Daily Archives: May 6, 2013

ಹರ್ಷ ಮಂದೇರ್ ಬರಹ 5: ಹಸಿವಿನ ಒಂಟಿತನ

Harsha Manderಮೂಲ ಲೇಖನ: ಹರ್ಷ ಮಂದೇರ್

ಕನ್ನಡಕ್ಕೆ: ರಾಜಲಕ್ಷ್ಮಿ ಕೋಡಿಬೆಟ್ಟು

ಒರಿಸ್ಸಾದ ಬೊಲಾಂಗೀರ್ ಎಂಬ ಹಳ್ಳಿ. ಹಸಿವು ತಾಂಡವ ಆಡುತ್ತಿರುವ ಆ ಹಳ್ಳಿಯಲ್ಲಿ ಉಮರ್ಿಳಾ ಎಂಬ ಬೆಳ್ಳಿಕೂದಲ ಹೆಂಗಸನ್ನು ನಾವು ಭೆಟ್ಟಿಯಾದೆವು. ಅದು ಸಣ್ಣದೊಂದು ಹುಲ್ಲಿನ ಗುಡಿಸಲು. ಅಂಗಳದಲ್ಲಿ ನಿಧಾನಕ್ಕೆ ಹೆಜ್ಜೆಯಿಡುತ್ತಾ ಓಡಾಡುವ ಹೇಂಟೆ.

ನೋಡು ಈ ಹೇಂಟೆಯನ್ನು. ಕೊಡಲು ನನ್ನಲ್ಲಿ ಏನೂ ಇಲ್ಲ ಅಂತ ಗೊತ್ತಿದ್ದರೂ ಅದು ನನ್ನ ಬಳಿ ಬರುತ್ತದೆ. ಮೂರ್ಖ ಹೇಂಟೆ. ಶುಶ್ಶೂ ಅಂತ ಅವಳನ್ನು ಓಡಿಸಬೇಡಿ. ಅವಳು ನನಗಿರುವ ಒಬ್ಬಳೆ ಅತಿಥಿ ಅಲ್ವ…
ಉಮರ್ಿಳಾ ಮಾತಿನಲ್ಲಿ ಏಕಾಂಗಿತನದ ಭಾರವಿತ್ತು. ನನಗೆ ಆಹಾರ ಬೇಕು ಎನ್ನುವ ಹಸಿವು ಮಾತ್ರ ಅಲ್ಲ. ಪ್ರೀತಿಯ ಹಸಿವೂ ಹೌದು. ಆದರೆ ವಿಪರ್ಯಾಸವೆಂದರೆ ಉಮರ್ಿಳಾಗೆ ಜನರೆಂದರೆ ಹೆದರಿಕೆಯೂ ಹೌದು. ಅದಕ್ಕಾಗಿ ಹೆಚ್ಚಾಗಿ ಅವಳು ಮನೆಯಲ್ಲಿಯೇ ಇರುತ್ತಾಳೆ. ಸ್ನಾನಕ್ಕೆಂದು ನದಿಗೆ ಹೋಗುವಾಗಲೂ ಅವಳು ಮುಖ್ಯರಸ್ತೆಯಲ್ಲಿ ಓಡಾಡುವುದಿಲ್ಲ. ನಾನು ಒಬ್ಬಳೇ ಬದುಕುತ್ತೇನಲ್ಲಾ ಅದಕ್ಕೇ ನನಗೆ ಹೆದರಿಕೆ !.
ಹಸಿವಿನ ಅನುಭವ ತುಂಬ ಸಂಕೀರ್ಣವಾದುದು. ಶರೀರಕ್ಕೆ ಸಂಬಂಧಿಸಿದ ತೀವ್ರವಾದ ನಷ್ಟದ ಭಾವದ ಜತೆಗೆ ಹತಾಶೆ ಮತ್ತು ಅವಮಾನವೂ ಸೇರಿರುತ್ತದೆ. ಅದು ತುತರ್ಾಗಿ ಆಹಾರಕ್ಕಾಗಿ ಉಂಟಾಗುವ ಹಾಹಾಕಾರ. ಅದೇವೇಳೆ ತೀವ್ರವಾದ ಆಯಾಸ, ದೌರ್ಬಲ್ಯ ಮತ್ತು ತುಸು ಓಲೈಕೆಯನ್ನು ಬಯಸುವ ಆಶಯ ಅಂತರಂಗದಲ್ಲಿರುತ್ತದೆ. ಅದರಲ್ಲಿ ಏಕಾಂಗಿತನವಿದೆ, ಸಾಮಾಜಿಕ ಅಪಮೌಲ್ಯಗೊಳ್ಳುವಿಕೆ ಮತ್ತು ಆತ್ಮಗೌರವದಿಂದಕುಸಿಯುವ ನೋವಿದೆ.

