Daily Archives: May 13, 2013

ಕರ್ನಾಟಕದ ಜನತೆಗೆ ಮತ್ತು ಸಿದ್ಧರಾಮಯ್ಯನವರಿಗೆ ಅಭಿನಂದಿಸುತ್ತ…

– ರವಿ ಕೃಷ್ಣಾರೆಡ್ಡಿ

ಕರ್ನಾಟಕದಲ್ಲಿ ಹೊಸ ಕಾಂಗ್ರೆಸ್ ಸರ್ಕಾರ ಇಂದು ಅಧಿಕಾರ ವಹಿಸಿಕೊಂಡಿದೆ. ಬಿಡಿಬಿಡಿಯಾಗಿ ನೋಡುವುದಕ್ಕಿಂತ ಒಟ್ಟಾರೆಯಾಗಿ ಮತ್ತು ಅಂಕಿಸಂಖ್ಯೆಗಳ ದೃಷ್ಟಿಕೋನದಲ್ಲಿ ನೋಡಿದಾಗ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಸರ್ಕಾರ ನಡೆಸಲು ಚುನಾಯಿಸಿದ್ದಾರೆ. ಹಾಗೆಯೇ ಅದು ಬಹುಮತದ ನಿರ್ಣಯವಾಗಿದೆ. ಈ ನಿಟ್ಟಿನಲ್ಲಿ ನೋಡಿದಾಗ ದ್ವಂದ್ವಗಳಿಲ್ಲದ ನಿರ್ಣಯ ಕೊಟ್ಟ ರಾಜ್ಯದ ಜನತೆಯನ್ನು ನಾವು ಅಭಿನಂದಿಸಲೇಬೇಕು.

ಮತ್ತು, ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. siddaramaiah-cmಕರ್ನಾಟಕ ಕಂಡ ಅನೇಕ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಲು ಹಲವರಿಗಿಂತ ಹೆಚ್ಚು ಅರ್ಹರಿದ್ದರು. ಈ ಹಿನ್ನೆಲೆಯಲ್ಲಿಯೇ ಅವರು ಹಲವು ಸಂದರ್ಭಗಳಲ್ಲಿ ಮುಖ್ಯಮಂತ್ರಿ ಹುದ್ದೆ ತಮ್ಮ ಹಕ್ಕೆಂಬಂತೆ ಪ್ರತಿಪಾದಿಸುತ್ತ ಬಂದಿದ್ದರು ಸಹ. ಈಗ ಅನೇಕ ರಾಜಕೀಯ ಏಳುಬೀಳಾಟಗಳ, ತಂತ್ರಗಾರಿಕೆಯ, ಜನಾಭಿಪ್ರಾಯದ ನಂತರ ಅವರು ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೂ ಅಭಿನಂದನೆಗಳು.

ಕಳೆದೆರಡು ದಿನಗಳಲ್ಲಿ ನಡೆದ ಅಪ್ಯಾಯಮಾನವಾದಂತಹ ಘಟನಾವಳಿಗಳೆಂದರೆ, ಶಾಸಕಾಂಗ ಪಕ್ಷದ ನಾಯಕರಾಗಿ ಮತ್ತು ನಿಯೋಜಿತ ಮುಖ್ಯಮಂತ್ರಿಯಾಗಿ ಘೋಷಿತವಾದ ಮೇಲೆ ಸಿದ್ಧರಾಮಯ್ಯನವರು ನಡೆದುಕೊಂಡ ರೀತಿ. ಕಳೆದ ಏಳೆಂಟು ವರ್ಷಗಳಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳಾದವರೆಲ್ಲ, ಆ ಬಗ್ಗೆ ಘೋಷಣೆ ಆಗುತ್ತಿದ್ದಂತೆ ಮಾಡುತ್ತಿದ್ದ ಮೊದಲ ಕೆಲಸ ಮಠಗಳಿಗೆ ಹೋಗಿ ಮಠಾಧೀಶರ ಕಾಲುಗಳಿಗೆ ಎರಗುತ್ತಿದ್ದದ್ದು, ಮತ್ತು ನಂತರ ದೇವಸ್ಥಾನಗಳಿಗೆ, ಅದರಲ್ಲೂ ರಾಜ್ಯದ ಹೊರಗಿನ (ಜಮ್ಮು, ಆಂಧ್ರ, ಕೇರಳ) ದೇವಳಗಳಿಗೆ ಹೋಗಿ ವಿಶೇಷ ಪೂಜೆಗಳನ್ನು ಮಾಡಿ ಬರುತ್ತಿದ್ದದ್ದು. ಅಂತಹ ಒಂದು ದಾಸ್ಯದ ಮತ್ತು ಅವೈಚಾರಿಕ ಮನೋಭಾವನ್ನು ಬದಿಗೊತ್ತಿ, ನಾಡಿನಲ್ಲಿ ಈಗಲೂ ಅಷ್ಟಿಷ್ಟು ಸಾಕ್ಷಿಪ್ರಜ್ಞೆಯಾಗಿ ಬಿಂಬಿತವಾಗಿರುವ ಹೋರಾಟಗಾರರ, ಚಿಂತಕರ, ಕವಿಗಳ ಮನೆಗೆ ಹೋಗಿ ಅವರನ್ನು ಭೇಟಿಯಾಗಿದ್ದು. ಇದು ಬಹುಶಃ ಕರ್ನಾಟಕದ ಮುಂದಿನ ನಾಯಕರ ನಡವಳಿಕೆಗಳಿಗೆ ಮುನ್ನುಡಿ ಬರೆದಂತಿದೆ. ಸಿದ್ಧರಾಮಯ್ಯವನರ ಈ ನಡೆಗಳು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಆಶಿಸೋಣ. ಒಬ್ಬ ರಾಜಕೀಯ ನಾಯಕ ನಾಡಿನ ಎಲ್ಲಾ ರಂಗಗಳನ್ನು ಪ್ರಭಾವಿಸಬೇಕು, ಮೇಲಕ್ಕೆತ್ತಬೇಕು. ಅಂತಹ ಒಂದು ಸಾಧ್ಯತೆ ಮತ್ತು ಅವಕಾಶ ಸಿದ್ಧರಾಮಯ್ಯನವರಿಗಿದೆ.

