Daily Archives: May 8, 2013

ಸೋತು ಗೆದ್ದ ಹಳೆಯ ಜಾತ್ಯಾತೀತ ಪಕ್ಷವೊಂದರ ಕಥೆ, ವ್ಯಥೆ?

– ಬಿ.ಶ್ರೀಪಾದ ಭಟ್

ಕಟ್ಟ ಕಡೆಗೂ ಕಾಂಗ್ರೆಸ್ ಗೆದ್ದಿದೆ. ತಾನು ಗೆದ್ದಿದ್ದು ನಿಜವೇ ಎಂದು ಖಾತರಿಪಡಿಸಿಕೊಳ್ಳಲು ಪದೇ ಪದೇ ಮೈ ಚಿವುಟಿಕೊಳ್ಳುತ್ತಿದೆ. ಕಷ್ಟಪಟ್ಟು, ಅಯಾಸದಿಂದ ಬೆಟ್ಟವನ್ನೇರಿದ ರೀತಿಯಲ್ಲಿ ಸುಧಾರಿಸಿಕೊಳ್ಳುತ್ತಿದೆ. ಕಳೆದು ಏಳು ವರ್ಷಗಳ ಸತತ ಸೋಲಿನಿಂದ ಕಂಗೆಟ್ಟಿದ, ಹೆಚ್ಚೂ ಕಡಿಮೆ ಆತ್ಮವಂಚನೆಯ ಮಟ್ಟಕ್ಕೆ ತಳ್ಳಲ್ಟಟ್ಟಿದ್ದ ಈ ಕಾಂಗ್ರೆಸ್ ಪಕ್ಷ, ಮತ್ತು ಕಳೆದ ಏಳು ವರ್ಷಗಳಲ್ಲಿ ಯಾವುದೇ ಸೈದ್ಧಾಂತಿಕ ಬದ್ಧತೆಗಳಿಲ್ಲದ, ಭವಿಷ್ಯದ ಕುರಿತಾದ ನಿಖರವಾದ ವ್ಯಾಖ್ಯಾನಗಳಿಲ್ಲದ, ಆಧುನಿಕ ಕರ್ನಾಟಕದ ರೂಪುರೇಷಗಳ ಬಗೆಗೆ ಕೊಂಚವೂ ತಿಳುವಳಿಕೆಗಳಿಲ್ಲದ ಈ ಕಾಂಗ್ರೆಸ್‌ನ ನೇತಾರರ ಪ್ರತಿಯೊಂದು ಮಾತುಗಳು ನಗೆಪಾಟಲಿಗೀಡಾಗುತ್ತಿತು, ತಿರಸ್ಕಾರಕ್ಕೆ ಗುರಿಯಾಗುತ್ತಿತ್ತು. ಬಿಜೆಪಿಯ ಕಡು ಭ್ರಷ್ಟಾಚಾರದ ಆಡಳಿತಕ್ಕೆ, ಅವರ ದುರಹಂಕಾರದ, ಮತಾಂಧತೆಯ ಬಿರುಗಾಳಿಗೆ, ಮತೀಯ ರಾಷ್ತ್ರೀಯತೆಗೆ ಈ 125 ವರ್ಷಗಳ ಇತಿಹಾಸವಿರುವ ಜಾತ್ಯಾತೀತ ಪಕ್ಷವಾದ ಕಾಂಗ್ರೆಸ್ ಬಳಿ ನೇರವಾಗಿ ಮುಖಾಮುಖಿಯಾಗುವಂತಹ ಯಾವುದೇ ಬಗೆಯ ಬೌದ್ಧಿಕ ಗಟ್ಟಿತನದ ಕಸುವಿನ ಶಕ್ತಿಯಾಗಲೀ, ರಾಜಕೀಯ ಮುತ್ಸದ್ದಿತನವಾಗಲೀ, ಒಂದು ಕಾಲಕ್ಕೆ ತಮಗೆ ಊರುಗೋಲಾಗಿದ್ದ ಸಮಾಜವಾದದ ಹತಾರಗಳಾಗಲಿ ಇರಲೇ ಇಲ್ಲ. ಹಾಗೂ ಹೆಚ್ಚೂ ಕಡಿಮೆ ಅದರ ಆಸ್ತಿತ್ವವೇ ನಾಶವಾಗಿತ್ತು.