ಪ್ರತಿದಿನವೂ ಅಗ್ನಿಪರೀಕ್ಷೆ

ನಾವು ಭೇಟಿಯಾಗುವ ಹೆಚ್ಚಿನ ನಿರ್ಗತಿಕರು ದೀರ್ಘಕಾಲದ ಹಸಿವಿನ ಕ್ಲೇಶವನ್ನಷ್ಟೇ ಅಲ್ಲ, ಪ್ರತಿದಿನವೂ ಏಕಾಂಗಿತನದ ಕಡುನೋವನ್ನೂ ಉಣ್ಣುತ್ತ ಬದುಕುತ್ತಾರೆ. ಹತ್ತು ಹಲವು ವಿಧಗಳಲ್ಲಿ ಅವರು ಸಾಮಾಜಿಕವಾಗಿ ಪ್ರತ್ಯೇಕಗೊಂಡಿರುತ್ತಾರೆ. ಅವರ ಭಾವಗಳಿಗೆ ಕಿಂಚಿತ್ ಬೆಲೆ ಇಲ್ಲದಂತಾಗಿರುತ್ತದೆ. ಕಾವಾ ಮನತ್ ಎಂಬ ಈ ವ್ಯಕ್ತಿಗೆ ಹುಟ್ಟಿನಿಂದ ಅಂಗವೈಕಲ್ಯ. ತನ್ನ ದೊರಗಾದ ಕೈಗಳ ಮೂಲಕ ದೇಹವನ್ನು ಎಳೆದುಕೊಂಡು ಸಾಗುತ್ತಾನೆ. ಮದುವೆ ಮಕ್ಕಳು ಅಂತ ತನ್ನದೇ ಸಂಸಾರ ಮಾಡಿಕೊಳ್ಳಲಿಕ್ಕೆ ಆಗಲಿಲ್ಲವಲ್ಲಾಎಂಬುದು ಆತನ ಬದುಕಿನ ದೊಡ್ಡ ವಿಷಾದ. ಜತೆಗೊಬ್ಬಳು ಸಂಗಾಗತಿ ಇದ್ದಿದ್ದರೆ ತನ್ನ ನೋವು, ಖುಷಿಯನ್ನು ಹಂಚಿಕೊಳ್ಳಬಹುದಿತ್ತು ಎಂದೆನಿಸುತ್ತದೆ ಆತನಿಗೆ. ಸಂಗಾತಿಯ ಬೆಂಬಲದೊಂದಿಗೆ ಆತ್ಮಗೌರವದೊಂದಿಗೆ ಬದುಕಿನಲ್ಲಿ ಕೊಂಚ ದೂರ ಸಾಗಬಹುದಿತ್ತಲ್ಲ ಎನ್ನುವುದು ಅವನ ಆಶಯ. ಆಗ ತನ್ನ ಭವಿಷ್ಯದ ಬಗ್ಗೆ ಅವನು ವಿಪರೀತ ಆತಂಕಗೊಳ್ಳುತ್ತಿರಲಿಲ್ಲ. ಬಡತನ ಮತ್ತು ಹಸಿವು ಮನುಷ್ಯನನ್ನು ಕೊಲ್ಲುವುದಷ್ಟೇ ಅಲ್ಲ, ಆತ್ಮಗೌರವವನ್ನೂ ನಾಶ ಮಾಡುತ್ತವೆ.

