸೆಗೆ ಮರುಕಪಟ್ಟಿರಬೇಕು. ನಾನು ಕ್ಷಮೆಯಾಚಿಸಲು ಏನೂ ಉಳಿದಿರಲಿಲ್ಲ ಅಲ್ಲಿ. ಹೇಗೆ ಸತ್ಕರಿಸಬೇಕು. ಯಾವ ಬಗೆಯಲ್ಲಿ ಉಪಚರಿಸಬೇಕೆಂದು ತಿಳಿಯದಾಗಿತ್ತು. ವಂದಮಿ, ಜೈ ಭೀಮ ಹೇಳಲೇ, ಲಾಲ್‌ಸಲಾಮ್ ಅನ್ನಲೇ, ಕಾಮ್ರೇಡ್ ಕುಳಿತುಕೊಳ್ಳಿ ಅನ್ನಬೇಕೋ ಅಥವಾ ಗುರು ಹಿರಿಯರನ್ನು ಕಂಡಾಗ ಮನಸ್ಸಿಲ್ಲದ ಮನಸ್ಸಿನಿಂದ ನಮಸ್ಕರಿಸುವಂತೆ ನಮಸ್ಕರಿಸಬೇಕೋ, ರಾಮರಾಮಾ ಎಂದು ಹೇಳಬೇಕೊ,,, ಒಂದೂ ತಿಳಿಯದೇ ಗೊಂದಲದಲ್ಲಿದ್ದಾಗ ಗಾಂಧಿ ಮುಂದೆ ಬಂದು ನನ್ನ ಬಿಗಿ ಹಿಡಿದು ಅಪ್ಪಿಕೊಳ್ಳಲು ಮುಂದಾದರು. “ನನ್ನಲ್ಲಿ ತ್ರಾಣ ಉಳಿದಿಲ್ಲ ಮಾರಾಯಾ, ಉಪವಾಸಕ್ಕೊಂದು ಕೊನೆಯೆಂಬುದು ಇಲ್ಲವಾಗಿದೆ ನನಗೆ, ಹಾಲು ಹಣ್ಣು ಕೊಟ್ಟು ಸಲಹುತ್ತೀಯಾ?” ನಮ್ರವಾಗಿತ್ತು ಮಾತಿನ ಧಾಟಿ.

“ಬಾಪೂಜಿ, ಈಗ ಯಾವ ಉಪವಾಸ ಮಾಡುತ್ತಿದ್ದೀರಿ..?”

“ಹತೋಟಿಯಲ್ಲಿಟ್ಟುಕೊಳ್ಳಲಾರದ ಆಸೆಗಳ ವಿರುದ್ಧ ಅಂತ ಹೇಳಲೇನು, ಇರುವ ರೊಕ್ಕ ಇದ್ದ ಹಾಗೆನೆ ಅದರ ಬೆಲೆಗೆ ಮಹತ್ವಕೊಟ್ಟು ಜನಸಾಮಾನ್ಯರ ದಿಕ್ಕು ತಪ್ಪಿಸುತ್ತಿರುವ ನನ್ನ ನೋಟುಗಳ ವಿರುದ್ಧ ಅನ್ನಬೇಕೋ ತಿಳಿಯದಾಗಿದೆ. ಒಟ್ಟಿನಲ್ಲಿ ಉಪವಾಸಕ್ಕೊಂದು ಕೊನೆಯಿಲ್ಲದಾಗಿದೆ…” ಮನಸ್ಸಿನ ಖಿನ್ನತೆಯಲ್ಲಿ ಇನ್ನೂ ಏನನ್ನೋ ಹೇಳುತ್ತಲಿದ್ದರು.

“ಇಲ್ಲೇ ಇರಿ ಈಗ ಬಂದೆ,” ಎಂದು ಎದ್ದು ಒಳಹೋಗುತ್ತಿದ್ದಂತೆಯೇ ರಘುಪತಿ ರಾಘವ ಭಜನ್ ಕೇಳಿತೋ ಇಲ್ಲವೋ ಎಂಬಂತೆ ಕೇಳತೊಡಗಿತು. ಇಡೀ ಖೋಲಿಯೇ ಖಾಲಿಯಾಗಿತ್ತು ನನ್ನ ಕುರುಹಿಗೂ ನಾನು ಉಳಿದಿರಲಿಲ್ಲ. ಇದು ಚುನಾವಣಾ ಅಖಾಡದಿಂದ ಹೊರಗಿರುವ ಪಾತ್ರವೆನಿಸತೊಡಗಿತು. ಅದೇ ಆ ರಾಜಕೀಯ ಅಂಗಳದಲ್ಲಿನ ಫ್ಲೆಕ್ಷ್ ಒಂದರಿಂದ ಎದ್ದು ಬಂದಂತಿದ್ದ ಅವರ ಬಡಕಲು ಶರೀರದ ಅಂತಃಕರಣ ನನ್ನ ಕೆಣಕಿತ್ತು.

ಇವರ ಹೊರತಾಗಿ ಮತ್ತೊಬ್ಬರು ಮನಃಪಟಲದಲ್ಲಿ ಸುಳಿಯಲಿಲ್ಲವಾಗಿ ಬುದ್ದ, ಬಸವ, ಗಾಂಧಿ ಮತ್ತು ಅಂಬೇಡ್ಕರ ಅವರ ಆಲೋಚನೆಯ ಬೆಳಕಿನಲ್ಲಿರುವ ಪ್ರಜಾಪ್ರಭುತ್ವದ ಆಶಯಗಳು ಫ್ಲೆಕ್ಸ್‌ನಿಂದ ಹೊರಬಂದು ಆಚೆಗೆ ನಿಂತ ಚೈತನ್ಯಗಳಲ್ಲಿವೆ. ವೋಟ ಮಾಡಲು ಆ ರೂಪದ ವ್ಯಕ್ತಿಗಳ ತಲಾಶ ಮಾಡಬೇಕಿದೆ. ಆಗ ಮತ(ವೋಟು)ದ ಸಾರ್ಥಕ್ಯವೂ ಬಲಗೊಳ್ಳುತ್ತದೆ.