Monthly Archives: April 2013

ಗುಜರಾತ್ ಲೋಕಾಯುಕ್ತ ಕಾಯ್ದೆ ತಿದ್ದುಪಡಿ – ಲೋಕಾಯುಕ್ತ ದುರ್ಬಲಗೊಳಿಸುವ ಯತ್ನ

– ಆನಂದ ಪ್ರಸಾದ್

ಗುಜರಾತ್ ವಿಧಾನಸಭೆಯಲ್ಲಿ ಆ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಿ ಲೋಕಾಯುಕ್ತ ಸಂಸ್ಥೆಯನ್ನು ಅಧಿಕಾರಸ್ಥರ ಕೈಗೊಂಬೆಯನ್ನಾಗಿ ಮಾಡುವ ಪ್ರಯತ್ನ ಮುಖ್ಯಮಂತ್ರಿ ಮೋದಿಯವರಿಂದ ನಡೆದಿದೆ. ಕಳೆದ ಏಳೆಂಟು ವರ್ಷಗಳಿಂದ ಗುಜರಾತಿನಲ್ಲಿ ಲೋಕಾಯುಕ್ತ ಹುದ್ಧೆಯನ್ನು ಖಾಲಿ ಬಿಟ್ಟಿರುವ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪಾರದರ್ಶಕ ಆಡಳಿತ ನೀಡುತ್ತಿದ್ದೇನೆ ಎಂದು ಹೇಳಿಕೊಳ್ಳುತ್ತಿರುವುದಕ್ಕೆ ಇದು ತದ್ವಿರುದ್ಧವಾಗಿದೆ. Narendra_Modiಮುಖ್ಯಮಂತ್ರಿಯ ಈ ನಿಲುವಿನಿಂದ ಬೇಸತ್ತ ಗುಜರಾತಿನ ರಾಜ್ಯಪಾಲರು ನೂತನ ಲೋಕಾಯುಕ್ತರನ್ನು ನೇಮಿಸಿದ್ದರೂ ಅದನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ ರಾಜ್ಯ ಸರ್ಕಾರದ ನಿಲುವನ್ನು ಅವೆರಡೂ ತಳ್ಳಿಹಾಕಿ ಲೋಕಾಯುಕ್ತರ ನೇಮಕ ಸಿಂಧು ಎಂದು ತೀರ್ಪು ನೀಡಿವೆ. ಈ ಮಧ್ಯೆ ಮೋದಿ ಸರ್ಕಾರ ಈ ತೀರ್ಪನ್ನು ಪುನರ್ ಪರಿಶೀಲಿಸುವಂತೆ ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿದೆ. ಇದೀಗ ಲೋಕಾಯುಕ್ತರ ನೇಮಕದ ಅಧಿಕಾರವನ್ನು ರಾಜ್ಯ ಸರ್ಕಾರದ ಹಿಡಿತಕ್ಕೆ ತೆಗೆದುಕೊಳ್ಳುವ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಪಾಸು ಮಾಡಿಸಿಕೊಂಡಿದೆ.

ಲೋಕಾಯುಕ್ತ ಕಾಯ್ದೆಗೆ ತಂದಿರುವ ನೂತನ ತಿದ್ದುಪಡಿಯ ಪ್ರಕಾರ ಲೋಕಾಯುಕ್ತರ ನೇಮಕದ ಅಧಿಕಾರ ರಾಜ್ಯ ಸರ್ಕಾರದ ಪರಮಾಧಿಕಾರವನ್ನಾಗಿ ಮಾಡಲಾಗಿದೆ. ಲೋಕಾಯುಕ್ತರ ನೇಮಕ ಸಮಿತಿಯೊಂದರ ಮೂಲಕ ಮಾಡಲಾಗುತ್ತದೆ. ಅದಕ್ಕೆ ಸದಸ್ಯರಾಗಿ ಮುಖ್ಯಮಂತ್ರಿ, ಮುಖ್ಯಮಂತ್ರಿ ಸೂಚಿಸಿದ ಒಬ್ಬ ಮಂತ್ರಿ, ರಾಜ್ಯ ವಿಧಾನಸಭೆಯ ಸ್ಪೀಕರ್, ವಿರೋಧ ಪಕ್ಷದ ನಾಯಕ, ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಸೂಚಿಸುವ ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ಹಾಗೂ ರಾಜ್ಯದ ವಿಜಿಲೆನ್ಸ್ ಕಮಿಷನರ್ ಹೀಗೆ ಆರು ಜನರನ್ನು ಸದಸ್ಯರನ್ನಾಗಿ ಮಾಡಲಾಗುತ್ತದೆ. ನೂತನ ತಿದ್ದುಪಡಿಯ ಪ್ರಕಾರ ರಾಜ್ಯಪಾಲರ ಲೋಕಾಯುಕ್ತ ನೇಮಕದ ಅಧಿಕಾರವನ್ನು ತೆಗೆದುಹಾಕಲಾಗಿದೆ. ರಾಜ್ಯಪಾಲರು ಸಮಿತಿಯು ಸೂಚಿಸಿದ ವ್ಯಕ್ತಿಯನ್ನು ಲೋಕಾಯುಕ್ತರನ್ನಾಗಿ ಮಾಡಬೇಕಾಗುತ್ತದೆ.

