Daily Archives: May 9, 2013

ಚುನಾವಣೋತ್ತರ ಸಂದರ್ಭದಲ್ಲಿ “ವರ್ತಮಾನ.ಕಾಮ್”ನ ದಾರಿ…

ಸ್ನೇಹಿತರೇ,

ಕಳೆದ ಒಂದು-ಒಂದೂವರೆ ತಿಂಗಳು ದಿನಕ್ಕೆ ಸರಾಸರಿ ಏಳೆಂಟು ಕಿ.ಮೀ. ನಡೆದು, ನೂರಾರು ಜನರ ಕೈಕುಲುಕಿ, ಮಾತನಾಡಿಸಿ, ಕಷ್ಟಸುಖ ಹಂಚಿಕೊಂಡು, ಬೆವರು ಸುರಿಸಿ, ಕೊಬ್ಬು ಕರಗಿಸಿ, ಬಹಳ ಸಂತಸದಿಂದ ಕಳೆದೆ. ಜೊತೆಯಾದದ್ದು ಹಲವರು. ಹಣಸಹಾಯದಿಂದ ಹಿಡಿದು, ಸಾಧ್ಯವಾದಾಗಲೆಲ್ಲ ಜೊತೆಗೂಡಿ ಪ್ರಚಾರ ಮಾಡಿದ ಅನೇಕರಿದ್ದಾರೆ. ಅವರೆಲ್ಲರಿಗೂ ನನ್ನ ನಮನಗಳು. ಸುಮಾರು ನೂರಕ್ಕೂ ಹೆಚ್ಚು ಜನ ಕೂಡಿ ಸುಮಾರು ಐದೂವರೆ ಲಕ್ಷ ರೂಪಾಯಿಯಷ್ಟು ದೇಣಿಗೆ ನೀಡಿದ್ದಾರೆ. ನಾನು ನನ್ನ ಕಡೆಯಿಂದ ಸುಮಾರು ಮೂರ್ನಾಲ್ಕು ಲಕ್ಷ ರೂಪಾಯಿ ಹಾಕಿಕೊಂಡಿದ್ದೇನೆ.

ಬಿಟಿಎಮ್ ಲೇಔಟ್‌ನ 6596 ಮತದಾರರು ಯಾವುದೇ ಪ್ರಲೋಭನೆಗೊಳಗಾಗದೆ ಒಂದು ಗುಂಪಾಗಿ ಮತ ಹಾಕಿದ್ದಾರೆ BTMLayout-2013ಎಂದರೆ, ಅದು ಸಾಮಾನ್ಯ ಸಂಗತಿಯಲ್ಲ. ಈ ಕ್ಷೇತ್ರದಲ್ಲಿ ನಡೆದ ಅಕ್ರಮ, ಆಮಿಷ, ಮತ್ತು ಜಾತಿರಾಜಕಾರಣದ ನಡುವೆಯೂ ಇಷ್ಟೊಂದು ಜನ ಅವೆಲ್ಲವನ್ನೂ ಮೀರಿ ವರ್ತಿಸಿದ್ದು ಪ್ರಶಂಸನೀಯ. ನಾನು ಚುನಾವಣೆಯ ಸಂದರ್ಭದಲ್ಲಿ ಬಹಿರಂಗ ಭಾಷಣಗಳಲ್ಲಿ ಹೇಳುತ್ತಿದ್ದಂತೆ, ನಮಗೆ ಬೀಳುವ ಪ್ರತಿಯೊಂದು ಮತವೂ ಅನಾಚಾರ-ಅಕ್ರಮದ ವಿರುದ್ಧ ಬಿದ್ದ ಮತ ಮತ್ತು ಅರ್ಹತೆ-ಪ್ರಾಮಾಣಿಕತೆಯ ಪರ ಬಿದ್ದ ಮತ, ಮತ್ತು ಒಂದೊಂದು ಮತವೂ ಮುಖ್ಯ. ಈ ಚುನಾವಣೆ ಇಲ್ಲಿಯ ಜನರಿಗೆ ಒಂದು ಹಂತದವರೆಗೆ ಜಾಗೃತಿ ಮೂಡಿಸಿದೆ ಮತ್ತು ಇಲ್ಲಿಯ ಅನೇಕ ಜನ ನಮ್ಮ ಹೋರಾಟವನ್ನು ಮತ್ತು ಪ್ರತಿಪಾದಿಸಿದ ವಿಚಾರಗಳನ್ನು ಮತ ಹಾಕದಿದ್ದರೂ ಒಪ್ಪಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ನಮ್ಮದು ಗೆಲುವೇ.