ಆಂಧ್ರಪ್ರದೇಶದಲ್ಲಿ ಓರ್ವ ಅಜ್ಜಿ ಅಂತಮ್ಮ. ತನ್ನ ಮಕ್ಕಳನ್ನು ಕಷ್ಟಪಟ್ಟು ಸಾಕಿ ಬೆಳೆಸಿ ಬದುಕಿನ ನೋವುಂಡವಳು. ಆದರೆ ಕೊನೆಗಾಲದಲ್ಲಿ ಆಕೆಯನ್ನು ಮಕ್ಕಳು ಕೈಬಿಟ್ಟಿದ್ದಾರೆ. ಒಂಟಿಬದುಕಿನಲ್ಲಿ ಹಬ್ಬಹರಿದಿನಗಳನ್ನು ಹೇಗೆ ಆಚರಿಸುವುದು? ಸಣ್ಣಪುಟ್ಟ ಹಬ್ಬಗಳನ್ನು ನಾನು ಆಚರಿಸುವುದಿಲ್ಲ. ದೀಪಾವಳಿ, ಹೋಳಿ,ಸಂಕ್ರಾಂತಿ ಮುಂತಾದ ದೊಡ್ಡ ಹಬ್ಬಗಳನ್ನು ಒಬ್ಬಳೇ ತನಗೆ ತೋಚಿದಂತೆ, ತನ್ನ ಕೈಲಾದಂತೆ ಆಚರಿಸುತ್ತಾಳೆ. ಒಂದು ಹಿಡಿ ಅನ್ನ ಹೆಚ್ಚು ಊಟ ಮಾಡುವುದು, ಅಥವಾ ಇಷ್ಟು ತರಕಾರಿ ತಂದು ಒಂದೊಳ್ಳೆ ಸಾಂಬಾರು ಮಾಡುವುದು. . . ಇಷ್ಟಕ್ಕೆ ಮುಗಿಯುತ್ತದೆ ಆಕೆಯ ಹಬ್ಬ. ವಯಸ್ಸಾದ ಮತ್ತೋರ್ವ ವಿಧವೆ ಅಜ್ಜಿ ಸಜ್ನಾ ನಾಗ್ ಮನೆಯವರಿಂದ ದೂರಾಗಿದ್ದಾಳೆ. ಹಬ್ಬಗಳು ಯಾವಾಗ ಬರುತ್ತವೋ, ಹೋಗುತ್ತವೋ ನನಗೆ ಗೊತ್ತಾಗುವುದಿಲ್ಲ. ಆದರೆ ನನ್ನ ಗಂಡ ಇದ್ದಾಗ ಹಬ್ಬಗಳಿಗಾಗಿ ಕಾತರದಿಂದ ಕಾಯುತ್ತಿದ್ದೆ ಎಂದು ಆಕೆ ನೆನಪಿಸಿಕೊಳ್ಳುತ್ತಾಳೆ.

ಲಕ್ಷ್ಮನ್ನ ಎಂಬ ಅಜ್ಜಿಗೆ ಮಕ್ಕಳು ತನ್ನ ಬಗ್ಗೆ ತೋರುತ್ತಿರುವ ನಿರ್ಲಕ್ಷ್ಯದ ಬಗ್ಗೆ ಅಪಾರ ಸಿಟ್ಟಿದೆ. ಹಬ್ಬದ ಸಮಯದಲ್ಲಿ ಆಕೆ ಯಾವುದಾದರೂ ಹೊಲದ ಬಳಿ ಹೋಗಿ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾಳೆ.. ಮಕ್ಕಳನ್ನು ಶಪಿಸುತ್ತಾಳೆ. ಹಳೇ ನೆನಪುಗಳು ಕಣ್ಣೀರು ತರುತ್ತವೆ. ಕಣ್ಣೀರು ಕೊಂಚ ಸಮಾಧಾನ ತರುತ್ತದೆ.