ಇಂತಹ ದಿಕ್ಕೆಟ್ಟ ಸ್ಥಿತಿಯಿಂದ ಹಠಾತ್ತಾಗಿ ಅಧಿಕಾರದ ಗದ್ದುಗೆಯ ಹತ್ತಿರಕ್ಕೆ ತಲುಪಿದ ಈ ಕಾಂಗ್ರೆಸ್‌ಗೆ ಈ ಕ್ಷಣಕ್ಕೆ ತನ್ನ Siddaramaiahಈ ಗೆಲುವಿನ ಕಾರಣಕ್ಕೆ ಹರ್ಷೋದ್ಗಾರದಿಂದ ಕುಣಿದಾಡುವಂತಹ ಸ್ಥಿತಿಯೇನು ಇಲ್ಲದಿದ್ದರೂ, ಮಂದಹಾಸ ಬೀರುತ್ತಾ, ಮುಗುಳುನಗೆಯಿಂದ ವಿ ಆಕಾರದಲ್ಲಿ ಕೈಯನ್ನು ಎತ್ತಬಹುದು ಯಾವ ಮುಲಾಜಿಲ್ಲದೆ. ಏಕೆಂದರೆ ಬೇರೆಯವರ ಮಾತು ಬಿಡಿ, ತಮ್ಮ ಗೆಲುವೆನ್ನುವ ಗೆಲುವು ಹೆಚ್ಚೂ ಕಡಿಮೆ ಋಣಾತ್ಮಕ ಮತಗಳಿಂದ ಬಂದಿದ್ದು, ಈ ಗೆಲುವು ಕೋಮುವಾದಿ, ಭ್ರಷ್ಟ ಬಿಜೆಪಿ ವಿರುದ್ಧದ ಆಡಳಿತ ವಿರೋಧ ಅಲೆಯ ಮೇಲೆ ತೇಲಿ ಬಂದಿದ್ದು ಎಂದು ಸ್ವತಃ ಕಾಂಗ್ರೆಸ್ಸಿಗರಿಗೇ ಗೊತ್ತು. ಕರಾವಳಿ ಜಿಲ್ಲೆಗಳಲ್ಲಿ ಸಂಘ ಪರಿವಾರದ ಪುಂಡಾಟಿಕೆಯಿಂದ, ವಿಷಮಯವಾದ ಹಿಂದುತ್ವದ ಅಜೆಂಡಾದಿಂದ ಅಲ್ಲಿನ ಜನತೆ ಸಂಪೂರ್ಣ ರೋಸಿ ಹೋಗಿದ್ದು ಆ ಜಿಲ್ಲೆಗಳಲ್ಲಿ ಕಾಂಗ್ರೆಸ್ ಸ್ವೀಪ್ ಮಾಡಿದ್ದಕ್ಕೆ ಮೂಲಭೂತ ಕಾರಣ. ಇದೇ ಮಾತನ್ನು ಹೈದರಾಬಾದ್ ಕರ್ನಾಟಕ, ಬಿಜಾಪುರ, ಬಾಗಲಕೋಟೆ ಹಾಗೂ ಇತರೇ ಜಿಲ್ಲೆಗಳಿಗೂ ಅನ್ವಯಿಸುತ್ತದೆ. ಇವೆಲ್ಲ ಕಾಂಗ್ರೆಸ್‌ನ್ನು ಕೈ ಹಿಡಿದೆತ್ತಿವೆ. ಈ ಬಾರಿಯ ಚುನಾವಣೆಯಲ್ಲಿ ಬೆರಳಣಿಕೆಯಷ್ಟು ಅಭ್ಯರ್ಥಿಗಳನ್ನು ಹೊರತುಪಡಿಸಿ ಇತರೇ ಬಹುಪಾಲು ಕಾಂಗ್ರೆಸ್ಸಿಗರು ಬಿಜೆಪಿಯ ವಿರೋಧಿ ಅಲೆಯ ಮತಗಳು ತಮ್ಮ ಬುಟ್ಟಿಗೆ ಬಂದು ಬೀಳುತ್ತವೆ ಎಂಬ ಆತ್ಮ ವಿಶ್ವಾಸದಿಂದ, ಅತ್ಯಂತ ನಿರ್ಲಕ್ಷ್ಯ ಮತ್ತು ಉಢಾಫೆಯಿಂದಲೇ ಈ ಬಾರಿಯ ಚುನಾವಣೆಯನ್ನು ಎದುರಿಸಿದ್ದರು.