ಆದರೆ, ಇದೇ ಸಂದರ್ಭದಲ್ಲಿ ನಾಡಿನ ಭವಿಷ್ಯದ ಬಗ್ಗೆ ಮತ್ತು ಈ ಸಲದ ಸರ್ಕಾರ ತರಲಿರುವ ಗುಣಾತ್ಮಕ ಬದಲಾವಣೆಗಳ ಬಗ್ಗೆ ನಾನು ಆಶಾವಾದಿಯಾಗಿಲ್ಲ. ಸಿದ್ಧರಾಮಯ್ಯನವರ ಜೀವನದ ಮಹತ್ವಾಕಾಂಕ್ಷೆ ಈ ರಾಜ್ಯದ ಮುಖ್ಯಮಂತ್ರಿಯಾಗುವುದಾಗಿತ್ತು. ಅದನ್ನವರು ವೈಯಕ್ತಿಕ ಸಾಮರ್ಥ್ಯ ಮತ್ತು ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಪ್ರತಿಪಾದಿಸುತ್ತ ಬಂದಿದ್ದರು. ಆದರೆ, ಈ ರಾಜ್ಯದ ಮುಖ್ಯಮಂತ್ರಿಯಾಗಿ ಇಂತಿಂತಹ ಬದಲಾವಣೆಗಳನ್ನು ಮತ್ತು ಯೋಜನೆಗಳನ್ನು ಜಾರಿ ಮಾಡುತ್ತೇನೆ ಎಂದಾಗಲಿ, ಈ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಕಲ್ಪನೆಗಳು ಎಂತಹವಿವೆ ಎಂದಾಗಲಿ ಅವರು ಸ್ಪಷ್ಟವಾಗಿ ಜನರ ಮುಂದೆ ಹಂಚಿಕೊಂಡ ಉದಾಹರಣೆಗಳಿಲ್ಲ. ಅವರು ಈ ಹಿಂದೆ ತಮಗೆ ವಹಿಸಿದ್ದ ಖಾತೆಗಳನ್ನು ದಕ್ಷವಾಗಿ ನಿಭಾಯಿಸಿದ ಉದಾಹರಣೆಗಳಿವೆಯೇ ವಿನಃ ಕ್ರಾಂತಿಕಾರಕ ಸಾಧನೆಗಳನ್ನು ಮಾಡಿದ ಉದಾಹರಣೆಗಳಿಲ್ಲ. ಮತ್ತು ಸಿದ್ಧರಾಮಯ್ಯನವರು ಆಲಸಿ ಮತ್ತು ವಿಲಾಸಿ ಎಂಬ ಆರೋಪಗಳಿವೆ. ಹೀಗಿರುವಾಗ ಸಿದ್ಧರಾಮಯ್ಯನವರು ಜೆ.ಎಚ್.ಪಟೇಲರಂತೆ ಒಬ್ಬ well-meaning ಮುಖ್ಯಮಂತ್ರಿಯಾಗುವ ಸಾಧ್ಯತೆಗಳೇ ಹೆಚ್ಚಿವೆ. ಇಂತಹ ಸಂಶಯಗಳನ್ನು ಸುಳ್ಳು ಮಾಡಿ ಸಿದ್ಧರಾಮಯ್ಯನವರು ನಾಡು ಉತ್ತಮ ವಿಚಾರಗಳಿಗೆ ನೆನಪಿಟ್ಟುಕೊಳ್ಳುವಂತಹ ನಾಯಕತ್ವ ನೀಡಲಿ ಎಂದು ಆಶಿಸುತ್ತೇನೆ.