ಲೋಕಾಯುಕ್ತ ನೇಮಕ ಸಮಿತಿಯಲ್ಲಿ ರಾಜ್ಯ ಸರ್ಕಾರದ ಹಿಡಿತ ಅಧಿಕವಾಗಿದೆ ಹೇಗೆಂದರೆ ಮುಖ್ಯಮಂತ್ರಿ, ಮುಖ್ಯಮಂತ್ರಿ ಸೂಚಿಸಿದ ಒಬ್ಬ ಮಂತ್ರಿ, ರಾಜ್ಯ ವಿಧಾನಸಭೆ ಸ್ಪೀಕರ್ ಹೀಗೆ ಮೂರು ಜನ ಸೇರಿ 50% ಹಿಡಿತ ರಾಜ್ಯ ಸರ್ಕಾರದಲ್ಲಿರುತ್ತದೆ. ಅದಲ್ಲದೆ ರಾಜ್ಯ ವಿಜಿಲೆನ್ಸ್ ಕಮಿಷನರ್ ಕೂಡ ರಾಜ್ಯ ಸರ್ಕಾರದ ನೇಮಕವಾಗಿರುವ ಕಾರಣ ಈ ಹಿಡಿತ ಮತ್ತಷ್ಟು ಹೆಚ್ಚಾಗುತ್ತದೆ. ಇನ್ನುಳಿದಿರುವುದು ಹೈಕೋರ್ಟಿನ ಒಬ್ಬ ನ್ಯಾಯಾಧೀಶರು ಹಾಗೂ ವಿರೋಧ ಪಕ್ಷದ ನಾಯಕರು. ಇವರು ಅಲ್ಪಸಂಖ್ಯಾತರಾಗಿರುವ ಕಾರಣ ಬಹುಸಂಖ್ಯಾತ ಸದಸ್ಯರು ಸೂಚಿಸಿದ ವ್ಯಕ್ತಿ ಲೋಕಾಯುಕ್ತರಾಗುತ್ತಾರೆ. ಹೀಗೆ ಅಧಿಕಾರಸ್ಥರು ಸೂಚಿಸಿದ ವ್ಯಕ್ತಿ ಲೋಕಾಯುಕ್ತರಾಗುತ್ತಾರೆ. ಇವರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೆ ಎಂದು ನಿರೀಕ್ಷಿಸುವುದು ಸಾಧ್ಯವಿಲ್ಲ. ಹೀಗೆ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ. ಇದರ ಬದಲು ಹೈಕೋರ್ಟಿನ ನ್ಯಾಯಾಧೀಶರು, ವಿರೋಧ ಪಕ್ಷದ ನಾಯಕರು ಹಾಗೂ ಮುಖ್ಯಮಂತ್ರಿ graft-corruptionಹೀಗೆ ಮೂವರಿಗೂ ಒಪ್ಪಿಗೆಯಾಗುವ ವ್ಯಕ್ತಿ ಅಥವಾ ಈ ಮೂವರಲ್ಲಿ ಇಬ್ಬರಿಗೆ ಒಪ್ಪಿಗೆಯಾಗುವ ವ್ಯಕ್ತಿ ಲೋಕಾಯುಕ್ತರಾದರೆ ಅದನ್ನು ನಿಷ್ಪಕ್ಷಪಾತ ನೇಮಕ ಎಂದು ಹೇಳಬಹುದು. ಮೋದಿ ಸರ್ಕಾರದ ಕ್ರಮ ಇದಕ್ಕೆ ಪೂರಕವಾಗಿಲ್ಲ. ಹೀಗಾಗಿ ಮೋದಿ ಸರ್ಕಾರಕ್ಕೆ ನಿಷ್ಪಕ್ಷಪಾತ ನೇಮಕ ಬೇಕಾಗಿಲ್ಲ, ತನ್ನ ಕೈಗೊಂಬೆಯಾಗುವ ವ್ಯಕ್ತಿಯ ನೇಮಕ ಬೇಕಾಗಿದೆ ಎಂದು ಹೇಳಬಹುದು. ಕೇಂದ್ರ ಕಾಂಗ್ರೆಸ್ ನೇತೃತ್ವದ ಸರ್ಕಾರ ಸಿಬಿಐ ಅನ್ನು ಕೈಗೊಂಬೆಯ ರೀತಿ ಬಳಸುತ್ತದೆ ಎಂದು ವ್ಯಂಗ್ಯವಾಡುವ ಮೋದಿಯವರು ಅಥವಾ ಬಿಜೆಪಿಯವರು ಈಗ ಗುಜರಾತಿನಲ್ಲಿ ಮಾಡಲು ಹೊರಟಿರುವುದು ಇದನ್ನೇ ಅಲ್ಲವೇ? ಹೀಗಾದರೆ ಇವರಿಗೂ ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸವೇನು ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಮೂಡದೆ ಇರಲಾರದು.