ಅಂದ ಹಾಗೆ, ಇಡೀ ಕ್ಷೇತ್ರದಲ್ಲಿ ನನ್ನಷ್ಟು ಸುತ್ತಾಡಿದ, ಜನರಿಗೆ ಮುಖ ತೋರಿಸಿದ, ಮತ್ತು ಮತದಾರರ ಕೈಯ್ಯಲ್ಲಿ ಬೈಯಿಸಿಕೊಂಡ ಇನ್ನೊಬ್ಬ ಅಭ್ಯರ್ಥಿ ಇಲ್ಲ. ಅವರು ಬೈದದ್ದು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮುಖ ತೋರಿಸುವ ರಾಜಕಾರಣಿಗಳನ್ನು. ವಿಷಾದದ ಸಂಗತಿ ಏನೆಂದರೆ, ಹಾಗೆ ಬೈದ ಬಹುಪಾಲು ಜನ ಓಟು ಹಾಕಿರುವುದಿಲ್ಲ ಅಥವ ಮತ್ಯಾವುದೋ ಆಮಿಷಕ್ಕೆ ಒಳಗಾಗಿ ಅವರ ಬೈಗುಳಕ್ಕೆ ಅರ್ಹವಾಗಿದ್ದವರಿಗೇ ಮತ ಹಾಕಿರುತ್ತಾರೆ.

ನಾನು ಪ್ರತಿನಿಧಿಸಿದ್ದ ಲೋಕ್‌ಸತ್ತಾ ಪಕ್ಷ ಮಾಡಿದ ಪ್ರಚಾರ ಮತ್ತು ಪಾಲ್ಗೊಂಡ ರೀತಿ ಮುಂದಿನ ಏಳೆಂಟು ವರ್ಷಗಳಲ್ಲಿ ಕರ್ನಾಟಕದ ಚುನಾವಣಾ ರಾಜಕೀಯ ಹೇಗಿರುತ್ತದೆ Ravi-SripadBhat-Sriharshaಎನ್ನುವುದಕ್ಕೆ ಮುನ್ನುಡಿ ಬರೆದಂತಿದೆ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ನಿಸರ್ಗ ಅತ್ತಲೇ ಕ್ರಮಿಸುತ್ತಿದೆ. ಐದು ವರ್ಷದ ಹಿಂದೆ, ಸಾಂಕೇತಿಕವಾಗಿ ಎಂದು ಪ್ರತಿಭಟನೆಯ ಸ್ಪರ್ಧೆ ಮಾಡಿ, ಜನರಿಂದ ಹಣಸಂಗ್ರಹಿಸಿ, ಸಾಧ್ಯವಾದಷ್ಟು ಪ್ರಚಾರ ಮಾಡಿದವನು ಬಹುಶಃ ನಾನೊಬ್ಬನೆ. ಆದರೆ, ಈ ಸಲ ನಮ್ಮ ಪಕ್ಷದಿಂದಲೇ 24 ಜನ ಇದ್ದರು. ಮತ್ತು ಅದೇ ರೀತಿ ಮಾಡಿದ ಇತರೆ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳು ಅನೇಕರಿದ್ದರು. ಇನ್ನೈದು ವರ್ಷಗಳಲ್ಲಿ ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮಂತೆ ಚುನಾವಣೆಗೆ ಸ್ಪರ್ಧಿಸುವ ಒಬ್ಬರಾದರೂ ಇರುತ್ತಾರೆ ಎನ್ನುವುದರಲ್ಲಿ ನನಗೆ ಸಂದೇಹವಿಲ್ಲ. ಅದು ಇತರೆ ಪಕ್ಷಗಳ ಮೇಲೆ ಮತ್ತು ಪ್ರತ್ರಿನಿಧಿಗಳಾಗಬೇಕೆಂದು ಬಯಸುವವರ ನಡವಳಿಕೆಗಳ ಮೇಲೆ ನೇರ ಪ್ರಭಾವ ಬೀರಲಿದೆ.

