Daily Archives: May 12, 2013

ಸಿದ್ಧರಾಮಯ್ಯ ಮತ್ತು ಜನರ ನಿರೀಕ್ಷೆ

-ಚಿದಂಬರ ಬೈಕಂಪಾಡಿ

ಸಹಜವಾಗಿಯೇ ನಾಡಿನ ಜನರ ಕುತೂಹಲ ನಿಯೋಜಿತ ಮುಖ್ಯಮಂತ್ರಿ ಸಿದ್ಧರಾಮಯ ಅವರತ್ತ ನೆಟ್ಟಿದೆ, ಇದೇ ಅವರ ವಿಶೇಷತೆ. ಭ್ರಷ್ಟಾಚಾರ, ಹಗರಣಗಳು, ಹಳಿತಪ್ಪಿದ ಅರ್ಥವ್ಯವಸ್ಥೆ, ಹಿಡಿತ ಕಳೆದುಕೊಂಡಿರುವ ಆಡಳಿತ, ನಿರುದ್ಯೋಗ, ಗಗನಕ್ಕೇರುತ್ತಿರುವ ಬೆಲೆ, ಕೃಷಿ ದಿನದಿನಂದ ದಿನಕ್ಕೆ ಕಳೆಕಳೆದುಕೊಳ್ಳುತ್ತಿರುವುದು, ಗ್ರಾಮೀಣ ಭಾಗದ ಜನರ ನೀರಿನ ಬವಣೆ, ವಿದ್ಯುತ್ ಸಮಸ್ಯೆ ಹೀಗೆ ನಾಡಿನ ಜನರನ್ನು ಚಿಂತೆಗೀಡುಮಾಡಿವೆ. ಹಾಗೆಂದು ಸಿದ್ಧರಾಮಯ್ಯ ಮ್ಯಾಜಿಕ್ ಮಾಡಿಬಿಡುತ್ತಾರೆ ಎನ್ನುವ ಅರ್ಥವಲ್ಲ. ಎಲ್ಲವನ್ನು ಹತೋಟಿಗೆ ತರುತ್ತಾರೆ ಎನ್ನುವ ಬಲವಾದ ನಿರೀಕ್ಷೆ, ಆಶಾವಾದ.

ಇಂಥ ನಿರೀಕ್ಷೆ ಇಟ್ಟುಕೊಳ್ಳಲು ಕಾರಣ ಅವರು ಕಳೆದ ನಾಲ್ಕು ದಶಕಗಳಿಂದ ರಾಜಕೀಯ ಜೀವನದಲ್ಲಿ ಇಟ್ಟಿರುವ ಹೆಜ್ಜೆಗಳು ಮತ್ತು ಸ್ವಾಭಿಮಾನ ಉಳಿಸಿಕೊಂಡು ಕೈಶುದ್ಧವಾಗಿಟ್ಟುಕೊಂಡು ಅಧಿಕಾರದ ಚುಕ್ಕಾಣಿ ಹಿಡಿಯುತ್ತಿರುವುದು. ಸಿದ್ಧರಾಮಯ್ಯ ಅವರಂಥ ವ್ಯಕ್ತಿಗೆ ಇಂಥ ಅವಕಾಶ ಒಂದು ಸವಾಲು. ಹಿಂದುಳಿದವರ ಮತ್ತು ಬಹುಸಂಖ್ಯಾತರ ಬದುಕಿನಲ್ಲಿ ಈಗಲೂ ದೇವರಾಜ ಅರಸು ನೆನಪಿನಲ್ಲಿ ಉಳಿದಿರುವುದಕ್ಕೆ ಕಾರಣಗಳು ಅನೇಕ. ಆಗಿನ ಕಾಲಘಟ್ಟವನ್ನು ಅವಲೋಕಿಸಿದರೆ ಈಗಿನ ಪರಿಸ್ಥಿತಿ ಮತ್ತು ರಾಜಕಾರಣದ ಮುಂದಿರುವ ಸವಾಲುಗಳು ತೀರಾ ಭಿನ್ನ. ಅರಸು ಅವರಿಗೆ ಈಗಿನ ಸವಾಲುಗಳಿರಲಿಲ್ಲ ಆದರೆ ರಾಜಕೀಯ ಒತ್ತಡಗಳಿದ್ದವು. ಅಸ್ಪ್ರಷ್ಯತೆ ಹಾಗೂ ಬಡತನ ತಾಂಡವವಾಡುತ್ತಿದ್ದವು. ರೈತ, ರೈತನ ಮಕ್ಕಳು ಧಣಿಯ ಮನೆಯಲ್ಲಿ ಜೀತ ಮಾಡುತ್ತಿದ್ದರು. ತಮ್ಮ ಬೆವರು ಸುರಿಸಿ ಭೂಮಾಲೀಕನ ಭೂಮಿಯನ್ನು ಉತ್ತು, ಬಿತ್ತಿದರೂ ತಾನು ಮಾತ್ರ ಕೃಷಿ ಕಾರ್ಮಿಕನಾಗಿದ್ದ. ಅಂಥವರ ಬದುಕಿಗೆ ಬೆಳಕು ನೀಡಿದವರು ಅರಸು. ಆಗ ಬಹುಷ ಈಗಿನ ಸಮಸ್ಯೆಗಳಿರುತ್ತಿದ್ದರೆ ಖಂಡಿತಕ್ಕೂ ಅರಸು ಅವುಗಳಿಗೆ ಪರಿಹಾರ ಸೂಚಿಸುವಷ್ಟು ಸಮರ್ಥರಿದ್ದರು. ಅಂಥ ಸಾಮರ್ಥ್ಯವನ್ನು ಸಿದ್ಧರಾಮಯ್ಯ ಅವರಲ್ಲಿ ಜನ ಹುಡುಕುವುದು ನಿಶ್ಚಿತಕ್ಕೂ ಅಪರಾಧವೆನಿಸುವುದಿಲ್ಲ. ಯಾಕೆಂದರೆ ಸಿದ್ಧರಾಮಯ್ಯ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುತ್ತಲೇ ರಾಜಕೀಯದಲ್ಲಿ ಬೆಳೆದವರು.