ಗುಜರಾತಿನ ವಿಧಾನಸಭೆಯಲ್ಲಿ ಮಂಡಿಸಿದ 2009-2010 ಹಾಗೂ 2010-2011ನೇ ಸಾಲಿನ ಸಿಎಜಿ ವರದಿ ರಾಜ್ಯ ಸರ್ಕಾರ 17,000 ಕೋಟಿ ಅವ್ಯವಹಾರ ನಡೆಸಿದೆ ಹಾಗೂ ಬೊಕ್ಕಸಕ್ಕೆ ನಷ್ಟವಾಗುವಂತೆ ಸರ್ಕಾರ ನಡೆದುಕೊಂಡಿದೆ ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದನ್ನು ನೋಡುವಾಗ ಮೋದಿ ಸರ್ಕಾರದಲ್ಲಿ ಅವ್ಯವಹಾರಗಳು ನಡೆದಿರುವ ಮತ್ತು ಅದನ್ನು ಮುಚ್ಚಿ ಹಾಕಲು ಲೋಕಾಯುಕ್ತರ ನೇಮಕ ಮಾಡಲಾಗಿಲ್ಲ ಮತ್ತು ತಮ್ಮ ಕೈಗೊಂಬೆಯಾಗುವ ಲೋಕಾಯುಕ್ತರ ನೇಮಕ ಮೋದಿ ಸರ್ಕಾರಕ್ಕೆ ಬೇಕಾಗಿದೆ ಎಂಬ ಅಭಿಪ್ರಾಯ ಜನತೆಯಲ್ಲಿ ಮೂಡಿದರೆ ಅಚ್ಚರಿ ಇಲ್ಲ. ಮೋದಿ ಪ್ರಧಾನಿಯಾದರೆ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ ಸಾಧ್ಯ ಎಂಬ ಪ್ರಚಾರ ಬಂಡವಾಳಶಾಹಿಗಳು ವ್ಯವಸ್ಥಿತವಾಗಿ ನಡೆಸುವ ಅಬ್ಬರದ ಪ್ರಚಾರ ಎಂದು ಇದರಿಂದ ಜನರಿಗೆ ಅನಿಸುವ ಸಾಧ್ಯತೆ ಹೆಚ್ಚಾಗಿದೆ.

ಕಾಮೆಂಟ್ ಮಾಡುವವರ ಗಮನಕ್ಕೆ, ಮತ್ತೊಮ್ಮೆ…

ಸ್ನೇಹಿತರೇ,

ಇತ್ತೀಚೆಗೆ ಆನಂದ ಪ್ರಸಾದರ “ಕಾನೂನು ಕೈಗೆತ್ತಿಕೊಳ್ಳುವ ಬಲಪಂಥೀಯರಿಗೆ ಈ ದೇಶದಲ್ಲಿ ಯಾಕೆ ಶಿಕ್ಷೆ ಆಗುವುದಿಲ್ಲ?” ಲೇಖನಕ್ಕೆ ಬಂದ ಪ್ರತಿಕ್ರಿಯೆಗೆ ಪೂರಕವಾಗಿ ಅನೇಕರು ಪ್ರತಿಕ್ರಿಯಿಸಿದ್ದಾರೆ. ಆದರೆ ಅವು ಯಾವುವೂ ಬಹುಶಃ ಪ್ರಕಟವಾಗಿಲ್ಲ. ಅದಕ್ಕೆ ಕಾರಣ, ಪ್ರತಿಕ್ರಿಯಿಸಿದವರ ಹೆಸರು ಮತ್ತ್ ಇಮೇಲ್ ವಿಳಾಸಗಳು ನಮ್ಮ ವೆಬ್‌ಸೈಟ್‌ನ ಬ್ಲಾಕ್ಡ್ ಲಿಸ್ಟ್‌ನಲ್ಲಿರುವುದು.

ನನಗೆ ಮತ್ತು ವರ್ತಮಾನ.ಕಾಮ್‌ಗೆ ಓದುಗರ ಪ್ರತಿಕ್ರಿಯೆಗಳನ್ನು ಅಲ್ಲಲ್ಲಿ ಎಡಿಟ್ ಮಾಡಿ ಅಪ್ರೂವ್ ಮಾಡುವುದರಲ್ಲಿ ನಂಬಿಕೆ ಇಲ್ಲ. courtesy-announcementಪ್ರಕಟವಾದರೆ ಸಂಪೂರ್ಣವಾಗಿ ಪ್ರಕಟವಾಗಬೇಕು, ಇಲ್ಲವಾದಲ್ಲಿ ಇಲ್ಲ. ಈ ನೀತಿಯಿಂದಾಗಿ ಒಂದೇ ಒಂದು ಕೆಟ್ಟ ಅಭಿರುಚಿಯ ಪದ ಇದ್ದರೂ ಅಂತಹ ಕಾಮೆಂಟ್‌ಗಳು ಪ್ರಕಟವಾಗಿಲ್ಲ. ಕೆಲವು ಬಾರಿ ಕಾಮೆಂಟ್ ಎಷ್ಟೇ ಒಳ್ಳೆಯದಿದ್ದರೂ ಒಂದೇ ಒಂದು ಪದದ ಕಾರಣಗಳಿಂದ ಅದನ್ನು ಡಿಲೀಟ್ ಮಾಡಲಾಗಿದೆ. ಇದನ್ನು ನಮ್ಮಲ್ಲಿಯ ಲೇಖನಗಳಿಗೆ ಪ್ರತಿಕ್ರಿಯಿಸುವವರು ಗಮನಿಸಬೇಕು.

ಹಾಗೆಯೇ, ಕೆಲವು ಜನ ಪದೇಪದೇ ವೈಯಕ್ತಿಕ ದಾಳಿ ಮಾಡುವ ಪ್ರತಿಕ್ರಿಯೆಗಳನ್ನು, ಕೆಟ್ಟ ಭಾಷೆಯಲ್ಲಿ ಬೆರೆದಿರುತ್ತಾರೆ. ಅಂತಹ ಮೂರ್ನಾಲ್ಕು ಹೆಸರುಗಳು ನಮ್ಮ ಸಿಸ್ಟಮ್‌ನ ಬ್ಲಾಕ್ಡ್ ಲಿಸ್ಟ್‌ನಲ್ಲಿದ್ದು ಆ ಲಿಸ್ಟ್‌ನಲಿರುವವರು ಮಾಡುವ ಕಾಮೆಂಟ್‌ಗಳು ತನ್ನಂತಾನೆ ತಡೆಹಿಡಿಯಲ್ಪಡುತ್ತವೆ ಮತ್ತು ತನ್ನಂತಾನೆ ಟ್ರ್ಯಾಷ್‌ಗೆ ಹೋಗುತ್ತದೆ.