ಲೈಬನಿ ಮಂಝಿ ಎಂಬಾಕೆಗೆ ಗಾಯಿಟರ್ ಕಾಯಿಲೆ ಬಂತೆಂದು ಆಕೆಯನ್ನು ಗಂಡ ತೊರೆದು ಹೋದ. ಅನಂತರ ಲೈಬನಿ ಯಾವುದೇ ಹಬ್ಬ ಹರಿದಿನ ಕಾರ್ಯಕ್ರಮಗಳಿಗೆ ಹೋಗುವುದಿಲ್ಲ. ತನ್ನ ಊದಿದ ಗಂಟಲಿನ ಬಗ್ಗೆ ಯಾರಾದರೂ ಆಡಿಕೊಂಡಾರೆಂದು ಅಥವಾ ತನ್ನನ್ನು ಗಂಡ ಬಿಟ್ಟು ಹೋದ ಬಗ್ಗೆ ಯಾರಾದರೂ ಜರೆದಾರು ಎನ್ನುವ ಅಳುಕು.
ಇನ್ನು ಕುಷ್ಟ ರೋಗದಿಂದ ಬಳಲುವ ವಾಲಿ ಮತ್ತು ಧನು ಎಂಬ ಹಿರಿಯ ನಾಗರಿಕರನ್ನು ಯಾರೂ ಯಾವುದೇ ಕಾರ್ಯಕ್ರಮಗಳಿಗೂ ಕರೆಯುವುದಿಲ್ಲ. ಧಾನು ಎಂಬ ಅಜ್ಜನಿಗೆ ಜನಸಂದಣಿ ನೋಡಿದರೆ ನಾಚಿಕೆ. ತನ್ನ ಆಡುಕುರಿಗಳನ್ನು ಮೇಯಿಸಲು ಮನೆಯಿಂದ ಹೊರ ಬೀಳುತ್ತಾನೆಯೇ ವಿನಃ ಸಾಮಾಜಿಕ ಕಾರ್ಯಕ್ರಮಗಳಿಗೆ ಆಕೆ ಬರುವುದೇ ಇದಲ್ಲ. ನೌಟಂಕಿ ಮುಂತಾದ ಮನರಂಜನೆಯಲ್ಲಿ ಭಾಗವಹಿಸುವುದಿಲ್ಲ. ಅಷ್ಟೇ ಏಕೆ, ಅವನು ನಡೆದು ಹೋಗುವಾಗ ಹೆಂಗಸರ ತಮ್ಮ ಮಕ್ಕಳನ್ನು ಸರಕ್ಕನೆ ಪಕ್ಕಕ್ಕೆ ಎಳೆದುಕೊಂಡು ದೂರ ಸರಿಯುತ್ತಾರೆ.
ಒಂಟಿಯಾಗಿ ಬದುಕುವ ಹಿರಿಯನಾಗರಿಕರು ಕೆಲವೊಮ್ಮೆ ಯಾರ ಬಳಿಯೂ ಮಾತನಾಡದೆಯೇ ದಿನವಿಡೀ ಕಳೆಯುತ್ತಾರೆ. ತನ್ನಪಾಲಿಗೆ ಮಾತ್ರವೇ ಅಡುಗೆ ಮಾಡಿಕೊಳ್ಳುವುದು ಒಂದು ದೊಡ್ಡ ಸಮಸ್ಯೆ. ಅದರಲ್ಲಿಯೂ ಗಂಡಸರು ಅಡುಗೆ ಮಾಡುವುದು ರೂಢಿಯಿಲ್ಲದ ಗಂಡಸರು ಹೆಚ್ಚು ಪರದಾಡುತ್ತಾರೆ. ಕೊನೆಗೆ ಅವರು ರಾತ್ರಿಗಳಲ್ಲಿ ಹೊಟ್ಟೆತುಂಬ ನೀರು ಕುಡಿದು ಮಲಗಿಬಿಡುತ್ತಾರೆ. ಇಳಿವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಂಡ ಪುರುಷರು ಉಣ್ಣುವ ವಿಷಯದಲ್ಲಿ ತುಂಬ ಒಂಟಿಯಾಗಿಬಿಡುತ್ತಾರೆ. ವಯಸ್ಸಾಗುತ್ತಿದ್ದಂತೆಯೇ ಅಜ್ಜ ಅಜ್ಜಿಯರು ಜತೆಯಾಗಿ ಇರುವುದೇ ಉತ್ತಮ. ಆದರೆ ರಾಜಸ್ಥಾನಿ ಅಜ್ಜಿಯೊಬ್ಬರು ಹೇಳುವ ಪ್ರಕಾರ, ಈ ಅಜ್ಜ ಅಜ್ಜಿಯರು ತಮ್ಮ ಹಳೇ ದಿನಗಳನ್ನು ಜ್ಞಾಪಿಸಿಕೊಂಡು ಎಷ್ಟು ಅಂತ ಮಾತಾಡಬಹುದು. ತನ್ನ ಸಂಗಾತಿಎಲ್ಲಿ ಕಾಯಿಲೆಬಿಳುತ್ತಾನೋ, ಅಥವಾ ಇದ್ದಕ್ಕಿದ್ದಂತೆಯೇ ಸತ್ತುಬಿಡುತ್ತಾರೋ ಎಂಬ ಆತಂಕ ಪ್ರತಿಕ್ಷಣ ಅವರನ್ನು ಕಾಡುತ್ತದೆ. ಅಥವಾ ಸಂಗಾತಿ ತನ್ನನ್ನು ತಾನು ನಿಭಾಯಿಸಲಾರದ ಸ್ಥಿತಿ ತಲುಪಿ ಇತರರಿಗೆ ಹೊರೆಯಾಗುತ್ತಾರೋ ಎಂಬ ಆತಂಕವೂ ಇಲ್ಲದಿಲ್ಲ. ತಮ್ಮ ಕೈ ಕಾಲು ಅಲ್ಲಾಡುವವರೆಗೆ ಏನೇ ಪರಿಸ್ಥಿತಿ ಬಂದರೂ ನಿಭಾಯಿಸಬಹುದೇನೋ, ಆದರೆ ಹಾಸಿಗೆ ಹಿಡಿದುಬಿಟ್ಟರೆ ಮತ್ತೇನು ಮಾಡುವುದು ಎಂಬಭಯ ಇದ್ದದ್ದೇ.