ಸಿದ್ಧರಾಮಯ್ಯ ಅವರಿಗಿರುವ ಕಾಳಜಿಯ ನೆಲೆಗಳನ್ನು ಗಮನಿಸುವುದಾದರೆ ಯಾವುದೇ ಬಲಿಷ್ಠ ರಾಜಕೀಯ ಹಿನ್ನೆಲೆಯಿಂದ ಬರದಿದ್ದ ಕಾರಣವೇ Siddaramaiahಅವರು ಈಗಲೂ ಜನರ ಜೊತೆ ಹೆಜ್ಜೆ ಹಾಕುತ್ತಿರುವುದು ಅನ್ನಿಸದಿರದು. ಒಂದು ವೇಳೆ ಅವರು ಬಲಿಷ್ಠ ರಾಜಕೀಯ ಹಿನ್ನೆಲೆ, ಬಲಾಢ್ಯ ಆರ್ಥಿಕ ಶಕ್ತಿಯ ಮೂಲದಿಂದ ಬಂದಿದ್ದರೆ ಅವರಿಂದ ಜನ ಓರ್ವ ಹೈಪ್ರೊಫೈಲ್ ರಾಜಕೀಯ ನೇತಾರರನ್ನು ಮಾತ್ರ ಕಾಣಲು ಸಾಧ್ಯವಾಗುತ್ತಿತ್ತು. ಆದರೆ ಅವರು ಹಳ್ಳಿಯಿಂದ ಪಟ್ಟಣಕ್ಕೆ ಬಂದವರು, ಹಳ್ಳಿ ಹೈಕಳ ಜೊತೆ ಬೆರೆತು ಬದುಕನ್ನು ಅರಳಿಸಿಕೊಂಡವರು, ಆದ್ದರಿಂದಲೇ ಅವರ ನಡೆ, ನುಡಿ, ಚಿಂತನೆಗಳು ಇನ್ನೂ ಹಳ್ಳಿಯ ಸೊಗಡಿನಿಂದ ಬೆರ್ಪಟ್ಟಿಲ್ಲ, ಬೇರ್ಪಡುವುದೂ ಬೇಡ. ಹಳ್ಳಿ ಮತ್ತು ಸಿದ್ಧರಾಮಯ್ಯ ಅವರ ನಡುವಿನ ಸಂಬಂಧ ತಾಯಿ ಮಗುವಿನ ಕರುಳು ಬಳ್ಳಿಯ ಸಂಬಂಧವಿದ್ದಂತೆ.