ಕಾಮೆಂಟ್‌ಗಳು ಎಷ್ಟೇ ತೀಕ್ಷಣವಾಗಿದ್ದರೂ ಅವು ಇಲ್ಲಿ ಪ್ರಕಟವಾಗುತ್ತವೆ, ಆದರೆ, ಭಾಷೆ ಸಭ್ಯವಾಗಿರಲಿ. ಹಾಗೆಯೇ ಪ್ರತಿಕ್ರಿಯಿಸುತ್ತಿರುವ ಲೇಖನಕ್ಕೆ ವಸ್ತುನಿಷ್ಟವಾಗಿರಲಿ. ಇಂತಹ ಅನೇಕ ಕಾಮೆಂಟ್‌ಗಳು ಇಲ್ಲಿ ಯಾವುದೇ ಅಡೆತಡೆ ಇಲ್ಲದೆ ಪ್ರಕಟವಾಗಿವೆ.

ಮತ್ತು, ನೀವು ಮೊದಲ ಸಲ ಕಾಮೆಂಟ್ ಹಾಕುತ್ತಿದ್ದರೆ ಅದು ಅಪ್ರೂವ್ ಆಗುವ ತನಕ ಪೆಂಡಿಂಗ್‌ನಲಿರುತ್ತದೆ. ಒಮ್ಮೆ ಅಪ್ರೂವ್ ಆದಮೇಲೆ, ನೀವು ಅದೇ ಹೆಸರಿನಲ್ಲಿ ಮತ್ತು ಇಮೇಲ್‌ನಲ್ಲಿ ಕಾಮೆಂಟ್ ಮಾಡಿದರೆ ಯಾವುದೇ ನಿರ್ಬಂಧ ಇಲ್ಲದೆ ತತ್‌ಕ್ಷಣ ಪ್ರಕಟವಾಗುತ್ತದೆ. ಮೊದಲ ಬಾರಿಗೆ ಮಾತ್ರ ಅಪ್ರೂವ್ ಮಾಡುವ ತನಕ ಕಾಯಬೇಕು. ಮತ್ತು, ಅಪ್ರೂವ್ ಆದ ಮೇಲೆ ನೀವು ಪದೇಪದೇ ಕೆಟ್ಟ ಭಾಷೆಯಲ್ಲಿ ಅಥವ ಅಸಂಗತವಾಗಿ ಪ್ರತಿಕ್ರಿಯಿಸುತ್ತ ಹೋದರೆ, ಒಂದು ಇಲ್ಲ ಎರಡು ಬಾರಿ ಡಿಲೀಟ್ ಮಾಡಿ ನೋಡಲಾಗುತ್ತದೆ. ಅದೇ ರೀತಿಯೆ ಮಾಡುತ್ತಿದ್ದರೆ ಆ ಹೆಸರು ನಮ್ಮ ಬ್ಲಾಕ್ಡ್ ಲಿಸ್ಟ್‌ಗೆ ಹೋಗುತ್ತದೆ.

ಬರಹಗಾರರು ಬರೆಯುವಷ್ಟೇ ಬದ್ಧತೆಯಿಂದ ಮತ್ತು ಪ್ರಬುದ್ಧತೆಯಿಂದ ಪ್ರತಿಕ್ರಿಯಿಸುವವರೂ ಸಂವಾದಿಸಬೇಕು ಎನ್ನುವುದೇ ಈ ಎಲ್ಲದರ ಹಿಂದಿರುವ ಉದ್ದೇಶ. ಕಾಮೆಂಟ್ ಮಾಡುವವರು ಸಹಕರಿಸಬೇಕು.

ಈ ಮಾಹಿತಿಗೆ ಪೂರಕವಾಗಿ ವರ್ತಮಾನ.ಕಾಮ್‌ಗೆ ವರ್ಷ ಪೂರೈಸಿದ ಆಸುಪಾಸಿನಲ್ಲಿ ಬರೆದಿದ್ದ “ಓದುಗರ ಮತ್ತು ಕಾಮೆಂಟುದಾರರ ಗಮನಕ್ಕೆ…” ಲೇಖನವನ್ನು ಮತ್ತೊಮ್ಮೆ  ಗಮನಿಸಬೇಕೆಂದು ವಿನಂತಿಸುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ

ಕುರಿಮಂದೆಯ ಹಿಂದೆ-ಮುಂದೆ ಎಂಥವರಿರಬೇಕು ?