ಹಾಗೆಯೇ ಕರ್ನಾಟಕವನ್ನು ದೇಶದಲ್ಲಿಯೇ ಭ್ರಷ್ಟ ರಾಜ್ಯವನ್ನಾಗಿಸಿದ, ಮುಖ್ಯಮಂತ್ರಿ, ಮಂತ್ರಿ, ಶಾಸಕರು ಭ್ರಷ್ಟಾಚಾರದ ಅಪಾದನೆಯ ಮೇಲೆ ಜೈಲು ಸೇರಬೇಕಾದಂತಹ ದುರಂತಕ್ಕೆ ತಳ್ಳಲ್ಪಟ್ಟ, ಕರ್ನಾಟಕವನ್ನು ದಿನನಿತ್ಯ ಹಗರಣಗಳ ಗೂಡನ್ನಾಗಿಸಿದ, ಹಿಂದುತ್ವದ ಅಜೆಂಡವನ್ನು ಅತ್ಯಂತ ನೀಚ ಮಟ್ಟದಲ್ಲಿ ಪ್ರಯೋಗಿಸಿ ಅಲ್ಪಸಂಖ್ಯಾತರ ಜೀವನವನ್ನು ನರಕವನ್ನಾಗಿಸಿದ ಬಿಜೆಪಿ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಲು, ಸಂಘ ಪರಿವಾರವನ್ನು ಕಸದ ಬುಟ್ಟಿಗೆ ತಳ್ಳಲು ಕನ್ನಡದ ಪ್ರಜ್ಞಾವಂತ ಜನತೆ ನಿರ್ಧಾರ ಮಾಡಿಯಾಗಿತ್ತು. ಇದಕ್ಕೆ ಪರ್ಯಾಯ ಪಕ್ಷದ ಅವಶ್ಯಕತೆಯಾಗಿ ಮೂಡಿ ಬಂದದ್ದೇ ಕಾಂಗ್ರೆಸ್. ಏಕೆಂದರೆ ಕನ್ನಡಿಗರು ತಂದೆ, ಮಕ್ಕಳ ಪಕ್ಷ ಮತ್ತವರ ಆಸ್ತಿಯಂತಾಗಿರುವ ಜನತಾ ದಳವನ್ನು ನಂಬಲು ಸುತಾರಾಂ ಸಿದ್ಧರಿರಲಿಲ್ಲ. ಅವರ ಎಲ್ಲಾ ರಾಜಕೀಯ ನಡೆಗಳೂ, ಪಟ್ಟುಗಳೂ ಸ್ವಹಿತಾಸಕ್ತಿಯ, ಕುಟಂಬದ ನೆಲೆಯಲ್ಲಿಯೇ ನಿರ್ಧರಿಲ್ಪಡುತ್ತವೆ. ಅಲ್ಲದೆ ಸರ್ವಜನರನ್ನೂ ತುಳಿಯುವ, ಹತ್ತಿಕ್ಕುವ ಈ ಕುಟುಂಬದ ಸರ್ವಾಧಿಕಾರದ ಧೋರಣೆಯ ಗುಣಗಳನ್ನು ಕನ್ನಡಿಗರು ೨೦೦೮ರಲ್ಲಿಯೇ ತಿರಸ್ಕರಿಸಿದ್ದರು. ಇನ್ನು ಹಾಳೂರಿಗೆ ಉಳಿದವನೇ ರಾಜ ಎಂಬಂತೆ ಅನಿವಾರ್ಯವಾಗಿ ಪರಿಗಣಿತವಾಗಿದ್ದು ಈಗಾಗಲೇ ಸೋತು ಕಂಗೆಟ್ಟಿದ್ದ ಕಾಂಗ್ರೆಸ್ ಪಕ್ಷ. ಅಲ್ಲದೆ ಎಷ್ಟೇ ಭ್ರಷ್ಟಗೊಂಡರೂ ಕಾಂಗ್ರೆಸ್‌ನೊಳಗಿರುವ ಜಾತ್ಯಾತೀತತೆಯ ಮೂಲ ಸೆಲೆ ಇನ್ನೂ ಬತ್ತಿರಲಿಲ್ಲ ಎನ್ನುವ ಜನರ ನಂಬಿಕೆ ಹಾಗೂ ಏನಿಲ್ಲದಿದ್ದರೂ ಸಂಘ ಪರಿವಾರದ ಮತಾಂಧತೆ ಮತ್ತು ಧರ್ಮದ ಆಧಾರದ ಮೇಲಿನ ಸಮಾಜವನ್ನು ಛಿದ್ರವಾಗಿಸುವ ಅತಿರೇಕ ಘಟನೆಗಳು ಕಾಂಗ್ರೆಸ್ ಆಡಳಿತದ ಸಂದರ್ಭದಲ್ಲಿ ನಡೆಯಲಾರವು ಎನ್ನುವ ವಿಶ್ವಾಸವು ಪ್ರಜ್ಞಾವಂತ, ಪ್ರಗತಿಪರ ಕನ್ನಡಿಗರು ಕಾಂಗ್ರಸ್‌ನ ಪರ ನಿಲ್ಲಲು ಮುಖ್ಯ ಕಾರಣವಾಗಿತ್ತು. ಅಷ್ಟರ ಮಟ್ಟಿಗೆ ಕರ್ನಾಟಕವನ್ನು ನರಕವನ್ನಾಗಿಸಿದ್ದರು ಈ ಮತಾಂಧ, ಭ್ರಷ್ಟ ಸಂಘ ಪರಿವಾರದವರು.