ಸಿದ್ಧರಾಮಯ್ಯ ಒಂದು ವೇಳೆ ರಾಜಕೀಯಕ್ಕೆ ಬರದೇ ಇರುತ್ತಿದ್ದರೆ ಓರ್ವ ನ್ಯಾಯವಾದಿಯಾಗಿ ಅಪಾರ ಸಂಪಾದನೆ ಮಾಡಿ ನಾಡಿನ ಜನರ ಕಣ್ಣಿಗೆ ಕಾಣಿಸಿಕೊಳ್ಳದ ಕೋಟ್ಯಾಂತರ ಮಂದಿಯಲ್ಲಿ ಒಬ್ಬರಾಗುತ್ತಿದ್ದರು. ಅವರು ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ಕಣ್ಣಿಗೆ ಬಿದ್ದು ಹೋರಾಟಗಳಲ್ಲಿ ತೊಡಗಿಸಿಕೊಂಡು ಜನರು ಬಯಸುವ ನಾಯಕನಾದರು. ಚುನಾವಣೆಯಲ್ಲಿ ಸ್ಪರ್ಧಿಸಲು ಠೇವಣಿ ಕಟ್ಟಲು ಹಣವಿಲ್ಲದ ಸಿದ್ಧರಾಮಯ್ಯ ಅವರನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿರುವವರು ಜನರು ಎನ್ನುವುದು ಸುಲಭ, ಆದರೆ ಅದರೊಂದಿಗೆ ಅವರು ಪಾಲಿಸಿಕೊಂಡು ಬಂದ ಸಿದ್ಧಾಂತಗಳ ಪಾಲೂ ಇದೆ ಎನ್ನುವುದನ್ನು ನಿರಾಕರಿಸುವಂತಿಲ್ಲ.

ಸಿದ್ಧರಾಮಯ್ಯ ಅವರ ರಾಜಕೀಯ ನಡೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಎಲ್ಲವನ್ನೂ ಸುಲಭವಾಗಿ ಮತ್ತು ಭಾವನಾತ್ಮಕವಾಗಿ ಅಪ್ಪಿಕೊಳ್ಳುವವರೂ ಅಲ್ಲ, ಪ್ರತಿಷ್ಠೆಗಾಗಿ ಎಲ್ಲವನ್ನೂ ನಿರಾಕರಿಸುವಂಥ ಮನಸ್ಥಿತಿಯವರೂ ಅಲ್ಲ. ಅಪ್ಪಿಕೊಳ್ಳುವ ಮತ್ತು ಸಕಾರಣ ಸಹಿತ ನಿರಾಕರಿಸುವ ಎರಡೂ ಗುಣಗಳು ಅವರಲ್ಲಿವೆ. ಅಧಿಕಾರಕ್ಕಾಗಿ ತಮ್ಮ ನಿಲುವುಗಳನ್ನು ಒತ್ತಯಿಡುವಂಥ ರಾಜಕೀಯ ಸ್ವಾರ್ಥಿಯಲ್ಲ ಎನ್ನುವುದನ್ನು ಬಹಳ ಮುಖ್ಯವಾಗಿ ಗಮನಿಸಬೇಕು.

ರಾಜಕೀಯವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮೇಲಕ್ಕೇರಲು ಪಟ್ಟಶ್ರಮ, ಅನುಭವಿಸಿದ ಯಾತನೆಯನ್ನು ಸಿದ್ಧರಾಮಯ್ಯ ಅವರೂ ಅನುಭವಿಸಿದ್ದಾರೆ. ಒಂದು ಕಾಲಘಟ್ಟದಲ್ಲಿ ಅತ್ಯಂತ ನಿಷ್ಠುರವಾದಿಯಾದ ದೇವೇಗೌಡರು ರಾಮಕೃಷ್ಣ ಹೆಗಡೆ ಅವರ ರಾಜಕೀಯ ಚಾಣಕ್ಷತೆಯಿಂದ ಭಾರೀ ಯಾತನೆ ಅನುಭವಿಸಿದರೂ ಮತ್ತೆ ಅವರನ್ನು ಮೆಟ್ಟಿ ನಿಲ್ಲಲು ರಾಜಿಮಾಡಿಕೊಂಡು ಹೆಗಡೆ ಕೈಹಿಡಿದರು. ಆನಂತರ ತಮ್ಮ ತಂತ್ರಗಾರಿಕೆಯಿಂದ ಹೆಗಡೆಯವರನ್ನು ರಾಜಕೀಯವಾಗಿ ಮಣಿಸಿ ಮೂಲೆಗುಂಪುಮಾಡಿದರು. ಹಾಗೆಯೇ ಸಿದ್ಧರಾಮಯ್ಯ ಅವರೂ ಕೂಡಾ ದೇವೇಗೌಡರಿಂದ ರಾಜಕೀಯವಾಗಿ ಹಿಂಸೆ ಅನುಭವಿಸಿದ್ದಾರೆ, ಅವಕಾಶ ಕಳೆದುಕೊಂಡಿದ್ದಾರೆ, ಆದರೆ ದೇವೇಗೌಡರಂತೆ ತಂತ್ರಗಾರಿಕೆ ಮಾಡಲು ಅವಕಾಶವಿದ್ದರೂ ಮಾಡದೆ ಜನತಾ ಮನೆಯಿಂದಲೇ ಹೊರನಡೆದರು. ಸಿದ್ಧರಾಮಯ್ಯ ಅವರು ಈಗಿನ ಈ ಸ್ಥಾನಕ್ಕೇರಲು ಪ್ರೊ.ನಂಜುಂಡಸ್ವಾಮಿ, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಅವರ ಕೊಡುಗೆಯಿದೆ, ಅವರು ಕೊಟ್ಟ ಅವಕಾಶಗಳನ್ನು ನಿರಾಕರಿಸುವಂತಿಲ್ಲ. ಹಾಗೆಯೇ ದೇವೇಗೌಡರ ಜೊತೆ ಹೆಜ್ಜೆ ಹಾಕಿದ್ದರಿಂದಲೂ ಸಿದ್ಧರಾಮಯ್ಯ ಅವರಿಗೆ ಸಾಕಷ್ಟು ಅನುಭವ ಸಿಕ್ಕಿದೆ.

ಜನತಾ ದಳದಿಂದ ಹೊರನಡೆಯುವುದು ಖಚಿತವಾಗಿದ್ದರೂ ಸಿದ್ಧರಾಮಯ್ಯ ಕಾಂಗ್ರೆಸ್ ಸೇರಬೇಕೆಂದು ಜನರ ಒತ್ತಡವಿತ್ತೇ ಹೊರತು ಸಿದ್ಧರಾಮಯ್ಯ ಅವರಿಗೆ ವೈಯಕ್ತಿಕವಾಗಿ ಒಲವಿರಲಿಲ್ಲ. ಅದಕ್ಕೆ ಕಾರಣ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಸಂಸ್ಕೃತಿ. ಇಂದಿರಾ ಗಾಂಧಿ, ರಾಜೀವ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ನಡೆಗಳನ್ನು, ಪಕ್ಷದ ಒಳಗಿನ ಆಂತರಿಕ ಸ್ವಾತಂತ್ರ್ಯಗಳ ಸ್ಪಷ್ಟ ಅರಿವುದು ಸಿದ್ಧರಾಮಯ್ಯ ಅವರಿಗಿತ್ತು. ಆದರೆ ಸಿದ್ಧರಾಮಯ್ಯ ಅವರ ನಾಯಕತ್ವ, ಅವರ ಬದ್ಧತೆ, ಜನರಿಗಿರುವ ಸಿದ್ಧರಾಮಯ್ಯ ಅವರ ಮೇಲಿನ ಒಲವನ್ನು ಕಾಂಗ್ರೆಸ್ ನಾಯಕರು ಗುರುತಿಸಿದ್ದರು ಮತ್ತು ಸೋನಿಯಾ ಗಾಂಧಿ ಅವರೂ ಮನವರಿಕೆ ಮಾಡಿಕೊಂಡಿದ್ದರು.