ಇನ್ನು, ಸಿದ್ಧರಾಮಯ್ಯನವರ ಮಂತ್ರಿಮಂಡಲದ ಬಗ್ಗೆ. ಅದು ಮುಖ್ಯಮಂತ್ರಿ ಆಯ್ಕೆಯಾದಷ್ಟು ಸರಳವಾಗಿ ಆಗುತ್ತದೆ ಎಂದು ಹೇಗೆ ಹೇಳುವುದು? Siddaramaiahಹೇಗೋ ಮಂತ್ರಿಮಂಡಲ ರಚನೆಯಾಗುತ್ತದೆ. ಹಿಂದಿನ ಮೂರ್ನಾಲ್ಕು ಸರ್ಕಾರಗಳಿಗೆ ಹೋಲಿಸಿದರೆ ಸರ್ಕಾರಕ್ಕೆ ಗೌರವ ಮತ್ತು ಘನತೆ ತರಬಲ್ಲಂತಹ, ವೈಯಕ್ತಿಕ ಪ್ರಾಮಾಣಿಕತೆ ಮತ್ತು ದಕ್ಷತೆಗೆ ಹೆಸರಾದಂತಹವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ, ಬಹುಶಃ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಆ ಮಂತ್ರಿಮಂಡಲದಲ್ಲಿ ಖಂಡಿತವಾಗಿ ಪರಮಭ್ರಷ್ಟರು, ಗೂಂಡಾ-ಗಣಿ-ಭೂಮಾಫಿಯಾದ ಹಿನ್ನೆಲೆಯಿಂದ ಬಂದವರು, ಕೆಲಸ ಮಾಡಲಾಗದ ಮುದುಕರು, ರಾಜಕೀಯ ಮತ್ತು ಸಾಮಾಜಿಕ ಸಿದ್ಧಾಂತಗಳಿಲ್ಲದ ಯುವಕರು, ಅಸಮರ್ಥರೂ, ಇದ್ದೇ ಇರುತ್ತಾರೆ. ಜೊತೆಗೆ ಮಂತ್ರಿಯಾಗಲಾಗದೆ ಉಳಿದ ಅತೃಪ್ತ ಶಾಸಕರೂ, ಅವರಿಗೊಬ್ಬ ನಾಯಕ, ಅವರ ಬೇಕುಬೇಡಗಳು, ಈ ಪರಂಪರೆ ಖಂಡಿತ ಮುಂದುವರೆಯುತ್ತದೆ. (ಮತ್ತು, ಸಿದ್ದರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ತಕ್ಷಣ ಅವರನ್ನು ಅಭಿನಂದಿಸಲು ಅಟ್ಟವೇರಿದ ಮುಖಗಳನ್ನು ನೀವು ನೋಡಿದ್ದರೆ ಕಳ್ಳರ ಮತ್ತು ಸುಳ್ಳರ ದೊಡ್ದ ಗುಂಪೇ ಸಿದ್ಧರಾಮಯ್ಯನವರನ್ನು ಸುತ್ತುವರೆಯಲಿದ್ದಾರೆ ಎನ್ನುವ ಸಂಶಯ ಬರುವುದು ಸಹಜ.) ಸರ್ಕಾರ ನಡೆಸುವ ಪಕ್ಷ ಬದಲಾಗಿದೆ. ಅನೇಕ ಹೊಸ ಶಾಸಕರು ಬಂದಿದ್ಡಾರೆ. ಆದರೆ, ಇವರೆಲ್ಲ ಬಹುತೇಕ ವಿಷಯಗಳಲ್ಲಿ ಅವರ ಹಿಂದಿನವರಿಗಿಂತ ಭಿನ್ನವಾಗೇನೂ ಇಲ್ಲ. ಹೆಚ್ಚುಕಮ್ಮಿ ಒಂದೇ ರೀತಿಯ ಆಟಗಾರರಿರುವ ತಂಡದಿಂದ ಹೊಸ ರೀತಿಯ ಆಟ ನಿರೀಕ್ಷಿಸುವುದು ಅಸಹಜ.

ಒಂದು ವಿಷಯದಲ್ಲಿ ಸಿದ್ಧರಾಮಯ್ಯನವರ ಮೇಲೆ ಹಿಂದಿನ ಕಾಂಗ್ರೆಸ್ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ಒತ್ತಡ ಕಡಿಮೆ ಇರುತ್ತದೆ. ಅದು ಕೇಂದ್ರದ ಕಾಂಗ್ರೆಸ್ ಘಟಕಕ್ಕೆ ಸಂಪನ್ಮೂಲ (ಹಣ ಎಂದು ಓದಿಕೊಳ್ಳುವುದು) ಒದಗಿಸುವ ವಿಚಾರಕ್ಕೆ. ಕೇಂದ್ರದಲ್ಲಿಯೂ ಕಾಂಗ್ರೆಸ್ ಸರ್ಕಾರ ಇದ್ದು, ದೇಶದ ಹಲವು ಕಡೆಗಳಲ್ಲಿಯೂ ಕಾಂಗ್ರೆಸ್ ಸರ್ಕಾರಗಳು ಇರುವುದರಿಂದ ಎಸ್.ಎಮ್.ಕೃಷ್ಣರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಇದ್ದಷ್ಟು ಒತ್ತಡಗಳು ಸಿದ್ಧರಾಮಯ್ಯನವರಿಗೆ ಇರುವುದಿಲ್ಲ. ಆದರೆ, ಕಾಂಗ್ರೆಸ್ ಕಬಂಧಬಾಹುಗಳಿಗೆ ಮತ್ತು ಆಕ್ಟೋಪಸ್‌ನಷ್ಟು ಅನೇಕ ಹಸ್ತಗಳಿಗೆ ಹೆಸರಾದದ್ದು. ಯಾರು ಯಾರ ಹೆಸರಿನಲ್ಲಿ ಡಿಮಾಂಡ್ ಇಡುತ್ತಾರೆ ಮತ್ತು ವಸೂಲಿ ಮಾಡುತ್ತಾರೆ ಎಂದು ಹೇಳಲಾಗುವುದಿಲ್ಲ. ಹೈಕಮಾಂಡ್ ನೇರವಾಗಿ ಬೇಡಿಕೆ ಇಡದೆ ಅನೇಕ ಮಧ್ಯವರ್ತಿಗಳ ಕೈಯ್ಯಲ್ಲಿ ಈ ಕೆಲಸಗಳನ್ನು ಮಾಡಿಸುವುದರಿಂದಲೇ ಕಾಂಗ್ರೆಸ್‌ ಪಕ್ಷದಲ್ಲಿ ಭ್ರಷ್ಟಾಚಾರ ಸಾಂಸ್ಥಿಕವಾಗಿರುವುದು. ಸಿದ್ಧರಾಮಯ್ಯನವರು ವೈಯಕ್ತಿಕವಾಗಿ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳದೆ ಈ ಕಪ್ಪ-ಕಾಣಿಕೆಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದು ಒಂದು ಗಂಭೀರ ಪ್ರಶ್ನೆ.