– ಚಿದಂಬರ ಬೈಕಂಪಾಡಿ


 

ರಾಜಕಾರಣಿಗಳ ಹಿಂದೆ ಮತದಾರರೆಲ್ಲಾ ಕುರಿಮಂದೆ ಎನ್ನುವ ಮೂಲಕ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ತಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡಿದ್ದಾರೆ. ಕಾಟ್ಜು ಅವರ ಹೇಳಿಕೆಯಿಂದ ಎರಡು ರೀತಿಯ ಪರಿಣಾಮ ಗುರುತಿಸಬಹುದು. ಹೀಗೆ ಹೇಳಿದ್ದು ಸರಿಯಲ್ಲ, ಮತದಾರರಿಗೆ ಅವಮಾನ ಎನ್ನುವುದು ಮತ್ತು ಹೇಳಿದ್ದರಲ್ಲಿ ತಪ್ಪೇನೂ ಇಲ್ಲ, ಕಟುಸತ್ಯವನ್ನೇ ಹೇಳಿದ್ದಾರೆ ಎನ್ನುವುದು. ಇಂಥ ಚರ್ಚೆಗೆ ಕಾರಣವಾಗುವ ಅಂಶ ಹೇಳಿಕೆ ಕೊಟ್ಟ ವ್ಯಕ್ತಿಯ ಸ್ಥಾನಮಾನ.JUDGE MARKANDEY KATJU_1 ಇದೇ ಹೇಳಿಕೆಯನ್ನು ದಾರಿಹೋಕ ಹೇಳಿದ್ದರೆ ಅಥವಾ ಹೊಲದಲ್ಲಿ ಉಳುವ ರೈತ ಆಡಿದ್ದರೆ, ಹೊತ್ತು ಕಳೆಯುವುದಕ್ಕಾಗಿ ಹರಳಿಕಟ್ಟೆಯ ಮೇಲೆ ಕುಳಿತು ಹರಟೆ ಹೊಡೆಯುವ ಮಂದಿ ಹೇಳಿದ್ದರೆ ಇಷ್ಟೊಂದು ಮಹತ್ವ ಪಡೆಯುತ್ತಿರಲಿಲ್ಲ. ಆದ್ದರಿಂದ ಕಾಟ್ಜು ಅವರು ಹೇಳಿರುವ ಈ ಮಾತುಗಳನ್ನು ಈ ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಕನಿಷ್ಟ ಒಂದಿಬ್ಬರಾದರೂ ಹಿಂದೆ ಹೇಳಿರುತ್ತಾರೆ, ಈಗಲೂ ಅದನ್ನೇ ಹೇಳುತ್ತಾರೆ. ಆದರೆ ಅವರ ಹೇಳಿಕೆಗೆ ಮನ್ನಣೆ ಸಿಗುವುದಿಲ್ಲ. ಕಾಟ್ಜು ಹೇಳಿರುವುದರಿಂದ ಮಾತ್ರ ಸುದ್ದಿಯಾಗಿದೆ, ಚರ್ಚೆಯಾಗುತ್ತಿದೆ ಹೊರತು ಇದೇ ಮಾತನ್ನು ಸಾಮಾನ್ಯ ಜನ ಹೇಳಿದ್ದರೆ ಮಾಧ್ಯಮಗಳಿಗೆ ಅದು ಸುದ್ದಿಯೂ ಅಲ್ಲ, ಮನ್ನಣೆಯೂ ಸಿಗುತ್ತಿರಲಿಲ್ಲ. ದಿನದ ಮಟ್ಟಿಗೆ ಮಾಧ್ಯಮಗಳಿಗೆ ಹೆಡ್‌ಲೈನ್ ಸುದ್ದಿ. ಈ ಹೇಳಿಕೆಯ ಮುಂದುವರಿದ ಭಾಗವಾಗಿ ಇನ್ನು ಯಾರೇ ಹೇಳಿದರೂ ಆ ವ್ಯಕ್ತಿಯ ಸ್ಥಾನ ಮಾನ ಆಧರಿಸಿ ಮಾಧ್ಯಮಗಳಲ್ಲಿ ಸ್ಥಾನ ಸಿಗಬಹುದೇ ಹೊರತು ಇದಕ್ಕಿಂತ ಹೆಚ್ಚೇನೂ ಆಗುವುದಿಲ್ಲ.