ಇದೊಂದು ಅವಕಾಶವಲ್ಲ
ಜೀವನ ಸಾಗಿಸಲು ದುಡಿಮೆ ಹುಡುಕಿಕೊಂಡು ನಗರಗಳಿಗೆ ಹೋಗುವುದು ಹಿರಿಯ ನಾಗರಿಕರಿಗೆ ಸಾಧ್ಯವಿಲ್ಲದ ಮಾತು. ವಯಸ್ಸು ಮತ್ತು ಅಶಕ್ತತೆ ಅವರಿಗೆ ವಲಸೆ ಅವಕಾಶವನ್ನು ಕೊಡುವುದಿಲ್ಲ. ಆದರೆ ಮಕ್ಕಳು ವಲಸೆ ಹೋದ ಮೇಲೆ ಊರಿನಲ್ಲಿಯೇ ಉಳಿದುಬಿಡುವ ಹಿರಿಯ ನಾಗರಿಕರನ್ನು ನಾವು ಭೇಟಿಯಾದೆವು. ವಲಸೆ ಹೋದ ಮಕ್ಕಳು ಅವರನ್ನು ನೋಡಿಕೊಂಡರೂ, ಏಕಾಂಗಿತನದ ನೋವು ಹಾಗೇ ಉಳಿದಿತ್ತು.

ಬೊಲಾಂಗೀರ್ ಎನ್ನುವ ಊರಿನಲ್ಲಿರುವ ಅಜ್ಜ ಇಂದ್ರದೀಪ್ ಅಂಗವಿಕಲರೂ ಹೌದು. ಮಗ ಸಾಧು ತನ್ನ ಪತ್ನಿಯೊಂದಿಗೆ ದುಡಿಮೆಗಾಗಿ ಪ್ರತಿ ವರ್ಷ ಹೈದರಾಬಾದ್ಗೆ ವಲಸೆ ಹೋಗುತ್ತಾನೆ. ಇಟ್ಟಿಗೆ ಕೆಲಸಗಳನ್ನು ನಿರ್ವಹಿಸುತ್ತಾನೆ. ಮಗ ಕಳುಹಿಸಿದ ದುಡ್ಡಿನಲ್ಲಿ ಇಂದ್ರದೀಪಜ್ಜನ ಜೀವನ ಸಾಗಬೇಕು. ತಮಗೆ ಕೆಲಸ ಕೊಡುವ ಗುತ್ತಿಗೆದಾರನಿಂದ ಮುಂಚಿತವಾಗಿಯೇ 8000 ರೂ. ಮುಂಗಡ ಪಡೆಯುತ್ತಾರೆ. ಕಳೆದ ವರ್ಷ ದಂಪತಿಗಳು ಅಜ್ಜನಿಗೆ 500 ರೂ. ಕೊಟ್ಟಿದ್ದರು. ನಂತರ ಊರಿನ ಲೇವಾದೇವಿದಾರನಲ್ಲಿ ಅಡವಿಟ್ಟಿದ್ದ ಚಿನ್ನವನ್ನು ಬಿಡಿಸಿ ಅಮ್ಮನಿಗೆ ಕೊಟ್ಟರು. ಆದರೆ ಇಂದ್ರದೀಪಜ್ಜ ಮತ್ತು ಆತನ ಪತ್ನಿಗೆ ಆಸರೆಯಾಗಿ ಮಕ್ಕಳು ಜತೆಯಲ್ಲಿಲ್ಲ. ಅಶಕ್ತರಾಗಿದ್ದಾಗ ಕೈ ನೀಡಿ ಎಬ್ಬಿಸುವ ಕೈಗಳು ಮನೆಯಲ್ಲಿಲ್ಲ.