ಈ ಚುನಾವಣೆಯಲ್ಲಿ ನಮಗೆ ಗೆಲುವಿನ ಸಮೀಪ ಹೋಗಲಾಗಿಲ್ಲ. ಆದರೆ ನಾವು ಸರಾಸರಿ ಸುಮಾರು ಮೂರು ಸಾವಿರ ಓಟು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ನಾವು ಸ್ಪರ್ಧಿಸಿದ ಎರಡು ಕಡೆ ಮೂರನೇ ಸ್ಥಾನದಲ್ಲಿದ್ದರೆ, ಬಹುತೇಕ ಕಡೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಂತರದ ಸ್ಥಾನದಲ್ಲಿದ್ದೇವೆ. ಇದು ಕಡಿಮೆ ಸಾಧನೆಯಲ್ಲ. ಇದನ್ನು ನಾವು ಹೆಚ್ಚುಹೆಚ್ಚು ಪ್ರಚುರಗೊಳಿಸಿದಷ್ಟೂ ಇಂತಹ ಪ್ರಯತ್ನಗಳಿಗೆ ಮುಂದಾಗುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಮತ್ತು ಪರ್ಯಾಯ ರಾಜಕಾರಣದ ಹುಡುಕಾಟದಲ್ಲಿರುವವರಿಗೆ ಸ್ಫೂರ್ತಿಯೂ ಆಗುತ್ತದೆ.

ಚುನಾವಣೆಗೆ ಸಂಬಧಿಸಿದಂತೆ ಇನ್ನೊಮ್ಮೆ ಬರೆಯುತ್ತೇನೆ. ಈಗ ವರ್ತಮಾನ.ಕಾಮ್ ವಿಚಾರವಾಗಿ ಒಂದಿಷ್ಟು ಹಂಚಿಕೊಳ್ಳುತ್ತೇನೆ.

ನಿಮಗೆ ಗೊತ್ತಿದೆ, ಇಲ್ಲಿ ನಾನೂ ಸೇರಿದಂತೆ ನಮ್ಮ ಅನೇಕ ಬರಹಗಾರ ಮಿತ್ರರು ನಿರ್ಭಯ ಮತ್ತು ನಿರ್ಭೀತಿಯಿಂದ ನಮ್ಮ ವರ್ತಮಾನದ ಸಾಮಾಜಿಕ-ರಾಜಕೀಯ-ಮಾಧ್ಯಮ ವಿಷಯಗಳ ಬಗ್ಗೆ ಸತ್ಯವನ್ನು ಹೇಳಬೇಕೆಂಬ ತುಡಿತದಲ್ಲಿ ಬರೆದಿದ್ದಾರೆ. ಬೇರೆ ಯಾವುದೇ ಮಾಧ್ಯಮದಲ್ಲಿ ಪ್ರಕಟವಾಗದ ಮತ್ತು ಚರ್ಚೆಯಾಗದ ವಿಷಯಗಳು ಇಲ್ಲಿ ಚರ್ಚೆಯಾಗಿವೆ. ಇದರಲ್ಲಿ ಕನಿಷ್ಟ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಇನ್ನು ನಿರ್ಬಂಧ ಹಾಕಿಕೊಳ್ಳಲಾಗುತ್ತದೆ. ಅದು, ಮಾಧ್ಯಮಕ್ಕೆ ಸಂಬಂಧಿಸಿದ ವಿಷಯಕ್ಕೆ.