ಮತ್ತು, ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆಡಳಿತ ಪಕ್ಷಗಳು ತಮ್ಮ ಆಡಳಿತ ಮಾದರಿ ಮತ್ತು ನ್ಯಾಯ ಮಾರ್ಗಗಳಿಂದ ಇಂತಹ ಚುನಾವಣೆಗಳನ್ನು ಎದುರಿಸುವುದಕ್ಕಿಂತ ವಾಮಮಾರ್ಗಗಳಿಂದ ಇಂತಹ ಚುನಾವಣೆಗಳನ್ನು ಗೆಲ್ಲಲು ಯತ್ನಿಸುವುದು ಚಾರಿತ್ರಿಕವಾಗಿ ಕಂಡುಬರುವ ಅಂಶ. ಇನ್ನಾರು ತಿಂಗಳ ಒಳಗೆ ಬಿಬಿಎಂ‌ಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಎರಡು ನಗರಸಭೆ ಸ್ಥಾನಗಳಿಗೆ ಮತ್ತು ಸಂಸದರು ಶಾಸಕರಾಗಿ ಆಯ್ಕೆಯಾಗಿರುವ ಎರಡು ಸಂಸತ್ ಸ್ಥಾನಗಳಿಗೆ ಉಪಚುನಾವಣೆ ನಡೆಯುತ್ತದೆ. ಉಪಚುನಾವಣೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿಸಬೇಕಾದ ಒತ್ತಡದಲ್ಲಿ ಹೇಗೆ ವರ್ತಿಸುತ್ತದೆ ಎನ್ನುವುದರ ಮೇಲೆ ಈ ಪಕ್ಷದ ಮುಂದಿನ ದಿನಗಳ ನಡೆಯೂ, ಕರ್ನಾಟಕದ ಮುಂದಿನ ದಿನಗಳೂ, ಇರುತ್ತದೆ.

ಇವೆಲ್ಲದಕ್ಕಿಂತ ಮುಖ್ಯವಾಗಿ, ರಾಜ್ಯದಲ್ಲಿ ಈಗಾಗಲೆ ಬರಗಾಲ ಕಾಲಿಟ್ಟು ಎರಡು-ಮೂರು ವರ್ಷ ಕಳೆದಿದೆ. ಇನ್ನೂ ಒಂದೆರಡು ವರ್ಷ ಇದು ಮುಂದುವರೆಯುತ್ತದೆ. droughtಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಲಿದೆ. ಆದರೆ ರೈತರ ಮತ್ತು ಕೃಷಿಕಾರ್ಮಿಕರ ಬಡತನ ಹೆಚ್ಚಾಗಲಿದೆ. ನೀರಿನ ಮತ್ತು ವಿದ್ಯುತ್‌ನ ಸಮಸ್ಯೆಗಳು ಎಲ್ಲಾ ವರ್ಗದ ಜನರನ್ನು ಬಾಧಿಸಲಿದೆ. ದೇಶದ ಆರ್ಥಿಕ ಪ್ರಗತಿ ಕುಂಠಿತವಾಗುತ್ತಿದೆ. ನಿರುದ್ಯೋಗ ಹೆಚ್ಚುತ್ತಿದೆ. ಶಿಕ್ಷಣ ತುಟ್ಟಿಯಾಗುತ್ತಿದೆ. ಜನರ ನಿರೀಕ್ಷೆಗಳು ಹೆಚ್ಚುತ್ತಿವೆ. ರಾಜಕಾರಣಿಗಳಿಂದ ನಾಯಕತ್ವ ಮತ್ತು ಕೆಲಸಗಳನ್ನು ಅಪೇಕ್ಷಿಸುವ ಜನರೂ ಕ್ರಿಯಾಶೀಲರಾಗುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ನಾಯಕತ್ವ ಮತ್ತು ಪರಿಹಾರ ನೀಡಬಲ್ಲ ಸಾಮರ್ಥ್ಯ ಸಿದ್ಧರಾಮಯ್ಯನವರಿಗಿದ್ದರೂ, ನಮ್ಮ ಶಾಸಕರಿಗೆ ಮತ್ತು ಮಂತ್ರಿಗಳಿಗೆ ಇರುತ್ತದೆಯೇ ಎನ್ನುವುದರ ಮೇಲೆ ಈ ಸರ್ಕಾರದ ಭದ್ರತೆ ಅವಲಂಬಿಸಿದೆ.

ಹಾಗೆಯೇ, ಪರ್ಯಾಯ ರಾಜಕಾರಣದ ಹುಡುಕಾಟದಲ್ಲಿರುವವರಿಗೂ ಇದು ಸೂಕ್ಷ್ಮ ಕಾಲ. ಹೆಚ್ಚೇನೂ ಬದಲಾಗದ ರಾಜಕೀಯ-ಸಾಮಾಜಿಕ ಸಂದರ್ಭದಲ್ಲಿ ತಮ್ಮ ನಡೆಯನ್ನು ಮತ್ತು ಹೋರಾಟವನ್ನು ಇನ್ನೂ ಹೆಚ್ಚಿನ ಕ್ರಿಯಾಶೀಲತೆಯಿಂದ ಮುಂದುವರೆಸುವದಷ್ಟೇ ಅವರು ಮಾಡಬೇಕಾದ ಕೆಲಸ. ಆದರೆ, ಹಲವು ಸ್ತರದ ಜನರೊಡನೆ ಮತ್ತು ಸಮಾನ ಮನಸ್ಕ ಗುಂಪುಗಳೊಡನೆ ಕೆಲಸ ಮಾಡುವುದನ್ನು ಮತ್ತು ಸೂಕ್ತ ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದನ್ನು ಅವರು ಆದಷ್ಟು ಬೇಗ ಕಲಿಯಬೇಕಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇನ್ನಾರು ತಿಂಗಳ ಒಳಗೇ ಈ ಸರ್ಕಾರದ ಮೌಲ್ಯಮಾಪನ ಆರಂಭವಾಗುತ್ತದೆ ಮತ್ತು ಅದರ ಭವಿಷ್ಯದ ಸಾಧನೆಗಳು ಬರೆಯಲ್ಪಡುತ್ತವೆ.