ಈಗ ಜಾತಿ, ಧರ್ಮದ ಹಿನ್ನೆಲೆಯಲ್ಲಿ ಮತದಾರರು ಆಯ್ಕೆ ಮಾಡುತ್ತಾರೆ ಎಂದಿದ್ದಾರೆ. ಇದನ್ನು ಯಾರೂ ತಳ್ಳಿ ಹಾಕುವಂತಿಲ್ಲ. ಅಭ್ಯರ್ಥಿಯ ಆಯ್ಕೆಗೆ ಮಾನದಂಡಗಳಲ್ಲಿ ಅವನ ಜಾತಿ, ಧರ್ಮ ಮುಖ್ಯವಾಗಿರುತ್ತವೆ. ಇಂಥ ಜಾತಿಗೆ ಇಂತಿಷ್ಟು ಸ್ಥಾನ ಕೊಡಬೇಕು ಎನ್ನುವುದು ರಾಜಕೀಯ ಪಕ್ಷಗಳ ಆಶಯಾವಾಗಿದ್ದರೆ ತಮ್ಮ ಜಾತಿಯ ಜನಸಂಖ್ಯಾಬಲದ ಆಧಾರದಲ್ಲಿ ಇಂತಿಷ್ಟು ಸ್ಥಾನಗಳು ಸಿಗಲೇ ಬೇಕು ಎನ್ನುವ ಹಕ್ಕೊತ್ತಾಯಗಳನ್ನು ಬಹಿರಂಗವಾಗಿಯೇ ಮಾಡುತ್ತಿಲ್ಲವೇ? ಹಾಗೊಂದು ವೇಳೆ ಸ್ಥಾನಗಳನ್ನು ಕೊಡದಿದ್ದರೆ ಬಂಡಾಯವೇಳುತ್ತಿಲ್ಲವೇ? ಜಾತಿಯ ಆಧಾರದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಚುನಾವಣೆಗೆ ಸ್ಪರ್ಧಿಸಿದಾಗ ಜನ ಮತಹಾಕುವಾಗ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ಮತ ಚಲಾಯಿಸಿ ಆಯ್ಕೆ ಮಾಡುತ್ತಾರೆ ಎನ್ನಲಾಗದು. ಆದರೆ ಅವರ ಕಣ್ಣಮುಂದಿರುವ ವಿಭಿನ್ನ ಜಾತಿಗಳ ಅಭ್ಯರ್ಥಿಗಳ ಪೈಕಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಆ ಆಯ್ಕೆ ಜಾತಿಯ, ಧರ್ಮದ ಆಧಾರದಲ್ಲಿ ಜನ ಮಾಡುತ್ತಾರೆ ಎನ್ನಲಾಗದು. ಮತ ಹಾಕಲೇ ಬೇಕಾದ ಅನಿವಾರ್ಯತೆಯಲ್ಲಿ ಮತದಾರರು ಕುರಿಮಂದೆಯಾಗುತ್ತಾರೆ. ಆದ್ದರಿಂದ ರಾಜಕೀಯ ಪಕ್ಷಗಳು ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಜಾತಿ, ಧರ್ಮದ ಮಾನದಂಡ ಬಳಸದೇ ಕಣಕ್ಕಿಳಿಸುವುದು ಸಾಧ್ಯವೇ? ಜಾತಿ ಮತ್ತು ಧರ್ಮವನ್ನು ಬಿಟ್ಟು ಆತನ ಸಮಾಜ ಸೇವೆ, ಅವನಿಗಿರುವ ಬದ್ಧತೆ, ಕಳಕಳಿ, ಸೈದ್ಧಾಂತಿಕ ಹಿನ್ನೆಲೆ ಇವುಗಳನ್ನು ಮಾನದಂಡವಾಗಿಟ್ಟುಕೊಂಡು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವಂಥ ವ್ಯವಸ್ಥೆ ಜಾರಿಗೆ ತರುವುದು ಸುಲಭ ಸಾಧ್ಯವೇ?

ಸಾಮಾಜಿಕ ನ್ಯಾಯದಾನ ನಿರ್ಧಾರದ ಮಾನದಂಡ ಯಾವುದು? ಜಾತಿಯನ್ನು ಹೊರತು ಪಡಿಸಿ ಸಾಮಾಜಿಕ ನ್ಯಾಯದಾನದ ಮಾನದಂಡವಿದ್ದರೆ, ಕೇವಲ ಆರ್ಥಿಕ ಶಕ್ತಿಯನ್ನು ಕೇಂದ್ರವಾಗಿಟ್ಟುಕೊಂಡು ಸಾಮಾಜಿಕ ನ್ಯಾಯದಾನ ಮಾಡುವ ವ್ಯವಸ್ಥೆಯಿದ್ದಿದ್ದರೆ ಬೇರೆಯೇ ಮಾತು. ಈಗ ಯಾವುದೇ ಹಂತದಲ್ಲೂ ಜಾತಿ ಮತ್ತು ಧರ್ಮವನ್ನು ಪಕ್ಕದಲ್ಲಿಟ್ಟುಕೊಂಡೇ ಸಾಮಾಜಿಕ ನ್ಯಾಯದಾನದ ವ್ಯಾಖ್ಯಾಯನ ಕೊಡುತ್ತಿರುವುದರಿಂದ ಬೇರ್ಪಡಿಸುವುದು ಹೇಗೆ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗ ನಡೆಯುತ್ತಿರುವ ಆಯ್ಕೆಯ ಮೂಲವನ್ನೇ ಪ್ರಶ್ನಿಸಿರುವ ಕಾಟ್ಜು ತಾವು ಅಂಥವರನ್ನು ಆಯ್ಕೆ ಮಾಡಲು ಮತ ಚಲಾಯಿಸುವುದಿಲ್ಲವೆಂದಿದ್ದಾರೆ. ಎಲ್ಲರೂ ಹೀಗೆಯೇ ಯೋಚಿಸಿದರೆ ನಿಜಕ್ಕೂ ಬದಲಾವಣೆ ನಿಶ್ಚಿತ. ಹೀಗೆ ಯೋಚಿಸುವ ಸಾಮರ್ಥ್ಯವನ್ನು ಈಗ ಅವರೇ ಹೇಳಿರುವಂಥ ಶೇ.90ರಷ್ಟು ಮಂದಿ ಮತದಾರರು ಹೊಂದಿದ್ದಾರೆಯೇ? karnataka_womenಕನಿಷ್ಠ ಹೀಗೆ ಯೋಚಿಸುವ ಮಂದಿಯಾದರೂ ಚುನಾವಣಾ ಕಣಕ್ಕೆ ಇಳಿಯುತ್ತಾರೆಯೇ? ಅಂಥವರನ್ನೇ ರಾಜಕೀಯ ಪಕ್ಷಗಳು ಕಣಕ್ಕಿಳಿಸುತ್ತವೆಯೇ? ಹೆಣ್ಣೊಬ್ಬಳು ಅಕ್ಷರ ಕಲಿತರೆ ಆಕೆ ಒಂದು ಶಾಲೆಗೆ ಸಮಾನ. ಯಾಕೆಂದರೆ ಆಕೆ ಆ ಮನೆಯ ಇತರರಿಗೂ ಕಲಿಸುತ್ತಾಳೆ. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು. ಅದೆಂಥಾ ಅದ್ಭುತವಾದ ಕಲ್ಪನೆ? ಈ ಕಲ್ಪನೆ ಸ್ವಾತಂತ್ರ್ಯ ಸಿಕ್ಕಿ ಆರು ದಶಕಗಳಾಗಿದ್ದರೂ ಇನ್ನೂ ಕಲ್ಪನೆಯಾಗಿಯೇ ಉಳಿದಿದೆ ಅನ್ನಿಸುತ್ತಿಲ್ಲವೇ? ಕಲಿತ ಹೆಣ್ಣು ಮಕ್ಕಳು ತಮ್ಮ ನೆಯಲ್ಲಿ ಈಗ ಮಕ್ಕಳಿಗೆ ಕಲಿಸುತ್ತಾರೆಯೇ? ಬಾಲವಾಡಿ, ಅಂಗನವಾಡಿ, ಕಿಂಡರ್ ಗಾರ್ಡನ್, ಮನೆ ಪಾಠ, ಟ್ಯೂಷನ್, ವ್ಯಕ್ತಿತ್ವ ವಿಕಸನ ಹೀಗೆ ಏನೇನೋ ತೆರೆದುಕೊಂಡಿವೆಯಲ್ಲಾ ಅವುಗಳಿಗೆ ಮೊರೆಹೋಗಿ ನಮ್ಮ ಹೆಣ್ಣು ಮಕ್ಕಳು ಜವಾಬ್ದಾರಿ ನಿಭಾಯಿಸುತ್ತಿಲ್ಲ ಅನ್ನಿಸುತ್ತಿಲ್ಲವೇ?