ಕೆಲವು ಸಂದರ್ಭಗಳಲ್ಲಿ ದೀರ್ಘಕಾಲದ ವಲಸೆ, ಅಗಲುವಿಕೆ ಕುಟುಂಬದ ನಂಟನ್ನೂ ಸಡಿಲು ಮಾಡಿಬಿಡುತ್ತದೆ. ಮಾಲ್ತಿ ಬರಿಹಾ ಎಂಬ ಅಜ್ಜಿಯ ವಿಚಾರವನ್ನೇ ತೆಗೆದುಕೊಳ್ಳೋಣ. ಆರಂಭದಲ್ಲಿ ವಲಸೆ ಹೋದ ಮಗ ಕಳುಹಿಸುವ 300 ರೂ. ಮನಿ ಆರ್ಡರು ಅಜ್ಜಿಯ ಕೈ ತಲುಪುತ್ತಿತ್ತು. ಆದರೆ ಸ್ವಲ್ಪ ಸಮಯದ ನಂತರ ಮನಿ ಆರ್ಡರ್ ನಿಂತಿತು. ಮಗನ ಸಂಸಾರ ಮನೆಗೆ ಬರುವುದೂ ಕಡಿಮೆಯಾಯಿತು. ಗಂಡ ತೀರಿಕೊಂಡ ಸಂದರ್ಭದಲ್ಲಿಯೂ ಮಗ ಜತೆಗಿರಲಿಲ್ಲ ಎಂದು ಮಾಲ್ತಿಅಜ್ಜಿ ಕಣ್ಣಲ್ಲಿ ನೀರಾಡುತ್ತದೆ. ರಾಜಸ್ಥಾನಿ ಮತ್ತೋರ್ವ ವಿಧವೆ ಸೋಮಿ ಕೂಡ ಇದನ್ನೇ ಹೇಳುತ್ತಾಳೆ – ಮಗ ತನ್ನ ಹೆಂಡತಿಯೊಂದಿಗೆ ಗುಜರಾತ್ಗೆ ವಲಸೆ ಹೋಗಿ, ಮತ್ತೆ ವಾಪಸ್ ಬರಲಿಲ್ಲ. ಮನೆಯ ನಂಟನ್ನೂ, ಹಳ್ಳಿಯ ನಂಟನ್ನೂ ತೊರೆದಿದ್ದಾನೆ. ತನ್ನ ಅಮ್ಮನ ನೋವನ್ನೂ ಮರೆತಿದ್ದಾನೆ.

ಸ್ಥಳೀಯ ಸಮುದಾಯಗಳು ನಿರ್ಗತಿಕರ ಬಗ್ಗೆ ತೀರಾ ನಿರ್ಲಕ್ಷ್ಯದ ಧೋರಣೆ ಹೊಂದಿರುತ್ತಾರೆ. ಮಾನಸಿಕವಾಗಿ ಸ್ವಲ್ಪ ನಿಧಾನವಾಗಿ ಯೋಚಿಸುವ ಬೆಟ್ಕಾಯಿ ಟಂಡಿ ಎಂಬ ಹೆಂಗಸನ್ನು ಮೂರ್ಖ ಹುಚ್ಚಿ ಎಂದೇ ಎಲ್ಲರೂ ಸಂಬೋಧಿಸುತ್ತಾರೆ. ಆಕೆ ಬೇಸರಿಂದ ಕೇಳುತ್ತಾಳೆ ನಾನು ಮೂರ್ಖಳ ಹಾಗೆ ಕಾಣುತ್ತೇನಾ ? ಅಲ್ಲ ನೀವೇ ಹೇಳಿ..ನಾನು ಹುಚ್ಚಿಯಾ ? ಮತ್ತೆ ಈ ಊರಿನವರು ಯಾಕೆ ನನ್ನನ್ನು ಹೀಗೆ ನೋಡುತ್ತಾರೆ. ಹಾಗೆ ಟೀಕಿಸುವವರ ಮಕ್ಕಳು ಕಲ್ಲು ಬಿಸಾಡುವುದು ಯಾಕೆ ? -ಒಂಟಿಯಾಗುವ ಬದುಕುವ ಅವಳ ಏಕಾಂಗಿ ಲೋಕದಲ್ಲಿ ಸುತ್ತ ಭೂತ ಪಿಶಾಚಿಗಳಂತೆ ಈ ಪ್ರಶ್ನೆಗಳು ಕಾಡುತ್ತವೆ.