ಒಬ್ಬ ಹಿಂದುಳಿದ ನಾಯಕ ರಾಜಕೀಯದಿಂದ ದೂರವಾಗುತ್ತಾನೆ, ತುಳಿತಕ್ಕೊಳಗಾಗಿ ನೇಪಥ್ಯಕ್ಕೆ ಸರಿಯುತ್ತಿದ್ದಾನೆ ಎನ್ನುವ ನೋವು ಅನುಭವಿಸಿದ ಎಚ್.ವಿಶ್ವನಾಥ್ ಸಿದ್ಧರಾಮಯ್ಯ ಅವರನ್ನು ಕಾಂಗ್ರೆಸ್ ಮನೆಗೆ ಕರೆತರಲು ಮಾಡಿದ ದೊಡ್ಡ ಮನಸ್ಸನ್ನು ಜನರು ಮೆಚ್ಚಲೇ ಬೇಕು. ತಮ್ಮನ್ನು ಹಿಂದಿಕ್ಕಿ ಬೆಳೆಯುವ ಸಾಮರ್ಥ್ಯ ಸಿದ್ಧರಾಮಯ್ಯ ಅವರಿಗಿದೆ ಎನ್ನುವ ಸ್ಪಷ್ಟ ಕಲ್ಪನೆಯಿದ್ದರೂ ವಿಶ್ವನಾಥ್ ತಳೆದ ನಿಲುವು ಇಂದು ಈ ನಾಡಿಗೆ ಓರ್ವ ಸಮರ್ಥ ನಾಯಕನ ಕೈಗೆ ಅಧಿಕಾರ ಸಿಗುವಂತಾಗಿದೆ.

ಸಿದ್ಧರಾಮಯ್ಯ ಅವರು ಗುಟ್ಟಾಗಿ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಸೇರಿಲ್ಲ. ಬಹುಷ ರಾಜಕೀಯ ಇತಿಹಾಸದಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಸಭೆ ಮೂಲಕ ಕಾಂಗ್ರೆಸ್ ಸೇರಿದವರಲ್ಲಿ siddaramaiah_dharam_khargeಸಿದ್ಧರಾಮಯ್ಯ ಅವರೂ ವಿರಳರಲ್ಲಿ ವಿರಳರು. ಇದಕ್ಕೂ ಕಾರಣವಿದೆ. ಕಾಂಗ್ರೆಸ್ ಪಕ್ಷದಲ್ಲಿ ಇಂಥ ಸ್ವಾಗತ ತೀರಾ ಅಪರೂಪ ಎನ್ನುವುದು ಆ ಪಕ್ಷದ ಇತಿಹಾಸ ನೋಡಿದರೆ ಗೊತ್ತಾಗುತ್ತದೆ. ಚಿರಂಜೀವಿ ಕಾಂಗ್ರೆಸ್ ಸೇರಿದ ಸನ್ನಿವೇಶ ಮತ್ತು ಸಿದ್ಧರಾಮಯ್ಯ ಕಾಂಗ್ರೆಸ್ ಸೇರಿದ ಕ್ಷಣವನ್ನು ಕಣ್ಣಮುಂದಿಟ್ಟುನೋಡಿ. ಚಿರುಗೂ ಅಪಾರವಾದ ಬೆಂಬಲಿಗರಿದ್ದಾರೆ ಓರ್ವ ನಟನಾಗಿ. ಆದರೆ ಅವರು ಅತ್ಯಂತ ಸರಳವಾಗಿ ಕಾಂಗ್ರೆಸ್ ಸೇರಿದರು. ಬೆಂಗಳೂರಲ್ಲಿ ಐತಿಹಾಸಿಕ ಸಮಾವೇಶದಲ್ಲಿ ಸಿದ್ಧರಾಮಯ್ಯ ಅವರನ್ನು ಸ್ವತ: ಸೋನಿಯಾ ಗಾಂಧಿ ಪಕ್ಷಕ್ಕೆ ಬರಮಾಡಿಕೊಂಡರು. ಅಂದು ಸೋನಿಯಾ ಗಾಂಧಿ ಮಾಡಿದ್ದ ಭಾಷಣದಲ್ಲಿ ಸಿದ್ಧರಾಮಯ್ಯ ಅವರು ದೊಡ್ಡ ಶಕ್ತಿ, ಅವರ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಬೇಕಿತ್ತು, ಅವರಿಂದ ಕಾಂಗ್ರೆಸ್ ಬಲಗೊಳ್ಳುತ್ತದೆ ಎನ್ನುವ ವಿಶ್ವಾಸವಿದೆ ಎಂದಿದ್ದರು. ಅವರ ನಿರೀಕ್ಷೆ ಖಂಡಿತಕ್ಕೂ ಸುಳ್ಳಾಗಲಿಲ್ಲ.