ಇಷ್ಟಕ್ಕೂ ಓದು ಬರಹದ ಅನಿವಾರ್ಯತೆಗೆ ಒಳಗಾಗಿರುವವರು ಯಾರು? ಕುರಿ ಮೇಯಿಸುವ ಕರಿಯ, ಕೂಲಿ ಮಾಡುವ ಬಸ್ಯ, ಈರವ್ವ, ಹೊಲ ಉಳುವ ಅಣ್ಣಪ್ಪ ಇಂಥವರೇ ಈ ದೇಶದಲ್ಲಿ ಶೇ.70 ಮಂದಿಯಿದ್ದಾರೆ. ಅವರಿಗೆ ಶಾಲೆ, ಮೇಸ್ಟ್ರು, ಪುಸ್ತಕ ಹೇಗೆ ಗೊತ್ತಿರಬೇಕು? ಊರಿಗೆ ಶಾಲೆ ಬೇಕು, ಕುಡಿಯಲು ನೀರು ಬೇಕು, ರಸ್ತೆ, ವಿದ್ಯುತ್ ವ್ಯವಸ್ಥೆ ಬೇಕೇ ಬೇಕೆಂದು ಹಕ್ಕಿನಿಂದ ಕೇಳುವವರು ಎಷ್ಟು ಮಂದಿಯಿದ್ದಾರೆ ಈ ದೇಶದಲ್ಲಿ? ಅವರು ಕೇಳುವುದಿಲ್ಲ, ಆದರೆ ಈ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎನ್ನುವ ಕಾಳಜಿಯಿದ್ದವರು ಅವರ ಪ್ರತಿನಿಧಿಗಳಾಗಿ ಆರಿಸಿಹೋಗಿದ್ದರೆ ಅವರಾದರೂ ಮಾಡಬೇಕಿತ್ತಲ್ಲಾ? ಹಾಗಾದರೆ ಆರು ದಶಕಗಳಲ್ಲಿ ಅವರು ಆರಿಸಿಕಳುಹಿಸಿದವರು ಏನು ಮಾಡಿದರು? ಅವರೇ ಅಲ್ಲವೇ ಮತ್ತೆ ನಾಳೆಯೂ ಆಯ್ಕೆಯಾಗಲು ತುದಿಗಾಲಲ್ಲಿ ನಿಂತವರು ಅಥವಾ ಅವರ ಮಗ, ಮಗಳು, ಅಳಿಯ, ರಕ್ತ ಸಂಬಂಧಿ, ಇಲ್ಲವೇ ಅವರ ಜಾತಿಯವರು, ಧರ್ಮದವರು.

ಬಯಲು ಶೌಚಾಲಯ ನಿರ್ಮೂಲನೆಗೆ ಶೌಚಾಲಯ ನಿರ್ಮಿಸಲು ಮನಸ್ಸು ಮಾಡದವರು ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ adivasi-militant-women-maoist-naxalite-kishenji-kishanji1ಮಾಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತಾರಲ್ಲಾ ಅವರು ಸಾಮಾನ್ಯರೇ? ಅವರನ್ನು ಪ್ರಶ್ನೆ ಮಾಡುವ ಸಾಮರ್ಥ್ಯವಾದರೂ ಅಲ್ಲಿನ ಜನರಿಗಿದೆಯೇ? ಹಾಗೊಂದು ವೇಳೆ ಪ್ರಶ್ನೆ ಮಾಡಿದವರನ್ನು ಸುಮ್ಮನೆ ಬಿಡುವರೇ? ಪಡಿತರ ಅಂಗಡಿಗಳಿಲ್ಲದಿದ್ದರೂ ಸಾರಾಯಿ ಅಂಗಡಿಗಳಿವೆಯಲ್ಲವೇ? ಇದನ್ನು ಯಾಕೆಂದು ಕೇಳುತ್ತಾರೆಯೇ?