ಸುಭದ್ರ ಸರಕಾರದ ನಿರೀಕ್ಷೆಯಲ್ಲಿ. . . .

– ಡಾ. ಅಶೋಕ್. ಕೆ. ಆರ್.

ಮತ್ತೊಂದು ಚುನಾವಣೆ ಮುಗಿದಿದೆ. ಹತ್ತು ವರುಷದ ನಂತರ ಕಾಂಗ್ರೆಸ್ ಸಂಪೂರ್ಣ ವಿಜಯ ಸಾಧಿಸಿದೆ. ಧರ್ಮಸಿಂಗ್ ಸರಕಾರದ ಪತನದ ನಂತರ ಜೆಡಿಎಸ್ ಮತ್ತು ಬಿಜೆಪಿ ಜೊತೆಗೂಡಿ ಸರಕಾರ ರಚಿಸಿದಾಗಿನಿಂದಲೂ ರಾಜ್ಯದಲ್ಲಿ ರಾಜಕೀಯ ಅನಿಶ್ಚಿತತೆ ಕಾಡುತ್ತಿತ್ತು. ಇಪ್ಪತ್ತು ತಿಂಗಳ ಕುಮಾರಸ್ವಾಮಿ ನೇತೃತ್ವದ ಸರಕಾರ, ತದನಂತರ ಕೆಲವೇ ದಿನಗಳ ಯಡಿಯೂರಪ್ಪ ಸರಕಾರ; ವಚನಭಂಗದ ನೆಪದಲ್ಲಿ ಬಹುಮತದ ಸಮೀಪಕ್ಕೆ ಬಂದ ಬಿಜೆಪಿ. ಪಕ್ಷೇತರರ ನೆರವಿನಿಂದ ಬಿಜೆಪಿ ಯಡಿಯೂರಪ್ಪನವರ ಮುಖ್ಯಮಂತ್ರಿತ್ವದ ಅಡಿಯಲ್ಲಿ ಸರಕಾರ ರಚಿಸಿತು. ನಂತರ ನಡೆದಿದ್ದು ಕರ್ನಾಟಕ ಇದುವರೆಗೂ ಕಂಡರಿಯದ ರಾಜಕೀಯ ನೈತಿಕತೆಯ ಅಧಃಪತನ.

ಹಸಿರು ಶಾಲು ಹೊದ್ದು ರೈತರ ಹೆಸರಿನಲ್ಲಿ ಪ್ರಮಾಣ ವಚನವನ್ನೋದಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ತೀರ ಈ ಮಟ್ಟಿಗೆ ಆಡಳಿತ ನಡೆಸುತ್ತದೆಂಬುದನ್ನು ಬಿಜೆಪಿಯ ಕಡುವೈರಿಗಳೂ ಊಹಿಸಿರಲಿಲ್ಲ! ದಶಕಗಳ ಕಾಲ ವಿರೋಧ ಪಕ್ಷದ ನಾಯಕನಾಗಿ ಬೆಳೆದು, ಹತ್ತು ಹಲವು ಆಡಳಿತ ಪಕ್ಷಗಳ ವಿರುದ್ಧದ ಹೋರಾಟಗಳ ಮುಂಚೂಣಿಯಲ್ಲಿದ್ದವರು ಯಡಿಯೂರಪ್ಪ. ಹಿಂದಿ ಭಾಷಿಕ ಪ್ರದೇಶಗಳ ಪಕ್ಷ ಎಂಬ ಹಣೆಪಟ್ಟಿಯನ್ನು ಪಡೆದಿದ್ದ ಬಿಜೆಪಿ ಪಕ್ಷ, ನಗರಗಳಿಗಷ್ಟೇ ಸೀಮಿತವಾದ ಪಕ್ಷ ಎಂಬ ಹಣೆಪಟ್ಟಿ ಪಡೆದಿದ್ದ ಬಿಜೆಪಿ ಪಕ್ಷ ದಕ್ಷಿಣ ಭಾರತದ ಹಿಂದಿಯೇತರ ರಾಜ್ಯವೊಂದರಲ್ಲಿ ನೂರಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದು ಸಾಧನೆಯೇ ಸರಿ. ಈ ಗೆಲುವಿನ ಹಿಂದೆ ಕುಮಾರಸ್ವಾಮಿ ಮತ್ತವರ ಜೆಡಿಎಸ್ ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದೂ ಕಾರಣವಾಗಿತ್ತೆಂಬುದರಲ್ಲಿ ಸಂಶಯವಿಲ್ಲ. ಜೊತೆಗೆ ಸಹವರ್ತಿಗಳ ಕಾಲೆಳೆಯುತ್ತಲೇ ಕಾಲಹರಣ ಮಾಡಿದ ಕಾಂಗ್ರೆಸ್ ಧುರೀಣರ ಪಾಲೂ ಸಾಕಷ್ಟಿತ್ತು. ಗೆಲುವಿಗೆ ಕಾರಣಗಳೇನೆ ಇದ್ದರೂ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರದ ನೊಗವಿಡಿದ ಬಿಜೆಪಿ ಕನಿಷ್ಟ ದಕ್ಷಿಣದ ಇತರ ರಾಜ್ಯಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲಾದರೂ ಅತ್ಯುತ್ತಮವಲ್ಲದಿದ್ದರೂ ಕೊನೇ ಪಕ್ಷ ಸಾಧಾರಣ ಮಟ್ಟದ ಆಡಳಿತವನ್ನಾದರೂ ನೀಡಬಹುದು ಎಂಬ ನಿರೀಕ್ಷೆಯಿತ್ತು.

ಆದರೆ ಕಳೆದ ಐದು ವರ್ಷಗಳಲ್ಲಿ ನಡೆದಿದ್ದು ನೈತಿಕತೆಯ ಮೇಲಿನ ರಾಜಕೀಯ ಅತ್ಯಾಚಾರ. ಏಕಪಕ್ಷವೇ ಅಧಿಕಾರದಲ್ಲಿದ್ದಾಗ್ಯೂ ಮೂರು ಬಾರಿ ಮುಖ್ಯಮಂತ್ರಿಯ ಬದಲಾವಣೆ. yeddyurappa-SirigereTaralabaluಕರ್ನಾಟಕದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದ ವ್ಯಕ್ತಿಯೊಬ್ಬರ ಜೈಲುವಾಸ – ಭ್ರಷ್ಟಾಚಾರದ ಕಾರಣದಿಂದ. ತತ್ವ ಸಿದ್ಧಾಂತಗಳು ಮರೆಯಾಗಿ ಹಣದ ರುದ್ರನರ್ತನ ಹೆಚ್ಚಾಗಿ ನಡೆದಿದ್ದೂ ಈ ಅವಧಿಯಲ್ಲೇ. ಆಪರೇಷನ್ ಕಮಲದಂತ ಅನೈತಿಕ ದಂಧೆಗೆ ಅಧಿಕೃತ ರೂಪುರೇಷೆಗಳನ್ನು ನಿರ್ಮಿಸಿದ ಕೀರ್ತಿ “ವಿಭಿನ್ನ ಪಕ್ಷ”ವೆಂದೇ ಪ್ರಚಾರ ಗಿಟ್ಟಿಸುವ ಬಿಜೆಪಿಗೆ ಸೇರಬೇಕು. ಇದರೊಟ್ಟಿಗೆ ಯಥಾ ರಾಜ ತಥಾ ಮಂತ್ರಿಯೆಂಬಂತೆ ಯಡಿಯೂರಪ್ಪನವರ ಹಿಂದೆ ಮುಂದೆ ಅನೇಕ ಮಂತ್ರಿ ಶಾಸಕರು ಜೈಲುವಾಸಿಗಳಾದರು. ಕೆಲವರು ಇನ್ನೂ ಜೈಲಿನಲ್ಲೇ ಇದ್ದಾರೆ. ವೈಯಕ್ತಿಕ ನೆಲೆಯಲ್ಲೂ ಬಿಜೆಪಿಯ ಶಾಸಕರನೇಕರು ಅನೈತಿಕತೆಯಲ್ಲೇ ಶ್ರೇಷ್ಟತೆ ಕಂಡುಕೊಂಡರು. ಅತ್ಯಾಚಾರ, ಮಡದಿಯ ನಿಗೂಢ ಸಾವು, ಸದನದಲ್ಲೇ ಪೋಲಿ ಚಿತ್ರಗಳ ವೀಕ್ಷಣೆ, ನರ್ಸ್ ಪ್ರಕರಣ, ಸಿಡಿ ಪ್ರಕರಣ …. ಸಂಸ್ಕೃತಿ ರಕ್ಷಿಸುವ ಪಕ್ಷದಲ್ಲಿ ಅಸಂಸ್ಕೃತರೇ ಹೆಚ್ಚಾಗಿ ಬಿಟ್ಟಿದ್ದರು. ಕಾಂಗ್ರೆಸ್ ಐವತ್ತು ಚಿಲ್ಲರೆ ವರುಷಗಳಲ್ಲಿ ಮಾಡಿದ ಭ್ರಷ್ಟಾಚಾರವನ್ನು ಐದೇ ವರ್ಷದಲ್ಲಿ ಮಾಡಿ ತೋರಿಸಿದ್ದು ಬಿಜೆಪಿಯ ನಿಜವಾದ “ಸಾಧನೆ”!! ಕರ್ನಾಟಕದ ರಾಜಕೀಯ ಪ್ರಹಸನ ರಾಷ್ಟ್ರೀಯ ಮಟ್ಟದಲ್ಲಿ ಅಪಹಾಸ್ಯಕ್ಕೊಳಗಾಗುವಂತೆ ಮಾಡಿದ್ದೂ ಸಾಧನೆಯೇ ಸರಿ!

ಇನ್ನು ಸಾಮಾಜಿಕವಾಗಿಯೂ ಬಹಳಷ್ಟು ಹಾನಿಯುಂಟುಮಾಡುವಲ್ಲಿ ಬಿಜೆಪಿ ಹಿಂದೆ ಬೀಳಲಿಲ್ಲ! ಹಿಂದುತ್ವವನ್ನಷ್ಟೇ ಮುಖ್ಯ ಅಜೆಂಡವನ್ನಾಗಿರಿಸಿಕೊಂಡ ಬಿಜೆಪಿ ತಾನು ನಂಬಿದ “ಹಿಂದುತ್ವ”ದ ಮಾದರಿಯನ್ನು ನೇರವಾಗಲ್ಲದಿದ್ದರೂ ಹತ್ತಲವು ಹಿಂದೂ ಸಂಘಟನೆಗಳ ಮುಖಾಂತರ ಸಮಾಜದ ಮೇಲೆ ಹೇರುವ ದುಸ್ಸಾಹಸ ಮಾಡುವುದರಲ್ಲಿ ಅನುಮಾನವಿರಲಿಲ್ಲ. ಹಿಂದೂ ಧರ್ಮದ ಒಳಗಿನ ಹುಳುಕಗಳೇ ಹಿಂದೂ ಧರ್ಮದ ನಿಜವಾದ ವೈರಿ ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆಮಾಚುವ ಈ ಹಿಂದುತ್ವ ಮಾದರಿ ಮುಸ್ಲಿಂ, ಕ್ರಿಶ್ಚಿಯನ್ನರಿಂದಷ್ಟೇ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂಬುದನ್ನು ಹರಡುತ್ತ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದಕ್ಕೆ ಮುಂದಾಯಿತು. ಹಿಂದೂ ಧರ್ಮದ ಜಾತಿ ವ್ಯವಸ್ಥೆಯಲ್ಲಿ ನಲುಗಿದ ಜನರನ್ನೇ ತನ್ನ ಅಸ್ತ್ರಗಳನ್ನಾಗಿ ಬಳಸಿಕೊಂಡು ಅನ್ಯಧರ್ಮೀಯರ ಮೇಲೆ ಹಲ್ಲೆ ನಡೆಸಿದ ಕೀರ್ತಿ ಈ ಹಿಂದುತ್ವ ಮಾದರಿಯದು. ಈ ಹಿಂದುತ್ವ ಮಾದರಿ ಅತಿ ಹೆಚ್ಚು ಪ್ರಯೋಗಕ್ಕೊಳಗಾಗಿದ್ದು ಕರಾವಳಿ ಜಿಲ್ಲೆಗಳಲ್ಲಿ. ಸಹಪಾಠಿಗಳೊಂದಿಗೆ ಸಹೋದ್ಯೋಗಿಗಳೊಂದಿಗೆ ಮಾತನಾಡಲೂ ಭಯವಾಗುವಂತಹ ವಾತಾವರಣ ಈ ಜಿಲ್ಲೆಗಳಲ್ಲಿ ಸೃಷ್ಟಿಯಾಗಿರುವುದು ಸುಳ್ಳಲ್ಲ. ಕೆಲವೊಂದು ಪ್ರಕರಣಗಳಲ್ಲಿ ಮುಸ್ಲಿಂ ಮೂಲಭೂತವಾದಿಗಳ ಅಟ್ಟಹಾಸವೂ ಇತ್ತು. ಮುಸ್ಲಿಂ ಮತ್ತು ಹಿಂದೂ ಮೂಲಭೂತವಾದಿಗಳ ಮುಖ್ಯ ಉದ್ದೇಶ ಎರಡೂ ಕೋಮಿನ ಜನತೆ ಮಾನಸಿಕವಾಗಿ ದೂರವಾಗಬೇಕು, ಅನ್ಯ ಮತದ ಜನರ ಬಗ್ಗೆ ಅಸಮಾನ್ಯ ದ್ವೇಷ ಕಾರಬೇಕು. ಆ ಉದ್ದೇಶ “ಬುದ್ಧಿವಂತರ” ಜಿಲ್ಲೆಗಳಲ್ಲೇ ಅತ್ಯಂತ ಯಶಸ್ವಿಯಾಗಿದ್ದು ನಮ್ಮ ಶೈಕ್ಷಣಿಕ ವಿಧಾನದ ಸೋಲೆಂದರೆ ತಪ್ಪಿಲ್ಲ. ಅದೃಷ್ಟವಶಾತ್ ಇತರ ಜಿಲ್ಲೆಗಳಲ್ಲಿ ಈ “ಪ್ರಯೋಗ”ಗಳಿಗೆ ಜನಬೆಂಬಲ ಹೆಚ್ಚಾಗಿ ಸಿಗಲಿಲ್ಲ. ಬ್ರಹ್ಮಾಂಡದಂಥ ಕಾರ್ಯಕ್ರಮಗಳು, ಜ್ಯೋತಿಷ್ಯ, ವಾಸ್ತು, ಕಂದಾಚಾರ ಇದೇ ಸಮಯದಲ್ಲಿ ಹೆಚ್ಚಾಗಿದ್ದು ಕಾಕತಾಳೀಯವಾ?! ಮುಖ್ಯಮಂತ್ರಿಯ ವರ್ತನೆ ಇಡೀ ರಾಜ್ಯದ ಜನರ ಮೇಲೆ ಪರಿಣಾಮ ಬೀರಿದ ಕಾರಣಕ್ಕೆ ಇವೆಲ್ಲವೂ ಹೆಚ್ಚಾದವಾ ಎಂಬುದರ ಸಾಮಾಜಿಕ ಅಧ್ಯಯನ ನಡೆದರೆ ಆಸಕ್ತಿಕರ ಅಂಶಗಳು ಹೊರಬೀಳಬಹುದು!

ತನ್ನದೇ ಸಾವಿರ ತಪ್ಪುಗಳಿಂದ ಚುನಾವಣೆಯಲ್ಲಿ ಸೋಲುಂಡಿರುವ ಬಿಜೆಪಿ ಈಗ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನೂ ಪಡೆಯಲಾಗದ ಸ್ಥಿತಿಗೆ ತಲುಪಿದೆ. ಯಡಿಯೂರಪ್ಪ, ಶ್ರೀರಾಮುಲು ಬಿಜೆಪಿಯನ್ನು ಸೋಲಿಸುವ ಉದ್ದೇಶದಿಂದಲೇ ಹೊಸಪಕ್ಷವನ್ನು ಕಟ್ಟಿ ತಮ್ಮ ಉದ್ದಿಶ್ಯದಲ್ಲಿ ತಕ್ಕಮಟ್ಟಿಗಿನ ಯಶಸ್ಸು ಗಳಿಸಿದ್ದಾರೆ. ಅವರು ಪಕ್ಷ ತೊರೆಯದಿದ್ದರೆ ಸೋಲನ್ನು ತಪ್ಪಿಸಿಕೊಳ್ಳಲಾಗದಿದ್ದರೂ ಇನ್ನೊಂದಷ್ಟು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಯಿತ್ತು. ಜೆಡಿಎಸ್ ಪಡೆದಷ್ಟೇ ಸ್ಥಾನಗಳನ್ನು (40) ಪಡೆದಿರುವ ಬಿಜೆಪಿ ಗಿಟ್ಟಿಸಿದ ಮತಗಳ ಸಂಖ್ಯೆಯ ಆಧಾರದಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಪಡೆವ ಸಾಧ್ಯತೆ ಕಡಿಮೆ.