ನಾವು ಅಧ್ಯಯನ ಮಾಡಿದ ಮೂರು ರಾಜ್ಯಗಳಲ್ಲಿ ಇಂತಹ ನಿರ್ಗತಿಕರಿಗೆ ನೆರವಾಗುವ ಯಾವುದೇ ಸಾಂಸ್ಥಿಕ ಸಮುದಾಯದ ಬೆಂಬಲ ಇರುವುದು ಗೋಚರಿಸಲಿಲ್ಲ. ಕೆಲವು ಹಳ್ಳಿಗಳಲ್ಲಿ ಚಂದಾ ಸಂಗ್ರಹಿಸಿ ಅಥವಾ ಸ್ವಯಂ ಇಚ್ಛೆಯಿಂದ ಕೊಟ್ಟ ಹಣ ಸಂಗ್ರಹಿಸಿ ಅಂಗವಿಕಲರ ಮಕ್ಕಳ ಮದುವೆಗೆ ಅಥವಾ ದುರ್ಬಲ ವಿಧವೆಯರ ಮಕ್ಕಳ ಮದುವೆಗೆ ನೆರವಾಗುವ ಪದ್ಧತಿ ಮಾತ್ರ ಕೆಲವೆಡೆ ಕಾಣ ಸಿಕ್ಕಿತು. ವಯಸ್ಸಾದವರಿಗೆ, ಒಂಟಿ ಹೆಂಗಸರಿಗೆ ಒಂದಿಷ್ಟು ಕೆಲಸ ಕಾರ್ಯಗಳನ್ನು ಹಚ್ಚುವುದೇ ಇಲ್ಲಿನ ದೊಡ್ಡ ಪರೋಪಕಾರಿ ಧೋರಣೆ. ಕೊಡುವ ಸಂಬಳ ಮೂರು ಕಾಸಾದರೂ, ಕೆಲಸದ ಅವಧಿಗೆ ಮಿತಿಯಿಲ್ಲದೇ ಇದ್ದರೂ, ಅಂತಹವರಿಗೆ ಕೆಲಸ ಕೊಟ್ಟಿರುವುದೇ ಮಹಾನ್ ಎಂಬಂತೆ ವರ್ತಿಸಲಾಗುತ್ತದೆ.

ಯಾಕೆ ಈ ಸಾಮಾಜಿಕ ನಿರ್ಲಕ್ಷ್ಯವಿದೆ ? ಏನನ್ನೂ ಉತ್ಪಾದನೆ ಮಾಡಲಾರದವರು, ಗಳಿಕೆ ಸಾಧ್ಯವಾಗದ ಕೈಲಾಗದ ವ್ಯಕ್ತಿಗಳು ಎಂಬ ಧೋರಣೆ ಇರುವುದರಿಂದ ಹೀಗೆ ನಿರ್ಲಕ್ಷ್ಯ ಮಾಡಲಾಗುತ್ತದೆ ಎನಿಸುತ್ತದೆ. ಗಳಿಸಲಾರದವರು ಎನ್ನುವುದು ನಿಜವೇ ಇರಬಹುದು. ಆದರೆ ನಿರ್ಲಕ್ಷ್ಯ ಸಮಂಜಸ ಎನಿಸುವುದಿಲ್ಲ. ಚಳಿಗಾಲದ ರಾತ್ರಿಯಲ್ಲಿ ಮೈ ಬೆಚ್ಚಗೆ ಮಾಡಿಕೊಳ್ಳಲು ಹೊತ್ತಿಮುಗಿದ ಅಗ್ಗಿಷ್ಟಿಕೆ ಮುಂದೆ ಕುಳಿತವರನ್ನು ನೋಡಿದ್ದೀರಾ.. ಕೆಂಡವಾರಿ, ಬೂದಿ ತಣ್ಣಗಾಗಿದ್ದರೂ ಅವರು ಒಂದಿಷ್ಟು ಬೆಚ್ಚನೆಯ ಭಾವಕ್ಕೆ ಹಾತೊರೆಯುತ್ತಿರುತ್ತಾರೆ.