ಕಾಟ್ಜು ಅವರು ಮತಚಲಾಯಿಸುವ ಶೇ.90 ಮಂದಿಯಲ್ಲಿ ತಾವೂ ಒಬ್ಬರಾಗಲು ಬಯಸುವುದಿಲ್ಲವೆಂದಿದ್ದಾರೆ. ಅವರು ಅವರಲ್ಲಿ ಒಬ್ಬರಾಗಬಾರದು ನಿಜ. ಆದರೆ ಅಷ್ಟೂ ಮಂದಿಯೂ ಕುರಿಮಂದೆಯೆನ್ನಲಾಗದು. ಬಹುಪಾಲು ಎನ್ನುವುದನ್ನು ಒಪ್ಪುವುದು ಅಪರಾಧವಲ್ಲ. ಚುನಾವಣೆಯಲ್ಲಿ ಕೆಲಸ ಮಾಡುವುದೆಂದರೆ ಕೂಲಿ ಮಾಡಿದಂತೆ. ನಿರ್ದಿಷ್ಟ ಕೆಲಸಕ್ಕೆ ನಿರ್ದಿಷ್ಟ ಸಂಬಳ. ಐದುವರ್ಷಕ್ಕೊಮ್ಮೆ ಬರುವ ಇಂಥ ದಿನಗಳನ್ನು ಕಾತುರದಿಂದ ಕಾಯುವವರಿರುತ್ತಾರೆ. ಅವರಿಗೆ ಈ ಅವಧಿ ಸುಗ್ಗಿಯಂತೆ.

ಈ ಎಲ್ಲಾ ಅಂಶಗಳನ್ನು ಅಂಗೈಯ್ಯಲ್ಲಿಟ್ಟುಕೊಂಡು ವಿಶ್ಲೇಷಿಸಿದರೆ ಮಾರ್ಕಂಡೇಯ ಕಾಟ್ಜು ಹೊರಹಾಕಿರುವ ಅಸಮಾಧಾನ ಸರಿಯಾದುದೇ, ಆದರೆ ಅದಕ್ಕೆ ಹೊಣೆ ಯಾರು ಎನ್ನುವುದು ಪ್ರಶ್ನೆಯಾಗಿ ಉಳಿದುಬಿಡುತ್ತದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕಾದ ಶಾಸಕಾಂಗ ತನಗೆ ತಾನೇ ನೀತಿಸಂಹಿತೆ ಹಾಕಿಕೊಳ್ಳಬೇಕು. ವಿಧಾನ ಸೌಧ ಪ್ರವೇಶಿಸುವವರು ಹೇಗಿರಬೇಕೆಂದು ಮಾನದಂಡವೇ ಇಲ್ಲದಿದ್ದರೆ ಮತಹಾಕುವ ಮಂದಿ ಅನಿವಾರ್ಯವಾಗಿ ಅವರೊಳಗೇ ಆಯ್ಕೆ ಮಾಡಬೇಕಾಗುತ್ತದೆ. ಅಭ್ಯರ್ಥಿಗಳಾಗುವವರಿಗೆ ಸರಿಯಾದ ಮಾನದಂಡ ಫಿಕ್ಸ್ ಆಗಬೇಕು. ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವೇ?vote ಕ್ರಿಮಿನಲ್ ಹಿನ್ನೆಲೆ ಇರುವವರಿಗೆ ಸ್ಪರ್ಧೆಗೆ ಅವಕಾಶವಿಲ್ಲ ಎನ್ನುವುದನ್ನು ಮತ್ತಷ್ಟು ವಿವರವಾಗಿ ಚರ್ಚಿಸಿ ಈಗ ಇರುವ ವ್ಯಾಖ್ಯಾನವನ್ನು ಮರುಪರಿಶೀಲಿಸಿದರೆ ಶೇ.50 ರಷ್ಟು ತಿಳಿಯಾಗುತ್ತದೆ. ಕ್ರಿಮಿನಲ್ ಎನ್ನುವುದು ಕಾರ್ಯತ:, ಆದರೆ ಮಾನಸಿಕವಾಗಿ ಕ್ರಿಮಿನಲ್ ಆಗಿರುವುದು ತುಂಬಾ ಅಪಾಯಕಾರಿ. ಆದ್ದರಿಂದ ಕಾಟ್ಜು ಅವರ ಹೇಳಿಕೆ ಹೊಸ ಸಂಚಲನ ಮೂಡಿಸಿದೆ. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ನಿರ್ಮೂಲನೆ ಕನಸಿನ ಮಾತು ಎಂದಿದ್ದಾರೆ, ಅಲ್ಲಗಳೆಯುವಂತಿಲ್ಲ. ಒಬ್ಬ ಗಾಂಧಿಯ ನಂತರ ಹಲವು ಮಂದಿಯನ್ನು ಗಾಂಧಿ ಹೆಸರಿನಿಂದ ಗುರುತಿಸುವುದು ಸಾಧ್ಯವಾಯಿತೇ ಹೊರತು ಅವರಲ್ಲಿ ಗಾಂಧಿಯನ್ನು ಕಾಣಲಾಗಲಿಲ್ಲ. ಹಾಗೆಯೇ ಒಬ್ಬ ಅಣ್ಣಾ ಇಡೀ ದೇಶದ ಕಣ್ಣಾಗಲಾರ, ಧ್ವನಿಯಾಗಬಹುದು. ಆ ಧ್ವನಿಗೆ ಕಿವಿಯಾಗುವವರು, ಕೇಳಿದ್ದನ್ನು ಪ್ರತಿಧ್ವನಿಸುವವರು ಬೇಕಾಗಿದ್ದಾರೆ.