ಈ ಎಲ್ಲ ಹಿನ್ನೆಲೆಯಲ್ಲಿ ಇಂದಿನ ರಾಜಕಾರಣವನ್ನು ಅವಲೋಕಿಸಿದಾಗ ಇಂದಿನ 2013 ರ ಕರ್ನಾಟಕದ ರಾಜಕೀಯ ವಾತಾವರಣಕ್ಕೂ, ಮೂವತ್ತು ವರ್ಷಗಳಷ್ಟು ಹಿಂದಿನ 1983 ರ ಕರ್ನಾಟಕದ ರಾಜಕೀಯ ವಾತಾವರಣಕ್ಕೂ ಬಹಳ ಸಾಮ್ಯತೆಗಳಿವೆ. ಆಗ ಸಂಜಯ್ ಬ್ರಿಗೇಡ್ ಗುಂಪಿಗೆ ಸೇರಿದ್ದ, ಅಪಕ್ವ ರಾಜಕಾರಣಿಯಾಗಿದ್ದ ಗುಂಡೂರಾವ್ ನೇತೃತ್ವದಲ್ಲಿ ಅಂಧಾದುಂಧಿ, ಭ್ರಷ್ಟ, ಕ್ಲಬ್ ಮಟ್ಟದ ಆಡಳಿತ ನೀಡಿದ್ದ ಕಾಂಗ್ರೆಸ್ ಪಕ್ಷವು ಕನ್ನಡಿಗರ ತಿರಸ್ಕಾರಕ್ಕೆ ಗುರಿಯಾಗಿತ್ತು. ಕಂಡ ಕಂಡಲ್ಲಿ ಜನತೆ ಕಾಂಗ್ರೆಸ್ಸಿಗರನ್ನು ಉಗಿಯುತ್ತಿದ್ದರು. ಕಾಂಗ್ರೆಸ್‌ನ್ನು ಕಸದ ಬುಟ್ಟಿಗೆ ಎಸೆಯಲು ಕನ್ನಡಿಗರು ತುದಿಗಾಗಲಲ್ಲಿ ನಿಂತಿದ್ದರು. ಕಾಂಗ್ರೆಸ್ ಪಕ್ಷದ ಆಗಿನ ಸ್ಥಿತಿಯು ಇಂದಿನ ಬಿಜೆಪಿ ಸ್ಥಿತಿಯಂತಿತ್ತು. ಆಗ ಉತ್ತುಂಗ ಸ್ಥಿತಿಯಲ್ಲಿದ್ದ ರೈತ ಚಳುವಳಿ, ದಲಿತ ಚಳುವಳಿ ಮತ್ತು ಪ್ರಜ್ಞಾವಂತರ ಪತ್ರಿಕೆಯಾದ ಲಂಕೇಶ್ ಪತ್ರಿಕೆಯ ಸಂಯುಕ್ತ ಮತ್ತು ಸತತ ಹೋರಾಟದ ಫಲವಾಗಿ ಕಾಂಗ್ರೆಸ್ ಧೂಳೀಪಟವಾಗಿತ್ತು. ಸಂಭಾವಿತರಂತೆ ಕಂಗೊಳಿಸುತ್ತಿರುವ ಈಗಿನ ಬಹುಪಾಲು ಕಾಂಗ್ರೆಸ್ ರಾಜಕಾರಣಿಗಳು ಆಗ ವಿಲನ್‌ಗಳಾಗಿ ಮೂಲೆಗುಂಪಾಗಿದ್ದರು. ಅದರ ಫಲವಾಗಿಯೇ ಕರ್ನಾಟಕ ರಾಜಕೀಯದಲ್ಲಿ ಹೊಸ ಪಲ್ಲಟ,ಹೊಸ ಯುಗ ಪ್ರಾರಂಭವಾಗಿತ್ತು. ಆಗ ಈ ಹೊಸ ಯುಗದ ನಾಯಕರಾಗಿ, ಬದಲಾವಣೆಯ ಹರಿಕಾರರಾಗಿ ಮೂಡಿಬಂದಿದ್ದು ಎಂ.ಪಿ.ಪ್ರಕಾಶ್, ಸಿಂಧ್ಯ, ಜೆ.ಹೆಚ್.ಪಟೇಲ್, ನಜೀರ್ ಸಾಬ್, ಬಿ.ರಾಚಯ್ಯ, ಜಾಲಪ್ಪ, ಜೀವಿಜಯ, ದೇವೇಗೌಡ, ಬಿ.ಎಲ್.ಗೌಡ, ಲಕ್ಮೀಸಾಗರ್, ಬಂಗಾರಪ್ಪ, ವೈ.ಕೆ.ರಾಮಯ್ಯ, ಬೈರೇಗೌಡ, ಸಿದ್ದರಾಮಯ್ಯ, ಬಿ.ಆರ್.