ರಾಜಕೀಯ ಅನಿಶ್ಚಿತತೆ ಅನೈತಿಕತೆ ಶಿಖರ ತಲುಪಿ ಕುಳಿತಿದೆ. ಬಿಜೆಪಿಯಿಂದ ರೋಸತ್ತ ಜನ ಮತ್ಯಾವುದೇ ಪಕ್ಷವೂ ಇಲ್ಲದ ಕಾರಣ ಕಾಂಗ್ರೆಸ್ಸಿಗೆ ನಿಚ್ಚಳ ಬಹುಮತ ನೀಡಿದ್ದಾರೆ. Siddaramaiahಈ ಬಹುಮತ ಪಡೆಯುವಲ್ಲಿ ಕಾಂಗ್ರೆಸ್ಸಿಗರ ಶ್ರಮ ಕಡಿಮೆಯೆಂದೇ ಹೇಳಬೇಕು. ಕಳೆದ ಐದು ವರ್ಷದಲ್ಲಿ ಅಧಿಕೃತ ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ತನ್ನ ಕರ್ತವ್ಯವನ್ನು ನಿಭಾಯಿಸಲೇ ಇಲ್ಲ. ಅಧಿಕೃತ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸಿದ್ದು ಜೆಡಿಎಸ್. ಅದರ ಕಾರ್ಯ ಯಡಿಯೂರಪ್ಪನವರ ಪತನದ ನಂತರ ಅಚಾನಕ್ಕಾಗಿ ನಿಂತು ಹೋಗಿದ್ದು ಅದರ ಉದ್ದೇಶಗಳ ಬಗ್ಗೆ ಅನುಮಾನ ಮೂಡಿಸುತ್ತದೆ. ಬಿಜೆಪಿಯ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಸೊಲ್ಲೆತದಿದುದಕ್ಕೆ ಕಾರಣ ಅದರದೇ ನೇತೃತ್ವದ ಯುಪಿಎ ಸರಕಾರ ನಡೆಸುತ್ತಿರುವ ಅಗಾಧ ಹಗರಣಗಳು! ಉತ್ತರ ಕರ್ನಾಟಕದಲ್ಲಿ ಮತ್ತೆ ತನ್ನ ಅಸ್ತಿತ್ವ ಕಂಡುಕೊಳ್ಳುವಲ್ಲಿ “ವಿಶೇಷ ಸ್ಥಾನಮಾನ” ನೀಡಿದ್ದು ನೆರವಿಗೆ ಬಂತು. “ಹಿಂದುತ್ವದ ಪ್ರಯೋಗಶಾಲೆ” ಬಿಜೆಪಿಯ ಶಕ್ತಿಕೇಂದ್ರದಂತಿದ್ದ ಕರಾವಳಿ ಜಿಲ್ಲಿಯ ಬಹುತೇಕ ಕಡೆ ಬಿಜೆಪಿಗೆ ಸೋಲುಂಟಾಗಿದ್ದು ಧರ್ಮಾಧಾರಿತವಾಗಿ ಪಕ್ಷ ಕಟ್ಟಲೊರಡುವ ಎಲ್ಲರಿಗೂ ಒಂದು ಎಚ್ಚರಿಕೆಯ ಪಾಠ. ಧರ್ಮಾಂಧರು ಹೆಣ್ಣು ಮಕ್ಕಳ ಮೇಲೆ ಕೈಮಾಡಿದ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚೆಚ್ಚು ನಡೆದಷ್ಟೂ ಬಿಜೆಪಿಯಿಂದ ಮತಗಳು ದೂರವಾದವು. ಸುಳ್ಯ ಹೊರತು ಪಡಿಸಿ ಮತ್ಯಾವುದೇ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಕಾಣಲಿಲ್ಲ. ಭ್ರಷ್ಟಾಚಾರ, ಅನೈತಿಕತೆಯಲ್ಲೇ ಮುಳುಗಿಹೋಗಿದ್ದ ಅನೇಕರು ಈ ಚುನಾವಣೆಯಲ್ಲಿ ಸೋಲುಂಡಿದ್ದು ಆರೋಗ್ಯಕರ ಬೆಳವಣಿಗೆ.

ಕಾಂಗ್ರೆಸ್ ಸುಭದ್ರ, ಸ್ವಚ್ಛ ಆಡಳಿತ ನೀಡುವಲ್ಲಿ ಯಶ ಕಾಣಬಲ್ಲದೆ? ಇತಿಹಾಸದ ಪುಟಗಳನ್ನು ನೋಡಿದರೆ ಆಶಾದಾಯಕ ಭವಿಷ್ಯವೇನೂ ಕಾಣುವುದಿಲ್ಲ. ರಾಜಕೀಯ ಅನಿಶ್ಚಿತತೆ, ಅನೈತಿಕತೆ, ಭ್ರಷ್ಟಾಚಾರಕ್ಕೆ ಕರ್ನಾಟಕದ ಜನತೆ ಕೊಡುವ ಉತ್ತರವೆಂತದೆಂಬುನ್ನು ಈ ಚುನಾವಣೆ ಮಗದೊಮ್ಮೆ ಸಾಬೀತುಪಡಿಸಿದೆ. ಈ ಐದು ವರುಷಗಳ ಪಾಠದಿಂದ ಕಾಂಗ್ರೆಸ್ ಏನಾದರೂ ಕಲಿತಿದೆಯಾ? ಆ ಕಲಿಕೆಯ ಆಧಾರದಲ್ಲಿ ಮುನ್ನಡೆಯುತ್ತದೆಯಾ? ಕಾದು ನೋಡಬೇಕಷ್ಟೇ.