ಆಕಾಂಕ್ಷೆಗಳು ಮತ್ತು ಕನಸುಗಳು
ಉದಿಯಾ ಬರಿಹಾ ಎಂಬಾಕೆಯ ಬಾಲ್ಯ ಏಕಾಂಗಿತನದ್ದು. ಆಕೆಯನ್ನು ಶಾಲೆಗೂ ಕಳುಹಿಸಿಲ್ಲ. ಯಾಕೆಂದರೆ ಆಕೆಗೆ ಕಣ್ಣುಗಳು ಕಾಣುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ಒಂಟಿಯಾಗಿ ಆಡುತ್ತಿರುತ್ತಾಳೆ. ಆ ಹಳ್ಳಿಯಲ್ಲಿ ಇನ್ನೂ ಕೆಲವರು ಅಂಧ ಮಕ್ಕಳಿದ್ದರು. ಆದರೆ ಅವರೆಲ್ಲರೂ ಪರಸ್ಪರ ಭೇಟಿಯಾಗೇ ಇಲ್ಲ. ದೊಡ್ಡವಳಾದಂತೆಯೇ ಅವಳಿಗೆ ಮದುವೆಯಾಗುವ ಪ್ರಶ್ನೆಯೇ ಇಲ್ಲ ಎಂದುಕೊಂಡಿದ್ದಳು. ಇದ್ದಕ್ಕಿದ್ದಂತೆಯೇ ಆಕೆಯ ತಂದೆ ತಾಯಿ ಯಾವುದೋ ಜ್ವರ ಬಂದು ತೀರಿಕೊಂಡುಬಿಟ್ಟರು.

ಆಮೇಲೆ ಅವಳು ಒಂಟಿಯಾಗಿಯೇ ಜೀವನ ಕಳೆಯಬೇಕಾಯಿತು. 15ನೇ ವರ್ಷಕ್ಕೆ ಒಂಟಿಯಾದ ಅವಳು ಮುಂದಿನ 60 ವರ್ಷಗಳ ವರೆಗೆ ಒಂಟಿ ಬದುಕು ಸವೆಸಿ, ಕೊನೆಗಾಲದಲ್ಲಿ ಭಿಕ್ಷೆ ಬೇಡುವುದು ಕೂಡ ಅನಿವಾರ್ಯವಾಯಿತು. ಆಕೆಯನ್ನು ಯಾರೂ ಭೇಟಿಯಾಗಲಿಲ್ಲ. ಹೇಗಿದ್ದೀರಾ… ಖುಷಿಯಾಗಿದ್ದೀರಾ.. ಎಂದು ಆಕೆಯನ್ನು ನಾವು ಪ್ರಶ್ನಿಸುತ್ತಲೇ `ಹೌದು ಖುಷಿಯಾಗಿದ್ದೇನೆ’ ಎಂದು ಥಟ್ಟನೆ ಉತ್ತರಿಸುತ್ತಾಳೆ. ಏನೇನು ಆಕಾಂಕ್ಷೆಗಳಿವೆ ನಿಮ್ಮದು ಎಂಬ ಮಾತು ಬಂದಾಗ ತುಂಬ ಹೊತ್ತು ಮೌನವಾಗಿ… ನಂತರ ಉತ್ತರಿಸುತ್ತಾಳೆ. ಯೋಚನೆಗಳೂ ಮರೆತು ಹೋದಂತೆ, ತುಂಬ ನಿಧಾನವಾಗಿ. ಒಂದೊಳ್ಳೆ ಮನೆ, ಉಡೋಕೆ, ಉಣ್ಣೋಕೆ ಸಾಕಷ್ಟು ದೊರೆತಿದ್ದರೆ..ನೆಮ್ಮದಿಯಾಗಿರಬಹುದಿತ್ತೇನೋ..

ಅನುವಾದಕರ ಪರಿಚಯ: ರಾಜಲಕ್ಷ್ಮಿ ಕೋಡಿಬೆಟ್ಟು ಲೇಖಕಿ, ಕತೆಗಾರ್ತಿ ಮತ್ತು ಪತ್ರಕರ್ತೆ. “ಒಂದು ಮುಷ್ಟಿ ನಕ್ಷತ್ರ” ಅವರ ಪ್ರಕಟಿತ ಕಥಾ ಸಂಕಲನ. ಇದೇ ಕೃತಿಗೆ ಸಾರಾ ಅಬೂಬ್ಕರ್ ಪ್ರಶಸ್ತಿ ಲಭಿಸಿದೆ. ದಟ್ಸ್ ಕನ್ನಡ, ವಿಕ್ರಾಂತ ಕರ್ನಾಟಕ, ಟೈಮ್ಸ್ ಆಫ್ ಇಂಡಿಯಾ (ಕನ್ನಡ) ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಮಂಗಳೂರಿನಲ್ಲಿ ವಿಜಯ ಕರ್ನಾಟಕ ವರದಿಗಾರರಾಗಿದ್ದಾರೆ.