ಯಾವಗಲ್, ಎಂ.ಚಂದ್ರಶೇಖರ್ ಮುಂತಾದ ಜನತಾ ಪರಿವಾರದ ರಾಜಕಾರಣಿಗಳು. ಇವರೆಲ್ಲರೂ ಶಾಸಕರಾಗಿ ಆಯ್ಕೆಯಾಗಿದ್ದು ಕರ್ನಾಟಕದಲ್ಲಿ ಆಗ ತಂಗಾಳಿಯನ್ನು ಬೀಸಿದಂತಿತ್ತು. ಆಗ ಒಂದು ಬಗೆಯ ಹೊಸ ಗುಣಲಕ್ಷಣಗಳು ನಿಧಾನವಾಗಿ ಮೈದಾಳುತ್ತಿತ್ತು. ಆದರೆ ಚಲಾವಣೆಯಲ್ಲಿ ಇಲ್ಲದ, ಕುತಂತ್ರ ರಾಜಕಾರಣಿ ರಾಮಕೃಷ್ಣ ಹೆಗಡೆ ದೆಹಲಿಯಿಂದ ನೇರವಾಗಿ ಕರ್ನಾಟಕದ ಮೇಲೆರೆಗಿ ಬಿಲ ಹೊಕ್ಕ ಹಾವಿನಂತೆ ಜನತಾ ಪರಿವಾರದಲ್ಲಿ ಸೇರಿಕೊಂಡು, ಭಟ್ಟಂಗಿ, ಜಾತಿವಾದಿ ಪತ್ರಕರ್ತರ ಕುಮ್ಮಕ್ಕಿನಿಂದ ಮುಖ್ಯಮಂತ್ರಿಯೂ ಆಗಿ ಬಿಟ್ಟರು.

ಆದರೂ ಸಹ ಎಂಬತ್ತರ ದಶಕದ ಜನತಾ ಪರಿವಾರದ ಆಡಳಿತದಲ್ಲಿ ಕಂಡುಬಂದ, ಜಾರಿಗೊಂಡ ಹೊಸ ಸಂಕೇತಗಳು, ಅನೇಕ ಗುಣಾತ್ಮಕ ಬದಲಾವಣೆಗಳನ್ನು ನಾವು ಮರೆಯುವಂತಿಲ್ಲ. ಸೀಮಿತ ನೆಲೆಯಲ್ಲಿಯೇ ಆದರೂ ರಾಜ್ಯದ ಆಡಳಿತವು ವಿಕೇಂದ್ರೀಕರಣಗೊಂಡಿದ್ದು ಈ ಜನತಾ ಪರಿವಾರದ ಕಾಲಘಟ್ಟದಲ್ಲಿ. ಭಿನ್ನವಾದ ರಾಜಕೀಯ ಮಾದರಿಗೆ ಜನತಾ ಪರಿವಾರ ಉದಾಹರಣೆಯಂತಿದ್ದದ್ದೂ ಸಹ ನಿಜ.ಹೊಸ ನುಡಿಕಟ್ಟಿನ ಬಳಕೆಗಾಗಿ ಹೊಸ ವೇದಿಕೆಗಳು ನಿರ್ಮಾಣಗೊಂಡಿದ್ದೂ ನಿಜ. ಆದರೆ ಇದೇ ಪರಿವಾರದ ಆಡಳಿತದ ಕಾಲಘಟ್ಟದಲ್ಲಿ ನಡೆದ ಕುದುರೆಮೋತಿ ಸ್ವಾಮಿ ಅತ್ಯಾಚಾರ, ಬೆಂಡಿಗೇರಿ ಪ್ರಕರಣ, ಬದನವಾಳು ಪ್ರಕರಣಗಳು ಶೋಷಿತ ವರ್ಗಗಳನ್ನು, ತಳ ಸಮುದಾಯಗಳನ್ನು ಅತಂತ್ರ ಸ್ಥಿತಿಗೆ, ಮತ್ತಷ್ಟು ದಯನೀಯ ಸ್ಥಿತಿಗೆ ತಳ್ಳಿತು. ಅನೇಕ ಭೂ ಹಗರಣಗಳು ಬಯಲಿಗೆ ಬಂದವು. ಹೆಗಡೆಯ ಕಾಲದಲ್ಲೇ ಬೆಂಗಳೂರು ನಗರ ತನ್ನ ಹಸಿರು ಪಟ್ಟಿಯನ್ನು ಕಳೆದುಕೊಂಡು ರಾಕ್ಷಸ ರೂಪದಲ್ಲಿ ಬೆಳದದ್ದು. ಈ ರಿಯಲ್ ಎಸ್ಟೇಟ್‌ನ ಭೂಗತ ವ್ಯವಹಾರಕ್ಕೆ ಆಗಲೇ ನಾಂದಿ ಹಾಡಿದ್ದು. ಇಂತಹ ಸ್ಥಿತ್ಯಂತರ ಕಾಲದಲ್ಲಿ ಹೆಗಡೆಯವರ ಗುಳ್ಳೇನರಿಯ ತಂತ್ರಗಳು, ಆಸೆಬುರುಕತನ, ಜಾತೀಯತೆಯ ಪ್ರಯೋಗಗಳು, ಇಂದಿನ ಯಡಿಯೂರಪ್ಪನವರ ಮೇಲಿನ ಭ್ರಷ್ಟಾಚಾರದ ಅಪಾದನೆಗಳಿಗೆ ಸಾಮ್ಯತೆ ಇರುವ ಆಗಿನ ಹೆಗಡೆಯವರ ಮೇಲಿನ ಭ್ರಷ್ಟಾಚಾರದ ಆರೋಪಗಳು, ರಶೀದ್ ಕೊಲೆ ಪ್ರಕರಣ, ಒಳ ಜಗಳ, ತನ್ನೊಳಗೆ ಹರಡಿಕೊಂಡಿದ್ದ ಜಾತೀಯತೆಯ ರೋಗ ಮುಂತಾದ ಅನಿಷ್ಟಗಳೆಲ್ಲ ಜನತಾ ಪಕ್ಷಕ್ಕೇ ಉರುಳಾಗಿದ್ದು ಹಾಗೂ ನಂತರ ನಡೆದದ್ದೆಲ್ಲಾ ಇಂದು ಇತಿಹಾಸ.

ಮೂವತ್ತು ವರ್ಷಗಳ ನಂತರ 1983 ರಲ್ಲಿ ಜನತಾ ಪರಿವಾರ ನಿಂತ ನೆಲೆಯಲ್ಲಿ ಇಂದು ೨೦೧೩ರಲ್ಲಿ ಕಾಂಗ್ರೆಸ್ ಬಂದು ನಿಂತಿದೆ. ಮೇಲ್ನೊಟಕ್ಕಂತೂ ಈ ಬಾರಿ ಆಯ್ಕೆಯಾದ ಬಹುಪಾಲು ಕಾಂಗ್ರೆಸ್ ಶಾಸಕರನ್ನು ಆ ಕಾಲದ ಜನತಾ ಪರಿವಾರದ ನಾಯಕರೊಂದಿಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟರ ಮಟ್ಟಿಗೆ ಇದು ಕಾಂಗ್ರೆಸ್ ಪಕ್ಷದ ಬಲು ದೊಡ್ಡ ಮಿತಿ ಹಾಗು ಸರಿಯಾಗಿ ಮಟ್ಟ ಹಾಕದಿದ್ದರೆ ಪಕ್ಷಕ್ಕೇ ಮುಂದೆ ಉರುಳಾಗುವ ಸಾಧ್ಯತೆಗಳಿವೆ. ಆದರೆ ಇದನ್ನು ಹೊರತುಪಡಿಸಿ ಇಂದು ಬದಲಾವಣೆಯ ಜವಬ್ದಾರಿಯನ್ನು, ಹಿಂದುಳಿದ ವರ್ಗಗಳ ಮತ್ತು ದಲಿತರ ನಡುವೆ ಹೊಸ ಧ್ರುವೀಕರಣದ ಆಶಯಗಳನ್ನು, ಕರ್ನಾಟಕವನ್ನು ಮತೀಯವಾದದ, ಹಿಂದುತ್ವದ ಫೆನೆಟಿಸಂನಿಂದ ಬಿಡುಗಡೆಗೊಳಿಸುವ ಅತ್ಯಂತ ಭಾರವಾದ ಆದರೆ ಅತ್ಯಂತ ಗುರುತರವಾದ ಜವಬ್ದಾರಿಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ಈಗಿನ ಕಾಂಗ್ರೆಸ್ ಪಕ್ಷ ಇದನ್ನೆಲ್ಲ ಹೇಗೆ ನಿಭಾಯಿಸುತ್ತದೆ?? ಕರ್ನಾಟಕವನ್ನು ಪ್ರಗತಿಪರ, ಜಾತ್ಯಾತೀತ ರಾಜ್ಯವಾಗಿ ಕಟ್ಟುವ ಸುವರ್ಣಾವಕಾಶವನ್ನು ಪಡೆದುಕೊಂಡ ಕಾಂಗ್ರೆಸ್‌ನ ನಾಯಕರಲ್ಲಿ ಬಳಿ ಕನಿಷ್ಟ ಇವುಗಳ ಕುರಿತಾಗಿ ಕನಸುಗಳಿವೆಯೇ?? ಕನಸುಗಳಿದ್ದರೆ ಅದನ್ನು ಅನುಷ್ಟಾನಗೊಳಿಸಲು ಇಚ್ಛಾಶಕ್ತಿಯ ಕ್ರೋಢೀಕರಣ ಯಾವ ಮಟ್ಟದಲ್ಲಿದೆ?? ಕ್ರೂರ ಮತ್ತು ಅರಾಜಕತೆಯಿಂದ ಕೂಡಿದ ವ್ಯವಸ್ಥೆಯನ್ನು ಸಹನೀಯಗೊಳಿಸಲು ಒಗ್ಗಟ್ಟಾಗಿ ದುಡಿಯುವ ಧೃಢ ಸಂಕಲ್ಪವನ್ನು ಹೊಂದಿದ್ದಾರೆಯೇ?? ಸಂಘ ಪರಿವಾರದ ಕ್ರೂರ ಸಂತತಿಗಳನ್ನು ಹೆಕ್ಕಿ, ಹೆಕ್ಕಿ ತೆಗೆದು ಶಿಕ್ಷೆಗೆ ಗುರಿಪಡಿಸುತ್ತೇವೆ, ಕರ್ನಾಟಕವನ್ನು ಉಸಿರುಗಟ್ಟಿಸುತ್ತಿರುವ ಭ್ರಷ್ಟಾಚಾರ ಮತ್ತು ಅಪಾಯಕಾರಿ ಹಿಂದುತ್ವದ ಕಬಂಧ ಬಾಹುಗಳಿಂದ ಬಿಡುಗಡೆಗೊಳಿಸುತ್ತೇವೆ ಎಂದು ತುಂಬಾ ಸೂಕ್ಷ್ಮಮತಿಗಳಾಗಿ, ಪ್ರಜ್ಞಾಪೂರ್ವಕವಾಗಿ ಕಾಂಗ್ರೆಸ್ಸಿಗರು ಪಣ ತೊಡಬಲ್ಲರೇ?? ಭೀಕರ ವಾಸ್ತವತೆಯನ್ನು ಮುಖಾಮುಖಿಯಾಗುವ ಎದೆಗಾರಿಕೆ ಮತ್ತು ಮಾನಸಿಕ ಸಿದ್ದತೆಯನ್ನು ಕರ್ನಾಟಕದ ಜನತೆಯ ಮುಂದೆ ಪ್ರಾಮಾಣಿಕವಾಗಿ ನಿವೇದಿಸಿಕೊಳ್ಳಬಲ್ಲರೇ ಈ ಕಾಂಗ್ರೆಸ್ಸಿಗರು?? ಇಂದು ಓಬಿಸಿ ಮತ್ತು ಅಲ್ಪಸಂಖ್ಯಾತ ವರ್ಗಗಳ ಸಂಪೂರ್ಣ ಬೆಂಬಲ ಗಳಿಸಿ ಆ ಮೂಲಕ ತನ್ನ ಹಳೇ ಓಟ್ ಬ್ಯಾಂಕ್ ಅನ್ನು ಮರಳಿ ಗಳಿಸಿರುವ ಕಾಂಗ್ರೆಸ್ ಈ ಓಟ್ ಬ್ಯಾಂಕ್ ಅನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿ, ತನ್ನ ಅವಕಾಶವಾದಿತನದ ಮುಖವಾಡ ಕಳಚಿ ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ದುಡಿಯಬಲ್ಲದೇ?? ಅಲ್ಲದೆ ಮುಖ್ಯವಾಗಿ ಈ ಕಾಂಗ್ರೆಸ್ ಡಿ.ಕೆ.ಶಿವಕುಮಾರ್, ದೇವರಾಜ್ ರಂತಹ ಹಾಗೂ ಇನ್ನಿತರ ಅವಾಂತಕಾರಿ ರಾಜಕಾರಣಿಗಳನ್ನು ಹೇಗೆ ನಿಭಾಯಿಸುತ್ತದೆ??