ನನಗೆ ಕಳೆದ ಒಂದೂವರೆ ತಿಂಗಳಿನಿಂದ ಈ ಮೂರ್ನಾಲ್ಕು ದಿನಗಳಿಂದ ಯೊಚಿಸಲು ಸಿಕ್ಕಷ್ಟು ಸಮಯ ಸಿಕ್ಕಿರಲಿಲ್ಲ. ನಿಮ್ಮಲ್ಲಿ ಈಗಾಗಲೆ ಕೆಲವರು ಗಮನಿಸಿರಬಹುದು. ರಾಜಧಾನಿಯ ಹಲವು ಪ್ರಮುಖ ಪತ್ರಕರ್ತರಿಗೆ ಮತ್ತು ಮಾಧ್ಯಮ ಸಂಸ್ಥೆಗಳಿಗೆ ನನ್ನ ಬಗ್ಗೆ (ವರ್ತಮಾನ.ಕಾಮ್‌ನ ಕಾರಣವಾಗಿ) ಸಿಟ್ಟಿದೆ. ನಾನು ಅಥವ ನಮ್ಮ ವರ್ತಮಾನ.ಕಾಮ್‌ನ ಲೇಖಕರು ಅವರನ್ನು ಅಥವ ಅವರ ಮಾಧ್ಯಮ ಸಂಸ್ಥೆಗಳನ್ನು ವಿಮರ್ಶಿಸಿದ್ದು ಮತ್ತು ಟೀಕಿಸಿದ್ದೇ ಅದಕ್ಕೆ ಬಹುತೇಕ ಕಾರಣ. ಅದರಲ್ಲಿ ನಮಗೆ ವೈಯಕ್ತಿಕ ದ್ವೇಷವೇನೂ ಇರಲಿಲ್ಲ. ತಪ್ಪಾಗಿದ್ದು ಸರಿಯಾಗಬೇಕು ಎನ್ನುವ ಸಕಾರಣವೇ ಆ ವಿಮರ್ಶೆಗಳಿಗೆ ಕಾರಣ. ಆದರೆ ವಿಮರ್ಶೆಗೊಳಪಟ್ಟವರು ಹಾಗೆ ಅಂದುಕೊಂಡಿಲ್ಲ. ಹಾಗಾಗಿಯೆ, ಚುನಾವಣೆಯ ಸಂದರ್ಭದಲ್ಲಿ ನನ್ನ ಹೆಸರು ಪ್ರಸ್ತಾಪವಾಗಬೇಕಿದ್ದ ಅನೇಕ ಕಡೆ ಅದು ಪ್ರಸ್ತಾಪವಾಗಿಲ್ಲ, ಮತ್ತು ಆದರೂ ಅದು ನಗಣ್ಯ ರೀತಿಯಲ್ಲಿ ಇರುತ್ತಿತ್ತು. ಯಾಕೆ ಯಾವ ಮಾಧ್ಯಮದಲ್ಲೂ (ಒಂದೆರಡು ಕಡೆ ಬಿಟ್ಟು) ನಿಮ್ಮ ಪ್ರಸ್ತಾಪವಿಲ್ಲ ಎಂಬ ಸ್ನೇಹಿತರ ಪ್ರಶ್ನೆಗಳನ್ನು ಕೇಳಿಕೇಳಿ ನನಗೆ ಸಾಕಾಗಿ ಹೋಗಿತ್ತು.

ಇದರಿಂದ ದೊಡ್ದ ಹೊಡೆತ ಬಿದ್ದದ್ದು ನಾನು ಪ್ರತಿಪಾದಿಸಬೇಕೆಂದುಕೊಂಡಿದ್ದ ವಿಚಾರಗಳಿಗೆ.

ಈಗ ನಾನು ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳಿಗೆ ತೊಡಗಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ಒಂದು ಹೊರೆ ಅನಗತ್ಯ ಮತ್ತು ಅನಾನುಕೂಲಕರ. ವರ್ತಮಾನ.ಕಾಮ್‌ನಿಂದ ಹಣಕಾಸಿನ ನಷ್ಟವಿದೆಯೇ ಹೊರತು ನಮಗ್ಯಾರಿಗೂ ಲಾಭವಿಲ್ಲ. ಬದ್ದತೆಯ ಮತ್ತು ಸಾಮಾಜಿಕ ಜವಾಬ್ದಾರಿಯ ಕಾರಣಕ್ಕೆ ಇದನ್ನು ನಿಭಾಯಿಸುತ್ತಿದ್ದೇವೆಯೇ ಹೊರತು ಇಲ್ಲಿ ಹಣ ಮಾಡುವ ಸಾಧ್ಯತೆಗಳೇ ಇಲ್ಲ. ಹೀಗಿರುವಾಗ, ಮಾಧ್ಯಮಕ್ಕೆ ಸಂಬಂಧಿಸಿದ ನಮ್ಮ ವಿಮರ್ಶೆಗಳು ಇಲ್ಲಿಯವರೆಗೆ ಬಹುಪಾಲು ಸಮಯದಲ್ಲಿ ವರ್ತಮಾನ.ಕಾಮ್‌‌ನ ಬೆಳವಣಿಗೆಗೆ ವ್ಯತಿರಿಕ್ತವಾಗಿ ಪರಿಣಮಿಸಿದೆಯೇ ಹೊರತು ಪರವಾಗಿ ಅಲ್ಲ. ಇಲ್ಲಿ ಲೇಖನ ಬರೆದರೆ ನಮ್ಮ ಲೇಖನಗಳು ಬೇರೆಡೆ ಪ್ರಕಟವಾಗುವುದಿಲ್ಲ ಮತ್ತು ಪ್ರಕಟಣೆಗೆ ಅವಕಾಶಗಳು ಸಿಗುವುದಿಲ್ಲ ಎನ್ನುವ ತನಕ ಯೋಚಿಸಿರುವ ಅನೇಕ ಮಿತ್ರರು ನಮಗೆ ಬರೆಯಲು ಹೋಗಲೇ ಇಲ್ಲ, ಮತ್ತು ಒಂದೆರಡು ಸಲ ಬರೆದವರು ಬರೆಯುವುದನ್ನೇ ನಿಲ್ಲಿಸಿದ ಉದಾಹರಣೆಗಳಿವೆ.