ಹೀಗೆ ಸಿದ್ಧರಾಮಯ್ಯ ಅವರ ರಾಜಕೀಯ ನಡೆಗಳು, ಅವರು ಉಪಮುಖ್ಯಮಂತ್ರಿಯಾಗಿ, ಹಣಕಾಸು ಸಚಿವರಾಗಿ, ಸಾರಿಗೆ ಸಚಿವರಾಗಿ, ಪಶುಸಂಗೋಪನಾ ಸಚಿವರಾಗಿ ಕಾರ್ಯನಿವಹಿಸಿರುವುದು, ಇತ್ತೀಚಿನವರೆಗೂ ಪ್ರತಿಪಕ್ಷದ ನಾಯಕರಾಗಿ ಅಧಿಕಾರ ನಿಭಾಯಿಸಿದ ವೈಖರಿ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತೆ ಮಾಡಿವೆ.

ಮುಖ್ಯಮಂತ್ರಿ ಹುದ್ದೆ ಸುಖದ ಸುಪ್ಪತ್ತಿಗೆಯಲ್ಲ, ಮುಳ್ಳಿನ ಹಾಸಿಗೆ ಎಂದು ಸಿದ್ಧರಾಮಯ್ಯ ಹೇಳಿರುವುದು ಹಾಗಾದರೆ ಇವರಿಗೆ ಯಾಕೆ ಬೇಕಿತ್ತು ಈ ಹುದ್ದೆ ಎಂದು ಕೇಳಲು ಅವಕಾಶವಿದೆ. ನೋವಿನಲ್ಲೂ ಸುಖವಿದೆ, ಆದರೆ ಆ ಸುಖವನ್ನು ಅನುಭವಿಸಲು ಬಯಸುವವರು ತೀರಾ ಕಡಿಮೆ. ನೋವಿರದ ಸುಖವೇ ಬೇಕು ಎನ್ನುವವರೇ ಹೆಚ್ಚು. ಈ ಜಗತ್ತಿನಲ್ಲಿ ಹೆರಿಗೆಯ ನೋವಿನಷ್ಟು ಯಾತನೆ ಬೇರೆ ಇರಲಾರದು, ಆದರೆ ಅಂಥ ನೋವನ್ನು ಸಹಿಸಿಕೊಂಡು ಮಗುವನ್ನು ಹೆರುವ ತಾಯಿ ತಾನು ನೋವು ಅನುಭವಿಸಿ ಹಡೆದ ಮಗುವನ್ನು ನೋಡಿ ಅನುಭವಿಸಿದ ನೋವನ್ನು ಮರೆತುಬಿಡುತ್ತಾಳೆ. ಒಂದು ದಿನವೂ ನಿನ್ನಿಂದಾಗಿ ನಾನು ನೋವು ಅನುಭವಿಸಿದೆ ಎನ್ನುವ ಆರೋಪ ಮಾಡುವುದಿಲ್ಲ. ಅಂಥ ಪರಿಕಲ್ಪನೆಯನ್ನು ಸಿದ್ಧರಾಮಯ್ಯ ಅವರ ಆಡಳಿತದಿಂದ ನಿರೀಕ್ಷೆ ಮಾಡಬಹುದು ಎನ್ನುವುದೇ ನಾಡಿನ ಜನರದ್ದಾಗಿದ್ದರೆ ಅಚ್ಚರಿಪಡಬೇಕಾಗಿಲ್ಲ.

ಸಿದ್ಧರಾಮಯ್ಯ ಅವರ ಹೆಗ್ಗುರುತು ಅವರ ನಂಬಿಕೆ ಮತ್ತು ಅವರು ಇಲ್ಲಿಯವರೆಗೆ ಪಾಲಿಸಿಕೊಂಡು ಬಂದಿರುವ ಸಿದ್ಧಾಂತಗಳು ನಿಜ. ಸಿದ್ಧರಾಮಯ್ಯ ಅವರಿಗಿರುವ ಬಹುಮುಖ್ಯ ದೌರ್ಬಲ್ಯ ಮುಂಗೋಪ ಮತ್ತು ನಿಷ್ಠುರ ಮಾತು. ಇವುಗಳಿಗೆ ಸ್ವಯಂ ನಿಯಂತ್ರಣ ಹಾಕಿಕೊಂಡರೆ ಅವರು ಅಂದುಕೊಂಡದ್ದನ್ನು ಸಾಧಿಸಲು, ಜನರ ನಿರೀಕ್ಷೆಗಳನ್ನು ನಿಜಗೊಳಿಸಲು ಸುಲಭವಾಗುತ್ತದೆ.