ಕೊನೆಯದಾಗಿ, ಈಗಿನ ಚುನಾವಣಾ ಫಲಿತಾಂಶಗಳು ಕರ್ನಾಟಕ ರಾಜಕೀಯವನ್ನು ಒಂದು ನಿರ್ಣಾಯಕ ಹಂತದಲ್ಲಿ ತಂದು ನಿಲ್ಲಿಸಿದೆ. ಅದೇನೆಂದರೆ ಇನ್ನು ಮುಂದಿನ ವರ್ಷಗಳಲ್ಲಿ ಕರ್ನಾಟಕದ ರಾಜಕಾರಣವು ತನ್ನ ಪಕ್ಕದ ತಮಿಳುನಾಡು, ಕೇರಳದ ಜಾಡಿಗೆ ಹೊರಳುತ್ತಿದೆ ಎಂಬುದು. ಈ ಅವಕಾಶವಾದಿ, ಭ್ರಷ್ಟ ಕೆಜೆಪಿ ಪಕ್ಷ ಸಂಪೂರ್ಣವಾಗಿ ಮುಗ್ಗರಿಸಿ ನಾಮಾವಶೇಷವಾಗಿದೆ. ಇನ್ನು ಭವಿಷ್ಯದಲ್ಲಿ ತಂದೆ ಮಕ್ಕಳ ಪಕ್ಷ ಜನತಾ ದಳದ ಪ್ರಭಾವ ಮತ್ತು ಬಲಾಬಲ ಮತ್ತಷ್ಟು ಕುಗ್ಗುವ ಸಾಧ್ಯತೆಗಳಿವೆ. ಕಡೆಗೆ ತಮಿಳುನಾಡಿನ ಡಿ.ಎಂ.ಕೆ ಮತ್ತು ಏಐಡಿಎಂಕೆ, ಕೇರಳದ ಯುಡಿಎಫ್ ಮತ್ತು ಎಲ್‌ಡಿಫ್ ಮಾದರಿಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಅಧಿಕಾರದ ಚುಕ್ಕಾಣಿಯನ್ನು ಹಿಡಿಯಬಹುದು. ಅದಕ್ಕೆ ೨೦೧೩ರ ಚುನಾವಣೆ ಮುನ್ನುಡಿಯನ್ನು ಬರೆದಂತಿದೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಇದನ್ನು ಸುಳ್ಳು ಮಾಡಲು ಮುಂದಿನ ಐದು ವರ್ಷಗಳ ಅವಕಾಶವಿದೆ.

ಮೇಲಿನ ಸಾಧ್ಯತೆಗಳನ್ನು ಸುಳ್ಳು ಮಾಡಲು ಇಂದಿನ ಚುನಾವಣೆಯಲ್ಲಿ ನಮ್ಮ ಪ್ರೀತಿಯ, ಪ್ರಗತಿಪರ ನಾಯಕ ಪುಟ್ಟಣ್ಣಯ್ಯ ಗೆದ್ದಿದ್ದಾರೆ. ಇದು ಭವಿಷ್ಯದ ಕುರಿತಾಗಿ ಹೊಸ ಭರವಸೆ. ಲೋಕಸತ್ತಾ ಪಕ್ಷದಿಂದ ಸ್ಪಧಿಸಿದ್ದ ರವಿ ಕೃಷ್ಣಾರೆಡ್ಡಿ 6596 ರಷ್ಟು ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿಯೂ, ಅಶ್ವಿನ್ ಮಹೇಶ್ 11915 ಮತಗಳನ್ನು ಗಳಿಸಿ ಮೂರನೇ ಸ್ಥಾನದಲ್ಲಿಯೂ, ಶಾಂತಲಾ ದಾಮ್ಲೆ 9071 ಮತಗಳನ್ನು ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇದು ಇವರೆಲ್ಲ ಹಣ ಹಂಚದೆ, ಬದಲಾಗಿ ಜನತೆಯಿಂದಲೇ ಹಣ ಪಡೆದು ಪ್ರಾಮಾಣಿಕ ಚುನಾವಣೆ ನಡೆಸಿದವರು. ಈ ಸಂದರ್ಭದಲ್ಲಿ ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಲೋಕಸತ್ತಾ ಪಕ್ಷ, ಮತ್ತು ಕಮ್ಯುನಿಷ್ಟ್ ಪಕ್ಷ ಇವರೆಲ್ಲರೂ ಒಗ್ಗಟ್ಟಾಗಿ ಧ್ರವೀಕರಣಗೊಳ್ಳಬೇಕಾಗಿದೆ. ಆ ಮೂಲಕ ಪರ್ಯಾಯ ರಾಜಕಾರಣಕ್ಕೆ ಒಂದು ಮುನ್ನುಡಿಯನ್ನು ಬರೆಯಬಾರದೇಕೆ??

ಇದು ಕತ್ತಲ ದಾರಿಯೇ ನಿಜ, ಆದರೆ ಇಚ್ಛಾಶಕ್ತಿಯ ಬಲ, ಪ್ರಾಮಾಣಿಕತೆಯ, ನೈತಿಕತೆಯ ಬಲ ಎಂದಿಗೂ ಬೆಳಕಿನ ಹಣತೆಗಳೇ. ಇದನ್ನು ಹಚ್ಚಬೇಕಷ್ಟೇ.