ಈ ಚುನಾವಣೆ ಆ ನಿಟ್ಟಿನಲ್ಲಿ ನನಗೆ ಪಾಠ ಕಲಿಸಿದೆ. ನಾವು ಒಂದು ಸಶಕ್ತ ಮಾಧ್ಯಮವಾಗದ ಹೊರತು ಅಂತಹ “ಧೈರ್ಯ” ಅನಗತ್ಯ. ಸಮಾಜ ಮತ್ತು ವರ್ತಮಾನ ತನಗೆ ಅಗತ್ಯವಾದದ್ದನ್ನು ಉಳಿಸಿಕೊಳ್ಳುತ್ತದೆ ಮತ್ತು ಬೇಡವಾದದ್ದನ್ನು ಬಿಸಾಕುತ್ತದೆ. ನಾವು ನಮ್ಮ ಗುರಿಯನ್ನು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗಳಿಗೆ ಇಟ್ಟಿರುವ ಸಂದರ್ಭದಲ್ಲಿ ಮಾಧ್ಯಮಗಳಿಂದ “ಬಹಿಷ್ಕೃತ”ರಾಗುವುದು counter-productive. ಬರೆದರೆ ಮಾಧ್ಯಮಗಳ ಸಕಾರಾತ್ಮಕ ವಿಷಯಗಳ ಬಗ್ಗೆ ಬರೆಯುತ್ತೇವೆಯೇ ಹೊರತು ಅವರ ನಕಾರಾತ್ಮಕ ವಿಷಯಗಳನ್ನು ಎತ್ತಿ ತೋರಿಸಲು ಹೋಗುವುದಿಲ್ಲ. ಸಮುದಾಯಕ್ಕೆ ಆ ರಂಗದ ವಿಮರ್ಶೆ ಅಗತ್ಯವಿದೆ ಎಂದಾದಾಗ ಅದಕ್ಕೆ ಅನೇಕ ವೇದಿಕೆಗಳಿವೆ ಮತ್ತು ದಾರಿಗಳಿವೆ.

ಈ ವಾರ ಬಹುಶಃ ವರ್ತಮಾನ ಬಳಗದ ಹಲವು ಸ್ನೇಹಿತರನ್ನು ಮುಖತಃ ಭೇಟಿಯಾಗಲಿದ್ದೇನೆ. ಮತ್ತೆ ಎಂದಿನಂತೆ ನಿಯತಕಾಲಿಕವಾಗಿ ಲೇಖನಗಳನ್ನು ಪ್ರಕಟಿಸಲು ಮಾಡಬೇಕಾದ ಕೆಲಸಗಳ ಕಡೆ ಗಮನ ಕೊಡಲಿದ್ದೇವೆ. ವರ್ತಮಾನ.ಕಾಮ್‌ನ ಪ್ರಸ್ತುತತೆ ಬಗ್ಗೆ ನಮಗ್ಯಾರಿಗೂ ಸಂದೇಹಗಳಿಲ್ಲ. ಆದರೆ ಎಲ್ಲಿ ಬದಲಾವಣೆಗಳಾಗಬೇಕು ಎನ್ನುವುದರ ಬಗ್ಗೆ ಬದಲಾದ ಸಂದರ್ಭದಲ್ಲಿ ಸ್ಪಷ್ಟವಾಗಬೇಕಿದೆ.

ನಮಸ್ಕಾರ,
ರವಿ ಕೃಷ್ಣಾರೆಡ್ಡಿ